ಬುಧವಾರ, ನವೆಂಬರ್ 12, 2014

ವೈಚಾರಿಕ ರಂಗಪ್ರಯೋಗ “ಬುದ್ಧನೆಡೆಗೆ” :



 ಪ್ರಜ್ಞೆ ಮತ್ತು ಕರುಣೆ ಎಂಬ ಮಹಾ ಮಾನವತಾವಾದವನ್ನು ಮನುಕುಲಕ್ಕೆ ಬೋಧಿಸಿದವರು ಬೋಧಿಸತ್ವ ಗೌತಮ ಬುದ್ಧ. ಮನುಷ್ಯನ ದುರಾಸೆಗಳಿಂದುಂಟಾಗುವ ನೋವು ಸಂಕಟಗಳಿಂದ ಹೊರಬರಬೇಕಾದ ದಾರಿಯನ್ನು ತನ್ನ ಪಂಚಶೀಲಗಳು ಹಾಗೂ ಅಷ್ಟಾಂಗ ಮಾರ್ಗಗಳಿಂದ ತೋರಿಸಿದ ಮಹಾಗುರು ಬುದ್ಧ. ಮನುಕುಲದ ಬೆಳಕಾದ ಬುದ್ಧನ ಕುರಿತು ಕೆಲವಾರು ನಾಟಕಗಳು ಈಗಾಗಲೇ ಬಂದಿವೆ. ಬಹುತೇಕ ನಾಟಕಗಳಲ್ಲಿ ಸಾಂಪ್ರದಾಯಿಕ ಬುದ್ದ ಚರಿತೆಯನ್ನೇ ಹೇಳುವ ಪ್ರಯತ್ನ ಮಾಡಲಾಗಿದೆ. ಆದರೆ ಬುದ್ಧನೆಡೆಗೆ ನಾಟಕ ಮಾತ್ರ ಬುದ್ಧನ ಬದುಕು ಹಾಗೂ ಸಾಧನೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುತ್ತದೆ. ಬುದ್ಧನ ಕುರಿತಾಗಿ ಇರುವ ಮಿಥ್ಗಳನ್ನು ಒಡೆದು ಹಾಕಿ ತಾತ್ವಿಕ ತಳಹದಿಯ ಮೇಲೆ ನಾಟಕ ರೂಪದಲ್ಲಿ ಕಟ್ಟಿಕೊಡುವ ಒಂದು ಗಟ್ಟಿ ಪ್ರಯತ್ನ ಬುದ್ಧನೆಡೆಗೆ ನಾಟಕದಲ್ಲಿದೆ.

ಡಾ.ಅಂಬೇಡ್ಕರರು ಬರೆದ ಬುದ್ದನ ಕುರಿತ ಬುದ್ದ ಮತ್ತು ಆತನ ಧಮ್ಮ ಕೃತಿಯನ್ನಾಧರಿಸಿ ಡಾ...ಜವರಯ್ಯನವರು ಜಲ ಎನ್ನುವ ಹೆಸರಿನಲ್ಲಿ ನಾಟಕವನ್ನು ಬರೆದಿದ್ದು ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ  ಶಂಕರಯ್ಯ ಘಂಟಿಯವರು ನಿರ್ದೇಶಿಸಿದ್ದರು. ಈಗ ಡಾ.ಬಿ.ಆರ್.ಅಂಬೇಡ್ಕರ್ ಇದೇ ಕೃತಿಯನ್ನಾಧಿರಿಸಿದ ಬುದ್ಧನೆಡೆಗೆ ಎಂಬ ವಿಶಿಷ್ಟ ನಾಟಕವನ್ನು ರಂಗರೂಪಗೊಳಿಸಿ ಗಿರೀಶ್ ಮಾಚಳ್ಳಿಯವರು ನಿರ್ದೇಶಿಸಿದ್ದಾರೆ. ಮಂಡ್ಯ ಮೈಸೂರು ಭಾಗದ ಕೆಲವಾರು ಯುವಜನರನ್ನು ಸೇರಿಸಿ ತಮ್ಮ ಚಾರ್ವಾಕ ಟ್ರಸ್ಟ್ ಗೆ ನಾಟಕವನ್ನು ಮಾಚಳ್ಳಿ ಕಟ್ಟಿಕೊಟ್ಟಿದ್ದು, 2014, ಅಕ್ಟೋಬರ್ 30ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಬುದ್ಧನೆಡೆಗೆ ನಾಟಕವನ್ನು ಪ್ರದರ್ಶಿಸಿ ಬುದ್ಧಗುರುವಿನ ವಿಚಾರಗಳನ್ನು ವೈಚಾರಿಕ ದೃಷ್ಟಿಕೋನದಲ್ಲಿ ಪ್ರೇಕ್ಷಕರಿಗೆ ದರ್ಶನ ಮಾಡಿಸಲು ಪ್ರಯತ್ನಿಸಿದರು.

ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾದ ಡಾ.ಅಂಬೇಡ್ಕರವರು ವೈದಿಕಶಾಹಿ ಪ್ರಣೀತ ಹಿಂದೂಧರ್ಮದ ಅಸಮಾನತೆ ಹಾಗೂ ಶೋಷಣೆಯನ್ನು ವಿರೋಧಿಸಿ ಬೌದ್ಧ ಧರ್ಮವನ್ನು ಒಪ್ಪಿಕೊಂಡರು, ಬುದ್ಧನ ಮಾನವೀಯತಾವಾದವನ್ನು ಅಪ್ಪಿಕೊಂಡರು. ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಎರಡೂವರೆ ಸಾವಿರ ವರ್ಷಗಳ ನಿರಂತರ ಪಯಣದಲ್ಲಿ ಬೌದ್ಧ ಧರ್ಮವೂ ಸಹ ಅನೇಕ ಸ್ಥಿತ್ಯಂತರಕ್ಕೊಳಗಾಗಿ ಹಲವಾರು ವೈದಿಕಶಾಹಿ ಪ್ರಭಾವಿತ ಕರ್ಮಸಿದ್ದಾಂತ, ಭವಾವಳಿಗಳು, ಮೂರ್ತಿಪೂಜೆಗಳನ್ನು ಅಳವಡಿಸಿಕೊಂಡು ಕಲುಷಿತವಾಗಿದ್ದನ್ನು ತಮ್ಮ ವೈಚಾರಿಕ ನಿಷ್ಕರ್ಷಕ್ಕೆ ಅಂಬೇಡ್ಕರರು ಅಳವಡಿಸಿಕೊಂಡರು. ಬ್ರಾಹ್ಮಣಶಾಹಿಯನ್ನು ವಿರೋಧಿಸಿದ ಬುದ್ದನಿಗೆ ಪುರೋಹಿತಶಾಹಿಗಳು ತಮ್ಮ ಅವತಾರಗಳ ಕಲ್ಪನೆಯಲ್ಲಿ  ಸ್ಥಾನ ಕಲ್ಪಿಸಿ ಪೌರಾಣಿಕ ವ್ಯಕ್ತಿಯನ್ನಾಗಿ ಚಿತ್ರಿಸಿದ್ದನ್ನು ತಮ್ಮ ಅಧ್ಯಯನದಿಂದ ಕಂಡುಕೊಂಡ ಬಾಬಾಸಾಹೇಬರು ಬುದ್ದನನ್ನು ಹಾಗೂ ಆತನ ಧರ್ಮವನ್ನು ವೈಚಾರಿಕ ದೃಷ್ಟಿಕೋನದಲ್ಲಿ ಕಂಡುಕೊಂಡು ಬುದ್ಧ ಹಾಗೂ ಆತನ ಧಮ್ಮ ಕೃತಿಯನ್ನು ರಚಿಸಿದರು. ಹುಸಿಪೌರಾಣಿಕ ಪರಿಕಲ್ಪನೆಗಳ ಬಂಧನದಿಂದ ಬುದ್ಧನನ್ನು ಮುಕ್ತಗೊಳಿಸಿ ಆತನ ಚಾರಿತ್ರಿಕ ವ್ಯಕ್ತಿತ್ವವನ್ನು ಹಾಗೂ ಬೌದ್ಧ ತತ್ವಾದರ್ಶಗಳನ್ನು ಪುಸ್ತಕರೂಪದಲ್ಲಿ ದಾಖಲಿಸಿದರು. ಪುಸ್ತಕವನ್ನು ಆಧರಿಸಿ ಪ್ರಸ್ತುತಗೊಂಡ ಬುದ್ಧನೆಡೆಗೆ ನಾಟಕವು ಬುದ್ಧನ ಕುರಿತ ಕೆಲವಾರು ಕಥಾಕಥಿತ ಮಿಥ್ಗಳನ್ನು ಒಡೆದು ಹಾಕಿ ತಾರ್ಕಿಕ ತಳಹದಿಯಲಿ ಬುದ್ಧ ದರ್ಶನವನ್ನು ಮಾಡಿಸಲು ಪ್ರಯತ್ನಿಸುತ್ತದೆ.

ಇಡೀ ನಾಟಕ ಬುದ್ಧನ ಹುಟ್ಟಿನಿಂದ ಆರಂಭಗೊಂಡು ನಿರ್ವಾಣದವರೆಗೂ ಮುಂದುವರೆಯುತ್ತದೆ. ಬುದ್ಧನ ಬದುಕಿನ ಪ್ರಮುಖ ಘಟನೆಗಳನ್ನು ಬಿಡಿ ಬಿಡಿಯಾಗಿ ತೋರಿಸಲಾಗಿದೆ. ಶಾಖ್ಯ ರಾಜ ಶುಧ್ಧೋಧನನಿಗೆ ಹುಣ್ಣಿಮೆಯಂದು ಗಂಡು ಮಗು ಹುಟ್ಟಿದ್ದು, ಇದನ್ನು ದಿವ್ಯದೃಷ್ಟಿಯಿಂದ ಅರಿತ ಮುನಿ ಹಿಮಾಲಯದಿಂದ ಬಂದು ಹರಸಿ ಸಿದ್ದಾರ್ಥ ಎಂದು ಹೆಸರಿಸಿದ್ದು, ತಾಯಿ ತೀರಿಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದ ಸಿದ್ದಾರ್ಥ ದೊಡ್ಡವನಾಗಿದ್ದು. ಸಾಕ್ಯ ಸಂಘದ ದಂಡಾಧಿಕಾರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು. ನೀರಿನ ಹಂಚಿಕೆ ವಿವಾದದಲ್ಲಿ  ಯುದ್ಧ ಸನ್ನದ್ದತೆಯನ್ನು ವಿರೋಧಿಸಿದ ಸಿದ್ದಾರ್ಥನು ಗಡಿಪಾರು ಶಿಕ್ಷೆಗೊಳಗಾಗಿ ದೇಶಭ್ರಷ್ಟನಾಗಿ ಕಾಡುಪಾಲಾಗಿದ್ದು. ದೇಹದಂಡನೆ ಮಾಡಿ ಅದರ ನಿರರ್ಥಕತೆಯನ್ನು ಕಂಡುಕೊಂಡಿದ್ದು, ಜ್ಞಾನೋದಯವಾಗಿದ್ದು, ದೂಷಿಸಿ ದೂರವಾದ ಶಿಷ್ಯರನ್ನು ಒಲಿಸಿಕೊಂಡಿದ್ದು, ಗ್ರಾಮವೊಂದರ ಸೇನಾಧಿಕಾರಿಯನ್ನು ಬದಲಾಯಿಸಿದ್ದು, ಅಂಗುಲಿಮಾಲನನ್ನು ಪರಿವರ್ತನೆಗೊಳಿಸಿದ್ದು, ಅಮ್ರಪಾಲಿ ಎಂಬ ವೇಶ್ಯೆಗೆ ಸತ್ಯ ದರ್ಶನ ಮಾಡಿಸಿದ್ದು, ಕೊನೆಗೆ ತಂದೆ ಶುದ್ದೋಧನನನ್ನು ಮರಣಶೆಯ್ಯೆಯಲ್ಲಿದ್ದಾಗ ಬೇಟಿಯಾಗಿ ಉಪದೇಶಿಸಿದ್ದು. ಹಾಗೂ ಕೊಟ್ಟಕೊನೆಗೆ ವಿರಮಿಸಿದ್ದು ಮತ್ತು ನಡುನಡುವೆ ಬುದ್ಧ ತನ್ನ ವಿಚಾರಧಾರಗಳನ್ನು ಬೋಧಿಸಿದ್ದು.... ಇಷ್ಟೆಲ್ಲಾ ಘಟನೆಗಳನ್ನು ಒಂದರ ನಂತರ ಒಂದರಂತೆ ಬುದ್ಧನೆಡೆಗೆ ನಾಟಕ ಕಟ್ಟಿಕೊಡುತ್ತದೆ.

ನಾಟಕದ ವಿಶೇಷತೆ ಏನೆಂದರೆ, ರಾಜಕುವರ ಸಿದ್ದಾರ್ಥನ ಮನಪರಿವರ್ತನೆಯ ಹುಸಿ ಕಲ್ಪನೆಯನ್ನು ಒಡೆದು ಹಾಕಿದ್ದುರಾಜಕುಮಾರ ಸಿದ್ದಾರ್ಥನು ರೋಗಿ, ಮುದುಕ ಹಾಗೂ ಶವಗಳನ್ನು ಕಂಡು ಬದುಕಿನಲ್ಲಿ ಜಿಗುಪ್ಸೆ ಹೊಂದಿ ಹೆಂಡತಿ ಹಸಿಗೂಸು ಹಾಗೂ  ಹೆತ್ತವರನ್ನು  ತೊರೆದು ಬದುಕಿನ ಸತ್ಯವನ್ನರಿಯಲು ನಾಡು ಬಿಟ್ಟು ಕಾಡಿಗೆ ನಡುಮಧ್ಯರಾತ್ರಿ ತೆರಳಿದ ಎಂದು ಶತಮಾನಗಳಿಂದ ಬಹುಜನರನ್ನು ನಂಬಿಸಲಾಗಿದೆ. ಮಿಥ್ಯಾಪವಾದದಿಂದಾಗಿ ಬುದ್ಧನ ಮೇಲೆ ಹೆಂಡತಿ ಮಗುವನ್ನು ಬಿಟ್ಟು ಕಾಡಿಗೆ ಹೋದ ಪಲಾಯನವಾದಿ ಎನ್ನುವ ಆರೋಪ ಶತಮಾನಗಳಿಂದ ಉಳಿದು ಬೆಳೆದುಕೊಂಡು ಬಂದಿದೆ. ಹುಸಿ ಕಲ್ಪನೆಗೆ ಪರ್ಯಾಯವಾಗಿ ಇನ್ನೊಂದು ಹೊಸ ಪರಿಕಲ್ಪನೆಯನ್ನು ನಾಟಕ ಕಟ್ಟಿಕೊಡುತ್ತದೆ. ರಾಜಪ್ರಭುತ್ವದ ಬಹುಪರಾಕ್ ಸಂಸ್ಕೃತಿಯ ಜೊತೆಗೆ ಪ್ರಜಾಪ್ರಭುತ್ವವು ಸಾಕ್ಯ ರಾಜ್ಯದಲ್ಲಿತ್ತು. ರಾಜನ ಬದಲಾಗಿ ಸಾಕ್ಯ ಪ್ರಜಾಪ್ರತಿನಿಧಿ ಸಂಘವು ರಾಜ್ಯದ ಪ್ರಮುಖ ನಿರ್ಧಾರಗಳನ್ನು ನಿರ್ಣಯಿಸುತ್ತಿತ್ತು. ನೆರೆ ರಾಜ್ಯದೊಂದಿಗೆ ನದಿ ನೀರಿನ ಹಂಚಿಕೆ ವಿಷಯ ಇತ್ಯರ್ಥಕ್ಕೆ ಯುದ್ಧವೊಂದೇ ಅಂತಿಮ ಪರಿಹಾರ ಎಂದು ಸಾಕ್ಯ ಸಂಘ ಬಹುಮತದಿಂದ ನಿರ್ಣಯ ಕೈಗೊಳ್ಳುತ್ತದೆ. ಸಾಕ್ಯ ಸಂಘದ ದಂಡಾಧಿಕಾರಿಯಾದ ಯುವಕ ಸಿದ್ಧಾರ್ಥ ಯುದ್ದವನ್ನು ಅದರ ಭೀಕರ ದುಷ್ಪರಿಣಾಮಗಳ ಕಾರಣಕ್ಕೆ ವಿರೋಧಿಸುತ್ತಾನೆ. ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಲು ಕೇಳಿಕೊಳ್ಳುತ್ತಾನೆ. ಸಂಘದ ಬಹುಮತದ ನಿರ್ಣಯವನ್ನು ವಿರೋಧಿಸಿದ್ದಕ್ಕೆ ಹಾಗೂ ಪೂರ್ವ ಅನುಮತಿಯಿಲ್ಲದೇ ಸಭೆ ಕರೆದಿದ್ದಕ್ಕಾಗಿ ಸಾಕ್ಯ ಸಂಘವು ಸಂಘದ ದಂಡನಾಯಕನಿಗೇ ಮರಣದಂಡನೆ ಇಲ್ಲವೇ ಗಡೀಪಾರು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಹೆತ್ತವರಿಗೆ ತಿಳಿಸಿ ಹೆಂಡತಿಯ ಅನುಮತಿ ಪಡೆದು ಸಿದ್ದಾರ್ಥ ಎಲ್ಲವನ್ನು ತೊರೆದು ದೇಶ ತೊರೆಯುತ್ತಾನೆ.

ಒಂದು ಮಿಥ್ಯವನ್ನು ಬೆತ್ತಲುಗೊಳಿಸಲು ನಂಬಲಾರ್ಹ ಸತ್ಯದರ್ಶನದ ಅಗತ್ಯವಿದೆ. ಆದರೆ ಪ್ರಕರಣದಲ್ಲಿ ಅದ್ಯಾಕೋ ಒಂದಿಷ್ಟು ಗುಮಾನಿಗಳು ನೋಡುಗರನ್ನು ಕಾಡುತ್ತವೆ. ರಾಜಪ್ರಭುತ್ವ ಹಾಗೂ ಪ್ರಜಾಪ್ರಭುತ್ವ ಎರಡು ವಿರುದ್ಧ ದಿಕ್ಕುಗಳು. ಇವೆರಡೂ ಒಂದೇ ವ್ಯವಸ್ಥೆಯಲ್ಲಿ ಇರಲು ಸಾಧ್ಯವೇ? ಇತ್ತು ಎಂದುಕೊಳ್ಳೋಣ. ಆಗ ರಾಜನೆನ್ನುವವನು ಕೇವಲ ಹೆಸರಿಗೆ ಮಾತ್ರವೇ ರಾಜನಾಗಿರುತ್ತಾನಾ? ಸಾಕ್ಯ ಸಂಘದಲ್ಲಿ ಅವನಿಗೆ ಯಾವುದೇ ರೀತಿಯ ಪಾಲ್ಗೊಳ್ಳುವಿಕೆಗೆ ಅವಕಾಶವೇ ಇಲ್ಲವೆ? ರಾಜನ ಅಭಿಪ್ರಾಯವನ್ನೂ ಕೇಳದೇ, ರಾಜಕುಮಾರ ಸಂಘದ ನಿಯಮ ಮುರಿದನೆಂದು ಆರೋಪಿಸಿ ರಾಜನೊಂದಿಗೆ ಆತನ ಕುಟುಂಬವನ್ನೇ ಗಡಿಪಾರು ಮಾಡುವ ನಿರ್ಣಯ ತೆಗೆದುಕೊಳ್ಳುವುದು ಅದೆಷ್ಟು ಸಮರ್ಥನೀಯ? ಹೋಗಲಿ ಸಾಕ್ಯ ಸಂಘದ ಮುಖ್ಯಸ್ಥನಾದ ಸಿದ್ದಾರ್ಥನಿಗೆ ಸಭೆ ಕರೆಯಲೂ ಹಕ್ಕಿಲ್ಲವೇ? ದಂಡನಾಯಕನಾಗಿ ಸಭೆ ಕರೆದಿದ್ದವನಿಗೆ ಮರಣದಂಡನೆ ವಿಧಿಸುವ ಪ್ರಜಾಪ್ರತಿನಿಧಿ ಸಂಘ ಸರ್ವಾಧಿಕಾರಿ ಪ್ರಭುತ್ವಕ್ಕಿಂತಲೂ ಕ್ರೂರಿಯಾಗಿತ್ತಾ? ಭಿನ್ನಾಭಿಪ್ರಾಯವನ್ನು ದಮನ ಮಾಡುವ ವ್ಯವಸ್ಥೆಗೆ ಜನಪರ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೇ? ಹೀಗೆ ಹಲವಾರು ಸಂದೇಹಗಳನ್ನು ಮೂಡಿಸುವಲ್ಲಿ ನಾಟಕ ಸಫಲವಾಗಿದೆ. ಹೋಗಲಿ ಪ್ರಜಾಪ್ರತಿನಿಧಿ ಸಭೆ ರಾಜನನ್ನು ನಿಯಂತ್ರಿಸುತ್ತಿತ್ತು ಎಂದೇ ನಂಬೋಣ, ಆದರೆ ಇದಕ್ಕೆ ವಿರುದ್ಧವಾದದ್ದು ಇದೇ ನಾಟಕದಲ್ಲಿದೆ. ರಾಜ ಸಿದ್ದೋಧನ ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಯಾರನ್ನೂ ಕೇಳದೇ ತನ್ನ ರಾಜ್ಯಾಧಿಕಾರವನ್ನು ತನ್ನ ತಂಗಿಯ ಮಗ ಮಹಾನಾಮನಿಗೆ ವಹಿಸಿಕೊಡುತ್ತಾನೆ. ರಾಜ್ಯದ ರಾಜನ ಆಯ್ಕೆಯ ಪ್ರಮುಖ ವಿಷಯದಲ್ಲಿ ಸಾಕ್ಯ ಪ್ರಜಾಪ್ರತಿನಿಧಿ ಸಂಘದ ಅನುಮತಿ ಬೇಕಿರಲಿಲ್ಲವೇ? ಇಂತಹ ದ್ವಂದ್ವ ವಿಪರ್ಯಾಸಗಳಿಗೆ ನಾಟಕದಲ್ಲಿ ಸೂಕ್ತ ಸಮರ್ಥನೆಗಳನ್ನು ಒದಗಿಸಬೇಕಾಗಿತ್ತು. ಕಥಾಕಥಿತ ಪಾರಂಪರಿಕ ಮಿಥ್ನ್ನು ಸುಳ್ಳು ಎಂದು ಸಾಬೀತು ಪಡಿಸಿ ಸತ್ಯ ಏನೆಂದು ನಿರೂಪಿಸುವಲ್ಲಿ ನಿರ್ದೇಶಕ ವಿಫಲವಾಗಿರುವುದನ್ನು ಕಾಣಬಹುದಾಗಿದೆ. ಶತಮಾನಗಳ ಕಲ್ಪನೆಯನ್ನು ಒಡೆದುಹಾಕಿ ಮತ್ತೆ ಹೊಸದಾಗಿ ತಾರ್ಕಿಕ ನೆಲೆಯಲ್ಲಿ ಕಟ್ಟುವಾಗ ಸಮರ್ಥ ವಾದ ಮಂಡಿಸುವ ಇಲ್ಲವೇ ದೃಶ್ಯರೂಪದಲ್ಲಿ ನಿರೂಪಿಸುವ ಪ್ರತಿಭೆಯನ್ನು ಗಿರೀಶ್ ಮಾಚಳ್ಳಿ ರೂಢಿಸಿಕೊಳ್ಳಬೇಕಿದೆ. ಇಲ್ಲವಾದರೆ ಸುಳ್ಳೇ ಸತ್ಯವೆನಿಸುತ್ತದೆ, ಸತ್ಯ ಹೇಳುವ ಪ್ರಯತ್ನ ದುರ್ಬಲವಾಗುತ್ತದೆ.

ಗಿರೀಶ್ ಮಾಚಳ್ಳಿ ಇನ್ನೂ ಯುವಕ. ಏನನ್ನೋ ಸಾಧಿಸುವ ತವಕ. ಅವರ ಪ್ರಯತ್ನವೂ ಸಾರ್ಥಕ. ಆದರೆ.... ಅತೀ ಉತ್ಸಾಹದಲ್ಲಿ ಅನುಮಾನಗಳನ್ನು ಹುಟ್ಟಿಸುವಂತಹ ನಾಟಕವನ್ನು ಕಟ್ಟಿಕೊಟ್ಟಿರುವುದು ಅಪಾಯಕಾರಿಯಾಗಿದೆ. ನಾಟಕದಾದ್ಯಂತ ವೈಚಾರಿಕತೆಗೆ ವಿರುದ್ಧ ನಡೆಯನ್ನೂ ಅಲ್ಲಲ್ಲಿ ಕಾಣಬಹುದಾಗಿದೆ. ಹಿಮಾಲಯದಲ್ಲಿದ್ದ ಮುನಿಗೆ ಬಹುದೂರದ ನಾಡಲ್ಲಿ ಸಂಭವಿಸಿದ ಬುದ್ಧನ ಜನನ ಗೊತ್ತಾಗುವುದಕ್ಕೆ ಸೂಕ್ತ ಸಮರ್ಥನೆಯಿಲ್ಲ. ಬುದ್ಧ ಹುಟ್ಟಿದಾಗ ಪ್ರಕೃತಿಯಲ್ಲಿ ಕೋಲಾಹಲ ಉಂಟಾಯಿತು ಎಂದು ಮುನಿ ಹೇಳುತ್ತಾನೆ. ಆದರೆ ಕೋಲಾಹಲ ಹುಟ್ಟುವುದು ಕೆಟ್ಟದ್ದಕ್ಕೆ ಹೊರತು ಒಳ್ಳೆಯದಕ್ಕಲ್ಲ ಎನ್ನುವ ಪರಿಜ್ಞಾನ ಜ್ಞಾನಿಗಿರಲಿಲ್ಲವೆ. ಹೋಗಲಿ ಅರಮನೆಗೆ ಬಂದು ಮಗುವಿಗೆ ಸಿದ್ಧಾರ್ಥ ಎಂದು ಹೆಸರಿಡುವ ಮುನಿ ಮಗು ಹೆಚ್ಚು ದಿನ ಮಹಾರಾಜನಾಗಿರುವುದಿಲ್ಲ, ಜಗತ್ತಿಗೆ ಬೆಳಕಾಗುತ್ತಾನೆ, ಜ್ಯಾನದ ಜ್ಯೋತಿಯಾಗುತ್ತಾನೆ ಎಂದು ಭವಿಷ್ಯ ಹೇಳುತ್ತಾನೆ. ಬಹುದಿನ ಹೋಗಲಿ ಒಂದು ದಿನವೂ ಸಿದ್ಧಾರ್ಥ ಆತನ ಬದುಕಿನಲ್ಲಿ ಮಹಾರಾಜನಾಗಿರಲಿಲ್ಲ ಎನ್ನುವ ಸತ್ಯ ಎಲ್ಲರಿಗೂ ಗೊತ್ತು. ಮುನಿಯ ಬಾಯಲ್ಲಿ ಸುಳ್ಳು ಹೇಳಿಸುವ ಅಗತ್ಯವಿರಲಿಲ್ಲ. ಹೋಗಲಿ ಮುನಿಯ ಭವಿಷ್ಯ ಕೇಳಿ ಕುಸಿದು ಬಿದ್ದ ಸಿದ್ಧಾರ್ಥನ ತಾಯಿ ಇದ್ದಕ್ಕಿದ್ದಂತೆ ಸಾಯುವುದು ಆಭಾಸಕಾರಿಯಾಗಿದೆ. ಯಾಕೆಂದರೆ ಮುನಿ ಹೇಳಿದ ಭವಿಷ್ಯದಲ್ಲಿ ಅಂತಹ ಹೃದಯಾಘಾತವಾಗುವಂತಹ ಆತಂಕಕಾರಿ ವಿಷಯವೇನಿರಲಿಲ್ಲ. ಹಾಗೇ ನೋಡಿದರೆ  ನಾಟಕದ ಆರಂಭದಲ್ಲಿರುವ ರಾಜನಿಗೆ ಬಹುಪರಾಕ್ ಹೇಳುವ ದೃಶ್ಯ, ಬುದ್ಧ ಜನನದ ದೃಶ್ಯ ಹಾಗೂ ಮುನಿಯ ದಿವ್ಯದೃಷ್ಟಿ ಮತ್ತು ಭವಿಷ್ಯ ಹೇಳುವ ದೃಶ್ಯಗಳು ವೈಚಾರಿಕ ನಾಟಕಕ್ಕೆ ಅನಗತ್ಯವೆನಿಸುತ್ತವೆ. ಕೆಲವೊಮ್ಮೆ ವಿಪರ್ಯಾಸಗಳನ್ನೂ ಹುಟ್ಟಿಸುತ್ತವೆ. ಆರಂಭದ ದೃಶ್ಯಗಳನ್ನು ಬಿಟ್ಟಿದ್ದರೂ ನಾಟಕಕ್ಕೆ ಯಾವುದೇ ನ್ಯೂನ್ಯತೆ ಉಂಟಾಗುತ್ತಿರಲಿಲ್ಲ. ವೈಚಾರಿಕತೆಯನ್ನು ಹೇಳುವ ನಾಟಕದಲ್ಲಿ ದಿವ್ಯದೃಷ್ಟಿ ಹಾಗೂ ಭವಿಷ್ಯ ಹೇಳುವ ಪರಿಕಲ್ಪನೆಗಳು ವಿರೋಧಾಭಾಸಗಳನ್ನು ಸೃಷ್ಟಿಸುವಂತಿವೆ.

ನಾಟಕದಾದ್ಯಂತ ಬುದ್ಧನ ತತ್ವಗಳು ಉಲ್ಲೇಖವಾಗಿವೆ. ಬುದ್ಧನ ಪಂಚಶೀಲ, ಅಷ್ಟಾಂಗ ಮಾರ್ಗಗಳು, ಸೌಂದರ್ಯ ಮೀಮಾಂಸೆಗಳನ್ನು ಬುದ್ಧನಿಂದ ಬೋಧಿಸಲಾಗುತ್ತದೆ. ಆದರೆ ಇದು ಬೋಧನಾ ಪ್ರಧಾನ ಉಪದೇಶವಾದಂತಿದೆ. ವೈಚಾರಿಕ ಮನೋಭಾವದವರಿಗೆ ಇದೆಲ್ಲಾ ಅರ್ಥವಾದರೂ ಜನಸಾಮಾನ್ಯರಿಗೆ, ಗ್ರಾಮೀಣ ಜನತೆಗೆ ಬೋರ್ ಹೊಡೆಸುವಂತಿದೆ. ಬೋಧನೆಗಾಗಿಯೇ ನಾಟಕವನ್ನು ಕಟ್ಟಿಕೊಟ್ಟರೆ ಅಂತಹ ಪ್ರಯತ್ನ ಯಶಸ್ವಿಯಾಗುವುದು ಅನುಮಾನ. ಬುದ್ಧ ತತ್ವ ಪ್ರಚಾರಕ್ಕಾಗಿಯೇ ನಾಟಕವನ್ನು ಮಾಡುವ ಉದ್ದೇಶವಾದಂತಿದೆ. ಹೀಗಾಗಿ ನಾಟಕ ವಾಚ್ಯವಾಗಿದೆ. ಬೋಧನೆಗಳನ್ನು ದೃಶ್ಯದ ಒಳಗೆ ಕಟ್ಟುವುದಕ್ಕೂ ಬಾಹ್ಯವಾಗಿ ಹೇರುವುದಕ್ಕೂ ವ್ಯತ್ಯಾಸವಿದೆ. ಉಪದೇಶ ಅಥವಾ ಬೋಧನೆ ಎಂದು ಪ್ರೇಕ್ಷಕರಿಗೆ ಅನುಮಾನ ಬಾರದ ಹಾಗೆ ನಾಟಕವನ್ನು ಪೂರಕ ದೃಶ್ಯಸೃಷ್ಟಿಗಳಿಂದ ದರ್ಶನಗೊಳಿಸಿದ್ದರೆ ಬಹುಜನರನ್ನು ತಲುಪಬಹುದಾಗಿತ್ತು. ಅಂಬೇಡ್ಕರ್ ಕೃತಿಯನ್ನು ರಂಗರೂಪಗೊಳಿಸುವಾಗಲೇ ರಂಗಪ್ರಯೋಗ ಸಾಧ್ಯತೆಗಳನ್ನು ನಿರ್ದೇಶಕರು ಅರಿತು ಬಳಸಿದ್ದರೆ ಬುದ್ಧನೆಡೆಗೆ ನಾಟಕ ಕನ್ನಡ ರಂಗಭೂಮಿಗೆ ಒಂದು ಅಪರೂಪದ ಕೊಡುಗೆಯಾಗುತ್ತಿತ್ತು. ಏನೇ ಆಗಲಿ ಬುದ್ಧನಡೆಗೆ ಜನ ಹೋಗಲು ಸಾಧ್ಯವಾಗುತ್ತೋ ಇಲ್ಲೋ ಗೊತ್ತಿಲ್ಲ, ಆದರೆ ಜನರೆಡೆಗೆ ಬುದ್ಧನನ್ನು ಹಾಗೂ ಆತನ ಜೀವಪರ ತತ್ವಗಳನ್ನು ತೆಗೆದುಕೊಂಡು ಹೋಗುವ ಸಾರ್ಥಕ ಪ್ರಯತ್ನವನ್ನು ಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.

ನಾಟಕದಲ್ಲಿ ಕೆಲವೊಂದು ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಬಹು ಮುಖ್ಯವಾಗಿ ಯುದ್ಧ ಮತ್ತು ನದಿ ನೀರಿನ ಹಂಚಿಕೆ. ಪ್ರಕ್ಷುಬ್ಧತೆ ಬಹುಷಃ ಎಲ್ಲಾ ಕಾಲಕ್ಕೂ ಇರುವಂತಹುದು. ನಮ್ಮದೇ ಕಾವೇರಿ ನೀರಿನ ಹಂಚಿಕೆಗೆ ಶತಮಾನಗಳಿಂದ ಕರ್ನಾಟಕ ತಮಿಳುನಾಡಿನ ಆಳುವ ವ್ಯವಸ್ಥೆ ಬಡಿದಾಡುತ್ತಲೇ ಇವೆ. ಹಲವಾರು ಸಲ ಎರಡೂ ರಾಜ್ಯಗಳಲ್ಲಿ ದೊಂಬಿಗಳಾಗಿ ಆಸ್ತಿಪಾಸ್ತಿ ಪ್ರಾಣಹಾನಿಗಳಾಗಿವೆ. ಇದೇ ರೀತಿಯ ಸಮಸ್ಯೆ ಬುದ್ಧನ ಕಾಲದಲ್ಲೂ ಇತ್ತು ಹಾಗೂ ಇದನ್ನು ಬಗೆಹರಿಸಲು ಯುದ್ಧಕ್ಕಿಂತ ಪರಸ್ಪರ ಮಾತುಕತೆ ಹಾಗೂ ಕೊಡುಕೊಳ್ಳುವ ಮೂಲಕ ಅಗತ್ಯವಿದೆ ಎಂದು ಸಿದ್ಧಾರ್ಥ ಪ್ರತಿಪಾದಿಸಿದ್ದು ಎಲ್ಲಾ ಕಾಲಕ್ಕೂ ಮಾದರಿಯಾಗುವಂತಿದೆ. ಬೆಂಕಿಯಿಂದ ಬೆಂಕಿಯನ್ನು ಆರಿಸಲು ಸಾಧ್ಯವಿಲ್ಲ, ಯುದ್ಧ ಎನ್ನುವುದು ಕೇಡನಲ್ಲದೇ ಏನನ್ನೂ ಸಾಧಿಸದು, ದ್ವೇಷದಿಂದ ದ್ವೇಷ ಹುಟ್ಟುತ್ತದೆಯೇ ಹೊರತು ಪ್ರೀತಿಯಲ್ ಎನ್ನುವ ಸಿದ್ಧಾರ್ಥನ ದಾರ್ಶನಿಕ ಮಾತು ಬಹುಷಃ ಆಗಿನವರಿಗೂ ಅರ್ಥವಾಗಲಿಲ್ಲ ಈಗಿನವರಿಗೂ ಅರ್ಥವಾಗಿಲ್ಲ. ಆದ್ದರಿಂದಲೇ ಈಗಲೂ ನೆಲ ಜಲ ವಿವಾದಗಳಾದರೆ ರಾಜ್ಯಗಳು ದೇಶಗಳು ಆಕ್ರಮಣದ ಮಾತನ್ನು ಆಡುತ್ತವೆ. ಯುದ್ಧಕ್ಕೆ ಸಿದ್ದತೆಯನ್ನೂ ಮಾಡಿಕೊಳ್ಳುತ್ತವೆ. ಆದರೆ... ಸಿದ್ಧಾರ್ಥನ ಯುದ್ಧವಿರೋಧಿ ಕಾಳಜಿ ಹಾಗೂ ಪರಸ್ಪರ ಮಾತುಕತೆಯ ಮೂಲಕ ಎಂತಹ ಸಮಸ್ಯೆಗಳಿದ್ದರು ಬಗೆಹರಿಸಿಕೊಳ್ಳಲು ಇರಬಹುದಾದ ಸಾಧ್ಯತೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಸತ್ಯವನ್ನು ಬುದ್ಧನೆಡೆಗೆ ನಾಟಕ ಪ್ರತಿಪಾದಿಸುತ್ತದೆ. ಯುದ್ಧಕೋರರಿಗೆ ಬುದ್ದಿಹೇಳುವಂತೆ ಮೂಡಿಬಂದಿದೆ. ಆದರೆ ಸಿದ್ಧಾರ್ಥನನ್ನು ಗಡಿಪಾರು ಮಾಡಿದ ನಂತರ ಯುದ್ದವಾಯ್ತಾ? ಅದರ ದುಷ್ಪರಿಣಾಮಗಳೇನಾಯ್ತು? ಸಿದ್ದಾರ್ಥ ಹೇಳಿದ್ದು ದಿಟವಾಯ್ತಾ ಎನ್ನುವ ಯಾವ ವಿವರಗಳು ನಾಟಕದಲ್ಲಿಲ್ಲ. ಅಲ್ಲಲ್ಲಿಯ ಸಮಸ್ಯೆಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದಿನ ಘಟನೆಗೆ ನಾಟಕ ನೆಗೆಯುತ್ತದೆ. ಸಿದ್ಧಾರ್ಥನ ಮಾತು ಮೀರಿದ್ದರಿಂದಾದ ದುಷ್ಪರಿಣಾಮಗಳನ್ನು ಕೆಲವು ಮಾತುಗಳಿಂದಾದರೂ ಹೇಳಿಸಿದ್ದರೆ ಪರಿಣಾಮಕಾರಿಯಾಗಿರುತ್ತಿತ್ತುಯುದ್ಧದ ನಿರರ್ಥಕತೆ ನೋಡುಗರಿಗೆ ಅರಿವಾಗುತ್ತಿತ್ತು.

ದಮ್ಮಕ್ಕೆ ಉತ್ತರಾಧಿಕಾರಿಯ ಅನಿವಾರ್ಯತೆ ಇಲ್ಲ. ಮಗ, ಹೆಂಡತಿ, ತಾಯಿ... ರಕ್ತಸಂಬಂಧಿಗಳನ್ನು ಉತ್ತರಾಧಿಕಾರಿ ಮಾಡಲಾಗದು. ಧಮ್ಮ ಎನ್ನುವುದು ಕುಟುಂಬ ರಾಜಕಾರಣವಾಗಬಾರದು. ಧರ್ಮ ಮತ್ತು ರಾಜಕಾರಣ ಒಂದೇ ನಾಣ್ಯದ ಎರಡು ಮುಖಗಳು. ಇವು ಎಂದೂ ಸ್ವಾರ್ಥಕ್ಕೆ ಬಳಕೆಯಾಗಕೂಡದು... ಧಮ್ಮಕ್ಕೆ ಧಮ್ಮವೇ ಉತ್ತರಾಧಿಕಾರಿ. ನನ್ನ ಧಮ್ಮ ಬಾಯಿಪಾಠವಲ್ಲ ಬಾಳ ಪಾಠ, ನನ್ನ ಧಮ್ಮ ನುಡಿಯಲ್ಲ ನಡತೆ, ನನ್ನ ಧಮ್ಮ ಲೀಲೆಯಲ್ಲ ಶೀಲ...ನಾನು ಮಾರ್ಗದಾತನೇ ಹೊರತು ಮುಕ್ತಿದಾತನಲ್ಲ... ಎಂದು ಉತ್ತರಾಧಿಕಾರತ್ವದ ಪ್ರಶ್ನೆಗೆ ಬುದ್ಧ ಮಾರ್ಮಿಕವಾಗಿ ಉತ್ತರಿಸುತ್ತಾನೆ. ಮಾತು ಸಮಕಾಲೀನ ಸಂದರ್ಭದಲ್ಲಿ ಕುಟುಂಬ ರಾಜಕಾರಣ ಮಾಡುವ ಸ್ವಾರ್ಥಿ ರಾಜಕಾರಣಿಗಳಿಗೆ ಹಾಗೂ ಉತ್ತರಾಧಿಕಾರಗಳನ್ನು ಆಯ್ಕೆ ಮಾಡಿಯೇ ನಿರ್ಗಮಿಸುತ್ತಿರುವ ಮಠಾಧಿಪತಿಗಳಿಗೆ ಪಾಠ ಹೇಳುವಂತಿದೆ. ಬಹುಷಃ ಡಾ.ಅಂಬೇಡ್ಕರರು ಬುದ್ಧನ ನೆಪದಲ್ಲಿ ಸಮಕಾಲೀನ ಧರ್ಮ ಹಾಗೂ ರಾಜಕೀಯ ಸ್ವಾರ್ಥತೆಯನ್ನು ಸರಿಯಾಗಿ ಗ್ರಹಿಸಿ ಕೃತಿ ರಚಿಸಿದ್ದಾರೆ. ಅದು ನಾಟಕದಲ್ಲಿ ಪ್ರತಿಬಿಂಬಿತವಾಗಿದೆ.

ಇಡೀ ನಾಟಕದಲ್ಲಿ ಪುರೋಹಿತಶಾಹಿಗಳನ್ನು ಟಾರ್ಗೆಟ್ ಮಾಡಿದಂತಿದೆ. ಖಳನಾಯಕರನ್ನಾಗಿ ವೈದಿಕರನ್ನು ಬಿಂಬಿಸಲಾಗಿದೆ. ಪುರೋಹಿತವರ್ಗ ಯಾಗ ಮಾಡುವಾಗಲೇ ಸುರಾಪಾನ ಮಾಡುವುದು, ಹೆಂಗಸರೊಂದಿಗೆ ನೃತ್ಯಮಾಡುವುದು, ಎಳೆಗರುಗಳನ್ನು ಕೊಂದು ತಿನ್ನುವುದು.. ಒಂದಿಷ್ಟು ಅತಿ ಎನ್ನಿಸುವಷ್ಟು ಚಿತ್ರಿತವಾಗಿದೆ. ವೈದಿಕರು ಹಸುವಿನ ಮಾಂಸ ತಿನ್ನುತ್ತಿದ್ದರು ಎನ್ನುವುದು ವೇದಗಳಿಂದಲೇ ರುಜುವಾತಾಗುತ್ತದೆ. ಆದರೆ ಅವರೇ ಸ್ವತಃ ಕತ್ತಿ ಎತ್ತಿ ಕೊಲ್ಲುತ್ತಿದ್ದರು ಎನ್ನುವುದು ಸಂದೇಹಕಾರಿ. ಪ್ರಾಣಿವಧೆ ಮಾಡಿಸಿ ಮಾಂಸ ಭಕ್ಷಿಸುತ್ತಿದ್ದಿರಬಹುದಾದ ಸಾಧ್ಯತೆಗಳಿವೆಯೇ ಹೊರತು ಅವರೇ ಕೊಲ್ಲುತ್ತಿದ್ದರು ಎನ್ನುವುದು ನಂಬುವುದು ಕಷ್ಟ. ಅದ್ಯಾಕೋ ನಾಟಕದಾದ್ಯಂತ ಪುರೋಹಿತಶಾಹಿಗಳನ್ನು ವಿರೋಧಿಸುವುದನ್ನು ಉದ್ದೇಶಪೂರ್ವಕವಾಗಿ ಮಾಡಿದಂತಿದೆ. ವೈದಿಕರ ಜನವಿರೋಧಿತನವನ್ನು, ಕುತಂತ್ರಗಳನ್ನು ಗಂಭೀರವಾಗಿಯೇ ದೃಶ್ಯದಲ್ಲಿ ತೋರಿಸಬಹುದಾಗಿತ್ತು ಆದರೆ ಅವರನ್ನು ಹಾಸ್ಯಪಾತ್ರದಾರಿಗಳಂತೆ ಬಿಂಬಿಸಲಾಗಿದೆ. ವೈದಿಕರ ವಿಕ್ಷಿಪ್ತತೆಗಳನ್ನು ವಿಡಂಬಣಾತ್ಮಕವಾಗಿ ಚಿತ್ರಿಸುವ ಬದಲಾಗಿ ವಿನೋದಾತ್ಮಕವಾಗಿ ಚಿತ್ರಿಸಿರುವುದು ಪರಿಣಾಮದ ದೃಷ್ಟಿಯಿಂದ ದುರ್ಬಲವೆನಿಸುತ್ತದೆಅದು ಯಾಕೋ ನಾಟಕದ ಆಶಯವನ್ನು ಡೈಲ್ಯೂಟ್ ಮಾಡಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಡಾ.ಅಂಬೇಡ್ಕರ್ರವರ ವೈಚಾರಿಕ ದೃಷ್ಟಿಕೋನದಲ್ಲಿ ಬುದ್ಧನ ಆದರ್ಶಗಳನ್ನು ಹೇಳುವಂತಹ ನಾಟಕದ ಆಶಯ ಅನನ್ಯವಾಗಿದೆ. ಬುದ್ಧನ ಕುರಿತು ಮಿಥ್ಗಳನ್ನು ಒಡೆದು ಹಾಕಿ ಸತ್ಯಕ್ಕೆ ಹತ್ತಿರವಾದದ್ದನ್ನು ಹೇಳುವ ಪ್ರಯತ್ನ ಇಂದಿನ ಅಗತ್ಯವಾಗಿದೆ. ಹಿಂಸೆ, ಅಸಹನೆ, ಸ್ವಾರ್ಥ, ದುರಾಸೆಗಳೇ ತುಂಬಿದ ಪ್ರಸ್ತುತ ಪ್ರಕ್ಷಬ್ಧ ಪರಿಸ್ಥಿತಿಯಲ್ಲಿ ಬುದ್ಧನ ವಿವೇಕ ಮತ್ತು ಆದರ್ಶಗಳು ಮನುಕುಲದ ನೆಮ್ಮದಿಗೆ ಅಗತ್ಯವಾಗಿವೆ ನಿಟ್ಟಿನಲ್ಲಿ ನಿರ್ದೇಶಕ ಗಿರೀಶ್ರವರ ರಂಗ ಪ್ರಯತ್ನವೂ ಶ್ಲಾಘನೀಯವಾಗಿದೆ. ಆದರೆ.. ನಾಟಕದಲ್ಲಿ ವಿರೋಧಾಭಾಸಗಳು ಹುಟ್ಟಿಸುವಂತಹ ಸಂದೇಹಗಳನ್ನು ನಿವಾರಿಸಿ ಪೂರಕ ಸಮರ್ಥನೆಗಳನ್ನು ಕೊಟ್ಟಿದ್ದರೆ, ಸಾಂಪ್ರದಾಯಿಕ ನಿರೂಪನಾ ಶೈಲಿಯನ್ನು ಬದಲಾಯಿಸಿ, ಆಧುನಿಕ ರಂಗಭೂಮಿಯ ರಂಗತಂತ್ರಗಳನ್ನು ಅಳವಡಿಸಿಕೊಂಡು ದೃಶ್ಯಗಳನ್ನು ಕಟ್ಟಿದ್ದರೆ, ನಾಟಕ ಇನ್ನೂ ಅದ್ಬುತವಾಗಿ ಮೂಡಿಬರಬಹುದಾಗಿತ್ತು. ಕುರಿತು ನಾಟಕದ ಯುವ ನಿರ್ದೇಶಕ ಆಲೋಚಿಸುವುದುತ್ತಮ.


ಅಭಿನಯದಲ್ಲಿ ಇನ್ನೂ ನಟರು ಪಳಗಬೇಕಿದೆ. ಬುದ್ದನ ಪಾತ್ರದಾರಿ ತನ್ನ ಅಭಿನಯ ಸಾಮರ್ಥ್ಯವನ್ನು ತುಂಬಾ ಮಿತಿಗೊಳಿಸಿಕೊಂಡಂತಿದೆ. ಸಿನೆಮಾಗಳಲ್ಲಿ ಕ್ಲೋಸಅಪ್ ಶಾಟ್ಗಳಲ್ಲಿ ಅಭಿನಯಿಸುವಂತೆ ಶಿಶಿರ್ ಭಾರದ್ವಾಜ್ ಬುದ್ಧನಾಗಿ ನಟಿಸಿದ್ದಾರೆ. ಅಗತ್ಯ ಇರಲಿ ಬಿಡಲಿ ತೋರುಬೆರಳು ತೋರುವ ಮುಷ್ಠಿಯನ್ನು ಮುಖದ ಮುಂದಿರಿಸಿಕೊಂಡೇ ಮಾತಾಡುವ ಬುದ್ಧನ ನಟನೆ ಸೀಮಿತವೆನಿಸುತ್ತದೆ. ಬುದ್ಧನ ಪಾತ್ರದಾರಿಯ ಅಭಿನಯ ಹಾಗೂ ಮಾತಿನ ಶೈಲಿ ನಾಟಕದಾದ್ಯಂತ ಏಕತಾನತೆಯನ್ನುಂಟು ಮಾಡಿದೆ. ಇರುವುದರಲ್ಲಿ ಸಿದ್ದೋಧನ ಪಾತ್ರದ ದಿನೇಶ್ರವರ ನಟನೆ ಚೆನ್ನಾಗಿತ್ತಾದರೂ ಪಾತ್ರೋಚಿತ ಆಯ್ಕೆ ಎನ್ನಿಸುವಂತಿಲ್ಲ. ಬ್ರಾಹ್ಮಣನಾಗಿ ಸುಸಿಲ್ ಕಲಮಾರ್ರವರ ಅತಿಶಯದ ನಟನೆ ಚೆಪ್ಪಾಳೆ ಗಿಟ್ಟಿಸುವಲ್ಲಿ ಸಫಲವಾಗಿದೆ. ಅಂಗುಲಿಮಾಲ ಪಾತ್ರಧಾರಿಯ ಅಭಿನಯ ನೋಡುಗರ ನೆನಪಿನಲ್ಲಿ ಉಳಿಯುವಷ್ಟು ಸೊಗಸಾಗಿದೆ. ಕಥೆಯ ದೃಶ್ಯಗಳಿಗೆ ಲಿಂಕ್ ಕೊಡಲು ಬಳಸಲಾದ ನಿರೂಪಕರ ಸೃಷ್ಟಿ ಹಾಗೂ ಅವರ ನಿರೂಪನೆ ತುಂಬಾ ದುರ್ಭಲವಾಗಿದೆ. ಇನ್ನೂ ನಿರ್ದೇಶಕರು ಪಾತ್ರಗಳ ಪೋಷಣೆಯಲ್ಲಿ ಹಾಗೂ ಪಾತ್ರೋಚಿತ ವ್ಯಕ್ತಿಗಳ ಆಯ್ಕೆಯಲ್ಲಿ ಕಾಳಜಿವಹಿಸಬೇಕಿದೆ. ಗುಂಪು ಬಳಕೆಯಲ್ಲಿ ರಂಗಶಿಸ್ತು ಬೇಕಾಗಿದೆ. ಬ್ಲಾಕಿಂಗ್ ಮತ್ತು ಮೂವಮೆಂಟ್ಗಳಲ್ಲಿ ಇನ್ನೂ ನಿಖರತೆ ಬೇಕಿದೆ. ಏನೇ ಆದರೂ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಒಂದು ನಾಟಕವನ್ನು ಕಟ್ಟಿದ ರೀತಿ ಪ್ರಶಂಸಾರ್ಹವಾಗಿದೆ.


 ರಂಗವಿನ್ಯಾಸದಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲತೆ ಬೇಕಾಗಿದೆ. ಅಗತ್ಯ ಇರಲಿ ಬಿಡಲಿ ವೇದಿಕೆಯ ಹಿಂಭಾಗದಲ್ಲಿ ನಾಟಕದಾದ್ಯಂತ ಪ್ರತಿಷ್ಠಾಪಿಸಲ್ಪಟ್ಟ ಅಶ್ವತ್ಮರ ಹಾಗೂ ಅದರ ಕಟ್ಟೆ ದೃಶ್ಯಾತೀತವಾಗಿ ಮೂಡಿಬಂದಿದೆ. ಸಂಬಂಧಿಸಿದ ದೃಶ್ಯಕ್ಕೆ ಮಾತ್ರ ಅದನ್ನು ಬಳಸಿದ್ದರೆ ಚೆನ್ನಾಗಿತ್ತು. ಹಿಮಾಲಯದಲ್ಲಿ ತಪಸ್ಸಿಗೆ ಕುಳಿತ ಮುನಿಯ ಪಕ್ಕದಲ್ಲಿ ಅರಮನೆಯ ಕಂಬವನ್ನು ನಿಲ್ಲಿಸಿದ್ದು ಆಭಾಸಕಾರಿಯಾಗಿದೆ. ರವಿಶಂಕರರವರ ಬೆಳಕಿನ ವಿನ್ಯಾಸ ದೃಶ್ಯಗಳನ್ನು ಸಮರ್ಥವಾಗಿ ಬೆಳಗಿದೆ. ಸೈಕ್ನ್ನು ಬಳಸಿ ಹುಣ್ಣಿಮೆಯನ್ನು ಸೃಷ್ಟಿಸಿದ ರೀತಿ ನೋಡುಗರ ಗಮನ ಸೆಳೆಯುವಂತಿದೆ. ಸಂಗೀತ ಮತ್ತು ಹಾಡುಗಳು ನಾಟಕದ ಅಗತ್ಯವಾಗಿವೆಯಾದರೂ ಅದ್ಯಾಕೋ ಕೇಳುಗರಿಗೆ ತುಂಬಾನೆ ಡಿಸ್ಟರ್ಬ ಮಾಡುವಂತೆ ಮೂಡಿಬಂದಿವೆ. ಸುವ್ವಿ ಸುವ್ವಮ್ಮ ಸುವ್ವಲಾಲಿ... ಆಲಾಪದ ಜಾನಪದ ಶೈಲಿಯಲ್ಲಿ ರಾಮಚಂದ್ರರವರು ಹಾಡುಗಳನ್ನು ಕಂಪೋಸ್ ಮಾಡಿ ಹಾಡಿದ್ದರಾದರೂ ನಾಟಕದ ಭಾಗವಾಗಿ ಮೂಡ್ ಸೃಷ್ಟಿಸುವಲ್ಲಿ ಹಾಡು ಮತ್ತು ಹಿನ್ನಲೆ ಸಂಗೀತ ವಿಫಲವಾಗಿವೆ. ಹಾಡಿನ ಅರ್ಥಕ್ಕೂ ದೃಶ್ಯದ ಥೀಮಿಗೂ ಎಷ್ಟೋ ಸಲ ಸಂಬಂಧವೇ ಇಲ್ಲದಂತಿದೆ. ಹಾಡನ್ನು ಯಾವಾಗ ಎಷ್ಟು ಬಳಸಬೇಕು ಹಾಗೂ ಹಾಡು ಸಂಗೀತ ಇರುವುದು ನಾಟಕದಲ್ಲಿ ಮೂಡ್ ಸೃಷ್ಟಿಸಲು ಎನ್ನುವುದನ್ನು ಸಂಗೀತ ನಿರ್ದೇಶಕ ಅರಿತರೆ ನಾಟಕಕ್ಕೆ ಹೆಚ್ಚಿನ ಮೆರಗು ಬರಲು ಸಾಧ್ಯ. ಇಡೀ ನಾಟಕ ಇನ್ನೂ ತಾಂತ್ರಿಕ ಪ್ರದರ್ಶನದ ಹಂತದಲ್ಲಿದೆ. ಕಾಸ್ಟೂಮ್ ಗಳಲ್ಲೂ ಸಹ ನಿರ್ದೇಶಕರು ತುಂಬಾನೇ ರಾಜಿಮಾಡಿಕೊಂಡಿದ್ದಾರೆ. ಇನ್ನೂ ಹಲವಾರು ಬದಲಾವಣೆಗಳಾಗಬೇಕಿದೆ. ಬುದ್ಧ ಕಪಿಲಸಿದ್ಧರನ್ನು ಗುರು ಎನ್ನುತ್ತಾನೆ. ಅಂತಹ ಗುರು ಬಂದಾಗ ಬುದ್ಧ ಮೇಲೆ ಕುಳಿತು ಗುರುವನ್ನು ಕೆಳಗೆ ಕೂಡಿಸಿ ಮಾತಾಡುವುದು ಅಸಮಂಜಸವೆನ್ನಿಸುತ್ತದೆಮುಂದಿನ ಕೆಲವಾರು ಪ್ರಯೋಗಗಳಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡರೆ ಉತ್ತಮ ಪ್ರದರ್ಶನವಾಗಬಹುದಾದ ಎಲ್ಲಾ ಸಾಧ್ಯತೆಗಳೂ ನಾಟಕದಲ್ಲಿವೆ. ಮತ್ತು ಬುದ್ಧನೆಡೆಗೆ ರೀತಿಯಲ್ಲಿ ಜನರಲ್ಲಿ ವಿವೇಕವನ್ನು  ಹೆಚ್ಚಿಸುವಂತಹ ನಾಟಕಗಳ ಅಗತ್ಯ ತುಂಬಾನೇ ಇದೆ. ಹಿಂಸಾತ್ಮಕ ಜಗತ್ತಿನಲ್ಲಿ ಮನುಷ್ಯತ್ವವನ್ನು ಹೇಳುವ ಬುದ್ಧ ಈಗ ಬೇಕಾಗಿದೆ. ವಿಷಾದ, ನಿರಾಶೆಯ ಕಗ್ಗತ್ತಲು ತುಂಬಿದ ಸಮಾಜದಲ್ಲಿ ಬುದ್ಧನ ಬೆಳಕು ಬದಲಾವಣೆ ತರಬೇಕಿದೆ. ಅಗತ್ಯ ಪರಿಷ್ಕರಣೆಯೊಂದಿಗೆ ನಾಡಿನಾದ್ಯಂತ ಬುದ್ಧನೆಡೆಗೆ ನಾಟಕ ಪ್ರದರ್ಶನಗೊಳ್ಳಬೇಕಿದೆ.

ನಿರ್ದೇಶಕ ಗಿರೀಶ್ ಮಾಚಳ್ಳಿ
ಬುದ್ಧನ ಆದರ್ಶಗಳು ಅವರ ಪಂಚಶೀಲ ತತ್ವದಲ್ಲಿ ಬಿಂಬಿತವಾಗಿವೆ. ಪ್ರಾಣಿಹತ್ಯೆಗೆ ವಿರೋಧ, ಕಳ್ಳತನ ಮೋಸ ಪರಸೊತ್ತಿನಾಸೆಯಿಂದ ದೂರ, ವ್ಯಭಿಚಾರ ಅನೈತಿಕತೆ ಬೇಕಾಗಿಲ್ಲ, ಸುಳ್ಳು ಬಿಡಿ ಸತ್ಯ ಒಪ್ಪಿಕೊಳ್ಳಿ, ಮಧ್ಯಪಾನ ನಿಷೇಧ... ಹೀಗೆ ಪಂಚಶೀಲಗಳನ್ನು ಅಳವಡಿಸಿಕೊಂಡರೆ ಮನುಷ್ಯ ನೆಮ್ಮದಿಯಿಂದ ಬದುಕಬಹುದು ಹಾಗೂ ಪರರನ್ನು ಬದುಕಲು ಬಿಡಬಹುದು ಎನ್ನುವ ಸಾರ್ವಕಾಲಿಕ ಸತ್ಯವನ್ನು ಬುದ್ಧ ಪ್ರತಿಪಾದಿಸುತ್ತಾರೆ. ದೇವರನ್ನು ಹುಡುಕುವುದೇ ಬದುಕಿನ ಗುರಿಯಲ್ಲಾ, ಭ್ರಮೆಯಿಂದ ಸೃಷ್ಟಿಗೊಂಡ ದೇವರು ಎಲ್ಲಿ ಹುಡುಕಿದರೂ ಸಿಗದು, ಹೋಮ ಹವನಗಳಿಂದ ದೇವರು ದಕ್ಕುವುದಿಲ್ಲ...ದೇವರೆಂಬುದು ಅನುಭವದಿಂದ ಬಂದ ನಂಬಿಕೆಯಲ್ಲಾ, ನಾನು ಹೇಳಿದ್ದನ್ನು ಪರೀಕ್ಷಿಸಿ ಒಪ್ಪಿಕೊಳ್ಳಿ. ಕತ್ತಲಿಂದ ಬೆಳಕಿಗೆ ಬಂದು ಅನುಭವದಿಂದ ಅರಿತುಕೊಳ್ಳಿ. ನಿಮಗೆ ನೀವೇ ದಿಕ್ಕು, ನಿಮಗೆ ನೀವೇ ಬೆಳಕು..... ಎಂದು ಗೌತಮ ಹೇಳಿದ ಅನುಭವಜನ್ಯ ಬೋಧನೆ ಮನುಕುಲಕ್ಕೆ ದಾರಿದೀಪವಾಗಬೇಕಿದೆ. ದೇವರು ಬ್ರಹ್ಮ, ಆತ್ಮ ಎನ್ನುವ ಭ್ರಮೆಗಳಿಗೆ ಅಂಟಿಕೊಂಡು ಲೋಕಕ್ಕೆ ಅಸತ್ಯವನ್ನು ಹೇಳುವುದು ನ್ಯಾಯವೇ?, ಧರ್ಮ ಅರ್ಥ ಕಾಮ ಮೋಕ್ಷವೆನ್ನುತ್ತಾ ಬರೀ ಇವುಗಳಿಗೆ ಬಂಧಿತರಾಗಿ, ವರ್ಣ ಜಾತಿಗಳನ್ನು ಸೃಷ್ಟಿಮಾಡಿರುವುದು ನೀತಿಯೇ? ಯಜ್ಞ ಯಾಗ ಬಲಿದಾನಗಳನ್ನು ನೆರವೇರಿಸುತ್ತಾ ಅಂಧಕಾರದ ನರಕದ ಕೂಪಕ್ಕೆ ಮಾಣವರನ್ನು ತಳ್ಳುವುದು ಧರ್ಮವೇ?... ಎಂದು ಬುದ್ಧ ಪ್ರಶ್ನಿಸುತ್ತಲೇ ವೈದಿಕರ ಸೃಷ್ಟಿಯಾದ ದೇವರು ಹಾಗೂ ಧರ್ಮದ ಮರ್ಮವನ್ನು ಬೆತ್ತಲುಗೊಳಿಸುತ್ತಾನೆ. ಮನಸ್ಸೆಂಬುದೊಂದು ನೊಣ ಇದ್ದಹಾಗೆ. ಹೂವಿನ ಮೇಲೆ ಕುಳಿತಂತೆಯೇ ಹೇಸಿಗೆಯ ಮೇಲೂ ಕುಳಿತುಕೊಳ್ಳುತ್ತದೆ. ಅದನ್ನು ಸದಾ ಹೂವಿನ ಮೇಲೆ ಕುಳಿತುಕೊಳ್ಳುವ ಜೇನುನೊಣವನ್ನಾಗಿ ಪರಿವರ್ತಿಸಬೇಕು ಎಂದು ಬಲು ಮಾರ್ಮಿಕವಾಗಿ ಬುದ್ಧ ಮನುಷ್ಯನ ಮನಸ್ಸಿನ ಚಂಚಲತೆಯ ಬಗ್ಗೆ ಹೇಳುತ್ತಾನೆ. ಮೂಡನಂಬಿಕೆಗಳನ್ನು ವಿರೋಧಿಸುತ್ತಾನೆ. ಮನುಷ್ಯರನ್ನು ಕಾಡುವ ಭ್ರಮೆ, ದುಗುಡ ದಾವಂತ, ಸಂಕಟಗಳಿಂದ ಹೇಗೆ ಮುಕ್ತಿ ಹೊಂದಿ ನೆಮ್ಮದಿಯ ಬದುಕನ್ನು ಹೊಂದಬೇಕು ಎನ್ನುವುದರ ಪ್ರಾತ್ಯಕ್ಷಿಕ ನೋಟವನ್ನು ಬುದ್ಧನೆಡೆಗೆ ನಾಟಕ ಕಟ್ಟಿಕೊಡುತ್ತದೆ.

ನಾಟಕದ ಅಂತ್ಯಕ್ಕೆ ಬಳಸಲಾದ ಸೋಸಲೆಗಂಗಾಧರ್ರವರು ರಚಿಸಿದ ಬುದ್ಧನ ಸ್ತುತಿ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ.

ಹೇ ಭುವಿ ನೀ ಧನ್ಯಳಾದೆ, ಸಮ್ಮಾ ಸಂಬುದ್ಧನ ಹಡೆದು
ಹೇ ಭುವಿ ನೀ ಪಾವನಳಾದೆ ಸಮ್ಮಾ ಸಂಬುದ್ಧನು ನಡೆದು
ಹೇ... ಧರೇ  ವಸುಂದರೆ...
ನಿನ್ನಾ ಮೈತ್ರಿಗೆ ಸ್ಪೂರ್ತಿ ಯಾರೆ
ನಿನ್ನ ಕರುಣೆಗೆ ಸಾಟಿ ಯಾರೇ...

ಪಂಚ ಭೂತಗಳಿಗೂ ಪಂಚ ಶೀಲ ಬೋಧಿಸಿ
ಅಷ್ಟ ದಿಕ್ಕುಗಳಿಗೂ ಅಷ್ಟಾಂಗ ಮಾರ್ಗ ತಿಳಿಸಿ
ನಿನ್ನ ಒಡಲ ಜೀವ ಜಂತುಗಳನ್ನೆಲ್ಲಾ ನುಡಿಸಿ
ಧಮ್ಮ ಚಕ್ರ ಉರುಳಿಬಿಟ್ಟ, ಮುಕ್ತಿ ಮಾರ್ಗ ತೋರಿಸಿಕೊಟ್ಟ
ಧರಣಿ ದೇವಿ ನಿನ್ನಾ ವರ ಸುತನೇ
 ದೇವ ಮಾನವರಿಗೂ ಗುರು ಬುದ್ಧನೇ.


                            -ಶಶಿಕಾಂತ ಯಡಹಳ್ಳಿ
         
                 
           
               
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ