ಸೋಮವಾರ, ನವೆಂಬರ್ 24, 2014

“ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರಹಸನ” :





ಕೊನೆಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಎಂಬ ಸಿಜರಿನ್ ಹೆರಿಗೆ ಅನೌನ್ಸ್ ಆಗಿದೆ. ವಾರ್ಷಿಕ ಹೆರಿಗೆ ಸುಸೂತ್ರವಾಗಿ ಆಗಲಾರದಂತಹ ದುಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿದೆ. ಸಲವಂತೂ ಎರಡು ವರ್ಷದ ಪ್ರಶಸ್ತಿಗಳನ್ನು  ಡೆಲಿವರಿ ಮಾಡಿಸುವ ಜವಾಬ್ದಾರಿ ಅಕಾಡೆಮಿಯದ್ದಾಗಿತ್ತು. 2013 ಹಾಗೂ 2014 ಎರಡೂ ವರ್ಷಗಳ ಅವಾರ್ಡಗಳನ್ನು ಏಕಕಾಲಕ್ಕೆ ಕೊಡಮಾಡಬೇಕಾಗಿತ್ತು. ಅಕಾಡೆಮಿ ಅಧ್ಯಕ್ಷರಾಗಿದ್ದವರು ಚಾಣಾಕ್ಷರಾಗಿದ್ದರೆ, ಮುಂಜಾಗ್ರತೆ ತೆಗೆದುಕೊಂಡಿದ್ದರೆ ಪ್ರಶಸ್ತಿಗಳ ಡೆಲಿವರಿಯನ್ನು ಸುಸೂತ್ರವಾಗಿ ನಡೆಸಬಹುದಾಗಿತ್ತು. ಆದರೆ ಅಕಾ ಡಮ್ಮಿಯ ಅದಕ್ಷ ಶೇಖ ಮಾಸ್ತರ್ ಮೇಲೆ ಯಾರೆಂದರೆ ಯಾರಿಗೂ ಭರವಸೆ ಇಲ್ಲ. ಸದಸ್ಯರೆಲ್ಲರನ್ನೂ  ಸಹಮತಕ್ಕೆ ತಂದು ಅವಿರೋಧವಾಗಿ ಪ್ರಶಸ್ತಿಗಳನ್ನು ಆಯ್ಕೆ ಮಾಡುವಂತಹ ತಂತ್ರಗಾರಿಕೆ ಮಾಸ್ತರ್ಗೆ ಗೊತ್ತೇ ಇಲ್ಲ. ಮಾಸ್ತರ್ ಯಾವಾಗ ಅಯೋಗ್ಯರಾಗಿರುತ್ತಾರೋ ಆಗ ವಿದ್ಯಾರ್ಥಿಗಳು ಅವಿಧೇಯರಾಗಿರುತ್ತಾರೆ. ಅದೇ ರೀತಿ ಶೇಖ ಮಾಸ್ತರ್ ಮಾತನ್ನು ಸದಸ್ಯರಾದವರು ಕೇಳುವುದೂ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಹಮತ ರೂಪಿಸುವ ಆಡಳಿತಾತ್ಮಕ ಕೌಶಲತೆ ಪೇಟಿ ಮಾಸ್ತರಿಗಂತೂ ಮೊದಲೇ ಇಲ್ಲ. ಹೀಗಾಗಿಯೇ ಪ್ರಶಸ್ತಿ ಆಯ್ಕೆಯಲ್ಲಿ ಪ್ರಹಸನಗಳು ನಡೆದುಹೋದವು. ಸರಳವಾಗಿ ಆಗಬಹುದಾದ ಹೆರಿಗೆ ಸೀಜರಿನ್ ಆಯಿತು.
 
ಅಕಾಡೆಮಿ ಅಧ್ಯಕ್ಷ ಶೇಖ ಮಾಸ್ತರ್
ಯಾವಾಗ ನವೆಂಬರ್ 20ರಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಶಸ್ತಿಯ ಅವಘಡಗಳ ಕುರಿತ ವರದಿ ಬಂದಿತೋ ಆಗಲೇ ಕನ್ನಡ ರಂಗಭೂಮಿಯವರಿಗೆ ಪ್ರಸ್ತುತ ನಾಟಕ ಅಕಾಡೆಮಿ ಎನ್ನುವುದೊಂದು ಇದೆ ಎಂದು ಅರಿವಾಯಿತು. ಯಾಕೆಂದರೆ ಶೇಖ ಮಾಸ್ತರ್ ಅಧ್ಯಕ್ಷರಾದಾಗಿನಿಂದಲೂ ಸಂಚಲನ ಹುಟ್ಟಿಸುವಂತಹ ಯಾವುದೇ ರಂಗಚಟುವಟಿಕೆಗಳು ಅಕಾಡೆಮಿಯಿಂದ ಆಯೋಜನೆಗೊಂಡಿಲ್ಲ. ರಂಗಭೂಮಿಯನ್ನು ಬೆಳೆಸುವಂತಹ ಯಾವುದೇ ಮಹತ್ವಾಂಕಾಂಕ್ಷೆಯ ಯೋಜನೆಗಳು ರೂಪುಗೊಳ್ಳಲಿಲ್ಲ. ರಂಗಭೂಮಿಯ ಸಮಗ್ರ ಪರಿಚಯವಿಲ್ಲದ ಶೇಖ ಮಾಸ್ತರ್ ರಾಜಕೀಯ ಒತ್ತಾಸೆಯಿಂದ ಅಕಾಡೆಮಿಗೆ ಒಕ್ಕರಿಸಿಕೊಂಡಿದ್ದೇ ಆಧುನಿಕ ರಂಗಭೂಮಿಯವರಿಗೆ ಸುತರಾಂ ಇಷ್ಟ ಇರಲಿಲ್ಲ. ಎಲ್ಲರೂ ಅಂದಾಜಿಸಿದಂತೆಯೇ ಅಕಾಡೆಮಿ ಎನ್ನುವುದು ನೆನೆಗುದಿಗೆ ಬಿದ್ದಿತು. ಸರಕಾರದ ಕೋಟಿ ರೂಪಾಯಿ ಹಣವನ್ನು ವರ್ಷದೊಳಗೆ ಹೇಗೆ ಹಂಚಬೇಕು ಹಾಗೂ ಹಂಚಿಕೊಳ್ಳಬೇಕು ಎನ್ನುವುದಷ್ಟೇ ಗುರಿಯಾಯಿತು. ಹೀಗಾಗಿ ಹಲವಾರು ರಂಗಕರ್ಮಿಗಳು ಅಕಾಡೆಮಿಯ ಮೇಲೆ ಭರವಸೆಯನ್ನೇ ಕಳೆದುಕೊಂಡರು. ಈಗ ಪತ್ರಿಕೆಯಲ್ಲಿ ಪ್ರಕಟವಾದ ಪ್ರಶಸ್ತಿ ಕುರಿತ ವರದಿಯೊಂದು ಅಕಾಡೆಮಿ ಇನ್ನೂ ಬದುಕಿದೆ ಎನ್ನುವುದನ್ನು ಜ್ಞಾಪಿಸಿತು.
 
ಪತ್ರಿಕೆಯಲ್ಲಿ ಬಂದಿದ್ದಾದರೂ ಏನು? ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಎನ್ನುವ ಶೀರ್ಷಿಕೆಯಲ್ಲಿ  ಸದಸ್ಯರ ತೀವ್ರ ವಿರೋಧದ ನಡುವೆ ಕ್ರಿಮಿನಲ್ ಆರೋಪ ಇರುವ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.... ನಾಟಕ ಅಕಾಡೆಮಿಯ ಪ್ರಭಾವಿ ಸದಸ್ಯರೊಬ್ಬರು ಹಠ ಹಿಡಿದು ಸದಸ್ಯರೆಲ್ಲರ ವಿರೋಧದ ನಡುವೆಯೂ ಪ್ರಶಸ್ತಿ ಕೊಡಿಸಲು ಪಟ್ಟು ಹಿಡಿದರು. ಉತ್ತರ ಕರ್ನಾಟಕದ ಭಾಗದ ಅಕಾಡೆಮಿ ಸದಸ್ಯರೊಬ್ಬರು ಇದನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು... ಎಂದು ಇನ್ನೂ ಕೆಲವಾರು ವಿವರಗಳೊಂದಿಗೆ ಸುದ್ದಿ ಪ್ರಕಟವಾಯಿತು. ಇದನ್ನು ಓದಿದ ಶೇಖ ಮಾಸ್ತರ್ ಶೇಕ್ ಆದರು. ಮರುದಿನ ಮತ್ತೆ ಇದ್ದಕ್ಕಿದ್ದಂತೆ ಸದಸ್ಯರ ಸಭೆ ಕರೆದರು. ಮಧ್ಯಾಹ್ನದ ಹೊತ್ತಿಗೆಲ್ಲಾ ಪ್ರಸ್ಕ್ಲಬ್ನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಮಾಧ್ಯಮದವರಿಗೆ ಬಿಡುಗಡೆ ಮಾಡಬೇಕಾಗಿತ್ತು. ಇದ್ಯಾಕೋ ಅವಘಡವಾಗುತ್ತದೆಂದು ತಿಳಿದ ಮಾಸ್ತರರು ಅನೌಪಚಾರಿಕ ಸಭೆ ಕರೆದು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಹೆಸರ ಬದಲಾಗಿ ಬೇರೆ ಹೆಸರನ್ನು ಸೂಚಿಸಲು ಪ್ರಭಾವಿ ಸದಸ್ಯರನ್ನು ಕೇಳಿಕೊಂಡರು. ಸದಸ್ಯ ಮಹೋದಯರು ಅನಿವಾರ್ಯವಾಗಿ ತಮ್ಮ ಅಂತರಂಗದ ಆತ್ಮೀಯ ಮಹಿಳೆಯೊಬ್ಬರ ಹೆಸರನ್ನು ಸೂಚಿಸಿದ ನಂತರ ಹೆಸರನ್ನು ಸೇರಿಸಿ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯ ಹೆಸರನ್ನು ತೆಗೆಯಲಾಯಿತು. ಪ್ರಶಸ್ತಿಗಳನ್ನು ಅನೌನ್ಸ್ ಮಾಡಲಾಯಿತು.

ಇಷ್ಟಕ್ಕೂ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿ ಯಾರು? ಅವರಿಗೆ ಪ್ರಶಸ್ತಿ ಕೊಡಿಸಲೇ ಬೇಕೆಂದು ಹಠಕ್ಕೆ ಬಿದ್ದ ನಾಟಕ ಅಕಾಡೆಮಿಯ ಪ್ರಭಾವಿ ಸದಸ್ಯ ಯಾರು? ಎನ್ನುವುದು ಕೆಲವರ ಕುತೂಹಲದ ಕೇಂದ್ರವಾಯಿತು. ಅಕಾಡೆಮಿಯ ಬಗ್ಗೆ ಒಲವನ್ನೇ ಕಳೆದುಕೊಂಡಿರುವ ಬಹುತೇಕ ರಂಗಕರ್ಮಿಗಳು ಪ್ರಶಸ್ತಿ ಪ್ರಹಸನದ ಬಗ್ಗೆ ಆಸಕ್ತಿಯನ್ನೂ ತೋರಿಸಲಿಲ್ಲ. ಆದರೂ ಒಳಗುಟ್ಟೇನು ಎನ್ನುವುದನ್ನು ತಿಳಿಯುವ ಸಣ್ಣ ಕುತೂಹಲವಂತೂ ಇದ್ದೇ ಇತ್ತು. ಇದನ್ನು ಬೆನ್ನತ್ತಿ ಹೋದಾಗ ಹಲವಾರು ವಿಷಯಗಳು ಅನಾವರಣಗೊಳ್ಳತೊಡಗಿದವು.


ಪ್ರಭಾವಶಾಲಿ ಸದಸ್ಯ ಎಂದು ಪತ್ರಿಕೆಯಲ್ಲಿ ಬಂದಿತ್ತಲ್ಲಾ ಅವರು ಬೇರಾರೂ ಅಲ್ಲ ಇತ್ತೀಚೆಗೆ ಪ್ರಜಾವಾಣಿಯಿಂದ ನಿವೃತ್ತರಾದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ರವರು. ಶೇಖ ಮಾಸ್ತರ್ ಮತ್ತು ಗುಡಿಹಳ್ಳಿ ಇಬ್ಬರೂ ಗ್ಲಾಸ್ಮೇಟ್ಗಳು. ಇದರಿಂದಾಗಿಯೇ ಎರಡನೇ ಬಾರಿಗೆ ಗುಡಿಹಳ್ಳಿ ನಾಟಕ ಅಕಾಡೆಮಿಯ ಸಹಸದಸ್ಯರಾಗಿ ನೇಮಕಗೊಳಿಸಿಕೊಂಡಿದ್ದರು. ಶೇಖ ಮಾಸ್ತರ್ ರಾತ್ರಿ ಪಾನಗೋಷ್ಠಿಯ ಫಲಾನುಭವಿಯಾಗಿದ್ದರಿಂದ ಗುಡಿಹಳ್ಳಿ ಮಾಸ್ತರರ ಅಂತರಂಗದ ಗೆಳೆಯರಾಗಿದ್ದಂತೂ ಸುಳ್ಳಲ್ಲ. ಹೀಗಾಗಿ ಗುಡಿಹಳ್ಳಿಯ ಮಾತುಗಳಿಗೆ ಮಾಸ್ತರರು ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಅಧ್ಯಕ್ಷರ ಮೇಲೆ ಪ್ರಭಾವ ಬೀರುವುದರಿಂದ ನಾಟಕ ಅಕಾಡೆಮಿಯ ಸದಸ್ಯರಲ್ಲಿ ಪ್ರಭಾವಶಾಲಿ ಎಂದೆನಿಸಿಕೊಂಡರುಇನ್ನು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಯಾರು ಎಂದು ಹುಡುಕಿದರೆ ಜಾನಪದದಲ್ಲಿ ಡಾಕ್ಟರೇಟ್ ಮಾಡಿದ ಡಾ.ಬೈರೇಗೌಡರ ಹೆಸರು ಪ್ರತಿದ್ವನಿಸಿತು.

ಡಾ.ಬೈರೇಗೌಡರ ಹೆಸರನ್ನು ಪ್ರಸ್ತಾಪ ಮಾಡಿ ಸಭೆಯ ತೀರ್ಮಾಣಕ್ಕೆ ಬಿಟ್ಟಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಯಾವಾಗ ಬೈರೇಗೌಡರಿಗೆ ಪ್ರಶಸ್ತಿ ಕೊಡಲೇಬೇಕು ಎಂದು ಗುಡಿಹಳ್ಳಿ ಪಟ್ಟು ಹಿಡಿದು ಕುಳಿತರೋ ಆಗ ಅನುಮಾನಗಳು ಶುರುವಾದವು. ಡಾ. ಬೈರೇಗೌಡರು ಪುಸ್ತಕಗಳ ಪ್ರಕಟಣೆಯನ್ನು ಮಾಡುತ್ತಿದ್ದು ಗುಡಿಹಳ್ಳಿಯವರ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇನ್ನೂ ಕೆಲವು ಪುಸ್ತಕಗಳನ್ನು ಪ್ರಕಟಿಸುತ್ತೇನೆಂದು ಆಮಿಷ ತೋರಿಸಿದ್ದರಿಂದ ಪ್ರಶಸ್ತಿ ಕೊಡಿಸಲು ಒತ್ತಾಯಿಸುತ್ತಿದ್ದಾರೆನ್ನುವುದು ಒಂದು ಅನುಮಾನವಾದರೆಗುಡಿಹಳ್ಳಿ ಮನೆಕಟ್ಟಿ ಸಾಲ ಸೋಲ ಮಾಡಿಕೊಂಡಿದ್ದಾರೆ, ಈಗ ಕೈಯಲ್ಲಿ ನೌಕರಿಯೂ ಇಲ್ಲ. ಹೀಗಾಗಿ ಪ್ರಶಸ್ತಿಯನ್ನು ಮಾರಿಕೊಂಡು ಒಂದಿಷ್ಟು ಹಣ ಮಾಡಲು ಹೊರಟಿದ್ದು, ಬೈರೇಗೌಡರ ಜೊತೆಗೆ ಡೀಲ್ ಕುದುರಿಸಿದ್ದಾರೆ ಎನ್ನುವ ಇನ್ನೊಂದು ತಲೆಬಾಲವಿಲ್ಲದ ರೂಮರ್ ಹಬ್ಬಿ ಸಂದೇಹವನ್ನು ಹೆಚ್ಚಿಸಿತು. ಅರೆ ಯಾವುದೇ ಲಾಭವಿಲ್ಲದೇ ಗುಡಿಹಳ್ಳಿಯಂತವರು ಇಂತವರಿಗೆ ಪ್ರಶಸ್ತಿ ಕೊಡಲೇಬೇಕೆಂದು ಹಠ ಮಾಡಿದ್ದಾದರೂ ಯಾಕೆ? ಎನ್ನುವುದನ್ನು ಮೇಲಿನ ಸಂದೇಹ ವ್ಯಕ್ತಪಡಿಸುವವರು ತಮ್ಮ ವಾದಕ್ಕೆ ಪೂರಕ ಪುರಾವೆಯಾಗಿ ಬಳಸುತ್ತಿದ್ದಾರೆ. ಆದರೆ ಅದೇನೂ ಡೀಲಾಯಿತೋ ಇಲ್ಲವೋ ಅದು ಗುಡಿಹಳ್ಳಿ ಹಾಗೂ ಬೈರೇಗೌಡರಿಗೆ ಮಾತ್ರ ಗೊತ್ತು. ಇಂತದ್ದಕ್ಕೆಲ್ಲಾ ಸಾಕ್ಷ ಪುರಾವೆಗಳು ಇರುವುದಿಲ್ಲ. ಆದರೆ ಗುಡಿಹಳ್ಳಿಯಂತಹ ಹಿರಿಯರು ರೀತಿ ಊಹಾಪೋಹಗಳಿಗೆ ಎಡೆಮಾಡಿಕೊಡಬಾರದು. ಅಕಾಡೆಮಿಯೊಳಗಿದ್ದಮೇಲೆ ಎಲ್ಲ ಸದಸ್ಯರಂತಿರಬೇಕೆ ಹೊರತು ಅಧ್ಯಕ್ಷರೊಂದಿಗಿರುವ ವ್ಯಯಕ್ತಿಕ ಆತ್ಮೀಯತೆಯನ್ನು ಬಳಸಿಕೊಂಡು ಪ್ರಭಾವಿಯಾಗಲು ಹೊರಡಬಾರದು. ಅಕಾಡೆಮಿಯ ನಿಬಂಧನೆಗಳನ್ನು ಮುರಿಯಬಾರದು. ಕಿರಿಯ ಸದಸ್ಯರಿಗೆ ಮಾದರಿ ಎನ್ನುವಂತೆ ನಡೆ ನುಡಿ ಇರಬೇಕು. ಏನೂ ಗೊತ್ತಿಲ್ಲದ ಅಧ್ಯಕ್ಷರಿಗೆ ಸಲಹೆ ಸಹಕಾರ ನೀಡಬೇಕೆ ಹೊರತು ದಿಕ್ಕುತಪ್ಪಿಸಬಾರದು.

ಇದೆಲ್ಲಾ ಆಗಿದ್ದಾದರೂ ಹೇಗೆ? ಬೈರೇಗೌಡರ ಕ್ರಿಮಿನಲ್ ಕೇಸ್ ಬಗ್ಗೆ ತನಿಖೆ ಮಾಡಿದವರಾರು? ಯಾಕೆ ಮಿಕ್ಕೆಲ್ಲಾ ಸದಸ್ಯರು ಬೈರೇಗೌಡರ ಆಯ್ಕೆಯನ್ನು ಒಕ್ಕೂರಿನಲ್ಲಿ ವಿರೋಧಿಸಿದರು?.... ಇದರ ಹಿನ್ನೆಲೆ ಹೀಗಿದೆ. ಗುಡಿಹಳ್ಳಿಯವರು ಬೈರೇಗೌಡರಿಗೆ ರಂಗಸಾಧನೆಯ ಕುರಿತು  ತಂದ ಪುಸ್ತಕವನ್ನು ಕಳುಹಿಸಿಕೊಡಲು ಕೇಳಿದ್ದಾರೆ. ಅದನ್ನು ಅಕಾಡೆಮಿಗೆ ತಲುಪಿಸಿದ ಹುಡುಗ ಗುಡಿಹಳ್ಳಿ ಇಲ್ಲದ್ದರಿಂದ ಅಲ್ಲಿರುವ ಅಕಾಡೆಮಿಯ ಗುಮಾಸ್ತನ ಕೈಗೆ ತಲುಪಿಸಿದ್ದಾನೆ. ಗುಮಾಸ್ತನಿಗೆ ಅದನ್ನು ನೋಡಿದ ಕೂಡಲೇ ಪ್ರಶಸ್ತಿಯ ವಾಸನೆ ಬಡಿದಿದೆ. ಗುಡಿಹಳ್ಳಿ ಬೈರೇಗೌಡರಿಗೆ ಪ್ರಶಸ್ತಿಯನ್ನು ಕೊಡಿಸಲೆಂದೇ ಬೈರೇಗೌಡರ ಸಾಧನೆಯನ್ನು ಹೇಳುವ ಪುಸ್ತಕ ತರಿಸಿದ್ದಾರೆ ಎಂದು ಖರಾರುವಕ್ಕಾಗಿ ಊಹಿಸಿದ್ದಾನೆ. ಕೂಡಲೇ ವಿಷಯವನ್ನು ಇತ್ತೀಚೆಗೆ ಪ್ರಸಿದ್ದಿಗೆ ಬಂದ ನಾಟಕಕಾರರಿಗೆ ತಿಳಿಸಿದ್ದಾನೆ. ನಾಟಕಕಾರ ಬೈರೇಗೌಡರ ಮೇಲೆ ಕ್ರಿಮಿನಲ್ ಆರೋಪ ಇದೆ ಎಂದು ವಿವರವಾಗಿ ತಿಳಿಸಿದ್ದಾರೆ. ಅವರಿಗೆ ಅವಾರ್ಡ ಕೊಡುವುದು ತಪ್ಪು ಎಂದೂ ಹೇಳಿದಾರೆ. ಎಲ್ಲಾ ವಿವರಗಳನ್ನು ರಂಗಗುಮಾಸ್ತ ಅಕಾಡೆಮಿಯ ಸದಸ್ಯ ರಟ್ಟೇಹಳ್ಳಿ ಮುದ್ದಣ್ಣನಿಗೆ ಚಾಚು ತಪ್ಪದೇ ವಿವರಿಸಿದ್ದಾರೆ. ಇದನ್ನು ಕೇಳಿದ ಮುದ್ದಣ್ಣ ಕರಗ ಹೊತ್ತವರಂತೆ ಮನಸ್ಸಲ್ಲೆ ಕುಣಿದಾಡಿದ್ದಾರೆ.

ಯಾಕೆಂದರೆ ಇಲ್ಲೊಂದು ಸಣ್ಣ ಪ್ಲಾಶ್ಬ್ಯಾಕ್ ದೃಶ್ಯವಿದೆ. ಹಿಂದೆ ರಂಗಶಂಕರದ ಸ್ವಜನಪಕ್ಷಪಾತ ಕುರಿತಂತೆ ಬೈರೇಗೌಡರು ರಂಗಶಂಕರದ ರಂಗವೇದಿಕೆ ವ್ಯವಸ್ಥಾಪಕ ರಟ್ಟೇಹಳ್ಳಿಯ ರಟ್ಟೆ ಹಿಡಿದು ಯಾಕೆ ಕೆಲವೇ ತಂಡಗಳಿಗೆ ಮಾತ್ರ ರಂಗಶಂಕರದಲ್ಲಿ ನಾಟಕ ಮಾಡಲು ಅವಕಾಶ ಕೊಡ್ತಿದ್ದೀರಿ? ನಾವೇನು ನಾಟಕ ಮಾಡಿಸೋದಿಲ್ಲವಾ? ನಮ್ಮ ನಾಟಕಕ್ಕೆ ಯಾಕೆ ಅವಕಾಶ ಕೊಡೋದಿಲ್ಲ? ಯಾಕೆ ತಾರತಮ್ಯ?.. ಎಂದೆಲ್ಲಾ ಸಿಟ್ಟಿನಿಂದಲೆ ಕೇಳಿದ್ದಾರೆ. ವಿಷಯದ ಕುರಿತು ಇಬ್ಬರಿಗೂ ಒಂದಿಷ್ಟು ಜಗಳವೂ ಆಗಿದೆ. ಬೈರೇಗೌಡರು ಪ್ರಕರಣವನ್ನು ಮರೆತಿದ್ದರೂ ಮುದ್ದಣ್ಣ ಮಾತ್ರ ಮನದಲ್ಲೇ ಮನಸ್ತಾಪ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಲು ಕಾಯುತ್ತಲೇ ಇದ್ದ. ಬೈರೇಗೌಡರಿಗೆ ಗುಡಿಹಳ್ಳಿ ಪ್ರಶಸ್ತಿ ಕೊಡಿಸುವ ವಿಷಯ ಹಾಗೂ ಗೌಡರ ಮೇಲೆ ಕ್ರಿಮಿನಲ್ ಕೇಸ್ ಇರುವ ವಿಷಯ ತಿಳಿಯುತ್ತಲೇ ಮುದ್ದಣ್ಣ ಇದ್ದಕ್ಕಿದ್ದಂತೆ ಕ್ರಿಯಾಶೀಲನಾದ. ಇತರೆಲ್ಲಾ ಸದಸ್ಯರಿಗೂ ವಿಷಯ ತಿಳಿಸಿದ. ಪ್ರಶಸ್ತಿ ಆಯ್ಕೆಯ ಸಭೆಗೆ ಮೊದಲೇ ಸದಸ್ಯರೆಲ್ಲರ ಬೆಂಬಲ ಪಡೆದ. ಯಾವ ಹಿನ್ನೆಲೆ ತಿಳಿಯದ ಅಕಾಡೆಮಿಯ ಸದಸ್ಯ ಹಾಲ್ಕುರಿಕೆ ಶಿವಶಂಕರನನ್ನು ಗುಡಿಹಳ್ಳಿ ವಿರುದ್ಧ ಎತ್ತಿಕಟ್ಟಿದ. ಕ್ರಿಮಿನಲ್ ಒಬ್ಬರಿಗೆ ಪ್ರಶಸ್ತಿ ಕೊಟ್ಟರೆ ನಮಗೆಲ್ಲಾ ಕೆಟ್ಟ ಹೆಸರು ಬರುತ್ತದೆಂದು... ಎಲ್ಲರಿಗೂ ಮನವರಿಕೆ ಮಾಡಿದ. ಎಲ್ಲಾ ಸದಸ್ಯರಿಗೂ ಇದು ಸರಿ ಎನ್ನಿಸಿತು. ಇದರಿಂದಾಗಿ ಗುಡಿಹಳ್ಳಿ ಬೈರೇಗೌಡರಿಗೆ ಪ್ರಶಸ್ತಿ ಕೊಡಬೇಕು ಎಂದಾಗ ಎಲ್ಲಾ ಸದಸ್ಯರೂ ಹಿಂದೆ ಮುಂದೆ ಆಲೋಚನೆ ಮಾಡದೇ ತಿರುಗಿ ಬಿದ್ದರು.

ಮುದ್ದಣ್ಣನಿಗೆ ಕೇವಲ ಬೈರೇಗೌಡರು ಮಾತ್ರ ಟಾರ್ಗೆಟ್ ಆಗಿರಲಿಲ್ಲ. ಜೊತೆಗೆ ಗುಡಿಹಳ್ಳಿ ನಾಗರಾಜರೂ ಸಹಿತ ಇನ್ನೊಂದು ಟಾರ್ಗೆಟ್ ಆಗಿದ್ದರು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ಪ್ಲಾನ್ ಮುದ್ದಣ್ಣನದ್ದಾಗಿತ್ತು. ಇಲ್ಲೊಂದು ಪ್ರಶ್ನೆ ಕಾಡುತ್ತದೆ. ಗುಡಿಹಳ್ಳಿಯವರನ್ನು ಕುಲಬಾಂಧವನೆಂದು ಬೆಂಬಲಿಸಿ ಕೋಆಪ್ಟ್ ಮಾಡಿಕೊಳ್ಳಲು ಜಾತಿ ರಾಜಕೀಯ ಮಾಡಿದ್ದ ಇದೇ ಮುದ್ದಣ್ಣ ಈಗ ಗುಡಿಹಳ್ಳಿಯವರನ್ನು ಯಾಕೆ ವಿರೋಧಿಸಿದರು? ರಂಗಶಂಕರವನ್ನು ಹೇಗೆ ತನ್ನ ಕಬ್ಜಾದಲ್ಲಿಟ್ಟುಕೊಂಡು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದಾನೋ ಹಾಗೆಯೇ ನಾಟಕ ಅಕಾಡೆಮಿಯನ್ನೂ ಸಹ ತನ್ನ ಅಂಕೆಯಲ್ಲಿಟ್ಟುಕೊಳ್ಳಬೇಕು ಎಂದು ಮುದ್ದಣ್ಣ ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಬಂದಿರುವುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಇನ್ನೂ ಅಕಾಡೆಮಿಯ ಅಧೀಕೃತ ಮೊದಲ ಸಭೆ ಆಗುವ ಮುಂಚೆಯೇ ಬೆಂಗಳೂರು ಮೂಲದ ಅಕಾಡೆಮಿಗೆ ಆಯ್ಕೆಗೊಂಡ ಸದಸ್ಯರನ್ನು ಸೇರಿಸಿ ಅನೌಪಚಾರಿಕ ಅನಧೀಕೃತ ಸಭೆ ನಡೆಸಿ ಅಕಾಡೆಮಿ ಹೇಗಿರಬೇಕು? ಎಂದು ತನ್ನ ಯೋಜನೆಯನ್ನು ಮುದ್ದಣ್ಣ ರೂಪಿಸಿದ್ದರು. ಆದರೆ ಬರುಬರುತ್ತಾ ಅಕಾಡೆಮಿ ಸದಸ್ಯರಲ್ಲಿ ಗುಡಿಹಳ್ಳಿ ಪ್ರಭಾವಿಯಾಗತೊಡಗಿದರು. ಯಾಕೆಂದರೆ ಅಕಾಡೆಮಿಯ ಅಧ್ಯಕ್ಷರಿಗೆ ಗುಡಿಹಳ್ಳಿ ತುಂಬಾ ಹತ್ತಿರವಾಗಿದ್ದರಿಂದ ಹಾಗೂ ಶೇಖ ಮಾಸ್ತರ್ ಎಲ್ಲಾ ನಿರ್ಧಾರಗಳನ್ನು ಗುಡಿಹಳ್ಳಿಯವರ ಸಲಹೆ ಮೇರೆಗೆ ತೆಗೆದುಕೊಳ್ಳುತ್ತಿದ್ದುದರಿಂದ ಮುದ್ದಣ್ಣನಿಗೆ ಭ್ರಮನಿರಸವಾಗತೊಡಗಿತು. ಗುಡಿಹಳ್ಳಿಗೆ ತಪರಾಕಿ ಕೊಡುವ ಒಂದು ಅವಕಾಶ ಈಗ ಸಿಕ್ಕಿತ್ತು. ಅದನ್ನು ಬಳಸಿಕೊಳ್ಳಲು ಇತರ ಸದಸ್ಯರನ್ನು ದಾಳವಾಗಿಸಿಕೊಳ್ಳುವ ಹಿಡನ್ ರೂಪರೇಷೆಯನ್ನು ಮುದ್ದಣ್ಣ ಕಾರ್ಯಗತಗೊಳಿಸಿದರುಮುದ್ದಣ್ಣ ಹಾಗೂ ಅವನ ಸಮರ್ಥಕ ಸದಸ್ಯರು ಅದೆಷ್ಟೇ ಬೈರೇಗೌಡರಿಗೆ ಪ್ರಶಸ್ತಿ ಕೊಡಕೂಡದು ಎಂದು ವಿರೋಧಿಸಿದರೂ ಗುಡಿಹಳ್ಳಿ ತಮ್ಮ ಹಠ ಬಿಡದೇ ಅಧ್ಯಕ್ಷರ ಮೇಲೆ ಒತ್ತಡ ತಂದು ಗೌಡರ ಹೆಸರನ್ನು ಸರ್ವ ಸದಸ್ಯರ ಸಭೆಯಲ್ಲಿ ಅನುಮೋದಿಸಿದರು. ತನ್ನ ಪ್ಲಾನ್ ಪ್ಲಾಪ್ ಆಗಿದ್ದರಿಂದ ವಿಚಲಿತನಾದ ಮುದ್ದಣ್ಣ ದಿನಪತ್ರಿಕೆಯ ವರದಿಗಾರನಿಗೆ ಎಲ್ಲಾ ವಿಷಯವನ್ನು ಹೇಳಿ ಮರುದಿನದ ಪತ್ರಿಕೆಯಲ್ಲಿ ಬರುವ ಹಾಗೆ ನೋಡಿಕೊಂಡರು ಎನ್ನುವುದು ಸಧ್ಯ ಕಲಾಕ್ಷೇತ್ರದ ಪರಿಸರದಲ್ಲಿ ಹರಿದಾಡುವ ಬಿಸಿ ಬಿಸಿ ಸುದ್ದಿಯಾಗಿದೆ. ಮುದ್ದಣ್ಣನ ತಂತ್ರಗಾರಿಕೆ ಪಕ್ಕಾ ವರ್ಕಔಟ್ ಆಯಿತು. ವಿಜಯಕರ್ನಾಟಕದಲ್ಲಿ ಸುದ್ದಿ ಪ್ರಕಟಗೊಂಡಿತು. ಅದನ್ನು ಓದಿದ ಶೇಖ ಮಾಸ್ತರ್ ಶೇಕ್ ಆದರು. ಗುಡಿಹಳ್ಳಿ ಕಕ್ಕಾಬಿಕ್ಕಿಯಾದರು. ತರಾತುರಿಯಲ್ಲಿ ಅನೌಪಚಾರಿಕ ಸಭೆ ಕರೆದರು. ಬೈರೇಗೌಡರ ಹೆಸರನ್ನು ಬರಕಾಸ್ತು ಮಾಡಿ ಗುಡಿಹಳ್ಳಿಯವರು ಸೂಚಿಸಿದ ಇನ್ನೊಬ್ಬ ಮಹಿಳೆಯ ಹೆಸರನ್ನು ಪ್ರಶಸ್ತಿ ಪಟ್ಟಿಯಲ್ಲಿ ಸೇರಿಸಿ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಯಿತು. ಕೊನೆಗೂ ಮುದ್ದಣ್ಣನ ಪ್ಲಾನ್ ಸಕ್ಸಸ್ ಆಗಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಾಗಿತ್ತು.

ಬೈರೇಗೌಡರ ಮೇಲೆ ಕ್ರಿಮಿನಲ್ ಆರೋಪ ಇದೆ ಎಂದು ಅವರ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ಹೊರಹಾಕಿ ಸದಸ್ಯರೆಲ್ಲಾ ಪವಿತ್ರರಾಗಿ ನಾಟಕ ಅಕಾಡೆಮಿಯನ್ನು ಪಾವನಮಾಡಿದರು ಎಂದುಕೊಳ್ಳೋಣ. ಆದರೆ ಎಲ್ಲಾ ಪವಿತ್ರಾತ್ಮಗಳು ಸೇರಿ ಇನ್ನೊಬ್ಬ ಶಿಕ್ಷಿತ ಕ್ರಿಮಿನಲ್ ಒಬ್ಬನಿಗೆ ಪ್ರಶಸ್ತಿಯನ್ನು ಕೊಟ್ಟಿದ್ದನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಸಂಘಟಕ ಎಂದು ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಪಡೆದ ವ್ಯಕ್ತಿಗೆ ಕೆಲವು ವರ್ಷಗಳ ಹಿಂದೆ ಸರಕಾರಿ ಚಾನೆಲ್ ದೂರದರ್ಶನವು ಟೆಲಿಫಿಲಂ ಮಾಡಲು ಗುತ್ತಿಗೆ ಕೊಟ್ಟಿತ್ತು. ಟೆಲಿಫಿಲಂ ಮಾಡಿಕೊಟ್ಟು ಅದಕ್ಕೆ ಹಣವನ್ನು ಪಡೆದಾಗಿತ್ತು. ಒಂದು ಸಲ ಹಣ ಪಡೆದ ಮೇಲೆ ಟಿಲಿಫಿಲಂಗೆ ಬಳಸಲಾದ ವಿಡಿಯೋ ಆಡಿಯೋ ಸಮೇತ ಎಲ್ಲಾ ಪೂಟೇಜ್ಗಳು ದೂರದರ್ಶನದ ಸ್ವತ್ತಾಗಿರುತ್ತವೆ. ಅದನ್ನು ಯಾವುದೇ ರೀತಿ ಬೇರೆ ಕಡೆಗೆ ಬಳಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ವ್ಯಕ್ತಿ ಟೆಲಿಫಿಲಂಗಾಗಿ ಚಿತ್ರೀಕರಿಸಿದ ತುಣುಕುಗಳನ್ನ ಭಿನ್ನವಾಗಿ ಜೋಡಿಸಿ ಒಂದು ಕಲಾತ್ಮಕ ಸಿನೆಮಾ ನಿರ್ಮಾಣ ಮಾಡಿದ್ದು ಅದಕ್ಕೆ ಪ್ರಶಸ್ತಿಯೂ ಬರುತ್ತದೆ. ಸರಕಾರದಿಂದ ಸಬ್ಸಿಡಿ ಸಹಿತ ಸಿಗುತ್ತದೆ. ಇದು ದೂರದರ್ಶನಕ್ಕೆ ಗೊತ್ತಾಗಿ ಕೇಂದ್ರ ಸರಕಾರ ಸಿಬಿಐ ತನಿಖೆಗೆ ಆದೇಶಿಸುತ್ತದೆ.   ಕ್ರಿಮಿನಲ್ ಕೇಸ್ ಕೂಡಾ ಬುಕ್ ಆಗುತ್ತದೆ. ತನಿಖೆಯಲ್ಲಿ ಅಪರಾಧ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಯೂ ಆಗುತ್ತದೆ. ಎಂದೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳದ ಇಂತಹ ವ್ಯಕ್ತಿಯನ್ನು ರಂಗ ಸಂಘಟಕ ಎಂದು ಗುರುತಿಸಿ ನಾಟಕ ಅಕಾಡೆಮಿಯು ಪ್ರಶಸ್ತಿಯನ್ನು ಘೋಷಿಸಿದೆ. ಬೈರೇಗೌಡರು ಕ್ರಿಮಿನಲ್ ಆರೋಪಿ ಎಂದು ಪತ್ತೆ ಹಚ್ಚಿ ವಿರೋಧಿಸಿ ಅವರ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ತೆಗೆದುಹಾಕಿಸಿದವರು ಇನ್ನೊಬ್ಬನ ಕ್ರಿಮಿನಲ್ ಹಿನ್ನೆಲೆ ಕುರಿತು ಯಾಕೆ ತನಿಖೆ ಮಾಡಲಿಲ್ಲ. ಯಾಕೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ? ಈಗ ಇನ್ನೂ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆಯೇ ಹೊರತು ಪ್ರಶಸ್ತಿ ಪ್ರಧಾನ ಮಾಡಲಾಗಿಲ್ಲ. ಈಗಲಾದರೂ ನಾಟಕ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರು ಎಚ್ಚೆತ್ತು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು, ಕೊಟ್ಟ ಪ್ರಶಸ್ತಿಯನ್ನು ವಾಪಸ್ ಪಡೆದು, ಹೋದ ಮಾನವನ್ನು ಕಾಪಾಡಿಕೊಳ್ಳುವುದು ಅಕಾಡೆಮಿಯ ಗೌರವವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಒಳ್ಳೆಯದು.

ಬೈರೇಗೌಡರ ಹೆಸರಿನ ಬದಲಾಗಿ ಗುಡಿಹಳ್ಳಿ ನಾಗರಾಜರವರು ಸೂಚಿಸಿದ ಪರ್ಯಾಯ ಹೆಸರು ಉಮಾರಾಣಿಯವರದು. ಉಮಾರಾಣಿ ವೃತ್ತಿ ಕಂಪನಿ ನಾಟಕದ ನಟಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಗುಡಿಹಳ್ಳಿಯವರಿಗೆ ಆತ್ಮೀಯರಾದವರು ಎನ್ನುವುದರಲ್ಲೂ ಯಾವುದೇ ಸಂದೇಹವಿಲ್ಲ. ಆದರೆ ನಾಟಕ ಅಕಾಡೆಮಿಯಲ್ಲಿ ಗುಡಿಹಳ್ಳಿ ಪ್ರತಿನಿಧಿಸುತ್ತಿರುವುದು ದಾವಣಗೆರೆ ಜಿಲ್ಲೆಯನ್ನು. ಉಮಾರಾಣಿ ಬಾಗಲಕೋಟೆ ಜಿಲ್ಲೆಯ ಇಲಕಲ್ ವಾಸಿಗಳು. ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ರಂಗಸಾಧಕರ ಹೆಸರನ್ನು ಗುರುತಿಸಿ ಪ್ರಶಸ್ತಿಗಾಗಿ ರೆಕಮೆಂಡ್ ಮಾಡುವುದು ಅಕಾಡೆಮಿಯ ಸದಸ್ಯರಾದವರ ಹಕ್ಕು ಮತ್ತು ಕರ್ತವ್ಯ. ಆದರೆ ತಮ್ಮ ವ್ಯಾಪ್ತಿಯನ್ನು ಮೀರಿ ತಮ್ಮ ಆತ್ಮೀಯರಾದವರಿಗೆ ಪ್ರಶಸ್ತಿ ಕೊಡಿಸಿರುವುದು ನೈತಿಕವಾಗಿ ಅದೆಷ್ಟು ಸರಿ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಾಟಕ ಅಕಾಡೆಮಿಯ ಸದಸ್ಯರಾಗಿ  ಕೊನೆಸಾಗರರವರಿದ್ದಾರೆಆದರೆ ಅವರ ರೆಕಮೆಂಡೇಶನ್ಗೆ ಯಾವುದೇ ಬೆಲೆಯಿಲ್ಲದಾಗಿದೆ2013 ವಾರ್ಷಿಕ ಪ್ರಶಸ್ತಿಗೆ ದಾವಣಗೆರೆಯಿಂದ ಯಾರೂ ಆಯ್ಕೆಯಾಗಿಲ್ಲ. ದಾವಣಗೆರೆ ಕೊಟಾವನ್ನು ಗುಡಿಹಳ್ಳಿಯವರ ಒತ್ತಾಸೆಯಂತೆ ಬಾಗಲಕೋಟೆಗೆ ವರ್ಗಾಯಿಸಲಾಗಿದೆ. ಇದು ದಾವಣಗೆರೆ ಜಿಲ್ಲೆಯ ಅರ್ಹ ರಂಗಕರ್ಮಿಯೊಬ್ಬರಿಗೆ ಮಾಡಿದ ಅನ್ಯಾಯವಾಗಿದೆ. ಇದರಿಂದಾಗಿ ಗುಡಿಹಳ್ಳಿರವರು ಏಕಕಾಲದಲ್ಲಿ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತ ಮಾಡಿದ್ದಾರೆ. ಹಿರಿಯರಾದವರು ಕಿರಿಯರಿಗೆ ಮಾದರಿಯಾಗಿರಬೇಕು. ಅದು ಬಿಟ್ಟು ತಾವೇ ರೀತಿ ತಪ್ಪು ನಿರ್ಧಾರಗಳನ್ನು ಅನುಸರಿಸಿದರೆ ಅದು ಬೇರೆಯವರಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಗುಡಿಹಳ್ಳಿಯಂತಹ ಹಿರಿಯ ಪತ್ರಕರ್ತರು ಮಾಗಬೇಕು, ರಂಗಭೂಮಿ ಅವರಿಗೆ ಎಲ್ಲಾ ರೀತಿಯ ಐಡೆಂಟಿಟಿ ಹಾಗೂ ಗೌರವವನ್ನು ಕೊಟ್ಟಿದೆ. ಅದಕ್ಕೆ ಬದಲಾಗಿ ಅವರು ರಂಗಭೂಮಿಯ ಬೆಳವಣಿಗೆಗೆ ನೈತಿಕ ಮಾರ್ಗದಲ್ಲಿ ನಡೆದು ಮಾದರಿಯಾಗಬೇಕಾಗಿದೆ.


ನಾಟಕ ಅಕಾಡೆಮಿ ಸಲ ಇನ್ನೊಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ. ಒಬ್ಬರೇ ವ್ಯಕ್ತಿಯ ಎರಡು ರಂಗಕೃತಿಗಳಿಗೆ ಅನುಕ್ರಮವಾಗಿ 2012 ಮತ್ತು 2013 ಸಾಲಿನ ರಂಗಪುಸ್ತಕ ಪ್ರಶಸ್ತಿಯನ್ನು ಘೋಷಿಸಿದೆ. ಪತ್ರಕರ್ತ ಜಿ.ಎನ್.ಮೋಹನ್ ರವರ ರಂಗಕಿನ್ನರಿ ಹಾಗೂ ಥರ್ಡ ಬೆಲ್ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಮೊಹನ್ರವರ ಕೃತಿಗಳು ಉತ್ತಮವಾಗಿರಬಹುದು, ಅವರ ಕೃತಿಗಳಿಗೆ ಆಯ್ಕೆಗಾರರು ಹೆಚ್ಚು ಮಾರ್ಕ್ಸಗಳನ್ನೂ ಕೊಟ್ಟಿರಬಹುದು. ಆದರೆ ಒಬ್ಬರೇ ವ್ಯಕ್ತಿಯ ಪುಸ್ತಕಗಳಿಗೆ ಎರಡು ವರ್ಷ ನಿರಂತರವಾಗಿ ಪ್ರಶಸ್ತಿ ಕೊಡುವುದು ನೈತಿಕವಾಗಿ ಸರಿಯಲ್ಲ. ಇನ್ನೊಬ್ಬ ರಂಗಬರಹಗಾರನಿಗೆ ಅನ್ಯಾಯ ಮಾಡಿದಂತೆ. ಪುಸ್ತಕ ಪ್ರಶಸ್ತಿ ಕೊಡುವುದು ರಂಗಭೂಮಿ ಕುರಿತು ಬರವಣಿಗೆಯನ್ನು ಪ್ರೇರೇಪಿಸಲು. ಮಾಡಲು. ಅಂತಹ ಬರಹಗಾರನನ್ನು ಗುರುತಿಸಿ ಸನ್ಮಾನಿಸಲು. ಹಾಗೂ ಇನ್ನೂ ಹೆಚ್ಚು ಹೆಚ್ಚು ಮೌಲಿಕ ಕೃತಿಗಳು ರಂಗಭೂಮಿಯಲ್ಲಿ ಬರಲಿ ಎನ್ನುವ ಆಶಯವನ್ನು ಪ್ರಮೋಟ್ ಮಾಡಲು. ಆದರೆ ಒಬ್ಬ ವ್ಯಕ್ತಿ ಮಾತ್ರ ಇದಕ್ಕೆ ಸಮರ್ಥ ಎಂದು ಕೊಂಡರೆ ಇನ್ನೊಬ್ಬರನ್ನು ಗುರುತಿಸುವುದ್ಯಾವಾಗ? ಬೇರೆಯವರನ್ನು ಪ್ರೋತ್ಸಾಹಿಸುವುದ್ಯಾವಾಗ? ಈಗಾಗಲೇ ಜಿ.ಎನ್.ಮೋಹನ್ ಬಲು ಎತ್ತರಕ್ಕೆ ಬೆಳೆದಿದ್ದಾರೆ. ಉತ್ತಮ ಬರಹಗಾರರಾಗಿಯೂ ಹೆಸರಾಗಿದ್ದಾರೆ. ಅವರ ಒಂದು ಕೃತಿಗೆ ಪ್ರಶಸ್ತಿಯನ್ನು ಕೊಟ್ಟು ಇನ್ನೊಬ್ಬರ ಇನ್ನೊಂದು ಕೃತಿಗೆ ಪ್ರಶಸ್ತಿ ಕೊಟ್ಟಿದ್ದರೆ ಇನ್ನೊಬ್ಬ ಬರಹಗಾರನನ್ನು ಗುರುತಿಸಿದಂತೆ ಹಾಗೂ ಗೌರವಿಸಿದಂತೆ ಆಗುತ್ತಿತ್ತು. ಆದರೆ ಎಲ್ಲಾ ಸೂಕ್ಷ್ಮತೆಗಳೂ ನಾಟಕ ಅಕಾಡೆಮಿಯವರಿಗೆ ಅರ್ಥವಾಗುವುದೂ ಇಲ್ಲ. ಯಾಕೆ ಹೀಗೆ? ಎಂದು ಪ್ರಶ್ನಿಸಿದರೆ, ಬೈಲಾದಲ್ಲಿ ಒಬ್ಬರ ಕೃತಿಗಳಿಗೆ ಎರಡು ಪ್ರಶಸ್ತಿ ಕೊಡಬಾರದಂದು ಏನೂ ಹೇಳಿಲ್ಲವಲ್ಲಾ ಎನ್ನುವ ವಿತಂಡವಾದವನ್ನು ಮಂಡಿಸುತ್ತಾರೆ. ಅದೇ ಬೈಲಾದಲ್ಲಿ ಕ್ರಿಮಿನಲ್ ಆರೋಪಿಗೆ ಪ್ರಶಸ್ತಿಯನ್ನು ನಿರಾಕರಿಸಬೇಕು ಎಂದು ಎಲ್ಲೂ
ಹೇಳಿಲ್ಲವಲ್ಲಾ. ಆದರೂ ಯಾಕೆ ಬೈರೇಗೌಡರ ಆಯ್ಕೆಯನ್ನು ಅನೂರ್ಜಿತಗೊಳಿಸಿದರು. ಬೈಲಾ ಅನ್ನುವುದು ತಮಗೆ ಬೇಕಾದಾಗ ಬಳಸುವ ಹಾಗೂ ಬೇಡವಾದಾಗ ಬಿಡುವ ಅನುಕೂಲಸಿಂಧು ಆಗಿಬಿಟ್ಟಿದೆ. ಏನೇ ಆಗಲಿ ಒಬ್ಬರೇ ವ್ಯಕ್ತಿಯ ಎರಡು ಕೃತಿಗಳಿಗೆ ಪುಸ್ತಕ ಪ್ರಶಸ್ತಿ ಘೋಷಿಸಿದ್ದು ತಪ್ಪು. ಹಾಗೂ ಜಿ.ಎನ್.ಮೋಹನ್ರವರಿಗೆ ರಂಗಪ್ರೀತಿ ಇದ್ದು ಇನ್ನೊಬ್ಬ ಬರಹಗಾರನ ಕೃತಿಯೂ ಸಹ ಬೆಳಕಿಗೆ ಬರಲಿ ಎನ್ನುವ ಆಶಯವಿದ್ದರೆ ಒಂದು ಕೃತಿಯ ಪ್ರಶಸ್ತಿಯನ್ನು ಅಕಾಡೆಮಿಗೆ ಮರಳಿಸಿ ಉತ್ತಮ ಮಾದರಿಯನ್ನು ಹಾಕಿ ಕೊಟ್ಟು ಹೃದಯ ಶ್ರೀಮಂತಿಕೆ ಮೆರೆದರೆ ಅಕಾಡೆಮಿಯ ಇತಿಹಾಸದಲ್ಲಿ ಹೊಸ ಮಾದರಿಯನ್ನು ಸೃಷ್ಟಿಸಿದಂತಾಗುತ್ತದೆ.


ನಾಟಕ ಅಕಾಡೆಮಿಯ ಎರಡು ವರ್ಷಗಳ ಪ್ರಶಸ್ತಿಗೆ ಆಯ್ಕೆ ಆದವರನ್ನು ಗಮನಿಸಿದರೆ ಕೆಲವು ಸಿಹಿ ಹಾಗೂ ಇನ್ನು ಹಲವು ಕಹಿ ಸಂಗತಿಗಳು ಹೊರಬರುತ್ತವೆ. ಪ್ರತಿಯೊಬ್ಬರ ಹಿನ್ನೆಲೆಯನ್ನು ಪರಿಶೀಲಿಸಿ ಇವರು ಯೋಗ್ಯರು ಇವರು ಅಯೋಗ್ಯರು ಎಂದು ಹೇಳುವುದು ಲೇಖನದ ಉದ್ದೇಶವಲ್ಲ. ಆದರೆ ಅಕಾಡೆಮಿಯಿಂದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವೊಂದು ಗಮನಾರ್ಹ ನ್ಯೂನ್ಯತೆಗಳಾಗಿದ್ದು ಅವುಗಳ ಬಗ್ಗೆ ರಂಗಕರ್ಮಿಗಳ ಗಮನ ಸೆಳೆಯುವುದೇ ಲೇಖನದ ಆಶಯವಾಗಿದೆ.

ಅಧ್ಯಕ್ಷರು ಹಾಗೂ ಪ್ರಭಾವಿಯಾದ ಸದಸ್ಯ ಇಬ್ಬರೂ ವೃತ್ತಿ ರಂಗಭೂಮಿಯ ಒಲವುಳ್ಳವರಾಗಿದ್ದರಿಂದ ಬಹುತೇಕ ಪ್ರಶಸ್ತಿಗಳನ್ನು ವೃತ್ತಿ ರಂಗಭೂಮಿಯವರಿಗೆ ಕೊಡಮಾಡಿದ್ದು ಮಲತಾಯಿ ಧೋರಣೆಯನ್ನು ತೋರಿದಂತಿದೆ. ಅಧ್ಯಕ್ಷನಾದವರು ರಂಗಭೂಮಿಯ ಯಾವುದೇ ವಲಯದಿಂದ ಬಂದಿದ್ದರೂ ಅಧ್ಯಕ್ಷರಾದ ಮೇಲೆ ರಂಗಭೂಮಿಯ ಸಮಗ್ರತೆಗೆ ಬದ್ದನಾಗಿರಬೇಕು. ಜಾನಪದ, ವೃತ್ತಿ ಹಾಗು ಆಧುನಿಕ ರಂಗಭೂಮಿಗೆ ಕೊಡುಗೆ ಸಲ್ಲಿಸಿದ ಅರ್ಹರನ್ನು ಸಮನಾಗಿ ಗುರುತಿಸಿ ಪ್ರಶಸ್ತಿ ಕೊಟ್ಟು ಗೌರವಿಸಬೇಕು. ಆದರೆ ಸಲ ವೃತ್ತಿ ರಂಗಭೂಮಿಯವರಿಗೆ ಮುಕ್ಕಾಲು ಭಾಗ ಪ್ರಶಸ್ತಿಗಳನ್ನು ಕೊಟ್ಟಿದ್ದು ಅಸಮತೋಲನಕ್ಕೆ ಕಾರಣವಾಗಿದೆ. ಜಾನಪದ ಹಾಗೂ ಆಧುನಿಕ ರಂಗಭೂಮಿಯವರಿಗೆ ದೊರೆಯಬಹುದಾದಷ್ಟು ಪ್ರಶಸ್ತಿಗಳು ದೊರೆತಿಲ್ಲ ಎನ್ನುವ ಅಸಮಧಾನವೂ ಇದೆ.
 
ಸಲದ ಪ್ರಶಸ್ತಿ ಆಯ್ಕೆಯಲ್ಲಿ ಒಂದು ವಿಶೇಷತೆಯೂ ಇದೆ. ಅದೆಂದರೆ ಮಹಿಳೆಯರಿಗೆ ಹೆಚ್ಚು ಪ್ರಶಸ್ತಿಗಳನ್ನು ಕೊಟ್ಟಿರುವುದು ಹಾಗೂ ನಾಟಕದ ನಿರ್ಮಿತಿಯ ಎಲ್ಲಾ ವಿಭಾಗಗಳನ್ನೂ ಗುರುತಿಸಿರುವುದು. ಆದರೆ ಹಾಗೆ ಅಂಕಿ ಸಂಖ್ಯೆಗಳಿಗೊಸ್ಕರ ಗುರುತಿಸಿದ್ದಾರಾದರೂ ಅದರಲ್ಲೂ ಹಲವಾರು ನ್ಯೂನ್ಯತೆಗಳಿವೆ. ಧಾರವಾಡದ ಗ್ರಾಮೀಣ ಭಾಗದ ಹವ್ಯಾಸಿ ನಟನನ್ನು ನಿರ್ದೇಶಕ ಎಂದು ಗುರುತಿಸಿರುವುದು. ರಂಗಸಂಘಟನೆ ಮಾಡದವನನ್ನು ಸಂಘಟಕ ಎಂದು ಕರೆದು ಪ್ರಶಸ್ತಿ ಕೊಟ್ಟಿರುವುದು. ಇಂತಹ ಹಲವಾರು ತಪ್ಪುಗಳನ್ನು ಅಕಾಡೆಮಿ ಮಾಡಿದೆ. ಮೂಲಭೂತವಾಗಿ ನಾಟಕ ಅಕಾಡೆಮಿಯ ಅಧ್ಯಕ್ಷರಿಗೆ ಸಮಗ್ರ ಕನ್ನಡ ರಂಗಭೂಮಿಯ ಕುರಿತು ಅರಿವಿಲ್ಲ. ಅರಿವಿರಲೆಬೇಕೆಂದೇನು ಖಡ್ಡಾಯವಿಲ್ಲ. ಪ್ರಶಸ್ತಿ ಆಯ್ಕೆಗೆ ಹೆಸರುಗಳನ್ನು ಸೂಚಿಸಲು ಸದಸ್ಯರಿಗೆ ತಿಳಿಸಿ ಹಾಗೆ ಸೂಚಿಸಿದವರ ಕುರಿತು ಸಮಗ್ರ ಮಾಹಿತಿಗಳನ್ನು ಅಧ್ಯಕ್ಷರಾದವರು ತರಿಸಿಕೊಂಡು ಪರಾಂಬರಿಸಬೇಕು. ಸದಸ್ಯರು ತಯಾರಿಸಿದ್ದನ್ನು ಮಾತ್ರ ಸಂಪೂರ್ಣ ನಂಬದೇ ಬೇರೆ ಮೂಲಗಳಿಂದ ವಿವರಗಳನ್ನು ಕನ್ಪರಂ ಮಾಡಿಕೊಳ್ಳಬೇಕು. ಇಂತಹ ಆಲೋಚನೆ ಹಾಗೂ ವಿವೇಚನೆಯನ್ನೂ ಈಗಿನ ಅಧ್ಯಕ್ಷ ಶೇಖ ಮಾಸ್ತರಿಂದ ಬಯಸುವುದು ಸಾಧ್ಯವಿಲ್ಲ. ಹೀಗಾಗಿಯೇ ಎಲ್ಲಾ ಅವಘಡಗಳು ಸಾಧ್ಯವಾಗಿದ್ದು.

ಹೋಗಲಿ ಅಧ್ಯಕ್ಷರಿಗೆ ವಿವೇಚನೆ ಇಲ್ಲವೆಂದಮೇಲೆ ಗುಡಿಹಳ್ಳಿಯವರಂತಹ ಅನುಭವಸ್ತರಿಗೆ ಇರಬೇಕಾಗಿತ್ತು. ಅವರೇ ಮೊದಲು ಹಾದಿ ತಪ್ಪಿದಾಗ ಇನ್ನು ಬೇರೆ ಸದಸ್ಯರಿಂದ ಏನನ್ನು ಅಪೇಕ್ಷಿಸಲು ಸಾಧ್ಯ? ನಾಟಕ ಅಕಾಡೆಮಿ ಆರಂಭದಿಂದಲೇ ಹಾದಿ ತಪ್ಪುತ್ತಿದೆ. ಅದು ಸರಿದಾರಿಗೆ ಬರುವ ಯಾವುದೇ ಲಕ್ಷಣಗಳಿಲ್ಲ. ರಂಗಭೂಮಿಯ ಅರಿವಿದ್ದ ಬುದ್ಧಿಜೀವಿ ಸಾಹಿತಿಗಳಿಗೆ ಅಕಾಡೆಮಿಯ ಬಗ್ಗೆ ಭ್ರಮನಿರಸವಾಗಿದೆ. ರಂಗಕರ್ಮಿಗಳಂತೂ ಅಕಾಡೆಮಿ ಎಂಬುದೊಂದು ಇದೆ ಎನ್ನುವುದನ್ನೇ ಮರೆಯುವಷ್ಟು ಅಕಾಡೆಮಿಯನ್ನು ನಿರ್ಲಕ್ಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರು ಎಚ್ಚರಗೊಳ್ಳಬೇಕಿದೆ. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಚರ್ಚೆಯ ಮೂಲಕ ತಿಳಿದುಕೊಳ್ಳಬೇಕಿದೆ. ಉಳಿದ ಇನ್ನು ಎರಡು ವರ್ಷದ ಅಧಿಕಾರವಧಿಯಲ್ಲಿ  ಕನ್ನಡ ರಂಗಭೂಮಿಯ ಸಮಗ್ರ ಅಭಿವೃದ್ದಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಟಾನಕ್ಕೆ ತಂದರೆ ಅಕಾಡೆಮಿಗೆ ಗೌರವ. ಇಲ್ಲವಾದರೆ ನಾಟಕ ಅಕಾಡೆಮಿಯ ಇತಿಹಾಸದಲ್ಲೇ ಸಲದ ತಂಡ ನಿಷ್ಕ್ರೀಯ ನರಸತ್ತ ದುರ್ಬಲ ತಂಡವಾಗಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ರೀತಿ ಆಗದಿರಲೆಂಬುದು ರಂಗಕರ್ಮಿಗಳ ಆಶಯವಾಗಿದೆ

                                   -ಶಶಿಕಾಂತ ಯಡಹಳ್ಳಿ            
                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ