ಭಾನುವಾರ, ಅಕ್ಟೋಬರ್ 12, 2014

“ಕೀರ್ತಿಶೇಷಳಾದ ರಂಗಕಲಾವಿದೆ ಕೀರ್ತಿಭಟ್”





ಬೆಂಗಳೂರಿಗೆ ಅಪಾರ ಅಪೇಕ್ಷೆಗಳನ್ನಿಟ್ಟುಕೊಂಡು ಬಂದ ಯುವಕಲಾವಿದೆ ಕೀರ್ತಿಭಟ್. ಕೆಲವಾರು ನಿರೀಕ್ಷೆಯನ್ನು ಹುಟ್ಟಿಸಿ ಹಲವು ರಂಗತಂಡಗಳಿಗೆ ನಿರಾಶೆಯನ್ನುಂಟುಮಾಡಿ ಅನಿರೀಕ್ಷಿತವಾಗಿ ಮರಳಿಬಾರದೂರಿಗೆ ಹೊರಟಿದ್ದು ಸಂಕಟದ ಸಂಗತಿ. ಸಾವಿನಿಂದ ಯಾರಿಗೂ ವಿನಾಯಿತಿಯೆಂಬುದಿಲ್ಲ. ಆದರೆ ಮೃತ್ಯು ಎಂಬುದು ಬದುಕಿನ ಅಂತ್ಯದಲ್ಲಿ ಬರದೇ ಮೂವತ್ತರ ಹರೆಯದರಲ್ಲಿ ಬಂದರದು ನಿಜಕ್ಕೂ ತಲ್ಲಣದ ವಿಷಯ. ಬಾಳ ಬುತ್ತಿಯಲ್ಲಿ ಬರೀ ನೋವುಂಡು ಇನ್ನೇನು ನೆಮ್ಮದಿಯ ಬದುಕು ಕಾಣುವ ಹೊತ್ತಿನಲ್ಲಿ ಕೀರ್ತಿ ಅಕಾಲ ಮರಣವನ್ನಪ್ಪಿದ ಸುದ್ದಿ ಕೆಲವರ ಹೃದಯ ಹಿಂಡಿದ್ದಂತು ಸತ್ಯ.

ಅಂದು 2014, ಅಕ್ಟೋಬರ್ 2. ರವೀಂದ್ರ ಕಲಾಕ್ಷೇತ್ರದಲ್ಲಿ ಗಾಂಧಿಬಂದ ನಾಟಕದ ಪ್ರದರ್ಶನ. ನಾಟಕದಲ್ಲಿ ಒಂದು ಪೋಷಕ ಪಾತ್ರ ಬರುತ್ತದೆ, ಅದರ ಹೆಸರು ಪುಟ್ಟಮ್ಮಕ್ಕ. ಪಾತ್ರ ನಿರ್ವಹಿಸಿದ ಕೀರ್ತಿಭಟ್ ಜ್ವರದಿಂದ ಬಳಲುತ್ತಿದ್ದು. ಗ್ರೀನ್ ರೂಂ ನಲ್ಲಿ  ಕೆಲಹೊತ್ತು ಮಂಕಾಗಿ ಕುಳಿತಿದ್ದರು. ಆದರೆ ತನ್ನ ಪಾತ್ರದ ಸರದಿ ಬಂದಾಗ ಏನೂ ಆಗಿಲ್ಲವೇನೋ ಎಂದು ರಂಗವೇದಿಕೆ ಪ್ರವೇಶಿಸಿ ಸೊಗಸಾಗಿ ಪಾತ್ರವನ್ನು ಅಭಿನಯಿಸಿ ನಾಟಕ ಮುಗಿಯುತ್ತಿದ್ದಂತೆ ಮನೆಗೆ ಹೊರಟಿದ್ದರು. ರಂಗಮಂಟಪ ರಂಗತಂಡದ ಯಾರೆಂದರೆ ಯಾರಿಗೂ ಕೀರ್ತಿಭಟ್ ಅನಾರೋಗ್ಯದ ಸುಳಿವಿರಲಿಲ್ಲ. ಮೈಯಲ್ಲಿ ಸೊಗಸಿರದಿದ್ದರೂ ನಾಟಕ ಪ್ರದರ್ಶನದ ಹಿಂದಿನ ಎರಡು ದಿನಗಳ ಕಾಲ ರಿಹರ್ಸಲ್ಗೆ ತಪ್ಪದೇ ಬಂದು ಭಾಗವಹಿಸಿದ್ದಾಗಲೂ ಯಾರಿಗೂ ಒಂದಿನಿತೂ ಸುಳಿವು ಸಿಕ್ಕಿರಲಿಲ್ಲ. ಎಲ್ಲರಿಗೂ ಆಘಾತವಾಗಿದ್ದು ಅಕ್ಟೋಬರ್ 5 ರಾತ್ರಿ ಕೀರ್ತಿಭಟ್ ತೀರಿಕೊಂಡಿದ್ದಾರೆಂಬ ಸುದ್ದಿ ತಿಳಿದಾಗಲೇ. ಅಯ್ಯೋ! ಏನಾಯಿತು? ಎಂದು ಕೇಳಿದವರಿಗೆ ಸಿಕ್ಕ ಉತ್ತರ ಅರಗಿಸಿಕೊಳ್ಳಲಾಗದಂತಹುದು. ಯಾಕೆಂದರೆ ಇನ್ನೂ ಅರ್ಧಶತಮಾನಕ್ಕೂ ಹೆಚ್ಚು ಕಾಲ ಬಾಳಿ ಬದುಕಬೇಕಾದ ಕಲಾವಿದೆ ಕೀರ್ತಿಭಟ್ರನ್ನು ಕೊಂದಿದ್ದು ಒಂದು ಯಕ್ಕಶ್ಚಿತ್ ಸೊಳ್ಳೆ.

ಹೌದು! ಕೀರ್ತಿಗೆ ಬಂದಿದ್ದು ಮಾಮೂಲಿ ಜ್ವರವಲ್ಲ ಅದು ಡೆಂಗ್ಯೂ ಜ್ವರ. ಆರಂಭದಲ್ಲೇ ಗುರುತಿಸಿ ಶೀಘ್ರವಾಗಿ ಚಿಕಿತ್ಸೆ ಕೊಡಿಸಿದ್ದರೆ ಕೀರ್ತಿ ರಂಗಭೂಮಿಗೆ ದಕ್ಕುತ್ತಿದ್ದರು. ಆದರೆ ಕೇವಲ ಮಾಮೂಲಿ ಜ್ವರ ತಾನೆ ಹೋಗುತ್ತೆ ಬಿಡು ಎಂಬ ನಿರ್ಲಕ್ಷ ಹಾಗೂ ಒಪ್ಪಕೊಂಡ ನಾಟಕದ ತಾಲಿಂ ಕೆಲಸಗಳಿಂದಾಗಿ ಕೀರ್ತಿ ಇವತ್ತು ಕೀರ್ತಿಶೇಷರಾಗಬೇಕಾದದ್ದು ಅತ್ಯಂತ ಬೇಸರದ ಸಂಗತಿ. ನಿಜವಾದ ಕಲಾವಿದರಿಗೊಂದು ವಿಚಿತ್ರ ನಿಷ್ಟೆ ಇರುತ್ತದೆ. ನಾಟಕದ ಕೆಲಸದಲ್ಲಿ ತೊಡಗಿಕೊಂಡರೆ ಊಟ ನಿದ್ದೆ ಆರೋಗ್ಯದ ಬಗ್ಗೆ ಲಕ್ಷವೇ ಇರುವುದಿಲ್ಲ. ಮೊದಲು ನಾಟಕ ನಂತರ ಎಲ್ಲವೂ ಎನ್ನುವ ಬದ್ದತೆಯಿಂದಾಗಿ ಆರೋಗ್ಯವನ್ನು ನಿರ್ಲಕ್ಷಿಸಿದ ಹಲವಾರು ಕಲಾವಿದರು ನೋವು ಸಾವನ್ನು ಅನುಭವಿಸಿದ್ದಾರೆ. ಅದೇ ಹಾದಿಯಲ್ಲಿ ಕೀರ್ತಿನಡೆಯುತ್ತಾರೆಂಬ ಸಣ್ಣ ಗುಮಾನಿಯೂ ಯಾರಿಗೂ ಇಲ್ಲವಾಯಿತು. ಕೀರ್ತಿಯ ನಿರ್ಲಕ್ಷದಿಂದಾಗಿ ಇಂದು ಅವರ ಎರಡು ಮಕ್ಕಳು ಅನಾಥವಾಗಬೇಕಾಯಿತು. ಕೀರ್ತಿಗೆ ಡೆಂಗ್ಯೂ ಎಂದು ರಿಪೋರ್ಟ ಬಂದಿದ್ದೆ 4ನೇ ತಾರೀಕಿನಂದು, ಐಸಿಯುನಲ್ಲಿಟ್ಟು ಟ್ರೀಟಮೆಂಟ್ ಕೊಡಿಸಿದರೂ 24 ಗಂಟೆಯೊಳಗೆ ಇಲ್ಲವಾಗಿದ್ದರು. ಕೀರ್ತಿ ಪತಿಗೆ ಅದೇನು ತರಾತುರಿ ಇತ್ತೋ ಏನೋ, ಯಾವುದೇ ರಂಗಭೂಮಿ ಕಲಾವಿದರಿಗೊಂದು ಸಣ್ಣ ಸುದ್ದಿಯನ್ನು ಕೊಡದೇ ಆತುರಾತುರದಲ್ಲಿ ಕೀರ್ತಿಯ ಪಾರ್ಥಿವ ಶರೀರವನ್ನು ಉಜಿರೆಗೆ ತೆಗೆದುಕೊಂಡು ರಾತ್ರೋ ರಾತ್ರಿ ಹೊರಟು ಹೋಗಿಬಿಟ್ಟಿದ್ದರು. ಬೆಂಗಳೂರಿನ ಕಲಾವಿದರಿಗೆ, ರಂಗತಂಡದವರಿಗೆ ಕೊಟ್ಟ ಕೊನೆಯದಾಗಿ ಕಲಾವಿದೆಯ ಮುಖ ನೋಡುವ ಭಾಗ್ಯವನ್ನೂ ಸಹ ಒದಗಿಸಿಕೊಡದಿರುವುದು ಬೇಸರದ ಸಂಗತಿ.

ಕೀರ್ತಿಭಟ್ರವರ ಸಾವಿನ ಸುದ್ದಿ ತಿಳಿದು ತಲ್ಲಣಗೊಂಡ ಕೃಷ್ಣಮೂರ್ತಿ ಕವತಾರರು ನನಗೆ ಬದುಕಲು ಇನ್ನೊಂದು ಸೆಕೆಂಡ್ ಇನ್ನಿಂಗ್ಸಾದರೂ ದೊರೆಯಿತು, ಪಾಪ ಯುವ ಕಲಾವಿದೆಗ್ಯಾಕೆ ಇನ್ನೊಂದು ಅವಕಾಶ ಸಿಗಲಿಲ್ಲ ಎಂದು ದುಃಖವಾಯಿತು ಎಂದು ನೊಂದುಕೊಂಡು ನುಡಿದರು. ಯಾಕೆಂದರೆ ನಿರಂತರ ರಂಗಚಟುವಟಿಕೆಗಳಿಂದಾಗಿ ತಮ್ಮ ಆರೋಗ್ಯದ ಬಗ್ಗೆ ತುಂಬಾ ನಿರ್ಲಕ್ಷವಹಿಸಿದ್ದರಿಂದ ಕವತಾರರವರು ಹೃದಯಾಘಾತಕ್ಕೊಳಗಾಗಬೇಕಾಯಿತು. ಅದಾದನಂತರ ಈಗ ಆರೋಗ್ಯದ ಕುರಿತು ಹೆಚ್ಚೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದರೆ ಒಂದಿಷ್ಟು ನಿರ್ಲಕ್ಷ ವಹಿಸಿದ್ದಕ್ಕಾಗಿ ಕೀರ್ತಿಭಟ್ರವರಿಗೆ ಕಾಲ ಬದುಕುವ ಅವಕಾಶವನ್ನೇ ಕಿತ್ತುಕೊಂಡಿತು.

ಅನಭಿಜ್ಞ ಶಾಕುಂತಲ ನಾಟಕದ ಮಲ್ಲಿಕಾ ಪಾತ್ರದಲ್ಲಿ ಕೀರ್ತಿ
ಧರ್ಮಸ್ಥಳದ ಪಕ್ಕದ ಉಜರೆಯಿಂದ ಬೆಂಗಳೂರಿಗೆ ಹತ್ತು ವರ್ಷಗಳ ಹಿಂದೆ ಬದುಕು ಅರಿಸಿಕೊಂಡು ಬಂದಿದ್ದು ಕೀರ್ತಿಭಟ್ ಕುಟುಂಬ. ಕೀರ್ತಿಯವರ ಪತಿ ಮನೋಹರ್ ಉಜಿರೆಯಲ್ಲಿ ವಿಡಿಯೋ ಶಾಪ್ ಇಟ್ಟುಕೊಂಡಿದ್ದವರು. ಯಾವಾಗ ವಿಡಿಯೋ ವ್ಯಾಪಾರ ನಡೆಯದಾಯಿತೋ ಆಗ ಬೆಂಗಳೂರಿನಲ್ಲಿ ಏನಾದರೂ ಬಿಸಿನೆಸ್ ಮಾಡಿ ಮುಂದೆ ಬರಬೇಕೆಂದು ರಾಜಧಾನಿಗೆ ಬಂದರು. ಮನೋಹರರವರು  ಟ್ರಾವೆಲ್ಸನಿಂದ ಹಿಡಿದು ಹಲವಾರು ಬಿಸಿನೆಸ್ ಮಾಡಿದರೂ ಯಾವುದರಲ್ಲೂ ಯಶಸ್ಸು ಸಿಗಲಿಲ್ಲ. ದೊಡ್ಡಮಗನ ಓದಿಗೆ. ಒಂಚೂರು ಬುದ್ದಿಮಾಂದ್ಯನಾದ ಚಿಕ್ಕಮಗನ ಚಿಕಿತ್ಸೆಗೆ ಹಣದ ಅವಶ್ಯಕತೆ ತುಂಬಾ ಇತ್ತು. ಇಡೀ ಕುಟುಂಬ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಹೇಗಾದರೂ ಮಾಡಿ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಬೇಕೆಂದು ನಿರ್ಧರಿಸಿದ ಕೀರ್ತಿರವರನ್ನು ಆಕರ್ಷಿಸಿದ್ದು ಟಿವಿ ಸೀರಿಯಲ್ಗಳು. ಸೀರಿಯಲ್ನಲ್ಲಿ ಅವಕಾಶ ಪಡೆಯಲು ಪರಿಚಯಸ್ತರಿಂದ ಪ್ರಯತ್ನವನ್ನೂ ಪಟ್ಟರು. ಹೀಗೆ ಸೀರಿಯಲ್ ಒಂದಕ್ಕೆ ಆಡಿಶನ್ಗೆ ಹೋದಾಗ ಯಾರೋ ಒಬ್ಬರು ಮೊದಲು ಒಂದಿಷ್ಟು ನಾಟಕಗಳನ್ನು ಮಾಡಿ ನಟನೆ ಕಲಿತುಕೊಂಡು ಬನ್ನಿ, ನಂತರ ಸೀರಿಯಲ್ನಲ್ಲಿ ಪಾತ್ರ ಮಾಡುವಿರಂತೆ ಎಂದು ಹೇಳಿದಾಗ ಕೀರ್ತಿ ತನ್ನ ಗಮನ ಹರಿಸಿದ್ದು ನಾಟಕದ ಕಡೆಗೆ. ಬಹುಷಃ ಕೀರ್ತಿ ಮಾಡಿದ ಮೊದಲ ನಾಟಕ ಮೈಕೋ ಶಿವಶಂಕರರ ನಿದೇಶನದ ಅಂತಿಗೊನೆ, ನಂತರ ಕವತ್ತಾರ್ ನಿರ್ದೇಶನದ ಶ್ರಾದ್ದ ಮತ್ತು ಮೂಜು ಮಟ್ಟು ಮೂಜು ಲೋಕ ನಾಟಕಗಳಲ್ಲಿ ಪಾತ್ರ. ಮಾಲತೇಶ ಬಡಿಗೇರ್ ನಿರ್ದೇಶನದ ಮದುವೆ ಹೆಣ್ಣು ನಾಟಕದಲ್ಲಿ ಮದುವೆ ಹೆಣ್ಣಿನ ಪಾತ್ರ, ಸೂರ್ಯಶಿಕಾರಿಯಲ್ಲಿ ಮಹಾಶ್ವೇತೆ, ಸ್ಮಶಾನ ಕುರುಕ್ಷೇತ್ರದಲ್ಲಿ ಹೆಂಗಸು, ಗಿರಿಜಾಕಲ್ಯಾಣದಲ್ಲಿ ತಾಯಿ, ಪ್ರಕಾಶ ಶೆಟ್ಟಿಯವರ ನಿರ್ದೇಶನದ ಅನಭಿಜ್ಞ ಶಾಕುಂತಲೆಯಲ್ಲಿ ಮಲ್ಲಿಕಾ, ಚಂಪಾ ಶೆಟ್ಟಿರವರ ಗಾಂಧಿ ಬಂದ ನಾಟಕದಲ್ಲಿ ಪುಟ್ಟಮ್ಮಕ್ಕ.... ಹೀಗೆ ಹಲವಾರು ನಾಟಕಗಳಲ್ಲಿ ನಟಿಸಿದ ಕೀರ್ತಿ ಅವಕಾಶ ಸಿಕ್ಕಾಗಲೆಲ್ಲಾ ಸಿನೆಮಾ, ಟಿವಿ ಸೀರಿಯಲ್ಗಳಲ್ಲೂ ಸಹ ಅಭಿನಯಿಸುತ್ತಿದ್ದರು. ಸುಕನ್ಯಾ, ಮಾಂಗಲ್ಯ, ರಾಘವೇಂದ್ರ ವೈಭವ, ಪುಣ್ಯಕೋಟಿ... ಹೀಗೆ ಕೆಲವಾರು ದಾರವಾಹಿಗಳಲ್ಲಿ ಅಭಿನಯಿಸಿದ್ದರುನಾಗತಿಹಳ್ಳಿ ಚಂದ್ರಶೇಖರರನೂರು ಜನ್ಮಕು’, ಜಗ್ಗೇಶ ಅಭಿನಯದಲಿಪ್ಟ್ ಕೊಡ್ಲಾ’... ಸಿನೆಮಾಗಳಲ್ಲೂ ಸಹ ನಟಿಸಿದ್ದರು.    
  
ತುಂಬಾ ಮೆದು ಸ್ವಭಾವದ, ಅತ್ಯಂತ ಅಂತರ್ಮುಖಿಯಾದ ಕೀರ್ತಿಭಟ್ ಎಂದೂ ಯಾರ ಮುಂದೆಯೂ ತಮ್ಮ ಕೌಟುಂಬಿಕ ಕಷ್ಟವನ್ನು ಹೇಳಿಕೊಂಡವರಲ್ಲ, ಹಣಕಾಸಿನ ಸಮಸ್ಯೆಯ ಬಗ್ಗೆ ದೂರಿದವರೂ ಅಲ್ಲ. ಕಷ್ಟಸುಖ ಹಂಚಿಕೊಂಡವರೂ ಅಲ್ಲ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿಯೇ ಇದೆ ಎನ್ನುವಂತೆಯೇ ವರ್ತಿಸುತ್ತಿದ್ದರು. ಬಿಗಡಾಯಿಸುತ್ತಿದ್ದ ಮನೆಯ ಆರ್ಥಿಕ ಸಮಸ್ಯೆಗೆ ಬೆನ್ನೆಲುಬಾಗಿ ನಿಂತರು. ಅದೆಷ್ಟೇ ಹಣಕಾಸಿನ ಸಮಸ್ಯೆಯಿದ್ದರೂ ಸಹ ಎಂದೂ ಯಾವುದೇ ತಂಡವನ್ನು ಇಂತಿಷ್ಟೇ ಹಣ ಕೊಡಿ ಎಂದು ಒತ್ತಾಯಿಸಲಿಲ್ಲ. ಕೊಟ್ಟಷ್ಟು ತೆಗೆದುಕೊಂಡು ನಗುನಗುತ್ತಲೇ ಮನೆಗೆ ಹೋಗುತ್ತಿದ್ದ ಕೀರ್ತಿಯ ನಡೆ ನುಡಿಯ ಬಗ್ಗೆ ಅವರು ನಟಿಸಿದ ಎಲ್ಲಾ ತಂಡಗಳ ಕಲಾವಿದರು ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ಹಿಂಜರಿಕೆಯ ಸಂಕೋಚ ಸ್ವಭಾವ, ಬೆಂಗಳೂರಿನ ಭಾಷೆಯ ಮೇಲೆ ಸಿಗದ ಹಿಡಿತ, ಅಸಾಧ್ಯವಾದ ಸ್ವಾಭಿಮಾನಗಳು ಕೀರ್ತಿಭಟ್ರವರ ದೌರ್ಬಲ್ಯಗಳಾಗಿದ್ದವು. ಸಮಯಪ್ರಜ್ಞೆ, ಕಮಿಟ್ಮೆಂಟ್, ಶಿಸ್ತು, ಸಂಯಮಗಳು ಅವರ ಶಕ್ತಿಯಾಗಿತ್ತುಒಂದು ಸಲ ಒಂದು ನಾಟಕಕ್ಕೆ ಕಮಿಟ್ ಆದರೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ರಂಗಸಂಘಟಕರಿಗೆ ತೊಂದರೆ ಕೊಡುತ್ತಿರಲಿಲ್ಲ, ಎಂದೂ ರಿಹರ್ಸಲ್ಸಗಳಿಗೆ ಚಕ್ಕರ್ ಕೊಡುತ್ತಿರಲಿಲ್ಲ. ತಮಗೆ ಬೇರೆ ಕಮಿಟ್ಮೆಂಟ್ಗಳಿದ್ದರೆ ಮೊದಲೇ ಸಂಬಂದಪಟ್ಟವರಿಗೆ ತಿಳಿಸುವ ಬದ್ದತೆಯನ್ನು ಕೀರ್ತಿ ಹೊಂದಿದ್ದರು. ತನ್ನಿಂದ ಯಾವುದೇ ರಂಗತಂಡಕ್ಕೂ ತೊಂದರೆಯಾಗಬಾರದು ಎನ್ನುವುದು ಕೀರ್ತಿಯ ಆಶಯವಾಗಿತ್ತು. ಎಂದೂ ಯಾರಿಗೂ ಯಾವುದೇ ಕಾರಣಕ್ಕೂ ತೊಂದರೆ ಕೊಡದ, ಇದೀಗ ತಾನೆ ಅರಳುತ್ತಿರುವ ಕಲಾಜೀವವೊಂದು ಹೀಗೆ ಇದ್ದಕ್ಕಿದ್ದಂಗೆ ನಿರ್ಗಮಿಸಿದ್ದು ಆಘಾತಕರವಾಗಿದೆ. ಕಮಿಟೆಡ್ ಕಲಾವಿದೆಯರ ಕೊರತೆಯನ್ನು ಹೊಂದಿರುವ ರಂಗಭೂಮಿಗೆ ಕೀರ್ತಿಭಟ್ ರವರ ಅಗಲಿಕೆ ಒಂದು ದೊಡ್ಡ ನಷ್ಟ ಎಂದೇ ಹೇಳಬೇಕು.

ಅಕ್ಟೋಬರ್ 11 ರಂದು ಬೆಂಗಳೂರಿನ ಯುವ ರಂಗ ಕಲಾವಿದರು (ಹಿರಿಯ ರಂಗಕರ್ಮಿಗಳ ಅನುಪಸ್ಥಿತಿಯಲ್ಲಿ) ರವೀಂದ್ರ ಕಲಾಕ್ಷೇತ್ರದ ತಾಲಿಂ ಕೊಠಡಿಯಲ್ಲಿ ಕೀರ್ತಿಭಟ್ರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಏರ್ಪಡಿಸಿದ್ದರು. ಕೀರ್ತಿಭಟ್ ಅಭಿನಯಿಸಿದ ಬಹುತೇಕ ರಂಗತಂಡಗಳ ಕಲಾವಿದರುಗಳು ಒಟ್ಟು ಸೇರಿ ಅಗಲಿದ ಕಲಾವಿದೆಯನ್ನು ನೆನಪಿಸಿಕೊಂಡರು. ಕೀರ್ತಿಭಟ್ರವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದಿಷ್ಟು ಹಣವನ್ನು ಸಂಗ್ರಹಿಸಿಕೊಡುವ ನಿರ್ಧಾರವನ್ನೂ ಮಾಡಲಾಯಿತು. ನಾಟಕಕಾರ ಡಾ.ಕೆ.ವಿ.ನಾರಾಯಣಸ್ವಾಮಿರವರು ಐದು ಸಾವಿರ ಹಣ ಕೊಡುವುದಾಗಿ ಘೋಷಿಸಿದರು. ಇನ್ನೂ ಕೆಲವರು ತಮ್ಮ ಶಕ್ತಾನುಸಾರ ಹಣವನ್ನೂ ಕೊಟ್ಟರು. ಮತ್ತೆ ಕೆಲವರು ಹಣಕಾಸಿನ ಸಹಾಯ ಮಾಡುತ್ತೇವೆಂದೂ ಮಾತುಕೊಟ್ಟರು. ಕೀರ್ತಿಭಟ್ರವರ ಹೆಸರಲ್ಲಿ ನಾಟಕೋತ್ಸವ ಮಾಡಿ ಒಂದಿಷ್ಟು ಹಣ ಸಂಗ್ರಹಿಸಿ ಕಲಾವಿದೆಯ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವ ಆಶಯಗಳೂ ವ್ಯಕ್ತವಾದವು. ಮೊದಲು ಇಂತಹ ಕೆಲಸಗಳಾಗಬೇಕಿವೆ. ಕಲಾವಿದರ ಸಹಕಾರಿ ಸಂಘವೊಂದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ. ಕೀರ್ತಿಭಟ್ ಅದಕ್ಕೆ ಸದಸ್ಯರೂ ಆಗಿದ್ದಾರೆ. ತಕ್ಷಣ ಸಂಘವು ಕೀರ್ತಿಭಟ್ರವರ ಕುಟುಂಬಕ್ಕೆ ನೆರವಾಗಬೇಕಿದೆ. ಈ ಕಲಾವಿದೆಯ ಎರಡು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಳ್ಳಬಯಸುವ ಸಹೃದಯ ದಾನಿಗಳು ಮುಂದೆ ಬರಬೇಕಿದೆ. ಕೀರ್ತಿಭಟ್ ನಟಿಸಿದ ರಂಗತಂಡಗಳೆಲ್ಲಾ ಒಂದಾಗಿ ಹೋಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಕಲಾವಿದರ ಕಲ್ಯಾಣ ನಿಧಿಯಿಂದ ಹಣ ಬಿಡುಗಡೆ ಮಾಡಲು ನಿರ್ದೇಶಕ ದಯಾನಂದರವರನ್ನು ಒತ್ತಾಯಿಸಬೇಕಿದೆ.

ಗೊತ್ತು ಗುರಿಯಿಲ್ಲದೆ ಯಾರು ಯಾರಿಗೋ ಹಣ ಹಂಚುವುದನ್ನೇ ಕಾಯಕ ಮಾಡಿಕೊಂಡಿರುವ ನಿಷ್ಕ್ರೀಯ ಕರ್ನಾಟಕ ನಾಟಕ ಅಕಾಡೆಮಿಯ ಅದಕ್ಷರನ್ನು ಘೆರಾವ್ ಹಾಕಿಯಾದರೂ ಅಗಲಿದ ಕಲಾವಿದೆಯ ಕುಟುಂಬಕ್ಕೆ ಹಣಕಾಸಿನ ಸಹಕಾರವನ್ನು ಒದಗಿಸಲು ಒತ್ತಡ ತರಬೇಕಿದೆ. ಕಲಾವಿದರಿದ್ದರೆ ರಂಗಭೂಮಿ, ರಂಗಭೂಮಿ ಇದ್ದರೆ ನಾಟಕ ಅಕಾಡೆಮಿ ಎನ್ನುವುದನ್ನು ನೆನಪಿಸಬೇಕಿದೆ. ಕಲಾವಿದರ ಸಂಕಷ್ಟಕ್ಕೆ ಮಿಡಿಯದ ಅಕಾಡೆಮಿ ಇದ್ದರೆಷ್ಟು ಬಿಟ್ಟರೆಷ್ಟು. ಕಲಾವಿದೆ ಕೀರ್ತಿಭಟ್ರವರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿಕೊಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಮಂತ್ರಿಣಿಯಾದ ಉಮಾಶ್ರೀಯವರನ್ನು ರಂಗಕರ್ಮಿಗಳು ಒತ್ತಾಯಿಸಬೇಕಾಗಿದೆ. ಯಾವುದೇ ರಂಗಕಲಾವಿದರು ಅಗಲಿದರೂ ಅವರಿಗೆ ಕೂಡಲೇ ಆರ್ಥಿಕ ಸಹಾಯ ದೊರೆಯುವಂತಹ ಒಂದು ವ್ಯವಸ್ಥೆ ರೂಪಗೊಳ್ಳಬೇಕಿದೆ. ರೀತಿಯ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದರೆ ಅದು ಕೀರ್ತಿಭಟ್ರವರಿಗೆ  ರಂಗಕರ್ಮಿಗಳು ಸಲ್ಲಿಸಬಹುದಾದ ನಿಜವಾದ ಶ್ರದ್ದಾಂಜಲಿಯಾಗಿದೆ.  

                                -ಶಶಿಕಾಂತ ಯಡಹಳ್ಳಿ          
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ