ಗುರುವಾರ, ಅಕ್ಟೋಬರ್ 23, 2014

ಅಚ್ಚುಕಟ್ಟಾದ ಅಪರೂಪದ ರಂಗಪ್ರಯೋಗ “ಗಾಂಧಿ ಬಂದ” !


ಕೊನೆಗೂ ಗಾಂಧಿ ಬಂದ ನಾಟಕಕ್ಕೆ ಶಾಪವಿಮೋಚನೆಯಾಗಿ ಮತ್ತೆ ಪ್ರದರ್ಶನಗೊಳ್ಳುತ್ತಿರುವುದು ಸಂತಸದ ಸಂಗತಿ. ಇದೊಂದು ನಿಜಕ್ಕೂ ಇತ್ತೀಚಿನ ಹವ್ಯಾಸಿ ಕನ್ನಡ ರಂಗಭೂಮಿಯಲ್ಲಿ ಅಪರೂಪದ ಅದ್ಬುತ ರಂಗಪ್ರಯೋಗ. ನಾಟಕಾ ಅಂದರೆ ಹೀಗಿರಬೇಕು ಎಂದು ನಿಬ್ಬೆರಗಾಗಿ ನೋಡುವಂತಹ ಯಶಸ್ವಿ ನಾಟಕವೊಂದು 30 ಶೋಗಳನ್ನು ಪ್ರದರ್ಶಿಸಿ ಜನಪ್ರೀಯತೆಯನ್ನು ಪಡೆದಿರುವಾಗಲೇ ನಿಂತು ಹೋಗಿದ್ದು ರಂಗಾಸಕ್ತರಿಗೆ ನಿರಾಸೆಯನ್ನುಂಟುಮಾಡಿತ್ತು. ಸಮಸ್ಯೆ ಹುಟ್ಟಿದ್ದು ಮೂಲಕಾದಂಬರಿ ಕುರಿತುಬ್ರಾಹ್ಮಣ ವಿಧವೆಯನ್ನು ಮುಸ್ಲಿಂ ಯುವಕ ಓಡಿಸಿಕೊಂಡು ಹೋಗಿ ಮದುವೆಯಾಗಿದ್ದನ್ನು ಮತೀಯವಾದಿ ಮನಸುಗಳು ವಿರೋಧಿಸತೊಡಗಿದವು. ಕೋಮುವಾದಿಗಳಿಂದ ಹಾಗೂ ಜಾತಿವಾದಿಗಳಿಂದ ತಕರಾರು ಶುರುವಾಗಿತ್ತು. (ಮೂಲ ಕಾದಂಬರಿ ಮಂಗಳೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಪ್ರತಿರೋಧಕ್ಕೆ ಅಳುಕಿದ ವಿಶ್ವವಿದ್ಯಾಲಯವು ಕಾದಂಬರಿಯಲ್ಲಿರುವ ವಿವಾದಾತ್ಮಕ ಅಂಶಗಳನ್ನು ತೆಗೆದುಹಾಕಿ ನೂರೈವತ್ತು ಪುಟಗಳನ್ನು ಮಾತ್ರ ಪಠ್ಯಕ್ರಮದಲ್ಲಿ ಅಳವಡಿಸಿತು.)

ಗಾಂಧಿ ಬಂದ ಕಾದಂಬರಿಯಲ್ಲಿ ಜಾತಿಬೇಧ ಹಾಗೂ ಪಂಕ್ತಿಬೇಧಗಳ ಪ್ರಸ್ತಾಪವಿದ್ದುದರಿಂದ ತುಳು ನಾಡಿನ ವಿಶ್ವಕರ್ಮಿಗಳು ಕಾದಂಬರಿಯನ್ನು ನಿಷೇಧಿಸಲು ಆಗ್ರಹಿಸಿದ್ದರು. ಬ್ರಾಹ್ಮಣ ಪರಿಷತ್ತು ತಗಾದೆ ತೆಗೆಯಿತು. ಹಾಗೂ ಆಗ ಕೋಮುವಾದಿ ಸರಕಾರವೇ ಕರ್ನಾಟಕದಲ್ಲಿ ಆಡಳಿತದಲ್ಲಿತ್ತು. ಹೀಗಾಗಿ  ಕಾದಂಬರಿ ಬರೆದ ಡಾ.ಹೆಚ್.ನಾಗವೇಣಿಯವರು ಹಂಪಿ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿದ್ದರಿಂದ ಸುಮ್ಮನೆ ವಿವಾದಗಳು ಬೇಡ ಎಂದುಕೊಂಡು ನಾಟಕ ಮಾಡಕೂಡದು ಎಂದು ರಂಗತಂಡದವರಿಗೆ ಸುಗ್ರೀವಾಜ್ಞೆ ಮಾಡಿದ್ದರು. ರಂಗಮಂಟಪ ತಂಡದವರು ಯಾವುಯಾವುದೋ ಮೂಲಗಳಿಂದ ಒತ್ತಡ ತಂದರೂ ಸಹ ನಾಗವೇಣಿಯವರು ಅನುಮತಿ ಕೊಡಲೇ ಇಲ್ಲ. ಅನುಮತಿ ಕೊಡಬಹುದಾಗಿತ್ತು, ಯಾಕೆಂದರೆ ಮೂಲಭೂತವಾದಿಗಳ ತಕರಾರಿದ್ದಿದ್ದು ಕಾದಂಬರಿಯ ಬಗ್ಗೆಯೇ ಹೊರತು ನಾಟಕದ ಕುರಿತು ಅಲ್ಲ. ಆದರೆ.. ಕಾದಂಬರಿಯನ್ನೂ ಮೀರಿ ನಾಟಕ ಜನಪ್ರೀಯವಾಗತೊಡಗಿತ್ತು, ಇದರಿಂದಾಗಿ ಒಂದಿಷ್ಟು ಅಸೂಯೆಗೊಳಗಾಗಿ ನಾಗವೇಣಿಯವರು ಅನುಮತಿಯನ್ನು ತಡೆಹಿಡಿದರಾ? ಎನ್ನುವ ಸಂದೇಹ ರಂಗಕರ್ಮಿಗಳನ್ನು ಕಾಡಿದ್ದಂತೂ ಸುಳ್ಳಲ್ಲ. ಒಂದೂವರೆ  ವರ್ಷಗಳ ಕಾಲ ಗಾಂಧಿ..... ರಂಗವೇದಿಕೆಯ ಮೇಲೆ ಬರಲೇ ಇಲ್ಲ. ರಂಗತಂಡದವರು ತಮ್ಮ ಪ್ರಯತ್ನವನ್ನೂ ಬಿಡಲಿಲ್ಲ.



ಕೊನೆಗೂ ಬಿಜೆಪಿ ಸರಕಾರ ತೊಲಗಿತು. ಅನುಮತಿ ಸಿಗದಿದ್ದರೂ ನಾಟಕ ಮಾಡಲು ರಂಗಮಂಟಪ ತಂಡ ಮಾನಸಿಕವಾಗಿ ಸಿದ್ದವಾಗಿತ್ತು. ಕೊನೆಗೂ ಆಗ್ರಹಕ್ಕೆ ಮಣಿದ ನಾಗವೇಣಿಯವರು ಪ್ರತಿ ಪ್ರದರ್ಶನಕ್ಕೂ ಲಿಖಿತ ಅನುಮತಿ ಪಡೆಯಲೇಬೇಕೆಂಬ ವಿಕ್ಷಿಪ್ತವಾದ ಪೂರ್ವ ಷರತ್ತಿನ ಮೇಲೆ ನಾಟಕ ಪ್ರದರ್ಶನಕ್ಕೆ ಅನುಮತಿ ಕೊಟ್ಟರು. ತದನಂತರ ಮತ್ತೆ ಹದಿಮೂರು ಪ್ರದರ್ಶನಗಳಾದವು. ಈಗ  2014, ಅಕ್ಟೋಬರ್ 2 ಗಾಂಧಿ ಜಯಂತಿಯಂದು ಕರ್ನಾಟಕ ಸರಕಾರದ ವಾರ್ತಾ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಗಾಂಧಿ ಸದ್ಬಾವನಾ ಪ್ರಶಸ್ತಿ ಪ್ರಧಾನ ಸಮಾರಂಭದ ನೆಪದಲ್ಲಿ ಪ್ರದರ್ಶನಗೊಂಡ ಗಾಂಧಿ ಬಂದ ನಾಟಕ ನೋಡುಗರನ್ನು ಬೆರಗಾಗಿಸಿತು. ಡಾ.ಹೆಚ್. ನಾಗವೇಣಿಯವರು ಬರೆದ ಗಾಂಧಿ ಬಂದ ಕಾದಂಬರಿಯನ್ನು ಚಂಪಾ ಶೆಟ್ಟಿಯವರು ಒಂದು ವರ್ಷಗಳ ಕಾಲ ಶ್ರಮವಹಿಸಿ ರಂಗರೂಪಗೊಳಿಸಿ ರಂಗಮಂಟಪ ಕಲಾವಿದರಿಗೆ ನಿರ್ದೇಶಿಸಿದ್ದಾರೆ.

ಇಡೀ ನಾಟಕದಲ್ಲಿ ಗಾಂಧಿ ಇಲ್ಲವೇ ಇಲ್ಲ, ಗಾಂಧೀಜಿಯನ್ನು ಎಲ್ಲಿಯೂ ಭೌತಿಕವಾಗಿ ತೋರಿಸಿಲ್ಲ. ಗಾಂಧಿ ಇಲ್ಲದ ಗಾಂಧಿಯತ್ವದ  ಕುರಿತಾದ ನಾಟಕವು ಗಾಂಧಿಯವರ ವಿಚಾರಧಾರೆಗೆ ಗ್ರಾಮೀಣ ಭಾಗದ ಜನಸಾಮಾನ್ಯರು ಸ್ಪಂದಿಸಿದ ರೀತಿಯನ್ನು ಹೇಳುತ್ತದೆ. ಜನರ ಅರಿವಿಲ್ಲದೇ ಗಾಂಧಿ ಜನತೆಯನ್ನು ಆವರಿಸಿಕೊಂಡ ಪರಿಯನ್ನು ವಿವರಿಸುತ್ತದೆ. ಉಳಿಗಮಾನ್ಯ ಶೋಷಕ ವ್ಯವಸ್ಥೆಯಲ್ಲಿ ನೊಂದವರ ಬಿಡುಗಡೆಯ ಆಶಾಕಿರಣವಾಗಿ ಗಾಂಧಿ ಅನಾವರಣಗೊಂಡಿದ್ದಾರೆ. ಗಾಂಧಿ ತಮ್ಮ ಪ್ರಾಂತ್ಯಕ್ಕೆ ಬರುತ್ತಾರೆ ಎನ್ನುವ ಸುದ್ದಿ ಜನರಲ್ಲಿ ಸಂಚಲನ ಹುಟ್ಟಿಸುತ್ತದೆ. ಗಾಂಧಿ ವಿಚಾರಧಾರೆಗಳಾದ ವಿಧವಾ ವಿವಾಹ, ಅಸ್ಪೃಷ್ಯತಾ ನಿವಾರಣೆಗಳು ನಾಟಕದ ಕೇಂದ್ರ ಬಿಂದುವಾಗಿದ್ದು ಪರೀದಿಯಲ್ಲಿ  ಪುರೋಹಿತಶಾಹಿಗಳ ಶಾಸ್ತ್ರ ಸಂಪ್ರದಾಯ ಕಂದಾಚಾರಗಳು ಅದು ಹೇಗೆ ಮನುಷ್ಯವಿರೋಧಿಯಾಗಿವೆ ಎನ್ನುವುದು ತುಂಬಾ ಸೊಗಸಾಗಿ ನಿರೂಪಿತವಾಗಿದೆ.

ನಾಟಕದ ಕಥಾನಕ ಸರಳವಾಗಿದ್ದರೂ ಅದು ಹೊರಹೊಮ್ಮಿಸುವ ಒಳಾರ್ಥಗಳು ಸಂಕೀರ್ಣವಾಗಿವೆ. ಸುರಗಿಮಠದ ಕರ್ಮಠ ಬ್ರಾಹ್ಮಣ ಹೆಬ್ಬಾರ ಭಟ್ಟರು ತಮ್ಮ ವಿಧವೆಯಾದ ಮಗಳು ದ್ರೌಪತಿಯ ತಲೆಬೋಳಿಸಿ ಮನೆಯಲ್ಲಿ ಕೂಡಿಸುತ್ತಾರೆ. ಅವರ ಮನೆಯಂಗಳದಲ್ಲೆ ಕೆಲಸಮಾಡಿ ಬೆಳೆದ ಬ್ಯಾರಿ ಮುಸ್ಲಿಂ ಯುವಕ ಅದ್ರಾಮ ಮತ್ತು ದ್ರೌಪತಿ ಪರಸ್ಪರ ಪ್ರೀತಿಸತೊಡಗುತ್ತಾರೆ. ಇದು ಗೊತ್ತಾದ ಹೆಬ್ಬಾರರು ತಲ್ಲಣಗೊಂಡು ಗಾಂಧಿವಾದಿ ಮಾರಪ್ಪನಿಗೆ ಅದ್ರಾಮನಿಗೆ ಬುದ್ದಿ ಹೇಳಲು ಕೇಳಿಕೊಳ್ಳುತ್ತಾರೆ. ಗಾಂಧಿ ವಿಚಾರಧಾರೆಯಿಂದ ಪ್ರಭಾವಿತನಾದ ಮಾರಪ್ಪ ವಿಧವೆಯನ್ನು ಪ್ರೀತಿಸಿ ಮದುವೆಯಾಗಬಯಸುವ ಅದ್ರಾಮನಿಗೆ ಸಪೋರ್ಟ ಮಾಡಿ ದ್ರೌಪತಿಯನ್ನು ಕರೆತಂದ ಅದ್ರಾಮನಿಗೆ ಮದುವೆ ಮಾಡಿಸಿ ತನ್ನ ಮನೆಯಲ್ಲೇ ಆಶ್ರಯಕೊಡುತ್ತಾನೆ. ಆಘಾತಗೊಂಡ ಹೆಬ್ಬಾರರು ಮಗಳು ಸತ್ತಳೆಂದು ಘೋಷಿಸುತ್ತಾರೆ. ಗಾಂಧೀಜಿಯವರಿಗೆ ನಿಧಿ ಸಂಗ್ರಹಿಸಿ ಕೊಟ್ಟಿದ್ದನ್ನು ಇಟ್ಟುಕೊಂಡವಳಿಗೆ ಕೊಟ್ಟಿದ್ದ ಹೆಬ್ಬಾರರ ಬಗ್ಗೆ ಊರಿನವರಿಗೆಲ್ಲಾ ಬೇಸರವಿರುತ್ತದೆ. ಪೊಲೀಸರಿಗೂ ಗಾಂಧಿವಾದಿಗಳಿಗೂ ಸಂಘರ್ಷವಾದಾಗ ಅದ್ರಾಮ ಹಲ್ಲೆಗೊಳಗಾಗಿ ಸಾಯುತ್ತಾನೆ. ತುಂಬು ಬಸುರಿ ದ್ರೌಪತಿಗೆ ಊರವರೆಲ್ಲಾ ಸಹಾಯ ಮಾಡುತ್ತಾರೆ. ಏಳು ವರ್ಷಗಳ ನಂತರ ಗಾಂಧಿ ಬರುವ ಸುದ್ದಿ ತಿಳಿದು ಊರವರೆಲ್ಲಾ ಪೇಟೆಗೆ ಹೊರಡುತ್ತಾರೆ. ಗಾಂಧೀಜಿರವರು ವಿಧವೆಯಾದ ದ್ರೌಪತಿಗೆ ಹಸಿರು ಬಳೆಗಳನ್ನು ಕೊಟ್ಟು ಹರಸಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡುತ್ತದೆ. ಗಾಂಧಿವಿರೋಧಿಯಾದ ಮಾರಪ್ಪನ ತಾಯಿ ಸೂರಕ್ಕಳನ್ನೂ ಸಹ ಪ್ರಸಂಗ ಪ್ರಭಾವಿಸಿ ಬದಲಾಯಿಸಿ ಬಿಡುತ್ತದೆ. ಗಾಂದಿ ಎಂಬ ಬೆಳಕು ಜಗವನ್ನು ಜನರನ್ನು ಬೆಳಗಿದ ಪರಿಯನ್ನು ತೋರಿಸುತ್ತಲೆ ನಾಟಕ ಅಂತ್ಯವಾಗುತ್ತದೆ. ಪ್ರೇಕ್ಷಕರ ಮನೋರಂಗಭೂಮಿಯಲ್ಲಿ ವಿಚಾರ ಮಂಥನ ಶುರುವಾಗುತ್ತದೆ.

ಇದಿಷ್ಟೇ ಕಥೆಯಾಗಿದ್ದರೆ ನಾಟಕ ಅಂತಹ ಪರಿಣಾಮಕಾರಿಯಾಗುತ್ತಿರಲಿಲ್ಲ. ಆದರೆ ನಾಟಕದಾದ್ಯಂತ ಕಟ್ಟಿಕೊಟ್ಟ ಪೂರಕ ಸನ್ನಿವೇಶಗಳು ಇಡೀ ಕಥಾನಕವನ್ನು ಪ್ರೇಕ್ಷಕರ ಮನದಾಳಕ್ಕೆ ಇಳಿಯುವಂತೆ ಮಾಡಿದೆ. ನಾಟಕ ಗಾಂಧಿವಾದದ ಪ್ರಚಾರ ಮಾಡುವುದಿಲ್ಲ, ಎಲ್ಲಿಯೂ ಗಾಂಧಿಯನ್ನು ವೈಭವೀಕರಿಸುವುದಿಲ್ಲ, ಅಸಲಿಗೆ ಗಾಂಧಿಯನ್ನು ತೋರಿಸುವುದೂ ಇಲ್ಲ. ಆದರೆ ಇದ್ಯಾವುದನ್ನೂ ಮಾಡದೇ ಗಾಂಧೀಜಿ ಜನಸಾಮಾನ್ಯರ ಮೇಲೆ ಮಾಡಿದ ಪ್ರಭಾವ ಮತ್ತು ಪರಿಣಾಮವನ್ನು ದೃಶ್ಯಸೃಷ್ಟಿಯ ಮೂಲಕ ಹೇಳುತ್ತಲೇ ನಾಟಕವನ್ನು ನೋಡುವ ಪ್ರೇಕ್ಷಕರನ್ನೂ ಸಹ ಗಾಂಧಿ ಪ್ರಭಾವಲಯದಲ್ಲಿ ತರುವ ಪ್ರಯತ್ನವನ್ನು ಗಾಂಧಿ ಬಂದ ನಾಟಕವು ಮಾಡುತ್ತದೆ.

ಗಾಂಧಿ ಎಂದ ಕೂಡಲೇ ನಮಗೆಲ್ಲಾ ಮುಖ್ಯವಾಗುವುದು ಅವರು ಬ್ರಿಟೀಷರ ವಿರುದ್ದ ಅಹಿಂಸಾತ್ಮಕ ಸತ್ಯಾಗ್ರಹಗಳ ಮೂಲಕ ಹೋರಾಟ ರೂಪಿಸಿದ ಪರಿ. ಆದರೆ ನಾಟಕದಲ್ಲೆಲ್ಲೂ ಇದು ಮುಖ್ಯವಾಗುವುದೂ ಇಲ್ಲ, ಅದರ ಪ್ರಸ್ತಾಪವೂ ಇಲ್ಲ. ಹಳ್ಳಿಗಾಡಿನ ದುಡಿಯುವ ವರ್ಗದ ಜನಸಾಮಾನ್ಯರಿಗೆ ಬ್ರಿಟೀಷರಿಗಿಂತ ಬಲು ದೊಡ್ಡ ಶತ್ರುವಾಗಿ ಕಾಡಿದ್ದು ಪುರೋಹಿತಶಾಹಿ ಹಾಗೂ ಉಳಿಗಮಾನ್ಯ ವ್ಯವಸ್ಥೆಇಂತಹ ವ್ಯವಸ್ಥೆಯ ಪ್ರತೀಕವಾಗಿ ಹೆಬ್ಬಾರರ ಪಾತ್ರ ಮೂಡಿಬಂದಿದೆ. ಶೋಷಕ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ದಲಿತರು ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ರಹಿತರಾಗಿ ಗುಲಾಮಗಿರಿಯಲ್ಲಿ ಹೇಗೆ ಬದುಕುವ ಅನಿವಾರ್ಯತೆಗೊಳಗಾಗಿದ್ದರು ಹಾಗೂ ಶೋಷಿತರಿಗೆ ಗಾಂಧಿ ಹೇಗೆ ಪ್ರೇರಕ ಶಕ್ತಿಯಾದರು ಎಂಬುದನ್ನು ಗಾಂಧಿ ಬಂದ ನಾಟಕ ತುಂಬಾ ಸೂಕ್ಷ್ಮವಾಗಿ ಹಾಗೂ ಸೊಗಸಾಗಿ  ತೋರಿಸಿಕೊಟ್ಟಿದೆ.


ನಾಟಕಕ್ಕೆ ಹಲವಾರು ಆಯಾಮಗಳಿವೆ. ಸಂಪ್ರದಾಯವಾದಿಗಳ ಜೀವವಿರೋಧಿತನವನ್ನು ನಾಟಕ ಬಯಲುಗೊಳಿಸುತ್ತದೆಮೇಲ್ವರ್ಗದ ಪುರುಷ ಪ್ರಾಧಾನ್ಯತೆ ಹೆಬ್ಬಾರರ ಮೂಲಕ ಅನಾವರಣಗೊಳ್ಳುತ್ತದೆ. ಬೇರೆ ಹೆಣ್ಣುಗಳನ್ನು ತನ್ನ ಭೋಗದ ವಸ್ತುವನ್ನಾಗಿಸಿಕೊಂಡ ಹೆಬ್ಬಾರ ತನ್ನ ಮನೆಯ ಮಹಿಳೆಯರು ಮಾತ್ರ ಪವಿತ್ರವಾಗಿರಬೇಕು ಎನ್ನುವ ಮನುವಾದಿ ನಿಲುವಿಗೆ ಪ್ರತೀಕವಾಗಿದ್ದಾನೆ. ಮದುವೆಯಾಗಿ ಎರಡೇ ತಿಂಗಳಿಗೆ ವಿಧವೆಯಾದ ಮಗಳ ಮದುಮದುವೆಗೆ ವಿರೋಧಿಸುವ ಕರ್ಮಠ ಹೆಬ್ಬಾರರಿಗೆ ಗಾಂಧಿವಾದಿ ಮಾರಪ್ಪ ನಿಮ್ಮಲ್ಲಿ ಕಾಮದಹನಕ್ಕೆ ಯಾವುದಾದರೂ ಮಂತ್ರ ಇದೆಯಾ ಭಟ್ಟರೆ ಎಂದು ಮಾರ್ಮಿಕವಾಗಿ ಕೇಳಿದಾಗ ಬ್ರಾಹ್ಮಣ ನಿರುತ್ತರನಾಗುತ್ತಾನೆ. ವೈದಿಕ ಸಂಪ್ರದಾಯ ಮಹಿಳೆಯರನ್ನು ಅದರಲ್ಲೂ ವಿಧವೆಯರನ್ನು ಅದೆಷ್ಟು ಕ್ರೂರವಾಗಿ ನಡೆಸಿಕೊಂಡು ಬಂದಿತ್ತು ಎನ್ನುವುದನ್ನು ಗಾಂಧಿ ಬಂದ ನಾಟಕ ಬಯಲುಗೊಳಿಸುತ್ತದೆ.

ನಾಟಕದಲ್ಲಿ ವಿಧವಾ ವಿವಾಹಕ್ಕಿಂತಲೂ ವಿಧವೆಯಾದ ಬ್ರಾಹ್ಮಣ ಯುವತಿ ಬ್ಯಾರಿ ಜೊತೆಗೆ ಓಡಿಹೋಗಿ ಮದುವೆಯಾಗಿದ್ದು ಹಾಗೂ ಕೋಮುವಾದಿಗಳ ಕಣ್ಣಲ್ಲಿ ಅನೈತಿಕ ಎನ್ನಬಹುದಾದ ಘಟನೆಗೆ ಗಾಂಧಿವಾದಿಗಳು ಪ್ರೋತ್ಸಾಹ ನೀಡಿ ಆಶ್ರಯ ಕೊಟ್ಟಿದ್ದು ಸಂಪ್ರದಾಯವಾದಿ ಮತೀಯರನ್ನು ಕಂಗೆಡಿಸಿತು. ಸಂಪ್ರದಾಯವಾದಿಗಳ ಶೋಷಣೆಯನ್ನು ಪ್ರತಿಭಟಿಸಲು ಜನರಿಗೆ ಒಂದು ಪರ್ಯಾಯ ಬೇಕಾಗಿತ್ತು. ಅಂತಹ ಒಂದು ಪರ್ಯಾಯವನ್ನು ಗಾಂಧೀಜಿ ಒದಗಿಸಿದ್ದರು. ಹರಿಜನೋದ್ದಾರ, ಅಸ್ಪೃಷ್ಯತಾ ನಿಷೇಧ, ಮಧ್ಯಪಾನ ನಿಷೇಧ... ಮುಂತಾದ ಗಾಂಧಿ ತತ್ವಗಳು ಗ್ರಾಮೀಣ ಜನರಲ್ಲಿ ಸಂಚಲನವನ್ನು ಮೂಡಿಸಿದ್ದವು. ಒಮ್ಮೆ ಗಾಂಧಿ ಇಲ್ಲಿಗೆ ಬಂದು ಸುಮ್ಮನೆ ಹೆಬ್ಬಾರನನ್ನು ನೋಡಿದರೆ ಸಾಕು ಆತ ಸುಟ್ಟು ಭಸ್ಮವಾಗುತ್ತಾನೆ ಎನ್ನುವಷ್ಟರ ಮಟ್ಟಿಗೆ ಗಾಂಧಿ ದುಡಿಯುವ ವರ್ಗವನ್ನು ಪ್ರಭಾವಿಸಿದ್ದರು. ಗಾಂಧೀಜಿಯವರ ದ್ವಂದ್ವಗಳು, ತಾತ್ವಿಕ ಭಿನ್ನಾಭಿಪ್ರಾಯಗಳು, ರಾಜಕೀಯ ನಿಲುವುಗಳು.... ಏನೇ ಇರಲಿ, ಆದರೆ ಒಂದು ಕಾಲಘಟ್ಟದಲ್ಲಿ ದೇಶಾದ್ಯಂತ ಬಹುಜನರನ್ನು ಗಾಂಧಿ ಪ್ರಭಾವಿಸಿದ್ದಂತೂ ನಿರ್ವಿವಾದ. ಜನರ ಮೇಲೆ ಗಾಂಧಿ ಮಾಡಿದ ಪ್ರೇರಣೆಯ ಸಂಕೇತವಾಗಿ ಗಾಂಧಿ ಬಂದ ನಾಟಕ ನಿರೂಪಿತಗೊಂಡಿದೆ. ಸಂಪ್ರದಾಯವಾದಿಗಳ ಶೋಷಣೆಯ ವಿರುದ್ದ ಶೋಷಿತ ಸಮುದಾಯವನ್ನು ಜಾಗ್ರತಗೊಳಿಸುವಲ್ಲಿ ನಾಟಕ ಯಶಸ್ವಿಯಾಗಿದೆ.

ಕುವೆಂಪುರವರು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹೇಳಿದ ಹಾಗೆಯೇ ಗಾಂಧಿ ಬಂದ ನಾಟಕದಲ್ಲಿ ಯಾರೂ ಮುಖ್ಯರಲ್ಲ ಹಾಗೂ ಯಾರೂ ಅಮುಖ್ಯರೂ ಅಲ್ಲ. ಯಾವುದೇ ಒಂದೆರಡು ಪಾತ್ರದ ಸುತ್ತಲೂ ನಾಟಕದ ಕಥೆ ಸುತ್ತುವುದಿಲ್ಲ. ನಾಟಕದ ಪ್ರತಿಯೊಂದು ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಇಲ್ಲಿ ಪಾತ್ರಗಳಿಗಿಂತ ಕಥೆಯ ಆಶಯವೇ ಮುಖ್ಯವಾಗಿದೆಒಂದು ಕಡೆ ಕರ್ಮಠ ವೈದಿಕರು, ಇನ್ನೊಂದು ಕಡೆ ದುಡಿಯುವ ವರ್ಗದ ಶೋಷಕರು ಹಾಗೂ ಇವರಿಬ್ಬರ ನಡುವೆ ಗಾಂಧಿವಾದಿಗಳು...  ಹೀಗೆ ಮೂರು ಆಯಾಮಗಳಲ್ಲಿ ನಾಟಕ ಪ್ರವಹಿಸುತ್ತದೆ. ಏನಾದರೂ ಬದಲಾವಣೆಗಳಾಗಬಹುದೇನೋ ಎಂಬ ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಆದರೆ... ಕೊನೆಗೂ ಪುರೋಹಿತಶಾಹಿಯ ಮನಪರಿವರ್ತನೆಯಾಗುವುದಿಲ್ಲ, ದುಡಿಯುವ ವರ್ಗಗಳ ಬದುಕು ಬದಲಾಗುವುದಿಲ್ಲ. ಗಾಂಧಿ ಎಂಬ ಆಶಾಕಿರಣ ಜನರಲ್ಲಿ ಹುಟ್ಟಿಸಿದ ಭರವಸೆಯೊಂದೇ ನಾಟಕದ ಪ್ರಮುಖ ಉದ್ದೇಶವಾಗಿದೆ. ಹಾಗೂ ಉದ್ದೇಶದ ಸಾಧನೆಯಲ್ಲಿ ಗಾಂಧಿ ಬಂದ ನಾಟಕ ಸಫಲವಾಗಿದೆ.

ಬಹುತೇಕ ಕಾದಂಬರಿ ಆಧಾರಿತ ನಾಟಕಗಳಲ್ಲಿ ಕಥೆಯ ಬೆಳವಣಿಗೆಗೆ ನಿರೂಪಕರನ್ನು ಸೃಷ್ಟಿಸುವುದು ಪರಂಪರೆಯಾಗಿ ಬೆಳೆದುಬಂದಿದೆ. ನಿರೂಪಕರ ವಿವರಗಳಿಗೆ ದೃಶ್ಯಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಆದರೆ 365 ಪುಟಗಳ  ಗಾಂಧಿ ಬಂದ ಕಾದಂಬರಿಯ ರಂಗರೂಪಗೊಂಡಾಗ ನಿರೂಪಕರ ಹಂಗಿಲ್ಲದೇ ದೃಶ್ಯಗಳೇ ಇಡೀ ನಾಟಕವನ್ನು ಕಟ್ಟಿಕೊಟ್ಟಿದ್ದು ಚಂಪಾಶೆಟ್ಟಿಯವರ ಪ್ರತಿಭೆ ಮತ್ತು ಜಾಣ್ಮೆಗೆ ಸಾಕ್ಷಿಯಾಗಿದೆ. ಮೊದಲ ಹಾಗೂ ಕೊನೆಯ ದೃಶ್ಯಗಳಲ್ಲಿ ಅಂತಪ್ಪ ಪಾತ್ರ ಒಂದಿಷ್ಟು ವಿವರಗಳನ್ನು ಕೊಟ್ಟಿದ್ದನ್ನು ಹೊರತು ಪಡಿಸಿ ಎಲ್ಲಿಯೂ ಕಥಾ ವಿವರಣೆಗಾಗಿ ನಿರೂಪಣೆ ಬಳಸಿಲ್ಲ ಎನ್ನುವುದೇ ಸೋಜಿಗ. ದೊಡ್ಡ ಕಾದಂಬರಿಯನ್ನು ನಿರೂಪಕರ ಹಂಗಿಲ್ಲದೇ ನಾಟಕವಾಗಿ ಕಟ್ಟಿಕೊಡುವುದು ಸವಾಲಿನ ಕೆಲಸ. ನಾಟಕದಾದ್ಯಂತ ಇದು ಕಾದಂಬರಿಯ ರಂಗರೂಪ ಎನ್ನುವ ಅನುಮಾನ ಬಾರದಂತೆ ನಾಟಕ ಮೂಡಿಬಂದಿದ್ದು, ವರ್ಷಗಳ ಕಾಲ ರಂಗಪಠ್ಯದ ಮೇಲೆ ಚಂಪಾ ಶೆಟ್ಟಿಯವರು ಕೆಲಸ ಮಾಡಿದ್ದು ಸಾರ್ಥಕವೆನಿಸುವಂತಿದೆ.ಕಾದಂಬರಿಯೊಂದನ್ನು ಹೇಗೆ ನಾಟಕವಾಗಿಸಬೇಕು ಹಾಗೂ ನಿರೂಪಕರ ಹಂಗಿಲ್ಲದೇ ಸನ್ನಿವೇಶಗಳನ್ನು ಹೇಗೆ ಕಟ್ಟಿಕೊಡಬೇಕು ಎನ್ನುವುದಕ್ಕೆ ಮಾದರಿಯಾಗಿ ಗಾಂಧಿ ಬಂದ ನಾಟಕ ಪ್ರಸ್ತುತಗೊಂಡಿದೆ. ಕಾದಂಬರಿ ಹುಟ್ಟಿಹಾಕಿದ ಬಹುತೇಕ ವಿವಾದಿತ ಅಂಶಗಳನ್ನು ನಾಟಕದಲ್ಲಿ ಕೈಬಿಡಲಾಗಿದೆ. ವಿವಾದಗಳನ್ನು ಹುಟ್ಟಿಹಾಕುವುದು ನಾಟಕದ ಉದ್ದೇಶವಾಗಿರದೇ ಗಾಂಧಿ ಹೆಸರು ಜನರಲ್ಲಿ ಹುಟ್ಟುಹಾಕಿದ  ಪ್ರಭಾವವನ್ನು ತೋರಿಸುವುದು ಚಂಪಾಶೆಟ್ಟಿಯವರ ನಿಲುವಾಗಿದೆ.

ನಾಟಕ ಕೆಲವು ತಾತ್ವಿಕ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ. ತಾರ್ಕಿಕವಾಗಿ ಕೆಲವೊಂದನ್ನು ಒಪ್ಪಲು ಕಷ್ಟಸಾಧ್ಯವೆನಿಸಿದರೂ ಹೀಗಿದ್ದರೆ ಚೆಂದ ಎನ್ನಿಸುವಂತಿವೆ. ಉದಾಹರಣೆಗೆ ಕರ್ಮಠ ಸಂಪ್ರದಾಯದ ಪುರೋಹಿತಶಾಹಿಯೊಬ್ಬ ತನ್ನ ಮಗಳಿಗೆ ದ್ರೌಪತಿ ಎಂದು ಹೆಸರಿಟ್ಟಿರುವುದೇ ಯಾಕೋ ಅಸಮಂಜಸವೆನ್ನಿಸುತ್ತದೆ. ಯಾಕೆಂದರೆ ಐವರನ್ನು ಮದುವೆಯಾಗಿ ಆರನೇಯವನನ್ನೂ ಗುಟ್ಟಾಗಿ ಇಷ್ಟಪಡುವ ಮಹಾಭಾರತದ ಪಾಂಚಾಲಿಯ ಹೆಸರು ಸಂಪ್ರದಾಯಿಗಳಿಗೆ ಅಪತ್ಯವೆನಿಸದೇ ಇರದು. ವೈದಿಕನೊಬ್ಬ ದ್ರೌಪತಿಯ ಹೆಸರನ್ನು ತನ್ನ ಮಗಳಿಗೆ ಇಡುವುದು ಅಪರೂಪದಲ್ಲಿ ಅಪರೂಪವಾಗಿದೆ. ಕರ್ಮಠ ಬ್ರಾಹ್ಮಣನೊಬ್ಬನ ಮನೆಯಲ್ಲಿ  ಮನೆಯ ಮಗನಂತೆ ಒಬ್ಬ ಬ್ಯಾರಿ ಮುಸ್ಲಿಂ ಸಲುಗೆಯಿಂದ ಇದ್ದ ಎನ್ನುವುದೂ ಸಹ ಪ್ರಶ್ನಾರ್ಹವೆನಿಸುತ್ತದೆ. ಅಬ್ರಾಹ್ಮಣರನ್ನೇ ಹತ್ತಿರ ಬಿಟ್ಟುಕೊಳ್ಳದ ಮಹಾ ಮಡಿವಂತ ವೈದಿಕರು ತಮ್ಮ ಧರ್ಮಕ್ಕೆ ವ್ಯತಿರಿಕ್ತವಾದ ಮುಸ್ಲಿಂ ವ್ಯಕ್ತಿಯನ್ನು ಒಪ್ಪಿಕೊಳ್ಳುತ್ತಾರೆನ್ನುವುದೇ ಯಾಕೋ ಅರಗಿಸಿಕೊಳ್ಳಲಾಗಿದ ಸತ್ಯವಾಗಿದೆಗಾಂಧೀಜಿ ವಿಧವಾ ವಿವಾಹಕ್ಕೆ ಸಮ್ಮತಿಸಿದ್ದು ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ. ವಿಧವಾ ವಿವಾಹದ ಪ್ರಸ್ತಾಪ ಗಾಂಧಿಯವರ ಮುಂದೆ ಬಂದಾಗ ಗಾಂಧೀಜಿಯವರು ಅದಕ್ಕೆ ಸಮ್ಮತಿಸದೇ ಅಜನ್ಮ ಬ್ರಹ್ಮಚರ್ಯವನ್ನು ಪಾಲಿಸಲಿ ಎನ್ನುವ ಜೀವವಿರೋಧಿ ಧೋರಣೆಯನ್ನು ತಾಳಿದ್ದನ್ನು ಕಾರಂತರು ತಮ್ಮ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ. ವಸ್ತುಸ್ಥಿತಿ ಹೀಗಿದ್ದಾಗ ವಿಧವಾ ವಿವಾಹಕ್ಕೆ ಗಾಂಧೀಜಿ ತೋರದ ಒಲವನ್ನು ಗಾಂಧೀಜಿಯ ಅನುಯಾಯಿಗಳು ತೋರಿದ್ದು ಸ್ವಾಗತಾರ್ಹವೇ ಆದರೂ ಕೊನೆಗೆ ವಿಧವೆಗೆ ಗಾಂಧೀಜಿ ಹಸಿರು ಬಳೆ ಹೂವುಗಳನ್ನು ಕೊಟ್ಟು ಆಶೀರ್ವದಿಸಿದರು ಹಾಗೂ ಇದು ಗೊತ್ತಾಗಿ ಗಾಂಧಿ ವಿರೋಧಿ ಸೂರತ್ತೆ ಗಾಂಧಿ ಅನುಯಾಯಿಯಾದಳು ಎನ್ನುವುದು ಆದರ್ಶಾತ್ಮವಾಗಿ ಸೊಗಸೆನ್ನಿಸಿದರೂ ಅದ್ಯಾಕೋ ತರ್ಕಕ್ಕೆ ಹೊಂದುತ್ತಿಲ್ಲ. ಪ್ರೇಮಪ್ರಕರಣಕ್ಕೆ ಗಾಂಧಿವಾದವನ್ನು ತಳಕು ಹಾಕುವ ಪ್ರಯತ್ನ ಗಾಂಧಿ ಬಂದ ದಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡಿದಂತಿದೆ. ನಾಟಕದಲ್ಲಿ ಗಾಂಧಿವಾದಿಯಲ್ಲದ ಪ್ರೇಮಿ ಅದ್ರಾಮ ಹುತಾತ್ಮನಾಗುತ್ತಾನೆ, ಎರಡನೇ ಬಾರಿಗೆ ಗಂಡನನ್ನು ಕಳೆದುಕೊಂಡ ದ್ರೌಪತಿ ದುರಂತ ನಾಯಕಿಯಾಗುತ್ತಾಳೆ.

ನಾಟಕ ಪರೋಕ್ಷವಾಗಿ ಕಾಮ ಮತ್ತು ಪ್ರೇಮದ ಕುರಿತು ಸಂವಾದಿಸುತ್ತದೆ. ವಿಧವೆಯಾದವಳ ತಲೆ ಬೋಳಿಸಿದರೂ ಆಕೆಯ ಆಸೆ ಆಕಾಂಕ್ಷೆಗಳನ್ನು ತಡೆಯಲು ಸಾಧ್ಯವಿಲ್ಲ ಎನ್ನುವ ವಾಸ್ತವ ಸತ್ಯವನ್ನು ಹೇಳಲಾಗಿದೆ. ಕಾಮ ಪರಿಹಾರಕ್ಕೆ ಮಂತ್ರ ಏನಾದರೂ ಇದೆಯಾ? ಎಂದು ನಾಟಕ ಪ್ರಶ್ನಿಸುತ್ತದೆ. ಆದರೆ... ಗಾಂಧಿವಾದದಲ್ಲಿ ಕಾಮ ಪರಿಹಾರಕ್ಕೆ ಏನಾದರೂ ತಂತ್ರ ಮಂತ್ರಗಳಿವೆಯಾ? ಯಾಕೆಂದರೆ ಸಂಪ್ರದಾಯದ ಸಿಕ್ಕಿನಿಂದ ಮುಕ್ತಿ ಪಡೆದು ಮರುಮದುವೆಯಾದ ದ್ರೌಪತಿ ವರ್ಷಪ್ಪೊತ್ತಿನಲ್ಲಿ ಮತ್ತೆ ವಿಧವೆಯಾಗುತ್ತಾಳೆ. ಹಾಗೂ ಬದುಕು ಪೂರಾ ಒಂಟಿಯಾಗಿಯೇ ಬದುಕಲು ನಿರ್ಧರಿಸುತ್ತಾಳೆ. ಎಲ್ಲರೂ ಆಸ್ತಿ ಹಣದ ಸಹಾಯ ಮಾಡುತ್ತೇನೆನ್ನುತ್ತಾರೆಯೇ ಹೊರತು ಯಾರೂ ಆಕೆಗೆ ಇನ್ನೊಂದು ಬಾಳು ಕೊಡಲು ಬಯಸುವುದಿಲ್ಲ. ವಿಧವಾ ವಿವಾಹ ವಿಚಾರದಲ್ಲಿ ಗಾಂಧಿವಾದವನ್ನು ಮುರಿದು ಮತ್ತೆ ಗಾಂಧಿವಾದವನ್ನೇ ಅನುಸರಿಸಿದ ರೀತಿ ವಿಚಿತ್ರವಾಗಿದೆ. ಸ್ವತಃ ಗಾಂಧಿ ಎಂದೂ ವಿಧವಾ ವಿವಾಹವನ್ನು ಸಮರ್ಥಿಸಿಕೊಂಡವರಲ್ಲ. ಆದರೆ ನಾಟಕದ ಗಾಂಧಿವಾದಿಗಳು ವಿಧವಾ ವಿವಾಹವನ್ನು ಮಾಡಿಸಿ ಆದರ್ಶವಾದಿಗಳಾಗುತ್ತಾರೆ. ವಿಧವೆಯಾದವಳು ಜೀವನ ಪರ್ಯಂತ ಬ್ರಹ್ಮಚರ್ಯವನ್ನು ಆಚರಿಸಬೇಕು ಎನ್ನುವ ಜೀವವಿರೋಧಿ ನಿಲುವನ್ನು ಗಾಂಧೀಜಿ ತೆಗೆದುಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಇದಕ್ಕೆ ಪೂರಕವಾಗಿ ಮತ್ತೊಮ್ಮೆ ವಿಧವೆಯಾದ ದ್ರೌಪತಿಗೆ ಖಡ್ಡಾಯ ಬ್ರಹ್ಮಚರ್ಯವನ್ನು ನಾಟಕ ಹೇರಿದಂತಿದೆ. ಹೀಗೆ ಆದಾಗ ಕಾಮಪರಿಹಾರಕ್ಕೆ ಬ್ರಹ್ಮಚರ್ಯವೇ ಬದುಕು ಎನ್ನುವ ಗಾಂಧಿ ಮಂತ್ರ ಅದೆಷ್ಟು ಜೀವಪರ ಎನ್ನುವ ಸಂದೇಹ ಕಾಡದಿರದು. ಕಾಮ ಪ್ರೇಮಗಳು ಎಲ್ಲ ವಾದ ಎಲ್ಲೆಗಳನ್ನು ಮೀರಿದಂತಹವು. ಅವುಗಳಿಗೆ ಪರಿಹಾರ ಪುರೋಹಿತಶಾಹಿಗಳ ಮಂತ್ರಗಳಲ್ಲೂ ಇಲ್ಲಾ, ಗಾಂಧೀಜಿಯ ಬ್ರಹ್ಮಚರ್ಯದಲ್ಲೂ ಇಲ್ಲಾ ಎನ್ನುವುದು ವಾಸ್ತವ ಸತ್ಯವಾಗಿದೆ.

ಮಗ ಮದುವೆಯಾಗದ್ದಕ್ಕೆ ಗಾಂಧೀಜಿ ಕಾರಣ ಎಂದು ತಿಳಿದ ಗಾಂಧಿವಾದಿ ಮಾರಪ್ಪನ ತಾಯಿ ಸೂರತ್ತೆ ಗಾಂಧಿಯನ್ನು ವ್ಯಂಗ್ಯೋಪಾದಿಗಳಲ್ಲಿ ಬೈಯುವುದು ಅದ್ಯಾಕೋ ಅತಿಯಾಯಿತು ಎಂದೆನ್ನಿಸದೇ ಇರದು. ಮೂಲ ಕಾದಂಬರಿಯಲ್ಲಿ ಇಲ್ಲದ ಸನ್ನಿವೇಶವನ್ನು ನಾಟಕದಲ್ಲಿ ಸೃಷ್ಟಿಸಲಾಗಿದೆ. ಕಾದಂಬರಿಯಲ್ಲಿ ಗಾಂಧಿವಾದಿ ಮಾರಪ್ಪ ಹೆಣ್ತನವಿಲ್ಲದ ಹೆಣ್ಣನ್ನು  ಮದುವೆಯಾಗಿ ಬಾಳುಕೊಡುತ್ತಾನೆ. ಆದರೆ ಆದರ್ಶನೀಯವಾದ ಸನ್ನಿವೇಶವನ್ನೇ ಚಂಪಾಶೆಟ್ಟಿಯವರು ಕೈಬಿಟ್ಟು ಸೂರತ್ತೆ ಪಾತ್ರದ ಮೂಲಕ ಗಾಂಧಿ ನಿಂದಾಸ್ತುತಿಯನ್ನು ಮಾಡಿಸಿದ್ದು ಸರಿಎನ್ನಿಸುವಂತಿಲ್ಲ. ಮೂಲಕ ಮಾರಪ್ಪ ಪಾತ್ರದ ಆದರ್ಶವನ್ನು ಮಿತಿಗೊಳಿಸುವ ಜೊತೆಗೆ ನೋಡುಗರನ್ನು ರಂಜಿಸಲೆಂದೇ ಗಾಂಧಿಯನ್ನು ಸೂರತ್ತೆ ಪಾತ್ರದ ಮೂಲಕ ನಿಂದಿಸಲಾಗಿದೆ ಎನ್ನುವ ಅನುಮಾನ ಕಾದಂಬರಿಯನ್ನು ಓದಿ ನಾಟಕವನ್ನೂ ನೋಡಿದವರಿಗೆ ಕಾಡದೇ ಇರದು. ಕಾದಂಬರಿಯ ಒಂದು ಪ್ರಮುಖ ಆದರ್ಶ ಸಾಧ್ಯತೆಯನ್ನು ಮುಚ್ಚಿಟ್ಟು ನಾಟಕದಲ್ಲಿ ತಿರುಚಿದ್ದು ಕಾದಂಬರಿಕಾರರ ಆಶಯಕ್ಕೆ ವ್ಯತಿರಿಕ್ತವಾಗಿದೆ. ಐತಿಹಾಸಿಕ ಗಾಂಧೀಜಿಯವರನ್ನು ಆದರ್ಶವಾಗಿಟ್ಟುಕೊಂಡು ಕಾಲ್ಪನಿಕವಾಗಿ ಪ್ರಸ್ತುತಪಡಿಸಲಾದ ಕಾದಂಬರಿಯ ಕೆಲವು ಅಂಶಗಳನ್ನು ಹೊಂದಿದ ನಾಟಕವು ಹುಟ್ಟಿಸುವ ತಾರ್ಕಿಕ ಸಂದೇಹಗಳನ್ನು ಬದಿಗಿಟ್ಟು ನಾಟಕದ ಸಾಧ್ಯತೆಗಳ ಬಗ್ಗೆ ಗಮನಹರಿಸಿದರೆ ಇಡೀ ನಾಟಕ ನೋಡುಗರಲ್ಲಿ ಅದ್ಬುತವಾದ ಅನುಭೂತಿಯನ್ನು ಕೊಡುತ್ತದೆ.

ಪ್ರೇಕ್ಷಕರಿಗೆ ಒಂದು ನಿಮಿಷವೂ ಬಿಡುವು ಕೊಡದಂತೆ ಒಂದಾದ ಮೇಲೆ ಒಂದು ದೃಶ್ಯಗಳು ಸಿನೆಮಾ ರೀತಿಯಲ್ಲಿ ಮೂಡಿಬಂದಿವೆ. ಸೆಟ್ ಬದಲಾಯಿಸುವ ತಾಪತ್ರಯವಿಲ್ಲ, ಬ್ಲಾಕ್ಔಟ್ಗಳ ನಡುವಿನ ನಿಲುಗಡೆಗಳಿಲ್ಲ, ಅತ್ತ ಒಂದು ದೃಶ್ಯ ಮುಗಿಯಿತು ಎನ್ನುತ್ತಿದ್ದಂತೆ ಇತ್ತ ಇನ್ನೊಂದು ದೃಶ್ಯ ಶುರುವಾಗುತ್ತದೆ. ನೋಡುಗರನ್ನು ಅತ್ತಿತ್ತ ಅಲ್ಲಾಡಲೂ ಅವಕಾಶ ಮಾಡಿಕೊಡದೇ ಇಡೀ  ನಾಟಕ ನೋಡಿಸಿಕೊಂಡು ಹೋಗುತ್ತದೆ. ನಾಟಕದ ಪ್ಲಸ್ ಪಾಯಿಂಟ್ ಎಂದರೆ ಶಾರ್ಪ್ ಆದ ದೃಶ್ಯ ಸಂಕಲನ. ಎಲ್ಲಿಯೂ ಎಳೆತವಾಗದ ಹಾಗೆ, ಯಾವ ದೃಶ್ಯವೂ ಅಗತ್ಯಕ್ಕಿಂತ ಹೆಚ್ಚಿರದ ಹಾಗೆ, ಎಲ್ಲಿಯೂ ಅನಗತ್ಯ ಎನ್ನಿಸುವ ಒಂದೇ ಒಂದು ಸಂಭಾಷಣೆ ಇರದ ಹಾಗೆ ನಿರ್ದೇಶಕಿ ನೋಡಿಕೊಂಡಿದ್ದರಿಂದಾಗಿ ಇಡೀ  ನಾಟಕ ಗಮನಸೆಳೆಯುತ್ತದೆ. ನಾಟಕದಾದ್ಯಂತ ರಂಗಶಿಸ್ತು ಎದ್ದುಕಾಣುತ್ತದೆ. ಸಿನೆಮಾ ಮಾಧ್ಯಮದಲ್ಲಿರುವ ಹಾಗೆಯೇ ನಾಟಕದಲ್ಲೂ ಸಹ ಎಡಿಟಿಂಗ್ ಎನ್ನುವುದು ಅದೆಷ್ಟು ಮಹತ್ವವಾದದ್ದು ಎನ್ನುವುದನ್ನು ನಾಟಕ ನೋಡಿ ಕಲಿತುಕೊಳ್ಳಬಹುದಾಗಿದೆ. ಪಾತ್ರಗಳ ಆಗಮನ, ನಿರ್ಗಮನ, ಬ್ಲಾಕಿಂಗ್, ಮೂವಮೆಂಟ್... ಖರಾರುವಕ್ಕಾಗಿ ಮೂಡಿಬಂದಿವೆ. ಗುಂಪು ನಿರ್ವಹಣೆಯಲ್ಲೂ ಕಲಾತ್ಮಕತೆಯನ್ನು ತೋರಲಾಗಿದೆ.
    
ಕಂಗೀಲು, ಕೋಲ, ಕಂಬಳ, ನೇಯಮ.... ಗಳು ಒಂದು ಪ್ರಾದೇಶಿಕ ಪರಿಸರದ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿವೆ. ತುಳುನಾಡಿನ ವಿಶಿಷ್ಟ ಸಂಸ್ಕೃತಿಯನ್ನು ದೃಶ್ಯರೂಪದಲ್ಲಿ ನಾಟಕದಲ್ಲಿ ತೋರಿಸಿದ್ದು ನೋಡುಗರಲ್ಲಿ ಸಂಚಲನ ಮೂಡಿಸುವಂತಿದೆ. ಅದಕ್ಕೆ ಪೂರಕವಾಗಿ ಕಹಳೆ, ನಗಾರಿ, ಡೊಳ್ಳು... ವಾದ್ಯಗಳ ಬಳಕೆ ಕೇಳುಗರಲ್ಲಿ ರೋಮಾಂಚನವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಕಂಬಳದ ಸಂಭ್ರಮದ ದೃಶ್ಯವನ್ನು ಮನಗಾಣಿಸಲು ಡಿಜಿಟಲ್ ಮಾಧ್ಯಮ ಬಳಸಿದ್ದು ಕೂಡಾ ಹೊಸ ರೀತಿಯ ಅನುಭವಕ್ಕೆ ಕಾರಣವಾಗಿದೆ. ನಾಟಕದಲ್ಲಿ ಸಂಪ್ರದಾಯವಾದಿ ಹಾಗೂ ಉದಾರವಾದಿಗಳ ಸಂಘರ್ಷದ ನಡುವೆಯೂ ದೃಶ್ಯವೈಭವಗಳು ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮೂಡಿಬಂದಿದೆ.

ನಿರ್ದೇಶಕಿ ಚಂಪಾಶೆಟ್ಟಿ
 ಅಭಿನಯದಲ್ಲಿ ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಹೆಬ್ಬಾರರ ಪಾತ್ರವನ್ನು ತಮ್ಮೊಳಗೆ ಆಹ್ವಾನಿಸಿಕೊಂಡಂತೆ ರಾಜಕುಮಾರ್ ಅಭಿನಯಿಸಿದ್ದಾರೆ. ದೈವವೇ ಬಂದು ದ್ರೌಪತಿ ಹಾಗೂ ಅದ್ರಾಮನಿಗೆ ಆಶೀರ್ವದಿಸಿದ ಸಂದರ್ಭದಲ್ಲಿ  ಕೇವಲ ಮುಖಭಾವದ ಮೂಲಕ  ಮನದೊಳಗಿನ ತಲ್ಲಣ ತಳಮಳಗಳನ್ನು ರಾಜಕುಮಾರ್ ತೋರಿಸುವ ಪರಿಯನ್ನು ನೋಡಿಯೇ ಅನುಭವಿಸಬೇಕು. ಅಂತಪ್ಪನಾಗಿ ಪ್ರಕಾಶ ಶೆಟ್ಟಿ ನಟನೆ ಇಡೀ ನಾಟಕದಾದ್ಯಂತ ಗಮನಾರ್ಹವಾಗಿ ಮೂಡಿಬಂದಿದೆ. ಕೊರಗರ ಐತ ಪಾತ್ರದಲ್ಲಿ ಅಭಿನಯಿಸಿದ ರಾಧಾಕೃಷ್ಣ ಉರಾಳರು ಚಿಕ್ಕ ಪಾತ್ರದಲ್ಲಿಯೆ ತಮ್ಮ ವಿಶಿಷ್ಟ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ದ್ರೌಪತಿಯಾಗಿ ಯಶಸ್ವಿನಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದರೆ, ವೃದ್ದ ವಿಧವೆಯಾಗಿ ಹಿರಿಯ ನಟಿ ಹನುಮಕ್ಕ ಪಾತ್ರವೇ ತಾವಾಗಿದ್ದಾರೆ. ಶೆಟ್ರ ಪಾತ್ರಕ್ಕೆ ವಿಶ್ವನಾಥ ಉರಾಳರು ಇನ್ನೂ ಪೋರ್ಸ ಕೊಡಬೇಕಿದೆ. ಅದ್ರಾಮ ಪಾತ್ರಕ್ಕೆ  ಹೇಮಂತ್ ಇನ್ನೂ ಪಳಗಬೇಕಿದೆ. ಸೂರತ್ತೆಯಾಗಿ ಗೀತಾ ಸೂರತ್ಕಲ್ರವರ  ಅಭಿನಯ ಮತ್ತು ಮಾತುಗಳು ನೋಡುಗರಲ್ಲಿ ಒಂದು ರೀತಿಯ ಸಂಚಲನವನ್ನುಂಟುಮಾಡುವಂತಿದ್ದವು.


ಲೇಖಕಿ ಡಾ.ನಾಗವೇಣಿ
ನಾಟಕದಾದ್ಯಂತ ಪ್ರತಿ ದೃಶ್ಯಕ್ಕೂ ಅಗತ್ಯ ಮೂಡನ್ನು ಸೃಷ್ಟಿಸುವಲ್ಲಿ ವಿಕಾಸ್ ಅರುಣ್ರವರ ಬೆಳಕು ವಿನ್ಯಾಸ ಯಶಸ್ವಿಯಾಗಿದೆಪ್ರಸಾಧನ ಹಾಗೂ ವಸ್ತ್ರವಿನ್ಯಾಸಗಳು ಪ್ರತಿ ವ್ಯಕ್ತಿಗಳನ್ನೂ ಪಾತ್ರಗಳಾಗಿ ಬದಲಾಯಿಸಿವೆ. ನಾಟಕದಾದ್ಯಂತ ಗಮನಸೆಳೆದಿದ್ದು ಸ್ಥಿರವಾದ ರಂಗವಿನ್ಯಾಸ. ರಂಗವೇದಿಕೆಯನ್ನು ಪ್ರಮುಖವಾಗಿ ಎರಡು ಭಾಗ ಮಾಡಿದ್ದು, ಎಡಕ್ಕೆ ಹೆಬ್ಬಾರರ ಮನೆ, ಬಲಕ್ಕೆ ಗಾಂಧಿವಾದಿ ಮಾರಪ್ಪನ ಮನೆಗಳು ಸಾಂಕೇತಿಕವಾಗಿ ರೂಪಗೊಂಡಿವೆ. ಚಂಪಾ ಶೆಟ್ಟಿರವರ ರಂಗವಿನ್ಯಾಸ ಹಾಗೂ ರಂಗತಂತ್ರಗಳ ಸಮರ್ಥ ಬಳಕೆಯಿಂದಾಗಿ ಇಡೀ ನಾಟಕ ಯಶಸ್ವಿಯಾಗಿದೆ. ನಲವತ್ತರಷ್ಟು ಕಲಾವಿದರನ್ನು ನಾಟಕದಲ್ಲಿ ಬಳಸಿದ್ದು ಹಾಗೂ ಇಷ್ಟೊಂದು ಜನರನ್ನು ಸೇರಿಸಿ ನಲವತ್ತಕ್ಕೂ ಹೆಚ್ಚು ಶೋಗಳನ್ನು ನಾಡಿನಾದ್ಯಂತ ಪ್ರದರ್ಶಿಸಿದ್ದು ಅಚ್ಚರಿಯ ಸಂಗತಿಯಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಇಷ್ಟೊಂದು ಜನರನ್ನು ಕಲೆಹಾಕಿ ನಾಟಕ ಮಾಡುವುದು ಸಾಹಸವಾದರೆ, ರಿಪೀಟ್ ಶೋಗಳನ್ನು ಮಾಡುವುದು ಹರಸಾಹಸವಾಗಿದೆ. ಗಾಂಧಿ ಬಂದ ನಾಟಕದ ಮೂಲಕ ಕನ್ನಡ ಹವ್ಯಾಸಿ ರಂಗಭೂಮಿಗೆ ಪ್ರತಿಭಾವಂತ ನಿರ್ದೇಶಕಿ ದಕ್ಕಿದಂತಾಗಿದೆ. ಚಂಪಾಶೆಟ್ಟಿಯವರ ಮೂಲಕ ಉತ್ತಮ ನಾಟಕವೊಂದು ರಂಗಾಸಕ್ತರಿಗೆ ನೋಡಲು ಸಿಕ್ಕಿದೆ. ನಾಟಕ ಹೀಗೆಯೇ ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಾಣಲಿ ಎನ್ನುವುದು ರಂಗಾಸಕ್ತರ ಆಶಯವಾಗಿದೆ

                               -ಶಶಿಕಾಂತ ಯಡಹಳ್ಳಿ         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ