ಶನಿವಾರ, ನವೆಂಬರ್ 2, 2013

ಮಕ್ಕಳ ರಂಗಭೂಮಿ ಪ್ರದರ್ಶನ-ಪ್ರಕ್ರಿಯೆಗೊಂದು ಪ್ರತಿಕ್ರಿಯೆ :



ರಂಗಕೃತಿ ವಿಮರ್ಶೆ :






ಮಕ್ಕಳ ರಂಗಭೂಮಿ ಪ್ರದರ್ಶನ-ಪ್ರಕ್ರಿಯೆಗೊಂದು ಪ್ರತಿಕ್ರಿಯೆ :


       ನಿಂಗು ಸೊಲಗಿಯವರು ಪಿಎಚ್ಡಿ ಪದವಿಗಾಗಿ ಸಲ್ಲಿಸಿದ ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ ವಿಷಯದ ಕುರಿತ ಮಹಾಪ್ರಬಂಧವು ಪುಸ್ತಕ ರೂಪದಲ್ಲಿ ಪ್ರಕಟಗೊಂಡು ರಂಗಭೂಮಿಗೆ ಅದರಲ್ಲೂ ಮಕ್ಕಳ ರಂಗಭೂಮಿಗೆ ಸಾರ್ಥಕ ಕೊಡುಗೆಯನ್ನು ನೀಡಿದೆ. ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಧನಸಹಾಯ ಪಡೆದು ಧಾರವಾಡದ ಚಿಲಿಚಿಲಿ ಪ್ರಕಾಶನದಿಂದ ಪ್ರಕಟಿತವಾದ ಕೃತಿ ಮಕ್ಕಳ ರಂಗಭೂಮಿಯ ವಿವಿಧ ಆಯಾಮಗಳನ್ನು ಸಾದ್ಯಂತ ದಾಖಲಿಸುವ ಪ್ರಯತ್ನಮಾಡಿದೆ.  ನೇರ ನಿರೂಪಣೆ, ವ್ಯವಸ್ಥಿತವಾದ ವಿಷಯ ಜೋಡಣೆ, ಸರಳ ಭಾಷೆಯ ಬಳಕೆ ಹಾಗೂ ವಸ್ತು ವಿಷಯದ ಕುರಿತ ಆಳವಾದ ಅಧ್ಯಯನಗಳಿಂದಾಗಿ ಕೃತಿ ನಿಜಕ್ಕೂ ಮಹತ್ವದ್ದಾಗಿದೆ. ದಿನಾಂಕ 2013, ಅಕ್ಟೋಬರ್ 22 ರಂದು ಬೆಂಗಳೂರಿನ ನಯನ ಸಭಾಂಗನದಲ್ಲಿ ಕೃತಿಯನ್ನು ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರು ಬಿಡುಗಡೆಗೊಳಿಸಿದರು. ಡಾ.ಸಿದ್ದನಗೌಡ ಪಾಟೀಲರು ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.  ಹಾಗೂ ಶಶಿಕಾಂತ ಯಡಹಳ್ಳಿ ಕೃತಿ ಕುರಿತು ಪರಿಚಯ ಮಾಡಿಕೊಟ್ಟರು.
         ಮೂಲತಃ ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಡಾ.ನಿಂಗು ಸೊಲಗಿ ಕಳೆದ ಎರಡು ದಶಕಗಳ ಕಾಲ ಮಕ್ಕಳಿಗೆ ರಂಗಮುಖೇನ ಶಿಕ್ಷಣ ಕೊಡುತ್ತಾ, ರಂಗಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಪರಿಗಣಿಸಿ ಪಾಠಗಳನ್ನು ಹೇಳಿಕೊಡುತ್ತಾ,  ಶಾಲಾ ಅಂಗಳದಲ್ಲಿ ರಂಗ ಚಟುವಟಿಕೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಹಲವಾರು ಮಕ್ಕಳ ನಾಟಕಗಳನ್ನು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸುವ ಮೂಲಕ ತಮ್ಮ ರಂಗಭೂಮಿಯ ಅನುಭವಗಳನ್ನು ಗಟ್ಟಿಗೊಳಿಸುತ್ತಾ ಬಂದವರು. ವೃತ್ತಿ ಮತ್ತು ಪ್ರವೃತ್ತಿಗಳನ್ನು ಒಂದು ಮಾಡಿಕೊಂಡು, ಶಾಲೆಯಲ್ಲಿ ಮಕ್ಕಳ ರಂಗಭೂಮಿಯನ್ನು ಕಟ್ಟುತ್ತಾ, ತಮ್ಮ ಎಲ್ಲಾ ನಿರಂತರ ಚಟುವಟಿಕೆಗಳ ಅನುಭವಗಳನ್ನು ಕ್ರೂಢೀಕರಿಸಿ ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ. ಮಕ್ಕಳ ರಂಗಭೂಮಿಯ ಕುರಿತು ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದ ಡಾ.ಗಜಾನನ ಶರ್ಮಾರವರನ್ನು ಹೊರತು ಪಡಿಸಿದರೆ ನಿಂಗುರವರೆ ಎರಡನೆಯವರು.

        ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷಕ್ಕೆ ಒಳಗಾದ ಹಾಗೆಯೇ ರಂಗಭೂಮಿಯಲ್ಲೂ ಸಹ ಮಕ್ಕಳ ರಂಗಭೂಮಿ  ಅವಜ್ಞೆಗೆ ಒಳಗಾಗಿದೆ. ನಗರಗಳಲ್ಲಿ ಬೇಸಿಗೆ ಶಿಬಿರಗಳಲ್ಲಿ ತಯಾರಾಗುವ ಕೆಲವು ಮಕ್ಕಳ ನಾಟಕಗಳ ಪ್ರದರ್ಶನ, ಕಿನ್ನರ ಮೇಳದಂತಹ ರೆಪರ್ಟರಿ  ಪ್ರದರ್ಶಿಸುವ ಮಕ್ಕಳ ನಾಟಕಗಳನ್ನು ಹೊರತು ಪಡಿಸಿದರೆ ಮಕ್ಕಳರಂಗಭೂಮಿಯ ಬೆಳವಣಿಗೆ ರಂಗಭೂಮಿಯ ಒಟ್ಟಾರೆ ಬೆಳವಣಿಗೆಗೆ ಪೂರಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ರಂಗಭೂಮಿಯ ಹಿನ್ನಲೆ, ಪ್ರಸ್ತುತತೆ ಮತ್ತು ಅಗತ್ಯವನ್ನು ಹೇಳುವ, ರಂಗಮುಖೇನ ಶಿಕ್ಷಣದ ಅನಿವಾರ್ಯತೆಯನ್ನು ಪ್ರತಿಪಾದಿಸುವ ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆ ಕೃತಿಯು ಬಹಳ ಮುಖ್ಯವೆನಿಸುತ್ತದೆ. ಕೇವಲ ದಾಖಲೆಗಾಗಿ ಪುಸ್ತಕ ಬಳಕೆಯಾಗದೇ ಮಕ್ಕಳ ರಂಗಭೂಮಿಯ ಪ್ರದರ್ಶನ ಮುತ್ತು ಪ್ರಕ್ರಿಯೆಗೆ ಪ್ರೇರಣೆಯನ್ನು ನೀಡುವಂತಿದೆ.
        ನಾಟಕ ನಿರ್ಮಾಣದ ಪ್ರಕ್ರಿಯೆಗೆ ಮತ್ತು ಪ್ರದರ್ಶನಗಳಿಗೆ ಮಾತ್ರ ಬಹುತೇಕ ರಂಗಕರ್ಮಿಗಳು ಗಮನ ಕೊಡುತ್ತಾರೆ. ನಂತರದ ಪ್ರಕ್ರಿಯೆಯತ್ತ ಆಲೋಚನೆ ಮಾಡುವ ವ್ಯವಧಾನ, ಅದರ ಅಗತ್ಯತೆಯ ಅರಿವು ನಮ್ಮ ಬಹುತೇಕ ರಂಗ ತಂಡಗಳು-ನಿರ್ದೇಶಕರು-ಸಂಘಟಕರಿಗಿರಬೇಕಾಗಿದೆ. ನಾಟಕವೆನ್ನುವ ಪ್ರೊಡಕ್ಟ ಸಿದ್ದಪಡಿಸಿ ಪ್ರದರ್ಶಿಸಿದರೆ ತಮ್ಮ ರಂಗಕೈಂಕರ್ಯ ಸಾರ್ಥಕವಾಯಿತು ಎಂದುಕೊಳ್ಳುತ್ತಾರೆ, ಆದರೆ ಪ್ರೊಡಕ್ಟ್ ಉಂಟು ಮಾಡಿದ ಪ್ರೊಸೆಸ್ (ಪ್ರಕ್ರಿಯೆ) ಬಗ್ಗೆ ಅದ್ಯಾಕೋ ಪ್ರಾಮುಖ್ಯತೆಯನ್ನು ಕೊಡುವುದು ತುಂಬಾ ಕಡಿಮೆ. ಪ್ರಕ್ರಿಯೆಯಿಂದ-ಪ್ರದರ್ಶನ, ಪ್ರದರ್ಶನದಿಂದ ಪ್ರಕ್ರಿಯೆ ಎನ್ನುವುದು ರಂಗಭೂಮಿ ಬೆಳವಣಿಗೆಗೆ ಅಗತ್ಯವಾದದ್ದು ಎನ್ನುವ ಪ್ರಮುಖ ಅಂಶವನ್ನು ರಂಗಕರ್ಮಿಗಳಿಗೆ ತಿಳಿಸುವ ವಿಶಿಷ್ಟ ಪರಿಕಲ್ಪನೆಯಿಂದಾಗಿ ಕೃತಿಯು ವಿಶೇಷವೆನಿಸುತ್ತದೆ. ರಂಗ ರೆಪರ್ಟರಿಗಳು ಪ್ರದರ್ಶನದ ಜೊತೆಗೆ ಪ್ರಕ್ರಿಯೆಗೂ ಮಹತ್ವವನ್ನು ಕೊಡುತ್ತಾವಾದರೂ ಸಂಸ್ಥೆಗಳು ಮಕ್ಕಳ ನಾಟಕಗಳನ್ನು ಮಾಡುವುದು ಅಪರೂಪ.
         320 ಪುಟಗಳ ಮಹಾಪ್ರಬಂಧವು ಒಟ್ಟಾರೆ ಆರು ಅಧ್ಯಾಯಗಳನ್ನು ಹೊಂದಿದೆ. ಮೊದಲನೆಯ ಅಧ್ಯಾಯ ಮಕ್ಕಳ ರಂಗಭೂಮಿಯ ಪ್ರವೇಶ ದಲ್ಲಿ ಅಧ್ಯಯನದ ಉದ್ದೇಶ, ವಿಷಯ ವ್ಯಾಪ್ತಿ ಮತ್ತು ಸ್ವರೂಪದ ಕುರಿತು ಚರ್ಚಿಸಲಾಗಿದೆ. ಎರಡನೆಯ ಅಧ್ಯಾಯವಾದ ರಂಗಭೂಮಿ: ಮನೋವಿಕಾಸ ದಲ್ಲಿ ಮಕ್ಕಳ ಮನೋವಿಕಾಸದ ನೆಲೆಗಟ್ಟಿನಲ್ಲಿ ಮಕ್ಕಳ ರಂಗಭೂಮಿಯ ಅಗತ್ಯತೆ, ಪರಿಣಾಮ ಹಾಗೂ ಪ್ರಭಾವದ ಕುರಿತು ವಿಶ್ಲೇಷಿಸಲಾಗಿದೆ. ಮೂರನೆಯ ಅಧ್ಯಾಯ ಮಕ್ಕಳ ರಂಗಭೂಮಿ ಬೆಳವಣಿಗೆ ಯಲ್ಲಿ ಜನಪದ ಹಾಗೂ ಆಧುನಿಕ ರಂಗಭೂಮಿಯನ್ನು ಪರಿಚಯಿಸುತ್ತಾ ಮಕ್ಕಳ ರಂಗಭೂಮಿಯ ಇತಿಹಾಸ, ಮಹತ್ವ, ವಸ್ತು ವೈವಿಧ್ಯತೆ, ರಂಗ ಸಂಸ್ಥೆಗಳು ಹಾಗೂ ಮಕ್ಕಳ ರಂಗಪ್ರಯೋಗಗಳ ಕುರಿತು ಹಲವಾರು ಮಾಹಿತಿಗಳನ್ನು ದಾಖಲಿಸಲಾಗಿದೆ.

       ನಾಲ್ಕು ಮತ್ತು ಐದನೆಯ ಅಧ್ಯಾಯಗಳು ಕೃತಿಯ ಪ್ರಮುಖ ಘಟ್ಟಗಳಾಗಿವೆ.  ನಾಲ್ಕನೆಯ ಅಧ್ಯಾಯವಾದ ಮಕ್ಕಳ ರಂಗಭೂಮಿ: ಪ್ರದರ್ಶನ-ಪ್ರಕ್ರಿಯೆಯಲ್ಲಿ ರಂಗಪಠ್ಯ, ರಂಗತಂತ್ರ, ರಂಗಸಂಗೀತ, ಬೆಳಕು, ತಾಲೀಮು ಕುರಿತು ವಿವರಗಳನ್ನು ಕೊಡಲಾಗಿದೆ.  ಮಕ್ಕಳ ನಾಟಕದ ಪ್ರದರ್ಶನ-ಪರಿಣಾಮ-ಪ್ರಭಾವದ ಜೊತೆಗೆ ರಂಗಭೂಮಿಯ ಹಲವಾರು ವಿಭಾಗಗಳ ಕುರಿತ ಮಾಹಿತಿ ಹೇರಳವಾಗಿದೆ.  ರಂಗಭೂಮಿಯ ಶೈಕ್ಷಣಿಕ ಸಾಧ್ಯತೆಗಳು ಎನ್ನುವ ಐದನೇ ಅಧ್ಯಾಯ ಪ್ರಸ್ತುತತೆಯನ್ನು  ಹೊಂದಿದೆ. ರಂಗಶಿಕ್ಷಣ, ರಂಗಭಾಷಾ ಕಲಿಕೆ, ರಂಗಶಿಕ್ಷಣದ ಹಂತಗಳು, ಮಕ್ಕಳ ರಂಗ ಚಟುವಟಿಕೆಗಳು, ರಂಗಶಿಬಿರ, ಉತ್ಸವಗಳು ಹಾಗೂ ಆಪ್ತರಂಗ ಪ್ರಯೋಗಗಳ ಕುರಿತು ವಿಶ್ಲೇಷಿಸಲಾಗಿದೆ.  ಶಿಕ್ಷಣ ಕ್ಷೇತ್ರದಲ್ಲಿ ರಂಗಸಾಧ್ಯತೆಗಳ ಬಳಕೆ, ರಂಗಪಠ್ಯಕ್ರಮಗಳು ಮಕ್ಕಳ ಮೇಲೆ ಬೀರುವ ಪರಿಣಾಮ. ಮಕ್ಕಳಲ್ಲಿ ರಂಗಕಲೆ ಉಂಟುಮಾಡುವ ಕಲಾಸಕ್ತಿ, ಒಗ್ಗಟ್ಟು, ಭಾವ್ಯಕ್ಯತೆ, ಸಮಾನತೆ..... ಹೀಗೆ ಅತ್ಯಂತ ಉಪಯುಕ್ತ ವಸ್ತು ವಿಷಯಗಳ ಕುರಿತು ಸರಳವಾಗಿ ಹಾಗೂ ವಿವರವಾಗಿ ಹೇಳಿರುವುದರಿಂದ ಐದನೇ ಅಧ್ಯಾಯ ಮಹಾಪ್ರಬಂಧದ ಪ್ರಮುಖ ಅಂಶವಾಗಿದೆ. ಆರನೇ ಅಧ್ಯಾಯದಲ್ಲಿ ಅಂತಹ ವಿಶೇಷವೇನಿಲ್ಲ. ಅದು ರಂಗ ಸಮಾರೋಪ . ಈಗಾಗಲೇ ಬೇರೆಲ್ಲಾ ಅಧ್ಯಾಯಗಳಲ್ಲಿ ಚರ್ಚಿಸಿದ ಅಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.
    ಇಷ್ಟೆಲ್ಲಾ ವಿಸ್ತಾರವಾದ ಅಧ್ಯಯನದ ನಡುವೆಯೂ ಕೆಲವೊಂದು ನ್ಯೂನ್ಯತೆಗಳು, ಗ್ರಹಿಕೆಯ ಮಿತಿಗಳು ಮಹಾಪ್ರಬಂಧದಲ್ಲಿವೆ. ಅಧ್ಯಯನದ ವ್ಯಾಪ್ತಿಯನ್ನು ಮೀರಿದ ವಿಷಯಗಳೂ ಅನಗತ್ಯವಾಗಿ ಚರ್ಚಿತವಾಗಿವೆ. ಮಕ್ಕಳ ರಂಗಭೂಮಿಯಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ನಾಟಕ ಹಾಗೂ ದೊಡ್ಡವರಿಂದ ಮಕ್ಕಳಿಗಾಗಿ ನಾಟಕ ಎನ್ನುವ ಎರಡು ಬಗೆಗಳನ್ನು ಕೃತಿ ವಿವರಿಸುತ್ತದೆ. (ಪುಟ-4) ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಾಟಕ ಎನ್ನುವ ಇನ್ನೊಂದು ಪ್ರಮುಖವಾದ ಬಗೆಯನ್ನು ಅವಜ್ಞೆ ಮಾಡಲಾಗಿದೆ. ಬಹುತೇಕ ಮಕ್ಕಳ ನಾಟಕಗಳನ್ನು ಮಕ್ಕಳೇ ಆಡುತ್ತಿದ್ದರೂ ಸಹ ಅವು ದೊಡ್ಡವರನ್ನು ಕುರಿತದ್ದೇ ಆಗಿರುತ್ತವೆ. ಮಕ್ಕಳೇ ದೊಡ್ಡವರ ಪಾತ್ರಗಳನ್ನು ಅಭಿನಯಿಸುತ್ತಾರೆ. ಹೇಗೆ ದೊಡ್ಡವರಿಂದ ಮಕ್ಕಳ ನಾಟಕ ಎಂದು ಗುರುತಿಸುತ್ತೇವೊ ಹಾಗೆಯೇ ಮಕ್ಕಳಿಂದ ದೊಡ್ಡವರ ನಾಟಕ ಎಂದೂ ಗುರುತಿಸಬಹುದಾಗಿದೆ.  ಹಾಗೆಯೇ ಮಕ್ಕಳ ಬೆಳವಣಿಗೆಯನ್ನಾಧರಿಸಿ 11 ರಿಂದ 18 ವರ್ಷದ ಮಕ್ಕಳನ್ನು ಹದಿಹರೆಯದ ಮಕ್ಕಳು ಎಂದು ನಮೂದಿಸಲಾಗಿದೆ. (ಪುಟ-14), ಆದರೆ ಆಂಗ್ಲ ಭಾಷೆಯಲ್ಲಿ ಹೇಳುವ ಟೀನ್ಏಜ್ ಅಂದರೆ 13 ರಿಂದ 19 ವರ್ಷದ ಮಕ್ಕಳನ್ನು ಹದಿಹರೆಯದ ಮಕ್ಕಳು ಎಂದು ಗುರುತಿಸುವುದು ಸೂಕ್ತವಾದದ್ದು. ಯಾಕೆಂದರೆ 5ನೇ ತರಗತಿಯ ಮಗುವನ್ನು ಹರೆಹದಿಯದವರು ಎನ್ನುವುದು ಒಪ್ಪುವ ವಿಷಯವಲ್ಲ.

       ಬೀದಿನಾಟಕದ ಮೂಲ ಉದ್ದೇಶ ಪ್ರಚಾರ ಮತ್ತು ಜಾಗೃತಿಯಾಗಿತ್ತು (ಪುಟ-49) ಎನ್ನುವುದು ಅರ್ಧಸತ್ಯ. ಬೀದಿನಾಟಕದ ಉದ್ದೇಶ ಜನಜಾಗೃತಿಯೇ ಹೊರತು ಪ್ರಚಾರವಾಗಿರಲಿಲ್ಲ. ಆದರೆ ಜಾಗತೀಕರಣದ ಪ್ರಭಾವದಿಂದಾಗಿ ಅದು ಪ್ರಚಾರ ಮಾಧ್ಯಮವಾಗಿ ಬದಲಾಗಿದೆ. ಹಾಗೆಯೇ ಜಾನಪದ ರಂಗಭೂಮಿಯ ಕುರಿತು ಚರ್ಚಿಸುವಾಗ (ಪುಟ-40-44) ಹರಿಕಥೆ ಪ್ರಕಾರವನ್ನೇ ಮರೆಯಲಾಗಿದೆ. ಹರಿಕಥೆಯೆನ್ನುವುದು ಈಗ ನೇಪತ್ಯಕ್ಕೆ ಸರಿದಿದ್ದರೂ ಶತಮಾನಗಳಿಂದ ದೊಡ್ಡವರ ಹಾಗೆ ಮಕ್ಕಳ ಮೇಲೂ ಪರಿಣಾಮವನ್ನು ಬೀರುವಂತಿತ್ತು. ರಾಮಾಯಣ ಮಹಾಭಾರತ ಪುರಾಣ ಪುಣ್ಯ ಕಥೆಗಳು ಈಗಲೂ ಬಹುತೇಕರಿಗೆ ನೆನಪಿನಲ್ಲುಳಿಯಲು ಹರಿಕಥೆ ಪರಿಣಾಮವೂ ಪ್ರಮುಖ ಕಾರಣವಾಗಿದೆ.
          ಮಕ್ಕಳ ಆಟ-ಚೆಲ್ಲಾಟಗಳೂ ರಂಗಪ್ರಯೋಗವಾಗುತ್ತವೆ ಎನ್ನುವುದು ಸರಿಯಲ್ಲ, (ಪುಟ 5), ಯಾಕೆಂದರೆ ಅವು ಮಕ್ಕಳ ಸಹಜ ಚಟುವಟಿಕೆಗಳಾಗಿವೆ.  ಅನುಕರಣೆಯೇ ನಾಟಕದ ಜೀವಾಳ ಎನ್ನುವುದನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ (ಪುಟ-5),  ಯಾಕೆಂದರೆ ಅಭಿನಯ ಮತ್ತು ನಾಟಕೀಯತೆ ನಾಟಕದ ಜೀವಾಳವಾಗಿದೆ. ನಾಟಕ ಪ್ರದರ್ಶನ ಸ್ಥಳವನ್ನು ರಂಗಭೂಮಿ ಎನ್ನುತ್ತಾರೆ (ಪುಟ-12) ಎನ್ನುವುದು  ಸೂಕ್ತವಲ್ಲ, ಯಾಕೆಂದರೆ ಎಲ್ಲಾ ರೀತಿಯ ರಂಗಸಂಬಂಧಿತ ಕ್ರಿಯೆಗಳ ಒಟ್ಟಾರೆ ನಿರ್ಮಿತಿಯ ಪ್ರಕ್ರಿಯೆಗೆ ರಂಗಭೂಮಿ ಎನ್ನುತ್ತಾರೆ. ಆದಿಮ ಕಲೆಯಾದ ರಂಗಭೂಮಿ ಮಾನವನ ಮೂಲ ಅಭಿವ್ಯಕ್ತಿ ಮಾಧ್ಯಮ (ಪುಟ 12) ಎನ್ನುವುದು ಪೂರ್ಣ ನಿಜವಲ್ಲ, ಆಂಗಿಕಾಭಿನಯ ಮಾನವನ ಮೂಲ ಅಭಿವ್ಯಕ್ತಿ ಮಾಧ್ಯಮ ಎನ್ನುವುದು ಸೂಕ್ತ.  ಹೀಗೆ...... ಸಂಶೋಧಕರ ಗ್ರಹಿಕೆಯ ಮಿತಿಯಿಂದಲೋ ಏನೋ ಇಂತಹ ಹಲವಾರು ಸಂಪೂರ್ಣ ಸತ್ಯವಲ್ಲದ ಮಾಹಿತಿಗಳು ಕೃತಿಯಲ್ಲಿ ಉಲ್ಲೇಖವಾಗಿವೆ. ಪುಸ್ತಕ ಮರುಮುದ್ರಣವಾದರೆ ಹಲವಾರು ನ್ಯೂನ್ಯತೆಗಳ ಕುರಿತು ರಂಗತಜ್ಞರೊಂದಿಗೆ ಸಮಾಲೋಚಿಸಿ, ಸತ್ಯಾಸತ್ಯತೆಗಳ ಕುರಿತು ಪರಾಮರ್ಶಿಸಿ ಸೂಕ್ತ ಬದಲಾವಣೆಗಳೊಂದಿಗೆ  ಪ್ರಕಟಿಸಿದರೆ ಮಹಾಪ್ರಬಂಧವು ಮಕ್ಕಳ ರಂಗಭೂಮಿಯಲ್ಲಿ ಅತ್ಯುತ್ತಮ ಆಕರ ಗ್ರಂಥವಾಗುವುದರಲ್ಲಿ ಸಂದೇಹವಿಲ್ಲ.
         ನಾಡಿನಾದ್ಯಂತ ಮಕ್ಕಳ ರಂಗಭೂಮಿ ಕುರಿತು ಹಲವಾರು ಬಿಡಿ ಲೇಖನಗಳು, ಸಂಕಲನಗಳು ಪ್ರಕಟವಾಗಿವೆ. ಆದರೆ ಮಕ್ಕಳ ರಂಗಭೂಮಿಯನ್ನು ಇಡಿಯಾಗಿ ಒಂದು ಪುಸ್ತಕದಲ್ಲಿ ಹಿಡಿದಿಡುವ ಸಾರ್ಥಕ ಪ್ರಯತ್ನವನ್ನು ಡಾ.ನಿಂಗು ಸೊಲಗಿಯವರು ತಮ್ಮ ಮಹಾಪ್ರಬಂಧದಲ್ಲಿ ಮಾಡಿದ್ದಾರೆ. ಮಕ್ಕಳ ರಂಗಕರ್ಮಿಗಳಿಗೆ, ಅಧ್ಯಯನಶೀಲರಿಗೆ, ಶಾಲಾ ಶಿಕ್ಷಕರಿಗೆ, ಸಂಶೋಧಕರಿಗೆ.... ತುಂಬಾ ಉಪಯಕ್ತವಾದ ಮಾಹಿತಿಗಳನ್ನು ಪುಸ್ತಕ ಹೊಂದಿದೆ. ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯದಲ್ಲಿ ಇರಲೇಬೇಕಾದ ಕೃತಿ ಇದು. ಕರ್ನಾಟಕದ ಸಾಂಸ್ಕೃತಿಕ ನೀತಿಯ ಕರುಡನ್ನು  ನಿರೂಪಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ರಂಗಭೂಮಿಯ ಕುರಿತು ವಿಶೇಷ ಮಹತ್ವವನ್ನು ಕೊಡಬೇಕಾಗಿದೆ. ಅದಕ್ಕೆ ಬೇಕಾದ ಮಾಹಿತಿಗಳನ್ನು ಪುಸ್ತಕದಿಂದ ಪಡೆಯಬಹುದಾಗಿದೆ. ಮೂಲಕವಾದರೂ ಅನೇಕ ರಂಗಕರ್ಮಿಗಳ, ಶಿಕ್ಷಣ ತಜ್ಞರ ಆಶಯವಾದ ರಂಗಮುಖೇನ ಶಿಕ್ಷಣವು ಎಲ್ಲಾ ಭಾಷಾ ಮಾಧ್ಯಮ ಶಾಲೆಗಳಲ್ಲಿ ಜಾರಿಗೆ ಬರಲೇಬೇಕಿದೆ. ಕೃತಿಯ ಮೂಲ ಉದ್ದೇಶವೂ ಅದೇ ಆಗಿದೆ

                                                              -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ