ಸೋಮವಾರ, ಮೇ 15, 2017

ಏಕಾದಶಾನನ; ಪುರೋಹಿತಶಾಹಿ ಮುಖದ ಅನಾವರಣ




ಮಹಾಭಾರತದಂತೆಯೇ ಮಹಾಕಾವ್ಯ ರಾಮಾಯಣಕ್ಕೆ ಹಲವಾರು ಆಯಾಮಗಳು. ಕಾಲಕಾಲಕ್ಕೆ ರಾಮಾಯಣವು  ವಿಶ್ಲೇಷಣೆಗೊಳಪಡುತ್ತಾ ಹೊಸ ಹೊಳಹುಗಳನ್ನು ಹುಟ್ಟುಹಾಕುತ್ತಲೇ ಬಂದಿರುವುದರಿಂದಲೇ ಅದು ತಲೆಮಾರುಗಳಿಂದ ತಲೆಮಾರಿಗೆ ಮುಂದುವರೆಯುತ್ತಲೇ ಬಂದಿದೆ. ಈಗ ದಶಮುಖ ರಾವಣನ ಹನ್ನೊಂದನೇ ಮುಖವನ್ನು ಅನಾವರಣಗೊಳಿಸುವ ವಿಶಿಷ್ಟ ಪ್ರಯತ್ನವನ್ನು ಶಶಿರಾಜ್ ಕಾವೂರುರವರು ರಚಿಸಿದ ಏಕಾದಶಾನನ ನಾಟಕವು ಮಾಡುತ್ತದೆ.

ರಂಗನಿರಂತರ ರಂಗತಂಡವು ಮೇ15 ರಿಂದ 20ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಿತ್ತು. ಮೇ 15 ರಂದು ಜೀವನ್‌ರಾಮ್ ಸುಳ್ಯರವರ ನಿರ್ದೇಶನದಲ್ಲಿ ಮೂಡಬಿದ್ರೆಯ ಆಳ್ವಾಸ್ ಏಜ್ಯುಕೇಶನ್ ಟ್ರಸ್ಟ್ ಕಾಲೇಜಿನ ವಿದ್ಯಾರ್ಥಿ ಕಲಾವಿದರಿಂದ ಏಕಾದಶಾನನ ನಾಟಕವು ಪ್ರದರ್ಶನಗೊಂಡು ನೋಡುಗರನ್ನು ಬೆರಗುಗೊಳಿಸಿತು. 

ಶ್ರೀರಾಮನ ಮಡದಿ ಸೀತೆಯನ್ನು ಅಪಹರಿಸಿದ ರಾವಣ ಬಹುತೇಕರ ಮನಸ್ಸುಗಳಲ್ಲಿ ಖಳನಾಯಕನಾಗಿಯೇ ಅಚ್ಚೊತ್ತಿದ್ದು ಸುಳ್ಳಲ್ಲಾ. ಆದರೆ ಆ ದುರಹಂಕಾರಿ ರಾವಣನ ಒಳಗೂ ಅಂತರ್ಗತವಾದ ಒಳಿತನ್ನು ತೋರವುದಕ್ಕಾಗಿಯೇ ಈ ನಾಟಕ ಸೃಷ್ಟಿಗೊಂಡಿದೆ. ಕಾಲ್ಪನಿಕ ಕಥೆಗಳಲ್ಲಿ ತರ್ಕಗಳನ್ನು ಹುಡುಕುವುದು ವ್ಯರ್ಥ. ಇಡೀ ನಾಟಕ ತರ್ಕಾತೀತ ನೆಲೆಯಲ್ಲಿ  ವಿಶಿಷ್ಟ ಅನುಭವವನ್ನು ಕಟ್ಟಿಕೊಡುತ್ತದೆ. ರಾಮಾಯಣದ ಪ್ರತಿನಾಯಕನಾದ ರಾವಣನನ್ನು ಅನೇಕರು ಅನೇಕ ರೀತಿ ನೋಡಿ ವಿಶ್ಲೇಷಿಸಿದ್ದಿದೆ. ಈ ಏಕಾದಶಾನನ ನಾಟಕದಲ್ಲಿ ವೈದಿಕಶಾಹಿ ದೃಷ್ಟಿಕೋನದಲ್ಲಿ ರಾವಣನನ್ನು ಚಿತ್ರಿಸುವ ಪ್ರಯತ್ನ ಮಾಡಲಾಗಿದೆ.

ರಾಮರಾವಣರ ನಿರ್ಣಾಯಕ ಯುದ್ಧದಲ್ಲಿ ರಾಮ ಗೆಲ್ಲಬೇಕಾದರೆ ರಾಮರಕ್ಷಾ ಹೋಮ ಮಾಡಬೇಕೆಂದು ಅಗಸ್ತ್ಯ ಮುನಿಗಳು ಹೇಳಿದ್ದರಿಂದ ಹೋಮಕ್ಕಾಗಿ  ರಾವಣನನ್ನೇ ಪೌರೋಹಿತ್ಯಕ್ಕೆ ಆಹ್ವಾನಿಸಲಾಗುತ್ತದೆ. ಆಹ್ವಾನ ಒಪ್ಪಿ ಆಗಮಿಸಿದ ರಾವಣ ಹೋಮದ ಫಲಕ್ಕೆ ಸತಿಪತಿಗಳು ಬೇಕೆಂದಾಗ ತಾತ್ಕಾಲಿಕವಾಗಿ ಸೀತೆಯನ್ನೂ ಕರೆಸಿ ಹೋಮ ಮಾಡುತ್ತಾನೆ. ರಾವಣನಿಗೆ ರಾಮನಿಂದ ಮಾತ್ರ ಮರಣವೆಂಬ ಶಾಪ ರಾಮನ ತಾತ ಕೊಟ್ಟಿದ್ದನ್ನು, ಸಾವಿರಾರು ವರುಷಗಳ ಕಾಲ ಬದುಕಿ ಬೇಸತ್ತು ಸಾವಿಗಾಗಿ ಹಂಬಲಿಸುತ್ತಿರುವುದನ್ನು, ಸೀತೆಯನ್ನು ಮೊಮ್ಮಗಳಂತೆ ಕಾಪಾಡುತ್ತಿರುವುದನ್ನು.. ರಾವಣ ರಾಮನಿಗೆ ಹೇಳುತ್ತಾ ತನ್ನೆಲ್ಲಾ ಕೃತ್ಯಗಳಿಗೆ ವಿಚಿತ್ರವಾದ ಸಮರ್ಥನೆಗಳನ್ನು ಕೊಡುತ್ತಾನೆ.


ಶತ್ರುವಿನ ರಾಜ್ಯದಲ್ಲಿ ಒಳಹೋಗುವುದೇ ಅಸಾಧ್ಯವಾದಾಗ ಹೋಮಕ್ಕೆ ಪುರೋಹಿತನನ್ನು ಲಂಕೆಯಲ್ಲಿ ವಾನರಪಡೆ ಸಲೀಸಾಗಿ ಹುಡುಕಲು ಹೇಗೆ ಸಾಧ್ಯ? ರಾಮನಿಗೆ ಶಾಪ ಕೊಟ್ಟವರು ಯಾರು? ಯಾಕೆ? ಸಾವೇ ಬರಬಾರದು ಎನ್ನುವುದು ಯಾರಿಗೇ ಆಗಲಿ ವರವಾಗುತ್ತದೆಯೇ ಹೊರತು ಶಾಪ ಹೇಗೆ ಆಗುತ್ತದೆ? ಬಯಸಿದ್ದೆಲ್ಲಾ ಇರುವಾಗ ಅದೂ ಪರಸತಿಮೋಹಿ ಎನ್ನುವ ಆರೋಪ ಹೊತ್ತುಕೊಂಡು ಸಾವನ್ನು ಬಯಸುವ ಅಗತ್ಯವಾದರೂ ರಾವಣನಿಗೆ ಏನಿತ್ತು? ರಾಮನಿಂದ ಸಾಯುವ ಒಂದಂಶದ ಗುರಿಗಾಗಿ ರಾವಣ ಇಷ್ಟೆಲ್ಲಾ ರಾದ್ದಾಂತ ಮಾಡಬೇಕಿತ್ತೆ? ಲೆಕ್ಕವಿಲ್ಲದಷ್ಟು ಜನರ ಮಾರಣ ಹೋಮಕ್ಕೆ ಕಾರಣೀಕರ್ತನಾಗಬೇಕಿತ್ತೆ? ತನ್ನೊಬ್ಬನ ಸಾವಿಗಾಗಿ ತನ್ನ ಕುಲಬಾಂಧವರನ್ನು, ಸಹೋದರ ಮಕ್ಕಳನ್ನು ರಾವಣ ಬಲಿಕೊಡಬೇಕಿತ್ತೆ?, ರಾವಣನೇ ಹೇಳಿದಂತೆ ಕೀರ್ತಿಗಾಗಿ  ಇದೆಲ್ಲವನ್ನೂ ಮಾಡಿದ್ದಲ್ಲಿ ರಾವಣ ಅಪಕೀರ್ತಿಯನ್ನೇ ಪಡೆದದ್ದಲ್ಲವೇ.. ಹೀಗೆ ಕೆಲವಾರು ಉತ್ತರವಿಲ್ಲದ ಪ್ರಶ್ನೆಗಳು ಪ್ರೇಕ್ಷಕರ ಮನಸ್ಸಲ್ಲಿ ಮೂಡದೇ ಇರಲಾರವು.

ಒಟ್ಟಾರೆಯಾಗಿ ರಾವಣನನ್ನು ಎಲ್ಲಾ ನಕಾರಾತ್ಮಕ ಆರೋಪಗಳಿಂದ ಮುಕ್ತಗೊಳಿಸಿ ಹುತಾತ್ಮ ಪಟ್ಟ ಕಟ್ಟಲು ಪ್ರಯತ್ನಿಸುವ ಈ ನಾಟಕದ ನಾಟಕಕಾರರು ತಮ್ಮ ಸಮರ್ಥನೆಗಳಿಗೆ ಮತ್ತೆ ಶಾಪ ಹೋಮ ಎನ್ನುವ ವೈದಿಕಶಾಹಿ ಪರಿಕಲ್ಪನೆಗಳನ್ನೇ ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಮಿಥ್ಯೆಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳನ್ನೇ ಬಳಸಿಕೊಂಡಿದ್ದಾರೆ. ಮೊದಲೇ ರಾಮಾಯಣವೆನ್ನುವುದು ಅನೇಕಾನೇಕ ನಂಬಿಕೆ ಹಾಗೂ ಮೌಡ್ಯಗಳನ್ನು ಮತ್ತು ಹುಸಿ ಮೌಲ್ಯಗಳನ್ನು ಹುಟ್ಟುಹಾಕಿ ಸಮಾಜದ ನರನರಗಳಲ್ಲಿ ಪುರೋಹಿತಶಾಹಿ ಪರಿಕಲ್ಪನೆಗಳನ್ನು ಪಸರಿಸಿದೆ. ಈಗ ಈ ನಾಟಕವೂ ಸಹ ಗೆಲುವಿಗಾಗಿ ಹೋಮ ಹವನ ಪೌರೋಹಿತ್ಯಗಳ ಹುಸಿ ಅಗತ್ಯತೆಯನ್ನು ಪ್ರತಿಪಾದಿಸುವಂತೆ ಮೂಡಿಬಂದಿದೆ. ಕ್ಷತ್ರೀಯ ರಾಮನನ್ನು ಆದರ್ಶ ನಾಯಕನನ್ನಾಗಿ ವೈಭವೀಕರಿಸಿ ಬ್ರಾಹ್ಮಣ ರಾವಣನನ್ನು ಪ್ರತಿನಾಯಕನನ್ನಾಗಿ ಮಾಡಿ ಕೆಟ್ಟವನನ್ನಾಗಿ ಪುರಾಣಗಳಲ್ಲಿ ಚಿತ್ರಿಸಿದ್ದನ್ನು ಹೇಗಾದರೂ ಮಾಡಿ ಬದಲಾಯಿಸ ಬಯಸುವ ಪುರೋಹಿತಶಾಹಿ ಮನಸ್ಸುಗಳು ಹೀಗೆ ರಾವಣನನ್ನು ಜಾತಿ ಕಾರಣಕ್ಕಾಗಿ ಆದರ್ಶ ವ್ಯಕ್ತಿಯನ್ನಾಗಿ ತೋರಿಸಲು ತರ್ಕಾತೀತವಾದ ಹೊಸ ಕಲ್ಪನೆಗಳನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾವಾ ಎನ್ನುವ ಸಂಶಯ ಈ ನಾಟಕ ನೋಡಿದ ಮೇಲೆ ಕಾಡದೇ ಇರದು. 

ನಾಟಕಕ್ಕೆ ಆಯ್ಕೆಮಾಡಿಕೊಂಡ ಒಟ್ಟಾರೆ ವಸ್ತು ವಿಷಯದಲ್ಲಿ ಅಂತಾ ಗಟ್ಟಿತನವೇನಿಲ್ಲಾ. ಆದರೆ.. ಈ ಇಡೀ ನಾಟಕವನ್ನು ಪ್ರದರ್ಶನಗೊಳಿಸಿದ ರೀತಿ ಮಾತ್ರ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದ್ದರಲ್ಲಿ ಅತಿಶಯವಿಲ್ಲಾ. ರಂಗತಂತ್ರಗಳನ್ನು ಸಮರ್ಥವಾಗಿ ಬಳಿಸಿ ದೃಶ್ಯಕಾವ್ಯವೊಂದನ್ನು ಕಟ್ಟಿಕೊಟ್ಟ ಜೀವನರಾಮ್ ಸುಳ್ಯ ನಿಜಕ್ಕೂ ಅಭಿನಂದನಾರ್ಹರು. ಕಾಲೇಜಿನ ಯುವಕ ಯುವತಿಯರನ್ನು ನಟನೆಗೆ ಪಳಗಿಸಿದ ರೀತಿ ಅನನ್ಯ. ಕಲಾವಿದರುಗಳ ಪಾದರಸದ ಚಲನೆ ಹಾಗೂ ಪೂರಕ ಹಿನ್ನೆಲೆ ಹಾಡು ಸಂಗೀತಗಳು ನಾಟಕವನ್ನು ಹೆಚ್ಚು ಆಕರ್ಷನೀಯವಾಗಿಸಿವೆ. ಚಿಕ್ಕಪುಟ್ಟ ಪಾತ್ರಗಳೂ ಸಹ ಓವರ್ ಆಕ್ಟಿಂಗ್ ಶೈಲಿಯಲ್ಲಿ ಗಮನಸೆಳೆಯುತ್ತವೆ. ರಾವಣನ ಆಕಾರ ಗಾತ್ರ ಅಬ್ಬರವನ್ನು ಹೋಲಿಸಿದರೆ ರಾಮ ಹಾಗೂ ಲಕ್ಷ್ಮಣನ ಪಾತ್ರದಾರಿಗಳು ನಟನೆ ಹಾಗೂ ಆಕಾರದಲ್ಲಿ ಅದ್ಯಾಕೋ ದುರ್ಬಲವೆನಿಸುತ್ತಾರೆಂಬುದೊಂದೇ ಈ ನಾಟಕದ ಪುಟ್ಟ ನ್ಯೂನ್ಯತೆಯಾಗಿದೆ. ಸುಗ್ರೀವ ಹನುಮಂತ ಮತ್ತಿತರ ವಾನರರ ಪಾತ್ರಗಳಂತೂ ದೃಶ್ಯಗಳಲ್ಲಿ ಜೀವಂತಿಕೆಯನ್ನು ತಂದಿವೆ. 

ತಮ್ಮದೇ ಆದ ಪ್ರತ್ಯೇಕ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಂಡ ಈ ತಂಡವು ಪ್ರತಿ ದೃಶ್ಯಗಳನ್ನೂ ಪೇಂಟಿಂಗ್ ರೀತಿಯಲ್ಲಿ ತೋರಿಸಿ ನೋಡುಗರ ಕಣ್ಮನವನ್ನು ಸೆಳೆಯಿತು. ಯಕ್ಷಗಾನ ಕಲೆಯ ಚಲನೆ ಹಾಗೂ ಸಂಗೀತಗಳನ್ನು ಹೆಚ್ಚೆಚ್ಚು ಬಳಸಿಕೊಂಡು ದೃಶ್ಯವೈಭವದ ಕಣ್ಕಟ್ಟನ್ನು ಸೃಷ್ಟಿಸಲಾಗಿದೆ. ಪ್ರತಿ ಪಾತ್ರಕ್ಕೆ ವಿನ್ಯಾಸಗೊಳಿಸಲಾದ ವಿಭಿನ್ನವಾದ ವಸ್ತ್ರವಿನ್ಯಾಸ ಹಾಗೂ ವಿಶಿಷ್ಟವಾದ ಪ್ರಸಾದನಗಳು ನಾಟಕಕ್ಕೆ ಮೆರಗನ್ನು ತಂದುಕೊಟ್ಟಿವೆ. ರಾಮ ವನವಾಸಕ್ಕೆ ಹೊರಟಾದ ನಂತರ ನಡೆದ ಘಟನೆಗಳನ್ನು ತಾಯಿಗೆ ಹೇಳುವ ಸನ್ನಿವೇಶದಲ್ಲಿ ಪ್ಲಾಶ್ ಬ್ಯಾಕ್ ಘಟನೆಗಳ  ಭಿತ್ತಿ ಚಿತ್ರಗಳನ್ನು ಚಲನೆಗೊಳಪಡಿಸಿ ಮಾಂಟೇಜ್ ಮಾದರಿ ತೋರಿಸಿದ್ದು ನೋಡುಗರ ಬೆರಗಿಗೆ ಕಾರಣವಾಯಿತು. ಒಟ್ಟಾರೆಯಾಗಿ ಪ್ರತಿಯೊಂದು ದೃಶ್ಯದ ಸಂಯೋಜನೆ ಯಂತೂ ದೃಶ್ಯಕಾವ್ಯವೊಂದನ್ನು ನೋಡಿದ ಅನುಭವವನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟಿತು. ಪೌರಾಣಿಕ ಮಿಥ್‌ಗಳನ್ನು ವಿಸ್ತರಿಸಲಾದ ವಸ್ತುವೊಂದನ್ನು ಎತ್ತಿಕೊಂಡು ಅದನ್ನು ದೃಶ್ಯವೈಭವದ ಮೂಲಕ ಕಟ್ಟಿಕೊಟ್ಟ ರೀತಿಯನ್ನು ಹೇಳುವುದಕ್ಕಿಂತಲೂ ನೋಡಿ ಅನುಭವಿಸುವುದರಲ್ಲೇ ಆನಂದವಿದೆ.

ನಿರ್ದೇಶಕರಾದ  ಜೀವನರಾಮ್ ಸುಳ್ಯ
ಪೌರಾಣಿಕ ತರ್ಕಾತೀತ ಸುಳ್ಳುಗಳಿಗೆ ಸೌಂದರ್ಯದ ಲೇಪನ ಕೊಟ್ಟು ಸತ್ಯದ ಭ್ರಮೆಯನ್ನು ಹುಟ್ಟುಹಾಕುವ ಪ್ರಯತ್ನ ಏಕಾದಶಾನನ ನಾಟಕದ್ದಾಗಿದೆ. ಸುಂದರವಾದ ಸುಳ್ಳಿಗೆ ಆಕರ್ಷಣೀಯ ಚೌಕಟ್ಟನ್ನು ಹಾಕಲು ಪ್ರಯತ್ನಿಸಲಾಗಿದೆ ಹಾಗೂ ತನ್ನ ಈ ಉದ್ದೇಶದಲ್ಲಿ ಈ ನಾಟಕ ಯಶಸ್ವಿಯೂ ಆಗಿದೆ. ಸುಮಾರು ನಲವತ್ತು ನಿಮಿಷಗಳ ಕಾಲ ಪ್ರೇಕ್ಷಕರನ್ನು ರಾಮಾಯಣದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿ, ಇಲ್ಲಿಯವರೆಗೂ ಯಾರೂ ಅರಿಯದ.. ಎಲ್ಲಿಯೂ ದಾಖಲಾಗದ ವಿಕ್ಷಿಪ್ತ ಸಂಗತಿಯೊಂದನ್ನು ಹೊಸದಾಗಿ ತೋರಿಸುವಲ್ಲಿ ಏಕಾದಶಾನನ ಸಫಲವಾಗಿದ್ದು, ಏಕಕಾಲದಲ್ಲಿ ನಾಟಕಕಾರರ ವಿಕ್ಷಿಪ್ತ ಪುರೋಹಿತಶಾಹಿ ಕಲ್ಪನೆ ಹಾಗೂ ರಂಗನಿರ್ದೇಶಕರ ವಿಶೇಷ ರಂಗತಂತ್ರ ಪರಿಕಲ್ಪನೆಗಳು ಸಾಕಾರಗೊಂಡಿವೆ. ರಾವಣನ ಹತ್ತು ಮುಖಗಳ ಜೊತೆಗೆ ಹನ್ನೊಂದನೆಯ ಪುರೋಹಿತಶಾಹಿ ಮುಖ ಈ ನಾಟಕದಲ್ಲಿ ಅನಾವರಣಗೊಂಡಿದೆ.  

-ಶಶಿಕಾಂತ ಯಡಹಳ್ಳಿ       
  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ