ಮಂಗಳವಾರ, ಸೆಪ್ಟೆಂಬರ್ 2, 2014

“ಜನಮನದಾಟ”ದ ರಂಗಗುರು ಗಣೇಶ ಮೇಷ್ಟ್ರ ಜೊತೆಗೊಂದು ಮಾತುಕತೆ :

ಸಂದರ್ಶನ :   



ಕರ್ನಾಟಕದ ಹೆಮ್ಮೆಯ ರಂಗಸಂಸ್ಥೆಯಾದ ಹೆಗ್ಗೋಡಿನ ನೀನಾಸಮ್ ರಂಗಶಾಲೆಯಲ್ಲಿ ಕಳೆದ ಒಂದೂವರೆ ದಶಕದಿಂದ ರಂಗಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಎಂ.ಗಣೇಶರವರು ಜನಮನದಾಟ ಎನ್ನುವ ಪುಟ್ಟ ಅರೆಕಾಲಿಕ ರೆಪರ್ಟರಿಯನ್ನು ನಡೆಸುತ್ತಿದ್ದಾರೆ. ರೆಪರ್ಟರಿಯೂ ಸಹ ತನ್ನ ವಿಶಿಷ್ಟ ನಾಟಕಗಳ ಮೂಲಕ ಕರ್ನಾಟಕದಲ್ಲಿ ಜನಪ್ರೀಯತೆ ಗಳಿಸಿದೆಜನಮನದಾಟ ಕ್ಕೆ ಈಗ ಹತ್ತನೇ ವರ್ಷದ ಸಂಭ್ರಮ. ಹಾಗೂ ಎಂ.ಗಣೇಶರವರಿಗೆ ನಲವತ್ತು ವರ್ಷ ತುಂಬಿದ ಸಂತಸ. ಸಂದರ್ಭದಲ್ಲಿ ಗಣೇಶ ಮೇಷ್ಟ್ರ ಜೊತೆಗೆ ಮಾತುಕತೆ ಮಾಡುತ್ತಲೇ ಅವರ ರಂಗಬದುಕು, ಸಾಧನೆ ಹಾಗೂ ಸವಾಲುಗಳ ಕುರಿತು ಒಂದು ಒಳನೋಟವನ್ನು ಕೊಡುವ ಪ್ರಯತ್ನವೇ ಸಂದರ್ಶನ. ರೆಪರ್ಟರಿಯೊಂದನ್ನು ಕಟ್ಟಿ ಬೆಳೆಸಬೇಕು ಎನ್ನುವವರಿಗೆ ಪ್ರೇರಕವಾಗುವಂತೆ ಜನಮನದಾಟ ರಂಗಪಯಣವನ್ನು ಸಂದರ್ಶನದಲ್ಲಿ ಹಿಡಿದಿಡಲಾಗಿದೆ. ಗಣೇಶರವರೊಂದಿಗೆ ಮಾತುಕತೆ ಕೇವಲ ಮಾತಾಗದೇ ಬದ್ದತೆಯೊಂದಿದ್ದರೆ ರಂಗಭೂಮಿಯನ್ನು ನಾವಿದ್ದ ಪರಿಸರದಲ್ಲೇ, ಇದ್ದಬದ್ದ ರಿಸೋರ್ಸಗಳನ್ನು ಬಳಸಿ ಹೇಗೆ ಕಟ್ಟಬಹುದು ಎನ್ನುವುದರ ಕುರಿತು ಮಾಹಿತಿ ಎಲ್ಲರಿಗೂ ತಿಳಿಯಲಿ ಎನ್ನುವುದೇ ಸಂದರ್ಶನದ ಪ್ರಮುಖ ಆಶಯವಾಗಿದೆ.

ಗಣೇಶ ಮೇಷ್ಟ್ರ ಹಿನ್ನೆಲೆ :
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಪ್ಪನಹಳ್ಳಿ ಹುಟ್ಟೂರು. ಹುಟ್ಟಿದ್ದು ದಲಿತರ ಕೇರಿಯ ಮುನಿಕದಿರಪ್ಪ ಹಾಗೂ ಪಿಳ್ಳಮ್ಮನವರ ಮಗನಾಗಿ. ಜೀತಮಾಡುತ್ತಿದ್ದ ತಂದೆ ಆನಂತರ ಸ್ವಂತ ದುಡಿಮೆಯ ಬದುಕು ಕಂಡುಕೊಂಡ. ತಾಯಿ ಜಾನಪದ ಹಾಡುಗಾರ್ತಿ. ಊರಲ್ಲಿ ಆಗಾಗ ನಡೆಯುತ್ತಿದ್ದ ಕಂಪನಿ ನಾಟಕಗಳು ಹಾಗೂ ಹರಿಕತೆದಾಸರ ಕತೆಗಳಿಂದ ಪ್ರೇರೇಪಿತನಾದೆ. ಶಾಲೆಯಲ್ಲಿ ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಮಕ್ಕಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಹಾಗೇ ಓದುತ್ತಾ ಕನ್ನಡದಲ್ಲಿ ಎಂಎ ಮಾಡಲು ಸೇರಿದ್ದು ಬೆಂಗಳೂರು ವಿಶ್ವವಿದ್ಯಾಲಯವನ್ನು. ಅಲ್ಲಿ ಡಿ.ಆರ್.ನಾಗರಾಜ್, ಕೀರಂ ನಾಗರಾಜ್, ಕೆ.ಮರುಳಸಿದ್ದಪ್ಪ, ಡಾ.ಸಿದ್ದಲಿಂಗಯ್ಯ.. ರವರಂತಹ ಅನೇಕ ಗುರುಗಳ ಒಡನಾಟ. ಜೊತೆಗೆ ಮೊದಲಿನಿಂದಲೂ ದಲಿತ ಸಂಘರ್ಷ ಸಮಿತಿ ಹಾಗೂ ವಿದ್ಯಾರ್ಥಿ ಸಂಘಟನೆಗಳ ಸಂಪರ್ಕ. ಎಲ್ಲವೂ ಸೇರಿ ಒಬ್ಬ ಗಣೇಶ ನಿರ್ಮಾಣಗೊಂಡ.


ರಂಗಭೂಮಿ ಸೇರಿದ್ದು ಸಾದಿಸಿದ್ದು :
ಅದು 1998 ನೇ ಇಸ್ವಿ. ಆಗತಾನೆ ಕೊನೆಯ ವರ್ಷದ ಎಂಎ ಪರೀಕ್ಷೆ ಬರೆದಿದ್ದೆ. ವಿಶ್ವವಿದ್ಯಾಲಯದಲ್ಲಾದ ಏಕಲವ್ಯ ನಾಟಕದಲ್ಲಿ ಮೇಳದ ನಾಯಕನಾಗಿ ಪಾತ್ರವಹಿಸಿದ್ದೆ. ನನ್ನ ಅಭಿನಯ ಸಾಮರ್ಥ್ಯವನ್ನು ಗಮನಿಸಿದ ನನ್ನ ಗುರುಗಳಾದ ಕೀರಂ ನಾಗರಾಜರು ಹೆಗ್ಗೋಡಿನ ನೀನಾಸಮ್ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಆಯ್ಕೆಯ ಅರ್ಜಿ ಪಾರಂ ತೆಗೆದುಕೊಂಡು ಬಂದು, ಅದನ್ನು ತಾವೇ ತುಂಬಿ, ಐನೂರು ರೂಪಾಯಿಗಳನ್ನು ನನ್ನ ಜೇಬಲ್ಲಿಟ್ಟು ಹೆಗ್ಗೋಡಿಗೆ ಹೊರಡು ಎಂದು ಆದೇಶಿಸಿದರು. ಅಲ್ಲಿ ನಡೆದ ಸಂದರ್ಶನದಲ್ಲಿ ಪಾಸಾಗಿ ನೀನಾಸಮ್ ಸೇರಿಕೊಂಡೆ. ರಂಗಭೂಮಿಯ ಕುರಿತು ಅಪಾರವಾಗಿ ಕಲಿತುಕೊಂಡೆ. ರಂಗಭೂಮಿಯೇ ನನ್ನ ಬದುಕು ಹಾಗೂ ಭವಿಷ್ಯವಾಗಬೇಕೆಂದು ನಿರ್ಧರಿಸಿಕೊಂಡೆ. ಒಂದು ವರ್ಷದ ತರಬೇತಿಯ ನಂತರ ಮತ್ತೆ ಎರಡು ವರ್ಷ ನೀನಾಸಮ್ ತಿರುಗಾಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡೆ. ಸ್ಮಶಾನ ಕುರುಕ್ಷೇತ್ರ, ಭಗವದ್ಜುಕೀಯಂ, ಮೂವರು ಅಕ್ಕತಂಗಿಯರು, ವಿದೂಷೆಯ ವಿದೂಷಕ, ಕತ್ತಲೆಗೆ ಹತ್ತು ತಲೆ... ಹೀಗೆ ಹಲವಾರು ಪ್ರಮುಖ ನಾಟಕಗಳಲ್ಲಿ ಎರಡು ವರ್ಷಗಳ ಕಾಲ ಅಭಿನಯಿಸಿದೆ. ನಾಡಿನಾದ್ಯಂತ ನಿರಂತರವಾಗಿ ನಾಟಕಗಳು ಪ್ರಯೋಗಗೊಂಡವು. ತಿರುಗಾಟದ ನಂತರ ನಡೆದ ಮರುತಿರುಗಾಟದ ನಾಟಕಗಳಾದ ಕಾಲದಿವ್ಯ, ಮನಿ, ಕೇಶ ಪಾಶ ಪ್ರಪಂಚ... ಮುಂತಾದ ನಾಟಕಗಳಲ್ಲೂ ನಟಿಸಿ ಅಪಾರ ಅನುಭವ ಗಳಿಸಿದೆ. ಹೆಗ್ಗೋಡಿನಲ್ಲಿ ನನಗೆ ರುಸ್ತುಂ ಬರೂಚ, ಕನ್ನೈಯಲಾಲ್, ಕೆ.ವಿ.ಸುಬ್ಬಣ್ಣ, ಬಿ.ವಿ.ಕಾರಂತ್, ಪ್ರಸನ್ನ, ಕೆ.ವಿ.ಅಕ್ಷರ, ವೆಂಕಟರಾಮ್ ಐತಾಳ, ಮಹಾಬಲೇಶ್ವರ.. ಹೀಗೆ ಹಲವಾರು ರಂಗದಿಗ್ಗಜರ ಮಾರ್ಗದರ್ಶನ ಸಿಕ್ಕಿತು. ನಾಟಕವೇ ಉಸಿರಾಯಿತು, ರಂಗಭೂಮಿಯೇ ಬದುಕಾಯಿತು. ನೀನಾಸಮ್ನಲ್ಲಿಯೇ ರಂಗಚರಿತ್ರೆಯನ್ನು ಹೇಳಿಕೊಡುವ ಶಿಕ್ಷಕ ವೃತ್ತಿ ದೊರಕಿತು. ಒಂದೂವರೆ ದಶಕಗಳಿಂದ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಶಿಕ್ಷಕನಾಗಿ ರಂಗಸೇವೆ ಸಲ್ಲಿಸುತ್ತಿದ್ದೇನೆ.

ಜನಮನದಾಟದ ಪರಿಕಲ್ಪನೆ :
ಮೊದಮೊದಲು ಅಂತಹುದೊಂದು ಪರಿಕಲ್ಪನೆ ಏನೂ ಸ್ಪಷ್ಟವಾಗಿರಲಿಲ್ಲ. ಏನಾದರೂ ಮಾಡಬೇಕೆಂಬ ತುಡಿತವಂತೂ ಇತ್ತು. ಕೆ.ವಿ.ಸುಬ್ಬಣ್ಣನವರು ಶ್ರೀನಿವಾಸ ವೈದ್ಯರ ಶ್ರದ್ದಾ ಕಥೆಯ ಬಗ್ಗೆ ತುಂಬಾ ಹೇಳುತ್ತಿದ್ದರು. ನಾನು ಅದನ್ನು ಹಲವಾರು ಬಾರಿ ಓದಿದೆ. ನಾಟಕ ಮಾಡಿಸಬೇಕು ಎನ್ನಿಸಿತು. ನೀನಾಸಮ್ ತಿರುಗಾಟದಲ್ಲಿದ್ದ ಕೆಲವು ವಿದ್ಯಾರ್ಥಿಗಳ ಜೊತೆಗೆ ಅದನ್ನು ಚರ್ಚಿಸಿದೆ. ಅವರೂ ಒಪ್ಪಿದರು. ನಮ್ಮ ರಂಗಶಿಕ್ಷಣ ಕೇಂದ್ರಕ್ಕೆ ಎರಡು ತಿಂಗಳು ರಜೆ ಇರುತ್ತದೆ. ಸಮಯವನ್ನು ಯಾಕೆ ವ್ಯರ್ಥವಾಗಿ ಕಳೆಯಬೇಕು. ನಾಟಕವನ್ಯಾಕೆ ಮಾಡಬಾರದು ಎಂದು ಆಲೋಚನೆ ಬಂತು. ಇನ್ನು ಕೆಲವರು ಆಯಿತು ಎಂದರು. ಹೇಗೂ ನಾಟಕ ಮಾಡೋದೆ ಆದರೆ ಅದಕ್ಕೊಂದು ತಂಡ ಮಾಡಬೇಕಾಗಿತ್ತು. ನಾವು ಒಟ್ಟು ಏಳು ಜನರು ಸೇರಿ ಜನಮನದಾಟ ಹೆಸರನ್ನು ಆಯ್ಕೆ ಮಾಡಿಕೊಂಡೆವು. ಇದು ಕೇವಲ ತಂಡವಾಗಬಾರದು ನೀನಾಸಂ ತಿರುಗಾಟದ ಮಾದರಿಯಲ್ಲೇ ಪುಟ್ಟದಾದ ರೆಪರ್ಟರಿಯಾಗಬೇಕು ಎಂದು ಯೋಜನೆ ಸಿದ್ದಗೊಳಿಸಿದೆವು. ಸುಬ್ಬಣ್ಣನವರನ್ನು ಹೋಗಿ ಜನಮನದಾಟ ಕುರಿತು ಚರ್ಚಿಸಿದಾಗ ಅವರು ಸಂತೋಷದಿಂದ ತಮ್ಮ ಸಹಮತ ವ್ಯಕ್ತಪಡಿಸಿದರು. ಬೇಕಾದ ಸಹಾಯ ಸಹಕಾರವನ್ನು ನೀನಾಸಮ್ನಿಂದ ಪಡೆದುಕೊಂಡು ನಾಟಕವನ್ನು ಕಟ್ಟಿ ಎಂದು ಪ್ರೇರೇಪಿಸಿದರು. ಹೀಗೆ ಜನುಮನದಾಟ ಹುಟ್ಟಿಕೊಂಡಿತು. ನಮ್ಮ ತಂಡ ಒಂದು ರೀತಿಯಲ್ಲಿ ಮಳೆಗಾಲದ ಮೇಘಗಳಿದ್ದಂತೆ. ಮಳೆಗಾಲ ಶುರುವಾದಾಗ ಹೇಗೆ ಮೋಡಗಳು ಎಲ್ಲೆಲ್ಲಿಂದಲೋ ಬಂದು ದಟ್ಟೈಸಿ ಮಳೆಸುರಿಸಿ ಮಾಯವಾಗುತ್ತವೆಯೋ ಹಾಗೆ ನಾವು ಸಹ ಎಲ್ಲೆಲ್ಲೋ ಇರುವವರು ಮಳೆಗಾಲ ಶುರುವಾಗುವುದಕ್ಕೆ ಸರಿಯಾಗಿ ಹೆಗ್ಗೋಡಿಗೆ ಬಂದು ಸೇರುತ್ತೇವೆ. ಮುಂದಿನ ಎರಡು ತಿಂಗಳುಗಳ ಕಾಲ ಸತತವಾಗಿ ಸಂಚರಿಸಿ ನಾಟಕಗಳನ್ನಾಡುತ್ತೇವೆ. ಜುಲೈ 15 ನಂತರ ಮತ್ತೆ ನಮ್ಮ ನಮ್ಮ ಕೆಲಸಗಳಿಗೆ ಹೊರಡುತ್ತೇವೆ. ಮತ್ತೆ ಎಲ್ಲರೂ ಜೊತೆಯಾಗುವುದು ಮುಂದಿನ ಮಳೆಗಾಲಕ್ಕೆ ಮೊದಲು. ಇದು ಜನಮನದಾಟದ ನಿಜವಾದ ಪರಿಕಲ್ಪನೆಯಾಗಿದೆ. ಸ್ಥಾವರವಾಗದೇ ಜಂಗಮದ ರೀತಿಯಲ್ಲೇ ಜನಮನದಾಟ ರೆಪರ್ಟರಿ ತಂಡವನ್ನು ಒಂದು ದಶಕದಿಂದ ಮುಂದುವರೆಸಿಕೊಂಡು ಬಂದಿದ್ದೇವೆ.



ಮೊದಲ ನಾಟಕದ ನಿರ್ಮಾಣ ಮತ್ತು ಪ್ರದರ್ಶನ :
ಕೆ.ವಿ.ಸುಬ್ಬಣ್ಣನವರ ಪ್ರೋತ್ಸಾಹಕರ ಮಾತಿನಿಂದ ಉತ್ತೇಜಿತರಾದ ನಾವು 2005, ಮೇ 15 ರಿಂದ ಶ್ರೀನಿವಾಸ ವೈದ್ಯರ ಶ್ರದ್ದಾ ಹಾಗೂ ಹಣತೆ ಎನ್ನುವ ಎರಡು ಕತೆಗಳನ್ನು ಆಧರಿಸಿ ಶ್ರದ್ದಾ ಮತ್ತು ಹಣತೆ ಎನ್ನುವ ಹೆಸರಿನಲ್ಲಿ ನಾಟಕದ ತಾಲಿಂ ಶುರುಮಾಡಿದೆವು. ಇಡೀ ತಂಡದವರು ಸೇರಿಕೊಂಡು ಒಗ್ಗಟ್ಟಾಗಿ ನಾಟಕವನ್ನು ಸಾಮೂಹಿಕ ನೆಲೆಯಲ್ಲಿ ನಿರ್ಮಿಸಲಾಯಿತು. ಎಲ್ಲರೂ ಸ್ವಲ್ಪ ಹಣವನ್ನು ಹಾಕಿದೆವು. ನಾಟಕಕ್ಕೆ ಬೇಕಾದ ವಸ್ತು, ಪರಿಕರಗಳನ್ನು ನೀನಾಸಮ್ನಿಂದ ಪಡೆದುಕೊಂಡೆವು. ಎಲ್ಲರೂ ಎಲ್ಲಾ ಕೆಲಸಗಳನ್ನು ಮಾಡುವುದೆಂದು ಠರಾವು ಮಾಡಿಕೊಂಡೆವು. ಎಲ್ಲಾ ಅನುಭವವಿರುವ ನಟರೇ ಇದ್ದರು. ಹದಿನೈದು ದಿನಗಳಲ್ಲಿ ತಾಲಿಂ ಮುಗಿದು ಜೂನ್ ಮೊದಲವಾರದಲ್ಲಿ  ನೀನಾಸಮ್ನಲ್ಲಿ ಮೊಟ್ಟ ಮೊದಲ ಪ್ರದರ್ಶನವಾಯಿತು. ನಾಟಕ ನೋಡಿದ ಸುಬ್ಬಣ್ಣನವರು ನಾಟಕದ ನಂತರ ವಿಮರ್ಶೆ ಮಾಡಿ ಸಲಹೆ ಸೂಚನೆಗಳನ್ನಿತ್ತರು. ನಾಟಕ ಚೆನ್ನಾಗಿ ಮೂಡಿಬಂದಿತು. ಹೆಗ್ಗೋಡಿನ ಹೊರಗೂ ನಾಟಕ ಪ್ರದರ್ಶನಗಳನ್ನು ಮಾಡಲು ತೊಡಗಿದೆವು. ಇಪ್ಪತ್ತೈದಕ್ಕೂ ಹೆಚ್ಚು ಪ್ರದರ್ಶನಗಳನ್ನು ಶ್ರದ್ದಾ ಮತ್ತು ಹಣತೆ ಕಂಡಿತು. ಆರ್ಥಿಕವಾಗಿ ಲಾಭವಾಗದಿದ್ದರೂ ನಷ್ಟವಂತೂ ಆಗಲಿಲ್ಲ.

ಜನಮನದಾಟದ ರಂಗಪ್ರಯೋಗಗಳು :
ಶ್ರದ್ದಾ.. ನಾಟಕದ ಯಶಸ್ಸಿನಿಂದ ಮರುವರ್ಷ ನಾವು ಮರಾಠಿ ಲೇಖಕ ಲಕ್ಷ್ಮಣ್ ಗಾಯಕವಾಡರ ಆತ್ಮಚರಿತ್ರೆ ಉಚಲ್ಯಾವನ್ನು ತೆಗೆದುಕೊಂಡು ನಾಟಕವಾಡಿದೆವು. ಅದೂ ಕೂಡಾ ನಲವತ್ತು ಪ್ರದರ್ಶನಗಳನ್ನು ಕಂಡಿತು. ಆಮೇಲೆ 2007 ರಲ್ಲಿ ಪೂರ್ಣಚಂದ್ರ ತೇಜಸ್ವಿರವರ ರಹಸ್ಯ ವಿಶ್ವ ಹಾಗೂ ತಬರನ ಕಥೆ ಎರಡೂ ಕಥೆಗಳನ್ನು ಆಧರಿಸಿ ಎರಡು ನಾಟಕಗಳನ್ನು ಸಿದ್ದಗೊಳಿಸಿ ಪ್ರದರ್ಶಿಸಿದೆವು. ನಾಟಕಗಳೂ ಸಹ ನಲವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನವಾದವು. 2008ರಲ್ಲಿ ಮುಕುಂದರಾಜ್ರವರು ಬರೆದ ಬಾಬಾಸಾಹೇಬ ಅಂಬೇಡ್ಕರ್ ನಾಟಕವನ್ನು ತೆಗೆದುಕೊಂಡು ಡ್ರಾಮಟೈಸ್ ಮಾಡಿದೆವು. ಅದು ಅತ್ಯಂತ ಯಶಸ್ವಿಯಾಯಿತು. ಇಲ್ಲಿವರೆಗೂ 95 ಕ್ಕೂ ಹೆಚ್ಚು ಬಾರಿ ಪ್ರದರ್ಶನಗೊಂಡಿದೆ. ಎಲ್ಲಾ ನಾಟಕಗಳನ್ನು ಇಡೀ ತಂಡದವರು ಸೇರಿಕೊಂಡು ಸಾಮೂಹಿಕವಾಗಿ ನಿರ್ದೇಶಿಸಲಾಗಿತ್ತು. ಆದರೆ ಮೊದಲ ಬಾರಿಗೆ ಜನಮನದಾಟಕ್ಕೆ ನಾನು 2009 ರಲ್ಲಿ ಡಾ.ಯು.ಆರ್.ಅನಂತಮೂರ್ತಿರವರ ಕಥೆಯನ್ನಾಧರಿಸಿ ಸೂರ್ಯನ ಕುದುರೆ ನಿರ್ದೇಶಿಸಿದೆಅದೂ ಸಹ ಐವತ್ತರಷ್ಟು ಪ್ರದರ್ಶನವಾಗಿದೆ. ಮರುವರ್ಷ 2010 ರಲ್ಲಿ ಡಾ.ಸಿದ್ದಲಿಂಗಯ್ಯವರ ಆತ್ಮಕತೆಯಾಧರಿಸಿ ಊರುಕೇರಿ ನಾಟಕವನ್ನು ನಿರ್ದೇಶಿಸಿದೆ. ಇದು ಅತ್ಯಂತ ಹೆಚ್ಚು ಜನಪ್ರೀಯವಾಯಿತು. ದಲಿತ ಸಂಘಟನೆಗಳ ಸಹಕಾರ ಸಿಕ್ಕಿತು. ಪ್ರಗತಿಪರ ಸಂಘಟನೆಗಳು ಪ್ರದರ್ಶನಗಳನ್ನು ಆಯೋಜಿಸಿದರು. ಹೀಗಾಗಿ 2010 ರಿಂದ 2012 ರವರೆಗೆ ಮೂರು ವರ್ಷಗಳ ಕಾಲ ಬೇಸಿಗೆ ಬಿಡುವಿನಲ್ಲಿ ಉರುಕೇರಿ ನಾಟಕವನ್ನೇ ಆಡಿಸುತ್ತಾ ಬಂದೆವು. ಒಟ್ಟು ಇಲ್ಲಿವರೆಗೂ ನಾಡಿನಾದ್ಯಂತ 113 ಪ್ರದರ್ಶನಗಳನ್ನು ನಾಟಕ ಕಂಡಿದೆ. ನಾಟಕದ ವಿಶೇಷತೆ ಏನೆಂದರೆ ಊರುಗಳಲ್ಲಿ, ಕೇರಿಗಳಲ್ಲಿ ನಾಟಕವನ್ನು ಆಡಿದ್ದೇವೆ. 2012 ರಲ್ಲಿ ರೇವತಿಯವರ ಆತ್ಮಕತೆ ಆಧಾರಿತ  ಬದುಕು ಬಯಲು ನಾಟಕವನ್ನು ನಾನು ಜನಮನದಾಟಕ್ಕೆ ನಿರ್ದೇಶಿಸಿದೆ. ಲೈಂಗಿಕ ಅಲ್ಪಸಂಖ್ಯಾತರ ಬದುಕು ಬವಣೆಗಳನ್ನು ಹೇಳುವ ನಾಟಕ ಹಿಜಡಾ ಸಮಾಜದವರ ಕುರಿತು ಜನಸಾಮಾನ್ಯರಲ್ಲಿರುವ ನಿರ್ಲಕ್ಷದ ಭಾವನೆಗಳನ್ನು ಹೊಡೆದು ಹಾಕುವಂತೆ ಮೂಡಿಬಂದಿತ್ತು. ನಾಟಕವನ್ನೂ ಸಹ ಜನ ಮೆಚ್ಚಿಕೊಂಡರು. ಇನ್ನೊಂದು ಹೊಸ ನಾಟಕ ತೆಗೆದುಕೊಳ್ಳಲು ಅವಕಾಶಕೊಡದಂತಾಗಿ ಕಳೆದ ಮೂರು ವರ್ಷಗಳಿಂದ ಇದೇ ನಾಟಕವನ್ನು ಆಡುತ್ತಾ ಬಂದಿದ್ದೇವೆ. ಈಗಾಗಲೇ ೮೫ ಶೋಗಳಾಗಿವೆ. ಇನ್ನೂ ಸಹ ನಾಟಕಕ್ಕೆ ಡಿಮಾಂಡ್ ಇದೆ.



ನಾಟಕದ ಮಾರ್ಕೆಟಿಂಗ್ :
ನಾವು ಸಿದ್ದಗೊಳಿಸಿದ ನಾಟಕವನ್ನು ಜನರ ಬಳಿ ಕೊಂಡೊಯ್ಯುವುದು ನಮಗೇನು ಸಮಸ್ಯೆ ಎನ್ನಿಸಲಿಲ್ಲ. ಯಾಕೆಂದರೆ ನೀನಾಸಮ್ ತಿರುಗಾಟದ ಅನುಭವ ನಮ್ಮದಾಗಿತ್ತು. ನೀನಾಸಮ್ ದಶಕಗಳ ಕಾಲ ನಾಡಿನಾದ್ಯಂತ ಎಲ್ಲೆಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದೆ ಎನ್ನುವುದು ತಿಳಿದಿತ್ತು. ನಾಟಕಗಳನ್ನು ಕರೆಸಿ ಆಡಿಸುವ ರಂಗಸಂಘಟಕರ ಕಾಂಟ್ಯಾಕ್ಟ ನಂಬರಗಳಿದ್ದವು. ಅವರನ್ನೆಲ್ಲಾ ಸಂಪರ್ಕಿಸಿದೆವು. ಸಕಾರಾತ್ಮಕ ಸ್ಪಂದನೆ ಬಂದಲ್ಲೆಲ್ಲಾ ಹೋಗಿ ನಾಟಕ ಮಾಡಿದೆವು. ಪ್ರತಿ ವರ್ಷ ಜೂನ್ ಒಂದರಿಂದ ಜನಮನದಾಟದ ನಾಟಕದ ಪ್ರದರ್ಶನದ ಸಂಚಾರ ಆರಂಭವಾಗುತ್ತದೆ. ಮೊದಲೇ ರೂಟ್ ಮ್ಯಾಪ್ ಪ್ಲಾನ್ ಮಾಡಿಕೊಳ್ಳುತ್ತೇವೆ. ಯಾವ ಊರಾದ ಮೇಲೆ ಯಾವ ಊರಲ್ಲಿ ಪ್ರದರ್ಶನ ಎನ್ನುವುದನ್ನು  ಮೊದಲೇ ನಿರ್ಧರಿಸಿಕೊಳ್ಳುತ್ತೇವೆ. ರಂಗಸಂಘಟಕರ ಜೊತೆಗೆ ಡೇಟ್ಸ್ಗಳನ್ನು ಮೊದಲೇ ನಿಕ್ಕಿ ಮಾಡಿಕೊಂಡಿರುತ್ತೇವೆ. ಹೀಗಾಗಿ ಎಲ್ಲಿಯೂ ಯಾವ ಅಭ್ಯಂತರವಿಲ್ಲದೆ, ನಡು ನಡುವೆ ಗ್ಯಾಪಗಳಿಲ್ಲದಂತೆ ನಾಟಕ ಪ್ರದರ್ಶನಗಳು ನಡೆಯುತ್ತವೆ. ವರ್ಷದಿಂದ ವರ್ಷಕ್ಕೆ ನಮ್ಮದೇ ಆದ ಒಂದು ನೆಟ್ವರ್ಕ ಬಿಲ್ಡಪ್ ಆಗಿದೆ. ಪ್ರತಿ ವರ್ಷ ನಮ್ಮ ತಂಡದ ನಾಟಕವನ್ನು ಕರೆಸಿಕೊಂಡು ಅವಕಾಶಕೊಡುವ ರಂಗಸಂಘಟಕರು ಹಳ್ಳಿ ಪಟ್ಟಣಗಳಲ್ಲಿ ನಮ್ಮ ಜೊತೆಗಿದ್ದಾರೆ. ಕೆಲವೊಮ್ಮೆ ಡೇಟ್ಗಳು ಸರಿಹೊಂದದೇ ನಾಟಕ ಪ್ರದರ್ಶನ ಮಾಡದೇ ನಿರಾಕರಿಸಿದ್ದೂ ಇದೆ. ಅಷ್ಟೊಂದು ಬೇಡಿಕೆ ನಮ್ಮ ಜನಮನದಾಟ ನಾಟಕಕ್ಕಿದೆ. ಹಾಗೂ ಜನರ ನಿರೀಕ್ಷೆ ಹುಸಿಯಾಗದಂತೆ ಶ್ರಮವಹಿಸಿ ನಾವು ನಾಟಕವನ್ನು ಮಾಡಿ ತೋರಿಸುತ್ತಿದ್ದೇವೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಜನಮನದಾಟದ ರಂಗಸಂಚಾರ ಜನಪ್ರೀಯವಾಗುತ್ತಿದೆ. ಕೆಲವೊಮ್ಮೆ ಎರಡು ತಿಂಗಳು ಹೊರತು ಪಡಿಸಿ ಬೇರೆ ಸಮಯದಲ್ಲೂ ಸಹ ನಾಟಕವಾಡಲು ಕರೆಗಳು ಬರುತ್ತವೆ. ನೀನಾಸಮ್ಗೆ ರಜೆ ಇದ್ದಾಗ ಇಲ್ಲವೆ ಅತೀ ಅನಿವಾರ್ಯವಾದರೆ ನಾನು ರಜೆ ಹಾಕಿ ನಾಟಕ ಪ್ರದರ್ಶನ ಮಾಡಿಸಿದ್ದೂ ಇದೆ. ನೀನಾಸಮ್ ತಿರುಗಾಟವು ಅವಧಿಗಿಂತ ಬೇಗನೇ ಮುಗಿದರೆ ಕೆಲವೊಮ್ಮೆ ಎರಡು ತಿಂಗಳಿಗಿಂತಲೂ ಹೆಚ್ಚು ದಿನ ನಾಟಕಗಳನ್ನು ಪ್ರದರ್ಶಿಸುತ್ತೇವೆ. ನಮಗೆಷ್ಟು ದಿನ ರಜೆ ಸಿಗುತ್ತದೋ ಅಷ್ಟೂ ದಿನಗಳನ್ನು ಜನಮನದಾಟ ನಾಟಕ ಪ್ರದರ್ಶನಗಳಿಗೆ ಮೀಸಲಿಡುತ್ತೇವೆ.

ನೀನಾಸಮ್ ಮತ್ತು ಜನಮನದಾಟದ ಸಂಬಂಧ :
ನೀನಾಸಮ್ ಸಹಕಾರ ದೊಡ್ಡದು. ರಂಗಶಾಲೆಯನ್ನು ನಾಟಕದ ರಿಹರ್ಸಲ್ಸಗಳನ್ನು ಮಾಡಲು
ಬಳಸಿಕೊಳ್ಳುತ್ತೇವೆ. ಕೆಲವೊಮ್ಮೆ ಅನಿವಾರ್ಯವಾದಾಗ ರಂಗಪರಿಕರಗಳನ್ನು  ಕೇಳಿ  ತೆಗೆದುಕೊಂಡು ಬಳಕೆಯ ನಂತರ ವಾಪಸ್ ಮಾಡುತ್ತೇವೆ. ಆದರೆ ನೀನಾಸಮ್ಗೂ ಹಾಗೂ ನಮ್ಮ ಜನಮನದಾಟಕ್ಕೂ ಕೊಡುಕೊಳ್ಳುವ ಸಂಬಂಧವನ್ನು ಹೊರತುಪಡಿಸಿ ಯಾವುದೇ ರೀತಿಯ ಸಂಬಂಧಗಳಿಲ್ಲ. ಜನಮನದಾಟವು ಸ್ವಾವಲಂಬಿಯಾಗಿ ಇಂಡಿಪೆಂಡೆಂಟ್ ಆಗಿ ಬೆಳೆಯಬೇಕೆಂಬುದೇ ಕೆ.ವಿ.ಸುಬ್ಬಣ್ಣನವರ ಆಸೆಯಾಗಿತ್ತು. ಅವರ ಬಯಕೆಯಂತೆಯೇ ಪ್ರತ್ಯೇಕವಾಗಿಯೇ ನಾವು ಸಂಚಾರಿ ರೆಪರ್ಟರಿಯನ್ನು ನಡೆಸುತ್ತಿದ್ದೇವೆ. ನಾನು ನೀನಾಸಮ್ ಭಾಗವಾಗಿದ್ದೂ ಸಹ ಸ್ವಂತವಾಗಿ ರೆಪರ್ಟರಿ ನಡೆಸಲು ಸಾಧ್ಯವಾಗಿದೆಕರ್ನಾಟಕದಲ್ಲಿ ಜನಮನದಾಟದಂತಹ ಹಲವಾರು ಚಿಕ್ಕಪುಟ್ಟ ರೆಪರ್ಟರಿಗಳು ಹುಟ್ಟಿ, ಅವು ಬೆಳೆದು ವ್ಯಾಪಕವಾಗಿ ನಾಟಕಗಳು ಶುರುವಾಗಿ ಕೊನೆಗೊಮ್ಮೆ ನೀನಾಸಂ ತಿರುಗಾಟವೇ ನಿಂತು ಹೋಗುವ ಹಾಗಾಗಬೇಕು ಎಂದು ಸುಬ್ಬಣ್ಣನವರು ಕೆ.ವಿ.ಅಕ್ಷರರವರಿಗೆ ಹೇಳಿದ್ದರಂತೆ. ಅವರ ಮಹತ್ವಾಕಾಂಕ್ಷೆ ಅದ್ಬುತವಾದದ್ದು. ಇದಕ್ಕಾಗಿ ಕೆ.ವಿ.ಸುಬ್ಬಣ್ಣನವರಿಗೆ ನಾನು ಕೃತಜ್ಞನಾಗಿದ್ದೇನೆ. ಸುಬ್ಬಣ್ಣನವರ ಆಶಯದಂತೆ ಈಗಾಗಲೇ ನೀನಾಸಮ್ ನಿಂದ ಕಲಿತು ಹೋದ ಕೆಲವರು ರೆಪರ್ಟರಿ ಹಾಗೂ ರಂಗತಂಡಗಳನ್ನು ಕಟ್ಟಿ ನಾಟಕವನ್ನೂ ಮಾಡುತ್ತಿದ್ದಾರೆ. ನಟರಾಜ ಹೊನ್ನವಳ್ಳಿಯವರ ಪ್ರೋಥಿಯೋ, ಇಕ್ಬಾಲ್ ಚಿನ್ನಬಣ್ಣಸಮುರಾಯ್, ಅಂಕುರ, ಆಟಮಾಟ ಹೀಗೆ ಹಲವಾರು ರೆಪರ್ಟರಿ ರಂಗತಂಡಗಳು ರಂಗಚಟುವಟಿಕೆಗಳಲ್ಲಿ ನಿರತವಾಗಿವೆ. ಇದಕ್ಕೆಲ್ಲಾ ಸುಬ್ಬಣ್ಣನವರ ಪ್ರೇರಣೆಯೇ ಕಾರಣವಾಗಿದೆ. ಸುಬ್ಬಣ್ಣನವರ ನಂತರವೂ ಕೆ.ವಿ.ಅಕ್ಷರರವರು ನಮ್ಮ ರಂಗಚಟುವಟಿಕೆಗಳಿಗೆ ಸಪೋರ್ಟ ಮಾಡುತ್ತಿದ್ದಾರೆ.

ಜನಮನದಾಟದ ಸ್ವಾವಲಂಬಿತನ :
ಮೊದಮೊದಲು ಎಲ್ಲದಕ್ಕೂ ನೀನಸಮ್ನ್ನೇ ನಾವು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಬರುಬರುತ್ತ ನಮ್ಮ ನಾಟಕ ಪ್ರದರ್ಶನಗಳು ಹೆಚ್ಚಾದಂತೆಲ್ಲಾ ಜನರು ಗುರುತಿಸಲು ಪ್ರಾರಂಭಿಸಿದರು. ಮಾಧ್ಯಮಗಳು ನಮ್ಮ ರಂಗ ಕೆಲಸಗಳನ್ನು ಗಮನಿಸಿ ದಾಖಲಿಸಿದವು. ಕೆಲವರು ನಾವು ಪ್ರದರ್ಶನಕ್ಕಾಗಿ ಕೇಳಿದ್ದಕ್ಕಿಂತಲೂ ಹೆಚ್ಚು ಹಣವನ್ನು ಕೊಟ್ಟು ಉಪಕರಿಸಿದರು. ಹೀಗಾಗಿ ಈಗ ಜನಮನದಾಟವು ಸ್ವಾವಲಂಬಿಯಾಗಿದೆ. ನಮ್ಮದೇ ಆದ ಲೈಟಿಂಗ್ ಹಾಗೂ ಡಿಮ್ಮರ್ ಪರಿಕರಗಳಿವೆ. ಹಾರ್ಮೋನಿಯಂ, ತಬಲ, ಸ್ವರಮಂಡಲಾದಿಯಾಗಿ ಕೆಲವಾರು ಸಂಗೀತದ ಸಾಧನಗಳಿವೆ, ಪರದೆಯಾದಿಯಾಗಿ ಕೆಲವಾರು ರಂಗಪರಿಕರಗಳಿವೆ. ನನ್ನ ಮನೆಯ ಅರ್ಧ ಜಾಗವನ್ನು ಜನಮನದಾಟ ಪ್ರಾಪರ್ಟಿಗಳೇ ತುಂಬಿವೆ. ಸಾರಿಗೆಗಾಗಿ ಬಾಡಿಗೆ ವಾಹನವನ್ನು ಬಳಸುತ್ತಿದ್ದೇವೆ. ಉಳಿದಂತೆ ಬಹುತೇಕ ನಮ್ಮದೇ ಆದ ರಂಗಪರಿಕರಗಳನ್ನು ಮಾಡಿಕೊಂಡಿದ್ದೇವೆ. ಜನರಿಂದ ಪಡೆದ ಹಣದಲ್ಲಿ ರೆಪರ್ಟರಿಯನ್ನು ಸ್ವಾವಲಂಬಿಯಾಗಿ ಕಟ್ಟುವ ಕೆಲಸವನ್ನು ಬಲು ನಿಷ್ಟೆಯಿಂದ ಮಾಡಿದ್ದೇವೆ.



ಆರ್ಥಿಕ ನಿರ್ವಹಣೆ :
ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಬರಲಾಗಿದೆ. ತಂಡದವರ ಗಮನಕ್ಕೆ ಬರದೇ ಒಂದು ರೂಪಾಯಿ ಕೂಡಾ ಮಿಸ್ ಆಗೋದಿಲ್ಲ. ಒಂದು ಪ್ರದರ್ಶನಕ್ಕೆ ಎಂಟರಿಂದ ಹತ್ತು ಸಾವಿರ ಹಣ ಪಡೆಯುತ್ತೇವೆ. ದೂರ ಅಂತರ ನೋಡಿಕೊಂಡು ಕೆಲವೊಮ್ಮೆ ಮೊತ್ತದಲ್ಲಿ ಹೆಚ್ಚು ಕಡಿಮೆ ಆಗಿದ್ದಿದೆ. ನಮ್ಮ ತಂಡದಲ್ಲೇ ನಿಷ್ಟನಾಗಿರುವ ಒಬ್ಬನನ್ನು ಆಯ್ದು ಮ್ಯಾನೇಜರ್ ಎಂದು ನಿಯಮಿಸಿರುತ್ತೇವೆ. ಆತನೇ ಎಲ್ಲಾ ರೀತಿಯ ಖರ್ಚು ವೆಚ್ಚ ಆದಾಯಗಳ ಲೆಕ್ಕವನ್ನು ಪಕ್ಕಾ ಇಡಬೇಕಾಗುತ್ತದೆ. ಅದರ ಮೇಲೆ ನಾನು ಕೂಡಾ ನಿಗಾವಹಿಸಿರುತ್ತೇನೆ. ವರ್ಷದ ಸಂಚಾರ ಮುಗಿದ ನಂತರ ತಂಡದ ಎಲ್ಲರೂ ಒಂದು ಕಡೆ ಸೇರಿಕೊಂಡು ಲೆಕ್ಕಪತ್ರಗಳನ್ನು ಮುಕ್ತವಾಗಿ ಪರಿಶೀಲಿಸುತ್ತೇವೆ. ಎಲ್ಲಾ ಖರ್ಚುಗಳನ್ನು ಕಳೆದ ನಂತರ ಉಳಿದ ಹಣವನ್ನು ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕೂಡಾ ಸಮನಾಗಿ ಹಂಚಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಪ್ರಯೋಗಗಳಾಗುತ್ತಿರುವುದರಿಂದ ಪ್ರತಿಯೊಬ್ಬರಿಗೂ ಹದಿನೈದರಿಂದ ಇಪ್ಪತ್ತು ಸಾವಿರದಷ್ಟು ಹಣ ಸಿಗುತ್ತಿದೆ. ಎಲ್ಲಾ ಕಲಾವಿದರೂ ನಟನೆಯ ತೃಪ್ತಿಯ ಜೊತೆಗೆ ಹಣಕಾಸಿನ ಸಂತೃಪ್ತಿಯನ್ನೂ ಅನುಭವಿಸುತ್ತಿದ್ದಾರೆ. ಹೆಚ್ಚು ಹಣವನ್ನು ಕೂಡಿ ಇಡುತ್ತಿಲ್ಲ. ಈಗ ಎಲ್ಲಾ ಸೇರಿ ಇಪ್ಪತ್ತು ಸಾವಿರ ಹಣವನ್ನು ಎಮರ್ಜನ್ಸಿ ಫಂಡ್ ಆಗಿ ಇಟ್ಟುಕೊಂಡಿದ್ದೇವೆ. ಅನಿವಾರ್ಯವಾದಾಗ, ಅಥವಾ ಮುಂದಿನ ವರ್ಷದ ರೆಪರ್ಟರಿ ನಾಟಕದ ರಿಹರ್ಸಲ್ಸ್ ಖರ್ಚುಗಳಿಗಾಗಿ ಹಣವನ್ನು ಬಳಸಿಕೊಳ್ಳುತ್ತೇವೆ. ಒಟ್ಟಿನ ಮೇಲೆ ಹಣ ಮಾಡುವುದೇ ನಮ್ಮ ತಂಡದ ಉದ್ದೇಶವಲ್ಲ. ಸಾಧ್ಯವಾದಷ್ಟೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಬೇಕು, ರಂಗಭೂಮಿಗೆ ಹೊಸ ಆಯಾಮವನ್ನು ಕೊಡಬೇಕು ಎನ್ನುವುದೇ ನಮ್ಮ ಆಧ್ಯತೆಯಾಗಿದೆ. ನಿಟ್ಟಿನತ್ತ ಪ್ರಯತ್ನ ಮುಂದುವರೆಸಿದ್ದೇವೆ.

ತಂಡದಲ್ಲಿ ಹುಟ್ಟಿದ ಭಿನ್ನಾಭಿಪ್ರಾಯ ಹಾಗೂ ಮರಳಿಕಟ್ಟಿದ ರೀತಿ:
ಹೌದು, ಎರಡು ವರ್ಷ ನಮ್ಮ ತಂಡ ಚೆನ್ನಾಗಿಯೇ ನಡೆದಿತ್ತು. ಆರಂಭದಲ್ಲಿ ನನ್ನ ಜೊತೆಗೆ ನೀನಾಸಮ್ನಲ್ಲಿ ಶಿಕ್ಷಕರಾಗಿರುವ ಅರುಣ್ ಕುಮಾರ್ ಹಾಗೂ ನೀನಾಸಮ್ನಲ್ಲಿ ತರಬೇತಾದ  ಸಂತೋಷ ಗುಡ್ಡಿಯಂಗಡಿ, ಶ್ರೀಕಾಂತ ಕುಮ್ಟಾ, ಶ್ರೀಕಾಂತ.ಎನ್.ವಿ, ಮಹದೇವ್ ಹಡಪದ, ಕಿರಣ್ ನಾಯಕ ... ಹೀಗೆ ಏಳು ಜನರ ಒಂದು ತಂಡವಾಗಿ ಜನಮನದಾಟ ಹುಟ್ಟಿಕೊಂಡಿತು. ಎಲ್ಲರೂ ಸೇರಿ ಎಲ್ಲವನ್ನೂ ಮಾಡಬೇಕು ಎಂಬ ಕಾನ್ಸೆಪ್ಟ್ ನಮ್ಮದಾಗಿತ್ತು. ಎರಡು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ನಡೆದಿತ್ತು. ಅದ್ಯಾಕೋ ಹೊಂದಾಣಿಕೆಯಲ್ಲಿ ಒಂದಿಷ್ಟು ಕೊರತೆಗಳುಂಟಾದವು. ಕೆಲವರು ಭಿನ್ನಾಭಿಪ್ರಾಯದಿಂದಾಗಿ ದೂರವಾದರು, ಇನ್ನು ಕೆಲವರು ಬೇರೆ ಕೆಲಸದ ಒತ್ತಡಗಳಿಂದಾಗಿ ತಂಡವನ್ನು ಬಿಟ್ಟರು. ಒಂದಿಬ್ಬರಿಗೆ ಬೇರೆಕಡೆಗೆ ನೌಕರಿ ಸಿಕ್ಕಿತು. ಕೊನೆಗೆ ಹೆಚ್ಚು ಕಡಿಮೆ ನಾನೊಬ್ಬನೇ ಉಳಿದೆ. ಮತ್ತೆ ನೀನಾಸಮ್ನಲ್ಲಿ ತರಬೇತಾಗಿ ತಿರುಗಾಟ ಮುಗಿಸಿದವರೊಂದಿಗೆ ಮಾತಾಡಿದೆ. ಜನಮನದಾಟದ ಉದ್ದೇಶದ ಬಗ್ಗೆ ಅರಿವು ಮಾಡಿಕೊಟ್ಟೆ. ಉತ್ಸಾಹವಿರುವ ಹೊಸಕಲಾವಿದರನ್ನು ಪ್ರತಿ ವರ್ಷ ಆಯ್ಕೆಮಾಡಿಕೊಂಡಿದ್ದರಿಂದ ಜನಮನದಾಟ ನಿಲ್ಲದೇ ಮುಂದುವರೆಯಿತು. ಲಕ್ಷ್ಮಣ್ ಪೀರಗಾರ, ಸಿತಾರಾ, ಕಲ್ಲಪ್ಪ ಪೂಜಾರ, ಸತೀಶ್ ಪುರಪ್ಪೆಮನೆ, ಮಹಾದೇವ ಲಾಲಿಪಾಳ್ಯ, ಚಂದ್ರಮ್ಮ, ಎಂ.ಸೂರ್ಯ, ಚೈತ್ರ, ಅರುಣ್ ಮಾನ್ವಿ, ಶಿಲ್ಪ, ಚೈತ್ರ, ಗಣೇಶ ಉಡುಪಿ, ಸತ್ಯ, ಶೋಧನ್, ಕೆ.ಎನ್.ಜಯರಾಮ್, ಎಸ್.ಪಿ.ಮಂಜುನಾಥ.. ಹೀಗೆ ಪ್ರತಿಭಾವಂತ ಕಲಾವಿದರು ನಮ್ಮ ತಂಡವನ್ನು ಸೇರಿದರು. ನಡುನಡುವೆ ಒಂದಿಬ್ಬರು ತಮ್ಮ ವ್ಯಯಕ್ತಿಕ ಕಾರಣಗಳಿಗೆ ಬಿಟ್ಟು ಹೋಗುವುದು ಹಾಗೂ ಹೊಸಬರು ಸೇರಿಕೊಳ್ಳುವುದು ನಡೆಯುತ್ತಿತ್ತು. ಕಳೆದ ಐದು ವರ್ಷಗಳಿಂದ ಜನಮನದಾಟ ಜೊತೆಗೆ ಚಂದ್ರು ತಿಪಟೂರು, ಚಂದ್ರಮ್ಮ ಹೊಳಲ್ಕೆರೆ, ಜಯರಾಮ ಮೈಸೂರು, ಲಕ್ಷ್ಮಣ್ ಪಿರಗಾರ ಧಾರವಾಡ, ಸೂರ್ಯ, ಸಿತಾರ, ಡಿಂಗ್ರಿ ನರೇಶ ರಾಯಚೂರು ಇವರುಗಳು ಬದ್ದತೆಯಿಂದ ಇದ್ದಾರೆ. ಎಲ್ಲಾ ಕಲಾವಿದರ ಪ್ರತಿಭೆ, ಬದ್ಧತೆ ಹಾಗೂ ಸಹಕಾರದಿಂದಾಗಿ ಜನಮನದಾಟ ವು ಪ್ರತಿ ವರ್ಷ ಮೇ-ಜೂನ್-ಜುಲೈ ತಿಂಗಳಲ್ಲಿ ನಿರಂತರವಾಗಿ ನಾಟಕ ಪ್ರದರ್ಶನವನ್ನು ಮಾಡಲು ಸಾಧ್ಯವಾಗಿದೆ. ಜನಮನದಾಟದ ದಾರಿ ದಿಕ್ಕು ಗುರಿಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ಆದ್ದರಿಂದ ಯಾರೇ ಬರಲಿ, ಬೇಡಾದವರು ಬಿಡಲಿ ಜನಮನದಾಟವನ್ನು ಕಟ್ಟುವ ಕೆಲಸವನ್ನು ನಿಷ್ಟೆಯಿಂದ ಮಾಡುತ್ತಿರುವೆ. ನಾಟಕವೇ ನನ್ನ ಬದುಕಾಗಿದೆ.

ಭಿನ್ನಾಭಿಪ್ರಾಯಕ್ಕೆ ನಿಜವಾದ ಕಾರಣ :
ರಾಷ್ಟ್ರೀಯ ರಂಗಶಾಲೆಯು 2006 ರಲ್ಲಿ ದೆಹಲಿಯಲ್ಲಿ ಭಾರತ್ ರಂಗ ಮಹೋತ್ಸವ್ ಎನ್ನುವ ನಾಟಕೋತ್ಸವವನ್ನು ಆಯೋಜಿಸಿತ್ತು. ಅದರಲ್ಲಿ ಜನಮನದಾಟದ ಉಚಲ್ಯಾ ನಾಟಕವೂ ಪ್ರದರ್ಶನಗೊಂಡಿತ್ತು. ಪ್ರದರ್ಶನದಿಂದ ಒಂದು ಲಕ್ಷದಷ್ಟು ಹಣ ಬಂದಿತ್ತು. ಪ್ರದರ್ಶನ ಒಂದಕ್ಕೆ ಅಷ್ಟೊಂದು ಹಣ ಸಿಕ್ಕಿದ್ದು ಅದೇ ಮೊದಲನೆಯದು. ಎಲ್ಲ ಹಣವನ್ನೂ ಹಂಚಿಕೊಳ್ಳುವ ಬದಲು ಅದರಲ್ಲಿ ಇಪ್ಪತ್ತು ಸಾವಿರ ಹಣವನ್ನು ಜನಮನದಾಟ ತಂಡಕ್ಕೆ ಬೇಕಾದ ಪರಿಕರಗಳಿಗೆ ಬಳಸೋಣ, ಬಾಕಿ ಹಣವನ್ನು ಹಂಚಿಕೊಳ್ಳೋಣ ಎಂದು ನಾನು ಸಲಹೆ ಮಾಡಿದೆ. ಯಾಕೆಂದರೆ ಪರಿಕರಗಳಿಲ್ಲದೇ ತಂಡ ಇನ್ನೂ ಪರಾವಲಂಬಿಯಾಗಿಯೇ ಇತ್ತು. ಆದರೆ ಇದನ್ನು ನಮ್ಮ ತಂಡದ ಕೆಲವರು ವಿರೋಧಿಸಿದರು. ಎಲ್ಲಾ ಹಣವನ್ನು ಸಮನಾಗಿ ಹಂಚಲೇಬೇಕೆಂದು ಪಟ್ಟುಹಿಡಿದರುನನಗೆ ಜನಮನದಾಟ ಹಿತಾಸಕ್ತಿ ಮುಖ್ಯವಾಗಿತ್ತು. ತಂಡದ ಕೆಲವರನ್ನು ಹೇಗೋ ಒಪ್ಪಿಸಿದೆ. ಇನ್ನು ಕೆಲವರು ಮುನಿಸಿಕೊಂಡರು. ಕೊನೆಗೂ ಇಪ್ಪತ್ತು ಸಾವಿರ ಹಣವನ್ನು ತಂಡಕ್ಕಾಗಿ ಇಟ್ಟುಕೊಂಡು ಬಾಕಿ ಹಣವನ್ನು ವಿತರಿಸಲಾಯಿತು. ವ್ಯಕ್ತಿಗಿಂತ ತಂಡ ಮುಖ್ಯ ಎನ್ನುವುದು ನನ್ನ ಭಾವನೆ. ಆದರೆ ಕೆಲವರಿಗೆ ತಂಡಕ್ಕಿಂತ ಹಣವೇ ಮುಖ್ಯವಾಗಿತ್ತು. ಮುಂದಿನ ವರ್ಷದ ರಂಗಸಂಚಾರಕ್ಕೆ ಒಬ್ಬನನ್ನು ಹೊರತು ಪಡಿಸಿ ಮಿಕ್ಕವರು ಬರಲೇ ಇಲ್ಲ. ಹೀಗಾಗಿ ಬೇರೆ ಕಲಾವಿದರನ್ನು ಸೇರಿಸಿಕೊಂಡು ಜನಮನದಾಟವನ್ನು ಮುಂದುವರೆಸಿದೆವು. ಯಾರೆ ಬರಲಿ ಬಿಡಲಿ ಶೋ ಮಸ್ಟ್ ಗೋ ಆನ್ ಎನ್ನುವುದು ರಂಗಭೂಮಿಯ ಪರಿಕಲ್ಪನೆಯಾಗಿದೆ

ಪ್ರಜಾವಾಣಿಯಲ್ಲಿ ಕೇಳಿಬಂದ ಆರೋಪ :
ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಡಿ.ಕೆ.ರಮೇಶ ಎನ್ನುವವರು ಊರುಕೇರಿ ನಾಟಕದ ಬಗ್ಗೆ ಬರೆಯುತ್ತಾ ಎಂ.ಗಣೇಶ ನೀನಾಸಮ್ ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ಜನಮನದಾಟ ಕಟ್ಟಿದರು ಎಂದು ಬರೆದಿದ್ದರು. ಇದಕ್ಕೆ ಪ್ರಜಾವಾಣಿಯಲ್ಲಿಯೇ ಸಂತೋಷ ಗುಡ್ಡಿಯಂಗಡಿ ಮತ್ತು ಮಹಾದೇವ ಹಡಪದ ಇಬ್ಬರೂ ಪ್ರತಿಕ್ರಿಯಿಸಿ ಜನಮನದಾಟ ಸಾಮೂಹಿಕ ನಾಯಕತ್ವದ್ದಾಗಿತ್ತು, ಗಣೇಶರವರೇ ಬರುಬರುತ್ತಾ ಅದರ ನಿರ್ದೇಶಕರು ಹಾಗೂ ಒಡೆಯರೂ ಆದರು. ನಮ್ಮೆಲ್ಲರ ಪರಿಶ್ರಮದಿಂದ ಜನಮನದಾಟ ಕಟ್ಟಿದ್ದೇವೆ ಆದರೆ ಗಣೇಶ ಮಾತ್ರ ರಾಷ್ಟ್ರೀಯ ಪ್ರಶಸ್ತಿ ಪಡೆದರು, ನಮ್ಮೆಲ್ಲರ ಯಶಸ್ಸನ್ನು ಹೈಜಾಕ್ ಮಾಡಿ ಸಾಂಸ್ಕೃತಿಕ ಮಾಫಿಯಾಗಿರಿ ಶುರುಮಾಡಿದರು... ಎಂದೆಲ್ಲಾ ಆರೋಪಿಸಿದರು. ಆದರೆ ನಾನು ಎಂದೂ ನನ್ನೊಬ್ಬನಿಂದಾಗಿ ಜನಮನದಾಟ ನಿಂತಿದೆ ಎಂದು ಹೇಳಿಲ್ಲ. ಇವರೆಲ್ಲಾ ನೀನಾಸಮ್ನಲ್ಲಿ ನನ್ನ ವಿದ್ಯಾರ್ಥಿಗಳಾಗಿದ್ದವರು. ಯಾರದೋ ಚಿತಾವಣೆಯಿಂದಾಗಿ ನನ್ನ ವಿರುದ್ದವೇ ತಿರುಗಿ ಬಿದ್ದರು. ತಮ್ಮ ಸ್ವಾರ್ಥಕ್ಕಾಗಿ ತಂಡವನ್ನು ಒಡೆದು ಹಾಕಿದರು. ಗುರುದ್ರೋಹ ಹಾಗೂ ರಂಗದ್ರೋಹ ಎರಡನ್ನೂ ಬಗೆದರು. ಆದರೂ ನಾನು ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿ ಜನಮನದಾಟವನ್ನು ಕಟ್ಟುವ ಕೆಲಸವನ್ನು ಮುಂದುವರೆಸಿದ್ದೇನೆ. ಇನ್ನು ರಾಷ್ಟ್ರೀಯ ಪ್ರಶಸ್ತಿ ಬಂದದ್ದು ಪ್ರಸನ್ನರವರ ಪರಿಶ್ರಮದಿಂದ. ನಾನು ಚರಕಕ್ಕೆ ನಾಟಕ ನಿರ್ದೇಶಿಸಿದ್ದೆ. ಆಗ ನನ್ನ ಕೆಲಸವನ್ನು ಪ್ರಸನ್ನರವರು ಮೆಚ್ಚಿಕೊಂಡರು. ಹಾಗೂ ನನ್ನ ಹೆಸರನ್ನು ರೆಕಮೆಂಡ್ ಮಾಡಿದರು. ನನಗೆ ನಾಟಕ ಕಟ್ಟುವುದು ಗೊತ್ತೆ ಹೊರತು ಮಾಫಿಯಾಗಿರಿ ಗೊತ್ತಿಲ್ಲ. ನಾನೇ ಬೆಳೆಸಿದ ಹುಡುಗರು ನನಗೆ ತುಂಬಾ ನೋವನ್ನುಂಟು ಮಾಡಿದ್ದು ನನಗೆ ಬೇಸರವನ್ನು ತಂದಿದ್ದಂತೂ ಸುಳ್ಳಲ್ಲ.


ಮೇಲ್ವರ್ಗದ ಜನರೆ ಹೆಚ್ಚಾಗಿರುವ ನೀನಾಸಮ್ನಲ್ಲಿ ದಲಿತರಾದ ನಿಮ್ಮ ಅಸ್ತಿತ್ವ :
ಒಂದು ಸತ್ಯ ಹೇಳ್ತೇನೆ, ಸುಬ್ಬಣ್ಣನವರು ನೀನಾಸಮ್ನಲ್ಲಿ ಜಾತಿಯತೆ, ಮೇಲು-ಕೀಳುಗಳು ಬೆಳೆಯದಂತೆ ಭದ್ರ ಬುನಾದಿಯನ್ನು ಹಾಕಿ ಕೊಟ್ಟು ಹೋದರು. ಈಗಲೂ ನೀನಾಸಮ್ನಲ್ಲಿ ಜಾತಿಗಿಂತಲೂ ಪ್ರತಿಭೆಗೆ ಹೆಚ್ಚು ಮಾನ್ಯತೆ. ಅಲ್ಲಿರುವ ಪ್ರತಿಯೊಬ್ಬರು ಜಾತಿ ಗೀತಿ ನೋಡದೇ ಕೇವಲ ನನ್ನ ಪ್ರತಿಭೆ ಹಾಗೂ ರಂಗನಿಷ್ಟೆಯನ್ನು ನೋಡಿ ಪ್ರೋತ್ಸಾಹಿಸಿದ್ದಾರೆ. ನನಗೇನಾದರೂ ನಿಜಕ್ಕೂ ಅನ್ಯಾಯವಾಗಿದ್ದರೆ, ನನ್ನ ಪ್ರತಿಭೆಗೆ ಅವಮಾನವಾಗಿದ್ದರೆ ಅದು ಒಬ್ಬ ಶೂದ್ರನಿಂದಲೇ ಎನ್ನುವುದು ನನ್ನ ಅನುಭವಕ್ಕೆ ಬಂದ ವಿಷಯ. ಇದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ನಾನು ನೀನಾಸಮ್ನಲ್ಲಿ ತರಬೇತಿ ತಿರುಗಾಟ ಮುಗಿಸಿದ ಮೇಲೆ ಹೆಚ್ಚಿನ ಕಲಿಕೆಗಾಗಿ ಎನ್ಎಸ್ಡಿ ಗೆ ಹೋಗಬೇಕು ಎನ್ನುವ ಆಸೆ ಬೆಟ್ಟದಷ್ಟಿತ್ತು. ಬೆಂಗಳೂರಿನಲ್ಲಿ  ಎನ್ಎಸ್ಡಿ ಗೆ ವಿದ್ಯಾರ್ಥಿಗಳ ಆಯ್ಕೆಗಾಗಿ ಸಂದರ್ಶನವಿತ್ತು. ನನ್ನ ಪರವಾಗಿ ಬಿ.ವಿ.ಕಾರಂತ್, ಕೆ.ವಿ.ಸುಬ್ಬಣ್ಣ, ಪ್ರಸನ್ನ, ಕೀರಂ, ಡಾ.ಮರುಳಸಿದ್ದಪ್ಪ... ಹೀಗೆ ಹಲವಾರು ದಿಗ್ಗಜರು ಪತ್ರಗಳನ್ನು ಬರೆದು ಕೊಟ್ಟಿದ್ದರು. ಆಯ್ಕೆ ಮಾಡುತ್ತಿದ್ದವರು ಸಿ.ಬಸವಲಿಂಗಯ್ಯನವರು. ನಾನು ಎಲ್ಲಾ ರೀತಿಯ ಪರೀಕ್ಷೆಗಳಲ್ಲೂ ಚೆನ್ನಾಗಿಯೇ ಮಾಡಿದ್ದೆ.
ರಂಗಕರ್ಮಿ ಸಿ.ಬಸವಲಿಂಗಯ್ಯ
ಕೊನೆಗೆ ಬಸವಲಿಂಗಯ್ಯನವರು ಒಂದು ಹಿಂದಿ ಪತ್ರಿಕೆಯನ್ನು ಕೊಟ್ಟು ಓದಲು ಹೇಳಿದರು. ಆದರೆ ನನಗೆ ಹಿಂದಿ ಭಾಷೆ ಮಾತಾಡಲು ಬರುತ್ತಿತ್ತೇ ಹೊರತು ಓದಲು ಬರೆಯಲು ಅಷ್ಟಾಗಿ ಬರುತ್ತಿರಲಿಲ್ಲ. ಹೇಗೋ ಕಷ್ಟ ಪಟ್ಟು ಓದಿದೆ. ನನಗೆ ಹಿಂದಿ ಭಾಷೆಯಲ್ಲಿ ಪ್ರಭುತ್ವ ಇಲ್ಲ ಎಂದು ಹೇಳಿ ನನ್ನನ್ನು ಆಯ್ಕೆ ಮಾಡಲಿಲ್ಲ. ಆಮೇಲೆ ನನಗೆ ಅದರ ಹಿಂದಿನ ತಂತ್ರಗಾರಿಕೆ ಏನೆಂದು ಗೊತ್ತಾಯಿತು. ಸಮುದಾಯ ಸಂಘಟನೆಯಿಂದ ಬಂದ ಬಸವಲಿಂಗಯ್ಯನವರು ಸಮುದಾಯ ಸಂಘಟನೆಯ ಅಧ್ಯಕ್ಷರಾಗಿದ್ದ ಆರ್.ಕೆ.ಹುಡುಗಿ ಯವರ ಮಗ ಸುನಿಲ್ ಹುಡುಗಿಯನ್ನು ಎನ್ಎಸ್ಡಿಗೆ ಆಯ್ಕೆ ಮಾಡಿಕೊಂಡಿದ್ದರು. ಎಲ್ಲಾ ಅರ್ಹತೆಯುಳ್ಳ ನನ್ನನ್ನು ಕೇವಲ ಭಾಷೆಯ ನೆಪಒಡ್ಡಿ ನಪಾಸ್ ಮಾಡಿದ್ದರು. ಆದರೆ ಸುನಿಲ್ ಹುಡುಗಿ ಎನ್ಎಸ್ಡಿ ಮುಗಿಸಿಕೊಂಡು ಬಂದು ರಂಗಭೂಮಿ ಚಟುವಟಿಕೆಗಳಿಂದ ವಿಮುಖನಾಗಿದ್ದರೆ ನಾನು ಅಂದಿನಿಂದ ಇಂದಿನವರೆಗೂ ರಂಗಭೂಮಿಯಲ್ಲೇ ಬದುಕನ್ನು ಕಾಣುತ್ತಿದ್ದೇನೆ. ರಂಗಭೂಮಿಯಲ್ಲಿ ಇದೇ ಮೇಲ್ವರ್ಗದವರು ಎನ್ನುವ ಜನರೇ ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಆದರೆ ಒಬ್ಬ ದಲಿತವರ್ಗದ ವ್ಯಕ್ತಿ ಇನ್ನೊಬ್ಬ ದಲಿತನನ್ನು ಯಾವುದೋ ಮುಲಾಜಿಗೊಳಗಾಗಿ ವಂಚಿಸಿದ್ದು ಮಾತ್ರ ಅಕ್ಷಮ್ಯ, ಅದು ನನ್ನನ್ನು ಈಗಲೂ ಕಾಡುತ್ತಿದೆ.   

ರಂಗಪಯಣದಲ್ಲಿ ಬೇಸರದ ಘಟನೆ :
ನಾನು ಹಿಜಡಾಗಳ ಬದುಕನ್ನು ಆಧರಿಸಿ ಬದುಕು ಬಯಲು ನಾಟಕವನ್ನು ನಿರ್ದೇಶಿಸಿದ್ದೆ. ಮೊದಲ ಬಾರಿಗೆ  ಹಿಜಡಾಗಳ ಕುರಿತು ನಾಟಕ ಮಾಡಿದೆವು. ರಂಗಭೂಮಿ ಇತಿಹಾಸದಲ್ಲಿ ಹಿಜಡಾ ಸಮುದಾಯದವರು ಥೇಯಟರ್ಗೆ ಬಂದು ನಾಟಕ ನೋಡುವಂತಾಯಿತು. ಸಮುದಾಯದವರೇ ಸಂಘಟಿಸಿ ನಾಟಕವನ್ನು ಕರೆಸಿ ಆಡಿಸಿದರು. ಮೊದಲ ಬಾರಿಗೆ ಹಿಜಡಾ ಸಮುದಾಯದ ರೇವತಿಯವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. ಐದು ತಿಂಗಳ
ಪತ್ರಕರ್ತ ಗುಡಿಹಳ್ಳಿ ನಾಗರಾಜ
ಹಿಂದೆ ಮಾರ್ಚ 27ರಂದು ವಿಶ್ವರಂಗಭೂಮಿ ದಿನಾಚರಣೆಯ ನಿಮಿತ್ತ ಮಂಜುಶ್ರಿ ಕಡಕೋಳರವರು ಪ್ರಜಾವಾಣಿಗಾಗಿ ನನ್ನ ಹಾಗೂ  ರೇವತಿಯವರ ಕುರಿತು ಸಂದರ್ಶನ ಮಾಡಿದ್ದರು. ಅದರಲ್ಲಿ ನಾನು ಹಿಜಡಾ ಸಮುದಾಯದ ರೇವತಿಯವರೇ ಬರೆದ ಕತೆಯಾಧಾರಿತ ನಾಟಕದಲ್ಲಿ ರೇವತಿಯವರೇ ಅಭಿನಯಿಸುತ್ತಿರುವುದು ರಂಗಭೂಮಿ ಇತಿಹಾಸದಲ್ಲಿ ಇದೇ ಮೊದಲನೇಯದು’’ ಎಂದು ಹೇಳಿದ್ದೆ. ಇದು ಪ್ರಕಟಗೊಂಡ ಮಾರನೆಯ ದಿನ ಪ್ರಜಾವಾಣಿ ಕಛೇರಿಯಲ್ಲಿ ಗುಡಿಹಳ್ಳಿ ನಾಗರಾಜರು ಕೆಂಡಾಮಂಡಲವಾಗಿ ಮಂಜಶ್ರೀ ಕಡಕೋಳರವರನ್ನು ತರಾಟೆಗೆ ತೆಗೆದುಕೊಂಡರಂತೆ. ನಲವತ್ತು ವರ್ಷಗಳಿಂದ ಜೋಗತಿ ಸಮುದಾಯ ಅಭಿನಯ ನೃತ್ಯಕಲೆ ಮಾಡುತ್ತಿದೆ. ಅದನ್ನೆಲ್ಲಾ ಪರಿಗಣನೆಗೆ ತೆಗೆದುಕೊಳ್ಳುವುದನ್ನು ಬಿಟ್ಟು ರೇವತಿಯವರೇ ಮೊದಲಿಗರು ಅಂತಾ ಬರೆದಿದ್ದು ತಪ್ಪು ಎಂದು ಹರಿಹಾಯ್ದರಂತೆ. ನಂತರ ಅವರೇ ಒಂದು ಪತ್ರವನ್ನು ಪ್ರಜಾವಾಣಿ ವಾಚಕರ ವಿಭಾಗಕ್ಕೆ ಸ್ವತಃ ಬರೆದು ಮರಯಮ್ಮನಹಳ್ಳಿ ನಾಗರತ್ನಮ್ಮರವರ ಹೆಸರು ಹಾಕಿ ಕಳುಹಿಸಿಕೊಟ್ಟರಂತೆ. ಅದು ಮಾರನೆಯ ದಿನ ಪ್ರಕಟವಾಯಿತು. ಅದಕ್ಕೆ ನಾನು ಪ್ರತಿಕ್ರಿಯೆ ಬರೆದೆ. ಜೋಗತಿಯರು ಪೌರಾಣಿಕ ಹಿನ್ನೆಲೆಯಲ್ಲಿ ಯಲ್ಲಮ್ಮನ ನಾಟಕ ಮಾಡ್ತಾರೆ. ಮಾಡ್ಲಿ. ಆದರೆ ಹಿಜಡಾ ಸಮುದಾಯದ ಸಮಕಾಲೀನ ಸಮಸ್ಯೆಗಳನ್ನು ಕುರಿತು ಆತ್ಮಕತೆ ಬರೆದು ನಾಟಕದಲ್ಲಿ ಪಾತ್ರಮಾಡಿದವರಲ್ಲಿ ರೇವತಿ ಮೊದಲನೆಯ ಹಿಜಡಾ ವ್ಯಕ್ತಿ ಎಂದು ನಾನು ಹೇಳಿದ್ದೇನೆಂದು ಸ್ಪಷ್ಟೀಕರಣ ಕೊಟ್ಟೆ. ಹಿಜಡಾ ಬದುಕಿನ ತವಕ ತಲ್ಲಣಗಳನ್ನು ದಾಖಲಿಸಿ ನಟಿಸಿದ ಕೀರ್ತಿ ರೇವತಿಗೆ ಸಲ್ಲಬೇಕಾದದ್ದು ನ್ಯಾಯಯುತವಾದದ್ದು ಎನ್ನುವುದು ನನ್ನ ವಾದವಾಗಿತ್ತು. ಆದರೆ ನನ್ನ ಮಾತನ್ನು ತಪ್ಪಾಗಿ ಗ್ರಹಿಸಿ ತಾವೇ ವಾಚಕರವಾಣಿಗೆ ಬೇರೊಬ್ಬರ ಹೆಸರಲ್ಲಿ ಪತ್ರ ಬರೆದ ಗುಡಿಹಳ್ಳಿಯಂತಹ ಪತ್ರಕರ್ತರ ಮೇಲಿದ್ದ ಗೌರವವೇ ನನ್ನಲ್ಲಿ ನಶಿಸಿಹೋಯಿತು. ಸನ್ನಿವೇಶ ನನ್ನ ಮನಸ್ಸಿಗೆ ಬೇಸರವನ್ನುಂಟುಮಾಡಿತು.      
 
'ಊರುಕೇರಿ' ನಾಟಕದ ದೃಶ್ಯ

ರೆಪರ್ಟರಿ ಸಂಚಾರದಲ್ಲಿ ಪ್ರಮುಖ ಘಟನೆಗಳು :
ಅಂತಹ ಅನೇಕ ಘಟನೆಗಳಿವೆ. ಒಮ್ಮೆ ಔರಾದ್ನಲ್ಲಿ ಜನಮನದಾಟ ಊರುಕೇರಿ ನಾಟಕ ಪ್ರದರ್ಶನ ಏರ್ಪಾಡಾಗಿತ್ತು. ನಮ್ಮ ತಂಡ ಅಲ್ಲಿಗೆ ಹೋಗಿ ನಾಟಕದ ತಯಾರಿಯಲ್ಲಿ ತೊಡಗಿತು. ಆದರೆ ಅದೆಲ್ಲಿದ್ದರೋ ಜನ ಕಿಕ್ಕಿರಿದು ಸೇರಿದರು. ಸೀಮಿತ ಟಿಕೆಟ್ಗಳೆಲ್ಲಾ ಮಾರಾಟವಾಗಿಹೋದರೂ ನಾಟಕಾಸಕ್ತ ಜನರ ಒತ್ತಡ ಹೆಚ್ಚಾಗತೊಡಗಿತು. ಕೊನೆಗೆ ಚಿಕ್ಕ ರಂಗಮಂದಿರವನ್ನೇ ಬದಲಾಯಿಸಬೇಕಾಯಿತು. ಊರಲ್ಲಿದ್ದ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಿನೆಮಾವನ್ನು ನಿಲ್ಲಿಸಿ ನಮ್ಮ ನಾಟಕ ಪ್ರದರ್ಶನ ಮಾಡಿಕೊಡಲು ಬಿಟ್ಟು ಕೊಟ್ಟರು. ಅಲ್ಲಿಯೂ ಕೂಡಲು ಸೀಟು ದೊರೆಯದ ಜನರು ಜಾಗ ಸಿಕ್ಕಲ್ಲೆಲ್ಲಾ ಕುಂತು ನಿಂತು ನಾಟಕವನ್ನು ವೀಕ್ಷಿಸಿದರು. ಇದು ನಿಜಕ್ಕೂ ಮರೆಯಲಾರದ ಘಟನೆಕಿನ್ನಗೋಳಿ ಎನ್ನುವ ಊರಲ್ಲಿ ಯಾವುದೋ ಕಾರಣದಿಂದ ಪ್ರದರ್ಶನ ರದ್ದಾಗಿತ್ತು. ಆದರೆ ಅಲ್ಲಿಗೆ ನಮ್ಮ ತಂಡ ಹೋಗಿಯಾಗಿತ್ತು. ಊರಿನ ಮುಖಂಡರನ್ನು ಮತ್ತೆ ಮತ್ತೆ ವಿನಂತಿಸಿಕೊಂಡಾಗ ಒಂದೇ ಒಂದು ಗಂಟೆ ಮಾತ್ರ ನಾಟಕ ಮಾಡಲು ಅವಕಾಶ ಕೊಡುತ್ತೇವೆಂದರು. ಆದರೆ ನಮ್ಮ ಊರುಕೇರಿ ನಾಟಕ ಎರಡು ಗಂಟೆಯದು. ಬಂದದ್ದಾಯ್ತು ಎಷ್ಟೊತ್ತಾಗುತ್ತೋ ಅಷ್ಟೊತ್ತು ನಾಟಕ ಮಾಡೋಣ ಎಂದು ಶುರುಮಾಡಿದೆವು. ಜನ ತುದಿಗಾಲಲ್ಲಿ ನಿಂತು ತುಂಬಾ ಆಸಕ್ತಿಯಿಂದ ನಾಟಕ ನೋಡತೊಡಗಿದರು. ಒಂದು ಗಂಟೆ ಆದ ತಕ್ಷಣ ನಾಟಕ ಮುಗಿಸಲು ಆಲೋಚಿಸಿದೆವು. ಆದರೆ ಊರಿನ ಮುಖಂಡರು ಓಡಿ ಬಂದು ದಯವಿಟ್ಟು ನಾಟಕವನ್ನು ಅರ್ಧಕ್ಕೆ ನಿಲ್ಲಿಸಬೇಡಿ. ತುಂಬಾ ಚೆನ್ನಾಗಿದೆ. ಮುಂದುವರೆಸಿ ಎಂದು ವಿನಂತಿಸಿಕೊಂಡರು. ನಮ್ಮ ನಾಟಕಕ್ಕೆ ಜನ ಸ್ವಂದಿಸಿದ ರೀತಿ ನೋಡಿ  ನನಗೂ ಹಾಗೂ ನನ್ನ ತಂಡದವರಿಗೂ ತುಂಬಾ ಖುಷಿಕೊಟ್ಟಿತು. ತುಮಕೂರಿನಲ್ಲಿ ಊರುಕೇರಿ ನಾಟಕ ಪ್ರದರ್ಶನ. ನಾಟಕದಲ್ಲಿ ಸಿದ್ದಲಿಂಗಯ್ಯನವರ ಹಾಡಿನ ತುಣುಕುಗಳನ್ನು ಬಳಸಿಕೊಳ್ಳಲಾಗಿದೆ. ನಾಟಕ ಶುರುವಾಗಿ ಹಾಡುಗಳ ಸಾಲುಗಳನ್ನು ನಾವು ಹಾಡಿದ ನಂತರ ಪ್ರೇಕ್ಷಕರು ತಾವೇ ಸ್ವಯಂಪ್ರೇರಿತರಾಗಿ ಪೂರ್ತಿ ಹಾಡನ್ನು ಹಾಡತೊಡಗಿದರು. ದಮ್ಮಡಿ ತಮ್ಮಟೆಗಳನ್ನು ಬಾರಿಸಿದರು. ನಾಟಕದಲ್ಲಿ ಹಾಡಿನ ಸಾಲನ್ನು ಕಲಾವಿದರು ಹಾಡಿದಾಗಲೆಲ್ಲಾ ಇದೇ ಪುನರಾವರ್ತನೆ ಆಗುತ್ತಿತ್ತು. ಪ್ರೇಕ್ಷಕರು ಹಾಡುತ್ತಿದ್ದಾಗ ನಾವು ನಾಟಕವನ್ನು ನಿಲ್ಲಿಸಿ ಅವರ ಹಾಡು ಮುಗಿದ ನಂತರ ಮತ್ತೆ ಶುರುಮಾಡುತ್ತಿದ್ದೆವು. ಎಂತಹಾ ಜನಸ್ಪಂದನೆ !

ಜನಮದದಾಟ ತಂಡಕ್ಕೆ ಅಪಘಾತ :
ಹೌದು ಅದೊಂದು ದುರಂತ ಘಟನೆಯ ನೆನಪು ನನಗಿನ್ನೂ ಕಾಡುತ್ತದೆ. 2007ರಲ್ಲಿ ಬೆಂಗಳೂರಿನ ಕಾಲೇಜೊಂದರಲ್ಲಿ ನಮ್ಮ ತಂಡದ ತಬರನ ಕಥೆ ನಾಟಕ ಪ್ರದರ್ಶನವನ್ನು ಲವಕುಮಾರ್ ಫಿಕ್ಸ್ ಮಾಡಿದ್ದರು. ರಾಮನಗರದಿಂದ ಬೆಂಗಳೂರಿಗೆ ನಮ್ಮ ನಾಟಕದ ಸರಕು ಸರಂಜಾಮುಗಳೊಂದಿಗೆ ಹೋಗಬೇಕಾಗಿತ್ತು. ಎಲ್ಲಾ ಬಸ್ಸುಗಳೂ ಹೌಸ್ಫುಲ್ ಆಗಿದ್ದವು. ಮದ್ಯಾಹ್ನ ನಾಟಕವಿದೆ. ಬೆಳಿಗ್ಗೆ ನಾವಿನ್ನೂ ರಾಮನಗರದಲ್ಲೇ ಇದ್ದೇವೆ. ಏನು ಮಾಡಬೇಕು ಎಂದು ತಿಳಿಯದಾಯಿತು. ಅಷ್ಟರಲ್ಲಿ ಒಂದು ಆಸ್ಪತ್ರೆ ಅಂಬುಲೆನ್ಸ ಸಿಕ್ಕಿತು. ಅದರಲ್ಲೇ ನಮ್ಮ ರಂಗಪರಿಕರಗಳ ಮೂಟೆಗಳನ್ನು ಇಟ್ಟುಕೊಂಡು ನಮ್ಮ ಇಡೀ ತಂಡ ಪ್ರಯಾಣ ಬೆಳೆಸಿತು. ಸ್ವಲ್ಪ ದೂರ ಬಂದಿರಬಹುದು, ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿಯನ್ನು ತಪ್ಪಿಸಲು ಯತ್ನಿಸಿದ ಡ್ರೈವರ್ ನಿಯಂತ್ರಣ ತಪ್ಪಿ ಇಡೀ ಅಂಬುಲೆನ್ಸ ಪಲ್ಟಿ ಹೊಡೆಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲಿಲ್ಲ. ಆದರೆ ಲವಕುಮಾರ್ ಸೇರಿದಂತೆ ಎಲ್ಲರಿಗೂ ಗಾಯಗಳಾದವು. ಕೆಲವರಿಗೆ ಗಾಡಿಯ ಗಾಜುಗಳೇ ಚುಚ್ಚಿಕೊಂಡವು. ರಾಮನಗರ ಆಸ್ಟತ್ರೆಗೆ ಹೋದರೆ ಅವರು ಬೆಂಗಳೂರಿಗೆ ಹೋಗಿ ಎಂದರು. ಹಾಗೂ ಹೀಗೂ ಬೆಂಗಳೂರಿನ ಬ್ಯಾಪಟಿಸ್ಟ್ ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆದೆವು. ಅಂತಹ ಸಂಕಟದ ಸಮಯದಲ್ಲೂ ಅತಿಯಾಗಿ ಗಾಯಗೊಂಡು ನರಳುತ್ತಿದ್ದ ಅನ್ನಪೂರ್ಣ ಎನ್ನುವ ನಟಿ ಏನಾದರಾಗಲಿ ಹೋಗಿ ನಾಟಕ ಮಾಡೋಣ ಎಂದು ಹೇಳಿದ್ದು ಕೇಳಿ ನನಗೆ ಕಣ್ಣಲ್ಲಿ ನೀರಾಡಿತು. ರಂಗಬದ್ದತೆ ಅಂದ್ರೆ ಇದೇನಾ? ಕಲಾವಿದರು ನಾಟಕ ಮಾಡುವ ಸ್ಥಿತಿಯಲ್ಲಿರಲಿಲ್ಲವಾದ್ದರಿಂದ ನಾಟಕದ ಪ್ರದರ್ಶನ ರದ್ದುಮಾಡಲು ಹೇಳಿದೆ. ಗೊತ್ತಿರುವ ರಂಗಕರ್ಮಿಗಳಿಗೆ ಪೋನ್ ಮೂಲಕ ತಿಳಿಸಿದೆ. ಅದು ಒಬ್ಬರಿಂದ ಇನ್ನೊಬ್ಬರಿಗೆ ಸುದ್ದಿಯಾಯಿತು. ಎಲ್ಲಾ ಕಡೆಯಿಂದ ಸಹಾಯ ಹರಿದುಬಂತು. ರಂಗಾಯಣದ ಕಲಾವಿದರು ಹಣ ಕೊಟ್ಟರು, ನಾಟಕ ಅಕಾಡೆಮಿ ಸಹಿತ ಒಂದಿಷ್ಟು ಹಣ ಕೊಟ್ಟತು, ಇನ್ನೂ ಕೆಲವಾರು ರಂಗಕರ್ಮಿಗಳು ಸಹಾಯ ಮಾಡಿದರು. ನನಗೆ ನಂಬಲಾಗಲಿಲ್ಲ. ನಲವತ್ತುನಾಲ್ಕು ಸಾವಿರದಷ್ಟು ಹಣದ ನೆರವು ಬಂದಿತು. ಆಸ್ಟತ್ರೆ ಖರ್ಚನ್ನೆಲ್ಲಾ ಕಳೆದು, ಕಲಾವಿದರಿಗೆಲ್ಲಾ ಒಂದಿಷ್ಟು ಹಣ ಕೊಟ್ಟರೂ ಇನ್ನೂ ಹನ್ನೆರಡು ಸಾವಿರದಷ್ಟು ಹಣ ಮಿಕ್ಕಿತ್ತು. ಹಣವನ್ನು ಜನಮನದಾಟ ತಂಡದ ಎಮರ್ಜನ್ಸಿ ಫಂಡ್ ಆಗಿ ಇಟ್ಟುಕೊಂಡೆವು. ಕಲಾವಿದರು ಆಪತ್ತಿನಲ್ಲಿದ್ದಾಗ ಕನ್ನಡ ರಂಗಭೂಮಿ ಸ್ಪಂದಿಸಿದ ರೀತಿ ನನ್ನನ್ನು ಅತೀ ಭಾವುಕನನ್ನಾಗಿಸಿತು. ರಂಗಭೂಮಿಯಲ್ಲಿದ್ದಿದ್ದಕ್ಕು ಸಾರ್ಥಕವೆನಿಸಿತು

ಜನಮನದಾಟದ ವಿಶೇಷತೆಯೇನು ?
ಅತ್ಯಂತ ಕಡಿಮೆ ರಂಗಸಜ್ಜಿಕೆ ರಂಗಪರಿಕರಗಳನ್ನು ಬಳಸಿ ಸರಳವಾಗಿ ನಾಟಕವನ್ನು ಕಟ್ಟಿಕೊಡುವುದು ಜನಮನದ ವಿಶೇಷತೆಗಳಲ್ಲೊಂದಾಗಿದೆ. ನಮ್ಮದು ನಟನಾ ಪ್ರಧಾನ ನಾಟಕಗಳು. ನಟರನ್ನೇ ಪರಿಕರವಾಗಿ ಬಳಸಿಕೊಂಡು ನಾಟಕವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇವೆ. ಕಲಾವಿದರ ಆಂಗಿಕ ಹಾಗೂ ವಾಚಿಕಗಳೇ ದೃಶ್ಯಗಳನ್ನು ಕಟ್ಟಿಕೊಡಬೇಕು ಎನ್ನುವುದು ನಮ್ಮ ಉದ್ದೇಶ. ಸಂಚಾರದಲ್ಲಿ ರಂಗಪರಿಕರಗಳು ಹೆಚ್ಚಾದಷ್ಟೂ ಸಾಗಣೆಯ ಸಮಸ್ಯೆ ಹೆಚ್ಚು. ಹೀಗಾಗಿ ಅತೀ ಅಗತ್ಯವಾದ ಕನಿಷ್ಟ ರಂಗಪರಿಕರಗಳನ್ನು ಬಳಸಿ ನಟರ ಅಭಿನಯ ಸಾಮರ್ಥ್ಯದ ಮೂಲಕವೇ ಗರಿಷ್ಟ ರಂಗಸಾಧ್ಯತೆಗಳನ್ನು ತೋರಿಸಲು ಹೆಚ್ಚು ಮಹತ್ವ ಕೊಡುತ್ತೇನೆ. ಈಗ ರಂಗಭೂಮಿಯಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವ ಸ್ಥಳಗಳಿಗೆ ಒಂದು ಸೀಮಿತತೆ ಬಂದಿದೆ. ಎಲ್ಲೆಲ್ಲಿ ನಾಟಕ ಪ್ರದರ್ಶನಗಳಾಗುತ್ತಿದ್ದವೋ ಅಲ್ಲಿ ಮಾತ್ರ ಅವಕಾಶಗಳಿವೆ. ಅಂದರೆ ಒಂದು ರೀತಿಯಲ್ಲಿ ನಗರ ಕೇಂದ್ರಿತವಾಗಿ ಹೆದ್ದಾರಿಗಳಲ್ಲಿ ನಾಟಕಗಳ ತಿರುಗಾಟ ಮತ್ತು ಪ್ರದರ್ಶನಗಳು ಹೆಚ್ಚಾಗಿವೆ. ಬೇರು ಮಟ್ಟದಲ್ಲಿ ಅಂದರೆ ಊರು ಕೇರಿಗಳಲ್ಲಿ ನಾಟಕಗಳ ಪ್ರದರ್ಶನಗಳನ್ನು ವಿಸ್ತರಿಸಬೇಕಾಗಿದೆ. ಹೆದ್ದಾರಿಗಳ ಜೊತೆಜೊತೆಗೆ ಕಾಲುದಾರಿಗಳನ್ನು ಸಹ ಕಂಡುಕೊಳ್ಳಬೇಕಿದೆ. ನಿಟ್ಟಿನಲ್ಲಿ ನಮ್ಮ ಜನಮನದಾಟ ಸಣ್ಣ ಪ್ರಯತ್ನವನ್ನು ಮಾಡುತ್ತಿದೆ. ನಮ್ಮ ಪ್ರೊಡಕ್ಷನ್ಗಳಾದ ಊರುಕೇರಿ, ಬಾಬಾಸಾಹೇಬ ಅಂಬೇಡ್ಕರ್, ಬದುಕು ಬಯಲು ನಾಟಕಗಳು ಎಲ್ಲೆಲ್ಲಿ ನಾಟಕಗಳು ಈವರೆಗೂ ಆಗಿಯೇ ಇರಲಿಲ್ಲವೋ ಅಂತಹ ಹಳ್ಳಿಗಳಲ್ಲಿ ಪ್ರದರ್ಶನಗೊಂಡವು. ನಾವು ಹೋಗಿ ಕೇಳದಿದ್ದರೂ ಸಹ ಅನೇಕ ಸಂಘಸಂಸ್ಥೆಗಳು, ಪ್ರಗತಿಪರ ಸಂಘಟನೆಗಳು, ಶೋಷಿತ ಸಮುದಾಯಗಳವರು ನಮ್ಮನ್ನು ಆಹ್ವಾನಿಸಿ ನಾಟಕಗಳನ್ನು ಮಾಡಿಸಿದ್ದಾರೆ. ಜನಮನದಾಟದ ಉದ್ದೇಶಗಳಲ್ಲಿ ಇದೂ ಕೂಡಾ ಒಂದಾಗಿತ್ತು. ರಂಗ ವೇದಿಕೆಗಳ ವಿಸ್ತರಣೆ ಹಾಗೂ ಬೇರು ಮಟ್ಟದಲ್ಲಿ ನಾಟಕಗಳ ಪ್ರದರ್ಶನ ನನ್ನ ಹಿರಿದಾಸೆಯಾಗಿತ್ತು. ದಲಿತ ಸಮುದಾಯ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತು ನಾವು ತೆಗೆದುಕೊಂಡ ನಾಟಕಗಳು ಶೋಷಿತ ಜನರನ್ನು ತಲುಪಲು ಸಾಧ್ಯವಾಯಿತು. ಪ್ರದರ್ಶನಕ್ಕೆ ಕಾಲುದಾರಿಗಳನ್ನು ಹುಡುಕಲು ಸಾಧ್ಯವಾಯಿತು. ನಾವು ಹುಡುಕಿದ್ದಕ್ಕಿಂತಲೂ ನಾಟಕ ಪ್ರದರ್ಶಿಸಲು ಅವಕಾಶಗಳೇ ನಮ್ಮನ್ನು ಹುಡುಕಿಕೊಂಡು ಬಂದದ್ದು ನನಗೆ ಖುಷಿ ಕೊಡುವ ವಿಷಯವಾಗಿದೆ. ನಮಗಿರುವ ಎರಡು ತಿಂಗಳ ಕಾಲಾವಕಾಶದಲ್ಲಿ ನಾಟಕ ಪ್ರದರ್ಶನಕ್ಕೆ ಬಂದ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದೇ ಊರುಕೇರಿ ನಾಟಕವನ್ನು ಮೂರು ವರ್ಷ ಪುನರಾವರ್ತನೆ ಮಾಡಬೇಕಾಯಿತು. ಬದುಕು ಬಯಲು ಸಹ ಮೂರು ವರ್ಷಗಳಿಂದ ಮರು ಪ್ರದರ್ಶನಗೊಳ್ಳುತ್ತಲೇ ಇದೆ. ಹೊಸ ನಾಟಕವನ್ನು ತೆಗೆದುಕೊಳ್ಳಲು ಅವಕಾಶವೇ ಇಲ್ಲದ ಹಾಗೆ ಈಗಿರುವ ನಾಟಕಗಳಿಗೆ ಬೇಡಿಕೆ ಇದೆ. ನಾವು ಯಾವ ರೀತಿಯ ನಾಟಕದ ವಸ್ತುವನ್ನು ಆಯ್ದುಕೊಳ್ಳುತ್ತೇವೆಯೋ ಅದನ್ನಾಧರಿಸಿ ರಂಗಭೂಮಿ ವಿಸ್ತರಣೆ ಸಾಧ್ಯವಾಗುತ್ತದೆ ಎನ್ನುವುದನ್ನು ಜನಮನದಾಟದ ಅನುಭವದಲ್ಲಿ ನಾನು ಕಂಡುಕೊಂಡಿದ್ದೇನೆ. ಇದರ ಸಾಧ್ಯತೆಗಾಗಿ ನಾನು ಹುಡುಕಾಟ ಮಾಡುತ್ತಿದ್ದೇನೆ.  

ನೀನಾಸಂ ಮತ್ತು ಜನಮನದಾಟ ಮಾತ್ರ ನಿಮ್ಮ ಕಾರ್ಯಕ್ಷೇತ್ರವಾ?
ಹಾಗೇನಿಲ್ಲ, ನನಗೆ ರಜೆ ಇದ್ದಾಗ ಬೇರೆ ತಂಡಗಳಿಗೂ ಹೋಗಿ ನಾಟಕ ನಿರ್ದೇಶಿಸಿದ್ದೇನೆ. ಅನಿವಾರ್ಯವಾದಾಗ ನನ್ನ ಕೆಲಸಕ್ಕೆ ರಜೆ ಹಾಕಿ ನಾಟಕ ಕಟ್ಟಿದ್ದೇನೆ. ಹೆಗ್ಗೋಡಿನ ಪ್ರಸನ್ನನವರ ಚರಕಕ್ಕೆ ಚೋರ ಚರಣದಾಸ ನಾಟಕ ಮಾಡಿಸಿದೆ. ಸಾಗರದ ಸ್ಪಂದನ ತಂಡಕ್ಕೆ ಸೂರ್ಯನ ಕುದುರೆ ನಾಟಕ ನಿರ್ದೇಶಿಸಿದೆ. ಅಂಕೋಲಾದ ಸಂಗಾತಿ ರಂಗಭೂವಿ ಹಾಗೂ ಸಾಗರದ ಕಾಗೋಡು ರಂಗಮಂಚ, ಮಂಡ್ಯದ ನಾವು.... ಹೀಗೆ ಕೆಲವು ತಂಡಗಳಿಗೂ ನಾಟಕಗಳನ್ನು ನಿರ್ದೇಶಿಸಿದ್ದೇನೆ. ಈಗಲೂ ಸಹ ಸಮಯ ಸಿಕ್ಕರೆ, ಅವಕಾಶಗಳು ಬಂದರೆ ಸುಮ್ಮನಿರದೇ ನಾಟಕದ ಕೆಲಸಕ್ಕೆ ಹೊಸ ಹುರುಪಿನಿಂದ ಸಿದ್ದನಾಗುತ್ತೇನೆ. ತಂಡ ಯಾವುದೇ ಇರಲಿ, ನಾಟಕಗಳು ನಿರಂತರ ಆಗಲಿ ಎನ್ನುವುದೇ ನನ್ನ ಬಯಕೆ.

ಕಥೆ-ಕಾದಂಬರಿ ಆಧರಿಸಿದ ನಾಟಕಗಳ್ಯಾಕೆ?
ಕನ್ನಡದಲ್ಲಿ ಕಳೆದ ದಶಕದಲ್ಲಿ ಮಹತ್ತರ ನಾಟಕ ಕೃತಿಗಳು ಬಂದಿಲ್ಲ. ಹೊಸ ನಾಟಕಗಳ ಕೊರತೆ ಇದ್ದೇ ಇದೆ. ಹೀಗಾಗಿ ಉತ್ತಮ ಕಥೆ-ಆತ್ಮಕಥೆ-ಕಾದಂಬರಿಗಳನ್ನು ರಂಗರೂಪಗೊಳಿಸಿ ನಾಟಕವಾಗಿಸುವುದನ್ನು ರೂಢಿಸಿಕೊಂಡಿದ್ದೇವೆ. ಉತ್ತಮ ಸಾಹಿತ್ಯ ಕೃತಿಗಳನ್ನು ನಾಟಕದ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ಜನಮನದಾಟ ಮಾಡುತ್ತಿದೆ. ಜನರ ನೋವಿಗೆ ಸ್ಪಂದಿಸುವ ಉತ್ತಮ ನಾಟಕಕೃತಿ ಸಿಕ್ಕರೂ ನಾಟಕ ನಿರ್ಮಿಸುತ್ತೇವೆ.

ಬದುಕಿನಲ್ಲಿ ಮರೆಯದ ಕ್ಷಣಗಳು :
2007 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ನನ್ನ ರಂಗಭೂಮಿಯ ಕೆಲಸವನ್ನು ಗುರುತಿಸಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿಯನ್ನು ಕೊಡಮಾಡಿತು. ಹೆಗ್ಗೋಡಿನ ಪ್ರಸನ್ನನವರು ಪ್ರಶಸ್ತಿ ಕೊಡಿಸಲು ಪರಿಶ್ರಮವಹಿಸಿದ್ದರು. ಪ್ರಸನ್ನನವರಿಗೆ ನನ್ನ ನಾಟಕದ ಕೆಲಸದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಪ್ರಶಸ್ತಿ ಘೋಷಣೆಯಾದಾಗ ನನಗೆ ನಿಜಕ್ಕೂ ಸಂತೋಷವಾಯಿತು. ಅದಕ್ಕಿಂತಲೂ ಹೆಚ್ಚಾಗಿ ಆಕಾಶದಲ್ಲಿ ಹಾರುವ ವಿಮಾನಗಳನ್ನು ಭೂಮಿಯಲ್ಲಿ ನಿಂತು ನೋಡಿ ಅಚ್ಚರಿಪಡುತ್ತಿದ್ದ ದಲಿತ ಹುಡುಗನಾದ ನಾನು ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿ ಪಡೆಯಲು ವಿಮಾನದಲ್ಲಿ ದೆಲ್ಲಿಗೆ ಹೊರಟಿದ್ದೆ. ಜೀವಮಾನದಲ್ಲಿ ಕನಸಲ್ಲೂ ಕಾಣದಿದ್ದ ಕ್ಷಣವದು. ಸಮಯ ನನ್ನಲ್ಲಿ ಅನನ್ಯ ಪುಳಕವನ್ನು ಹುಟ್ಟಿಸಿತ್ತು. ದೆಹಲಿಗೆ ಹೋಗಿ ನನ್ನ ಬದುಕಿನ ಮೊಟ್ಟಮೊದಲ ಪ್ರಶಸ್ತಿ ಪಡೆಯುವ ಕ್ಷಣವನ್ನಂತೂ ನಾನೆಂದೆಂದಿಗೂ ಮರೆಯಲಾರೆ.

ಮುಂದಿನ ಗುರಿ-ದಾರಿ :
ಜನಮನದಾಟ ಹೀಗೆಯೇ ಮುಂದುವರೆದುಕೊಂಡು ಹೋಗಬೇಕು, ನಾಡಿನಾದ್ಯಂತ ತನ್ನ ರಂಗಚಟುವಟಿಕೆಗಳನ್ನು ಇನ್ನೂ ವಿಸ್ತರಿಸಬೇಕು  ಎನ್ನುವುದು ನನ್ನ ಆಶಯ. ಹಾಗೂ ಆಧುನಿಕ ಕನ್ನಡ ರಂಗಭೂಮಿಯ ಸಾಧ್ಯತೆಗಳು ಎನ್ನುವ ವಿಷಯದ ಕುರಿತು ಸಂಶೋಧನೆ ಮಾಡಿ ಮುಗಿಸಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದೇನೆ. ಡಾಕ್ಟರೇಟ್ ಅನೌನ್ಸ್ ಆಗುವುದಕ್ಕಾಗಿ ಕಾಯುತ್ತಿದ್ದೇನೆ. ರಂಗಭೂಮಿಯ ವಿಷಯದಲ್ಲಿ ಡಾಕ್ಟರೇಟ್ ಮಾಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಈಗ ಅದು ಈಡೇರುತ್ತಿದೆ ಎನ್ನುವುದೇ ಸಂತೋಷದ ಸಂಗತಿ. ಜಾತಿ ವ್ಯವಸ್ಥೆಯಲ್ಲಿ ಕೊಟ್ಟಕೊನೆಯಲ್ಲಿರುವ ಶೋಷಿತ ಸಮುದಾಯದಲ್ಲಿ ಹುಟ್ಟಿದ ನಾನು ರಂಗಭೂಮಿಯ ಕಾರಣಕ್ಕೆ ಎಲ್ಲರಿಂದ ಗುರುತಿಸಲ್ಪಟ್ಟವನಾದೆ, ಕೆಲಸ, ಹೆಸರು, ಐಡೆಂಟಿಟಿ, ಪ್ರಶಸ್ತಿ ಎಲ್ಲವನ್ನೂ ರಂಗಭೂಮಿ ನನಗೆ ತಂದು ಕೊಟ್ಟಿದೆ. ಇಷ್ಟೆಲ್ಲವನ್ನೂ ಕೊಟ್ಟ ರಂಗಭೂಮಿಗೆ ಮರಳಿ ನನ್ನ ಕೈಲಾದಷ್ಟು ರಂಗಚಟುವಟಿಕೆಗಳನ್ನು ಮಾಡುತ್ತಲೇ ಇರಬೇಕು ಎನ್ನುವುದು ನನ್ನ ಆಸೆಯಾಗಿದೆಹೆಚ್ಚು ಹೆಚ್ಚು ಕಲಾವಿದರನ್ನು ತರಬೇತಿಗೊಳಿಸಬೇಕು, ಜನಮನದಾಟ ಮೂಲಕ ನಾಟಕ ಪ್ರದರ್ಶನಗಳನ್ನು ನಾಡಿನಾದ್ಯಂತ ವಿಸ್ತರಿಸಬೇಕು. ಸುಬ್ಬಣ್ಣನವರ ಆಶಯದಂತೆ ಇನ್ನೂ ಹಲವಾರು ಚಿಕ್ಕಪುಟ್ಟ ರೆಪರ್ಟರಿಗಳು ಹುಟ್ಟಿ ಬೆಳೆಯಲು ಪ್ರೋತ್ಸಾಹಿಸಬೇಕು ಎನ್ನುವುದೇ ನನ್ನ ಮಹತ್ವಾಕಾಂಕ್ಷೆಯಾಗಿದೆ. ಇದರ ಸಾಧನೆಗಾಗಿ ನನಗೆ ಪ್ರತಿ ಕ್ಷಣ ಪ್ರತಿ ದಿನವೂ ಅತೀ ಮಹತ್ವದ್ದಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವ ಶಕ್ತಿ ಸಾಮರ್ಥ್ಯ ನನಗೆ ಬರಲಿ ಎನ್ನುವುದೇ ನನ್ನ ಪ್ರಾರ್ಥನೆಯಾಗಿದೆ.  

                               -ಶಶಿಕಾಂತ ಯಡಹಳ್ಳಿ 







  


    

       

                


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ