ಮಂಗಳವಾರ, ಅಕ್ಟೋಬರ್ 28, 2014

“ಶಂಕರನಾಗ್-60 ; ರಂಗಶಂಕರ-10 ” ‘ರಂಗಶಂಕರ’ಕ್ಕೆ ದಶಮಾನೋತ್ಸವದ ಸಂಭ್ರಮ


ಕಾರ್ಪೋರೇಟ್ ಸಂಸ್ಕೃತಿ ಅಳಿಯಲಿ, ’ರಂಗಶಂಕರದಲ್ಲಿ ಕನ್ನಡ ಸಂಸ್ಕೃತಿ ಬೆಳೆಯಲಿ.


ಶಹಾಜಹಾನ್ ತನ್ನ ಮಡದಿಯ ನೆನಪಿಗೆ ಅಮೃತಶಿಲೆಯ ತಾಜ್ಮಹಲನ್ನೇ ಕಟ್ಟಿಸುತ್ತಾನೆ. ಅದೇ ರೀತಿ ಕೆಲವಾರು ಪುರುಷರು ತಮ್ಮ ಪತ್ನಿಯ ನೆನಪಿಗಾಗಿ ಏನೇನೋ ಸ್ಮಾರಕಗಳನ್ನು ಕಟ್ಟಿಸಿ ತಮ್ಮ ಪ್ರೀತಿಪಾತ್ರರಾದವರ ಹೆಸರನ್ನು ಅಜರಾಮರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮಹಿಳೆಯರು ತೀರಿಕೊಂಡ ತಮ್ಮ ಸಂಗಾತಿಯ ಸ್ಮರಣಾರ್ಥ ನಿತ್ಯ ಸ್ಮರಣೀಯ ಸ್ಥಾವರಗಳನ್ನು ಕಟ್ಟಿದ್ದು ಅತೀ ವಿರಳ. ಆದರೆ ಅಂತಹ ಅಪರೂಪದ ಪ್ರಯತ್ನವೊಂದನ್ನು ಬೆಂಗಳೂರಿನಲ್ಲಿ ಮಾಡಿ ಯಶಸ್ವಿಯಾದವರು ಅರುಂಧತಿರಾವ್. ಕನ್ನಡದ ರಂಗಭೂಮಿ ಮತ್ತು ಸಿನೆಮಾ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ನಟ ಶಂಕರನಾಗ್ 1990, ಸೆಪ್ಟೆಂಬರ್ 30
ರಂದು ಅನಿರೀಕ್ಷಿತವಾಗಿ ನಡೆದ ಅಪಘಾತದಲ್ಲಿ ನಿಧನರಾದಾಗ ಕನ್ನಡಿಗರೆಲ್ಲರಿಗೂ ಆಘಾತವಾಗಿತ್ತು. ಬೇರೆ ಯಾರೇ ಆಗಿದ್ದರೂ ಒಂದಷ್ಟು ದಿನ ನೊಂದುಕೊಂಡು ಕಣ್ಣೀರಿಟ್ಟು ಅಗಲಿದ ಗಂಡನ ನೆನಪಿನಲ್ಲೇ ಕಾಲ ಕಳೆಯುತ್ತಿದ್ದರು ಇಲ್ಲವೇ ಇನ್ನೊಬ್ಬ ಸಂಗಾತಿಯನ್ನು ಆಯ್ಕೆಮಾಡಿಕೊಂಡು ಹೊಸ ಬದುಕನ್ನು ಕಂಡುಕೊಳ್ಳುತ್ತಿದ್ದರು. ಆದರೆ ಶಂಕರನಾಗರವರ ಪತ್ನಿ ಅರುಂಧತಿಯವರು ಸಹ ಕೆಲವು ವರ್ಷಗಳ ಕಾಲ ರಂಗಕ್ರಿಯೆಯಿಂದ ದೂರವೇ ಉಳಿದಿದ್ದರು. ಆನಂತರ ಪತಿಯ ಆಕಸ್ಮಿಕ ಅಗಲಿಕೆಯ ಆಘಾತದಿಂದ ಹೊರಬಂದು ಶಂಕರನಾಗರವರು ಕಂಡ ಕನಸನ್ನು ನನಸಾಗಿಸುವ ಮೂಲಕ ಶಂಕರನಾಗರ ಹೆಸರನ್ನು ಚಿರಸ್ಥಾಯಿಗೊಳಿಸುವ ಪ್ರಯತ್ನ ಆರಂಭಿಸಿದರು. ಬೆಂಗಳೂರಿನಲ್ಲಿ ರಂಗಮಂದಿರವೊಂದನ್ನು ಕಟ್ಟಿಸಬೇಕು ಎನ್ನುವ ಶಂಕರನಾಗರವರ ಬಯಕೆಯನ್ನು ಸಾಕಾರಗೊಳಿಸಲು ಐದು ವರ್ಷಗಳ ಕಾಲ ಪರಿಶ್ರಮವಹಿಸಿ ಬೆಂಗಳೂರಿನ ಜೆಪಿ ನಗರದಲ್ಲಿ ರಂಗಶಂಕರ ಹೆಸರಿನಲ್ಲಿ ಸುಸಜ್ಜಿತ ರಂಗಮಂದಿರವನ್ನು ಕಟ್ಟಿಸಿದರು. ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಅಂದರೆ 2004 ಅಕ್ಟೋಬರ 28ರಂದು ಶಂಕರನಾಗ್ ಕನಸಿದ ರಂಗಶಂಕರ ಚಾಲನೆಗೊಂಡಿತು.

ಶಂಕರನಾಗ್ರವರು ಸಂಕೇತ ಎನ್ನುವ ರಂಗತಂಡವನ್ನು ಹುಟ್ಟುಹಾಕಿದ್ದರು. ಕಾರ್ನಾಡರ ನಾಗಮಂಡಲ, ಅಂಜುಮಲ್ಲಿಗೆ ಸೇರಿದಂತೆ ಹಲವಾರು ಕನ್ನಡ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದರು. ಶಂಕರನಾಗ ನಿರ್ದೇಶಿಸಿದ ನೋಡಿ ಸ್ವಾಮಿ ನಾವಿರೋದೆ ಹೀಗೆ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ನಂತರ ಸಿನೆಮಾ ಕೂಡಾ ಆಗಿ ಯಶಸ್ವಿಯಾಯಿತು. ಆಗ ಹಾಗೂ ಹೀಗೂ ನಾಟಕ ನಿರ್ಮಾಣವನ್ನು ಮಾಡಬಹುದಾಗಿತ್ತಾದರೂ ನಾಟಕ ಪ್ರದರ್ಶನ ಮಾಡಲು ಬೆಂಗಳೂರಿನಲ್ಲಿ ರಂಗಮಂದಿರಗಳಿರಲಿಲ್ಲ. ಇರುವುದೊಂದು ರವೀಂದ್ರ ಕಲಾಕ್ಷೇತ್ರ ಬೇಕೆಂದಾಗ ಸಿಗುತ್ತಿರಲಿಲ್ಲ. ಟೌನ್ಹಾಲ್ ಇದ್ದರೂ ನಾಟಕ ಪ್ರದರ್ಶನಕ್ಕೆ ಸೂಕ್ತವಾಗಿರಲಿಲ್ಲ. ಚೌಡಯ್ಯ ಮೆಮೋರಿಯಲ್ ಹಾಲ್ ಬಾಡಿಗೆ ಕಟ್ಟಲು ರಂಗಕರ್ಮಿಗಳಿಗೆ ಸಾಧ್ಯವೂ ಇರಲಿಲ್ಲ. ಹಲವಾರು ರಂಗಚಟುವಟಿಕೆಗಳು ಆಗ ಕ್ರಿಯಾಶೀಲವಾಗಿದ್ದವು. ಆದರೆ ನಾಟಕ ಪ್ರದರ್ಶನಕ್ಕೆ ಬೇಕಾದ ನಾಟಕಮಂದಿರಗಳ ಕೊರತೆ ಇತ್ತು. ಇದನ್ನು ಸ್ವತಃ ಅನುಭವಿಸಿ ಮನಗಂಡ ಶಂಕರನಾಗ್ರವರಿಗೆ ಹೇಗಾದರೂ ಮಾಡಿ ಸಂಕೇತ ಹೆಸರಲ್ಲಿ ಒಂದು ವ್ಯವಸ್ಥಿತ ರಂಗಮಂದಿರವನ್ನು ಕಟ್ಟಬೇಕು ಎಂದು ಆಸೆಪಟ್ಟರು. ಅವರಿದ್ದಿದ್ದರೆ ರಂಗಮಂದಿರವೊಂದನ್ನು ಕಟ್ಟುವುದು ಅಸಾಧ್ಯವೇನೂ ಆಗಿರಲಿಲ್ಲ. ಯಾಕೆಂದರೆ ಅವರ ಜನಪ್ರೀಯತೆ ಅಷ್ಟಿತ್ತು ಹಾಗೂ ರಾಜಕೀಯದಲ್ಲೂ ಸಹ ತೊಡಗಿಸಿಕೊಂಡಿದ್ದರು. ಆದರೆ.... ಅದೊಂದು ದಿನ ರಂಗಮಂದಿರ ಕಟ್ಟುವ ತಮ್ಮ ಆಶಯದೊಂದಿಗೆ ಶಂಕರನಾಗ್ ತೀರಿಕೊಂಡರು. ಶಂಕರರವರ ರಂಗಮಂದಿರದ ಆಸೆಯನ್ನು ಅವರ ಪತ್ನಿ ಅರುಂಧತಿಯವರು ಸಾಕಾರಗೊಳಿಸಿದರು. ರಂಗಭೂಮಿ ಹೆಮ್ಮೆಪಡುವಂತಹ ರಂಗಶಂಕರವನ್ನು ಅಸ್ತಿತ್ವಕ್ಕೆ ತಂದರು. ಹಲವಾರು ರಂಗತಂಡಗಳು ನಿರಂತರವಾಗಿ ನಾಟಕಗಳನ್ನು ಪ್ರದರ್ಶನ ಮಾಡುವಂತಹ ವ್ಯವಸ್ಥೆಯೊಂದನ್ನು ರೂಪಿಸಿದರು.
   
ರಂಗಮಂದಿರ ಕಟ್ಟುವುದು ಅಷ್ಟೇನು ಸುಲಭಸಾಧ್ಯವಲ್ಲ. ಇಲ್ಲಿವರೆಗೂ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಅತಿರಥಮಹಾರಥರಿಗೂ ಸ್ವಂತದ್ದೊಂದು ಸುಸಜ್ಜಿತ ನಾಟಕ ಮಂದಿರ ಕಟ್ಟಲು ಸಾಧ್ಯವಾಗಿಲ್ಲ. ಹಾಗೆ ರಂಗಮಂದಿರವೊಂದನ್ನು ಕಟ್ಟಿಸಬೇಕೆಂದಿದ್ದರೂ ಸಂಪೂರ್ಣ ಸರಕಾರದ ಮೇಲೆಯೇ ಅವಲಂಭಿಸಬೇಕಾಗುತ್ತದೆ. ಈಗಾಗಲೇ ರಾಜಕುಮಾರ್, ಗುಬ್ಬಿ ವೀರಣ್ಣ.... ಮುಂತಾದ ದಿಗ್ಗಜರ ಹೆಸರಲ್ಲಿ ಸರಕಾರ ನಿರ್ಮಿಸಿದ ರಂಗಮಂದಿರಗಳು ಸರಿಯಾದ ನಿರ್ವಹಣೆ ಇಲ್ಲದೇ ಬೇಕಾಬಿಟ್ಟಿ ಉಪಯೋಗವಾಗುತ್ತಿವೆ. ಆದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ನಾಟಕ ಪ್ರದರ್ಶನಕ್ಕೊಸ್ಕರವೇ ಮೀಸಲಾದ ರಂಗಮಂದಿರ ಯಾವುದಾದರೂ ಇದ್ದರೆ..... ವರ್ಷ ಪೂರ್ತಿ ನಾಟಕಗಳ ಪ್ರದರ್ಶನಗಳು ನಿರಂತರವಾಗಿ ನಡೆಯುವ ನಾಟಕಮಂದಿರ ಯಾವುದಾದರೂ ಇದ್ದರೆ ಅದು ರಂಗಶಂಕರ ಮಾತ್ರವೇ. ಇಂತಹ ಅಪರೂಪದ ರಂಗಮಂದಿರ ಅಸ್ತಿತ್ವಕ್ಕೆ ಬಂದಿದ್ದರೆ ಅದರ ಕೀರ್ತಿ ಸಲ್ಲಬೇಕಾದದ್ದು ಹೀಗೊಂದು ರಂಗಮಂದಿರದ ಕನಸನ್ನು ಕಂಡ ದಿ.ಶಂಕರನಾಗ್ರವರಿಗೆ ಹಾಗೂ ಕನಸನ್ನು ನನಸಾಗಿಸಿದ ಅರುಂಧತಿನಾಗ್ರವರಿಗೆ.

ಅರುಂಧತಿ ನಾಗ್
ಶಂಕರನಾಗ್ ತಮ್ಮ ನಟನೆಯಿಂದ ಕೊಟ್ಯಾಂತರ ಜನರನ್ನು ಸಂಪಾದಿಸಿದ್ದರೇ ಹೊರತು ಅಪಾರ ಹಣವನ್ನಲ್ಲ. ಅವರ ಯೋಜನೆಗಳು ಒಂದೆರಡಲ್ಲ. ಸಂಕೇತ ಸ್ಟುಡಿಯೋ, ಕಂಟ್ರಿ ಕ್ಲಬ್ ಹೀಗೆ ಅನೇಕ ಯೋಜನೆಗಳಲ್ಲಿ ಇರುವ ಹಣವನ್ನು ತೊಡಗಿಸಿದ ಶಂಕರನಾಗ್ ಇದ್ದಕ್ಕಿದ್ದಂತೆ ಎಲ್ಲವನ್ನು ನಡುಮಧ್ಯದಲ್ಲೇ ಬಿಟ್ಟು ಹೊರಟುಹೋದರು. ಜೊತೆಗೆ ಹಲವಾರು ಕನಸುಗಳನ್ನೂ ಸಹ. ಶಂಕರರ ರಂಗಮಂದಿರದ ಕನಸನ್ನು ನನಸಾಗಿಸುವ ಪ್ರಯತ್ನವನ್ನು ಅರುಂಧತಿಯವರು ಆರಂಭಿಸಿದರಾದರೂ ದಾರಿ ಸುಗಮವಾಗಿರಲಿಲ್ಲ. ರಂಗಮಂದಿರಕ್ಕೆ ಬೆಂಗಳೂರಿನ ಜನವಸತಿ ಇರುವಲ್ಲಿ ಜಾಗ ಬೇಕಾಗಿತ್ತು ಹಾಗೂ ಕಟ್ಟಡಕ್ಕೆ ಅಪಾರ ಹಣ ಬೇಕಾಗಿತ್ತು. ಇವರಡೂ ಅರುಂಧತಿನಾಗ್ ಹಾಗೂ ಅವರ ಸಂಕೇತ್ ತಂಡದಲ್ಲಿರುವವರಲ್ಲಿ ಇರಲಿಲ್ಲ. ಆದರೂ ಅರುಂಧತಿ ದೃತಿಗೆಡಲಿಲ್ಲ. ನಿರಾಶೆಯಿಂದ ಹಿಂದಡಿ ಇಡಲಿಲ್ಲ. ಶಂಕರನಾಗ್ರವರ ಆತ್ಮೀಯರಾದವರ ಒಂದು ತಂಡವನ್ನು ಕಟ್ಟಿದರು. ಇನ್ನು ಕೆಲವು ರಂಗಕರ್ಮಿಗಳನ್ನು ಜೊತೆಗಿರಿಸಿಕೊಂಡರು. ಶಂಕರನಾಗ್ ನೆನಪಿನಲ್ಲಿ ರಂಗಮಂದಿರ ಕಟ್ಟುತ್ತೇವೆ ಜಾಗ ಕೊಡಿ ಎಂದು ಸರಕಾರದ ಮೇಲೆ ಒತ್ತಡ ತಂದರು. ಎಲ್ಲರ ಪ್ರಯತ್ನ ಫಲನೀಡಿತು. ಹನ್ನೆರಡು ಸಾವಿರ ಚದರಡಿಯ ಸಿಎ ನಿವೇಶನವೊಂದು ಮೂವತ್ತುಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸರಕಾರದಿಂದ ಮಂಜೂರಾಯಿತು. ಆದರೆ ಕನಿಷ್ಟ ಎಂದರೂ ಮೂರು ಕೋಟಿಗಳಷ್ಟು ಹಣ ರಂಗಮಂದಿರ ಕಟ್ಟಲು ಬೇಕಾಗಿತ್ತು. ಜನರಿಂದ ಹಣ ಸಂಗ್ರಹಿಸುವ ಅಭಿಯಾನವನ್ನು ಶುರುಮಾಡಲಾಯಿತುಅದು 1999 ಇಸ್ವಿ. ದೇಶದ ಹಣಕಾಸಿನ ವ್ಯವಸ್ಥೆ ಆರ್ಥಿಕ ಹಿಂಜರಿತದಿಂದ ಕಂಗಾಲಾಗಿತ್ತು. ಕೇಳಿದಲ್ಲೆಲ್ಲಾ ಹಣ ಹುಟ್ಟಲಿಲ್ಲ. ಆದರೂ ರಂಗಶಂಕರ ಟೀಂ ತಮ್ಮ ಪ್ರಯತ್ನ ಕೈಬಿಡಲಿಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹೋಗಿ ಬೇಡಿ ಹಣ ಸಂಗ್ರಹಿಸಲಾಯಿತು. ಶಂಕರನಾಗರವರ ಸ್ನೇಹಿತರು, ಅಭಿಮಾನಿಗಳು ಹಣ ಕೊಟ್ಟರು. ಇನ್ಪೋಸಿಸ್ ನಿಲೇಕಣಿ ಹೆಚ್ಚಿನ ಸಹಕಾರ ಕೊಟ್ಟರು. ಕಟ್ಟಡಕ್ಕೆ ಬೇಕಾದ ಸಿಮೆಂಟು, ಕಬ್ಬಿಣ, ಬಣ್ಣ ಹೀಗೆ...ಒಂದೊಂದು ವಸ್ತುಗಳನ್ನೂ ಸಹ ದೇಣಿಗೆಯಿಂದ ಸಂಗ್ರಹಿಸಲಾಯಿತು. ಆಗ ಕನ್ನಡಿಗರು ಶಂಕರನಾಗರವರ ಮೇಲಿದ್ದ ಅಭಿಮಾನದಿಂದಾಗಿ ತಮ್ಮ ಕೈಲಾದಷ್ಟು ಕೊಟ್ಟು ಸಹಕರಿಸಿದರು. ಅರುಂಧತಿನಾಗರವರಂತೂ ಅತ್ತ ಹಣಕಾಸು ಹೊಂದಿಸಲು ಹಾಗೂ ಇತ್ತ ಕಟ್ಟಡ ನಿರ್ಮಾಣದ ಕೆಲಸಗಳಿಗಾಗಿ ಅಹೋರಾತ್ರಿ ಪರಿಶ್ರಮ ವಹಿಸಿದರು. ಹಾಗೂ ಹೀಗೂ ಐದು ವರ್ಷಗಳಲ್ಲಿ ರಂಗಮಂದಿರ ಸಿದ್ದವಾಯಿತು. ಆದರೆ ಅಷ್ಟರಲ್ಲಿ ಐದು ಕೋಟಿಗಳಷ್ಟು ಖರ್ಚಾಗಿತ್ತು. ದಿ.ಶಂಕರನಾಗರವರ ಕನಸೊಂದು ನನಸಾಗಿತ್ತು. ಒಬ್ಬ ಮಹಿಳೆ ತನ್ನ ಇಚ್ಚಾಶಕ್ತಿಯಿಂದಾಗಿ ಸರಕಾರದ ಹಾಗೂ ಕನ್ನಡಿಗರ ನೆರವನ್ನು ಪಡೆದು ರಂಗಭೂಮಿ ಯಾವತ್ತು ನೆನಪಿಡುವಂತಹ ರಂಗಮಂದಿರವನ್ನು ಕಟ್ಟಿದ್ದು ನಾಡಿನ ಚರಿತ್ರೆಯಲ್ಲಿಯೇ ಮೊದಲನೆಯದಾಗಿತ್ತು. ಒಬ್ಬ ಕಲಾವಿದೆ ತನ್ನ ಕಲಾವಿದ ಪತಿಯ ನೆನಪಿಗಾಗಿ ರಂಗಮಂದಿವನ್ನು ಸ್ಥಾಪಿಸಿ ಸಹಸ್ರಾರು ನಾಟಕ ಪ್ರದರ್ಶನಗಳಿಗೆ ವೇದಿಕೆಯನ್ನು ಒದಗಿಸಿದ್ದು ಪ್ರಶಂಸನೀಯವಾಗಿದೆ.

ರಂಗಶಂಕರದ ಒಳವಿನ್ಯಾಸ

 ಬಾಂಬೆಯ ಸುಪ್ರಸಿದ್ಧ ಪೃಥ್ವಿ ರಂಗಮಂದಿರದ ಮಾದರಿಯಲ್ಲಿ ಕಟ್ಟಲಾದ ರಂಗಶಂಕರ ಎತ್ತರ 51 ಅಡಿ ಇದ್ದು, ಒಟ್ಟು ಮೂರು ಅಂತಸ್ತುಗಳಿವೆ. ಒಟ್ಟು 320 ಸೀಟುಗಳಿದ್ದು ಅತ್ಯುತ್ತಮ ದ್ವನಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಅಚ್ಚುಕಟ್ಟಾದ ಶೌಚಾಲಯಗಳು, ಉಪಹಾರಗೃಹ, ಪುಸ್ತಕಾಲಯ, ಹೀಗೆ.. ಅನೇಕ ಅನುಕೂಲತೆಗಳಿದ್ದು ವಿಶಿಷ್ಟ ರಂಗಪರಿಸರವೊಂದನ್ನು ನಿರ್ಮಿಸಲಾಗಿದೆ. ಶಾರೂಕ್ ಮಿಸ್ತ್ರಿ ರಂಗಮಂದಿರದ ವಾಸ್ತುಶಿಲ್ಪಿ. ರಂಗಶಂಕರದ ನಿರ್ವಹಣೆ ಮಾಡುತ್ತಿರುವುದು ಸಂಕೇತ್ ಟ್ರಸ್ಟ್ಗಿರೀಶ್ ಕಾರ್ನಾಡ್ರು ಟ್ರಸ್ಟಿನ ಅಧ್ಯಕ್ಷರು, ಆರುಂದತಿರಾವ್, ಬಿ.ಸುರೇಶ್, ಸುರೇಂದ್ರನಾಥ, ಪರಮೇಶ್ವರಪ್ಪ ಇವರು ಕಾರ್ಯನಿರ್ವಾಹಕ ಸದಸ್ಯರು. ಒಟ್ಟು ಎಂಟು ಮಂದಿ ಸ್ಟಾಪ್ಗಳು ರಂಗಶಂಕರವನ್ನು ನೋಡಿಕೊಳ್ಳುತ್ತಿದ್ದಾರೆ.
                    
2014, ಅಕ್ಟೋಬರ್ 28 ಕ್ಕೆ ರಂಗಶಂಕರ ರಂಗಮಂದಿರ ನಾಟಕ ಪ್ರದರ್ಶನ ಆರಂಭಿಸಿ ಸರಿಯಾಗಿ ಹತ್ತು ವರ್ಷಗಳಾದವು. ವಾರದ ರಜೆಯನ್ನು ಹೊರತು ಪಡಿಸಿ ಹತ್ತು ವರ್ಷಗಳ ಕಾಲ ನಿರಂತರವಾಗಿ ನಾಟಕ ಪ್ರದರ್ಶನಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟ ಇನ್ನೊಂದು ರಂಗಮಂದಿರ ಕರ್ನಾಟಕದಲ್ಲೆಲ್ಲೂ ಇಲ್ಲ. ನಿಟ್ಟಿನಲ್ಲಿ ರಂಗಶಂಕರ ಸಾಧನೆ ಪ್ರಶಂಸನೀಯ. ಇಲ್ಲಿವರೆಗೂ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ನಾಟಕಗಳು ಪ್ರದರ್ಶನಗೊಂಡಿವೆ. ಮೂವತ್ತೆರಡು ಭಾಷೆಯ ನಾಲ್ಕು ಸಾವಿರ ನಾಟಕಗಳು ಪ್ರದರ್ಶಿಸಲ್ಪಟ್ಟಿವೆ. ಹತ್ತು ವರ್ಷದಲ್ಲಿ ಎಂಟು ಲಕ್ಷ ಪ್ರೇಕ್ಷಕರು ರಂಗಶಂಕರದಲ್ಲಿ ಟಿಕೆಟ್ ಕೊಟ್ಟು ನಾಟಕಗಳನ್ನು ನೋಡಿದ್ದೊಂದು ಕರ್ನಾಟಕದ ಮಟ್ಟಿಗೆ ಸಾಧನೆಯೇ ಆಗಿದೆ. ರಂಗಭೂಮಿಯಲ್ಲಿ ಇಂತಹ ಅಭೂತಪೂರ್ವ ರಂಗಕೈಂಕರ್ಯಕ್ಕಾಗಿ ಅರುಂದತಿರವರಿಗೆ ಹ್ಯಾಟ್ಸ್ಆಪ್ ಹೇಳಲೇಬೇಕಿದೆ. ಸಾವಿರಾರು ಸಮಸ್ಯೆಗಳ ನಡುವೆಯೂ ಪತಿ ಕಂಡ ಕನಸನ್ನು ನನಸನ್ನಾಗಿಸಿ ರಂಗಮಂದಿರವನ್ನು ನಿರ್ಮಿಸಿದ್ದಕ್ಕಾಗಿ ಅರುಂದತಿಯವರನ್ನು ಶ್ಲಾಘಿಸಲೇಬೇಕಿದೆ.

ಆದರೆ..... ಶಂಕರನಾಗರವರು ಕಂಡ ರಂಗಮಂದಿರದ ಕನಸೆನೋ ಅರುಂದತಿಯವರ ಪರಿಶ್ರಮ, ಸರಕಾರದ ಸಹಕಾರ ಹಾಗೂ ಕನ್ನಡಿಗರ ದಯೆಯಿಂದ ನೆರವೇರಿತು. ಆದರೆ ಶಂಕರನಾಗರವರ ಆಶಯ ಇಡೇರಿತಾ? ಊಹುಂ ಇಲ್ಲವೇ ಇಲ್ಲ. ಕನ್ನಡ ಕಲಾವಿದರಿಗೆ ನೆರವಾಗುವಂತೆ, ಕನ್ನಡ ರಂಗತಂಡಗಳ ನಾಟಕಗಳ ಪ್ರದರ್ಶನ ಸುಗಮವಾಗುವಂತೆ ಸುಸಜ್ಜಿತ ರಂಗಮಂದಿರವೊಂದನ್ನು ನಿರ್ಮಿಸಬೇಕು, ಎಂಬುದು ಶಂಕರನಾಗರವರ ಅದಮ್ಯ ಆಶಯವಾಗಿತ್ತು. ಕನ್ನಡ ರಂಗಭೂಮಿಯ ಬೆಳವಣಿಗೆಗೆ ಇಂತಹ ರಂಗಮಂದಿರ ವೇದಿಕೆ ಒದಗಿಸಬೇಕು ಎನ್ನುವುದು ಶಂಕರರವರ ಬಯಕೆಯಾಗಿತ್ತು. ಯಾಕೆಂದರೆ ಶಂಕರನಾಗ್ ಹುಟ್ಟಿ ಬೆಳೆದಿದ್ದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎನ್ನುವ ಗ್ರಾಮದಲ್ಲಿ. ಪಕ್ಕಾ ಕನ್ನಡ ಮನಸ್ಸು ಶಂಕರನಾಗರವರದು. ಕನ್ನಡಕ್ಕಾಗಿ, ಕನ್ನಡ ಜನತೆಗಾಗಿ, ಕನ್ನಡ ರಂಗಭೂಮಿಗಾಗಿ ಸದಾ ತುಡಿಯುವ ಜೀವ ಅದು. ಹಿಂದಿಯಲ್ಲಿ ಶಂಕರನಾಗ್ ದೂರದರ್ಶನಕ್ಕೆ ನಿರ್ದೇಶಿಸಿದ ಮಾಲ್ಗುಡಿ ಡೇಸ್ ದಾರಾವಾಹಿಯಲ್ಲೂ ಸಹ ಕನ್ನಡತನವೇ ತುಂಬಿಕೊಂಡಿತ್ತು. ಕರ್ನಾಟಕದ ಸಂಸ್ಕೃತಿಯನ್ನೇ ಶಂಕರರವರು ತೋರಿಸಿದ್ದರು. ಹಾಗೂ ಕೊನೆಯವರೆಗೂ ಕನ್ನಡಿಗರಾಗಿಯೇ ಬದುಕಿದರು. ಕನ್ನಡ ಭಾಷೆ, ಸಂಸ್ಕೃತಿ, ಕಲೆಗೆ ತಮ್ಮ ನಿಷ್ಟೆಯನ್ನು ತೋರಿದರು. ಆದರೆ ಅರುಂದತಿಯವರು ಮೂಲತಃ ಮರಾಠಿಗರು. ಮರಾಠಿ, ಗುಜರಾತಿ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಹೀಗೆ ಅಭಿನಯಿಸುವಾಗಲೇ ಶಂಕರನಾಗರವರ ಪರಿಚಯವಾಗಿ ನಂತರ ಇಷ್ಟಪಟ್ಟು ಮದುವೆಯೂ ಆದರು. ಕಲೆ ಎನ್ನುವುದು ಇಬ್ಬರನ್ನೂ ಒಂದುಗೂಡಿಸಿತ್ತು. ಆದರೆ ಭಾಷೆ ಮತ್ತು ಸಂಸ್ಕೃತಿಗಳು ಬೇರೆ ಬೇರೆಯಾಗಿದ್ದವು. ಹೀಗಾಗಿ ಶಂಕರನಾಗರವರು ಕನ್ನಡ ನಾಟಕ ಪ್ರದರ್ಶನಗಳಿಗೋಸ್ಕರ ರಂಗಮಂದಿರ ಕಟ್ಟಬೇಕು ಎಂದು ಕನಸು ಕಂಡಿದ್ದರೆ, ಅರುಂಧತಿಯವರು ರಂಗಮಂದಿರ ಕಟ್ಟುವ ಕನಸನ್ನು ನನಸನ್ನಾಗಿಸಿ ಕನ್ನಡೇತರ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡತೊಡಗಿದರು. ಕನ್ನಡದ ಸಂಸ್ಕೃತಿಯನ್ನು ಬೆಳಸಬೇಕು ಎನ್ನುವುದು ಶಂಕರರವರ ಆಶಯವಾಗಿದ್ದರೆ, ಅದಕ್ಕೆ ವಿರುದ್ಧವಾಗಿ ಅರುಂದತಿಯವರು ಕಾರ್ಪೋರೇಟ್ ಸಂಸ್ಕೃತಿಯನ್ನು ಬೆಳೆಸಲು ಶ್ರಮಿಸತೊಡಗಿದರು. ಶಂಕರನಾಗರವರು ಯಾವ ಉದ್ದೇಶಕ್ಕಾಗಿ ರಂಗಮಂದಿರ ಅಸ್ತಿತ್ವಕ್ಕೆ ಬರಬೇಕೆಂದುಕೊಂಡಿದ್ದರೋ ಅದರ ವಿರುದ್ಧವಾದ ಉದ್ದೇಶಗಳಿಗಾಗಿ ರಂಗಶಂಕರ ಬಳಕೆಯಾಗತೊಡಗಿತು.


ಯಾಕೆ ಹೀಗಾಯ್ತು? ಕನ್ನಡ ಸಂಸ್ಕೃತಿಯ ಬದಲಾಗಿ ಕಾರ್ಪೋರೇಟ್ ಸಂಸ್ಕೃತಿ ಯಾಕೆ ರಂಗಶಂಕರವನ್ನು ಆಕ್ರಮಿಸಿಕೊಂಡಿತುಕನ್ನಡ ಸರಕಾರದಿಂದ ಭೂಮಿ, ಕನ್ನಡಿಗರಿಂದ ಹಣಪಡೆದು ಕಟ್ಟಿದ ರಂಗಶಂಕರ ಯಾಕೆ ಕನ್ನಡ ವಿರೋಧಿತನವನ್ನು ರೂಢಿಸಿಕೊಂಡಿತು?. ಇದಕ್ಕೆಲ್ಲಾ ಉತ್ತರ ಅರುಂಧತಿರಾವ್ ಮತ್ತು ಅವರ ಸುತ್ತಲಿರುವ ಜನರ ವಿದೇಶ ಸಂಸ್ಕೃತಿಯ ಮೋಹದಲ್ಲಿದೆ. ಇಂಗ್ಲೀಷ್ ಭಾಷೆಯ ಮೇಲಿನ ಮಮಕಾರದಲ್ಲಿದೆ. ಮೂಲಭೂತವಾಗಿ ಸಂಕೇತ್ ಟ್ರಸ್ಟ್ ಅಧ್ಯಕ್ಷರಾದ ಗಿರೀಶ್ ಕಾರ್ನಾಡರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ವ್ಯಯಕ್ತಿಕವಾಗಿ ಪ್ರೀತಿಯಿಲ್ಲ. ಇಂಗ್ಲಿಷನಲ್ಲಿ ಬರೆದಿದ್ದರೆ ನೊಬೆಲ್ ಸಿಗಬಹುದಾಗಿತ್ತು ಎನ್ನುವ ಕಾರ್ನಾಡರು ಎಂದೂ ಕನ್ನಡ ನೆಲ, ಜಲ, ಜನರಿಗೆ ಅನ್ಯಾಯವಾದಾಗ ಬಾಯಿಬಿಟ್ಟವರಲ್ಲ. ಕ್ಲಬ್ ಡಾನ್ಸನ್ನು ಸರಕಾರ ಬ್ಯಾನ್ ಮಾಡಿದಾಗ, ಸಲಿಂಗಕಾಮಿಗಳ ಸಂಬಂಧವನ್ನು ಸುಪ್ರಿಂಕೊರ್ಟ ಮಾನ್ಯಮಾಡದಾದಾಗ ಬೀದಿಗಿಳಿದು ಪ್ರತಿಭಟಿಸುವುದನ್ನು ಮರೆಯಲಿಲ್ಲ. ರಂಗಶಂಕರದ ನಿರ್ಮಾಣಕ್ಕೆ ಹೆಚ್ಚು ಹಣವನ್ನು ಕೊಟ್ಟ ಕಾರ್ಪೋರೇಟ್ ಕುಳ ನಿಲೇಕಣಿ ಪರವಾಗಿ ಬೀದಿಗಿಳಿದು ಮತ ಯಾಚಿಸುವುದಕ್ಕೂ ಗಿರೀಶ ಕಾರ್ನಾಡರು ಮುಂಚೂಣಿಯಲ್ಲಿದ್ದರು. ನೀಲೇಕಣಿ, ಗಿರೀಶ ಕಾರ್ನಾಡ್ ಇವರೆಲ್ಲಾ ಕಾರ್ಪೋರೇಟ್ ಸಂಸ್ಕೃತಿಯ ಪ್ರಮೋಟರ್ಸಳಾಗಿದ್ದಾರೆಂಬುದಕ್ಕೆ ಹಲವಾರು ಉದಾಹರಣೆಗಳಿವೆ. ರಂಗಶಂಕರಕ್ಕೆ ಆರ್ಥಿಕ ನೆರವನ್ನು ಕೊಟ್ಟ ನಿಲೇಕಣಿ, ರಂಗಶಂಕರದ ಟ್ರಸ್ಟನ ಅಧ್ಯಕ್ಷ ಕಾರ್ನಾಡ ಮತ್ತು ಕನ್ನಡದ ಭಾಷೆ ಸಂಸ್ಕೃತಿ ಮೇಲೆ ಮಮಕಾರವಿರದ ಅರುಂಧತಿ ಇವರೆಲ್ಲಾ ಸೇರಿ ಕನ್ನಡ ರಂಗಭೂಮಿಯನ್ನು ಕಟ್ಟಲು ಸಾಧ್ಯವಾ? ಮೊದಲಿನಿಂದ ರಂಗಶಂಕರ ಎನ್ನುವುದು ಕಾರ್ಪೋರೇಟ್ ಕಲ್ಚರನ್ನೇ ರೂಪಿಸಿಕೊಂಡು ಬಂದಿದೆ. ಸರಾಸರಿ ಲೆಕ್ಕ ಹಾಕಿದರೆ ಕನ್ನಡಕ್ಕಿಂತಲೂ ಅನ್ಯ ಭಾಷೆಗಳ ನಾಟಕಗಳ ಪ್ರದರ್ಶನಗಳೇ ಹೆಚ್ಚಾಗಿವೆ. ಅದರಲ್ಲೂ ಇಂಗ್ಲೀಷ್ ನಾಟಕಗಳಂತೂ ಸಿಂಹಪಾಲು ಪಡೆದಿವೆ.


ಈಗ ದಶಮಾನೋತ್ಸವದ ಸಂಭ್ರಮವನ್ನು ರಂಗಶಂಕರ ಆಚರಿಸುತ್ತಿದೆ. ಇದು ಕನ್ನಡ ರಂಗಭೂಮಿಯ ಹೆಮ್ಮೆಯ ವಿಷಯವಾಗಬೇಕಾಗಿತ್ತು. ಆದರೆ  ಪರಭಾಷಾ ನಾಟಕಗಳ ಪ್ರದರ್ಶನದ ವೈಭವೀಕರಣವಾಗುತ್ತಿರುವುದು ವಿಪರ್ಯಾಸವಾಗಿದೆ. ಉದಾಹರಣೆಗೆ... ದಶಮಾನೋತ್ಸವದ ಅಂಗವಾಗಿ ಅಕ್ಟೋಬರ್ 28ರಿಂದ ಶಂಕರನಾಗರವರ ಜನ್ಮದಿನವಾದ ನವೆಂಬರ 9 ರವರೆಗೆ ನಾಟಕೋತ್ಸವವನ್ನು ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಟಕೋತ್ಸವದಲ್ಲಿ ಒಂಬತ್ತು ಭಾಷೆಗಳ ಹದಿಮೂರು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಇದರಲ್ಲಿ ಮರಾಠಿ, ಪಂಜಾಬಿ ಹಾಗೂ ತೆಲುಗಿನ ತಲಾ ಒಂದೊಂದುಹಿಂದಿಯ ಮೂರು ಮತ್ತು ಇಂಗ್ಲೀಷಿನ ನಾಲ್ಕು ನಾಟಕಗಳಿವೆ. ಆದರೆ ಎರಡೇ ಎರಡು ಕನ್ನಡದ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು ಅದರಲ್ಲಿ ಒಂದು ರಂಗಶಂಕರ ನಿರ್ಮಾಣದ ನೀನಾನಾದ್ರೆ ನಾನೀನೇನಾ ಹಾಗೂ ಇನ್ನೊಂದು ರಂಗಾಯಣದ ಚಿರೆಬಂದೇವಾಡೆ ನಾಟಕಗಳು. ನಾಟಕೋತ್ಸವದಲ್ಲಿ ಸಿಂಹ ಪಾಲನ್ನು ಪಡೆದಿದ್ದು ಹಿಂದಿ ಮತ್ತು ಇಂಗ್ಲೀಷ್ ನಾಟಕಗಳು. ಇದರಿಂದಲೇ ಗೊತ್ತಾಗುತ್ತದೆ ರಂಗಶಂಕರ ಎನ್ನುವುದು ಕನ್ನಡ ರಂಗಭೂಮಿಯ ಬೆಳವಣಿಗೆಗಾಗಿ ಕಟ್ಟಿದ್ದಲ್ಲ, ಬೇರೆ ಭಾಷೆಗಳ ಅದರಲ್ಲೂ ಇಂಗ್ಲೀಷ್ ಭಾಷೆಗಳ ನಾಟಕಗಳ ಪ್ರದರ್ಶನಕ್ಕಾಗಿ ಕಟ್ಟಲಾಗಿದೆ ಎಂಬುದು.

ಭಾರತದಲ್ಲೇ ಕನ್ನಡ ರಂಗಭೂಮಿ ತನ್ನ ಪ್ರಯೋಗಶೀಲತೆಗಾಗಿ ಹೆಸರುವಾಸಿಯಾಗಿದೆ. ದೆಹಲಿಯ ಎನ್ಎಸ್ಡಿ ಯಿಂದ ಕಲಿತು ಬಂದವರಲ್ಲಿ ಕನ್ನಡಿಗರೇ ಹೆಚ್ಚು ಜನರಿದ್ದಾರೆ. ಹಲವಾರು ಅಪರೂಪದ ಪ್ರಯೋಗಗಳಾಗುತ್ತಿವೆ. ಆದರೂ ಸಹ ಯಾಕೆ ಕನ್ನಡ ನಾಟಕಗಳಿಗೆ ರಂಗಶಂಕರ ಮಲತಾಯಿ ಧೋರಣೆ ತೋರುತ್ತಿದೆ. ಕನ್ನಡಕ್ಕಿಂತಲೂ ಬೇರೆ ಭಾಷೆಗಳಲ್ಲಿ ಸರ್ವಶ್ರೇಷ್ಟ ನಾಟಕಗಳು ಬಂದಿದ್ದರೆ ಬರಲಿ, ಹತ್ತರಲ್ಲಿ ಎರಡು ಮೂರು ಬೇರೆ ಭಾಷೆಯ ನಾಟಕಗಳು ಇದ್ದರೆ ಇರಲಿ ಉಳಿದದ್ದೆಲ್ಲವೂ ಕನ್ನಡದ ನಾಟಕಗಳೇ ಆಗಲಿ. ಆದರೆ ಕಾರ್ನಾಡರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯತೆಯ ವ್ಯಾಮೋಹ ಅರುಂಧತಿಯವರನ್ನೂ ಆವರಿಸಿಕೊಂಡಿದೆ. ಕನ್ನಡಿಗರಿಗೆ ಎರವಾದರೂ ಚಿಂತೆಯಿಲ್ಲ ಅಂತರಾಷ್ಟ್ರೀಯವಾಗಿ ಹೆಸರು ಮಾಡಬೇಕು, ಬಹುರಾಷ್ಟ್ರೀಯ ಕಂಪನಿಗಳಿಂದ ಪ್ರಾಯೋಜಕತ್ವ ಸಿಗಬೇಕು ಎನ್ನುವ ಹಪಾಹಪಿಗೆ ಬಿದ್ದು ಕನ್ನಡ ರಂಗಭೂಮಿಗೆ ಮಲತಾಯಿ ಧೋರಣೆಯನ್ನು ತೋರಿಸುವುದು ನಿಜಕ್ಕೂ ಅಕ್ಷಮ್ಯ.



ರಂಗಶಂಕರದಲ್ಲಿ ಕನ್ನಡದ ನಾಟಕಗಳೂ ಆಗುತ್ತವೆ, ಇಲ್ಲಾ ಎನ್ನುವವರು ಯಾರು? ಆದರೆ ಅದರಲ್ಲಿ ರಂಗಶಂಕರದ ನಿರ್ಮಾಣದ ಕನ್ನಡ ನಾಟಕಗಳಿಗೆ ಮೊದಲ ಆದ್ಯತೆ ಹಾಗೂ ಬ್ರಾಹ್ಮಣ ಕುಲಬಾಂಧವರ ನಿರ್ದೇಶನದ ನಾಟಕಗಳಿಗೆ ಎರಡನೇ ಆಧ್ಯತೆ, ಇನ್ನು ಕೆಲವು ಅಬ್ರಾಹ್ಮಣರು ನಿರ್ಮಿಸಿದ ಕನ್ನಡ ನಾಟಕಗಳು ಗ್ಯಾಪ್ಪಿಲಪ್ಗಳು ಇದ್ದ ಹಾಗೆ. ಯಾವ ದಿನದಂದು ಮೇಲೆ ತಿಳಿಸಿದ ಯಾವುದೇ ನಾಟಕಗಳ ಪ್ರದರ್ಶನಗಳು ಇರುವುದಿಲ್ಲವೋ ದಿನದ ಪ್ರದರ್ಶನವನ್ನು ಹೊಂದಾಣಿಕೆ ಮಾಡಲು ಅನ್ಯರ ನಾಟಕಗಳಿಗೆ ಅನುಮತಿ ಸಿಗುತ್ತದೆ. ಇದರಿಂದಾಗಿ ಕೆಲವೇ ಕೆಲವು ರಂಗತಂಡಗಳು ರಂಗಶಂಕರದಲ್ಲಿ ರಿಪೀಟೆಡ್ ಆಗಿ ನಾಟಕ ಮಾಡಲು ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತವೆಯೇ ಹೊರತು ಎಲ್ಲಾ ನಾಟಕಗಳಲ್ಲ. ಇದು ನಿಜಕ್ಕೂ ಶಂಕರನಾಗರವರ ಕನಸಿದ ರಂಗಶಂಕರ ಅಲ್ಲವೇ ಅಲ್ಲ. ಶಂಕರನಾಗರವರ ಯೋಜನೆಯನ್ನು ಕಾರ್ಪೋರೇಟ್ ಸಂಸ್ಕೃತಿಯ ರಂಗಕರ್ಮಿಗಳು ಹೈಜಾಕ್ ಮಾಡಿದಂತಿದೆ. ಅರುಂಧತಿರಾವ್ರವರು ಬಹುರಾಷ್ಟ್ರೀಯ ಸಂಸ್ಕೃತಿಯ ಅಡಿಯಾಳಾಗಿದ್ದಾರೆ. ರಾಷ್ಟ್ರೀಯ ಹೆಸರು ಹಾಗೂ ಅಂತರಾಷ್ಟ್ರೀಯ ಪ್ರಾಯೋಜಕತ್ವಕ್ಕಾಗಿ ಶಂಕರನಾಗ್ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆಯಾ? ಅರುಂಧತಿ ಹಾಗೂ ಕಾರ್ನಾಡರಂತವರು ಕನ್ನಡಿಗರ ಔದಾರ್ಯವನ್ನು ಪಡೆದು ತಮ್ಮ ಸ್ವಾರ್ಥಕ್ಕಾಗಿ ರಂಗಶಂಕರವನ್ನು ತಮ್ಮಿಚ್ಚೆ ಬಂದಂತೆ ಉಪಯೋಗಿಸಿಕೊಳ್ಳುತ್ತಿದ್ದಾರಾ? ಹೀಗೊಂದು ಸಂದೇಹ ರಂಗಶಂಕರವನ್ನು ಹತ್ತಿರದಿಂದ ನೋಡಿದವರಿಗೆ ಬಾರದೇ ಇರದು.

ಹೋಗಲಿ ಬಿಡಿ, ರಂಗಶಂಕರ ಎನ್ನುವುದು ಅವರಿಗೆ ಸಂಬಂಧಿಸಿದ್ದು. ಅದನ್ನು ಹೇಗೆ ಬೇಕಾದರೂ ಅವರು ಬಳಸಿಕೊಳ್ಳುತ್ತಾರೆ, ಅವರಿಗೆ ಬೇಕಾದ್ದ ನಾಟಕಗಳ ಪ್ರದರ್ಶನಕ್ಕೆ ಅನುಮತಿಸುತ್ತಾರೆ. ಅದನ್ನು ಕೇಳಲು ನಾವ್ಯಾರು?,  ಎಂದುಕೊಂಡು ಸುಮ್ಮನಾಗಬೇಕಾದದ್ದು ಕನ್ನಡ ರಂಗಭೂಮಿಯವರ ಅನಿವಾರ್ಯತೆಯಾಗಿದೆ. ಆದರೆ ರಂಗಶಂಕರವನ್ನು ಅರುಂದತಿಯವರು ತಮ್ಮ ಸ್ವಂತ ನಿವೇಶನದಲ್ಲಿ ಕಟ್ಟಿದ್ದರೆ, ಕಾರ್ನಾಡರಂತವರು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿದ್ದರೆ, ಆಗ ಇದು ಅವರ ಖಾಸಗಿ ಆಸ್ತಿಯಾಗುತ್ತಿತ್ತು. ಅವರ ರಂಗಮಂದಿರ ಅವರಿಷ್ಟ ಎಂದು ಮೌನವಹಿಸಬಹುದಾಗಿತ್ತು. ಆಗ ಅದು ಅವರ ಖಾಸಗಿ ಆಸ್ತಿ ಎನ್ನುಬಹುದಾಗಿತ್ತು. ಆದರೆ.. ರಂಗಶಂಕರಕ್ಕೆ ಭೂಮಿಯನ್ನು ಕೊಟ್ಟಿದ್ದು ಕರ್ನಾಟಕ ಸರ್ಕಾರ, ಹಣವನ್ನು ಕೊಟ್ಟಿದ್ದು ಶಂಕರನಾಗರವರ ಅಭಿಮಾನಿಗಳು... ಅಂದರೆ ಕನ್ನಡಿಗರು. ಅಂದರೆ ಸರಕಾರದ ನೆಲ, ಸಾರ್ವಜನಿಕರ ಹಣದಲ್ಲಿ ನಿರ್ಮಾಣವಾದ ರಂಗಮಂದಿರವೊಂದು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅದನ್ನು ಪ್ರಶ್ನಿಸುವುದು ಕನ್ನಡಿಗರ ಕರ್ತವ್ಯವಾಗಿದೆ. ಸರಕಾರ ನಿವೇಶನವನ್ನು ಸಂಕೇತ ಟ್ರಸ್ಟ್ ಗೆ ಖರೀದಿಗೆ ಕೊಟ್ಟಿಲ್ಲ. ಸಾರ್ವಜನಿಕ ಕೆಲಸಕ್ಕಾಗಿ ಮೂವತ್ತುಮೂರು ವರ್ಷಕ್ಕೆ ಗುತ್ತಿಗೆ ಕೊಟ್ಟಿದೆ. ಸಾರ್ವಜನಿಕ ಸಮೂಹ ಅಗತ್ಯಕ್ಕಾಗಿ ಕೊಟ್ಟ ಜಮೀನನ್ನು ಖಾಸಗಿಯಾಗಿ ಬಳಸಿಕೊಳ್ಳುವುದು ಸಿಎ ನಿವೇಶನದ ಸರಕಾರಿ ಕಾನೂನಿನ ಪ್ರಕಾರ ಅಪರಾಧ. ಕೆಲವು ಜನರ ಗುಂಪು ತಮ್ಮದೇ ಆದ ಹಿತಾಸಕ್ತಿಗಾಗಿ ಸರಕಾರಿ ಭೂಮಿಯನ್ನು ಬಳಸಿಕೊಂಡರೆ, ನಾಡು ನುಡಿಯ ವಿರುದ್ದವಾಗಿ ಉಪಯೋಗಿಸಿಕೊಂಡರೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಹಕ್ಕೂ ಸಹ ಸರಕಾರಕ್ಕಿದೆ. ಕನ್ನಡ ವಿರೋಧಿತನವನ್ನು ತೋರಿದರೆ ಅದರ ವಿರುದ್ದ ಪ್ರತಿಭಟಿಸುವ ಹಕ್ಕೂ ಸಹ ಕನ್ನಡಿಗರಿಗಿದೆ. ಇದನ್ನು ರಂಗಶಂಕರ ಎನ್ನುವ ಕಾಪೋರೇಟ್ ಸೆಕ್ಟರ್ ಮಾದರಿಯ ವ್ಯವಸ್ಥೆ ಅರ್ಥಮಾಡಿಕೊಳ್ಳುವುದು ಉತ್ತಮ.


ತುಂಬಾನೇ ಪರಿಶ್ರಮ ಪಟ್ಟು ರಂಗಶಂಕರವನ್ನು ಅರುಂಧತಿ ಮತ್ತು ಟೀಂ ನಿರ್ಮಿಸಿದ್ದು ಯಾರಿಗಾಗಿ? ಶಂಕರನಾಗ್ರವರ ಆಶಯ ನಿಜಕ್ಕೂ ಕಾರ್ಯರೂಪಕ್ಕೆ ಬಂದಿದೆಯಾ? ಕನ್ನಡ ರಂಗಭೂಮಿಯ ನಿರೀಕ್ಷೆಯನ್ನು ರಂಗಶಂಕರ ಈಡೇರಿಸಿದೆಯಾ? ಕನ್ನಡ ರಂಗಭೂಮಿಯ ಬೆಳವಣಿಗೆಗೆ ರಂಗಶಂಕರ ಬದ್ದತೆಯನ್ನು ತೋರುತ್ತಿದೆಯಾ?.. ರಂಗಶಂಕರ  ಕನ್ನಡಿಗರ ಹಿತಾಸಕ್ತಿಗೆ ಪೂರಕವಾಗಿದೆಯಾ? ಹೀಗೆ ಹಲವಾರು ಸಂದೇಹಗಳು ಕಾಡುತ್ತವೆಅದೆಷ್ಟೋ ಕನ್ನಡ ರಂಗ ತಂಡಗಳು ರಂಗಶಂಕರದಲ್ಲಿ ನಾಟಕ ಮಾಡುವ ಪ್ರಯತ್ನವನ್ನೇ ಮಾಡುವುದಿಲ್ಲ. ಯಾಕೆಂದು ಕೇಳಿದರೆ... ಅಲ್ಲಿಯ ಸವಾಧಿಕಾರಿ ಕಾರ್ಪೋರೇಟ್ ವ್ಯವಸ್ಥೆ. ಅದೆಷ್ಟೋ ಜನ ಕನ್ನಡ ಭಾಷಿಕ ಪ್ರೇಕ್ಷಕರು ಸಹ ರಂಗಶಂಕರಕ್ಕೆ ನಾಟಕ ನೋಡಲು ಹೋಗುವುದನ್ನೇ ನಿಲ್ಲಿಸಿದ್ದಾರೆ. ಯಾಕೆಂದರೆ ಅಲ್ಲಿ ಕನ್ನಡೇತರ ನಾಟಕಗಳೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ಹಾಗೂ ರಂಗಶಂಕರದಲ್ಲಿನ ಕಾರ್ಪೊರೇಟ್ ಶಿಸ್ತು ಪ್ರೇಕ್ಷಕರ ಉಸಿರು ಗಟ್ಟಿಸುವಂತಿದೆ. ಹೀಗಾಗಿ ಐಟಿ ಬಿಟಿ ಕಾಲ್ಸೆಂಟರಿನ ಕನ್ನಡೇತರ ಪ್ರೇಕ್ಷಕರನ್ನು ರಂಗಶಂಕರ ಹೆಚ್ಚಾಗಿ ಆಕರ್ಷಿಸುತ್ತಿದೆ. ಹಾಗೂ ರಂಗಮಂದಿರದ ವಾತಾವರಣವೂ ಸಹ ಕಾರ್ಪೋರೇಟ್ ಕಲ್ಚರಿಗೆ ಪೂರಕವಾಗಿದೆಹೀಗಾಗಿ... ಕನ್ನಡಿಗರಿಗೆ... ಕನ್ನಡ ರಂಗತಂಡಗಳಿಗೆ ಎಂದೂ ರಂಗಶಂಕರ ನಮ್ಮದೆನ್ನುವ ಆತ್ಮೀಯತೆಯೇ ಬರದಂತಾಗಿದೆ. ಈಗ ರಂಗಶಂಕರ ಹತ್ತು ವರ್ಷಗಳನ್ನು ಪೂರೈಸುತ್ತಿದೆ. ಸಂದರ್ಭದಲ್ಲಿಯಾದರೂ ದಿ.ಶಂಕರನಾಗರವರ ನಿಜವಾದ ಆಶಯ ಬದ್ದತೆ ಯಾವುದಾಗಿತ್ತು, ರಂಗಶಂಕರ ಎನ್ನುವುದು ಹೇಗಿರಬೇಕಿತ್ತು ಮತ್ತು ಈಗ ಹೇಗಿದೆ ಎನ್ನುವುದರ ಕುರಿತು ಚರ್ಚಿಸಬೇಕಿದೆ. ಕನ್ನಡಿಗರ ನೆಲ, ಹಣ ಮತ್ತು ಔದಾರ್ಯದಿಂದ ನಿರ್ಮಾಣಗೊಂಡ ರಂಗಶಂಕರ ಕನ್ನಡ ನಾಟಕ ಪ್ರದರ್ಶನಗಳಿಗೆ ಹೆಚ್ಚು ಅವಕಾಶವನ್ನು ಕೊಡಬೇಕಾಗಿದೆ. ಹಾಗೆ ಕೊಡದಿದ್ದರೆ ಕನ್ನಡದ ಕಲಾವಿದರು ಹಾಗೂ ರಂಗತಂಡಗಳು ಒಂದಾಗಿ ಒತ್ತಾಯಿಸಬೇಕಾಗಿದೆ. ಅದಕ್ಕೂ ಕಾರ್ಪೊರೇಟ್ ರಂಗಕರ್ಮಿಗಳು ಮಣಿಯದಿದ್ದರೆ ಹೋರಾಡಿಯಾದರೂ ಕನ್ನಡ ರಂಗಭೂಮಿಯ ಪರವಾದ ಬದ್ದತೆಯನ್ನು ರಂಗಶಂಕರದಿಂದ ಪಡೆಯಬೇಕಾಗಿದೆ.
 
ಯಾವಾಗ ರಂಗಶಂಕರ ಎನ್ನುವುದು  ಕನ್ನಡ ನಾಡಿನ ಕಲಾವಿದರಿಗೆ ಅನುಕೂಲವಾಗುವಂತೆ ಕನ್ನಡ ನಾಟಕಗಳ ಪ್ರದರ್ಶನಕ್ಕೆ ಸಿಂಹಪಾಲನ್ನು ಮಾಡಿಕೊಡುತ್ತದೆಯೋಯಾವಾಗ ಕನ್ನಡೇತರ ನಾಟಕಗಳ ಪ್ರದರ್ಶನಗಳು ಕಡಿಮೆಯಾಗುತ್ತವೆಯೋ? ಯಾವಾಗ ಕನ್ನಡದ ಸಂಸ್ಕೃತಿ ರಂಗಶಂಕರದಲ್ಲಿ ನೆಲೆಯಾಗುತ್ತದೆಯೋ? ಯಾವಾಗ ರಂಗಶಂಕರ ಸರ್ವಾಧಿಕಾರಿ ಧೋರಣೆಯಿಂದ ಮುಕ್ತವಾಗಿ ಜನಪರ ನಿಲುವನ್ನು  ರೂಢಿಸಿಕೊಳ್ಳುತ್ತದೆಯೋ ಆಗ  ಶಂಕರನಾಗರವರ ಆಶಯ ಈಡೇರಿದಂತಾಗುತ್ತದೆ. ಮಹಾನ್ ಚೇತನಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಇಲ್ಲವಾದರೆ ಗಾಂಧಿ ಹೆಸರಲ್ಲಿ ದೇಶವನ್ನು ವಿದೇಶಕ್ಕೆ ಮಾರಿದಂತೆ, ಅಂಬೇಡ್ಕರ್ ಹೆಸರಲ್ಲಿ ಅಸಮಾನತೆಗೆ ಪ್ರೋತ್ಸಾಹಕೊಟ್ಟಂತೆ, ಬುದ್ದನ ಹೆಸರಲ್ಲಿ ಹಿಂಸೆಯನ್ನು ಪ್ರಮೋಟ್ ಮಾಡಿದಂತೆ ಭಾಸವಾಗುತ್ತದೆ. ಕನ್ನಡ ರಂಗಭೂಮಿಯ ಹೆಸರಲ್ಲಿ ವಿದೇಶಿ ವಿಕೃತ ಸಂಸ್ಕೃತಿಯನ್ನು  ಅಳವಡಿಸಿಕೊಂಡಂತಾಗುತ್ತದೆ. ರಂಗಶಂಕರದ ರೂವಾರಿಗಳು ನಿಜವಾಗಿಯೂ ಶಂಕರನಾಗರವರ ಕನಸನ್ನು ನನಸಾಗಿಸಲು ಪ್ರಯತ್ನಿಸುತ್ತಿದ್ದರೆ, ಶಂಕರರ ಕೊನೆಯ ಆಸೆಯನ್ನು ಈಡೇರಿಸಲು ಬಯಸಿದ್ದಲ್ಲಿ ಮೊದಲು ಕನ್ನಡ ರಂಗಭೂಮಿಯ ಕುರಿತು ನಿಷ್ಟೆಯನ್ನು ಹಾಗೂ ಕನ್ನಡಿಗರ ಸಂಸ್ಕೃತಿಯ ಕುರಿತು ಬದ್ದತೆಯನ್ನು ಪ್ರಾಯೋಗಿಕವಾಗಿ ತೋರಿಸಲಿ. ಇಲ್ಲವಾದರೆ ರಂಗಶಂಕರದ ಹೆಸರನ್ನು ಬದಲಾಯಿಸಿ ರಂಗಕಾರ್ನಾಡೆಂತಲೋ ಇಲ್ಲವೆ ರಂಗಾರುಂಧತಿ ಎಂತಲೋ ಇಟ್ಟು ಕೊಂಡು ಕನ್ನಡಿಗರು ಕೊಟ್ಟಿದ್ದೆಲ್ಲವನ್ನೂ ಮರಳಿಸಿ ತಮ್ಮದೇ ಖಾಸಗಿಯಾದ ಕಾರ್ಪೋರೆಟ್ ಮಾದರಿಯ ರಂಗಯಾತ್ರೆಯನ್ನೋ ರಂಗಜಾತ್ರೆಯನ್ನೋ ಮುನ್ನಡೆಸಲಿ.

ಒಡಕಲು ಬಿಂಬ ನಾಟಕದಲ್ಲಿ ಅರುಂಧತಿ ರಾವ್

ರುಂಧತಿಯವರ ನಿಜವಾದ ಹೆಸರು ಅರಂಧತಿರಾವ್. ಆದರೆ ಕನ್ನಡದ ಜನತೆ, ಮಾಧ್ಯಮಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರವು ಅವರನ್ನು ಆರುಂಧತಿನಾಗ್ ಎಂದೇ ಗುರುತಿಸುತ್ತಾರೆ. ಈಗಲೂ ಅವರ ಚಾಲನಾಪತ್ರ, ಆದಾಯ ತೆರಿಗೆ, ಆಸ್ತಿ ಸೇರಿದಂತೆ ಎಲ್ಲದರಲ್ಲೂ ಆರುಂಧತಿಯವರ ಹೆಸರು ಅರುಂಧತಿರಾವ್ ಎಂತಲೇ ಇದೆ. ಆದರೆ... ಜನತೆ  ಪತಿ ಶಂಕರನಾಗರವರ ಹೆಸರನ್ನು ಅರುಂಧತಿ ಹೆಸರಿನ ಜೊತೆಗೆ ಸೇರಿಸಿ ಅರುಂಧತಿನಾಗ್ ಎಂದು ಗುರುತಿಸಿ ನಟ ಶಂಕರನಾಗರವರನ್ನು ನೆನಪಿಸಿಕೊಳ್ಳುತ್ತಾರೆ. ಇದು ನಿಜಕ್ಕೂ ಅರುಂಧತಿಯವರಿಗೆ ವ್ಯಯಕ್ತಿಕವಾಗಿ ಇಷ್ಟವಿಲ್ಲ. ಅದನ್ನು ಅವರೇ ಪತ್ರಿಕೆಗಳ ಮುಂದೆ ಕೆಲವಾರು ಬಾರಿ ಹೇಳಿಕೊಂಡಿದ್ದಾರೆ. ಯಾಕೆಂದರೆ ಅವರು ಬೆಳೆದು ಬಂದ ಮುಕ್ತ ಫೆಮಿನಿಸ್ಟ್ ಸಂಸ್ಕೃತಿ ಹೆಂಡತಿಯ ಜೊತೆಗೆ ಗಂಡನ ಹೆಸರನ್ನು ಸೇರಿಸುವುದನ್ನು ಪುರಸ್ಕರಿಸುವುದಿಲ್ಲ. ಹಾಗೂ ಏನೇ ಹರಸಾಹಸ ಮಾಡಿದರೂ ಅರುಂಧತಿಯವರು ಶಂಕರನಾಗರವರ ಹೆಸರಿನ ಪ್ರಭಾವಳಿಯಿಂದ ಹೊರಬರಲು ಸಾಧ್ಯವೇ ಆಗಿಲ್ಲ. ಅವರಿಗೆ ಇಂಡಿಪೆಂಡೆಂಟ್ ಇಡೆಂಟಿಟಿ ಬೇಕಾಗಿದೆ. ಅದನ್ನು ಕೊಡಲು ಕನ್ನಡಿಗರು ಹಾಗೂ ಕನ್ನಡದ ಮಾಧ್ಯಮಗಳು ಸಿದ್ದರಾಗಿಲ್ಲ. ಆದರೆ ಕನ್ನಡೇತರ ಮಾಧ್ಯಮಗಳಲ್ಲಾದರೂ ತಮ್ಮ ಐಡೆಂಟಿಟಿಯನ್ನು ಅರುಂಧತಿರಾವ್ ಎಂದು ನಮೂದಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಜನರೇ ಪ್ರೀತಿಯಿಂದ ನಾಗ್ ಸೇರಿಸಿ ಕರೆದರೆ ಆರುಂಧತಿಯವರ ತಕರಾರೇನು? ಶಂಕರನಾಗ್ ರವರ ಹೆಸರಲ್ಲಿ ಎಲ್ಲವೂ ಬೇಕು ಆದರೆ ಅವರ ಹೆಸರು ಜೊತೆಗೆ ಬೇಡವೆಂದರೆ ಹೇಗೆ? ಶಂಕರನಾಗ್ ಇಲ್ಲದಿದ್ದರೆ ಮರಾಠಿಗರಾದ ಆರುಂಧತಿ ಕನ್ನಡನಾಡಿನಲ್ಲಿ ಪರಿಚಿತರೇ ಆಗಿರುತ್ತಿರಲಿಲ್ಲ. ನಾಗ್ ಹೆಸರನ್ನು ಕೈಬಿಟ್ಟು ತಮ್ಮ ಹೆಸರಿನ ಜೊತೆಗೆ ಜಾತಿಸೂಚಕ ರಾವ್ ಹೆಸರನ್ನು ಸೇರಿಸಿಕೊಂಡು ಆರುಂಧತಿಯವರು ಮೇಲ್ವರ್ಗದವರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆನೋ ಎನ್ನುವ ಅನುಮಾನ ಬಾರದೇ ಇರದು.

ಶಂಕರನಾಗರವರು ಇದ್ದಿದ್ದರೆ ಈಗ ಅರವತ್ತು ತುಂಬುತ್ತಿತ್ತು. ತುಂಬಾ ಕ್ರಿಯಾಶೀಲತೆಯ ಶಂಕರನಾಗ್ ಇರಬೇಕಾಗಿತ್ತು. ಅವರೇ ತಮ್ಮ ಆಶಯಕ್ಕೆ ತಕ್ಕಂತೆ ರಂಗಶಂಕರವನ್ನು ನಿರ್ಮಿಸಬೇಕಾಗಿತ್ತು. ಕನ್ನಡ ನಾಟಕಗಳ ಪ್ರದರ್ಶನಕ್ಕೆ ಮೀಸಲಾದ ರಂಗಮಂದಿರವೊಂದು ಕನ್ನಡ ರಂಗಭೂಮಿಗೆ ದೊರೆಯುತ್ತಿತ್ತು. ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ತಾಣವಾಗಿ ರಂಗಮಂದಿರವೊಂದು ರೂಪಿತಗೊಳ್ಳುತ್ತಿತ್ತು. ಶಂಕರನಾಗರವರ ಅನುಪಸ್ಥಿತಿಯಲ್ಲಿ ಅವರ ಆಶಯಗಳಿಗೆಲ್ಲಾ ಎಳ್ಳುನೀರು ಬಿಡಲಾಗಿದೆ. ಶಂಕರರ ಉದ್ದೇಶವೇ ಈಗ ಬುಡಮೇಲಾಗಿದೆ. ಶಂಕರನಾಗ್ರು ಅತಿಯಾಗಿ ಪ್ರೀತಿಸಿದ ಕನ್ನಡ ರಂಗಭೂಮಿ ಅವರದೇ ಹೆಸರಿನ ರಂಗಮಂದಿರದಲ್ಲಿ ಅನಾಥವಾಗಿದೆ. ಶಂಕರನಾಗರವರ ಹೆಸರಿದೆ ಆದರೆ ಅವರ ರಂಗನಿಷ್ಟೆ, ಭಾಷಾ ಪ್ರೀತಿ, ನೆಲದ ಸಂಸ್ಕೃತಿ ರಂಗಶಂಕರದಲ್ಲಿ ಲಯವಾಗಿದೆ. ಶಂಕರನಾಗರವರ ಅನುಪಸ್ಥಿತಿ ರಂಗಶಂಕರದ ಈಗಿನ ಪರಿಸ್ಥಿತಿಯನ್ನು ನೋಡಿದರೆ ನೆನಪಾಗದೇ ಇರದು. ರಂಗಶಂಕರದ ಕಾರ್ಪೊರೇಟ್ ಸಂಸ್ಕೃತಿ ಅಳಿಯಲಿ, ಶಂಕರನಾಗರವರ ಕನ್ನಡ ರಂಗಭೂಮಿಯ ಕುರಿತ ಆಶಯ ಈಡೇರಲಿ ಎನ್ನುವುದೊಂದೇ ಕನ್ನಡಿಗರ ಅದಮ್ಯ ಬಯಕೆಯಾಗಿದೆ.

                          -ಶಶಿಕಾಂತ ಯಡಹಳ್ಳಿ































                 

                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ