ಗುರುವಾರ, ಸೆಪ್ಟೆಂಬರ್ 18, 2014

“ವೇಶ್ಯಾವಾಟಿಕೆ ಮತ್ತು ರಂಗಭೂಮಿ”

ಮೃಚ್ಛಿಕಟಿಕ ನಾಟಕದ ವಸಂತಸೇನೆ
            
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕೆ ಬೇಡವೇ? ಎನ್ನುವ ಸಂವಾದ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕಾನೂನಿನ ಮಾನ್ಯತೆ ಸಿಗಲೇಬಾರದು, ಪುರುಷ ಸಮಾಜ ಹೀಗೆಯೇ ಹೆಣ್ಣುಗಳನ್ನು ಲೈಂಗಿಕವಾಗಿ ಶೋಷಿಸುತ್ತಲೇ ಇರಬೇಕು, ಎನ್ನುವ ಮನುವಾದಿ ಮನೋಭಾವನೆಯನ್ನು ಸಾರ್ವಜನಿಕವಾಗಿ ಸಂಪ್ರದಾಯವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. ಹೆಣ್ಣು ತನ್ನ  ದೇಹವನ್ನು ಹೇಗೆ ಬಳಸಬೇಕು ಎನ್ನುವ ಹಕ್ಕನ್ನು ಹೊಂದಿರಬೇಕು. ಅದರಲ್ಲಿ ಯಾವುದೇ ಬಲವಂತ ಇರಕೂಡದು. ವಿಕೃತ ವ್ಯವಸ್ಥೆಯ ಕದಂಬ ಬಾಹುಗಳಿಂದ ವೇಶ್ಯೆಯರನ್ನು ಕಾಪಾಡಲು ಕಾನೂನಿನ ಮಾನ್ಯತೆ ಬೇಕು ಎಂದು ವಾಸ್ತವವಾದಿ ಧೋರಣೆಯ ಪ್ರಗತಿಪರರು ಪ್ರತಿಪಾದಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಂಗಭೂಮಿ ಎನ್ನುವುದು ವೇಶ್ಯೆಯರ ಕುರಿತು ಯಾವ ದೃಷ್ಟಿಕೋನ ಹೊಂದಿದೆ ಎನ್ನುವುದನ್ನು ಲೇಖನದಲ್ಲಿ ಚರ್ಚಿಸಲಾಗಿದೆ.

ದೇಹದ ವ್ಯಾಪಾರ ಬಲು ಪುರಾತನವಾದದ್ದು, ಯಾವಾಗ ಮಹಿಳೆಯ ಮೇಲೆ ಪುರುಷ ತನ್ನ ಅಧಿಕಾರವನ್ನು ಚಾಲ್ತಿಗೆ ತಂದನೋ, ಯಾವಾಗ ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಿದನೋ, ಅಂದಿನಿಂದ ಮಹಿಳೆಯು ಪುರುಷ ಸಮಾಜದಲ್ಲಿ ಆತನ ಮನರಂಜನೆಯ, ಸುಖದ ಸರಕಾಗಿದ್ದಂತೂ ಸತ್ಯ. ಪುರುಷರ ರಸಿಕತನದ ಅತಿರೇಕದ ಪರಿಣಾಮದಿಂದ ಹುಟ್ಟಿದ ದೇಹೊಧ್ಯಮವೇ ವೇಶ್ಯಾವಾಟಿಕೆ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಕಲೆಯ ಹೆಸರಲ್ಲಿ, ಕುಲ ಜಾತಿಗಳ ಹೆಸರಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಪೋಷಿಸಿಕೊಂಡು ಬಂದ  ದೇಹದ ವ್ಯಾಪಾರ ಇಂದು ಹೈಟೆಕ್ ಸ್ವರೂಪವನ್ನು ಪಡೆದುಕೊಂಡಿದೆ. ಸಮೂಹ ಮಾಧ್ಯಮಗಳೂ ಸಹ ಪುರುಷರ ವಿಕೃತಿಗೆ ಪ್ರಚೋದನಕರಿಯಾಗಿ ಮಹಿಳೆಯರನ್ನು ಬಿಂಬಿಸುತ್ತಿವೆ. ಆದರೆ ಯಾವುದೋ ಒತ್ತಡ, ಆಮಿಷ, ಅನಿವಾರ್ಯತೆಗೊಳಗಾಗಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟ ಹೆಣ್ಣುಗಳ ಅಂತರಾಳದ ನೋವಿಗೆ ಸ್ಪಂದಿಸಿದವರುಂಟೆ? ಅಂತವರ ಮನೋವೇದನೆಗೆ ಮದ್ದಾಗುವುದಿರಲಿ ಕೇಳುವ ಸೌಜನ್ಯವಾದರೂ ವಿಟಪುರುಷರಿಗುಂಟೆ? ಇಂತಹ ಬಹಿಷ್ಕೃತ ಲೋಕದ ಕರಾಳತೆಯನ್ನು ತೋರುತ್ತಲೇ ವೇಶ್ಯೆಯರ ಬದುಕಿನ ಸ್ಥಿತ್ಯಂತರಗಳನ್ನು ತೋರಿಸುತ್ತಾ ಅಮಾನವೀಯ ಪ್ರಪಂಚದ ಆಯಾಮಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ರಂಗಭೂಮಿ ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ.
   
ಇತಿಹಾಸವನ್ನು ಕೆದಕಿದರೆ ಕಲೆಗೂ ಹಾಗೂ ವೇಶ್ಯಾವಾಟಿಕೆಗೂ ನಡುವೆ ಅವಿನಾಭಾವ ಸಂಬಂಧವನ್ನು ಗುರುತಿಸಬಹುದಾಗಿದೆ. ರಾಜರುಗಳ ಆಸ್ತಾನಗಳಲ್ಲಿದ್ದ ನರ್ತಕಿಯರು, ಕಲಾವಿದೆಯರು ತಮ್ಮ ಕಲೆಯ ಪ್ರದರ್ಶನದ ಮೂಲಕವೇ ಗಂಡಸರನ್ನು ಆಕರ್ಷಿಸುತ್ತಿದ್ದರು. ಕೋಟಾಗಳುಮುಜರಾಗಳಲ್ಲಿ ನರ್ತಕಿಯರು ತಮ್ಮ ನೃತ್ಯಕಲೆಯಿಂದಲೇ ರಸಿಕರನ್ನು ಸೆಳೆಯುತ್ತಿದ್ದರು. ಹೊರನೋಟಕ್ಕೆ  ಕಲಾಪ್ರದರ್ಶನವಾಗಿದ್ದರೆ ಅಂತರಂದಲ್ಲಿ ಕಾಮಪ್ರಪಂಚವೇ ಅನಾವರಣಗೊಳ್ಳುತ್ತಿತ್ತು. ವಿಟಪುರುಷರ ಸಮಾಜವೇ ಇವೆಲ್ಲವುಗಳನ್ನು ಸಂಘಟಿಸುತ್ತಿತ್ತು. ಒಂದು ಶತಮಾನದ ರಂಗಭೂಮಿಯ ಇತಿಹಾಸವನ್ನು ಗಮನಿಸಿದರೆ ಮಹಿಳಾ ಪಾತ್ರದಾರಿಯ ಕೊರತೆಯನ್ನು ತುಂಬಿದವರು ನಮ್ಮ ದೇವದಾಸಿಯರು. ನಾಟಕಗಳಿಗೆ ಹೆಣ್ಣು ದಿಕ್ಕಿರಲಿಲ್ಲ. ಯಾರ ಮನೆಯ ಹೆಣ್ಣುಮಕ್ಕಳೂ ನಾಟಕದಲ್ಲಿ ಪಾತ್ರಮಾಡಲು ಮನೆಯ ಪುರುಷರು ಬಿಡುತ್ತಿರಲಿಲ್ಲ. ಹೀಗಾಗಿ ಜಾನಪದ ರಂಗಭೂಮಿ ಪರಂಪರೆಯಲ್ಲಿ ಹೆಣ್ಣು ಪಾತ್ರಗಳನ್ನೂ ಸಹ ಗಂಡಸರೇ ಅಭಿನಯಿಸುತ್ತಿದ್ದರು. ಪಾರ್ಶಿ ಕಂಪನಿ ನಾಟಕಗಳಿಂದ ಪ್ರೇರೇಪಿತರಾಗಿ ಯಾವಾಗ ವೃತ್ತಿ ನಾಟಕ ಕಂಪನಿಗಳು ಹುಟ್ಟಿಕೊಂಡವೋ ಆಗಲೂ ಸಹ ಮಹಿಳೆಯರು ಪಾತ್ರ ಮಾಡಲು ಬರುತ್ತಿರಲಿಲ್ಲ. ಏಣಗಿ ಬಾಳಪ್ಪನಂತವರೆಲ್ಲಾ ಸ್ತ್ರೀಪಾತ್ರಗಳನ್ನು ಮಾಡುತ್ತಿದ್ದರು.

ಆದರೆ ಬರುಬರುತ್ತಾ ದೇವದಾಸಿಯರನ್ನು, ನಾಯಕಸಾಣಿಯರನ್ನು, ಕೆಳವರ್ಗದ ಹೆಣ್ಣುಮಕ್ಕಳನ್ನು.. ಕೆಲವು ನಾಟಕ ಕಂಪನಿಗಳು ಪುಸಲಾಯಿಸಿ ಕರೆತಂದು ನಾಟಕದಲ್ಲಿ ನೃತ್ಯ ಮಾಡಲು, ಪಾತ್ರಮಾಡಲು ಬಳಸಿಕೊಂಡರು. ಹೀಗಾಗಿ ನಾಟಕದಲ್ಲಿ ಪಾತ್ರಮಾಡುವವರಿಗೆ ಪಾತರದವರು ಎಂದೇ ಹೆಸರಾಯಿತು. ರೀತಿಯ ಪಾತರದವರು ಹೆಚ್ಚಾಗಿ ವಾಸಮಾಡುವ ಊರುಗಳು ಪ್ರಸಿದ್ದವಾದವು. ಉತ್ತರ ಕರ್ನಾಟಕದಲ್ಲಿ ಹಂಸಭಾವಿ, ಮರಿಯಮ್ಮನಹಳ್ಳಿ... ಹೀಗೆ ಕೆಲವಾರು ಗ್ರಾಮಗಳು ವೃತ್ತಿ ನಾಟಕ ಕಂಪನಿಗಳಲ್ಲಿ ಕಲಾವಿದೆಯರ ಕೊರತೆಯನ್ನು ನೀಗಿಸುತ್ತಿದ್ದವು. ಗ್ರಾಮೀಣ ಹವ್ಯಾಸಿ ರಂಗಭೂಮಿಯ ನಾಟಕಗಳಲ್ಲಿ ಮಹಿಳಾ ಪಾತ್ರದಾರಿಗಳು ಬೇಕಾದಲ್ಲಿ ಊರುಗಳಿಗೆ ಹೋಗಿ ಅಡ್ವಾನ್ಸ ಕೊಟ್ಟು  ಒಂದು ವರ್ಷದ ಮೊದಲೇ ಬುಕ್ ಮಾಡಬೇಕಾಗಿತ್ತು. ಆಗಿನ ಕಾಲಕ್ಕೆ ನಾಟಕದ ಕಲಾವಿದೆಯರಲ್ಲಿ ಬಹುತೇಕರು ದೇವದಾಸಿಯರಾಗಿದ್ದರು. ಆದರೆ ರಂಗಭೂಮಿಯ ವಿಶೇಷತೆ ಏನೆಂದರೆ ಕಲಾವಿದೆಯರನ್ನು ಅವರ ಇಷ್ಟಕ್ಕೆ ವಿರುದ್ದವಾಗಿ ಯಾವತ್ತೂ ನಡೆಸಿಕೊಂಡಿಲ್ಲ. ಕಲಾವಿದೆಯರು ಗ್ರಾಮಗಳಲ್ಲಿ ಸ್ಟಾರ್ ವ್ಯಾಲ್ಯೂ ಹೊಂದಿದವರಾಗಿದ್ದರು. ಹಲವಾರು ಅಭಿಮಾನಿಗಳನ್ನೂ ಸಹ ಪಡೆದಿದ್ದರು. ಹೀಗಾಗಿ ಅವರಿಗೆ ಒಂದು ರೀತಿಯ ಗೌರವವೂ ದೊರಕುತ್ತಿತ್ತು. ಇದರರ್ಥ ನಾಟದಲ್ಲಿ ಪಾತ್ರ ಮಾಡುತ್ತಿದ್ದವರೆಲ್ಲರೂ ದೇವದಾಸಿಯರು ಎಂದಲ್ಲ. ಆರಂಭದ ಕಾಲಘಟ್ಟದಲ್ಲಿ ಅವರು ರಂಗಭೂಮಿಯಲ್ಲಿ ನಟಿಯರ ಅಗತ್ಯತೆಯನ್ನು ಪೂರೈಸಿದರೆಂಬುದರಲ್ಲಿ ಸುಳ್ಳಿಲ್ಲ. ರಂಗಭೂಮಿಯಲ್ಲಿ ನಟಿಯರ ಕೊರತೆಯನ್ನು ತುಂಬಿಕೊಟ್ಟಿದ್ದಕ್ಕಾಗಿ ನಾಟಕರಂಗ ದೇವದಾಸಿಯರಿಗೆ ಋಣಿಯಾಗಿರಲೇಬೇಕಿದೆ. ಹೆಣ್ಣನ್ನು ಕಾಮಕ್ಕಾಗಿ ಬಳಸಿ ಬಿಸಾಕುವ ಸಮಾಜದಲ್ಲಿ, ಅದೇ ಹೆಣ್ಣನ್ನು ಕಲೆಗಾಗಿಯೂ ಬಳಸಿ ಗೌರವಿಸಿ, ಅವರಲ್ಲಿರುವ ನಟನಾ ಪ್ರತಿಭೆಯನ್ನು ಸಾರ್ವಜನಿಕವಾಗಿ ತೋರಿಸಿದ್ದಕ್ಕಾಗಿ ರಂಗಭೂಮಿ ನಿಜಕ್ಕೂ ಅಭಿನಂದನೀಯವಾಗಿದೆ.
         
ದೇವದಾಸಿ ನಾಟಕದ ದೃಶ್ಯ

ಕನ್ನಡ ರಂಗಭೂಮಿಯು ತನ್ನ ನಾಟಕಗಳಲ್ಲಿ ವೇಶ್ಯೆಯರನ್ನು ಕೀಳಾಗಿ ಕಂಡಿದ್ದಿಲ್ಲ. ಅದಕ್ಕೆ ಬಹುತೇಕ ಉದಾಹರಣೆಗಳನ್ನು ಕೊಡಬಹುದಾಗಿದೆ. ವೇಶ್ಯೆಯರ ಕುರಿತಾದ ಕೆಲವಾರು ನಾಟಕಗಳು ಬಂದಿವೆ. ಅದರಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯ ದೇವದಾಸಿ ನಾಟಕ ವೇಶ್ಯೆಯರ ಕುರಿತಾಗಿ ಮಾನವೀಯತೆಯನ್ನು ತೋರುತ್ತದೆ. ವಿಟಪುರುಷರ ಅಟ್ಟಹಾಸ, ಪಿಂಪ್ಗಳ ಧನದಾಹವನ್ನು ಬಯಲುಗೊಳಿಸುತ್ತಲೇ ಅನಿವಾರ್ಯಕಾರಣಕ್ಕೆ ಸೂಳೆಗಾರಿಕೆಯ ಸುಳಿಗೆ ಸಿಕ್ಕ ಮಹಿಳೆಯರ ತಲ್ಲಣ, ತಳಮಳ, ಮಾನವೀಯ ಮೌಲ್ಯಗಳನ್ನು ದೇವದಾಸಿ ನಾಟಕ ಅನಾವರಣಗೊಳಿಸುತ್ತದೆ. 1935 ರಲ್ಲಿ ಕೆ. ಹಿರಣ್ಯಯ್ಯನವರು ರಚಿಸಿದ್ದ ಕರ್ಮಕನ್ನಡಿ ನಾಟಕವನ್ನು ಗುಬ್ಬಿ ಕಂಪನಿ ಪ್ರದರ್ಶಿಸುತ್ತಿತ್ತು. ಹಿರಣ್ಯಯ್ಯನವರು ಸುಬ್ಬಯ್ಯನಾಯ್ಡುರವರ ಕಂಪನಿಗೆ ಸೇರಿದಾಗ ಇದೇ ನಾಟಕವನ್ನು ಆಶಾಪಾಶ ಎನ್ನುವ ಹೆಸರಲ್ಲಿ ಆಡತೊಡಗಿದರು. ತದನಂತರ 1940 ರಲ್ಲಿ ಹಿರಣ್ಣಯ್ಯನವರು ತಮ್ಮದೇ ನಾಟಕ ಕಂಪನಿ ಕಟ್ಟಿದಾಗ ಇದೇ ನಾಟಕವನ್ನು ದೇವದಾಸಿ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಸಲ ಪ್ರದರ್ಶಿಸಲಾಗಿದೆ. ಕೆ. ಹಿರಣ್ಣಯ್ಯನವರ ನಂತರ ಅವರ ಮಗ ಮಾಸ್ಟರ್ ಹಿರಣಯ್ಯನವರು ನಾಟಕವನ್ನು ಮುಂದುವರೆಸಿದ್ದು ಈಗಲೂ ಆಗಾಗ ನಾಟಕವು ಪ್ರದರ್ಶನವಾಗುತ್ತಲೇ ಇದೆ. ಹಲವು ನಾಟಕ ಕಂಪನಿಗಳಿಂದ ನಾಡಿನಾದ್ಯಂತ ಸಹಸ್ರಾರು ಪ್ರದರ್ಶನಗಳನ್ನು ಕಂಡ ದೇವದಾಸಿ ನಾಟಕವು ವೇಶ್ಯೆಯರ ಬಗ್ಗೆ ಜನರಲ್ಲಿರುವ ಜಿಗುಪ್ಸೆ ಭಾವವನ್ನು ತೆಗೆದು ಹಾಕಿ ಅವರೂ ಸಹ ಮನುಷ್ಯರು ಎಂದು ಪರಿಗಣಿಸುವ ಹಾಗೆ ಮಾಡುವಲ್ಲಿ ನಾಟಕವು ಯಶಸ್ವಿಯಾಗಿತ್ತು.

ಆರನೇಯ ಶತಮಾನಕ್ಕಿಂತಲೂ ಹಿಂದೆ ಶೂದ್ರಕ ಕವಿ ರಚಿಸಿದ ಪುರಾತನ ಸಂಸ್ಕೃತ ನಾಟಕ ಮೃಚ್ಛಿಕಟಿಕ. ಒಂದೂಕಾಲು ಶತಮಾನಗಳಿಂದ ನಾಟಕ ಕನ್ನಡದಲ್ಲಿ ಹಲವು ಜನರಿಂದ ಅನುವಾದಗೊಂಡು ಹಲವಾರು ರಂಗತಂಡಗಳಿಂದ ಪ್ರದರ್ಶನಗೊಳ್ಳುತ್ತಲೇ ಬಂದಿದೆ. ನಾಟಕದ ಪ್ರಮುಖ ಪಾತ್ರ ವಸಂತಸೇನೆ. ಈಕೆ ಆಗಿನ ಕಾಲದ ಸುಪ್ರಸಿದ್ದ ವೇಶ್ಯೆ. ರಾಜನ ಸಂಬಂಧಿ ಶಕಾರನೇ ಆಕೆಯ ಹಿಂದೆ ಬಿದ್ದರೂ ಆತನಿಗೊಲಿಯದೇ ಏನೂ ಇಲ್ಲದ ಚಾರುದತ್ತನಿಗೊಲಿಯುತ್ತಾಳೆ. ಆಗಿನ ಕಾಲದಲ್ಲೂ ಸಹ ಸೂಳೆಗೂ ಆಯ್ಕೆ ಸ್ವಾತಂತ್ರ್ಯಗಳಿದ್ದವು. ಆಕೆ ಒತ್ತಾಯಕ್ಕೆ, ಬಲವಂತಕ್ಕೆ ಬಲಿಯಾಗುತ್ತಿರಲಿಲ್ಲ ಎನ್ನುವುದನ್ನು ಮೃಚ್ಛಿಕಟಿಕ ನಾಟಕ ಸ್ಪಷ್ಟವಾಗಿ ಹೇಳುತ್ತದೆ. ವಸಂತಸೇನೆ ವೃತ್ತಿಯಲ್ಲಿ  ವೇಶ್ಯೆಯಾಗಿದ್ದರೂ, ಕ್ಷಮೆಯಲ್ಲಿ ಧರೀತ್ರಿಯಾಗಿದ್ದಳು, ಪ್ರೀತಿಸಿದವರಿಗೆ ಪ್ರಾಣಕೊಡಲು ಸಿದ್ದವಾಗಿದ್ದಳುಮನವೀಯತೆಯ ಪ್ರತಿರೂಪವಾಗಿದ್ದಳು. ನಾಟಕದಲ್ಲಿ ವೇಶ್ಯೆಗೂ ಹಾಗೂ ವೇಶ್ಯಾವಾಟಿಕೆಗೂ ಒಂದು ಘನತೆ ಗೌರವವನ್ನು ತಂದುಕೊಡಲಾಗಿದೆ. ಹೀಗಾಗಿಯೇ ಹದಿನೈದು ಶತಮಾನಗಳು ಗತಿಸಿದರೂ ನಾಟಕ ಇನ್ನೂ ಪ್ರಸ್ತುತವೆನಿಸುತ್ತದೆ ನಾಟಕವನ್ನು ಆಧರಿಸಿ ಕನ್ನಡದಲ್ಲಿ ವಸಂತಸೇನೆ ಸಿನೆಮಾ ಕೂಡ ತೆಗೆಯಲಾಗಿತ್ತು.

ಮೈಮನಗಳ ಸುಳಿಯಲ್ಲಿ ನಾಟಕದ ದೃಶ್ಯ

ವೇಶ್ಯೆಗೆ ಸಂಬಂಧಿಸಿದ ಇನ್ನೊಂದು ಪ್ರಮುಖ ನಾಟಕ ಮೈಮನಗಳ ಸುಳಿಯಲ್ಲಿ. ಡಾ.ಶಿವರಾಮ ಕಾರಂತರ ಕಾದಂಬರಿ ಆಧರಿಸಿದ ನಾಟಕವನ್ನು ರೂಪಾಂತರ ತಂಡ ಪ್ರಯೋಗಿಸಿತ್ತು. ಸುಸಂಸ್ಕೃತ ಮುಖವಾಡದ ಸಮಾಜದಲ್ಲಿ ಸಮಾಜದಿಂದ ಬಹಿಷ್ಕೃತಳಾದ ಸೂಳೆಯೊಬ್ಬಳ ಮನದಾಳದ ನೋವು, ನಿರಾಸೆ, ಬಯಕೆ, ದಾವಂತಗಳನ್ನು ಬಲು ಸೊಗಸಾಗಿ ನಾಟಕ ಅನಾವರಣಗೊಳಿಸಿತ್ತುಸೂಳೆಯ ಸಂಕಟದ ಜೊತೆಜೊತೆಗೆ ಮಠಾಧೀಶರುಗಳ ಮುಖವಾಡವನ್ನು, ಪುರೋಹಿತಶಾಹಿಗಳ ಕ್ರೌರ್ಯವನ್ನು ಹಾಗೂ ಪುರುಷರ ಅಟ್ಟಹಾಸವನ್ನು ನಾಟಕ ತೆರೆದು ತೋರಿಸುತ್ತದೆ. ಅರಳಿನಿಂತ ಹೆಣ್ಣುಗಳ ಹೂ ಮನದ ಮೇಲೆ ನಿರಂತರವಾಗಿ ನಡೆಸುವ ಲೈಂಗಿಕ ಶೋಷಣೆ ಸಂಪ್ರದಾಯವಾಗಿದ್ದನ್ನು ಹಾಗೂ ಮಹಿಳೆಯನ್ನು ಭೋಗದ ಸರಕೆಂದು ಪರಿಗಣಿಸುವುದು ಪರಂಪರೆಯಾಗಿದ್ದನ್ನು ನಾಟಕ ಪ್ರಶ್ನಿಸುತ್ತದೆ. ಮೈ ಮತ್ತು ಮನಸ್ಸುಗಳ ಸಂಬಂಧವನ್ನು ಬಲು ಸೂಕ್ಷ್ಮವಾಗಿ ನಾಟಕದಲ್ಲಿ ಹೇಳಲಾಗಿದೆ. ಮನಸ್ಸಿಲ್ಲದಿದ್ದರೂ ಮೈ ಒಪ್ಪಿಸುವುದು ವೃತ್ತಿಯಾದರೆ, ಮನಸ್ಸು ಮಾತ್ರ ಪ್ರೀತಿಯನ್ನು ಬಯಸುತ್ತದೆ. ಮಹಿಳೆಯ ಮೈಗೆ ಇರುವ ಬೆಲೆ ಮನಸ್ಸಿಗಿಲ್ಲವಾಗುತ್ತದೆ. ಮೈ ಮತ್ತು ಮನಸ್ಸಿನ ತಾಕಲಾಟದ ತಲ್ಲಣದಲ್ಲಿ ಹೆಣ್ಣು  ತಳಮಳಗೊಳ್ಳುವುದನ್ನು ಮೈ ಮನಗಳ ಸುಳಿಯಲ್ಲಿ ನಾಟಕ ನೋಡಿಯೇ ತಿಳಿದುಕೊಳ್ಳಬೇಕು. ಇಲ್ಲವೇ ಕಾದಂಬರಿಯನ್ನು ಓದಬೇಕು.

ಬಿ.ವಿ.ವೈಕುಂಟರಾಜುರವರು ವೇಶ್ಯೆಯನ್ನು ಕೇಂದ್ರೀಕರಿಸಿ ಬರೆದಸನ್ನಿವೇಶಎನ್ನುವ ನಾಟಕವನ್ನು ಸಿಜಿಕೆ ಯವರು ನಿರ್ದೇಶಿಸಿದ್ದರು. ವೇಶ್ಯೆಯ ಪಾತ್ರವನ್ನು ವೈಜಯಂತಿ ಕಾಶಿಯವರು ಅಭಿನಯಿಸಿದ್ದರೆ ನಾಟಕಕ್ಕೆ ಆರ್.ನಾಗೇಶರವರು ಬೆಳಕಿನ ವಿನ್ಯಾಸ ಮಾಡಿದ್ದರುವೇಶ್ಯೆಯ ಬದುಕನ್ನೇ ಆಧರಿಸಿದ ನಾಟಕ ಸಾವಿರದವಳು. ನವಲ್ ಸಾದವಿರವರ ವುಮೆನ್ ಆಟ್ ಪಾಯಿಂಟ್ ಜೀರೋ ಕಿರುಕಾದಂಬರಿ ಆಧರಿಸಿ ಸಿ.ವೀರಣ್ಣನವರು ರಂಗರೂಪಾಂತರಿಸಿದ ನಾಟಕದಾದ್ಯಂತ ಸೂಳೆಯೊಬ್ಬಳ ಬದುಕು ಬವಣೆಯನ್ನು ಹಸಿಹಸಿಯಾಗಿಯೇ ತೋರಿಸಲಾಗಿದೆ. ಹಿಡಿ ಪ್ರೀತಿ, ಒಂದಿಷ್ಟು ಆಶ್ರಯ ಬಯಸಿದ ಯುವತಿಯನ್ನು ಹೇಗೆ ಗಂಡಸರ ಪ್ರಪಂಚ ನಿರಂತರವಾಗಿ ಲೈಂಗಿಕ ಶೋಷಣೆಗೊಳಪಡಿಸಿ, ಕೊಲೆಗಾರಳನ್ನಾಗಿಸಿ ಗಲ್ಲಿಗೇರಿಸಿತು ಎನ್ನುವುದನ್ನು ನಾಟಕ ನೋಡುಗರ ಕರುಳು ಹಿಂಡುವ ಹಾಗೆ ತೆರೆದಿಟ್ಟಿದೆ. ಪುರುಷ ಪ್ರಪಂಚದಲ್ಲಿ ಹೆಣ್ಣು ಅದು ಹೇಗೆ ಹೆಜ್ಜೆ ಹೆಜ್ಜೆಗೂ ತನ್ನ ಮನಸ್ಸಿನ ವಿರುದ್ದವಾಗಿ ಬಳಸಲ್ಪಡುತ್ತಾಳೆ ಎನ್ನುವುದನ್ನು ಹೇಳಲಾಗಿದೆ. ಪರಿಸ್ಥಿತಿಯ ಒತ್ತಡಗಳಿಂದಾಗಿ ವೇಶ್ಯೆಯಾದ ಯುವತಿಯೊಬ್ಬಳು ಬದುಕಿಗಾಗಿ, ಸ್ವಾಭಿಮಾನಕ್ಕಾಗಿ ನಿರಂತರ ನಡೆಸುವ ಹೋರಾಟವನ್ನು ದೃಶ್ಯರೂಪದಲ್ಲಿ ಸಾವಿರದವಳು ನಾಟಕ ಕಟ್ಟಿಕೊಟ್ಟಿದೆ. ವೇಶ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ಪುರುಷ ಸಮಾಜದ ವಿಕೃತಿಯನ್ನು ವಿಶ್ಲೇಷಿಸುವುದು ನಾಟಕದ ಮೂಲ ಉದ್ದೇಶವಾಗಿದೆ.

ನಿಸರ್ಗಪ್ರೀಯರವರು ರಚಿಸಿದ ಚೋರಪುರಾಣ ನಾಟಕದಲ್ಲೂ ಸಹ ಮುಗ್ದ ಮನಸ್ಸಿನ ಹೆಣ್ಣನ್ನು ಹೇಗೆಲ್ಲಾ ಲೈಂಗಿಕವಾಗಿ ಬಳಸಿಕೊಂಡು ಶೋಷಿಸುತ್ತಾರೆ ಎನ್ನುವುದನ್ನು ತೋರಿಸಲಾಗಿದೆ. ಹೋ.ನಾ.ಸತ್ಯರವರು ಅನವಾದಿಸಿದ ಮರಾಠಿ ನಾಟಕ ಅದರೇಶಿ ಪರದೇಶಿ ಆದ ನಾಟಕದಲ್ಲಿ ರಕ್ಷಕರಾಗಬೇಕಾದ ಅಧಿಕಾರಿಗಳೇ ಹೇಗೆ ತಮ್ಮ ಸ್ವಾರ್ಥಕ್ಕೆ ವೇಶ್ಯೆಯೊಬ್ಬಳನ್ನು ಬಳಸಿಕೊಂಡು ಅಧಿಕಾರದ ಮೆಟ್ಟಿಲುಗಳನ್ನು ಏರುತ್ತಾರೆ ಎನ್ನುವುದನ್ನು ವಿಡಂಬನಾತ್ಮಕವಾಗಿ ವಿವರಿಸಲಾಗಿದೆಜನಮನದಾಟ ತಂಡಕ್ಕೆ ಎಂ.ಗಣೇಶರವರು ನಿದೇಶಿಸಿದ ಬದುಕು ಬಯಲು ನಾಟಕದಲ್ಲಿ ಹಿಜಡಾಗಳನ್ನು ಪುರುಷ ಪ್ರಪಂಚ ಹೇಗೆ ಲೈಂಗಿಕವಾಗಿ ಶೋಷಿಸುತ್ತದೆ ಎನ್ನುವುದರ ವಿವರಗಳಿವೆ. ಹಿಜಡಾ ಸಮಾಜದ ರೇವತಿಯವರ ಆತ್ಮಕಥೆಯನ್ನಾಧರಿಸಿ ನಾಟಕ ಪ್ರಸ್ತುತಗೊಂಡಿದೆ.

ಪ್ರಯೋಗರಂಗ ತಂಡದ ಶಿವರಾತ್ರಿ ನಾಟಕದ ದೃಶ್ಯ

ಡಾ.ಚಂದ್ರಶೇಖರ್ ಕಂಬಾರರು ರಚಿಸಿದ ಶಿವರಾತ್ರಿ ನಾಟಕ ಪೂರಾ ನಡೆಯುವುದೇ ವೇಶ್ಯೆಯೊಬ್ಬಳ ಮನೆಯಲ್ಲಿ. ಶರಣ ಸಂಗಯ್ಯನ ಲಿಂಗಪೂಜೆಗೆ ಅನುವು ಮಾಡಿಕೊಡುವ ಸೂಳೆ ಸಾವಂತ್ರಿಯು ವೇಶ್ಯೆಯ ಆಯ್ಕೆ ಸ್ವಾತಂತ್ರ್ಯದ ಕುರಿತು ರಾಜ ಬಿಜ್ಜಳನಿಗೆ ಪಾಠಹೇಳುತ್ತಾಳೆ. ಬಿಜ್ಜಳನ ಜೊತೆಗೆ ಧರ್ಮಸಂವಾದವನ್ನು ಮಾಡುತ್ತಾಳೆ. ಕೊನೆಗೊಮ್ಮೆ ತನ್ನ ಆತ್ಮಸನ್ಮಾನಕ್ಕಾಗಿ ಕತ್ತಿ ಹಿಡಿದು ರಾಜನೊಂದಿಗೆ ಯುದ್ದಕ್ಕೆ ನಿಲ್ಲುತ್ತಾಳೆ. ನಾಟಕದಲ್ಲಿ ಅತೀ ಮಾರ್ಮಿಕವಾಗಿದ್ದು ಸೂಳೆ ಸಾವಂತ್ರಿ ಹಾಗೂ ರಾಜ ಬಿಜ್ಜಳನ ಮಾತುಗಳು. ಮಾತಿನ ಸಂಘರ್ಷದ ಮೂಲಕ ಕಂಬಾರರು ಸೂಳೆಗೂ ವಾದಿಸುವ, ತನ್ನ ತರ್ಕವನ್ನು ಮಂಡಿಸುವ, ತನ್ನ ಸ್ವಾಭಿಮಾನಕ್ಕೆ ದಕ್ಕೆಯಾದರೆ ಆತ್ಮರಕ್ಷಣೆಗಾಗಿ ಹೋರಾಡುವಂತಹ ಅವಕಾಶವನ್ನು ವದಗಿಸಿಕೊಟ್ಟಿದ್ದಾರೆ. ಇದು ಕಾಲ್ಪನಿಕ ಘಟನೆಯಾಗಿದ್ದರೂ ಸಹ ವೇಶ್ಯೆಯ ಸ್ವಾಭಿಮಾನ, ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ನಾಟಕವಾಗಿದೆ. ರಾಜನನ್ನೇ ಎದುರಿಸಿ ನಿಲ್ಲುವಂತಹ ಮನೋಧೈರ್ಯವನ್ನು ಸೂಳೆಗೆ ಕೊಡುವಂತಹ ಬಸವಶಕ್ತಿಯ ತಾಕತ್ತನ್ನು ನಾಟಕ ತೋರಿಸುತ್ತದೆ. ಬಸವಣ್ಣ ಆಗಿನ ಕಾಲದಲ್ಲಿ ಮಹಿಳೆಯರಿಗೆ ಅದರಲ್ಲೂ ಸಮಾಜ ಬಹಿಷ್ಕೃತರಾದ ವೇಶ್ಯೆಯರಿಗೂ ಸಹ ಸ್ವಾಭಿಮಾನವನ್ನು ತುಂಬಿದ ರೀತಿ ವಿಸ್ಮಯಕಾರಿಯಾಗಿದೆ.

ಹೀಗೆ... ರಂಗಭೂಮಿಯ ಶತಮಾನದ ಚರಿತ್ರೆಯನ್ನು ವಿಶ್ಲೇಷಿಸಿದಾಗ ಹಾಗೂ ಆಧುನಿಕ ರಂಗಭೂಮಿಯ ಪ್ರಸ್ತುತ ಪ್ರಯೋಗಗಳನ್ನು ಅವಲೋಕಿಸಿದಾಗ.. ರಂಗಭೂಮಿ ಎನ್ನುವುದು ವೇಶ್ಯೆಯರ ಸಮುದಾಯವನ್ನು ಎಂದೂ ಎಲ್ಲೂ ಅತೀ ಕೆಟ್ಟದಾಗಿ ಅಶ್ಲೀಲವಾಗಿ ವಿಕೃತವಾಗಿ ಚಿತ್ರಿಸಿಲ್ಲ. ಬಹುತೇಕ ನಾಟಕಗಳಲ್ಲಿ ತುಂಬಾ ಮಾನವೀಯತೆಯಿಂದ ವೇಶ್ಯೆಯರನ್ನು ನೋಡಲಾಗಿದೆ. ವಿಕೃತ ಸಮಾಜದ ಬಲಿಪಶುಗಳಾದ ಸೂಳೆಯರು, ಮಂಗಳಮುಖಿಯರುಗಳ ಕುರಿತು ನಿಜಕ್ಕೂ ಸಂವೇದನಾಶೀಲವಾಗಿ ನಾಟಕರಂಗ ಸ್ಪಂದಿಸಿದೆ. ಇತರೆಲ್ಲಾ ದೃಶ್ಯ ಮಾಧ್ಯಮಗಳು ವೇಶ್ಯೆಯರನ್ನು ಸಮಾಜಕ್ಕೆ ಅಂಟಿದ ರೋಗದ ಹಾಗೆ, ಅಸ್ಪೃಷ್ಯರ ಹಾಗೆ, ವಿಕಾರ ರೂಪಗಳಲ್ಲಿ ತೋರಿಸುತ್ತಾ ತಮ್ಮ ಟಿಆರ್ಪಿ ಹಾಗೂ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹವಣಿಸಿದರೆ ರಂಗಭೂಮಿ ಮಾತ್ರ ತನ್ನ ಸಾಮಾಜಿಕ ಕಳಕಳಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ ಬಂದಿದೆ. ರಂಗಭೂಮಿಯು ವೇಶ್ಯೆಯರನ್ನು ನೆಪವಾಗಿಟ್ಟುಕೊಂಡು ವಿಟಪುರುಷರನ್ನು, ಪುರುಷಪ್ರಧಾನ್ಯ ಕ್ರೌರ್ಯವನ್ನು, ಅಧಿಕಾರಸ್ತರನ್ನು, ರಾಜಕಾರಣಿಗಳನ್ನು, ಮಠಾಧೀಶರನ್ನು ... ಒಟ್ಟಾರೆ ಇಡೀ ವ್ಯವಸ್ಥೆಯನ್ನು ಕಾಲಕಾಲಕ್ಕೆ ವಿಡಂಬನಾತ್ಮಕವಾಗಿ ತೋರಿಸುತ್ತಲೇ ಬಂದಿದೆ. ನಾಟಕ ಎನ್ನುವುದು ಸಮಾಜಕ್ಕೆ ಹಿಡಿದ ಕನ್ನಡಿ ಎನ್ನುವುದನ್ನು ಸಾಬೀತುಪಡಿಸುತ್ತಲೇ ಬಂದಿದೆ.

ಯಾವುದೇ ಹೆಣ್ಣಿಗೆ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ತನ್ನ ದೇಹವನ್ನು ತನ್ನಿಚ್ಚೆಯಂತೆ ಆಕೆ ಬಳಸಬಹುದಾಗಿದೆ. ಅದು  ಹೆಣ್ಣಿನ ಇಚ್ಚೆಯಾಗಿರಬೇಕೆ ಹೊರತು ಮತ್ತೊಬ್ಬರ ಒತ್ತಡ ಒತ್ತಾಯಗಳಿಗೆ ಒಳಪಟ್ಟಿರಬಾರದು. ಎಲ್ಲ ವೃತ್ತಿಯಂತೆ ವೇಶ್ಯಾವಾಟಿಕೆಯೂ ಒಂದು ವೃತ್ತಿಯಾಗಿದೆ. ಬದುಕುವ ದಾರಿಗಳು ಬಂದಾದಾಗ ಅನಿವಾರ್ಯವಾಗಿ ಮಹಿಳೆ ತನ್ನ ದೇಹವನ್ನೇ ಬಂಡವಾಳಮಾಡಿಕೊಂಡು ಬದುಕುವುದರಲ್ಲಿ ತಪ್ಪೇನಿದೆ. ಲೈಂಗಿಕ ಕಾರ್ಯಕರ್ತೆಯಾಗುವುದೇ ಅಪರಾಧವಾಗಿದ್ದಲ್ಲಿ ವೃತ್ತಿಗೆ ಆಕೆಯನ್ನು ತೊಡಗಿಸಿದವರು, ಉಪಯೋಗಿಸಿಕೊಂಡವರು, ಶೋಷಿಸಿದವರು, ಲಾಭಮಾಡಿಕೊಂಡವರು  ಪುರುಷರೇ ಆಗಿದ್ದಾರೆ. ವೇಶ್ಯೆಯರು ಮಾತ್ರ ಮನುವಾದಿ ಪುರುಷ ಪ್ರಪಂಚದ ಬಲಿಪಶುಗಳಾಗಿದ್ದಾರೆ. ಇದು ನಿಲ್ಲಲೇ ಬೇಕಾಗಿದೆ. ವೇಶ್ಯಾವಾಟಿಕೆಗೆ ಹೆಣ್ಣು ಸೇರದಂತಹ ವಾತಾವರಣವನ್ನು ವ್ಯವಸ್ಥೆ ರೂಪಿಸಬೇಕಿದೆ ಅಂತಹ ವ್ಯವಸ್ಥೆ ಬರುವವರೆಗೂ ಲೈಂಗಿಕ ಕಾರ್ಯಕರ್ತೆಯರಿಗೆ ಗೌರವಾನ್ವಿತವಾಗಿ ತಮ್ಮ ವೃತ್ತಿ ಮಾಡಲು ಕಾನೂನಿನ ಮಾನ್ಯತೆ ಹಾಗೂ ಸಹಕಾರ ಅಗತ್ಯವಾಗಿ ಬೇಕಾಗಿದೆ. ಮನುಷ್ಯ ಇನ್ನೊಬ್ಬ ಮನುಷ್ಯರ ಸಂಕಟಕ್ಕೆ ಆಗದಿದ್ದರೆ ಅಂತವರನ್ನು ಮನುಷ್ಯರೆಂದು ಕರೆಯುವುದಾದರೂ ಹೇಗೆ. ಮನುಷ್ಯರಲ್ಲಿ ಮನುಷ್ಯತ್ವದ ಅರಿವನ್ನು ಕೊಡುವ ರಂಗಭೂಮಿ, ಸಮಾಜ ನಿಂದಿತ ಸೂಳೆ ಸಮುದಾಯದವರಲ್ಲೂ ಸ್ವಾಭಿಮಾನವನ್ನು ತುಂಬಿ ಅವರನ್ನೂ ಮನುಷ್ಯರು ಎಂದು ತೋರಿಸುವ ರಂಗಭೂಮಿ ಚಿರಾಯುವಾಗಬೇಕಿದೆ. ಸಮಾಜದ ಎಲ್ಲಾ ಶೋಷಿತ ಸಮುದಾಯಗಳ ದ್ವನಿಯಾಗಿ ರಂಗಭೂಮಿ ಇನ್ನೂ ತೀವ್ರವಾಗಿ ಸಮಾಜಕ್ಕೆ ಸ್ಪಂದಿಸಬೇಕಿದೆ. ಬೇರೆಲ್ಲಾ ಸಮೂಹ ಮಾಧ್ಯಮಗಳು ಉದ್ಯಮಗಳಾಗಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿರುವಾಗ ನಾಟಕ ರಂಗ ತನ್ನ ಸಾಮಾಜಿಕ ಜವಾಬ್ದಾರಿಯತ್ತ ತುಡಿಯುತ್ತಾ ಬಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗಲೇಬೇಕಿದೆ.

                                -ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ