ಬುಧವಾರ, ಸೆಪ್ಟೆಂಬರ್ 24, 2014

“ರಾವಣ ದರ್ಶನ " : ಹೀಗೊಂದು ವಿಭಿನ್ನ ಪ್ರಯೋಗ










ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಪ್ರಮುಖ ಖಳನಾಯಕ ಪಾತ್ರಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ. ರಾಮಾಯಣದ ರಾವಣ, ಮಹಾಭಾರತದ ದುರ್ಯೊಧನರು ಪ್ರತಿಪಾತ್ರಗಳಾಗಿ ಕವಿಗಳ ಪರಿಕಲ್ಪನೆಗಳಲ್ಲಿ ಖಳನಾಯಕರಾಗಿ ಮೂಡಿಬಂದಿದ್ದಾವೆ. ಒಳಿತು ಕೆಡಕುಗಳ ನಡುವಿನ ಸಂಘರ್ಷದಲ್ಲಿ ಒಳಿತಿಗೆ ಜಯವಾಗಬೇಕು ಹಾಗೂ ಶಿಷ್ಟರಕ್ಷಕ ದೇವರಾಗಬೇಕು ಮತ್ತು ಜನರು ದೇವರಾದವರನ್ನು ಭಯಭಕ್ತಿಯಿಂದ ಆರಾಧಿಸಬೇಕು ಎನ್ನುವ ವೈದಿಕ ಧರ್ಮ ಪರಂಪರೆಯ ಬೆನ್ನೆಲುಬಾಗಿ ಋಷಿಮುನಿಗಳಿಂದ ನಮ್ಮ ಮಹಾಕಾವ್ಯಗಳು ರೂಪಗೊಂಡವು ಎನ್ನುವುದು ಮೇಲ್ನೋಟಕ್ಕೆ ಅರಗಿಸಿಕೊಳ್ಳಲಾಗದ ಸತ್ಯ.  ಆದರೆ ಪಾತ್ರಗಳ ಆಯಾ ಕಾಲಘಟ್ಟದ ಪರಿಸ್ಥಿತಿ ಹಾಗೂ ಆಗಿನ ಆಚಾರ ವಿಚಾರಗಳನ್ನು ವಸ್ತುನಿಷ್ಟ ವಿಮರ್ಶೆಗೆ ಒಳಪಡಿಸಿದರೆ ರಾಮ ಕೃಷ್ಣಾದಿ ಪಾತ್ರಗಳು ತಮ್ಮ ದೈವತ್ವದ ಉದಾತ್ತ ಸಿದ್ದಾಂತ ಪ್ರತಿಪಾದನೆಗಾಗಿ (ಕು)ತಂತ್ರಗಳನ್ನು ಹೆಣೆಯುವುದು ಹಾಗೂ ರಾವಣ-ದುರ್ಯೊಧನಾದಿ ಪ್ರತಿಪಾತ್ರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಭಾಗವಾಗಿ ಪ್ರತಿತಂತ್ರಗಳನ್ನು ರೂಪಿಸುವುದು ನಮ್ಮ ಮಹಾಕಾವ್ಯಗಳಲ್ಲಿ ಗೋಚರಿಸುತ್ತದೆ. ಹಾಗೆಯೇ ಇನ್ನೂ ತರ್ಕಬದ್ದವಾಗಿ ಮಹಾಕಾವ್ಯಗಳನ್ನು ವಿಶ್ಲೇಷಿಸಿದರೆ ಪ್ರತಿನಾಯಕ ಪಾತ್ರಗಳು ನಾಯಕರಾಗಿಯೂ ಅವತಾರ ಪಾತ್ರಗಳು ಖಳನಾಯಕರಾಗಿಯೂ ಗೋಚರಿಸುವ ಸತ್ಯವನ್ನು ಅಲ್ಲಗಳೆಯಲಾಗದು.

 ರಾಮಾಯಣವನ್ನೇ ತೆಗೆದುಕೊಂಡರೆ ಅದರಲ್ಲಿ ರಾಮನ ಪಾತ್ರ ಉದಾತ್ತಮಯವಾಗಿ ಚಿತ್ರಿತವಾದರೆ, ರಾವಣನ ಪಾತ್ರವನ್ನಂತೂ ರಾಕ್ಷಸನನ್ನಾಗಿಯೇ ನಿರೂಪಿಸಲಾಗಿದೆ. ಆದರೆ ಕಾಲಘಟ್ಟ ಬದಲಾದಂತೆ ರಾಮಾಯಣವೂ ಸಹ ನಿಷ್ಕರ್ಷೆಗೆ ಒಳಗಾಗುತ್ತಾ ಬಂದಿದೆ. ಮನುಧರ್ಮಶಾಸ್ತ್ರದ ಪರಿಕಲ್ಪನೆಗಳಿಗನುಗುಣವಾಗಿ ವಾಲ್ಮೀಕಿ ಕಟ್ಟಿಕೊಟ್ಟ ರಾಮಾಯಣವನ್ನು ಭಾಸನಿಂದ ಹಿಡಿದು ನಮ್ಮ ಕುವೆಂಪುರವರ ವರೆಗೂ ವಿಭಿನ್ನ ರೀತಿಯಲ್ಲಿ ವಿಮರ್ಶೆಗೆ ಒಳಪಡಿಸಿ ಕಟ್ಟಿಕೊಡಲಾಗಿದೆ. ನಿಟ್ಟಿನಲ್ಲಿ ರಂಗಭೂಮಿಯು ಸಾಹಿತ್ಯ ಕೃತಿಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ.  ನಾಟಕಗಳ ಮೂಲಕ ಮಹಾಕಾವ್ಯಗಳ ಪ್ರಸಂಗಗಳನ್ನು ತೀವ್ರವಾಗಿಯೇ ವಿಮರ್ಶೆಗೊಳಪಡಿಸಿ ಋಷಿ ಮುನಿ ಕವಿಗಳಿಂದಾದ ಅಪಚಾರಗಳನ್ನು ಜನರ ಮುಂದೆ ತಾರ್ಕಿಕವಾಗಿ ಇಡುವ ಪ್ರಯತ್ನವನ್ನು ಮಾಡಲಾಗಿದೆ. ಪ್ರಚಂಡ ರಾವಣ ಎನ್ನುವ ಪೌರಾಣಿಕ ನಾಟಕದಲ್ಲಿ ರಾಮನಿಗಿಂತ ರಾವಣನನ್ನೇ ವೈಭವೀಕರಿಸಲಾಗಿದೆ. ಕುವೆಂಪುರವರ ಶೂದ್ರ ತಪಸ್ವಿಯಲ್ಲಿ ವೈದಿಕರಿಂದ ಪ್ರೇರೇಪಿತ ರಾಮನ ನಿಲುವನ್ನೇ ಪ್ರಶ್ನಿಸಲಾಗಿದೆ. ಹೀಗೆ.. ಹಲವಾರು ಆಧುನಿಕ ಕನ್ನಡ ನಾಟಕಗಳಲ್ಲಿ ರಾಮಾಯಣವನ್ನು ಮರುವಿಮರ್ಶೆಗೆ ಒಳಪಡಿಸಲಾಗಿದೆ.  ಆದರೆ ರಾವಣನೇ ವೇದಿಕೆಯ ಮೇಲೆ ಬಂದು ರಾಮನ ಪಾತ್ರ ಪರಿಕಲ್ಪನೆಯನ್ನು ವಿಶ್ಲೇಷಿಸುತ್ತಾ ತನ್ನ ಮೇಲೆ ಕವಿಗಳು ಮಾಡಿದ ಆಪಾದನೆಗಳಿಗೆಲ್ಲಾ ತಾರ್ಕಿಕ ಉತ್ತರವನ್ನು ನೀಡುವ ಪ್ರಯತ್ನವನ್ನು ರಾವಣ ದರ್ಶನ ನಾಟಕದಲ್ಲಿ ಮಾಡಲಾಗಿದೆ.



ರಾಮಾಯಣದ ಮೇಲೆ ಬಂದಿರುವ ಸಾಹಿತ್ಯಕ ವಿಮರ್ಶೆಗಳನ್ನು ಆಧರಿಸಿ ಸಾಸ್ವೇಹಳ್ಳಿ ಸತೀಶ್ರವರು ರಾವಣ ದರ್ಶನ ಎನ್ನುವ ನಾಟಕವನ್ನು ರಚಿಸಿದ್ದು ಶಿವಮೊಗ್ಗದ ಮದಕರಿ ಕಲಾ ವೇದಿಕೆ ರಂಗತಂಡಕ್ಕೆ ನಿರ್ದೇಶಿಸಿದ್ದಾರೆ. ರಂಗಪ್ರಯೋಗವನ್ನು ಬೆಂಗಳೂರಿನಲ್ಲಿ ಅನಾವರಣ ತಂಡವು ಆಯೋಜಿಸಿದ್ದು 2014, ಸೆಪ್ಟಂಬರ್ 4ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು



ರಾವಣನ ದೃಷ್ಟಿಕೋನದಲ್ಲಿ ನಿರೂಪಿಸಲಾಗಿರುವ ರಾವಣ ದರ್ಶನವು ರಾಮಾಯಣ ಕುರಿತಾದ ಜನಸಾಮಾನ್ಯರ ರೂಢಿಗತ ಆಲೋಚನಾ ಕ್ರಮವನ್ನು ಮರುಚಿಂತನೆಗೆ ಹಚ್ಚುವಂತೆ ಮೂಡಿಬಂದಿದೆ. ರಾಮನ ವಿಸ್ತರಣಾವಾದ, ರಾವಣನಿಗಿದ್ದ ಪರಿಸರದ ಕಾಳಜಿ, ರಾವಣನ ಹತ್ತು ತಲೆಗಳ ಗುಟ್ಟು, ಭ್ರಹ್ಮಾಸ್ತ್ರದ ಬಳಕೆಯ ನಿರೂಪಣೆಯಲ್ಲಿ ಕವಿಗಳು ಮಾಡಿದ ತಾರತಮ್ಯ, ಸೀತಾಸ್ವಂಯವರಕ್ಕೆ ಶಿವಧನಸ್ಸನ್ನು ಬಳಸಿದ ಒಳಗುಟ್ಟು, ವಿಭೀಷಣನ ಪಕ್ಷಾಂತರ, ವಾಲಿಸಂವಾರ, ರಾವಣನ ಮಹಿಳಾ ಮೀಸಲಾತಿ, ಸೀತಾಪಹರಣ... ಹೀಗೆ ಹಲವಾರು ವಿಷಯಗಳನ್ನು ರಾವಣ ದರ್ಶನದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಲಾಗಿದೆ. ನಾಟಕದಲ್ಲಿ ಸಿದ್ದ ಚೌಕಟ್ಟಿನ ಕಥೆ ಎಂಬುದಿಲ್ಲ. ರಾವಣನ ದೃಷ್ಟಿಕೋನದಲ್ಲಿ ರಾಮಾಯಣ ಕುರಿತು  ತುಂಡು ತುಣಕು ವಿಶ್ಲೇಷಣೆಗಳೇ ರಾವಣ ದರ್ಶನ ನಾಟಕವಾಗಿದೆ. ಇದೊಂದು ರೀತಿಯಲ್ಲಿ ಸಿದ್ದ ಮಾದರಿಯನ್ನು ಮುರಿದು ಕಟ್ಟುವ ಪ್ರಯತ್ನವಾಗಿದೆ.  ರಾವಣನ ಕುರಿತಾಗಿ ಇರುವ ಪರಂಪರಾಗತ ರಾಕ್ಷಸ ಪರಿಕಲ್ಪನೆಯನ್ನು ಒಡೆದು ಹಾಕಿ ವೈಚಾರಿಕ ದೃಷ್ಟಿಕೋನದಲ್ಲಿ ರಾಮಾಯಣವನ್ನು ನೋಡಬಹುದಾದ ಸಾಧ್ಯತೆಯನ್ನು ನಾಟಕ ನೋಡುಗರ ಮುಂದೆ ತೆರೆದಿಡುತ್ತದೆ.     

ನಿರ್ದೇಶಕ ಸತೀಶ್ರವರು ಒಂದೇ ನಾಟಕದಲ್ಲಿ ಎರಡು ವಿಭಿನ್ನ ರೀತಿಯ ರಾವಣ ದರ್ಶ ಮಾಡಿಸುತ್ತಾರೆ. ಸಾಸ್ವೇಹಳ್ಳಿಯವರು ಸಾಹಿತ್ಯ ವಿಮರ್ಶೆಗಳನ್ನಾಧರಿಸಿ ರಚಿಸಿದ್ದು ಅರ್ಧಭಾಗವಾದರೆ ಇನ್ನರ್ಧ ಭಾಗ ಕುವೆಂಪುರವರ ರಾಮಾಯಣ ದರ್ಶನಂ ಕೃತಿಯನ್ನಾಧರಿಸಿದೆ. ಆದರೆ ಸಂಪೂರ್ಣ ನಾಟಕದ ರಚನೆಯ ಹಕ್ಕನ್ನು ತಮ್ಮದೇ ಎನ್ನುವಂತೆ ಕ್ಲೇಮ್ ಮಾಡಿದ್ದು ಸರಿಯಲ್ಲ. ಮೊದಲ ಭಾಗದಲ್ಲಿ ಮೂಡಿಬಂದ ಸಾಸ್ವೇಹಳ್ಳಿಯವರ ರಾವಣ ದರ್ಶನ ಸರಳವಾಗಿದೆ, ವಾಚ್ಯವಾಗಿದೆ ಹಾಗೂ ತಾರ್ಕಿಕ ನೆಲೆಯಲ್ಲಿ ರಾವಣನನ್ನು ರಾವಣನೇ ವಿಶ್ಲೇಷಿಸುವಂತೆ ಮೂಡಿಬಂದಿದೆ. ಎರಡನೇ ಭಾಗದಲ್ಲಿ ದೃಷ್ಯೀಕರಿಸಲಾಗಿರುವ ಕುವೆಂಪುರವರ ರಾವಣ ದರ್ಶನ ಹಳಗನ್ನಡದಲ್ಲಿರುವುದರಿಂದ ಜನಸಾಮಾನ್ಯರಿಗೆ ಸುಲಭಕ್ಕೆ ಅರ್ಥವಾಗದಂತಿದೆ, ಸೂಚ್ಯವಾಗಿದೆ ಹಾಗೂ ರಾವಣನ ಪಶ್ಚಾತ್ತಾಪದ ಪರಾಕಾಷ್ಟೆ ಎಂಬಂತೆ ಮೂಡಿಬಂದಿದೆ. ಅಂತರಂಗದಲ್ಲಿ ಇವೆರಡೂ ಭಾಗಗಳು ಒಂದಕ್ಕೊಂದು ಬೆಸಗೊಂಡಿದ್ದರೂ ಬಹಿರಂಗದಲ್ಲಿ ಭಿನ್ನವಾಗಿಯೇ ಕಾಣಿಸುತ್ತವೆ. ಮೊದಲ ಭಾಗದಲ್ಲಿರುವ ರಾವಣನ ವಿಮರ್ಶಾತ್ಮಕ ತೀವ್ರತೆಯ ಅನಾವರಣ ಎರಡನೇ ಭಾಗದಲ್ಲಿ ವಿಷಾದಪೂರ್ಣವಾಗಿ ಪರಿವರ್ತನೆ ಹೊಂದುತ್ತದೆ. ಆದರೆ ಎರಡೂ ಭಾಗಗಳು ಒಂದಕ್ಕೊಂದು ಬ್ಲೆಂಡ್ ಆಗಿಲ್ಲ. ಅದಕ್ಕೆ ಬದಲಾದ ಭಾಷೆ ಹಾಗೂ ನಾಟಕದ ಟೆಂಪೋ ಕಾರಣವಾಗಿದೆ. ಇದೊಂದು ರೀತಿ ಮಾಸ್ ಮತ್ತು ಕ್ಲಾಸ್ ವರ್ಗದವರಿಗಾಗಿ ನಾಟಕವನ್ನು ವಿಭಾಗ ಮಾಡಿದಂತಿದೆ. ಮೊದಲ ಭಾಗ ಜನಸಾಮಾನ್ಯರಿಗೆ ಅರ್ಥವಾದರೆ ಎರಡನೇ ಭಾಗ ಬುದ್ದಿಜೀವಿಗಳಿಗೆ ಇಷ್ಟವಾಗುತ್ತದೆ. ಎರಡರಲ್ಲಿ ಒಂದೇ ಭಾಗವನ್ನು ಒಂದು ಪರಿಪೂರ್ಣ ನಾಟಕವಾಗಿಸಬಹುದಾದ ಸಾಧ್ಯತೆಯತ್ತ ನಿರ್ದೇಶಕರು ಗಮನಕೊಟ್ಟರೆ ಒಂದು ವಿಶಿಷ್ಟವಾದ ನಾಟಕವನ್ನು ಕನ್ನಡ ರಂಗಭೂಮಿಗೆ ಕೊಡುಗೆ ಕೊಟ್ಟಂತಾಗುತ್ತದೆ.


ರಾವಣ ದರ್ಶನದಲ್ಲಿ ಹಲವಾರು ಪಾತ್ರಗಳು ಪೂರಕವಾಗಿ ಬರುತ್ತವೆಯಾದರೂ ಇಡೀ ನಾಟಕ ಏಕವ್ಯಕ್ತಿ ಪ್ರದರ್ಶನದಂತೆಯೇ ಮೂಡಿಬಂದಿದೆ. ಈಗಾಗಲೇ ಕರ್ಣ ಹಾಗೂ ದಾರಾಶಿಕೋ ಎನ್ನುವ ಎರಡು ಏಕವ್ಯಕ್ತಿ ಪ್ರಯೋಗಗಳಲ್ಲಿ ನಟಿಸಿದ್ದ ಸಾಸ್ವೇಹಳ್ಳಿಯವರು ಇನ್ನೂ ಅದೇ ಏಕವ್ಯಕ್ತಿ ಪ್ರಭಾವದಲ್ಲೇ ಇದ್ದಂತಿದೆ. ಪರಿಪೂರ್ಣ ನಾಟಕ ಎಂದರೆ ಅದು ಹಲವಾರು ದೃಶ್ಯಗಳ ಮೂಲಕ ಕಟ್ಟಿಕೊಡುವಂತಹುದಾಗಿದೆ. ಆದರೆ ನಾಟಕದ ಬಹುತೇಕ ದೃಶ್ಯಗಳನ್ನು ಸ್ವಗತ ಸಂಭಾಷಣೆಯಲ್ಲೆ ಕಟ್ಟಿಕೊಡಲಾಗಿದೆ. ಹೀಗಾಗಿ ನಾಟಕವನ್ನು ಸಹ ಒಂದು ರೀತಿಯಲ್ಲಿ ಏಕವ್ಯಕ್ತಿ ಪ್ರಯೋಗ ಎನ್ನಬಹುದಾಗಿದೆ. ಯಾಕೆಂದರೆ ಇಡೀ ನಾಟಕದಾದ್ಯಂತ ಶೇಕಡಾ ೯೦ಕ್ಕಿಂತ ಹೆಚ್ಚಾಗಿ ರಾವಣ ಪಾತ್ರವೇ ಮಾತಾಡುತ್ತಾ ನಟಿಸುತ್ತದೆ. ಬೇರೆ ಯಾವ ಪಾತ್ರಗಳಿಗೂ ಅಭಿನಯಕ್ಕೆ ಅವಕಾಶವೇ ಇಲ್ಲವಾಗಿದೆ. ಸಾಂಕೇತಿಕವಾಗಿ ಪೂರಕ ಪಾತ್ರಗಳನ್ನು ಬಳಸಿಯೂ ಏಕವ್ಯಕ್ತಿ ಪ್ರಯೋಗವನ್ನು ಮಾಡಬಹುದಾದ ಸಾಧ್ಯತೆಯನ್ನು ಸಾಸ್ವೇಹಳ್ಳಿ ಸತೀಶ್ರವರು ತೋರಿಸಿದ್ದಾರೆ.

ನಾಟಕದ ಮೊದಲ ಭಾಗದಲ್ಲಿ ರಾವಣನೇ ವಿರಾಧ, ಶೂರ್ಪನಖಿ, ಪುರೋಹಿತ... ಹೀಗೆ ಹಲವು ಪಾತ್ರಗಳಾಗಿ ನಟಿಸುತ್ತಾನೆ. ಆದರೆ ಹೀಗೆ ನಟಿಸುವಾಗ ಒಂದಿಷ್ಟಾದರೂ ಸಾಂಕೇತಿಕ ಬದಲಾವಣೆ ಬೇಕಾಗಿತ್ತು. ರಾವಣನ ವೇಷತೊಟ್ಟು ರಾಮನ ಮುಂದೆ ನಿಂತು ಶೂರ್ಪನಖಿಯ ಮಾತನ್ನು ಆಡಿದರೆ ನೋಡುಗರಿಗೆ ಆಭಾಸವೆನ್ನಿಸುತ್ತದೆ. ಏಕವ್ಯಕ್ತಿ ಪ್ರಯೋಗಗಲ್ಲೂ ಸಹ ಒಬ್ಬ ನಟ ರೀತಿ ಬೇರೆ ಬೇರೆ ಪಾತ್ರಗಳಿಗೆ ಜೀವದುಂಬುವಾಗ ಮುಖವಾಡಗಳ ಮೂಲಕವೋ, ಕಾಸ್ಟೂಮಗಳ ಬಳಕೆಯ ಮೂಲಕವೋ ಭಿನ್ನತೆ ತೋರಿ ಆಯಾ ಪಾತ್ರಕ್ಕೆ ನ್ಯಾಯಸಲ್ಲಿಸುತ್ತಾನೆ. ಆದರೆ ನಾಟಕದಲ್ಲಿ ಅದೂ ಕೂಡಾ ಸಾಧ್ಯವಾಗಿಲ್ಲ. ಹೀಗಾಗಿ ರಾವಣ ಪಾತ್ರದಾರಿ ರಾವಣನಾಗಿದ್ದುಕೊಂಡೇ  ಹಲವಾರು ಪಾತ್ರಗಳಾಗಿಯೂ ಅಭಿನಯಿಸಿದ್ದು  ಒಂದು ನಾಟಕ ಕಟ್ಟಿಕೊಡಬಹುದಾದ ಅನುಭವವನ್ನು ಕೊಡಲು ಸಾಧ್ಯವಾಗಲಿಲ್ಲ. ಅದ್ಯಾಕೋ ರಾವಣ ನೋಡುಗರಿಗೆ ಇಡಿಯಾಗಿ ದಕ್ಕಲಿಲ್ಲ.

ಪ್ರೇಕ್ಷಕರಿಗೆ ರಾವಣ ದರ್ಶನವನ್ನು ಮಾಡಿಕೊಡುವ ನಿರ್ದೇಶಕರು ರಾಮಾಯಣದ ಘಟನೆಗಳನ್ನಾದರೂ ಒಂದು ಅನುಕ್ರಮದಲ್ಲಿ ಕಟ್ಟಿಕೊಟ್ಟಿದ್ದರೆ ಚೆನ್ನಾಗಿತ್ತು. ಇಲ್ಲಿ  ರಾವಣನ ಚಿತ್ತ ಬಂದಂತೆ ಸನ್ನಿವೇಶಗಳು ಮಾತುಗಳಲ್ಲಿ ಅನಾವರಣಗೊಳ್ಳುತ್ತವೆ. ಇದರಿಂದಾಗಿ ರಾವಣನ ಕಣ್ಣಲ್ಲಿ ರಾಮಾಯಣದ ಕಥೆ ಕಲಸುಮೆಲೋಗರವಾದಂತಿದೆ. ಯಾವುದೋ ಒಂದು ಸನ್ನಿವೇಶವನ್ನು ಪ್ರಸ್ತಾಪಿಸುತ್ತಲೇ ಇನ್ನೊಂದು ಸನ್ನಿವೇಶಕ್ಕೆ ವಿಷಯಾಂತರ ಮಾಡುತ್ತಾ ನಾಟಕ ಬೆಳೆಯುತ್ತದೆ. ಇದೊಂದು ರೀತಿಯಲ್ಲಿ ರಾಮಾಯಣದ ಸಾಹಿತ್ಯಕ ವಿಮರ್ಶೆಗಳನ್ನು ಬಿಡಿ ಬಿಡಿಯಾಗಿ ಅನುಕ್ರಮವಲ್ಲದ ರೀತಿಯಲ್ಲಿ  ಕಟ್ ಆಂಡ್ ಪೇಸ್ಟ್ ಮಾಡಿದಂತಿದೆ.

ಕವಿಗಳು ರಾಮಾಯಣದಲ್ಲಿ ರಾಮನನ್ನು ವೈಭವೀಕರಿಸಲು ರಾವಣನಿಗೆ ಅನ್ಯಾಯ ಮಾಡಿದರು ಎಂದು ಹೇಳುವುದು ನಾಟಕದ ಉದ್ದೇಶವಾಗಿದೆ.   ಆಶಯಕ್ಕೆ ಪೂರಕವಾಗಿ ರಾಮಾಯಣವನ್ನು ತರ್ಕಬದ್ದವಾಗಿ ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ರಾಮಾಯಣ ಕುರಿತಾದ ಮಿಥ್ಗಳನ್ನು ಒಡೆಯುವ ಪ್ರಯತ್ನ ನಾಟಕದಲ್ಲಿದೆ. ಆದರೆ.... ರಾಮನ ಯುದ್ದಾರಂಭದ ಪೂಜೆಗೆ ಬೇಕಾಗಿದ್ದ ಪುರೋಹಿತರು ಇಲ್ಲದ್ದರಿಂದ ರಾವಣನೇ ಸಮಾಚಾರ ತಿಳಿದು ಸಮುದ್ರವನ್ನು ದಾಟಿ ಬಂದು ರಾಮನಿಗೆ ಯುದ್ದಕಂಕಣ ಕಟ್ಟುತ್ತಾನೆ. ಕಾಲಿಗೆ ಬಿದ್ದ ರಾಮನಿಗೆ ವಿಜಯೀಭವ ಎಂದು ಆಶೀರ್ವದಿಸಿ ಮರಳಿ ಸಮುದ್ರ ದಾಟಿ ಲಂಕೆಗೆ ಹೋಗಿ ಯುದ್ದಸಿದ್ದತೆ ಮಾಡಿಕೊಳ್ಳುತ್ತಾನೆ.. ಎನ್ನುವ ಅತಾರ್ಕಿಕ ವಿಚಾರವನ್ನೂ ಸಹ ಇದೇ ನಾಟಕದಲ್ಲಿ ಹೇಳಿಸಲಾಗಿದೆ. ರಾವಣನ ತಂಗಿಯೆಂದು ಗೊತ್ತಿದ್ದೇ ಅಂಗಛೇದನ ಮಾಡಲಾಗಿದೆ ಎಂಬುದು ಇನ್ನೊಂದು ಅತಾರ್ಕಿಕವಾದ. ಹೀಗೆ ನಾಟಕದಲ್ಲಿನ ಕೆಲವೊಂದು ಅತಾರ್ಕಿಕ ಆಭಾಸಗಳನ್ನು  ಎಡಿಟ್ ಮಾಡಿದರೆ ರಾವಣನ ಮೂಲಕ ರಾಮಾಯಣದ ವಿಮರ್ಶೆ ಮಾಡಿದಂತಾಗುತ್ತದೆ. ಯಾವುಯಾವುದೋ ರಾಮಾಯಣಗಳ ಭಾಗಗಳನ್ನು ಜೋಡಿಸಿ ನೋಡುಗರಿಗೆ ಕೆಲವೊಮ್ಮೆ ಗೊಂದಲವನ್ನೂ ಉಂಟುಮಾಡುವಲ್ಲಿ ನಾಟಕ ಯಶಸ್ವಿಯಾಗಿದೆ.

ಪೌರಾಣಿಕ ನಾಟಕವನ್ನು ಸಮಕಾಲೀನಗೊಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಮಹಿಳಾ ಮೀಸಲಾತಿ, ಪರಿಸರ ರಕ್ಷಣೆ,  ಪಕ್ಷಾಂತರ... ಮುಂತಾದ ಸಮಕಾಲೀನ ಮಾತುಗಳನ್ನು ಸೇರಿಸಲಾಗಿದೆ. ಇವುಗಳೆಲ್ಲವುಗಳನ್ನೂ ಸರಿದೂಗಿಸಲು ನಿರ್ದೇಶಕ ಮಾಡಿದ ತಂತ್ರ ಬಲು ಸೋಜಿಗವಾಗಿದೆ. ನಾಟಕದ ಆರಂಭ ಹಾಗೂ ಅಂತ್ಯದಲ್ಲಿ ಎರಡು ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ರಾವಣ ದರ್ಶನ ಓದುತ್ತಿದ್ದು ಅವರ ಗುರುಗಳು ಬಂದು ಅವರನ್ನು ಎಚ್ಚರಿಸುತ್ತಾರೆ. ಗುರುಗಳು ಬೇರೆ ಯಾರೂ ಅಲ್ಲ ನಾಟಕದ ನಿರ್ದೇಶಕ ಸಾಸ್ವೇಹಳ್ಳಿ ಸತೀಶರವರೇ ಆಗಿದ್ದಾರೆ. ಹಾಗೂ ವಿದ್ಯಾರ್ಥಿಗಳು ರಾವಣನ ಕುರಿತು ನಾಟಕವಾಡುತ್ತಿದ್ದಾರೆಂದು ಹೇಳಲಾಗುತ್ತದೆ. ಇದರಿಂದಾಗಿ ತಾತ್ವಿಕ ಸಮಸ್ಯೆಗಳು, ರಂಗವಿನ್ಯಾಸದ ದ್ವಂದ್ವಗಳು ದೂರವಾದಂತಾಗಿದೆ. ಪೌರಾಣಿಕ ನಾಟಕದ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ರಾವಣ ದರ್ಶನವನ್ನು ಮಾಡಿಸಿಕೊಟ್ಟಂತೆ ಇಡೀ ನಾಟಕ ಭಾಸವಾಗುತ್ತದೆ. ನಿರ್ದೇಶಕರ ಉದ್ದೇಶವೂ ಅದೇ ಆಗಿದೆ. ತಂತ್ರಗಾರಿಕೆ ಚೆನ್ನಾಗಿ ವರ್ಕಔಟ್ ಆಗಿದೆ. ಆದರೆ ಕೊಟ್ಟಕೊನೆಗೆ ದೀಪಗಳನ್ನು ತರುವುದು ಹಳೆಯ ರಂಗತಂತ್ರವಾಗಿದ್ದು ಇಲ್ಲೀ  ಕೂಡಾ ಒಂದು ಸಣ್ಣ ಪ್ರಮಾದವಾದಂತಿದೆ. ಸಾಸ್ವೇಹಳ್ಳಿಯವರು ಮೊದಲು ಹತ್ತು ತಲೆಯ ರಾವಣನಿಗೆ ಹಣತೆಯನ್ನು ಬೆಳಗಿಸಿ ತದನಂತರ ಒಂದು ಹಣತೆಯನ್ನು ಕುವೆಂಪುರವರ ಭಿತ್ತಿಚಿತ್ರದತ್ತ ಹಿಡಿಯುತ್ತಾರೆ. ಇದರ ಅರ್ಥ ರಾವಣನಿಂದ ಕುವೆಂಪು ಎನ್ನುವ ಹಾಗಿದೆ. ಇದು ತದ್ವಿರುದ್ದವಾಗಿಬೇಕಾಗಿತ್ತು. ಯಾಕೆಂದರೆ ಇದು ಕುವೆಂಪುರವರ ರಾಮಾಯಣ ದರ್ಶನದಿಂದಾದ ನಾಟಕವಾಗಿದ್ದು ಕುವೆಂಪುರವರು ರಾವಣನ ಮೇಲೆ ಬೆಳಕು ಚೆಲ್ಲಿದಂತೆ ಸಂಕೇತಿಸಿದ್ದರೆ ಚೆನ್ನಾಗಿತ್ತು.

ರಾವಣ ದರ್ಶನ ವೈಚಾರಿಕ ವೈರುದ್ಯಗಳು ಏನೇ ಇರಲಿ, ನಾಟಕದ ನಿರೂಪನೆ ಹೇಗೆಯೇ ಇರಲಿ... ಇಡೀ ನಾಟಕದಲ್ಲಿ ಗಮನ ಸೆಳೆದಿದ್ದು ಅಭಿನಯ ವಿಭಾಗ. ಒಬ್ಬನೇ ನಟ ಇಡೀ ರಂಗವೇದಿಕೆಯನ್ನು ಬಳಸಿಕೊಂಡು ದೃಶ್ಯಕಲ್ಪನೆಯನ್ನು ಕಟ್ಟಿಕೊಟ್ಟಿದ್ದು ಪವಾಡಸದೃಶವೆನಿಸುವಂತಿದೆ. ಪಾತ್ರಗಳ ಶೈಲೀಕೃತ ಅಭಿನಯ ನೋಡುಗರನ್ನು ಆಕರ್ಷಿಸಿದ್ದಂತೂ ಸುಳ್ಳಲ್ಲ. ಮೊದಲ ಭಾಗದ ರಾವಣ ಪಾತ್ರದಲ್ಲಿ ನೀನಾಸಮ್ ಅಜಯ್ ಗೌಡರ ನಿರಂತರ ಸಂಭಾಷಣೆ ಹಾಗೂ ನಟನೆ ನಿಜಕ್ಕೂ ಇಡೀ ನಾಟಕವನ್ನು ನೋಡಿಸಿಕೊಂಡು ಹೋಯಿತು. ಅಜಯ್ ಗೌಡ ರಂಗದ ಮೇಲಿರುವವರೆಗೂ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಕಲಾವಿದನ ತದಾತ್ಮಕತೆ ಹಾಗೂ ಮಾತಿನ ಮೇಲಿನ ಹಿಡಿತ ರಂಗದ ಮೇಲೆ ಸಂಚಲನವನ್ನು ಹುಟ್ಟಿಸಿತು. ಸಾಂಪ್ರದಾಯಿಕ ಪರಿಕಲ್ಪನೆಯ ರಾವಣನ ದೈತ್ಯ ದೇಹವಾಗಲೀ, ಅಜಾನುಭಾವ ದೈಹಿಕ ಲಕ್ಷಣಗಳಾಗಲೀ ಅಥವಾ ಪಾತ್ರೋಚಿತವಾದ ಅಂಗಸೌಷ್ಟವವಾಗಲೀ ಅಜಯ್ ಗೌಡರಿಗಿಲ್ಲ. ರಂಗದ ಮೇಲೆ ಮೂಡಿಬಂದ ರಾವಣ ಮುವತ್ತು ವಯಸ್ಸಿನ ಆಜೂಬಾಜಿನವನಂತೆ ಕಾಣುತ್ತಾನೆ. ಆದರೆ ಎಲ್ಲಾ ರಾವಣ ಪರಿಕಲ್ಪನೆಯ ಎಲ್ಲೆಯನ್ನು ಮೀರಿ ಕೇವಲ ಅಭಿನಯ ಸಾಮರ್ಥ್ಯದಿಂದಲೇ ರಾವಣನನ್ನು ಕಟ್ಟಿಕೊಡುವ ತಾಕತ್ತನ್ನು   ಯುವ ನಟ ತೋರಿಸಿದ್ದು ಅಭಿನಂದನೀಯ. ಎರಡನೇ ಭಾಗದ ರಾವಣನಾಗಿ ಚಂದ್ರಶೇಖರ ಶಾಸ್ತ್ರಿ ಸಹ ರಾವಣನ ಪಾತ್ರಕ್ಕೆ ಜೀವ ತಂದುಕೊಟ್ಟಿದ್ದಾರೆ. ಹಳಗನ್ನಡ ಭಾಷೆಯನ್ನು ಸುಲಲಿತವಾಗಿ ಆಡಿತೋರಿಸಿದ್ದಾರೆ. ಇಡೀ ರಾವಣ ದರ್ಶನ ನಿಂತಿದ್ದೇ ಇಬ್ಬರೂ ರಾವಣರ ಪಾತ್ರದಾರಿಗಳ ಮೇಲೆ. ಉಳಿದ ಪಾತ್ರಗಳೂ ಇವೆಯಾದರೂ ಅವುಗಳಿಗೆ ಅಭಿನಯದ ಅವಕಾಶವೇ ಕಡಿಮೆ ಇದೆ. ರಾವಣರ ಆಗಮನ, ನಿರ್ಗಮನಗಳೇ ಸೊಗಸಾಗಿದ್ದವು. ಯಕ್ಷಗಾನದ ಹೆಜ್ಜೆಗಳನ್ನು ಬಳಸಿಕೊಳ್ಳಲಾಗಿದೆ. ನಿರ್ದೇಶಕರು ನಟರ ಆಂಗಿಕಾಭಿನಯದ ಮೇಲೆ ಅತೀ ಹೆಚ್ಚು  ಕೆಲಸ ಮಾಡಿದ್ದರಿಂದಾಗಿ ನಾಟಕ ಗೆದ್ದಿದೆ. ರಾವಣನ ದರ್ಶನ ಅನುಭವ ಎಷ್ಟು ಜನಕ್ಕಾಯಿತೋ ಗೊತ್ತಿಲ್ಲ ಆದರೆ ಅಭಿನಯಿಸಿದ ಕಲಾವಿದರಿಬ್ಬರ ನಟನಾ ಸಾಮರ್ಥ್ಯದ ಸೊಗಸನ್ನು ಪ್ರೇಕ್ಷಕರು ಮನಪೂರ್ವಕ ಅನುಭವಿಸಿದರು.

ರಂಗವೇದಿಕೆಯ ಹಿಂಭಾಗದಲ್ಲಿ ಹತ್ತು ತಲೆಯ ರಾವಣನ ಬಿತ್ತಿಚಿತ್ರವನ್ನು ನಾಟಕದಾದ್ಯಂತ ಸ್ತಿರಗೊಳಿಸಿದ್ದು ನಾಟಕದ ಆಶಯಕ್ಕೆ ಪೂರಕವಾಗಿದೆ.  ವಿಜ್ರಂಭನೆಯಿಂದ ವಿಕಾರತೆಯವರೆಗೆ ರಾವಣನ ಹತ್ತು ತಲೆಗಳನ್ನು ಭಿನ್ನ ರೀತಿಯಲ್ಲಿ ಬಳಸಿದ್ದು ಮನುಷ್ಯನೊಳಗಿನ ಆಕಾರ ಹಾಗೂ ವಿಕಾರಗಳ ರೂಪಕವಾಗಿ ಮೂಡಿಬಂದಿದೆ. ಆದರೆ ನಾಟಕದಲ್ಲಿ ರಾವಣನ ಸಕಾರಾತ್ಮಕ ಅಂಶಗಳನ್ನೇ ಪ್ರಭಲವಾಗಿ ಸಮರ್ಥಿಸಿಕೊಳ್ಳಲಾಗಿದೆ. ಹೀಗಿದ್ದಾಗ ಬಿತ್ತಿ ವಿನ್ಯಾಸದಲ್ಲಿ ಅದ್ಯಾಕೆ ವಿಕಾರತೆಗಳನ್ನು ತೋರಿಸಿದರು? ರಾವಣನ ಹತ್ತು ತಲೆಗಳು ಹತ್ತು ಬಡಕಟ್ಟುಗಳನ್ನು ಸಂಕೇತಿಸುತ್ತವೆ ಎಂದು ನಾಟಕದಲ್ಲಿ ಪ್ರತಿಪಾದಿಸಲಾಗಿದೆ. ಹಾಗಾದರೆ ಬುಡಕಟ್ಟುಗಳಲ್ಲಿ ವಿಕಾರ ಬುಡಕಟ್ಟುಗಳೂ ಇದ್ದವೆ? ನಿಟ್ಟಿನಲ್ಲಿ ಯೋಚಿಸಿದಾಗ ನಾಟಕದಲ್ಲಿ ಪ್ರಸ್ತಾಪಿಸಲಾದ ರಾವಣನಿಗೂ ಹಾಗೂ ಹಿನ್ನಲೆಯಲ್ಲಿದ್ದ ರಾವಣನ ಸ್ಥಿರಚಿತ್ರಕ್ಕೂ ಒಂದಿಷ್ಟು ವ್ಯತ್ಯಾಸ ತೋರುತ್ತದೆ. ನಾಟಕದ ಎರಡನೇ ಭಾಗದಾದ್ಯಂತ ಕುವೆಂಪುರವರ ಬಿತ್ತಿಚಿತ್ರವನ್ನು ತಂದಿರುವುದು ನಾಟಕದ ಮೂಡ್ಗೆ ವ್ಯತಿರಿಕ್ತವೆನ್ನಿಸುವಂತಿದೆ. ಪೌರಾಣಿಕ ನಾಟಕದಲ್ಲಿ ವರ್ತಮಾನದ ಕವಿಯ ಚಿತ್ರ ಯಾಕೋ ಸರಿಎನ್ನಿಸುವಂತಿಲ್ಲ.

  
ನಾಟಕದಲ್ಲಿ ಬಳಸಲಾದ ಮಾರ್ಮಿಕವಾದ ಸಂಭಾಷಣೆಗಳು ನೋಡುಗರಲ್ಲಿ ಸಂಚಲನ ಹುಟ್ಟಿಸುವಷ್ಟು ಸೊಗಸಾಗಿ ಮೂಡಿಬಂದಿವೆ. ಪ್ರದರ್ಶನಕ್ಕೆ ಪೂರಕವಾಗಿ ರಂಗತಂತ್ರಗಳನ್ನು ಸೊಗಸಾಗಿ ಬಳಸಲಾಗಿದೆ. ಉಮೇಶ್ ಆಚರ್ಯರ ಹಿನ್ನಲೆ ಸಂಗೀತ ಎಲ್ಲೂ ಅಬ್ಬರವಾಗದೇ ಪ್ರತಿ ಹಂತದಲ್ಲೂ ನಟನೆಗೆ ಸ್ಪಂದಿಸಿದೆ. ಹರಿಗೆ ಗೋಪಾಲಸ್ವಾಮಿಯವರ ಬೆಳಕಿನ ವಿನ್ಯಾಸ ಏಕವ್ಯಕ್ತಿ ಮಾದರಿಯ ನಾಟಕಕ್ಕೆ ಹಲವು ಆಯಾಮಗಳನ್ನು ಒದಗಿಸಿದೆ. ನಟನೆ, ಸಂಗೀತ ಹಾಗೂ ಬೆಳಕು ಮೂರೂ ವಿಭಾಗಗಳು ನಾಟಕದ ಜೀವಾಳವಾಗಿವೆ. ನಾಟಕದಾದ್ಯಂತ ರಂಗಶಿಸ್ಸು ಎದ್ದುಕಾಣುವಂತಿದ್ದು ವೃತ್ತಿಪರತೆ ಎಲ್ಲಾ ವಿಭಾಗಗಳಲ್ಲೂ ಎದ್ದು ಕಾಣುವಂತಿದೆ. ಜಿಲ್ಲಾ ಕೇಂದ್ರದ ಹವ್ಯಾಸಿ ರಂಗತಂಡವೊಂದು ಮಟ್ಟಿಗೆ ವೃತ್ತಿಪರವಾಗಿ ನಾಟಕ ಮಾಡಿದ್ದಕ್ಕೆ, ಹಾಗೂ ರೀತಿ ನಾಟಕ ಮಾಡಿಸಿದ್ದಕ್ಕೆ ಸಾಸ್ವೇಹಳ್ಳಿ ಸತೀಶ್ರವರು ಅಭಿನಂದನಾರ್ಹರು. 

                               -ಶಶಿಕಾಂತ ಯಡಹಳ್ಳಿ     



              
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ