ಬುಧವಾರ, ಏಪ್ರಿಲ್ 12, 2017

ಸಾಕ್ಷಚಿತ್ರ ಮಾದರಿ ರಂಗಪ್ರಯೋಗ “ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು” :




ದಲಿತ ದಮನಿತ ಶೋಷಿತ ಸಮುದಾಯಗಳ ಸ್ವಾಭಿಮಾನದ ಸಂಕೇತವಾದ ಡಾ.ಬಿ.ಆರ್.ಅಂಬೇಡ್ಕರವರ ಕುರಿತು ಆಧುನಿಕ ಕನ್ನಡ ರಂಗಭೂಮಿ ಕಾಲಕಾಲಕ್ಕೆ  ಸ್ಪಂದಿಸುತ್ತಲೇ ಬಂದಿದೆ. ಎಲ್. ಹನುಮಂತಯ್ಯನವರಿಂದ ಅಂಬೇಡ್ಕರ್ ನಾಟಕ ಬರೆಸಿದ ಸಿಜಿಕೆಯವರು ನಿರ್ದೇಶನವನ್ನೂ ಮಾಡಿದ್ದರು. ಡಿ.ಎಸ್.ಚೌಗಲೆಯವರು ಮರಾಠಿ ಭಾಷೆಯಿಂದಾ ಅನುವಾದಿಸಿದ ಗಾಂಧಿ v/s ಅಂಬೇಡ್ಕರ್ ನಾಟಕವನ್ನು ಸಿ.ಬಸವಲಿಂಗಯ್ಯನವರು ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದ್ದರು. ಕೋಟಗಾನಹಳ್ಳಿ ರಾಮಯ್ಯನವರು ರಚಿಸಿದ ನನ್ನ ಅಂಬೇಡ್ಕರ್ ನಾಟಕವನ್ನು ಈ ಸಲದ ಸಾಣೇಹಳ್ಳಿ ಶಿವಸಂಚಾರ ರೆಪರ್ಟರಿಗೆ ಪ್ರಮೋದ ಶಿಗ್ಗಾಂವ್ ರವರು ನಿರ್ದೇಶಿಸಿದ್ದಾರೆ. ಡಾ.ಮುಕುಂದರಾವ್ ರವರು ಇಂಗ್ಲೀಷಲ್ಲಿ ಬರೆದ ಬಾಬಾಸಾಹೇಬ ಅಂಬೇಡ್ಕರ್ ಕಾದಂಬರಿಯನ್ನು ವೆಂಕಟರಮಣ ಐತಾಳರು ರಂಗರೂಪಗೊಳಿಸಿದ್ದು ಹೆಗ್ಗೋಡಿನ ಜನಮನದಾಟ ಅರೆರೆಪರ್ಟರಿಗೆ ಎಂ.ಗಣೇಶರವರು ನಿರ್ದೇಶಿಸಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದಾರೆ. ಡಾ.ಮನೋಹರ ಯಶವಂತರವರು ಮರಾಠಿಯಲ್ಲಿ ಬರೆದ ರಮಾಯಿ ಕಾದಂಬರಿಯನ್ನು ಡಾ.ಹೆಚ್.ಟಿ.ಪೋತೆಯವರು ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ರಂಗರೂಪಗೊಳಿಸಿ ಧಾರವಾಡದ ಗಣಕ ರಂಗ ತಂಡಕ್ಕೆ ಹಿಪ್ಪರಗಿ ಸಿದ್ದರಾಮರವರು ನಿರ್ದೇಶಿಸಿದ್ದು ಮೂವತ್ತಕ್ಕೂ ಹೆಚ್ಚು ಪ್ರಯೋಗಗಳಾಗಿವೆ. ಇತ್ತೀಚೆಗೆ ವಾರ್ತಾ ಇಲಾಖೆಯು ಬಿ.ಎಂ.ಗಿರಿರಾಜರವರ ನಿರ್ದೇಶನದಲ್ಲಿ ಭಾರತ ಭಾಗ್ಯ ವಿಧಾತ ಎನ್ನುವ ಬೆಳಕು ಮತ್ತು ದ್ವನಿ ಪ್ರದರ್ಶನವನ್ನೂ ಅದ್ದೂರಿಯಾಗಿ ಆಯೋಜಿಸಿ ರಾಜ್ಯದ ಹಲವಾರು ಕಡೆಗೆ ಪ್ರದರ್ಶನವಾಯಿತು. ಈ ಎಲ್ಲ ನಾಟಕಗಳು ಅಂಬೇಡ್ಕರರವರ ಬದುಕು ಬರಹ ಸಿದ್ದಾಂತಗಳ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತಿದ್ದು ಅಂಬೇಡ್ಕರರವರ ಕುರಿತು ಜನತ ಅರಿವನ್ನು ವಿಸ್ತರಿಸುವ ಕೆಲಸವನ್ನು ಮಾಡಿವೆ.

ಈಗ ಮಾಲ್ಕುಂಡಿ ಮಹದೇವಸ್ವಾಮಿಯವರು ಬರೆದು ಸೂರಿ ಅಣಚುಕ್ಕಿಯವರು ರಂಗರೂಪಗೊಳಿಸಿದ ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು ನಾಟಕವನ್ನು ಅಂಬೇಡ್ಕರ್ ಅಧ್ಯಯನ ಕೇಂದ್ರದ ಕಲಾವಿದರಿಗೆ ಡಿಂಗ್ರಿ ನರೇಶ್ ನಿರ್ದೇಶಿಸಿದ್ದಾರೆ. ಸಂಸ, ಅವಿರತ ಹಾಗೂ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭೀಮಯಾನ ಅರಿವಿನ ಪಯಣ ದಲ್ಲಿ ಎಪ್ರಿಲ್ 12ರಂದು ರವಿಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕವು ಪ್ರದರ್ಶನಗೊಂಡಿತು.

ಅಂಬೇಡ್ಕರರವರ ಬದುಕಿನ ಅತ್ಯಂತ ನೋವಿನ ಕ್ಷಣಗಳನ್ನು ಹಾಗೂ ಅವರು ಇಟ್ಟ ಗುರಿಯನ್ನು ಮುಟ್ಟಲಾಗದೆ ವ್ಯಕ್ತಪಡಿಸುವ ಅಪಾರ ಬೇಸರವನ್ನು ಕೆಲವಾರು ಬಿಡಿ ದೃಶ್ಯಗಳ ಮೂಲಕ ಕಟ್ಟುವ ಪ್ರಯತ್ನವನ್ನು ಈ ನಾಟಕದಲ್ಲಿ ಮಾಡಲಾಗಿದೆ. ಬಾಬಾಸಾಹೇಬರ ನಾಲ್ಕು ಮಕ್ಕಳ ಸಾವು ಹಾಗೂ ಕರುಳಿನ ಕುಡಿಗಳು ತೀರಿಕೊಂಡಾಗಲೂ ಮಕ್ಕಳ ಮುಖವನ್ನೂ ನೋಡಲಾಗದ ನೋವು ಅಂಬೇಡ್ಕರವರ ಕಣ್ಣಲ್ಲಿ ನೀರಾಡಲು ಕಾರಣವಾದರೆ, ಇಷ್ಟೆಲ್ಲಾ ಬದ್ದತೆಯಿಂದಾ ವ್ಯಯಕ್ತಿಕ ಬದುಕಿನ ಸಂತಸದ ಕ್ಷಣಗಳನ್ನೇ ತ್ಯಾಗ ಮಾಡಿ ಶೋಷಿತ ಸಮುದಾಯಕ್ಕಾಗಿ ಬದುಕನ್ನು ಹಣತೆಯಂತೆ ಉರಿಸಿದರೂ ದಮನಿತ ಸಮುದಾಯದ ವಿಮೋಚನೆಯನ್ನು ಸಂಪೂರ್ಣವಾಗಿ ಮಾಡಲಾಗಲಿಲ್ಲವಲ್ಲಾ ಎನ್ನುವ ಅಸಹಾಯಕತೆ ಅಂಬೇಡ್ಕರರ ಕಣ್ಣೀರಿಗೆ ಪ್ರಮುಖ ಕಾರಣವಾಗಿತ್ತು.  ಅದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರರ ಹೋರಾಟದ ಫಲವಾಗಿ ದೊರೆತ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ದಲಿತ ಸಮುದಾಯದ ಕೆಲವು ಅವಕಾಶವಾದಿಗಳ ರಾಜೀಕೋರತನ ಬಾಬಾ ಸಾಹೇಬರ ದುಃಖವನ್ನು ಇಮ್ಮಡಿಸಿತ್ತು. ಹೀಗೆ.. ಕೌಟುಂಬಿಕ ದುರಂತಗಳು ಹಾಗೂ ಶೋಷಿತ ಸಮುದಾಯಗಳನ್ನು ಸಂಪೂರ್ಣ ವಿಮೋಚನೆ ಗೊಳಿಸಲಾಗದಂತಹ  ಅಸಹಾಯಕತೆಗಳಿಂದಾಗಿ ಅಂಬೇಡ್ಕರ್ ನೋವು ಅನುಭವಿಸಿದ ಘಟನೆಗಳು ಈ ನಾಟಕದಲ್ಲಿ ಪ್ರತ್ಯೇಕ ದೃಶ್ಯಗಳ ರೂಪದಲ್ಲಿ ಕಟ್ಟಲ್ಪಟ್ಟಿವೆ. 


ಇಡೀ ನಾಟಕದ ಆಶಯ ಉತ್ತಮವಾದದ್ದು. ದಮನಿತರ ಬದುಕಲ್ಲಿ ಬೆಳಕು ಮೂಡಿಸಲು ತನ್ನ ಮನೆಯ ದೀಪಗಳನ್ನೇ ಆರಿಸಿಕೊಂಡ ದಲಿತ ಸಮುದಾಯದ ಮಹಾನ್ ನಾಯಕರೊಬ್ಬರ ತ್ಯಾಗ ಹಾಗೂ ಬದ್ದತೆಯನ್ನು ತೋರಿಸುವ ಪ್ರಯತ್ನ ಅಭಿನಂದನಾರ್ಹವಾದದ್ದು. ಆದರೆ.. ಇಡೀ ನಾಟಕ ಕಟ್ ಆಂಡ್ ಪೇಸ್ಟ್ ರೀತಿಯಲ್ಲಿ ಮೂಡಿಬಂದಿದೆ. ಒಂದಕ್ಕೊಂದು ಸಂಬಂಧವಿಲ್ಲದ ಬಿಡಿ ದೃಶ್ಯಗಳನ್ನು ರ‍್ಯಾಂಡಮ್ ಆಗಿ ಜೋಡಿಸಲಾಗಿದೆ. ವ್ಯಕ್ತಿಯ ಬದುಕಿನಾಧಾರಿತ ನಾಟಕ ಮಾಡುವಾಗ ಅದು ಸಾಕ್ಷಚಿತ್ರದಂತೆ ಆಗುವುದು ಸಾಮಾನ್ಯ. ಆದರೆ ಸಾಕ್ಷಚಿತ್ರವೂ ಸಹ ಒಂದು ಬಂಧದಲ್ಲಿ ನೇಯ್ದರೇ ಚೆಂದ. ಯುವ ನಿರ್ದೇಶಕ ಡಿಂಗ್ರಿ ನರೇಶ್ ಈ ನಿಟ್ಟಿನಲ್ಲಿ ಇನ್ನೂ ಶ್ರಮಿಸಬೇಕಿದೆ. ವಿಭಿನ್ನ ಹೂಗಳನ್ನು ಪೋಣಿಸಲು ಒಂದು ದಾರ ಸಿದ್ದಗೊಳಿಸಿಕೊಳ್ಳಬೇಕಿದೆ. ದೃಶ್ಯಗಳನ್ನು ಕ್ರಮಬದ್ದವಾಗಿ ಜೋಡಿಸುತ್ತಾ ದೃಶ್ಯದಿಂದ ದೃಶ್ಯಕ್ಕೆ ಲಿಂಕ್ ಕೊಡುವುದನ್ನು ರೂಢಿಸಿಕೊಳ್ಳಬೇಕಿದೆ.


ದೃಶ್ಯ ಜೋಡಣೆಗೆ ಲೇಖಕನ ಪಾತ್ರವೊಂದನ್ನು ಸೃಷ್ಟಿಸಲಾಗಿದೆಯಾದರೂ ಅದು ಸಮರ್ಪಕವಾಗಿ ಮೂಡಿಬರಲಿಲ್ಲಾ. ಜೊತೆಗೆ ಮೂರು ಯಕ್ಷಪಾತ್ರಗಳನ್ನೂ ಆಗಾಗ ವೇದಿಕೆಗೆ ರೂಪಕವಾಗಿ ತಂದರೂ ಅವು ನಾಟಕದ ಚೌಕಟ್ಟಿಗೆ ಹೊಂದುವಂತಿಲ್ಲಾ. ವೈದಿಕಶಾಹಿಯನ್ನು ಶತಾಯ ಗತಾಯ ವಿರೋಧಿಸಿದಂತಹ ಅಂಬೇಡ್ಕರ್‌ರವರ ಕುರಿತ ನಾಟಕದಲ್ಲಿ ಈ ನಾಮಧಾರಿಯಾದ ಶಿಷ್ಟ ಪಾತ್ರಗಳ ಸೃಷ್ಟಿಯೇ ಆಭಾಸಕಾರಿಯಾಗಿದೆ. ಕೇವಲ ಚೆಂದಕ್ಕಾಗಿ ಈ ಪಾತ್ರಗಳನ್ನು ತಂದಿದ್ದರೂ ನಾಟಕದ ಆಶಯಕ್ಕೆ ವೈರುದ್ದ್ಯವನ್ನು ಸೂಚಿಸುವಂತಿವೆ. ನಾಟಕದಲ್ಲಿ ಒತ್ತಾಯಪೂರ್ವಕವಾಗಿ ತುರುಕಿದಂತಿರುವ ಈ ಯಕ್ಷಪಾತ್ರಗಳನ್ನು ಕೈಬಿಟ್ಟರೂ ನಾಟಕಕ್ಕೆ ಯಾವುದೇ ಕೊರತೆಯಾಗುವುದಿಲ್ಲ.

ಡಿಂಗ್ರಿ ನರೇಶ್ ನಿರ್ದೇಶನದ ಜೊತೆಗೆ ಪ್ರಮುಖವಾದ ಅಂಬೇಡ್ಕರ್ ಪಾತ್ರವನ್ನೂ ನಿರ್ವಹಿಸಿದ್ದು ಪಾತ್ರಕ್ಕೆ ಜೀವತುಂಬಲು ಪ್ರಯತ್ನಿಸಿದ್ದಾರೆ. ನೀನಾಸಮ್‌ನಲ್ಲಿ ತರಬೇತಿ ಪಡೆದ ಡಿಂಗ್ರಿಯಿಂದಾ ನಟನೆಯಲ್ಲಿ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಲಾಗುತ್ತದೆ. ಯಾಕೆಂದರೆ ಈ ಪಾತ್ರ ನಾಟಕದಾದ್ಯಂತ ಪ್ರೇಕ್ಷಕರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡದೇ ಮೇಲಕ್ಕೆ ನೋಡುವತ್ತಲೇ ತನ್ನ ಗಮನವನ್ನು ಕೇಂದ್ರಿಕರಿಸಿದೆ. ಬಾಕಿಯೆಲ್ಲಾ ಹೊಸ ಯುವಕ ಯುವತಿಯರು ನಾಟಕದಲ್ಲಿ ಪಾತ್ರವಾಗಿದ್ದು ಇನ್ನೂ ಮಾತಿನಲ್ಲಿ ಪೋರ್ಸ ಹಾಗೂ ಅಭಿನಯದಲ್ಲಿ ಚಲನಶೀಲತೆಯನ್ನು ರೂಢಿಸಿಕೊಳ್ಳಬೇಕಿದೆ. ರಮಾಬಾಯಿ ಹಾಗೂ ಚಾಚಾ ಪಾತ್ರಗಳು ತೀರಿಕೊಂಡ ನಂತರವೂ ಅದೇ ವೇಷದಲ್ಲಿ ಬೇರೆ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಆಭಾಸಕಾರಿಯಾಗಿದೆ. ಕನಿಷ್ಟ ವೇಷವನ್ನಾದರೂ ಬದಲಿಸಿ ಬಂದಿದ್ದರೆ ಗೊಂದಲವನ್ನು ನಿವಾರಿಸಬಹುದಾಗಿದೆ. ಮತ್ತೆ ಮತ್ತೆ ರಿಹರ್ಸಲ್ಸ್‌ಗಳನ್ನು ಮಾಡಿಸುವ ಮೂಲಕ ನಿರ್ದೇಶಕರು ಈ ಅನನುಭವಿ ಯುವನಟರನ್ನು ಪಾತ್ರಗಳಿಗೆ ಮೋಲ್ಡ್ ಮಾಡಿದರೆ ರಂಗಭೂಮಿಗೆ ಕೆಲವು ಕಲಾವಿದರು ದಕ್ಕುವುದರಲ್ಲಿ ಸಂದೇಹವಿಲ್ಲ.

ರಂಗಸಜ್ಜಿಕೆ ವೇದಿಕೆಯನ್ನು ತುಂಬಿದೆಯಾದರೂ ಅವುಗಳ ಬಳಕೆ ಸಮರ್ಥವಾಗಿದ್ದರೆ ಚೆನ್ನಾಗಿತ್ತು. ಲಂಡನ್ನಿನ ಲೈಬ್ರರಿಯಲ್ಲಿ ಅಂಬೇಡ್ಕರ್ ಇರುವ ದೃಶ್ಯ ತುಂಬಾ ಚಿಕ್ಕದಾಗಿದೆ.. ಆದರೆ ಆ ದೃಶ್ಯಕ್ಕೆ ಬಳಸಲಾದ ಬ್ಯಾಕ್‌ಡ್ರಾಪ್ ಸೆಟ್ ಆ ಸಂದರ್ಭದ ನಂತರವೂ ಬಹುತೇಕ ನಾಟಕದಾದ್ಯಂತ ಅಲ್ಲಿಯೇ ಇರಬೇಕಿರಲಿಲ್ಲ. ಸ್ಪೇಜ್ ಬ್ಯಾಲನ್ಸ್ ಮಾಡಿಕೊಂಡು ಇಡೀ ರಂಗಸಜ್ಜಿಕೆಯನ್ನು ದೃಶ್ಯಕ್ಕೆ ಬೇಕಾದಷ್ಟು ಮಾತ್ರ ಬಳಸಿದ್ದರೆ ಈ ನಾಟಕಕ್ಕೆ ಇನ್ನೂ ಹೆಚ್ಚು ಕಳೆ ಬರುತ್ತಿತ್ತು. ಒಂದು ಪತ್ರ ಬರೆಯುವ ಇಲ್ಲವೇ ಪೋನ್ ಮಾಡುವ ಪುಟ್ಟ ಕ್ರಿಯೆಗಳನ್ನು ಮೈಮ್ ಮೂಲಕ ತೋರಿಸದೇ ಪೆನ್ನು ಪೇಪರ್ ಪೋನ್ ಬಳಸಿದ್ದರೆ ಸೂಕ್ತವಾಗುತ್ತಿತ್ತು. ಸಂಗೀತ ಹಾಗೂ ಹಾಡುಗಳು ಈ ನಾಟಕದ ಭಾಗವಾಗಿ ಮೂಡಿಬಂದಿವೆ. ಹಾಡು ಸಂಗೀತ ಹಾಗೂ ಅದಕ್ಕೆ ಪೂರಕವಾದ ನಟನೆಗಳು ಒಂದಕ್ಕೊಂದು ಹೊಂದಾಣಿಕೆಯಾಗಿದ್ದರೆ ನಾಟಕ ಇನ್ನೂ ಹೆಚ್ಚು ಗಮನೀಯವಾಗುತ್ತಿತ್ತು. ಒಟ್ಟಾರೆಯಾಗಿ ರಂಗತಂತ್ರಗಳನ್ನು ಸೂಕ್ತವಾಗಿ ಬಳಸಿ, ಕಲಾವಿದರ ನಟನೆಯಲ್ಲಿ ಇನ್ನೂ ಪೋರ್ಸ ತಂದು, ನಾಟಕದ ಚಲನಶೀಲತೆಯನ್ನು ಹೆಚ್ಚಿಸಿ, ದೃಶ್ಯಗಳನ್ನು ಸರಿಯಾಗಿ ಜೋಡಿಸಿದಲ್ಲಿ ಈ ನಾಟಕ ಪ್ರಯೋಗ ಪ್ರದರ್ಶನಯೋಗ್ಯವಾಗುತ್ತದೆ. ಅಂಬೇಡ್ಕರ್ ಕಣ್ಣೀರಿಟ್ಟ ಭಾವಪೂರ್ಣ ಸನ್ನಿವೇಶಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಇನ್ನೂ ನಾಟಕವನ್ನು ಪರಿಷ್ಕರಿಸಿ ಮರುಜೋಡಣೆ ಮಾಡಿದರೆ ಅಂಬೇಡ್ಕರರ ಆತಂಕ ಹಾಗೂ ಆಶಯಗಳನ್ನು ಕನ್ನಡಿಗರಿಗೆ ಭಾವಪೂರ್ಣವಾಗಿ ಮುಟ್ಟಿಸುವಲ್ಲಿ ಈ ನಾಟಕ ಸಫಲವಾಗುವುದರಲ್ಲಿ ಸಂದೇಹವಿಲ್ಲಾ.

-          - ಶಶಿಕಾಂತ ಯಡಹಳ್ಳಿ     

   



ನಾಟಕದ ನಂತರ ನಾಟಕದ ಕುರಿತು..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ