ಶನಿವಾರ, ಡಿಸೆಂಬರ್ 14, 2013

ಸಮಾಜದ ಅವ್ಯವಸ್ಥೆ ಅನಾವರಣಗೊಳಿಸುವ “ನಮ್ಮೊಳಗೊಬ್ಬ ನಾಜೂಕಯ್ಯ” :



ನಾಟಕ ವಿಮರ್ಶೆ :   


        ಹಲವಾರು ವರ್ಷಗಳ ನಂತರ ನಾಟಕವೊಂದಕ್ಕೆ ರವೀಂದ್ರ ಕಲಾಕ್ಷೇತ್ರ ಪೂರ್ತಿಯಾಗಿ ಭರ್ತಿಯಾಗಿ ಜನ ನೆಲದಲ್ಲಿ ಕುಳಿತು ನಾಟಕನೋಡುವಂತಾಗಿದ್ದು ನಿಜಕ್ಕೂ ಸಂತಸದ ಸಂಗತಿ. ಪವಾಡ ಹೇಗಾಯಿತು?  ದಶಕಗಳ ನಂತರ ನಾಟಕ ಪ್ರದರ್ಶನಗೊಳ್ಳುತ್ತಿರುವುದು, ಟಿ.ಎನ್.ಸೀತಾರಾಂರವರೇ ಬಹುದಿನಗಳ ನಂತರ ನಾಟಕದಲ್ಲಿ ಬಣ್ಣ ಹಚ್ಚಿ ನಟಿಸುತ್ತಿರುವುದು ಹಾಗೂ ಅವರ ಟಿವಿ ದಾರಾವಾಹಿಯ ಜನಪ್ರೀಯತೆ ಜನರನ್ನು ಕಲಾಕ್ಷೇತ್ರದತ್ತ ಆಕರ್ಷಿಸಿತ್ತು. ನಾಟಕದಲ್ಲಿ ಅಭಿನಯಿಸಿದ ಬಹುತೇಕ ನಟರು ಧಾರಾವಾಹಿಯ ಜನಪ್ರೀಯ ನಟರುಗಳೇ ಎಂಬುದು ಇನ್ನೊಂದು ವಿಶೇಷ. ಟಿ.ಎನ್.ಸೀತಾರಾಂರವರೆ ರಚಿಸಿದ ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವನ್ನು ಆರ್.ನಾಗೇಶರವರು 18ವರ್ಷಗಳ ಹಿಂದೆ ನಟರಂಗ ತಂಡಕ್ಕೆ ನಿರ್ದೇಶಿಸಿದ್ದರು.  ಈಗ ಮತ್ತೆ ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ ರಂಗೋತ್ಸವದಲ್ಲಿ 2013, ಡಿಸೆಂಬರ್ 6 ರಂದು ನಮ್ಮೊಳಗೊಬ್ಬ ನಾಜೂಕಯ್ಯ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರಲ್ಲಿ ಒಂದು ರೀತಿಯ ಸಂಚಲನವನ್ನುಂಟುಮಾಡಿತು.

    
        ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಆತ ಪ್ರಸಾದ್. ಬಿಇ ಪದವೀಧರ. ರೆವಿನ್ಯೂ ಡಿಪಾರ್ಟಮೆಂಟನಲ್ಲಿ ಕೆಲಸ ಮಾಡುತ್ತಿದ್ದವನು. ಅಲ್ಲಿಯ ಭ್ರಷ್ಟವ್ಯವಸ್ಥೆಗೆ ಹೊಂದಿಕೊಳ್ಳಲಾರದೆ ಕೆಲಸ ಬಿಟ್ಟು ಸಾಲ ಮಾಡಿ ಚಿಕ್ಕ ಪ್ಯಾಕ್ಟರಿಯೊಂದನ್ನು ಆರಂಭಿಸುತ್ತಾನೆ. ಜೊತೆಗೆ ಲೇಖಕನೂ ಆಗಿದ್ದರಿಂದ ಪತ್ರಿಕೆಯಲ್ಲಿ ಚಬಲಾನಿ ಎಂಬ ಕಾರ್ಪೊರೇಟ್ ಕಂಪನಿಯ ಅವ್ಯವಹಾರಗಳ ಬಗ್ಗೆ ಲೇಖನ ಬರೆದು ಚಬಲಾನಿಯ ಕೋಪಕ್ಕೆ ಕಾರಣನಾಗುತ್ತಾನೆ. ಆತನ ಹೆಂಡತಿ ಮಾಲತಿ ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ನಟಿ. ಒಂದು ಸಿನೆಮಾದಲ್ಲಿ ನಟಿಸಿ ಹಲವು ಜಾಹಿರಾತುಗಳಿಗೆ ಮಾಡೆಲ್ ಆಗಿರುತ್ತಾಳೆ. ಆಕೆ ಕೆಲಸಮಾಡುವ ಶಿಕ್ಷಣ ಸಂಸ್ಥೆಯ ನಿರ್ದೇಶಕ ನಾರಾಯಣಸ್ವಾಮಿ ಒಬ್ಬ ಕಮಿಶನ್ ಎಜೆಂಟ್ಆಗಿಯೂ ಕೆಲಸಮಾಡುತ್ತಿರುತ್ತಾನೆ. ಪ್ರಸಾದನ ತಂಗಿಗೆ ಮದುವೆ ಫಿಕ್ಸ್ ಆಗುತ್ತದೆ. ಜಮೀನು ಮಾರಿ ಆಕೆಯ ಮದುವೆ ಮಾಡಬೇಕೆಂದರೆ ಜಮೀನು ಮಾಡಿದ ಸಾಲಕ್ಕೆ ಬ್ಯಾಂಕಿನಲ್ಲಿ ಒತ್ತೆ ಇಡಲಾಗಿದೆ. ೩೦ ಲಕ್ಷ ಸಾಲಕ್ಕೆ ಬಡ್ಡಿ ಬೆಳೆದು ೭೦ಲಕ್ಷ ಆಗಿರುತ್ತದೆ. ಪ್ರಸಾದ್ ಕಂಡು ಹಿಡಿದ ಎಲೆಕ್ಟ್ರಾನಿಕ್ ಡಿವೈಸ್ನ್ನು ರಕ್ಷಣಾ ಇಲಾಖೆಯ ಡಿಆರ್ಇಸಿ ಅಪ್ರೂವ್ ಮಾಡಿ ಸಪ್ಲೈ ಆರ್ಡರ್ ಕೊಡುತ್ತದೆ. ತನ್ನ ಕಷ್ಟಗಳೆಲ್ಲಾ ತೀರಿದವೆಂದು ಗಂಡ ಹೆಂಡತಿ ಕನಸು ಕಟ್ಟುತ್ತಿರುವಾಗಲೇ ಹಿಂದೆ ಕೆಲಸ ಮಾಡಿದ ರೆವಿನ್ಯೂ ಇಲಾಖೆಯಿಂದ ಕ್ಲಿಯರನ್ಸ ಬೇಕೆಂದು ಡಿಆರ್ಇಸಿ ಆಜ್ಞಾಪಿಸುತ್ತದೆ. ಕ್ಲಿಯರನ್ಸ ಸೆರ್ಟಿಫಿಕೆಟ್ ಕೊಡದ ರೆವಿನ್ಯೂ ಇಲಾಖೆಯ ನಿರ್ದೇಶಕನು ಚಬಲಾನಿಯ ಆಶಯದಂತೆ ಪ್ರಸಾದನಿಗೆ ಸತಾಯಿಸುತ್ತಾನೆ. ತುಂಬಾ ಪ್ರಾಮಾಣಿಕ ವ್ಯಕ್ತಿಯಾದ ಪ್ರಸಾದ ಇತ್ತ ಕ್ಲಿಯರನ್ಸ ಸಿಗದೆ, ಅತ್ತ ಸಪ್ಲೈ ಆರ್ಡರ್ ಸಿಗದೆ, ಬ್ಯಾಂಕಿನ ಸಾಲ ಹಾಗೂ ಮಾರವಾಡಿ ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಜರ್ಜರಿತನಾಗುತ್ತಾನೆ. ಪ್ಯಾಕ್ಟರಿ ಕೆಲಸಗಾರರು ಸಂಬಳಕ್ಕೆ ಒತ್ತಾಯಿಸುತ್ತಾರೆ, ಆತನ ತಾಯಿ ಮಗಳ ಮದುವೆಗೆ ಆಗ್ರಹಿಸುತ್ತಾಳೆ. ಹೆಂಡತಿಯ ಸಂಬಳ ಮನೆ ಖರ್ಚಿಗೆ ಸಾಲದು. ಹೀಗೆ.. ತುಂಬಾ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡ ಪ್ರಸಾದ್ ಅದರಿಂದ ಹೊರಬರಲು ತನ್ನ ಪ್ರಾಮಾಣಿಕತೆಯನ್ನೇ ತೊರೆಯುತ್ತಾನೆ. ನಾರಾಯಣಸ್ವಾಮಿ, ರೆವಿನ್ಯೂ ಡೈರೆಕ್ಟರ್, ಚಬಲಾನಿ ಮುಂತಾದ ಭ್ರಷ್ಟರ ಜೊತೆಗೆ ರಾಜಿಯಾಗುತ್ತಾನೆ. ಕೊನೆಗೆ ತನ್ನ ಪ್ರೊಡಕ್ಟ ಮಾರಾಟಕ್ಕೆ ದಾರಿ ಸುಗಮವಾಗಲು ತನ್ನ ಹೆಂಡತಿಯನ್ನೇ ರಾಜಕಾರಣಿಯ ಜೊತೆ ಕಳುಹಿಸುವ ನೀಚ ಕೆಲಸಕ್ಕೂ ಮುಂದಾಗುತ್ತಾನೆ. ಆದರೆ ಹೆಂಡತಿ ಮಾಲತಿಯ ಆಸೆಯಂತೆ ಪ್ರಸಾದ ಎಲ್ಲಾ ಅನೈತಿಕ ಹಾದಿಯನ್ನು ತೊರೆದು ಹೊಸ ಬದುಕನ್ನು ಹೊಸ ಕನಸನ್ನು  ಕಟ್ಟಲು ನಿರ್ಧರಿಸುವ ಮೂಲಕ ನಾಟಕ ಕೊನೆಯಾಗುತ್ತದೆ.


          ಇಂತಹ ಕ್ಲಿಷ್ಟಕರವಾದ, ಗಂಭೀರ ವಿಷಯದ ಕಥೆಯನ್ನು ಆರ್.ನಾಗೇಶರವರು ನಾಟಕೀಯವಾಗಿ ನಿರೂಪಿಸಿದ ರೀತಿ ಮಾತ್ರ ತುಂಬಾ ಸೊಗಸಾಗಿದೆ. ಅದಕ್ಕೆ ಟಿ.ಎನ್.ಸೀತಾರಾಂರವರು ಬರೆದ ನವಿರಾದ ಹಾಸ್ಯಮಯ ಸಂಭಾಷಣೆಗಳು ಪೂರಕವಾಗಿ ಸ್ಪಂದಿಸಿ ಇಡೀ ನಾಟಕ ಎಲ್ಲೂ ಬೋರಾಗದಂತೆ ಮೂಡಿಬಂದಿದೆ. ನಾಟಕದ ಪಂಚ್ ಡೈಲಾಗ್ಗಳು ಪ್ರೇಕ್ಷಕರನ್ನು ನಗಿಸುತ್ತವೆ ಜೊತೆಗೆ ವಿನೋದಮಯ ಸಂಭಾಷಣೆಗಳ ಅಂತರಂಗದಲ್ಲಿರುವ ವಿಷಾದವು ನೋಡುಗರನ್ನು ವಿಚಾರಕ್ಕೆ ಪ್ರೇರೇಪಿಸುತ್ತದೆ. ಪೊಟೋಗ್ರಾಫರ್ ಮಹದೇವಮೂರ್ತಿ ಮತ್ತು ಪ್ರಸಾದ ಎರಡೂ ಪಾತ್ರಗಳ ಸಂಭಾಷಣೆಯಲ್ಲಿರುವ ವಿಡಂಬನೆ ಪ್ರಸ್ತುತ ಶೋಷಕ ವ್ಯವಸ್ಥೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿದೆ

          ಪ್ರಾಮಾಣಿಕ ವ್ಯಕ್ತಿಯನ್ನೂ ಶೋಷಕ ವ್ಯವಸ್ಥೆ ಹೇಗೆ ಬಲೆ ಬೀಸಿ, ಸಂಕಷ್ಟಕ್ಕೆ ಸಿಲುಕಿಸಿ, ಭ್ರಷ್ಟಗೊಳಿಸಿ ಆಪೋಷಣ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಬಲು ಮಾರ್ಮಿಕವಾಗಿ ಹೇಳುವ ... ನಾಜೂಕಯ್ಯ ನಾಟಕದ ಪರಿಕಲ್ಪನೆ ನಿಜಕ್ಕೂ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾದದ್ದು. ಕಥಾ ನಿರೂಪಣೆ, ದೃಶ್ಯ ಜೋಡಣೆ ಹಾಗೂ ಸ್ವಾರಸ್ಯಕರ ಸಂಭಾಷಣೆಗಳು ನಾಟಕದ ಯಶಸ್ಸಿಗೆ ಕಾರಣವಾಗಿವೆ.  ಕಾರ್ಪೊರೇಟ್ ಕಂಪನಿಗಳ ಲಾಭಕೋರತನ, ಅಧಿಕಾರಿಶಾಹಿಗಳ ಭ್ರಷ್ಟತನ, ದಲ್ಲಾಳಿ ವರ್ಗಗಳ ತಲೆಹಿಡುಕತನ ಹಾಗೂ ಎಲ್ಲಾ ಶೋಷಕರಿಗೂ ಬೆಂಗಾವಲಾಗಿ ನಿಂತ ರಾಜಕಾರಣಿಗಳ ಸ್ವಾರ್ಥಿತನ..... ಹೀಗೆ ನಮ್ಮ  ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕರಾಳ ಮುಖಗಳನ್ನು ರಂಗದಂಗಳದಲ್ಲಿ ತೆರೆದು ತೋರಿಸುವಲ್ಲಿ     ... ನಾಜೂಕಯ್ಯ ನಾಟಕವು ಯಶಸ್ವಿಯಾಗಿದೆ. ಅಸಮಾನ ಸಮಾಜದ ಅಂತರಂಗವನ್ನು ಬಹಿರಂಗಗೊಳಿಸುವಂತಹ ಮಾದರಿಯ ನಾಟಕಗಳು ಜನಜಾಗೃತಿಯ ಭಾಗವಾಗಿ ಪ್ರಸ್ತುತಗೊಳ್ಳುವುದು ಇಂದಿನ ಅಗತ್ಯವಾಗಿದೆ



         ಅದೆಷ್ಟೇ ಆದರ್ಶಗಳನ್ನು ಮೈಗೂಡಿಸಿಕೊಂಡರೂ ವ್ಯಕ್ತಿ ತಾನು ಮುಳುಗುತ್ತಿರುವಾಗ ಹೇಗಾದರೂ ಮಾಡಿ ಬದುಕಲು ಹೇಗೆ ವ್ಯತಿರಿಕ್ತ ಪರಿಸ್ಥಿತಿಯೊಂದಿಗೆ ರಾಜಿ ಆಗುತ್ತಾನೆ, ಹೇಗೆ ಪ್ರತಿಯೊಬ್ಬ ವ್ಯಕ್ತಿಯ ಬದುಕು ಮತ್ತು ಬರಹ ಬಾಹ್ಯ ಒತ್ತಡಕ್ಕೊಳಗಾಗಿ ಬೇರೆ ಬೇರೆಯಾಗುತ್ತದೆ, ಅದು ಹೇಗೆ ವ್ಯಕ್ತಿ ತಾನೇ ನಂಬಿದ ಸಿದ್ದಾಂತಗಳನ್ನು ಗಾಳಿಗೆ ತೂರಿ ಶತಾಯಗತಾಯ ವಿರೋಧಿಸಿದ ದುಷ್ಟ ಶಕ್ತಿಗಳ ಜೊತೆಗೆ ಕೈಜೋಡಿಸುತ್ತಾನೆ.... ಎನ್ನುವ ವಾಸ್ತವ ಸಂಗತಿಗಳನ್ನು ನಾಟಕ ಹೇಳುತ್ತದೆ. ಜೊತೆಗೆ ಪ್ರತಿಯೊಬ್ಬ ಮನುಷ್ಯನೊಳಗೂ ಒಬ್ಬ ನಾಜೂಕಯ್ಯ ಇದ್ದೇ ಇರುತ್ತಾನೆ. ಬದುಕಿನ ನಿರ್ಣಾಯಕ ಸಂದರ್ಭದಲ್ಲಿ ರಾಜಿಕೋರತನ  ಮುಂಚೂಣಿಯಲ್ಲಿ ಬರುತ್ತದೆ ಎನ್ನುವುದನ್ನು ಮನೋವೈಜ್ಞಾನಿಕವಾಗಿ ನಮ್ಮೊಳಗೊಬ್ಬ ನಾಜೂಕಯ್ಯ ನಾಟಕದಾದ್ಯಂತ ವಿಶ್ಲೇಷಿಸುತ್ತದೆ. ನಾಟಕದ ಬಹುತೇಕ ಪಾತ್ರಗಳು ನಾಜೂಕಯ್ಯಗಳೇ ಆಗಿವೆ. ಅಧಿಕಾರಿ, ಮಧ್ಯವರ್ತಿ, ಉದ್ಯಮಿ, ರಾಜಕಾರಣಿ ಎಲ್ಲರೂ ನಾಜೂಕಾಗಿ ಮಾತಾಡುತ್ತಲೇ ತಮ್ಮ ಸ್ವಾರ್ಥವನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ನಾಟಕದ ಹೆಸರು ಅತ್ಯಂತ ಸೂಕ್ತವಾಗಿದೆ. ಜಾಗತೀಕರಣದ ಸಾಮಾಜಿಕ ವ್ಯವಸ್ಥೆಯೊಳಗಿನ ವ್ಯಕ್ತಿಗಳ ಮನಸ್ಥಿತಿಗೆ ಕನ್ನಡಿಯಾಗಿದೆ.

         ನಾಟಕಗಳಲ್ಲಿ ನಿಜವಾಗಿ ವಿಡಂಬಣೆಗಳಿದ್ದರೆ ಹೀಗಿರಬೇಕು ಎನ್ನುವಷ್ಟು ಸಂಭಾಷಣೆಗಳು ಸಶಕ್ತವಾಗಿ ಮೂಡಿಬಂದಿವೆ. ಜನಪ್ರೀಯ ಹಾಸ್ಯ ಚುಟುಕುಗಳನ್ನೇ ಬಳಸಿಕೊಂಡರೂ ಸಹ ಎಲ್ಲೂ ಹಾಸ್ಯಕ್ಕಾಗಿ ಹಾಸ್ಯವಾಗದೆ ಕಥಾನಕದಲ್ಲಿ ವಿಡಂಬಣೆ ಹಾಸುಹೊಕ್ಕಾದಂತನಿಸುತ್ತದೆ. ಉದಾಹರಣೆಗೆ. ಕಾಲಕಳೆದಂತೆ ಮನುಷ್ಯರ ಗ್ಲಾಮರ್ ಕಡಿಮೆಯಾದಂತೆ ಬಟ್ಟೆಗಳ ಗ್ಲಾಮರ್ ಹೆಚ್ಚಾಗುತ್ತದೆ, ನನಗೂ ಕೆಲಸಾ ಬಿಡೋಕೆ ಇಷ್ಟಾ ಆದರೆ ಬಿಡೋದಕ್ಕೆ ನನ್ನ ಹತ್ತಿರ ಕೆಲಸಾನೇ ಇಲ್ಲವಲ್ಲ ಇಂತಹ ಹಲವಾರು ಪಂಚ್ ಸಂಭಾಷಣೆಗಳು ವಿನೋದವನ್ನೂ ಜೊತೆಗೆ ವಿಷಾದವನ್ನೂ ಜೊತೆಜೊತೆಗೆ ಕಟ್ಟಿಕೊಟ್ಟಿರುವುದು ಟಿ.ಎನ್.ಸೀತಾರಾಂರವರ ಬರವಣಿಗೆಯ ತೀವ್ರತೆಗೆ ಸಾಕ್ಷಿಯಾಗಿದೆ. ಇಡೀ ಸಾಮಾಜಿಕ ವಿಪರ್ಯಾಸಗಳನ್ನು ವಿಡಂಬಣೆ ಮಾಡಲೆಂದೇ ಕಥಾನಕಕ್ಕೆ ಅತ್ಯಗತ್ಯವಿಲ್ಲದಿದ್ದರೂ ಪೊಟೋಗ್ರಾಫರ್ ಪಾತ್ರವನ್ನು ಸೃಷ್ಟಿಸಲಾಗಿದೆ. ನಗಣ್ಯಪಾತ್ರ ನಾಟಕಕ್ಕೆ ಅಗಣ್ಯವಾದ ಆಯಾಮವನ್ನು ದೊರಕಿಸಿಕೊಟ್ಟಿದೆ. ಇದೊಂದು ಸಂಭಾಷಣಾ ಪ್ರಧಾನ ನಾಟಕವಾಗಿದ್ದು ಒಂದು ರೀತಿಯಲ್ಲಿ ಟಿವಿ ಸೀರಿಯಲ್ ಮಾದರಿಯಲ್ಲೇ ನಾಟಕದ ಕಥಾನಕ ನಡೆಯುತ್ತಾ ಹೋಗುತ್ತದೆ. ಹತ್ತಾರು ಎಪಿಸೋಡ್ಗಳನ್ನು ರಂಗದಂಗಳದಲ್ಲಿ ನಾಟಕ ರೂಪದಲ್ಲಿ ಪ್ರಸ್ತುತಪಡಿಸಿದಂತೆ ನೋಡುಗರಿಗೆ ಭಾಸವಾಗುತ್ತದೆ

    ನಾಟಕದೊಳಗಿನ ಪ್ರಮುಖವಾದ ಪ್ರಸಾದ್ ಪಾತ್ರದಲ್ಲಿ ಟಿ.ಎನ್.ಸೀತಾರಾಂ ನಟಿಸಿದ್ದಾರೆ ಎಂದು ಅನ್ನಿಸುವುದೇ ಇಲ್ಲಾ. ಅದೇ ಮುಕ್ತ ಮುಕ್ತದ ಸಿಎಸ್ಪಿ ನಟನೆ ಇಲ್ಲೂ ಮುಂದುವರೆದಿದೆ. ಭಾವನೆಗಳಿಗಂತೂ ಮುಖದಲ್ಲಿ ಅವಕಾಶವೇ ಇಲ್ಲ. ಮಾತಿನ ವೇಗದ ನಡುವೆ ಪಾಜ್ಗಳು ಲೆಕ್ಕಕ್ಕೆ ಇಲ್ಲ. ರಸ್ತೆಯಲ್ಲಿ ಹಂಪ್ಗಳು ಬಂದಂತೆ ಆಗಾಗ ಸಂಭಾಷಣೆಯಲ್ಲಿ ಅಡೆತಡೆ ಉಂಟಾಗಿ ಡೈಲಾಗ್ಗಳು ಒಂದೊಂದೇ ಶಬ್ದಗಳಲ್ಲಿ ಹೊರಬಂದಿರುವುದು ಕೇಳುಗರಿಗೆ ಸರಿಎನ್ನಿಸಲಿಲ್ಲ.  ಸೀತಾರಾಂರವರು ಕೆಲವೊಮ್ಮೆ ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿರುತ್ತಾರೆ ಇಲ್ಲವೇ ಮುಂದಕ್ಕೆ. ನಾಟಕದ ನಟನೆಗೆ ತಮ್ಮನ್ನು  ತಾವು ಮುಕ್ತವಾಗಿ ತೆರೆದುಕೊಳ್ಳಲೇ ಇಲ್ಲಾ. ಟಿವಿಸೀರಿಯಲ್ ಅಭಿನಯ ಕ್ಲೋಸಅಪ್ಗಳಿಗೆ ಹೇಳಿಮಾಡಿಸಿದ್ದಾದರೆ ನಾಟಕದ ಅಭಿನಯ ಎಕ್ಸ್ಟ್ರೀಮ್ ಲಾಂಗ್ಶಾಟ್ನಲ್ಲೇ ನಡೆಯುತ್ತದೆ. ಜೊತೆಗೆ ನಾಟಕ ದೇಹಭಾಷೆಯನ್ನು ಕೇಳುತ್ತದೆ. ಆದರೆ ಸೀತಾರಾಂ ಆಂಗಿಕ ಭಾಷೆಗಿಂತ ಸಂಭಾಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ತಾಲಿಂ ಕೊರತೆಯಿಂದಲೋ ಏನೋ ಆಗಾಗ ಸಂಭಾಷಣೆ ಒಪ್ಪಿಸುವುದರಲ್ಲೂ ತಡವರಿಸಿದ್ದಾರೆ. ಹೀಗಾಗಿ ನಾಟಕದಲ್ಲಿ ನಾಟಕಕಾರನಾಗಿ ಹಾಗೂ ಸಂಭಾಷಣೆಕಾರರಾಗಿ ಗೆದ್ದ ಸೀತಾರಾಂ ನಟನೆಯಲ್ಲಿ ಗೆಲ್ಲಲಾಗಿಲ್ಲ. ಅವರಿಗಿಂತ ತುಸು ಹೆಚ್ಚೆ ಎನ್ನುವಂತೆ ಪೊಟೋಗ್ರಾಫರ್ ಪಾತ್ರದಲ್ಲಿ ವೆಂಕಟರಾಂ ಅದ್ಬುತವಾಗಿ ನಟಿಸಿದ್ದಾರೆ. ವೆಂಕಟರಾಂರವರ ಟೈಂಸೆನ್ಸ ದೊಡ್ಡದು, ಅವರು ಡೈಲಾಗ್ಗಳನ್ನು ಪಂಚ್ ಮಾಡುವ ರೀತಿ ನೋಡುಗರಿಗೆ ಕಚಗುಳಿ ಇಡುವಂತಿದೆ. ಉಳಿದೆಲ್ಲಾ ಪಾತ್ರದಾರಿಗಳೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ ಕಪ್ಪಣ್ಣನವರನ್ನು ಹೊರತುಪಡಿಸಿ. ಉಪಮುಖ್ಯಮಂತ್ರಿಯಾಗಿ ನಟಿಸಿದ  ಕಪ್ಪಣ್ಣ ದೈತ್ಯ ಸಂಘಟಕ ಆದರೆ ನಟನಾಗಿ ತುಂಬಾ ದುರ್ಬಲ. ಆಗಾಗ ಮಾತನ್ನು ತಪ್ಪುವುದು ಮತ್ತೆ ಸಾವರಿಸಿಕೊಳ್ಳುವುದು, ತನ್ನ ಜೊತೆಯಲ್ಲಿ ತರಬೇಕಾದ ಪೆನ್ನು ಪೇಪರ್ ಪ್ರಪರ್ಟಿಗಳನ್ನೇ ಮರೆತು ಬಂದು ತಡಕಾಡುವುದು... ಆಭಾಸಕಾರಿ ಎಣಿಸಿದವು. ನಾಟಕದ ನಿರ್ದೇಶಕ ಆರ್.ನಾಗೇಶ್ ಎಂತಹ ಅದ್ಬುತ ನಿರ್ದೇಶಕರೆಂದರೆ ಕಪ್ಪಣ್ಣ ಎನ್ನುವ ರಂಗರಾಜಕೀಯ ಪ್ರವೀಣನಿಗೆ ಕುತಂತ್ರಿ ಮಂತ್ರಿಯ ಪಾತ್ರವನ್ನೇ ಕೊಟ್ಟು ವ್ಯಕ್ತಿ ಹಾಗೂ ಪಾತ್ರದ ಗುಣಧರ್ಮಗಳನ್ನು ಸಮೀಕರಿಸಿಬಿಟ್ಟಿದ್ದಾರೆ


          ಪ್ರೇಕ್ಷಕರನ್ನು ಆಕ್ರೋಷಿತರನ್ನಾಗಿ ಮಾಡಿದ್ದು ದ್ವನಿವರ್ಧಕ ವ್ಯವಸ್ಥೆ ಮತ್ತು ಕಲಾವಿದರಲ್ಲಿ ವೈಸ್ ಥ್ರೋ ಮಾಡುವ ಎನರ್ಜಿ ಇಲ್ಲದೇ ಇರುವುದು. ಆಗಾಗ ಮೈಕ್ ಎಂದು ಜನ ಕೂಗುತ್ತಲೇ ಇದ್ದರು. ಮುಂದಿನ ಸೀಟಿನವರನ್ನು ಹೊರತು ಪಡಿಸಿದರೆ ಬಹುತೇಕ ಪ್ರೇಕ್ಷಕರಿಗೆ ನಟರ ಮಾತುಗಳು ಕೇಳಿಸುತ್ತಲೇ ಇರಲಿಲ್ಲ. ಇದೇ ದ್ವನಿವರ್ಧಕ ವ್ಯವಸ್ಥೆಯಲ್ಲಿ ದಿನವೂ ನಾಟಕಗಳಾಗುತ್ತವೆ, ಡೈಲಾಗ್ಗಳೂ ಪ್ರತಿಯೊಬ್ಬರನ್ನೂ ಮುಟ್ಟುತ್ತವೆ. ಆದರೆ ನಾಟಕದಲ್ಲಿ ಮಾತ್ರ ಯಾಕೆ ಹೀಗಾಯಿತು?  ಇದರಲ್ಲಿ ಇನ್ನೂ ಒಂದು ಗುಟ್ಟಿದೆ. ಅದು ಕಿರುತೆರೆಯ ಕಲಾವಿದರಿಗೆ ಗಟ್ಟಿಯಾಗಿ ಮಾತಾಡಲೂ ಸಾಧ್ಯವಾಗದೇ ಹೋದದ್ದು. ಕಿರುತೆರೆಯಲ್ಲಿ ಮುಂದಿರುವ ಕ್ಯಾಮಾರಾದಲ್ಲಿ ರೆಕಾರ್ಡ ಆಗಲು ಬೇಕಾದಷ್ಟು ಮಾತ್ರ ಮಾತಾಡಿದರೆ ಸಾಕು. ಆದರೆ ನಾಟಕದಲ್ಲಿ ಸಾವಿರಾರು ಜನರಿಗೆ ಕೇಳುವಂತೆ ಮಾತಾಡಬೇಕು. ದ್ವನಿವರ್ಧಕ ವ್ಯವಸ್ಥೆ ಇಲ್ಲದಿದ್ದರೂ ಗಟ್ಟಿಯಾಗಿ ಸಂಭಾಷಣೆ ಹೇಳುವುದನ್ನು ಕಲಾವಿದರು ರೂಢಿಸಿಕೊಳ್ಳಬೇಕು. ಶರೀರದ ಜೊತೆಗೆ ಶಾರೀರವೂ ಇಲ್ಲಿ ಅಷ್ಟೇ ಅಗತ್ಯವಾಗಿದೆ. ಕಿರುತೆರೆಯಲ್ಲಾದರೆ ಯಾವಾಗ ಬೇಕಾದರೂ ಯಾರದೋ ಅಭಿನಯಕ್ಕೆ ಇನ್ಯಾರದೋ ದ್ವನಿಯನ್ನು ಡಬ್ಬಿಂಗ್ ತಂತ್ರಜ್ಞಾನದಿಂದ ಕಸಿ ಮಾಡಬಹುದು. ಆದರೆ ನಾಟಕದಲ್ಲಿ ಹಾಗೆ ಮಾಡಲು ಬರುವುದಿಲ್ಲ. ಒಟ್ಟಾರೆಯಾಗಿ ನಾಟಕದಲ್ಲಿ ಅಭಿನಯಿಸಿದ ಬಹುತೇಕ ಕಿರುತೆರೆಯ ಕಲಾವಿದರಿಗೆ ಕಿರುತೆರೆ ಮತ್ತು ನಾಟಕ ಎರಡೂ ಪ್ರಕಾರಗಳಲ್ಲಿ ಅಭಿನಯ ಮತ್ತು ಸಂಭಾಷಣೆಯ ಕ್ರಮ ಬೇರೆ ಬೇರೆ ಎಂಬುದನ್ನು ತಿಳಿಸಬೇಕಿತ್ತು. ಹಾಗೆ ತಿಳಿಸಬಹುದಾದ ಏಕೈಕ ವ್ಯಕ್ತಿ ನಾಟಕದ ನಿರ್ದೇಶಕ ಆರ್. ನಾಗೇಶ್ರವರು ದಿವಂಗತರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಟಿ.ಎನ್.ಸೀತಾರಾಂರವರೇ ಪ್ರದರ್ಶನವನ್ನು ಮರುನಿರ್ದೇಶಿಸಿದ್ದಾರೆ. ಎಷ್ಟೇ ಆದರೂ ಸೀತಾರಾಂರವರೀಗ ಕಿರುತೆರೆಯ ಹಿರಿಯ ತಲೆ. ಆದ್ದರಿಂದ ಇಡೀ ನಾಟಕ ಕಿರುತೆರೆ ಮಾದರಿಯಲ್ಲೇ ಮೂಡಿಬಂದಿದೆ.  ಪ್ರೇಕ್ಷಕರ ಕಿವಿಗೆ ಸಂಭಾಷಣೆಗಳು ಸ್ವಷ್ಟವಾಗಿ ಕೇಳದೇ ಕಿರಿಕಿರಿಯನ್ನುಂಟುಮಾಡಿದೆ. ಒಳ್ಳೆಯ ನಾಟಕವೊಂದನ್ನು ಅನುಭವಿಸುವ ಅವಕಾಶದಿಂದ ಪ್ರೇಕ್ಷಕರನ್ನು ವಂಚಿತರನ್ನಾಗಿ ಮಾಡಲಾಗಿದೆ. ಆರ್.ನಾಗೇಶ್ರವರ ಆತ್ಮ (ಇದ್ದರೆ) ಗೋರಿಯಲ್ಲೇ ತಳಮಳಗೊಂಡು ಚಡಪಡಿಸುತ್ತದೆ. 

                                                                                -ಶಶಿಕಾಂತ ಯಡಹಳ್ಳಿ 

 
 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ