ಶನಿವಾರ, ನವೆಂಬರ್ 2, 2013

‘ಶ್ರಾದ್ಧ’ದಲ್ಲಿ ಹುಸಿಯಾದ ಬ್ರಾಹ್ಮಣ ಬಂಡಾಯ :



ನಾಟಕ ವಿಮರ್ಶೆ :        

    ಶ್ರಾದ್ಧದಲ್ಲಿ ಹುಸಿಯಾದ ಬ್ರಾಹ್ಮಣ ಬಂಡಾಯ :        

      ‘ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟ ಕರ್ನಾಟಕ ರಾಜ್ಯ ಸಮಿತಿಗೆ ಒಂದು ವರ್ಷ ತುಂಬಿದ ಸಂಭ್ರಮವನ್ನು ರಂಗ ಪ್ರದರ್ಶನದ ಮೂಲಕ ಆಚರಿಸಿದ್ದು ನಿಜಕ್ಕೂ ಅಭಿನಂದನೀಯ. ಅತಿಯಾದ ವೇದಿಕೆ ಕಾರ್ಯಕ್ರಮ ಹಾಗೂ ಭಾಷಣಗಳ ಭರಾಟೆಗಳಿಲ್ಲದೆ ನೇರವಾಗಿ ನಾಟಕವನ್ನು ಪ್ರಾರಂಭಿಸಿದ್ದು ಅನುಕರಣೀಯ. ಒಕ್ಕೂಟದ ಮಾಗಿದ ಮನಸುಗಳು ನಾಟಕರಂಗಕ್ಕೆ ಕೊಟ್ಟ ಪ್ರಾಮುಖ್ಯತೆ ಸ್ಮರಣೀಯ. ರಂಗಾವತಾರ ರಂಗತಂಡವನ್ನು ಆಹ್ವಾನಿಸಿ ಶಿಕ್ಷಣ ತಜ್ಞ  ಡಾ. ಕೆ..ರಾಧಾಕೃಷ್ಣರವರ ತುಳು ಕಥೆಯಾದರಿಸಿದ ಶ್ರಾದ್ಧ ನಾಟಕವನ್ನು ಕನ್ನಡದಲ್ಲಿ ಪ್ರದರ್ಶಿಸಲು ವೇದಿಕೆಯನ್ನೊದಗಿಸಿಕೊಟ್ಟ ಒಕ್ಕೂಟದ ಕರ್ನಾಟಕ ರಾಜ್ಯ ಸಮಿತಿಯ ರಂಗಾಭಿಮಾನ ಆದರಣೀಯ.
          ಹಿಂದೆ ಕೃಷ್ಣಮೂರ್ತಿ ಕವತಾರರು ತುಳು ಭಾಷೆಯಲ್ಲಿ ನಿರ್ದೇಶಿಸಿ ಪ್ರದರ್ಶಿಸಿದ್ದ ಶ್ರಾದ್ಧ ನಾಟಕವನ್ನು ಮತ್ತೆ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ೨೦೧೩, ಅಕ್ಟೋಬರ್ ೨೬ರಂದು ಬೆಂಗಳೂರಿನ ಪುರಭವನದಲ್ಲಿ ನಾಟಕ ರಂಗಾವತಾರ ತಂಡದ ಕಲಾವಿದರಿಂದ ಪ್ರದರ್ಶನಗೊಂಡು ವೈದಿಕ ಪುರೋಹಿತರ ಪ್ರಮುಖ ಆಚರಣೆಯೊಂದರ ಅಂತರಂಗವನ್ನು ರಂಗದಂಗಳದಲ್ಲಿ ಬಹಿರಂಗಗೊಳಿಸಿತು

                                      ಊರ್ದ್ವಮೂಲ ಮದಶಾಖಾಮಶ್ವತಂ
                                       ಪ್ರಾಹುರವ್ಯಯಂ ಛಂದಾಂಸಿ ಯಶ್ಯ ಪರ್ರಾಣಿ
                                       ಯಸ್ತಂ ವೇದ ವೇದವಿತ್.... 
          ಇದು ಶ್ರಾದ್ದದಲ್ಲಿ ಸತ್ತವರಿಗೆ ಪಿಂಡಪ್ರಧಾನ  ಮಾಡುವಾಗ ಪುರೋಹಿತರು ಹೇಳುವ ಭಗವದ್ಗೀತೆಯ ೧೫ನೇ ಅಧ್ಯಾಯದ ಆರಂಭದ ಶ್ಲೋಕ. ಇದರ ಅರ್ಥ ಹೇಗೆ ಅಶ್ವತ್ ಮರದ ಬೇರು ಕೆಳಗಡೆಯಿಂದ ಮೇಲ್ಮುಖವಾಗಿ ಹೋಗಿ ಮತ್ತೆ ಬೇರಾಗಿ ಕೆಳಕ್ಕಿಳಿದು ನೆಲವನ್ನು ಮುಟ್ಟುತ್ತಾ ಪುನರಾವರ್ತನೆಯಾಗುತ್ತದೆಯೋ ಹಾಗೆ ಮತ್ತೆ ಮತ್ತೆ ಪುನರ್ಜನ್ಮ ಪಡೆ ಎಂಬುದಾಗಿದೆ. ಶ್ಲೋಕವನ್ನಾಧಾರವಾಗಿಟ್ಟುಕೊಂಡು ಶ್ರಾದ್ಧದ ಆಚರಣೆಯನ್ನು ಆಧರಿಸಿ ಬ್ರಾಹ್ಮಣ ವರ್ಗದೊಳಗಿನ ಏಕತೆ, ನ್ಯೂನ್ಯತೆ ಮತ್ತು ಭಿನ್ನತೆಗಳನ್ನು ನಾಟಕದಲ್ಲಿ ಹೇಳಲಾಗಿದೆ. ದಕ್ಷಿಣ ಕನ್ನಡ ಪ್ರದೇಶದ ಶಿವಳ್ಳಿ ವೈಷ್ಣವ ಬ್ರಾಹ್ಮಣ ಸಮಾಜದ ಶ್ರಾದ್ಧ ಸಂಸ್ಕೃತಿಯನ್ನು ಅನಾವರಣಗೊಳಿಸುವ ಡಾ.ಕೆ..ರಾಧಾಕೃಷ್ಣರವರು ತಮ್ಮ ಬದುಕಿನ ಅನುಭವಗಳನ್ನು ಆಧರಿಸಿ ತುಳು ಭಾಷೆಯಲ್ಲಿ ಕಥೆಯಾಗಿ ಬರೆದಿದ್ದಾರೆ. ಕಥೆಯನ್ನಾಧರಿಸಿ ಶ್ರಾದ್ಧ ನಾಟಕ ಸೃಷ್ಟಿಯಾಗಿದೆ.
          ಆತ ಕೃಷ್ಣ. ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ದೇವಸ್ಥಾನದ ವಟುವಾಗಿ, ವೈದಿಕ ಪ್ರಧಾನ ಅರ್ಚಕ ವಿದ್ಯೆಗಳನ್ನು ಕಲಿಯುತ್ತಾನೆ. ಬಾರಿತ್ತಾಯ ಎನ್ನುವ ವೈದಿಕ ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಾನೆ. ಮುಂದೆ ಅದ್ಯಾಕೋ ಶುಷ್ಕ ಆಚರಣೆಗಳಲ್ಲಿ ನಂಬಿಕೆಯನ್ನು ಕಳೆದುಕೊಂಡ ಕೃಷ್ಣ ಜನಿವಾರವನ್ನೇ ಕಳಚಿಟ್ಟು ಊರು ಬಿಟ್ಟು ಬಾಂಬೆಗೆ ಹೋಗಿ ನೌಕರಿಗೆ ಸೇರುತ್ತಾನೆ. ಅಲ್ಲಿ ವಿಧವೆಯೊಬ್ಬಳನ್ನು ಮದುವೆಯಾಗುತ್ತಾನೆ. ಊರೆಲ್ಲಾ ಅದೇ ಸುದ್ದಿಯಾಗುತ್ತದೆ. ಆತನ ತಾಯಿ ಮಗನಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಅದೊಂದು ದಿನ ಕೃಷ್ಣನ ಆಶ್ರಯದಾತ ಅಜ್ಜ ತೀರಿಕೊಳ್ಳುತ್ತಾನೆ. ವಿಷಯ ತಿಳಿದ ಕೃಷ್ಣ ತನಗೆ ನಂಬಿಕೆ ಇಲ್ಲದಿದ್ದರೆ ಏನಾಯಿತು, ಬೇರೊಬ್ಬರ ನಂಬಿಕೆಯನ್ಯಾಕೆ ಹಾಳು ಮಾಡಲಿ ಎಂದು ಕೊಂಡು ಮತ್ತೆ ಜನಿವಾರವನ್ನು ಧರಿಸಿ ಅಜ್ಜನ ಶ್ರಾದ್ಧಕ್ಕೆಂದು ಊರಿಗೆ ಮರಳುತ್ತಾನೆ. ಅಜ್ಜನ ವರ್ಣರಂಜಿತ ಬದುಕು, ವ್ಯಕ್ತಿತ್ವ ಹಾಗೂ ಮಾನವೀಯತೆಗಳನ್ನು ನೆನಪಿಸಿಕೊಳ್ಳುತ್ತಾನೆ. ಕೊನೆಗೆ ಅಜ್ಜನ ಸಾವು ಮತ್ತು ಶ್ರಾದ್ಧದೊಂದಿಗೆ ನಾಟಕ ಕೊನೆಯಾಗುತ್ತದೆ.

          ನಾಟಕದ ನಿರೂಪಕನಾಗಿ ಕೃಷ್ಣ ತನ್ನ ಕಥೆಯ ಜೊತೆಗೆ ಅಜ್ಜನ ಕಥೆಯನ್ನು ಹೇಳತೊಡಗುತ್ತಾನೆ. ಆದರೆ ನಾಟಕದ ನಿಜವಾದ ನಾಯಕ ಬಾರಿತ್ತಾಯ ಅಜ್ಜನೇ. ಆತ ವೇದಾದ್ಯಯನ ಪಾರಂಗತ. ಬಡ ಮಕ್ಕಳಿಗೆ ವೇದಾಭ್ಯಾಸ ಮಾಡಿಸುತ್ತಾನೆ. ಇನ್ನೂ ವಿಶೇಷವೆಂದರೆ ಶೂದ್ರ ಕೊರಗರ ನಾರಾಯಣನಿಗೂ ಬ್ರಾಹ್ಮಣ ವಟುಗಳ ಜೊತೆಗೆ ವೇದಾಭ್ಯಾಸ ಮಾಡಿಸುತ್ತಾನೆ. ಶಾಂಭವಿಯ ಜೊತೆಗೆ ವಿವಾಹಬಾಹಿರ ಸಂಬಂಧವನ್ನೂ ಹೊಂದಿರುತ್ತಾನೆ. ಹೆಂಡತಿಯ ಅಸಹಕಾರ ಹಾಗೂ ಶಾಂಭವಿಯ ಮೇಲಿನ ಮೋಹ ಎರಡನ್ನೂ ನಿಭಾಯಿಸುತ್ತಲೇ ವೇದಪಾರಾಯಣ ನಿರತನಾಗಿರುತ್ತಾನೆ. ಕೊನೆಗೊಂದು ದಿನ ಶಾಂಭವಿಯಿಂದ ಎಣ್ಣೆ ಸ್ನಾನ ಮಾಡಿಸಿಕೊಳ್ಳುವಾಗ ಹೃದಯಾಘಾತದಿಂದ ಸಾಯುತ್ತಾನೆ. ಇಲ್ಲಿ ಅಜ್ಜನಕ್ಕಿಂತಲೂ ದೊಡ್ಡ ವ್ಯಕ್ತಿತ್ವ ಆತನ ಮಡದಿ ಮಾಮಿಯದು. ತನ್ನ ಗಂಡನ ಅನೈತಿಕ ಸಂಬಂಧಕ್ಕೆ ಅಸಹನೆಯನ್ನು ತೋರುತ್ತಲೇ ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ತಾನಿಲ್ಲದಾಗ ಶಾಂಭವಿಯ ಜೊತೆಗಿದ್ದಾಗ ಗಂಡ ಸತ್ತದ್ದು ತಿಳಿದೂ ಸಹ ಎಲ್ಲರ ಮುಂದೆ ಅಜ್ಜ ತನ್ನ ಮಡಿಲಲ್ಲೇ ಪ್ರಾಣ ಬಿಟ್ಟ, ಅದೇ ಸಮಯಕ್ಕೆ ಶಾಂಭವಿಯೂ ಬಂದಳು ಎಂದು ಸುಳ್ಳು ಹೇಳಿ ಗಂಡನ ಮರ್ಯಾದೆ ಉಳಿಸುತ್ತಾಳೆ. ಇಲ್ಲಿ ಮಾಮಿ ಭಾರತೀಯ ನಾರಿ ಎಂಬ ಹುಸಿ ಪರಿಕಲ್ಪನೆಯ ಪ್ರತೀಕವಾಗಿದ್ದರೆ, ಶಾಂಭವಿ ಪ್ರೇಮದ ಸಂಕೇತವಾಗುತ್ತಾಳೆ. ಬಾರಿತ್ತಾಯ ಅಜ್ಜ ಮನುಷ್ಯ ಸಹಸ ದೌರ್ಬಲ್ಯಗಳನ್ನು ಹೊಂದಿಯೂ ಮಾನವೀಯ ಮೌಲ್ಯಗಳಿಗೆ ಉದಾಹರಣೆಯಾಗುತ್ತಾನೆ. ಇಡೀ ನಾಟಕ ವೈದಿಕಾಚರಣೆಯ ಜೊತೆಗೆ ಮಾನವೀಯ ಸಂಬಂಧಗಳನ್ನು ತೆರೆದಿಡುತ್ತದೆ. ಶ್ರಾದ್ಧ ಎನ್ನುವ ಶುಷ್ಕ ಆಚರಣೆ ಎಲ್ಲಾ ಸಂಬಂಧಗಳನ್ನು ಒಂದು ಗೂಡಿಸುತ್ತದೆ. ಆದರೆ ಕೊರಗರ ನಾರಾಯಣ ವೈದಿಕ ಅಜ್ಜನ ಪಾರ್ಥೀವ ಶರಿರಕ್ಕೆ ಬೆಂಕಿ ಕೊಟ್ಟ ಎನ್ನುವುದು ಉತ್ಪ್ರೇಕ್ಷೆಯಾಗಿದೆ. 
          ಸತ್ತವರ ಮೋಕ್ಷಕ್ಕಾಗಿ, ಇಹಲೋಕ ತ್ಯಜಿಸಿದವರ ಲೌಕಿಕ ಬಯಕೆಗಳ ಈಡೇರಿಕೆಗಾಗಿ ಮಾಡುವ ವೈದಿಕಾಚರಣೆಯ ನೆಪದಲ್ಲಿ ವೈದಿಕಶಾಹಿಯನ್ನು ವಿಶ್ಲೇಷಿಸುವ ಪ್ರಯತ್ನದ ಭಾಗವಾಗಿ ಶ್ರಾದ್ಧ ನಾಟಕ ಮೂಡಿಬಂದಿದೆ. ಪುರೋಹಿತಶಾಹಿ ವರ್ಗದೊಳಗಿನ ಆಂತರಿಕ ಸಂಘರ್ಷ, ಪರನಿಂದನೆ, ಅಸಹಿಷ್ಣುತೆ, ಕರ್ಮಟತನ, ಅನೈತಿಕ ಸಂಬಂಧ, ಶುಷ್ಕ ಆಚರಣೆ... ಇವುಗಳನ್ನೆಲ್ಲಾ ನಾಟಕ ವಿಮರ್ಶಿಸುತ್ತದೆ. ಜೊತೆಗೆ ವಿಧವಾ ವಿವಾಹ, ಧಾರ್ಮಿಕ ಬಂಧನದ ಸಂಕೇತವೆನಿಸಿದ ಜನಿವಾರ ವಿಸರ್ಜನೆ, ಶೂದ್ರನಿಗೂ ವಿದ್ಯಾದಾನ... ಹೀಗೆ ಹಲವಾರು ಪ್ರಗತಿಪರ ನಿಲುವುಗಳನ್ನೂ ನಾಟಕ ತೋರಿಸುತ್ತದೆ. ಯಾವುದೇ ವ್ಯವಸ್ಥೆಯ ಬದಲಾವಣೆಯ ಬೀಜಗಳು ಅದೇ ವ್ಯವಸ್ಥೆಯೊಳಗೆ ಮೊಳಕೆಯೊಡೆಯುತ್ತವೆ ಎಂಬುದನ್ನು ಶ್ರಾದ್ಧ ನಾಟಕ ಸಾಕ್ಷೀಕರಿಸುವಂತಿದೆ. ಇದಕ್ಕೆ ಕೃಷ್ಣನ ಪಾತ್ರ ಸೃಷ್ಟಿ ಉದಾಹರಣೆಯಾಗಿದೆ. ವೈದಿಕ ಗರಡಿಯಲ್ಲೇ ಬೆಳೆದ ಕೃಷ್ಣ ಬ್ರಾಹ್ಮಣ್ಯದ ಹಂಗು ಹರಿದುಕೊಂಡು ಜನಿವಾರವನ್ನು ಕಿತ್ತೆಸೆಯುವುದು ಬಂಡಾಯದ ಪ್ರತೀಕವಾಗಿದೆ. ಲೆನಿನ್, ಮಾರ್ಕ್ಸ ವಿಚಾರಧಾರೆಗಳಿಂದ ಪ್ರಭಾವಿತನಾದ ಬ್ರಾಹ್ಮಣ ಕೃಷ್ಣನು ವಿಧವಾ ವಿವಾಹ ಮಾಡಿಕೊಳ್ಳುವುದು ಆಗಿನ ಕಾಲದ ಕ್ರಾಂತಿಕಾರಿ ವಿಚಾರವಾಗಿದೆ. ಅಂದರೆ ಕೃಷ್ಣನ ಪಾತ್ರದ ಮೂಲಕ ಬ್ರಾಹ್ಮಣ್ಯದ ಕಟ್ಟುಪಾಡುಗಳನ್ನು ಒಡೆಯುವ ಕೆಲಸವನ್ನು ನಾಟಕದ ಕಥೆಗಾರರು ಮಾಡಿದ್ದಾರೆ. ವಿಶೇಷವೆಂದರೆ ಡಾ.ರಾಧಾಕೃಷ್ಣರವರು ನಿಜಜೀವನದಲ್ಲಿ ತಮ್ಮ ಮಗನಿಗೂ ವಿಧವೆಯೊಬ್ಬಳನ್ನು ಮದುವೆ ಮಾಡಿಸಿ ತಮ್ಮ ಪ್ರಗತಿಪರತೆಯನ್ನು ತೋರಿದ್ದಾರೆ.

          ಆದರೆ..... ಕೃಷ್ಣ ಪಾತ್ರವು ತನ್ನ ಬಂಡಾಯ ದೋರಣೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವುದೇ ಇಲ್ಲ. ಶ್ರಾದ್ಧಕ್ಕೆ ಹೋಗಲೇಬೇಕು, ಮತ್ತೊಬ್ಬರ ನಂಬಿಕೆಯನ್ನು ಪ್ರಶ್ನಿಸಲು ನಾನ್ಯಾರು? ಎಂದು ಪ್ರಶ್ನಿಸಿಕೊಳ್ಳುವ ಕೃಷ್ಣ ಮತ್ತೆ ಜನಿವಾರ ಧರಿಸಿ ಅಜ್ಜನ ಶ್ರಾದ್ಧವನ್ನು ವಿಧಿವತ್ತಾಗಿ ನಡೆಸಿಕೊಟ್ಟಿದ್ದೊಂದು ವಿಪರ್ಯಾಸ. ರಾಜಿತನದಿಂದಾಗಿ ಇಡೀ ನಾಟಕದ ಆಶಯವೇ ಬುಡಮೇಲಾಗಿ ವೈದಿಕತೆ ಮತ್ತೆ ವಿಜ್ರಂಭಿಸುತ್ತದೆ. ನಾಟಕ ಏನೋ ಹೇಳಲು ಹೋಗಿ ಏನನ್ನೂ ಹೇಳದೆ ಮತ್ತೆ ಯಥಾಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುತ್ತದೆ. ಯಾರು ಎಷ್ಟೇ ಬಂಡಾಯವೆದ್ದು ಪುರೋಹಿತ ಧರ್ಮದಿಂದ ದೂರ ಹೋದರೂ ಒಮ್ಮಿಲ್ಲೊಮ್ಮೆ ಮತ್ತೆ ಪ್ರಾಯಶ್ಚಿತ್ತ ಮಾಡಿಕೊಂಡು ಮರಳಿ ಸ್ವಧರ್ಮಕ್ಕೆ ಮರಳಲೇ ಬೇಕು ಎನ್ನುವುದನ್ನು ಪರೋಕ್ಷವಾಗಿ ನಾಟಕ ಹೇಳುವಂತಿದೆ. ಬಹುಷಃ ಇದೇ ನಾಟಕದ ಅಂತರಾಳದ ಉದ್ದೇಶವಾಗಿದೆಯಾ? ಎಂಬ ಪ್ರಶ್ನೆ ಕಾಡುತ್ತದೆ. ಡಾ.ರಾಧಾಕೃಷ್ಣರವರ ನೆರಳಚ್ಚಿನಂತಿರುವ ಕೃಷ್ಣ ಪಾತ್ರ ಅವರ ರಾಜಿ ಮನೋಧರ್ಮವನ್ನು  ಅನಾವರಣಗೊಳಿಸುವಂತಿದೆ. ನಾಟಕದ  ಕಥೆ ಎಲ್ಲಿಂದ ಶುರುವಾಯಿತೋ ಅಲ್ಲಿಂದ ಒಂದು ತಿರುವು ಪಡೆದು ಮತ್ತೆ ಮೊದಲಿಗೆ ಬಂದು ನಿಲ್ಲುತ್ತದೆ. ಏನೋ ಹೊಸದನ್ನು ನಿರೀಕ್ಷಿಸಿದವರಿಗೆ ನಿರಾಶೆಯನ್ನುಂಟುಮಾಡುತ್ತದೆ.        
          ನಿರೂಪಕನೆ ಪಾತ್ರವಾಗುವುದು, ಪಾತ್ರವೇ ತನ್ನ ಕಥೆಯನ್ನು ನಿರೂಪನೆ ಮಾಡುವುದು ನರೇಟಿವ್ ಕಥೆಯನ್ನು ನಾಟಕವಾಗಿಸುವಾಗಿನ ಅಗತ್ಯತೆಯಾಗಿದೆ. ರೀತಿ ಕಥೆ ಹೇಳುವಾಗ ಸಣ್ಣ ಪುಟ್ಟ ದೃಶ್ಯಗಳು ಹಾಗೂ ಬೇಕಾದಷ್ಟು ಪ್ಲಾಶ್ಬ್ಯಾಕ್ಗಳನ್ನು ಬಳಸಿ ಗೊಂದಲವನ್ನು ಸೃಷ್ಟಿಸಲಾಗಿದೆ. ಒಂದೇ ಸ್ಥಿರವಾದ ಸೆಟ್ನಲ್ಲಿ ಹಲವಾರು ದೃಶ್ಯಗಳು ನಡೆಯುತ್ತವೆ.  ಅಂತಹ ಕೆಲವಾರು ದೃಶ್ಯಗಳಿಗೂ ಸೆಟ್ಗೂ ಸಂಬಂಧವೇ ಇರುವುದಿಲ್ಲ. ಕಥೆಯಲ್ಲೇ ಹಲವಾರು ಗೋಜಲುಗಳಿವೆ. ನಿರೂಪನೆಯಲ್ಲೂ ಕಥೆಯ ಸ್ವಷ್ಟತೆ ಇಲ್ಲ. ಒಬ್ಬರೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾತ್ರಗಳಾಗಿದ್ದರಿಂದ ಪ್ರೇಕ್ಷಕರಲ್ಲಿ ಇನ್ನೂ ಗೊಂದಲ ಹೆಚ್ಚಾಯಿತು. ಕೃಷ್ಣನ ಹೆಂಡತಿ ಯಮುನೆ ಹಾಗೂ ಅಜ್ಜನ ಪ್ರೇಯಸಿ ಶಾಂಭವಿ ಇಬ್ಬರೂ ಒಬ್ಬಳೆ ವ್ಯಕ್ತಿಯಾಗಿದ್ದರಿಂದ ಹಾಗೂ ಅದೇ ಪಾತ್ರದಾರಿ ನಾಟಕದಲ್ಲಿ ಹಲವಾರು ಬಾರಿ ರೂಪಕವಾಗಿಯೂ ಬರುವುದರಿಂದ ನೋಡುಗರಲ್ಲಿ ಯಾಕೋ ಕನ್ಪ್ಯೂಜ್. ದೀರ್ಘವೆನಿಸುವ ಪಿಂಡದಾನ ಆಚರಣೆ, ಸುಧೀರ್ಘವಾದ ಅಜ್ಜನ ಗೀತಾಪ್ರವಚನ, ಅನಗತ್ಯವೆನಿಸುವ ಭೋಜನ ಸಮಾರಾಧನೆ ದೃಶ್ಯಗಳು ಬೋರ್ ಹೊಡೆಸುತ್ತವೆ. ಆಗಾಗ ಸಾಂಕೇತಿಕವಾಗಿ ಬರುವ ಯಕ್ಷಗಾನ ಪಾತ್ರಗಳು, ನೃತ್ಯಗಳು ನೋಡಲು ಸೊಗಸನ್ನುಂಟುಮಾಡಿದರೂ ಅದ್ಯಾಕೋ ಕಥೆ ಮತ್ತು ಕಥೆಯ ನಿರೂಪನೆ ಸಾಮಾನ್ಯ ಪ್ರೇಕ್ಷಕನಿಗೆ ಕಬ್ಬಿಣದ ಕಡಲೆಯಾಗಿದೆ.  ಅಜ್ಜ ಹೇಳ್ತಾ ಇದ್ರು ನಾವು ಕೇಳ್ತಾ ಇದ್ವಿ ಅಂತ ಕೃಷ್ಣ ಪಾತ್ರದಾರಿ ಕವತಾರರು ನಾಟಕದಲ್ಲಿ  ಹೇಳುವ ಹಾಗೆಯೇ ಕವತಾರರು ಹೇಳ್ತಾನೇ ಇದ್ರು ಪ್ರೇಕ್ಷಕರು ಕೇಳ್ತಾನೇ ಇದ್ರು ಆದರೆ ಯಾವುದೂ ಅರ್ಥ ಆಗಲೇ ಇಲ್ಲ ಎಂಬುದು ನಾಟಕ ನೋಡಿದ ಬಹುತೇಕರ ಅಭಿಪ್ರಾಯವಾಗಿದೆ. 

          ಜನಿವಾರ ಕಿತ್ತಾಕಿ  ಬ್ರಾಹ್ಮಣ್ಯವನ್ನು ತೊರೆದು ಕಮ್ಯೂನಿಸ್ಟ್ ಪ್ರಭಾವಕ್ಕೊಳಗಾಗಿ ಬಾಂಬೆ ಸೇರಿದ  ಕೃಷ್ಣನ ಉಡುಪು ಮಾತ್ರ ಪಕ್ಕಾ ಸಾಂಪ್ರದಾಯಕವಾಗಿರುವುದು, ನಂತರ ವಿಧವೆಯನ್ನು ಮದುವೆಯಾಗುವ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಾಗಲೂ ಕೃಷ್ಣ ವಿಪ್ರ ವೇಷದಲ್ಲೇ ಇರುವುದು ಹಾಗೂ ದೃಶ್ಯಗಳು ಬದಲಾದರೂ ಕೃಷ್ಣನ ಬ್ರಾಹ್ಮಣ್ಯದ ವೇಷ ಕೊನೆಯವರೆಗೂ ಒಂದೇ ತರ ಇರುವುದು ವಿರೋಧಾಬಾಸವಾಗಿದೆ. ಸೂಕ್ತ ಬೆಳಕಿನ ಹಾಗೂ ದ್ವನಿವರ್ಧಕದ ವ್ಯವಸ್ಥೆಯಿಲ್ಲದ ಟೌನ್ಹಾಲ್ನಲ್ಲಿ ನಾಟಕ ಪ್ರದರ್ಶನವಾಗಿದ್ದರಿಂದ ಬೆಳಕೂ ಹಾಗೂ ದ್ವನಿ ನಾಟಕದ ದೃಶ್ಯಕ್ಕೆ ಪೂರಕವಾಗಿರಲಿಲ್ಲ. ರಾಮಕೃಷ್ಣ ಬೆಳ್ತೂರರ ಪ್ರಸಾದನ ಮಾತ್ರ ವ್ಯಕ್ತಿಗಳನ್ನು ಪಕ್ಕಾ ಪಾತ್ರಗಳಾಗಿಸಿತ್ತು. ಕೃಷ್ಣನ ಪಾತ್ರವನ್ನು ನಾಟಕದ ನಿರ್ದೇಶಕ ಕವತಾರರೇ ಅಭಿನಯಿಸಿದ್ದು ಪಾತ್ರದುದ್ದಕ್ಕೂ ಅತಿಯಾದ ಆತ್ಮವಿಶ್ವಾಸ ವ್ಯಕ್ತವಾಗಿದ್ದರಿಂದ ಪಾತ್ರಕ್ಕೆ ಸಂಪೂರ್ಣ ನ್ಯಾಯವದಗಿಸುವುದರಲ್ಲಿ ಕವತಾರರು ವಿಫಲರಾದರು. ಅಜ್ಜನ ಪಾತ್ರವನ್ನು ಆಹ್ವಾನಿಸಿಕೊಂಡು ನಟಿಸಿದ ಶ್ರೀಪತಿ ಮಂಜಿನಬೈಲ್ರವರ ಸಹಜಾಭಿನಯ ಗಮನಾರ್ಹವಾಗಿತ್ತು. ಶಾಂಭವಿ ಹಾಗೂ ಯಮುನಾ ಪಾತ್ರದಾರಿಯಾದ ಭರತನಾಟ್ಯ ಕಲಾವಿದೆ ವೀಣಾರಾವ್ ನಟನೆ ಗಮನಸೆಳೆಯಿತು.
          ಒಟ್ಟಾರೆ ಕಥೆ ನಿದೇಶಕರ ಹಿಡಿತಕ್ಕೆ ಸಿಕ್ಕಿಲ್ಲವೆನಿಸುತ್ತದೆ. ಆದ್ದರಿಂದ ಅದೂ ಪ್ರೇಕ್ಷಕರ ಗ್ರಹಿಕೆಗೂ ನಿಲುಕಲು ಸಾಧ್ಯವಾಗಿಲ್ಲ. ವ್ಯಕ್ತಿಗತ ಅನುಭವದ ನಿರೂಪನಾ ಪ್ರಧಾನವಾದ ಕಥೆಯೊಂದನ್ನು ಇಟ್ಟುಕೊಂಡು ಅದನ್ನು ಇಂಪ್ರೂವೈಜ್ ಮಾಡುತ್ತಾ ನಾಟಕವಾಗಿಸುವ ಪರಿಕಲ್ಪನೆ  ವಿಶಿಷ್ಟವಾದರೂ ನಾಟಕದಲ್ಲಿ ವರ್ಕಔಟ್ ಆಗಿಲ್ಲ. ಇದಕ್ಕೆ ಪ್ರಾದೇಶಿಕ ಭಿನ್ನತೆ, ಸಾಂಸ್ಕೃತಿಕ ಆಚರಣೆಯ ವಿಭಿನ್ನತೆ ಹಾಗೂ ನಿರೂಪನೆಯಲ್ಲಿರುವ ವಿಲಕ್ಷಣತೆಯೂ ಕಾರಣವಾಗಿದೆ.          
          ನಾಟಕದ ವಿಶೇಷವೆಂದರೆ ನಾಟಕದ ಮೂಲ ಕಥೆಗಾರ, ನಿರ್ದೇಶಕ ಹಾಗೂ ಬಹುತೇಕ ನಟರು ಎಲ್ಲರೂ ಬ್ರಾಹ್ಮಣರೇ. ಬಹುತೇಕರು ದಕ್ಷಿಣ ಕನ್ನಡ ಮೂಲದವರೇ. ಅಂದರೆ ಇದು ಒಂದು ರೀತಿಯಲ್ಲಿ ಅಗ್ರಹಾರದ ನಾಟಕ. ಆದರೆ ಎಲ್ಲಾ ಬ್ರಾಹ್ಮಣ ವರ್ಗಸಂಜಾತರಲ್ಲೂ ಸಹ ಮಾನವೀಯ ಅಂಶಗಳಿವೆ, ಶುಷ್ಕ ಸಂಪ್ರದಾಯವನ್ನು ವಿರೋಧಿಸುವ ಗುಣವಿದೆ. ಆದ್ದರಿಂದ ಇಂತಹ  ವೈದಿಕಾಚರಣೆಯನ್ನು ಪ್ರಶ್ನಿಸುವಂತಹ, ಬ್ರಾಹ್ಮಣ್ಯದ ದೌರ್ಬಲ್ಯಗಳನ್ನು ಎತ್ತಿ ತೋರುವಂತಹ  ನಾಟಕ ಪ್ರದರ್ಶನಗೊಳ್ಳಲು ಸಾಧ್ಯವಾಗಿದೆ. ಆದರೆ.. ಅದ್ಯಾಕೋ ವೈದಿಕಶಾಹಿಯನ್ನು ವಿರೋಧಿಸುತ್ತಲೇ ಕೊನೆಗೆ ಪುರೋಹಿತಶಾಹಿಯನ್ನೇ ಎತ್ತಿಹಿಡಿಯುವಂತಹ ಪರಿಕಲ್ಪನೆ ಮಾತ್ರ ನಾಟಕದ ಮೂಲಭೂತ ವಿಪರ್ಯಾಸವಾಗಿದೆ. ವ್ಯಕ್ತಿ ಬಾಹ್ಮಣ್ಯವನ್ನೂ ಬಿಟ್ಟರೂ ಬ್ರಾಹ್ಮಣ್ಯ ವ್ಯಕ್ತಿಯನ್ನು ಬಿಡುವುದಿಲ್ಲ ಎನ್ನುವುದಕ್ಕೆ ಪೂರಕವಾಗಿ ನಾಟಕ ಮೂಡಿಬಂದಿದೆ. 


                                                                    -ಶಶಿಕಾಂತ ಯಡಹಳ್ಳಿ


    


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ