ಗುರುವಾರ, ನವೆಂಬರ್ 21, 2013

ನಾಟಕ ಅಕಾಡೆಮಿ ಅಧ್ಯಕ್ಷರ ಆಯ್ಕೆ ಹಿಂದಿನ ರಂಗರಾಜಕೀಯ :


          
ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಉಮಾಶ್ರೀ 
 
     ಕರ್ನಾಟಕ ನಾಟಕ ಅಕಾಡೆಮಿಗೆ ಅಧಿಕೃತ ವಾರಸುದಾರರಿಲ್ಲದೇ ಆರು ತಿಂಗಳಾಯಿತು. ಯಾವಾಗ ಕಾಂಗ್ರೆಸ್ ಸರಕಾರ 2013, ಮೇ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂತೊ ಆಗ ಬಿಜೆಪಿ ಸರಕಾರದಿಂದ ಆಯ್ಕೆಯಾಗಿದ್ದ ನಾಟಕ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಸುಧೀರ್ರವರಿಂದ ಒತ್ತಾಯ ಪೂರ್ವಕವಾಗಿ 2013 ಜುನ್ ತಿಂಗಳಲ್ಲಿ ರಾಜಿನಾಮೆ ಪಡೆಯಲಾಯಿತು. ಅಂದಿನಿಂದಲೇ ಅಕಾಡೆಮಿಯ ಸದಸ್ಯರ ಸದಸ್ಯತ್ವ ರದ್ದಾಯಿತು. ರಂಗಭೂಮಿಯ ಉಳಿವು ಹಾಗೂ ಬೆಳವಣಿಗೆಗಿಂತಲೂ ಪಕ್ಷ ರಾಜಕೀಯ ಎನ್ನುವುದು ಸಾಂಸ್ಕೃತಿಕ ಲೋಕವನ್ನು ಅಧೋಗತಿಗೆ ತಂದು ನಿಲ್ಲಿಸಿದೆ. ನಿಜವಾದ ಅನುಭವಸ್ತರನ್ನು, ನಾಟಕ ರಂಗದಲ್ಲಿ ಸಕ್ರಿಯರಾದವರನ್ನು ಇಲ್ಲವೇ ಸಮಗ್ರವಾಗಿ ಕನ್ನಡ ರಂಗಭೂಮಿಯನ್ನು ಕಟ್ಟುವಂತಹ ದೂರದೃಷ್ಟಿ ಉಳ್ಳವರನ್ನು ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಹಾಗೂ ಯಾವುದೇ ಲಾಬಿಗೆ ಒಳಗಾಗದೇ ಕ್ರಿಯಾಶೀಲರಾಗಿರುವಂತವರನ್ನು ಸದಸ್ಯರನ್ನಾಗಿ ನಿಯಮಿಸುವುದು ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹುದು.
   ಆದರೆ ಯಾವಾಗ ಪಕ್ಷ ರಾಜಕಾರಣ ಎನ್ನುವುದು ಸಾಹಿತ್ಯಕ-ಸಾಂಸ್ಕೃತಿಕ ಅಕಾಡೆಮಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆಯೋ ಆಗ ಆಯಾ ಪಕ್ಷಕ್ಕೆ ನಿಷ್ಠರಾದವರು, ಆಯಾ ಪಕ್ಷದ ಕಾರ್ಯಕರ್ತರು ಹಾಗೂ ಲಾಬಿ ಮಾಡುವವರು ಆಯ್ಕೆಯಾಗುತ್ತಾರೆ. ಹಾಗೂ ಆಳುವ ಪಕ್ಷಗಳು ಬದಲಾದಂತೆಲ್ಲಾ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಬದಲಾಗುತ್ತಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವದ ವಿಪರ್ಯಾಸ.

ಡಾ.ಬಿ.ವಿ.ರಾಜಾರಾಂ
   ಬಿಜೆಪಿ ಸರಕಾರ ಬಂದಾಗ ಡಾ.ರಾಜಾರಾಂರವರನ್ನು ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿಸಲಾಯಿತು. ಅವರು ಸಕ್ರೀಯ ರಂಗಕರ್ಮಿ ಎನ್ನುವುದಕ್ಕಿಂತಲೂ ಆರ್ಎಸ್ಎಸ್ ಹಿನ್ನೆಲೆಯವರು ಎನ್ನುವುದು ಅವರ ಆಯ್ಕೆಗೆ ಬಹುಮುಖ್ಯ ಕಾರಣವಾಯಿತು. ಮೂರು ವರ್ಷಗಳ ರಾಜಾರಾಂರವರ ಅವಧಿ ಮುಗಿದ ನಂತರ ವಿಳಂಬ ಮಾಡದೇ ಬಿಜೆಪಿ ಸರಕಾರವು ಅವರನ್ನು ಮೈಸೂರಿನ ರಂಗಾಯಣಕ್ಕೆ ಅಧ್ಯಕ್ಷರನ್ನಾಗಿಸ ಲಾಯಿತು.  ಯಾವಾಗ ರಂಗಾಯಣದ ಕಲಾವಿದರನ್ನು  ಒಡೆದಾಳುವ ರಾಜಕೀಯ ಪಿತೂರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶುರುವಾಯಿತೋ, ಅದನ್ನು ವಿರೋಧಿಸಿ ಯಾವಾಗ ರಾಜಾರಾಂ ಧರಣಿ ಕುಳಿತರೋ ಆಗ ಅವರ ಅಧ್ಯಕ್ಷಗಿರಿಯನ್ನು ಸಂಸ್ಕೃತಿ ಇಲಾಖೆ ಕಿತ್ತುಕೊಂಡಿತು. ಯಾಕೆಂದರೆ ಆಗ ರಾಜಾರಾಂರವರನ್ನು ಬೆಂಗಾವಲಾಗಿ ಕಾಪಾಡಲು ಬಿಜೆಪಿ ಸರಕಾರವೇ ಇರಲಿಲ್ಲ. ಚುನಾವಣೆ ಘೋಷಣೆಯಾಗಿತ್ತು.
   ಇತ್ತ ರಾಜಾರಾಂರವರ ನಂತರ ನಾಟಕ ಅಕಾಡೆಮಿಗೆ ಅಧ್ಯಕ್ಷೆಯಾಗಿದ್ದು ಬಿಜೆಪಿಯ ಸಾಂಸ್ಕೃತಿಕ ವಿಭಾಗದ ಪದಾಧಿಕಾರಿಯಾಗಿದ್ದ ಮಾಲತಿ ಸುಧೀರ್. ರಾಜಾರಾಂರವರು ನಾಟಕ ಆಕಾಡೆಮಿಗೆ ಅಧ್ಯಕ್ಷರಾಗುವ ಮುಂಚೆಯೂ ಮಾಲತಿರವರು ಅಕಾಡೆಮಿಯ ಅಧ್ಯಕ್ಷಗಿರಿಗಾಗಿ ಮುಖ್ಯಮಂತ್ರಿಯ ಮಟ್ಟದಲ್ಲಿ ಸಿಕ್ಕಾಪಟ್ಟೆ ಲಾಬಿ ಮಾಡಿದ್ದರು. ಆದರೆ ಆಗ ಬಿಜೆಪಿ ಪಕ್ಷದ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಶಕ್ತಿಯುತವಾಗಿ ಸರಕಾರವನ್ನು ನಿಯಂತ್ರಿಸುತ್ತಿತ್ತು. ನಿಯಂತ್ರಣ ಆರ್ಎಸ್ಎಸ್ ಮಾಸ್ಟರ್ ಮೈಂಡ್ ಸಂತೋಷಜಿ ಕೈಯಲ್ಲಿತ್ತು. ಸಹಜವಾಗಿ ಯಡಿಯೂರಪ್ಪರವರ ರೆಕಮೆಂಡೆಶನ್ಗಿಂತಲೂ
ಮಾಲತಿ ಸುಧೀರ್
ಸಂತೋಷಜಿ ಸೂಚಿಸಿದ ರಾಜಾರಾಂ ಆಯ್ಕೆಯಾದರು. ಮುಂದಿನ ಸಲ ನಿಮ್ಮನ್ನೇ ನಾಟಕ ಅಕಾಡೆಮಿಗೆ ಅಧ್ಯಕ್ಷೆಯನ್ನಾಗಿ ಮಾಡುತ್ತೇನೆಂದು ಯಡಿಯೂರಪ್ಪ ಮಾಲತಿ ಸುಧೀರ್ರವರಿಗೆ ಮಾತುಕೊಟ್ಟು ಸಮಾಧಾನ ಮಾಡಿದರು. ಮಾತು ಕೊಟ್ಟಂತೆ ರಾಜಾರಾಂ ಅವಧಿ ಮುಗಿದ ನಂತರ ಮಾಲತಿ ನಾಟಕ ಅಕಾಡೆಮಿಗೆ ಅಧ್ಯಕ್ಷೆಯಾದರಾದರೂ ಆರು ತಿಂಗಳುಗಳ ಕಾಲ ಸದಸ್ಯರನ್ನು ನೇಮಕ ಮಾಡಲು ಅವಕಾಶ ಕೊಡದ ಸಂತೋಷಜಿ ಅಧ್ಯಕ್ಷೆಯಾದವರ ಕೈಕಟ್ಟಿ ಕೂಡಿಸಿಬಿಟ್ಟರು.   ಇಲ್ಲಿ ರಾಜಾರಾಂ ಅಥವಾ ಮಾಲತಿಯವರ ರಂಗಾನುಭವ ಅಥವಾ ಅವರ ಅಧ್ಯಕ್ಷತೆಯ ಯೋಗ್ಯತೆ ಬಗ್ಗೆ ಹೇಳುತ್ತಿಲ್ಲ. ಆದರೆ ಅವರ ಆಯ್ಕೆಯ ಹಿಂದೆ ಇರುವ ಆಳುವ ಪಕ್ಷಗಳ ತಂತ್ರ-ಕುತಂತ್ರಗಳ ಬಗ್ಗೆ ಮಾತ್ರ ವಿಷಾದವಿದೆ.
      ರಂಗಭೂಮಿ ಅದೆಷ್ಟೇ ಜಾತ್ಯಾತೀತ ಪಕ್ಷಾತೀತ ಎಂದು ಹೇಳಿಕೊಂಡರೂ ಅಂತರಂಗದಲ್ಲಿ ಜಾತಿ ನಿಷ್ಟೆ ಮತ್ತು ಪಕ್ಷ ನಿಷ್ಟೆ ಎನ್ನುವುದು ಅಂತರ್ಗತವಾಗಿ ಗುಪ್ತಗಾಮಿನಿಯಂತೆ ಹರಿದಾಡುತ್ತಲೇ ಇರುತ್ತದೆ. ನಾಟಕ ಕಟ್ಟುವ ಸಂದರ್ಭದಲ್ಲಿ  ರಂಗಕರ್ಮಿಗಳು ಒಂದಾದಂತೆ ಕಂಡರೂ ಅಧಿಕಾರ ಹಂಚಿಕೊಳ್ಳುವ ಸಂದರ್ಭ ಬಂದರೆ ಜಾತಿ, ಪಕ್ಷ ಪ್ರಮುಖವಾಗುತ್ತದೆ. ಜಾತಿಯಾಧರಿತವಾಗಿ-ರಾಜಕೀಯ ಪಕ್ಷಾಧಾರಿತವಾಗಿ ರಂಗರಾಜಕೀಯ ಗರಿಗೆದರುತ್ತದೆ. ಹೇಗೆ ರಾಜಕೀಯ ಪಕ್ಷಗಳು ಅಧಿಕಾರ ವಿಕೇಂದ್ರೀಕರಣದ ಹೆಸರಲ್ಲಿ ಹಳ್ಳಿ ಹಳ್ಳಿಗಳನ್ನು ಪಕ್ಷಾಧಾರಿತವಾಗಿ ಒಡೆದು ಹಾಕಿ ತಮ್ಮ ರಾಜಕೀಯ ಓಟ್ಬ್ಯಾಂಕ್ ಹಿತಾಸಕ್ತಿಗಾಗಿ ಹಳ್ಳಿಗಳ ನೆಮ್ಮದಿಯನ್ನು ಬಲಿತೆಗೆದುಕೊಂಡವೋ, ಹಾಗೆಯೇ ಸಾಂಸ್ಕೃತಿಕ ಲೋಕವನ್ನೂ ಸಹ ಒಡೆದಾಳುತ್ತಿರುವುದು ಪ್ರಜಾಪ್ರಭುತ್ವದ ವಿಪರ್ಯಾಸವಾಗಿದೆ.
       ಮಾಲತಿ ಸುಧೀರ್ರವರ ಅಧ್ಯಕ್ಷಗಿರಿ ಅವಧಿ ಇನ್ನೂ ಒಂದೂವರೆ ವರ್ಷ ಬಾಕಿ ಇತ್ತು. ಸದಸ್ಯರು ಆಯ್ಕೆಗೊಂಡು ಇನ್ನೂ ಒಂದು ವರ್ಷ ಕೂಡಾ ಆಗಿರಲಿಲ್ಲ, ಆದರೆ ಅಷ್ಟರಲ್ಲೇ ಅಧ್ಯಕ್ಷರ ರಾಜಿನಾಮೆ ಪಡೆಯಲಾಯಿತು. ಇದಕ್ಕೆ ಕಾರಣ ಕೇವಲ ರಾಜಕೀಯ ಪಕ್ಷದ ಆಡಳಿತ ಬದಲಾಗಿದ್ದೊಂದೇ ಆಗಿತ್ತು. ಆದರೆ ಯಾವಾಗ ಕಾಂಗ್ರೆಸ್ ಆಡಳಿತದ ಚುಕ್ಕಾಣೆ ಹಿಡಿಯಿತೋ, ಯಾವಾಗ ರಂಗಭೂಮಿಯ ಹಿನ್ನೆಲೆಯ ಉಮಾಶ್ರೀಯವರು ಸಂಸ್ಕೃತಿ ಮಂತ್ರಿಯಾದರೋ ಆಗ ರಂಗರಾಜಕೀಯದ ಸ್ವರೂಪವೇ ಬದಲಾಯಿತು. ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ಪ್ರಯತ್ನಗಳು ಶುರುವಾದವು

ಕಪ್ಪಣ್ಣ
    ಸುಳಿವನ್ನು ತಿಳಿದ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಕಪ್ಪಣ್ಣ ತಮ್ಮ ರಂಗರಾಜಕೀಯದ ದಾಳ ಉರುಳಿಸಲು ಆರಂಭಿಸಿದರು. ಉಮಾಶ್ರೀಯವರಿಗೆ ಮೊಟ್ಟಮೊದಲು ಬಾರಿಗೆ ನಾಟಕದಲ್ಲಿ ಪಾತ್ರ ಕೊಟ್ಟು ರಂಗವೇದಿಕೆಗೆ ಅವಕಾಶ ಮಾಡಿ ಕೊಟ್ಟಿದ್ದು ರಂಗ ಸಂಪದ ತಂಡ. ರಂಗಸಂಪದವನ್ನು ಕಟ್ಟಿದ ಆರ್.ನಾಗೇಶ ಈಗ ಬದುಕಿಲ್ಲ. ರಂಗಸಂಪದವೇ ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿಲ್ಲ. ಆದರೆ ನಾಗೇಶರವರ ಜೊತೆಗೆ ತಂಡವನ್ನು ಕಟ್ಟಿದವರಲ್ಲಿ ಪ್ರಮುಖರಾದವರು ಜೆ.ಲೋಕೇಶ್, ಚಡ್ಡಿ ನಾಗೇಶ್, ಡಿ.ಟಿ.ಚನ್ನಕೇಶವಮೂರ್ತಿ ಮುಂತಾದವರಲ್ಲಿ ಯಾರನ್ನು ಅಧ್ಯಕ್ಷಗಿರಿಗೆ ರೆಕಮೆಂಡ್ ಮಾಡಿದರೆ ಒಳ್ಳೆಯದು ಎಂದು ಕಪ್ಪಣ್ಣ ತಮ್ಮ ರಂಗಲೆಕ್ಕಾಚಾರವನ್ನು ಶುರುವಿಟ್ಟುಕೊಂಡರು. ಮೈಸೂರು ಬ್ಯಾಂಕಿನಲ್ಲಿ ನೌಕರರ ಯುನಿಯನ್ ಲೀಡರ್ ಆಗಿದ್ದು ಈಗ ರಿಟೈರ್ ಆಗಿರುವ ಜೆ.ಲೋಕೇಶರವರೇ ಸೂಕ್ತವೆಂದು ತೀರ್ಮಾನಿಸಿದ ಕಪ್ಪಣ್ಣ ಕೂಡಲೇ ಲೋಕೇಶರವರನ್ನು ಸಂಪರ್ಕಿಸಿ
ಜೆ.ಲೋಕೇಶ
ಅಧ್ಯಕ್ಷಗಿರಿಗೆ ಪ್ರಯತ್ನಿಸಿ ನಾವೆಲ್ಲಾ ಸಪೋರ್ಟ ಮಾಡುತ್ತೇವೆ ಎಂದು ಕಿವಿ ಊದಿದರು. ಇತ್ತ ಉಮಾಶ್ರೀರವರಿಗೂ ಪೋನ್ ಮಾಡಿ ಜೆ.ಲೋಕೇಶರವರೇ ಅಧ್ಯಕ್ಷಗಿರಿಗೆ ಸೂಕ್ತ ವ್ಯಕ್ತಿ, ನೀವು ಸ್ಥಾನಕ್ಕೆ ತಲುಪಲು ಆರಂಭದ ಮಟ್ಟಿಲಾದದ್ದೇ ರಂಗಸಂಪದ. ಎಂದೆಲ್ಲಾ ಸೆಂಟಿಮೆಂಟ್ ಕಟ್ಟಿಕೊಟ್ಟರು. ಉಮಾಶ್ರೀ ಆಯಿತು ನಿಮ್ಮೆಲ್ಲರ ಇಚ್ಚೆ ಇದ್ದ ಹಾಗೇ ಆಗಲಿ ಎಂದೂ ಒಪ್ಪಿಕೊಂಡರು. ಅಕಾಡೆಮಿಯ ಅಧ್ಯಕ್ಷರ ಆಯ್ಕೆಯಲ್ಲಿ ಕಿಂಗ್ ಪಿನ್ ಆಗಲು ಹಾತೊರೆದ ಕಪ್ಪಣ್ಣ ಮುಂದೆ ಅವರು ಅಧ್ಯಕ್ಷರಾದಾಗ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಕಾರ್ಯಕ್ಕೆ ತಂತ್ರಗಳನ್ನು ಹೆಣೆಯತೊಡಗಿದರು

ಎಲ್.ಕೃಷ್ಣಪ್ಪ
   ಆದರೆ ಅದೇ ಸಮಯಕ್ಕೆ ಮಾಸ ನಾಟಕ ರಂಗಪತ್ರಿಕೆಯ ಸಂಪಾದಕರಾದ ಹಾಗೂ ಬಿ.ವಿ.ಕಾರಂತರ ಕಾಲದಿಂದಲೂ ರಂಗಭೂಮಿಯಲ್ಲಿ ರಂಗಸಂಘಟಕನಾಗಿ, ರಂಗ ನಿರ್ದೇಶಕನಾಗಿ ದುಡಿದ ಎಲ್.ಕೃಷ್ಣಪ್ಪನವರೂ ಸಹ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ತಮ್ಮ ಪ್ರಯತ್ನ ಶುರುಮಾಡಿದರು. ಇದು ಗೊತ್ತಾಗಿದ್ದೇ ತಡ ಕಪ್ಪಣ್ಣ  ರಂಗಸಂಪದದ ಚಂದ್ರಕಾಂತರವರ ಮೂಲಕ ಜೆ.ಲೋಕೇಶ ಪರವಾಗಿ ರಂಗಕರ್ಮಿಗಳ ಸಹಿ ಸಂಗ್ರಹ ಮಾಡಲು ಆರಂಭಿಸಿದರು. ಕೆಲಸವಿಲ್ಲದೇ ಮನೆಯಲ್ಲಿ ಖಾಲಿ ಕುಳಿತಿದ್ದ ಜೆ.ಲೊಕೇಶ ಕೂಡಾ ಅಕಾಡೆಮಿಯ ಗದ್ದಿಗೆ ಏರಲು ತಮ್ಮ ಪ್ರಯತ್ನವನ್ನು ಜೋರಾಗಿಯೇ ಆರಂಭಿಸಿದರು.
     ಕಳೆದ ಎರಡು ದಶಕಗಳಿಂದ ರಂಗಭೂಮಿಯ ಸಂಪರ್ಕವನ್ನೇ ಕಳೆದುಕೊಂಡು ಮೈಸೂರು ಬ್ಯಾಂಕಿನ ನೌಕರರ ಯುನಿಯನ್ಲ್ಲಿ ತೊಡಗಿಸಿಕೊಂಡಿದ್ದ ಜೆ.ಲೋಕೇಶರವರು ಪ್ರಸ್ತುತ ರಂಗಭೂಮಿಗಿತ್ತ ಶೂನ್ಯ ಕೊಡುಗೆಯನ್ನು  ರಂಗಸಂಘಟಕ ನಾಗರಾಜಮೂರ್ತಿಯಂತವರು ಪ್ರಶ್ನಿಸಿ ಲೋಕೇಶ ಪರವಾಗಿ ಸಹಿ ಹಾಕಲು ನಿರಾಕರಿಸಿದರು. ಒಂದು ಕಾಲದ ನಾಟಕದ ಒಡನಾಡಿ ಎಲ್. ಕೃಷ್ಣಪ್ಪರವರು ಅಕಾಡೆಮಿ ಅಧ್ಯಕ್ಷರಾಗುವುದನ್ನು ಇಷ್ಟಪಡದ ಕಪ್ಪಣ್ಣರವರು ನಾಗರಾಜಮೂರ್ತಿ ಯನ್ನೊಲಿಸಲು ಇನ್ನೊಂದು ತಂತ್ರಗಾರಿಕೆ ಮಾಡಿದರು. ಅವರ ತಂತ್ರ ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಸ್ವತಃ ನಾಗರಾಜಮೂರ್ತಿಯವರೆ ಚಂದ್ರಕಾಂತರವರನ್ನು ಕರೆಸಿ ಮನವಿ ಪತ್ರಕ್ಕೆ ಸಹಿ ಹಾಕಿದರು. ಕಪ್ಪಣ್ಣನವರ ಗೂಗ್ಲಿ ಎಸೆತಕ್ಕೆ ನಾಗರಾಜಮೂರ್ತಿ ಕ್ಲೀನ್ ಬೋಲ್ಡ ಆಗಿದ್ದಾದರೂ ಹೇಗೆ? ಅಷ್ಟೊಂದು ಅವಸರದಲ್ಲಿ ಸಹಿ ಹಾಕಲು ಕಾರಣವಾದರೂ ಏನು?
      ಅದಕ್ಕೆ ಕಾರಣವೂ ಇತ್ತು. ಅದು, ಯಾರ ಅರಿವಿಗೂ ಬಾರದಂತೆ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ಇನ್ನೊಬ್ಬ ವ್ಯಕ್ತಿ ಶತಾಯ ಗತಾಯ ಪ್ರಯತ್ನಿಸುತ್ತಿದ್ದ. ಆತನೂ ಮನವಿ ಪತ್ರವೊಂದನ್ನು ತಯಾರಿಸಿ ಪ್ರಭಾವಶಾಲಿಯಾದವರ ಸಹಿ ಹಾಕಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ. ಆತ ತೋ.ನಂಜುಂಡಸ್ವಾಮಿ. ತೋನಂ ಎಂದೇ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕರೆಯಲ್ಪಡುವ ಮನುಷ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿರುವುದು. ನಾಲ್ಕು ನಾಟಕಗಳನ್ನು ಬರೆದು ತಾನೂ ಪ್ರಸಿದ್ದ ನಾಟಕಕಾರನಾದೆ ಎಂದು ಭ್ರಮೆ ಬೆಳೆಸಿಕೊಂಡವರು. ರಂಗಚೇತನ ಮತ್ತು ಪಂಚಮ ಎಂಬ ಎರಡು ರಂಗಸಂಘಟನೆಗಳನ್ನು ಆರಂಭಿಸಿ ಅದಕ್ಕೆ ಡಿ.ಕೆ.ಚೌಟರಂತಹ ಪ್ರಸಿದ್ದರಾದವರನ್ನು ಪದಾಧಿಕಾರಿಯಾಗಿ ಮಾಡಿಕೊಂಡು
ತೋನಂ
ತಾನೇ ಸ್ವಘೋಷಿತ ಧರ್ಮದರ್ಶಿಯಾದ. ಸರಕಾರಿ ಇಲಾಖೆಗಳಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡು ವರ್ಷಕ್ಕೆ ಎರಡು ಕಾರ್ಯಕ್ರಮಗಳನ್ನು ತಪ್ಪದೇ ಸಂಘಟಿಸುವ ಮೂಲಕ ರಂಗಭೂಮಿಯ ಹೆಸರಲ್ಲಿ ಹಣ ಮಾಡುವ ದಂದೆಯನ್ನು ತೋನಂ ವೃತ್ತಿಯಾಗಿಸಿಕೊಂಡ. ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ನಾಟಕೋತ್ಸವಗಳನ್ನು ಸಂಘಟಿಸುವ ಮೂಲಕವೂ ತನ್ನ ವಹಿವಾಟನ್ನು ಹೆಚ್ಚಿಸಿಕೊಂಡ. ದೇವೆಗೌಡರ ಅಳಿಯ ಡಾ.ಜಯದೇವರವರ ಕುರಿತು ಅಭಿನಂದನಾ ಗ್ರಂಥವನ್ನು ಹೊರತಂದು ಅವರ ವಿಶ್ವಾಸವನ್ನು ಗಳಿಸಿ ಮೂಲಕ ದೇವೇಗೌಡರ ಕುಟುಂಬಕ್ಕೆ ಹತ್ತಿರವಾದ. ತೋನಂ ರವರ ಜಿಗುಟುತನ, ಹಣದ ಬಗ್ಗೆ ಇರುವ ಹಪಾಹಪಿ ಹಾಗೂ ಶ್ರೇಷ್ಟತೆಯ ವ್ಯಸನವನ್ನು  ಒಪ್ಪದ ಬಹುತೇಕ ರಂಗಕರ್ಮಿಗಳಗೆ ತೋನಂ ಕಂಡರೆ ಅಷ್ಟಕ್ಕಷ್ಟೇ.  ಇಂತಹ ಹಿನ್ನೆಲೆಯುಳ್ಳ ತೋನಂ ನಾಟಕ ಅಕಾಡೆಮಿಯ ಅಧ್ಯಕ್ಷಗಿರಿಗೆ ಭಾರಿ ಪ್ರಮಾಣದಲ್ಲಿ ಲಾಭಿ ಮಾಡುತ್ತಿರುವುದು ಗೊತ್ತಾಗಿದ್ದೇ ತಡ ಕಪ್ಪಣ್ಣನವರ ತಂತ್ರಗಾರಿಕೆಗೆ ಇನ್ನೂ ಬಲಬಂದಿತು.  ಜೆ.ಲೊಕೇಶ್ರಿಗೆ ಸಪೋರ್ಟ ಮಾಡದಿದ್ದಲ್ಲಿ ತೋ.ನಂಜುಂಡಸ್ವಾಮಿ ಅಕಾಡೆಮಿಗೆ ಅಧ್ಯಕ್ಷರಾಗಿ ಒಕ್ಕರಿಸುತ್ತಾರೆ ಎಂದು ಕಪ್ಪಣ್ಣ ಹೇಳಿದ್ದೆ ತಡ ನಾಗರಾಜಮೂರ್ತಿಯಂತವರು ಓಡಿ ಬಂದು ತರಾತುರಿಯಲ್ಲಿ ಲೋಕೇಶರವರನ್ನು ಬೆಂಬಲಿಸಿ ಸಹಿ ಮಾಡಿದ್ದು.
      ಸಹಿ ಸಂಗ್ರಹದ ಭಾಗವಾಗಿ ತೋನಂ ಹಲವಾರು ರಂಗಕರ್ಮಿಗಳ ಮನೆ ಬಾಗಿಲನ್ನು ಬಡಿಯತೊಡಗಿದ. ಅದೊಂದು ದಿನ ಹಿರಿಯ ರಂಗಕರ್ಮಿ ಡಿ.ಕೆ.ಚೆನ್ನಕೇಶವಮೂರ್ತಿಯವರ ಮನೆ ಬಾಗಿಲಿಗೆ ಹೋಗಿ ಸಹಿ ಮಾಡಲು ಕೋರಿಕೊಂಡ. ಮನವಿ ಪತ್ರಕ್ಕೆ ಈಗಾಗಲೇ ಸಹಿ ಹಾಕಿದವರ ಹೆಸರನ್ನು ನೋಡಿ ಚೆನ್ನಕೇಶವಮೂರ್ತಿಯವರಿಗೆ ಅಚ್ಚರಿಯಾಯಿತು. ಮನವಿ ಪತ್ರಕ್ಕೆ ಮೊಟ್ಟಮೊದಲು ಸಹಿ ಹಾಕಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ನಂತರದ್ದು ಅವರ ಅಣ್ಣ ರೇವಣ್ಣ. ಡಾ.ಜಯದೇವ್, ಡಿ.ಕೆ.ಚೌಟ್.... ವಿರೋಧ ಪಕ್ಷ ಮತ್ತು ಆಳುವ ಪಕ್ಷದ ನಾಯಕರು.. ವಿಧಾನ ಪರಿಷತ್ತಿನ ಸದಸ್ಯರು.....ಹೀಗೆ ಅನೇಕ ರಾಜಕೀಯ ದಿಗ್ಗಜರು ಹಾಗೂ ಉದ್ಯಮಿಗಳು ತೋನಂ ಪರವಾಗಿ ಸಹಿ ಹಾಕಿದ್ದನ್ನು ನೋಡಿದ ಚೆನ್ನಕೇಶವಮೂರ್ತಿಯವರು ಸಹಿ ಹಾಕಲು ನೇರವಾಗಿ ನಿರಾಕರಿಸಿದರು. ಯಾರೂ ತನಗೆ ಪ್ರಶಸ್ತಿ ಕೊಡಿ, ಅಧ್ಯಕ್ಷಗಿರಿ ಕೊಡಿ ಎಂದು ರೀತಿ ಲಾಭಿ ಮಾಡುವುದು ಶೋಭಿಸುವುದಿಲ್ಲ, ಅವರವರ ಕೆಲಸವನ್ನು ನೋಡಿ ಸರಕಾರವೇ ಕರೆದು ಕೊಟ್ಟರೆ ಮಾತ್ರ ಸ್ಥಾನಕ್ಕೆ ಗೌರವ.... ಕ್ಷಮಿಸಿ  ನನಗೆ ನಿಮ್ಮನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಚೆನ್ನಕೇಶವಮೂರ್ತಿ ನೇರವಾಗಿಯೇ ಮುಖಕ್ಕೆ ಮಂಗಳಾರತಿ ಮಾಡಿ ಕಳುಹಿಸಿದ್ದಾರೆ. ಬಹುತೇಕ ಕಡೆ ಇದೇ ರೀತಿಯ ವ್ಯತಿರಿಕ್ತ ಪ್ರತಿಕ್ರಿಯೆಗಳಿಂದ ನಿರಾಶೆಗೊಂಡ ತೋನಂ ಯಾರೂ ಸಹಿ ಮಾಡದಿದ್ದರೂ ಪರವಾಗಿಲ್ಲ, ನಾನು ಅಕಾಡೆಮಿಯ ಅಧ್ಯಕ್ಷನಾಗದಿದ್ದರೂ ಪರವಾಗಿಲ್ಲ ಕೇಂದ್ರ ಸಂಗೀತ ನಾಟಕ ಅಕಾಡೆಮಿಗೆ ಸದಸ್ಯನಾಗುತ್ತೇನೆ...ದೇವೇಗೌಡರೇ ಸಪೋರ್ಟ ಮಾಡುತ್ತೇನೆಂದು ಮಾತುಕೊಟ್ಟಿದ್ದಾರೆ ಎಂದು ತನ್ನ ವ್ಯರ್ಥ ಪ್ರಲಾಪವನ್ನು ತೋಡಿಕೊಂಡು ತನ್ನ ರಾಜಕೀಯ ಪ್ರಭಾವವನ್ನು ಚೆನ್ನಕೇಶವಮೂರ್ತಿಯವರಿಗೆ ಮನವರಿಕೆ ಮಾಡಿಕೊಡಲು ನೋಡಿದ್ದಾರೆ. ಅಕಸ್ಮಾತ್ ಜನತಾದಳ ಏನಾದರೂ ಸರಕಾರ ರಚನೆ ಮಾಡಿದ್ದರೆ ಬಹುಶಃ ಯಾರಿಂದಲೂ ತೋ.ನಂಜುಂಡಸ್ವಾಮಿಯನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾಗದಂತೆ ತಡೆಯಲು ಸಾಧ್ಯವೇ ಇರಲಿಲ್ಲ.  ಆದರೆ ಈಗಲೂ ಸಹ ತಮ್ಮ ಸಹಿ ಕಾರ್ಯಾಚರಣೆ ಮುಂದುವರೆಸಿರುವ ತೋನಂ ಹೇಗೋ ರಾಜಕೀಯ ಲಾಬಿ ಮಾಡಿ, ಅಹಿಂದ್ ಜಾತೀಯತೆ ಟ್ರಂಪ ಕಾರ್ಡ ಬಳಸಿ ಅಕಾಡೆಮಿಗೆ ಒಕ್ಕರಿಸುವ ಸಾಧ್ಯತೆಗಳನ್ನೂ ನಿರಾಕರಿಸಲಾಗದು. ಆದರೆ ಉಮಾಶ್ರೀ ಗಟ್ಟಿ ನಿರ್ಧಾರದಿಂದಾಗಿ ಸಾಧ್ಯತೆ ಸದ್ಯಕ್ಕೆ ಅಸಾಧ್ಯ. 
 
    ಯಾರಾದರೂ ರಂಗಕರ್ಮಿಗಳು ಏನಾದರೂ ಸಾಧನೆ ಮಾಡಿದರೆ ಅಂತವರನ್ನು ಅಭಿನಂದಿಸುವಂತಹ ಕಾರ್ಯಕ್ರಮವನ್ನು ಭಾಗವತರು ತಂಡದ ರೇವಣ್ಣ ಹತ್ತಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.  ಅದೇ ರೀತಿ ಉಮಾಶ್ರೀಯವರು ಮಂತ್ರಿಯಾದಾಗ ಅಭಿನಂದನಾ ಸಮಾರಂಭ ಏರ್ಪಡಿಸುತ್ತೇವೆ ಎಂದು ರೇವಣ್ಣ ಕೇಳಿದಾಗ ಈಗ ತುಂಬಾ ಬ್ಯೂಸಿ ಇದ್ದೇನೆ, ಆಮೇಲೆ ನೋಡೋಣ ಎಂದು ಹಾರಿಕೆಯ ಉತ್ತರ ಕೊಟ್ಟ ಇದೇ ಮಂತ್ರಿಣಿ ಉಮಾಶ್ರೀ ನಂತರ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಗೆಲ್ಲಾ ಹಾಜರಾಗಿದ್ದಕ್ಕೆ ಪತ್ರಿಕೆಗಳೇ ಸಾಕ್ಷಿಗಳಾಗಿವೆ.    ಭಾಗವತರು ತಂಡದ ರೇವಣ್ಣನವರ ಆಹ್ವಾನವನ್ನು ಯಾಕೆ ಉಮಾಶ್ರೀ ನಿರಾಕರಿಸಿದರು?.  ಯಾಕೆಂದರೆ ಅವರಿಗೆ ತಮ್ಮ ಸಾಧನೆಯನ್ನು ಅದ್ದೂರಿಯಾಗಿ ಆಚರಿಸಬೇಕಾಗಿತ್ತು.  ಸ್ವತಃ ಮುಖ್ಯ ಮಂತ್ರಿಗಳೇ ಬಂದು ತಮ್ಮನ್ನು ಅಭಿನಂದಿಸಬೇಕು ಎನ್ನುವ ಆಸೆಯಾಗಿತ್ತು. ಅದಕ್ಕೆ ಭಾಗವತರು ಎನ್ನುವ ರಂಗತಂಡ ಚಿಕ್ಕದಾಗಿ ಕಾಣಿಸಿತು. ಹಾಗೂ ಅಭಿನಂದನಾ ಸಮಾರಂಭ ನಡೆಸುವ ಅವಕಾಶವನ್ನು ರಂಗಸಂಪದ ತಂಡಕ್ಕೆ ಕೊಡಲು ಉಮಾಶ್ರೀ ಯೋಜನೆ ರೂಪಿಸಿದರು. ಯಾಕೆಂದರೆ ರಂಗತಂಡದಿಂದಲೇ ತಮ್ಮ ಅಭಿನಯ ಆರಂಭಿಸಿದ ಉಮಾಶ್ರಿಯವರಿಗೆ ರಂಗಸಂಪದದ ಜೊತೆಗೆ ಅದೇನೋ ಹೊಕ್ಕಳಬಳ್ಳಿಯ ಸಂಬಂಧ ಇತ್ತು.
ನಂತರ ಉಮಾಶ್ರೀಯವರ ಅಭಿನಂದನಾ ಸಮಾರಂಭವು ನಡೆಯಿತು. ಉಮಾಶ್ರೀಯವರ ಬಯಕೆಯಂತೆ ಸ್ವತಃ ಸಿದ್ದರಾಮಯ್ಯನವರೇ ಬಂದು ರವೀಂದ್ರ ಕಲಾಕ್ಷೇತ್ರದ ರಂಗವೇದಿಕೆಯ ಮೇಲೆ ಅವರನ್ನು ಅಭಿನಂದಿಸಿದರು. ಸಮಾರಂಭವನ್ನು ಸಂಘಟಿಸಲು ಜೆ.ಲೋಕೇಶ ಮತ್ತು ರಂಗಸಂಪದದ ಚಡ್ಡಿ ನಾಗೇಶ, ಚಂದ್ರಕಾಂತ... ತುಂಬಾ ಶ್ರಮವಹಿಸಿದರು. ತನ್ನಲ್ಲಿನ್ನೂ ರಂಗಸಂಘಟನೆ ಮಾಡುವ ತಾಕತ್ತಿದೆ ಎಂದು ತೋರಿಸಲೇ ಬೇಕಾದ ಅಗತ್ಯತೆ ಜೆ.ಲೊಕೇಶರವರದಾಗಿತ್ತು. ಯಾಕೆಂದರೆ ಹೇಗಾದರೂ ಮಾಡಿ ನಾಟಕ ಅಕಾಡೆಮಿಯ ಅಧ್ಯಕ್ಷರಾಗಲೇ ಬೇಕಿತ್ತು. ಸಮಾರಂಭವನ್ನು ಶತಾಯ ಗತಾಯ ಯಶಸ್ವಿಗೊಳಿಸಲೇ ಬೇಕಾಗಿತ್ತು. ಅದರಂತೆ ರಂಗಮಂದಿರ ಜನರಿಂದ ತುಂಬಿತುಳುಕುತ್ತಿತ್ತು. ಆದರೆ.. ವೇದಿಕೆ ಕಾರ್ಯಕ್ರಮ ಮಾತ್ರ ಅದ್ವಾನವಾಗಿತ್ತು. ಯಾವುದೇ ಶಿಸ್ತಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮವೊಂದು ರಾಜಕೀಯ ಕಾರ್ಯಕ್ರಮ ಎನ್ನುವಂತೆ ನಡೆಸಲಾಯಿತು. ಉಮಾಶ್ರೀಗೆ ಒಂದಿಷ್ಟು ಮುಜುಗರವಾದರೂ ಸಹಿಸಿಕೊಂಡರು.
          ಕಾರ್ಯಕ್ರಮದ ನಂತರ ರಾತ್ರಿ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ರಂಗಸಂಪದದ ಪದಾದಿಕಾರಿಗಳು ಜೆ.ಲೋಕೇಶರವರ ನಾಯಕತ್ವದಲ್ಲಿ ಗುಂಡುಪಾರ್ಟಿ ನಡೆಸಿತು. ಕಲಾಕ್ಷೇತ್ರದ ಕೆಲಸಗಾರರಿಗೆ, ಸೆಕ್ಯೂರಿಟಿ ಗಾರ್ಡಗಳಿಗೆ ಪ್ರತಿಯೊಬ್ಬರಿಗೆ ಐನೂರು ಸಾವಿರ ರೂಪಾಯಿಗಳನ್ನು ಟಿಪ್ಸ್ ರೂಪದಲ್ಲಿ ಕೊಡಲಾಯಿತು. ಮುಂದೆ ನಾಟಕ ಅಕಾಡೆಮಿ ಅಧ್ಯಕ್ಷರಾಗಬೇಕಾದ ಒಬ್ಬ ಜಬಾಬ್ದಾರಿಯುತ ರಂಗಕರ್ಮಿ ಹೀಗೆ ಕಲೆಯ ಆಲಯವಾದ ಕಲಾಕ್ಷೇತ್ರದಲ್ಲಿ ಕುಡಿತದ ಪಾರ್ಟಿ ಮಾಡುತ್ತಾರೆಂದರೆ ಇದಕ್ಕಿಂತ ಅವಮಾನಕರವಾದದ್ದು ಬೇರೆನಿದೆ? ಕೇವಲ ತಮಗೆ ನಾಟಕದಲ್ಲಿ ಮೊಟ್ಟಮೊದಲು ಚಾನ್ಸ ಕೊಟ್ಟರು ಎನ್ನುವ ಒಂದು ಕರ್ಟಸಿಗಾಗಿ ರಂಗಭೂಮಿಯಿಂದಲೇ ಎರಡು ದಶಕದಿಂದ ನಿರ್ಲಿಪ್ತರಾದವರನ್ನು ತಂದು ಅಕಾಡೆಮಿಯ ಅಧ್ಯಕ್ಷರನ್ನಾಗಿಸಲು ಉಮಾಶ್ರೀ ನಿರ್ಧರಿಸುತ್ತಾರೆಂದರೆ ಇದಕ್ಕಿಂತ ಅವಿವೇಕದ ನಿರ್ಧಾರ ಯಾವುದಿದೆ?. ತನ್ನ ಹಿತಾಸಕ್ತಿಗಾಗಿ ಕಪ್ಪಣ್ಣನಂತಹ ರಂಗೋಪಜೀವಿಯೊಬ್ವರು ನೇಪತ್ಯದಲ್ಲಿ ನಿಂತು ರಂಗರಾಜಕೀಯದ ದಾಳ ಉರುಳಿಸಿ ತಮ್ಮ ಇಚ್ಚೆಯಂತೆ ಅಕಾಡೆಮಿಯ ಅಧ್ಯಕ್ಷರನ್ನು ಆಯ್ಕೆ ಮಾಡಿಸುತ್ತಾರೆಂದರೆ  ರಂಗಭೂಮಿಯನ್ನು ಕಾಪಾಡುವವರಾದರೂ ಯಾರು? ಸಾಂಸ್ಕೃತಿಕ ದಲ್ಲಾಳಿಯಾದ ತೋ ನಂಜುಂಡಸ್ವಾಮಿಯಂತವರು ಅಕಾಡೆಮಿಯ ಅಧ್ಯಕ್ಷಗಿರಿಗಾಗಿ ರಾಜಕೀಯ ಪಕ್ಷಗಳನ್ನು  ಬಳಸಿಕೊಂಡು ಪ್ರಭಾವ ಬೀರುತ್ತಾರೆಂದರೆ ರಂಗಭೂಮಿ ಯಾವ ಸ್ಥಿತಿಗೆ ಬಂದು ನಿಂತಿದೆ?. ಯಾವುದೇ ರಾಜಕೀಯ ಲಾಬಿ ಮಾಡದೇ, ರಂಗರಾಜಕೀಯದ ಒಳಸುಳಿಗಳ ಅರಿವಿಲ್ಲದೇ ತಮ್ಮ ಪಾಡಿಗೆ ತಾವು ನಾಟಕಗಳನ್ನು ನಿರ್ಮಿಸುತ್ತಾ, ರಂಗಕ್ರಿಯೆಗಳನ್ನು ಮಾಡುತ್ತಾ ರಂಗಭೂಮಿಯ ಬೆಳವಣಿಗೆಗೆ ಕಾರಣೀಕರ್ತರಾದ ಅರ್ಹರಿಗೆ ಅಕಾಡೆಮಿ ಅಧ್ಯಕ್ಷಗಿರಿ ಹಾಗೂ ಸದಸ್ಯತ್ವ ಸಿಗಬೇಕಾದದ್ದು ನ್ಯಾಯಯುತವಾದದ್ದು. ಆದರೆ ಹಾಗಾಗುತ್ತಿಲ್ಲ ಎನ್ನುವುದೇ ವಿಷಾದನೀಯ

  ಇಷ್ಟೆಲ್ಲಾ ಆದರೂ, ಸ್ವತಃ ಸಂಸ್ಕೃತಿ ಇಲಾಖೆಯ ಮಂತ್ರಿಣಿಯೇ ಆಸಕ್ತಿ ವಹಿಸಿದರೂ, ಇನ್ನೂ ಯಾಕೆ ಅಕಾಡೆಮಿ ಅಧ್ಯಕ್ಷರ ನೇಮಕವಾಗುತ್ತಿಲ್ಲ. ಅದರಲ್ಲೂ ರಾಜಕೀಯದ ಹಿತಾಸಕ್ತಿ ಇದೆ. ಎಲ್ಲಿವರೆಗೂ ನಿಗಮ ಮಂಡಳಿಗಳ  ಅಧ್ಯಕ್ಷರುಗಳ ಆಯ್ಕೆ ಆಗುವುದಿಲ್ಲವೋ ಅಲ್ಲಿವರೆಗೂ ಅಕಾಡೆಮಿಗಳ ಅಧ್ಯಕ್ಷರುಗಳ ಆಯ್ಕೆಯನ್ನೂ ಸರಕಾರ ಮಾಡುವುದಿಲ್ಲ. ಅದು ಸಿದ್ದರಾಮಯ್ಯನವರ ಸಂಕಟ. ಅವರಿಗೆ ಎಲ್ಲೂ ಭಿನ್ನಾಭಿಪ್ರಾಯಗಳು ಬರಬಾರದು. ತಮ್ಮದೇ ಪಕ್ಷದವರು ದಂಗೆ ಏಳಬಾರದು, ಕಾರ್ಯಕರ್ತರನ್ನು ಸಮಾಧಾನ ಮಾಡಲು ಅಧಿಕಾರದ ಬೆಣ್ಣಿಯನ್ನು ಅವರ ಮೂಗಿಗೆ ಸವರುತ್ತಾ ಇರಬೇಕು. ರೀತಿಯ ಹಲವಾರು ರಾಜಕೀಯ ಕಾರಣಗಳಿಗೋಸ್ಕರವಾಗಿ ನಿಗಮ ಮಂಡಳಿಗಳ ಅಧ್ಯಕ್ಷರುಗಳ ಆಯ್ಕೆಯನ್ನು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಕಾಡೆಮಿಗಳಿಗೆ ತಳುಕು ಹಾಕಿಕೊಂಡ ಮುಖ್ಯ ಮಂತ್ರಿಗಳು ಸಾಧ್ಯವಾದಷ್ಟೂ ಕಾಲಹರಣ ಮಾಡುತ್ತಿದ್ದಾರೆ. ಪಾರ್ಲಿಮೆಂಟ್ ಎಲೆಕ್ಷನ್ ಆಗುವವರೆಗೂ ಆಯ್ಕೆಗಳನ್ನು ಮುಂದೂಡಿದರೂ ಅಚ್ಚರಿ ಪಡಬೇಕಿಲ್ಲ.
          ಆದರೆ ಜೆ.ಲೋಕೇಶರವರನ್ನು ಅಕಾಡೆಮಿ ಅಧ್ಯಕ್ಷರನ್ನಾಗಿಸುವಲ್ಲಿ ತಮ್ಮ ಸ್ಥಾನ ಮಾನದ ಗೌರವವನ್ನೇ ಪಣಕ್ಕಿಟ್ಟ ಉಮಾಶ್ರೀಯವರಿಗೆ ಗೊತ್ತಿರದ ಒಂದು ಸತ್ಯ ಸಂಗತಿಯನ್ನು ರಂಗಕರ್ಮಿ ಡಿ.ಟಿ.ಚೆನ್ನಕೇಶವಮೂರ್ತಿಯವರು ಈಗಲೂ ಹೀಗೆ  ಜ್ಞಾಪಿಸಿಕೊಳ್ಳುತ್ತಾರೆ. ನಾನು ಆಗ ರಂಗಸಂಪದಕ್ಕೆ ನಿರ್ದೇಶಿಸಿದ ಸಾಕ್ಷಿಕಲ್ಲು ನಾಟಕದಲ್ಲಿ ಉಮಾಶ್ರಿಗೆ ಮೊಟ್ಟ ಮೊದಲು ನಟಿಸಲು ಅವಕಾಶಮಾಡಿಕೊಟ್ಟೆ. ಉಮಾಶ್ರೀಯನ್ನು ನನಗೆ ಮೊದಲು ಪರಿಚಯಿಸಿದ್ದು ಮೈಕೋ ಚಂದ್ರು. ಸಾಕ್ಷಿಕಲು ನಾಟಕ ಯಶಸ್ವಿಯಾಯಿತು. ಅದರ ನಂತರ ನಾಗಾಭರಣ ಸಂಗ್ಯಾಬಾಳ್ಯಾ ನಾಟಕ ನಿರ್ದೇಶಿಸಿದರು. ಅದರಲ್ಲಿ ಉಮಾಶ್ರೀಗೆ ಪ್ರಮುಖ ಪಾತ್ರ ಕೊಡಲು ಕೇಳಿಕೊಂಡೆ. ಆದರೆ ಅದನ್ನು ವಿರೋಧಿಸಿದ್ದು ಇದೇ ಜೆ.ಲೋಕೇಶ. ಹೋಗಲಿ ನಾಟಕದಲ್ಲಿ ಬರುವ ಪರಮ್ಮ ಎನ್ನುವ ಮುದುಕಿಯ ಪಾತ್ರವನ್ನಾದರೂ ಕೊಡಿ ತುಂಬಾ ಕಷ್ಟದಲ್ಲಿದ್ದಾಳೆ ಎಂದು ಕೇಳಿಕೊಂಡೆ. ಅದಕ್ಕೂ  ಲೋಕೇಶ ಒಪ್ಪಲಿಲ್ಲ. ಕೊನೆಗೆ ಸಂಗೀತದ  ಮೇಳದಲ್ಲಾದರೂ ಹಾಡಲು ಅವಕಾಶ ಕೊಡಿ ಎಂದು ಗೋಗರಿದರೂ ಲೋಕೇಶ ಬಿಲ್ಕುಲ್ ಒಪ್ಪಲಿಲ್ಲ. ಅಂತಹ ಪ್ರತಿಭಾನ್ವಿತ ನಟಿಗೆ ಆಗ ಅನ್ಯಾಯವಾಗಿದ್ದಕ್ಕೆ ನನಗಿನ್ನೂ ಬೇಸರವಿದೆ.  ನಂತರ ಆರ್.ನಾಗೇಶ ಹರಕೆಯ ಕುರಿ ನಾಟಕ ನಿರ್ದೇಶಿಸಿದಾಗ ಯಾರ ಮಾತನ್ನೂ ಕೇಳದೆ ಉಮಾಶ್ರಿಗೆ ಪ್ರಮುಖ ಪಾತ್ರ ಕೊಟ್ಟರು. ಮುಂದೆ ಸಿಜಿಕೆ ಒಡಲಾಳದಲ್ಲಿ ಅಜ್ಜಿಯ ಪಾತ್ರ ಕೊಟ್ಟು ಉಮಾಶ್ರಿಯೊಳಗಿದ್ದ ಅಭಿನಯ ಪ್ರತಿಭೆಯನ್ನು ಎಲ್ಲರಿಗೂ ಪರಿಚಯಿಸಿದರು. ಯಾವ ಉಮಾಶ್ರೀ ರಂಗಸಂಪದದಲ್ಲಿ ಅಭಿನಯಸುವುದನ್ನು ಜೆ.ಲೋಕೇಶ ವಿರೋಧಿಸಿದ್ದರೋ ಇಂದು ಅವನೇ ಉಮಾಶ್ರೀಯ ಹಿಂದೆ ಬಿದ್ದು ಅಕಾಡೆಮಿಗಿರಿಗೆ ಒತ್ತಾಯಿಸುತ್ತಿದ್ದಾನೆ. ಇದೇ ಉಮಾಶ್ರೀ ಲೋಕೇಶನನ್ನು ಶತಾಯ ಗತಾಯ ಅಕಾಡೆಮಿ ಅಧ್ಯಕ್ಷನನ್ನಾಗಿಸಲು ಹೊರಟಿದ್ದಾರೆ. ವಿಪರ್ಯಾಸ ಅಂದರೆ ಇದೇ ಅಲ್ಲವೆ?  ತಮ್ಮ ಅನುಭವವನ್ನು  ಹೇಳಿ ಚೆನ್ನಕೇಶವಮೂರ್ತಿಯವರು ನಿಟ್ಟುಸಿರು ಬಿಡುತ್ತಾರೆ. ಹಾಗೆ ನೋಡಿದರೆ ಉಮಾಶ್ರೀಯವರು ಮೊದಲ ಬಾರಿಗೆ ನಾಟಕದಲ್ಲಿ ಅವಕಾಶ ಕೊಟ್ಟ ಚೆನ್ನಕೇಶವಮೂರ್ತಿಯವರನ್ನು ಅಕಾಡೆಮಿಗೆ ಆಯ್ಕೆಮಾಡಿ ತಮ್ಮ ಋಣ ಸಂದಾಯ ಮಾಡಬೇಕಾಗಿತ್ತು. ಆದರೆ ಅಗಿದ್ದೇ ಬೇರೆ.   

         ಅಸಲಿ ವಿಷಯ ಹೀಗಿದ್ದರೂ  ಗೌರವಾನ್ವಿತ ಸ್ಥಾನದಲ್ಲಿರುವ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಉಮಾಶ್ರೀ ಮಾತ್ರ ಒಂದೇ ಹಟ ಹಿಡಿದು ಕುಳಿತು ಬಿಟ್ಟಿದ್ದಾರೆ. ಯಾವಾಗಾದರೂ ಅಕಾಡೆಮಿಯ ಅಧ್ಯಕ್ಷರ ನೇಮಕವಾಗಲಿ, ಬೇರೆಲ್ಲಾ ಅಕಾಡೆಮಿಗೆ ಯಾರನ್ನು ಬೇಕಾದರೂ ಅಧ್ಯಕ್ಷರನ್ನಾಗಿ ನಿಯಮಿಸಲಿ ಆದರೆ ನಾಟಕ ಅಕಾಡೆಮಿಗೆ ಮಾತ್ರ ರಂಗಸಂಪದದ ಜೆ.ಲೋಕೇಶರವರನ್ನೇ ಆಯ್ಕೆ ಮಾಡಬೇಕು ಎಂದು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ, ಆಯುಕ್ತರಿಗೆ ಉಮಾಶ್ರೀ ಮೌಖಿಕವಾಗಿ ಆದೇಶಿಸಿದ್ದಾರೆ. ಮುಖ್ಯ ಮಂತ್ರಿಗಳಿಗೂ ಮನವಿ ಮಾಡಿಕೊಂಡಿರುವ ಉಮಾಶ್ರೀರವರಿಗೆ ಋಣ ಸಂದಾಯ ಮಾಡುವ ತವಕ. ಆದರೆ ಇವರ ಋಣ ಸಂದಾಯವೋ, ಇವರ ರಂಗಬೆಳವಣಿಗೆಗೆ ಕಾರಣರಾದವರಿಗೆ ಕೊಡುವ ಕಂದಾಯವೋ ಗೊತ್ತಿಲ್ಲಾ, ಆದರೆ ಸಾಂಸ್ಕೃತಿಕ ಕ್ಷೇತ್ರವೆನ್ನುವುದು ಯಾರೊಬ್ಬರ ಸ್ವಾರ್ಥಕ್ಕೆ, ಋಣ ಸಂದಾಯಕ್ಕೆ ಬಳಕೆ ಆಗಬಾರದು. ಸಾರ್ವಜನಿಕರಿಂದ ಸಿಕ್ಕ ಅಧಿಕಾರ ವ್ಯಕ್ತಿಗತ ಹಿತಾಸಕ್ತಿಗೆ ಎಂದೂ ಬಳಕೆಯಾಗಬಾರದು. ಉಮಾಶ್ರೀಯವರ ಅಭಿನಯಕ್ಕೆ ಕೇವಲ ಹವ್ಯಾಸಿ ರಂಗಭೂಮಿ ಮಾತ್ರವಲ್ಲ ವೃತ್ತಿರಂಗಭೂಮಿಯೂ ಅವಕಾಶ ಕೊಟ್ಟಿದೆ. ರಂಗಭೂಮಿಯನ್ನು ಕಟ್ಟಲು ಕೇವಲ ರಂಗಸಂಪದ ಮಾತ್ರವಲ್ಲ ಸಕಲೆಂಟು ರಂಗತಂಡಗಳು ಕೊಡುಗೆ ಕೊಟ್ಟಿವೆ. ಪ್ರಸ್ತುತ ರಂಗಸಂಪದ ರಂಗಭೂಮಿಯಲ್ಲಿ ಸಕ್ರೀಯವಾಗಿಲ್ಲ, ಜೆ.ಲೋಕೇಶರವರು ಎರಡು ದಶಕದಿಂದ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿಯೂ ಇಲ್ಲ. ಇದು ವಾಸ್ತವ. ಇಂತಹ ಸಂದರ್ಭದಲ್ಲಿ ಸಕ್ರೀಯರಲ್ಲದವರನ್ನು ತಮ್ಮ ಸ್ವಾರ್ಥಕ್ಕಾಗಿ ಅಕಾಡೆಮಿ ಅಧ್ಯಕ್ಷರನ್ನಾಗಿಸುವುದು ಸೂಕ್ತವೂ ಅಲ್ಲ. ಹೆಚ್ಚು ಕಡಿಮೆ ರಾಜಕಾರಣಿಯೇ ಆಗಿರುವ ಮಾಜಿ ರಂಗನಟಿ ಉಮಾಶ್ರೀರವರಿಗೆ ಸಾಂಸ್ಕೃತಿಕ ಸೂಕ್ಷ್ಮಗಳು ಅರ್ಥವೂ ಆಗುವುದಿಲ್ಲ. ರಂಗಭೂಮಿಯಿಂದ ಬೆಳೆದ ಪ್ರತಿಭಾನ್ವಿತ ನಟಿಗೆ ಸಾರ್ವಜನಿಕ ಅಧಿಕಾರ ಬಂದಾಗ ಹೀಗೆ ಒಂದು ತಂಡದ ಹಿತಾಸಕ್ತಿಗಾಗಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಸಾಂಸ್ಕೃತಿಕ ರಂಗದಲ್ಲಿ   ರಾಜಕೀಯ ಪ್ರವೇಶದಿಂದಾಗಿ ರಂಗಭೂಮಿಗೆ ನಾಟಕ ಅಕಾಡೆಮಿಯ ಕೊಡುಗೆಯೇ ಪ್ರಶ್ನಾರ್ಹವಾಗಿದೆ. 



    ತೋ.ನಂಜುಂಡಸ್ವಾಮಿಯವರ ಲಾಬಿ ಹಾಗೂ ಉಮಾಶ್ರೀಯವರ ಋಣ ಸಂದಾಯವನ್ನು ಹೊರತು ಪಡಿಸಿ  ಎಲ್.ಕೃಷ್ಣಪ್ಪರವರು ಅಕಾಡೆಮಿ ಅಧ್ಯಕ್ಷರಾಗುವ ಸಾಧ್ಯತೆ ಇನ್ನೂ ಜೀವಂತ  ಇದೆ. ಅವರೂ ಸುಮ್ಮನೆ ಕುಳಿತಿಲ್ಲ. ತಮ್ಮೆಲ್ಲಾ ಅನುಭವ ಮತ್ತು ಸಂಪರ್ಕಗಳ ಮೂಲಕ ಶತಾಯ ಗತಾಯ ಪ್ರಯತ್ನಿಸುತ್ತಲೇ ಇದ್ದಾರೆ. ಅಹಿಂದ ಕೋಟಾದಲ್ಲಿ  ಅವರ  ಆಯ್ಕೆಯೂ  ಆಗಬಹುದಾಗಿದೆ. ಜೆ.ಲೋಕೆಶರವರನ್ನು ಹೋಲಿಸಿದರೆ ಎಲ್.ಕೃಷ್ಣಪ್ಪ   ಉತ್ತಮ  ಆಯ್ಕೆ. ಯಾಕೆಂದರೆ ಅವರು ಇನ್ನೂ ಕನ್ನಡ ರಂಗಭೂಮಿಯಲ್ಲಿ  ಕ್ರಿಯಾಶೀಲರಾಗಿದ್ದಾರೆ. ತಮ್ಮ   'ಈ ಮಾಸ ನಾಟಕ' ರಂಗಪತ್ರಿಕೆಯ ಮೂಲಕ ನಾಡಿನಾಧ್ಯಂತ ರಂಗಕರ್ಮಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಜೆ.ಲೋಕೇಶರವರನ್ನು ವಿರೋಧಿಸುವವರೆಲ್ಲಾ ಎಲ್. ಕೃಷ್ಣಪ್ಪನವರ ಪರವಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಐದು ದಶಕದ  ಸಮೃದ್ಧವಾದ ರಂಗಾನುಭವವೂ ಇದೆ. ಈಗಿರುವ ಪೈಪೋಟಿ ಗಮನಿಸಿದರೆ ನನ್ನ  ವ್ಯಯಕ್ತಿಕ  ಅನಿಸಿಕೆಯ ಪ್ರಕಾರ  ಎಲ್. ಕೃಷ್ಣಪ್ಪ ಸೂಕ್ತ ಆಯ್ಕೆಯಾಗಿದೆ. ಅವರೆ ನಾಟಕ   ಅಕಾಡೆಮಿಯ  ಅಧ್ಯಕ್ಷರಾಗುತ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಯಾಕೆ ಎಂದು ಗೊತ್ತಿಲ್ಲ. ಆದರೆ ಕ್ಷೀಣವಾದ ಸಾಧ್ಯತೆಯೊಳಗಿಂದ ಭರವಸೆಯ ಬೆಳಕು ಬರುತ್ತದೆ ಎನ್ನುವುದು  ಅನುಭವದ ಮಾತು. ನನ್ನ ಮಾತು ನಿಜವಾಗಲಿ ಎಂದೇ ಎನಿಸುವೆ. ಕೃಷ್ಣಪ್ಪರವರ  ಆಯ್ಕೆಯ ಮೂಲಕವಾದರೂ ಈ ಸ್ವಾರ್ಥಿಗಳಿಗೆ, ರಂಗರಾಜಕೀಯ ಮಾಡುವವರಿಗೆ, ಸಾಂಸ್ಕೃತಿಕ ದಲ್ಲಾಳಿಗಳಿಗೆ ಪಾಠ ಕಲಿಸಬೇಕಾಗಿದೆ.  ಇದು ಇಂದಿನ ಪ್ರಸ್ತುತ ಅಗತ್ಯವೂ ಆಗಿದೆ. 
 

                                                     -ಶಶಿಕಾಂತ ಯಡಹಳ್ಳಿ  




         

         
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ