ಸೋಮವಾರ, ಮೇ 29, 2017

ಬಂಡವಾಳಿಗರ ಬೆತ್ತಲಾಗಿಸುವ “ಚಿಲ್ಲರೆ ಸಮರಮ್” :





 
ಸರಕು ಸಂಸ್ಕೃತಿಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದುಡಿಯುವ ವರ್ಗದವರ ಬದುಕು ಚಿದ್ರಗೊಳ್ಳುತ್ತಿದೆ. ದೊಡ್ಡ ಮೌಲ್ಯವಿಲ್ಲದೆ ಬರೀ ಸದ್ದು ಮಾಡುವ ಚಿಲ್ಲರೆಗಳ ಅಪಮೌಲ್ಯೀಕರಣ ಮಾಡಿ ನೋಟಿನ ಸಾಮ್ರಾಜ್ಯ ಸ್ಥಾಪಿಸಲು ಆಳುವ ವರ್ಗಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಬಹುಸಂಖ್ಯಾತ ದುಡಿಯುವ ಜನರ ಹಾಡು ಹಸೆ ಕಲೆ ಸಂಸ್ಕೃತಿಯನ್ನು ಒಡೆದು ಹಾಕಿ ಕಾರ್ಪೋರೇಟೀಕೃತ ಯಾಂತ್ರಿಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಬಂಡವಾಳಶಾಹಿಗಳ ಹುನ್ನಾರ ನಡೆಯುತ್ತಲೇ ಇರುತ್ತದೆ. ಹೀಗೆ... ಬಡವರ ಬದುಕು ಬವಣೆ ಹಾಗೂ ಬಂಡವಾಳಿಗರ ತಂತ್ರ-ಕುತಂತ್ರಗಳನ್ನು ಅನಾವರಣಗೊಳಿಸುವಂತಹ ಮಲಯಾಳಿ ನಾಟಕ ಚಿಲ್ಲರೆ ಸಮರಮ್.

ರಂಗನಿರಂತರ ಸಾಂಸ್ಕೃತಿಕ ಸಂಘವು ಮೇ15 ರಿಂದ 20ರ ವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಆಯೋಜಿಸಿತ್ತು. ಈ  ನಾಟಕೋತ್ಸವದ ಭಾಗವಾಗಿ ಮೇ 16 ರಂದು ಅರುಣ್ ಲಾಲ್‌ರವರ ನಿರ್ದೇಶನದಲ್ಲಿ ಕೇರಳದ ಲಿಟ್ಲ್ ಅರ್ಥ ಸ್ಕೂಲ್ ಆಫ್ ಥಿಯೇಟರಿನ ಕಲಾವಿದರಿಂದ ಚಿಲ್ಲರೆ ಸಮರಮ್ ನಾಟಕವು ಪ್ರದರ್ಶನಗೊಂಡು ನೋಡುಗರಲ್ಲಿ ಸೋಜಿಗವನ್ನು ಹುಟ್ಟಿಸಿತು. ಈ ನಾಟಕವನ್ನು ರಾಜೇಶ್‌ರವರು ರಚಿಸಿದ್ದು ಮಲೆಯಾಳಿ ಭಾಷೆಯಲ್ಲಿ ಪ್ರಸ್ತುತಗೊಂಡಿತು. 

ಬಂಡವಾಳಶಾಹಿ ಭಾರತದ ಸಮಕಾಲೀನ ಚಿತ್ರಣವನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡುವ ಈ ಚಿಲ್ಲರೆ ಸಮರಮ್ ನಾಟಕದ ಸಂಕ್ಷಿಪ್ತ ಸಾರ ಹೀಗಿದೆ. ದುಡಿಯುವ ಜನರು ಬುಡ್ಡೀ ದೀಪದ ಬೆಳಕಲ್ಲಿ ಹಾಡುಗಳನ್ನು ಹಾಡುತ್ತಾ, ಚಿಕ್ಕಪುಟ್ಟ ಚಿಲ್ಲರೆ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಬದುಕು ಸಾಗಿಸುತ್ತಿರುತ್ತಾರೆ. ನಗರಾಭಿವೃದ್ದಿ ಯೋಜನೆಯವರು ಬಂದು ಈ ಚಿಕ್ಕಪುಟ್ಟ ಪೆಟ್ಟಿ ಅಂಗಡಿಗಳನ್ನೆಲ್ಲಾ ತೆಗೆದು ಹಾಕಿ ಅಲ್ಲಿ ಬೃಹತ್ ವ್ಯಾಪಾರಿ ಮಾಲ್ ಕಟ್ಟಲು ಯೋಜನೆ ರೂಪಿಸುತ್ತಾರೆ. ಅವರ ಯೋಜನೆಗೆ ಈ ಚಿಲ್ಲರೆ ನಾಣ್ಯಗಳನ್ನು ಪ್ರಮುಖ ಅಡ್ಡಿಯೆಂದು ಭಾವಿಸುವ ಬಂಡವಾಳಿಗರು, ಬಡಜನರು ಹಾಗೂ ಚಿಲ್ಲರೆ ವ್ಯಾಪಾರಿಗಳೇ ಈ ನಾಣ್ಯಗಳ ವಹಿವಾಟಿಗೆ ಕಾರಣರೆಂದು ತಿಳಿದು ನಾಣ್ಯಗಳನ್ನು ಬ್ಯಾನ್ ಮಾಡಲು ಯೋಚಿಸುತ್ತಾರೆ. ಶ್ರಮಜೀವಿಗಳ ಹಾಡು ಹಾಗೂ ಬಳಸುವ ನಾಣ್ಯಗಳು ಅಭಿವೃದ್ದಿಗೆ ಮಾರಕವೆಂದು ತಿಳಿದು ಮೊದಲು 25 ಪೈಸೆಯನ್ನು ಬ್ಯಾನ್ ಮಾಡಿ ಆ ನಂತರ ಹಂತ ಹಂತವಾಗಿ ಎಲ್ಲಾ ನಾಣ್ಯಗಳನ್ನೂ ಅಪಮೌಲ್ಯ ಮಾಡಲು ಕಾರ್ಪೋರೇಶನ್ ಮೇಯರ್ ನಿರ್ಧರಿಸುತ್ತಾರೆ.

ದುಡಿಯುವ ಜನರ ಹಾಡು ಹಾಗೂ ಕುಣಿತಗಳನ್ನೂ ಕೂಡಾ ನಿಲ್ಲಿಸಿ ಅವರಿಗೆ ಹೊಸರೀತಿಯ ವಿಶೇಷ ಹಾಡು ಹಾಗೂ ನೃತ್ಯವನ್ನು ಹೇಳಿಕೊಡವ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಬಂಡವಾಳಿಗರ ತಾಳಕ್ಕೆ ತಕ್ಕಂತೆ ಹಾಡು ಕುಣಿತಗಳನ್ನು ಮಾಡುತ್ತಾ ಶ್ರಮಜೀವಿಗಳು ಯಂತ್ರಗಳಾಗಿ ಮಾರ್ಪಡುತ್ತಾರೆ. ಯಾವಾಗ ಸಾಂಪ್ರದಾಯಿಕ ಹಾಡುಗಳು ಮತ್ತೆ ಜನರಿಂದ ದ್ವನಿಸುತ್ತವೋ ಆಗ ಯಂತ್ರಗಳು ನಿಂತು ಹೋಗುತ್ತವೆ. ನಗರಾಭಿವೃದ್ದಿ ಪ್ರತಿನಿಧಿಗಳು ಯಂತ್ರಗಳನ್ನು ಪರೀಕ್ಷಿಸಿ ಜನತೆಯ ಹಾಡೇ ಯಂತ್ರಗಳು ನಿಲ್ಲಲು ಕಾರಣವೆಂದು ಕಂಡುಹಿಡಿದು ಅವುಗಳನ್ನು ನಾಶಮಾಡಬೇಕು ಇಲ್ಲವೇ ವಸ್ತುಸಂಗ್ರಹಾಲಯದಲ್ಲಿ  ಇಡಬೇಕು ಎಂದು ಆಡಳಿತ ನಿರ್ಧರಿಸುತ್ತದೆ. ಯಾಂತ್ರೀಕೃತ ಹಾಡುಗಳಲ್ಲಿ ಬಂಧಿಯಾದ ಕಾರ್ಮಿಕರು ಮತ್ತೆ ತಮ್ಮ ಸಾಂಪ್ರದಾಯಿಕ ಹಾಡು ಹಾಗೂ ಕುಣಿತಗಳಿಂದ ಪ್ರೇರೇಪಿತರಾಗಿ ಬಂಡವಾಳಶಾಹಿಗಳ ಶೋಷಣೆಯ ವಿರುದ್ಧ ತಿರುಗಿ ಬಿಳುತ್ತಾರೆ. ನಾಣ್ಯಗಳಿರುವ ಮಣ್ಣಿನ ಹುಂಡಿ ಕೆಳಗೆ ಬಿದ್ದು ಚಿಲ್ಲರೆಗಳೆಲ್ಲಾ ಚೆಲ್ಲಾಪಿಲ್ಲಿಯಾಗುವಾಗ ನಾಟಕ ಅಂತ್ಯಗೊಳ್ಳುತ್ತದೆ. ನೋಡುಗರಲ್ಲಿ ಗೊಂದಲ ಹಾಗೂ ಸೋಜಿಗವನ್ನು ಹುಟ್ಟಿಸುತ್ತದೆ. 

ಮೇಲ್ನೋಟಕ್ಕೆ ಸರಳವೆಂದು ಅನ್ನಿಸುವ ಈ ನಾಟಕವು ಬಹಳ ಸಂಕೀರ್ಣವಾದ ಒಳನೋಟಗಳನ್ನು ಹೊಂದಿದೆ. ಯಾವ ದೃಶ್ಯಗಳೂ ನೇರವಾಗಿ ಏನನ್ನೂ ಹೇಳದೇ ಸಾಂಕೇತಿಕವಾಗಿ ಹಲವು ಅರ್ಥಗಳನ್ನು ಹೊಮ್ಮಿಸುತ್ತವೆ. ಬಡವರ ಹಾಗೂ ಬಂಡವಾಳಿಗರ ನಡುವೆ ನಡೆಯುವ ಅಸ್ತಿತ್ವದ ಸಂಘರ್ಷವೆಂಬುದು ನಾಟಕದ ಆಶಯವಾದರೂ ಅದನ್ನು ನಿರೂಪಿಸಲು ಬಳಸಿದ ದೃಶ್ಯ ಸಂಯೋಜನೆಗಳು ಒಗಟಿನಿಂದಾ ಕೂಡಿದಂತಿವೆ. ಇಲ್ಲಿ ಯಾವುದೇ ರೀತಿಯ ಸಿದ್ದ ಮಾದರಿಯ ಕಥೆ ಎಂಬುದು ಇಲ್ಲದೇ ಕೇವಲ ಉದ್ದೇಶಕ್ಕೆ ಬದ್ಧವಾದ ದೃಶ್ಯಜೋಡಣೆಗಳಿವೆ. ಅವೂ ಕೂಡಾ ಕ್ರಮಬದ್ಧವಾದ ನಿರೂಪನಾ ಶೈಲಿಯಲ್ಲಿಲ್ಲ. ಈ ನಾಟಕವನ್ನು ಸಂಪೂರ್ಣವಾಗಿ ಗ್ರಹಿಸಿಕೊಳ್ಳಲು ಮಲಯಾಳಿಯ ಸಾಮಾನ್ಯ ಪ್ರೇಕ್ಷಕರಿಗೆ ಸಾಧ್ಯವಿಲ್ಲದಿರುವಾಗ ಇನ್ನೂ ಮಲಯಾಳಂ ಭಾಷೆ ಗೊತ್ತಿಲ್ಲದವರಿಗೆ ಅರ್ಥವಾಗುವುದು ಕಷ್ಟಸಾಧ್ಯ. ಜನಸಾಮಾನ್ಯರ ಬವಣೆಯನ್ನೇ ಭಾರೀ ಭೌದ್ದಿಕ ನೆಲೆಯಲ್ಲಿ ಕಟ್ಟಿಕೊಡಲಾಗಿದ್ದರಿಂದ ನೋಡುಗರು ತಮ್ಮ ಗ್ರಹಿಕೆಗೆ ಸಿಕ್ಕಷ್ಟು ದಕ್ಕಿಸಿಕೊಳ್ಳಬೇಕಾಗಿದೆ.

ಸಾಂಕೇತಿಕತೆ ಹಾಗೂ ಬೌದ್ದಿಕತೆಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡಿದರೆ ಮನರಂಜನೆಗೇನೂ ಕೊರತೆ ಇಲ್ಲಾ. ಕಲಾವಿದರ ಚಿತ್ರವಿಚಿತ್ರ ಅತಿರೇಕದ ಅಭಿನಯ ಮತ್ತು ಎರೋಬಿಕ್ಸ್ ಮಾದರಿಯ ಆಕರ್ಷಕ ಆಂಗಿಕ ಸರ್ಕಸ್‌ಗಳು ಭಾಷೆಯ ಹಂಗನ್ನು ಹರಿದು ನೋಡುಗರನ್ನು ರಂಜಿಸುವಂತೆ ಮೂಡಿಬಂದಿವೆ. ದೃಶ್ಯಗಳನ್ನು ಕಟ್ಟುವಾಗ ಮಾಡಿದ ಅನೇಕಾನೇಕ ಗಿಮಿಕ್‌ಗಳು ಪ್ರೇಕ್ಷಕರಿಗೆ ಮುದನೀಡುವಂತಿವೆ. ಗಿಮಿಕ್‌ಗಳ ಮೂಲಕ ಜನಸಾಮಾನ್ಯ ನೋಡುಗರನ್ನೂ ಹಾಗೂ ಸಾಂಕೇತಿಕತೆಗಳ ಮೂಲಕ ಬುದ್ದಿಜೀವಿ ಪ್ರೇಕ್ಷಕರನ್ನು ಸೆಳೆಯುವ ಈ ನಾಟಕ ಬಂಡವಾಳಶಾಹಿ ವ್ಯವಸ್ಥೆಯನ್ನು ಲೇವಡಿ ಮಾಡುತ್ತಲೇ ಶ್ರಮಜೀವಿ ವರ್ಗಗಳ ಅಸಹಾಯಕತೆಯನ್ನು ವಿಡಂಬನಾತ್ಮಕವಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ.

ಪ್ರತಿಯೊಂದು ದೃಶ್ಯದ ಸಂಯೋಜನೆಯಲ್ಲೂ ನಿರ್ದೇಶಕರು ಸೃಷ್ಟಿಸಿದ ವಿಶಿಷ್ಟ ಹ್ಯೂಮರಸ್ ಕ್ರಿಯಾಶೀಲತೆ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದ್ದಂತೂ ಸುಳ್ಳಲ್ಲಾ. ಉದಾಹರಣೆಗೆ.. 25 ಪೈಸೆ ನಾಣ್ಯಕ್ಕೂ ಹಾಗೂ ಬೆಂಕಿಪೊಟ್ಟಣಕ್ಕೂ ನಡುವೆ ನಡೆದ ಪ್ರೇಮ ಪ್ರಸಂಗ ಅನನ್ಯವಾಗಿ ಮೂಡಿಬಂದಿದೆ. ಈ ಜೋಡಿಯನ್ನು ಬೇರೆ ಮಾಡಲು 25 ಪೈಸೆಯನ್ನು ಬ್ಯಾನ್ ಮಾಡುವ ಬಂಡವಾಳಿಗರು ಬೆಂಕಿಪೊಟ್ಟಣದ ಬೆಲೆಯನ್ನು 50 ಪೈಸೆಗೇರಿಸುವುದು ಶ್ರೀಮಂತರ ಶಡ್ಯಂತ್ರವನ್ನು ತೋರಿಸುತ್ತದೆ. ಶ್ರೀಮಂತರು ಹಾಗೂ ಬಡವರ ನಡುವಿನ ವ್ಯತ್ಯಾಸವನ್ನು ತೋರಿಸುತ್ತಲೇ ಅಧಿಕಾರಶಾಹಿಗಳ ಜನವಿರೋಧಿತನವನ್ನು ಈ ನಾಟಕ ಪ್ರಶ್ನಿಸುತ್ತದೆ. ಬಸ್ಟಾಪಲ್ಲಿ ಬೀಡಿ ಸೇದುವವನನ್ನು ವಿರೋಧಿಸುವ ಪೊಲೀಸ್ ಪೇದೆಯು ಸಿಗರೇಟ್ ಸೇದುವ ಶ್ರೀಮಂತನನ್ನು ಸಮರ್ಥಿಸಿಕೊಳ್ಳುವ ದೃಶ್ಯ ಇದಕ್ಕೊಂದು ಉದಾಹರಣೆ. ಹಾಗೆಯೇ ಅತ್ತ ಮೈತುಂಬಾ ಆಭರಣಗಳನ್ನು ಹಾಕಿದ ಮಹಿಳಾ ಮಾಡೆಲ್‌ಗಳ ವೈಭವವನ್ನು ವಿಜ್ರಂಭಿಸುತ್ತಲೇ, ಇತ್ತ ಒಂದು ಹೊತ್ತು ಊಟಕ್ಕಾಗಿ ಕಾಳು ಹಸನು ಮಾಡುವ ಬಡವನನ್ನೂ ತೋರಿಸುತ್ತಾ ಇರುವವರ ಹಾಗೂ ಇಲ್ಲದವರ ನಡುವಿನ ಅಜಗಜಾಂತರ ಅಂತರವನ್ನು ಸಾಂಕೇತಿಕವಾಗಿ ಮತ್ತು ಪರಿಣಾಮಕಾರಿಯಾಗಿ ಹೇಳಲಾಗಿದೆ. ಆಳುವ ವರ್ಗಗಳು ಅಭಿವೃದ್ದಿ ಹೆಸರಲ್ಲಿ ಅದು ಹೇಗೆ ಬಡಜನರ ನೆಲೆ ಹಾಗೂ ಸಂಸ್ಕೃತಿಯನ್ನು ನಾಶಮಾಡಿ ದುಡಿಯುವ ವರ್ಗಗಳನ್ನು ಯಂತ್ರಗಳಾಗಿ ದುಡಿಸಿಕೊಳ್ಳಬಯಸುತ್ತಾರೆಂಬುದನ್ನು ಈ ನಾಟಕ ವಿವರಿಸುತ್ತದೆ.

 
ಜಾಗತೀಕರಣವು ಮಧ್ಯಮ ಹಾಗೂ ಕೆಳಮಧ್ಯಮ ವರ್ಗಗಳ ಮೇಲೆ ಮಾಡಿದ ಹಾಗೂ ಮಾಡುತ್ತಿರುವ ದುಷ್ಪರಿಣಾಮಗಳನ್ನು ವಿನೋದಮಯ ದೃಶ್ಯಗಳ ಮೂಲಕ ಕಟ್ಟಿಕೊಡುತ್ತಾ ದುಡಿಯುವ ವರ್ಗಗಳ ಅಸಹಾಯಕತೆ ಹಾಗೂ ವಿಷಾದವನ್ನೂ ಈ ನಾಟಕ ಪರಿಣಾಮಕಾರಿಯಾಗಿ ತೋರಿಸಿದೆ. ದುಡಿಯುವ ವರ್ಗಗಳ ಬದುಕಿನ ಪ್ರೇರಕವಾದ ಶಕ್ತಿಯಾದ ಸಂಸ್ಕೃತಿಯನ್ನೇ ಸರ್ವನಾಶಮಾಡಲು ಬಂಡವಾಳಶಾಹಿ ಶಕ್ತಿಗಳು ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ..  ಶ್ರಮಿಕ ವರ್ಗಗಳು ಎಲ್ಲಿವರೆಗೂ ತಮ್ಮ ಮೂಲ ದೇಸಿ ಸಂಸ್ಕೃತಿಯನ್ನು ಉಳಿಸಿಕೊಳ್ಳುತ್ತಾರೋ.. ಎಲ್ಲಿವರೆಗೂ ತಮ್ಮ ಹಾಡು ಹಸೆ ಕುಣಿತಗಳನ್ನು ತಮ್ಮ ಪ್ರತಿರೋಧದ ಶಕ್ತಿಯಾಗಿ ಬಳಸುತ್ತಾರೋ ಅಲ್ಲಿವರೆಗೂ ಜಾಗತೀಕರಣ ಅದೆಷ್ಟೇ ಪ್ರಯತ್ನಪಡಲಿ, ಬಂಡವಾಳಶಾಹಿಗಳು ಅದೆಷ್ಟೇ ಕುತಂತ್ರಗಳನ್ನು ಮಾಡಲಿ ಬಹುಸಂಖ್ಯಾತ ಜನರನ್ನು ಬಹುದಿನಗಳ ಕಾಲ ಶೋಷಿಸಲು ಸಾಧ್ಯವಿಲ್ಲಾ ಎನ್ನುವುದನ್ನು ಚಿಲ್ಲರೆ ಸಮರಮ್ ನಾಟಕ ಸಬೀತುಪಡಿಸಲು ಪ್ರಯತ್ನಿಸುತ್ತದೆ. ಬಂಡವಾಳಶಾಹಿಯ ಸರಕು ಸಂಸ್ಕೃತಿ ದುಡಿಯುವ ಜನರನ್ನು ಯಂತ್ರಗಳನ್ನಾಗಿಸಿದರೆ.. ಶ್ರಮಜೀವಿಗಳ ದೇಸಿ ಸಂಸ್ಕೃತಿಯು ಯಂತ್ರಗಳಂತೆ ದುಡಿಯುವವರನ್ನು ಮತ್ತೆ ಮನುಷ್ಯರನ್ನಾಗಿಸುತ್ತವೆ ಎಂಬುದನ್ನು ಪ್ರತಿಮಾತ್ಮಕವಾಗಿ ತೋರಿಸಲಾಗಿದೆ. ಕೊನೆಗೆ ಬಿರುಗಾಳಿಯ ಹಾಗೆ ದಂಗೆಯೆದ್ದ ಬಡಜನರ ಆಕ್ರೋಶವನ್ನು  ತಾಳಲಾಗದೆ ತರಗಲೆಗಳಾದ ಬಂಡವಾಳಶಾಹಿಗಳು ಹಾಗೂ ಅವರ ಕರೆನ್ಸಿಗಳು ಅಸ್ತಿಪಂಜರವಾಗುತ್ತವೆ ಎಂಬುದನ್ನು ಸಂಕೇತಗಳ ಮೂಲಕ ಮಾರ್ಮಿಕವಾಗಿ ತೋರಿಸಲಾಗಿದೆ. ವರ್ಗ ಸಂಘರ್ಷದಲ್ಲಿ ಸಂಘಟಿತರಾದರೆ ಅಂತಿಮವಾಗಿ ಬಹುಜನರೇ ಗೆಲ್ಲುವರು ಎಂಬ ಸಂದೇಶವನ್ನು ಈ ನಾಟಕ ಕೊಡುತ್ತದೆ.

ಈ ನಾಟಕದಲ್ಲಿ ಬಡಜನರ ಜೊತೆ ಬಂಡವಾಳಶಾಹಿಗಳು ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಈ ದೃಶ್ಯ ಅದೆಷ್ಟು ರೂಪಕಾತ್ಮಕವಾಗಿದೆ ಎಂದರೆ ಸಾಮ್ರಾಜ್ಯಶಾಹಿ ದೇಶಗಳು ಭಾರತದಂತಾ ಬಡದೇಶಗಳ ಜೊತೆಗೆ ಮಾಡಿಕೊಳ್ಳುವ ವಿಶ್ವ ವ್ಯಾಪಾರಿ ಅಗ್ರೀಮೆಂಟ್‌ನ್ನು ಲೇವಡಿ ಮಾಡುವಂತೆ ಮೂಡಿಬಂದಿದೆ. ಒಪ್ಪಂದದ ರೂಲ್ಸ್‌ಗಳನ್ನು ಬರೆದ ಟಾಯ್ಲೆಟ್ ಪೇಪರನ್ನು ದುಡಿಯುವ ವರ್ಗದ ಪ್ರತಿನಿಧಿಗಳ ಕೈಗೆ ಕೊಟ್ಟಾಗ ಅದು ಅವರ ಕೊರಳನ್ನು ಸುತ್ತಿಕೊಳ್ಳುತ್ತದೆ. ತದನಂತರ ಇಡೀ ಒಪ್ಪಂದ ಪತ್ರವನ್ನು ಬಂಡವಾಳಶಾಹಿಗಳ  ಪ್ರತಿನಿಧಿಗಳು ಕಮೋಡಿಗೆ ಹಾಕಿ ಪ್ಲಶ್ ಮಾಡುತ್ತಾರೆ. ಜನಸಾಮಾನ್ಯರ ಕಣ್ಣೊರೆಸುವ ಇಂತಹ ಅದೆಷ್ಟೋ ಒಪ್ಪಂದ, ಭರವಸೆ, ಆಶ್ವಾಸನೆಗಳನ್ನು ನಮ್ಮ ಆಳುವ ವರ್ಗ ಕೊಡುತ್ತಲೇ ಬಂದಿದೆ ಹಾಗೂ ಅವುಗಳನ್ನು ಈಡೇರಿಸದೇ ಜನರನ್ನು ಮೋಸಗೊಳಿಸುತ್ತವೆ ಎಂಬುದನ್ನು ಟಾಯ್ಲೆಟ್ ಪೇಪರ್ ಹಾಗು ಕಮೋಡ್‌ಗಳನ್ನು ರೂಪಕವಾಗಿ ಬಳಸಿ ಅತ್ಯಂತ ಮಾರ್ಮಿಕವಾಗಿ ತೋರಿಸಲಾಗಿದೆ. ಲೋಕಲ್ ಒಪ್ಪಂದಗಳ ಜೊತೆಗೆ ಜಾಗತಿಕ ಒಪ್ಪಂದಗಳೂ ಸಹ ಇದೇ ರೀತಿ ಎಂದು ಪರೋಕ್ಷವಾಗಿ ಹೇಳಲಾಗಿದೆ. 

ಇದನ್ನೆಲ್ಲಾ ದೃಶ್ಯಗಳ ಮೂಲಕ  ಹೇಳಲು ಬಳಸಿದ ರಂಗತಂತ್ರಗಳು ನೋಡುಗರಲ್ಲಿ  ಬೆರಗನ್ನು  ಹುಟ್ಟಿಸಿದವು. ದೃಶ್ಯದಿಂದ ದೃಶ್ಯಕ್ಕೆ ಆಗುವ ವೇಗದ ಬದಲಾವಣೆಗಳು ನೋಡುಗರ ಚಿತ್ತ ಅತ್ತಿತ್ತ ಅಲ್ಲಾಡದಂತೆ ಹಿಡಿದಿಟ್ಟವರು. ಇಡಿಯಾಗಿ ನಾಟಕ ಅರ್ಥವಾಗದಿದ್ದರೂ ಬಿಡಿಯಾಗಿ ದೃಶ್ಯಗಳು ಗಮನಸೆಳೆದವು. ಕನಿಷ್ಟ ಪ್ರಾಪರ್ಟಿಗಳನ್ನು ಬಳಸಿ ಗರಿಷ್ಟ ಅರ್ಥವನ್ನು ಹೊಮ್ಮಿಸಲಾಯಿತು. ರಟ್ಟಿನಿಂದ ಮಾಡಿದ ಪುಟ್ಟ ಬಾಕ್ಸ್‌ಗಳನ್ನು ಬಳಿಸಿದ ರೀತಿಯನ್ನಂತೂ ನೋಡುಗರ ಮರೆಯಲು ಸಾಧ್ಯವೇ ಇಲ್ಲಾ. ಅದೇ ಡಬ್ಬಾ ಮೇಲೆಕ್ಕೆತ್ತಿ ಹಿಡಿದು ಜುವೆಲರ್ರಿ ಮಾಡೆಲ್‌ಗಳ ಕಾಲುಗಳನ್ನು ಮಾತ್ರ ತೋರಿಸಿದ್ದು.. ತದನಂತರ ಡಬ್ಬದೊಳಗೆ ಕುಳಿತ ಮಾಡೆಲ್‌ಗಳು ತಮ್ಮ ಬಿಂಕ ಬಿನ್ನಾನ ಪ್ರದರ್ಶಿಸಿದ್ದು.. ಅದೇ ಡಬ್ಬಗಳು ಚಿಲ್ಲರೆ ಅಂಗಡಿಗಳಾಗಿ ಬದಲಾಗಿದ್ದು.. ಹೀಗೆ ಎರಡು ಮೂರು ರಟ್ಟಿನ ಡಬ್ಬಗಳನ್ನು ಬಳಸಿ ಹಲವಾರು ದೃಶ್ಯಗಳನ್ನು ಸಂಯೋಜಿಸಿ ನೋಡುಗರಲ್ಲಿ ಕುತೂಹಲವನ್ನು ಹುಟ್ಟಿಸಲಾಯಿತು. ಚಿಕ್ಕ ಗುಡಿಸಿಲಿನ ಬಾಗಿಲಿನಾಕಾರದ ಕಂಬಿಗೆ ಬೆಂಕಿ ಹಚ್ಚಿ ಬಡವರ ಗುಡಿಸಲು ಸುಟ್ಟ ವಾತಾವರಣವನ್ನು ತೋರಿಸಲಾಯಿತು. ಕಾರಿನ ಟೈರ್‌ಬಳಸಿ ದೊಡ್ಡದಾದ ನಾಣ್ಯವನ್ನು ಪ್ರದರ್ಶಿಸಿದ್ದು ಅಚ್ಚರಿಗೆ ಕಾರಣವಾಯಿತು. ಪ್ರಾಪರ್ಟಿಗಳು ಹಾಗೂ ಅವುಗಳನ್ನು ಬಳಸಿದ ರೀತಿಗಳೇ ಈ ನಾಟಕದ ಆಕರ್ಷಣೆಯನ್ನು ಹೆಚ್ಚಿಸಿದವು. 


ಈ ನಾಟಕ ನಿಂತಿರೋದೇ ನಟರುಗಳ ಅಭಿನಯದ ಮೇಲೆ. ಎಲ್ಲಾ ನಟರು ಪಾದರಸದಂತೆ ವೇದಿಕೆಯಾದ್ಯಂತ ಹರಿದಾಡಿ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದಾರೆ. ಸುರೇಶ್, ಅಖಿಲ್, ಮಿಥುನ್, ಅಬಿದ್, ಶ್ರೀಚೇತ್, ಅನೀಶ್, ಜೀಶ್ನು.. ಈ ಏಳು ಜನ ಕಲಾವಿದರು ನಾಟಕದ ಎಲ್ಲಾ ಪಾತ್ರಗಳನ್ನು ಅಭಿನಯಿಸಿ ನಿರ್ವಹಿಸಿದ್ದಾರೆ. ಇವರೆಲ್ಲರ ಚಲನೆಯಲ್ಲಿರುವ ಪೋರ್ಸ, ಮಾತಿನಲ್ಲಿರುವ ಗಟ್ಸ್, ಹಾಗೂ ಆಂಗಿಕ ಕಸರತ್ತುಗಳಲ್ಲಿರುವ ಕರಾರುವಕ್ಕತೆ ಅಚ್ಚರಿಯನ್ನುಂಟುಮಾಡುವಂತಿವೆ. ನಟನೆಯಲ್ಲಿ ವೃತಿಪರತೆಯನ್ನು ಹೆಚ್ಚಿಗೆ ರೂಢಿಸಿಕೊಂಡಿದ್ದು ನಾಟಕದಾದ್ಯಮತ ಕಂಡುಬಂದಿತು. ನಿರ್ದೇಶಕ ನಟರುಗಳ ದೇಹಭಾಷೆಯನ್ನು ದುಡಿಸಿಕೊಂಡ ರೀತ ಶ್ಲಾಘನೀಯ. ಇಡೀ ನಾಟಕದಲ್ಲಿ ಮಹಿಳೆಯರ ಪಾತ್ರವನ್ನೂ ಸಹ ಗಂಡಸರೇ ನಟಿಸಿದ್ದು ನಾಟಕದ ಸಣ್ಣ ಕೊರತೆಯಾಗಿದೆ. ದೃಶ್ಯದಲ್ಲಿ ಮೂಡ್ ಸೃಷ್ಟಿಸಲು ಆಗಾಗ ಹಾಕುವ ಹೊಗೆಗಳು ಹಾಗೂ ಬುಡ್ಡಿ ದೀಪದ ಕೆರೋಸಿನ್ ವಾಸನೆಗಳು ಮುಂದಿನ ಸೀಟಿನ ಪ್ರೇಕ್ಷಕರ ನಾಸಿಕಕ್ಕೆ ಅಸಾಧ್ಯ ಕಿರಿಕಿರಿಯನ್ನುಂಟು ಮಾಡಿದ್ದರೂ ದೃಶ್ಯಗಳು ಕಣ್ಣಿಗೆ ಆನಂದವನ್ನುಂಟು ಮಾಡಿದ್ದರಿಂದ ಸಹನೀಯವಾದವು. 

ಬಹುತೇಕ ಅರೆಬೆತ್ತಲಾಗಿರುವ ದುಡಿಯುವ ವರ್ಗಗಳ ಪಾತ್ರಗಳು ಚಡ್ಡಿಯಲ್ಲಿವೆ, ಇಲ್ಲವೇ ಅದರ ಮೇಲೊಂದು ಮಾಸಿದ ಟವೆಲ್ ಸುತ್ತಿಕೊಂಡಿವೆ. ಆದ್ದರಿಂದ ಕಾಸ್ಟೂಮ್‌ಗಳ ಬಳಕೆ ಹೇಳಿಕೊಳ್ಳುವಂತ ವಿಶೇಷತೆ ಏನಿಲ್ಲಾ. ಬೆಳಕಿನ ವಿನ್ಯಾಸ ಈ ನಾಟಕದಲ್ಲಿ ಪಾತ್ರವಾಗಿ ಮೂಡಿಬಂದಿದೆ. ನಗರಸಭೆ ಅಧಿಕಾರಿಗಳು ಬಡಜನರ ವಿರುದ್ಧ ಶಡ್ಯಂತ್ರ ರಚಿಸುವಾಗ ಅವರ ಕೈಲಿರುವ ಬ್ಯಾಟರಿ ಬೆಳಕನ್ನೇ ಬಳಸಿ ದೃಶ್ಯ ಸಂಯೋಜಿಸಿದ್ದು ಅನನ್ಯವಾಗಿ ಮೂಡಿ ಬಂದಿದೆ. ಕೋರಸ್ ಮಾದರಿಯ ಹಾಡುಗಳು ಹಾಗೂ ಅದಕ್ಕೆ ಬಳಸಿದ ದೇಸಿ ಸಂಗೀತಗಳು ದೃಶ್ಯಕ್ಕೆ ಪೋರ್ಸನ್ನು ತಂದಿವೆ.  
 
ಒಟ್ಟಾರೆಯಾಗಿ ಸಮಕಾಲೀನ ಆರ್ಥಿಕ ಅಸಮಾನತೆಯನ್ನು ಹಾಗೂ ಅದಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತನ್ನದೇ ಆದ ರೀತಿಯಲ್ಲಿ ಹೇಳುವ ಚಿಲ್ಲರೆ ಸಮರಮ್ ನಾಟಕವು ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ. ಸೂತ್ರಬದ್ಧ ಕಥೆಯ ಹಂಗಿಲ್ಲದೇ ಕೆಲವಾರು ಘಟನೆಗಳನ್ನು ಜೋಡಿಸಿ ಒಟ್ಟಾರೆ ಅಂದುಕೊಂಡ ಪರಿಣಾಮವನ್ನು ಅನಾವರಣಗೊಳಿಸಿದೆ. ಅಪೇಕ್ಷಿತ ಕಥೆಯ ಅಭಾವದಿಂದಾಗಿ, ಭಾಷಾ ಸಂವಹನದ ಕೊರತೆಯಿಂದಾ ಹಾಗೂ ಬೌದ್ಧಿಕ ವಸ್ತುವಿಷಯದ ರೂಪಕಗಳ ಸಂಕೀರ್ಣತೆಯಿಂದ ಯಾರಿಗೆ ಈ ನಾಟಕ ಎಷ್ಟು ಅರ್ಥವಾಯಿತೋ ಗೊತ್ತಿಲ್ಲಾ,  ಆದರೆ.. ಈ ನಾಟಕವನ್ನು ಅರ್ಥಮಾಡಿಕೊಂಡರೆ ನಮ್ಮ ಪ್ರಸ್ತುತ ಶೋಷಕ ವ್ಯವಸ್ಥೆಯ ಮುಖವಾಡಗಳನ್ನು ನೋಡಬಹುದಾಗಿದೆ. ಬಹುಜನರು ತಮ್ಮ ಸಂಸ್ಕೃತಿ ಹಾಗೂ ಅಸ್ಮಿತೆಯನ್ನು ಉಳಿಸಿಕೊಂಡು ಸಂಘಟಿತರಾದರೆ ಬಂಡವಾಳಿಗರ ಬಂಡವಾಳವನ್ನು ಬಯಲುಗೊಳಿಸಿ ಹಿಮ್ಮೆಟ್ಟಿಸಬಹುದು ಎನ್ನುವ ಸಂದೇಶವನ್ನು ಎದೆಗಿಳಿಸಿಕೊಳ್ಳಬಹುದಾಗಿದೆ. ಚಿಲ್ಲರೆ ಸಮರಮ್ ದುಡಿಯುವ ವರ್ಗಗಳ ಹೋರಾಟಗಳಿಗೆ ಪ್ರೇರಣೆಯಾಗಬಹುದಾಗಿದೆ. 

                                     -ಶಶಿಕಾಂತ ಯಡಹಳ್ಳಿ
(ಪೊಟೋಗಳ ಕೃಪೆ : ಥಾಯ್ ಲೋಕೇಶ್)

 
    


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ