ಶುಕ್ರವಾರ, ಮೇ 26, 2017

ಹಿಂಸೋನ್ಮಾದದ ವಿಕ್ಷಿಪ್ತ ರಂಗಪ್ರಯೋಗ ‘ಸಮರ ಯಂತ್ರ ಅಶ್ವತ್ಥಾಮ’ :






ಮಹಾಭಾರತ ಮಹಾಕಾವ್ಯದ ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ಹಲವಾರು ನಾಟಕಗಳು ಬಂದಿವೆ. ಅದಕ್ಕೆ ಅಶ್ವತ್ಥಾಮನೇನು ಹೊರತಲ್ಲಾ. ಆದರೆ.. ಗುರುದ್ರೋಣರ ಪುತ್ರ ಅಶ್ವತ್ಥಾಮನನ್ನು ಯುದ್ಧದ ಯಂತ್ರವೆನ್ನುವ ರೀತಿಯಲ್ಲಿ ಬಿಂಬಿಸಿದ ಮೊಟ್ಟ ಮೊದಲ ನಾಟಕ ಅಶ್ವತ್ಥಾಮ ದಿ ವಾರ್ ಮಶಿನ್. ಕಾಲಘಟ್ಟ ಯಾವುದೇ ಇರಲಿ ಹಿಂಸೆ, ರಕ್ತಪಾತ ಸಂಘರ್ಷಗಳಿಗಂತೂ ಸಾವಿಲ್ಲಾ.. ಈ ಸಾವಿಲ್ಲದ ಹಿಂಸೆಗೆ ಪ್ರತೀಕವಾಗಿ ಚಿರಂಜೀವಿ ಅಶ್ವತ್ಥಾಮನನ್ನು ನಾಟಕದಲ್ಲಿ ಬಿಂಬಿಸಿ ತೋರಿಸುವ ಪ್ರಯತ್ನ ಅಭಿನಂದನೀಯ.

ರಂಗನಿರಂತರ ಸಂಸ್ಕೃತಿಕ ಸಂಘವು ಮೇ15 ರಿಂದ 20ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಿತ್ತು. ಮೇ 18 ರಂದು ಕೊಲ್ಕತ್ತಾದ ಬೆಂಗಾಲ್ ರಿಪೆರ್ಟರಿ ತಂಡದ ಕಲಾವಿದರು ಸುಮನ್ ಸಹ ರವರು ರಚಿಸಿ ನಿರ್ದೇಶನದಲ್ಲಿ ಅಶ್ವತ್ಥಾಮ ದಿ ವಾರ್ ಮಶಿನ್ ನಾಟಕವನ್ನು ಪ್ರದರ್ಶಿಸಿ ನೋಡುಗರಿಗೆ ಹಿಂಸೆಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿದರು.

ಅಶ್ವತ್ಥಾಮನ ಬಗ್ಗೆ ಗೊತ್ತಿದ್ದವರಿಗೂ ಬೆಂಗಾಲಿ ಭಾಷೆಯ ಈ ನಾಟಕವನ್ನು ಶಬ್ಧಶಃ ಅರ್ಥ ಮಾಡಿಕೊಳ್ಳುವುದು ಬಂಗಾಲಿಯೇತರರಿಗೆ ಅಸಾಧ್ಯವಾದರೂ ಸ್ತೂಲವಾಗಿ ನಾಟಕದ ಒಲವು ನಿಲುವು ಆಶಯವಂತೂ ನೋಡುಗರ ಅನುಭವಕ್ಕೆ ಬಂದಿತು. ಪೌರಾಣಿಕ ಕಾಲಘಟ್ಟವನ್ನು ವರ್ತಮಾನಕ್ಕೆ ಸಮ್ಮಿಶ್ರಗೊಳಿಸಿ ಅಶ್ವತ್ಥಾಮನನ್ನು ಸಾರ್ವಕಾಲಿಕಗೊಳಿಸಿದ ಈ ನಾಟಕದಲ್ಲಿ ಎಲ್ಲೆಲ್ಲಿ ಹಿಂಸೆ ಎಂಬುದಿದೆಯೋ ಅಲ್ಲೆಲ್ಲಾ ವಿವಿಧ ವೇಷಗಳಲ್ಲಿ ಸಾವಿಲ್ಲದ ಅಶ್ವತ್ಥಾಮನಿದ್ದಾನೆಂಬುದನ್ನು ಮನದಟ್ಟು ಮಾಡುವ ಪ್ರಯತ್ನ ಮಾಡಲಾಗಿದೆ. ಹಿಂಸೆ ಹಾಗೂ ಅಸಹನೆಯ ಬೇರುಗಳನ್ನು ಹುಡುಕುತ್ತಾ ಹೋಗಿ ಅವನ್ನು ಮಹಾಭಾರತದ ಅಶ್ವತ್ಥಾಮನಲ್ಲಿ ಈ ನಾಟಕದ ರಚನೆಕಾರರು ಕಂಡುಕೊಂಡಿದ್ದು.. ಅಲ್ಲಿಂದಾ ಶುರುವಾಗಿ ಇಲ್ಲಿಯ ವರೆಗೂ ಅಶ್ವತ್ಥಾಮ ಹಿಂಸೆಯ ನಾನಾ ರೂಪಗಳಲ್ಲಿ ಚಿರಂಜೀವಿಯಾಗಿದ್ದಾನೆಂಬುದನ್ನು ಈ ಅಶ್ವತ್ಥಾಮ.. ನಾಟಕ ಸಾಬೀತು ಪಡಿಸಲು ಪ್ರಯತ್ನಿಸುತ್ತದೆ. ಅಶ್ವತ್ಥಾಮ ಇಲ್ಲಿ ಬರೀ ವ್ಯಕ್ತಿ ಆಗಿರದೇ ಹಿಂಸೆಯನ್ನು ಉತ್ಪಾದಿಸುವ ಯಂತ್ರವಾಗಿದ್ದು ಅದು ಸಾರ್ವಕಾಲಿಕವಾಗಿ ಅಸ್ಥಿತ್ವದಲ್ಲಿರುತ್ತದೆಂಬ ಅಂಶವನ್ನು ಈ ನಾಟಕ ಪ್ರಭಲವಾಗಿ ಸಮರ್ಥಿಸಿಕೊಳ್ಳುತ್ತದೆ. ಅಬ್ಬರದ ಸದ್ದು ಆಡುವ ಶಬ್ದಗಳಿಗಿಂತಾ ಮುಖ್ಯ.. ನೋಡುವ ದೃಷ್ಟಿಕೋನ ತೋರುವ ದೃಶ್ಯಗಿಳಿಗಿಂತಾ ಪ್ರಾಮುಖ್ಯ.. ಎಂಬ ಆಶಯದ ಮೇಲೆ ಈ ನಾಟಕವನ್ನು ನಿರ್ಮಿಸಲಾಗಿದೆ.

ಅಶ್ವತ್ಥಾಮನೆಂಬ ಆನೆ ಸತ್ತಿದ್ದನ್ನು ಅಶ್ವತ್ಥಾಮನೇ ಸತ್ತನೆಂದು ಸುಳ್ಳು  ಹೇಳಿದ ಪಾಂಡವ ಪಾಳ್ಯದವರು ಗುರುದ್ರೋಣರನ್ನು ಯುದ್ಧದಿಂದ ವಿಮುಖರನ್ನಾಗಿಸಿದ್ದು ಅಶ್ವತ್ಥಾಮನಿಗೆ ತಾಳದ ಹೊಡೆತ ನೀಡುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ತೊಡೆಮುರಿದು ಬಿದ್ದ ದುರ್ಯೋಧನನು ಅಶ್ವತ್ಥಾಮನನ್ನು ಕೌರವ ಸೇನೆಗೆ ಸೈನ್ಯಾಧಿಕಾರಿಯಾಗಿ ಘೋಷಿಸಿ ಯುದ್ಧವನ್ನು ಮುಂದುವರೆಸಲು ಆಜ್ಞಾಪಿಸುತ್ತಾನೆ. ಚಿಕ್ಕವರಿದ್ದಾಗ ರಾಜಕುಮಾರರು ಸುರೆಯನ್ನು ಕುಡಿಯದ ಬ್ರಾಹ್ಮಣ ಅಶ್ವತ್ಥಾಮನನ್ನು ಅವಮಾನಿಸಿದ್ದು.. ಅಸಹಾಯಕನಾದ ಅಶ್ವತ್ಥಾಮ ಜನಿವಾರವನ್ನು ಹರಿದು ಹಾಕಿ ಸುರೆ ಕುಡಿದು ಶಸ್ತ್ರ ಹಿಡಿದು ಹಿಂಸೆಯ ಮಾರ್ಗದಲ್ಲಿ ಸಾಗಿದ್ದನ್ನು ಅಶ್ವತ್ಥಾಮ ನೆನಪಿಸಿಕೊಳ್ಳುತ್ತಾನೆ. ಕೃತವರ್ಮ ಹಾಗೂ ಕೃಪಾಚಾರ್ಯರ ಜೊತೆ ಸೇರಿ ಯುದ್ಧ ತಂತ್ರಗಳನ್ನು ಅಶ್ವತ್ಥಾಮ ಹೆಣೆಯುತ್ತಾನೆ. ಪಾಂಡವರೆಂದು ತಪ್ಪು ತಿಳಿದು ಉಪಪಾಂಡವರ ತಲೆಗಳನ್ನು ಅಶ್ವತ್ಥಾಮ ಕಡಿದು ತರುವ ಮೂಲಕ ಹಿಂಸಾಪಾತದ ಸರಣಿಗಳಿಗೆ ಕಾರಣನಾಗುತ್ತಾನೆ. ಇದೆಲ್ಲಾ ಮಹಾಭಾರತದ ಕಥೆಯಾಯಿತು. ಇಷ್ಟೇ ಆಗಿದ್ದರೆ ಈ ನಾಟಕವೂ ಪೌರಾಣಿಕತೆಯ ಪ್ರತಿರೂಪವಾಗುತ್ತಿತ್ತು. ಆದರೆ ಯಾವಾಗ ಈ ಎಲ್ಲಾ ಮಹಾಭಾರತದ ಘಟನೆಗಳನ್ನು ವರ್ತಮಾನದ ಮತಾಂಧತೆ ಹಾಗೂ ಭಯೋತ್ಪಾದನೆಯ ಹಿಂಸಾಕಾಂಡಗಳಿಗೆ ಜೋಡಿಸಲಾಯಿತೋ ಆಗ ಈ ನಾಟಕದ ದಿಕ್ಕೇ ಬದಲಾಯಿತು.  ಇಡೀ ನಾಟಕ ಸಾರ್ವಕಾಲಿಕವಾಯಿತು. 

ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದವನನ್ನು ಹತ್ಯೆ ಮಾಡುವ ಇಸ್ಲಾಂ ಮತಾಂಧರ ಪ್ರತಿನಿಧಿಯಾಗಿ ಅಶ್ವತ್ಥಾಮ ಅವತರಿಸುತ್ತಾನೆ. ಗುಜರಾತಿನ ಅಮಾಯಕ ಮುಸ್ಲಿಂ ಗರ್ಭಿಣಿ ಹೆಣ್ಣುಮಗಳನ್ನು ಸಾಯಿಸಿ ಬ್ರೂಣವನ್ನು ತ್ರೀಶೂಲಕ್ಕೆ ಸಿಕ್ಕಿಸಿ ಅಟ್ಟಹಾಸಗೈದ ಹಿಂದೂ ಕೋಮುವಾದಿಗಳ ಪ್ರತೀಕವಾಗಿ ಅಶ್ವತ್ಥಾಮ ಮೂಡಿಬರುತ್ತಾನೆ. ಪಾಕಿಸ್ತಾನದ ಶಾಲೆಯಲ್ಲಿ ಉಗ್ರರಿಂದ ಹತರಾದ ನೂರಾರು ಅಮಾಯಕ ಮಕ್ಕಳ ಸಾವಿಗೆ ಕಾರಣರಾದ ಹಿಂಸೋನ್ಮಾದಿತರ ಮನದೊಳಗೆ ಅಶ್ವತ್ಥಾಮನಿದ್ದಾನೆ. ಅಷ್ಟೇ ಯಾಕೆ ಇತ್ತೀಚೆಗೆ ಪ್ರಾನ್ಸ್‌ನ ಸಂಗೀತಗೋಷ್ಠಿಗೆ ಸಾಂತಾಕ್ಲಾಸನ ವೇಷದಲ್ಲಿ ನುಗ್ಗಿದ ಐಸಿಸ್ ಭಯೋತ್ಪಾದಕ ಮಾಡಿದ ಹತ್ಯಾಕಾಂಡದ ರೂವಾರಿ ಅಶ್ವತ್ಥಾಮನ ಉತ್ತರಾಧಿಕಾರಿಯಾಗಿ ಹೊರಹೊಮ್ಮುತ್ತಾನೆ. ಹೀಗೆ ಹಿಂಸೆ ಎನ್ನುವುದು ಹಲವು ಆಯಾಮಗಳಲ್ಲಿ ಜಗತ್ತಿನಾದ್ಯಂತ ಪಸರಿಸಿದ್ದು, ಪ್ರಮುಖವಾಗಿ ಧರ್ಮಾಂಧತೆಯ ಪ್ರತೀಕವಾಗಿ ಬೆಳೆದು ನಿಂತಿದೆ. ಈ ಹಿಂಸಾಘಾತದ ಹಿನ್ನೆಲೆಯಲ್ಲಿ ಅಶ್ವತ್ಥಾಮನಂತ ಹಿಂಸಾವಾದಿಗಳ ಮನಸ್ಥಿತಿ ಕಾರಣವಾಗಿದೆ ಎಂದು ತೋರಿಸುವುದೇ ಈ ನಾಟಕದ ಆಶಯವಾಗಿದೆ. ಕೊಟ್ಟಕೊನೆಗೆ ಕಲಾವಿದರೆಲ್ಲಾ ಬುಟ್ಟಿಯಲ್ಲಿ ಹೂವುಗಳನ್ನು ತುಂಬಿ ತಂದು ವೇದಿಕೆಯ ಮೇಲೆ ಹರಡಿ ಶಾಂತಿಯ ಸಂದೇಶವನ್ನು ಸಾಂಕೇತಿಕವಾಗಿ ಸಾರುವ ಮೂಲಕ ನಾಟಕ ಕೊನೆಯಾಗುತ್ತದೆ.

ಅದ್ಯಾಕೋ ಪುರೋಹಿತಶಾಹಿ ಪಾವಿತ್ರತೆಯನ್ನು ಕಾಪಿಡುವ ಪ್ರಯತ್ನ ಈ ನಾಟಕದ ಭಾಗವಾಗಿದೆಯಾ? ಎನ್ನುವ ಸಂದೇಹ ಬಾರದಿರದು. ಜನಿವಾರ ಎನ್ನುವುದು ಇಲ್ಲಿ ಬ್ರಾಹ್ಮಣ್ಯದ ಪಾವಿತ್ರತೆಯ ಸಂಕೇತವಾದಂತಿದೆ. ಎಲ್ಲಿವರೆಗೂ ಅಶ್ವತ್ಥಾಮ ಜನಿವಾರ ಹಾಕಿಕೊಂಡಿದ್ದನೋ ಅಲ್ಲಿವರೆಗೂ ಸರಿಯಾಗಿಯೇ ಇದ್ದ. ಯಾವಾಗ ಒತ್ತಾಯದ ಸುರಾಪಾನಕ್ಕೊಳಗಾಗಿ ಜಾತಿಭ್ರಷ್ಟತೆಯ ಭಾವತಾಳಿ ಜನಿವಾರವನ್ನು ಕಿತ್ತೆಸೆದನೋ ಆಗ ಕುಡಿತದ ಜೊತೆಗೆ ಕೆಡುಕುತನವೂ ಮೈಗೂಡಿ ಶಸ್ತ್ರಹಿಡಿದು ಹಿಂಸೆಯ ಪ್ರಚೋದನೆಗೊಳಗಾಗುತ್ತಾನೆ ಎಂಬುದು ಈ ನಾಟಕದ ದೃಶ್ಯವೊಂದರ ಒಳಾರ್ಥವಾಗಿದೆ. ಅಂದರೆ ಬ್ರಾಹ್ಮಣನಾದವರು ಹಿಂಸೆ ಮಾಡಲಾರರು.. ಬ್ರಾಹ್ಮಣ್ಯವನ್ನು ಬಿಟ್ಟರೆ ಏನು ಬೇಕಾದರೂ ಮಾಡಬಹುದು ಎನ್ನುವುದು ಈ ದೃಶ್ಯದ ಪರೋಕ್ಷ ಆಶಯವಾ? ವಾಸ್ತವದಲ್ಲಿ ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಹಿಂಸೋನ್ಮಾದಕ್ಕೆ ಜಾತಿ ಧರ್ಮಗಳ ಹಿಂಗಿಲ್ಲವೆಂಬುದು ಮನುಕುಲದ ಇತಿಹಾಸದಲ್ಲಿ ಸಾಬೀತಾಗಿದೆ. ಹಾಗೆ ನೋಡಿದರೆ ಈ ದೇಶದಲ್ಲಿ ಮತಾಂಧತೆಯನ್ನು ಪ್ರಚೋದಿಸಿ ಕೋಮುಹಿಂಸೆಯನ್ನು ಪ್ರೇರೇಪಿಸುವುದೇ ಈ ಮನುವಾದಿ ಬ್ರಾಹ್ಮಣ್ಯವೆಂಬುದು ಸೂರ್ಯ ಸತ್ಯ. ಈ ನಾಟಕವೂ ಸಹ ಮುಸ್ಲಿಂ ಹಾಗೂ ಹಿಂದೂ ಮತಾಂಧರ ಉನ್ಮಾದ ಹಾಗೂ ಹಿಂಸೆಯನ್ನೇ ಪ್ರಮುಖವಾಗಿ ತೋರಿಸುತ್ತದೆ. ಜನಿವಾರ ಹಾಕಿರಲಿ ಇಲ್ಲವೇ ಇಲ್ಲದಿರಲಿ.. ಬ್ರಾಹ್ಮಣನಾಗಿರಲಿ ಇಲ್ಲವೇ ಆಗಿಲ್ಲದೇ ಇರಲಿ.. ಮತಾಂಧತೆಗೆ, ಹಿಂಸೋತ್ಪಾದನೆಗೆ, ಭಯೋತ್ಪಾದನೆಗೆ ಜಾತಿ ಮತ ಧರ್ಮಗಳ ಹಂಗಿಲ್ಲಾ. ಹೀಗಾಗಿ ಈ ನಾಟಕದಲ್ಲಿ ಅಶ್ವತ್ಥಾಮ ಜನಿವಾರ ಕಳಚಿ ಹಿಂಸೋತ್ಪಾದಕನಾಗಿದ್ದು ಪರೋಕ್ಷವಾಗಿ ಪುರೋಹಿಸಶಾಹಿ ಹಿತಾಸಕ್ತಿಯನ್ನು ಕಾಪಾಡುವ ಹುನ್ನಾರವಾಗಿದೆಯಾ? ಎನ್ನುವ ಅನುಮಾನವೂ ಕಾಡುತ್ತದೆ. ಅಶ್ವತ್ಥಾಮನನ್ನು ಹಿಂಸಾವಾದಿಯನ್ನಾಗಿಸಲು ಬಾಲಕನಾಗಿದ್ದಾಗ ನಡೆದ ಒತ್ತಾಯದ ಸುರಾಪಾನದ ಅವಮಾನವೇ ಕಾರಣ ಎನ್ನುವುದು ಬಹಳ ದುರ್ಬಲವಾದ ಸಮರ್ಥನೆಯಾಗಿದೆ.     

ಕಾಲೈಕ್ಯ ಸ್ಥಳೈಕ್ಯಗಳ ಸಿದ್ದ ಸೂತ್ರವನ್ನು ಮೀರಿದ ಈ ನಾಟಕವನ್ನು ಅರ್ಥಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಭೂತ ವರ್ತಮಾನಗಳನ್ನು ಬ್ಲೆಂಡ್ ಮಾಡಿ, ದೃಶ್ಯಗಳನ್ನು ಕಲಸುಮೇಲೋಗರಗೊಳಿಸಿ ನಾಟಕವನ್ನು ಕ್ರಮಬದ್ಧವಲ್ಲದ ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ಪೌರಾಣಿಕ ಪಾತ್ರಗಳಿಗೆ ಬಳಸಿದ ಕಾಸ್ಟೂಮ್ಸ್, ಮಾಡಲಾದ ಮೇಕಪ್ ಅಷ್ಟೇ ಯಾಕೆ ಉಪಯೋಗಿಸಿದ ಪ್ರಾಪರ್ಟಿಸ್‌ಗಳ್ಯಾವವೂ ಯಾವುದೇ ನಿರ್ಧಿಷ್ಟ ಕಾಲಕ್ಕೆ ಪೂರಕವಾಗಿಲ್ಲ. ಪೌರಾಣಿಕ ಪಾತ್ರಗಳೂ ಆಧುನಿಕ ಇಂಗ್ಲೀಷ್ ಶಬ್ದಗಳನ್ನು ಬಳಸುತ್ತವೆ.  ಹಿಂಸೆಯ ಆಯಾಮಗಳನ್ನು ಹೇಳುವ ಆಶಯಕ್ಕೆ ಬದ್ಧವಾಗಿರುವ ಈ ನಾಟಕದಲ್ಲಿ ಉದ್ದೇಶಪೂರ್ವಕವಾಗಿಯೇ ಕಥಾನಕತೆ ಹಾಗೂ ನಾಟಕದ ಸಿದ್ಧ ಮಾದರಿ ಚೌಕಟ್ಟನ್ನು ಒಡೆದು ಹಾಕಲಾಗಿದ್ದು ಹಿಂಸೋನ್ಮಾದಕ್ಕೆ ಪೂರಕವಾದ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಪೌರಾಣಿಕವಾಗಬಹುದಾದ ಅಶ್ವತ್ಥಾಮನ ಈ ನಾಟಕವು ಕಟ್ಟುವ ವಿಶೇಷ ತಂತ್ರಗಾರಿಕೆಯಿಂದಾಗಿ ಜಾಗತಿಕ ನಾಟಕವಾಗಿದೆ. ಅತ್ತ ಪೌರಾಣಿಕವೂ ಅಲ್ಲದ, ಇತ್ತ ವರ್ತಮಾನವೂ ಅಲ್ಲದ.. ಈ ಎರಡೂ ಕಾಲಘಟ್ಟದಲ್ಲಾದ ಹಿಂಸಾಪಾತದ ಘಟನೆಗಳಿಗೆ ಸಮೀಕರಣಗೊಳಿಸಿ ನಿರ್ಮಿಸಲಾದ ಈ ನಾಟಕವು ಸಾಮಾನ್ಯ ಪ್ರೇಕ್ಷಕರಿಗೆ ಸುಲಭಕ್ಕೆ ಅರ್ಥವಾಗದೇ ಗೋಜಲನ್ನು ಸೃಷ್ಟಿಸಿದೆಯಾದರೂ ಆಳಕ್ಕಿಳಿದು ಆಲೋಚಿಸುತ್ತಾ ಹೋದರೆ ಸಾರ್ವಕಾಲಿಕ ಹಿಂಸೆಯ ಅವತಾರಗಳು ಗೋಚರಿಸುತ್ತಾ ಹೋಗುತ್ತವೆ.

ಹೊಸ ತಲೆಮಾರಿನ ಕ್ರಿಯಾಶೀಲ ನಿರ್ದೇಶಕರು ಆಲೋಚಿಸುವ ಕ್ರಮ ಭಿನ್ನವಾಗಿದೆ ಎಂಬುದಕ್ಕೆ ಈ ನಾಟಕವೇ ಸಾಕ್ಷಿ. ಸುಮನ್ ಎನ್ನುವ ಬೆಂಗಾಲಿ ರಂಗಭೂಮಿಯ ಯುವ ನಿರ್ದೇಶಕ ಪೌರಾಣಿಕ ಕ್ಯಾನ್ವಾಸ್ ಬಳಸಿಕೊಂಡು ಜಾಗತಿಕ ಹಿಂಸೆಯನ್ನು ನಾಟಕದಲ್ಲಿ ಕಟ್ಟಿಕೊಟ್ಟ ರೀತಿ ಗಮನಾರ್ಹವಾಗಿದೆ. ಯುದ್ದೋನ್ಮಾದ ಹಿಂಸೆಯ ಪ್ರತೀಕವಾದ ಅಶ್ವತ್ಥಾಮನನ್ನು ಧರ್ಮಾಂಧ ಹಿಂಸಾಪಾತಕ್ಕೆ ಸಮೀಕರಿಸಿ ಜಾಗತಿಕ ಭಯೋತ್ಪಾದಕರ ರಕ್ತಪಿಪಾಸುತನವನ್ನು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ನಿರ್ದೇಶಕರ ಕ್ರಿಯಾಶೀಲತೆಗೆ ಪುರಾವೆಯಾಗಿದೆ. ಇಸ್ಲಾಂ ಉಗ್ರರ ಜೀಹಾದ್ ಹಾಗೂ ಹಿಂದುತ್ವವಾದಿಗಳ ಪ್ಯಾಸಿಜಂ ಸೃಷ್ಟಿಸುವ ಹಿಂಸೆಯನ್ನು ಅದರೆಲ್ಲಾ ಅತಿರೇಕಗಳೊಂದಿಗೆ ಈ ನಾಟಕ ಮೂಡಿಬಂದಿದೆ.  

ಆದರೆ.. ಬರೀ ತಂತ್ರಗಳೇ ಅತಿಯಾದರೆ ನೋಡುಗರ ಗ್ರಹಿಕೆಯ ಮಿತಿಗೆ ನಾಟಕ ದಕ್ಕುವುದು ಕಷ್ಟಕರ. ಇಡೀ ನಾಟಕ ರಂಗತಂತ್ರಗಳಿಂದ ಸಮೃದ್ಧವಾಗಿದ್ದು, ನಟರು ಇಲ್ಲಿ ಪಾತ್ರಗಳಾಗಿ ಮೂಡಿಬರದೇ ಪರಿಕರಗಳಾಗಿವೆ. ಎಲ್ಲಿ ನೋಡಿದಲ್ಲಿ ರಂಗತಂತ್ರಗಳ ಮೂಲಕ ನಿರ್ದೇಶಕ ಕಾಣುತ್ತವೆಯೇ ಹೊರತು ಕಲಾವಿದರು ಕಾಣಿಸುತ್ತಿಲ್ಲ. ಇದೊಂದು ನಿರ್ದೇಶಕ ಪ್ರಧಾನ ನಾಟಕವಾಗಿದ್ದು ಬಹುತೇಕ ಕಲಾವಿದರನ್ನು ಗುಂಪುಗಳಲ್ಲಿ ಟೂಲ್‌ಗಳಾಗಿ ಬಳಸಲಾಗಿದೆ. ರಂಗಭೂಮಿ ಕಲಾವಿದರ ಮಾಧ್ಯಮ ಎನ್ನುವುದು ಇಲ್ಲಿ ಹುಸಿಯಾಗಿದ್ದು ನಿರ್ದೇಶಕರ ಮಾಧ್ಯಮವೆಂದು ತೋರಿಸಲು ಪ್ರಯತ್ನಿಸಿದಂತಿದೆ. ಪ್ರಮುಖ ಪಾತ್ರಗಳು ಇವೆಯಾದರೂ ಅವುಗಳ ಮುಖದ ಭಾವನೆಗಳು ಪ್ರೇಕ್ಷಕರಿಗೆ ಗೋಚರಿಸದಷ್ಟು ಮಂದ ಬೆಳಕು ಆವರಿಸಿದೆ. ನಾಟಕದಲ್ಲಿ ಬೆಳಕಿನ ವಿನ್ಯಾಸ ಅದ್ಭುತವಾಗಿ ಮೂಡಿಬಂದಿದೆ. ಎಫ್‌ಓಹೆಚ್ ಲೈಟ್ಸ್‌ಗಳನ್ನು ಬಳಸದೇ ಕೇವಲ ಕ್ರಾಸ್‌ಲೈಟ್ ಹಾಗೂ ಬಾರ್‌ಲೈಟ್‌ಗಳಲ್ಲಿ ಬೆಳಕಿನಾಟ ಆಡಲಾಗಿದೆ. ಕನಿಷ್ಟ ಪ್ರಮುಖ ಪಾತ್ರಗಳ ಮುಖದ ಮೇಲಾದರೂ ಬೆಳಕು ಇರುವಂತೆ ನೋಡಿಕೊಂಡಿದ್ದರೆ ಪಾತ್ರಗಳ ಸಾತ್ವಿಕಾಭಿನಯ ನೋಡುಗರಿಗೆ ಗೋಚರವಾಗಬಹುದಾಗಿತ್ತು. ಇಡೀ ನಾಟಕ ಮಬ್ಬು ಗತ್ತಲೆಯಲ್ಲಿ ನಡೆಯುತ್ತಿರುವಂತೆ ಭಾಸವಾಗಿ ನಟನೆಯ ಸೂಕ್ಷ್ಮಗಳು ಮರೆಯಾದವು. ಇಡೀ ನಾಟಕ ಸಂಪೂರ್ಣವಾಗಿ ದಕ್ಕದಿದ್ದರೂ ಸಿಕ್ಕಷ್ಟು ದಕ್ಕಿಸಿಕೊಳ್ಳಬೇಕಿದೆ.

ಮಿಲಿಟರಿ ಶೈಲಿಯ ಪ್ಯಾಂಟಗಳನ್ನು ಗುಂಪು ನಟರು ಬಳಿಸಿದ್ದು ಅವರ ಮೇಲ್ಬಾಗ ಅರೆಬೆತ್ತಲಾಗಿದೆ. ಗುಂಪು ಕವಾಯತುಗಳು.. ಆಂಗಿಕ ಸರ್ಕಸ್ಸುಗಳು ಬೇಕಾದಷ್ಟಿವೆ. ದೈಹಿಕ ಕಸರತ್ತಿನ ಭಾಗವಾಗಿ ನಟರುಗಳು ಬಳಕೆಯಾಗಿದ್ದು ಪಾತ್ರಗಳಾಗಿದ್ದರೆ ಚೆನ್ನಾಗಿತ್ತು. ಇಡೀ ನಾಟಕದ ವಿನ್ಯಾಸವೇ ಹಾಗಿದೆ. ಹಿಂಸೆಯೇ ಇಲ್ಲಿ ಅಗೋಚರ ಪಾತ್ರವಾಗಿ ದೃಶ್ಯದಲ್ಲಿ, ನಟನೆಯಲ್ಲಿ, ಬೆಳಕಿನಲ್ಲಿ ಹಾಗೂ ಸಂಗೀತದಲ್ಲಿ ವೈಭವೀಕರಣಗೊಂಡಿದೆ. ಸಂಗೀತ ಹಾಗೂ ಆಲಾಪಗಳು ನಾಟಕದ ದೃಶ್ಯಗಳಿಗೆ ಅಗತ್ಯ ಮೂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದು ಕೆಲವೊಮ್ಮೆ ಮಾರ್ದನಿಸಿದ ರುದ್ರ ಭಯಂಕರ ಸಂಗೀತವಂತೂ ಕೇಳುಗರ ಕಿವಿಗಳ ಕೇಳುವ ಮಿತಿಯನ್ನು ಮೀರಿ ಅರ್ಭಟಿಸಿದೆ. ಹಿಂಸೆಯನ್ನು ತಣ್ಣಗೆ ಹೇಳಬಹುದು ಹಾಗೆಯೇ ವಿಜ್ರಂಭಿಸಬಹುದು. ಈ ನಾಟಕದಲ್ಲಿ ಹಿಂಸೆಯನ್ನು ಅದರ ಎಲ್ಲಾ ಆಯಾಮಗಳಲ್ಲಿ ವಿಜ್ರಂಭಿಸಲು ಪ್ರಯತ್ನಿಸಲಾಗಿದೆ. ಕಂದಮ್ಮಗಳ ಹತ್ಯೆಯ ನಂತರ ಹರಿದ ರಕ್ತವನ್ನು ತಾಂತ್ರಿಕ ಗಿಮಿಕ್ ಮೂಲಕ ಹರಿಸಿ ಪ್ರೇಕ್ಷಕರನ್ನು ಬೆಚ್ಚಿ ಬಿಳಿಸಲಾಗಿದ್ದು.. ಬಸುರಿ ಹೆಂಗಸಿನ ಗರ್ಭ ಬಗೆದು ಕಂದಮ್ಮನನ್ನು ತ್ರಿಶೂಲದಿಂದ ಎತ್ತಿ ಹಿಡಿಯುವಂತಾ ಹಸಿ ಹಸಿ ಹಿಂಸೆಯನ್ನು ವೇದಿಕೆಯ ಮೇಲೆ ತೋರಿಸಿ ನೋಡುಗರ ಮನದಲ್ಲಿ ಭೀಬತ್ಸತೆಯನ್ನು ಹುಟ್ಟಿಸಲಾಗಿದೆ. ಹಿಂಸೆ ಅದೆಷ್ಟೇ ಘೋರವಾಗಿದ್ದರೂ ಸಾಂಕೇತಿಕವಾಗಿ ತೋರಿಸುವ ಎಲ್ಲಾ ಸಾಧ್ಯತೆಗಳೂ ರಂಗಮಾಧ್ಯಮದಲ್ಲಿದೆ. ಎಲ್ಲವನ್ನೂ ಅತಿರೇಕವಾಗಿ ವೈಭವೀಕರಿಸುವುದು ಸಿನೆಮಾ ಮಾಧ್ಯಮದಲ್ಲಿ ಮಾಡಲಾಗುತ್ತದೆ. ಆದರೆ ತಮ್ಮ ಕಲಾತ್ಮಕತೆಯನ್ನು ಉಳಿಸಿಕೊಂಡು ಬಂದಿರುವ ರಂಗಮಾಧ್ಯಮದಲ್ಲಿ ಇಷ್ಟೊಂದು ಕರುಳು ಹಿಂಡುವಂತಾ ಹಿಂಸೆಯ ಅನಾವರಣ ಅಪೇಕ್ಷಣೀಯವಲ್ಲಾ. ಇದ್ದದ್ದನ್ನು ಇದ್ದಂಗೆ ತೋರಿಸುವ ಹಠವೂ ಇಲ್ಲಿ ಬೇಕಾಗಿರಲಿಲ್ಲಾ. ಅತಿ ಹಿಂಸೆಯ ದೃಶ್ಯಗಳನ್ನು ಸಾಂಕೇತಿಕವಾಗಿ ತೋರಿಸಿ ಅದರ ಪರಿಣಾಮಗಳನ್ನು ಪ್ರೇಕ್ಷಕರಲ್ಲಿ ಉಂಟುಮಾಡಿದ್ದರೆ ಈ ನಾಟಕ ಸಾರ್ಥಕವಾಗುತ್ತಿತ್ತು. ಹಿಂಸೆಯ ವಿಕಾರತೆಗಳನ್ನು ತೋರಿಸುವ ನೆಪದಲ್ಲಿ ಇಡೀ ನಾಟಕವನ್ನೇ ಹಿಂಸೆಯಲ್ಲಿ ಅದ್ದಿ ತೆಗೆದು ನೋಡುಗರ ಮುಂದೆ ಹಿಡಿದಂತಿದೆ. ನೋಡುಗರ ಹೃದಯ ಹಿಂಡುವಂತಿದೆ.

ಹಾಗೆಂದು ನಾಟಕದಲ್ಲಿ ಸಾಂಕೇತಿಕತೆ ಇಲ್ಲವೇ ಇಲ್ಲವೆಂದಲ್ಲಾ. ಬೇಕಾದಷ್ಟಿವೆ. ಮಾನವ ಬುರುಡೆಯ ಮೇಲೆ ಗೂಬೆಯ ಮುಖವಾಡವನ್ನಿಟ್ಟು ಹಿಂಸೆ ಹಾಗೂ ಅದರ ಪರಿಣಾಮವನ್ನು ಅರ್ಥಗರ್ಭಿತವಾಗಿ ತೋರಿಸಲಾಗಿದೆ. ಇಲ್ಲಿ ಗೂಬೆ ಹಿಂಸೆಯ ಪ್ರತೀಕವಾದರೆ ಮಾನವ ಬುರುಡೆ ಹಿಂಸೆಯ ಪರಿಣಾಮವನ್ನು ಹೇಳುತ್ತದೆ. ಬಿದಿರಿನ ಕೋಲು, ಗಧೆ ಹಾಗೂ ಸ್ಟೂಲ್ಸ್‌ಗಳನ್ನು ಬಳಸಿ ಬೇರೆ ಬೇರೆ ಪರಿಕರಗಳನ್ನಾಗಿ ಉಪಯೋಗಿಸಿದ್ದು ನಾಟಕದ ಅರ್ಥವ್ಯಾಪ್ತಿಯನ್ನು ಹೆಚ್ಚಿಸಿದೆ.

ಅವಾಸ್ತವಿಕ ವಸ್ತು ವಿಷಯವನ್ನು ಆಯ್ಕೆ ಮಾಡಿಕೊಂಡು ವಾಸ್ತವಿಕ ಅಂಶಗಳನ್ನು ಸೇರಿಸಿ ಅಸಂಗತ ನೆಲೆಯಲ್ಲಿ ಪ್ರಯೋಗವನ್ನು ಕಟ್ಟಿಕೊಟ್ಟ ಈ ನಾಟಕದ ವಿಶಿಷ್ಟ ರೀತಿ ನೋಡುಗರಿಗೆಲ್ಲರಿಗೂ ಸಂಪೂರ್ಣ ಅರ್ಥವಾಗದಿದ್ದರೂ ರಂಗತಂತ್ರಗಳ ಕಾರಣಕ್ಕೆ ಆಕರ್ಷಣೀಯವೆನಿಸುವಂತಿತ್ತು. ಮಾಡರ್ನ ಪೇಂಟಿಂಗ್ ಮಾದರಿಯಲ್ಲಿ ದೃಶ್ಯಗಳು ಸಂಯೋಜನೆಗೊಂಡಿದ್ದು ಭಾಷಾ ಸಂವಹನದ ಕೊರತೆಯ ನಡುವೆಯೂ ನಾಟಕ ನೋಡಿಸಿಕೊಂಡು ಹೋಗುವಂತೆ ಮೂಡಿಬಂದಿತು.

ನಾಟಕದ ತುಂಬಾ ಹಿಂಸೆ ಹಾಗೂ ಅದರ ದುಷ್ಪರಿಣಾಮಗಳನ್ನು ಕಟ್ಟಿಕೊಟ್ಟ ನಿರ್ದೇಶಕರು ಕೊನೆಗೆ ಹಿಂಸೆಯ ಅವತಾರವನ್ನು ಉಗ್ರನಿಗೆ ಹಸ್ತಾಂತರಿಸಿ ಮುಂದುವರೆಸಲು ಅವಕಾಶಮಾಡಿಕೊಟ್ಟು ನಂತರ ಹೂಗಳನ್ನು ಚೆಲ್ಲಿ ಶಾಂತಿಯ ಸಂದೇಶವನ್ನೂ ಸಾರುತ್ತಾರೆ. ಇವೆರಡೂ ಏಕಕಾಲದಲ್ಲಿ ಆಗಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಕಾಡದಿರದು. ಅಶ್ವತ್ಥಾಮನ ಚಿರಂಜೀವಿತನವನ್ನು ಹಿಂಸೆಯ ನಿರಂತರತೆಗೆ ಹೋಲಿಸಿದ್ದು ಅದ್ಭುತ ಕಲ್ಪನೆಯಾಗಿದ್ದು, ಕಾಲ ಬದಲಾದಂತೆಲ್ಲಾ ಅಶ್ವತ್ಥಾಮ ರೂಪಾಂತರಗೊಂಡು ತನ್ನ ಹಿಂಸಾಪಾತವನ್ನು ಮುಂದುವರೆಸಿಕೊಂಡು ಹೋಗುತ್ತಾನೆ ಎನ್ನುವುದು ಮನುಕುಲದ ಚರಿತ್ರೆಯಲ್ಲಿ ಸಾಬೀತಾಗುತ್ತಲೇ ಬಂದಿದೆ. ಆಳುವ ವರ್ಗಗಳ ಯುದ್ದೋನ್ಮಾದ ಹಾಗೂ ಮತಾಂಧರ ಧರ್ಮೋನ್ಮಾದಗಳು ಮನುಕುಲಕ್ಕೆ ಮಾರಕ ಎನ್ನುವುದನ್ನೂ ಈ ನಾಟಕ ಪರೋಕ್ಷವಾಗಿ ಸಾರುವಲ್ಲಿ ಯಶಸ್ವಿಯಾಗಿದೆ. ಹಿಂಸೋತ್ಪಾದಕ ಅಶ್ವತ್ಥಾಮ ಮನಸ್ಥಿತಿಯವರನ್ನು ಮಟ್ಟಹಾಕಿ ಬುದ್ದ ಬೆಳಕಿನಲಿ ಅಹಿಂಸೆಯ ಹೂಗಳನ್ನು ಜಗದಗಲ ಹರಡಿ ನೆಮ್ಮದಿಯ ವಾತಾವರಣವನ್ನು ನಿರ್ಮಿಸುವುದು ಮನುಜಕುಲದ ಆಶಯವಾಗಿದೆ. ಆದರೇನು ಮಾಡುವುದು ಅಶ್ವತ್ಥಾಮ ಚಿರಂಜೀವಿ...? ಹಾಗೆಯೇ ಹಿಂಸೆಯೂ ಕೂಡಾ..!! 

                          - ಶಶಿಕಾಂತ ಯಡಹಳ್ಳಿ
             
  
      
   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ