ಗುರುವಾರ, ಮಾರ್ಚ್ 2, 2017

ರಂಗದಮೇಲೆ ದೃಶ್ಯಕಾವ್ಯ ಸೃಷ್ಟಿಸಿದ “ಅಭಿಯಾನ” :




ಮಹಾಭಾರತ ಮಹಾಕಾವ್ಯದಲ್ಲಿ ನಲುಗಿದ ಮಹಿಳಾ ಪಾತ್ರಗಳನ್ನು ಕುಂತಿ ಗಾಂಧಾರಿ ದ್ರೌಪತಿ ಎಂದು ಪಟ್ಟಿಮಾಡಬಹದು. ಆದರೆ.. ಇವೆಲ್ಲಾ ಪಾತ್ರಗಳು ಪಿತೃಪ್ರಧಾನ ವ್ಯವಸ್ಥೆಯ ಜೊತೆಗೆ ವಿರೋಧಗಳ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ತಮ್ಮ ಪಾತ್ರ ಮುಗಿಸಿದವು. ಆದರೆ.. ಪುರುಷಪ್ರಧಾನ್ಯತೆಯ ಸ್ವಾರ್ಥ ಸಾಧನೆಯ ವಿರುದ್ಧ ಬಂಡಾಯವೆದ್ದು ಬಲಿಯಾದ ಅಂಬೆಯ ಬದುಕು ಮಾತ್ರ ದುರಂತಮಯವಾದದ್ದು. ಮಹಾಭಾರತದಲ್ಲಿ ಅಗಣ್ಯವೆನಿಸುವ ಅಂಬೆಯ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಡಾ.ಜಯಪ್ರಕಾಶ ಮಾವಿನಕುಳಿಯವರು ಅಭಿಯಾನ ನಾಟಕ ರಚಿಸಿದ್ದಾರೆ.

ದಾಕ್ಷಾಯಿಣಿ ಭಟ್‌ರವರು ತಮ್ಮ ದೃಶ್ಯ ರಂಗತಂಡದ ಕಲಾವಿದರುಗಳಿಗೆ ಈ ನಾಟಕವನ್ನು ನಿರ್ದೇಶಿಸಿದ್ದು ರಂಗದಂಗಳದಲ್ಲಿ ದೃಶ್ಯಕಾವ್ಯವೊಂದನ್ನು ಕಟ್ಟಿಕೊಟ್ಟಿದ್ದಾರೆ. ದೃಶ್ಯ ರಂಗತಂಡ 11 ವರ್ಷ ಪೂರೈಸಿದ ಸವಿನೆನಪಿಗಾಗಿ ಮಾರ್ಚ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡ ದೃಶ್ಯ ನಾಟಕೋತ್ಸವ-2017 ರಲ್ಲಿ ಅಭಿಯಾನ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಸ್ವಿಯಾಯಿತು. 
ಕಾಶಿರಾಜನ ರಾಜಕುಮಾರಿ ಅಂಬೆ ಸ್ವಯಂವರಕ್ಕೆ ಬಂದ ಸಾಲ್ವರಾಜಕುಮಾರನನ್ನು ಪ್ರೀತಿಸಿದ್ದು. ಸ್ವಯಂವರದಲ್ಲಿ ಇನ್ನೇನು ಸಾಲ್ವರಾಜನಿಗೆ ಮಾಲೆ ಹಾಕಬೇಕು ಎನ್ನುವಾಗ ಬಿರುಗಾಳಿಯಂತೆ ನುಗ್ಗಿದ ಭೀಷ್ಮ ಬೇರೆಲ್ಲಾ ರಾಜಕುಮಾರರ ಜೊತೆಗೆ ಸಾಲ್ವನನ್ನೂ ಸೋಲಿಸಿ ಅಂಬೆಯ ವಿರೋಧ ಲೆಕ್ಕಿಸದೇ ಆಕೆಯ ಇಬ್ಬರು ತಂಗಿಯರ ಜೊತೆಗೆ ಬಲವಂತವಾಗಿ ಹಸ್ತಿನಾವತಿಗೆ ಹೊತ್ತು ತಂದು ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆ ಮಾಡಲು ನೋಡಿದ್ದು, ಸಾಲ್ವನನ್ನು ಪ್ರೀತಿಸುತ್ತಿದ್ದು ತಾನು ಕನ್ಯತ್ವವನ್ನು ಕಳೆದುಕೊಂಡಿದ್ದೇನೆಂದು ರಾಣಿ ಸತ್ಯವತಿಗೆ ಹೇಳಿ ಬಿಡುಗಡೆ ಪಡೆದು ಸಾಲ್ವನಲ್ಲಿಗೆ ಹೋದ ಅಂಬೆ ಅಲ್ಲಿಯೂ ಸಹ ಸಾಲ್ವನಿಂದ ಅವಮಾನಿತಳಾಗಿದ್ದು, ತದನಂತರ ಮತ್ತೆ ಹಸ್ತಿನಾವತಿಗೆ ಬಂದ ಅಂಬೆ ಹೊತ್ತು ತಂದ ಭೀಷ್ಮನೇ ತನ್ನನ್ನು ಮದುವೆಯಾಗಬೇಕು ಎಂದು ಆಗ್ರಹಿಸಿದ್ದು. ಅಜನ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿಯಲು ನಿರಾಕರಿಸಿದ ಭೀಷ್ಮ ಅಂಬೆಯನ್ನು ತಿರಸ್ಕರಿಸಿದ್ದು.. ಹೀಗೆ ಇವೆಲ್ಲವುಗಳನ್ನೂ ದೃಶ್ಯಗಳ ರೂಪದಲ್ಲಿ ಅಭಿಯಾನದಲ್ಲಿ  ಕಟ್ಟಿಕೊಡಲಾಗಿದೆ. ಅವಮಾನದ ಬೆಂಕಿಯಲ್ಲಿ ಬೆಂದುಹೋದ ಅಂಬೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ.. ನೋಡುಗರನ್ನು ನಾಟಕ ಮುಗಿದ ಮೇಲೆಯೂ ಕಾಡುತ್ತದೆ.

ರಾಜ್ಯಾಧಿಕಾರವನ್ನು ಕಾಪಾಡಿಕೊಳ್ಳಲು ರಾಣಿ ಸತ್ಯವತಿ ಪ್ರಯತ್ನಿಸಿದರೆ.. ಕೊಟ್ಟ ವಚನಕ್ಕೆ ಭೀಷ್ಮ ಕಟಿಬದ್ದನಾಗುತ್ತಾನೆ. ಕಾಶಿರಾಜನಿಗೆ ತನ್ನ ಸಿಂಹಾಸನದ ಚಿಂತೆಯಾದರೆ.. ಸಾಳ್ವರಾಜನನ್ನು ಸುಡುತ್ತಿರುವುದು ಅವಮಾನದ  ಬೆಂಕಿ.. ಇವರೆಲ್ಲರ ಸ್ವಾರ್ಥ ಹಿತಾಸಕ್ತಿಯಲ್ಲಿ ಅಂಬೆ ಬಲಿಪಶುವಾಗುತ್ತಾಳೆ. ಭೀಷ್ಮನಿಂದಾಗಿ ಸಾಳ್ವನನ್ನು ಮದುವೆಯಾಗಲಾಗದೇ.. ಸತ್ಯವತಿಯ ಶಂಡ ಮಗನಿಗೆ ಹೆಂಡತಿಯಾಗಲಾಗದೇ.. ತಲ್ಲಣಗೊಳ್ಳುವ ಅಂಬೆ ಅತ್ತ ಸಾಳ್ವನಿಂದಲೂ ತಿರಸ್ಕೃತಳಾಗಿ ಇತ್ತ ಭೀಷ್ಮನಿಂದಲೂ ನಿರಾಕರಣೆಗೊಳಗಾಗಿ, ಸತ್ಯವತಿಯಿಂದಲೂ ಅವಮಾನಕ್ಕೊಳಗಾಗಿ ಸೇಡಿನ ಕಿಚ್ಚಿನಲ್ಲಿ ಬೇಯುತ್ತಾಳೆ. ತನ್ನ ಬದುಕಿನ ದುರಂತಕ್ಕೆ ಕಾರಣರಾದ ಪುರುಷರ ಮೇಲೆ ಇಂದಿಲ್ಲಾ ಮುಂದಾದರೂ ಸೇಡು ತೀರಿಸಿಕೊಳ್ಳುವ ನಿರ್ಣಯದೊಂದಿಗೆ ಅಂಬೆಯ ಅಭಿಯಾನ ಮುಕ್ತಾಯವಾಗುತ್ತದೆ. ರಾಜ್ಯಾಧಿಕಾರ, ಧರ್ಮ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಲಿಯಾದ ಸಮಸ್ತ ಮಹಿಳೆಯರ ಪ್ರತಿನಿಧಿಯಾಗಿ ಅಂಬೆಯ ಪಾತ್ರ ಮೂಡಿಬಂದಿದೆ. ಜೊತೆಗೆ ಪುರೋಹಿತಶಾಹಿ ಬ್ರಾಹ್ಮಣರು ಅದು ಹೇಗೆ ಪಾಪಪ್ರಜ್ಞೆಯನ್ನು ಹೆಚ್ಚಿಸಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವುದನ್ನೂ ಸಹ ಈ ನಾಟಕವು ಲೇವಡಿ ಮಾಡುತ್ತದೆ.    

ನಾಟಕ ಮೇಲ್ನೋಟಕ್ಕೆ ತುಂಬಾ ಸೊಗಸಾಗಿ ಕಂಡರೂ ಆಳಕ್ಕಿಳಿದರೆ ಅದ್ಯಾಕೋ ಅಂಬೆಯನ್ನು ಸೇಡಿನ ಮನೋಭಾವದ ಮಹಿಳೆ ಎಂಬಂತೆ ಬಿಂಬಿಸಲಾಗಿದೆ. ಅಂಬೆ ಪಾತ್ರಧಾರಿ ಅರಂಭದ ದೃಶ್ಯವೊಂದನ್ನು ಹೊರತು ಪಡಿಸಿ ಕೊನೆಯವರೆಗೂ ತನ್ನ ಹಾವಭಾವಗಳಲ್ಲಿ ಸೇಡನ್ನೇ ಮೈಗೂಡಿಸಿಕೊಂಡಂತೆ ಅಭಿನಯಿಸಿದ್ದಾರೆ. ತಾನು ಶಾಸ್ತ್ರ ಕಲಿತು ಶಸ್ತ್ರವಿದ್ಯೆ ಕಲಿತಿದ್ದೇನೆ ಆದ್ದರಿಂದ ಅನ್ಯಾಯವನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಳ್ಳುವ ಅಂಬೆ ತಂದೆ, ಭೀಷ್ಮ, ಸತ್ಯವತಿಯ ಜೊತೆಗೆ ಆಕ್ರೋಶದಿಂದಲೇ ಮಾತಾಡುತ್ತಾಳೆ. ಇದರಿಂದಾಗಿ ಈ ನಾಟಕದ ಅಂಬೆ ಸೇಡಿನ ಸ್ವಭಾವದ ಹಠಮಾರಿ ಹೆಂಗಸು ಎನ್ನುವ ವ್ಯತಿರಿಕ್ತ ಮನೋಭಾವ ನೋಡುಗರಲ್ಲಿ ಹುಟ್ಟುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಂತ್ಯದಲ್ಲೂ ಸಹ ಏಟಿಗೆ ಎದುರೇಟು, ಉತ್ತರಕ್ಕೆ ಪ್ರತ್ಯುತ್ತರ, ಬಾಣಕ್ಕೆ ತಿರುಗುಬಾಣ, ಮಂತ್ರಕ್ಕೆ ತಿರುಮಂತ್ರ ನೀಡುತ್ತೇವೆ.. ಎಂದು ಹೇಳುತ್ತಾ ಇಡೀ ಪುರುಷಲೋಕವನ್ನೇ ತನ್ನ ಸೇಡಿನ ಜ್ವಾಲೆಯಲ್ಲಿ ಸುಟ್ಟುಬಿಡುವಂತೆ ಮಾತಾಡುತ್ತಾಳೆ. ಈ ಸಾರ್ವತ್ರೀಕರಣ ಅಪಾಯಕಾರಿಯಾದದ್ದು. ಅಂಬೆ ತನಗಾದ ಅನ್ಯಾಯಕ್ಕೆ ಸಾಲ್ವ, ಭೀಷ್ಮರ ಸ್ವಾರ್ಥವನ್ನು ನಿಂದಿಸಿದ್ದರೆ, ಅಂತವರ ಮೇಲೆ ಸೇಡು ತೀರಿಸಿಕೊಳ್ಳುವ ಮಾತಾಡಿದ್ದರೆ ಅವಳ ಅಂತರಂಗದ ಆಕ್ರೋಶವನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು.

ಆದರೆ.. ಇಡೀ ಪುರುಷಕುಲವನ್ನೇ ದಿಕ್ಕರಿಸುವ ನಿರ್ಣಯ ತೆಗೆದುಕೊಂಡು ಏಟಿಗೆ ಎದುರೇಟು ಹಾಕುವ ಶಪಥ ಕೈಗೊಂಡಿದ್ದು ಅತಿರೇಕವೆನಿಸುತ್ತದೆ. ಇಷ್ಟಕ್ಕೂ ಅಂಬೆಗೆ ಮೂಲಭೂತವಾಗಿ ಅನ್ಯಾಯವಾಗಲು ಕಾರಣವಾಗಿದ್ದು ಸತ್ಯವತಿಯೇ ಆಗಿದ್ದಾಳೆ. ಭೀಷ್ಮ ಸ್ವಯಂವರಕ್ಕೆ ಹೋಗಲು ನಿರಾಕರಿಸಿದಾಗ ಒತ್ತಡ ಹೇರಿ  ಕಳುಹಿಸಿದ್ದೂ ಸತ್ಯವತಿಯೇ ಹೊರತು ಭೀಷ್ಮನೇ ಸ್ವಯಂಪ್ರೇರಿತನಾಗಿ ಹೋಗಿರಲಿಲ್ಲಾ. ಅಂಬೆ ಕನ್ಯೆಯಾಗಿ ಉಳಿದಿಲ್ಲ ಎನ್ನುವ ಸುಳ್ಳನ್ನು ಸತ್ಯವೆಂದು ನಂಬಿದ ಸತ್ಯವತಿಯು ಅಂಬೆಯನ್ನು ಬಿಡುಗಡೆ ಮಾಡುತ್ತಾಳೆಯೇ ಹೊರತು ಅಂಬೆಯ ಮೇಲಿನ ಕರುಣೆಯಿಂದಲ್ಲಾ. ಇಲ್ಲಿ ಅಂಬೆ ಹೇಗೆ ಅಸಹಾಯಕಳೋ ಹಾಗೆಯೇ ಪುರುಷ ಪಾತ್ರಗಳೂ ಸಹ ಅಸಹಾಯಕವಾಗಿವೆ. ಎಲ್ಲಾ ಪಾತ್ರಗಳೂ ಆಯಾ ಸಂದರ್ಭದ ಬಲಿಪಶುಗಳೇ. ಆದರೂ ಅಂಬೆಯ ಮೂಲಕ ಇಡೀ ಪುರುಷಕುಲಕ್ಕೆ ತಿರುಮಂತ್ರ ಹಾಕುವ ನಾಟಕದ ಸೇಡಿನ ಮನೋಭಾವ ಮಾದರಿಯಾದುದಲ್ಲಾ. ಎಲ್ಲಾ ಪುರುಷರೂ ಕೆಟ್ಟವರಲ್ಲಾ ಎಲ್ಲಾ ಸ್ತ್ರೀಯರೂ ಒಳ್ಳೆಯವರೂ ಅಲ್ಲಾ ಎನ್ನುವುದು ಕಾಲಾತೀತ ಸಾರ್ವಕಾಲಿಕ ಸತ್ಯ. ಇಲ್ಲಿ ಭೀಷ್ಮನನ್ನು ಸ್ವಾರ್ಥಿ ಎನ್ನುವುದಾದರೆ ಸತ್ಯವತಿಯೂ ಸ್ವಾರ್ಥಿಯೇ. ತನ್ನ ಸ್ವಾರ್ಥಕ್ಕಾಗಿ ಪ್ರೀತಿಸಿದ ಶಂತನು ರಾಜನಿಗೆ ಶರತ್ತುಗಳನ್ನು ಹಾಕಿ ಭೀಷ್ಮನ ಬದುಕು ಹಾಗೂ ಭವಿಷ್ಯವನ್ನು ಹಾಳು ಮಾಡಿದ್ದೂ ಸಹ ಸತ್ಯವತೀಯೇ. ಮಹಾಭಾರತ ಕಾವ್ಯದಲ್ಲಿ ಬರುವ ಅಂಬೆ ಭೀಷ್ಮನ ಮೇಲೆ ಮಾತ್ರ ಸೇಡು ತೀರಿಸಿಕೊಳ್ಳುವ ಶಪಥಗೈದರೆ.. ಅಭಿಯಾನ ನಾಟಕದ ಅಂಬೆ ಇಡೀ ಪುರುಷರ ವಿರುದ್ಧವೇ ಏಟಿಗೆ ಎದುರೇಟು ಹಾಕುವ ಮಾತನ್ನಾಡುತ್ತಾ ಪುರುಷದ್ವೇಷದ ಪ್ರತೀಕವಾಗುತ್ತಾಳೆ. 
ಇಂದಲ್ಲಾ ನಾಳೆ, ನಾಳೆಯಲ್ಲ ಮತ್ತೊಂದು ದಿನ ನಾವು ನೂರಾರು ದೀಪಗಳಾಗಿ ಬೆಳಗಿ ಏಟಿಗೆ ಎದುರೇಟು ನೀಡುತ್ತೇವೆ.. ಎಂದು ಅಂಬೆಯ ಪಾತ್ರ ಹೇಳುತ್ತದೆ. ಆದರೆ.. ದೀಪಗಳು ಇರುವುದು ಬೆಳಕು ಕೊಡುವುದಕ್ಕೆ ಹೊರತು ಬೆಂಕಿ ಹಚ್ಚುವುದಕ್ಕಲ್ಲಾ ಎನ್ನುವ ಸರಳ ಸತ್ಯ ದೀಪವನ್ನು ರೂಪಕವಾಗಿಸಿದ ನಾಟಕಕಾರರಿಗೆ ಇರಬೇಕಾಗಿತ್ತು. ದೀಪದ ಬದಲು ಕೊಳ್ಳಿಗಳಾಗಿ ಉರಿದು ಎಂದಿದ್ದರೆ ಅಂಬೆಯ ಸೇಡಿಗೆ ಕೊಳ್ಳಿ ಪ್ರತೀಕವಾಗಬಹುದಾಗಿತ್ತು. ರೂಪಕಾತ್ಮಕ ಶಬ್ದಗಳನ್ನು ಬಳಸುವಾಗಲೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲವಾದರೆ ಮಾತಿನ ಆಶಯದಲ್ಲಿ ವ್ಯತ್ಯಾಸವಾಗುತ್ತದೆ. ರಂಗಪಠ್ಯದಲ್ಲಿ ಅಂಬೆಯನ್ನು ಸೇಡಿಗೆ ಪ್ರತೀಕವಾಗಿ ನಿರೂಪಿಸಲಾಗಿದ್ದರೂ ನಿರ್ದೇಶಕಿಯಾದರೂ ಅಂಬೆಯ ಅಸಹಾಯಕತೆಯನ್ನು ಹೇಳುತ್ತಾ ಆಕೆ ಅವಮಾನಿತಳಾದಾಗ ಮಾತ್ರ ಆಕ್ರೋಶ ತೋರಿಸುವಂತೆ ನೋಡಿಕೊಂಡಿದ್ದರೆ ಹಾಗೂ ಅಂಬೆ ತನಗೆ ಅನ್ಯಾಯ ಮಾಡಿದವರನ್ನು ಮಾತ್ರ ವಿರೋಧಿಸಿ ಸೇಡಿನ ಮಾತಾಡಿದ್ದರೆ ಅವಳ ಆಕ್ರೋಶಕ್ಕೂ ಒಂದು ತರ್ಕವಿರುತ್ತಿತ್ತು. ಅಂಬೆಯನ್ನು ಪುರುಷವಿರೋಧಿಯನ್ನಾಗಿಸುವುದು ತಪ್ಪುತ್ತಿತ್ತು.

ನನಗೆ ನಾಚಿಕೆಯಾಗಲು ನಾನೇನು ಯಾರೊಂದಿಗಾದರೂ ಹಾದರ ಮಾಡಿದ್ದೇನೆಯೇ?.. ಎಂದು ಅಂಬೆ ತನಗೆ ತಾನೇ ಸಮರ್ಥನೆ ಮಾಡಿಕೊಂಡು ತನ್ನ ಪಾತಿವೃತ್ಯವನ್ನು ಸಾಬೀತುಪಡಿಸಿಕೊಳ್ಳುತ್ತಾಳೆ. ಆದರೆ.. ಹಾದರ ಎನ್ನುವುದು ಸ್ತ್ರೀಯರ ಮೇಲೆ ಪುರುಷರು ಹೇರಿದ ನಿಂದನಾ ಕ್ರಮವಾಗಿದೆ. ಹಾದರ ಮಾಡುವುದು ನಾಚಿಕೆಗೇಡು ಎನ್ನುವುದು ಪಿತೃಸಮಾಜದ ಸ್ತ್ರೀವಿರೋಧಿ ಕುತಂತ್ರವಾಗಿದೆ. ಈ ನಾಟಕದಲ್ಲೂ ಸಹ ಅಂಬೆಯ ಮೂಲಕ ಹಾದರವನ್ನು ಅನೈತಿಕವಾದದ್ದು ಹಾಗೂ ನಾಚಿಕೆ ಪಡುವಂತಹುದು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ಆದರೆ.. ಇದರ ಅಗತ್ಯವೇ ಇರಲಿಲ್ಲಾ. ಇಲ್ಲಿ ನಾನು ಕನ್ಯೆಯಾಗಿ ಉಳಿದಿಲ್ಲಾ.. ಸಾಲ್ವನೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಸತ್ಯವತಿಗೆ ಹೇಳುವ ಅಂಬೆ ಕೊನೆಗೆ ಹಾದರ ಮಾಡಿದ್ದೇನೆಯೇ? ಎಂದೂ ಕೇಳುತ್ತಾಳೆ. ಹಾದರ ಎಂದರೆ ವಿವಾಹಬಾಹಿರ ಸಂಬಂಧ ಎನ್ನುವುದೇ ಈ ನಾಟಕದ ಗ್ರಹಿಕೆಯಾದರೆ ಸಾಲ್ವನೊಂದಿಗೆ ಸೇರಿ ಕನ್ಯತ್ವ ಕಳೆದುಕೊಂಡಿದ್ದೇನೆ ಎಂದು ಹೇಳುವ ಅಂಬೆ ಮಾಡಿದ್ದಾದರೂ ಏನು? ಹೋಗಲಿ ಅಂಬೆಗೆ ಹಸ್ತಿನಾವತಿಯಿಂದ ಪಾರಾಗಿ ಹೋಗುವ ತಂತ್ರಗಾರಿಕೆಯ ಭಾಗವಾಗಿ ಕನ್ಯತ್ವ ಕಳೆದುಕೊಂಡೆನೆಂದು ಸುಳ್ಳು ಹೇಳಿದ್ದಾಳೆಂದುಕೊಂಡರೂ ಅದು ನಾಟಕದಲ್ಲಿ ಎಲ್ಲಿಯೂ ಸಾಬೀತಾಗುವುದಿಲ್ಲಾ.  ಹೀಗೆ.. ನಾಟಕದಲ್ಲಿ ಮೂಡಿ ಬರುವ ಕೆಲವು ವೈರುದ್ಯಗಳನ್ನು ಸರಿಪಡಿಸಿದರೆ ಪ್ರೇಕ್ಷಕರ ಸಂದೇಹಗಳನ್ನು ದೂರಮಾಡಬಹುದಾಗಿದೆ. ನಾಟಕದ ವಿನ್ಯಾಸದ ಮೇಲೆ ಪ್ರಭುತ್ವ ಸಾಧಿಸಿದ ನಿರ್ದೇಶಕಿ ದಾಕ್ಷಾಯಿಣಿಯವರು ವಸ್ತುವಿನ ತಾರ್ಕಿಕ ನಿರೂಪಣೆಯಲ್ಲೂ ಬೌದ್ದಿಕತೆ ತೋರಬೇಕಾಗಿತ್ತು.
ಈ ತಾರ್ಕಿಕ ಸಂದೇಹಗಳನ್ನು.. ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವಾಗಿಸಿವೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ಟೆಕ್ನಿಕ್ ಈ ನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ. ಆರಂಭದ ಉದ್ಯಾನವನದಲ್ಲಿ ನಡೆಯುವ ರೊಮ್ಯಾಂಟಿಕ್ ದೃಶ್ಯವೈಭವ ಹಾಗೂ ಸತ್ಯವತಿ-ಶಂತನು ಬೇಟಿಯಾದಾಗ ನಾವಿಗೆ ಹುಟ್ಟು ಹಾಕುವಂತೆ ನಟಿಸುವ ಗುಂಪಿನ ದೃಶ್ಯ ಮತ್ತು ಸ್ವಯಂವರದಲ್ಲಿ ಭೀಷ್ಮನು ರಾಜಕುಮಾರರೊಂದಿಗೆ ಕಾದಾಡುವ ದೃಶ್ಯಸಂಯೋಜನೆಗಳು..  ಜೊತೆಗೆ ಇದಕ್ಕೆ ಪೂರಕವಾಗಿ ಕೊಟ್ಟ ಹಿನ್ನಲೆ ಆಲಾಪ ಮತ್ತು ಸಂಗೀತ ನಿಜಕ್ಕೂ ಸೋಜಿಗವನ್ನು ಹುಟ್ಟುಹಾಕುವಂತಿದೆ. ಸಂಗೀತ ಹಾಗೂ ಬೆಳಕಿನ ವಿನ್ಯಾಸಗಳು ಇಡೀ ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಷವನ್ನು ನೀಡಿವೆ. ಆರಂಭದಿಂದ ಅಂತ್ಯದವರೆಗೂ ಬ್ಲಾಕ್‌ಔಟ್‌ಗಳಿಲ್ಲದೇ ನಾನ್‌ಸ್ಟಾಪ್ ಆಗಿ ಮೂಡಿಬರುವ ದೃಶ್ಯಬದಲಾವಣೆಗಳು ಪ್ರೇಕ್ಷಕರ ಗಮನಕ್ಕೆ ಬಾರದಂತೆ ಆಗುತ್ತಿದ್ದುದರಿಂದಾಗಿ ಪ್ರೇಕ್ಷಕರ ಚಿತ್ತ ಅತ್ತಿತ್ತ ಹರಿದಾಡಲೂ ಈ ನಾಟಕ ಆಸ್ಪದ ಕೊಡದೇ ನೋಡಿಸಿಕೊಂಡು ಹೋಗುತ್ತದೆ.

ಎಲ್ಲಾ ಪಾತ್ರಗಳ ಶೈಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಅದರಲ್ಲೂ ಅಂಬೆಯ ಪಾತ್ರವನ್ನು ಸ್ವಕಾಯಪ್ರವೇಶ ಮಾಡಿದವಳಂತೆ ಬಿಂಬಶ್ರೀ ಅಭಿನಯಿಸಿದ್ದನ್ನು ನೋಡುವುದೇ ಒಂದು ಅನುಭವ. ಆದರೂ ಬಿಂಬಶ್ರೀ ಸಂದರ್ಭಕ್ಕನುಗುಣವಾಗಿ ಭಾವತೀವ್ರತೆಯನ್ನು ನಿಯಂತ್ರಿಸಿಕೊಂಡರೆ ಅಂಬೆಯನ್ನು ಕೆಲವೊಮ್ಮೆ ಖಳನಾಯಕಿಯನ್ನಾಗಿ ಬಿಂಬಿಸುವುದನ್ನು ತಪ್ಪಿಸಬಹುದು. ಭೀಷ್ಮನಾಗಿ ತೇಜಸ್ ಕುಮಾರ್, ಸಾಳ್ವನಾಗಿ ವಿಷ್ಣು ಹಾಗೂ ಕಾಶಿರಾಜನಾಗಿ ಹೇಮಂತ್ ಅಭಿನಯ ಎನರ್ಜಿಟಿಕ್ಕಾಗಿದ್ದು ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವಿದ್ಯಾರವರ ಅಭಿನಯ ಗಮನಾರ್ಹವಾಗಿತ್ತು. ಉಳಿದೆಲ್ಲಾ ನಟ ನಟಿಯರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಅಂದಗೊಳಿಸಿದ್ದಾರೆ.   

ನೋಡುಗರ ಗಮನವನ್ನು ಸೆಳೆಯಲು ಕಾರಣವಾಗಿದ್ದು ಪ್ರತಿ ಪಾತ್ರಗಳ ವಸ್ತ್ರವಿನ್ಯಾಸ. ಒಳಗಡೆ ಒಂದೇ ರೀತಿಯ ಕಪ್ಪು ಉಡುಪುಗಳನ್ನು ಬಹುತೇಕ ಪಾತ್ರಗಳು ಧರಿಸಿದ್ದರೂ ಅದರ ಮೇಲೆ ಪಾತ್ರೋಚಿತ ಮೇಲುವಸ್ತ್ರಗಳನ್ನು ಬಳಸಿ ಪ್ರೇಕ್ಷಕರ ಮನದಲ್ಲಿ ಪಾತ್ರಗಳನ್ನು ಚಿತ್ರಿಸಿದ್ದು ವಿಸ್ಮಯಕಾರಿಯಾಗಿದೆ. ರಂಗಸಜ್ಜಿಕೆಯ ವಿನ್ಯಾಸ ತುಂಬಾ ಸರಳವಾಗಿದ್ದು ಕೇವಲ ರಾಜಲಾಂಚನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿದ್ದು ಇಡೀ ನಾಟಕವು ಅಭಿನಯ ಪ್ರಧಾನವಾಗಿ ಪ್ರಸ್ತುತ ಪಡಿಸಲಾಗಿದೆ. ವಯೋಗುಣಕ್ಕನುಗುಣವಾಗಿ ಕಾಶಿರಾಜ ಹಾಗೂ ಶಂತನು ರಾಜನನ್ನು ಪ್ರಸಾಧನದಲ್ಲಿ ಬಿಂಬಿಸಿದ್ದರೆ ಸೂಕ್ತವಾಗುತ್ತಿತ್ತು.   ನೃತ್ಯ ಸಂಗೀತ ಬೆಳಕು ಅಭಿನಯ ಹಾಗೂ ಕಣ್ಮನ ಸೆಳೆಯುವ ಕಾಸ್ಟ್ಯೂಮ್ ಮತ್ತು ಮೇಕಪ್‌ಗಳ ಸೂಕ್ತ ಸಂಯೋಜನೆಗಳಿಂದಾಗಿ ಅಭಿಯಾನವು ನೋಡುಗರ ಮನೋಮಂದಿರದಲ್ಲಿ ಅಭಿಯಾನ ಮಾಡಿದ್ದಂತೂ ಸುಳ್ಳಲ್ಲಾ. ದಾಕ್ಷಾಯಿಣಿಯವರ ಸಂಪೂರ್ಣ ಪ್ರತಿಭೆ ಈ ನಾಟಕದಲ್ಲಿ ಮೂಡಿಬಂದಿದ್ದು, ನಟನೆಗೆ ಹೊಸದಾಗಿ ತೆರೆದುಕೊಂಡಿರುವ ಕಾಲೇಜು ಯುವಕ ಯುವತಿಯರ ಪ್ರತಿಭೆಯನ್ನು ಅಭಿನಯದ ಅಭಿವ್ಯಕ್ತಿಯಾಗಿ ಪರಿವರ್ತಿಸಿ ಸಶಕ್ತ ನಾಟಕವನ್ನು ಕಟ್ಟಿಕೊಟ್ಟಿದ್ದು ಶ್ಲಾಘನೀಯವಾದದ್ದು. ಹೊಸಬರನ್ನು ಕಟ್ಟಿಕೊಂಡು ಉತ್ತಮ ನಾಟಕ ಕಟ್ಟಿಕೊಡಲು ಸಾಧ್ಯವಿಲ್ಲಾ ಎಂದು ನೆಪ ಹೇಳುವ ಕೆಲವು ನಿರ್ದೇಶಕರುಗಳಿಗೆ ಅಭಿಯಾನ ನಾಟಕದಲ್ಲಿನ ಹೊಸಬರ ಅಭಿನಯ ಉತ್ತರ ಹೇಳಬಲ್ಲುದಾಗಿದೆ. ಅಪಾರವಾದ ರಂಗಸಿದ್ದತೆ ಹಾಗೂ ರಂಗಬದ್ದತೆಯ ಜೊತೆಗೆ ನಿಜವಾಗಿ ಪ್ರತಿಭೆಯೂ ಇದ್ದಲ್ಲಿ ಅಭಿಯಾನದಂತಹ ದೃಶ್ಯಕಾವ್ಯವನ್ನು ಕಟ್ಟಿಕೊಡಲು ಸಾಧ್ಯ ಎನ್ನುವುದಕ್ಕೆ ದಾಕ್ಷಾಯಿಣಿ ಬಟ್‌ರವರೇ ಮಾದರಿಯಾಗಿದ್ದಾರೆ. 


  -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ