ಕಲಾರತ್ನ ಕಪ್ಪಣ್ಣಾ..! ಪುರಭವನದ
ಮುಂದೆ ಪ್ರತಿಭಟನೆ ಯಾಕೆ ಬೇಡಣ್ಣಾ...?
“ಸುಮ್ಮನಿರದೇ ಇರುವೆ ಬಿಟ್ಟುಕೊಂಡರಂತೆ” ಎನ್ನುವ ಮಾತು ನಮ್ಮ ಕಲಾರತ್ನ
ಕಪ್ಪಣ್ಣರವರಿಗೆ ಸರಿಯಾಗಿ ಅನ್ವಯವಾಗುವಂತಿದೆ. ಖಾಸಗಿ ಎಂದೆನಿಸುವ ಮಾತುಕತೆಯನ್ನು ಸಾರ್ವಜನಿಕಗೊಳಿಸಿ
ಟೀಕೆಗೆ ಒಳಗಾಗುವ ಹಾಗೂ ಅದಕ್ಕೆ ಬಾಲಿಶವಾದ ಸಮರ್ಥನೆಗಳನ್ನು ಕೊಟ್ಟು ಕೊನೆಗೆ ಕ್ಷಮೆ ಕೇಳುವ ಕೆಲಸವನ್ನು
ಕಪ್ಪಣ್ಣ ಮೊದಲಿನಿಂದಲೂ ತಮ್ಮ ವಿಕ್ಷಿಪ್ತ ವ್ಯಕ್ತಿತ್ವದ
ಭಾಗವಾಗಿ ರೂಢಿಸಿಕೊಂಡು ಬಂದಿದ್ದರಲ್ಲಿ ಅತಿಶಯವಿಲ್ಲಾ. ಈಗಷ್ಟೇ ಕಪ್ಪಣ್ಣನವರಿಗೆ ರಂಗದಿಗ್ಗಜ ಬಿ.ವಿ.ಕಾರಂತ
ಪ್ರಶಸ್ತಿಗೆ ಆಯ್ಕೆಯಾಗಿದ್ದರಿಂದ ಹಿಂದೆ ಮಾಡಿದ ಸಕಲ ಪಾಪಗಳನ್ನೂ ಪರಿಹಾರ ಆದವೆಂದು ತಿಳಿದುಕೊಂಡು
ನಡೆ ನುಡಿಗಳಲ್ಲಿ ವಿವೇಕವನ್ನು ಹಾಗೂ ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಕಾರಂತರ ಹೆಸರಿನ ಅವಾರ್ಡ
ದೊರಕಿದ್ದಕ್ಕೂ ಸಾರ್ಥಕವಾಗುತ್ತಿತ್ತು.
ಆದರೆ.. ಮತ್ತೆ ಯಡವಟ್ಟು ಮಾಡಿಕೊಂಡು
ಆಡಿಕೊಳ್ಳುವವರ ಬಾಯಿಗೆ ಎಲೆಯಡಿಕೆಯಾಗಿದ್ದಾರೆ. ಆಗಿದ್ದಾದರೂ ಏನಪ್ಪಾ ಅಂತಂದ್ರೆ.. ಅವತ್ತು ಏಪ್ರಿಲ್
22. ಹಿರಿಯ ಸ್ವತಂತ್ರ ಹೋರಾಟಗಾರ ಗಾಂಧೀವಾದಿ ದೊರೆಸ್ವಾಮಿಯವರಿಗೆ ನೂರು ವರ್ಷ ತುಂಬಿದ ದಿನ. ಅವರಿಗೆ
ಅಭಿನಂದಿಸಲೆಂದು ಮಾನ್ಯ ಗೃಹಮಂತ್ರಿಗಳಾದ ಪರಮೇಶ್ವರ್, ಮೇಯರ್ ಪದ್ಮಾವತಿ ಹಾಗೂ ಕಲೆ ಸಾಹಿತ್ಯ ಲೋಕದ
ಕೆಲವಾರು ಜನರು ದೊರೆಸ್ವಾಮಿಯವರ ಮನೆಗೆ ಹೋಗಿ ಅಭಿನಂದಿಸಿದರು. ತದನಂತರ ಎಲ್ಲರೂ ಮಯ್ಯಾಸ್ ಹೊಟೇಲಿಗೆ ಹೋಗಿ ಸ್ನೇಹಪೂರ್ವಕವಾಗಿ
ಬೆಳಗಿನ ತಿಂಡಿಯ ಸಮಾರಾಧನೆಯಲ್ಲಿ ನಿರತರಾದರು. ಉಭಯಕುಶಲೋಪರಿ ವಿಚಾರಿಸಿ ತಿಂಡಿ ತಿಂದು ಅವರವರ ಕೆಲಸಕ್ಕೆ
ಹೊರಟಿದ್ದರೆ ಯಾವ ವಿವಾದವೂ ಆಗುತ್ತಿರಲಿಲ್ಲಾ. ಆದರೆ.. ಹೋಮಿನಿಸ್ಟರ್ ಹಾಗೂ ಮೇಯರ್ ಒಟ್ಟಿಗೆ ಸಿಕ್ಕಿದ್ದಾರೆಂದಕೂಡಲೇ
ಕೆಲವರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಹೇಳತೊಡಗಿದರು. ಕವಿ ವಿಮರ್ಶಕರಾದ
ಮುಕುಂದರಾಜರವರು ಬಿಬಿಎಂಪಿಯು ಸಂಗ್ರಹಿಸಿಟ್ಟುಕೊಂಡಿರುವ 380ಕೋಟಿ ಗ್ರಂಥಾಲಯ ಸೆಸ್ ಬಿಡುಗಡೆಮಾಡಿ
ಸಾಹಿತ್ಯ ಕೃತಿಗಳ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಕೇಳಿಕೊಂಡರು. ಇನ್ನೊಬ್ಬರು ಪುಟ್ಟಣ್ಣ ಥೇಯಟರ್
ರೀಓಪನ್ ಮಾಡಬೇಕೆಂದು ಕೇಳಿಕೊಂಡರು... ಹೀಗೆ ಒಬ್ಬೊಬ್ಬರು ಒಂದೊಂದು ಬೇಡಿಕೆಯನ್ನು ಗೃಹಮಂತ್ರಿಗಳ
ಮುಂದಿಟ್ಟರು. ಮಂತ್ರಿಗಳು ತಮ್ಮದೇ ಆದ ಮಾಮೂಲಿ ವೃತ್ತಿಪರ ಶೈಲಿಯಲ್ಲಿ ಆಗಲಿ, ನೊಡೋಣ, ಪರಿಶೀಲಿಸುವೆ,
ಆದೇಶಿಸುವೆ ಎಂದು ಮುಗುಮ್ಮಾಗಿ ಭರವಸೆಗಳನ್ನು ಕೊಡುತ್ತಲೇ ಹೋದರು. ಇಂತಹ ಸಂದರ್ಭವನ್ನು ಕಪ್ಪಣ್ಣನವರು
ಕೈಬಿಡಲು ಹೇಗೆ ಸಾಧ್ಯ? ಬಾಯಿ ತೆರೆದೆ ಬಿಟ್ಟರು..
ಬಡಾವಣೆಗೊಂದು ರಂಗಮಂದಿರ ಮಾಡಬೇಕು
ಎಂದು ಕಪ್ಪಣ್ಣ ಓರಲ್ ಪ್ರಸ್ತಾವಣೆ ಸಲ್ಲಿಸಿದರು.
ಅದಕ್ಕೆ ರಾಧಾಕೃಷ್ಣರವರು ಆ ಪ್ರಸ್ತಾವ ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲೇ ಇದೆ ಎಂದು ಸಮರ್ಥಿಸಿಕೊಂಡರು.
ಇಷ್ಟಕ್ಕೆ ತೃಪ್ತರಾಗದ ಕಪ್ಪಣ್ಣ ಟೌನ್ ಹಾಲ್ ಮುಂದೆ ನಡೆಯುತ್ತಿರುವ ಧರಣಿ ಪ್ರತಿಭಟನೆಗಳನ್ನು ತಕ್ಷಣ
ನಿಶೇಧಿಸಬೇಕೆಂದು ಇನ್ನೊಂದು ಮನವಿ ಮಾಡಿಕೊಂಡರು. ಮಂತ್ರಿಗಳು ಅದಕ್ಕೂ ಒಪ್ಪಿಕೊಂಡರು. ಇದರಿಂದ ಅತೀವ
ಆನಂದ ತುಲಿತರಾದ ಶ್ರೀಮಾನ್ ಕಪ್ಪಣ್ಣನವರು ಒಳತುಡಿತ ತಾಳಲಾಗದೇ ಮನೆಗೆ ಬಂದವರೆ ತಮ್ಮ ಈ ಸಾಧನೆಯನ್ನು
ತಮ್ಮ ಫೇಸ್ಬುಕ್ಕಲ್ಲಿ ಬರೆದುಕೊಂಡು ಸಾರ್ವಜನಿಕವಾಗಿ ತಿಳಿಸಿಬಿಟ್ಟರು. ಹೀಗೆ ಮಾಡದೇ ಸುಮ್ಮನಿದ್ದರೆ
ಏನೂ ಆಗುತ್ತಿರಲಿಲ್ಲ. ಆದರೆ ಸುಮ್ಮನಿರದೇ ಇರುವೆ ಬಿಟ್ಟುಕೊಂಡು ಅನಗತ್ಯ ಚರ್ಚೆಗೆ ಕಾರಣರಾದರು.
ಇಷ್ಟಕ್ಕೂ ಆ ಫೇಸ್ಬುಕ್ಕಲ್ಲಿ
ಬರೆದುಕೊಂಡಿದ್ದಾದರೂ ಏನು ಅಂದರೆ? “ಇವತ್ತು ಮತ್ತೊಂದು ರಂಗಭೂಮಿಗಾಗಿ ಪ್ರಾಮಾಣಿಕ ಪ್ರಯತ್ನ.
ಇಂದು ಬೆಳಿಗ್ಗೆ 11ಕ್ಕೆ ಟಿ.ಎನ್.ಸೀತಾರಾಂ, ಮುಕಂದರಾಜು, ಹೆಚ್.ಎಲ್.ಪುಷ್ಪಾ, ಕೆ.ಎಂ.ಚೈತನ್ಯ, ಪಿ.ಶೇಷಾದ್ರಿ,
ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕೆ.ಇ ರಾಧಾಕೃಷ್ಣ ಹಾಗೂ ನಾನು ಜನಯಗರದ ಮಯ್ಯ ಹೊಟೇಲಲ್ಲಿ
ಗೃಹಮಂತ್ರಿ ಶ್ರೀ ಪರಮೇಶ್ವರ್ ಮತ್ತು ಮೇಯರ್ ಶ್ರೀಮತಿ ಪದ್ಮಾವತಿ ಅವರನ್ನು ಬೇಟಿ ಮಾಡಿ ಕೆಳಕಂಡ ಬೇಡಿಕೆಗಳನ್ನು ಮುಂದಿಟ್ಟೆವು. 1. ಟೌನ್ ಹಾಲ್ ಮುಂದೆ ತಕ್ಷಣವೇ ಜಾರಿಗೆ ಬರುವಂತೆ
ಧರಣಿ, ಪ್ರತಿಭಟನೆ, ಮುಷ್ಕರ ನಿಷೇಧಿಸಬೇಕು. (ಮಂತ್ರಿಗಳು ಒಪ್ಪಿದರು). 2. ಬೆಂಗಳೂರ ನೃತ್ಯದ ತನ್ನದೇ ಹಬ್ಬಗಳನ್ನು ರೂಪಿಸಿಬೇಕು. ಉದಾಹರಣೆಗೆ, ಕರಗ, ಕಡಲೇಕಾಯಿ
ರಿಷೆ, ಹಲಸೂರು ಚಾತ್ರೆ, ಜೆಸಿ ನಗರದ ನವರಾತ್ರಿ ಇತ್ಯಾದಿ.. (ಮಂತ್ರಿಗಳು ಹಾಗೂ ಮೇಯರ್ ತಾತ್ವಿಕವಾಗಿ
ಒಪ್ಪಿದ್ದಾರೆ.) 3. ಬಿಬಿಎಂಪಿಯು ಬೆಂಗಳೂರಿನ 28 ವಾರ್ಡಗಳಲ್ಲಿ ರಂಗಮಂದಿರಗಳನ್ನು ಕಟ್ಟಿಸಬೇಕು. (ಪರಿಶೀಲಿಸಲಾಗುವುದು). 4. ಕೆ.ಹೆಚ್.ಕಲಾಸೌಧದ ಸಮಸ್ಯೆ ಬಗೆಹರಿಸಬೇಕು.
(ಒಪ್ಪಿದ್ದಾರೆ), 5. ಬಿಬಿಎಂಪಿ ಸಂಗ್ರಹಿಸಿರುವ
ಲೈಬ್ರರಿ ಸೆಸ್‌ನಿಂದ ಪುಸ್ತಕ ಖರೀದಿಸಬೇಕು. (40 ಕೋಟಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇನೆ) 6. ಪುಟ್ಟಣ್ಣ ಥೀಯಟರ್ ಶೀಘ್ರ ಆರಂಭಿಸಬೇಕು (ಪರಿಶೀಲಿಸಿ
ಕ್ರಮ)”
ಈ ರೀತಿ ಫೇಸ್ಬುಕ್ಕಲ್ಲಿ ಕಪ್ಪಣ್ಣನವರು
ಬರೆದುಕೊಂಡು ತಮ್ಮ ಜೊತೆಗೆ ಇನ್ನೂ ಒಂದಿಷ್ಟು ಜನರ ಹೆಸರನ್ನೂ ಸಹ ಪ್ರಸ್ತಾಪಿಸಿ ಅವರನ್ನೂ ತಮ್ಮ ಬೇಡಿಕೆಗೆ
ಸಮರ್ಥನೆಗಳನ್ನು ಕೊಟ್ಟವರು ಎಂದು ಪೋಕಸ್ ಮಾಡಿ ವಿವಾದವನ್ನು ಅವರಿವರ ತಲೆಗೆ ಕಟ್ಟಲು ನೋಡಿದರು. ಟೌನ್
ಹಾಲ್ ಮುಂದೆ ಪ್ರತಿಭಟನೆ ನಿಷೇಧಿಸಬೇಕು ಎನ್ನುವ ಕಪ್ಪಣ್ಣನವರ ಬೇಡಿಕೆ ಅನೇಕ ಜನರಲ್ಲಿ ಅಸಹನೆಯನ್ನು
ಹುಟ್ಟಿಸಿತು. ಅದಕ್ಕೆ ಪರಮೇಶ್ವರ್ ಒಪ್ಪಿದ್ದಾರೆ ಎನ್ನುವುದು ಬೆಂಕಿಗೆ ತುಪ್ಪ ಸುರಿದಂತಾಯಿತು. ವಾದವಿವಾದ
ರಂಗಭೂಮಿ ವಲಯವನ್ನೂ ದಾಟಿ ಹೋರಾಟಪರ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಯಿತು.
ಬಿ.ಆರ್.ಭಾಸ್ಕರ್ ಪ್ರಸಾದ |
“ಟೌನ್ ಹಾಲ್ ಮುಂದೆ ಪ್ರತಿಭಟನೆಗಳನ್ನು
ನಿಷೇಧಿಸುವಂತೆ ಶ್ರೀನಿವಾಸ ಜಿ ಕಪ್ಪಣ್ಣರವರು ಸರಕಾರಕ್ಕೆ ಮಾಡಿರುವ ಮನವಿಯು ಅತ್ಯಂತ ಅವಿವೇಕತನದ್ದು,
ಅಜ್ಞಾನದ್ದು ಮತ್ತು ಜನವಿರೋಧಿ ಕ್ರiವಾಗಿದೆ. ಸರಕಾರವೂ ಸಹ ಕಾಯ್ದು ಕುಳಿತಿರುವಂತೆ ಇಂತಹ ಮನವಿಗಳಿಗೆ ಕೂಡಲೇ ಅಸ್ತು ಎಂದು ಹೋರಾಟಗಳನ್ನು ಹತ್ತಿಕ್ಕಲು ನೋಡುತ್ತದೆ. ಆದ್ದರಿಂದ
ಸರ್ಕಾರ ತನ್ನ ಜನವಿರೋಧಿ ಆದೇಶವನ್ನು ಜಾರಿಗೊಳಿಸುವ
ಮುನ್ನವೇ , ಈ ಕೂಡಲೇ ಹೋಗಿ ಅವರು ತಮ್ಮ ಮನವಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ಕಪ್ಪಣ್ಣನವರು ಮನೆಯ
ಮುಂದೆಯೇ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ..” ಎಂದು ದಲಿತ ಸಂಘಟನೆಯ ಮುಖಂಡರಾದ
ಬಿ.ಆರ್.ಭಾಸ್ಕರ್ ಪ್ರಸಾದರವರು ಫೇಸ್ಬುಕ್ ಮೂಲಕವೇ ಕಪ್ಪಣ್ಣನವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಪತ್ರಕರ್ತ
ಗೋವಿಂದರಾಜು ಬೈಚಗುಪ್ಪೆ, ಲವಕುಮಾರ್ ಮುಂತಾದವರು ಕಪ್ಪಣ್ಣನವರನ್ನು ಜಾಲತಾಣಗಳಲ್ಲಿ ತೀವ್ರ ತರಾಟೆಗೆ
ತೆಗೆದುಕೊಂಡಿದ್ದಾರೆ. ಪರಿವರ್ತನ ಪ್ರಭ ಎನ್ನುವ ಅಪ್ರಭುದ್ದ ಪತ್ರಿಕೆಯಂತೂ ಕಪ್ಪಣ್ಣನವರ ಜೊತೆಗೆ
ಕವಿಗಳು, ಚಿಂತಕರು ಹಾಗೂ ಸಂಘಟಕರನ್ನೂ ಸೇರಿಸಿಕೊಂಡು ಲೇವಡಿ ಮಾಡಿದೆ. ಇದೇ ಪತ್ರಿಕೆ ಕಪ್ಪಣ್ಣನವರನ್ನು
ರಂಗಾಯಣದ ನಿರ್ದೇಶಕರಾಗಿದ್ದರೂ ಎಂದು ತಪ್ಪು ಮಾಹಿತಿಯನ್ನೂ ಬರೆದಿದೆ.
ಈ ಎಲ್ಲಾ ವಾದ ವಿವಾದ ಆಕ್ರೋಶಗಳ
ಹಿಂದೆ ಅಸಲಿತನ ಏನು ಎನ್ನುವುದನ್ನು ಹುಡುಕುವ ವ್ಯವಧಾನವಾದರೂ ಇರಬೇಕಾಗಿತ್ತು. ಒಂದು ಫೇಸ್ಬುಕ್ ಪೋಸ್ಟ್‌ನ್ನು
ನಂಬಿ ಅದಕ್ಕೆ ತೀವ್ರವಾಗಿ ಪ್ರತಿಭಟಿಸುವ ಮುನ್ನ ಒಂಚೂರು ಹಿನ್ನಲೆಯನ್ನು ವಿಚಾರಣೆ ಮಾಡಬೇಕಿತ್ತು.
ಆದರೆ ಕಪ್ಪಣ್ಣನವರಿಗೆ ಹಿಂದೆ ಮುಂದೆ ಆಲೋಚನೆ ಮಾಡದೇ
ಹೇಳುವ ಆತುರವಿದ್ದಂತೆ ಅದಕ್ಕೆ ಪ್ರತಿಕ್ರಿಯೆ ಕೊಡುವವರೂ ಸಹ ಹಿಂದೆ ಮುಂದೆ ವಿಚಾರಿಸಿ ಸಮಯ ಸಂದರ್ಭಗಳ
ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರತಿಕ್ರಿಯಿಸಿದ್ದರೆ ಚೆನ್ನಾಗಿರುತ್ತಿತ್ತು. ಅದು ಆಗಲಿಲ್ಲವೆನ್ನುವುದಕ್ಕೆ
ಕಾರಣ ಶ್ರೀಮಾನ್ ಕಪ್ಪಣ್ಣನವರ ದುಡುಕು ಸ್ವಾಭಾವವೇ ಆಗಿದೆ. ಕಪ್ಪಣ್ಣ ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವುದು
ಅವರು ಸಾರ್ವಜನಿಕವಾಗಿ ಬಾಯಿಬಿಟ್ಟಾಗಲೆಲ್ಲಾ ಸಾಬೀತಾಗಿದೆ. ಸಮಯ ಸಂದರ್ಭಗಳ ಅರಿವಿಲ್ಲದೇ ಏನೋ ಮಾತಾಡಲು
ಹೋಗಿ ಇನ್ನೇನನ್ನೋ ಮಾತಾಡಿ ವಿವಾದವನ್ನು ಮೈಮೇಲೆಳೆದುಕೊಳ್ಳುವುದು ಅವರ ಸ್ವಭಾವವೇ ಆಗಿದೆ. ಪ್ರಸ್ತುತ
ಮಯ್ಯಾಸ್ ನಲ್ಲಿ ಅವತ್ತು ಆಗಿದ್ದಾದರೂ ಏನು ಎನ್ನುವುದರತ್ತ ನೋಡೋಣ.
ಹೋಮ್ ಮಿನಿಸ್ಟರ್ ಮತ್ತು ಮೇಯರ್
ಒಂದೇ ಕಡೆ ನಿರಾಳವಾಗಿ ಸಿಕ್ಕಿದ್ದರಿಂದಾ ಈ ಅವಕಾಶವನ್ನು ಬಳಸಿಕೊಂಡು ತಮ್ಮ ಬೇಡಿಕೆಗಳನ್ನು ಅವರ ಮುಂದಿಡಬೇಕು
ಎನ್ನುವ ದಾವಂತಕ್ಕೆ ಹಲವರು ಬಿದ್ದಿದ್ದರಲ್ಲಿ ತಪ್ಪೇನಿಲ್ಲಾ. ಇಂತಹ ಸದವಕಾಶವನ್ನು ಕಪ್ಪಣ್ಣನಂತಹ
ರಂಗರಾಜಕಾರಣಿಗಳು ನಿರ್ಲಕ್ಷಿಸಲು ಸಾಧ್ಯವೇ ಇಲ್ಲಾ. ಒಂದು ವರ್ಷದ ಹಿಂದೆ ನಾನು ಹಾಗೂ ಕಪ್ಪಣ್ಣನವರು
ಇಬ್ಬರೂ ಒಂದೇ ವೇದಿಕೆಯ ಮೇಲೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಆಗ ಸಭಿಕರನ್ನುದ್ದೇಶಿಸಿ ಮಾತನಾಡಿದ
ನಾನು “ಬೆಂಗಳೂರಿನ
ಪ್ರತಿಯೊಂದು ವಾರ್ಡನಲ್ಲೂ ಇನ್ನೂರು ಖುರ್ಚಿಗಳ ಸುಸಜ್ಜಿತ ರಂಗಮಂದಿರಗಳನ್ನು ಸರಕಾರ ಕಟ್ಟಿಸಿ ಅದರ
ನಿರ್ವಹಣೆಯನ್ನು ತೀವ್ರವಾಗಿ ತೊಡಗಿಕೊಂಡಿರುವ ರಂಗಕರ್ಮಿಗಳ ಸುಪರ್ಧಿಗೆ ವಹಿಸಿಕೊಡಬೇಕು” ಎಂದು ಹೇಳಿದೆ. ಇದನ್ನು ಬಹಳ
ಸೀರಿಯಸ್ಸಾಗಿ ತೆಗೆದುಕೊಂಡ ಕಪ್ಪಣ್ಣನವರು ವಾರ್ಡಿಗೊಂದು ರಂಗಮಂದಿರ ಯೋಜನೆಯ ಹಿಂದೆ ಬಿದ್ದರು. ಮಾಸ್ತಿಯವರ
ಹೆಸರಿನ ರಂಗಮಂದಿರವನ್ನು ನಾಟಕ ಪ್ರದರ್ಶನಕ್ಕೆ ದೊರಕಿಸಿಕೊಡಲು ಪ್ರಯತ್ನಿಸಿದರು. ಶ್ರೀನಗರ ಬಡಾವಣೆಯ ಜಿಂಕೆ ಪಾರ್ಕನಲ್ಲಿ ಕೊಟ್ಯಾಂತರ ರೂಪಾಯಿಗಳ
ವೆಚ್ಚದಲ್ಲಿ ಸರಕಾರ ನಿರ್ಮಿಸಿರುವ ರಂಗಮಂದಿರ ಬಳಕೆಯಾಗದಿರುವ ಬಗ್ಗೆ ದ್ವನಿ ಎತ್ತಿದರು. ಈಗ ಪರಮೇಶ್ವರ
ಮತ್ತು ಮೇಯರ್ ಇಬ್ಬರೂ ಒಂದು ಕಡೆ ಸಿಕ್ಕಾಗ ವಾರ್ಡಿಗೊಂದು ರಂಗಮಂದಿರ ಆಗಬೇಕು ಎಂದು ಬೇಡಿಕೆ ಇಟ್ಟರು..
ನಿಜವಾಗಿಯೂ ಇದು ಆಗಬೇಕಾದದ್ದೇ. ಯಾವ ರಂಗಕರ್ಮಿಯೂ ರಂಗಭೂಮಿಯ ಬೆಳವಣಿಗೆಗೆ ಅತೀ ಅಗತ್ಯವಾದ ರಂಗಮಂದಿರ
ನಿರ್ಮಾಣ ಕುರಿತು ಮಾತಾಡದೇ ಇರುವಂತಹ ಸಂದರ್ಭದಲ್ಲಿ ಕಪ್ಪಣ್ಣನಂತವರಾದರೂ ಅದನ್ನು ಪಟ್ಟು ಹಿಡಿದು
ಅವಕಾಶ ಸಿಕ್ಕಲ್ಲೆಲ್ಲಾ ಪ್ರಸ್ತಾಪಿಸಿ ಒತ್ತಾಯ ಹೇರುತ್ತಿರುವುದು ಶ್ಲಾಘನೀಯವಾದದ್ದು. ಇದಕ್ಕಾಗಿ
ಕಪ್ಪಣ್ಣನವರನ್ನು ಅಭಿನಂದಿಸಲೇಬೇಕು.
ಇನ್ನೂ ಟೌನ್ ಹಾಲ್ ಮುಂದೆ
ಪ್ರತಿಭಟನೆ ನಿಷೇಧಿಸಬೇಕು ಎಂಬ ಬೇಡಿಕೆ ಇಟ್ಟು ಒಪ್ಪಿಗೆ ಪಡೆದೆ ಎಂದು ಫೇಸ್ಬುಕ್ಕಲ್ಲಿ ಕಪ್ಪಣ್ಣನವರು
ಬರೆದುಕೊಂಡಿದ್ದು ಜನವಿರೋಧಿ ದೋರಣೆಯಾಗಿದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲಾ. ಪ್ರತಿಭಟನೆ ಎನ್ನುವುದು
ಪ್ರಜಾಪ್ರಭುತ್ವದ ಭಾಗವೇ ಆಗಿದೆ ಹಾಗೂ ಸಂವಿಧಾನವೇ ಅದಕ್ಕೆ ಅವಕಾಶವನ್ನೊದಗಿಸಿಕೊಟ್ಟಿದೆ. ಇವತ್ತಿಗೂ
ಈ ಬಂಡವಾಳಶಾಹಿ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಿ ಇದೆ ಅಂದರೆ, ಈಗಲೂ ಈ ರಾಜಕಾರಣಿಗಳು ಹಾಗೂ ಅಧಿಕಾರಿಗಳು
ಯಾವುದಕ್ಕಾದರೂ ಹೆದರುತ್ತಾರೆಂದರೆ ಅದು ಜನರ ಪ್ರತಿಭಟನೆ ಹಾಗೂ ಜನಾಲೋಂದನಗಳಿಗೆ ಮಾತ್ರ. ಪ್ರತಿಭಟನೆಯ
ಹಕ್ಕನ್ನೇ ವಿರೋಧಿಸುವುದು ಹಾಗೂ ಪ್ರತಿಭಟನೆ ಮಾಡುವ ಜಾಗವನ್ನು ನಿಷೇಧಿಸುವುದು ಅಂದರೆ ಸಂವಿಧಾನವಿರೋಧಿ
ಕೃತ್ಯವಾಗುತ್ತದೆ. ಇದಕ್ಕೆ ಬೇಡಿಕೆ ಇಡುವುದು ಹಾಗೂ
ಇದನ್ನು ಅನುಷ್ಟಾನಗೊಳಿಸುವುದು ಎರಡೂ ಜನವಿರೋಧಿಯಾದ ಕೃತ್ಯಗಳೇ.
ನಿಜ ಏನೆಂದರೆ ಕಪ್ಪಣ್ಣನವರಿಗೆ
ಏನೋ ಹೇಳಬೇಕಾಗಿರುತ್ತದೆ. ಆದರೆ ಇನ್ನೇನೋ ಹೇಳಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಅವತ್ತು ಗೃಹಮಂತ್ರಿಗಳ
ಮುಂದೆ ಕಪ್ಪಣ್ಣನವರು ತೋಡಿಕೊಂಡಿದ್ದೂ ಸಹ ರಂಗಭೂಮಿಯ ಸಂಕಟವನ್ನೇ. “ಟೌನ್‌ಹಾಲ್ ಮುಂದೆ ರಾಜಕೀಯ
ಪಕ್ಷಗಳು ಹಾಗೂ ಇತರೇ ಸಂಘಟನೆಗಳು ಮುಷ್ಕರ ಧರಣಿ ಪ್ರತಿಭಟನೆಯನ್ನು ನಿರಂತರವಾಗಿ ಮಾಡುತ್ತವೆ. ಇದರಿಂದಾಗಿ
ಪಕ್ಕದ ಕಲಾಕ್ಷೇತ್ರದ ವಾತಾವರಣ ಹಾಳಾಗುತ್ತದೆ. ಪ್ರತಿಭಟನಾಕಾರರು ಕಲಾಕ್ಷೇತ್ರದ ಆವರಣದಲ್ಲಿ ಬೇಕಾಬಿಟ್ಟಿ
ವಾಹನಗಳನ್ನು ಪಾರ್ಕ ಮಾಡುತ್ತಾರೆ. ಕಲಾಕ್ಷೇತ್ರದ ಆವರಣದಲ್ಲಿ ನೆನಪಿನೋಕಳಿಯಂತಹ ಕಾರ್ಯಕ್ರಮಗಳನ್ನು
ಮಾಡುವಾಗ ಜಾಗವೇ ಇಲ್ಲದಂತಾಗಿ ಆಯೋಜಕರು ಹಾಗೂ ಕಲಾವಿದರು ಪರದಾಡಬೇಕಾಗುತ್ತದೆ. ಆದ್ದರಿಂದ ಕಲಾವಿದರಿಗೆ
ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು. ಮುಷ್ಕರಗಳಿಗೆ ಕೆಲವು ನಿಬಂಧನೆಗಳನ್ನು ಹಾಕಬೇಕು” ಎಂದು ಕಪ್ಪಣ್ಣನವರು ಹೋಮಿನಿಸ್ಟ್ರನ್ನ
ಕೇಳಿಕೊಂಡಿದ್ದಾರೆ. ಹಾಗೂ ಅವರು ಹೀಗೆ ಮನವಿ ಮಾಡಿದ್ದನ್ನು ಸ್ವತಃ ಕಪ್ಪಣ್ಣನವರು ಹಾಗೂ ಜೊತೆಯಲ್ಲಿದ್ದ ಕೆಲವರು ಅನುಮೋದಿಸುತ್ತಾರೆ.
ಆದರೆ.. ಪುರಭವನದ ಮುಂದೆ ಪ್ರತಿಭಟನೆ ಮಾಡುವವರು ತಮ್ಮ ವಾಹನಗಳನ್ನು ಕಲಾಕ್ಷೇತ್ರದಲ್ಲಿ ನಿಲ್ಲಿಸುವುದನ್ನು
ನಿಷೇಧಿಸಬೇಕು ಎಂದು ಮನವಿ ಮಾಡಿಕೊಂಡೆ ಎಂದು ಫೇಸ್ಬುಕ್ಕಲ್ಲಿ ಬರೆಯುವ ಬದಲು ಆತುರಕ್ಕೆ ಬಿದ್ದು “ಟೌನ್ ಹಾಲ್ ಮುಂದೆ ತಕ್ಷಣವೇ
ಜಾರಿಗೆ ಬರುವಂತೆ ಧರಣಿ, ಪ್ರತಿಭಟನೆ, ಮುಷ್ಕರ ನಿಷೇಧಿಸಬೇಕು” ಎಂದು ಮನವಿ ಮಾಡಿಕೊಂಡೆ ಎಂದು
ಬರೆದುಕೊಂಡು ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.ಯಾಕೆ ಹೀಗೆ ಬರೆದಿರಿ" ಎಂದು ಕೇಳಿದರೆ "ಅಯ್ಯೋ ನನಗೆ ಬರೆಯಲು ಬರೋದಿಲ್ಲ.. ರಾಜಕೀಯ ಪ್ರತಿಭಟನೆಗಳಿಂದಾಗಿ ಕಲಾಕ್ಷೇತ್ರದ ಕಾರ್ಯಕ್ರಮಗಳಿಗೆ ತೊಂದರೆಯಾಗುವುದನ್ನು ನಿಷೇಧಿಸಬೇಕು ಎಂದು ಬರೆಯುವ ಬದಲಾಗಿ ಪುರಭವನದ ಮುಂದೆ ಪ್ರತಿಭಟನೆ ನಿಷೇಧಿಸಬೇಕು ಎಂದು ಬರೆದೆ. ಆದರೆ ಅದು ನನ್ನ ಉದ್ದೇಶವಾಗಿರಲಿಲ್ಲ.." ಎಂಬುದು ಕಪ್ಪಣ್ಣನವರ ಸಮರ್ಥನೆಯಾಗಿದೆ..
ನಾಲಿಗೆಯ ಮೇಲೆ ಹಿಡಿತವಿಲ್ಲದ
ರಾಜಕಾರಣಿಗಳು ಸಾರ್ವಜನಿಕವಾಗಿ ಏನು ಮಾತಾಡಬೇಕು ಎನ್ನುವುದನ್ನು ಬರೆದುಕೊಡುವುದಕ್ಕೇ ಒಬ್ಬ ಬುದ್ದಿವಂತ
ಪಿಎ ಯನ್ನು ಇಟ್ಟುಕೊಳ್ಳುವ ಹಾಗೆ ರಂಗರಾಜಕಾರಣಿಯಾದ ಕಪ್ಪಣ್ಣನವರೂ ಸಹ ಸಾರ್ವಜನಿಕವಾಗಿ ಮಾತಾಡುವುದಕ್ಕೆ
ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವುದಕ್ಕೆ ಯಾರಾದರೂ ಒಬ್ಬ ಬುದ್ದಿವಂತನನ್ನು
ನಿಯಮಿಸಿಕೊಳ್ಳುವುದು ಅಗತ್ಯವಾಗಿದೆ. ಅದೂ ಆಗದಿದ್ದರೆ ಏನೇ ಮಾತಾಡುವ ಮುನ್ನ ನಾಲ್ಕು ಬಾರಿ ಯೋಚಿಸಿ
ಸೂಕ್ತವೆನಿಸಿದರೆ ಮಾತಾಡುವುದು ಉತ್ತಮ. ಯಾವುದೇ ಸಭೆ ಸಮಾರಂಭವಿರಲಿ ಮಾಡುವ ಭಾಷಣ ಹಾಗೂ ಆಡುವ ಮಾತುಗಳನ್ನು
ಮೊದಲೇ ಬರೆಯಿಸಿಕೊಂಡು ಮಾತಾಡಿದರೆ ಬಿ.ವಿ.ಕಾರಂತ್ ಪ್ರಶಸ್ತಿ ಪುರಸ್ಕೃತರಾಗುತ್ತಿರುವ ಕಪ್ಪಣ್ಣನವರಿಗಿಂತಲೂ
ಆ ಪ್ರಶಸ್ತಿಗಾದರೂ ಒಂದಿಷ್ಟು ಗೌರವ ಸಿಗುವಂತಾಗುತ್ತದೆ. ಏನೋ ಹೇಳಲು ಹೋಗಿ ಇನ್ನೇನೋ ಹೇಳುವುದು..
ಆತುರಕ್ಕೆ ಬಿದ್ದು ಏನೋ ಬರೆಯಲು ಹೋಗಿ ಇನ್ನೇನೋ ಬರೆದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದನ್ನು
ಕಪ್ಪಣ್ಣ ಮೊದಲು ಬಿಡಬೇಕಿದೆ. ವಯಸ್ಸಾದಂತೆ ಮನುಷ್ಯ ಮಾಗಬೇಕು. ಕಪ್ಪಣ್ಣನವರಿಂದಲೂ ಅದನ್ನೇ ನಿರೀಕ್ಷಿಸಲಾಗುತ್ತಿದೆ.
ಕಪ್ಪಣ್ಣನವರು ಅದ್ಯಾವ ಉಮೇದಿಗೆ
ಬಿದ್ದು ಪ್ರತಿಭಟನೆಯ ಜಾಗವನ್ನೇ ನಿಷೇಧಿಸಬೇಕು ಎಂದು ಹೇಳಿದರೋ ಗೊತ್ತಿಲ್ಲಾ. ಆದರೆ.. ಇದೇ ಟೌನ್‌ಹಾಲ್
ಹಾಗೂ ಕಲಾಕ್ಷೇತ್ರದ ಆವರಣದಲ್ಲಿ ನಡೆದ ಅನೇಕಾನೇಕ ರಂಗಭೂಮಿಯ ಹಲವಾರು ಚಳುವಳಿ, ಹೋರಾಟ ಧರಣಿ ಪ್ರತಿಭಟನೆಯಲ್ಲಿ
ಕಪ್ಪಣ್ಣರವರು ಪ್ರತ್ಯಕ್ಷವಾಗಿ ಭಾಗವಹಿಸಿದ್ದಾರೆ. ರಂಗಭೂಮಿ ಕ್ರಿಯಾ ಸಮಿತಿ ಜೀವಂತವಾಗಿದ್ದಾಗ ಅದರ
ಮುಂಚೂಣಿ ನಾಯಕರಲ್ಲಿ ಒಬ್ಬರಾದ ಕಪ್ಪಣ್ಣ ರಂಗಭೂಮಿಗೆ ಅನ್ಯಾಯವಾದಾಗಲೆಲ್ಲಾ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈಗಲೂ ಸಹ ಕೆಲವು ಲೆಟರ್‌ಹೆಡ್ ಸಂಘಟನೆಗಳನ್ನು ಮಾಡಿಕೊಂಡು ತಮ್ಮ ಗ್ಲಾಸ್‌ಮೇಟ್‌ಗಳನ್ನೆಲ್ಲಾ ಸೇರಿಸಿಕೊಂಡು
ಆಗಾಗ ಪ್ರತಿಭಟನೆಗಳನ್ನು ನಡೆಸುತ್ತಿರುತ್ತಾರೆ. ಅಂತವರು "ಟೌನ್ ಹಾಲ್ ಮುಂದೆ ಪ್ರತಿಭಟನೆಗಳನ್ನು ನಿಷೇಧಿಸಬೇಕು"
ಎಂದು ಮನವಿ ಪತ್ರ ಕೊಟ್ಟಿದ್ದಾರೆ ಎನ್ನುವುದು ನಂಬಲಾಗದು.
ಅಸಲಿಗೆ ಅವತ್ತು ಅಲ್ಲಿ ಯಾರೂ
ಯಾವ ಮನವಿ ಪತ್ರವನ್ನೂ ಯಾರಿಗೂ ಕೊಟ್ಟಿಲ್ಲಾ. ಕೇವಲ ಮಾತಿನ ವಿನಿಮಯಗಳಷ್ಟೇ ಆಗಿದ್ದು. ಅಕಸ್ಮಾತ್ ಫೇಸ್ಬುಕ್ಕಲ್ಲಿ
ಕಪ್ಪಣ್ಣನವರು ಬರೆದುಕೊಂಡಂತೆ “ಪುರಭವನದ ಮುಂದೆ ಪ್ರತಿಭಟನೆಯನ್ನು ನಿಷೇಧಿಸಬೇಕು” ಎನ್ನುವುದು ಅವರ ಅಭಿಪ್ರಾಯ
ಮತ್ತು ಒತ್ತಾಯವಾದರೆ ಅದನ್ನು ಎಲ್ಲಾ ಕಲಾವಿದರು,
ಸಾಹಿತಿಗಳು ಹಾಗೂ ಹೋರಾಟಪರ ಸಂಘಟನೆಗಳು ವಿರೋಧಿಸಿಲೇಬೇಕು. ಕಪ್ಪಣ್ಣನವರ ಈ ಬೇಜವಾಬ್ದಾರಿ
ಹೇಳಿಕೆಯನ್ನು ಖಂಡಿಸಿ 'ಪ್ರತಿಭಟನೆ ನಮ್ಮ ಹಕ್ಕು' ಎಂದು ಹೇಳಬೇಕು. ಅಕಸ್ಮಾತ್ ಕಪ್ಪಣ್ಣನವರ ಬರಹದ ಹಿಂದೆ
ಪ್ರತಿಭಟನೆಗಿಂತಾ ಅದರಿಂದ ಕಲಾಕ್ಷೇತ್ರದೊಳಗಿನ ಕಲಾತ್ಮಕ ಚಟುವಟಿಕೆಗಳಿಗೆ ತೊಂದರೆ ಆಗುತ್ತದೆ ಎನ್ನುವ
ಆಶಯವಿದ್ದರೆ ಅದನ್ನು ಪರಿಶೀಲಿಸಬೇಕು. ಪ್ರತಿಭಟನೆಕಾರರ ವಾಹನಗಳ ನಿಲುಗಡೆಗೆ ಕಲಾಕ್ಷೇತ್ರದ ಆವರಣವನ್ನು
ಹೊರತುಪಡಿಸಿ ಬೇರೆಕಡೆಗೆ ವ್ಯವಸ್ಥೆ ಮಾಡಿಕೊಡಲು ಸರಕಾರಕ್ಕೆ ಹೇಳಬೇಕು. ಇಲ್ಲವೇ ಪ್ರತಿಭಟನೆಗೆ ಅನುಮತಿ ಕೊಡುವಾಗಲೇ ಪೊಲೀಸರು “ರವೀಂದ್ರ ಕಲಾಕ್ಷೇತ್ರ ಹಾಗೂ
ಟೌನ್‌ಹಾಲ್ ಆವರಣದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು ಹಾಗೂ ಕಲಾತ್ಮಕ ಚಟುವಟಿಕೆಗಳಿಗೆ ಅನಗತ್ಯ
ತೊಂದರೆಯನ್ನುಂಟುಮಾಡಬಾರದು” ಎನ್ನುವ ನಿಬಂಧನೆಗಳನ್ನು ಹಾಕಿ ಅದನ್ನು ಅನುಷ್ಟಾನಗೊಳಿಸಬೇಕು.
ಯಾಕೆಂದರೆ ವ್ಯವಸ್ಥೆಯ ಅವ್ಯವಸ್ಥೆಯನ್ನು ವಿರೋಧಿಸುವ ಪ್ರತಿಭಟನೆಗಳು ನಮಗೆ ಬೇಕೆ ಬೇಕು. ಹಾಗೆಯೇ ರವೀಂದ್ರ ಕಲಾಕ್ಷೇತ್ರವು
ಕಲಾಸಂಬಂಧಿತ ಚಟುವಟಿಕೆಗಳಿಗಾಗಿಯೇ ಮೀಸಲಾಗಿರಬೇಕು.
ಈಗ ವಿವಾದದ ಕಿಡಿ ಹಚ್ಚಿರುವ
ಕಪ್ಪಣ್ಣನವರು ತಮ್ಮ ಫೇಸ್ಬುಕ್ ಮೂಲಕ ತಮ್ಮ ಹೇಳಿಕೆಗೆ ಸಮರ್ಥನೆಯನ್ನು ಕೊಡಬೇಕಾಗಿದೆ. ಇಲ್ಲವಾದರೆ
ಪುರಭವನದ ಮುಂದೆ ಪ್ರತಿಭಟನೆಗಳನ್ನು ನಿಷೇಧಿಸಬೇಕೆಂಬುದೇ ಅವರ ನಿಲುವಾದರೆ ಜನವಿರೋಧಿ ಹೇಳಿಕೆ ಕೊಟ್ಟ
ಕಪ್ಪಣ್ಣನವರನ್ನು ಇಡೀ ರಂಗಭೂಮಿಯೇ ನಿಷೇಧಿಸಬೇಕಿದೆ. ಸರಕಾರ ಕೊಡಮಾಡುತ್ತಿರುವ ಬಿ.ವಿ.ಕಾರಂತ ಪ್ರಶಸ್ತಿಯನ್ನು ಈ ಕೂಡಲೇ ತಡೆಹಿಡಿಯಬೇಕೆಂದು ಎಲ್ಲರೂ ಸರಕಾರವನ್ನು ಒತ್ತಾಯಿಸಬೇಕಾಗುತ್ತದೆ.
ಸರಕಾರದ ಎಲ್ಲಾ ಯೋಜನೆಗಳಿಂದ ಕಪ್ಪಣ್ಣನವರನ್ನು ದೂರ ಇಡಬೇಕು ಎಂದು ಸಂಸ್ಕೃತಿ ಇಲಾಖೆಯ ಸಚಿವಾಲಯದ
ಮೇಲೆ ಒತ್ತಡ ತರಬೇಕಾಗುತ್ತದೆ. ಎಲ್ಲಿವರೆಗೂ ಕಪ್ಪಣ್ಣ ತಮ್ಮ ಹೇಳಿಕೆಯ ಹಿಂದಿರುವ ಉದ್ದೇಶವನ್ನು ಸ್ಪಷ್ಟಪಡಿಸುವುದಿಲ್ಲವೋ
ಅಲ್ಲಿವರೆಗೂ ಅವರ ಮೇಲೆ ಗುಮಾನಿಗಳು ಬೆಳೆಯುತ್ತಲೇ ಹೋಗುತ್ತವೆ. ಈ ಒಂದು ಜನವಿರೋಧಿ ಹೇಳಿಕೆಯಿಂದಾಗಿ
ವಾರ್ಡಿಗೊಂಡು ರಂಗಮಂದಿರ ನಿರ್ಮಾಣವಾಗಬೇಕು ಎನ್ನುವ ಅತ್ಯಗತ್ಯ ಮನವಿಯೂ ನೇಪತ್ಯಕ್ಕೆ ಸೇರುವಂತಾಗುತ್ತದೆ.
ಆದ್ದರಿಂದ ಕಪ್ಪಣ್ಣ ಈ ಕೂಡಲೇ ತಮ್ಮ ಬೇಡಿಕೆಗಳೇನು..? ಅವುಗಳ ಹಿಂದಿನ ಉದ್ದೇಶವೇನು? ಎಂಬುದನ್ನು
ಸಾರ್ವಜನಿಕವಾಗಿ ತಿಳಿಸಬೇಕು ಇಲ್ಲವೇ ರಂಗಭೂಮಿ, ಸಾಹಿತ್ಯ ಕ್ಷೇತ್ರ ಹಾಗೂ ಹೋರಾಟಪರ ಸಂಘಟನೆಗಳ ವಿರೋಧವನ್ನು
ಎದುರಿಸಬೇಕು. ಎರಡರಲ್ಲಿ ಒಂದನ್ನು ಆದಷ್ಟು ಬೇಗ ಆಯ್ಕೆ ಮಾಡಿಕೊಳ್ಳಬೇಕು. ತಪ್ಪು ಮಾಡುವುದು ಹಾಗೂ
ಕ್ಷಮೆ ಕೇಳುವುದು ಅವರಿಗೆ ಹೊಸದೇನು ಅಲ್ಲವೇ ಅಲ್ಲಾ. ಆತುರದ ನಿರ್ಧಾರದ ಅನಿಸಿಕೆಯನ್ನು ಅಕ್ಷರರೂಪಕ್ಕಿಳಿಸಿದ್ದಕ್ಕೆ
ಕಪ್ಪಣ್ಣನವರು ಈ ಕೂಡಲೇ ಕ್ಷಮೆ ಕೇಳಬೇಕು ಹಾಗೂ ಮತ್ತೆ ಹೊಸ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು.
ರಂಗಭೂಮಿಯಿಂದಾ ಹಣ ಹೆಸರು ಅನುಕೂಲತೆಗಳನ್ನೆಲ್ಲಾ ಪಡೆದ ವಯೋವೃದ್ದ ಕಪ್ಪಣ್ಣನವರು ಇನ್ನು ಮೇಲೆಯಾದರೂ ರಂಗಭೂಮಿಯ
ಶ್ರೇಯೋಭಿವೃದ್ದಿಗಾಗಿ, ಕಲೆ ಹಾಗೂ ಕಲಾವಿದರ ಅಭಿವೃದ್ದಿಗಾಗಿ ಬದ್ದತೆಯಿಂದಾ ಸ್ವಾರ್ಥರಹಿತವಾಗಿ ಶ್ರಮಿಸಿದರೆ
ಬಿ.ವಿ.ಕಾರಂತರ ಹೆಸರಿನ ಪ್ರಶಸ್ತಿ ದೊರಕಿದ್ದಕ್ಕೂ ಸಾರ್ಥಕವಾಗುತ್ತದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ