ಶುಕ್ರವಾರ, ಅಕ್ಟೋಬರ್ 24, 2014

ಅಗಲಿದ ಪ್ರೊ.ಕ.ವೆಂ.ರಾಜಗೋಪಾಲ ರವರಿಗೆ ನುಡಿನಮನ





ಸಾಹಿತ್ಯಕ-ಸಾಂಸ್ಕೃತಿಕ ಲೋಕದಲ್ಲಿ ವ್ಯಯಕ್ತಿಕವಾಗಿ ಬೆಳೆದವರಿದ್ದಾರೆ ಆಲದ ಮರದ ಹಾಗೆ. ಆಲದ ಕೆಳಗೆ ಏನೇನು ಬೆಳೆಯಲಾರದೆಂಬುದಕ್ಕೆ ಸಾಕ್ಷೀಭೂತವಾಗಿರುವ ಸಾಧಕರೂ ಇದ್ದಾರೆ ಹಾಗೂ ಆಗಿಹೋಗಿದ್ದಾರೆ. ಆದರೆ ಹೀಗೊಬ್ಬರಿದ್ದರು ಮೇಷ್ಟ್ರು ಹಲವಾರು ಜನರಿಗೆ ಪ್ರೇರಣೆಯಾಗುವಂತೆ ಬರೆದರು, ಬದುಕಿದರು. ಹಲವಾರು ಪ್ರತಿಭೆಗಳನ್ನು ಬೆಳೆಸಿದರು. ಸಹಸ್ರಾರು ಶಿಷ್ಯರ ಪ್ರೀತಿಯನ್ನು ಸಂಪಾದಿಸಿದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಆಗುಹೋಗುಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿದರು. ಹಲವು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದರು. ಕವಿಯಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ರಂಗಸಂಘಟಕರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ ಗಮನಾರ್ಹ ಸಾಧನೆ ಮಾಡಿದವರು  ಕಟ್ಟೇಪುರ ವೆಂಕಟರಾಮಪ್ಪ ರಾಜಗೋಪಾಲ್ ಅಂದರೆ ಪ್ರೊ..ವೆಂ.ರಾಜಗೋಪಾಲ್. ಎಲ್ಲರೂ ಆತ್ಮೀಯವಾಗಿ ಕರೆಯುವ ಹೆಸರು ಕವೆಂ. ಒಂಬತ್ತು ದಶಕಗಳ ಸಾರ್ಥಕವೆನಿಸುವ ತುಂಬು ಬದುಕನ್ನು ಬದುಕಿ 2014, ಅಕ್ಟೋಬರ್ 20ರಂದು ತೀರಿಕೊಂಡರು.

ಸಾಹಿತ್ಯ, ರಂಗಭೂಮಿ, ಯಕ್ಷಗಾನ, ಶಿಲ್ಪಕಲೆ, ಇತಿಹಾಸ, ಸಂಶೋಧನೆ.... ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಪಾರ ಆಸಕ್ತಿಯನ್ನು ಹೊಂದಿ ಎಲ್ಲಾ ಕ್ಷೇತ್ರಗಳಲ್ಲಿ ಕೃಷಿ ಮಾಡಿದ .ವೆಂ ರವರ ಪ್ರತಿಭೆ ಅಸಾಧಾರಣ. ಇಳಿವಯಸ್ಸಿನಲ್ಲಿಯೂ ಅವರ ನೆನಪಿನ ಶಕ್ತಿ ಅಗಾಧವಾಗಿತ್ತುಅವರ ಜೊತೆಗೆ ಯಾರೇ ಮಾತಾಡಿದರೂ ಅದು ಕೊನೆಗೆ ಕಲೆ ಸಾಹಿತ್ಯ ಸಂಸ್ಕೃತಿಯತ್ತಲೇ ಹೊರಳುತ್ತಿತ್ತು. ಯಾವುದೇ ರೀತಿಯ ಪ್ರಶಸ್ತಿ ಪುರಸ್ಕಾರ ಹಣದಾಸೆ ಇಲ್ಲದೇ ತಮ್ಮ ಪಾಡಿಗೆ ತಾವು ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಶ್ರಮಿಸಿದರು. ಕೊನೆಯವರೆಗೂ ಸಾಮಾಜಿಕ ಚಿಂತನೆ ಮಾಡುತ್ತಲೇ ಖಾಯಂ ಆಗಿ ನಿರ್ಗಮಿಸಿದರು.

ಹಾಸನ ಜಿಲ್ಲೆಯ ಅರಕಲಗೂಡಿನ ಕಟ್ಟೇಪುರ ಎನ್ನುವ ಗ್ರಾಮದಿಂದ ಬಂದ ಕವೆಂ ಮೈಸೂರು ಮಹಾರಾಜಾ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ನಂತರ 1957 ರಿಂದ ಮೂರು ದಶಕಗಳ ಕಾಲ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. 1981 ರಿಂದ ಐದು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ-ನಾಟಕ-ಸಂಗೀತ (ಡಿಡಿಎಂ) ವಿಭಾಗದ ನಿರ್ದೇಶಕರಾಗಿಯೂ ಶ್ರಮಿಸಿದರು. ನಿವೃತ್ತಿಯ ನಂತರವೂ ಒಂದು ದಶಕದ ಕಾಲ ರಾಮನಗರದ ಸ್ನಾತ್ತಕೋತ್ತರ ಕಾಲೇಜಿನಲ್ಲಿ ಕೋಆರ್ಡಿನೇಟರ್ ಆಗಿ ಕೆಲಸ ಮಾಡಿದರು. ಕಿರಿಯರನ್ನು ಪ್ರೋತ್ಸಾಹಿಸುತ್ತಾ, ಶಿಷ್ಯರನ್ನು ಹುರುದುಂಬಿಸುತ್ತಾ, ಗೆಳೆಯರನ್ನು ಪ್ರೇರೇಪಿಸುತ್ತಾ ಇದ್ದ ಕವೆಂ ಮೇಷ್ಟ್ರು ಸಾಹಿತ್ಯ-ಸಾಂಸ್ಕೃತಿಕ ಲೋಕದ ಸಂತನ ಹಾಗೆಯೇ ಬರೆದವರು ಹಾಗೂ ಬದುಕಿದವರು. ತಮ್ಮ ಸಂಪರ್ಕಕ್ಕೆ ಬಂದವರನ್ನು ತಮ್ಮ ಪ್ರತಿಭೆಯ ಪ್ರಭಾವಳಿಗೆ ಸೇರಿಸಿಕೊಳ್ಳುವ ಅಪರೂಪದ ಗುಣವಿಶೇಷತೆ ಕವೆಂರವರದ್ದಾಗಿತ್ತು.


ನವ್ಯ ಸಾಹಿತ್ಯದಿಂದ ಪ್ರೇರಣೆಗೊಳಗಾದ ಕವೆಂ ರವರ ಒಡನಾಟ ಲಂಕೇಶ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಬಿ.ಸಿ.ರಾಮಚಂದ್ರ ಶರ್ಮ ರಂತಹ ದಿಗ್ಗಜರ ಜೊತೆಗಿತ್ತು. ಎಲ್ಲರನ್ನೂ ಪ್ರೀತಿಯಿಂದ ಟೀಕಿಸುತ್ತಿದ್ದ ಲಂಕೇಶರವರು ತಲೆಮಾರು ಪುಸ್ತಕದಲ್ಲಿ ಕವೆಂ ಕುರಿತು ಬರೆಯುತ್ತಾ ಕವೆಂ ರಾಜಗೋಪಾಲರು ನವ್ಯ ಕಾವ್ಯದ ಬಾಲ, ಬಾಲಕ್ಕೆ ಅರ್ಥ ಹಚ್ಚುವುದು ವ್ಯರ್ಥ ಎಂದು ಕಾಲೆಳೆದಿದ್ದರು. ಇಂತಹ ಸಾಹಿತ್ಯಕ ಒಡನಾಟ ಟೀಕೆ ಟಿಪ್ಪಣೆಗಳು ರಾಜಗೋಪಾಲರ ಬದುಕಲ್ಲಿ ಬಹಳಷ್ಟಿವೆ. ಕವೆಂ ರವರಿಗೆ ಕಾಲೆಳೆಯುವುದು ಹಾಗೂ ಕಾಲೆಳೆಸಿಕೊಳ್ಳುವುದು ಎರಡರಲ್ಲೂ ಒಂದು ರೀತಿಯ ಖುಷಿಯಿತ್ತು. ಆದರೆ ಕವೆಂ ಮಾಡುವ ಟೀಕೆಗಳಿಗೆ ಒಂದು ತಾರ್ಕಿಕ ನಡೆ ಇರುತ್ತಿತ್ತು. ಯಾಕೆಂದರೆ ಕವೆಂ ಕಮ್ಯೂನಿಸಂ ಸಿದ್ದಾಂತದ ಬಗ್ಗೆ ಒಲವುಳ್ಳವರಾಗಿದ್ದರು. ಎಡಪಂಥೀಯ ಧೋರಣೆಯುಳ್ಳ ಪ್ರಗತಿಪರ ಚಿಂತಕರಾಗಿದ್ದರು. ಜೀವಪರ ನಿಲುವು ಹಾಗೂ ಮಾನವೀಯ ತುಡಿತಗಳಿಂದಾಗಿ ಕವೆಂ ಮೇಷ್ಟ್ರು ಜನಪರ ಲೇಖಕರಾಗಿ ಗುರುತಿಸಿಕೊಂಡರು. ನವ್ಯಕಾಲದ ಕವಿಯಾಗಿದ್ದರೂ ಹೊಸ ಸಾಹಿತ್ಯಕ ಬೆಳವಣಿಗೆಗೆ ತಮ್ಮನ್ನು ತೆರೆದುಕೊಂಡಿದ್ದರು. ಹಳೆಯದನ್ನು ಇಟ್ಟುಕೊಂಡರೂ ಹೊಸದನ್ನು ನಿರಾಕರಿಸದೇ ಕಾಲಕಾಲಕ್ಕೆ ಅಪ್ಗ್ರೇಡ್ ಆಗುತ್ತಿದ್ದುದರಿಂದಲೇ ಕವೆಂ ನವ್ಯ ಕಾಲದ ನಂತರ ಅಪ್ರಸ್ತುತರಾಗದೇ ಕೊನೆಯವರೆಗೂ ತಮ್ಮ ಬರವಣಿಗೆಯನ್ನು ಮುಂದುವರೆಸಿದರು. ಹಳೆಯ ಬೇರು ಹೊಸ ಚಿಗುರಿನ ಸಮ್ಮಿಶ್ರನದಂತೆ ಕವೆಂ ಸಾಧನೆಯ ಹಾದಿಯಲ್ಲಿ ಪಯಣಿಸಿದರು.

ಕವೆಂ ರಾಜಗೋಪಾಲರವರ ಮೊಟ್ಟಮೊದಲ ಕವನ  ಸಂಕಲನ ಅಂಜೂರ, ನಂತರ ಮೇ ತಿಂಗಳ ಗಾಳಿ ಕವಿತೆಗಳ ಸಂಕಲನ ಪ್ರಕಟಗೊಂಡಿತು. 1971ರಲ್ಲಿ ನದಿಯ ಮೇಲಿನ ಗಾಳಿ ಕವನ ಸಂಕಲನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿತು. ಇದೇ ಕನ್ನಡ ಸಂಘದಿಂದ ಕವೆಂ ರವರ ಕೊನೆಯ ಕವನ ಸಂಕಲನ ನೆಲದ ಕರೆ ಹೊರಬಂದಿತ್ತು. ಕವೆಂ ರವರೊಳಗೊಬ್ಬ ಕವಿ ಇದ್ದ ಹಾಗೆಯೇ ಕ್ರಿಯಾಶೀಲ  ಕಥೆಗಾರನೂ ಇದ್ದ. ನಿಸರ್ಗದ ನೆನಪು, ಏಣಿಸದ ಹಣ, ರಾಗ ಜಯಂತಿ, ಅರ್ಧ ತೆರೆದ ಬಾಗಿಲು, ಆಸೆಯ ಶಿಶು ಹಾಗೂ ಅನಾಥ ಮೇಷ್ಟ್ರ ಸ್ವಗತ ಸಂಪ್ರದಾಯ ಎನ್ನುವ ಕಥಾ ಸಂಕಲನಗಳನ್ನೂ ಸಹ ಕವೆಂ ಬರೆದರು. ಸಂಶೋಧನೆ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡ ಕವೆಂ ಬೌದ್ದ ಮತದಲ್ಲಿ ಯಕ್ಷಕಲೆ, ಕನ್ನಡ ರಂಗಭೂಮಿಯ ಶೋಧದಲ್ಲಿ, ಒಕ್ಕಲಿಗರ ಆಚರಣೆಗಳು, ಗಂಗರ ಇತಿಹಾಸ ಕುರಿತು ಸಂಶೋಧನಾ ಪ್ರಬಂಧಗಳನ್ನು ಬರೆದು ಪ್ರಕಟಿಸಿದರು. ಆದರೆ ವಿಚಿತ್ರವೇನೆಂದರೆ ಸಂಶೋಧನಾ ಲೋಕ ಕವೆಂ ರವರ ಸಂಶೋಧನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಏನೇ ಆದರೂ ಕವೆಂ ತಮ್ಮ ಸಂಶೋಧನೆಯನ್ನು ನಿಲ್ಲಿಸಲೂ ಇಲ್ಲ.

ರಂಗಭೂಮಿಗೆ ಕವೆಂ ಕೊಡುಗೆ : ರಂಗಭೂಮಿಗೆ ಕವೆಂ ರವರ ಕೊಡುಗೆ ಅಪಾರವಾಗಿತ್ತು. ರಂಗಭೂಮಿಯತ್ತ ಆಕರ್ಷಿತರಾದಂತೆ ಕವೆಂ ನವ್ಯಕಾವ್ಯ ಕೃಷಿಯನ್ನೇ ನಿಲ್ಲಿಸಿಬಿಟ್ಟಿದ್ದರು. ಎಂಇಎಸ್ ಕಾಲೇಜಿನಲ್ಲಿ ರಂಗಾಸಕ್ತಿಯನ್ನು ಬೆಳೆಸಲು ಮೂಲ ಕಾರಣೀಬೂತರಾದವರೇ ಕಾವೆಂ ರವರು. ಎಂಇಎಸ್ ಕಾಲೇಜಿನಲ್ಲಿ 1960ರಿಂದ ಪ್ರತಿವರ್ಷ ಇಂಟರ್ಕಾಲೇಜ್ ನಾಟಕ ಸ್ಪರ್ಧೆಗಳನ್ನು ಆರಂಭಿಸಿದರು. ನಾಟಕೋತ್ಸವಗಳನ್ನು ಆಯೋಜಿಸಿದರು. ಕಾಲೇಜಿನಲ್ಲಿ ನಾಟಕದ ಚಳುವಳಿಯನ್ನೇ ಶುರುಮಾಡಿದರು. ವರ್ಷದಿಂದ ವರ್ಷಕ್ಕೆ ನಾಟಕಗಳ ಪ್ರದರ್ಶನಗಳ ಸಂಖ್ಯೆಯಲ್ಲಿ ಹೆಚ್ಚಾಗತೊಡಗಿತು. ದಿನಕ್ಕೆ ಮೂರು-ನಾಲ್ಕು ನಾಟಕಗಳ ಹಾಗೆ ಹತ್ತು ಹನ್ನೆರಡು ದಿನಗಳ ಕಾಲ ಕಾಲೇಜು ರಂಗತಂಡಗಳ ಪ್ರದರ್ಶನಗಳು ಸಂಭ್ರಮದಿಂದ ನಡೆಯುತ್ತಿದ್ದವು. ಆರ್.ನಾಗೇಶ್, ವೆಂಕಟಸುಬ್ಬಯ್ಯರವರಂತಹ ರಂಗದಿಗ್ಗಜರು ನಾಟಕ ಸ್ಪರ್ಧೆಗೆ ತೀರ್ಪುಗಾರರಾಗಿರುತ್ತಿದ್ದರು. ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜು ಬಿಟ್ಟರೆ ಎಂಇಎಸ್ ಕಾಲೇಜಿನಲ್ಲಿಯೇ ಅಂತರ್ ಕಾಲೇಜು ಸ್ಪರ್ಧೆಗಳು ನಡೆಯುತ್ತಿದ್ದವು. ಇದರ ಎಲ್ಲಾ ಕ್ರೆಡಿಟ್ ಸಲ್ಲಬೇಕಾದದ್ದು ಕಾವೆಂ ರವರಿಗೆ. ಕಾವೆಂ ರವರ ರಂಗಬದ್ಧತೆ ಎಷ್ಟಿತ್ತೆಂದರೆ, ಒಮ್ಮೆ ಎಂಇಎಸ್ ಕಾಲೇಜಿನಲ್ಲಿ ನಾಟಕ ಸ್ಪರ್ಧೆಗಳು ನಡೆಯುತ್ತಿರಬೇಕಾದರೆ ಕಾವೆಂ ರವರ ತಂದೆ ತೀರಿಕೊಂಡ ಸುದ್ದಿ ಬಂದಿತು. ಯಾರಿಗೂ ಗೊತ್ತಾಗದಂತೆ ಊರಿಗೆ ಧಾವಿಸಿ ತಂದೆಯವರ ಅಂತ್ಯಕ್ರಿಯೆಯನ್ನು ಮುಗಿಸಿದ ತಕ್ಷಣ ಓಡಿ ಬಂದು ನಾಟಕ ಪ್ರದರ್ಶನಗಳ ಉಸ್ತುವಾರಿ ನೋಡಿಕೊಂಡರಂತೆ. ಯಾರೆಂದರೆ ಯಾರಿಗೂ ವಿಷಯ ಗೊತ್ತೆ ಆಗಿರಲಿಲ್ಲತದನಂತರ ಎಂಇಎಸ್ ಕಾಲೇಜಿನಲ್ಲಿ ಸಂಜೆ ರಂಗಶಾಲೆ ಆರಂಭಗೊಂಡಿದ್ದರ ಹಿಂದೆ ಹಾಗೂ ರಂಗಶಾಲೆಯ ಪ್ರಾಂಶುಪಾಲರಾಗಿ ಗೋಪಾಲಕೃಷ್ಣ ನಾಯರಿ ಆಯ್ಕೆ ಆಗಿದ್ದರ ಹಿಂದೆ ಕವೆಂ ರಾಜಗೋಪಾಲರವರೇ ಇದ್ದರು.

ಕಲ್ಯಾಣದ ಕೊನೆಯ ದಿನಗಳು ನಾಟಕದ ದೃಶ್ಯ

ಕವೆಂ ರವರು ಜೆ.ಶ್ರಿನಿವಾಸಮೂರ್ತಿ, ಗೋಪಾಲಕೃಷ್ಣ ನಾಯರಿ, ಚಿ.ಶ್ರೀನಿವಾಸರಾಜು, ಕೆ.ವಿ.ನಾರಾಯಣ್, ಡಾ.ಕೆ.ಮರುಳಸಿದ್ದಪ್ಪ ಮುಂತಾದ ಸಮಾನ ಮನಸ್ಕರನ್ನು ಸೇರಿಸಿ 1977ರಲ್ಲಿ ಪ್ರೇಕ್ಷಕ ಥೇಯಟರ್ ಎನ್ನುವ ತಂಡವೊಂದನ್ನು ಹುಟ್ಟುಹಾಕಿದರು. ತಂಡ ಮೂರು ಸ್ಕೀಮ್ಗಳನ್ನು ಹಮ್ಮಿಕೊಂಡು ರಂಗಚಟುವಟಿಕೆಗಳನ್ನು ಶುರುಮಾಡಿಕೊಂಡಿತು. ಮೊದಲನೆಯದಾಗಿ ನಾಟಕದ ಹಸ್ತಪ್ರತಿಗಳನ್ನು ಓದುವುದು, ಅದರ ಪ್ರದರ್ಶನ ಸಾಧ್ಯತೆಗಳ ಕುರಿತು ಚರ್ಚೆ ಸಂವಾದ ಮಾಡುವುದು, ಹಸ್ತಪ್ರತಿಯನ್ನು ಪರಿಷ್ಕರಿಸಿ ಪ್ರದರ್ಶನಯೋಗ್ಯ ಗೊಳಿಸುವುದು ತಂಡದ ಕೆಲಸವಾಗಿತ್ತು. ಇದರಿಂದಾಗಿ ಹಲವಾರು ನಾಟಕಗಳು ಪ್ರದರ್ಶನಗೊಳ್ಳಲು ಸಾಧ್ಯವಾಯಿತು. ಪ್ರತಿ ತಿಂಗಳು ಮೊದಲ ಭಾನುವಾರ ಹೊಸ ನಾಟಕಗಳ ವಾಚನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ಶ್ರೀರಂಗರ ಹೊಸ ನಾಟಕ ನೀವೇ ಹೇಳ್ರಿ ಯನ್ನು ಓದುವುದರ ಮೂಲಕ ನಾಟಕವಾಚನ ಅಭಿಯಾನ ಆರಂಭವಾಯಿತು. ಕೆ.ಸತ್ಯನಾರಾಯಣರವರ ಹೊಸ ನಾಟಕ, ಶೂದ್ರ ಶ್ರೀನಿವಾಸರವರ ಗಾಂಧಾರಿ... ಹೀಗೆ ಹಲವಾರು ಹೊಸ ನಾಟಕಗಳ ವಾಚನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಎರಡನೆಯದಾಗಿ ಪ್ರೇಕ್ಷಕ ಸೊಸೈಟಿ ಆರಂಭಿಸಿ ಹಲವಾರು ರಂಗಾಸಕ್ತರನ್ನು ಅದಕ್ಕೆ ಸದಸ್ಯರನ್ನಾಗಿ ಮಾಡಿಕೊಂಡು ವರ್ಷಕ್ಕೆ ಕನಿಷ್ಟ ಮೂರು ಉತ್ತಮ ನಾಟಕಗಳನ್ನು ಸದಸ್ಯರಿಗೆ ತೋರಿಸುವ ಯೋಜನೆ ರೂಪಿತವಾಗಿ ಕಾರ್ಯರೂಪಕ್ಕೆ ತರಲಾಗಿತ್ತು. ಮೂರನೆಯದಾಗಿ ಸ್ಕ್ರಿಪ್ಟ್ಬ್ಯಾಂಕ್ನ್ನು ಸ್ಥಾಪಿಸಿ ನಾಟಕಗಳ ಸ್ಕ್ರಿಪ್ಟ್ಗಳನ್ನು ಸಂಗ್ರಹಿಸುವುದು ಹಾಗೂ ನಾಟಕ ಪ್ರದರ್ಶನ ಮಾಡಬಯಸುವವರಿಗೆ ಅದನ್ನು ಉಚಿತವಾಗಿ ವದಗಿಸುವುದು. ಕೇವಲ ರಂಗಭೂಮಿಯ ಬೆಳವಣಿಗೆಯ ದೃಷ್ಟಿಕೋನದಿಂದ ಎಂತೆಂತಾ ಸ್ಕೀಮ್ಗಳನ್ನು ಕಾವೆಂ ಮತ್ತು ಅವರ ತಂಡ ಹಮ್ಮಿಕೊಂಡಿತ್ತೆಂಬುದನ್ನು ನೋಡಿದರೆ ಅಭಿಮಾನ ಉಕ್ಕಿ ಬರುತ್ತದೆ. ರಂಗಬದ್ದತೆ ಅಂದ್ರೆ ಇದೇನಾ?

ಎಡಪಂಥೀಯ ತತ್ವಗಳತ್ತ ಆಕರ್ಷಿತರಾದ ಕವೆಂ ರವರು ಲೆನಿನ್ ಕುರಿತಾದ ಜ್ವಾಲೆ ಎನ್ನುವ ನಾಟಕವನ್ನು ನಿರ್ದೇಶಿಸಿ ಟೌನ್ಹಾಲ್ ನಲ್ಲಿ ಪ್ರದರ್ಶಿಸಿದ್ದರು. ನಾಟಕದಲ್ಲಿ ಮಾಡಲಾದ ವಿಶೇಷ ಬೆಳಕಿನ ವಿನ್ಯಾಸ ಅದ್ಬುತವಾಗಿತ್ತೆಂದು ಈಗಲೂ ನಾಟಕ ನೋಡಿದವರು ನೆನಪಿಸಿಕೊಳ್ಳುತ್ತಾರೆ. ಜೆ.ಶ್ರೀನಿವಾಸಮೂರ್ತಿಯವರ ಮೂಕ ನಾಟಕಗಳು, ಶ್ರೀರಂಗರ ಸ್ವಗತ ಸಂಭಾಷಣೆ, ಚಂದ್ರಶೇಖರ ಕುಸನೂರರ ಮುಂದೇನಾ ಸಖಿ ಮುಂದೇನಾ, ಮಾಸ್ತಿಯವರ ಯಶೋಧರಾ, ನಿರಂಜನರ ಚಿರಸ್ಮರಣೆ, ಬಿಎಂಶ್ರೀ ರವರ ಅಶ್ವತ್ತಾಮ, ಹಾದಿಗಳೆಲ್ಲಿವೆ.. ಹೀಗೆ ಹಲವಾರು ನಾಟಕಗಳನ್ನು ಕವೆಂ ರವರು ನಾಲ್ಕು ದಶಕಗಳ ಹಿಂದೇನೇ ನಿರ್ದೇಶಿಸಿದರು. ಮೃಚ್ಚಿಕಟಿಕ ನಾಟಕವನ್ನು ಸಂಸ್ಕೃತ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ನಿರ್ದೇಶಿಸಿದ ಕಾವೆಂ ರವರು ಶಾಕುಂತಲೆ ನಾಟಕದ ನಾಲ್ಕು ಹಾಗೂ ಐದನೇ ಅಂಕಗಳನ್ನು ನಾಟಕವಾಗಿಸಿ ಪ್ರದರ್ಶಿಸಿದ್ದರು.
  
ಸೆಂಟ್ರಲ್ ಕಾಲೇಜಿನ ಗೋಲ್ಡನ್ ಜುಬಲಿ ಕಾರ್ಯಕ್ರಮದಲ್ಲಿ ಕಾವೆಂ ರವರು ಕಿಸಾ ಗೌತಮಿ ನಾಟಕ ನಿರ್ದೇಶಿಸಿದ್ದಾಗ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿ ನಟಿಸಿದವರು ಸಾಹಿತಿ ಬರಗೂರು ರಾಮಚಂದ್ರಪ್ಪನವರು. ಕನ್ನಡ ರಂಗಭೂಮಿಯ ಪ್ರಖ್ಯಾತ ನಿರ್ದೇಶಕ ಪ್ರಸನ್ನರವರನ್ನೂ ಸಹ ರಂಗಭೂಮಿಗೆ ಪರಿಚಯಿಸಿದ್ದೂ ಸಹ ಕಾವೆಂ ರವರೇ. ಸೆಂಟ್ರಲ್ ಕಾಲೇಜಿನಲ್ಲಿ ಕಾವೆಂ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾ.ರತ್ನರವರ ಎಲ್ಲಿಗೆ ನಾಟಕದಲ್ಲಿ ಪ್ರಸನ್ನರವರು ಮೊದಲ ಬಾರಿಗೆ ಅಭಿನಯಿಸಿದ್ದರು. ಇದೇ ನಾಟಕದ ಪ್ರಭಾವದಿಂದಾಗಿ ಮುಂದೆ ಎನ್ಎಸ್ಡಿ ಗೆ ಹೋದ ಪ್ರಸನ್ನ ಪ್ರಖ್ಯಾತ ನಿರ್ದೇಶಕರಾದರು. ಸಮುದಾಯ ಸಂಘಟನೆಯ ಮೊಟ್ಟ ಮೊದಲ ಸಭೆ ಆಯೋಜಿಸಿ ಸಮುದಾಯದ ಆರಂಭಕ್ಕೆ ಕಾರಣೀಕರ್ತರಾದವರೂ ಸಹ ರಾಜಗೋಪಾಲರವರೇ. ಲಂಕೇಶರವರ ನಾಟಕಗಳ ರಚನೆಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದವರು ರಾಜಗೋಪಾಲರವರು. ಪ್ರತಿಯೊಂದನ್ನು ಕವೆಂ ಜೊತೆಗೆ ಚರ್ಚಿಸಿ ಸೂಕ್ತ ಪರಿಷ್ಕರಣೆ ಮಾಡಿದ ನಂತರವೇ ಲಂಕೇಶರು ತಮ್ಮ ನಾಟಕಗಳನ್ನು ಪೂರ್ಣಗೊಳಿಸುತ್ತಿದ್ದರಂತೆ. ಗೋಪಾಲಕೃಷ್ಣ ನಾಯರಿಯವರು ಭಾಸಕವಿಯ ನಾಟಕಗಳನ್ನು ವಿಶಿಷ್ಟವಾಗಿ ನಿರ್ದೇಶಿಸಿದಾಗ ಅದರ ಹಿಂದಿನ ಮಾಹಿತಿ ಶಕ್ತಿಯಾಗಿ ನಿಂತವರು ಕವೆಂರವರು.

ಕಲ್ಯಾಣದ ಕೊನೆಯ ದಿನಗಳು ನಾಟಕದ ದೃಶ್ಯ

ಜೊತೆಗೆ ಆಗ ಪ್ರದರ್ಶಿಸಲ್ಪಡುತ್ತಿದ್ದ ನಾಟಕಗಳ ಕುರಿತು ಕಾಲದ ಪ್ರಸಿದ್ದ ವಾರಪತ್ರಿಕೆ ಗೋಕುಲದಲ್ಲಿ ವಿಮರ್ಶೆಗಳನ್ನು ಬರೆಯತೊಡಗಿದರು. ಜೊತೆಗೆ ಹಲವು ವರ್ಷ ಪ್ರಜಾವಾಣಿ ಪತ್ರಿಕೆಯಲ್ಲೂ ರಂಗವಿಮರ್ಶೆಗಳನ್ನು ಬರೆದರು. ಇದ್ದದ್ದನ್ನು ಇದ್ದಹಾಗೇ ಯಾವುದೇ ಮುಲಾಜಿಲ್ಲದೇ ಬರೆಯುವ ಛಾತಿ ಇದ್ದ ಕಾವೆಂ ರವರ ತೀಕ್ಣ ಬರವಣಿಗೆಗೆ ರಂಗಕರ್ಮಿಗಳು ಬೆಚ್ಚಿ ಬೀಳುವಂತಾಗಿತ್ತು. ಎಂದೂ ಕೆಟ್ಟ ನಾಟಕಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಒಂದು ಸಲ ಕವೆಂ ರವರ ವಿಮರ್ಶೆಯಿಂದ ಸಿಟ್ಟಿಗೆದ್ದ .ಎಸ್.ಮೂರ್ತಿಗಳು ಅವರಿದ್ದಲ್ಲಿಗೆ ಹೋಗಿ ಕತ್ತಿನ ಪಟ್ಟಿ ಹಿಡಿದು ಹೊಡೆಯಲು ಹೋಗಿದ್ದರೆಂದಮೇಲೆ ಕವೆಂ ರವರ ವಿಮರ್ಶೆಗಳ ತೀವ್ರತೆ ಹೇಗಿರುತ್ತಿತ್ತೆಂಬುದನ್ನು ಊಹಿಸಬಹುದಾಗಿದೆ. ಏನೇ ಇರಲಿ ಆಗಿನ ರಂಗಚಟುವಟಿಕೆಗಳನ್ನು ಬರಹದಲ್ಲಿ ದಾಖಲಿಸುವ ಹಾಗೂ ನಾಟಕಗಳ ಪರಿಷ್ಕರಣೆಗೆ ಕಾರಣವಾಗುವಂತಹ ವಿಮರ್ಶೆಗಳನ್ನು ಬರೆಯುವ ಮೂಲಕ ಕವೆಂ ರಂಗಭೂಮಿಗೆ ಸ್ಪಂದಿಸಿದ್ದಾರೆ. ಮೇಷ್ಟ್ರ ಕೆಲಸದ ನಡುವೆಯೂ ಸದಾ ನಾಟಕಕ್ಕಾಗಿ ತುಡಿಯುತ್ತಿದ್ದ ಕವೆಂ ಕೆಲವು ನಾಟಕಗಳನ್ನೂ ಬರೆದರು. 12ನೇ ಶತಮಾನದ ಶರಣರ ಚಳುವಳಿಯನ್ನು ಆಧರಿಸಿ ಕವೆಂ ರವರು ಬರೆದ ಕಲ್ಯಾಣದ ಕೊನೆಯ ದಿನಗಳು ಎನ್ನುವ ನಾಟಕವನ್ನು 2010ರಲ್ಲಿ ಶಶಿಧರ್ ಭಾರೀಘಾಟ್ ಹಾಗೂ ಹೆಚ.ವಿ.ವೇಣುಗೋಪಾಲ್ ಜಂಟಿಯಾಗಿ ಸಮುದಾಯ ತಂಡಕ್ಕೆ ನಿರ್ದೇಶಿಸಿದ್ದರು. ನಾಟಕ ಚರ್ಚೆಯನ್ನೂ ಹುಟ್ಟು ಹಾಕಿ ಮೆಚ್ಚುಗೆಯನ್ನೂ ಗಳಿಸಿತ್ತು. ಅನುಗ್ರಹ, ಮಾಯಾಕೋಲಾಹಲ, ಭಗತ್ಸಿಂಗ್ ಒಂದು ವಿಚಾರಣೆ ಹಾಗೂ ಗಾಂಧೀಜಿಯ ಜೀವನ ಆಧರಿಸಿದ ವಿಚಾರಣೆ  ನಾಟಕಗಳನ್ನು ಕವೆಂ ರಚಿಸಿದ್ದು, ಅತ್ತೆಯ ಕಾಂಚಿ ಮತ್ತು ಥೇನ್ಸಿನಲ್ಲಿ ಬರಿಗಾಲು ಎಂಬ ಎರಡು ನಾಟಕಗಳ ಅನುವಾದವನ್ನು ಕನ್ನಡಕ್ಕೆ ಮಾಡಿದ್ದರು. ಜೊತೆಗೆ ಹಲವಾರು ರೇಡಿಯೋ ನಾಟಕಗಳನ್ನೂ ಸಹ ಆಕಾಶವಾಣಿಗಾಗಿ ರಚಿಸಿದ್ದರು.

ರಂಗದಿಗ್ಗಜ ಬಿ.ವಿ.ಕಾರಂತರ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಕಾವೆಂ, ಕಾರಂತರು ಕಟ್ಟಿದ ರಂಗಾಯಣ ಜೊತೆಗೆ ಆತ್ಮೀಯ ಒಡನಾಟವನ್ನು ಹೊಂದಿದ್ದರು. ಕಾರಂತರು ಹಾಗೂ ರಂಗಾಯಣದಿಂದ ಪ್ರಭಾವಿತರಾಗಿ ತಮ್ಮ ಮಗಳು ನಂದಿನಿಯನ್ನು ರಂಗಾಯಣದಲ್ಲಿ ಕಲಾವಿದೆಯನ್ನಾಗಿ ಸೇರಿಸಿ ರಂಗಭೂಮಿಗೆ ಪ್ರತಿಭಾನ್ವಿತ ನಟಿಯನ್ನು ಕೊಡುಗೆಯಾಗಿತ್ತರು. ರಂಗಭೂಮಿ ಕುರಿತ ಹಲವಾರು ಚರ್ಚೆ ಸಂವಾದ ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದರು. ಬೆಂಗಳೂರು ವಿವಿಯ ಡಿಡಿಎಂ ನಿರ್ದೇಶಕರಾಗಿದ್ದಾಗ ಅಲ್ಲಿಯೇ ಒಂದು ಚಿಕ್ಕ ರಂಗಮಂದಿರವನ್ನು ಸ್ಥಾಪಿಸಿ ಹಲವಾರು ನಾಟಕಗಳು ಪ್ರದರ್ಶನವಾಗಲು ಅವಕಾಶ ಮಾಡಿಕೊಟ್ಟಿದ್ದರು. ಹೀಗೆ ಎಲ್ಲಾ ಆಯಾಮಗಳಲ್ಲಿ ರಂಗಭೂಮಿಯನ್ನು ಪ್ರಮೋಟ್ ಮಾಡಲು ಬೆಳೆಸಲು ಕಾವೆಂ ರಾಜಗೋಪಾಲರವರು ತಮ್ಮ ಶಕ್ತಿ ಮೀರಿ ಶ್ರಮಿಸಿದರು. ವಿಪರ್ಯಾಸವೇನೆಂದರೆ ರಂಗಭೂಮಿ, ಸಂಸ್ಕೃತಿ ಇಲಾಖೆ, ಅಕಾಡೆಮಿಗಳು ಕಾವೆಂ ರವರ ಸಾಹಿತ್ಯ ಹಾಗೂ ರಂಗಕೊಡುಗೆಯನ್ನು ಗುರುತಿಸಲಿಲ್ಲ. ಕರೆದು ಸನ್ಮಾನಿಸಲಿಲ್ಲ, ಪ್ರಶಸ್ತಿ ಪುರಸ್ಕಾರಗಳನ್ನು ಕೊಡಮಾಡಲಿಲ್ಲ.. ಹಾಗೂ ಎಂದೂ ಕಾವೆಂ ರವರು ಇವುಗಳನ್ನು ಬಯಸಲೂ ಇಲ್ಲ ಅದಕ್ಕಾಗಿ ಲಾಭಿ ಮಾಡಲೂ ಇಲ್ಲ. ಇದೇ ಅವರ ದೊಡ್ಡತನ ಹಾಗೂ ಸರಕಾರಿ ಇಲಾಖೆಗಳ ದಡ್ಡತನ.

ಎರಡು ದಶಕಗಳ ಹಿಂದೆ ಕವೆಂರವರಿಗೆ 70 ವರ್ಷ ತುಂಬಿದಾಗ ಅವರ ಶಿಷ್ಯರು, ಗೆಳೆಯರು, ಹಿತೈಷಿಗಳೆಲ್ಲಾ ಸೇರಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಸನ್ಮಾನಿಸಿ ಸಂಭ್ರಮವನ್ನು ಆಚರಿಸಿದ್ದರು. ಲಂಕೇಶರವರೇ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕವೆಂ ರವರ ಶಿಷ್ಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು. ಕಾವೆಂರವರ ಸಾಧನೆಯನ್ನು ಅವರ ಅಭಿಮಾನಿಗಳ ಕಣ್ಣಲ್ಲಿ ಅವತ್ತು ಕಾಣಬಹುದಾಗಿತ್ತು. ಜನರ ಪ್ರೀತಿ ವಿಶ್ವಾಸದಲ್ಲಿ ಮಿಂದು ಹೋದ ಕಾವೆಂ ಕಣ್ಣಲ್ಲಿ ಅಂದು ಆನಂದಭಾಷ್ಟ ತೊಟ್ಟಿಕ್ಕಿದ್ದನ್ನು ಈಗಲೂ ಅವರ ಶಿಷ್ಯರು ನೆನಪಿಸಿಕೊಳ್ಳುತ್ತಾರೆ.

ಎಡಪಂಥೀಯ ಕವೆಂ : ಭಾರತೀಯ ಕಮ್ಯೂನಿಸ್ಟ್ ಪಾರ್ಟಿ (ಸಿಪಿಐ) ಹಿತೈಷಿಗಳಾಗಿದ್ದ ಕವೆಂರವರು ಸಿಪಿಐ ಪಕ್ಷದ ಬರಹಗಾರರ ಒಕ್ಕೂಟವಾದ ಪ್ರಗತಿಪರ ಲೇಖಕರ ಸಂಘ ಸದಸ್ಯರಾಗಿದ್ದವರು. ನಿರಂಜನ, ಕಟ್ಟೀಮನಿ ಮುಂತಾದ ಪ್ರಗತಿಶೀಲ ಬರಹಗಾರರ ಜೊತೆ ಸೇರಿ ಎಡಪಂಥೀಯ ವಿಚಾರಧಾರೆಗಳನ್ನು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದರುಸಿಪಿಐ ಸಾಂಸ್ಕೃತಿಕ ಸಂಘಟನೆ ಇಪ್ಟಾ ಪ್ರಭಾವಕ್ಕೆ ಕವೆಂ ಒಳಗಾಗಿದ್ದರು. ಇಂಡಿಯನ್ ಪೀಪಲ್ಸ್ ಥೀಯಟರ್ ಅಸೋಸಿಯೇಶನ್(ಇಪ್ಟಾ) ಎನ್ನುವ ಹೆಸರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಮಲ್ಲೇಶ್ವರಂ ಪೀಪಲ್ಸ್ ಥೀಯಟರ್ ಅಸೋಸಿಯೇಶನ್ ಎನ್ನುವ ರಂಗತಂಡವನ್ನು ಹುಟ್ಟುಹಾಕಿ ಹಲವಾರು ನಾಟಕಗಳನ್ನು ನಿರ್ದೇಶಿಸಿ ಆಡಿಸಿದರು. ಕಾರ್ಮಿಕ ಸಂಘಟನೆಗಳ ಜೊತೆ ಗುರುತಿಸಿಕೊಂಡರು. ಪ್ಯಾಕ್ಟರಿ ಗೇಟ್ಗಳ ಮುಂದೆ ನಾಟಕಗಳನ್ನು ಮಾಡಿಸಿದರು. ಮಲ್ಲೇಶ್ವರಂ ಏರಿಯಾದಲ್ಲಿ ಕವೆಂ ಎಂದರೆ ಕೆಂಬಾವುಟ ಹಿಡಿದವರೆಂದೇ ಅರ್ಥಮಾಡಿಕೊಳ್ಳುವಂತೆ ಕವೆಂ ರವರ ಎಡಪಂಥೀಯ ಪ್ರಖರ ವಿಚಾರದಾರೆ ವ್ಯಾಪಿಸಿತ್ತು. ಎಂದೂ ತಾನೊಬ್ಬ ಕಮ್ಯೂನಿಸ್ಟ್ ಎಂದು ಘೋಷಿಸಿಕೊಳ್ಳದ, ಯಾವುದೇ ಕಮ್ಯೂನಿಸ್ಟ್ ಪಕ್ಷ ಸಂಘಟನೆಗಳ ಆಕ್ಟಿವ್ ಸದಸ್ಯನಾಗಿರದ ರಾಜಗೋಪಾಲರವರು ಕಮ್ಯೂನಿಸ್ಟ್ ಸಿದ್ದಾಂತಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಪರಿ ವಿಸ್ಮಯಕಾರಿಯಾಗಿದೆ.

ಬ್ರಾಹ್ಮಣ್ಯಕ್ಕೆ ತಿಲಾಂಜಲಿ ಇತ್ತ ಕವೆಂ : ಕವೆಂ ರಾಜಗೋಪಾಲರವರು ಹುಟ್ಟಿನಿಂದ ಬ್ರಾಹ್ಮಣರಾದರೂ ಎಂದೂ ಬ್ರಾಹ್ಮಣ್ಯವನ್ನು ಆಚರಿಸಲಿಲ್ಲ. ಪ್ರಗತಿಪರ ಲೇಖಕರ ಸಂಘಕ್ಕೆ ಸೇರಿ ಬ್ರಾಹ್ಮಣ ಆಚರಣೆಗಳನ್ನೆಲ್ಲಾ ವಿರೋಧಿಸಿದರು. ಅದೇ ಹಂತದಲ್ಲೇ ಅವರು ಬ್ರಾಹ್ಮಣ್ಯದ ಕುರುಹಾದ ಜನಿವಾರವನ್ನು ಬಿಚ್ಚಿ ಬಿಸಾಕಿದ್ದು. ಕುಂದಾಪುರ ಆದಿವಾಸಿಗಳ ಕುರಿತು ಅಧ್ಯಯನ ಮಾಡಲು ನಾಯರಿಜೊತೆ ಹೋದಾಗ ದಲಿತರ ಜೊತೆಗೆ ಸಹಪಂಕ್ತಿಯಲ್ಲಿ ಕೋಳಿ ಸಾರಿನ ಊಟ ಮಾಡಿದರು. ಆಧುನಿಕ ಸಮಾಜ ಬಹಿಷ್ಕೃತ ಆದಿವಾಸಿಗಳ ಕುರಿತು ಅವರ ಜೊತೆಯಲ್ಲಿಯೇ ಇದ್ದು ಸಂಶೋಧನೆ ಮಾಡಿದ ಮೊದಲ ಮೇಲ್ವರ್ಗ ವ್ಯಕ್ತಿ ರಾಜಗೋಪಾಲರಾಗಿದ್ದರು ಎಂದು ಗೋಪಾಲಕೃಷ್ಣ ನಾಯರಿಯವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಅಗತ್ಯ ಬಿದ್ದಾಗ ಸಾರ್ವಜನಿಕವಾಗಿ ದಲಿತ ಶೂದ್ರರ ಪರವಾಗಿ ನಿಂತ ಕವೆಂ ಬ್ರಾಹ್ಮಣ್ಯ ಪೀಡಿತರನ್ನು ಶತಾಯ ಗತಾಯ ವಿರೋಧಿಸಿದರು. ಬ್ರಾಹ್ಮಣರು ಅದು ಹೇಗೆ ಆದಿವಾಸಿಗಳನ್ನು, ದಲಿತರನ್ನು ಶೋಷಿಸಿದರು ಎನ್ನುವ ಕುರಿತು ಸವಿವರ ಲೇಖನವನ್ನು  ಬರೆದರು. ನಿಜವಾದ ಅರ್ಥದಲ್ಲಿ ಜ್ಯಾತ್ಯಾತೀತ ಮನೋಭಾವವನ್ನು ಬೆಳಸಿಕೊಂಡ ಕವೆಂ ಮಾನವೀಯತೆ ಇರುವ ಮನುಷ್ಯರಾಗಿದ್ದರು. ಹೀಗಾಗಿಯೇ ಸಮಾಜದ ಆಯಕಟ್ಟಿನಲ್ಲಿರುವ ಬ್ರಾಹ್ಮಣರು ಕವೆಂ ರವರ ಸಾಧನೆಯನ್ನು ಉದ್ದೇಶಪೂರ್ವಕವಾಗಿಯೇ ಉಪೇಕ್ಷಿಸಿದರು. ಅವರಿಗೆ ಯಾವುದೇ ಪ್ರಶಸ್ತಿ ಪುರಸ್ಕಾರ ಅಧಿಕಾರ ಸಿಗದಂತೆ ನೋಡಿಕೊಂಡರು. ಇದೆಲ್ಲವನ್ನೂ ಎಂದೂ ಬಯಸದ ಕವೆಂ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಲೇ ಹೋದರು. ಆಗಿನ ಕಾಲದಲ್ಲಿ ದಲಿತರಿಗೆ ಯಾರೂ ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೊಡುತ್ತಿರಲಿಲ್ಲ. ಆಗ ಬ್ರಾಹ್ಮಣರಾದ ಕವೆಂ ತಮ್ಮ ಕೆಂಗೇರಿ ಉಪನಗರದಲ್ಲಿದ್ದ ಮನೆಯನ್ನು ದಲಿತ ಕವಿ ಸಿದ್ದಲಿಂಗಯ್ಯನವರಿಗೆ ಬ್ಯಾಚಲರ್ ಆಗಿರುವವರೆಗೂ ಎಷ್ಟು ವರ್ಷಗಳ ಕಾಲವಾದರೂ ಮನೆಯಲ್ಲಿ ಇರು ಎಂದರು.   

ಮಾನವೀಯ ಮೌಲ್ಯಗಳ ಕವೆಂ : ಬೇರೆಯವರ ಕಷ್ಟಕ್ಕೆ ಅದು ಹೇಗೆ ಕವೆಂ ಸ್ಪಂದಿಸುತ್ತಿದ್ದರೆಂದರೆ, ಆಗ ಎಂಇಎಸ್ ಕಾಲೇಜಿನ ಮುಖ್ಯಸ್ಥರಾಗಿ ಕೆಲಸಮಾಡುತ್ತಿದ್ದಾಗ ಕೆಲವು ನೌಕರರಿಗೆ ಸರಿಯಾಗಿ ಸಮಯಕ್ಕೆ ಸಂಬಳ ಸಿಗುತ್ತಿರಲಿಲ್ಲ. ತಮ್ಮ ಸಂಬಳವನ್ನು ನಿಜವಾದ ಆರ್ಥಿಕ ಸಮಸ್ಯೆಯಲ್ಲಿರುವ ನೌಕರರಿಗೆ ಹಂಚಿ ಖಾಲಿ ಕೈಯಲ್ಲಿ ಕವೆಂ ಮನೆಗೆ ಹೋಗಿದ್ದನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ. ಕಾಲೇಜಿನ ಪೀಜ್ ಕಟ್ಟಲು ಆಗದೇ ಇರುವ ಹಲವಾರು ವಿದ್ಯಾರ್ಥಿಗಳ ಶುಲ್ಕವನ್ನು ತಮ್ಮ ಕೈಯಿಂದ ಕಟ್ಟಿ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡುತ್ತಿದ್ದ ಕವೆಂ ಎಂದೂ ತಾನು ಮಾಡಿದ ಸಹಾಯವನ್ನು ಹೇಳಿಕೊಂಡವರಲ್ಲ. ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪುಸ್ತಕಗಳು ದೊರೆಯದಿದ್ದಾಗ ತಮ್ಮ ಹೆಸರಿನಲ್ಲಿ ಪುಸ್ತಕಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಓದಲು ಕೊಟ್ಟಿದ್ದಾರೆ. ಕೊನೆಗೆ ಕವೆಂ ರಿಟೈರ್ಡ್ ಆದಾಗ ಲೆಕ್ಕ ಹಾಕಿದರೆ ನೂರಾರು ಪುಸ್ತಕಗಳು ಗ್ರಂಥಾಲಯದಲ್ಲಿ ಬಾಕಿ ಇವೆ. ಕವೆಂ ರವರು ಎಲ್ಲಾ ಪುಸ್ತಕಗಳಿಗೆ ಹಣ ತೆರಬೇಕಾಗಿ ಬಂದಾಗಲೂ ಸಂತಸದಿಂದಲೇ ಕೊಟ್ಟರೇ ಹೊರತು ಪುಸ್ತಕ ಮರಳಿಸದ ವಿದ್ಯಾರ್ಥಿಗಳನ್ನು ದೂರಲಿಲ್ಲ ಅಂತವರಿಂದ ಪುಸ್ತಕ ವಸೂಲಿ ಮಾಡಲಿಲ್ಲ. ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ ಕವೆಂ ಒಂದು ರೀತಿಯಲ್ಲಿ ರಾಣಿಜೇನು ಇದ್ದಹಾಗಿದ್ದರು. ಯಾವಾಗಲೂ ಅವರ ಸುತ್ತಲೂ ವಿದ್ಯಾರ್ಥಿಗಳ ಸಮೂಹ ಮುತ್ತಿಕೊಂಡೇ ಇರುತ್ತಿತ್ತು. ವಿದ್ಯಾರ್ಥಿಗಳಿಗೆ ಅವರು ಬರೀ ಪಾಠವನ್ನು ಮಾತ್ರ ಮಾಡುತ್ತಿರಲಿಲ್ಲ, ಬದುಕಿನ ಪಾಠಗಳನ್ನು ಹೇಳಿಕೊಡುತ್ತಿದ್ದರು ಎಂದು ಕವೆಂ ಶಿಷ್ಯರಾದ ಗೋಪಾಲಕೃಷ್ಣ ನಾಯರಿ ನೆನಪಿಸಿಕೊಳ್ಳುತ್ತಾರೆ. ನಾಟಕದ ತಾಲಿಂ ಮಾಡಲು ಬಂದವರಿಗೆ ಮೊದಲು ಹೊಟ್ಟೆಗೇನಾದರೂ ತಿನ್ನ ಬನ್ನಿ, ಹಸಿದ ಹೊಟ್ಟೆಯಲ್ಲಿ ನಾಟಕ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಎಲ್ಲಾ ಯುವ ಕಲಾವಿದರಿಗೆ ಕಾಫಿ ಟೀ ಕೊಡಿಸಿದ ನಂತರವೇ ನಾಟಕದ ರಿಹರ್ಸಲ್ಸ್ ಮಾಡಿಸಲು ಅನುಮತಿಸುತ್ತಿದ್ದರು. ನಿಜಕ್ಕೂ ಅತ್ಯಂತ ಮಾನವೀಯ ಕಳಕಳಿ ಹೊಂದಿದ ಕವೆಂ ರಾಜಗೋಪಾಲರವರು ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದಾರೆ. ಕೇವಲ ನೇರ ಶಿಷ್ಯರಿಗೆ ಮಾತ್ರವಲ್ಲ ಹಲವಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗುರುಗಳಾಗಿದ್ದಾರೆ.
          ಇಂತಹ ಮಹಾ ಮಾನವತಾವಾದಿ ರಂಗಕರ್ಮಿ ಕೊನೆಕೊನೆಗೆ ವಯೋಸಹಜವಾಗಿ ಅನಗತ್ಯವಾಗಿ ಹೆಚ್ಚೆಚ್ಚು ಮಾತಾಡತೊಡಗಿದರು. ಭಾಷಣಕ್ಕೆ ನಿಂತರೆ ಮುಗಿಸುವ ಮಾತೇ ಇರಲಿಲ್ಲ. ಮಾತಾಡುವುದರಲ್ಲೂ ವಿಷಯಾಂತರಗಳು ಹೆಚ್ಚಾಗಿರುತ್ತಿದ್ದವು. ಅಸಂಬದ್ದ ಮಾತುಗಳು ಕೇಳುಗರಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದ್ದವು. ಕವೆಂ ರವರ ಸಾಧನೆಗಳ ಅರಿವಿಲ್ಲದವರು ಅವರನ್ನು ಅಸಹನೆಯಿಂದ ನೋಡತೊಡಗಿದರು. ಕವೆಂ ಮಾತಿಗೆ ನಿಂತರೆ ಕೆಲವರು ಲೇವಡಿ ಮಾಡತೊಡಗಿದರು. ಇದೆಲ್ಲದರಿಂದಾಗಿ ಇತ್ತೀಚೆಗೆ ಯಾಕೋ ಕವೆಂ ಮಂಕಾಗಿದ್ದರು. ಈಗಿನ ತಲೆಮಾರಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದವರಿಗೆ ಕವೆಂ ರಾಜಗೋಪಾಲರ ಕುರಿತು ಹೆಚ್ಚು ಅರಿವಿರಲಿಲ್ಲ. ಅವರು ತೀರಿಕೊಂಡಾಗ ಇನ್ನೂ ಇಷ್ಟು ವರ್ಷವಾದರೂ ಅವರು ಬದುಕಿದ್ದರಾ? ಎಂದು ಅಚ್ಚರಿ ವ್ಯಕ್ತಪಡಿಸಿದ ಅಜ್ಞಾನಿಗಳೂ ಇರುವುದು ವಿಪರ್ಯಾಸ. ಕವೆಂ ಯಾರು? ಅವರ ಬದುಕು ಸಾಧನೆ ಏನು? ರಂಗಭೂಮಿಗೆ ಅವರ ಕೊಡುಗೆ ಎಂತಹುದು ಎನ್ನುವುದನ್ನು ಈಗಿನ ತಲೆಮಾರಿಗೆ ತಿಳಿಸುವ ಕೆಲಸವನ್ನು ಪುಸ್ತಕದ ಮೂಲಕ, ಕಾರ್ಯಕ್ರಮಗಳ ಮೂಲಕ ಸರಕಾರಿ ಇಲಾಖೆ ಅಕಾಡೆಮಿಗಳು ಇಲ್ಲವೆ ಕೆಲವು ಸಂಘ ಸಂಸ್ಥೆಗಳು ಮಾಡಬೇಕಾಗಿತ್ತು. ಇದ್ದಾಗ ಮಾಡಲಾಗದ್ದನ್ನು ಈಗಲಾದರೂ ಜಾರಿಗೆ ತರಬೇಕು. ರಂಗಸಂಪನ್ನರು ಮಾಲಿಕೆಯಲ್ಲಿ ನಾಟಕ ಅಕಾಡೆಮಿ ಕವೆಂ ಸಮಗ್ರ ಸಾಧನೆ ಕುರಿತು ಪುಸ್ತಕವೊಂದನ್ನು ಹೊರತಂದು ಕಲಾವಿದರಿಗೆ ತಲುಪಿಸಬೇಕು. ಅವರ ಹೆಸರಲ್ಲಿ ನಾಟಕೋತ್ಸವಗಳನ್ನು ಆಯೋಜಿಸಬೇಕು. ವಿಚಾರ ಸಂಕಿರಣಗಳನ್ನು ಏರ್ಪಡಿಸಬೇಕು. ಆದರೆ ಕಾವೆಂರಂತಹ ರಂಗಸಾಧಕರು ತೀರಿಕೊಂಡಾಗ ಶ್ರದ್ದಾಂಜಲಿ ಸಭೆಯನ್ನು ಸಹ ನಡೆಸದ ನಾಟಕ ಅಕಾಡೆಮಿಯಿಂದ ಇದೆಲ್ಲವನ್ನೂ ನಿರೀಕ್ಷಿಸಲು ಸಾಧ್ಯವಾ? ಹಾಗಾದರೆ ರಂಗಭೂಮಿಗಾಗಿ ದುಡಿದ ವ್ಯಕ್ತಿಯ ಶ್ರಮಕ್ಕೆ ಬೆಲೆ ಇಲ್ಲವಾ? ರಂಗಭೂಮಿ ಕೆಲಸವೆಂದರೆ ಥ್ಯಾಂಕಲೆಸ್ ಕಾರ್ಯವಾ? ಇದ್ದಾಗಂತೂ ಯಾವುದೇ ಸನ್ಮಾನ ಪ್ರಶಸ್ತಿ ಪುರಸ್ಕಾರಗಳ ಭಾಗ್ಯ ಕವೆಂ ರವರಿಗೆ ಸಿಗಲಿಲ್ಲ. ಈಗ ಅವರು ಮಡಿದ ನಂತರವಾದರೂ ಅವರನ್ನು ನೆನಪಿಸಿಕೊಳ್ಳುವಂತಹ ಕಾರ್ಯಕ್ರಮಗಳು ಆಗಲಿ ಎನ್ನುವುದೊಂದೆ ಕಾವೆಂ ಅಭಿಮಾನಿಗಳ ಆಶಯವಾಗಿದೆ

                                 -ಶಶಿಕಾಂತ ಯಡಹಳ್ಳಿ     


 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ