ಎಲ್ಲ ಸಹನೆಗೂ ಒಂದು ಮಿತಿ
ಇರುತ್ತದೆ. ಅತಿಯಾದರೆ ಏನಾದರೊಂದು ಸಂಚಲನ ಯಾವುದೋ ರೂಪದಲ್ಲಿ ಮೂಡುತ್ತದೆಂಬುದುಕ್ಕೆ ಇತಿಹಾಸವೇ ಸಾಕ್ಷಿ.
ಈಗ ರಂಗಾಯಣದ ವಿಷಯಕ್ಕೆ ಬಂದರೆ.. ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣದ ನಿರ್ದೇಶಕರನ್ನು 2016 ಜುಲೈ
26 ರಂದು ಸರಕಾರ ವಜಾಗೊಳಿಸಿದ್ದು ಈಗಾಗಲೇ ಹತ್ತು ತಿಂಗಳು ಕಳೆದು ಹೋಗಿವೆ ಹಾಗೂ ಇಲ್ಲಿವರೆಗೂ ಈ ಎರಡೂ
ರಂಗಾಯಣಗಳಿಗೆ ನಿರ್ದೇಶಕರನ್ನು ಸರಕಾರ ನಿಯಮಿಸಿಲ್ಲಾ. ಹಾಗೂ ಮೈಸೂರು ರಂಗಾಯಣದ ನಿರ್ದೇಶಕರ ಅವಧಿ
2016 ಸೆಪ್ಟಂಬರ್ 30 ಕ್ಕೆ ಮುಗಿದು ಈಗಾಗಲೇ ಎಂಟು ತಿಂಗಳುಗಳೇ ಉರುಳಿದ್ದು ಅಲ್ಲಿಯೂ ಸಹ ಇಲ್ಲಿವರೆಗೂ
ಮತ್ತೊಬ್ಬ ನಿರ್ದೇಶಕರ ಆಯ್ಕೆ ಮಾಡಿಲ್ಲ. ಸರಕಾರದ ವಿಳಂಬ ಧೋರಣೆಯಿಂದಾಗಿ ಈ ಮೂರೂ ರಂಗಾಯಣಗಳು ಈಗ
ಮುಖ್ಯಸ್ತರಿಲ್ಲದ ಮನೆಗಳಾಗಿವೆ ಹಾಗೂ ಆಡಳಿತಾಧಿಕಾರಿಗಳ ಆಧೀನಕ್ಕೆ ಒಳಪಟ್ಟಿವೆ ಮತ್ತು ರಂಗಾಯಣದ ಆಶಯಕ್ಕೆ
ಅಡ್ಡಿಯಾಗಿದೆ. ಈಗಾಗಲೇ ರಂಗಸಮಾಜದವರು ಸಭೆ ಸೇರಿ ನಿರ್ದೇಶಕರಾಗಬಹುದಾದ ಅರ್ಹತೆ ಇರುವವರ ಪಟ್ಟಿಯನ್ನು
ಇಲಾಖೆಗೆ ಹಾಗೂ ಸಚಿವರಿಗೆ ಕೊಟ್ಟಾಗಿದೆ. ಕೇವಲ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಆದೇಶವೊಂದೇ ಬಾಕಿ
ಇದೆ.
ಕಳೆದ ಸಲ ನಡೆದ ರಂಗಸಮಾಜದ
ಸಭೆಯಲ್ಲಿ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದೇ ರಂಗಸಮಾಜದ ಸದಸ್ಯರಾದಿಯಾಗಿ ಎಲ್ಲರೂ
ನಿರೀಕ್ಷಿಸಿದ್ದರು. ಅದಕ್ಕೆ ಬೆಂಗಳೂರಿನ ಕನ್ನಡ ಭವನದಲ್ಲಿ ಜನವರಿ 12ರಂದು ಆರಂಭವಾಗಬೇಕಿದ್ದ ಸಭೆಗೆ
ರಂಗಸಮಾಜದ ಪ್ರೊಟೋಕಾಲ್ ಅಧ್ಯಕ್ಷರೂ ಆಗಿರುವ ಸಚಿವೆಯವರು ಬರದೇ ಇದ್ದುದರಿಂದ ಅವರ ಆದೇಶದ ಮೇರೆಗೆ
ಮರುದಿನ ಮೈಸೂರಿಗೆ ಶಿಪ್ಟ್ ಆಯಿತು. ಬಹುತೇಕ ರಂಗಸಮಾಜದ ಸದಸ್ಯರು ಹಾಗೂ ಇಲಾಖೆಯ ನಿರ್ದೇಶಕರು ರಂಗಾಯಣದ
ಸಂಭಾವ್ಯ ನಿರ್ದೇಶಕರುಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಮೈಸೂರಿಗೆ ಓಡಿ ಹೋದರೆ ಅಲ್ಲಿಯೂ ಸಹ ಸರಿಯಾಗಿ
ಮೀಟಿಂಗ್ ಆಗಲೇ ಇಲ್ಲಾ. ಯಾಕೆಂದರೆ ಸಚಿವೆಯವರು ಸುಸ್ತಾಗಿದ್ದು ಸಭೆ ಮಾಡುವ ಮೂಡಾಗಲೀ ಸಮಯವಾಗಲಿ ಹಾಗೂ
ಇಚ್ಚಾಶಕ್ತಿಯಾಗಲಿ ಇರಲಿಲ್ಲಾ. ಇದಾಗಿ ನಾಲ್ಕು ತಿಂಗಳಾದರೂ ಮತ್ತೆ ರಂಗಸಮಾಜದ ಮೀಟಿಂಗ್‌ನ್ನು ಸಂಸ್ಕೃತಿ
ಇಲಾಖೆ ಕರೆಯಲಿಲ್ಲಾ. ಇದರಿಂದಾ ರಂಗಸಮಾಜದ ಸದಸ್ಯರಾದಿಯಾಗಿ ಅನೇಕ ರಂಗಕರ್ಮಿಗಳಿಗೆ ನಿರಾಶೆಯಾಯಿತು. ‘ರಂಗಸಮಾಜದ ಮಾತಿಗೆ ಬೆಲೆಯೇ
ಇಲ್ಲವೆಂದಮೇಲೆ ಅಲ್ಲಿ ಯಾಕೆ ಇದ್ದೀರಿ? ರಾಜೀನಾಮೆ ಕೊಟ್ಟು ಹೊರಗೆ ಬನ್ನಿರಿ’ ಎಂದು ರಂಗಕರ್ಮಿಗಳು ರಂಗಸಮಾಜದ
ಸದಸ್ಯರನ್ನು ಒತ್ತಾಯಿಸಿತೊಡಗಿದರು ಕೆಲವೊಮ್ಮೆ ಅವಮಾನಿಸತೊಡಗಿದರು. ಡಾ.ಕೆ.ವೈ.ನಾರಾಯಣಸ್ವಾಮಿಯವರು
ಅದ್ಯಾವತ್ತೋ ಬೇರೆ ಯಾವುದೋ ಕಾರಣಕ್ಕೆ ಕೊಟ್ಟ ರಾಜೀನಾಮೇ ಪತ್ರವನ್ನೇ ನೆಪವಾಗಿಟ್ಟುಕೊಂಡು “ಈಗಾಗಲೇ ರಾಜೀನಾಮೆ ಕೊಟ್ಟಿದ್ದೇವೆ..
ಅದನ್ನು ಸರಕಾರ ಒಪ್ಪಿಲ್ಲಾ.. ನಾನೇನು ಮಾಡಲಿ..” ಎಂದು ಹೇಳುತ್ತಾ ಕಾಲದೂಡತೊಡಗಿದರು.
ತನ್ನ ಮಾತನ್ನು ಕೇಳದ, ತನ್ನ
ತಾಳಕ್ಕೆ ಕುಣಿಯದ ಈ ರಂಗಸಮಾಜದ ಸದಸ್ಯರುಗಳ ಮೇಲೆ ಸಚಿವೆ ಉಮಾಶ್ರೀಯವರಿಗೆ ಆಕ್ರೋಶ ಇದ್ದೇ ಇತ್ತು.
ರಂಗಸಮಾಜದ ಅವಧಿ ಜುಲೈ ತಿಂಗಳಿಗೆ ಮುಗಿಯುತ್ತಿದ್ದುದರಿಂದ.. ಇವರ ಅವಧಿ ಮುಗಿದ ನಂತರ ತಮ್ಮ ಇಚ್ಚೆಯಂತೆ
ರಂಗಾಯಣಕ್ಕೆ ನಿರ್ದೇಶಕರನ್ನು ಆಯ್ಕೆ ಮಾಡಬೇಕೆಂಬುದು ಉಮಾಶ್ರೀಯವರ ಬಯಕೆಯಾಗಿತ್ತು. ರಂಗಸಮಾಜದ ಎಲ್ಲಾ ಸದಸ್ಯರುಗಳು ಅಸಹಾಯಕರಾಗಿ ಸುಮ್ಮನಿದ್ದರೂ
ಜಿ.ಕೆ.ಗೋವಿಂದ್ ರಾವ್‌ರವರು ಮಾತ್ರ ಸುಮ್ಮನಿರಲಿಲ್ಲ. ಯಾವಾಗ ರಂಗಾಯಣದ ನಿರ್ದೇಶಕರನ್ನು ಆಯ್ಕೆ ಮಾಡಲು
ಉಮಾಶ್ರೀಯವರಿಂದ ಸಾಧ್ಯವಾಗುವುದಿಲ್ಲವೆಂದು ಅರಿವಾಯಿತೋ ಆಗ ನೇರವಾಗಿ ಮುಖ್ಯಮಂತ್ರಿಗಳಿಗೆ ಒಂದು ಸುದೀರ್ಘ
ಪತ್ರವನ್ನು ಮೇ 8 ರಂದು ಬರೆದು ತಲುಪಿಸಿದರೂ ಏನೂ ಆಗಲಿಲ್ಲಾ. ಇದರಿಂದ ಬೇಸರಗೊಂಡ ಜಿಕೆಜಿ ಇತ್ತೀಚೆಗೆ
ಅದನ್ನು ಪತ್ರಿಕೆಗಳಿಗೂ ಕೊಟ್ಟುಬಿಟ್ಟರು. ಯಾವಾಗ ಪತ್ರಿಕೆಗಳಲ್ಲಿ ಆ ಪತ್ರದ ಮುಖ್ಯ ಅಂಶಗಳು ಪ್ರಕಟಗೊಂಡವೋ..
ಯಾವಾಗ ಈ ವಿಷಯ ಮುಖ್ಯಮಂತ್ರಿಗಳಿಗೆ ಪತ್ರಿಕೆಗಳ ಮೂಲಕ ತಿಳಿಯಿತೋ ಆಗ ಮಾನ್ಯ ಸಿದ್ದರಾಮಯ್ಯನವರು ಉಮಾಶ್ರೀಯವರಿಗೆ
ಕ್ಲಾಸ್ ತೆಗೆದುಕೊಂಡರು. ಮೊದಲು ಸಭೆ ಕರೆದು ರಂಗಾಯಣದ ಸಮಸ್ಯೆ ಬಗೆಹರಿಸಬೇಕು ಎಂದು ಮೌಖಿಕವಾಗಿ ಆದೇಶಿಸಿದರು.
ಉಮಾಶ್ರೀಯವರು ಬಗೆದದ್ದೆ ಒಂದು .. ಆದರೆ ಅದದ್ದೇ ಇನ್ನೊಂದು. ಮೊದಲೇ ಕೆವೈಎನ್ ಎಂದರೆ ಕೆಂಡ ಕಾರುತ್ತಿದ್ದ
ಉಮಾಶ್ರೀಯವರು ಈಗ ಜಿಕೆಜಿ ರವರೆಂದರೆ ಬೆಂಕಿ ಉಗುಳತೊಡಗಿದರು. ಅಷ್ಟಕ್ಕೂ ಜಿಕೆಜಿಯವರ ಪತ್ರದಲ್ಲಿ ಅಂತಾದ್ದೇನಿತ್ತು. ಆ ಪತ್ರದ ಒಕ್ಕಣೆ ಪೂರ್ಣವಾಗಿ ಇಲ್ಲಿದೆ
ನೋಡಿ.
ಮಾನ್ಯ ಸಿದ್ದರಾಮಯ್ಯನವರು
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ದಿನಾಂಕ:
08-05-2017
ಸದ್ಯದ ರಂಗಸಮಾಜದ ಅವಧಿ ಸುಮಾರು
ಮೂರು ನಾಲ್ಕು ತಿಂಗಳುಗಳಲ್ಲಿ ಮುಕ್ತಾಯವಾಗುತ್ತದೆ.
ಈ ಸಂದರ್ಭ ದಲ್ಲಿ ತಮ್ಮ ಗಮನಕ್ಕೆ ತರಬೇಕಾದ ಕೆಲವು ತುರ್ತು ವಿಷಯಗಳಿವೆ ಅನ್ನಿಸಿ ಈ ಪತ್ರ
ಬರೆಯುತ್ತಿದ್ದೇನೆ.
ರಂಗ ಸಮಾಜವು ನಾಲ್ಕು ವರ್ಷಗಳ
ಅವಧಿಗಾಗಿ ನೇಮಿಸಲ್ಪಡುತ್ತದೆ. ಸದ್ಯದ ರಂಗಸಮಾಜವು, ನನಗೆ
ಅನ್ನಿಸುವಂತೆ, ಆರು ಅಥವಾ ಎಂಟು ಸಲಕ್ಕಿಂತ ಹೆಚ್ಚಿಗೆ ಭೆಟ್ಟಿಯಾಗಿಲ್ಲ. ಆಂದರೆ ವರ್ಷಕ್ಕೆ
ಸರಾಸರಿ ಎರಡು ಬಾರಿಯಾಯಿತು. ಕಲೆ, ರಂಗಭೂಮಿ, ನಾಟಕ ಈ ಒಟ್ಟು ಪ್ರದರ್ಶನ ಸಂಸ್ಕೃತಿಯನ್ನು ನಾಡಿನಲ್ಲಿ
ಪ್ರೋತ್ಸಾಹಿಸಲು, ಬೆಳೆಸಲು ಮುಖ್ಯವಾದ ರಂಗಾಯಣ ಸಂಸ್ಥೆ ಮತ್ತು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯಕ್ರಮಗಳನ್ನು
ರೂಪಿಸಿಕೊಳ್ಳಬೇಕೆಂಬುದು ಶ್ರೀ ಬಿ.ವಿ.ಕಾರಂತರಂಥಹ ಮಹಾನ್ ನಿರ್ದೇಶಕರ ಆಶಯವಾಗಿದ್ದಿತು. ಇದನ್ನು ನಾನು ತಮಗೆ ಹೇಳಲೇ ಬೇಕಾಗಿಲ್ಲ. ಈ ಆಶಯವು ಸಾರ್ಥಕವಾಗಲಿ
ಎಂಬ ದಿಕ್ಕಿನಲ್ಲಿ ರಂಗಾಯಣಕ್ಕೆ ಹಾಗೂ ಒಟ್ಟು ಸರಕಾರಕ್ಕೆ ಮಾರ್ಗದರ್ಶನವನ್ನು, ಸಲಹೆಗಳನ್ನು, ಸೂಚನೆಗಳನ್ನು,
ನೀಡಲಿ ಎಂಬ ಕಾರಣಕ್ಕೆ ರಂಗಸಮಾಜವನ್ನು ರೂಪಿಸಲಾಗುತ್ತದೆ. 2013ರಲ್ಲಿ ನೇಮಕವಾದ ರಂಗಾಯಣದ
ಸದಸ್ಯನಾದ ನನಗೆ ಈ ನಿಟ್ಟಿನಲ್ಲಿ ತೀವ್ರ ನಿರಾಸೆಯಾಗಿದೆ. ರಂಗ ಸಮಾಜದ ಅಸ್ತಿತ್ವವೇ ಅಪ್ರಸ್ತುತ ಎಂಬ
ರೀತಿಯಲ್ಲಿ ಸರಕಾರವು - ವಿಶೇಷವಾಗಿ - ಕನ್ನಡ ಸಂಸ್ಕೃತಿ ಇಲಾಖೆಯ
ಸಚಿವರು ಹಾಗೂ ರಂಗ ಸಮಾಜದ ಅಧ್ಯಕ್ಷರೂ ಆದ ಶ್ರೀಮತಿ
ಉಮಾಶ್ರೀಯವರು ತಿಳಿದಂತೆ ಕಾಣುತ್ತದೆ. ಈ
ಭಾವನೆ ಕಳೆದ ಒಂದುವರೆ ವರ್ಷಗಳಲ್ಲಿ ಮತ್ತೂ ಸ್ಪಷ್ಟವಾಗಿ ಮೂಡುತ್ತಿವೆ.
ಶಿವಮೊಗ್ಗ, ಗುಲ್ಬರ್ಗ ರಂಗಾಯಣಗಳು
ನಿರ್ದೇಶಕರುಗಳಿಲ್ಲದೆ ಈಗ ಒಂದು ವರ್ಷಕ್ಕೂ ಮೀರಿದೆ. ಅಲ್ಲಿ ಹಂಗಾಮಿ ನಿರ್ದೇಶಕರು, ಉಪನಿರ್ದೇಶಕರು
ರಂಗಾಯಣದ ಚಟುವಟಿಕೆಗಳನ್ನು ಉಳಿಸಿಕೊಂಡು ಬಂದಿದ್ದಾರೆ ಎಂಬುದು ಸಮರ್ಥ ವಾದವಾಗುವುದಿಲ್ಲ. ಇದು ಸರಿಯಾದ
ನಿಲುವು ಅನ್ನುವುದಾದರೆ ನಿರ್ದೇಶಕರು ಎಂದು ನೇಮಿಸಬೇಕಾದರೂ ಯಾಕೆ? ರಂಗಾಯಣಗಳಿಗೆ ನಿರ್ದೇಶಕರುಗಳನ್ನು ನೇಮಿಸುವುದರ
ಹಿಂದೆ ಇರುವ ಉದ್ದೇಶ ನನಗೆ ತಿಳಿದಂತೆ ಅವರುಗಳು ತಮ್ಮ ರಂಗಭೂಮಿ, ನಾಟಕ, ನಟನೆ, ನಿರ್ದೇಶನ ಇವುಗಳ
ದಶಕಗಳ ಅನುಭವದ ಹಿನ್ನೆಲೆಯಲ್ಲಿ , ತಮ್ಮ ಕಲ್ಪನೆ, ಕ್ರಿಯಾಶೀಲತೆಗಳಿಂದ ರಂಗಕಲೆಗೆ ಹೊಸ ಆಯಾಮಗಳು
ನೀಡಲಿ ಎಂಬ ಆಸೆಯಿಂದ, ನೀಡುತ್ತಾರೆ ಎಂಬ ನಂಬಿಕೆಯಿಂದ. ಕಾರಂತರು, ಬಸವಲಿಂಗಯ್ಯ, ಪ್ರಸನ್ನ, ಜಂಬೆ,
ಜನಾರ್ದನ ಇಂಥವರು ತಮ್ಮ ಕ್ರಿಯಾಶೀಲತೆಗಳಿಂದ ಕರ್ನಾಟಕವಷ್ಟೇ ಅಲ್ಲ ಇಡೀ ದೇಶ ಹೆಮ್ಮೆ ಪಡುವಂತೆ ಮೇಲ್ಪಂಕ್ತಿ
ಹಾಕಿ ಕೊಟ್ಟಿದ್ದಾರೆ.
ಈಗ ರಂಗಾಯಣಗಳು ಇಂಥ ನಾಯಕರುಗಳು
ಇಲ್ಲದೆ ಅನಾಥವಾಗಿವೆ. ಮೈಸೂರು ರಂಗಾಯಣದ ನಿರ್ದೇಶಕರ ಅವಧಿ ಮುಗಿದು ಎಂಟು ತಿಂಗಳಾಯಿತು. ಅಲ್ಲಿ ಕೂಡ
ಚಟುವಟಿಕಗಳು ಯಾಂತ್ರಿಕತೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಹೊರತುಪಡಿಸಿದರೆ, ಜೀವಂತಿಕೆಯನ್ನು ಕಳೆದುಕೊಂಡಿದೆ.
ಅಲ್ಲಿಯ ಕಲಾವಿದರುಗಳನ್ನು ಬೇಟಿಯಾದಾಗಲೆಲ್ಲ ಅವರುಗಳು ಕೇಳುವ ಒಂದೇ ಪ್ರಶ್ನೆ, “ನಮಗೆ ನಿರ್ದೇಶಕರನ್ನು ಯಾವಾಗ
ನೀಡುತ್ತೀರಿ” ಎಂದು. ನಮ್ಮ ರಂಗಸಮಾಜದ ಸದಸ್ಯರುಗಳು ಯಾವುದೇ ಕಾರಣಕ್ಕೆ ಶಿವಮೊಗ್ಗ, ಗುಲ್ಬರ್ಗ,
ಮೈಸೂರುಗಳಿಗೆ ಹೋದರೂ, ಪತ್ರಕರ್ತರು, ರಂಗಭೂಮಿಯ ಅಭಿಮಾನಿಗಳು, ಇವರುಗಳಷ್ಟೇ ಅಲ್ಲ ಜನಸಾಮಾನ್ಯರೂ ಕೇಳುವ ಒಂದೇ ಪ್ರಶ್ನೆ; ಹೇಳುವ ಒಂದೇ ಮಾತು: “ಏನು ಮಾಡ್ತಾ ಇದೀರಿ ನೀವು?
ರಂಗಸಮಾಜದ ಸದಸ್ಯರು? ನಮ್ಮ ರಂಗಾಯಣಕ್ಕೆ ಯಾಕೆ ನಿರ್ದೇಶಕರನ್ನು ಇನ್ನೂ ನೇಮಕ ಮಾಡಿಲ್ಲ?” ಎಂದು ಕಟುವಾಗಿ, ತೀಕ್ಷ್ಣವಾಗಿ
ದೂಷಿಸುವ ರೀತಿಯಲ್ಲಿ ಕೇಳುತ್ತಿದ್ದಾರೆ. ನಾವುಗಳು ಎಷ್ಟು ಗೊಂದಲ, ಎಷ್ಟು ಹಿಂಸೆ ಅನುಭವಿಸುತ್ತಿರಬಹುದೆಂದು
ತಾವು ಊಹಿಸಬಹುದು. ಇವುಗಳೆಲ್ಲವನ್ನು ಸಹಿಸುತ್ತಾ
ನಾವುಗಳು ಇಷ್ಟು ದಿನ ಕಾದಿದ್ದೇವೆ.
ಸಚಿವೆ ಉಮಾಶ್ರೀಯವರು ಜನವರಿ
12ರಂದು ರಂಗಸಮಾಜದ ಸಭೆಯನ್ನು ಏರ್ಪಡಿಸಿದ್ದರು. ಕಾರಣಾಂತರಗಳಿಂದ ಅವರು ಆ ಸಭೆಗೆ ಬರಲಾಗಲಿಲ್ಲ. ಆದರೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಉಮಾಶಂಕರ್
ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಆ ಸಭೆಯಲ್ಲಿ
ರಂಗಸಮಾಜದ ಸದಸ್ಯರುಗಳು ತಮ್ಮ ದೃಷ್ಟಿಯಲ್ಲಿ ಸೂಕ್ತ ಎನಿಸಿದವರ ಹೆಸರುಗಳನ್ನು ಮೂರೂ ರಂಗಾಯಣಗಳಿಗೆ
ಸೂಚಿಸಿದರು. ಪ್ರತಿಯಬ್ಬರೂ ಕನಿಷ್ಟ ಮೂರು ಹೆಸರುಗಳನ್ನು
ನಮೂದಿಸಿದ್ದರು. ಅದೇ ಸಭೆಯಲ್ಲಿ ಒಂದು ಹೊಸ ರೀತಿಯ ಆಲೋಚನೆಯೂ ಹೊಮ್ಮಿತು. ಹೀಗೆ ನಾವು ಸೂಚಿಸಿದವರನ್ನು ಆಹ್ವಾನಿಸಿ ಒಂದು ರೀತಿಯ ಅನೌಪಚಾರಿತ
ಮಾತುಕತೆ ನಡೆಸಿ ಅವರ ಆಸ್ಥೆ, ರಂಗಭೂಮಿ ಕುರಿತಾದ ಕನಸು, ಬದ್ದತೆಗಳ ಬಗ್ಗೆ ತಿಳಿದು, ನಂತರ ರಂಗ ಸಮಾಜದ
ಸಭೆಯಲ್ಲಿ ಅಂತಿಮವಾಗಿ ಹೆಸರುಗಳನ್ನು ಸೂಚಿಸಿ, ನೇಮಕ ಪ್ರಕ್ರಿಯೆ ಆರಂಭಿಸಬಹುದು ಎಂದು ತೀರ್ಮಾನಕ್ಕೆ
ಬರಲಾಯಿತು. ಇವೆಲ್ಲವೂ ಅಧಿಕೃತವಾಗಿ ಸಭೆಯಲ್ಲಿಯೇ
ನಡೆದದ್ದು.
ಅಧ್ಯಕ್ಷರು ಈ ಸಭೆಗೆ ಬರಲಾಗದಿದ್ದರಿಂದ
ಮಾರನೆಯ ದಿನ ಅಂದರೆ 13-01-2017 ರಂದು ಮೈಸೂರಿನಲ್ಲಿ ಸಭೆ ಸೇರುವುದೆಂದು ತೀರ್ಮಾನವಾಯಿತು. ಈ ಕಾರಣಕ್ಕಾಗಿಯೇ ಸದಸ್ಯರುಗಳು ಮೈಸೂರಿಗೆ ತೆರೆಳಿದೆವು.
ಶ್ರೀಮತಿ ಉಮಾಶ್ರೀಯವರು ಆ ಸಭೆಗೆ ಮದ್ಯಾಹ್ನ 3 ಗಂಟೆಗೆ ಆಗಮಿಸಿದರು. ಮಿಕ್ಕೆಲ್ಲಾ ಪೀಠಿಕಾರೂಪದ ಚರ್ಚೆಗಳು
ನಡೆದ ಮೇಲೆ, ನಿರ್ದೇಶಕರುಗಳ ನೇಮಕದ ವಿಷಯ ಬಂದಕೂಡಲೆ “ನನ್ನದೇ ಹೆಸರುಗಳ ಪಟ್ಟಿಯಿದೆ.
ಈಗ ನಾನು ‘ಬಹುರೂಪಿ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ
ಪ್ರೇಶಪ್ ಆಗಬೇಕು” ಎಂದು ಹೇಳಿ ನಡೆದೇ ಬಿಟ್ಟರು.
ದಢಾರನೇ ಹೀಗೆ ಅವರು ನಿರ್ಗಮಿಸಿದುದು
ಸದಸ್ಯರುಗಳಿಗೆ ಒಂದು ರೀತಿ ದಿಬ್ರಮೆಯೂ ಮತ್ತೊಂದು ಮಟ್ಟದಲ್ಲಿ ಅವಮಾನವೂ ಆಯಿತು. ಹಿಂದಿನ ದಿನದ ಸಭೆಯಲ್ಲಿ
ಏನು ಜರುಗಿತು ಎಂದು ತಿಳಿಯುವ ಕುತೂಹಲವನ್ನು ಸಹ ಅವರು ತೋರಲಿಲ್ಲ. ಹಿಂದಿನ ದಿನದ ನಮ್ಮ ತೀರ್ಮಾನಗಳ ಕುರಿತು ಚರ್ಚಿಸುವುದಿರಲಿ,
ವಿಷಯವನ್ನು ತಿಳಿಯುವ ಸಹನೆಯೂ ಸಚಿವರಿಗೆ ಇದ್ದಂತೆ ಕಾಣಲಿಲ್ಲ. ರಂಗಸಮಾಜದ ಸದಸ್ಯರುಗಳಿಗೆ ಇದಕ್ಕಿಂತ
ಹೆಚ್ಚಿನ ಇನ್ಸ್ಸಲ್ಟ್ ಸಾಧ್ಯವಿರಲಿಲ್ಲ ಎಂದು ವಿಷಾದದಿಂದ ಹೇಳಬಯಸುತ್ತೇನೆ. ಅಂದಿನಿಂದ ಅಂದರೆ 13-01-2017
ರಿಂದ ಇಂದಿನವರೆಗೆ ಮತ್ತೆ ಈ ವಿಷಯದ ಬಗ್ಗೆ ಸುದ್ದಿಯೇ ಇಲ್ಲದ ಹಾಗೆ ಎಲ್ಲವೂ ಸ್ತಬ್ಧವಾಗಿಬಿಟ್ಟಿದೆ.
ಈ ಸಂದರ್ಭದಲ್ಲಿ ನಾನು ಹೇಳಲೇ
ಬೇಕಾದ ಒಂದು ವಿಷಯವಿದೆ ರಂಗಸಮಾಜದ ಸದಸ್ಯನನ್ನಾಗಿ ನನ್ನನ್ನು ನೇಮಿಸಿದಾಗ ನನ್ನ ಮನಸ್ಸಿನಲ್ಲಿ ಶ್ರೀಮತಿ
ಉಮಾಶ್ರೀಯವರು ಸ್ವತ: ಅದ್ಬುತ ಕಲಾವಿದರು, ಕಲಿಕೆ, ಕಲಾವಿದರಿಗೆ, ಇಡೀ ರಂಗಭೂಮಿಗೆ ಹೆಚ್ಚಿನ ಪ್ರೋತ್ಸಾಹ
ಮತ್ತು ಸ್ಪೂರ್ತಿ ದೊರಕುತ್ತದೆ ಮತ್ತು ಇಂಥ ಅವಕಾಶವನ್ನು ಬಳಸಿಕೊಂಡು ನಾನೂ ಕೂಡ ರಂಗಸಮಾಜದ ಸದಸ್ಯನಾಗಿ
ನನ್ನ ಕೈಲಾಗದ್ದನ್ನು ಮಾಡಬಹುದು ಎಂಬ ವಿಶ್ವಾಸದಲ್ಲಿ ಈ ಜವಾಬ್ದಾರಿಯನ್ನು ಒಪ್ಪಿಕೊಂಡೆ. ಈ ಮಾತನ್ನು ನನ್ನ ಇತರ ಸದಸ್ಯ ಮಿತ್ರರೂ ಒಪ್ಪುತ್ತಾರೆ ಎಂಬ
ನಂಬಿಕೆ ನನ್ನದು. ಈ ಮಾತನ್ನು ನಾನು ರಂಗಸಮಾಜದ ಸಭೆಗಳಲ್ಲಿಯೂ
ಹೇಳಿದ್ದೇನೆ. ಆದರೆ ಈಗ ಅತ್ಯಂತ ನಿರಾಶನಾಗಿದ್ದೇನೆ ಎಂದು ಮಾತ್ರ ನಾನು ಹೇಳಬಲ್ಲೆ. ರಂಗಸಮಾಜದ ಸದಸ್ಯನಾದ
ಮೇಲೆ ನನಗೆ ಒಂದು ಉತ್ತರದಾಯತ್ವದ ಜವಾಬ್ದಾರಿ ಇರುತ್ತದೆ.
ಸರಕಾರಕ್ಕೆ, ಕಲಾಪ್ರಪಂಚಕ್ಕೆ ಒಟ್ಟು ಸಮಾಜಕ್ಕೆ ಹೀಗೆ.. ಈ ಜವಾಬ್ದಾರಿಯನ್ನು ಸಮರ್ಥವಾಗಿ
ನಾನು ನಿರ್ವಹಿಸುವುದಕ್ಕೆ ಅವಕಾಶಗಳೇ ಇಲ್ಲದಿದ್ದರೆ ಹೇಗೆ ಎಂದು ನನಗೆ ತೀರ ಬೇಸರವಾಗಿದೆ.
ಇದಿಷ್ಟನ್ನು ತಮ್ಮ ಗಮನಕ್ಕೆ
ತರುವುದಕ್ಕೆ ಮೊದಲು ನಾನು ನಾವೆಲ್ಲರೂ ಸಾಕಷ್ಟು ಸಹನೆಯಿಂದ
ಕಾದಿದ್ದೇವೆ. ಆದರೆ ದಿನನಿತ್ಯದ ರಂಗಪ್ರಪಂಚದ ಟೀಕೆಗಳು,
ದೂಷಣೆಗಳು, ಕಟುಮಾತುಗಳನ್ನೂ ಸಹಿಸಿ ನನಗೂ ನಮಗೂ ಸಾಕಾಗಿದೆ. ಏನೂ ಕಾರಣವಿಲ್ಲದೆ ನಾವು ದೂಷಣೆಗೆ ಒಳಗಾಗುವುದು ನನಗೆ ನಮಗೆ
ಕಷ್ಟವಾಗುತ್ತಿದೆ ಎಂದೇ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. (ತರುತ್ತಿದ್ದೇವೆ).
ಈ ಎಲ್ಲಾ ವಿಷಯಗಳ ಬಗ್ಗೆ ತಾವು
ಸೂಕ್ತ ಕ್ರಮ ಕೈಗೊಂಡು ರಂಗಾಯಣಗಳನ್ನು ಮತ್ತೆ ಪೂರ್ಣ ಅರ್ಥದಲ್ಲಿ ಜೀವಂತಗೊಳಿಸಬೇಕೆಂದು ನನ್ನ ಎಲ್ಲಾ
ರಂಗಸಮಾಜದ ಸದಸ್ಯರ ಪರವಾಗಿ ವಿನಂತಿಸುತ್ತೇನೆ. ಈ ಪತ್ರದಲ್ಲಿ ಅಡಕವಾಗಿರುವ ಅಷ್ಟೂ ವಿಷಯಗಳನ್ನು ನಾನು
ನನ್ನ ಸಹ ಸದಸ್ಯರೊಂದಿಗೆ ಚರ್ಚಿಸಿದ್ದೇನೆ. ಅವರ ಒಪ್ಪಿಗೆಯನ್ನೂ
ಪಡೆದಿದ್ದೇನೆ. ಒಂದು ಅರ್ಥದಲ್ಲಿ ಇದು ಸಾಮೂಹಿಕವಾಗಿ
ಬರೆದ ಪತ್ರ. ಆದರೆ ಈ ಪತ್ರದ ಒಕ್ಕಣೆಯ ಸಂಪೂರ್ಣ ಜವಾಬ್ದಾರಿ
ನನ್ನದು ಮಾತ್ರ.
ತಮ್ಮ ವಿಶ್ವಾಸಿ ಜಿ.ಕೆ ಗೋವಿಂದರಾವ್,
ಜಿಕೆಜಿ ರವರ ಪತ್ರ ಹುಟ್ಟಿಸಿದ ಸಂಚಲನದಿಂದಾಗಿ ಯಾವಾಗ ಮುಖ್ಯಮಂತ್ರಿಗಳಿಂದಲೇ
ಮೌಖಿಕವಾಗಿ ಆದೇಶ ಬಂತೋ ಆಗ ಉಮಾಶ್ರೀಯವರು ಎಚ್ಚರಾದರು. ಇನ್ನೂ ಸುಮ್ಮನಿದ್ದರೆ ಸಮಸ್ಯೆ ತೀವ್ರವಾಗುತ್ತದೆ ಎಂದು
ಅರಿತರು. ರಂಗಾಯಣದ ಸದಸ್ಯರುಗಳ ಸಾತ್ವಿಕ ಆಕ್ರೋಶ ಸಚಿವೆಗೆ ನುಂಗಲೂ ಆಗದ ಉಗುಳದೂ ಆಗದ ಬಿಸಿ ತುಪ್ಪವಾಯಿತು.
ರಂಗಸಮಾಜದ ಸಭೆ ಕರೆಯುವುದು ಸಂಸ್ಕೃತಿ ಸಚಿವಾಲಯಕ್ಕೆ ಅನಿವಾರ್ಯವಾಯಿತು. ಹೀಗಾಗಿ ಮೇ 25 ರಂದು ಸಭೆಗೆ
ಮುಹೂರ್ತ ಫಿಕ್ಸ್ ಆಗಿ ರಂಗಸಮಾಜದ ಎಲ್ಲಾ ಸದಸ್ಯರಿಗೂ ಅಧೀಕೃತವಾಗಿ ಸಭೆಗೆ ಆಹ್ವಾನಿಸುವ ಪತ್ರ ರವಾನೆಯಾಯಿತು.
ಆದರೆ.. ಸಭೆಯ ನಡಾವಳಿಯಲ್ಲಿ ಯಾವುದು ಪ್ರಮುಖವಾಗಿರಬೇಕೋ ಅದೇ ಇರಲಿಲ್ಲ. ಚರ್ಚಿಸಬೇಕಾದ ಅಜೆಂಡಾಗಳಲ್ಲಿ
ರಂಗಾಯಣದ ನಿರ್ದೇಶಕರ ಆಯ್ಕೆಯ ಬಗ್ಗೆ ಪ್ರಸ್ತಾಪವೇ ಇರಲಿಲ್ಲಾ. ಗಾಬರಿಗೊಂಡ ರಂಗಸಮಾಜದ ಸದಸ್ಯರು ಜಂಟಿ
ನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿಯವರಿಗೆ ಪೋನ್ ಮಾಡಿ “ರಂಗಾಯಣದ ನಿರ್ದೇಶಕರ ಆಯ್ಕೆಯ
ಕುರಿತು ಚರ್ಚೆ ಇಲ್ಲವೆಂದರೆ ನಾವು ಸಭೆಗೆ ಬರುವುದಿಲ್ಲ” ಎಂದು ಹೇಳಿದರು. ಹಾಗೇನಿಲ್ಲಾ..
ಅಧ್ಯಕ್ಷರ ಅನುಮತಿಯ ಮೇರೆಗೆ ಇತರೇ ಚರ್ಚೆ ವಿಷಯಗಳಲ್ಲಿ ನಿರ್ದೇಶಕರ ಆಯ್ಕೆಯ ವಿಚಾರಗಳನ್ನೂ ಚರ್ಚಿಸಬಹುದೆಂದು
ಜಂಟಿ ನಿರ್ದೇಶಕರು ಅಡ್ಡಗೊಡೆಯ ಮೇಲೆ ದೀಪವಿಟ್ಟು ಸದಸ್ಯರನ್ನು ಸಾಂತ್ವನಗೊಳಿಸಿದರು.
ಯಾವುದನ್ನು ಪ್ರಮುಖವಾಗಿ ಚರ್ಚಿಸಬೇಕಾಗಿತ್ತೋ
ಅದನ್ನು ಅಜೆಂಡಾದಲ್ಲೇ ಸೇರಿಸಿದೇ ಇತರೇ ಚರ್ಚೆಗಳಲ್ಲಿ ಸೇರಿಸಿದ್ದೇ ಈಗ ಅನುಮಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಗಳು ಹೇಳಿದರೆಂದು ಕಾಟಾಚಾರಕ್ಕೆ ಸಭೆ ಕರೆಯಲಾಗುತ್ತಿದೆಯಾ ಎನ್ನುವ ಸಂದೇಹ ಸದಸ್ಯರುಗಳನ್ನು
ಕಾಡುತ್ತಿದೆ. ಆದರೆ ಈ ಸಲ ರಂಗಾಯಣದ ಸದಸ್ಯರುಗಳ ಸಹನೆ ಮಿತಿ ಮೀರಿದೆ. ಅವರಿಗೆ ಇನ್ನುಳಿದದ್ದು ಎರಡೂ
ಚಿಲ್ಲರೆ ತಿಂಗಳ ಅಧಿಕಾರಾವಧಿ ಮಾತ್ರ. ಆದ್ದರಿಂದ ಸದಸ್ಯರುಗಳು ಕಳೆದುಕೊಳ್ಳುವುದೇನೂ ಇಲ್ಲಾ. ಆದ್ದರಿಂದ
ಅಂತಿಮ ಯುದ್ದಕ್ಕೆ ಸಿದ್ದರಾಗಿಯೇ ಸಭೆಗೆ ಹೋಗುತ್ತಿದ್ದಾರೆ. ರಂಗಾಯಣದ ಒಳಿತು ಹಾಗೂ ಕೆಡಕನ್ನು ಪರಿಷ್ಕರಿಸಿ
ನಿರ್ಣಯಿಸಲೆಂದೇ ರಂಗಸಮಾಜ ಇರುವುದು. ಅದು ಸಚಿವರ ಕೆಲಸವಲ್ಲಾ. ರಂಗಸಮಾಜದ ನಿರ್ಣಯವನ್ನು ಜಾರಿಗೆ
ತರುವುದೊಂದೇ ರಂಗಸಮಾಜದ ಅಧ್ಯಕ್ಷರಾದವರ ಕರ್ತವ್ಯ. ಆದರೆ ಸದಸ್ಯರುಗಳ ಒಕ್ಕೂರಲಿನ ತೀರ್ಮಾನವನ್ನೇ
ನಿರ್ಲಕ್ಷಿಸಿ ತನಗಿಷ್ಟವಾದದ್ದನ್ನು ಮಾತ್ರ ಮಾಡುತ್ತೇನೆಂದು ಸಚಿವರು ಪ್ರಯತ್ನಿಸಿದರೆ ಅದು ರಂಗಸಮಾಜದ
ಅಗತ್ಯವನ್ನೇ ಪ್ರಶ್ನಿಸುವಂತಾ ಸರ್ವಾಧಿಕಾರಿ ಮನೋಭಾವನೆಯಾಗಿದೆ. ಇದಕ್ಕೆ ರಂಗಾಯಣದ ಬೈಲಾ ಒಪ್ಪುವುದಲ್ಲಾ.
ಬಹುಸಂಖ್ಯಾತ ಸದಸ್ಯರ ನಿರ್ಣಯಕ್ಕೆ ಬದ್ದವಾಗಿರಬೇಕಾದದ್ದು ಅಧ್ಯಕ್ಷರ ಕರ್ತವ್ಯವೂ ಆಗಿದೆ. ಪ್ರಜಾಪ್ರಭುತ್ವ
ವ್ಯವಸ್ಥೆಯ ಫಲಾನುಭವಿಯಾದ ಮಾನ್ಯ ಉಮಾಶ್ರೀಯವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪಿಕೊಳ್ಳಲೇಬೇಕು.
ಅಧಿಕಾರ ಇದೆ ಎಂದು ತಮಗಿಷ್ಟ ಬಂದಂತೆ ನಡೆದುದೇ ಆದರೆ ಅದು ಡಿಕ್ಟೇಟರ್‌ಶಿಪ್ ಆಗುತ್ತದೆ. ಹಾಗೂ ಅಂತಹ
ಮನೋಭಾವನೆ ಡೆಮಾಕ್ರಸಿ ವ್ಯವಸ್ಥೆಗೆ ಮಾರಕವಾಗಿದೆ.
ಈಗ ರಂಗಸಮಾಜದ ಸದಸ್ಯರುಗಳು
ಇರುವ ಕಾಟಾಚಾರದ ಆಡಳಿತಾತ್ಮಕ ಅಜೆಂಡಾಗಳನ್ನೆಲ್ಲಾ ಬದಿಗಿಟ್ಟು ಮೊದಲು ರಂಗಾಯಣದ ನಿರ್ದೇಶಕರ ಆಯ್ಕೆಯ
ಕುರಿತೇ ಚರ್ಚೆ ಮಾಡಲು ಅಧ್ಯಕ್ಷರನ್ನು ಒತ್ತಾಯಿಸಬೇಕು. ಏನಾದರಾಗಲಿ ಈ ಸಭೆಯಲ್ಲಿ ಮೂರೂ ರಂಗಾಯಣಗಳಿಗೆ
ಅಧ್ಯಕ್ಷರುಗಳ ಆಯ್ಕೆ ಆಗಲೇಬೇಕು. ಹಾಗೇನಾದರೂ ಆಗದೇ ಇದ್ದಲ್ಲಿ, ಸಚಿವರು ಮತ್ತೆ ಈ ವಿಷಯವನ್ನು ಮುಂದೂಡಿದಲ್ಲಿ
ರಂಗಾಯಣದ ಎಲ್ಲಾ ಸದಸ್ಯರುಗಳು ತಕ್ಷಣ ಸಾಮೂಹಿಕವಾಗಿ ರಾಜೀನಾಮೆ ಕೊಟ್ಟು ಹೊರಬಂದು ಮಾಧ್ಯಮಗಳ ಮುಂದೆ
ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು. ಈಗಾಗಲೇ ಬೆಂಗಳೂರಿನ ರಂಗ ಗೆಳೆಯರು ಸಚಿವೆಗೆ ಮನವಿ ಪತ್ರವೊಂದನ್ನು
ಕೊಟ್ಟಿದ್ದು ಮೆ 25 ರ ಸಭೆಯಲ್ಲಿ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆ ಮಾಡದೇ ಇದ್ದಲ್ಲಿ ಹೋರಾಟದ ಮಾರ್ಗ
ತುಳಿಯುವುದಾಗಿ ಹೇಳಿದ್ದಾರೆ. ರಂಗಸಮಾಜದ ಸದಸ್ಯರುಗಳು ರಾಜೀನಾಮೆ ಕೊಟ್ಟು ಹೊರಗೆ ಬಂದು ರಂಗ ಗೆಳೆಯರು
ಹಮ್ಮಿಕೊಳ್ಳುವ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸರಕಾರದ ಮೇಲೆ ಒತ್ತಡವನ್ನು ಸೃಷ್ಟಿಸಬಹುದಾಗಿದೆ.
ಇಷ್ಟು ದಿನಗಳ ಕಾಲ ಕಾಲಹರಣ
ಮಾಡಿದ್ದಾಯಿತು. ಈಗಲೂ ಸದಸ್ಯರುಗಳು ಸುಮ್ಮನಿದ್ದರೆ ರಂಗಭೂಮಿ ಇವರನ್ನು ಎಂದೂ ಕ್ಷಮಿಸದು. ರಂಗಾಯಣದ
ಹಿತರಕ್ಷಣೆ ಮಾಡಲೆಂದು ಆಯ್ಕೆಯಾದ ಇವರು ವ್ಯವಸ್ಥೆಯ ನಿಧಾನದ್ರೋಹಕ್ಕೆ ಪೂರಕವಾಗಿ ಸುಮ್ಮನಿರುವುದೂ
ಸಹ ಕರ್ತವ್ಯಲೋಪವೇ ಆಗಿದೆ. ಅಸಮರ್ಥರನ್ನು ಕಲಬುರಗಿ ಹಾಗೂ ಶಿವಮೊಗ್ಗ ರಂಗಾಯಣಕ್ಕೆ ಈಗಾಗಲೇ ಆಯ್ಕೆ
ಮಾಡಿ ಪಶ್ಚಾತ್ತಾಪವನ್ನೂ ಪಟ್ಟಿದ್ದಾರೆ. ತಮ್ಮ ನಾಲ್ಕು ವರ್ಷದ ಅಧಿಕಾರಾವಧಿಯ ಕೊನೆಯ ಹಂತದಲ್ಲಿರುವ
ಎಲ್ಲಾ ಸದಸ್ಯರುಗಳು ಈಗಲಾದರೂ ನಿದ್ದೆಯಿಂದೆದ್ದು ಜಾಗೃತಗೊಂಡು ತಮ್ಮ ಹಕ್ಕು ಮತ್ತು ಕರ್ತವ್ಯವನ್ನು
ತಿವ್ರಗೊಳಿಸಬೇಕಿದೆ. ಏನಾದರಾಗಲಿ ಸಚಿವೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸಿಯಾದರೂ ರಂಗಾಯಣವನ್ನು
ಹೊಸ ಆಯಾಮದತ್ತ ತೆಗೆದುಕೊಂಡು ಹೋಗುವ ದೃಷ್ಟಿಕೋನ ಹಾಗೂ ರಂಗಬದ್ಧತೆ ಇರುವ ಶುದ್ದಹಸ್ತದ ರಂಗಕರ್ಮಿಗಳನ್ನು
ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕಿದೆ. ಇಲ್ಲವಾದರೆ.. ಮತ್ತೆ ಈ ಹಿಂದೆ ಮಾಡಿದ ತಪ್ಪನ್ನೇ
ಮತ್ತೆ ಮಾಡಿದರೆ.. ಕೊನೆಯವರೆಗೂ ರಂಗಕರ್ಮಿಗಳ ಮೂದಲಿಕೆಗೆ ಹಾಲಿ ರಂಗಸಮಾಜದ ಸದಸ್ಯರುಗಳು ಒಳಗಾಗಬೇಕಾಗುತ್ತದೆ
ಹಾಗೂ ಪಶ್ಚಾತ್ತಾಪದಿಂದ ನರಳಬೇಕಾಗುತ್ತದೆ.
ಇದಕ್ಕಿಂತಲೂ ಹೆಚ್ಚಾಗಿ ಕಲಾಲೋಕದಿಂದಲೇ
ಬಂದ ಉಮಾಶ್ರೀಯವರೇ ಹಿಂದೆ ಆಗಿದ್ದನ್ನೆಲ್ಲಾ ಮರೆತು ಈಗಲಾದರೂ ಮುತುವರ್ಜಿ ವಹಿಸಿ ರಂಗಭೂಮಿಯ ಹಿತಾಸಕ್ತಿಗಾಗಿ
ಹಾಗೂ ರಂಗಾಯಣದ ಹಿತಾಸಕ್ತಿಯನ್ನು ಎತ್ತಿ ಹಿಡಿಯಲಾದರೂ ಮೇ 25 ರಂದು ನಡೆಯುವ ರಂಗಸಮಾಜದ ಸಭೆಯಲ್ಲಿ
ಸದಸ್ಯರುಗಳ ಜೊತೆಗೆ ಸಂಘರ್ಷಕ್ಕಿಳಿಯದೇ ಬಹುಸಂಖ್ಯಾತರ ನಿರ್ಣಯವನ್ನು ಗೌರವಿಸಿ ಮೂರೂ ರಂಗಸಮಾಜಗಳಿಗೆ
ಯೋಗ್ಯರಾದ ಕಳಂಕರಹಿತ ನಿರ್ದೇಶಕರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದರೆ ಅವರ ಗೌರವ ಹೆಚ್ಚುತ್ತದೆ.
ಹಾಗೂ ರಂಗಾಯಣಗಳ ರಂಗ ಚಟುವಟಿಕೆಗಳಿಗೆ ಅಗತ್ಯ ಚಾಲನೆಯೂ ದೊರಕಿದಂತಾಗುತ್ತದೆ. ಏನೇ ಆಗಲಿ ಈ ಸಂದರ್ಭದಲ್ಲಿ
ಉಮಾಶ್ರೀಯವರು ರಾಜಕಾರಣಿಯಾಗಿ ಯೋಚಿಸದೇ ಕಲಾವಿದೆಯಾಗಿ ಆಲೋಚಿಸಿ ತಮ್ಮ ರಂಗಬದ್ಧತೆಯನ್ನು ತೋರಿಸಲೇಬೇಕಿದೆ.
ಸರಕಾರಿ ಸಂಸ್ಥೆಗಳಾಗಿರುವ ರಂಗಾಯಣಗಳು ಹೊಸ ಆಯಾಮಗಳನ್ನು ರೂಢಿಸಿಕೊಂಡು ದೇಶಕ್ಕೆ ಮಾದರಿಯಾಗಬೇಕಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ