ಮಂಗಳವಾರ, ಸೆಪ್ಟೆಂಬರ್ 2, 2014

ರಂಗಭೀಷ್ಮ ಎ.ಎಸ್.ಮೂರ್ತಿಗಳ ನೆನಪಿನಲ್ಲಿ “ನಂದಭೂಪತಿ”



ಶೇಕ್ಸಪೀಯರ್ ಜಗತ್ಪ್ರಸಿದ್ದ ದುರಂತ ರುದ್ರನಾಟಕ ಕಿಂಗ್ಲಿಯರ್. ಮನುಷ್ಯನ ದೌರ್ಬಲ್ಯಗಳಾದ ಅವಿವೇಕತನ, ಸರ್ವಾಧಿಕಾರಿತನ, ಅಧಿಕಾರದ ಹಪಾಹಪಿತನ, ಹಾದರತನ ಹಾಗೂ ದುರಾಸೆಗಳನ್ನು ನಾಟಕದಲ್ಲಿ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದರಿಂದಾಗಿ ಕಿಂಗ್ಲಿಯರ್ ಸಾರ್ವಕಾಲಿಕ ಕೃತಿಯಾಗಿದೆ. ಈಗಾಗಲೇ ಕನ್ನಡದಲ್ಲಿ ನಾಟಕದ ನೇರ ಅನುವಾದಗಳು ಬಂದಿವೆಲಿಯರ್ ಮಹಾರಾಜ ಹೆಸರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಹಾಗೂ ತದನಂತರ ಹೆಚ್.ಎಸ್.ಶಿವಪ್ರಕಾಶರವರು ಅನುವಾದಿಸಿದ್ದಾರೆ. ಹಾಗೆಯೇ ಕನ್ನಡದ ನೆಲದ ಸೊಗಡಿಗೆ ಹೊಂದಾಣಿಕೆಯಾಗುವಂತಹ ರೂಪಾಂತರಗಳೂ ಕೆಲವಿವೆ. ಅದರಲ್ಲಿ ಮುಖ್ಯವಾದವುಗಳು ಹೆಚ್.ಎಸ್.ವೆಂಕಟೇಶ ಮೂರ್ತಿಯವರ ಹುಚ್ಚು ದೊರೆ ಮತ್ತು ಮೂರು ಮಕ್ಕಳು. ಇದನ್ನು ಪ್ರೇಮಾ ಕಾರಂತರು ಮಕ್ಕಳಿಗೆ ನಾಟಕವಾಗಿ ನಿರ್ದೇಶಿಸಿದ್ದರು. ಇದೇ ಕಿಂಗ್ಲಿಯರನ್ನು ಗೋಪಾಲ ವಾಜಪೇಯಿರವರು ನಂದಭೂಪತಿ ಹೆಸರಲ್ಲಿ ಮೂರು ದಶಕಗಳ ಹಿಂದೆ ರೂಪಾಂತರಿಸಿದ್ದರು. ನಾಟಕವನ್ನು 1985 ರಲ್ಲಿ ಹುಬ್ಬಳ್ಳಿಯ ಅಭಿನಯ ಭಾರತಿ ತಂಡಕ್ಕೆ ಜಯತೀರ್ಥ ಜ್ಯೋಷಿರವರು ನಿರ್ದೇಶಿಸಿ ರಾಜನ ಪಾತ್ರವನ್ನೂ ಅಭಿನಯಿಸಿದ್ದರು. ಬಿ.ವಿ.ಕಾರಂತರು ನಾಟಕದ 15ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಹಿಂದೆ ಕೂಡಾ ಸಾಣೇಹಳ್ಳಿಯ ಶಿವಸಂಚಾರವೂ ಸಹ ನಾಟಕವನ್ನು ವಿಶ್ವೇಶ್ವರಿ ಹಿರೇಮಠರವರ ನಿರ್ದೇಶನದಲ್ಲಿ ನಾಡಿನಾದ್ಯಂತ ಪ್ರದರ್ಶಿಸಿತ್ತು.

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ವು  .ಎಸ್.ಮೂರ್ತಿ ನೆನಪಿನ ನಾಟಕೋತ್ಸವವನ್ನು ಕೆ.ಹೆಚ್. ಕಲಾಸೌಧದಲ್ಲಿ ಆಯೋಜಿಸಿತ್ತು. ನಂದಭೂಪತಿ ನಾಟಕವು ಎಸ್.ವಿ.ಸುಷ್ಮಾರವರ ನಿರ್ದೇಶನದಲ್ಲಿ ವಿಜಯನಗರ ಬಿಂಬದ ಹಿರಿಯರ ವಿಭಾಗದ ವಿದ್ಯಾರ್ಥಿಗಳಿಂದ 2014, ಆಗಸ್ಟ್ 22 ರಂದು ಪ್ರದರ್ಶನಗೊಂಡಿತು.


ಮಂಗಳಾವತಿ ರಾಜ್ಯದ ವೃದ್ದ ದೊರೆ ನಂದಭೂಪತಿ. ತನ್ನನ್ನು ಹೊಗಳಿದ ತನ್ನಿಬ್ಬರೂ ಕುವರಿಯರಾದ ಶೀಲವತಿ ಹಾಗೂ ಲೀಲಾವತಿಗೆ ತನ್ನ ರಾಜ್ಯವನ್ನು ಹಂಚುತ್ತಾನೆ. ಹೊಗಳದ ಕಿರಿಯ ಮಗಳು ಸತ್ಯವತಿಯನ್ನು ಗಡಿಪಾರು ಮಾಡುತ್ತಾನೆ. ತನ್ನ ನೂರುಜನ ಆಳುಗಳೊಂದಿಗೆ ಒಬ್ಬೊಬ್ಬ ಮಗಳ ಮನೆಯಲ್ಲಿ ಒಂದೊಂದು ತಿಂಗಳು ಇರಲು ಬಯಸುತ್ತಾನೆ. ರಾಜ್ಯ ಪಡೆದ ಇಬ್ಬರೂ ಹೆಣ್ಣುಮಕ್ಕಳು ಅಪ್ಪನನ್ನು ನಿರ್ಲಕ್ಷಿಸಿ ಕಾಡಿಗಟ್ಟುತ್ತಾರೆರಾಜ್ಯದ ಪ್ರಧಾನಿಯ ಬೇನಾಮಿ ಮಗ ಚೆಲುವ ತನ್ನ ತಂದೆಯನ್ನು ವಂಚಿಸಿ ಆಸ್ತಿ ಲಪಟಾಯಿಸಲು ಕುತಂತ್ರ ಮಾಡಿ ಯಶಸ್ವಿಯಾಗುತ್ತಾನೆ. ಲೀಲಾವತಿ ಹಾಗೂ ಶೀಲಾವತಿ ಇಬ್ಬರೂ ತಮ್ಮ ಗಂಡಂದಿರನ್ನು ಬಿಟ್ಟು ಚೆಲುವನ ಮೋಹಕ್ಕೆ ಒಳಗಾಗುತ್ತಾರೆ. ರಾಜ್ಯಾಧಿಕಾರಕ್ಕಾಗಿ ತಂತ್ರ ಕುತಂತ್ರಗಳು ನಡೆದು ಹಲವಾರು ಹೆಣಗಳು ಉರುಳುತ್ತವೆ. ಕಾಡುಪಾಲಾದ ರಾಜ ಮತಿಭ್ರಮಣೆಗೊಳಗಾಗುತ್ತಾನೆ. ಕೊನೆಗೆ ಸತ್ಯವತಿ ಹಾಗೂ ಅವಳ ಗಂಡನೂ ಸಾಯುತ್ತಾರೆ. ಮಗಳ ಸಾವಿನಿಂದ ನೊಂದ ನಂದಭೂಪತಿ ಅಸುನೀಗುತ್ತಾನೆ. ಲೀಲಾವತಿಯನ್ನು ಶೀಲಾವತಿ ವಿಷವಿಕ್ಕಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇಡೀ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಲ್ಲರೂ ಸರ್ವನಾಶವಾಗುವ ಮೂಲಕ ದುರಂತ ನಾಟಕ ಕೊನೆಯಾಗುತ್ತದೆ.

ನಾಟಕದಾದ್ಯಂತ ಬರೀ ದ್ರೋಹ ವಿದ್ರೋಹಗಳೇ ತುಂಬಿವೆ. ಆಸ್ತಿ ಅಂತಸ್ತು ಅಹಂಕಾರ ಅಧಿಕಾರಕ್ಕಾಗಿ ದ್ರೋಹ ವಿದ್ರೋಹ ಕೊಲೆಪಾತಕಗಳಲ್ಲಿ ನಿರತವಾದ ರಾಜಪರಿವಾರದ ಕಥೆಯೊಂದನ್ನು ನಾಟಕ ನಿರೂಪಿಸುತ್ತದೆ. ಹಿರಿಯ ಹೆಣ್ಣುಮಕ್ಕಳು ಮುಂಗೋಪಿ ತಂದೆಯನ್ನು ಕಾಡುಪಾಲು ಮಾಡಿ ಪಿತೃದ್ರೋಹವೆಸಗುತ್ತಾರೆ. ಅಕ್ಕ ತಂಗಿಯರಿಬ್ಬರೂ ತಮ್ಮ ಸ್ವಾರ್ಥಕ್ಕಾಗಿ ಪತಿ ದ್ರೋಹವೆಸಗುತ್ತಾರೆ. ಕೊನೆಗೆ ಅವರಿಬ್ಬರೂ ಒಂದು ಗಂಡಿಗಾಗಿ ಪರಸ್ಪರ ವಂಚನೆ ದ್ರೋಹ ಮಾಡಿಕೊಂಡು ಸಾಯುತ್ತಾರೆ. ರಾಜ್ಯಾಧಿಕಾರಕ್ಕಾಗಿ ತಮ್ಮ ತನ್ನ ಅಣ್ಣನನ್ನೇ ವಂಚಿಸಿ ತನ್ನ ತಂದೆಯ ಕಣ್ಣುಗಳನ್ನು ಕೀಳಿಸಿ ಬ್ರಾತೃದ್ರೋಹ ಹಾಗೂ ಪಿತೃದ್ರೋಹಗಳನ್ನೆಸಗುತ್ತಾನೆ. ನಂದಭೂಪಾಲ ತನ್ನ ದುರಹಂಕಾರದಿಂದಾಗಿ ಪ್ರಜಾದ್ರೋಹವನ್ನೆಸಗಿ ರಾಜ್ಯದ ಸರ್ವನಾಶಕ್ಕೆ ಕಾರಣೀಕರ್ತನಾಗುತ್ತಾನೆ. ಹೀಗೆ... ಇಡೀ ನಾಟಕ ದ್ರೋಹ ಮತ್ತು ದುರಂತಗಳ ಸರಮಾಲೆಯಾಗಿದೆ. ಮನುಷ್ಯನೊಳಗಿನ ದೌರ್ಬಲ್ಯಗಳ ಪ್ರತೀಕವಾಗಿದೆ. ಇದನ್ನು ನಾಟಕ ಎನ್ನುವುದಕ್ಕಿಂತಲೂ ವಿಕ್ಷಿಪ್ತ ಸಮಾಜದೊಳಗೆ ಹಾಸುಹೊಕ್ಕಾಗಿರುವ ಸರ್ವಾಧಿಕಾರ ಹಾಗೂ ಅದರಿಂದುಂಟಾಗುವ ಸರ್ವನಾಶಗಳಿಗೊಂದು ರೂಪಕವೆನ್ನಬಹುದಾಗಿದೆ. ಎಲ್ಲಾ ಕಾರಣಗಳಿಗಾಗಿಯೇ ಕಿಂಗ್ ಲೀಯರ್ ನಾಟಕವು ಎಲ್ಲಾ ದೇಶ ಭಾಷೆಗಳ ಹಂಗಿಲ್ಲದೆ ನಾನೂರು ವರ್ಷಗಳ ನಂತರವೂ ಪ್ರಸ್ತುತವೆನ್ನಿಸುತ್ತದೆ.

ಈಗ ಜಾಗತೀಕರಣದ ದುಷ್ಪರಿಣಾಮದಿಂದಾಗಿ ವೃದ್ದರ ಸಮಸ್ಯೆ ಉಲ್ಪಣಗೊಳ್ಳುತ್ತಿದೆ. ವೃದ್ದಾಶ್ರಮಗಳು ಹೆಚ್ಚಾಗುತ್ತಿವೆ. ಪರೋಕ್ಷವಾಗಿ ನಾಟಕವು ವೃದ್ದರ ಸಮಸ್ಯೆಯನ್ನು ಚರ್ಚಿಸುವಂತೆ ಮೂಡಿಬಂದಿದೆ. ಅವಿಭಕ್ತ ಕುಟುಂಬಗಳೊಡೆದು ಏಕವ್ಯಕ್ತಿ ಕುಟುಂಬಗಳಾಗುತ್ತಿರುವ ಇಂದಿನ ಸಮಕಾಲೀನ ಪರಿಸ್ಥಿತಿಯಲ್ಲಿ ವೃದ್ದ ತಂದೆ ತಾಯಿಂದಿರ ಇಳಿಸಂಜೆಯ ಬದುಕು ತಾತ್ಸಾರಕ್ಕೆ, ಅವಮಾನಕ್ಕೆ ಈಡಾಗಿದ್ದು ವಯೋವೃದ್ದರ ವಯೋಧರ್ಮಕ್ಕನುಗುಣವಾದ ಸಿಟ್ಟು, ಸೆಡುವು, ಮರೆವು, ಹಠಮಾರಿತನಗಳು ಹೊಸ ತಲೆಮಾರಿಗೆ ಅಸಹನೆಯ ಸಂಕೇತಗಳಾಗಿವೆ. ಗಳಿಸಿದ್ದೆಲ್ಲವನ್ನು ಮಕ್ಕಳಿಗೆ ಕೊಟ್ಟು ಅನಾಥಪ್ರಜ್ಙೆಯನ್ನು ಅನುಭವಿಸುವ ನಂದಭೂಪತಿಯಂತಹ ಹಿರಿಯರು ಈಗ ಬೇಕಾದಷ್ಟಿದ್ದಾರೆ. ಮಕ್ಕಳ ಹಂಗಲ್ಲಿ ಬದುಕಲಾಗದ ಸ್ವಾಭಿಮಾನಿ ತಂದೆ ತಾಯಂದಿರು ಬೀದಿಗೆ ಬಿದ್ದಿದ್ದಾರೆ. ವೃದ್ದಾಶ್ರಮ ಸೇರಿದ್ದಾರೆ. ಮಕ್ಕಳಿದ್ದೂ ಅನಾಥರಾಗಿರುವ ತಂದೆಗಳ ಪ್ರತಿನಿಧಿಯಾಗಿ ನಂದಭೂಪತಿ ರಾಜ ನಾಟಕದಲ್ಲಿ ಮೈದಾಳಿದಂತೆನೆಸುತ್ತಾನೆ. ಮೋಹಕ್ಕೊಳಗಾಗಿ ಎಲ್ಲವನ್ನೂ ಮಕ್ಕಳಿಗೆ ಧಾರೆ ಎರೆದು ಕೊಟ್ಟು ಸಾಕಿಸಲುಹಿದ ಮಕ್ಕಳಿಂದಲೇ ಪರಿತ್ಯಕ್ತರಾಗುವಂತಹ ದುರಂತದ ಕುರಿತು ಎಚ್ಚರಿಕೆಯನ್ನು ನಾಟಕ ಪೋಷಕರಿಗೆ ಕೊಡುವಂತಿದೆ.
 
ವಿವೇಕವನ್ನು ಕಳೆದುಕೊಂಡವನು ಏನೆಲ್ಲಾ ಸಂಕಷ್ಟಗಳಿಗೊಳಗಾಗುತ್ತಾನೆ ಎನ್ನುವುದಕ್ಕೆ ಉದಾಹರಣೆಯಾಗಿ ರಾಜ ನಂದಭೂಪತಿ ಹಾಗೂ ಪ್ರಧಾನಿಯ ಪಾತ್ರಗಳು ಮೂಡಿಬಂದಿವೆರಾಜ ತನ್ನ ಅವಿವೇಕತನದಿಂದ ಅಪಾತ್ರರಾದ ಮಕ್ಕಳಿಗೆ ರಾಜ್ಯ ಹಂಚಿ ದುರಂತಕ್ಕೊಳಗಾದರೆ, ಪ್ರಧಾನಿಯ ಜವಾಬ್ದಾರಿಯುತ ಸ್ಥಾನದಲ್ಲಿರುವವನು ಕಂಡಿದ್ದನ್ನೆಲ್ಲಾ  ಪರಾಮರ್ಶಿಸಿ ನೋಡದೇ ದುರಳನನ್ನು ನಂಬಿ ಸಂಕಷ್ಟಕ್ಕೊಳಗಾಗುತ್ತಾನೆ. ನಾಟಕದಲ್ಲಿ ವಿವೇಕ ಇರುವ ಏಕೈಕ ಪಾತ್ರವೆಂದರೆ ಅದು ಹುಚ್ಚಮಲ್ಲನದು. ಈತ ವಿಧೂಷಕನಾಗಿದ್ದರೂ ವಿಕ್ಷಿಪ್ತ ರಾಜನ ಮನಸ್ಸಾಕ್ಷಿಯ ಹಾಗೆ ಎಲ್ಲವನ್ನೂ ವಿಶ್ಲೇಷಿಸುತ್ತಾನೆ. ಆದರೆ ಮನಸ್ಸಾಕ್ಷಿಯ ಮಾತುಗಳನ್ನು ದುರಹಂಕಾರದಿಂದ ನಿರ್ಲಕ್ಷಿಸಿದ ನಂದಭೂಪತಿ ರಾಜ ತನ್ನ ಸರ್ವನಾಶಕ್ಕೆ ತಾನೇ ಕಾರಣನಾಗುತ್ತಾನೆ. ರಾಜ ಎಲ್ಲವನ್ನೂ ಕಳೆದುಕೊಂಡರೂ ಆತನ ಜೊತೆಗೆ  ಕೊನೆಯವರೆಗೂ ಉಳಿಯುವುದು  ಆತನ ಪ್ರಜ್ಞೆಯ ಪ್ರತೀಕವಾದ ಹುಚ್ಚುಮಲ್ಲ ಪಾತ್ರವೇ ಎನ್ನುವುದು ನಾಟಕದ ಪ್ರಮುಖ ಅಂಶ. ಯಾರು ತನ್ನ ಮನಸ್ಸಾಕ್ಷಿಯ ಮಾತುಗಳನ್ನು ನಿರ್ಲಕ್ಷಿಸುತ್ತಾನೋ ಆತ ಹಾಳಾಗುತ್ತಾನೆ ಎನ್ನುವ ಪರೋಕ್ಷ ಸಂದೇಶವನ್ನು ನಾಟಕ ಕೊಡುತ್ತದೆ.

ಶೇಕ್ಸ್ಪೀಯರ್ ಕಿಂಗ್ಲಿಯರ್ ದುರಂತ ನಾಟಕದ ಮೂಲ ಕಥೆಗೆ ಚ್ಯುತಿ ಬರದಂತೆ ನಂದಭೂಪತಿ ನಾಟಕವನ್ನು ನಾಡ ಸಂಸ್ಕೃತಿಗೆ ಹೊಂದುವಂತೆ ಸರಳಗೊಳಿಸಿ, ನಮ್ಮದೇ ರಾಜನೊಬ್ಬನ ಕಥೆಯೇನೋ ಎನ್ನುವ ರೀತಿಯಲ್ಲಿ ಗೋಪಾಲ್ ವಾಜಪೇಯಿರವರು ರೂಪಾಂತರಿಸಿದ್ದಾರೆ. ಪಾತ್ರದ ಹೆಸರುಗಳು, ಸನ್ನಿವೇಶ, ಸ್ಥಳಗಳೆಲ್ಲವೂ ದೇಸಿಮಯವಾಗಿದ್ದು ನಾಟಕದ ವಸ್ತು ಮಾತ್ರ ಶೇಕ್ಸಪೀರನದ್ದಾಗಿದೆ. ಇದರಿಂದಾಗಿ ಇದು ಶೇಕ್ಷಪೀರನ ನಾಟಕವೆನಿಸಿದೆ ಗೋಪಾಲ ವಾಜಪೇಯಿಯವರ ದೇಸಿ ಕಿಂಗ್ಲೀಯರ್ ಅಗಿದೆ. ಕಿಂಗ್ಲಿಯರ್ ಯಥಾವತ್ ಅನುವಾದವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ನಾಟಕವನ್ನು ದೇಸೀಕರಣ ಮಾಡಿದ್ದರಿಂದ ದುರಂತ ಅಂತ್ಯ ನಮ್ಮ ಪರಂಪರೆಗೆ ಹೊರತಾದಂತೆನಿಸುತ್ತದೆ. ನಮ್ಮ ಪರಂಪರೆಗೆ ಹೊಂದದಂತಹ ಅಂತ್ಯವನ್ನು ಕೊಡಲಾಗಿದೆ. ಕೆಡುಕಿನ ವಿರುದ್ಧ ಒಳಿತಿನ ಜಯ ಎನ್ನುವುದು ನಮ್ಮ ದೇಸಿ ಸಂಸ್ಕೃತಿಯ ಕಲ್ಪನೆಯಾಗಿದೆ. ಪರಿಕಲ್ಪನೆಗೆ ಪೂರಕವಾಗಿಯೇ ನಮ್ಮೆಲ್ಲಾ ಮಹಾಕಾವ್ಯಗಳು ರೂಪಗೊಂಡಿವೆ. ಕೆಟ್ಟದ್ದು ಅದೆಷ್ಟೇ ವಿಜ್ರಂಭಿಸಿದರೂ ಕೊನೆಗೆ ಒಳ್ಳೆಯದೇ ಗೆಲ್ಲುತ್ತದೆ ಹಾಗೂ ಗೆಲ್ಲಲೇಬೇಕು ಎನ್ನುವ ನೈತಿಕ ಪ್ರಜ್ಞೆಯನ್ನು ಭಾರತೀಯ ಪರಂಪರೆ ರೂಢಿಸಿಕೊಂಡು ಬಂದಿದೆ. ಸಕಾರಾತ್ಮಕ ಮನೋಭಾವನೆಯೇ ಎಲ್ಲರ ಆಶಯವಾಗಿದೆ.


ನಾಟಕದಲ್ಲಿ ನಕಾರಾತ್ಮಕತೆ ಎನ್ನುವುದು ವಿಜ್ರಂಭಿಸುತ್ತಲೇ ಎಲ್ಲಾ ನಕಾರಾತ್ಮಕತೆಯ ಅಂತ್ಯವೂ ಕೂಡಾ ಸರ್ವನಾಶದತ್ತಲೇ ತಿರುಗುತ್ತವೆ. ದುಡುಕಿನ, ಕೆಡುಕಿನ ಪಾತ್ರಗಳು ಕೊನೆಗೆ ತಮ್ಮ ದುರಹಂಕಾರದಿಂದಾಗಿ ನಾಶವಾಗುತ್ತವೆ ಎನ್ನುವುದು ಅಪೇಕ್ಷಣೀಯ. ಆದರೆ ಒಳಿತಿನ ಪಾತ್ರ ಹಾಗೂ ಮೌಲ್ಯಗಳೂ ಕೂಡಾ ನಾಶಹೊಂದುವುದು ಶೂನ್ಯತೆಗೆ ದಾರಿಯಾಗುತ್ತದೆ. ನಾಟಕದಲ್ಲೂ ಕೂಡಾ ಎಲ್ಲಾ ಪ್ರಮುಖ ಪಾತ್ರಗಳೂ ಸಾಯುತ್ತವೆ. ಕೆಟ್ಟ ಪಾತ್ರಗಳ ಜೊತೆಗೆ ಒಳ್ಳೆಯ ಪಾತ್ರಗಳೂ ದುರಂತ ಅಂತ್ಯ ಕಾಣುತ್ತವೆ. ಇದು ನೋಡುಗರಲ್ಲಿ ವಿಷಾದದ ಜೊತೆಗೆ ಶೂನ್ಯತೆಯನ್ನು ಸೃಷ್ಟಿಸುವಂತಿದೆ. ಎಲ್ಲವನ್ನೂ ದೇಶೀಕರಣಗೊಳಿಸಿದ ಗೋಪಾಲ ವಾಜಪೇಯಿಯವರು ನಾಟಕದ ಕ್ಲೈಮ್ಯಾಕ್ಸನ್ನೂ ಕೂಡಾ ದೇಸಿ ಸಂಸ್ಕೃತಿಯ ಪರಿಕಲ್ಪನೆಗೆ ಪೂರಕವಾಗಿ ಸಕಾರಾತ್ಮಕವಾಗಿ ಅಂತ್ಯಗೊಳಿಸಿದ್ದರೆ, ಸತ್ಯವತಿ ಹಾಗೂ ಧರ್ಮನಾಯಕನಂತಹ ಯಾರಿಗೂ ಕೆಟ್ಟದ್ದನ್ನು ಬಯಸದ ಉದಾತ್ತ ಪಾತ್ರಗಳನ್ನು ಉಳಿಸಿದ್ದರೆ ಸತ್ಯ ನ್ಯಾಯ ನಿಷ್ಟೆಗಳಿಗೊಂದು ಬೆಲೆ ಬರುತ್ತಿತ್ತು. ಸಕಾರಾತ್ಮಕತೆಗೊಂದು ನೆಲೆ ಸಿಗುತ್ತಿತ್ತು. ಅನುವಾದವಾದರೆ ಕೃತಿಗೆ ನಿಷ್ಟರಾಗಿದ್ದರೆ ಸಮಸ್ಯೆ ಇರಲಿಲ್ಲ. ರೂಪಾಂತರಮಾಡಿದಾಗ ಒಂದಿಷ್ಟಾದರೂ ಸಕಾರಾತ್ಮಕ ಬದಲಾವಣೆಗಳಾಗಬೇಕಾಗಿತ್ತು. ರೂಪಾಂತರಕಾರ ಅದನ್ನು ಮಾಡದಿದ್ದಾಗ ನಿರ್ದೇಶಕರಾದವರಾದರೂ ನಾಟಕದಲ್ಲೊಂದಿಷ್ಟು ಬದಲಾವಣೆಗಳನ್ನು ಮಾಡಿ ಸಮರ್ಥನೀಯ ಅಂತ್ಯವನ್ನು ಕೊಡಬಹುದಾಗಿತ್ತು. ಹಾಗಾಗದಿದ್ದುದೇ ನಾಟಕದ ನಕಾರಾತ್ಮಕ ಅಂಶವಾಗಿದ್ದು ನಾಟಕದಾದ್ಯಂತ ಬರೀ ನೆಗೆಟಿವ್ ಅಂಶಗಳೇ ವೈಭವೀಕರಣಗೊಂಡಂತಿದೆ.

ಕಿಂಗ್ಲೀಯರನಂತಹ ಗಂಭೀರ ದುರಂತಮಯ ರುದ್ರನಾಟಕದಲ್ಲಿ ಅಭಿನಯಿಸಲು ಅತಿರಥ ಮಹಾರಥ ಕಲಾವಿದರೇ ಹಿಂದುಮುಂದು ನೋಡುವಾಗಿ ಹೊಸ ಯುವಕ ಯುವತಿಯರು ಅಭಿನಯದ ಸವಾಲನ್ನು ಸ್ವೀಕರಿಸಿ ನಟಿಸಿದ್ದು ಮೆಚ್ಚುವಂತಹುದಾಗಿದೆ. ಆದರೆ ಎಲ್ಲಾ ನಟ ನಟಿಯರೂ ಇನ್ನೂ ಅಭಿನಯದ ಕೌಶಲ್ಯವನ್ನು ರೂಢಿಸಿಕೊಳ್ಳಬೇಕಾಗಿದೆ. ಈಗ ತಾನೆ ನಟನೆಯ ಪಾಠಗಳನ್ನು ಕಲಿಯುತ್ತಿರುವವರಿಗೆ ಇಂತಹ ಕ್ಲಿಷ್ಟಕರ ನಾಟಕವನ್ನು ತೆಗೆದುಕೊಂಡಿದ್ದು ನೀರಿಳಿಯದ ಗಂಟಲಲ್ಲಿ ಕಡಬು ತುರುಕಿದಂತಾಗಿದೆ. ಹೊಸಬರ ಸಾಮರ್ಥ್ಯವನ್ನೂ ಮೀರಿದಂತಹ ಪಾತ್ರಗಳು ನಾಟಕದಲ್ಲಿರುವುದರಿಂದ ಎಲ್ಲಾ ನಟರೂ ಇನ್ನೂ ಅಭಿನಯದಲ್ಲಿ ಪಳಗಬೇಕಿದೆ. ನಿರ್ದೇಶಕರು ಪಳಗಿಸಬೇಕಿದೆ. ಒಬ್ಬ ನಿರೂಪಕನ ಪಾತ್ರದ ಬದಲಾಗಿ ಐದಾರು ಜನ ಮಹಿಳೆಯರನ್ನು ನಿರೂಪನೆಗೆ ಬಳಸಿದ್ದು ಸೊಗಸಾಗಿ ಮೂಡಿಬಂದಿದೆ. ಆದರೆ.. ಸ್ವತಃ ಉತ್ತಮ ನೃತ್ಯನಿರ್ದೇಶಕಿಯೂ ಆದ ಸುಷ್ಮಾರವರು ನಿರೂಪಕ ಮಹಿಳೆಯರಿಗೆ ಹೆಜ್ಜೆಗಳನ್ನು ಸಂಯೋಜಿಸಬೇಕಾಗಿತ್ತು. ಎಲ್ಲಾ ನಟರಿಗೂ ಒಂದಿಷ್ಟು ರಂಗಶಿಸ್ತನ್ನು ಕಲಿಸಬೇಕಾಗಿತ್ತು. ನಟರ ಮುಂದೆ ಇನ್ನೊಬ್ಬ ನಟರು ಮಾಸ್ಕ್ ಮಾಡುವುದನ್ನು ತಪ್ಪಿಸಬಹುದಾಗಿತ್ತು. ಪಾತ್ರಗಳ ನಡುವೆ ಹೊಂದಾಣಿಕೆ ಬೇಕಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಟರ ಚಲನೆ ಹಾಗೂ ಮಾತುಗಳಲ್ಲಿ ಪೋರ್ಸ ಬೇಕಾಗಿತ್ತು. ಯಾವುದೇ ನಟರೂ ಪಾತ್ರಗಳ ಒಳಗೆ ಇಳಿಯದೇ ಇರುವುದು ಅಭಿನಯ ವಿಭಾಗದ ಬಹು ದೊಡ್ಡ ವೈಪಲ್ಯವಾಗಿದೆ.

ಉತ್ತರ ಕರ್ನಾಟದ ಭಾಷೆಯ ಸೊಗಡನ್ನು ನಾಟಕದಲ್ಲಿ ಬಳಸಲಾಗಿದೆ. ಆದರೆ ಬೆಂಗಳೂರಿನವರಿಗೆ ವಿಶಿಷ್ಟ ಭಾಷಾ ಶೈಲಿಯನ್ನು ಉಚ್ಚಾರಣೆ ಮಾಡುವುದು ಸುಲಭದ ಮಾತಲ್ಲ. ಹೀಗಾಗಿ ಬಹುತೇಕ ಪಾತ್ರಧಾರಿಗಳ ಮಾತುಗಳು ಕೃತಕವೆನ್ನಿಸಿದವು. ಉತ್ತರ ಕರ್ನಾಟಕದಲ್ಲಿ ದೊರೆಗೆ ದೊರೆ ಎನ್ನುತ್ತಾರೆಯೇ ಹೊರತು ನಾಟಕದಾದ್ಯಂತ ಹೇಳಿದ ಹಾಗೆ ದೊರಿ ಎನ್ನುವುದಿಲ್ಲ. ಶಿವನ ಪೂಜೆಲಿ ಕರಡಿ ಎನ್ನುವುದು ಸರಿಯಲ್ಲ. ಕರಡಿಕೆ ಎನ್ನುವುದು ಸರಿಯಾದದ್ದು. ನಾಟಕದ ಸಂಭಾಷಣೆಗಳು ತುಂಬಾ ಸೊಗಸಾಗಿವೆ. ಪ್ರಾಸಬದ್ಧ ಮಾತುಗಳು ಆಕರ್ಷಣೀಯವೆನಿಸುತ್ತವೆ. ಆದರೆ ಕೆಲವೊಮ್ಮೆ ದೊಡ್ಡಾಟದ ಶೈಲಿಯ ಹಾಗೆ ಗಂಡಾ ತೇಲೋ ಬೆಂಡಾ ಎನ್ನುವ ಪ್ರಾಸಗಳು ಕೃತಕವೆನಿಸುತ್ತವೆ.

ಹೊಸದಾಗಿ ನಟನೆಯನ್ನು ರೂಢಿಸಿಕೊಳ್ಳುತ್ತಿರುವ ಯುವಕ ಯುವತಿಯರ ಆರಂಭಿಕ ಸಮಸ್ಯೆಗಳನ್ನು ಪ್ರೇಕ್ಷಕರು ಪ್ರೀತಿಯಿಂದ ಹೊಟ್ಟೆಗೆ ಹಾಕಿಕೊಳ್ಳಬಹುದಾಗಿದೆ. ಮುಂದಿನ ಪ್ರದರ್ಶನಗಳಲ್ಲಿ ಇನ್ನೂ ಚೆನ್ನಾಗಿ ಅಭಿನಯಿಸಲಿ ಎಂದು ಹಾರೈಸಬಹುದಾಗಿದೆ. ಆದರೆ ನಟರ ಅಭಿನಯ ಸಾಮರ್ಥ್ಯದ ಕೊರತೆಯನ್ನು ರಂಗತಂತ್ರಗಳಿಂದಾದರೂ ತುಂಬಿಕೊಡುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಅದ್ಯಾಕೋ ಅವೂ ಸಹ ನೋಡುಗರಲ್ಲಿ ಭಾವತೀವ್ರತೆಯನ್ನು ಹುಟ್ಟಿಸಲು ಸಹಕಾರಿಯಾಗಲೇ ಇಲ್ಲ. ಯಾಕೆಂದರೆ ಬೆಳಕು ಇದೆ ಆದರೆ ಅದಕ್ಕೊಂದು ಸ್ಪಷ್ಟ ಉದ್ದೇಶವೇ ಇಲ್ಲ. ಒಬ್ಬರ ನೆರಳು ಇನ್ನೊಬ್ಬರ ಮೇಲೆ ಬೀಳುವಂತೆ ಸಂಯೋಜನೆ ಮಾಡಲಾಗಿದೆ. ಕತ್ತಲದ ದೃಶ್ಯದಲ್ಲಿ ಬೆಳಕಿದೆ, ಬೆಳಕಿನ ದೃಶ್ಯದಲ್ಲಿ ನೆರಳಿದೆ. ಹಿನ್ನಲೆಯಲ್ಲಿ ಸೈಕ್ ಬಳಸಲಾಗಿದೆ, ಆದರೆ ಮೂಡಿಗೆ ತಕ್ಕಂತೆ ಸೈಕ್ ಬಣ್ಣ ಬದಲಾಯಿಸುವುದರಲ್ಲಿ ವಿಫಲವಾಗಿದೆ.

 
ನಿರ್ದೇಶಕಿ ಸುಷ್ಮಾ  
ನಾಟಕದಲ್ಲಿ ತುಂಬಾ ಸೊಗಸಾದ ಅರ್ಥಪೂರ್ಣವಾದ ಹಾಡುಗಳಿವೆ. ಆದರೆ ಹೆಣ್ಣುಮಕ್ಕಳು ವೇದಿಕೆಯಲ್ಲಿ ಹಾಡುವಂತೆ ನಟಿಸುವಾಗ ಹಿನ್ನಲೆಯಲ್ಲಿ ಗಂಡು ದ್ವನಿಯನ್ನು ಕೊಡಲಾಗಿದೆ. ರಾಜಗುರುರವರು ಹಾಡಿದ ರೀತಿ, ಹಿನ್ನಲೆ ಸಂಗೀತ ಸಂಯೋಜಿಸಿದ ರೀತಿ ದೃಶ್ಯಕ್ಕೆ ಅಗತ್ಯವಾದ ಮೂಡ್ ತರಿಸಲೇ ಇಲ್ಲರಂಗವಿನ್ಯಾಸದಲ್ಲೂ ಅಂತಹ ವಿಶೇಷತೆ ಏನಿರಲಿಲ್ಲ. ರಾಜಲಾಂಚನವನ್ನು ಅಗತ್ಯವಿಲ್ಲದಿದ್ದಾಗಲೂ ಬಳಸಿದ್ದು ಆಬಾಸಕಾರಿಯಾಗಿತ್ತು. ನಾಟಕದಲ್ಲಿ ಪಾತ್ರಗಳಿಗೆ ಬಳಸಲಾದ ಕಾಸ್ಟೂಮ್ಸ್ಗಳಿಗೆ ಇನ್ನೂ ಒಂದಿಷ್ಟು ಮುತುವರ್ಜಿ ವಹಿಸಬೇಕಾಗಿತ್ತು. ಪಾತ್ರಗಳ ಸ್ಥಾನಮಾನಗಳು ಬದಲಾದಂತೆ, ಸನ್ನಿವೇಶಗಳು ಬದಲಾದಂತೆ ವೇಶಭೂಷಣಗಳಲ್ಲೂ ಒಂದಿಷ್ಟು ಸೂಕ್ತ ಬದಲಾವಣೆ ತರಬೇಕಿತ್ತು. ಬ್ಲಾಕಿಂಗ್ನಲ್ಲಿ ಇನ್ನೂ ಶ್ರಮವಹಿಸಬೇಕಿದೆ. ನಾಟಕ ಇನ್ನೂ ಕ್ಲಾಸ್ ರೂಂ ಪ್ರೊಡಕ್ಷನ್ ಹಂತದಲ್ಲೇ ಇದ್ದು ಸಾರ್ವತ್ರಿಕ ಪ್ರದರ್ಶನಕ್ಕೆ ಸಿದ್ದಗೊಳಿಸಬೇಕಾಗಿದೆ. ಎಲ್ಲಾ ವಿಭಾಗಗಳಲ್ಲೂ ವೃತ್ತಿಪರತೆ ಬೇಕಾಗಿದೆ. ಯಾಕೆಂದರೆ ನಾಟಕದ ನಟರು ಹೊಸಬರಿರಬಹುದು ಆದರೆ ನಾಟಕ ನಿರ್ಮಿಸಿದ ಸಂಸ್ಥೆ ಹಾಗೂ ನಿರ್ದೇಶಕಿ ರಂಗಭೂಮಿಯಲ್ಲಿ ಪಳಗಿದವರು. ವೃತ್ತಿಪರತೆ ಹೊಂದಿದವರು. ಹೀಗಾಗಿ ಪ್ರೇಕ್ಷಕರಲ್ಲಿ ನಾಟಕದ ಕುರಿತು ನಿರೀಕ್ಷೆ ಇರುತ್ತದೆ. ನಿರೀಕ್ಷೆ ನಿರಾಸೆಯಾಗದಂತೆ ನೋಡಿಕೊಳ್ಳುವುದು .ಎಸ್.ಮೂರ್ತಿಯವರಂತಹ ರಂಗದಿಗ್ಗಜರು ರೂಪಿಸಿದ ಸಂಸ್ಥೆಯ ಜವಾಬ್ದಾರಿಯೂ ಆಗಿದೆ. .ಎಸ್. ಮೂರ್ತಿಯವರ ನೆನಪಿನಲ್ಲಿ ಉತ್ತಮ ನಾಟಕಗಳು ಪ್ರದರ್ಶನಗೊಂಡಲ್ಲಿ ಮಹಾ ರಂಗಚೇತನಕ್ಕೆ ನಿಜವಾದ ರಂಗನಮನವನ್ನು ಅರ್ಪಿಸಿದಂತಾಗುತ್ತದೆ. ಏನೇ ಇರಲಿ ನಿರ್ದೇಶಕಿಯ ಪ್ರಯತ್ನ ಮೆಚ್ಚಲೇಬೇಕಿದೆ. 'ವಿಜಯನಗರ ಬಿಂಬ' ದ ರಂಗನಿಷ್ಟೆ ಪ್ರಶ್ನಾತೀತವಾಗಿದೆ. 

                               -ಶಶಿಕಾಂತ ಯಡಹಳ್ಳಿ      












    



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ