ಬುಧವಾರ, ಮಾರ್ಚ್ 29, 2017

ಬಂಡವಾಳಿಗರ ಬಣ್ಣ ಬಯಲುಗೊಳಿಸುವ ಬೀದಿನಾಟಕ “ಕಾಸ್‌ಲೆಸ್” ;





ನೋಟು ಅಮಾನ್ಯೀಕರಣದಿಂದ ದೇಶಕ್ಕೆ ದೇಶವೇ ತಲ್ಲಣಗೊಂಡಿದೆ. ಲಕ್ಷಾಂತರ ಕೋಟಿ ಕಪ್ಪು ಹಣವನ್ನೆಲ್ಲಾ ಹೊರತೆಗೆದು ಕಳ್ಳನೋಟುಗಳನ್ನೆಲ್ಲಾ ಸರ್ವನಾಶ ಮಾಡಲಾಗುತ್ತದೆಂಬುದನ್ನು ನಂಬಿದ ದೇಶದ ಜನತೆ ಐದು ತಿಂಗಳುಗಳ ಕಾಲ ಬಂದ ಆರ್ಥಿಕ ಸಂಕಷ್ಟಗಳನ್ನೆಲ್ಲಾ ಅನಿವಾರ್ಯವಾಗಿ ಸಹಿಸಿಕೊಂಡರು. ಡಿಮಾನೀಟೇಶನ್ ನಂತರ ಈಗ ಕ್ಯಾಶಲೆಸ್ ವಹಿವಾಟಿಗಾಗಿ ದೇಶಾದ್ಯಂತ ಒತ್ತಡ ತರಲಾಗುತ್ತಿದೆ. ಡಿಜಿಟಲ್ ವ್ಯವಹಾರ ಮಾಡುವುದರಿಂದ ತೆರಿಗೆಯ ಸೋರಿಕೆ ನಿಂತುಹೋಗಿ ದೇಶ ಅಭಿವೃದ್ದಿ ಹೊಂದುತ್ತದೆಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ.. ಈ ನಗದುರಹಿತ ವಹಿವಾಟಿನಿಂದ ನಿಜಕ್ಕೂ ಯಾರಿಗೆ ಲಾಭವಾಗುತ್ತಿದೆ..? ಈ ಕ್ಯಾಶಲೆಸ್ ಹಿಂದಿರುವ ಹುನ್ನಾರಗಳೇನು? ಎನ್ನುವುದನ್ನು ತೋರಿಸುವ ಬೀದಿನಾಟಕ ಕಾಸ್‌ಲೆಸ್.

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಪ್ರೆಸ್ ಕ್ಲಬ್ ಬೆಂಗಳೂರು ಹಾಗೂ ಪ್ರಯೋಗರಂಗವು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ನಾಟಕಗಳ ಸಂಭ್ರಮದಲ್ಲಿ ಮಾರ್ಚ ೨೬ ರಂದು ಪ್ರೆಸ್‌ಕ್ಲಬ್ ಆವರಣದಲ್ಲಿ ಶಶಿಕಾಂತ ಯಡಹಳ್ಳಿಯವರು ರಚಿಸಿ ನಿರ್ದೇಶಿಸಿದ ಕಾಸ್‌ಲೆಸ್ ನಾಟಕವನ್ನು ಸೃಷ್ಟಿ ಜನನಾಟ್ಯ ಕಲಾಕೇಂದ್ರದ ಯುವ ಕಲಾವಿದರುಗಳು ಪ್ರದರ್ಶಿಸಿದರು.


ಹೌದು ಇದು ಡಿಜಿಟಲ್ ಜಮಾನಾ. ದೇಶಕ್ಕೆ ದೇಶವೇ ಡಿಜಿಟಲ್ ಮೋಡಿಗೊಳಗಾಗಿದೆ. ಕ್ರೆಡಿಟ್ ಡೆಬಿಟ್ ಕಾರ್ಡಗಳು ನಗದು ರಹಿತ ವ್ಯವಹಾರಕ್ಕೆ ಮುನ್ನುಡಿ ಬರೆದಿವೆ. ಈಗ ಮೊಬೈಲ್  ಹಾಗೂ ಆಪ್‌ಗಳು ಇಂದು ಬಹುತೇಕರ ಬದುಕಿನ ಭಾಗವೇ ಆಗಿವೆ. ಈ ಮಾಧ್ಯಮವನ್ನು ಬಳಸಿಕೊಂಡು ಇಡೀ ದೇಶದ ವ್ಯವಹಾರವನ್ನೇ ಕ್ಯಾಶಲೆಸ್ ಮಾಡಲು ಕೇಂದ್ರ ಸರಕಾರ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಈ ಅವಕಾಶವನ್ನು ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಜನರ ಹಣವನ್ನು ಲೂಟಿಹೊಡೆಯಲು ಬಂಡವಾಳಶಾಹಿಗಳು ಹಾಗೂ  ಬಹುರಾಷ್ಟ್ರೀಯ ಕಂಪನಿಗಳು ಅತೀ ಹೆಚ್ಚು ಕ್ರಿಯಾಶೀಲವಾಗಿವೆ. ಜನರ ಹಣ ಮತ್ತು ವಹಿವಾಟುಗಳ ನಡುವೆ ಮದ್ಯವರ್ತಿಯಾಗಿ ಪೇಟಿಯಂ, ಜಿಯೋ ಮನಿ, ಭೀಮ.. ಮುಂತಾದ ತರಾವರಿ ಆಪ್‌ಗಳು ಕ್ಯಾಶಲೆಸ್ ವ್ಯವಹಾರಕ್ಕೆ ಬಳಕೆಯಾಗುತ್ತಿವೆ. ವಿವಿಧ ಆಕರ್ಷಣೆಯನ್ನು ತೋರಿಸಿ ತಮ್ಮ ಆಪ್ ಬಳಸಿ ಎಂದು ಈ ದಲ್ಲಾಳಿ ಕಂಪನಿಗಳು ಜನರನ್ನು ತಮ್ಮತ್ತ ಸೆಳೆಯಲು ತರಾವರಿ ಆಫರ್‌ಗಳನ್ನು ನೀಡುತ್ತಿವೆ. ಆದರೆ.. ಮೊದಮೊದಲು ಜನರನ್ನು ಅಡಿಕ್ಟ್ ಮಾಡಲು ಪ್ರೀಯಾಗಿ ವಹಿವಾಟನ್ನು ಒದಗಿಸಿದರೂ ತದನಂತರ ಸೇವಾ ತೆರಿಗೆ ರೂಪದಲ್ಲಿ ಹಣವನ್ನು ಪಡೆಯುವ ಈ ಕಂಪನಿಗಳು ಲಕ್ಷಾಂತರ ಕೋಟಿ ಹಣವನ್ನು ಗಳಿಸುತ್ತವೆ. ಈ ತಂತ್ರಗಾರಿಕೆಯನ್ನು ಬಯಲು ಮಾಡುವ ಈ ಬೀದಿನಾಟಕವು ಕೆಲವೊಂದು ನಿರ್ದಿಷ್ಟ ಉದಾಹರಣೆಗಳನ್ನು ದೃಶ್ಯರೂಪದಲ್ಲಿ  ಕಟ್ಟಿಕೊಡುವ ಮೂಲಕ ಕ್ಯಾಶಲೆಸ್ ವಹಿವಾಟಿನ ಹಿಂದಿರುವ ಮರ್ಮವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ.


ನಗದು ಹಣ ಚಲಾವಣೆಯನ್ನು ಅದೆಷ್ಟೇ ಜನರು ಅದೆಷ್ಟೇ ಸಲ ಮಾಡಿದರೂ ಹಣದ ಮೌಲ್ಯ ಕಡಿಮೆಯಾಗಲು ಸಾಧ್ಯವಿಲ್ಲ. ಐನೂರು ರೂಪಾಯಿ ಹಣ ದಿನವೊಂದಕ್ಕೆ ಹತ್ತಾರು ಕೈಬದಲಾದರೂ ಅದರ ಬೆಲೆ ಐನೂರು ರೂಪಾಯಿಯಾಗಿಯೇ ಇರುತ್ತದೆ ಹಾಗೂ ಅನೇಕ ವಹಿವಾಟನ್ನು ಮಾಡುತ್ತದೆ. ಆದರೆ.. ಅದೇ ಐನೂರು ರೂಪಾಯಿ ಪ್ರತಿ ಸಲ ಪೇಟಿಯಂ ಮೂಲಕ ವ್ಯವಹಾರ ಮಾಡುವಾಗ ಕನಿಷ್ಟ 2% ಸೇವಾ ತೆರಿಗೆಯನ್ನು ಆಯಾ ಕಂಪನಿಗಳು ಮುರಿದುಕೊಳ್ಳುವುದರಿಂದ ಆ ಐನೂರು ರೂಪಾಯಿಯ ಬೆಲೆ ನಾನೂರಾ ತೊಂಬತ್ತು ರೂಪಾಯಿಗಳಷ್ಟಾಗುತ್ತದೆ. ಹೀಗೆ ಆ ಹಣ ಅದೆಷ್ಟು ಸಲ ಕೈಬದಲಾಗಿ ವಹಿವಾಟು ಮಾಡುತ್ತದೋ ಅಷ್ಟೂ ಸಲ ಸರ್ವೀಸ್ ಟ್ಯಾಕ್ಸ್ ಹೆಸರಲ್ಲಿ ಹಣ ಕಡಿತಗೊಳ್ಳುತ್ತಾ ಸಾಗುತ್ತದೆ. ಹೀಗೆ ಮಾಡುವುದರಿಂದ ಗ್ರಾಹಕರಿಗಾಗಲಿ ಇಲ್ಲವೇ ವ್ಯಾಪಾರಿಗಳಿಗಾಗಲೀ ಯಾವುದೇ ಲಾಭವಿಲ್ಲದೇ ಪೇಟಿಯಂ ಜಿಯೋನಂತಹ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗುತ್ತದೆ. ಸರಕಾರದ ಕ್ಯಾಶಲೆಸ್ ವ್ಯವಹಾರದ ಹಿಂದೆ ಬಂಡವಾಳಶಾಹಿ ಕಂಪನಿಗಳ ಹಿತರಕ್ಷಣೆ ಇರುವುದನ್ನು ಈ ಕಾಸ್‌ಲೆಸ್ ಬೀದಿನಾಟಕವು ಬಲು ಮಾರ್ಮಿಕವಾಗಿ ಹೇಳುತ್ತದೆ.

ಕೊನೆಗೆ ನಮ್ಮ ಶ್ರಮ- ನಮ್ಮ ಹಣ, ನಮ್ಮ ಮನ- ನಮ್ಮ ವಹಿವಾಟು, ಮದ್ಯವರ್ತಿ ಬಂಡವಾಳಶಾಹಿ ಕಂಪನಿಗಳಿಗೆ ದಿಕ್ಕಾರ ಎಂದು ಹೇಳುವ ಮೂಲಕ ಈ ನಾಟಕವು ಪ್ರಸಕ್ತ  ಡಿಜಿಟಲ್ ಆರ್ಥಿಕ ವಹಿವಾಟಿನ ಹಿಂದಿರುವ ಲಾಭಕೋರತನವನ್ನು ತೋರಿಸಿ ನೋಡುಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವಲ್ಲಿ ಸಫಲವಾಗಿದೆ.


ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿರುವ ಈ ಕ್ಯಾಶಲೆಸ ವಹಿವಾಟಿನ ಕುರಿತು ನಾಟಕ ಮಾಡುವುದು ಸವಾಲಿನ ಕೆಲಸ. ಯಾಕೆಂದರೆ ನಿಜಾರ್ಥದಲ್ಲಿ ಕ್ಯಾಶಲೆಸ್ ವ್ಯವಹಾರ ದೇಶದ ಆರ್ಥಿಕ ಬೆಳವಣಿಗೆಗೆ ಅಗತ್ಯವಿದೆ. ಆದರೆ ಅದರ ನಿರ್ವಹಣೆಯನ್ನು ಬಂಡವಾಳಶಾಹಿ ಕಂಪನಿಗಳಿಗೆ ವಹಿಸಿದ್ದರಿಂದಾ ಕೇವಲ ಕೆಲವು ಕಂಪನಿಗಳಿಗೆ ಮಾತ್ರ ಲಾಭವನ್ನು ತಂದುಕೊಡುತ್ತದೆ. ಇದು ಕೊಟ್ಯಾಂತರ ಜನರ ಬೆವರಿನ ಶ್ರಮವನ್ನು ಬಂಡವಾಳಿಗರು ಲೂಟಿ ಮಾಡಲು ಅವಕಾಶಮಾಡಿಕೊಟ್ಟಂತಾಗುತ್ತದೆ. ಇಂತಹ ಸಂದಿಗ್ದ ವಿಷಯವನ್ನು ನವೀರಾದ ಹಾಸ್ಯದ ಮೂಲಕ ಬೀದಿನಾಟಕದಲ್ಲಿ ವಿಡಂಬನಾತ್ಮಕವಾಗಿ ನಿರೂಪಿಸಿ ತೋರಿಸುವಲ್ಲಿ ನಿರ್ದೆಶಕರಾದ ಶಶಿಕಾಂತ ಯಡಹಳ್ಳಿಯವರು ಯಶಸ್ವಿಯಾಗಿದ್ದಾರೆ. 

ಈ ಬೀದಿ ನಾಟಕವನ್ನು ಬೀದಿಯಲ್ಲಿ ಜನರ ನಡುವೆ ಮಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಪ್ರೆಸ್‌ಕ್ಲಬ್ ವೇದಿಕೆಯ ಮೇಲೆ ಮಾಡಿದ್ದರಿಂದಾ ಅದು ಬೀದಿ ನಾಟಕದ ಸ್ವರೂಪಕ್ಕೆ ವ್ಯತಿರಿಕ್ತವೆನಿಸುವಂತಿತ್ತು. ಆದರೂ.. ಬೀದಿನಾಟಕದ ತಂತ್ರಗಾರಿಕೆಯನ್ನು ಅರ್ಧ ಗಂಟೆಗಳ ಕಾಲ ನಾಟಕದಾದ್ಯಂತ ಬಳಸಲಾಗಿದೆ. ಸೆಟ್ ಪ್ರಾಪರ್ಟಿಗಳ ಹಂಗಿಲ್ಲದೇ ಕೇವಲ ನಟರುಗಳ ಅಭಿನಯವನ್ನೇ ಬಳಸಿಕೊಂಡು ಬಲು ಸೊಗಸಾಗಿ ನಾಟಕವನ್ನು ಕಟ್ಟಿಕೊಡಲಾಗಿದೆ. ಕೊರಸ್ ಬಳಕೆ ಈ ಬೀದಿನಾಟಕದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಲಾವಿದರ ಪಾದರಸದಂತಾ ಚಲನೆ, ಬ್ಲಾಕಿಂಗ್ ಹಾಗೂ ಅಭಿನಯ ನೋಡುಗರನ್ನು ಸೆಳೆಯುವಂತಿದೆ ಹಾಗೂ ಪಂಚ್ ಡೈಲಾಗ್‌ಗಳು ಕೇಳುಗರಲ್ಲಿ ಕಚಗುಳಿ ಇಡುವಂತಿವೆ.


ಪ್ರತಿಭಟನಾ ಮಾಧ್ಯಮವಾದ ಬೀದಿ ನಾಟಕಗಳು ಈಗ ಪ್ರಚಾರ ಮಾಧ್ಯಮಗಳಾಗುತ್ತಿರುವ ಜಾಗತೀಕರಣದ ಕಾಲಘಟ್ಟದಲ್ಲಿ ಮತ್ತೆ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆಯನ್ನು ತೋರುತ್ತಾ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿರುವ ಶಶಿಕಾಂತ ಯಡಹಳ್ಳಿ ಹಾಗೂ ಅವರ ಸೃಷ್ಟಿ ಸಂಸ್ಥೆ ಅಭಿನಂದನಾರ್ಹವಾಗಿದೆ. ಅಗತ್ಯ ಇರಲಿ ಬಿಡಲಿ ನಗದು ರಹಿತ ಡಿಜಿಟಲ್ ವ್ಯವಹಾರಕ್ಕೆ ಅನಿವಾರ್ಯವಾಗಿ ತೊಡಗಿಸಿಕೊಳ್ಳುತ್ತಿರುವ ಜನರಲ್ಲಿ ಜಾಗೃತಿ ಮೂಡಿಸಿ, ಜನರ ಶ್ರಮದ ಹಣ ಹೇಗೆ ಅಧೀಕೃತವಾಗಿ ಲೂಟಿಯಾಗುತ್ತದೆ ಎಂಬುದನ್ನು ತೋರಿಸುವ ಈ ಕಾಸ್‌ಲೆಸ್ ಬೀದಿ ನಾಟಕವು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಾಗಿರುವುದು ಈಗಿನ ತುರ್ತು ಅಗತ್ಯವಾಗಿದೆ. ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ನಿರಂತರ ಲೂಟಿಯ ವಿರುದ್ಧ ಬಹುಸಂಖ್ಯಾತ ದುಡಿಯುವ ವರ್ಗವನ್ನು ಎಚ್ಚರಿಸಬೇಕಿದೆ. ಹಾಗೂ ಕಾರ್ಪೋರೇಟ್ ಕಂಪನಿಗಳು ಹಾಗೂ ಸರಕಾರಗಳ ನಡುವೆ ಇರುವ ಕೊಡುಕೊಳ್ಳುವ ಒಳ ಒಪ್ಪಂದಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಕಾಸ್‌ಲೆಸ್ ನಾಟಕ ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಕಾಣಬೇಕಿದೆ.  


- ಜಗದೀಶ್ ಕೆಂಗನಾಳ    ಉಪನ್ಯಾಸಕರು. ಹೊಸಕೋಟೆ

          



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ