ಸೋಮವಾರ, ನವೆಂಬರ್ 4, 2013

ಶಿವ ದೇಶ ಸಂಚಾರದಲ್ಲಿ ‘ಮರನ್ ಹೀ ಮಹಾನವಮಿ’




ನಾಟಕ ವಿಮರ್ಶೆ :

   


         
         
         
       
          ಸಾನೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಮತ್ತೊಂದು ರಂಗ ಸಾಹಸಕ್ಕೆ ಸಿದ್ದವಾಗಿದೆ. ಎರಡು ಕನ್ನಡದ ನಾಟಕಗಳನ್ನು ಹಿಂದಿ ಭಾಷೆಯಲ್ಲಿ ನಿರ್ಮಿಸಿ ಭಾರತದಾದ್ಯಂತ 18 ರಾಜ್ಯಗಳಲ್ಲಿ 42 ಪ್ರದರ್ಶನಗಳನ್ನು ಕೊಡವ ನಿಟ್ಟಿನಲ್ಲಿ ಶಿವ ದೇಶ ಸಂಚಾರ್ ರಂಗಯಾತ್ರೆಯನ್ನು  ಆರಂಭಿಸಿದೆ. 2007ರಲ್ಲಿ ನಡೆದ ಭಾರತ್ ರಂಗಯಾತ್ರೆ ಯಶಸ್ವಿಯಾಗಿತ್ತು. ಈಗ ಎರಡನೇ ಬಾರಿ ಇನ್ನೂ ಹೆಚ್ಚು ಪ್ರದರ್ಶನಗಳನ್ನು ಮಾಡುವ ಆಶಯದೊಂದಿಗೆ ರಂಗಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ತರಳಬಾಳು ಶ್ರೀಮಠದ ಸಂಸ್ಥಾಪಕರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ (1914-1992) ಶತಮಾನೋತ್ಸವದ ಆಚರಣೆಯ ಅಂಗವಾಗಿ ಅವರೇ ರಚಿಸಿದ್ದ ಮರಣವೇ ಮಹಾನವಮಿ ಮತ್ತು ಶರಣಸತಿ-ಲಿಂಗಪತಿ ಎನ್ನುವ ಎರಡು ನಾಟಕಗಳ ಹಿಂದಿ ಅವತರಣಿಕೆಗಳ ಪ್ರದರ್ಶನಗಳು 2013, ಅಕ್ಟೋಬರ್ 10 ರಿಂದ ಆರಂಭಗೊಂಡಿವೆ.

          ರಂಗಯಾತ್ರೆಯ ಆರಂಭೋತ್ಸವದಂದು ಆರ್.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಕೆ.ಜಿ.ಕೃಷ್ಣಮೂರ್ತಿ ಯವರ ನಿರ್ದೇಶನದಲ್ಲಿ ಮರಣ್ ಹೀ ಮಹಾನವಮಿ ನಾಟಕವನ್ನು ಪ್ರದರ್ಶಿಸಲಾಯಿತು. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿದ ನಾಟಕವನ್ನು ಡಾ.ಪ್ರಭಾಕರ ಪ್ರೇಮಿಯವರು ಹಿಂದಿಗೆ ಅನುವಾದಿಸಿದ್ದಾರೆ.
          12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಂತರ್ಜಾತಿ ವಿವಾಹ ಹುಟ್ಟಿಸಿದ ಸಂಘರ್ಷದ ಕಾರಣ ಮತ್ತು ಪರಿಣಾಮಗಳನ್ನು ತೋರಿಸುವ ಕಥಾವಸ್ತುವೆ ಮರಣವೇ ಮಹಾನವಮಿ ನಾಟಕ. ಬ್ರ್ರಾಹ್ಮಣನಾದ ಮಂತ್ರಿ ಮಧುವರಸನ ಮಗಳು ನೀಲಾ ಚಮ್ಮಾರ ಹರಳಯ್ಯನ ಮಗ ಶೀಲನನ್ನು ಪ್ರೀತಿಸುತ್ತಾಳೆ.  ಶರಣು ಶರಣಾರ್ಥಿ ಎಂದ ಬಸವಣ್ಣನವರ ರುಣಭಾರ ತೀರಿಸಲು ಹರಳಯ್ಯ ತನ್ನ ತೊಡೆ ಚರ್ಮದಿಂದ ಒಂದು ಜೊತೆ ಚಪ್ಪಲಿಗಳನ್ನು ತಯಾರಿಸುತ್ತಾನೆ. ಅವುಗಳನ್ನು ಬಲವಂತವಾಗಿ ಕಿತ್ತು ತೊಟ್ಟುಕೊಂಡ ಮಧುವರಸದ ದೇಹ ಉರಿಗೆ ಸಿಕ್ಕು ತತ್ತರಿಸುತ್ತದೆ. ಪರಿಹಾರಕ್ಕಾಗಿ ಹರಳಯ್ಯನ ಮನೆಗೆ ಮಗಳ ಜೊತೆ ಬಂದ ಮಧುವರಸ ಪಶ್ಷಾತ್ತಾಪಕ್ಕೊಳಗಾಗಿ ಲಿಂಗದೀಕ್ಷೆಗೆ ಆಗ್ರಹಿಸುತ್ತಾನೆ. ಅನುಭವ ಮಂಟಪದಲ್ಲಿ ಶರಣದೀಕ್ಷೆ ಪಡೆದ ಮಧುವರಸನು ತನ್ನ ಮಗಳನ್ನು ಶೀಲನಿಗೆ ಕೊಟ್ಟು ಮದುವೆ ಮಾಡುವುದಾಗಿ ಘೋಷಿಸುತ್ತಾನೆ. ಬಸವಣ್ಣ ಒಪ್ಪುತ್ತಾರೆ. ಅಲ್ಲಮಪ್ರಭು ಆಶೀರ್ವದಿಸುತ್ತಾರೆ. ಮದುವೆ ಜರುಗುತ್ತದೆ. ಪುರೋಹಿತಶಾಹಿಗಳು ಬೆಚ್ಚಿಬೀಳುತ್ತಾರೆ. ಮಂತ್ರಿ ಮಂಚಯ್ಯನ ನೇತೃತ್ವದಲ್ಲಿ ದೊರೆ ಬಿಜ್ಜಳನಿಗೆ ದೂರು ಸಲ್ಲಿಸುತ್ತಾರೆ. ಬಸವಣ್ಣ ಮದುವೆಯನ್ನು ಸಮರ್ಥಿಸುತ್ತಾನೆ. ಬಿಜ್ಜಳ ವಿರೋಧಿಸುತ್ತಾನೆ. ಮಹಾಮಂತ್ರಿಪದವಿ ಜೊತೆಗೆ ಕಲ್ಯಾಣವನ್ನೇ ಬಸವಣ್ಣ ತ್ಯಜಿಸುತ್ತಾನೆ. ಮಹಾಮಂತ್ರಿಯಾದ ಮಂಚಣ್ಣನು ಹರಳಯ್ಯ, ಮಧುವರಸ, ಶೀಲಾ ಮತ್ತು ನೀಲಾಗೆ ಮರಣದಂಡಣೆ ವಿಧಿಸುತ್ತಾನೆ. ಅವರೆಲ್ಲಾ ಮರಣವೇ ಮಹಾನವಮಿ ಎಂದು ಸಾಯಲು ಸಿದ್ಧರಾಗುವುದರೊಂದಿಗೆ ನಾಟಕ ಅಂತ್ಯವಾಗುತ್ತದೆ

      ಬಸವಾದಿ ಶರಣರ ಸಾಮಾಜಿಕ ಬದಲಾವಣೆಯನ್ನು ಸಹಿಸದ ಪುರೋಹಿತಶಾಹಿ ಶಕ್ತಿಗಳು ಮಾಡುವ ಕುತಂತ್ರಗಳನ್ನು ಬಹಳ ಸರಳ ರೀತಿಯಲ್ಲಿ ಹೇಳುವ ನಾಟಕವು ಪುರೋಹಿತಶಾಹಿಗಳನ್ನು ಲೇವಡಿಮಾಡುತ್ತಲೇ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವವನ್ನು  ಎತ್ತಿ ತೋರಿಸುತ್ತದೆ. ಆಗಿನ ಕಾಲದ ಜಾತೀಯತೆ, ಮೇಲುಕೀಳುಗಳ ಅಂತರ, ಧರ್ಮಾಂಧತೆಗಳನ್ನು ಅನಾವರಣಗೊಳಿಸುವ ನಾಟಕದ ಘಟನೆ ನಡೆದು ಶತಮಾನಗಳು ಉರುಳಿದರೂ, ನಾಟಕ ಬರೆದು ಆಡಿಸಿ ಆರೇಳು ದಶಕಗಳು ಕಳೆದರೂ ಇನ್ನೂ ಸಹ ನಾಟಕ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಯಾಕೆಂದರೆ ಆಧುನಿಕ ಸಮಾಜ ಎಂಬ ಭ್ರಮೆಯೊಳಗೆ ತೇಲುತ್ತಿರುವ ಇಂದಿನ ಸಮಾಜದಲ್ಲೂ ಜಾತೀಯತೆ ಧರ್ಮಾಂಧತೆಗಳು ಈಗಲೂ ವಿಜ್ರಂಭಿಸುತ್ತಿವೆ. ಅಂತರ್ಜಾತಿ ವಿವಾಹವಾದ ಹಲವಾರು ಯುವ ಜೋಡಿಗಳ ಕೊಲೆಗಳು ದೇಶಾದ್ಯಂತ ವ್ಯವಸ್ಥಿತವಾಗಿ ನಡೆಯುತ್ತಿವೆ. ಊರು ಕೇರಿಗಳು ಈಗಲೂ ತಮ್ಮ ಅಂತರವನ್ನು ಕಾಪಾಡಿಕೊಂಡಿವೆ. ಸಮಾನತೆ, ಜಾತ್ಯಾತೀತತೆ ಎನ್ನುವುದು ಕನಸಿನ ಮಾತಾಗಿದೆ. ಎಲ್ಲಿವರೆಗೂ ಉಚ್ಚ ನೀಚ ಜಾತಿಗಳ ತಾರತಮ್ಯ ವಿರುತ್ತದೆಯೋ, ಎಲ್ಲಿವರೆಗೂ ಬಸವಣ್ಣ ಕನಸಿದ ಕಲ್ಯಾಣರಾಜ್ಯದ ಪರಿಕಲ್ಪನೆ ಸಾಕಾರವಾಗುವುದಿಲ್ಲವೋ ಅಲ್ಲಿವರೆಗೂ ನಾಟಕ ಪ್ರಸ್ತುತವಾಗಿರುತ್ತದೆ.
          ಪವಾಡಗಳನ್ನು ವಿರೋಧಿಸಿದ ಬಸವಣ್ಣನಿಗೆ ಪವಾಡಗಳು ಸುತ್ತಿಕೊಂಡಿದ್ದೊಂದು ಚಾರಿತ್ರಿಕ ವಿಪರ್ಯಾಸ. ಅದು ನಾಟಕದಲ್ಲೂ ಮುಂದುವರೆದಿದೆ. ತನ್ನ ಹಾಗೂ ತನ್ನ ಹೆಂಡತಿಯ ತೊಡೆಯ ಚರ್ಮವನ್ನು ತಾನೇ ಕಿತ್ತು ಹರಳಯ್ಯ ಚಪ್ಪಲಿ ಮಾಡಿ ನಡೆದುಬಂದು ಬಸವಣ್ಣನಿಗೆ ಅರ್ಪಿಸಿದ ಎನ್ನುವುದನ್ನು ನಂಬಲಾಗದಿದ್ದರೂ ಭಕ್ತಿರಸದ ಸಾಂಕೇತಿಕತೆ ಎಂದು ಒಪ್ಪಿಕೊಳ್ಳಬಹುದು. ಆದರೆ ಚಪ್ಪಿಲಿಗಳನ್ನು ಧರಿಸಿದ ಮಧುವರಸನ ಮೈಯೆಲ್ಲಾ ಉರಿಯೆದ್ದು ಹೋಗುವುದು ಅವಾಸ್ತವವೆನ್ನಿಸುವಂತಿದೆ. ಹೋಗಲಿ ಉರಿಎದ್ದ ಕೂಡಲೇ ಪುರೋಹಿತಶಾಹಿ ಮಂತ್ರಿ ಪಶ್ಷಾತ್ತಾಪದಿಂದ ಮತಾಂತರಗೊಳ್ಳುವುದಕ್ಕೆ ಒತ್ತಾಯಿಸುತ್ತಾನೆನ್ನುವುದೂ ನಂಬಲು ಕಷ್ಟವಾಗುತ್ತದೆ. ನಾಟಕದಲ್ಲಿ ಯಾರೂ ಹೇಳದಿದ್ದರೂ ತಾನೇ ಸ್ವಯಂಪ್ರೇರಿತನಾಗಿ ತನ್ನ ಮಗಳನ್ನು ಚಮ್ಮಾರನ ಮಗನಿಗೆ ಕೊಟ್ಟು ಮದುವೆಮಾಡಲು ಮಧುವರಸ ಸಿದ್ದನಾಗುವುದು ಇನ್ನೂ ಅಚ್ಚರಿಯ ವಿಷಯವಾಗಿದೆ. ರಾಜನ ಸಮ್ಮತಿ ಇಲ್ಲದೇ ಮಂತ್ರಿ ಮಂಚಣ್ಣನೇ ಮರಣದಂಡನೆಗೆ ರಾಜಾಜ್ಞೆಯನ್ನು ಹೊರಡಿಸುವುದು ಪ್ರಶ್ನಾರ್ಹವಾಗಿದೆ.
    
  ಅನುಭವ ಮಂಟಪದಲ್ಲಿ ಕುಮಾರಿಯರಿಗೆ ಪ್ರವೇಶವಿಲ್ಲ, ಮದುವೆಯಾದವರು ತಮ್ಮ ಪತಿಯ ಪರಿಚಯ ಹೇಳಲೇಬೇಕು ಎಂದು ಶೀಲನು ನೀಲಾಳಿಗೆ ಹೇಳುತ್ತಾನೆ. ಆದರೆ ಇದು ಸತ್ಯಕ್ಕೆ ವಿರುದ್ದವಾದದ್ದು. ಅನುಭವಮಂಟಪದಲ್ಲಿ ಎಲ್ಲಾ ಲಿಂಗ, ಜಾತಿ, ವಯಸ್ಸಿನವರಿಗೂ ಪ್ರವೇಶವಿತ್ತು. ಆದರೆ ಅಕ್ಕಮಹಾದೇವಿ ಬಂದಾಗ ಅವಳನ್ನು ಪ್ರಶ್ನಿಸಲು ಅಲ್ಲಮ ಪತಿಯ ಪರಿಚಯ ಕೇಳಿದ್ದು ಸತ್ಯ ಆದರೆ ಹೀಗೆ ಕುಮಾರಿಯರಿಗೆ ಪ್ರವೇಶವಿಲ್ಲ ಎನ್ನುವುದು ನಿರ್ದೇಶಕರ ತಪ್ಪು ಗ್ರಹಿಕೆಯಾಗಿದೆ. ಹೋದಲ್ಲೆಲ್ಲಾ ನಾಟಕ ಇದನ್ನೇ ಸಾರುತ್ತಾ ಬಸವಣ್ಣ ಬಾಲೆಯರ ವಿರೋಧಿ ಎಂದು ಬಿಂಬಿಸಿದರೆ ಗತಿಯೇನು?

          ಬಸವಣ್ಣನವರನ್ನು ವೈಭವೀಕರಿಸಲು, ಶರಣ ತತ್ವದ ಮಹತ್ವವನ್ನು ಸಾರಲು ರೀತಿಯ ಅತಾರ್ಕಿಕ ಅವಾಸ್ತವಿಕ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಅಸಮಂಜಸವೆನಿಸುತ್ತದೆ. ಸುಳ್ಳುಗಳ ಮೂಲಕ ಸತ್ಯವನ್ನು ಪ್ರತಿಪಾದಿಸುವುದು ಪುರೋಹಿತಶಾಹಿಗಳ ಗುಣವೇ ಹೊರತು ಶರಣರದ್ದಲ್ಲ. ಹೀಗಾಗಿ  ನಾಟಕ ಅವಾಸ್ತವ ಘಟನೆಗಳನ್ನು ಹುಟ್ಟಿಸಿ ಹುಸಿಯನ್ನೂ ನುಡಿಯುತ್ತದೆ, ಬಸವಣ್ಣನನ್ನು ವೈಭವೀಕರಿಸಿ ತನ್ನನ್ನು ಬಣ್ಣಿಸಿಕೊಳ್ಳುತ್ತದೆ. ಪುರೋಹಿತಶಾಹಿಗಳನ್ನು ಲೇವಡಿ ಮಾಡುತ್ತಾ ಅನ್ಯರಿಗೆ ಅಸಹ್ಯವನ್ನೂ ಪಡುತ್ತದೆ.... ಹೀಗಾಗಿ ಬಸವಣ್ಣನವರ ಕಳಬೇಡ... ವಚನಕ್ಕೆ ವಿರುದ್ಧವಾಗಿ ನಾಟಕ ಪ್ರಸ್ತುತಗೊಂಡಿದೆಯಾ? ಸೂಕ್ಷ್ಮವಾಗಿ ಅವಲೋಕಿಸಿದರೆ ಸಂದೇಹ ಬಾರದೇ ಇರದು.
          ಹೋಗಲಿ.... ಇದೆಲ್ಲಾ  ಮಿಥ್ಗಳನ್ನು  ನಾಟಕೀಯತೆಯ ಭಾಗವಾಗಿಯೇ ಒಪ್ಪಿಕೊಂಡರೂ ನಾಟಕದ ಕೊನೆಗೆ ಬಸವಣ್ಣನನ್ನೇ ಆರಾಧಿಸಿದ  ಶಿವಶರಣರನ್ನು ಬಿಟ್ಟು, ಬಸವಣ್ಣನವರನ್ನೇ ನಂಬಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೊಳಗಾದ ಮಧುವರಸ ಹರಳಯ್ಯನ ಕುಟುಂಬಗಳನ್ನು ಕೈಬಿಟ್ಟು ಬಸವಣ್ಣನವರು ಕಲ್ಯಾಣ ನಗರವನ್ನೇ ತ್ಯಜಿಸಿ ಹೋಗುವುದು ಪಲಾಯನವಾದ ಎನ್ನಿಸಿಕೊಳ್ಳುವಂತೆ ಮೂಡಿಬಂದಿದೆ. ಬುದ್ದ ಸಂಸಾರವನ್ನು  ನಿರಾಕರಿಸಿ ಕಾಡಿಗೆ ಹೋಗಿದ್ದಕ್ಕೆ ತಾರ್ಕಿಕ ಸಮರ್ಥನೆಗಳಾದರೂ ಇವೆ, ಆದರೆ ನಾಟಕದ ಬಸವಣ್ಣ ಕಲ್ಯಾಣ ತೊರೆದಿದ್ದಕ್ಕೆ ಯಾವ ತಾರ್ಕಿಕ ಸಮರ್ಥನೆಗಳಿಲ್ಲ.  ನಾಟಕ ಈಗ ದೇಶಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಶರಣ ಚಳುವಳಿಯ ಬಗ್ಗೆ ಹೆಚ್ಚಾಗಿ ಏನೂ ಗೊತ್ತಿರದ ಅನ್ಯ ಭಾಷೆಯ ಜನರು ನಾಟಕ ನೋಡಿದರೆ ತಾನೇ ಅಂತರ್ಜಾತಿ ಮದುವೆ ಮಾಡಿಸಿ ನಂತರ ವಧುವರರನ್ನು ಸಾಯಲು ಬಿಟ್ಟು ಪಲಾಯನ ಮಾಡಿದ ಎಂದು ಬಸವಣ್ಣನವರ ಬಗ್ಗೆ ವ್ಯತಿರಿಕ್ತವಾಗಿ ತಿಳಿದುಕೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು
     
       ಈ ತಾತ್ವಿಕ ವಿಚಾರಗಳನ್ನು ಬದಿಗಿಟ್ಟು ನಾಟಕವನ್ನು ನಾಟಕವನ್ನಾಗಿ ನೋಡುವುದಾದರೆ ಕೆ.ಜಿ. ಕೃಷ್ಣಮೂರ್ತಿಯವರು ನಾಟಕವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಆರಂಭಿಕ ದೃಶ್ಯ ಸಂಯೋಜನೆ ಮತ್ತು ಕೋರಿಯೋಗ್ರಾಫಿ ವಿಶೇಷವಾಗಿದೆ. ಕಾಯಕ ಮಾಡುತ್ತಲೇ ಪಾತ್ರಗಳು ಬಸವ ತತ್ವವನ್ನು ಒಂದೊಂದು ಮಾತಲ್ಲಿ ಕಟ್ಟಿಕೊಟ್ಟಿರುವುದು ವಿಶಿಷ್ಟವಾಗಿದೆ. ನಡುವಿನ ದೃಶ್ಯಗಳು ಒಂದಿಷ್ಟು ಎಳೆತ ಎನ್ನಿಸಿದರೂ ಕೊನೆಯ ಕ್ಲೈಮ್ಯಾಕ್ಸ ದೃಶ್ಯ ಚೆನ್ನಾಗಿದೆ. ನಿರ್ದೇಶಕರ ಪ್ರಯತ್ನಕ್ಕೆ ಕಲಾವಿದರು ಇನ್ನೂ ಸ್ಪಂದಿಸಬೇಕಿದೆ. ಕನಿಷ್ಟ ಸೆಟ್ ಪರಿಕರಗಳನ್ನು ಸಾಂಕೇತಿಕವಾಗಿ ಬಳಸಿ ದೃಶ್ಯಗಳನ್ನು ಸೃಷ್ಟಿಸಿದ್ದು ಪರಿಣಾಮಕಾರಿಯಾಗಿದೆ. ಗುಂಪು ಬಳಕೆಯಲ್ಲಿ ಕಲಾತ್ಮಕತೆಯನ್ನು ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
          ಆದರೆ ನಿರ್ದೇಶಕರಿಗೆ ಬಸವನನಾಡು ಉತ್ತರ ಕರ್ನಾಟಕದ ಕಾಸ್ಟೂಮ್ಗಳು ಅರ್ಥವಾಗಿಲ್ಲ ಎಂದೆನಿಸುತ್ತದೆ. ಮಹಿಳಾ ಪಾತ್ರಗಳಿಗೆ ಇಲಕಲ್ ಸೀರೆಯನ್ನು ಉಡಿಸಿದ್ದು ಸರಿಯಾಗಿದೆ. ಆದರೆ ಶರಣ ಪಾತ್ರಗಳೆಲ್ಲಾ ಒಂದೇ ಯುನಿಫಾರಂ ಮಾದರಿಯ ಕಾಸ್ಟೂಮ್ ಬಳಸಿದ್ದು ನೋಡಲು ಚೆನ್ನಾಗಿವೆಯಾದರೂ ವಿಭಿನ್ನವಾಗಿದ್ದರೆ ವಾಸ್ತವಕ್ಕೆ ಹತ್ತಿರವಾಗಿರಬಹುದಾಗಿತ್ತು. ವಾಸ್ತವವಾಗಿ ಭಿನ್ನ ಕಾಯಕದವರು ಭಿನ್ನವಾದ ರೀತಿಯ ಉಡುಗೆ ತೊಡುಗೆ ಹಾಕುತ್ತಾರೆಯೇ ಹೊರತು ಒಂದೇ ರೀತಿ ಉಡುಗೆ ಹಾಕುವುದಿಲ್ಲ. ಮಂತ್ರಿ ಮಗಳು ನೀಲಾಗೆ ಆಧುನಿಕ ಮಾದರಿಯ ಲಂಗಾದಾವಣಿ ತೊಡಿಸಿದ್ದು, ಐತಿಹಾಸಿಕ ರಾಜ ಮಂತ್ರಿಗಳಿಗೆ  ಪೌರಾಣಿಕ ಕಾಸ್ಟೂಮ್ಸ ಹಾಕಿಸಿದ್ದು, ಎಲ್ಲವನ್ನೂ ತೊರೆದ ಅಲ್ಲಮನಿಗೆ ಖಾವಿಹಾಕಿಸಿ ವಿಪರೀತ ಗಡ್ಡ ಮೀಸೆ ಇಡಿಸಿದ್ದು....ಶರಣನಾಗಿ ಬದಲಾದ ಮೇಲೂ ಮಧುವರಸ ಮಂತ್ರಿಯ ಗೆಟಪ್ನಲ್ಲೇ ಇರುವುದು.... ಯಾಕೋ ನಾಟಕಕ್ಕೆ ಹೊಂದಾಣಿಕೆಯಾಗದ ಸಂಗತಿಗಳಾಗಿವೆ.
          ಪಾತ್ರಗಳಿಗೆ ವ್ಯಕ್ತಿಗಳನ್ನು ಆಯ್ಕೆ ಮಾಡುವುದೂ ಅಷ್ಟೊಂದು ಸೂಕ್ತವೆನ್ನಿಸುವಂತಿಲ್ಲ. ಯಾಕೆಂದರೆ ಇಲ್ಲಿ ಬಸವ ಬಸವ ಎನ್ನಿಸುವುದಿಲ್ಲ. ಮಂತ್ರಿ ಮಂತ್ರಿಯಾಗಿಲ್ಲ, ಬಿಜ್ಜಳ ರಾಜಠೀವಿಯಲ್ಲಿಲ್ಲ, ಅಲ್ಲಮ ಅಲ್ಲಮನಾಗಿಲ್ಲ, ಮಹಿಳೆಗೆ ಮಂಚಯ್ಯಮಂತ್ರಿ ಪಾತ್ರ ಕೊಟ್ಟಿದ್ದಾರೆ. ನಿರ್ದೇಶಕರು ಕಸ್ಟೂಮ್ಸ್ ಮತ್ತು ಕಾಸ್ಟಿಂಗನಲ್ಲಿ ಸಿಕ್ಕಾಪಟ್ಟೆ ರಾಜಿಯಾಗಿದ್ದಾರೆನಿಸುತ್ತದೆ. ಹೋಗಲಿ ಅದ್ಯಾಕೆ ಅಲ್ಲಮನನ್ನು ವಿಕ್ಷಿಪ್ತ ವ್ಯಕ್ತಿಯನ್ನಾಗಿ ರೂಪಿಸಿದ್ದಾರೋ ಗುರುಬಸವನೇ ಬಲ್ಲ.
          ಇಡೀ ನಾಟಕದಾದ್ಯಂತ ಗಮನ ಸೆಳೆಯುವುದು ಹಾಡು ಮತ್ತು ಸಂಗೀತ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಚೆನ್ನಬಸವಣ್ಣರ ವಚನಗಳು ಹಿಂದಿ ಭಾಷೆಯಲ್ಲಿ ಅನನ್ಯವಾಗಿ ಮೂಡಿ ಬಂದಿವೆ. ಆದರೆ ಕೆಲವೊಮ್ಮೆ ಹಿನ್ನೆಲೆ ಸಂಗೀತ ಸಂಭಾಷಣೆಗಳಿಗೆ ಅಡತಡೆಯನ್ನುಂಟುಮಾಡುವಂತಿತ್ತು. ಕಿಶಲಾಯ ಷಾ ಮತ್ತು ದಾಕ್ಷಾಯಿಣಿ ಯವರ ಹಾಡುಗಾರಿಕೆ ಮಾಧುರ್ಯ ಕೇಳುಗರ ಮನಗೆದ್ದಿತು. ಬೆಳಕು ಯಾವುದೇ ರೀತಿಯ ಮಾಂತ್ರಿಕತೆಯನ್ನುಂಟುಮಾಡದೇ ದೃಶ್ಯಗಳನ್ನು ಮನಗಾಣಿಸುವ ಬದಲು ಕಾಣಿಸಿತು. 
         
        ಹಿಂದಿ ಭಾಷೆಯ ಮೇಲೆ ಕನ್ನಡದ ಕಲಾವಿದರು ಇನ್ನೂ ಪ್ರಭುತ್ವ ಸಾಧಿಸಿದರೆ, ಆಗಮನ ನಿರ್ಗಮನಗಳ ಕುರಿತು ಗಮನ ಹರಿಸಿದರೆ, ದೇಹಭಾಷೆಯನ್ನು ಪಾತ್ರೋಚಿತವಾಗಿ ಬಳಸಿದರೆ, ಪಾತ್ರೋಚಿತ ಕಾಸ್ಟೂಮ್ಸಗಳನ್ನು ಉಪಯೋಗಿಸಿದರೆ, ಅಲ್ಲಮನ ಅಟ್ಯೂಟೂಡ್ ಬದಲಾಯಿಸಿದರೆ, ಕೊನೆಗೆ ಬಸವಣ್ಣನವರ ಪಲಾಯನವಾದಕ್ಕೆ ಸೂಕ್ತವಾದ ಕಾರಣಗಳನ್ನು ಕೊಟ್ಟರೆ... ನಾಟಕ ಇನ್ನೂ ಚೆನ್ನಾಗಿ ಮೂಡಿಬರುತ್ತದೆ. ಯಾಕೆಂದರೆ ಬೇರೆ ರಾಜ್ಯದ ಬೇರೆ ಭಾಷೆಯ ಜನರಿಗೆ ನಾವು ನಮ್ಮ ಶರಣ ಸಂಸ್ಕೃತಿಯನ್ನು, ಬಸವಣ್ಣನ ಮಾನವೀಯತೆಯನ್ನು ಮನದಟ್ಟಾಗುವಂತೆ ತೋರಿಸಬೇಕಾಗಿದೆ. ಬಸವ ತತ್ವದ ಪ್ರಚಾರದ ಭಾಗವಾಗಿ ರಂಗಯಾತ್ರೆ ನಡೆಯುತ್ತಿರುವುದರಿಂದ ನಾಟಕದ ನ್ಯೂನ್ಯತೆಗಳನ್ನು ಸರಿಪಡಿಸಿ ದೇಶಾದ್ಯಂತ ಶರಣರ ತತ್ವವನ್ನು ಸಾರಬೇಕಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳ ಶ್ರಮ ಸಾರ್ಥಕವಾಗಬೇಕಿದೆ



                                                           -ಶಶಿಕಾಂತ ಯಡಹಳ್ಳಿ







         



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ