ರಂಗಭೂಮಿ ಎನ್ನುವುದು ಜ್ಯಾತ್ಯಾತೀತ ಎಂದು ಅದೆಷ್ಟೇ ಹೆಮ್ಮೆಯಿಂದ ಹೇಳಿಕೊಂಡರೂ ಇಲ್ಲಿಯೂ ಸಹ ಜಾತಿ ಧರ್ಮದ ಎಳೆತ ಸೆಳೆತಗಳು ನಾಟಕ ರೂಪದಲ್ಲಿ ರಂಗವೇದಿಕೆಯಲ್ಲಿ ಅಪರೂಪಕ್ಕೊಮ್ಮೆ ಪ್ರದರ್ಶಿಸಲ್ಪಡುತ್ತವೆ. ಅಂತಹ ಒಂದು ಉದ್ದೇಶಪೂರ್ವಕ ಪ್ರಯತ್ನವೇ ‘ಸಪ್ನ ಸಾರಸ್ವತ’ ರಂಗಪ್ರಯೋಗ. ಸಮಾಜದಲ್ಲಿ ಜಾತಿಗೊಂದು ಮಠ ಪೀಠಗಳಿರುವಾಗ ಈ ಮಠಪೀಠ ಪರಂಪರೆಯ ಹರಿಕಾರರಾದ ಬ್ರಾಹ್ಮಣ ವರ್ಗದವರಿಗಾಗಿ ಒಂದು ನಾಟಕ ಬೇಡವೇ? ದಲಿತರು-ಶೂದ್ರರು ತಮ್ಮ ಶೋಷಣೆಯ ಕುರಿತು ಹಲವಾರು ನಾಟಕಗಳನ್ನು ಮಾಡುತ್ತಿರುವಾಗ ಬ್ರಾಹ್ಮಣರು ಯಾಕೆ ತಮ್ಮ ಸಂಕಟಗಳನ್ನು ನಾಟಕವಾಗಿಸಬಾರದು ಎನ್ನುವುದಕ್ಕೆ ಉತ್ತರವಾಗಿ ಅವಿರ್ಭವಿಸಿದ್ದೇ ಈ ‘ಸಪ್ನ ಸಾರಸ್ವತ’ ನಾಟಕ.
ಗೋಪಾಲಕೃಷ್ಣ ಪೈ ರವರು ‘ಸಪ್ನ ಸಾರಸ್ವತ’ ಹೆಸರಿನಲ್ಲಿ ತಮ್ಮ ಕುಲಮೂಲವನ್ನು ಕುರಿತು ಒಂದು ಬ್ರಹತ್ ಕಾದಂಬರಿಯನ್ನು ಬರೆದಿದ್ದರು. ಅಚ್ಚರಿ ಎನ್ನುವಂತೆ ಅದಕ್ಕೆ
2011ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ದೊರಕಿತ್ತು. ‘ಪುರೋಹಿತಶಾಹಿಗಳ ಹಿತಾಸಕ್ತಿ ಕುರಿತು ಬರೆದ ಈ ಕಾದಂಬರಿಗೆ ಪ್ರಶಸ್ತಿ ಕೊಟ್ಟಿದ್ದೇ ಒಂದು ವಿಪರ್ಯಾಸ’ ಎಂದು ಆಗ ಕನ್ನಡ ಸಾಹಿತ್ಯ ವಲಯದಲ್ಲಿ ಚರ್ಚೆಯಾಯಿತು. ಆದರೆ ಈ ಕಾದಂಬರಿಯಲ್ಲಿ ಸಾಮ್ರಾಜ್ಯಶಾಹಿ ಪೋರ್ಚಗೀಸರ ಶೋಷಣೆಯ ಅತಿರೇಕವೂ ಅನಾವರಣಗೊಂಡಿದ್ದರಿಂದ ವಿವಾದ ಬೆಳೆಯದೇ ತಣ್ಣಗಾಯಿತು. ಇದಾಗಿ ನಾಲ್ಕು ವರ್ಷಗಳ ನಂತರ ಗೋಪಾಲಕೃಷ್ಣ ಪೈರವರ ಒತ್ತಾಸೆ ಹಾಗೂ ಭಾಗಷಃ ಪ್ರಾಯೋಜಕತ್ವದಲ್ಲಿ ನಾಟಕವಾಗಿಯೂ ಪ್ರದರ್ಶನಗೊಂಡಿತು.
ತೀರ್ಥಹಳ್ಳಿಯ ‘ನಟ ಮಿತ್ರರು’ ನಾಟಕ ತಂಡಕ್ಕೆ ಸಾಗರದ ಎಸ್.ಮಾಲತಿರವರು ‘ಸಪ್ನ ಸಾರಸ್ವತ’ ಕಾದಂಬರಿಯ ಮೊದಲಾರ್ಧ ಭಾಗವನ್ನು ಅದೇ ಹೆಸರಲ್ಲಿ ರಂಗರೂಪಾಂತರಿಸಿ ನಿರ್ದೇಶಿಸಿದ್ದಾರೆ. ಈ ನಾಟಕದ ಐದನೇ ಪ್ರಯೋಗವನ್ನು ಬೆಂಗಳೂರಿನಲ್ಲಿ ‘ಲೋಕಾಯನ’ ತಂಡವು ಆಯೋಜಿಸಿದ್ದು 2014, ಸೆಪ್ಟಂಬರ್ 22 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ಗೌಡ ಸಾರಸ್ವತ ಸಮಾಜದವರಲ್ಲಿ ಸಂಚಲನವನ್ನುಂಟು ಮಾಡಿದರೆ, ಶೂದ್ರರಿಗೆ ಒಳಗೊಳಗೆ ಖುಷಿಯನ್ನೂ ಹುಟ್ಟಿಸಿತು.
ಯಾಕೆಂದರೆ, ತಮ್ಮ ಸಾರಸ್ವತ ಸಮಾಜದ ಕುಲಮೂಲದವರ ಸಂಕಷ್ಟ-ವಲಸೆ-ಶಾಪ-ವಿಮೋಚನೆ...
ಕುರಿತ ವಿವರಗಳನ್ನು ಹೇಳುವ ಈ ನಾಟಕ ಆ ಸಮಾಜದ ಪ್ರೇಕ್ಷಕರಲ್ಲಿ ಸಹಜವಾಗಿ ಸಂಚಲನ ಮೂಡಿಸುವಂತಿದೆ. ಹಾಗೆಯೇ ಇಡೀ ದೇಶವನ್ನೇ ಶತಶತಮಾನಗಳ ಕಾಲ ತಮ್ಮ ಬ್ರಾಹ್ಮಣ್ಯದ ಮನು ಮೌಲ್ಯಗಳ ಮೂಲಕ ದಮನಿಸುತ್ತಲೇ ಬಂದ ಬ್ರಾಹ್ಮಣರೂ ಸಹ ಒಂದು ಕಾಲದಲ್ಲಿ ದಬ್ಬಾಳಿಕೆ, ದೌರ್ಜನ್ಯ ಹಿಂಸೆಗೊಳಗಾಗಿ ಅನಾಥರಂತೆ ಊರು ತೊರೆದು ಹೋಗಬೇಕಾದದ್ದನ್ನು ನೋಡಿದ ಶೂದ್ರ ಸಮಾಜದ ನೋಡುಗರಿಗೆ ರೋಮಾಂಚನವೆನ್ನಿಸುತ್ತದೆ. ಈ ನಾಟಕವೇ ಹಾಗಿದೆ...
ಸುಮಾರು 500 ವರ್ಷಗಳ ಹಿಂದೆ ಗೋವಾದಲ್ಲಿ ನಡೆದ ಘಟನೆಗಳನ್ನು ಆಧರಿಸಿ ‘ಸಪ್ನ ಸಾರಸ್ವತ’ ರಚನೆಗೊಂಡಿದೆ. ಯಾವಾಗ ಪೋರ್ಚಗೀಸರು ಗೋವಾ ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮ ಆಡಳಿತವನ್ನು ಶುರುಮಾಡಿದರೋ, ಆಗ ತಮ್ಮ ಸಾಂಪ್ರದಾಯಿಕ ಆಚಾರ ವಿಚಾರ ಮೌಲ್ಯಗಳೊಂದಿಗೆ ಸುಭದ್ರವಾಗಿ ತಳವೂರಿದ್ದ ಗೌಡ ಸಾರಸ್ವತ ಬ್ರಾಹ್ಮಣರು ಆಘಾತಕ್ಕೊಳಗಾದರು. ಆಗಲೇ ಧಾರ್ಮಿಕ ಮೇಲಾಟದ ಕೋಮು ಸಂಘರ್ಷ ಆರಂಭವಾಗಿದ್ದು. ದಲಿತ ದುರ್ಬಲರನ್ನು ಶೋಷಿಸುತ್ತಾ ಯಜಮಾನ ಸಂಸ್ಕೃತಿಯ ಪಲಾನುಭವಿಗಳಾಗಿದ್ದ ಬ್ರಾಹ್ಮಣರ ಮೇಲೆ ಪೋರ್ಚಗೀಸರು ದಬ್ಬಾಳಿಕೆ ಮಾಡತೊಡಗಿದರು. ಧರ್ಮ-ದೇವರು-ದೇವಸ್ಥಾನ-ಪೂಜೆಗಳ ಹೆಸರಲ್ಲಿ ದುಡಿಯುವ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಆಳುತ್ತಿದ್ದ ವೈದಿಕಶಾಹಿಯನ್ನು ಕ್ರೈಸ್ತ ಸಮುದಾಯದ ಪೋರ್ಚಗೀಸರು ಧಾರ್ಮಿಕ ಕಾರಣಕ್ಕೆ ದಮನಿಸತೊಡಗಿದರು. ಪುರೋಹಿತರ ಆಚರಣೆಗಳನ್ನು ಬಹಿಷ್ಕರಿಸಿದರು, ದೇವಸ್ಥಾನಗಳನ್ನು ದ್ವಂಸ ಮಾಡಿದರು. ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಪೋರ್ಚಗೀಸರ ಪ್ರಯತ್ನಕ್ಕೆ ಅಡೆತಡೆ ಒಡ್ಡುತ್ತಿದ್ದ ಪುರೋಹಿತಶಾಹಿ ವರ್ಗ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಇದರಿಂದ ಕಂಗಾಲಾದ ಬ್ರಾಹ್ಮಣರ ನೆರವಿಗೆ ನಾಗ್ಡೋ ಬೇತಾಳ ಎನ್ನುವ ಬೈರಾಗಿ ನಿಲ್ಲುತ್ತಾನೆ. ಭೂತ ಭವಿಷ್ಯಗಳ ಕುರಿತು ಎಚ್ಚರಿಸುತ್ತಾನೆ. ದೇವಸ್ಥಾನದ ಮೂರ್ತಿಯನ್ನು ಬಚ್ಚಿಟ್ಟಿದ್ದ ವ್ಯಕ್ತಿಯ ಹೆಸರನ್ನು ಪೋರ್ಚಗೀಸರಿಗೆ ಹೇಳಿ ಆತನ ಸಾವಿಗೆ ಕಾರಣರಾದ ಬ್ರಾಹ್ಮಣನನ ವಂಶಕ್ಕೆ ಬೇತಾಳ ಶಾಪ ಕೊಡುತ್ತಾನೆ. ಜೊತೆಗೆ ವಿಮೋಚನೆಯನ್ನೂ ಹೇಳುತ್ತಾನೆ. ಕೊನೆಗೂ ಎಲ್ಲಾ ಬ್ರಾಹ್ಮಣರಿಗೂ ಊರು ತೊರೆಯಲು ಆದೇಶಿಸುತ್ತಾನೆ. ಹೀಗೆ ಒಂದು ಸಮುದಾಯ ತಮ್ಮ ನೆಲೆಯನ್ನು ಕಳೆದುಕೊಂಡು ಇಂದಿನ ಕೇರಳ ಕರ್ನಾಟಕಗಳತ್ತ ವಲಸೆ ಹೋಗಿ ನೆಲೆಕಂಡುಕೊಳ್ಳುತ್ತದೆ. ಇಲ್ಲಿಗೆ ನಾಟಕ ಮುಗಿಯುತ್ತದೆ. ನೋಡುಗರ ಮನಸ್ಸಿನಲ್ಲಿ ಹಲವಾರು ಸಂದೇಹಗಳನ್ನೂ ಹುಟ್ಟಿಸುತ್ತದೆ.
ಹೀಗೆ ಪೋರ್ಚಗೀಜರ ಸರ್ವಾಧಿಕಾರದಿಂದ ದೇಶಭ್ರಷ್ಟರಾಗಿ ಕೊಂಕಣಿ ಭಾಷಿಕ ಪ್ರದೇಶದಿಂದ ವಲಸೆ ಬಂದವರನ್ನು ಕೊಂಕಣಿ ಬ್ರಾಹ್ಮಣರೆನ್ನುತ್ತಾರೆ. ಇವರಲ್ಲಿ ಸಾರಸ್ವತ ಬ್ರಾಹ್ಮಣರು ಹಾಗೂ ಗೌಡ ಸಾರಸ್ವತ ಬ್ರಾಹ್ಣಣರು ಎನ್ನುವ ಎರಡು ಪಂಗಡಗಳಿವೆ. ಕೃಷಿಮೂಲ ನೆಲೆ ಕಳೆದುಕೊಂಡು ವಲಸೆ ಬಂದ ಗೌಡ ಸಾರಸ್ವತರು ತಮ್ಮ ಬದುಕಿಗಾಗಿ ವ್ಯಾಪಾರ ವೃತ್ತಿಯನ್ನು ಕೈಗೊಂಡು ಬರುಬರುತ್ತಾ ಆರ್ಥಿಕವಾಗಿ ಬಲಾಢ್ಯರಾದರು. ಪೈ, ಕಾಮತ್, ಮಲ್ಯ, ಶೆಣ್ಯೆ ಹೆಸರಿನ ಗೌಡ ಸಾರಸ್ವತ ಬ್ರಾಹ್ಮಣರು ತಮ್ಮ ಪರಿಶ್ರಮ ಹಾಗೂ ತಂತ್ರಗಾರಿಕೆಯಿಂದ ಶ್ರೀಮಂತರಾಗಿದ್ದನ್ನು ನೋಡಬಹುದಾಗಿದೆ. ಗೌಡ ಸಾರಸ್ವತದ ಕುಲದ ನೆಲೆಯನ್ನು ಹುಡುಕಿ ಹೊರಟ ಗೋಪಾಲಕೃಷ್ಣ ಪೈಗಳು ದಶಕಗಳ ಕಾಲ ಪರಿಶ್ರಮವಹಿಸಿ ‘ಸಪ್ನ ಸಾರಸ್ವತ’ ಎನ್ನುವ ಸಂಶೋಧನಾ ಗ್ರಂಥವನ್ನು ಕಾದಂಬರಿ ರೂಪದಲ್ಲಿ ಪ್ರಕಟಿಸಿದರು. ಈ ಕಾದಂಬರಿಯನ್ನು ನಿರ್ಮಿಸಿದ ನಟ ಮಿತ್ರರು ತಂಡದ ರೂವಾರಿಗಳಾದ ಜವಳಿ ಸಹೋದರರು, ಈ ನಾಟಕದ ನಿರ್ದೇಶಕಿಯಾದ ಎಸ್.ಮಾಲತಿರವರು ಸಹ ಗೌಡ ಸಾರಸ್ವತ ಕೊಂಕಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಒಂದೇ ಜಾತಿಯ ಈ ಎಲ್ಲರೂ ಸೇರಿ ತಮ್ಮ ಕುಲದ ಕಥಾನಕವನ್ನು ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಅನೇಕ ಕುಲಬಾಂಧವರು ಈ ನಾಟಕದ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಹೀಗಾಗಿ ಗೌಡ ಸಾರಸ್ವತ ಸಮುದಾಯದವರು ನಾಟಕ ರೂಪದಲ್ಲಿ ಕಟ್ಟಿಕೊಟ್ಟ ಕೊಂಕಣಿ ಬ್ರಾಹ್ಮಣರ ಪುರಾಣವನ್ನು ಬೇರೆಲ್ಲಾ ಪ್ರೇಕ್ಷಕರು ನೋಡಿ ಕೃತಾರ್ಥರಾಗುವ ಅವಕಾಶವನ್ನು ಈ ಸಮುದಾಯದವರು ದೊರಕಿಸಿಕೊಟ್ಟಿದ್ದಾರೆ.
‘ಸ್ವಪ್ನ ಸಾರಸ್ವತ’ದ ಪ್ರಮುಖವಾದ ಅಂಶ ಮತಾಂತರ. ಈ ನಾಟಕದಲ್ಲಿ ದಲಿತರ ಮತಾಂತರವನ್ನು ಲೇವಡಿ ಮಾಡಲಾಗಿದೆ. ಕುಡಿತತನದ ದೌರ್ಬಲ್ಯಕ್ಕೆ ಒಳಗಾದ ದಲಿತರನ್ನು ಆಶೆ ಆಮಿಷ ಒಡ್ಡಿ ಮತಾಂತರ ಮಾಡಲಾಯಿತು ಎಂದು ಹೇಳಲಾಗಿದೆ. ಆದರೆ ವೈದಿಕರ ನಿರಂತರ ಶೋಷಣೆಯಿಂದ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನೇ ಕಳೆದುಕೊಂಡಿದ್ದ ಬಹುಸಂಖ್ಯಾತ ದಲಿತರು, ಬಡವರು ಕ್ರಿಸ್ತರಾಗಿ ಮತಾಂತರ ಹೊಂದಿದ್ದು ಇತಿಹಾಸ. ಸಾಂಪ್ರದಾಯಿಕ ಕರ್ಮಠತನ ಬಿಡದ ಬ್ರಾಹ್ಮಣರನ್ನು ಹಿಂಸಿಸಿ ಮತಾಂತರಕ್ಕೆ ಪ್ರಯತ್ನಿಸಲಾಯಿತು ಒಪ್ಪದವರನ್ನು ದೇಶಭ್ರಷ್ಟರನ್ನಾಗಿಸಲಾಯಿತು ಎನ್ನುವುದನ್ನು ಈ ನಾಟಕ ತೋರಿಸುತ್ತದೆ. ಕ್ರಿಸ್ತ ಧರ್ಮಿಯ ಆಕ್ರಮಣಕಾರರು ಸೇವೆ, ಸಹಕಾರದ ಹೆಸರಲ್ಲಿ ಮತಾಂತರ ಮಾಡಿದ್ದು ಗೊತ್ತಿದೆ. ಆದರೆ ನೇರವಾಗಿ ಗುಡಿಗಳನ್ನು ಒಡೆದು ಹಾಕಿ, ಮೂರ್ತಿಗಳನ್ನು ಚೂರುಗೊಳಿಸಿ, ದೇವಸ್ಥಾನದ ಅರ್ಚಕರಿಗೆ ಮಾಂಸದೂಟ ತಿನ್ನಲು ಒತ್ತಾಯಿಸಿ, ಕೋವಿಯ ಭಯದಲ್ಲಿ ಮತಾಂತರಕ್ಕೆ ಒತ್ತಾಯಿಸಿದ್ದು ಒಂದಿಷ್ಟು ಅತಿರೇಕವೆನ್ನಿಸುತ್ತದೆ. ಬ್ರಾಹ್ಮಣ ಸಮಾಜದ ಮೇಲೆ ಸಿಂಪತಿ ಹುಟ್ಟಿಸಲು, ದಲಿತ ವರ್ಗದವರನ್ನು ಅವಕಾಶವಾದಿಗಳು ಎಂದು ತೋರಿಸಲು ಹಾಗೂ ಪೋರ್ಚಗೀಸರನ್ನು ವೈದಿಕ ಧರ್ಮವಿರೋಧಿ ಸರ್ವಾಧಿಕಾರಿಗಳು ಎಂದು ಹೇಳುವುದು ಈ ‘ಸಪ್ನ ಸಾರಸ್ವತ’ದ ಉದ್ದೇಶವಾಗಿದೆ.
ಅಚ್ಚರಿಯೆಂದರೆ ಈ ಉದ್ದೇಶ ಸಾಧನೆಗಾಗಿ ಈ ನಾಟಕದಲ್ಲಿ ಸೃಷ್ಟಿಸಿದ ನಾಗ್ಡೋ ಬೇತಾಳ ಎನ್ನುವ ಪಾತ್ರ. ಈ ಪಾತ್ರದ ಪೋಷಣೆಯೇ ವಿಚಿತ್ರವಾಗಿದೆ. ನಮ್ಮ ಕೆಳವರ್ಗದ ಅನುಭಾವಿಯಾದ ಮಂಟೇಸ್ವಾಮಿ ರೀತಿಯಲ್ಲಿ ಈ ಪಾತ್ರ ಮೂಡಿಬಂದಿದೆ. ಹಣೆಯಲ್ಲಿ ವಿಭೂತಿ ಬಳಿದು, ಸೊಂಟಕ್ಕೆ ತುಂಡು ಬಟ್ಟೆ ತೊಟ್ಟು, ಜಡೆ ಮುಡಿಗಳನ್ನು ಬಿಟ್ಟು ಅರೆನಗ್ನ ಅಲೆಮಾರಿ ಜಂಗಮ ಬೈರಾಗಿಯಾದ ಈ ಪಾತ್ರದಲ್ಲಿ ಯಾವುದೇ ರೀತಿಯ ಬ್ರಾಹ್ಮಣ್ಯದ ಕುರುಹುಗಳೂ ಇಲ್ಲ. ಆತನ ನಡೆ ನುಡಿಯಲ್ಲೂ ಸಹ ವೈದಿಕತೆ ತೋರುವುದಿಲ್ಲ. ನಿಜದಲ್ಲಿ ನಾಗ್ಡೋ ಬೇತಾಳ ಒಬ್ಬ ಶೈವ ಆರಾಧಕ. ಆದರೂ ಎಲ್ಲಾ ವೈಷ್ಣವ ಬ್ರಾಹ್ಮಣ ಕುಲದ ವೈದಿಕರು ಬೆತ್ತಲೆ ಬೈರಾಗಿ ಬಂದಾಗಲೆಲ್ಲಾ ಅಡ್ಡಬೀಳುವುದು, ಅಪಾರವಾದ ಗೌರವವನ್ನು ಕೊಡುವುದು ವಿಚಿತ್ರವೆನಿಸುತ್ತದೆ. ಶೈವ ಸಂಸ್ಕೃತಿಯ ಬೈರಾಗಿ ವ್ಯಕ್ತಿ ಅದೆಷ್ಟೇ ಪವಾಡ ಪುರುಷನಾದರೂ ವೈದಿಕರು ಸಾಷ್ಟಾಂಗ ಬಿದ್ದು ಗೌರವಿಸುವುದು ಸಾಧ್ಯವಿಲ್ಲದ ಮಾತು. ಅರಾಜಕ, ಅಶಿಸ್ತಿನ, ಅಸಂಪ್ರದಾಯಕ ವ್ಯಕ್ತಿಯನ್ನು ಆರಾಧಿಸುವುದು ವೈದಿಕ ಸಮುದಾಯಕ್ಕೆ ಸಾಧ್ಯವೂ ಇಲ್ಲ. ಯಾಕೋ ಈ ನಾಟಕದಲ್ಲಿರುವ ವೈದಿಕ ಸಂಸ್ಕೃತಿಗೂ ಹಾಗೂ ಶೈವಾಚರಣೆಯ ಬೇತಾಳ ಪಾತ್ರಕ್ಕೂ ಹೊಂದಾಣಿಕೆ ಇಲ್ಲದಂತಾಗಿದ್ದು ನೋಡುಗರಿಗೆ ವಿಚಿತ್ರ ಸಮಾಗಮವೆನ್ನಿಸುವಂತಿದೆ.
ವಿಪರ್ಯಾಸವೇನೆಂದರೆ, ಬ್ರಾಹ್ಮಣ ಸಮುದಾಯದ ಹಿತಾಸಕ್ತಿಯನ್ನು ಹೇಳುವ ಈ ನಾಟಕವು ವೈದಿಕರ ಸಮಯಸಾಧಕತನ ಹಾಗೂ ದ್ರೋಹವನ್ನೂ ಸಹ ತೋರಿಸುತ್ತದೆ. ವಿಠ್ಠೊ ಪೈ ಎನ್ನುವ ಕಟ್ಟರ್ ಬ್ರಾಹ್ಮಣನು ವಿವಾಹಿತನಾದರೂ ಪೋರ್ಚಗೀಸರ ಹುಡುಗಿಯ ಮೋಹಕ್ಕೊಳಗಾಗುತ್ತಾನೆ. ಹೆಣ್ಣಿನ ವಿಷಯದಲ್ಲಿ ವೈದಿಕರು ಜಾತಿ ಕುಲ ಧರ್ಮ ಮೀರಬಹುದಾದ ಸಾಧ್ಯತೆಗೆ ಪ್ರತೀಕವಾಗುತ್ತಾನೆ. ಪೋರ್ಚಗೀಸರಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ದೇವರ ಮೂರ್ತಿಯನ್ನು ಬಚ್ಚಿಟ್ಟಿದ್ದು ‘ದಡ್ಡ’ ಎಂದು ಹೇಳಿ ಮಾತುಬಾರದ ದಡ್ಡನ ಪ್ರಾಣಕ್ಕೆ ಸಂಚಕಾರ ತರುತ್ತಾನೆ. ಯಾಕೆಂದರೆ ಈ ದಡ್ಡ ಅನ್ನುವ ಜಾತಿ ಕುಲ ಗೊತ್ತಿಲ್ಲದ ಅನಾಥ ಮೂಕನನ್ನು ಮಗುವಾಗಿದ್ದಾಗಿನಿಂದಲೂ ವಿಠ್ಠೋಬನ ತಂದೆ ಸಾಕಿರುತ್ತಾನೆ. ವೈದಿಕನಲ್ಲದಿದ್ದರೂ ತನ್ನನ್ನು ಸಾಕಿದವರಿಗೆ ನಿಷ್ಟನಾದ ದಡ್ಡನು ತನ್ನ ಪ್ರಾಣದ ಹಂಗುತೊರೆದು ವೈದಿಕ ಕುಲದೈವದ ಮೂರ್ತಿಯನ್ನು ಪೋರ್ಚಗೀಸರಿಂದ ಕಾಪಾಡಿ ಅದಮ್ಯ ನಿಷ್ಟೆಯನ್ನು ಮೆರೆಯುತ್ತಾನೆ. ಆದರೆ ಬ್ರಾಹ್ಮಣೋತ್ತಮ ವಿಠ್ಠೋ ಪೈ ಮಾತ್ರ ತನ್ನ ಪ್ರಾಣರಕ್ಷಣೆಗೆ ಮೂಕನನ್ನು ಶತ್ರುಗಳಿಗೆ ಹಿಡಿದುಕೊಟ್ಟು ದ್ರೋಹವೆಸಗುತ್ತಾನೆ. ಬೇತಾಳನ ಶಾಪಕ್ಕೆ ಗುರಿಯಾಗುತ್ತಾನೆ. ಈ ಪ್ರಕರಣದಲ್ಲಿ ಅಬ್ರಾಹ್ಮಣರ ನಿಷ್ಟೆ ಹಾಗೂ ವೈದಿಕರ ಸಮಯಸಾಧಕತನ ಅನಾವರಣಗೊಳ್ಳುತ್ತದೆ. ಬ್ರಾಹ್ಮಣರ ವಿದ್ರೋಹವನ್ನು ವಿಶ್ಲೇಷಿಸುವ ಬೇತಾಳ ನಿಜಕ್ಕೂ ಈ ನಾಟಕದಲ್ಲಿ ಜ್ಯಾತ್ಯಾತೀತನಾಗುತ್ತಾನೆ. ಸಾಮ್ರಾಜ್ಯಶಾಹಿಯನ್ನು ವಿರೋಧಿಸುತ್ತಾನೆ. ಆದರೆ ಕೊನೆಗೆ ಆತನೂ ಸಹ ಆಕ್ರಮಣಕಾರರ ವಿರುದ್ದ ಸಂಘಟಿತ ಹೋರಾಟವನ್ನು ಹುಟ್ಟುಹಾಕದೇ ಶೋಷಿತ ಬ್ರಾಹ್ಮಣರನ್ನು ವಲಸೆ ಹೋಗಲು ಆದೇಶಿಸಿ ಪಲಾಯಣವಾದಿಗಳನ್ನಾಗಿಸುತ್ತಾನೆ. ಈ ನಾಟಕದ ವಿಶೇಷತೆ ಏನೆಂದರೆ ‘ಸಪ್ನ ಸಾರಸ್ವತ’ ಬಾಹ್ಯದಲ್ಲಿ ಬ್ರಾಹ್ಮಣರ ಹಿತಾಸಕ್ತಿ ಹೊಂದಿದಂತೆ ಕಂಡರೂ ಆಂತರ್ಯದಲ್ಲಿ ಬ್ರಾಹ್ಮಣರ ದ್ರೋಹ, ವಂಚನೆ, ಅಪಕಾರ ಹಾಗೂ ಪಲಾಯಣವಾದವನ್ನೇ ಹೇಳುವಲ್ಲಿ ಈ ನಾಟಕ ಯಶಸ್ವಿಯಾಗಿದೆ.
ಜಾತಿ ಕುಲಗಳು ಗೊತ್ತಿಲ್ಲದ ದಡ್ಡ ಎನ್ನುವ ಮೂಕನೇ ಈ ನಾಟಕದ ದುರಂತ ನಾಯಕನಾಗುತ್ತಾನೆ. ಈಗಲೂ ಸಹ ಗೋವಾದಲ್ಲಿ ಈ ದಡ್ಡನ ದೇವಸ್ಥಾನವಿದೆ. ನಾಗ್ಡಾ ಬೇತಾಳನ ಗುಡಿಯೂ ಇದೆ. ಕೊಂಕಣಿ ಬ್ರಾಹ್ಮಣರ ಕುಲದೇವರಾದ ಮಹಾಲತಾ ಮಾಯಿಯ ದೇವಸ್ಥಾನಕ್ಕೆ ಪೂಜೆಗೆ ಹೋಗುವ ಗೌಡ ಸಾರಸ್ವತ ಬ್ರಾಹ್ಮಣರು ದಡ್ಡ ಹಾಗೂ ಬೇತಾಳನ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುವುದು ಖಡ್ಡಾಯ ವಾಡಿಕೆಯಾಗಿದೆ. ಅಂದರೆ ಮಾಯೆ ದೇವಿಯ ಜೊತೆಗೆ ಅಪಾರ ನಿಷ್ಟೆಯ ದಡ್ಡ ಹಾಗೂ ಅಸಂಪ್ರದಾಯಿಕ ಬೇತಾಳ ದೇವರಾದರು, ಈ ಬ್ರಾಹ್ಮಣೋತ್ತಮರು ಕೊನೆಗೂ ಆರಾಧಕರಾದರು. ತಮ್ಮ ಕುಲಮೂಲದವರು ಮಾಡಿದ ದ್ರೋಹಕ್ಕೆ ಈಗಲೂ ಸಹ ದಡ್ಡನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ತಪ್ಪುಕಾಣಿಕೆ ಸಲ್ಲಿಸುತ್ತಲೇ ಇದ್ದಾರೆಂಬುದೇ ವಿಸ್ಮಯದ ಸಂಗತಿ.
ಸಾರಸ್ವತ ಬ್ರಾಹ್ಮಣರ ಕುಲಮೂಲದ ಈ ಕಥಾನಕವನ್ನು ಹೀಗೆಯೇ ವಿಶ್ಲೇಷಿಸುತ್ತಾ ಹೋದರೆ ಈ ನಾಟಕದಲ್ಲಿ ಹಲವಾರು ವಿಪರ್ಯಾಸಗಳನ್ನು ಕಾಣಬಹುದಾಗಿದೆ. ಅದನ್ನೆಲ್ಲಾ ಬಿಟ್ಟು ಪ್ರದರ್ಶನದ ಬಗ್ಗೆ ಗಮನ ಹರಿಸಿದರೆ ಎಸ್. ಮಾಲತಿಯವರು ಸಾಹಿತ್ಯ ಕೃತಿಯನ್ನು ನಾಟಕವಾಗಿ ಕಟ್ಟಿಕೊಡಲು ತುಂಬಾನೇ ಶ್ರಮಿಸಿದ್ದಾರೆ. ಆದರೆ ಕಥಾ ನಿರೂಪನೆಯಲ್ಲಿ ಇನ್ನೂ ಹಳೆಯ ಮಾದರಿಯನ್ನೇ ಅನುಸರಿಸಿದ್ದಾರೆ. ಯಾರೋ ಒಬ್ಬರು ಬಂದು ಕಥೆಯನ್ನು ನಿರೂಪಿಸುವುದು ಹಾಗೂ ಅದಕ್ಕೆ ಪೂರಕವಾಗಿ ಘಟನೆಗಳನ್ನು ತೋರಿಸುವುದು ತುಂಬಾ ಹಳೆಯ ರಂಗತಂತ್ರ. ಈಗ ಕಾಲಘಟ್ಟ ಬದಲಾಗಿದೆ. ರಂಗತಂತ್ರಗಳಲ್ಲೂ ಅನೇಕ ಪರಿವರ್ತನೆಗಳಾಗಿವೆ. ಕಾಲಕ್ಕೆ ತಕ್ಕಂತೆ ನಿರ್ದೇಶಕರು ಅಪ್ಡೇಟ್ ಮತ್ತು ಅಪಗ್ರೇಡ್ ಆಗದಿದ್ದಲ್ಲಿ ನಾಟಕ ಬೇಸರ ತರಿಸುತ್ತದೆ. ಎನ್ಎಸ್ಡಿ ಪದವೀದರಾದ ಅನು ನಿರ್ದೇಶಕಿ ಎಂದಾಗಲೇ ಪ್ರೇಕ್ಷಕರಲ್ಲಿ ನಾಟಕದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುತ್ತದೆ. ಅದರಲ್ಲೂ ಕೆಂದ್ರ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತವಾದ ಕಾದಂಬರಿ ನಾಟಕವಾಗುತ್ತದೆಂದರೆ ಕುತೂಹಲ ಇನ್ನೂ ದ್ವಿಗುಣವಾಗಿರುತ್ತದೆ. ಆದರೆ ಈ ನಾಟಕ ನೋಡಿದವರಿಗೆ ವಸ್ತು ಮತ್ತು ನಿರೂಪಣೆಗಳು ನಿರಾಸೆಯನ್ನು ತರಿಸಿದ್ದಂತೂ ಸುಳ್ಳಲ್ಲ.
ನಿರೂಪಕರ ನಿರೂಪಣೆಗೂ ಹಾಗೂ ಪೂರಕವಾಗಿ ನಡೆಯುವ ಘಟನೆಗಳಿಗೂ ಸರಿಯಾಗಿ ಬ್ಲೆಂಡ್ ಮಾಡಬಹುದಾಗಿತ್ತು. ಸಂದರ್ಭ ಯಾವುದೇ ಇರಲಿ ಗೋಯಸ್ ಎನ್ನುವ ಪೋರ್ಚಗೀಸ ಪಾತ್ರದಾರಿ ಸದಾ ಕೈಯಲ್ಲಿ ಕೋವಿ ಹಿಡಿದೇ ಅಟ್ಟಹಾಸ ಗೈಯುವುದು ಹಲವು ಸಲ ಪುನರಾವರ್ತನೆಗೊಂಡಿದ್ದು ತುಂಬಾ ಕೃತಕವಾಗಿ ಮೂಡಿಬಂದಿದೆ. ದಲಿತರನ್ನು ಚರ್ಚಿನಲ್ಲಿ ಮತಾಂತರ ಮಾಡುವಾಗಲೂ ಸಹ ಅಧಿಕಾರಿಗಳು ಹಾಗೂ ಸೈನಿಕರು ಕೋವಿ ಹಿಡಿದು ನಿಂತಿದ್ದು ಆಭಾಸಕರವಾಗಿದೆ. ಡಂಗುರ ಹೊಡೆಯುವವರ ನಟನೆಗೂ ಡಂಗುರದ ಸದ್ದಿಗೂ ತಾಳಮೇಳ ಬೇಕಾಗಿತ್ತು. ಬ್ರಹತ್ ಕಾದಂಬರಿಯಿಂದಾಯ್ದ ಸನ್ನಿವೇಶಗಳನ್ನು ಸಮಯದ ಮಿತಿಗೊಳಪಡಿಸಿದಾಗ ಒಂದಿಷ್ಟು ಲಿಂಕ್ ಗಳು ಬಿಟ್ಟುಹೋದಂತಿವೆ. ಹೀಗಾಗಿ ನೋಡುಗರಿಗೆ ಮಾಹಿತಿ ಕೊರತೆ ಉಂಟಾಗುತ್ತದೆ. ಇದನ್ನು ನಿರೂಪನೆಯಲ್ಲಾದರೂ ಸರಿತೂಗಿಸಬೇಕಾಗಿತ್ತು.
ನಟನೆಯಲ್ಲಿ ಕಲಾವಿದರು ತಮ್ಮ ಅಭಿನಯ ಪ್ರತಿಭೆಯನ್ನು ತೋರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ನಾಗ್ಡೋ ಬೇತಾಳನಾಗಿ ಸಂದೇಶ ಜವಳಿ ನಟನೆ ಗಮನಾರ್ಹವಾಗಿತ್ತು. ವಿಠ್ಠೋ ಪೈ ಪಾತ್ರಕ್ಕೆ ನಿಲೇಶ ಜವಳಿ ಜೀವದುಂಬಿ ನಟಿಸಿದ್ದಾರೆ. ಮಾಳಪ್ಪಯ್ಯನಾಗಿ ಶ್ರೀಪತಿ ಸಂಯಮನ ಅಭಿನಯ ತೋರಿದ್ದಾರೆ. ಗೋಯಸ್ ಪಾತ್ರದ ಪ್ರಜ್ವಲ್ ತಮ್ಮ ನಟನೆಯಲ್ಲಿ ಇನ್ನೂ ಪಳಗಬೇಕಿದೆ. ’ದಡ್ಡ’ ನ ಪಾತ್ರದಲ್ಲಿ ಗುರುರಾಜ ಅಭಿನಯ ಸೊಗಸಾಗಿದೆ. ಬಹುತೇಕ ಎಲ್ಲಾ ಪಾತ್ರಗಳೂ ಆಂಗಿಕ ಹಾಗೂ ವಾಚಿಕ ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಆದರೆ ಭಾವಾಭಿನಯದಲ್ಲಿ ಇನ್ನೂ ಹೆಚ್ಚು ಶ್ರಮವಹಿಸಬೇಕಾಗಿದೆ. ಆದರೆ ನಿರೂಪಕರಾದವರ ಮಾತಲ್ಲಿ ಕಥಾನಕವನ್ನು ನಿರೂಪಿಸುವ ಪೋರ್ಸ ಇಲ್ಲವಾಗಿದ್ದು ನಿರೂಪನೆ ತುಂಬಾ ಸಪ್ಪೆ ಎನಿಸಿದೆ.
ಇಡೀ ನಾಟಕದಲ್ಲಿ ಗಮನಸೆಳೆದದ್ದು ಪುರುಷೋತ್ತಮ ತಲವಾಟರವರ ನೇಪತ್ಯದ ಕುಶಲತೆ. ರಂಗವಿನ್ಯಾಸ ತುಂಬಾ ಸರಳ ಹಾಗೂ ಪರಿಣಾಮಕಾರಿಯಾಗಿದ್ದವು. ಇರುವ ಪ್ಲಾಟಪಾರಂಗಳನ್ನೇ ವೈವಿದ್ಯಮಯವಾಗಿ ಬಳಸಿ ಬೇರೆ ಬೇರೆ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಕಾಸ್ಟೂಮ್ಸ ಹಾಗೂ ಪ್ರಸಾಧನದ ಬಗ್ಗೆ ಎರಡು ಮಾತಿಲ್ಲ, ಎಲ್ಲವೂ ವ್ಯಕ್ತಿಗಳನ್ನು ಪಾತ್ರಗಳಾಗಿಸಿವೆ. ಬೆಳಕಿನ ವಿನ್ಯಾಸ ಪ್ರತಿ ಸನ್ನಿವೇಶಗಳನ್ನೂ ಬೆಳಗಿದೆಯಾದರೂ ಮೂಡ್ ಸೃಷ್ಟಿಸಲು ವಿಫಲವಾಗಿದೆ. ಪೋರ್ಚಗೀಸ್ ಅಧಿಕಾರಿಗಳ ಟೋಪಿಯ ನೆರಳು ಅವರ ಮುಖಗಳ ಮೇಲೆ ಬಿದ್ದು ಭಾವನೆಗಳು ಮರೆಮಾಚಿದೆ. ಬೆಳಕಿನ ನಿರ್ವಹಣೆ ಮಾಡುತ್ತಿದ್ದ ನಿತಿನ್ ಕಳವೆ ಒಂದಿಷ್ಟು ಸಂಯಮ ವಹಿಸಿದ್ದರೆ ಸೆಟ್ ಹೊಂದಾಣಿಕೆ ಆದ ನಂತರ ಬೆಳಕು ಬಿಡಬಹುದಾಗಿತ್ತು.
ಒತ್ತಡಕ್ಕೊಳಗಾಗಿ ಊರು ಬಿಟ್ಟುಬಂದರೂ ಸಹ ತಮ್ಮ ಭಾಷೆಯನ್ನು ಬಿಡದಿರುವುದು ಕರ್ನಾಟಕದ ಕೊಂಕಣಿ ಬ್ರಾಹ್ಮಣರ ವಿಶೇಷತೆಯಾಗಿದೆ. ‘ಮಾತೃಭಾಷೆ ಮರೆತರೆ ನಿಮ್ಮ ಹೆಂಗಸರ ಗರ್ಭಗಳು ನಿಷ್ಪಲವಾಗುತ್ತವೆ’ ಎನ್ನುವ ಬೇತಾಳನ ಭಯಕ್ಕೋ ಇಲ್ಲವೆ ಮಾತೃ ಭಾಷೆಯ ಮೋಹಕ್ಕೋ ಒಟ್ಟಾರೆಯಾಗಿ ನಾನೂರು ವರ್ಷಗಳ ನಂತರದ ತಲಮಾರು ಸಹ ಇನ್ನು ತಮ್ಮ ಮಾತೃಭಾಷೆಯನ್ನು ಬದುಕಿನ ಭಾಗವಾಗಿಸಿಕೊಂಡಿದ್ದು ಸ್ತುತ್ಯಾರ್ಹ. ಇಂಗ್ಲೀಷಿಗೆ ಮಾರುಹೋಗಿ ಕನ್ನಡವನ್ನೇ ಮರೆಯುತ್ತಿರುವ ಹೊಸ ತಲೆಮಾರಿನ ಕನ್ನಡಿಗರಿಗೆ ಕೊಂಕಣಿ ಮಾತೃ ಭಾಷಿಕ ಕನ್ನಡಿಗರ ಭಾಷಾಭಿಮಾನ ಮಾದರಿಯಾಗಿದೆ. ಕನ್ನಡಿಗರಿಗೂ ‘ಹೀಗೆ ಯಾವುದಾದರೂ ಬೇತಾಳನ ಶಾಪದ ಭಯವಿದ್ದಿದ್ದರೆ ಚೆನ್ನಾಗಿತ್ತು. ತಮ್ಮ ಮಾತೃಭಾಷೆಯನ್ನು ಕಾಪಿಟ್ಟುಕೊಳ್ಳುವ ಪ್ರೀತಿಯಾದರೂ ಹುಟ್ಟುತ್ತಿತ್ತು’ ಎಂದು ಈ ನಾಟಕ ನೋಡಿದಾಗ ಅನ್ನಿಸದೇ ಇರದು.
ರಂಗಭೂಮಿ ಎನ್ನುವುದು ನಿಜಕ್ಕೂ ಜ್ಯಾತ್ಯಾತೀತವಾಗಿರುವಂತಹುದು. ಕೆಲವು ಜಾತಿವಾದಿಗಳು ನಾಟಕ ಮಾಡಿದರೂ ಸಹ ಜ್ಯಾತ್ಯಾತೀತ ನಾಟಕವನ್ನಾಡಿಸುತ್ತಾರೆ. ಹಲವರಂತೂ ತಮ್ಮದೇ ಜಾತಿ ಸಮುದಾಯದೊಳಗಿನ ಜೀವವಿರೋಧಿತನವನ್ನು ನಾಟಕವಾಗಿಸಿದ್ದಾರೆ. ಅಂತವರಲ್ಲಿ ಕೈಲಾಸಂ, ಶ್ರೀರಂಗ, ಲಂಕೇಶ ಮುಂತಾದವರಿದ್ದಾರೆ. ಆದರೆ ಹೀಗೆ ಒಂದು ಜಾತಿಯ ಚರಿತ್ರೆಯನ್ನೇ ಕುರಿತು ಅದೇ ಸಮುದಾಯದವರು ನಾಟಕವನ್ನು ಕಟ್ಟಿಕಟ್ಟಿದ್ದು ಬಲು ಅಪರೂಪ. ಇದು ಹೀಗೆ ಮುಂದುವರೆದರೆ... ಹೇಗೆ ಜಾತಿಗೊಂದು ಮಠ ಪೀಠಗಳು ಹುಟ್ಟಿಕೊಂಡು ತಮ್ಮ ಜಾತಿ ಹಿತಾಸಕ್ತಿಗಾಗಿ ಟೊಂಕಕಟ್ಟಿ ನಿಂತಿವೆಯೋ ಹಾಗೆಯೇ ಜಾತಿ ಜನಾಂಗದವರೆಲ್ಲಾ ತಮ್ಮ ಕುಲ, ಕೋಮು, ಸಮುದಾಯದ ಪುರಾಣಗಳ ಕುರಿತು ನಾಟಕಗಳನ್ನು ಆಡಿಸಲು ಶುರುಮಾಡಿದರೆ ಜ್ಯಾತ್ಯಾತೀತವಾದ ರಂಗಭೂಮಿ ಜಾತಿ ಕುಲ ಧರ್ಮಗಳಲ್ಲಿ ಒಡೆದು ಹೋಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾದಾಗ ಆಯಾ ಜಾತಿ ಹಿತಾಸಕ್ತಿಯ ನಾಟಕಗಳನ್ನು ಆಯಾ ಜಾತಿಯ ಪ್ರೇಕ್ಷಕರೇ ನೋಡಬೇಕಾಗುತ್ತದೆ. ವ್ಯಕ್ತಿಗಳಿಗೆ ಜಾತಿ ಕುಲಗಳಿರಬಹುದು ಆದರೆ ಕಲಾವಿದರಿಗೆ ಅವು ಇರಬಾರದು ಎನ್ನುವುದೇ ರಂಗಭೂಮಿಯ ಅಘೋಷಿತ ನಿಯಮ. ಜಾತಿಪ್ರೇಮಕ್ಕಿಂತ ರಂಗಭೂಮಿ ದೊಡ್ಡದು. ಆದ್ದರಿಂದ ಎಸ್. ಮಾಲತಿಯಂತಹ ಸಮುದಾಯ ಸಾಂಸ್ಕೃತಿಕ ಸಂಘಟನೆಯಿಂದ ಬಂದ ನಿರ್ದೇಶಕಿ. ಜಾತಿ ಹಿತಾಸಕ್ತಿಯ ಅಗ್ರಹಾರ ಪುರಾಣಗಳಿಗಿಂತ ಭಿನ್ನವಾದ ನಾಟಕಗಳನ್ನು ಮಾಲತಿಯವರಿಂದ ಜ್ಯಾತ್ಯಾತೀತ ಪ್ರೇಕ್ಷಕರು ಬಯಸುತ್ತಾರೆ. ಆ ನಿಟ್ಟಿನಲ್ಲಿ ಯೋಚಿಸಿ ನಾಟಕಗಳನ್ನು ಕಟ್ಟಿಕೊಟ್ಟರೆ ರಂಗಭೂಮಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಲ್ಲವಾದರೆ ಅಗ್ರಹಾರದ ಸಪ್ನ ಸಾರಸ್ವತಕ್ಕೆ ಅಪಾರ ಪ್ರತಿಭೆಯ ನಿರ್ದೇಶಕಿಯ ಶ್ರಮ ಸಮಯ ನಿಷ್ಟೆ ಮುಡುಪಾದಂತಾಗುತ್ತದೆ. ಕೋಮುಶಕ್ತಿಗಳು ವಿಜ್ರಂಭಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ ಬದ್ದತೆಗಿಂತ ರಂಗನಿಷ್ಟೆ ಸದ್ಯದ ಅಗತ್ಯವಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ