ಸೋಮವಾರ, ಸೆಪ್ಟೆಂಬರ್ 1, 2014

ದಶಮಾನೋತ್ಸವದ ಸಂಭ್ರಮದಲ್ಲಿ “ಜನಮನದಾಟ” :

ಜನಮನದಾಟದ 'ಬದುಕು ಬಯಲು' ನಾಟಕದ ದೃಶ್ಯ


ಆಲದಮರದ ಕೆಳಗಡೆ ಏನೂ ಬೆಳೆಯೋದಿಲ್ಲ ಎನ್ನುವುದು ಅನುಭಾವಿಗಳ ಮಾತು.

ಇದನ್ನು ಹುಸಿ ಮಾಡಿದ ಕೀರ್ತಿ ರಂಗದಿಗ್ಗಜ ಕೆ.ವಿ.ಸುಬ್ಬಣ್ಣನವರದು. ಆಲದಮರವನ್ನು ಬೆಳೆಸುವ ಸಾಮರ್ಥ್ಯವಿದ್ದವರು, ಪರಿಸರದ ಕುರಿತು ಅರಿವಿದ್ದವರು.. ಅದರ ಕೆಳಗೂ ಸಹ ಮರಗಳನ್ನು ಬೆಳೆಸಬಲ್ಲರು ಎನ್ನುವುದಕ್ಕೆ ಸುಬ್ಬಣ್ಣನವರೇ ಉದಾಹರಣೆಯಾಗಿದ್ದಾರೆ. ಕೆ.ವಿ.ಸುಬ್ಬಣ್ಣನವರು ಆಧುನಿಕ ಕನ್ನಡ ರಂಗಭೂಮಿಗೆ ಹೊಸ ದಿಕ್ಕು ದೆಸೆಯನ್ನು ತೋರಿಸಿದ ಮಹಾನುಭಾವರು. ಕರ್ನಾಟಕದಲ್ಲಿ ರೆಪರ್ಟರಿ ಪರಿಕಲ್ಪನೆಯನ್ನು ಶುರುಮಾಡಿ ಯಶಸ್ವಿಯಾದವರು. ನೀನಾಸಮ್ ರಂಗಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಾವಿರಾರು ಯುವಕ ಯುವತಿಯರಿಗೆ ರಂಗತರಬೇತಿಯನ್ನು ಕೊಡುತ್ತಾ, ನಾಡಿನಾದ್ಯಂತ ನಾಟಕ ಚಳುವಳಿಯನ್ನೇ ಹುಟ್ಟುಹಾಕಿದವರು. ಬಹುಷಃ ಬೇರೆ ಯಾರೇ ಆಗಿದ್ದರೂ ಸಂಸ್ಥೆಯೊಳಗಿನ್ನೊಂದು ಬೇರೆ ಸಂಸ್ಥೆ, ರೆಪರ್ಟರಿಯೊಳಗಿನ್ನೊಂದು ಅನ್ಯ ರೆಪರ್ಟರಿ ಬೆಳೆಯಲು ಬಿಡುತ್ತಿರಲಿಲ್ಲ. ಆದರೆ ಸುಬ್ಬಣ್ಣ ನಿಜಕ್ಕೂ ಗ್ರೇಟ್. ಅವರಿಗೆ ತಮ್ಮ ಸಂಸ್ಥೆಗಿಂತಲೂ ರಂಗಭೂಮಿ ಮುಖ್ಯವಾಗಿತ್ತು. ವ್ಯಕ್ತಿಗಿಂತಲೂ ರಂಗಭೂಮಿ ಶಕ್ತಿಯುತವಾಗಿ ಬೆಳೆಯುವುದು ಪ್ರಮುಖವಾಗಿತ್ತು.


ನೀನಾಸಮ್ ರಂಗಮಂದಿರ, ಹೆಗ್ಗೋಡು.


ನೀನಾಸಮ್ ಹಲವಾರು ಪ್ರತಿಭೆಗಳನ್ನು ಬೆಳೆಸಬೇಕು. ಪ್ರತಿಭೆಗಳೆಲ್ಲಾ ಪ್ರಬುದ್ದತೆ ಪಡೆದು ತಮ್ಮ ತಮ್ಮ ಪ್ರದೇಶಗಳಲ್ಲಿ ಒಂದೊಂದು ಪುಟ್ಟ ರೆಪರ್ಟರಿಗಳನ್ನು ಕಟ್ಟಬೇಕು. ಇಂತಹ ಸಾವಿರಾರು ಚಿಕ್ಕ ಪುಟ್ಟ ರೆಪರ್ಟರಿಗಳು ನಾಡಿನಾದ್ಯಂತ ಹುಟ್ಟಬೇಕು. ನಿರಂತರ ನಾಟಕಗಳ ಪ್ರದರ್ಶನದ ಒಂದು ಸರಣಿಯೇ ಶುರುವಾಗಬೇಕು. ಹೀಗಾದಾಗ ಕೊನೆಗೊಂದು ದಿನ ರಂಗಭೂಮಿಗೆ ನೀನಾಸಮ್ ತಿರುಗಾಟದ ಅಗತ್ಯವೇ ಇಲ್ಲದಂತಾಗಿ ಅದನ್ನು ಮುಚ್ಚಿಬಿಡಬೇಕು. ಇದು ನನ್ನ ಕನಸು, ಇದು ನನ್ನ ಆಶಯ.. ಎಂದು ಕೆ.ವಿ.ಸುಬ್ಬಣ್ಣನವರು ಹೇಳುತ್ತಿದ್ದರಂತೆ. ತಮ್ಮ ಆಶಯಕ್ಕೆ ಪೂರಕವಾಗಿ ಹಲವರನ್ನು ಪ್ರೇರೇಪಿಸುತ್ತಿದ್ದರು. ಕೆಲವರ ಪರಿಕಲ್ಪನೆಗಳಿಗೆ ಪ್ರೋತ್ಸಾಹಿಸುತ್ತಿದ್ದರು.


ರಂಗದಿಗ್ಗಜ ಕೆ.ವಿ.ಸುಬ್ಬಣ್ಣನವರು
ಹೀಗೆ ಸುಬ್ಬಣ್ಣನವರ ಸಹಕಾರದಿಂದ ನೀನಾಸಮ್ ಎನ್ನುವ ರಂಗ ಆಲದ ಮರದ ಮೇಲಿದ್ದ ಬೇರುಗಳು ಮತ್ತೆ ನೆಲಕ್ಕಿಳಿದು ಮರಿಆಲದ ಗಿಡ ಹುಟ್ಟಿದ ಪರಿ ಅಚ್ಚರಿದಾಯಕ. ಹೀಗೆ ನೀನಾಸಂ ಎನ್ನುವ ಮುಖ್ಯ ಆಲದಮರದ ಸತ್ವದಿಂದಲೇ ತನ್ನ ಹೊಸ ಅಸ್ತಿತ್ವವನ್ನು ರೂಪಿಸಿಕೊಂಡು ಬೆಳೆದ ಮರಿಆಲದ ಗಿಡದ ಹೆಸರು ಜನಮನದಾಟ. ಇದರ ರೂವಾರಿ ಎಂ.ಗಣೇಶ್. ಹತ್ತು ವರ್ಷಗಳ ಹಿಂದೆ ಹುಟ್ಟಿದ ಜನುಮನದಾಟ ಕ್ಕೆ ಈಗ ದಶಕದ ಸಂಭ್ರಮ. ಕಳೆದ ಹತ್ತು ವರ್ಷಗಳಲ್ಲಿ ಪ್ರತಿ ಮಳೆಗಾಲದಲ್ಲಿ ಮೋಡ ಕಟ್ಟಿ ನಾಟಕದ ಮಳೆಗರೆದು ಜನರ ಸಾಂಸ್ಕೃತಿಕ ಹಸಿವನ್ನು ತಣಿಸಿದ ಪುಟ್ಟ ರೆಪರ್ಟರಿಯ ರಂಗ ಪಯಣವನ್ನು  ಅಕ್ಷರಗಳಲ್ಲಿ ದಾಖಲಿಸುವ ಒಂದು ಚಿಕ್ಕ ಪ್ರಯತ್ನವೇ ಲೇಖನ.


ಕಿ ರಂ ನಾಗರಾಜರವರು
ಗ್ರಾಮೀಣ ಹಿನ್ನಲೆಯ ದಲಿತ ಸಮುದಾಯದಿಂದ ಬಂದ ಎಂ. ಗಣೇಶ್ ಬೆಂಗಳೂರು ಯುನಿವರ್ಸಿಟಿಯಲ್ಲಿ ಕನ್ನಡದಲ್ಲಿ ಎಂ.. ಮಾಡುತ್ತಿದ್ದರು. ಅದು 1998 ನೇ ಇಸ್ವಿ. ಅಂತಿಮ ವರ್ಷದ ಪರೀಕ್ಷೆ ಬರೆದಿದ್ದರು. ಗಣೇಶರವರಿಗೆ ಮೇಷ್ಟ್ರಾಗಿದ್ದವರು ಕೀರಂ ನಾಗರಾಜರವರು. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ, ನಾಟಕದ ಗಂಧಗಾಳಿ ಗೊತ್ತಿಲ್ಲದ ಗಣೇಶ ಆಗ ಮೊಟ್ಟಮೊದಲ ಬಾರಿಗೆ ಬೆಂಗಳೂರು ಯುನಿವರ್ಸಿಟಿಯಲ್ಲಿ  ಏಕಲವ್ಯ ನಾಟಕದಲ್ಲಿ ಪಾತ್ರ ಮಾಡಿದ್ದರು. ನಾಟಕದಲ್ಲಿ ಗಣೇಶರವರ ಅಭಿನಯ ನೋಡಿ ಕಿರಂ ಮೆಚ್ಚಿಕೊಂಡರು. ಸಂಸ್ಕೃತಿ ಶಿಬಿರಕ್ಕೆಂದು ಹೆಗ್ಗೋಡಿಗೆ ಹೋಗಿದ್ದ ಕೀರಂ ಬರುವಾಗ ಅರ್ಜಿ ಪಾರಂ ತೆಗೆದುಕೊಂಡು ಬಂದು ತಾವೇ ಸ್ವತಃ ಅದನ್ನು ತುಂಬಿದರು. ಗಣೇಶ ಕೈಯಲ್ಲಿ ಐನೂರು ರೂಪಾಯಿ ಬಸ್ ಚಾರ್ಜನ್ನೂ ಇಟ್ಟು, ಬಸ್ ರೂಟ್ ಮ್ಯಾಪನ್ನು ಸಹ ಬರೆದು ಕೊಟ್ಟು ನೀನಾಸಮ್ ಸಂಸ್ಥೆಯಲ್ಲಿ ಆಯ್ಕೆಯ ಸಂದರ್ಶನಕ್ಕಾಗಿ ಹೆಗ್ಗೋಡಿಗೆ ಹೊರಡು ಎಂದು ಆದೇಶಿಸಿದರುಕೀರಂ ರವರ ವ್ಯಕ್ತಿತ್ವವೇ ಹಾಗಿತ್ತು. ಗುರುಗಳ ಆದೇಶಕ್ಕೆ ಬದ್ದರಾಗಿ ನೀನಾಸಂ ಸೇರಿದ ಗಣೇಶ ಮುಂದೆ ರಂಗಗುರುವಾಗಿದ್ದು ಈಗ ಇತಿಹಾಸ.

1999ರಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದ ಎಂ.ಗಣೇಶ ತದನಂತರ ನೀನಾಸಮ್ ತಿರುಗಾಟದಲ್ಲಿ ಎರಡು ವರ್ಷಗಳ ಕಾಲ ತೊಡಗಿಸಿಕೊಂಡರು. ನೀನಾಸಮ್ನಲ್ಲಿ ರಂಗಶಿಕ್ಷಕರ ಆಯ್ಕೆ ನಡೆದಾಗ ರಂಗಚರಿತ್ರೆಯ ಶಿಕ್ಷಕರಾಗಿ ಗಣೇಶರವರನ್ನು ಸುಬ್ಬಣ್ಣನವರು ಆಯ್ಕೆಮಾಡಿಕೊಂಡರು. ಅಂದಿನಿಂದ ಗಣೇಶರವರು ಗಣೇಶ ಮೇಷ್ಟ್ರಾದರು. ತಾವು ಕಲಿತ ಸಂಸ್ಥೆಯಲ್ಲಿಯೇ ಕಲಿಸುವ ಗುರುವಾಗುವ ಭಾಗ್ಯ ಕೆಲವರಿಗೆ ಮಾತ್ರ ದಕ್ಕುತ್ತದೆ. ಕಳೆದ ಒಂದೂವರೆ ದಶಕಗಳಿಂದ ಹೆಗ್ಗೋಡಿನಲ್ಲೇ ನಾಟಕದ ಮೇಷ್ಟ್ರಾಗಿ ಹಲವಾರು ಯುವಕ
ಯುವತಿಯರಿಗೆ ರಂಗಪಾಠಗಳನ್ನು ಹೇಳುತ್ತಿದ್ದಾರೆ. ರಂಗಚರಿತ್ರೆಯನ್ನು ಕಲಿಸುತ್ತಿದ್ದಾರೆ. ಕೇವಲ ರಂಗಭೂಮಿ ಇತಿಹಾಸವನ್ನು ಕಲಿಸುವ ಶಿಕ್ಷಕರಾಗಿದ್ದರೆ ಗಣೇಶರವರು ರಂಗಶಾಲೆಗೆ ಮಾತ್ರ ಸೀಮಿತರಾಗಿರುತ್ತಿದ್ದರು. ಆದರೆ ಗಣೇಶರವರ ಮನಸ್ಸು ಹೇಳಿದ್ದನ್ನೇ ಹೇಳುವ ಏಕತಾನತೆಯನ್ನು ವಿರೋಧಿಸತೊಡಗಿತು. ಹೊಸ ಹೊಸದಕ್ಕೆ ತುಡಿಯುತ್ತಿತ್ತು. ಏನಾದರೂ ಮಾಡಲೇಬೇಕು ಎಂದು ತಹತಹಸುತ್ತಿತ್ತು. ರಂಗಚರಿತ್ರೆ ಪಾಠ ಮಾಡುತ್ತಲೇ ಅವರು ನಾಟಕಗಳನ್ನು ನಿರ್ದೇಶಿಸತೊಡಗಿದರು. ಹಲವಾರು ವಿಶಿಷ್ಟ ಕ್ಲಾಸ್ರೂಂ ಪ್ರೊಡಕ್ಷನ್ಗಳನ್ನು ಕಟ್ಟಿಕೊಟ್ಟರು. ಗಣೇಶರವರೊಳಗಿದ್ದ ರಂಗನಿರ್ದೇಶಕ ತನ್ನ ಪ್ರತಿಭೆಯನ್ನು ತೋರಿಸತೊಡಗಿದ. ಆದರೂ ಗಣೇಶರವರ ಒಳಗೊಂದು ಅತೃಪ್ತಿ ಕಾಡತೊಡಗಿತು. ಇನ್ನೂ ಏನಾದರೂ ಮಾಡಬೇಕು ಎನ್ನುವ ಹಪಾಹಪಿ. ಆಗ ಗಣೇಶರವರ ಹೊಸ ಸಾಧ್ಯತೆಗೆ ಪ್ರೇರಣೆಯಾಗಿದ್ದು ಶ್ರೀನಿವಾಸ ವೈದ್ಯರ ಕಥೆ ಶ್ರದ್ದಾ ಮತ್ತು ಹಣತೆ. ಕೆಲವು ಸಮಾನಾಸಕ್ತರೊಂದಿಗೆ ಸಮಾಲೋಚಿಸಲಾಯಿತು. ಎರಡು ತಿಂಗಳ ರಜಾಕಾಲವನ್ನು ಸಮರ್ಥವಾಗಿ ನಾಟಕ ಕಟ್ಟುವ ಮೂಲಕ ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಶ್ರದ್ದಾ ಮತ್ತು ಹಣತೆ ನಾಟಕ ಮಾಡಲು ಆಲೋಚಿಸಲಾಯಿತು. ಇದೇ ಆಲೋಚನೆ ಮುಂದೆ ರೆಪರ್ಟರಿಯೊಂದರ ಹುಟ್ಟಿಗೆ ಕಾರಣವಾಯಿತು.

ಒಂದು ರಂಗಶಿಕ್ಷಣ ಸಂಸ್ಥೆಯ ಭಾಗವಾಗಿದ್ದುಕೊಂಡು, ಶಿಕ್ಷಣ ಸಂಸ್ಥೆಯೊಳಗಿದ್ದುಕೊಂಡೇ ತನ್ನದೇ ಆದ ಇನ್ನೊಂದು ರೆಪರ್ಟರಿ ಕಟ್ಟುತ್ತೇನೆ ಎನ್ನುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಒಂದು ವ್ಯವಸ್ಥೆ ತನ್ನೊಳಗೇ ಇನ್ನೊಂದು ವ್ಯವಸ್ಥೆಯನ್ನು ಹುಟ್ಟಿ ಬೆಳೆಯಲು ಬಿಡುವುದೇ ಇಲ್ಲ. ಈಗಾಗಲೇ ಪಯಣ ಎನ್ನುವ ಒಂದು ರಂಗತಂಡವನ್ನು ನೀನಾಸಂ ಒಳಗಡೆ ಇರುವ ವೆಂಕಟರಮಣ ಐತಾಳ, ಶ್ರೀಧರ್ ಹೆಗ್ಗೋಡು, ಮಂಜು ಕೊಡಗು ಮುಂತಾದವರು ಹುಟ್ಟುಹಾಕಿದ್ದರು. ಅದನ್ನೇ ಉದಾಹರಣೆಯಾಗಿಟ್ಟುಕೊಂಡು  ರೆಪರ್ಟರಿಯೊಂದನ್ನು ಶುರುಮಾಡಬೇಕು ಎಂಬ ಆಸೆಯನ್ನು ಸುಬ್ಬಣ್ಣನವರ ಮುಂದೆ ಗಣೇಶರವರು ಪ್ರಸ್ತಾಪಿಸಿದರು. ಬೇರೆ ಯಾರೇ ಆಗಿದ್ದರೂ ರೆಪರ್ಟರಿಯೊಳಗೊಂದು ರೆಪರ್ಟರಿ ಹುಟ್ಟಲು ಬಿಡುತ್ತಲೇ ಇರಲಿಲ್ಲ. ನೌಕರಿಗೆ ರಾಜೀನಾಮೆ ಕೊಟ್ಟು ಬೇರೆಲ್ಲಾದರೂ ಹೋಗಿ ಏನಾದರೂ ಮಾಡಿಕೊಳ್ಳಿ ಎಂದು ಹೇಳುತ್ತಿದ್ದರು. ಆದರೆ ಕೆ.ವಿ.ಸುಬ್ಬಣ್ಣನವರು ಎಲ್ಲರಂತೆ ಸ್ವಾರ್ಥಿಗಳಾಗಿರಲಿಲ್ಲ. ಮೊದಲು ಕೆಲಸ ಮಾಡಿ. ನಾಟಕಗಳನ್ನು  ಕಟ್ಟಿ. ರೆಪರ್ಟರಿ ಬೆಳಸಿ, ಅಗತ್ಯ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿ ಬೆನ್ನು ತಟ್ಟಿ ಹಾರೈಸಿದರು. ನೀನಾಸಮ್ ಅಂಗ ಸಂಸ್ಥೆಯಾಗುವುದು ಬೇಡಾ, ನಿಮ್ಮದೇ ಆದ ರೆಪರ್ಟರಿ ಮಾಡಿಕೊಳ್ಳಿ. ನೀನಾಸಮ್ ಅಡ್ರೆಸ್ ಉಪಯೋಗಿಸಿಕೊಳ್ಳಿ, ಸಂಸ್ಥೆಯ ಜಾಗ ಬಳಸಿಕೊಂಡು ಬೇಕಾದ ಅನುಕೂಲತೆಗಳನ್ನು ಪಡೆದುಕೊಂಡು ನಿಮ್ಮದೇ ಆದ ಪುಟ್ಟ ರೆಪರ್ಟರಿಯೊಂದನ್ನು ಕಟ್ಟಿ ಬೆಳೆಸಿ. ಅದರ ಆಗುಹೋಗಿನ ಎಲ್ಲಾ ಜವಾಬ್ದಾರಿಗಳನ್ನು ನೀವೆ ನಿರ್ವಹಿಸಿ.. ಎಂದು ಹೇಳಿದ  ಸುಬ್ಬಣ್ಣನವರು ಎಲ್ಲಾ ರೀತಿಯ ಸಹಕಾರವನ್ನು ಕೊಟ್ಟರು.

ಅನುಮತಿಯೇನೋ ಸಿಕ್ಕಾಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ರಂಗಪಾಠ ಮಾಡುವ ಮೇಷ್ಟ್ರಿಗೆ ರೆಪರ್ಟರಿ ಕಟ್ಟಲು ಸಮಯವಾದರೂ ಎಲ್ಲಿದೆ. ಅದಕ್ಕೆ ಗಣೇಶರವರು ಬಳಸಿದ್ದು ತಮ್ಮ ಬೇಸಿಗೆ ರಜಾದಿನಗಳನ್ನು. ನೀನಾಸಂ ಶಿಕ್ಷಣ ಸಂಸ್ಥೆಗೆ ಮೇ 15 ರಿಂದ ಜುಲೈ 15 ರವರೆಗೆ ಎರಡು ತಿಂಗಳು ಬೇಸಿಗೆ ರಜೆ ಇರುತ್ತದೆ. ಬೇರೆ ಶಿಕ್ಷಕರಾಗಿದ್ದರೆ ರಜಾ ದಿನಗಳನ್ನು ತಮ್ಮ ಕುಟುಂಬ ಪರಿವಾರದೊಂದಿಗೆ ಮಜಾ ಮಾಡಲಿಕ್ಕೆ ಕಳೆಯುತ್ತಿದ್ದರು. ಆದರೆ ರಂಗಮೇಷ್ಟ್ರು ತಮ್ಮ ಖಾಸಗಿ ಸಮಯವನ್ನೂ ಸಹ ನಾಟಕ ಕಟ್ಟಲು ಬಳಸಿಕೊಂಡರು. ತಮಗೆ ದೊರೆತ ಎರಡೇ ತಿಂಗಳ ಕಾಲಮಿತಿಯೊಳಗೆ ಒಂದು ರೆಪರ್ಟರಿಯನ್ನು ಕಟ್ಟಿ, ಅದರ ಮೂಲಕ ವರ್ಷಕ್ಕೆ ಒಂದು ನಾಟಕವನ್ನು ನಿರ್ಮಿಸಿ ದಿನಕ್ಕೊಂದಾದರೂ ಪ್ರದರ್ಶನವನ್ನು ನಾಡಿನಾದ್ಯಂತ ಕೊಡಬೇಕು ಎನ್ನುವ ಯೋಜನೆ ರೂಪಗೊಂಡಿತು. ಅದಕ್ಕೆ ಏಳು ಜನರ ಒಂದು ಟೀಮ್ ಸಿದ್ದವಾಯಿತು.       

ನೀನಾಸಮ್ನಲ್ಲಿರುವ ಇನ್ನೊಬ್ಬ ರಂಗಶಿಕ್ಷಕ ಅರುಣ್ ಕುಮಾರ್.ಎಂ ಜೊತೆಗಿರುತ್ತೇನೆ ಎಂದರು. ಈಗಾಗಲೇ ನೀನಾಸಮ್ ತಿರುಗಾಟ ಮುಗಿಸಿದ ನೀನಾಸಮ್ ಕಲಾವಿದರಾದ ಶ್ರೀಕಾಂತ ದಾವಣಗೆರೆ, ಸಂತೋಷ ಗುಡ್ಡಿಅಂಗಡಿ, ಮಹಾದೇವ ಹಡಪದ, ಕಿರಣ್ ನಾಯ್ಕ, ಶ್ರೀಕಾಂತ ಕುಮ್ಟ ಹೀಗೆ ಒಟ್ಟು ಏಳು ಜನಕಲಾವಿದರು ಸೇರಿಸಿಕೊಂಡು ಸಹಕಾರಿ ತತ್ವದಲ್ಲಿ ಜನಮನದಾಟ ರಜಾಕಾಲದ ರೆಪರ್ಟರಿಯನ್ನು 2005 ರಲ್ಲಿ ಆರಂಭಿಸಲಾಯಿತು. ಹೀಗೆ ಒಂದಾದ ಇಡೀ ಟೀಂ ಸೇರಿ ರೆಪರ್ಟರಿಯ ರೂಪರೇಷೆಗಳನ್ನು ರೂಪಿಸಿದರು. ಹದಿನೈದು ದಿನ ನಾಟಕದ ರಿಹರ್ಸಲ್ಸ್ ಮಾಡಬೇಕು. ಒಂದೂವರೆ ತಿಂಗಳು ನಾಟಕವನ್ನು ಪ್ರದರ್ಶಿಸಬೇಕು. ಎಲ್ಲರೂ ಸೇರಿ ಒಂದಿಷ್ಟು ಹಣ ನಾಟಕದ ಖರ್ಚಿಗೆ ಕೊಡಬೇಕು. ನಾಟಕದಿಂದ ಬಂದ ಆದಾಯವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳಬೇಕು. ಪ್ರತಿ ವರ್ಷ ಎರಡು ತಿಂಗಳುಗಳ ಕಾಲ ಜೊತೆಯಾಗಿರಬೇಕು. ಎಲ್ಲಾ ಕೆಲಸಗಳನ್ನು ಎಲ್ಲರೂ ಹಂಚಿಕೊಂಡು ಮಾಡಬೇಕು ಎನ್ನುವ  ಅಲಿಖಿತ ಕರಾರುಗಳೊಂದಿಗೆ ರೆಪರ್ಟರಿ ಶುರುವಾಯಿತು.

ಜನಮನದಾಟದ ರೂವಾರಿ ಎಂ.ಗಣೇಶ್ ಮ
ರಜಾಕಾಲದ ರೆಪರ್ಟರಿಯ ಮೊಟ್ಟ ಮೊದಲ ನಾಟಕವಾಗಿ ಶ್ರೀನಿವಾಸ ವೈದ್ಯ ರವರ ಶ್ರದ್ದಾ ಮತ್ತು ಹಣತೆ ಕಥೆಯನ್ನು ಆಯ್ಕೆ ಮಾಡಿಕೊಂಡು ಎಲ್ಲರೂ ಸೇರಿ ಮಾತುಕತೆಗಳ ಮೂಲಕ ರಂಗರೂಪಗೊಳಿಸಿ ನಿರ್ದೇಶಿಸಿದರು. ನಾಟಕಕ್ಕೆ ಅಗತ್ಯವಾದ ಬೆಳಕು, ಸಂಗೀತ ಸಾಧನಗಳನ್ನು ಹಾಗೂ ಕೆಲವು ರಂಗಪರಿಕರಗಳನ್ನು ನೀನಾಸಮ್ ನಿಂದ ಎರವಲು ಪಡೆಯಲಾಯಿತು. 2005, ಜೂನ್ 5 ರಂದು ಜನಮನದಾಟ ಮೊಟ್ಟ ಮೊದಲ ಪ್ರಯೋಗವಾಗಿ ಶ್ರದ್ದಾ ಮತ್ತು ಹಣತೆ ಹೆಗ್ಗೋಡಿನ ನೀನಾಸಂ ಕೇಂದ್ರದಲ್ಲಿ  ಪ್ರದರ್ಶನಗೊಂಡಿತುಪ್ರದರ್ಶನದ ನಂತರ ಸಂಪ್ರೀತರಾದ ಕೆ.ವಿ.ಸುಬ್ಬಣ್ಣನವರು ನಾಟಕವನ್ನು ವಿಮರ್ಶಿಸಿ ಸಲಹೆ ಸೂಚನೆಗಳನ್ನಿತ್ತು ಇಡೀ ತಂಡವನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಹೆಗ್ಗೋಡಿನಿಂದ ಹೊರಗಡೆ ನಾಟಕ ಪ್ರದರ್ಶಿಸಲು ಅವಕಾಶಗಳ ಹುಡುಕಾಟ ನಡೆಯಿತು. ಈಗಾಗಲೇ ನೀನಾಸಮ್ ತಿರುಗಾಟದ ಒಂದು ದೊಡ್ಡ ನೆಟ್ವರ್ಕ ಬಿಲ್ಡಪ್ ಆಗಿತ್ತು. ಅದನ್ನೆ ಬಳಸಿಕೊಂಡು ಹಲವಾರು ಊರುಗಳ ರಂಗಸಂಘಟಕರನ್ನು ಸಂಪರ್ಕಿಸಿ ಕೆಲವು ಪ್ರದರ್ಶನಗಳನ್ನು ಫಿಕ್ಸ್ ಮಾಡಲಾಯಿತು. ಎರಡನೇ ಪ್ರದರ್ಶನವಾಗಿದ್ದು ಜೋಗದಲ್ಲಿ. ಮೊದಲ ನಾಟಕ ಪ್ರದರ್ಶನಕ್ಕೆ ಪಡೆದ ಸಂಭಾವನೆ 1500 ರೂಪಾಯಿಗಳು. ಬಸ್ಸು ರೈಲುಗಳಲ್ಲಿ ನಾಟಕದ ಪರಿಕರಗಳನ್ನು ತಂಡದ ಸದಸ್ಯರು ಹೊತ್ತುಕೊಂಡು ಹೋಗಿ ನಾಟಕಗಳನ್ನು ಮಾಡಿ ಬಂದರು. ಹೀಗೆ ಒಟ್ಟು ಇಪ್ಪತೈದು ಸ್ಥಳಗಳಲ್ಲಿ ನಾಟಕದ ಪ್ರದರ್ಶನವಾಯಿತು. ಆರ್ಥಿಕವಾಗಿ ಹೆಚ್ಚು ಲಾಭವಾಗದಿದ್ದರೂ ನಷ್ಟವಂತೂ ಆಗಲಿಲ್ಲ.

ಮರುವರ್ಷ 2006 ರಲ್ಲಿ ಲಕ್ಷ್ಮಣ್ ಗಾಯಕವಾಡರವರ ಉಚಲ್ಯಾ ಕಾದಂಬರಿಯನ್ನು ತೆಗೆದುಕೊಂಡು ನಾಟಕ ಮಾಡಲಾಯಿತು. ತಂಡದ ಎಲ್ಲರೂ ಸೇರಿಯೇ ನಾಟಕವನ್ನು ಕಟ್ಟಿಕೊಟ್ಟು ನಟಿಸಿದ್ದರು. ನಲವತ್ತಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿತು. ಇಷ್ಟೊತ್ತಿಗಾಗಲೇ ಜನಮನದಾಟ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳತೊಡಗಿತು. ರೆಪರ್ಟರಿಯ ನಾಟಕಗಳು ಪ್ರಸಿದ್ದಿ ಪಡೆಯತೊಡಗಿದವು. ಆದರೆ.. ರೆಪರ್ಟರಿಗೊಂದು ಹೆಸರು ಬಂದಂತೆಲ್ಲಾ ತಂಡದಲ್ಲಿ ಭಿನ್ನಾಭಿಪ್ರಾಯಗಳು ಮೂಡತೊಡಗಿದವು. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ಶಾಲೆ ಆಯೋಜಿಸಿದ ಭಾರತ ರಂಗ ಮಹೋತ್ಸವದಲ್ಲಿ ನಾಟಕ ಪ್ರದರ್ಶಿಸಿದಾಗ ಬಂದ ದೊಡ್ಡದಾದ ಮೊತ್ತದಲ್ಲಿ ತಂಡದ ಪರಿಕರಗಳಿಗೆ ಹಣ ಉಳಿಸಿಕೊಳ್ಳವ ವಿಷಯದಲ್ಲಿ ವಿವಾದ ತಲೆದೋರಿತು. ಯಶಸ್ಸಿನಲ್ಲಿ ಹೆಚ್ಚಿನ ಪಾಲು ಪಡೆಯಲು ಪ್ರಯತ್ನಗಳು ಆರಂಭಗೊಂಡವು. ಹೆಚ್ಚುಗಾರಿಕೆಯ ಪ್ರಶ್ನೆ ಹಾಗೂ ಪ್ರತಿಷ್ಟೆಗಳು ಇಡೀ ತಂಡವನ್ನೇ ಒಡೆದು ಹಾಕಿತು. ಮನಸ್ತಾಪದಿಂದ ಕೆಲವರು ಹೊರಗುಳಿದರು. ಬೇರೆ ಕೆಲಸಗಳ ಒತ್ತಡಕ್ಕೊಳಗಾಗಿ ಇನ್ನು ಕೆಲವರು ದೂರಾದರು. ಇಡೀ ತಂಡವನ್ನು ಮತ್ತೆ ಕಟ್ಟುವ ಜವಾಬ್ದಾರಿ ಗಣೇಶರವರ ಮೇಲೆ ಬಿತ್ತು. ಅದನ್ನು ಅವರು ಸಮರ್ಥವಾಗಿ ನಿರ್ವಹಿಸಿದರು. ಈಗಾಗಲೇ ನೀನಾಸಂನಲ್ಲಿ ಕಲಿತು ತಿರುಗಾಟದಲ್ಲಿ ಪಳಗಿದ ಕಲಾವಿದರನ್ನು ಸೇರಿಸಿಕೊಂಡು ಜನಮನದಾಟ ಮತ್ತೆ ಮುಂದುವರೆಯಿತು. ಮೂರನೆಯ ವರ್ಷ 2007 ರಲ್ಲಿ ಪೂರ್ಣಚಂದ್ರ ತೇಜಸ್ವಿರವರ ರಹಸ್ಯ ವಿಶ್ವ ಮತ್ತು ತಬರನ ಕಥೆ ಎರಡೂ ಕಥೆಗಳನ್ನು ಡ್ರಾಮಾಟೈಸ್ ಮಾಡಲಾಯಿತು. ಇಡೀ ತಂಡ ಸೇರಿ ಇದನ್ನು ಸಾಮೂಹಿಕವಾಗಿ ಇದನ್ನು ನಿರ್ದೇಶಿಸಿದ್ದರು. ಇದೂ ಸಹ ನಲವತ್ತಕ್ಕೂ ಹೆಚ್ಚು ಪ್ರದರ್ಶನಗೊಂಡಿತು.


'ಬಾಬಾಸಾಹೇಬ ಅಂಬೇಡ್ಕರ್' ನಾಟಕದ ದೃಶ್ಯ

2008 ರಲ್ಲಿ ಕವಿ ಮುಕುಂದರಾಜ್ರವರು ಗಣೇಶರವರ ಒತ್ತಾಯದ ಮೇರೆಗೆ ಬರೆದುಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ನಾಟಕವಾಗಿ ಸಿದ್ದವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಂಡಿತು. ದಲಿತ ಸಂಘಟನೆಗಳು ಊರು ಕೇರಿಗಳಿಗೆ ತಂಡವನ್ನು ಕರೆಸಿ ಬಾಬಾಸಾಹೇಬ... ನಾಟಕವನ್ನು ಆಡಿಸಿ ಸಂಭ್ರಮಿಸಿದರು. ನಗರ ಕೇಂದ್ರಿತ ಪ್ರದರ್ಶನಗಳನ್ನು ಕೊಡುತ್ತಿದ್ದ ಜನಮನದಾಟ ತಂಡವು ಈಗ ಗ್ರಾಮ ಗ್ರಾಮಗಳಲ್ಲೂ ಪ್ರದರ್ಶನಗಳನ್ನು ಕೊಡತೊಡಗಿತು. ದಲಿತರ ಕೇರಿಗಳಲ್ಲಿ ಪ್ರದರ್ಶನಗಳಾದವು. ನಾಟಕ ಇಲ್ಲಿವರೆಗೂ 95 ಪ್ರದರ್ಶನಗಳನ್ನು ಕಂಡಿದೆ ಎಂಬುದೇ ಅದರ ಯಶಸ್ಸಿಗೆ ಸಂಕೇತವಾಗಿದೆ.

ಮೇಲಿನ ನಾಲ್ಕೂ ನಾಟಕಗಳ ವಿಶೇಷತೆ ಏನೆಂದರೆ ನಾಟಕಗಳಿಗೆ ಯಾರೂ ಒಬ್ಬ ನಿರ್ದೇಶಕ ಎನ್ನುವವನಿಲ್ಲ. ತಂಡದ ಎಲ್ಲಾ ಸದಸ್ಯರೂ ಸೇರಿ ಸಾಮೂಹಿಕವಾಗಿ ನಿರ್ದೇಶಿಸಿದ್ದು  ನಾಟಕಗಳ ವಿಶೇಷತೆಯಾಗಿದೆ. ಒಂದಿಡೀ ತಂಡ ಸೇರಿ ಉತ್ತಮ ರೀತಿಯಲ್ಲಿ ನಾಟಕ ಕಟ್ಟಬಹುದು ಎನ್ನುವುದನ್ನು ಜನಮನದಾಟ ತಂಡ ನಿರೂಪಿಸಿ ತೋರಿಸಿತು. ಎಲ್ಲರೂ ಸೇರಿ ಎಲ್ಲವನ್ನೂ ಮಾಡಿ ಅದರಿಂದ ಬಂದದ್ದನ್ನು ಎಲ್ಲರೂ ಹಂಚಿಕೊಳ್ಳುವ ಕಮ್ಯೂನ್ ಮಾದರಿಯ ಕೆಲಸ ನಿಜಕ್ಕೂ ರಂಗಭೂಮಿಯಲ್ಲಿ ಸಮಾಜವಾದಿ ಸಾಹಸವಾಗಿದೆ. ಆದರೆ ಇದ್ಯಾಕೋ ಬಹುವರ್ಷಗಳ ಕಾಲ ಪ್ರ್ಯಾಕ್ಟಿಕಲ್ ಆಗಿ ನಡೆಯಲಿಲ್ಲ. ಯಶಸ್ಸಿನ ಹಕ್ಕುದಾರಿಕೆಯಲ್ಲಿ ಸಮಸ್ಯೆ ಉಂಟಾಗತೊಡಗಿತು. ಗಣೇಶ ಒಬ್ಬರು ಮಾತ್ರ ದಲಿತ ಸಂಘಟನೆ ಹಾಗೂ ವಿದ್ಯಾರ್ಥಿ ಚಳುವಳಿಗಳ ಹಿನ್ನೆಲೆಯಿಂದ ಬಂದವರಾಗಿದ್ದರು. ಆದರೆ ಬಾಕಿ ಉಳಿದವರಿಗೆ ಬದ್ದತೆ ಹಾಗೂ ಅನುಭವ ಇರಲಿಲ್ಲ. ಐಡೆಂಟಿಟಿ ಕ್ರೈಸಿಸ್ ಅನ್ನೋದು ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡತೊಡಗಿತ್ತು. ಇದನ್ನು ಮನಗಂಡ ಗಣೇಶರವರು ತಾವೇ ನಾಟಕ ನಿರ್ದೇಶಿಸಲು ನಿರ್ಧರಿಸಿದರುಜನಮನದಾಟದ ಸಂಪೂರ್ಣ ಜವಾಬ್ದಾರಿಯನ್ನೂ ವಹಿಸಿಕೊಂಡರು. 2009 ರಲ್ಲಿ ಡಾ.ಯು.ಆರ್.ಅನಂತಮೂರ್ತಿಯವರ ಕಥೆಯನ್ನಾಧರಿಸಿ ಸೂರ್ಯನ ಕುದುರೆ ನಾಟಕವನ್ನು ಜನಮನದಾಟಕ್ಕೆ ಮೊದಲ ಬಾರಿಗೆ ಗಣೇಶ್ ನಿರ್ದೇಶಿಸಿದರು. ಇದೂ ಕೂಡಾ ಐವತ್ತು ಪ್ರಯೋಗಗಳನ್ನು ಕಂಡಿತು.


'ಊರುಕೇರಿ' ನಾಟಕದಲ್ಲಿ ಗಣೇಶ್ ಮೇಷ್ಟ್ರು ದಲಿತನ ಪಾತ್ರದಲ್ಲಿ

2010 ರಲ್ಲಿ ಯಾವಾಗ ದಲಿತಕವಿ ಸಿದ್ದಲಿಂಗಯ್ಯವರ ಊರುಕೇರಿ ಆತ್ಮಕಥೆಯನ್ನಾಧರಿಸಿ ಗಣೇಶರವರು ನಾಟಕ ನಿರ್ದೇಶಿಸಿದರೋ ಆಗ ಜನಮನದಾಟ ತಂಡ ಇನ್ನೂ ಹೆಚ್ಚು ಪ್ರಸಿದ್ಧಿಯನ್ನು ಪಡೆಯಿತು. ಪ್ರದರ್ಶನದ ಸ್ಥಳಗಳು ವಿಸ್ತರಣೆಗೊಂಡವು. ಡಿಎಸ್ಎಸ್ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳು ನಾಟಕವನ್ನು ಸ್ವಪ್ರೇರಣೆಯಿಂದ ಕರೆಯಿಸಿ ತಮ್ಮ ಊರು ಕೇರಿಗಳಲ್ಲಿ ಪ್ರದರ್ಶನಗೊಳಿಸಲು ಅನುಕೂಲ ಮಾಡಿಕೊಟ್ಟವು. ಮುಂದಿನ ಮೂರು ವರ್ಷಗಳ ಕಾಲ ಬೇರೆ ಹೊಸ ನಾಟಕಗಳನ್ನು ಮಾಡಲಾಗದಷ್ಟು ಬೇಡಿಕೆ ಊರುಕೇರಿ ನಾಟಕದ್ದಾಗಿತ್ತು. 2010 ರಿಂದ 2012 ರವರೆಗಿನ ಮೂರು ವರ್ಷಗಳಲ್ಲಿ ನಾಟಕ 113 ಪ್ರದರ್ಶನಗಳನ್ನು ಕಂಡಿತು. ಇನ್ನೂ ಸಹ ನಾಟಕಕ್ಕೆ ಆಗಾಗ ಪ್ರದರ್ಶಿಸಲು ಒತ್ತಡದ ಬೇಡಿಕೆ ಬರುತ್ತಿವೆ. ಆದರೆ ಪ್ರದರ್ಶಿಸಲು ತಂಡಕ್ಕೆ ಸಮಯ ಇಲ್ಲದಾಗಿದೆ.


ಬದುಕುಬಯಲು ನಾಟಕದ ದ
2012 ರಲ್ಲಿ ಇನ್ನೊಂದು ಸಾಹಸಕ್ಕೆ ಜನಮನದಾಟ ತಂಡ ಸಿದ್ದವಾಯಿತು. ಹಿಜಡಾ ಸಮುದಾಯದ ರೇವತಿಯವರು ಬರೆದ ಆತ್ಮಕಥಾನಕವಾದ ಬದುಕು ಬಯಲು ಕೃತಿಯನ್ನು ರಂಗರೂಪಕ್ಕಿಳಿಸಲಾಯಿತು. ಗಣೇಶರವರು ನಿರ್ದೇಶನದ ಹೊಣೆಗಾರಿಕೆ ಹೊತ್ತರು. ನಾಟಕ ಲೈಂಗಿಕ ಅಲ್ಪಸಂಖ್ಯಾತರ ಆಶಾಕಿರಣವಾಯಿತು. ಹಿಜಡಾ ಜನಾಂಗದವರೇ ಸ್ವಯಂ ಪ್ರೇರಿತರಾಗಿ ಬಂದು ನಾಟಕವನ್ನು ತಮ್ಮ ಸಮುದಾಯದವರ ಮುಂದೆ ಪ್ರದರ್ಶನಗೊಳಿಸಲು ವೇದಿಕೆಯನ್ನೊದಗಿಸಿದರು. ನಾಟಕ ನೋಡಿ ಹಲವಾರು ಜನ ಕಣ್ಣೀರಾದರು. ತಮ್ಮದೇ ಅವಮಾನಕಾರಿಯಾದ ಬದುಕನ್ನು ರಂಗದ ಮೇಲೆ ನೋಡಿ ಆವಕ್ಕಾದರು.   ನಾಟಕ ನೋಡಿದ ಪ್ರೇಕ್ಷಕರಲ್ಲಿ ಹಿಜಡಾ ಜನರನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುವಂತೆ ಪರಿಣಾಮಕಾರಿಯಾಗಿ ಬದುಕು-ಬಯಲು ಮೂಡಿಬಂದಿತು. 2012 ರಿಂದ 2014 ವರೆಗಿನ ಮೂರು ವರ್ಷಗಳ ಕಾಲ ಇದೇ ನಾಟಕ ಪ್ರದರ್ಶನಗೊಳ್ಳುತ್ತಿದೆ. ಈಗಾಗಲೇ ೮೫ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಇನ್ನೂ ಸಹ ನಾಟಕ ಪ್ರದರ್ಶನಕ್ಕೆ ಅಪಾರ ಬೇಡಿಕೆ ಇದೆ.

ಕಳೆದ ಐದು ವರ್ಷಗಳಿಂದ ಗಣೇಶ ಮೇಷ್ಟ್ರ ಜೊತೆಗೆ ಜನಮನದಾಟ ತಂಡದಲ್ಲಿ ಚಂದ್ರು ತಿಪಟೂರು, ಚಂದ್ರಮ್ಮ ಹೊಳಲ್ಕೆರೆ, ಜಯರಾಮ ಮೈಸೂರು, ಲಕ್ಷ್ಮಣ್ ಪಿರಗಾರ ಧಾರವಾಡ, ಡಿಂಗ್ರಿ ನರೇಶ ರಾಯಚೂರು, ವಿನೀತ್ ಕುಮಾರ್ ಚಿಕ್ಕಮಂಗಳೂರು... ಮುಂತಾದವರಿದ್ದಾರೆ. ರೆಪರ್ಟರಿಗೆ ನಿಷ್ಟರಾಗಿ ರಂಗಭೂಮಿಗೆ ಬದ್ದರಾಗಿದ್ದಾರೆ. ಹತ್ತು ತಿಂಗಳುಗಳ ಕಾಲ ಎಲ್ಲೇ ಯಾವುದೇ ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ ಪ್ರತಿ ವರ್ಷ ಮೇ ತಿಂಗಳು ಬಂತೆಂದರೆ ಹೆಗ್ಗೋಡಿಗೆ ಓಡೋಡಿ ಬಂದು ನಾಟಕ ಕಟ್ಟುವಲ್ಲಿ ತಲ್ಲೀನರಾಗುತ್ತಾರೆ. ಇಂತಹ ಯುವಕರೇ ನಾಳಿನ ರಂಗಭೂಮಿಯ ಆಶಾಕಿರಣವಾಗಿದ್ದಾರೆ. ಒಂದು ಪುಟ್ಟ ರೆಪರ್ಟರಿ ಯಾವುದೇ ಒಂದು ರಂಗತಂಡ ಮಾಡಲಾಗದಂತಹ ಕೆಲಸವನ್ನು ಬದ್ದತೆಯಿಂದ ವೃತ್ತಿಪರವಾಗಿ ಮಾಡುತ್ತಿರುವುದೇ ವಿಸ್ಮಯದ ಸಂಗತಿಯಾಗಿದೆ.
 
ರೆಪರ್ಟರಿಯ ಇನ್ನೊಂದು ವಿಶೇಷತೆ ಏನೆಂದರೆ ಅದು ಜನಾಶ್ರಿತವಾಗಿ ಮುನ್ನಡೆಯುತ್ತಿರುವುದು. ಯಾವುದೇ ಸರಕಾರಿ ಇಲಾಖೆ ಅಥವಾ ಅಕಾಡೆಮಿಗಳಿಂದ ಆರ್ಥಿಕ ಸಹಾಯ ಸಹಕಾರವನ್ನು ಪಡೆಯದೇ, ಸರಕಾರದ ಕೃಪಾ ಪೋಷಣೆಗೊಳಗಾಗದೇ ನಿಜವಾದ ಅರ್ಥದಲ್ಲಿ ಜನಾಶ್ರಿತವಾದ ರೆಪರ್ಟರಿ ಯಾವುದಾದರೂ ಇದ್ದರೆ ಅದು ಜನಮನದಾಟ ಒಂದೇ ಎನ್ನುವುದು ತಂಡದ ಹೆಗ್ಗಳಿಕೆಯಾಗಿದೆ. ಇಲ್ಲಿವರೆಗೂ ಕನಿಷ್ಟ ನೋಂದಣಿಯನ್ನೂ ಸಹ ತಂಡ ಮಾಡಿಸಿಲ್ಲ. ಯಾಕೆಂದು ಕೇಳಿದರೆ ಅದು ನಮ್ಮ ಆದ್ಯತೆಯಲ್ಲ ಎಂದು ಗಣೇಶ ಮೇಷ್ಟ್ರು ಹೇಳುತ್ತಾರೆ. ಎರಡು ತಿಂಗಳುಗಳ ಕಾಲ ನಾಟಕಗಳ ಪ್ರದರ್ಶನಕ್ಕಾಗಿ ಲೋಕಸಂಚಾರ ಮಾಡುವ ತಂಡವನ್ನು ಆಹ್ವಾನಿಸಿದವರು ಇಡೀ ತಂಡಕ್ಕೆ ಊಟ ವಸತಿ ವ್ಯವಸ್ಥೆ ಮಾಡುತ್ತಾರೆ. ಒಂದು ನಾಟಕ ಪ್ರದರ್ಶನಕ್ಕೆ ತಂಡ ಕೇಳುವ ಹಣ ಎಷ್ಟೊಂದು ಕಡಿಮೆ ಎಂದರೆ ಸಾರಿಗೆ ಸಂಚಾರ ಎಲ್ಲಾ ಸೇರಿ ಕೇವಲ ಎಂಟೂವರೆ ಸಾವಿರ ರೂಪಾಯಿ. ಇದು ಯಾವುದೇ ರಂಗಸಂಘಟಕನಿಗೂ ಭಾರವೆನಿಸುವ ಮೊತ್ತವಲ್ಲ. ಒಂದು ಬೀದಿನಾಟಕ ಮಾಡಿಸಿದರೆ ಹತ್ತು ಸಾವಿರ ಹಣ ಚಾರ್ಜ್ ಮಾಡುವ ದಿನಮಾನದಲ್ಲಿ ತಮ್ಮದೇ ಬೆಳಕು, ಸಂಗೀತ, ಪರದೆ, ಪರಿಕರಗಳನ್ನು ಹೊತ್ತು ತಂದು ತಮ್ಮದೇ ವೆಹಿಕಲ್ನಲ್ಲಿ ಬರುವ ರಂಗತಂಡ ಉತ್ತಮವಾದ ನಾಟಕವೊಂದನ್ನು ಮಾಡುತ್ತದೆ ಎಂದರೆ ನಿರಾಕರಿಸುವವರಾರು?.


'ಬಾಬಾಸಾಹೇಬ ಅಂಬೇಡ್ಕರ್' ನಾಟಕದ ದೃಶ್ಯ

ಹೀಗಾಗಿ ಜನಮನದಾಟದ ನಾಟಕಗಳಿಗೆ ಯಾವಾಗಲೂ ಬೇಡಿಕೆ ಇದೆ. ಕೆಲವೊಮ್ಮೆ ರಂಗಸಂಘಟಕರೇ ಸ್ವಯಂಪ್ರೇರಿತವಾಗಿ ಕೇಳಿದ್ದಕ್ಕಿಂತಲೂ ಎರಡು ಮೂರು ಪಟ್ಟು ಹೆಚ್ಚು ಹಣ ಕೊಟ್ಟಿದ್ದೂ ಇದೆ. ಹೀಗೆ ಪ್ರದರ್ಶನಗಳಿಂದ ಬಂದ ಹಣವನ್ನು ಕೊನೆಯ ದಿನ ಎಲ್ಲಾ ಲೆಕ್ಕ ಹಾಕಿ ಖರ್ಚುಗಳನ್ನು ಕಳೆದು ಉಳಿದ ಹಣವನ್ನು ತಂಡದ ಎಲ್ಲರಿಗೂ ಸಮಾನವಾಗಿ ಹಂಚಲಾಗುತ್ತದೆ. ಎರಡು ತಿಂಗಳು ನಾಟಕ ಮಾಡಿದ ತಂಡದ ಪ್ರತಿಯೊಬ್ಬ ಕಲಾವಿದನಿಗೆ ಕನಿಷ್ಟ ಎಂದರೂ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿ ಹಣ ಸಿಗುತ್ತದೆ. ಇದಕ್ಕಿಂತ ಇನ್ನೇನು ಬೇಕು ನಮ್ಮ ಕಲಾವಿದರಿಗೆ. ಬೇರೆ ರೆಪರ್ಟರಿಗಳಲ್ಲಿ ಮೂರೋ ಇಲ್ಲವೇ ಐದೋ ಸಾವಿರ ರೂಪಾಯಿಯ ತಿಂಗಳ ಸಂಬಳಕ್ಕೆ ಕೆಲಸಮಾಡುವ ಕಲಾವಿದರಿದ್ದಾರೆ. ಬಹುತೇಕ ರಂಗತಂಡಗಳಂತೂ ಕಲಾವಿದರಿಗೆ ಸಂಭಾವನೆ ಕೊಡುವ ಅಭ್ಯಾಸವನ್ನೇ ಇಟ್ಟುಕೊಂಡಿಲ್ಲಕಲಾವಿದರನ್ನು ಶೋಷಿಸಿ ನಾಟಕ ಕಟ್ಟುವ ಯಾವುದೇ ತಂಡ ಬಹುಕಾಲ ಬಾಳಲಾಗದು. ಆದರೆ ಬಂದ ಲಾಭದಲ್ಲಿ ಕಲಾವಿದರಿಗೆ ಸಮಪಾಲು ಕೊಡುತ್ತಿರುವುದು ನನಗೆ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಜನಮನದಾಟ ತಂಡವೊಂದೇ ಆಗಿದೆ. ಊರುಕೇರಿ ನಾಟಕದಿಂದ ಪ್ರೇರಣೆಗೊಳಗಾಗಿ ದಲಿತ ಸಂಘಟನೆಯ ನಾಯಕರಾದ .ಮಂಜುನಾಥರವರು ಒಂದು ಲಕ್ಷ ಹಣವನ್ನು ತಂಡಕ್ಕೆ ಕೊಟ್ಟಿದ್ದಾರಂತೆ. ಅದರಲ್ಲಿ ನಾಟಕಕ್ಕೆ ಬೇಕಾದ ಬೆಳಕು, ಸಂಗೀತ ಹಾಗೂ ರಂಗಪರಿಕರಗಳನ್ನು ಕೊಂಡು ಈಗ ತಂಡ ನಿಟ್ಟಿನಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಕರ್ನಾಟಕದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನದ ನೆಟ್ವರ್ಕ ಬಿಲ್ಡಪ್ ಆಗಿದೆ. ಹೆಗ್ಗೋಡಿನಿಂದ ಹೊರಟ ಜನಮನದಾಟದ ಸಂಚಾರ ಒಂದೂರಿನಿಂದ ಇನ್ನೊಂದೂರಿಗೆ ಸಂಚರಿಸಿ ಐವತ್ತು ಇಲ್ಲವೇ ಅರವತ್ತು ದಿನಗಳ ಕಾಲ ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತಾ ಸಾಗುತ್ತದೆ.

ಜನಮನದಾಟ ರೆಪರ್ಟರಿ ತಂಡಕ್ಕೆ ಒಂದು ನಿರ್ದಿಷ್ಟ ಉದ್ದೇಶವಿದೆ. ರಜಾಕಾಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಇನ್ನೂ ಹೆಚ್ಚಿನ ರಂಗಸಾಧ್ಯತೆಗಳನ್ನು ಕಲಿಯಬೇಕು ಹಾಗೂ ರಂಗಭೂಮಿಗೆ ಹೊಸ ಆಯಾಮವನ್ನು ಕೊಡಬೇಕು ಎನ್ನುವುದು ರೆಪರ್ಟರಿಯ ಮೂಲ ಉದ್ದೇಶವಾದರೆ, ನೊಂದ ಶೋಷಿತ ವರ್ಗದ ದ್ವನಿಯಾಗಬೇಕು ಎನ್ನುವುದು ಅಂತರಂಗದ ಆಶಯವಾಗಿದೆ. ಕೇವಲ ನಾಟಕಕ್ಕಾಗಿ ನಾಟಕ ಅಥವಾ ಮನರಂಜನೆಗಾಗಿ ನಾಟಕ ಇಲ್ಲವೇ ಪ್ರಚಾರಕ್ಕಾಗಿ ನಾಟಕ ಮಾಡದೇ ದಮನಿತ ವರ್ಗದ ತಲ್ಲಣ ತಳಮಳಗಳನ್ನು  ರಂಗಪ್ರಯೋಗದಲ್ಲಿ ಹಿಡಿದು ಸಮಾಜದ ಮುಂದೆ ತೋರಿಸುವುದು ತಂಡದ ನಿಜವಾದ ಕಾಳಜಿ ಕಳಕಳಿಯಾಗಿದೆ. ತನ್ನ ಉದ್ದೇಶ ಹಾಗೂ ಆಶಯದಲ್ಲಿ ಜನಮನದಾಟ ಯಶಸ್ವಿಯಾಗಿದೆ. ತಂಡದ ನಾಟಕಗಳ ಆಯ್ಕೆಯೇ ಮಾತಿಗೆ ಸಾಕ್ಷಗಳಾಗಿವೆ.


'ಊರುಕೇರಿ' ನಾಟಕದ ದೃಶ್ಯ

ತಬರನ ಕಥೆ ನಾಟಕದಲ್ಲಿ ಶೋಷಕ ವ್ಯವಸ್ಥೆಯಿಂದ ದಮನಕ್ಕೊಳಗಾದ ಕೆಳಹಂತದ ನೌಕರನ ತಾಪತ್ರಯಗಳನ್ನು ತೋರಿಸುತ್ತಾ ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನೇ ವಿಡಂಬನೆಗೊಳಪಡಿಸಲಾಗಿದೆ. ಉಚಲ್ಯಾ ನಾಟಕದಲ್ಲಿ ಸಮಾಜ ಬಹಿಷ್ಕೃತ ವರ್ಗದ ನೋವುಗಳನ್ನು ತೋರಿಸಲಾಗಿದೆ. ಬಾಬಾಸಾಹೇಬ ಅಂಬೇಡ್ಕರ್ ನಾಟಕದಲ್ಲಿ ಅಂಬೇಡ್ಕರ್ರವರು ಕೊನೆಯ ದಿನಗಳಲ್ಲಿ ಅನುಭವಿಸಿದ ಹತಾಶೆ ಮತ್ತು ಮಾನಸಿಕ ತುಮುಲಗಳನ್ನು  ಕಟ್ಟಿಕೊಡಲಾಗಿದೆಸೂರ್ಯನ ಕುದುರೆ ನಾಟಕ ಆಧುನಿಕತೆಯ ಪರಿಣಾಮಗಳನ್ನು ಪ್ರಶ್ನಿಸುತ್ತದೆ, ಊರುಕೇರಿ ಯಲ್ಲಂತೂ ದಲಿತರ ಬದುಕಿನ ನೆಲೆಗಳನ್ನು ವಿವಿಧ ಆಯಾಮಗಳಲ್ಲಿ ವಿಡಂಬನಾತ್ಮಕವಾಗಿ ಪ್ರತಿಬಿಂಬಿಸಲಾಗಿದೆ. ಬದುಕು ಬಯಲು ನಾಟಕವಂತೂ ಸಮಾಜದಿಂದ ಪರಿತ್ಯಕ್ತರಾದ ಹಿಜಡಾಗಳ ನೋವು ಅವಮಾನ ಹಾಗೂ ನಿಕೃಷ್ಟ ಬದುಕನ್ನು ತೆರೆದಿಡುತ್ತದೆ. ಹೀಗೆ ಜನಮನದಾಟದ ಎಲ್ಲಾ ನಾಟಕಗಳೂ ಸಹ ನೊಂದವರ ಪರ ದ್ವನಿಯಾಗಿ ಮೂಡಿಬಂದಿವೆ. ರಂಗ ರೆಪರ್ಟರಿಯ ಸಮಾಜಬದ್ದತೆ ಹಾಗೂ ರಂಗನಿಷ್ಟೆ ಬೇರೆಲ್ಲಾ ರಂಗತಂಡಗಳಿಗೆ ಮಾದರಿಯಾಗಿದೆ. ಜನಮನದಾಟದ ರೂವಾರಿ ಗಣೇಶರವರಿಗೆ ನಲವತ್ತು ವರ್ಷ ತುಂಬಿದ ಸಂದರ್ಭದಲ್ಲಿ ಶುಭಕೊರೋಣ. ಒಂದು ದಶಕವನ್ನು ಯಶಸ್ವಿಯಾಗಿ ಪೂರೈಸಿದ ಜನಮನದಾಟವು ಹೀಗೆಯೇ ನೂರಾರು ವರ್ಷಗಳ ಕಾಲ ಕ್ರಿಯಾಶೀಲವಾಗಿರಲಿ, ಜನರ ಸಾಂಸ್ಕೃತಿಕ ನಾಡಿಮಿಡಿತವಾಗಲಿ, ಶೋಷಿತ ಜನರ ದ್ವನಿಯಾಗಲಿ ಎಂದು ಹಾರೈಸೋಣ.

                               -ಶಶಿಕಾಂತ ಯಡಹಳ್ಳಿ      







  

    
     



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ