ಸಂಸ್ಕೃತದ ನಾಟಕಕಾರ ಭವಭೂತಿಯ ‘ಉತ್ತರ ರಾಮಚರಿತೆ’ ನಾಟಕವನ್ನು ಬಸವಪ್ಪ ಶಾಸ್ತ್ರಿಗಳು, ಧೋಂಡೋ ನರಸಿಂಹ ಮುಳಬಾಗಿಲ್ರವರು ಹಾಗೂ ಬನ್ನಂಜೆ ಗೋವಿಂದಾಚಾರ್ಯರು ಕನ್ನಡಕ್ಕೆ ಭಾಷಾಂತರಿಸಿದ್ದರು. ಹಿಗ್ಗೋಡಿನ ನೀನಾಸಂ ರೆಪರ್ಟರಿಯು 2014 ರ ‘ತಿರುಗಾಟ’ಕ್ಕೆ ಬನ್ನಂಜೆರವರ ಅನುವಾದವನ್ನು ಆಯ್ದುಕೊಂಡು ನಾಟಕವನ್ನು ನಿರ್ಮಿಸಿದ್ದು, ಬಿ.ಆರ್.ವೆಂಕಟರಮಣ ಐತಾಳರು ನಿರ್ದೇಶಿಸಿದ್ದಾರೆ. 2014, ಅಕ್ಟೋಬರ್ 18ರಂದು ಬೆಂಗಳೂರಿನ ಸಚಿವಾಲಯ ಕ್ಲಬ್‌ನ ರಂಗಮಂದಿರದಲ್ಲಿ ಈ ನಾಟಕವು ಪ್ರದರ್ಶನಗೊಂಡು ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಿತು.
ಭವಭೂತಿಯ ಪರಿಕಲ್ಪನೆ ಅಸಾಧಾರಣವಾದದ್ದು. ನಾಟಕಕ್ಕೆ ಅಗತ್ಯವಾದ ಸ್ಥಳೈಕ್ಯ ಹಾಗೂ ಕಾಲೈಕ್ಯಗಳನ್ನು ಸಮರ್ಥಿಸಲು ಉತ್ತರರಾಮಾಯಣದಲ್ಲಿ ಕೆಲವಾರು ಬದಲಾವಣೆಗಳನ್ನು ಮಾಡಿಕೊಂಡು ತನ್ನದೇ ಆದ ವಿಶಿಷ್ಟ ವಿಚಿತ್ರ ವಿಕ್ಷಿಪ್ತ ರೀತಿಯ ಪರಿಕಲ್ಪನೆಗಳನ್ನು ‘ಉತ್ತರ ರಾಮಚರಿತೆ’ಯಲ್ಲಿ
ಕಟ್ಟಿಕೊಟ್ಟಿದ್ದಾನೆ. ವಾಲ್ಮೀಕಿ ರಾಮಾಯಣವನ್ನು ಅನುಸರಿಸುತ್ತಲೇ ಅದನ್ನು ಮುರಿದು ಕಟ್ಟುವ ಪ್ರಯತ್ನ ಭವಭೂತಿಯದ್ದಾಗಿದೆ. ರಾಮನು ರಾವಣ ಸಂವಾರ ಮಾಡಿ ರಾಜನಾದ ನಂತರ ಸೀತಾಪರಿತ್ಯಾಗದಿಂದ ಆರಂಭವಾಗುವ ಈ ನಾಟಕವು ರಾಮನ ಕುಟುಂಬ ಒಂದಾಗುವವರೆಗೂ ಪ್ರಮುಖ ಘಟನೆಗಳನ್ನು ದೃಶ್ಯರೂಪದಲ್ಲಿ ಸಾದರಪಡಿಸುತ್ತದೆ. ಹನ್ನೆರಡು ವರ್ಷಗಳ ಕಾಲಾವಧಿಯೊಳಗೆ ನಡೆಯುವ ದೃಶ್ಯಗಳು ಕರುಣಾರಸ ಪ್ರಧಾನವಾಗಿದ್ದು ನಾಟಕದಾದ್ಯಂತ ಶೋಕರಸ ವೈಭವೀಕರಣಗೊಂಡಿದೆ. ರಾಮ, ಸೀತೆ, ಜನಕ, ಕೌಸಲ್ಯೆ, ವನದೇವತೆ...
ಹೀಗೆ ಬಹುತೇಕ ಪಾತ್ರಗಳ ಗೋಳು ನಾಟಕದಾದ್ಯಂತ ಅನುರಣಿಸಿದೆ. ಅದರಲ್ಲೂ ರಾಮನ ಪಶ್ಚಾತ್ತಾಪದ ಶೋಕವಂತೂ ನೋಡುಗರಲ್ಲಿ ಕಣಿಕರ ಬರುವಂತೆ ಚಿತ್ರಿತವಾಗಿದೆ. ಭವಭೂತಿಯ ದೃಶ್ಯ ಸಂಯೋಜನೆ ಹಾಗೂ ಕಾವ್ಯಾಭಿವ್ಯಕ್ತಿಯ ಪಾಂಡಿತ್ಯ ಅದ್ಭುತವಾದಂತಹುದು. ಭವಭೂತಿಯ ಪಾಂಡಿತ್ಯದ ಭಾರಕ್ಕೆ ನಾಟಕದಾದ್ಯಂತ ಅತಿಶಯಗಳು ಅತಿಯಾಗಿ ರೂಪಗೊಂಡಿವೆ. ಸುಳ್ಳುಗಳನ್ನು ಸುಂದರವಾಗಿ ಹೇಗೆಲ್ಲಾ ಹೇಳಬಹುದು ಎನ್ನುವುದರಲ್ಲಿ ಭವಭೂತಿ ನಿಷ್ಣಾತ. ರಾಮಾಯಣದ ಶೋಕಾಯಣ ಕಾಂಡವನ್ನು ಕಲ್ಪನಾ ವಿಲಾಸದಲ್ಲಿ ಅನುಭವಿಸಬೇಕೆಂದರೆ ‘ಉತ್ತರ ರಾಮಚರಿತೆ’ಯನ್ನು ಆಸ್ವಾಧಿಸಲೇಬೇಕು.
ಇಡೀ ನಾಟಕವೇ ತುಂಬಾ ಸಂಕೀರ್ಣವಾಗಿದೆ. ರೂಢಿಗತ ರಾಮಾಯಣವನ್ನು ಬಿಟ್ಟು ಕಥೆ ಎಲ್ಲೆಲ್ಲೋ ಸಾಗುತ್ತದೆ. ಅಗಸನ ಮಾತಿಗಾಗಿ ರಾಮ ಸೀತೆಯನ್ನು ಕಾಡಿಗಟ್ಟುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ನಾಟಕದಲ್ಲಿ ನಡೆಯುವ ತದನಂತರದ ಸನ್ನಿವೇಶಗಳು ಎಲ್ಲೆಲ್ಲಿಗೋ ಕರೆದೊಯ್ಯುತ್ತವೆ. ಯಾವುದೇ ತರ್ಕದ ಮಾನದಂಡಗಳೂ ಇಲ್ಲಿ ವ್ಯರ್ಥ. ಸೀತೆ ತಲ್ಲಣಗೊಂಡು ನದಿಗೆ ಹಾರುವುದು. ನದಿಯೇ ಅವಳ ಮಕ್ಕಳನ್ನು ಉಳಿಸುವುದು. ಸೀತೆಗೆ ಆಶ್ರಯ ಕೊಡುವುದು. ಮಕ್ಕಳ ಪೋಷಣೆಯನ್ನು ವಾಲ್ಮೀಕಿಗೆ ವಹಿಸುವುದು. ಶೂದ್ರ ಶಂಭೂಕನ ಸಂವಾರಕ್ಕೆ ರಾಮ ದಂಡಕಾರಣ್ಯಕ್ಕೆ ಒಂಟಿಯಾಗಿ ಬರುವುದು. ರಾಮನಿಂದ ಕೊಲೆಯಾದ ಶಂಭೂಕನ ಶಾಫವಿಮೋಚನೆಯಾಗಿ ಗಂಧರ್ವನಾಗುವುದು. ವನದೇವತೆ ರಾಮನ ಶೋಕಕ್ಕೆ ಸಾಂತ್ವನಹೇಳುವುದು. ರಾಮ ಸೀತೆಗಾಗಿ ಗೋಳಾಡುವುದು. ಸೀತೆ ಅಗೋಚರವಾಗಿದ್ದೇ ರಾಮನ ಶೋಕಕ್ಕೆ ಮರುಗುವುದು. ದಂಡಕಾರಣ್ಯದಲ್ಲಿ ವಾಲ್ಮೀಕಿ ಆಶ್ರಮಕ್ಕೆ ರಾಮನ ಮಾವ ಜನಕ, ತಾಯಿ ಕೌಸಲ್ಯೆ, ಆರುಂಧತಿ ಬರುವುದು. ಲಕ್ಷ್ಮಣನ ಮಗ ಅಶ್ವಮೇಧದ ಕುದುರೆ ಪಾಲಕನಾಗಿ ಬರುವುದು. ಲವ ಕುದುರೆ ಕಟ್ಟುವುದು. ರಾಮ ಲವನಲ್ಲಿ ಸೀತೆಯ ಹೋಲಿಕೆಯನ್ನು ಗುರುತಿಸುವುದು. ಲವಕುಶರು ರಾಮಾಯಣವನ್ನು ಪಾರಾಯಣ ಮಾಡುವುದು. ಕೊನೆಗೆ ರಾಮ ಸೀತೆ ಹಾಗು ಮಕ್ಕಳು ಒಂದಾಗುವುದು... ಹೀಗೆ ಈ ಎಲ್ಲಾ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ.
ಸತ್ತ ಶಂಭೂಕನಿಂದ ಗಂದರ್ವ ಬರಲು ಸಾಧ್ಯವೇ? ಸಾಯಲು ನೀರಿಗೆ ಹಾರಿದ ಸೀತೆಯನ್ನು ನದಿಯೇ ಹೆರಿಗೆ ಮಾಡಿಸಿ ಆಶ್ರಯಕೊಡುವುದನ್ನು ನಂಬಬಹುದೆ? ಸೀತೆ ಕಣ್ಣಿಗೆ ಕಾಣದಂತೆ ಅಗೋಚರವಾಗುವ ಸಾಧ್ಯತೆಗಳಿವೆಯೇ? ವನದೇವತೆ ಮನುಷ್ಯರೂಪದಲ್ಲಿ ಬಂದು ಶೋಕತಪ್ತರಿಗೆ ಸ್ಪಂದಿಸಿದ್ದು ಹೇಗೆ? ಹೀಗೆಲ್ಲಾ ಹಲವಾರು ಪ್ರಶ್ನೆಗಳಿಗೆ ಈ ನಾಟಕದಲ್ಲಿ ಉತ್ತರವಿಲ್ಲ. ದೃಶ್ಯಗಳ ಮೂಲಕ ಭ್ರಮಾತ್ಮಕತೆಯನ್ನು ಸೃಷ್ಟಿಸಿ ನೋಡುಗರನ್ನು ಕಲ್ಪನಾ ವಿಲಾಸದಲ್ಲಿ ಇರಿಸುವುದೇ ಈ ನಾಟಕದ ಉದ್ದೇಶವಾದಂತಿದೆ. ಇಡೀ ನಾಟಕ ಪ್ರತಿಮಾಪ್ರಧಾನವಾಗಿ ಮೂಡಿಬಂದಿದ್ದು ತತ್ವ ತರ್ಕಗಳನ್ನು ಬದಿಗಿಟ್ಟು ನಾಟಕವನ್ನು ನಾಟಕವಾಗಿ ನೋಡಿ ಆಸ್ವಾದಿಸಬಹುದಾಗಿದೆ. ಆರ್ಯರ ಕಲ್ಪನೆಗಳು ಹಾಗೂ ಮನುವಾದಿ ಪರಿಕಲ್ಪನೆಗಳಿಗೆ ತರ್ಕಗಳಿರುವುದಿಲ್ಲ, ಕೇವಲ ಕುರುಡು ಆರಾಧನೆಗಳಿರುತ್ತವೆ. ಅಂತಹ ಅಂಧಾರಾಧನೆಗೆ ಪೂರಕವಾಗಿ ರಾಮಾಯಣದ ಕಥೆ ಕಾವ್ಯಕಲ್ಪನೆಯ ಅತಿರೇಕಗಳನ್ನು ಮೈಗೂಡಿಸಿಕೊಂಡು ನೋಡುಗರಲ್ಲಿ ಭ್ರಮೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತವೆ. ಅಂತದೇ ಒಂದು ಪ್ರಯತ್ನ ನೀನಾಸಮ್‌ನ ‘ಉತ್ತರ ರಾಮಚರಿತೆ’ಯಲ್ಲಿದೆ.
ವಾಲ್ಮೀಕಿ ರಾಮಾಯಣದಲ್ಲಿ ಶೂದ್ರ ಶಂಭೂಕವಧೆಯನ್ನು ವೈಭವೀಕರಿಸಿ ವರ್ಣಾಶ್ರಮ ಧರ್ಮದ ಅಸಮಾನತೆ ಹಾಗೂ ಶೋಷಣೆಯನ್ನು ಸಮರ್ಥಿಸಿಕೊಳ್ಳಲಾಗಿತ್ತು. ಆದರೆ ಭವಭೂತಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ‘ಉತ್ತರ ರಾಮಚರಿತೆ’ಯಲ್ಲಿ ಶಂಭೂಕವಧೆಗೆ ಶಾಪವಿಮೋಚನಾ ಪರಿಕಲ್ಪನೆಯನ್ನು ಸೇರಿಸಿ ವೈದಿಕರ ಸಮರ್ಥನೆಯ ಸಾಮರ್ಥ್ಯವನ್ನು ಹೆಚ್ಚಿಸಿದನು. ತಪಸ್ಸು ಮಾಡುತ್ತಿದ್ದ ಶೂದ್ರನನ್ನು ಯಾಕೆ ರಾಮ ಹತ್ಯೆ ಮಾಡಿದ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದವರಿಗೆ ಶಾಪವಿಮೋಚನೆಯ ಕಲ್ಪನೆಯನ್ನು ಮುಂದಿಟ್ಟು ಬಾಯಿಮುಚ್ಚಿಸಲು ಪ್ರಯತ್ನಿಸಿದನು. ‘ತಪಸ್ಸು ಮಾಡುತ್ತಿದ್ದವನು ಶೂದ್ರನಲ್ಲಾ, ಅವನು ಶಾಪಗ್ರಸ್ತ ಗಾಂಧರ್ವನಾಗಿದ್ದ. ರಾಮನು ಅವನನ್ನು ಕೊಂದು ಶಾಪವಿಮೋಚನೆಗೊಳಿಸಿದ ದೇವರಾದ’ ಎಂದು ಹೇಳುತ್ತಾ ರಾಮನನ್ನು
ಶೂದ್ರಹತ್ಯೆಯ ಪಾಪದಿಂದ ವಿಮೋಚನೆಗೊಳಿಸುವುದು ಭವಭೂತಿಯ ಉದ್ದೇಶವಾಗಿತ್ತು. ವಾಲ್ಮೀಕಿ ಹಾಗೂ ಭವಭೂತಿಯ ಈ ವರ್ಣಾಶ್ರಮಾಧಾರಿತ ಪರಿಕಲ್ಪನೆಗಳನ್ನು ಪುಡಿಗಟ್ಟಿದವರು ನಮ್ಮ ಕುವೆಂಪು. ಭವಭೂತಿಯ ಶಾಪವಿಮೋಚನಾಸ್ತ್ರಕ್ಕೆ ಪ್ರತಿಯಾಗಿ ಕುವೆಂಪುರುವು ಬ್ರಹ್ಮಾಸ್ತ್ರವನ್ನೇ ಹುಡುತ್ತಾರೆ. ಶೂದ್ರ ಶಂಭೂಕನ ಹತ್ಯೆಗೆ ರಾಮ ಬಿಟ್ಟ ಬ್ರಹ್ಮಾಸ್ತ್ರ ಬ್ರಾಹ್ಮಣನ ಹತ್ಯೆಗೆ ಮುಂದಾಗುತ್ತದೆ. ಶೂದ್ರ ತಪಸ್ವಿಯನ್ನು ಬೆಂಬಲಿಸುತ್ತಾ ಪುರೋಹಿತಶಾಹಿಯ ಅಟ್ಟಹಾಸವನ್ನು ಮಟ್ಟಹಾಕಲು ಕುವೆಂಪುರವರು ತಮ್ಮ ‘ಶೂದ್ರ ತಪಸ್ವಿ’ ನಾಟಕದಲ್ಲಿ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದಾರೆ.
‘ನೀನಾಸಮ್’ ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಕಾಣಿಕೆಯನ್ನು ಕೊಟ್ಟಿದೆ ಎಂಬುದು ನಿರ್ವಿವಾದ. ಆದರೆ ನೀನಾಸಮ್ ಎನ್ನುವುದು ‘ವೈದಿಕ ಮನಸ್ಸುಗಳ ಅಗ್ರಹಾರ’ ಎನ್ನುವ ಆರೋಪವನ್ನು ಪುರಸ್ಕರಿಸುವ ಹಾಗೆ ‘ಉತ್ತರ ರಾಮಚರಿತೆ’ಯಂತಹ ನಾಟಕಗಳನ್ನು ನೀನಾಸಮ್ ನಿರ್ಮಿಸುತ್ತದೆ. ಈ ವಾದಕ್ಕೆ ಸಾಕ್ಷಿಯೇನೋ ಎಂಬಂತೆ ಈ ನಾಟಕದ ಎಲ್ಲಾ ಪುರುಷ ಪಾತ್ರಗಳ ಹಣೆಗೆ ಖಡ್ಡಾಯವಾಗಿ ನಾಮವನ್ನು ಹಾಕಲಾಗಿದೆ. ರಾಮಾಯಣ ಕಾಲದಲ್ಲಿ ಎಲ್ಲರೂ ನಾಮ ಹಾಕುವುದು ರಾಜಾಜ್ಞೆಯಾಗಿತ್ತಾ ಎನ್ನುವ ಸಂದೇಹ ಬರುತ್ತದೆ. ಇಡೀ ನಾಟಕದಲ್ಲಿ ಮನುವಾದದ ಸಮರ್ಥನೆಗಳಿವೆ. ಅತಿಮಾನುಷ ಪರಿಕಲ್ಪನೆಗಳಿವೆ. ಮರ್ಯಾದಾ ಪುರುಷೋತ್ತಮ ರಾಮನ ತಪ್ಪುಗಳಿಗೆ ಸಮರ್ಥನೆಗಳಿವೆ. ಇಂತಹ ನಾಟಕ ಸಮಾಜಕ್ಕೆ ಏನನ್ನು ಹೇಳುತ್ತದೆ? ರಾಮನು ಸೀತೆ... ಎಂದು ಗೋಳಾಡಿದರೆ ಆತನ ಘೋರತಪ್ಪುಗಳು ಕ್ಷಮಾರ್ಹವಾಗಲು ಸಾಧ್ಯವಾ? ಪುರೋಹಿತಶಾಹಿಗಳ ಹಿತಾಸಕ್ತಿಯನ್ನು ರಕ್ಷಿಸಲು ಶೂದ್ರ ಶಂಭೂಕನನ್ನು ಕೊಂದಿದ್ದು ಜೀವವಿರೋಧಿಯಲ್ಲವೇ? ಎನ್ನುವ ಸಂದೇಹ ನೋಡುಗರನ್ನು ಕಾಡದೇ ಇರದು. ತನಗಾದ ಅನ್ಯಾಯಕ್ಕೆ ಎದುರಾಗಿ ಒಂದೇ ಒಂದು ವಿರೋಧವನ್ನೂ ತೋರದ ಈ ನಾಟಕದ ಸೀತೆ ತನಗಾದ ಅವಮಾನದ ಗಾಯಗಳನ್ನೂ ಮರೆತು ರಾಮನಿಗೆ ಕರುಣೆ ತೋರಿ ಸಾಂತ್ವನ ಹೇಳುವ ಪರಿ ಮಾತ್ರ ಪಕ್ಕಾ ಮನುವಾದದ ಪ್ರತೀಕವೆನ್ನಿಸುವಂತಿದೆ. ‘ಪತಿಯಾದವನು ಪತ್ನಿಗೆ ಅದೆಷ್ಟೇ ಅನ್ಯಾಯ ಮಾಡಿದರು ಹೆಂಡತಿ ಮಾತ್ರ ಯಾವಾಗಲೂ ಗಂಡನ ಶ್ರೇಯಸ್ಸನ್ನೆ ಬಯಸಬೇಕು’ ಎನ್ನುವುದು ಮನುವಾದದ ಸ್ತ್ರೀವಿರೋಧಿ ನಿಲುವಾಗಿದೆ. ಅದನ್ನೇ ಈ ನಾಟಕದಲ್ಲಿ ಪ್ರಜ್ಞಾಪೂರ್ವಕವಾಗಿ ಪ್ರತಿಪಾದಿಸಲಾಗಿದೆ. ಈ ನಾಟಕದಲ್ಲಿ ‘ಬ್ರಾಹ್ಮಣರು ಗೋಮಾಂಸವನ್ನು ಸೇವಿಸುತ್ತಿದ್ದರು’ ಎನ್ನುವ ಸತ್ಯವನ್ನು ಹೇಳಿದ್ದು ಮಾತ್ರ ವಾಸ್ತವಾಂಶವಾಗಿದೆ.
ಈ ನಾಟಕದ ಕುರಿತು ವೈಚಾರಿಕ ಜಿಜ್ಞಾಸೆಯನ್ನು ಪಕ್ಕಕ್ಕಿಟ್ಟು ನಾಟಕವಾಗಿಯೇ ಗಮನಿಸಿದರೆ, ರಂಗಶಿಸ್ತು ಮತ್ತು ಅಭಿನಯ ಅತ್ಯುತ್ತಮವಾಗಿ ಮೂಡಿಬಂದಿವೆ. ಬಳಸಿದ ರಂಗತಂತ್ರಗಳು ನೋಡುಗರ ಗಮನ ಸೆಳೆಯುವಂತಿವೆ. ನಾಟಕದ ಆರಂಭದಲ್ಲಿ ರಾಮನನ್ನು ಸ್ತುತಿಮಾಡುವ ಹಾಡಿನ ಸಂದರ್ಭದಲ್ಲಿ ನಾನಾ ವಿನ್ಯಾಸದಲ್ಲಿ ಗುಂಪುಗಳನ್ನು ಬಳಸಿದ್ದು ಗಮನಾರ್ಹವಾಗಿದೆಯಾದರೂ ಸ್ವಲ್ಪ ದೀರ್ಘವಾಗಿದೆ. ಕನ್ನಡ ನಾಟಕದಲ್ಲಿ ಹಿಂದಿ ಗೀತೆಗಳ ಬಳಕೆ ಅನಗತ್ಯವೆನಿಸುತ್ತದೆ. ಮೊದಲೇ ಈ ನಾಟಕದ ನಿರೂಪಣೆಯೇ ಸಂಕೀರ್ಣವಾಗಿದೆ ಇಂತಹುದರಲ್ಲಿ ಪಾತ್ರೋಚಿತ ವೇಷಗಳಿಲ್ಲದೆ ಗೊಂದಲಗಳುಂಟಾಗಿದೆ. ಎಲ್ಲಾ ಪುರುಷ ಪಾತ್ರಗಳೂ ಹೆಚ್ಚು ಕಡಿಮೆ ಒಂದೇ ರೀತಿಯ ಕಾಸ್ಟೂಮ್ಸಗಳಲ್ಲಿವೆ. ಹೀಗಾಗಿ ಯಾರು ರಾಜ ಯಾರು ಸೇವಕ ಎನ್ನುವುದೇ ತಿಳಿಯದಂತಾಗಿದೆ. ಕೆಲವು ಕಲಾವಿದರು ಹಲವು ಪಾತ್ರಗಳನ್ನು ನಿರ್ವಹಿಸುವಾಗ ಕಾಸ್ಟೂಮ್ಗಳಲ್ಲಿ ಒಂದಿಷ್ಟಾದರೂ ಬದಲಾವಣೆ ಮಾಡದಿದ್ದರೆ ಜನಸಾಮಾನ್ಯ ಪ್ರೇಕ್ಷಕರಿಗೆ ಕನ್ಪ್ಯೂಜ್ ಆಗುತ್ತದೆ. ಒಂದೇ ರೀತಿಯ ವೇಶಭೂಷಣಗಳ ಮೂಲಕ ನಾಟಕ ಕಟ್ಟುವುದು ನೀನಾಸಮ್ ಶೈಲಿಯೇ ಆದಂತಿದೆ. ಆದರೆ ಕ್ಲಿಷ್ಟಕರ ನಾಟಕಗಳನ್ನು ಸರಳಗೊಳಿಸಲಾದರೂ ಪ್ರಮುಖ ಪಾತ್ರಗಳಲ್ಲಿ ಒಂದಿಷ್ಟು ಬದಲಾವಣೆ ತರಬೇಕಾಗಿತ್ತು. ಇರುವುದನ್ನು ಮುರಿದು ಕಟ್ಟುವುದು ನೀನಾಸಮ್ ನಾಟಕಗಳ ಪ್ರಮುಖ ಅಂಶ. ಆದರೆ ಹಾಗೆ ಕಟ್ಟುವಾಗ ಗೊಂದಲ ಗೋಜಲುಗಳಿಲ್ಲದಂತೆ ನೋಡಿಕೊಂಡಿದ್ದರೆ ಬಹುಸಂಖ್ಯಾತ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಇಲ್ಲವಾದರೆ ಬುದ್ದಿಜೀವಿವರ್ಗಗಳಿಗೆ ಮಾತ್ರ ನಾಟಕ ಸೀಮಿತವಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಪ್ರಯೋಗಗಳನ್ನು ಮಾಡುವ ನೀನಾಸಮ್ ತಿರುಗಾಟ ತಂಡವು ದುಡಿಯುವ ವರ್ಗದವರ ದೃಷ್ಟಿಕೋನದಲ್ಲಿ ನಾಟಕವನ್ನು ನಿರೂಪಿಸಿದರೆ ಎಲ್ಲರಿಗೂ ಸಂವಹನಗ್ರಾಹ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗೋಳಾಟ ಪ್ರಧಾನವಾದ ಗೋಜಲಿನ ‘ಉತ್ತರ ರಾಮಚರಿತೆ’ ನಾಟಕವು ಬಹುಜನರನ್ನು ತಲುಪುವಲ್ಲಿ ವಿಫಲವಾಗಿದೆ.
ಇಡೀ ನಾಟಕದಲ್ಲಿ ಗಮನ ಸೆಳೆಯುವುದು ಕೆ.ವಿ.ಶಿಶಿರ, ವಿದ್ಯಾ ಹೆಗಡೆ ಮತ್ತು ಕೆ.ವಿ.ಅಕ್ಷರರವರ ಸಂಗೀತ ವಿನ್ಯಾಸ. ನಾಟಕದಲ್ಲಿ ಮೂಡ್ ಸೃಷ್ಟಿಸುವಲ್ಲಿ ಸಂಗೀತದ ಪಾತ್ರ ಪ್ರಧಾನವಾಗಿದೆ. ಮಂಜು ಕೊಡಗುರವರ ರಂಗವಿನ್ಯಾಸ ನಾಟಕದ ಹೈಲೈಟ್ ಆಗಿದೆ. ಒಂದು ಸಲ ವಿನ್ಯಾಸಗೊಳಿಸಿದ ಬೆಳಕು ಆರಂಭದಿಂದ ಕೊನೆಯವರೆಗೂ ಒಂದೇ ರೀತಿ ಇದ್ದು ನಾಟಕದ ಮೂಡಿಗೆ ತಕ್ಕಂತೆ ಬದಲಾಗುವ ಪ್ರಯತ್ನವನ್ನೂ ಮಾಡಲಿಲ್ಲ. ಕಲಾವಿದರ ಅತಿ ಎನ್ನಿಸುವ ಅಭಿನಯ ಶೈಲಿ ನಾಟಕವನ್ನು ನೋಡಿಸಿಕೊಂಡು ಹೋಗುತ್ತದಾದರೂ ಕಥಾನಿರೂಪನೆಯಲ್ಲಿ ಎಳೆತವಾದಂತಾಗಿ ನೋಡುಗರಿಗೆ ಬೋರ್ ಹೊಡೆಸುತ್ತದೆ. ಸೀತೆಯನ್ನು ತುಂಬು ಬಸುರಿ ಎಂದು ಹೇಳಲಾಗುತ್ತದೆಯಾದರೂ ಬಸಿರಿನ ಲಕ್ಷಣಗಳಿಲ್ಲದಿರುವುದು ವಿಚಿತ್ರವಾಗಿದೆ. ವೆಂಕಟರಮಣ ಐತಾಳರು ಕ್ಲಿಷ್ಟಕರವಾದ ನಾಟಕಕ್ಕೆ ಸ್ಪಷ್ಟತೆಯನ್ನು ಕೊಡುವಲ್ಲಿ ಅಸಫಲರಾಗಿದ್ದಾರೆ. ಆಂಗಿಕಾಭಿನಯ ಮತ್ತು ವಾಚಿಕಾಭಿನಯದಲ್ಲಿ ಗೆಲ್ಲುವ ನಾಟಕ ಆಹಾರ್ಯಾಭಿನಯ ಮತ್ತು ಭಾವಾಭಿನಯದಲ್ಲಿ ಸೋತಿದೆ. ಈ ನಾಟಕದ ಮೊದಲರ್ಧ ಭಾಗವಂತೂ ಗೋಳಾಟದ ಏಕತಾನತೆಯಿಂದಾಗಿ ಆಕಳಿಕೆಯನ್ನುಂಟುಮಾಡಿದರೆ ದ್ವಿತಿಯಾರ್ಧವು ಲವ ಪಾತ್ರದ ಆಗಮನದಿಂದ ಒಂಚೂರು ಸಂಚಲನವನ್ನುಂಟುಮಾಡುವಂತಿದೆ. ರಾಮನನ್ನು ಲಕ್ಷ್ಮನನ ಮಗ ಚಂದ್ರಕೇತು ತಾತ ಎಂದು ಕರೆಯುವುದು, ಕೆಲವೊಮ್ಮೆ ಲವನೂ ಸಹ ತಂದೆಯನ್ನು ತಾತ ಎಂದೇ ಸಂಭೋದಿಸುವುದು ಆಭಾಸಕಾರಿಯಾಗಿದೆ. ನೀನಾಸಮ್ ನಾಟಕ ಪ್ರದರ್ಶನವೆಂದು ನಿರೀಕ್ಷೆಯಿಟ್ಟು ಹೋದವರಿಗೆ ನಿರಾಸೆಯನ್ನುಂಟುಮಾಡುವಲ್ಲಿ ‘ಉತ್ತರರಾಮಚರಿತೆ’ ಯಶಸ್ವಿಯಾಗಿದೆ.
ಶಾಪಗ್ರಸ್ತರು ಶೂದ್ರರಾಗುತ್ತಾರೆ, ಶೂದ್ರರಾಗಿ ಹುಟ್ಟುವುದೇ ಒಂದು ಶಾಪ. ಶಾಪವಿಮೋಚಿತರು ಶಾಶ್ವತ ಲೋಕ ಸೇರುತ್ತಾರೆ. ವಿಧಿಯ ಹೂಟಕ್ಕೆ ಎಲ್ಲರೂ ಬಲಿಯಾಗಲೇಬೇಕು.. ಹೀಗೆ ಕೆಲವಾರು ಕರ್ಮಸಿದ್ದಾಂತದ ಬ್ರಾಹ್ಮಣ್ಯದ ಪರಿಕಲ್ಪನೆಗಳನ್ನು ‘ಉತ್ತರ ರಾಮಚರಿತೆ’ ನಾಟಕ ಪ್ರಸ್ತುತ ಪಡಿಸುತ್ತದೆ. ಆ ಮೂಲಕ ನಿರ್ದೇಶಕ ಐತಾಳರ, ನೀನಾಸಮ್ ರೂವಾರಿಗಳ ಅಂತರಂಗದ ಬ್ರಾಹ್ಮಣ್ಯದ ದೋರಣೆಗಳನ್ನು ಬಯಲುಗೊಳಿಸುತ್ತದೆ. ಯಾವ ಜ್ಯಾತ್ಯಾತೀತ ರೀತಿಯಲ್ಲಿ ನೀನಾಸಮ್ಮನ್ನು ಕಟ್ಟಲು ಕೆ.ವಿ.ಸುಬ್ಬಣ್ಣನವರು ಶ್ರಮಿಸಿದ್ದರೋ ಅವರ ಆಶಯಕ್ಕೆ ವಿರುದ್ಧವಾಗಿ ಈ ನಾಟಕ ಮೂಡಿಬಂದಿದೆ. ಅಗ್ರಹಾರದ ಅಂತರಂಗದ ಅನುಭೂತಿಯನ್ನು ಅನಾವರಣಗೊಳಿಸಿದೆ. ‘ನೀನಾಸಮ್’ ರಂಗಸಂಘಟನಾ ಶಕ್ತಿ ಬಲು ದೊಡ್ಡದು, ಐತಾಳರಂತ ನಿರ್ದೇಶಕರ ನಾಟಕ ಕಟ್ಟುವ ಸಾಮರ್ಥ್ಯವೂ ದೊಡ್ಡದು. ಆದರೆ ಇವರೆಲ್ಲಾ ಯಾಕೆ ತಮ್ಮ ಶಕ್ತಿ , ಸಾಮರ್ಥ್ಯ ಹಾಗೂ ಸಂಪನ್ಮೂಲಗಳನ್ನು ಈ ರೀತಿಯ ಜನವಿರೋಧಿ, ಜೀವವಿರೋಧಿ ನಾಟಕಗಳನ್ನು ನಿರ್ಮಿಸುವಲ್ಲಿ ವ್ಯಯಿಸುತ್ತಾರೆ? ಪುರೋಹಿತಶಾಹಿ ಮೌಲ್ಯಗಳನ್ನ ಪ್ರಚಾರಗೊಳಿಸಲು ಪ್ರಯತ್ನಿಸುತ್ತಾರೆ? ‘ಶೂದ್ರ ತಪಸ್ವಿ’ಯಂತಹ ನಾಟಕವನ್ನು ನಿರ್ಮಿಸಿ ಪ್ರದರ್ಶಿಸಿದ್ದ ಇದೇ ನೀನಾಸಮ್ ಈಗ ಅದಕ್ಕೆ ವ್ಯತಿರಿಕ್ತವಾದ ‘ಉತ್ತರ ರಾಮಚರಿತೆ’ಯನ್ನೂ ನಿರ್ಮಿಸಿ ಪ್ರದರ್ಶಿಸುತ್ತಿರುವುದು ಅದರ ಬದಲಾದ ಮನೋಭಾವದ ಲಕ್ಷಣವಾ? ಹೀಗೆ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಇಡೀ ನಾಟಕ ಅರ್ಥವಾಗದ ಸುಂದರ ಚಿತ್ರಪಟದಂತೆ ಭಾಸವಾಗುತ್ತದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ