ಬುಧವಾರ, ನವೆಂಬರ್ 6, 2013

ಪ್ರತಿಮಾ ಪ್ರಧಾನ ಅಪ್ರತಿಮ ನಾಟಕ ‘ಚಕ್ರರತ್ನ’


ನಾಟಕ ವಿಮರ್ಶೆ :

        
                                                                     

ಆದಿಕವಿ ಪಂಪ 10ನೇ ಶತಮಾನದಲ್ಲಿ ಚಂಪೂಕಾವ್ಯ ಶೈಲಿಯಲ್ಲಿ ರಚಿಸಿದ ಆದಿಪುರಾಣ ವನ್ನು ಆಧರಿಸಿ, ಅದರಲ್ಲಿ ಬರುವ ಚಕ್ರರತ್ನ ಎನ್ನುವ ಆಯುಧವನ್ನು ಕೇಂದ್ರೀಕರಿಸಿ ಡಾ.ಕೆ.ವೈ.ನಾರಾಯಣಸ್ವಾಮಿಗಳು ಚಕ್ರರತ್ನ ನಾಟಕವನ್ನು ರಚಿಸಿದ್ದಾರೆ. ಸರ್ವನಾಶಮಾಡುವಂತಹ ಅಸ್ತ್ರ ಹಾಗೂ ಅಪಾರವಾದ ಸರ್ವಾಧಿಕಾರ ಸಿಕ್ಕರೆ ಮನುಷ್ಯ ಹೇಗೆ ಹಿಂಸಾವಾದಿಯಾಗಿ ದುರಹಂಕಾರಿಯಾಗಿ ಸರ್ವನಾಶಕ್ಕೆ ಕಾರಣನಾಗುತ್ತಾನೆ ಎಂಬುದನ್ನು ಹಾಗೂ ಕರುಣೆ, ಅಹಿಂಸೆ, ಆತ್ಮವಿಶ್ವಾಸ, ಮಾನವೀಯತೆಗಳ ಎದರು ವಿನಾಶಕಾರಿ ಶಕ್ತಿಗಳೂ ತಲೆಬಾಗುತ್ತವೆ ಎಂಬುದನ್ನು ಹೇಳುವ ಭರತ ಮತ್ತು ಬಾಹುಬಲಿ ಸಹೋದರರ ವೃತ್ತಾಂತವನ್ನೇ ವಿಭಿನ್ನ ಆಯಾಮದಲ್ಲಿ ಹೇಳುವ ಪ್ರಯತ್ನವನ್ನು ಚಕ್ರರತ್ನ ನಾಟಕ ಮಾಡುತ್ತದೆ.
          ಭಾಗವತರು ರಂಗ ತಂಡ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ರಂಗಬೆಡಗು ನಾಟಕೋತ್ಸವದಲ್ಲಿ  ಕೆಎಸ್ಡಿಎಲ್ ಚಂದ್ರು ನಿರ್ದೇಶನದಲ್ಲಿ ರೂಪಾಂತರ ತಂಡದ ಕಲಾವಿದರು ಜೂನ್ ೧೫ರಂದು ಚಕ್ರರತ್ನ ನಾಟಕವನ್ನು ಪ್ರದರ್ಶಿಸಿದರು.
          ಇಲ್ಲಿ ಭರತ ಬಾಹುಬಲಿಗಳು ನೆಪಮಾತ್ರ, ಆದರೆ ಮೂಲ ಸಂಘರ್ಷ ಇರೋದು ಹಿಂಸೆ-ಅಹಿಂಸೆಗಳ ನಡುವೆ. ಎಲ್ಲಾ ಪುರಾಣ ಮಹಾಕಾವ್ಯಗಳ ಆಶಯ ದುಷ್ಟಶಕ್ತಿಯ ಸಂಹಾರ ಮತ್ತು ಶಿಷ್ಟ ಶಕ್ತಿಯ ಅಂತಿಮ ವಿಜಯ. ಬಾಹುಬಲಿ ಪುರಾಣದ ವೈಶಿಷ್ಟ್ಯತೆ ಏನೆಂದರೆ ಹಿಂಸೆಯನ್ನು ಹಿಂಸಾವಾದಿಯನ್ನು ಹಿಂಸಾಮಾರ್ಗದಲ್ಲೇ ಸೋಲಿಸಿದ ಬಾಹುಬಲಿ ತನ್ನ ರಾಜ್ಯದ ಜೊತೆಗೆ ಗೆದ್ದ  ಸಾಮ್ರಾಜ್ಯವನ್ನೆಲ್ಲಾ ಸೋತ ಭರತನಿಗೊಪ್ಪಿಸಿ ವೈರಾಗ್ಯತಾಳುವುದು. ದೃಷ್ಟಿಯಲ್ಲಿ ಬೇರೆಲ್ಲಾ ಪುರಾಣಗಳಿಗಿಂತ ಬಾಹುಬಲಿ ಕಥೆ ವಿಶೇಷ ಎನ್ನಿಸುತ್ತದೆ. ಶಸ್ತ್ರ, ಅಧಿಕಾರ, ಹಿಂಸೆ, ಕ್ರೌರ್ಯಗಳ ನಿರರ್ಥಕತೆಯನ್ನು ಹಾಗೂ ನಿಸ್ವಾರ್ಥ, ಅಹಿಂಸೆಯ ಅಗತ್ಯತೆಯನ್ನು ಹೇಳುವ ಚಕ್ರರತ್ನ ರಂಗಪ್ರಯೋಗವು ಹಿಂಸೆ-ಸ್ವಾರ್ಥವೇ ವೈಭವೀಕರಣಗೊಳ್ಳುತ್ತಿರುವ ಪ್ರಸ್ತುತ ಸಾಮಾಜಿಕ ಅವ್ಯವಸ್ಥೆಯ ಪ್ರಕ್ಷುಬ್ದ ಸಮಕಾಲೀನ ಸಂದರ್ಭದಲ್ಲಿ ಅರ್ಥಪೂರ್ಣವೆನಿಸುತ್ತದೆ.
          ಚಕ್ರರತ್ನ ನಾಟಕದ ಪರಿಕಲ್ಪನೆ ಹೀಗಿದೆ. ಆಧಿನಾಥ ಅರ್ಥಾರ್ಥ ವೃಷಭನಾಥ ಎನ್ನುವ ಕರುಣಾಮಯಿ ಚಕ್ರವರ್ತಿ ಕೊನೆಗಾಲದಲ್ಲಿ ವೈರಾಗ್ಯತಾಳಿ ಹಿರಿಯಮಗ ಭರತನಿಗೆ ಅಯೋಧ್ಯೆ ರಾಜ್ಯವನ್ನು ಹಾಗೂ ಕಿರಿಮಗ ಬಾಹುಬಲಿಗೆ ಹಸ್ತಿನಾವತಿ ರಾಜ್ಯವನ್ನು ಹಂಚಿ ಅರಸರನ್ನಾಗಿಸಿ ಕಾಡಿಗೆ ತೆರಳುತ್ತಾನೆ. ಭರತನ ಶಸ್ತ್ರಾಗಾರದಲ್ಲಿ ಚಕ್ರರತ್ನ ಎನ್ನುವ ಶಕ್ತಿಶಾಲಿ ಅಸ್ತ್ರವೊಂದು ಉದ್ಭವವಾಗುತ್ತದೆ. ಶಸ್ತ್ರದ ಬಲದಿಂದ ಭೂಮಂಡಲವನ್ನೇ ಗೆದ್ದ ಭರತ ಚಕ್ರವರ್ತಿಯಾಗುತ್ತಾನೆ. ಸರ್ವಾಧಿಕಾರಿಯಾಗಿ ಹಿಂಸಾವಾದಿಯಾಗುತ್ತಾನೆ. ಚಕ್ರರತ್ನದ ಅಭೀಷ್ಟೆಯಂತೆ ತನಗೆ ಶರಣಾಗದ ತನ್ನ ದಾಯಾದಿ ಬಾಹುಬಲಿಯನ್ನು ಯುದ್ದಕ್ಕೆ ಆಹ್ವಾನಿಸಿ ಭರತ ಸೋಲುತ್ತಾನೆ. ಗೆದ್ದದ್ದನ್ನು ತಮ್ಮನಿಗೆ ಕೊಟ್ಟು ಬಾಹುಬಲಿ ವೈರಾಗ್ಯ ತಾಳುತ್ತಾನೆ. ಇಲ್ಲಿವರೆಗೂ ಹೇಳಿದ್ದೆಲ್ಲಾ ಪಂಪನ ಆದಿಪುರಾಣದ ಕಥೆ. ಇದನ್ನು ಆಧಾರವಾಗಿಟ್ಟುಕೊಂಡು ಕೆವೈಎನ್ ಹೊಸಪುರಾಣವನ್ನು ಕಟ್ಟಿ ಕೊಟ್ಟು ಆದಿಪುರಾಣದ ದಿಕ್ಕನ್ನೇ ಬದಲಾಯಿಸಿದ್ದಾರೆ. ಅದು ಹೀಗಿದೆ....
          ಚಾವುಂಡರಾಯನೆಂಬ ರಾಜ ಯುದ್ದಗೆದ್ದು ಬರುವಾಗ ಶಿಲ್ಪಿಯೊಬ್ಬನು ಕೆತ್ತುತ್ತಿದ್ದ ಶಿಲೆಯ ಕಲ್ಲಿನ ಚೂರು ತಲೆಗೆ ಬಡಿದು ಕೋಪಗೊಳ್ಳುತ್ತಾನೆ. ಜಿನಮುನಿಯ ದಿಗಂಬರ ಮೂರ್ತಿಯನ್ನು ನೋಡಿದ ತಕ್ಷಣ ಅವನಲ್ಲಿ ವೈರಾಗ್ಯ ಹುಟ್ಟಿ ಅಂತಹುದೇ ಬ್ರಹತ್ ದಿಗಂಬರ ಮೂರ್ತಿಯನ್ನು ಕೆತ್ತಬೇಕೆಂದು ಶಿಲ್ಪಿಗೆ ಆದೇಶಿಸಿ 12 ವರ್ಷದೊಳಗೆ ಶಿಲಾಮೂರ್ತಿ ಸಿದ್ದಗೊಳ್ಳದಿದ್ದರೆ ಪ್ರಾಣತ್ಯಾಗ ಮಾಡುತ್ತೆನೆಂದು ಶಪತ ಮಾಡುತ್ತಾನೆ. 12 ವರ್ಷಮುಗಿದು ಕೊನೆಯ ದಿನವಾದರೂ ಮೂರ್ತಿಕೆತ್ತಲು ಏಕಶಿಲೆಯೊಂದು ಸಿಗದೇ ಬಳಲಿದ ಶಿಲ್ಪಿಗೆ ಒಬ್ಬ ಚಮ್ಮಾರ ಸಿಗುತ್ತಾನೆ. ಕೊನೆಗೂ ಶಿಲೆಯೊಂದು ಸಿಕ್ಕು ಉಳಿಯಿಂದ ಹೊಡೆದಾಗ ಕಲ್ಲಿನಿಂದ ರಕ್ತ ಚಿಮ್ಮುತ್ತದೆ. ಅದರ ಗುಟ್ಟು ತಿಳಿಯಲು ಶಿಲ್ಪಿ ತನ್ನ ಶಿಷ್ಯರೊಡನೆ ಚಮ್ಮಾರನನ್ನು ಬೆನ್ನಟ್ಟುತ್ತಾನೆ. ಹಿಂದಿನ ಚಕ್ರವರ್ತಿಗಳು ಬರೆದ ಶಿಲಾಶಾಸನವನ್ನು ಅಳಿಸಲಾಗದ ಭರತ ಕೆಲಸವನ್ನು ಶಿಲ್ಪಿಗೆ ವಹಿಸುತ್ತಾನೆ. ಶಿಲಾಶಾಸನವಿದ್ದ ಬೆಟ್ಟದಿಂದಲೇ ಶಿಲ್ಪಿಗಣ ಆದಿನಾಥನ ಅಂತಿಮ ದಿನಗಳು, ಚಕ್ರರತ್ನದ ಯುದ್ಧದಾಹ, ಕೊನೆಗೆ ಭರತ-ಬಾಹುಬಲಿಯ ಯುದ್ದ. ಕದನದಲ್ಲಿ ಸೋತ ಭರತ, ಗಾಯಗೊಂಡ ಬಾಹುಬಲಿ, ನಾಶವಾಗಿಹೋದ ಚಕ್ರರತ್ನ ಇವೆಲ್ಲವನ್ನೂ ನೋಡುತ್ತಾನೆ. ತನ್ನ ಗಾಯಗಳನ್ನು ತಾನೇ ಹೊಲೆದುಕೊಳ್ಳುತ್ತಿದ್ದ ಬಾಹುಬಲಿಯೇ ಚಮ್ಮಾರನೆಂದು ಶಿಲ್ಪಿಗೆ ತಿಳಿಯುತ್ತದೆ. ರಕ್ತಪಿಪಾಸು ಚಕ್ರರತ್ನವೇ ಹೆಬ್ಬಂಡೆ ಎಂಬ ಗುಟ್ಟು ಬಾಹುಬಲಿಯಿಂದ ಗೊತ್ತಾಗುತ್ತದೆ. ನಂತರ ಶಿಲ್ಪಿ ಏಕಶಿಲೆಯಲ್ಲಿ ಬಾಹುಬಲಿಯನ್ನು ಮೂಡಿಸುತ್ತಾನೆ. ಇಲ್ಲಿಗೆ ಡಾ. ಕೆವೈಎನ್ರವರ ಆಧುನಿಕ ಪುರಾಣ ಮಂಗಳವಾಗುತ್ತದೆ, ನೋಡುಗರ ತಲೆಯಲ್ಲಿ ಸಂದೇಹದ ಗೊಂದಲಗಳು ಗೂಡುಕಟ್ಟುತ್ತವೆ.
          ಮುರಿದು ಕಟ್ಟುವ ಕ್ರಿಯಾಶೀಲ ಕೆಲಸವನ್ನು ಕೆವೈಎನ್ ನಾಟಕದಲ್ಲಿ ಸೊಗಸಾಗಿ ಮಾಡಿದ್ದಾರೆ. ಇದೊಂದು ಪ್ರತಿಮಾ ಪ್ರಧಾನ ನಾಟಕ. ಪ್ಲಾಶ್ಬ್ಯಾಕ್ ಮತ್ತು ಪ್ಲಾಶ್ಪಾರ್ವರ್ಡ ರಂಗತಂತ್ರಗಳನ್ನು ಬಳಸಿದ ನಿರ್ದೇಶಕರು ಇಡೀ ನಾಟಕವನ್ನೇ ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ಪಾತ್ರಗಳು ಪ್ರತ್ಯಕ್ಷವಾಗಿ ದೃಶ್ಯಗಳನ್ನು ಕಟ್ಟಿದಂತೆ ಅನ್ನಿಸಿದರೂ ನಿಜಾರ್ಥದಲ್ಲಿ ರೂಪಕಗಳೇ ನಾಟಕದಲ್ಲಿ ಪರೋಕ್ಷವಾಗಿ ಪ್ರಮುಖ ಪಾತ್ರವಹಿಸುತ್ತವೆ. ಬಾಹುಬಲಿಯನ್ನು ಇಲ್ಲಿ ಲೋಕಗಳ ಗಾಯಗಳನ್ನು ಹೊಲೆಯುವ ಚಮ್ಮಾರನನ್ನಾಗಿಸಿದ್ದು ಅದ್ಬುತವಾದ ಪರಿಕಲ್ಪನೆಯಾಗಿದೆ. ಕುವೆಂಪುರವರು ತಮ್ಮ ಜಲಗಾರ ನಾಟಕದಲ್ಲಿ ಶಿವನನ್ನೇ ಜಾಡಮಾಲಿಯನ್ನಾಗಿಸಿದ್ದು ಇದಕ್ಕೆ ಪ್ರೇರಣೆಯಾಗಿರಬಹುದು. ಚಕ್ರರತ್ನ ಎಂಬ ಆಯುಧವನ್ನೇ ಒಂದು ಜೀವಂತ ಪಾತ್ರವನ್ನಾಗಿಸಿದ್ದು ಹಾಗೂ ಕೊನೆಗೆ ಬಾಹುಬಲಿಯ ಜೊತೆ ಯುದ್ದಮಾಡುವುದಕ್ಕೆ ಚಕ್ರರತ್ನವನ್ನೇ ಭರತ ಆಯ್ಕೆ ಮಾಡಿದ್ದು ಕಥಾನಕಕ್ಕೆ ಹೊಸ ಭಾಷ್ಯಬರೆದಂತಿದೆ
ಕೆಎಸ್ಡಿಎಲ್ ಚಂದ್ರು

          ಅಸ್ತ್ರ ಶಸ್ತ್ರಗಳು ಹೇಗೆ ಯುದ್ಧದಾಹವನ್ನು ಹೆಚ್ಚಿಸುತ್ತವೆ, ಸರ್ವಾಧಿಕಾರಿಯನ್ನು ಸೃಷ್ಟಿಸುತ್ತವೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳೇನು ಎನ್ನುವುದನ್ನು ತೋರಿಸುವ ನಾಟಕವು ಕರುಣೆ ಅಹಿಂಸೆಯಿಂದ ಎಲ್ಲವನ್ನೂ ಗೆಲ್ಲಬಹುದು ಎನ್ನುವುದನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಆಶಯವನ್ನು ರಂಗದಂಗಳದಲ್ಲಿ ದೃಶ್ಯೀಕರಣಗೊಳಿಸಲು ಹಲವಾರು ಚಿತ್ರವಿಚಿತ್ರ ರಂಗತಂತ್ರಗಳನ್ನು ಬಳಸಲಾಗಿದೆ. ಕೆಲವು ತಂತ್ರಗಳು ಪರಿಣಾಮಕಾರಿಯಾಗಿ ಬಳಕೆಯಾಗಿದ್ದು ಇನ್ನು ಕೆಲವು  ಗೊಂದಲಗಳನ್ನು ಹುಟ್ಟಿಸುವಂತಿವೆ. ಪ್ರಸ್ತುತ ನಾಟಕದಲ್ಲಿ ಕಾಲದ ಹಂಗಿಲ್ಲ. ದೃಶ್ಯಗಳು ಕ್ರಿಪೂ ದಿಂದ ಕ್ರಿಶ ದವರೆಗಿನ ಸುಮಾರು 2000 ವರ್ಷದ ಕಾಲಘಟ್ಟದ ಸನ್ನಿವೇಶಗಳು ಒಂದೇ ಕಾಲಘಟ್ಟದಲ್ಲಿ ನಡೆಯುವಂತೆ ಭಾಸವಾಗುತ್ತದೆ. ಕಾಲಾತೀತವಾಗಿ ಮೂಡುವ ದೃಶ್ಯಗಳು ನಡೆಯುವ ಸನ್ನಿವೇಶ-ದೇಶ-ಸ್ಥಳಗಳನ್ನು ಮೂಲ ಪಂಪನ ಆದಿಪುರಾಣಕ್ಕೆ ಹೋಲಿಸುವಂತಿಲ್ಲ. ಕಾಲ್ಯಕ್ಯ, ಸ್ಥಳೈಕೈಗಳನ್ನೆಲ್ಲಾ ಮೀರಿ ಊಹಾತ್ಮಕವಾಗಿ ನಾಟಕ ಬೆಳೆದು ನಿಂತಿದೆ. ಹೀಗಾಗಿ ಆದಿನಾಥ, ಬಾಹುಬಲಿ, ಚಾವುಂಡರಾಯನ ಕುರಿತಂತೆ ಪೌರಾಣಿಕ ಕಲ್ಪನೆ ಮತ್ತು ಚಾರಿತ್ರಿಕ ಸಾಕ್ಷಿಗಳನ್ನು ನಾಟಕಕ್ಕೆ ಹೋಲಿಸಿ ನೋಡಿದರೆ ಪ್ರೇಕ್ಷಕನಿಗೆ ಗೊಂದಲವಾಗುವುದು ತಪ್ಪಿದ್ದಲ್ಲ. ಹಿಂದಿನ ಎಲ್ಲಾ ಸತ್ಯ, ಸಾಕ್ಷ, ಚರಿತ್ರೆಗಳನ್ನು ಮರೆತು ನಾಟಕವನ್ನು ಕೇವಲ ನಾಟಕವಾಗಿ ನೋಡಿದಾಗ ಮಾತ್ರ ನೋಡುಗ ಸ್ವಲ್ಪ ನೆಮ್ಮದಿಯಾಗಿ ರಸಸ್ವಾದ ಮಾಡಲು ಸಾಧ್ಯ. ಕಾಲ-ದೇಶ-ತರ್ಕಗಳ ಹಿಂದೆ ಬಿದ್ದರೆ ಸಂದೇಹದ ಹುಳುಗಳು ಪ್ರೇಕ್ಷಕನ ತಲೆಯಲ್ಲಿ ಹರಿದಾಡತೊಡಗುತ್ತವೆ.
          ಬರೀ ನಾಟಕವನ್ನೇ ನೋಡಿದಾಗಲೂ ಕೆಲವು ಸಂದೇಹಗಳು ಸಾಮಾನ್ಯ ಪ್ರೇಕ್ಷಕನನ್ನು ಕಾಡದೇ ಇರವು. ಭರತ ತನ್ನ ಹಿಂದಿನ ಅರಸರ ಶಿಲಾಶಾಸನವನ್ನು ಆಳಿಸಲು ಹೇಳಿದಾಗ ಅದನ್ನು ಓದಿದ ಶಿಲ್ಪಿಗಳು ಭರತನನ್ನು ಕೊಂಡಾಡುವ ಶಿಲಾಶಾಸನವನ್ನೇ ಓದುತ್ತಾರೆ ಏಕೆ? ತನ್ನ ಶಾಸನವನ್ನು ತಾನೇ ಅಳಿಸಲು ಭರತ ಬಯಸುತ್ತಾನಾ? ಇಂದ್ರನಿಂದ ಹತಳಾದ ನೃತ್ಯಗಾತಿ ನೀಲಾಂಜನೆ ಚಮ್ಮಾರನಿಂದ ನಾಲಿಗೆ ಹೊಲಿಸಿಕೊಳ್ಳುವುದೇಕೆ? ಅವಳ ನಾಲಿಗೆಯನ್ನೇನು ಇಂದ್ರ ಕುಯ್ದಿರಲಿಲ್ಲವಲ್ಲಾ? ಭರತನಿಗೆ ವಿಜಯಶಾಸನ ಬರೆದುಕೊಡಲು ಒಪ್ಪಿದ ಕವಿ ಮನೆಗೆ ಬಂದು ನಿರಾಕರಿಸುತ್ತಾನೆ. ತನ್ನ ಮಗಳು ವಿಧವೆಯಾಗಿದ್ದಕ್ಕೆ ಭರತನ ಯುದ್ದವೇ ಕಾರಣವೆಂಬ ಸಂಗತಿಯು ಕವಿಗೆ ಒಪ್ಪಿಕೊಳ್ಳುವ ಮೊದಲು ತಿಳಿದಿರಲಿಲ್ಲವೇ? ಎಲ್ಲವನ್ನೂ ತ್ಯಜಿಸಿ ವೈರಾಗ್ಯತಾಳಿದ ಮುದುಕ ಆದಿನಾಥನಿಗೆ ಕಾಡಿನ ಜನ ಹೆಣ್ಣನ್ನು ಸಮರ್ಪಿಸಲು ಪ್ರಯತ್ನಿಸಿದ್ದು ಅನಗತ್ಯವೆನಿಸುವಂತಿದೆ. ಹೀಗೆ ಇಂತಹ ಹತ್ತು ಹಲವು ಚಿಕ್ಕಪುಟ್ಟ ಗೊಂದಲಗಳನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ದೃಶ್ಯಗಳನ್ನು ಮರುಸಂಯೋಜಿಸಿದರೆ, ರಂಗಪಠ್ಯದಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡಿದ್ದರೆ, ಕಾಲ ಸ್ಥಳಗಳ ಬಗ್ಗೆ ತಾರ್ಕಿಕವಾಗಿ ಸಮೀಕರಣಗೊಳಿಸಿದ್ದರೆ, ನಾಟಕದೊಳಗಿನ ಕ್ಲಿಷ್ಟತೆಗಳನ್ನು ಇನ್ನಷ್ಟು ಸರಳಗೊಳಿಸಿದ್ದರೆ, ಅಲ್ಲಲ್ಲಿ ಎಳೆತವೆನಿಸುವ ದೃಶ್ಯಗಳನ್ನು ಸಂಕಲಿಸಿದ್ದರೆ, ಒಂದೆರಡು ಅನಗತ್ಯ ದೃಶ್ಯಗಳನ್ನು ತೆಗೆದು ಹಾಕಿದ್ದರೆ... ನಾಟಕವು ಇನ್ನೂ ಪರಿಣಾಮಕಾರಿಯಾಗಿ ಮೂಡಿಬರಬಹುದಾಗಿದೆ. ಕನ್ನಡ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ನಾಟಕವನ್ನು ರೂಪಾಂತರ ಕೊಡಬಹುದಾಗಿದೆ. 
          ಕಲಾವಿದರ ಅಸ್ಪಷ್ಟ ಮಾತುಗಳಿಗೆ ಕಲಾಕ್ಷೇತ್ರದ ದ್ವನಿವ್ಯವಸ್ಥೆ ಕಾರಣವಾದರೆ ಕೆಲವೊಮ್ಮೆ ಮಾತಿನ ನಡುವೆಯೇ ತಾರಕದ ಆಲಾಪಗಳು ಕೇಳುಗರಿಗೆ ಕಿರಿಕಿರಿಯನ್ನುಂಟು ಮಾಡಿತು. ಕಣ್ಣಿನ ಒಳಗೆ ಕನಸಿನ ಮರಣ.. ಎನ್ನುವಂತಹ ಕಾವ್ಯಾತ್ಮಕ  ಹಾಡುಗಳನ್ನು ಕೇಳುವುದೇ ಒಂದು ಸೊಗಸು. ನಾರಾಯಣ ರಾಯಚೂರರ ಸಂಗೀತ ಸಂಯೋಜನೆ ನಾಟಕದ ದೃಶ್ಯಸೃಷ್ಟಿಗೆ ಮೂಡ್ ಒದಗಿಸಿತು. ಸನ್ನಿವೇಶಗಳಿಗೆ ತಕ್ಕಂತೆ ಸೈಕ್ನ್ನು ಬಳಸಿ ಬೆಳಗಿದ ನಾಗರಾಜರ ಬೆಳಕು ವಿನ್ಯಾಸ ನಾಟಕಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿದೆ. ಪರದೆಯ ಹಿಂಭಾಗದ ಕಲ್ಲಿನ ಬೆಟ್ಟದ ರಂಗವಿನ್ಯಾಸ ಹಾಗೂ ಎತ್ತರದ ಗೊಮ್ಮಟೇಶನ ಮೂರ್ತಿ (ಸಿದ್ದರಾಮ ಕೊಪ್ಪರ) ವಿಸ್ಮಯಗೊಳಿಸುವಷ್ಟು ಸೊಗಸಾಗಿದ್ದವು. ವಸ್ತ್ರವಿನ್ಯಾಸ ಇನ್ನಷ್ಟು ಶ್ರೀಮಂತವಾಗಿದ್ದರೆ ಚೆನ್ನಾಗಿತ್ತು

          ಇಡೀ ನಾಟಕದಲ್ಲಿ ಗಮನ ಸೆಳೆದದ್ದು ಚಕ್ರರತ್ನ ಪಾತ್ರದಾರಿ ಸಿತಾರಾ. ಅವರ ಆಂಗಿಕಾಭಿನಯ ಅನನ್ಯವಾಗಿತ್ತು. ಭರತನಾಗಿ ವಾದಿರಾಜ್ ಪಾತ್ರಕ್ಕೆ ನ್ಯಾಯಸಲ್ಲಿಸಲು ಪ್ರಯತ್ನಿಸಿದ್ದು, ಬಾಹುಬಲಿ ಮತ್ತು ಚಮ್ಮಾರನಾಗಿ ರಾಮಚಂದ್ರ ಉತ್ತಮ ಅಭಿನಯವನ್ನು ನೀಡಿದ್ದಾರಾದರೂ ಕ್ಲೈಮ್ಯಾಕ್ಸನಲ್ಲಿ ಬಾಹುಬಲಿ ದುರಹಂಕಾರಿಯ ರೀತಿಯಲ್ಲಿ ಅಭಿನಯಿಸಿ ಮಾತಾಡುವ ಅಗತ್ಯವಿರಲಿಲ್ಲ.  ಜಿನಸನ್ಯಾಸಿ ಹಾಗೂ ಕವಿಯಾಗಿ ತೇಜಸ್ ಅಭಿನಯ ಗಮನಾರ್ಹವಾಗಿತ್ತು. ಚಾವುಂಡರಾಯನ ಚಿಕ್ಕ ಪಾತ್ರದಲ್ಲಿ ಹರೀಶ್ ಅಭಿನಯ ಸೊಗಸಾಗಿತ್ತು. ಶಿಲ್ಪಿಯಾಗಿ ನರೇಂದ್ರಬಾಬುರವರ ಅಭಿನಯ ಗಮನಸೆಳೆಯಿತಾದರೂ ವಾಚಿಕಾಭಿನಯದ ಏಕತಾನತೆ ಪಾತ್ರ ಕಟ್ಟಿಕೊಡುವಲ್ಲಿ ಹಿನ್ನಡೆಯನ್ನುಂಟುಮಾಡಿತು. ಇನ್ನೂ ಕೆಲವು ಹೊಸ ನಟರು ಪಾತ್ರಕ್ಕೆ ಪೂರಕವಾಗಿ ಅಭಿನಯ ರೂಡಿಸಿಕೊಂಡರೆ ನಾಟಕ ಹೆಚ್ಚು ಕಳೆಗಟ್ಟುತ್ತದೆ.
          ಒಟ್ಟಾರೆಯಾಗಿ ಚಕ್ರರತ್ನ ನಾಟಕ ಹಿಂಸೆ-ಅಹಿಂಸೆ-ವೈರಾಗ್ಯದ ಆಯಾಮಗಳನ್ನು ಹೇಳುವ ತನ್ನ ಆಶಯದಲ್ಲಿ ಸಫಲವಾಗಿದೆ. ಆದರೆ ಆಶಯವನ್ನು ಪ್ರೇಕ್ಷಕರಿಗೆ ತಲುಪಿಸುವ ದಾರಿ ಸರಳವಾಗಿಲ್ಲ, ಸುಲಭವಾಗಿಲ್ಲ. ತರ್ಕಾತೀತ ನೆಲೆಯಲ್ಲಿ, ಊಹಾತೀತ ರೀತಿಯಲ್ಲಿ, ಕಾಲಾತೀತ ನಡೆಯಲ್ಲಿ,  ಕ್ಲಿಷ್ಟಕರವಾದ ನಿರೂಪನೆಯಲ್ಲಿ, ಗೊಂದಲಕಾರಿ ದೃಶ್ಯಸೃಷ್ಟಿಯಲ್ಲಿ, ರೂಪಕಗಳ ಭಾರದಲ್ಲಿ ಚಕ್ರರತ್ನ ಪ್ರೇಕ್ಷಕರನ್ನು ಕಾಡುತ್ತದೆ. ಬುದ್ದಿವಂತರನ್ನು ತನ್ಮಯಗೊಳಿಸುತ್ತದೆ, ಸಾಮಾನ್ಯ ನೋಡುಗನನ್ನು ತಲ್ಲಣಗೊಳಿಸುತ್ತದೆ. ನಾಟಕ ಮುಗಿದ ಮೇಲೆ ಆಲೋಚನೆ ಮಾಡುವಂತೆ ಪ್ರೇರೇಪಿಸುತ್ತದೆ. ಇದೇ ನಾಟಕದ ಸಾರ್ಥಕತೆಯಾಗಿದೆ

                                                      -ಶಶಿಕಾಂತ ಯಡಹಳ್ಳಿ

 


 





           



1 ಕಾಮೆಂಟ್‌:

  1. .....ಕೆಲವು ವರ್ಷಗಳ ಹಿಂದೆ ಮೈಸೂರು ರಂಗಾಯಣ (ಸ್ವೀಡಿಶ್ ಪ್ರಾಜೆಕ್ಟ್)...ನಾವು ಕೆಲವರನ್ನು ....ಮಕ್ಕಳ ನಾಟಕ ರಚನೆಗಾಗಿ ಕರೆಸಿಕೊಂಡಿತ್ತು..... ಆಗ ನಾರಾಯಣ ಸ್ವಾಮಿಯವರು ತಾವು ಬರೆದ ನಾಟಕವನ್ನು ಓದಿದ್ದರು.... ಸಂಭಾಷಣೆ...ಎಲ್ಲಾ ಇಷ್ಟ ಆಗಿತ್ತು ಮಕ್ಕಳಿಗೂ ತಲುಪಬಹುದಾದ ನಾಟಕ ಅಂತ ಅನಿಸಿತ್ತು....ಪ್ರಾಯಷಃ ಇದು ಅದೇ ನಾಟಕ ಇರಬಹುದೇನೋ....!!! ಅಥವಾ ಈಗ ಅದನ್ನೇ ಬದಲಾಯಿಸಿ ಬರೆದದರೋ..... ನಿಮ್ಮ ಬರಹ ಚೆನ್ನಾಗಿದೆ.... ----ಮೂರ್ತಿ ದೇರಾಜೆ

    ಪ್ರತ್ಯುತ್ತರಅಳಿಸಿ