ಮಂಗಳವಾರ, ಮೇ 23, 2017

ಬಿಂದಾಸ್ ನಾರಿಯರ ದ್ಹೋರಿ ಜಿಂದಗಿ :



ಪುರುಷ ವಿರೋಧಿ ನೆಲೆಯಲ್ಲಿ ಮೂಡಿಬಂದ ಸಲಿಂಗಿ ನಾಟಕ ದ್ಹೋರಿ ಜಿಂದಗಿ
 

ಈ ನಾಟಕವನ್ನು ಸಿಜಿಕೆ ರಾಷ್ಟ್ರೀಯ ರಂಗೋತ್ಸವಕ್ಕೆ ಯಾರು ಯಾವ ಕಾರಣಕ್ಕೆ ಶಿಪಾರಸ್ಸು ಮಾಡಿದರೋ ಗೊತ್ತಿಲ್ಲಾ.. ಆದರೆ ಕನ್ನಡ ರಂಗಾಸಕ್ತರು ಈ ನಾಟಕದ ಅತಿರೇಕಗಳಿಗೆ ಸಾಕ್ಷಿಯಾಗುವುದು ತಪ್ಪಲಿಲ್ಲಾ. ಯಾವುದೇ ನಾಟಕ ಆಯ್ದುಕೊಂಡ ವಸ್ತು ವಿಷಯ ಹಾಗೂ ಸಿದ್ದಾಂತವನ್ನು ಪ್ರತಿಪಾದಿಸುವುದರಲ್ಲಿ ತಪ್ಪೇನಿಲ್ಲಾ.. ಆದರೆ ಹಾಗೆ ಸಮರ್ಥಿಸಿಕೊಳ್ಳುವ ಉಮೇದಿನಲ್ಲಿ ಸಾರಾಸಗಟಾಗಿ ಎಲ್ಲವನ್ನೂ ನಿರಾಕರಿಸುವ ರೀತಿಯಂತೂ ಸಮರ್ಥನೀಯವಲ್ಲಾ. ಈ ದ್ಹೋರಿ ಜಿಂದಗಿ ಎನ್ನುವ ಸಲಿಂಗಿ ವಿಷಯದ ನಾಟಕದ ವಸ್ತು ಹಾಗೂ ಅದನ್ನು ಪ್ರದರ್ಶಿಸಿದ ರೀತಿಗಳು ನಮ್ಮ ನಾಡಿಗೆ ಒಗ್ಗುವಂತಹುದಲ್ಲಾ.

ರಂಗನಿರಂತರವು ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ 2017, ಮೇ 20 ರಂದು ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ಹಿಂದಿ ಭಾಷೆಯ ದ್ಹೋರಿ ಜಿಂದಗಿ ನಾಟಕವನ್ನು ಗುಜರಾತಿನ ಕಥೆಗಾರ ವಿಜಯ್‌ದಾನ್ ದೆಥಾರವರ ಕಥೆಯನ್ನಾಧರಿಸಿ ಗುತ್ಲೀನ್ ಜಡ್ಜ್ ರವರು ನಿರ್ದೇಶಿಸಿದ್ದು, ಪ್ಲೇ ಆನ್ ಪ್ರೊಡಕ್ಷನ್ ರಂಗತಂಡದ ಕಲಾವಿದರು ಅಭಿನಯಿಸಿ ಮಳೆ ಗಾಳಿ ಚಳಿಯಲ್ಲೂ ನೋಡುಗರ ಮೈಮನದಲ್ಲಿ ಬಿಸಿ ಏರಿಸಿದರು. 

ನಾಟಕದ ಸಾರ ಹೀಗಿದೆ.. ಅಕ್ಕಪಕ್ಕದ ಹಳ್ಳಿಯಲ್ಲಿರುವ ಇಬ್ಬರು ಜಿಪುಣ ವ್ಯಾಪಾರಿಗಳು ಇನ್ನೂ ಹುಟ್ಟದೇ ಇರುವ ತಮ್ಮ ಮಕ್ಕಳ ಮದುವೆಗೆ ಪೂರ್ವಭಾವಿ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಆದರೆ ಇಬ್ಬರ ಮನೆಯಲ್ಲೂ ಹೆಣ್ಣೇ ಹುಟ್ಟಿದಾಗ ಒಬ್ಬಾತ ವರದಕ್ಷಿಣೆಯ ಆಸೆಗೆ ತನ್ನ ಮನೆಯಲ್ಲಿ ಗಂಡು ಹುಟ್ಟಿತೆಂದು ಸುಳ್ಳು ಹೇಳಿ ಹುಟ್ಟಿದ ಮಗುವನ್ನು ಗಂಡಿನಂತೆಯೇ ಬೆಳಸುತ್ತಾನೆ. ಮದುವೆಯ ದಿನದ ರಾತ್ರಿ ಗಂಡು ಹೆಣ್ಣು ಇಬ್ಬರಿಗೂ ಸತ್ಯದ ಅರಿವಾದರೂ ಸಲಿಂಗಿ ಜೋಡಿಗಳಾಗಿ ಜೊತೆಗೆ ಕೂಡಿ ಬಾಳಲು ನಿರ್ಧರಿಸುತ್ತಾರೆ. ಅದು ಹೇಗೋ ಜನರಿಗೆ ಗೊತ್ತಾಗಿ ಇಬ್ಬರಿಗೂ ಬೇರೆ ಗಂಡು ನೋಡಿ ಮದುವೆ ಮಾಡಲು ಒತ್ತಡ ಬಂದಾಗ ಈ ಇಬ್ಬರೂ ಮನೆ ಬಿಟ್ಟು ಊರ ಹೊರಗಿನ ಭೂತದ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಅಲ್ಲಿ ಭೂತಪ್ಪನ ವರದಿಂದ ಒಬ್ಬಳು ಗಂಡಾಗಿ ಪರಿವರ್ತನೆ ಹೊಂದಿ ಹೆಂಡತಿಯಾದವಳ ಮೇಲೆ ಪುರುಷ ದೌರ್ಜನ್ಯವನ್ನು ಮುಂದುವರೆಸಿ ಅತ್ಯಾಚಾರವನ್ನೂ ಮಾಡಿ ನಂತರ ಪುರುಷನಾಗಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಭೂತದ ಶರತ್ತಿನಂತೆ ಮತ್ತೆ ಹೆಣ್ಣಾಗುತ್ತಾಳೆ. ಅತ್ಯಾಚಾರದಿಂದ ಹೊಟ್ಟೆಯಲ್ಲಿ ಹರಳುಗಟ್ಟಿದ ಬ್ರೂಣವನ್ನು ಭೂತ ತೆಗೆದುಹಾಕಿ ಇಬ್ಬರಿಗೂ ಸುಖವಾಗಿ ಸಲಿಂಗಿ ಸಂಸಾರ ಮಾಡಿಕೊಂಡಿರಲು ಅನುವು ಮಾಡಿಕೊಡುವ ಮೂಲಕ ನಾಟಕ ಮುಗಿಯುತ್ತದೆ.. ಆದರೆ ಪ್ರೇಕ್ಷಕರ ಮೆದುಳಿಗೆ ಕೈಹಾಕಿ ಅನೇಕಾನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಸಲಿಂಗಿಗಳ ಕುರಿತು ಕೆಲವಾರು ಸಿನೆಮಾ ಹಾಗೂ ನಾಟಕಗಳು ಈಗಾಗಲೇ ಭಾರತೀಯ ರಂಗಭೂಮಿಯಲ್ಲಿ ಬಂದಿವೆ. ಸ್ತ್ರೀವಾದಿ ನಾಟಕಗಳೂ ಬೇಕಾದಷ್ಟಾಗಿವೆ. ಪರ ವಿರೋಧ ಚರ್ಚೆಗಳೂ ಆಗಿವೆ.  ಲೆಸ್ಬಿಯನ್ ಆಗಿರಲಿ ಇಲ್ಲವೇ ಗೇ ಸಂಬಂಧಗಳಾಗಿರಲಿ ಅವು ವ್ಯಕ್ತಿಯ ಖಾಸಗಿ ಬದುಕಿನ ಹಕ್ಕಾಗಿವೆ. ದಮನಕಾರಿಯಲ್ಲದ ಸ್ವಇಚ್ಚೆಯಿಂದ ಜೊತೆಗೂಡುವ ವಯಸ್ಕ ಗಂಡು ಗಂಡು ಹಾಗೂ ಹೆಣ್ಣು ಹೆಣ್ಣು ಸಂಬಂಧಗಳು ಹಾಗೂ ಮದುವೆಗಳ ಬಗ್ಗೆ ಅಕ್ಷೇಪನೆ ಮಾಡುವಂತಹುದೇನಿಲ್ಲಾ. ಹಲವಾರು ದೇಶಗಳು ಇಂತಹ ಸಂಬಂಧಗಳನ್ನು ಕಾನೂನು ಬದ್ದವಾಗಿ ಒಪ್ಪಿಕೊಂಡಿವೆ. ಭಾರತೀಯ ಸಮಾಜದಲ್ಲಿ ಸಂಸ್ಕೃತಿ ಹಾಗೂ ನೈತಿಕತೆಯ ಹುಸಿ ಮೌಲ್ಯಗಳನ್ನು ಮುಂದಿರಿಸಿ ಈ ವ್ಯಕ್ತಿಗತ ಸಂಬಂಧಗಳನ್ನು ವಿರೋಧಿಸುವುದು ಸಹ ಅಮಾನವೀಯವಾಗಿವೆ. ಈ ನಾಟಕವೂ ಸಹ ಸಲಿಂಗಿ ಸಂಬಂಧವನ್ನು ಗಟ್ಟಿಯಾಗಿ ಎತ್ತಿ ಹಿಡಿಯುತ್ತದೆ. ಸಂಪ್ರದಾಯ ಹಾಗೂ ನೈತಿಕತೆಯ ಹೆಸರಿನ ಸಾಮಾಜಿಕ ಅತಿರೇಕಗಳನ್ನು ದಿಟ್ಟವಾಗಿ ವಿರೋಧಿಸುತ್ತದೆ.

ಇಷ್ಟೇ ಆಗಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲಾ. ಅದು ವ್ಯಕ್ತಿಗತ ಸ್ವಾತಂತ್ರ್ಯ ಎನ್ನಬಹುದಾಗಿತ್ತು. ನೋಡುಗರು ಸಂಪ್ರದಾಯವಾದಿಗಳಾಗಿದ್ದರೆ ಸ್ವೇಚ್ಚಾಚಾರದ ಅತಿರೇಕವೆಂದು ಗೊಣಗಬಹುದಾಗಿತ್ತು.  ಆದರೆ.. ಯಾವಾಗ ಇಡೀ ಪುರುಷ ಕುಲವನ್ನೇ ಸಾರಾಸಗಟಾಗಿ ನಿಂದಿಸಿ ಇಡೀ ಸಮಾಜವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಈ ನಾಟಕ ಪ್ರಯತ್ನಿಸಿತೋ ಆಗ ಈ ನಾಟಕದ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಪುರುಷ ಪ್ರಧಾನ ಕನ್ನಡಕ ಹಾಕಿಕೊಂಡು ನೈತಿಕ ಮೌಲ್ಯಗಳನ್ನು ಹೇರಿ ಮಹಿಳೆಯರನ್ನು ಅಡಿಯಾಳಾಗಿಸಿಕೊಂಡು ಆಳಬಯಸಲು ಪ್ರಯತ್ನಿಸುವುದು ಎಷ್ಟು ಅಪಾಯಕಾರಿಯೋ... ಅತಿರೇಕದ ಫೆಮಿನಿಸ್ಟ್ ಕನ್ನಡಕ ಧರಿಸಿ ಪುರುಷ ದ್ವೇಷವನ್ನು ಪ್ರತಿಪಾದಿಸಿ ಮಹಿಳಾ ಸ್ವಾತಂತ್ರ್ಯವನ್ನು ಬಯಸುವುದೂ ಸಹ ಅನಾಹುತಕಾರಿಯಾದದ್ದು.

ಮೀಸೆ ಹೊತ್ತ ಗಂಡಸರನ್ನೆಲ್ಲಾ ಇನ್ನಿಲ್ಲದಂತೆ ಟೀಕಿಸಿ ಪುರುಷರಿಗೆಲ್ಲಾ ಸವಾಲು ಹಾಕುವ ಈ ಉಗ್ರ ಫೆಮಿನಿಸ್ಟ್ ಪರ ನಾಟಕದ ನಿರ್ದೇಶಕಿಗೆ ಎಲ್ಲಾ ಗಂಡಸರೂ ಕೆಟ್ಟವರಲ್ಲಾ... ಹಾಗೆಯೇ ಎಲ್ಲಾ ಹೆಂಗಸರೂ ಒಳ್ಳೆಯವರಲ್ಲಾ... ಎನ್ನುವ ಕನಿಷ್ಟ ಅರಿವು ಇರುವುದುತ್ತಮ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮಹಿಳಾಪರ ಸ್ವಾತಂತ್ರ್ಯಕ್ಕೆ ತುಡಿಯುವ ಮಾನವೀಯ ಪುರುಷರೂ ಇದೇ ಸಮಾಜದಲ್ಲಿದ್ದಾರೆ. ಹಾಗೆಯೇ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪುರುಷರನ್ನು ಗೋಳು ಹೊಯ್ದುಕೊಳ್ಳುವ... ನಿಂದಿಸಿ, ಹಂಗಿಸಿ ಶೋಷಿಸುವ ಹೆಂಗಸರೂ ಇದೇ ಸೊಸೈಟಿಯಲ್ಲಿದ್ದಾರೆ.... ಹೀಗಿರುವಾಗ ಪುರುಷ ಕುಲವೇ ಸ್ತ್ರೀವಿರೋಧಿ ಎಂದು ಪುರುಷರನ್ನು ಸಾರಾಸಗಟಾಗಿ ಹಿಯಾಳಿಸುವ ಈ ನಾಟಕದಲ್ಲಿ ಕೊನೆಗೆ ಮನೆ ಬಿಟ್ಟು ಓಡಿಹೋಗಿ ಜೊತೆಗೆ ಬಾಳುವ ಈ ಸಲಿಂಗಿಮೋಹಿ ಮಹಿಳೆಯರಿಗೆ ಸಹಾಯ ಮಾಡುವುದೂ ಸಹ ಭೂತದ ಸರದಾರ ಅಂದರೆ ಗಂಡು ಭೂತ ಎನ್ನುವುದು ಈ ನಾಟಕದ ವಿಪರ್ಯಾಸ... 

ಭೂತವೊಂದರ ವರದಾನದಿಂದ ಹೆಣ್ಣು ಗಂಡಾದಾಗ ಪುರುಷ ಪ್ರಧಾನವಾದ ಸ್ತ್ರೀ ದಮನ ಗುಣವನ್ನು ಜೊತೆಗೆ ರೂಢಿಸಿಕೊಳ್ಳುತ್ತಾನೆ ಎನ್ನುವ ಈ ನಾಟಕದ ಆಶಯ ಸಂಪೂರ್ಣ ಸಮರ್ಥನೀಯವಲ್ಲ. ಈ ನಾಟಕದ ಆಶಯದಂತೆ ಗಂಡಸರೆಲ್ಲಾ ಸ್ತ್ರೀ ಪೀಡಕರೆಂದು  ಬಗೆದು ಹೆಣ್ಣು ಹೆಣ್ಣು ಮದುವೆಯಾಗಿ ಸಂಸಾರ ಮಾಡಲು ಆರಂಭಿಸಿದರೆ ಮನುಕುಲದ ಗತಿ ಏನು? ಯಾವ ನಿಟ್ಟಿನಿಂದ ನೋಡಿದರೂ ನಾಟಕದ ಉದ್ದೇಶ ಒಪ್ಪಿಗೆಯಾಗತಕ್ಕದ್ದಲ್ಲಾ. ಗಂಡಾಗಲೀ ಹೆಣ್ಣಾಗಲೀ ಅವಕಾಶ ಸಿಕ್ಕಾಗ ಸಿಕ್ಕಷ್ಟು ದಮನಕಾರಿಯಾಗಿ ವರ್ತಿಸುವುದು ನಡೆದೇ ಇದೆ.  ಗಂಡಾಗಲಿ ಹೆಣ್ಣಾಗಲಿ ನಡುವೆ ಸುಳಿವಾತ್ಮ ಗಂಡೂ ಅಲ್ಲಾ..ಹೆಣ್ಣೂ ಅಲ್ಲಾ. ದಮನಕ್ಕೆ.. ಶೋಷನೆಗೆ... ದೌರ್ಜನ್ಯಕ್ಕೆ ಗಂಡು ಹೆಣ್ಣೆಂಬ ಬೇದವೂ ಇಲ್ಲಾ. ಸಮಯ ಸಂದರ್ಭ ಹಾಗೂ ಅವಕಾಶಗಳ ದುರುಪಯೋಗದ ಮೇಲೆ ಎಲ್ಲಾ ಅವಲಂಬಿತವಾಗಿರುತ್ತದೆ.  ದೇಹ ರಚನೆ ಭಿನ್ನವಾಗಿದ್ದರೂ ಸಕಾರ ನಕಾರ ಆಲೋಚನೆಗಳು ಪುರುಷ ಮಹಿಳೆಯರಲ್ಲಿ ಭಿನ್ನವಾಗೇನೂ ಇರಲು ಸಾಧ್ಯವಿಲ್ಲ. ಗಂಡಸರೆಲ್ಲಾ ದಮನಕಾರಿ ದುಷ್ಟರು ಹಾಗೂ ಹೆಂಗಸರೆಲ್ಲಾ ಸಂಭಾವಿತ ಶೋಷಿತರು ಎಂದು ಸಾರ್ವತ್ರೀಕರಣ ಮಾಡಿ ತೀರ್ಮಾನ ಕೊಡುವುದು ಒನ್ ಸೈಡೆಡ್ ನಿರ್ಣಯವಾಗುತ್ತದೆ. ಗಂಡು ಹೆಣ್ಣು ಇಬ್ಬರಲ್ಲೂ ಯಾರೂ ಯಾರ ಮೇಲೂ ಅಧಿಕಾರ ಚಲಾಯಿಸಿ ಗೆಲ್ಲುವುದಕ್ಕೆ ನೋಡದೇ ಪರಸ್ಪರ ಗೌರವಾದರದಿಂದ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ಮನುಕುಲದ ಒಳಿತಿದೆ ಎಂಬುದು ಸಾರ್ವಕಾಲಿಕ ಸತ್ಯವೇ ಹೊರತು ಗಂಡು ಹೆಣ್ಣು ಪರಸ್ಪರ ದ್ವೇಷವನ್ನು ಬೆಳೆಸಿಕೊಂಡು ಸಲಿಂಗಿ ಸಂಸಾರ ಮಾಡಿ ಬದುಕು ಗೆಲ್ಲುತ್ತೇನೆ ಎನ್ನುವುದು ಪ್ರಕೃತಿ ವಿರೋಧಿ ಕೃತ್ಯವಾಗಿದೆ.

ಈ ನಾಟಕದ ನಿರ್ದೇಶಕಿ ಹಾಗೂ ನಟಿಯರು ಇನ್ನೂ ಹರೆಯದ ಯುವತಿಯರು. ಗಂಡು ಹೆಣ್ಣಿನ ಸಂಬಂಧದ ಆಳ ಅಗಲ ಅನಿವಾರ್ಯತೆ ಅರಿಯದವರು. ಹೀಗಾಗಿ ಪುರುಷರ ಮೇಲೆ ಆರೋಪ ಮಾಡಿ ಹೆಣ್ಣುಗಳು ಜೊತೆಯಾಗಿ ಬಾಳುವ ಲೆಸ್ಬಿಯನ್ ಕಾನ್ಸೆಪ್ಟ್ ಇರುವ ನಾಟಕ ಕಟ್ಟಿ ಕೊಟ್ಟಿದ್ದಾರೆ. ಇಲ್ಲಿ ಲೆಸ್ಬಿಯನ್ ಆಗಿರೋದು ಅಪೇಕ್ಷಣೀಯವಲ್ಲಾ.. ಆದರೆ ಪುರುಷ ದ್ವೇಷದ ಸಾರ್ವತ್ರಿಕ ಪ್ರತಿಪಾದನೆ ಆಕ್ಷೇಪನೀಯ. ಆದರೆ ರಿಯಾಲಿಟಿ ಬೇರೆಯದೇ ಆಗಿದೆ.. ಪ್ರಕೃತಿ ಬಿಟ್ಟು ಪುರುಷನಿಲ್ಲಾ... ಪುರುಷನ ಬಿಟ್ಟು ಪ್ರಕೃತಿಯಿಲ್ಲಾ... ಈ ಪ್ರಕೃತಿ ಹಾಗೂ ಪುರುಷ ಜೊತೆಯಾಗಿಲ್ಲದಿರೆ ಮನುಕುಲವೇ ಇಲ್ಲಾ ಎನ್ನುವ ಸತ್ಯವನ್ನು ಈ ಯುವತಿಯರು ಅರಿಯಬೇಕಿದೆ... ತಮ್ಮ ನಾಟಕದ ಸಂದರ್ಭವನ್ನು ಸಾರ್ವತ್ರೀಕರಣ ಮಾಡಿ ಇಡಿಯಾಗಿ ಪುರುಷಕುಲವನ್ನು ಹಾಗೂ ಸಮಗ್ರವಾಗಿ ಸಮಾಜವನ್ನು ದೂಷಿಸದೇ ತಮಗೊದಗಿದ ಅನ್ಯಾಯಕ್ಕೆ ಕಾರಣರಾದವರನ್ನು ಮಾತ್ರ ವಿಮರ್ಶೆಗೊಳಸಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟರೆ ಚೆಂದ. ಒಂದು ಅಪರೂಪದ ಘಟನೆಯನ್ನು ಸಾರ್ವತ್ರೀರಣಗೊಳಿಸಿ ಮಹಿಳೆಯ ಸ್ವಾತಂತ್ರ್ಯಕ್ಕೆ ಸಲಿಂಗಿ ಸಂಸಾರವೇ ಪರ್ಯಾಯವೆಂದು ಸಾರುವುದು ಅತೀ ದೊಡ್ಡ ಅಪಾಯಕಾರಿಯಾಗಿದೆ. ಅದರ ಬದಲಾಗಿ ಸಲಿಂಗಿಗಳಿಗೂ ಜೊತೆಯಾಗಿ ಬದುಕುವ ಹಕ್ಕಿದೆ ಎಂದು ಹೇಳಿದ್ದರೆ ಈ ನಾಟಕಕ್ಕೆ ಮಾನವೀಯ ನೆಲೆ ಬರುತ್ತಿತ್ತು.     

ಹೌದು.. ಮಹಿಳೆಯರ ಮೇಲೆ ಶತಮಾನಗಳಿಂದ ದಬ್ಬಾಳಿಕೆ ಆಗ್ತಿದೆ... ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಹಕ್ಕುಗಳನ್ನು ನಿಯಂತ್ರಿಸುತ್ತಿದೆ ಎನ್ನುವುದು ಕಣ್ಣಿಗೆ ಕಾಣುವ ವಾಸ್ತವ. ಆಗ ಪುರುಷರ ದೌರ್ಜನ್ಯ ಹಾಗೂ ದಮನವನ್ನು... ಪಿತೃಪ್ರಧಾನ ವ್ಯವಸ್ಥೆ ಸೃಷ್ಟಿಸಿ ಆಚರಿಸುತ್ತಿರುವ ಲಿಂಗ ಅಸಮಾನತೆಯನ್ನು ಮಹಿಳೆಯರು ಖಂಡಿಸಬೇಕೆ ಹೊರತು ಇಡೀ ಪುರುಷ ಕುಲವನ್ನಲ್ಲಾ... ಅಥವಾ ಗಂಡು ಹೆಣ್ಣು ಇಬ್ಬರೂ ಸೇರಿ ಕಟ್ಟಿರುವ ಸಮಾಜವನ್ನಲ್ಲಾ. ಆಚರಿಸಲು ಅಸಾಧ್ಯವಾದ ಆದರ್ಶವನ್ನು ಹೇಳುವ ಈ ನಾಟಕವು ಹೆಣ್ಣಿನ ಜೊತೆಗೆ ಹೆಣ್ಣು ಸಂಸಾರ ಮಾಡಬಯಸಿ ಸುಖವಾಗಿರುವ ಪರ್ಯಾಯವನ್ನು ಹೇಳುತ್ತದೆ. ಕಾಲಿಗೆ ಕ್ಯಾನ್ಸರ್ ಬಂದಾಗ ಅನಿವಾರ್ಯವಾದರೆ ಕಾಲು ಕತ್ತರಿಸಿ ಜೀವ ಉಳಿಸಬೇಕೆ ಹೊರತು  ಪ್ರಾಣವನ್ನೇ  ತೆಗೆಯುವುದು ಸೂಕ್ತವೆಂಬುದು ಸಮರ್ಥನೀಯವಲ್ಲ. ಹೌದು ಎಲ್ಲಾ ಕಾಲಕ್ಕೂ ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ಲಿಂಗತಾರತಮ್ಯ ನಿರಂತರವಾಗಿದೆ. ಅದರ ವಿರುದ್ದ ಪ್ರತಿಭಟಿಸಬೇಕೆ ಹೊರತು ಪುರುಷರ ಹಂಗನ್ನೇ ತೊರೆದು ಹೆಣ್ಣು ಹೆಣ್ಣನ್ನೇ ಮದುವೆಯಾಗಿ ಸಲಿಂಗಿ ಸಂಸಾರ ಹೂಡಿ ಬದುಕುವುದೇ ಪರ್ಯಾಯವೆಂದು ಹೇಳುವುದು ಪ್ರಶ್ನಾರ್ಹವಾಗಿದೆ.

ಇಡೀ ಸಮಾಜದ ಬಗ್ಗೆ ಈ ನಾಟಕ ಅವಹೇಳನಕಾರಿಯಾಗಿ ಮಾತಾಡುತ್ತದೆ. ಆದರೆ ಇದೇ ಸಮಾಜದಲ್ಲಿ ಮಹಿಳೆಯರ ಪಾಲು ಅರ್ಧದಷ್ಟಿದೆ ಎಂಬುದನ್ನು ಮರೆತಂತಿದೆ. ಗಂಡು ಹೆಣ್ಣುಗಳೆಲ್ಲಾ ಸೇರಿಯೇ ಸಮಾಜ ಸೃಷ್ಟಿಯಾಗುತ್ತದೆ. ಇಲ್ಲಿ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬದಲಾಗಿ ಸಮಾಜದಲ್ಲಿ ಲಿಂಗತಾರತಮ್ಯವನ್ನು ಹುಟ್ಟು ಹಾಕಿದ ಪುರೋಹಿತಶಾಹಿ ವ್ಯವಸ್ಥೆಯನ್ನು ಹಾಗೂ ಮನುವಾದಿ ಮನಸ್ಥಿತಿಯವರನ್ನು ವಿರೋಧಿಸಬೇಕಿದೆ. ಇಲ್ಲಿ ಇಡೀ ಸಮಾಜ ನೈತಿಕ ಪೊಲೀಸ್‌ಗಿರಿ ಮಾಡುತ್ತಿಲ್ಲಾ... ಹಾಗೂ ನೈತಿಕ ಗುತ್ತಿಗೆದಾರಿ ಕೆಲಸ ಹಿಡಿದಿಲ್ಲ. ಆದರೆ ಕೆಲವು ಸಂಪ್ರದಾಯವಾಗಿ ಮನಸ್ಥಿತಿಯ ಮನುವಾದಿಗಳು ನೈತಿಕ ಗುತ್ತಿಗೆ ಪಡೆದವರಂತೆ ಮರೆಯುತ್ತಾರೆ. ಅಂತವರ ವಿರುದ್ದ ಲಿಂಗ ಸಮಾನತೆ ಬಯಸುವ ಎಲ್ಲಾ ಗಂಡು ಹಾಗೂ ಹೆಣ್ಣುಗಳು ಪ್ರತಿಭಟಿಸಿ ಅಂತವರನ್ನು ಮಟ್ಟಹಾಕಬೇಕಿದೆ. ಲಿಂಗ ತಾರತಮ್ಯವಿಲ್ಲದ ಸಮಾಜ ನಿರ್ಮಿಸಬೇಕಿದೆ. ಅದರ ಬದಲಾಗಿ ಸಮಾಜವೇ ಸರಿ ಇಲ್ಲವೆಂದು ಆಪಾದಿಸಿ ಸಪರೇಟ್ ಆಗಿ ಸಮಾಜವನ್ನೇ ಬಿಟ್ಟು ಬದುಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಇನ್ನೊಬ್ಬರ ಶ್ರಮ ಹಾಗೂ ಸಹಕಾರದ ಮೇಲೆ ಅವಲಂಬಿತರು.  ಒಬ್ಬರಿಗೊಬ್ಬರು ಸಹಕರಿಸುತ್ತಾ ಬದುಕುವುದೇ ಜೀವನ.  

ಈ ನಾಟಕದಲ್ಲಿ ಸಮಾಜದ ಹಂಗು ತೊರೆದು ಇಬ್ಬರೇ ಬದುಕುತ್ತೇವೆಂದು ಹೋದ ಯುವತಿಯರಿಗೆ ಭೂತವೊಂದು ಎಲ್ಲ ಸವಲತ್ತನ್ನು ಕೊಟ್ಟಿರಬಹುದು. ಆದರೆ ವಾಸ್ತವದಲ್ಲಿ ಯಾವ ದೆವ್ವವಾಗಲಿ ಇಲ್ಲವೇ ದೇವರಾಗಲಿ ಸಹಾಯಕ್ಕೆ ಬರಲು ಸಾಧ್ಯವಿಲ್ಲ. ಮತ್ತೆ ಮನುಷ್ಯರಿಗೆ ಮನುಷ್ಯರೇ ಸಹಾಯ ಮಾಡಲು ಸಾಧ್ಯ. ಈಗಲೂ ಮಹಿಳೆಯೊಬ್ಬರು ರಸ್ತೆಯಲ್ಲಿ ಬಿದ್ದರೆ ಹತ್ತಾರು ಗಂಡಸರು ಸಹಾಯಕ್ಕೆ ಧಾವಿಸುತ್ತಾರೆ. ಅದೇ ಗಂಡಸೊಬ್ಬ ಬಿದ್ದಿದ್ದರೆ ಎಷ್ಟು ಜನ ಹೆಂಗಸರು ಓಡಿ ಹೋಗಿ ಸಹಾಯ ಮಾಡುತ್ತಾರೆಂದು ಗಂಡಸರು ಮಹಿಳಾವಾದಿಗಳನ್ನು ಆಗಾಗ ಕೆಣಕಿ ಪ್ರಶ್ನಿಸುತ್ತಾರೆ. ಹೆಣ್ಣು ಹೆಣ್ಣು ಸೇರಿ ಸುಖವಾಗಿ ಸಂಸಾರ ಮಾಡಬಹುದು ಎನ್ನುವುದೂ ಹುಸಿ ಆದರ್ಶವಾದವಾಗಿದೆ. ಗಂಡಾಗಲಿ ಹೆಣ್ಣಾಗಲಿ ಮೂಲಭೂತ ಅರಿಷಡ್ ವರ್ಗಗಳನ್ನು ಹೊಂದಿದವರೇ ಆಗಿದ್ದಾರೆ. ಹೆಂಗಸರೆ ಜೊತೆಯಾಗಿದ್ದರೂ ಅವರಲ್ಲೂ  ಹೆಚ್ಚುಗಾರಿಕೆಯ ಮೇಲಾಟ ಇದ್ದೇ ಇರುತ್ತದೆ. ಇಲ್ಲಿ ನೆಮ್ಮದಿ ಎನ್ನುವುದು ಸೆಪರೇಟ್ ಆಗಿ ಬದುಕುವುದರಿಂದ ಬರುತ್ತದೆಂಬುದು ಸತ್ಯವಲ್ಲಾ. ಗಂಡು ಹೆಣ್ಣು ಪರಸ್ಪರ ಆದರ ಹಾಗೂ ಹೊಂದಾಣಿಕೆಯಿಂದ ಮಾತ್ರ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವೆಂಬುದು ಸಾರ್ವಕಾಲಿಕ ಸತ್ಯ. ಅಕಸ್ಮಾತ್ ಹೊಂದಾಣಿಕೆಯಾಗದಿದ್ದರೆ ದಮನವನ್ನು ಪ್ರತಿಭಟಿಸಿ ತಮ್ಮ ಹಕ್ಕನ್ನು ಪಡೆಯುವ ಇಲ್ಲವೇ ಬೇರೆಯಾಗಿ ಹೋಗಿ ಮತ್ತೊಂದು ಮರು ಬದುಕನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ಗಂಡು ಮತ್ತು ಹೆಣ್ಣಿಗೆ ಪ್ರಜಾಸಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿದೆ. ಸಮಾಜದ ನೈತಿಕಗಿರಿ ದಮನಕಾರಿಯಾದರೆ ಸಮಾಜದಿಂದ ಓಡಿ ಹೋಗದೇ ಸಂಘಟಿತ ಹೋರಾಟವನ್ನು ಮಾಡಿ ಗೆಲುವನ್ನು ಪಡೆಯುವ ಪರ್ಯಾಯ ಮಾರ್ಗವೂ ಇದೆ. ಹಲವಾರು ದೇಶಗಳಲ್ಲಿ ಸಲಿಂಗಿಗಳ ಹೋರಾಟ ಫಲಕೊಟ್ಟಿದೆ. ಈ ನಾಟಕದ ನಿರ್ದೇಶಕಿ ಈ ನಿಟ್ಟಿನಲ್ಲಿ ಯೋಚಿಸಿದ್ದರೆ ಜೀವವಿರೋಧಿಯಾದ ಸಾಂಪ್ರದಾಯಿಕ ನೈತಿಕಗಿರಿಯನ್ನು ಪ್ರಶ್ನಿಸಿದಂತೆಯೂ ಆಗುತ್ತಿತ್ತು ಹಾಗೂ ಸಲಿಂಗಿಗಳ ಹಕ್ಕುಗಳನ್ನು ಎತ್ತಿ ಹಿಡಿದಂತೆಯೂ ಆಗುತ್ತಿತ್ತು.  ಆದರೆ.. ಹಾಗಾಗದೇ ಸ್ವತಃ ನಾಟಕವೇ ಜನವಿರೋಧಿಯಾಗಿದ್ದೊಂದು ವಿಪರ್ಯಾಸ.

ಇನ್ನೂ ಈ ನಾಟಕದ ನಿರ್ಮಾತೃಗಳು ಮಾಗಬೇಕು. ಬದುಕಿನ ಅಗತ್ಯಗಳಂತೆ ಅನಿವಾರ್ಯತೆಗಳನ್ನು ಅರಿಯಬೇಕು. ಸ್ವಾತಂತ್ರ್ಯವೆಂದರೆ ದಮನದಿಂದ ವಿಮೋಚನೆ ಪಡೆಯುವ ಪ್ರಕ್ರಿಯೇಯೇ ಹೊರತು ಪುರುಷದ್ವೇಷವಾಗಲೀ ಇಲ್ಲವೇ ಸಮಾಜ ದ್ವೇಷವಾಗಲಿ ಅಲ್ಲಾ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಹಾಗೂ ಇದೆಲ್ಲಾ ಮನದಟ್ಟಾಗುವುದು ಅಪಾರ ಅನುಭವದಿಂದ ಮಾತ್ರ ಸಾಧ್ಯ? ಸಲಿಂಗಿ ಮೋಹ ಎನ್ನುವುದು ಪುರುಷದ್ವೇಷಕ್ಕಿಂತಲೂ ಹಾರ್ಮೋನುಗಳ ವ್ಯತ್ಯಾಸದಿಂದ ಹುಟ್ಟುವಂತಹುದು. ಪರಿಸ್ಥಿತಿಯ ಒತ್ತಡದಿಂದಲೂ ಸೃಷ್ಟಿಯಾಗಬಹುದಾದಂತಹುದು. ಹೀಗಾಗಿ ಸಲಿಂಗಿಗಳ ಸಮಸ್ಯೆಗಳನ್ನು ವಿವರಿಸಿ ಅವರಿಗೂ ಈ ಭೂಮಿಯ ಮೇಲೆ ಘನತೆಯಿಂದ ಬದುಕುವ ಹಕ್ಕಿದೆ ಎಂದು ಈ ನಾಟಕ ಪ್ರತಿಪಾದಿಸಿದ್ದರೆ ಚೆನ್ನಾಗಿತ್ತು.

ಸಲಿಂಗಿ ಸ್ವಾತಂತ್ರ್ಯವನ್ನು ವಿಕ್ಷಿಪ್ತವಾಗಿ ಹೇಳುವ ಈ ನಾಟಕದಲ್ಲಿ ಭೂತದಿಂದ ಬ್ರೂಣ ಹತ್ಯೆ ನಡೆಯುತ್ತದೆ. ಇದು ಎಷ್ಟು ಸಮರ್ಥನೀಯ ಎನ್ನುವ ಪ್ರಶ್ನೆ ಕಾಡದೇ ಇರದು. ಮಗು ಅತ್ಯಾಚಾರದಿಂದ ಹುಟ್ಟಲಿ, ಇಲ್ಲವೇ ಅನೈತಿಕತೆಯಿಂದ ಹುಟ್ಟಲಿ, ಅಥವಾ ಯಾವುದೇ ರೀತಿ ಪಿಂಡ ಆಕಾರ ಪಡೆಯಲಿ.. ಅದನ್ನು ತಾಯಿಯ ಗರ್ಭದಲ್ಲಿದ್ದಾಗಲೇ ತೆಗೆದು ಹಾಕುವುದನ್ನು ಭೂತವೇ ಮಾಡಲಿ ಇಲ್ಲವೇ ಯಾರೇ ಮಾಡಲಿ ಅದು ಖಂಡನೀಯ. ಈ ನಾಟಕದಲ್ಲಿ ಸಲಿಂಗಿಗಳನ್ನು ಸಲಿಂಗಿಗಳನ್ನಾಗಿಯೇ ಉಳಿಸಲು ಭೂತದ ಕೈಯಿಂದ ಬ್ರೂಣ ಹತ್ಯೆ ಮಾಡಿಸಲಾಗಿದ್ದು ಅಕ್ಷಮ್ಯ. ಹಾಗೂ ಇದು ನಕಾರಾತ್ಮಕ ಪರಿಣಾಮವನ್ನು ಪ್ರೇಕ್ಷಕರ ಮೇಲೆ  ಮೂಡಿಸಬಹುದಾಗಿದೆ. 

ಪ್ಯಾಂಟಸಿ ಮಾದರಿಯ ಕಪೋಲ ಕಲ್ಪಿತ ಕಥೆಯಾಧಾರಿತ ಈ ವಿಕ್ಷಿಪ್ತ ನಾಟಕವನ್ನು ಪ್ರದರ್ಶಿಸಿದ ರೀತಿ ಬಹಳಾ ವಿಶಿಷ್ಟವಾಗಿತ್ತು. ಹಲವಾರು ಪೇಂಟಿಂಗ್‌ಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದು ಹೊಸ ರೀತಿಯದ್ದಾಗಿತ್ತು. ಬಹುಪಾತ್ರಗಳನ್ನು ಈ ನಾಟಕ ಡಿಮ್ಯಾಂಡ್ ಮಾಡಿದರೂ ಪ್ರಮುಖವಾಗಿ ಇಬ್ಬರೇ ಯುವತಿಯರು ಎಲ್ಲಾ ಪಾತ್ರಗಳನ್ನೂ ನಟಿಸಲು ಪ್ರಯತ್ನಿಸಿದ್ದಾರೆ. ಏಕವ್ಯಕ್ತಿ ಪ್ರಯೋಗದಲ್ಲಿ ಹೇಗೆ ಒಬ್ಬ ವ್ಯಕ್ತಿ ಹಲವಾರು ಪಾತ್ರಗಳನ್ನು ಅಭಿನಯಿಸುತ್ತಾರೋ ಹಾಗೆಯೇ ಇಲ್ಲಿ ಇಬ್ಬರು ವ್ಯಕ್ತಿಗಳು ನಾಟಕದೆಲ್ಲಾ ಪಾತ್ರಗಳನ್ನೂ ಅಭಿನಯಿಸಿದ್ದಾರೆ. ನಿರೂಪಕರಾಗಿ, ವರ್ತಕ ಮಿತ್ರರಾಗಿ, ಗಂಡು ಹೆಣ್ಣುಗಳಾಗಿ, ಗೆಳತಿ ಮುದುಕಿಯರಾಗಿ ಹೀಗೆ ಹಲವು ಪಾತ್ರಗಳಿಗೆ ಜೀವತುಂಬಲು ಪ್ರಯತ್ನಿಸಿದ್ದಾರೆ. ಆದರೆ.. ಹಿಂದಿ ಭಾಷೆಯ ಅರಿವಿಲ್ಲದವರಿಗೆ ಇದು ಭಾರೀ ಗೊಂದಲವನ್ನುಂಟು ಮಾಡುವುದರಲ್ಲಿ ಸಂದೇಹವಿಲ್ಲ. ಯಾವಾಗ ಯಾವ ಪಾತ್ರವಾಗುತ್ತಾರೆ, ಮತ್ಯಾವಾಗ ನಿರೂಪಕರಾಗುತ್ತಾರೆ ಎನ್ನುವುದೇ ಗೊತ್ತಾಗದೇ ನೋಡುಗರು ಪರದಾಡುವಂತಾಗಿದೆ. ಹತ್ತಾರು ಪಾತ್ರಗಳು ಮಾಡಬೇಕಾದ ಅಭಿನಯವನ್ನು ಇಬ್ಬರೇ ನಟಿಸಲು ಹಠ ತೊಟ್ಟಾಗ ಪ್ರೇಕ್ಷಕರಿಗೆ ಹೇಳಬೇಕಾದದ್ದನ್ನು ಸಮರ್ಥವಾಗಿ ಹೇಳಲು ಸಾಧ್ಯವಾಗದೇ ಹೋಗುತ್ತದೆ ಎನ್ನುವುದಕ್ಕೆ ಈ  ನಾಟಕವೇ ಸಾಕ್ಷಿ.

ವೇದಿಕೆಯ ಮೇಲೆ ಟಾಪ್ಲೆಸ್ ಆಗಿ ಅರೆಬೆತ್ತಲಾಗುವುದು.. ರೇಪ್ ದೃಶ್ಯವನ್ನು ಯಥಾವತ್ತಾಗಿ ತೋರಿಸುವುದು ಹಾಗೂ ನಾಟಕದಾದ್ಯಂತ ಹಲವಾರು ಬಾರಿ ಯುವತಿಯರು ಪರಸ್ಪರ ಚುಂಬಿಸುವುದು.. ಕನ್ನಡ ರಂಗಭೂಮಿಗೆ ಹೊರತಾದಂತಹುದು. ಮತ್ತು ಈ ನಾಟಕದಲ್ಲಿ ಇದೆಲ್ಲಾ ಅಗತ್ಯವೂ ಇರಲಿಲ್ಲಾ. ಲೈವ್ ಸೆಕ್ಸ್  ತೋರಿಸಿ ನೋಡುಗರಲ್ಲಿ ಬಿಸಿ ಏರಿಸುವ ಬದಲಾಗಿ ಸಾಂಕೇತಿಕವಾಗಿ ತೋರಬಹುದಾದ ಅನೇಕ ಸಾಧ್ಯತೆಗಳು ನಾಟಕದಲ್ಲಿವೆ. ಆದರೆ.. ಬೋಲ್ಡ್ನೆಸ್ ತೋರಿಸಿಯೇ ನಾಟಕವನ್ನು ಪ್ರೇಕ್ಷಕರಿಗೆ ಮುಟ್ಟಿಸಬೇಕಾದ ಅಗತ್ಯತೆ ಎಷ್ಟು ಸರಿ? ಎನ್ನುವ ಪ್ರಶ್ನೆ ಹುಟ್ಟದೇ ಇರದು. ನಾಟಕ ಎಂದರೆ ಸಿನೆಮಾ ಅಲ್ಲಾ ಎಲ್ಲವನ್ನೂ ಬಿಚ್ಚಿಟ್ಟು ತೋರಿಸಲು. ನೋಡುಗರಲ್ಲಿ ಬಿಸಿ ಏರಿಸಲು. ಏನೇ ತೋರಿಸಬೇಕೆಂದರೂ ಅದು ಕಲಾತ್ಮಕವಾಗಿದ್ದರೆ.. ಪಬ್ಲಿಕ್ ಆಗಿ ತೋರಬಾರದ್ದನ್ನೆಲ್ಲಾ ಸಾಂಕೇತಿಕವಾಗಿ ತೋರಿಸಿದ್ದರೆ ನಾಟಕಕ್ಕೆ ಕಳೆ ಬರಲು ಸಾಧ್ಯ. ಹೀಗೆಲ್ಲಾ ಬೆತ್ತಲೆ, ಕಿಸ್ಸು ಹಾಗೂ ಸೆಕ್ಸ್ನ್ನು ಬಹಿರಂಗವಾಗಿ ತೋರಿಸಿದರೆ ನಾಟಕದ ಆಶಯ ನೇಪತ್ಯಕ್ಕೆ ಸೇರಿ ಪ್ರೇಕ್ಷಕರ ಅಂತರಂಗದ ವಿಕ್ಷಿಪ್ತತೆಗಳೇ ಮುಂಚೂಣಿಗೆ ಬರುವ ಸಾಧ್ಯತೆಗಳೇ ಹೆಚ್ಚು. ಏನೇ ಇರಲಿ.. ನೇಹಾ ಸಿಂಗ್ ಹಾಗೂ ಭೂಮಿಕಾ ಧುವೆ ಈ ಇಬ್ಬರೂ ನಟಿಯರು ಅನೇಕಾನೇಕ ಪಾತ್ರಗಳಿಗೆ ಜೀವತುಂಬಿ ನಟಿಸುತ್ತಲೇ ವೇದಿಕೆಯಲ್ಲಿ ಪಾದರಸದ ಚಲನೆಯನ್ನು ತೋರಿದ್ದಾರೆ. ಇಬ್ಬರೂ ಉತ್ತಮ ನಟಿಯರು ಎನ್ನುವುದರಲ್ಲಿ ಎರಡು ಮಾತಿಲ್ಲಾ. ಇಡೀ ನಾಟಕವನ್ನು ಈ ಕಲಾವಿದೆಯರು ಆವರಿಸಿಕೊಂಡು ದಡ ಸೇರಿಸಿದ್ದಾರೆ. ಬಿಂದಾಸ್ ಅಭಿನಯದಲ್ಲೂ ಮುಂಚೂಣಿಯಲ್ಲಿದ್ದಾರೆ. 

ಈ ಇಬ್ಬರೂ ನಟಿಯರ ಬಣ್ಣ ಬಣ್ಣದ ಕಾಸ್ಟೂಮ್ಸಗಳು ಆಕರ್ಷನೀಯವಾಗಿದ್ದವಾದರೂ ಮೊದಲಿನಿಂದಲೂ ಒಂದೇ ರೀತಿಯ ಕಾಸ್ಟೂಮನ್ನು ಎಲ್ಲಾ ಪಾತ್ರಗಳಿಗೂ ಬಳಸಿದ್ದು ಏಕತಾನತೆಯನ್ನುಂಟು ಮಾಡಿತು.  ನಿರ್ದೇಶಕಿಯೇ ಬೆಳಕಿನ ವಿನ್ಯಾಸವನ್ನೂ ಮಾಡಿದ್ದು ಅದನ್ನು ಮಂದಾರ್ ಗೋಖಲೆಯವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೆಲವೊಂದು ರೊಮ್ಯಾಂಟಿಕ್ ದೃಶ್ಯಗಳಲ್ಲಂತೂ ಬೆಳಕು ಮೋಹಕವಾಗಿ ಮೂಡಿಬಂದು ನೋಡುಗರನ್ನು ಪರವಶಗೊಳಿಸಿದೆ. ಹಿನ್ನೆಲೆ ಸಂಗೀತ ಹಾಗೂ ದ್ವನಿಗಳು ನಾಟಕದ ಭಾಗವಾಗಿಯೇ ಮೂಡಿ ಬಂದಿದ್ದು ನೇಪತ್ಯದ ತಾಂತ್ರಿಕ ವಿಭಾಗದಲ್ಲಿ ವೃತ್ತಿಪರತೆ ಕಾಣುತ್ತದೆ. ಇಳಿಬಿಟ್ಟ ಪೇಂಟಿಂಗ್ಗಳನ್ನೇ ಬಳಸಿಕೊಂಡು ಸೆಟ್ ನಿರ್ಮಿಸಿ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದು ಬಹಳ ಸೊಗಸಾಗಿ ಮೂಡಿಬಂದಿದೆ.

ಈ ಸಲದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಘೋಷವಾಕ್ಯ ಸಂಬಂಜ ಅನ್ನಾದು ದೊಡ್ದು ಕನಾ... ಆ ಆಶಯಕ್ಕೆ ಪೂರಕವಾಗಿ ಸಲಿಂಗ ಸಂಬಂಧವೂ ಸಹ ದೊಡ್ದು ಕನಾ.. ಎಂದು ಈ ದ್ಹೋರಿ ಜಿಂದಗಿ ನಾಟಕ ಹೇಳುವಂತೆ ಮೂಡಿಬಂದಿದೆ. ಸಮಾಜದಿಂದ ವಿಮುಖಿಯಾಗಿ ಅತಿಂದ್ರೀಯ ಶಕ್ತಿಯ ಸಹಕಾರದಿಂದ ವ್ಯಕ್ತಿಗತ ಸಂಬಂಧವನ್ನು ಗಟ್ಟಿಗೊಳಿಸುವ ಆಶಯದ ಈ ಪುರುಷವಿರೋಧಿ ನಾಟಕವು ಮನುಷ್ಯ ಸಂಬಂಧಗಳನ್ನು ಕಟ್ಟುವ ಬದಲು ವಿಕ್ಷಿಪ್ತಗೊಳಿಸುತ್ತವೆ. ಸಂಬಂಧವೆಂದರೆ ಕೇವಲ ಗಂಡು ಗಂಡಿನ ಇಲ್ಲವೇ ಹೆಣ್ಣು ಹೆಣ್ಣಿನ ನಡುವೆ ಹರಳು ಗಟ್ಟುವ ರಿಲೇಶನ್ ಮಾತ್ರವಲ್ಲಾ.. ಅದು ಸಮಾಜಮುಖಿ ಮಾನವೀಯ ನೆಲೆಯಲ್ಲಿ ಗಟ್ಟಿಗೊಳ್ಳುವ ಸಂಬಂಧವಾಗಿದೆ ಎಂಬುದು ದೇವನೂರರ ಮಾತಿನ ಅರ್ಥವಾಗಿದೆ. ಆದರೆ.. ಈ ದ್ಹೋರಿ ಜಿಂದಗಿ ನಾಟಕವು ಸಾಮಾಜಿಕ ಮಾನವೀಯ ಸಂಬಂಧಗಳನ್ನು ಧಿಕ್ಕರಿಸಿ ತುಂಬಾ ವ್ಯಕ್ತಿಗತವಾದ ಸಲಿಂಗಿ ಸಂಬಂಧವನ್ನು ಪುರುಷ ವಿರೋಧಿ ನೆಲೆಯಲ್ಲಿ ವೈಭವೀಕರಿಸುತ್ತದೆ. ಹಾಗೂ ಈ ಸಿಜಿಕೆ ರಂಗೋತ್ಸವದ ಆಶಯಕ್ಕೆ ನ್ಯಾಯವೊದಗಿಸುವುದರಲ್ಲಿ ಸೋತಿದೆ. 

                           -ಶಶಿಕಾಂತ ಯಡಹಳ್ಳಿ 

(ಪೊಟೋ ಕರ್ಟಸಿ  ಥಾಯ್ ಲೋಕೇಶ್)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ