ಕರಾವಳಿ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ
ಈಗ ಮತೀಯವಾದ ಮಿತಿಮೀರಿದ್ದಂತೂ ನಿರ್ವಿವಾದ. ಕೋಮುವಾದಿ ಶಕ್ತಿಗಳು ಈ ಬುದ್ದಿವಂತರ ನಾಡಲ್ಲಿ ಬೇರು
ಬಿಟ್ಟು ಸಮಾಜವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಲೇ ಬಂದಿವೆ. ಈಗ ಈ ಮತಿಯ ಶಕ್ತಿಗಳ ಉರಿಗಣ್ಣು
ಕಲೆಯ ಮೇಲೂ ಬಿದ್ದಿದೆ. ಯಾವುದನ್ನು ಮಾಡಬೇಕು.. ಯಾವುದನ್ನು ಮಾಡಬಾರದು ಎಂಬ ಅನಧೀಕೃತ ಆದೇಶಗಳು ಜಾರಿಯಾಗುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಈಗ ವಿವಾದ ಜೋರಾಗಿದೆ. ಮೇ 27ರಂದು ಮಂಗಳೂರಿನಲ್ಲಿ “ಮಹಾಚೇತನ-ಏಸುಕ್ರಿಸ್ತ ಮಹಾತ್ಮೆ” ಎನ್ನುವ ಯಕ್ಷಗಾನ ಪ್ರಸಂಗದ
ಪುಸ್ತಕವೊಂದರ ಬಿಡುಗಡೆ ಹಾಗೂ ಅವತ್ತು ಈ ಪುಸ್ತಕ
ಆಧಾರಿತ ತಾಳಮದ್ದಳೆ ಪ್ರದರ್ಶನವೂ ಏರ್ಪಾಡಾಗಿತ್ತು. ಏಸೂ ಕ್ರಿಸ್ತನ ಬದುಕಿನ ಕತೆಯನ್ನು ಯಕ್ಷಕಲೆಯ ಮೂಲಕ
ಹೇಳುವುದು ಈ ಪ್ರಸಂಗದ ಉದ್ದೇಶವಾಗಿದೆ. ಮತೀಯವಾದಿಗಳ
ಮಂಡೆಗೆ ಬೆಂಕಿ ಹತ್ತಿಕೊಳ್ಳಲು ಇನ್ನೇನು ತಾನೇ ಬೇಕು? ತಗೋ ಶುರುವಾಯಿತು ಪೇಸ್ಬುಕ್, ವಾಟ್ಸಾಪ್,
ಟ್ವೀಟರ್‌ಗಳಲ್ಲಿ ಹಿಂದೂತ್ವದ ಗುತ್ತಿಗೆದಾರರಿಂದ ಹುಸಿ ಗರ್ಜನೆ. ಏಸುವಿನ ಪ್ರಸಂಗ ಕುರಿತು ಯಕ್ಷಗಾನ
ಪುಸ್ತಕ ಬರೆದಿದ್ದೇ ತಪ್ಪು, ಪ್ರಕಟಿಸಿದ್ದಂತೂ ಅಪರಾಧ, ಇನ್ನು ತಾಳಮದ್ದಲೆ ಮಾಡಿ ಜನರ ಮುಂದೆ ಪ್ರದರ್ಶಿಸುವುದಂತೂ
ಮಹಾಪರಾಧ.. ಎಂಬಂತೆ ಹಿಂದುತ್ವದ ಭಾವಿಯೊಳಗಿಳಿದು ಮೆದುಳು ಮಲಿನ ಮಾಡಿಕೊಂಡ ಕಪ್ಪೆಗಳು ನಿರಂತರವಾಗಿ
ಒಟಗುಡತೊಡಗಿದವು. ಪುಸ್ತಕ ಬರೆದವರನ್ನು, ತಾಳಮದ್ದಲೆ
ಆಯೋಜಿಸಿದವರನ್ನು ಅಷ್ಟೇಯಾಕೆ ಅದರಲ್ಲಿ ಭಾಗವಹಿಸುವ ಕಲಾವಿದರನ್ನು ವಾಚಾಮ ಗೋಚರವಾಗಿ ನಿಂದಿಸತೊಡಗಿದವು.
ಯಕ್ಷಗಾನ ಹಿಂದೂಗಳ ಕಲೆಯಾಗಿದ್ದು
ಕ್ರಿಸ್ತನನ್ನು ವೈಭವೀಕರಿಸುವುದು ಅಕ್ಷಮ್ಯ ಅಪರಾಧ ಎನ್ನುವಂತೆ ಹಿಂದುತ್ವದ ಉಗ್ರ ಪ್ರತಿಪಾದಕರು ಗುಲ್ಲೆಬ್ಬಿಸಿದ್ದಾರೆ.
ಯಕ್ಷಗಾನ ಕಲೆಯನ್ನು ಧರ್ಮಾತೀತವಾಗಿ ಜನರು ನೋಡಿ ಬೆಳೆಸಿದ್ದಾರೆ. ಅದು ಹಿಂದೂಗಳ ಕಲೆಯಾಗಿರದೇ ಜನರ
ಕಲೆಯಾಗಿದೆ. ಜನಪದ ಕಲೆಯಾಗಿದೆ. ಅದನ್ನು ಕೆಲವು ಮೇಲ್ವರ್ಗದವರು ಹೈಜಾಕ್ ಮಾಡಿದ್ದು ನಿಜವಾದರೂ ಕಾಸು
ಕೊಟ್ಟು ಅಹೋರಾತ್ರಿ ನೋಡಿ ಉತ್ತೇಜಿಸಿದ ಪ್ರೇಕ್ಷಕರು ಎಲ್ಲಾ ಧರ್ಮೀಯರಾಗಿದ್ದಾರೆ. ಆದರೆ ಈಗ ಈ ಮತಾಂಧರಿಗೆ
ಯಕ್ಷಗಾನವು ಹಿಂದೂಗಳ ಕಲೆಯಾಗಿದೆ. ಅದರಲ್ಲೂ ಪುರೋಹಿತಶಾಹಿ ಕಲೆ ಎಂದೂ ನಂಬಿಸಲಾಗುತ್ತದೆ. ಈಗ ಮತಾಂತರದ
ಆರೋಪವನ್ನು ಯಕ್ಷಗಾನ ಪ್ರಸಂಗದ ಮೇಲೆ ಹಾಕಿ ವಿಕ್ಷಿಪ್ತ ಸಂಚಲನ ಸೃಷ್ಟಿಸುವ ಹುನ್ನಾರ ಸೃಷ್ಟಿಸಲಾಗುತ್ತಿದೆ.
ಏಸುವಿನ ಯಕ್ಷಗಾನ ಪ್ರಸಂಗ
ಎಲ್ಲಿ ಮತಾಂತರಕ್ಕೆ ಪ್ರಚೋದಿಸುವುದೋ ಎಂಬ ಆತಂಕ ಈ ಕೋಮುವಾದಿಗಳಿಗೆ. ಕಪೋಲ ಕಲ್ಪಿತ ಹಿಂದೂ ಪುರಾಣಗಳನ್ನು
ನೋಡಿ ಅದೆಷ್ಟು ಜನ ಅನ್ಯ ಧರ್ಮಿಯರು ಹಿಂದೂಗಳಾಗಿ ಮತಾಂತರ ಹೊಂದಿದ್ದಾರೆ? ಹಾಗೆಯೇ ಅನ್ಯ ಧರ್ಮದ ದೇವರುಗಳ
ನಾಟಕ-ಯಕ್ಷಗಾನಗಳನ್ನು ನೋಡಿದಾಕ್ಷಣ ಪ್ರೇರೇಪಿತರಾಗಿ ಹಿಂದೂಗಳೆನ್ನುವವರು ಅನ್ಯ ಧರ್ಮಕ್ಕೆ ಮತಾಂತರ ಹೊಂದಿ ಬಿಡುತ್ತಾರಾ? ನಾಟಕ, ಯಕ್ಷಗಾನಗಳಿಗೆ ಅಲ್ಲಾಡಿ
ಹೋಗುವಷ್ಟು ದುರ್ಬಲವಾಗಿದೆಯಾ ಇವರು ಪ್ರತಿಪಾದಿಸುವ ಹಿಂದೂ ಧರ್ಮ? ಕೇವಲ ಒಂದು ಯಕ್ಷಗಾನ ಪ್ರಸಂಗದಿಂದ ನೋಡಿದವರು ಮತಾಂತರ ಹೊಂದುತ್ತಾರೆಂಬದು ಈ ಧರ್ಮಾಂಧರ ಆರೋಪವೇ
ನಿಜವಾದಲ್ಲಿ ರಾಜ್ಯಾಂದ್ಯಂತ ಇರುವ ಕ್ರಿಶ್ಚಿಯನ್ ಶಾಲೆ ಕಾಲೇಜುಗಳಲ್ಲಿ ಓದುವ ಲಕ್ಷಾಂತರ ಹಿಂದೂ ಧರ್ಮಿಯರ
ಮಕ್ಕಳೆಲ್ಲಾ ಮತಾಂತರಗೊಳ್ಳಬೇಕಾಗಿತ್ತಲ್ಲವೇ?
ಇಷ್ಟಕ್ಕೂ ಇದೇನೂ ಹೊಸದಾಗಿ
ಬರೆದ ಯಕ್ಷಪ್ರಸಂಗವಂತೂ ಅಲ್ಲವೇ ಅಲ್ಲಾ. ನಾಲ್ಕು ದಶಕದ ಹಿಂದೆಯೇ ಮುಳಿಯ ಕೇಶವಯ್ಯ ಎನ್ನುವವರು ಈ
“..ಏಸೂ
ಮಹಾತ್ಮೆ”
ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಹಾಗೂ ಆ ಪ್ರಸಂಗವು ಕಲಾವರಳಿ ಕರ್ನಾಟಕ ಅಷ್ಟೇ ಅಲ್ಲಾ
ಬಾಂಬೆಯಲ್ಲಿಯೂ ಸಹ ಪ್ರದರ್ಶನ ಆಗಿತ್ತು. ನೂರಾರು ಪ್ರದರ್ಶನಗಳನ್ನು ಕಂಡು ಜನಪ್ರೀಯವಾಗಿದ್ದ ಈ ಯಕ್ಷಪ್ರಸಂಗವು
ಆಗ ಇಂಗ್ಲೀಷ್ ಹಾಗೂ ಜರ್ಮನ್ ಭಾಷೆಗೂ ಅನುವಾದಗೊಂಡು ಪ್ರದರ್ಶನಗೊಂಡಿತ್ತು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ
ಮಲ್ಪೆ ರಾಮದಾಸ ಸಾಮಗರವರೇ ಏಸುವಿನ ಪಾತ್ರ ವಹಿಸಿದ್ದರು. ಈಗ ಮುಳಿಯ ಕೇಶವಯ್ಯನವರ ಮಕ್ಕಳು ಈಗ ಅದೇ
ಕೃತಿಯನ್ನು ಮುದ್ರಿಸಿ ಪ್ರಕಟಿಸುತ್ತಿದ್ದಾರೆ. ಈ ಕೃತಿಯಲ್ಲಿ ಚಂದಸ್ಸಿನ ಚೌಕಟ್ಟಿನಲ್ಲಿ ರಚನೆಯಾದ
200 ಪದ್ಯಗಳಿವೆ. ಯಕ್ಷಗಾನ ಪ್ರಸಂಗಕ್ಕೆ ಬೇಕಾದ ರಸಾನುಭವವನ್ನೂ ಸೇರಿಸಲಾಗಿದೆ. ಆದರೆ.. ಆಗೆಲ್ಲಾ
ಇರದ ಪ್ರತಿರೋಧ ಈಗ್ಯಾಕೆ ಶುರುವಾಯಿತು? ಅದೇ ಪುಸ್ತಕದ ಬಿಡುಗಡೆಯ ದಿನ, ಹಳೇ ಯಕ್ಷಗಾನದ ತಾಳಮದ್ದಲೆಯ
ಸಮಯದಲ್ಲಿ ಯಾಕೆ ಈ ಮತೀಯವಾದಿಗಳು ಮತ್ತೇರಿದಂತೆ ಆಡತೊಡಗಿದವು. ಯಾಕೆಂದರೆ ಆಗ ಇಡೀ ಕರಾವಳಿ ಪ್ರದೇಶದಲ್ಲಿ
ಕೋಮುಸಾಮರಸ್ಯೆ ತುಂಬಿತ್ತು. ಕೋಮುಗಳಿ ನಡುವೆ ದಳ್ಳುರಿ
ಹಚ್ಚುವ ಶಕ್ತಿಗಳು ಪ್ರಭಲವಾಗಿರಲಿಲ್ಲಾ. ಜನರು ನಾಟಕವನ್ನು ನಾಟಕವಾಗಿ,,, ಯಕ್ಷಗಾನವನ್ನು
ಯಕ್ಷಕಲೆಯಾಗಿ ನೋಡುತ್ತಿದ್ದರು. ಆದರೆ.. ಕಳೆದೆರಡು ದಶಕಗಳಿಂದ ಕರಾವಳಿಯ ಚಿತ್ರಣವೇ ಕೇಸರೀಕರಣಗೊಂಡಿದೆ.
ಹಿಂದೂ ಶ್ರೇಷ್ಟತೆಯ ವ್ಯಸನವನ್ನು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ. ಅನ್ಯ ಧರ್ಮಗಳ ತುಚ್ಚೀಕರಣವನ್ನೂ
ಯುವಕರ ಮೆದುಳಲ್ಲಿ ತುರುಕಲಾಗಿದೆ.
ಕಲೆಯನ್ನು ಕಲೆಯಾಗಿ ಆಸ್ವಾದಿಸಬೇಕು..
ಧರ್ಮವನ್ನು ಖಾಸಗಿ ಆಚರಣೆಯಾಗಿ ಪಾಲಿಸಬೇಕು.. ಎಲ್ಲಾ ಧರ್ಮದ ದೇವರುಗಳೂ ಒಂದೇ ಎನ್ನುವ ಭಾವನೆ ಇರಬೇಕು
ಎನ್ನುವ ಕನಿಷ್ಟ ವಿವೇಕವೂ ಇಲ್ಲದ ಈ ಬ್ರೇನ್‌ವಾಷ್ಡ್ ಹಿಂದುತ್ವವಾದಿಗಳಿಗೆ ಕಲೆ ಸಂಸ್ಕೃತಿಯ ಬಗ್ಗೆ
ಅರಿವೇ ಇಲ್ಲವಾಗಿದೆ. ಎಲ್ಲವನ್ನೂ ಧರ್ಮಕ್ಕೆ ತಗಲಾಕುವ ತುರ್ತಿಗೆ ಬಿದ್ದು ಸಾಮಾಜಿಕ ಸೌಹಾರ್ಧತೆಯನ್ನು
ಕೆಡಿಸುವ ಹುನ್ನಾರಗಳು ವ್ಯವಸ್ಥಿತವಾಗಿಯೇ ನಡೆಯುತ್ತಿವೆ. ನಾಟಕ ಇಲ್ಲವೇ ಯಕ್ಷಪ್ರಸಂಗಗಳನ್ನು ನೋಡಿ
ಜನರು ಬದಲಾಗುವುದಾಗಿದ್ದರೆ ಈಗಾಗಲೇ ಇಡೀ ಸಮಾಜವೇ ಸತ್ಯ ನಿಷ್ಟೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕಿತ್ತು.
ಈ ಮತೀಯವಾದಿ ಮನಸ್ಥಿತಿಯ ಮಹನೀಯರು ಎಂದೋ ಕೋಮುಸೌಹಾರ್ಧತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಯಾಕೆಂದರೆ
ಯಕ್ಷಗಾನದ ಬಹುತೇಕ ಪ್ರಸಂಗಗಳು ಉತ್ತಮ ಮೌಲ್ಯಗಳನ್ನೇ ಹೇಳುತ್ತವೆ. ಯಾವುದೇ ಪ್ರಸಂಗ ಕಳ್ಳನಾಗು, ಸುಳ್ಳನಾಗು,
ಧರ್ಮಾಂಧನಾಗು, ಹಿಂಸೆಯನ್ನು ಪ್ರಚೋದಿಸು ಎಂದು ಹೇಳುವುದಿಲ್ಲಾ. ಹೀಗಿರುವಾಗ ಅನ್ಯ ಧರ್ಮದ ದೇವರ ಮಹಾತ್ಮೆ
ಯಕ್ಷಗಾನವಾಗಿ ಪ್ರಕಟಗೊಂಡರೆ.. ಹಾಗೂ ಪ್ರದರ್ಶನವಾದರೆ ನೋಡಿದವರು ಮತಾಂತರಗೊಳ್ಳುತ್ತಾರೆ ಎನ್ನುವುದೇ
ಅತ್ಯಂತ ಅಪ್ರಭುದ್ದ ವಿವೇಕರಹಿತವಾದ ಗ್ರಹಿಕೆ.
ಈ ಮತೀಯ ಶಕ್ತಿಗಳಿಗೆ ಬೇಕಾದದ್ದು
ಯಕ್ಷ ಪ್ರಸಂಗದ ನೆಪದಲ್ಲಿ ಕೋಮುದ್ವೇಷವನ್ನು ಹೆಚ್ಚಿಸುವುದು ಹಾಗೂ ಸಾಧ್ಯವಾದರೆ ಹಚ್ಚಿದ ಕಿಡಿಗೆ
ತಾವೇ ಗಾಳಿ ಹಾಕಿ.. ಉನ್ಮಾದದ ತೈಲ ಸುರಿದು ಬೆಂಕಿಯಾಗಿ ಮಾರ್ಪಡಿಸಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ
ಭಾವವನ್ನು ಹುಟ್ಟಿಸುವುದು ಹಾಗೂ ಹಿಂದುತ್ವ ರಕ್ಷಕರಾಗಿ ತಮ್ಮನ್ನು ಗುರುತಿಸಿಕೊಳ್ಳುವುದು. ಇದಕ್ಕಾಗಿ
ಯಾವುದೇ ಕಾರಣ ಸಿಕ್ಕರೂ ಸಾಕು ಇವರ ಹಿಂದುತ್ವ ತಕ್ಷಣ ಜಾಗೃತವಾಗಿಬಿಡುತ್ತದೆ. ಮತೀಯವಾದ ವ್ಯಾಧಿಯಾಗಿ
ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಆ ನಂತರ ಸಮಾಜದಲ್ಲಿ ಹರಡುತ್ತದೆ.
ಮೂಲಭೂತವಾಗಿ ಕರಾವಳಿ ಕರ್ನಾಟಕದಲ್ಲಿ
ಪ್ರಸಿದ್ಧವಾಗಿರುವ ಯಕ್ಷಗಾನ ಬಯಲಾಟವು ಜಾನಪದ ಕಲೆ. ಶೂದ್ರರು, ದಲಿತರು ಹಾಗೂ ದುಡಿಯುವ ವರ್ಗದವರು
ಸೇರಿ ಬಯಲಾಟ ಪರಂಪರೆಯನ್ನು ಕಟ್ಟಿ ತಲೆಮಾರುಗಳಿಂದ ಬೆಳೆಸುತ್ತಾ ಬಂದಿದ್ದಾರೆ. ಬರುಬರುತ್ತಾ ಉತ್ತರ
ಕರ್ನಾಟಕದಲ್ಲಿ ಬಯಲಾಟದ ಪ್ರಕಾರಗಳಾದ ದೊಡ್ಡಾಟ ಸಣ್ಣಾಟಗಳು ಅವತ್ತಿನಿಂದ ಇವತ್ತಿನವರೆಗೂ ದುಡಿಯುವ
ವರ್ಗಗಳ ಪಾಲ್ಗೊಳ್ಳುವಿಕೆಯಲ್ಲೇ ನಡೆದು ಬರುತ್ತವೆ. ಆದರೆ ಬಯಲಾಟದ ಪ್ರಕಾರವೇ ಆದ ಯಕ್ಷಗಾನವು ಕರಾವಳಿ
ಪ್ರದೇಶದಲ್ಲಿ ಬರುಬರುತ್ತಾ ಬ್ರಾಹ್ಮಣ ವರ್ಗದವರ ಪಾಲಾಗುತ್ತದೆ. ಯಕ್ಷಗಾನದ ಜನಪ್ರೀಯತೆಯನ್ನು ಕಂಡು
ಬ್ರಾಹ್ಮಣ ಸಮುದಾಯದವರು ಈ ಕಲೆಯಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳು
ಯಕ್ಷಗಾನಕ್ಕೆ ಅಪಾರವಾದ ಬೆಂಬಲವನ್ನು ಕೊಡುತ್ತಾ ಬಂದಿವೆ. ಹೀಗಾಗಿ ಕರಾವಳಿ ಕರ್ನಾಟಕದ ಬಹುತೇಕ ಯಕ್ಷಗಾನ
ತಂಡಗಳು ಈಗಲೂ ಮೇಲ್ವರ್ಗದವರ ನಿರ್ವಹಣೆಯಲ್ಲಿವೆ. ಈ ಮತೀಯವಾದಿ ಶಕ್ತಿಗಳೂ ಸಹ ಯಕ್ಷಗಾನವೆಂದರೆ ಹಿಂದೂಗಳ
ಅದರಲ್ಲೂ ಬ್ರಾಹ್ಮಣರ ಕಲೆ ಎಂದೇ ತಿಳಿದಂತಿವೆ. ಆದರೆ.. ಯಾವ ಕಲೆಯೂ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲಾ.
ಹಾಗೇನಾದರೂ ಸೀಮಿತವಾದಲ್ಲಿ ಅದು ಜನರ ಕಲೆಯಾಗಿ ಉಳಿಯುವುದಿಲ್ಲಾ..
ಹಾಗೆಯೇ ಜನಮಾನಸದಲ್ಲಿರುವ
ಈ ಪ್ರದರ್ಶಕ ಕಲೆಗಳು ದೇವರು, ಧರ್ಮ ಹಾಗೂ ಆಚರಣೆಗಳನ್ನು ಯಾವಾಗಲೂ ಚಿಕಿತ್ಸಕ ನೋಟದಲ್ಲೇ ನೋಡಿ ವಿಶ್ಲೇಷಿಸುತ್ತವೆ.
ದೇವರನ್ನು ಭಜಿಸುವ, ಟೀಕಿಸುವ, ಹಾಗೂ ವಿಶ್ಲೇಷಿಸುವ ಆರೋಗ್ಯಕರ ಬಹುತೇಕ ನಾಟಕಗಳಲ್ಲಿ ಹಾಗೂ ಯಕ್ಷ ಪ್ರಸಂಗಗಳಲ್ಲಿ ದೇವರುಗಳನ್ನು
ಲೇವಡಿ ಮಾಡಲಾಗಿದೆ.. ಟೀಕಿಸಲಾಗಿದೆ.. ರಾವಣನನ್ನೇ ವೈಭವೀಕರಿಸಿ ಮಹಾ ಶಿವಭಕ್ತ ಎಂದು ಸಾರುವ ಪ್ರಸಂಗಗಳೂ
ಪ್ರದರ್ಶನಗೊಂಡಿವೆ. ಪೌರಾಣಿಕ ಪಾತ್ರಗಳನ್ನು ವಿಮರ್ಶಿಸಲಾಗುತ್ತದೆ.. ಧರ್ಮದೊಳಗಿನ ಮೌಡ್ಯಗಳನ್ನು
ಪ್ರಶ್ನಿಸಲಾಗುತ್ತದೆ. ಹೀಗಾಗಿ ಪ್ರದರ್ಶಕ ಕಲೆಗಳು
ಮತೀಯವಾದವನ್ನು ಪ್ರಚೋದಿಸುವುದಿಲ್ಲಾ. ಆದರೆ ಈ ಮತೀಯವ್ಯಾಧಿಗಳು ಕಲೆಯನ್ನು ಕಲೆಯಾಗಿ ಇರಲು ಬಿಡುತ್ತಿಲ್ಲಾ.
ಯಕ್ಷಗಾನ ಆರಾಧಕ ಕಲೆಯಾಗಿದ್ದರೂ.. ಆಸ್ತಿಕತೆಯ ಕಲ್ಪಿತ ಮೌಲ್ಯವನ್ನು ಪ್ರಶ್ನಿಸಿದರೂ ಎಂದೂ ಕೋಮುಸಂಘರ್ಷಕ್ಕೆ
ಪ್ರಚೋದಿಸುವುದಿಲ್ಲಾ. ಕೆಲವಾರು ಪ್ರಸಂಗಗಳಲ್ಲಿ ಹಿಂದೂ ಮುಸ್ಲಿಂ ಕೋಮುಸಾಮರಸ್ಯವನ್ನೂ ಪ್ರತಿಪಾದಿಸಲಾಗಿದೆ.
ಎಲ್ಲಾ ದೇವರೂ ಒಂದೇ ಹಾಗೂ ಎಲ್ಲಾ ಧರ್ಮದವರೂ ಅವರವರ ಧರ್ಮಕ್ಕೆ ಬದ್ಧರಾಗಿರಬೇಕು ಎನ್ನುವ ತತ್ವವನ್ನೇ
ಬಹುತೇಕ ಯಕ್ಷಪ್ರಸಂಗಗಳು ಸಾರಿವೆ. ಅನ್ಯ ಧರ್ಮಿಯರ ಪಾತ್ರವನ್ನು ಕೀಳಾಗಿ ಚಿತ್ರಿಸುವ ಉದಾಹರಣೆಗಳೂ
ಇವೆಯಾದರು ಅವು ಕಡಿಮೆ.
ಈಗ ಏಸು ಕ್ರಿಸ್ತನ ಮಹಿಮೆಯನ್ನು
ಸಾರುವ ಯಕ್ಷಪ್ರಸಂಗಕ್ಕೆ ಎಂದೂ ಇಲ್ಲದ ವಿರೋಧ ಯಾಕೆ ವ್ಯಕ್ತವಾಗುತ್ತಿದೆ?. ಯಾಕೆಂದರೆ ಕರಾವಳಿ ಕರ್ನಾಟಕದಲ್ಲಿ
ಮತೀಯವಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದುತ್ವದ ಹುಸಿ ವೈಭವೀಕರಣ ಜಾಸ್ತಿಯಾಗುತ್ತಿದೆ. ಈ ವಿಕ್ಷಿಪ್ತ
ಮನಸ್ಥಿತಿ ಯಕ್ಷಗಾನದಂತಹ ಕಲೆಯ ಕ್ಷೇತ್ರವನ್ನೂ ಪೀಡಿಸುತ್ತಿದೆ. ಕೋಮುವಾದಿ ಪಕ್ಷ ಹಾಗೂ ಸಂಘಟನೆಗಳು
ಸದಾ ಪ್ರಚಾರದಲ್ಲಿರಲು ಹಾಗೂ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಸಂದರ್ಭಗಳನ್ನೂ ಉಪಯೋಗಿಸಿಕೊಳ್ಳುತ್ತವೆ.
ಕಲೆಯೂ ಸಹ ಇದಕ್ಕೆ ಹೊರತಲ್ಲಾ. ಇದು ಸಾಮಾಜಿಕ ಸೌಹಾರ್ಧತೆಗೆ ಅಪಾಯಕಾರಿಯಾಗಿದೆ. ಏಸೂಕ್ರಿಸ್ತನ ಯಕ್ಷಪ್ರಸಂಗದಿಂದ
ಯಾವ ಮತಾಂತರವೂ ಸಾಧ್ಯವಿಲ್ಲವಾದರೂ ಈ ಹಿಂದುತ್ವವಾದಿಗಳ ಮತಾಂಧತೆಯನ್ನಂತೂ ಉದ್ದೀಪನಗೊಳಿಸಿದೆ. ಇವರ
ಉದ್ದೀಪನೆ ಉನ್ಮಾದವಾಗಿ ಜನರಲ್ಲಿ ತಳಮಳವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.
ಕರಾವಳಿ ಕರ್ನಾಟಕದಲ್ಲಿ ಇರುವವರೆಲ್ಲರೂ
ಮತೀಯವಾದಿಗಳಲ್ಲಾ. ಬಹುಸಂಖ್ಯಾತರಿಗೆ ಈ ಕೋಮು ಗಲಭೆ, ಹಿಂಸಾಪಾತ, ಧರ್ಮದ್ವೇಷಗಳು ಬೇಕಾಗೆ ಇಲ್ಲಾ.
ಆದರೆ.. ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ಈ ಮತೀಯವಾದಿಗಳು ತಮ್ಮ ಧರ್ಮದ್ವೇಷ ಪ್ರಚೋದನೆಯನ್ನು ಸಮಾಜದಲ್ಲಿ
ಪಸರಿಸಿ ಆತಂಕದ ವಾತಾವರಣವನ್ನು ನಿರ್ಮಿಸುತ್ತಲೆ ಇರುತ್ತಾರೆ. ಅದರಲ್ಲೇ ಅವರ ಅಸ್ತಿತ್ವವಿದೆ. ಆದರೆ
ಈ ಹುನ್ನಾರಗಳನ್ನು ಪ್ರಜ್ಞಾವಂತರು ಪ್ರತಿರೋಧಿಸಬೇಕು. ಮತೀಯಶಕ್ತಿಗಳ ಈ ಅತಿರೇಕವನ್ನು ದಕ್ಷಿಣ ಕನ್ನಡ
ಮಾತ್ರವಲ್ಲಾ ಇಡೀ ಕರ್ನಾಟಕದ ಕಲಾವಿದರು, ರಂಗಕರ್ಮಿಗಳು, ಯಕ್ಷಗಾನ ತಂಡಗಳ ಮುಖ್ಯಸ್ತರುಗಳು ಹಾಗೂ
ಸಾಹಿತ್ಯಕ- ಸಾಂಸ್ಕೃತಿಕ ಲೋಕದ ನಾಯಕರುಗಳು ಖಂಡಿಸಬೇಕು. ಕಲೆಯ ವಿಚಾರದಲ್ಲಿ ನಿರ್ಬಂಧಗಳನ್ನು ಹಾಕಲು
ಬಯಸುವ ಕೋಮುವಾದಿಗಳ ಕುತಂತ್ರವನ್ನು ಧಿಕ್ಕರಿಸಬೇಕು. ಯಕ್ಷಗಾನ ಕಲಾವಿದರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು
ಬೆಂಬಲಿಸಬೇಕು. ಹಿಂದುತ್ವವಾದಿಗಳ ಹಿಕ್ಮತ್ತನ್ನು ಸೋಲಿಸಬೇಕಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ