ಮಂಗಳವಾರ, ಮೇ 30, 2017

ರಂಗದ ಮೇಲೆ ಕಾಲೂರದೇ ಕುಂಟಿದ “ಒಂಟಿ ಕಾಲಿನ ನಡಿಗೆ” :



ಒಂಟಿ ಕಾಲಿನ ನಡಿಗೆ ನಾಟಕವಾದ ಗಳಿಗೆ :




ಆತ್ಮಕಥಾನಕಗಳನ್ನು ಅಕ್ಷರ ಮಾಧ್ಯಮದಲ್ಲೇ ಓದುವುದು ಚೆಂದ. ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ಸಂವಹನಗೊಳಿಸುವುದು ಅಂದುಕೊಂಡಷ್ಟು ಸುಲಭಸಾಧ್ಯವಲ್ಲ ಎಂಬುದು ಎಲ್.ಹನುಮಂತಯ್ಯನವರ ಆತ್ಮಕಥೆಯನ್ನು ಓದಿ ಆ ನಾಟಕವನ್ನೂ ನೋಡಿದವರಿಗೆ ಅನ್ನಿಸದೇ ಇರದು. ದಲಿತ-ಬಂಡಾಯ ಸಾಹಿತ್ಯ ಪ್ರಕಾರದ ಪ್ರಮುಖ ಕವಿ ಲೇಖಕ ಸಂಘಟಕರಾದ ಎಲ್.ಹುನುಮಂತಯ್ಯನವರು ಅಗ್ನಿ ವಾರಪತ್ರಿಕೆಯಲ್ಲಿ ತಮ್ಮ ಬದುಕಿನ ಪ್ರಮುಖ ಘಟನೆಗಳನ್ನು ದಾರಾವಾಹಿ (ಕಾಲಂ) ರೂಪದಲ್ಲಿ ಬರೆದಿದ್ದರು. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂಟಿ ಕಾಲಿನ ನಡಿಗೆ ಹೆಸರಲ್ಲಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಬಿಇಎಲ್ ರಂಗಕರ್ಮಿ ಕೆ.ಜೆ.ಶಂಕರಪ್ಪನವರು ಈ ಆತ್ಮಕಥನವನ್ನು ಆಧರಿಸಿ ರಂಗರೂಪಗೊಳಿಸಿದ್ದು ಮಾಲತೇಶ ಬಡಿಗೇರರವರು ನಾಟಕವಾಗಿ ನಿರ್ದೇಶಿಸಿದ್ದಾರೆ. ಜೂನ್ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಒಂಟಿ ಕಾಲಿನ ನಡಿಗೆ ಪುಸ್ತಕದ ಬಿಡುಗಡೆಯ ನಂತರ ನಾಟಕವೂ ಪ್ರದರ್ಶನಗೊಂಡು ಎಲ್.ಹನುಮಂತಯ್ಯನವರ ಬದುಕು ಹಾಗೂ ಸಾಧನೆಯನ್ನು ಸಾದರಪಡಿಸಿತು.
ಎಲ್. ಹನುಮಂತಯ್ಯವಲ್ಲಿ ಬಂಡಾಯ ಸ್ವಭಾವ ಬೆಳೆದು ಬಂದ ಮೂಲ ಇರುವುದು ಅವರ ತಾತನಲ್ಲಿ ಎಂಬುದು ಈ ನಾಟಕದಿಂದ ಗೊತ್ತಾಯಿತು. ಊರ ತಳವಾರಿಕೆಯ ಕರಿಹನುಮ ಗೇಯಲು ಜಮೀನು ಬೇಕೆಂದು ಊರ ಗೌಡ ಹಾಗೂ ಶಾನುಭೋಗರನ್ನು ಒತ್ತಾಯಿಸಿ ನಿರಾಸೆಗೊಂಡು ಸುಮ್ಮನಾಗದೇ ರಾಮೇಶ್ವದಿಂದ ಮೈಸೂರಿಗೆ ಇನ್ನೂರು ಮೈಲಿ ದೂರ ನಡೆದೇ ಹೋಗಿ ಮೈಸೂರಿನ ಮಹಾರಾಜರಿಗೆ ಅರ್ಜಿಕೊಟ್ಟು ಭೂಮಿ ಹಕ್ಕಿಗೆ ಅನುಮತಿ ಪಡೆದುಕೊಂಡ ಛಲದಂಕ ಮಲ್ಲ. ದೇವರು ವರ ಕೊಟ್ಟರೂ ಪೂಜಾರಿಗಳು ವರ ಕೊಡದೇ ಸತಾಯಿಸಿದಾಗ ಶಾನುಭೋಗರನ್ನೇ ಅಡ್ಡಗಟ್ಟಿ ಹೆದರಿಸಿ ಭೂಮಿ ಮಂಜೂರು ಮಾಡಿಸಿಕೊಂಡು ಹೊಲದೊಡೆಯನಾದ ಕರಿಹನುಮನ ತೀವ್ರ ಪ್ರತಿಭಟನೆ ನಿಜಕ್ಕೂ ಶ್ಲಾಘನೀಯ. ತಾತನ ಛಲ ಹಾಗೂ ಪ್ರತಿಭಟನೆಯ ಮನೋಭಾವವನ್ನು ಬೆಳೆಸಿಕೊಂಡು ಸಂಕಷ್ಟದಿಂದ ಓದು ಕಲಿತು ಒಂಟಿ ಕಾಲಿನ ಅಂದರೆ ಕೊರತೆಗಳ ನಡಿಗೆಯಲ್ಲೇ  ಗುರಿಯತ್ತ ಸಾಗಿದ ಹನುಮಂತಯ್ಯನವರ ಸಾಧನೆ ಸಾಮಾನ್ಯವಾದುದೇನಲ್ಲಾ. ಜೀತಗಾರನ ಮಗನೊಬ್ಬ ಬರಹ, ಸಂಘಟನೆ ಹಾಗೂ ಹೋರಾಟಗಳ ಸಾಧ್ಯತೆಗಳನ್ನೆಲ್ಲಾ ಬಳಸಿಕೊಂಡು ಸಕ್ರೀಯ ರಾಜಕಾರಣಿಯಾಗಿ  ಶಾಸಕನಾಗಲು (ಎಂಎಲ್‌ಸಿ) ಸಾಧ್ಯವೆಂಬುದಕ್ಕೆ ಎಲ್.ಹನುಮಂತಯ್ಯನವರೇ ಉದಾಹರಣೆ. ಈ ನಾಟಕ ಕೂಡಾ ಇದನ್ನೇ ಹೇಳಲು ಪ್ರಯತ್ನಿಸುತ್ತದೆ.


ತಾತ ಛಲದಿಂದ ಕಂದಾಯ ಭೂಮಿ ಪಡಿದಿದ್ದು, ತಂದೆ ಲೆಂಕಪ್ಪ ಜೀತ ಮಾಡುತ್ತಾ ಜೀವನ ಸಾಗಿಸಿದ್ದು, ತಾಯಿ ಚೆನ್ನಮ್ಮ ಹಾವು ಕಡಿದು ನರಳಿದ್ದು, ಓಲೆ ಕದ್ದ ಅತ್ತೆಯಿಂದ ತಾಯಿ ಉಪಾಯವಾಗಿ ಓಲೆ ಮರಳಿ ಪಡೆದಿದ್ದು, ಹತ್ತನೇ ತರಗತಿ ಮುಗಿಸಿದ ಹನುಮಂತಯ್ಯನವರು ಬೆಂಗಳೂರಿನ ಹಾಸ್ಟೆಲ್ ಸೇರಿದ್ದು, ಕಾಲೇಜಿನ ಲಲಿತಕಲಾ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಡಿಗ್ರಿ ಮುಗಿಸಿ ದಲಿತ ಸಂಘರ್ಷ ಸಮೀತಿ ಸೇರಿ ದೌರ್ಜನ್ಯ ವಿರೋಧಿಸಿ ಕಾಲ್ನಡಿಗೆ ಜಾತಾದ ನೇತೃತ್ವವಹಿಸಿದ್ದು, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದು, ಕಥೆಗಾರ ಬೆಸಗರಹಳ್ಳಿ ರಾಮಣ್ಣನವರು ಕೊನೆಗಾಲದಲ್ಲಿ ಜಾತಿ ವ್ಯವಸ್ಥೆಯ ಪಶ್ಚಾತ್ತಾಪಕ್ಕೊಳಗಾಗಿ ಬಲವಂತದಿಂದ ದಲಿತ ಹನುಮಂತಯ್ಯನವರಿಗೆ ಹಾಲು ಕುಡಿಸಿ ಆ ಎಂಜಲಾದ ಹಾಲನ್ನು ಸೇವಿಸಿದ್ದನ್ನೆಲ್ಲಾ.... ದೃಶ್ಯ ಹಾಗೂ ನಿರೂಪನೆಗಳ ಮೂಲಕ ಸಂವಹನ ಮಾಡುವ ಈ ನಾಟಕವು ಕೊನೆಗೆ ಸರ್ವಧರ್ಮ ಸಮಾನತೆಯನ್ನು ಸಾರುವ ಮೂಲಕ ಕೊನೆಯಾಗುತ್ತದೆ.

ಆತ್ಮಕಥೆಯಲ್ಲಿ ಇರುವ ವಿವರಗಳನ್ನೆಲ್ಲಾ ದೃಶ್ಯಕ್ಕಳವಡಿಸುವುದು ಅಸಾಧ್ಯ. ಅದಕ್ಕಾಗಿ ನರೇಟಿವ್ ಫಾರಂ ಬಳಸುವುದು ಅನಿವಾರ್ಯವಾಗುತ್ತದೆ.  ಸಾಧ್ಯವಾದಷ್ಟೂ ನಿರೂಪನೆಗಳಿಗಿಂತಾ ದೃಶ್ಯಗಳಲ್ಲಿ ನಾಟಕ ಕಟ್ಟಿಕೊಟ್ಟರೆ ಪ್ರದರ್ಶನ ಪ್ರೇಕ್ಷಕರ ಅನುಭವಕ್ಕೆ ದಕ್ಕುತ್ತದೆ. ನಿರೂಪನಾ ಪ್ರಧಾನವಾದ ಈ ನಾಟಕದಲ್ಲಿ ಅಗತ್ಯಕ್ಕೆ ತಕ್ಕಂತೆ ದೃಶ್ಯಗಳನ್ನೂ ಸಂಯೋಜನೆ ಮಾಡಲಾಗಿದೆಯಾದರೂ ಅವೆಲ್ಲಾ ಬಿಡಿ ಬಿಡಿ ಘಟನೆಗಳ ಪ್ರಸ್ತುತಿಯಾಗಿದ್ದು ಇಡಿಯಾಗಿ ನಾಟಕ ನೋಡಿದ ಅನುಭವ ದಕ್ಕಲಿಲ್ಲ. ದೃಶ್ಯಗಳ ಜೋಡನೆಯಲ್ಲಿ ಒಂದಕ್ಕೊಂದು ಲಿಂಕ್ ಇದ್ದಿದ್ದರೆ.. ಏನು ಹೇಳಬೇಕು ಎನ್ನುವುದು ನಿರ್ದೇಶಕರಿಗೆ ಸ್ಪಷ್ಟತೆ ಇದ್ದಿದ್ದರೆ.. ವಿವರಗಳಿಗಿಂತಾ ರೂಪಕಗಳಿಗೆ ಹೆಚ್ಚು ಗಮನ ಕೊಟ್ಟಿದ್ದರೆ.. ಆತ್ಮಕಥನ ನಾಟಕವಾಗಿ ಮೂಡಿ ಬರುತ್ತಿತ್ತು.


ಮಾಲತೇಶ ಬಡಿಗೇರರಂತಹ ಕ್ರಿಯಾಶೀಲ ನಿರ್ದೇಶಕರ ಮೇಲೆ ಅತೀ ಹೆಚ್ಚು ನಿರೀಕ್ಷೆಗಳಿರುತ್ತವೆ. ವಿಭಿನ್ನವಾಗಿ ನಾಟಕವನ್ನು ಮಾಡಿಸುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಆದರೆ ಅದ್ಯಾಕೋ ಈ ನಾಟಕವನ್ನು ಅತೀ ನೀರಸವಾಗಿ ಅವಸರದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ನಿರ್ದೇಶನದ ಛಾಪು ಕಾಣಿಸುತ್ತಿಲ್ಲಾ. ಉಚಲ್ಯಾ ನಾಟಕದ ಮಾದರಿಯಲ್ಲೇ ಎಲ್.ಹನುಮಂತಯ್ಯನವರ ಆತ್ಮಕಥನದ ಡಾಕ್ಯೂಡ್ರಾಮಾ ಮಾದರಿಯ ವಿನ್ಯಾಸವಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಈ ಆತ್ಮಕಥನವನ್ನು ನಾಟಕವಾಗಿಸಲು ಹೊಸ ಮಾದರಿಯ ವಿನ್ಯಾಸವನ್ನು ರೂಪಸಿ ರೋಚಕವಾಗಿ ನಿರ್ದೇಶಿಸಿದ್ದರೆ ಪ್ರೇಕ್ಷಕರ ಮನದೊಳಗೆ ಒಂಟಿ ಕಾಲಿನ ನಡಿಗೆ ಪಯಣಿಸಬಹುದಿತ್ತು. ಹಾಗಾಗಲಿಲ್ಲ ಎನ್ನುವುದೇ ಈ ನಾಟಕದ ಕೊರತೆಯಾಗಿದೆ.

ಆತ್ಮಕಥೆ ಯಾಕೆ ಬರೆಯಬೇಕು? ಅದರ ಉದ್ದೇಶವೇನು? ಎನ್ನುವ ಕುರಿತ ಆರಂಭಿಕ ಟಿಪ್ಪಣಿಗಳನ್ನೆಲ್ಲಾ ನಾಟಕದಲ್ಲಿ ಹೇಳುವ ಅಗತ್ಯವಿರಲಿಲ್ಲಾ. ಈ ಪೀಠಿಗೆ ಮುನ್ನುಡಿಗಳು ಪುಸ್ತಕಕ್ಕೆ ಸರಿ.. ನಾಟಕಕ್ಕೆ ಯಾಕೆ ಬೇಕರಿ..? ಹನುಮಂತಯ್ಯನವರೇ ಬರೆದ ಹಲವಾರು ಕವಿತೆಗಳ ಸಾಲುಗಳನ್ನೇ ಬಳಸಿಕೊಂಡು ಕಾವ್ಯಾತ್ಮಕ ಸಂಭಾಷಣೆಗಳನ್ನು ಹೆಣೆದು, ದೃಶ್ಯಗಳನ್ನು ಒಂದಕ್ಕೊಂದು ಪೂರಕವಾಗಿ ಜೋಡಿಸಿದ್ದರೆ ನಾಟಕ ದೃಶ್ಯಕಾವ್ಯವಾಗಬಹುದಾಗಿತ್ತು. ಸನ್ನಿವೇಶಕ್ಕೆ ಪೂರಕವಾಗಿ ಹನುಮಂತಯ್ಯನವರ ಪದ್ಯಗಳನ್ನು ನಾಟಕದಾದ್ಯಂತ ಅಗತ್ಯವಿದ್ದಾಗಲೆಲ್ಲಾ ರೂಪಕವಾಗಿಸಿ ಉಪಯೋಗಿಸಿದ್ದರೆ ನಾಟಕದ ಗತಿಯೇ ಭಿನ್ನವಾಗುತ್ತಿತ್ತು. ಕುತೂಹಲಕಾರಿ ಸನ್ನಿವೇಶ, ನಾಟಕೀಯ ತಿರುವುಗಳು, ರೋಚಕತೆ ಹುಟ್ಟಿಸುವ ಸಂಭಾಷಣೆ ಹಾಗೂ ಮುದಕೊಡುವ ಹಾಸ್ಯಪ್ರಜ್ಞೆ ಇಲ್ಲದೇ ಹೋದರೆ ಆತ್ಮಕತೆ ಆಧಾರಿತ ನಾಟಕಗಳು ನೀರಸವಾಗುತ್ತವೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿ. ಜಾಳುಜಾಳಾಗಿರುವ ರಂಗರೂಪಕ್ಕೆ ಇನ್ನೂ ಗಟ್ಟಿತನ ಬರಬೇಕಿದೆ. ಬಿಡಿ ಬಿಡಿ ದೃಶ್ಯಗಳನ್ನು ಒಂದು ಬಂಧದಲ್ಲಿ ಜೋಡಿಸಿ ಇಡಿಯಾಗಿ ನಾಟಕವನ್ನು ಕಟ್ಟಬೇಕಿದೆ. ತಳಸಮುದಾಯದ ವ್ಯಕ್ತಿಯೊಬ್ಬ ಎಲ್ಲ ಕೊರತೆಗಳ ನಡುವೆಯೂ ಗಮನಾರ್ಹವಾಗಿ ಬೆಳೆದ ಪರಿಯನ್ನು ಪರಿಣಾಮಕಾರಿಯಾಗಿ ತೋರಿಸುತ್ತಾ ದಮನಿತ ವರ್ಗದ ಯುವಕರಿಗೆ ಪ್ರೇರಣೆಯಾಗುವಂತೆ ಈ ನಾಟಕ ಮೂಡಿ ಬರಬೇಕಿದೆ. ಅದಕ್ಕಾಗಿ ನಿರ್ದೇಶಕರು ಇಡೀ ನಾಟಕವನ್ನು ಮರಳಿ ಕಟ್ಟಬೇಕಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬುದೇ ಇರಲಿಲ್ಲಾ. ಆದರೂ ಮಹಾರಾಜರ ಕಾವಲುಗಾರರನ್ನು ಬೇಟಿಯಾದ ಕರಿಹನುಮ ನಾನು ಗ್ರಾಮಾಂತರ ಜಿಲ್ಲೆಯಿಂದ ಬಂದೆ ಎನ್ನುವುದು ಬೇಕಿರಲಿಲ್ಲ. ತನ್ನ ಊರಿನ ಹೆಸರು ಹೇಳಿದ್ದರೆ ಸಾಕಿತ್ತು. ಕಾಲೇಜಿನ ಚುನಾವಣೆಯಲ್ಲಿ ಸಹಪಾಠಿಗಳೆಲ್ಲಾ ಹನುಮಂತಯ್ಯನವರಿಗೆ ಎಂದು ಗೌರವಪೂರ್ವಕವಾಗಿ ಸಂಬೋಧಿಸಿ ಮಾತಾಡುವುದು ಅನಗತ್ಯ. ಮುಂದೆ ಹನುಮಂತಯ್ಯವನವರು ಗೌರವಾನ್ವತರಾಗಿರಬಹುದು ಆದರೆ ವಿದ್ಯಾರ್ಥಿಯಾಗಿದ್ದಾಗ ಸಹಪಾಠಿಗಳು ದಲಿತ ಹುಡುಗನಿಗೆ ಇಷ್ಟೊಂದು ಮರ್ಯಾದೆ ಕೊಟ್ಟು ಮಾತಾಡುವುದು ಅವಾಸ್ತವವೆನಿಸುತ್ತದೆ. ಮದ್ದೂರಯ್ಯನ ದೃಶ್ಯ ಇಲ್ಲದೆ ನಿರೂಪಕನ ಮಾತಲ್ಲಿ ಹೇಳಿಸಿದ್ದರೂ ನಾಟಕಕ್ಕೆ ಬಾಧೆ ಇರುತ್ತಿರಲಿಲ್ಲ. ಹನುಮಂತಯ್ಯನವರನ್ನೇ ನಿರೂಪಕರನ್ನಾಗಿ ತರುವ ಬದಲು ಗುಂಪು ಕೋರಸ್ ಬಳಿಸಿಯೇ ದೃಶ್ಯದ ವಿವರಗಳನ್ನು ಕಟ್ಟಿಕೊಟ್ಟಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು. ನಾಟಕದ ಕೊನೆಗೆ ಎಲ್ಲಾ ಧರ್ಮಗಳ ಸಿಂಬಲ್ ಬಳಸಿ ಸರ್ವಧರ್ಮ ಸಮನ್ವಯವನ್ನು ಹೇಳುವುದು ತುಂಬಾ ಘೋಷನಾತ್ಮಕವಾಗಿ ಬಂದಿದ್ದು, ನಾಟಕದ ಪಠ್ಯಕ್ಕೂ ಈ ಕ್ಲೈಮ್ಯಾಕ್ಸಿಗೂ ಸಂಬಂಧವೇ ಇಲ್ಲವಾಗಿದೆ. ಯಾಕೆಂದರೆ ನಾಟಕದಲ್ಲಿ ಎಲ್ಲೂ ಧರ್ಮಗಳ ಪ್ರಸ್ತಾಪವೇ ಬರುವುದಿಲ್ಲವಾದರೂ ಎಲ್ಲ ಧರ್ಮ ಸಮನ್ವಯದ ಸಂದರ್ಭ ಕೊನೆಗೆ ಬಂದಿದ್ದಾದರೂ ಯಾಕೆ? ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡದೇ ಇರದು.  ಹೀಗೆ.. ಕೆಲವಾರು ಬದಲಾಯಿಸಬಹುದಾದ ನ್ಯೂನ್ಯತೆಗಳನ್ನು ಸರಿಪಡಿಸಿದರೆ ಮುಂದಿನ ಪ್ರದರ್ಶನ ಇನ್ನೂ ಚೆನ್ನಾಗಿ ಮೂಡಿ ಬರಬಹುದಾಗಿದೆ.


ಇಷ್ಟಕ್ಕೂ ಈ ನಾಟಕದ ಉದ್ದೇಶವಾದರೂ ಏನು? ಜಾತಿ ಅಸಮಾನತೆಯನ್ನು ಹೇಳಬೇಕಿತ್ತು. ಎಲ್ಲಿಯೂ ಅದರ ತೀವ್ರತೆ ಕಂಡುಬಂದಿಲ್ಲಾ. ಗೌಡತಿ ದಲಿತರಿಗೆ ಊಟ ನೀಡುವಾಗಲಾದರೂ ದೂರದಿಂದ ಎತ್ತೆತ್ತಿ ಮುದ್ದೆ ಎಸೆದಿದ್ದರೆ ಜಾತಿಯ ಭೀಕರತೆ ಸಾಂಕೇತಿಕವಾಗಿ ತೋರಿಸಿದಂತಾಗುತ್ತಿತ್ತು. ಹಸಿವಿಗಾಗಿ ಸುಳ್ಳು ಹೇಳಿದ ಹುಡುಗನ ನೋವನ್ನು ತೋರಿಸಿದಂತೆಯೇ ಗೌಡತಿಗೆ ದಲಿತರ ಬಗ್ಗೆ ಇರುವ ಅನಾದರವನ್ನೂ ತೋರಿತಬಹುದಾಗಿತ್ತು. ದಲಿತ ಸಮುದಾಯದಿಂದ ಬಂದ ಹನುಮಂತಯ್ಯನವರೇ ಕೇಂದ್ರವಾಗಿರುವ ಈ ನಾಟಕದಲ್ಲಿ ಜಾತಿ ಕಾರಣಕ್ಕೆ ಅವರು ಅನುಭವಿಸಿದ ನೋವು ಅವಮಾನಗಳು ಹಾಗೂ ಅವರು ಕಂಡುಕೊಂಡ ದಾರಿಗಳ ಬಗ್ಗೆ ಹೇಳಬಹುದಾಗಿತ್ತು. ಆತ್ಮಕಥೆಯಲ್ಲಿ ನಿರೂಪಗೊಂಡ ಅವರ ರಕ್ತಸಂಬಂಧಿ ಮದುವೆ ಹಾಗೂ ಅದರ ಪರಿಣಾಮಗಳಿಂದಾಗಿ ಬೆಳೆದು ನಿಂತ ಇಬ್ಬರು ಮಕ್ಕಳ ಸಾವಿನ ಸನ್ನಿವೇಶಗಳನ್ನಾದರೂ ಸೃಷ್ಟಿಸಿದ್ದರೆ ರಕ್ತಸಂಬಂಧದಲ್ಲಿ ಮದುವೆಯಾಗುವುದು ತಪ್ಪು ಎನ್ನುವ ಸಂದೇಶವನ್ನಾದರೂ ತಲುಪಿಸಬಹುದಿತ್ತು. ಅಂಬೇಡ್ಕರರವರ ಪ್ರಭಾವ ಅದು ಹೇಗೆ ಹನುಮಂತಯ್ಯನವರನ್ನು ಪ್ರಭಾವಿಸಿತು ಎನ್ನುವ ಕುರಿತ ಸನ್ನಿವೇಶ ಇದ್ದಿದ್ದರೆ ಅನೇಕರಿಗೆ ಅದು ಪ್ರೇರಣೆಯಾಗಬಹುದಾಗಿತ್ತು. ಆದರೆ... ಹಲವಾರು ಪ್ರಮುಖ ಅಂಶಗಳನ್ನು ಬದಿಗಿಟ್ಟು ಕೆಲವೇ ಬಿಡಿ ದೃಶ್ಯಗಳನ್ನು ಜಾಳುಜಾಳಾಗಿ ಕಟ್ಟಿಕೊಟ್ಟಿದ್ದರಿಂದ ನಾಟಕ ಪ್ರಾಯೋಗಿಕವಾಗಿ ದುರ್ಬಲವಾಯಿತು. ನೋಡುಗರಲ್ಲಿ ನಿರಾಶೆಯನ್ನುಂಟು ಮಾಡಿತು.
  

ನಾಟಕದಲ್ಲಿ ಆಗಾಗ ಬಳಸಿದ ಹಾಡುಗಳು ಸೊಗಸಾಗಿ ಮೂಡಿಬಂದಿವೆ. ಹನುಮಂತಯ್ಯನವರೇ ರಚಿಸಿದ ಶತಮಾನದ ಸೇಡಿನ ಕಿಡಿ ಜಗದೊಳಗಿನ ಲೋಕವೇ, ಒಡಲಿನಾಳದಿಂದ ಬಂದ ಅರಿವಿನ ಆಸ್ಪೋಟವೇ.. ಎನ್ನುವ ಆರಂಭಿಕ ಹಾಡು ಹಾಗೂ ಸಂಗೀತ ಕೇಳುಗರನ್ನು ಎಚ್ಚರಿಸುವಂತಿದೆ. ಆದರೆ ಇದಕ್ಕೆ ಪೂರಕವಾಗಿ ಕಲಾವಿದರು ನಿಂತಲ್ಲೇ ನಿಂತು ಕೈ ಎತ್ತುವ ಬದಲು ಹಾಡಿನ ಸಾಹಿತ್ಯಕ್ಕೆ ತಕ್ಕಂತೆ ಚಲಿಸಿ ರೂಪಕವನ್ನು ಸೃಜಿಸಿದ್ದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಗುಬ್ಯಾರೋ ಮಳೆ ಬಂದು ಗುಬ್ಯಾರೋ.. ಮಣ್ಣಾಗಿ ಹೋದರು ಗುಬ್ಯಾರೋ.. ಎನ್ನುವ ಜಾನಪದ ಗೀತೆಯ ಬಳಕೆ ಹಾಗೂ ಅದಕ್ಕೆ ಪೂರಕವಾಗಿ ರೂಪಗೊಂಡ ಸನ್ನಿವೇಶವು ಪ್ರೇಕ್ಷಕರಲ್ಲಿ ಬರದ ತೀವ್ರತೆ ಹಾಗೂ ಬಡಜನರ ಬವಣೆಯ ಮೂಡನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು. ಹಾಡಿಗೆ ಸಂಗೀತ ಸಂಯೋಜನೆ ಮಾಡುವಲ್ಲಿ ಸ್ವಾಮಿ ದಾಮನಹಳ್ಳಿಯವರು ಗೆದ್ದಿದ್ದಾರೆ. ಆದರೆ ನಾಟಕದಲ್ಲಿ ಸಂಭಾಷಣೆಗಳಿರುವಾಗ ಅನಗತ್ಯವಾಗಿ ಹಿನ್ನೆಲೆ ಸಂಗೀತ ಕೊಟ್ಟರೆ ಕೇಳುಗರಿಗೆ ಕಿರಿಕಿರಿಯಾಗುತ್ತದೆ ಎನ್ನುವ ಅರಿವು ಇದ್ದರೆ ಉತ್ತಮ.

ನವೀನ್ ಮಂಡ್ಯರವರು ಮಾಡಿದ ಬೆಳಕಿಗೆ ಒಂದು ಪಕ್ಕಾ ಸಂಯೋಜನೆ ಎನ್ನುವುದೇ ಇರಲಿಲ್ಲಾ. ಬೆಳಕು ಇರುವುದು ಕೇವಲ ದೃಶ್ಯಗಳನ್ನು ಬೆಳಗಲು ಮಾತ್ರವಲ್ಲಾ ನೋಡುಗರಲ್ಲಿ ಮೂಡ್ ಹುಟ್ಟಿಸಲು ಎನ್ನುವ ಅರಿವು ಇದ್ದಲ್ಲಿ ಬೆಳಕಿನ ವಿನ್ಯಾಸ ನಾಟಕಕ್ಕೆ ತನ್ನ ಕೊಡುಗೆಯನ್ನು ಕೊಡಲು ಸಾಧ್ಯ. ಈ ನಾಟಕದ ಆಶಯವನ್ನು ಹೇಳುವಂತಹ ಸ್ಥಿರವಾದ ಪೇಂಟಿಂಗ್ ಚಿತ್ರದ ಬ್ಯಾಕ್‌ಡ್ರಾಪ್ ಬಳಸಲಾಗಿದೆ. ಆದರೆ ಅದು ಎಲ್ಲಾ ದೃಶ್ಯಗಳಿಗೂ ಪೂರಕವಾಗುವಂತಿಲ್ಲಾ. ಉತ್ತಮ ರಂಗಸಜ್ಜಿಕೆ ವಿನ್ಯಾಸಕರಾದ ಮಾಲತೇಶ್ ಬಡಿಗೇರ್‌ರವರು ಸನ್ನಿವೇಶಗಳಿಗೆ ಪೂರಕವಾಗಿ ಸೆಟ್ ವಿನ್ಯಾಸಗೊಳಿಸಿದರೆ ಅಥವಾ ಅಗತ್ಯವಾದ ಬದಲಾವಣೆಗಳನ್ನು ಮಾಡಿದರೆ ನಾಟಕ ಇನ್ನೂ ಚೆನ್ನಾಗಿ ಮೂಡಿ ಬರುವುದರಲ್ಲಿ ಸಂದೇಹವಿಲ್ಲಾ.    


ನಾಟಕದ ಕಥಾ ನಿರೂಪಣೆಗೆ ಗುಂಪು ಕೋರಸ್ ತಂತ್ರಗಾರಿಕೆಯನ್ನು ಬಳಸಲಾಗಿದೆ. ಅದನ್ನೇ ಇನ್ನೂ ಸಮರ್ಥವಾಗಿ ನಾಟಕದಾದ್ಯಂತ ಸಂವಹನ ಮಾಡಿದ್ದರೂ ನಾಟಕ ಗೆಲ್ಲುತ್ತಿತ್ತು. ಆದರೆ.. ಹನುಮಂತಯ್ಯನವರ ಪಾತ್ರವನ್ನೂ ಸೃಷ್ಟಿಸಿ ಅವರಿಂದಲೂ ಘಟನೆಗಳ ನಿರೂಪನೆ ಮಾಡಿಸಿದ್ದು ಗೊಂದಲಕ್ಕೆ ಕಾರಣವಾಯಿತು. ಅತ್ತೆ ಪಾತ್ರ ಮಾಡಿ ಗಮನ ಸೆಳೆದ ಹನುಮಕ್ಕ ಹಾಗೂ ಬೆಸಗರಹಳ್ಳಿ ರಾಮಣ್ಣನವರ ಪಾತ್ರಕ್ಕೆ ಜೀವದುಂಬಿದ ಕಗ್ಗೆರೆ ಮಂಜ ಈ ಇಬ್ಬರನ್ನು ಹೊರತು ಪಡಿಸಿ ಮಿಕ್ಕೆಲ್ಲ ಪಾತ್ರದಾರಿಗಳೂ ಹೊಸಬರು. ಅವರಿಗೆ ಇನ್ನೂ ವಾಚಿಕ ಹಾಗೂ ಆಂಗಿಕ ತರಬೇತಿಯ ಅಗತ್ಯವಿದ್ದು ಎಲ್ಲರನ್ನೂ ಸಾತ್ವಿಕಾಭಿನಯದ ಕೊರತೆ ಇತ್ತು. ರಿಹರ್ಸಲ್ಸ್ ಕೊರತೆ ನಾಟಕದಾದ್ಯಂತ ಎದ್ದು ಕಾಣುವಂತಿದ್ದು ಅವಸರಕ್ಕೆ ನಾಟಕ ಮಾಡಿದ್ದು ಕಂಡುಬಂದಿತು. ಹನುಮಂತಯ್ಯನಂತಹ ಅನುಭವಿ ಬರಹಗಾರರು, ಮಾಲತೇಶ ಬಡಿಗೇರರಂತಹ ಕ್ರಿಯಾಶೀಲ ನಿರ್ದೇಶಕರು ಇದ್ದಾಗ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ದೇಶಕರ ಮೇಲಿದೆ. ಗುಂಪು ಬಳಕೆಯಲ್ಲೂ ಇನ್ನೂ ಆಕರ್ಷಕ ಸಂಯೋಜನೆ ಮಾಡಬಹುದಾಗಿದೆ. ನಿರ್ದೇಶಕರು ಹಾಗೂ ಕಲಾವಿದರುಗಳು ಇನ್ನೂ ಹೆಚ್ಚು ಪರಿಶ್ರಮ ವಹಿಸಿದರೆ ಮುಂದಿನ ಪ್ರದರ್ಶನದಲ್ಲಿ ಈ ನಾಟಕ ಇನ್ನೂ ಗಟ್ಟಿಯಾಗಿ ಮೂಡಿಬರಬಹುದಾಗಿದೆ. ಕನ್ನಡ ರಂಗಭೂಮಿಗೆ ಆತ್ಮಕತೆಯೊಂದು ಉತ್ತಮ ನಾಟಕವಾಗಿ ದಕ್ಕಬಹುದಾಗಿದೆ. 

                -ಶಶಿಕಾಂತ ಯಡಹಳ್ಳಿ    

     


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ