ಸೋಮವಾರ, ಸೆಪ್ಟೆಂಬರ್ 22, 2014

ಎಲ್.ಕೃಷ್ಣಪ್ಪನವರ ನಿರ್ದೇಶನದಲ್ಲಿ ಲಂಕೇಶರ ‘ತೆರೆಗಳು’ ಹಾಗೂ ‘ಸಿದ್ದತೆ’ :

ತೆರೆಗಳು ನಾಟಕದ ದೃಶ್ಯ

ಕನ್ನಡ ರಂಗಭೂಮಿಯ ಸಿದ್ದಮಾದರಿಯ ನಾಟಕದ ಚೌಕಟ್ಟಿನಿಂದಾಚೆ ವಿಶಿಷ್ಟ ನಾಟಕಗಳನ್ನು ಕೊಟ್ಟವರು ಪಿ.ಲಂಕೇಶ್. ಅವರ ಕೆಲವಾರು ಅಸಂಗತ ಮಾದರಿಯ ವೈಚಾರಿಕ ನಾಟಕಗಳು ಮನುಷ್ಯನ ಅಸಹಾಯಕತೆಯ ಅನಾವರಣಗೊಳಿಸುವಂತಿವೆ. ಇನ್ನೇನು ಲಂಕೇಶರ ನಾಟಕಗಳು ಇತಿಹಾಸದ ಪುಟಗಳನ್ನು ಸೇರಿದವು ಎನ್ನುವಾಗಲೇ ಲಂಕೇಶರ ನಾಟಕಗಳು ಆಗಾಗ ಪ್ರದರ್ಶನಗೊಳ್ಳುತ್ತಾ ತಮ್ಮ ಪ್ರಸ್ತುತತೆಯನ್ನು ಸಾಬೀತು ಪಡಿಸುತ್ತವೆ. ಲಂಕೇಶರ ಒಡನಾಡಿಯಾಗಿದ್ದ ಹಿರಿಯ ರಂಗಕರ್ಮಿ ಎಲ್.ಕೃಷ್ಣಪ್ಪನವರು ಲಂಕೇಶರ ತೆರೆಗಳು ಹಾಗೂ ಸಿದ್ದತೆ ಎರಡೂ ಕಿರುನಾಟಕಗಳನ್ನು ತಮ್ಮ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಟಾನ ಕ್ಕೆ ನಿರ್ದೇಶಿಸಿ ತಲೆಮಾರಿನವರಿಗೆ ಮರತೇ ಹೋಗಿದ್ದ ಲಂಕೇಶರ ನಾಟಕಗಳನ್ನು ನೆನಪಿಸಿದ್ದಾರೆ. ಕೆ.ವಿ.ಸುಬ್ಬಣ್ಣ ಆಪ್ತರಂಗ ಮಂದಿರದ ಸಹಕಾರದಲ್ಲಿ ಎರಡೂ ಏಕಾಂಕ ನಾಟಕಗಳು 2014 ಸೆಪ್ಟಂಬರ್ 17 ರಂದು ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡವು.

ತೆರೆಗಳು :     ಲಂಕೇಶರು ಬರೆದ ಒಂಬತ್ತು ನಾಟಕಗಳಲ್ಲಿ ಅಸಂಗತ ಎಂದು ಗುರುತಿಸಬಹುದಾದ ನಾಟಕ ತೆರೆಗಳು. ಹೆರಾಲ್ಟ್ ಪಿಂಟರ್ ದಿ ಬರ್ಥಡೇ ಪಾರ್ಟಿ ನಾಟಕದ ನಿರೂಪನಾ ತಂತ್ರದಿಂದ ಪ್ರೇರೇಪಿತರಾಗಿ ಲಂಕೇಶರು ನಾಟಕವನ್ನು 1964 ರಲ್ಲಿ ರಚಿಸಿದ್ದಾರೆ. ಪಿಂಟರ್ ನಾಟಕಕ್ಕೆ ಧಾರ್ಮಿಕ ಆಯಾಮವಿದ್ದರೆ, ಲಂಕೇಶರ ನಾಟಕಕ್ಕೆ ರಾಜಕೀಯ ಆಯಾಮವಿದೆ. ಮೊಟ್ಟ ಮೊದಲ ಬಾರಿಗೆ ತೆರೆಗಳು ನಾಟಕವನ್ನು ಲಂಕೇಶರವರೇ ಹುಟ್ಟು ಹಾಕಿದ ಪ್ರತಿಮಾ ನಾಟಕ ರಂಗ ತಂಡಕ್ಕೆ ಬಿ.ಚಂದ್ರಶೇಖರವರು ನಿರ್ದೇಶಿಸಿದ್ದರು.

ತೆರೆಗಳು ನಾಟಕವು ವ್ಯಕ್ತಿಯೊಬ್ಬ ತಾನು ಮಾಡಿದ ಘೋರ ತಪ್ಪುಗಳಿಗೆ ಪ್ರತಿಫಲವಾಗಿ ಅನುಭವಿಸುವ ಹಳವಂಡಗಳ ಮೊತ್ತವಾಗಿ ಮೂಡಿಬಂದಿದೆ. ರಂಗದ ಮೇಲೆ ವ್ಯಕ್ತಿಯ ಜೊತೆಗೆ ಕಂಠಿ, ಕಿಟ್ಟಿ, ವಿಟ್ಟಿ ಎನ್ನುವ ಮೂರು ಪಾತ್ರಗಳು ಸಾಂಕೇತಿಕವಾಗಿ ಮೂಡಿಬಂದಿವೆಯಾದರೂ, ನಾಟಕದ ಆಂತರ್ಯದಲ್ಲಿ ಮೂರು ಪಾತ್ರಗಳು ಒಂದೇ ವ್ಯಕ್ತಿಯ ಪ್ರತಿಬಿಂಬಗಳೇ ಆಗಿವೆ. ಅಪರಾಧಿ ಪ್ರಜ್ಞೆಯೇ ಇಲ್ಲಿ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ ಶಿಕ್ಷೆಯನ್ನೂ ಕೊಡುವ ರೀತಿ ರಂಗಭೂಮಿಯಲ್ಲೇ ತುಂಬಾ ವಿಶಿಷ್ಟವಾದ ಪರಿಕಲ್ಪನೆಯಾಗಿದೆ. ಪಾಪಪ್ರಜ್ಞೆಯಿಂದ ಬಳಲುವ ವಯಸ್ಸಾದ ವ್ಯಕ್ತಿಗೆ ತಾನು ಬದುಕಿನಲ್ಲಿ ಮಾಡಿದ ಅಪರಾಧಗಳು ಅದು ಹೇಗೆ ಅಟಕಾಯಿಸಿಕೊಂಡು ಸತಾಯಿಸಿ ವಿಚಾರಿಸಿ ಸಾಯಿಸುತ್ತವೆ ಎನ್ನುವುದಕ್ಕೆ ತೆರೆಗಳು ನಾಟಕ ಸೊಗಸಾದ ಉದಾಹರಣೆಯಾಗಿದೆ.



ನಾಟಕದ ವ್ಯಕ್ತಿ ಹಣಕ್ಕಾಗಿ, ಆಸ್ತಿಗಾಗಿ, ಅಧಿಕಾರಕ್ಕಾಗಿ, ಮಹತ್ವಾಕಾಂಕ್ಷೆಗಳಿಗಾಗಿ ಕೊಲೆ, ಮೋಸ, ಅನ್ಯಾಯಗಳನ್ನೆಲ್ಲಾ ಮಾಡಿ ಮೆರೆದಿರುತ್ತಾನೆ. ಒಂದು ದಿನ ಮೂರು ಜನ ಇದ್ದಕ್ಕಿದ್ದಂತೆ ಬಂದು ಆತನ ಪಾಪ ಕೃತ್ಯಗಳ ಲೆಕ್ಕ ಕೇಳುತ್ತಾರೆ. ವ್ಯಕ್ತಿಯ ಮುಖವಾಡಗಳ ತೆರೆಗಳನ್ನು ಸರಿಸಿ ಬೆತ್ತಲುಗೊಳಿಸುತ್ತಾರೆ. ತಮ್ಮದೇ ಆದ ರೀತಿಯಲ್ಲಿ ತನಿಖೆ ಮಾಡುತ್ತಾರೆ. ವಿಚಾರಣೆಗೂ ಅಳವಡಿಸುತ್ತಾರೆ. ಮರಣದಂಡನೆಯನ್ನೂ ಕೊಡುತ್ತಾರೆ. ಮೊದಮೊದಲು ಮೂರ್ಖ ಶಿಕ್ಷಕನೊಬ್ಬನನ್ನು ತರಲೆ ವಿದ್ಯಾರ್ಥಿಗಳು ಚುಡಾಯಿಸುವಂತೆ ಆರಂಭಗೊಳ್ಳುವ ನಾಟಕ ಬರುಬರುತ್ತಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ. ಹಾಗೆ ಬಂದ ಮೂವರು ಯಾರು ಎನ್ನುವ ಪ್ರಶ್ನೆ ನಾಟಕದುದ್ದಕ್ಕೂ ನೋಡುಗರನ್ನು ಕಾಡುತ್ತದೆ. ಪೋಲಿ ಶಿಷ್ಯರಾ, ಪೊಲೀಸರಾ, ಗೂಢಚಾರರಾ, ಆದಾಯ ಇಲಾಖೆಯವರಾ... ಎನ್ನುವ ಕುತೂಹಲ ಕಾಡುತ್ತಾ ಸಾಗಿ ಕೊನೆಗೂ ಅವರು ಯಾರು ಎನ್ನುವುದನ್ನು ಹೇಳದೇ ನಾಟಕ ಅಂತ್ಯವಾಗುತ್ತದೆ. ಇಡೀ ನಾಟಕದ ವೈಶಿಷ್ಟ್ಯತೆ ಇರುವುದೇ ನಿರೂಪನಾ ತಂತ್ರಗಾರಿಕೆಯಲ್ಲಿ. ನಾಟಕ ಸಂಭಾಷಣೆ ಮೂಲಕ ಹುಟ್ಟಿಸುವ ನಾಟಕೀಯತೆಯಲ್ಲಿ.
  
ತೆರೆಗಳು ನಾಟಕ ಹೊರನೋಟಕ್ಕೆ ತೋರುವ ಕಥೆಯೇ ಬೇರೆ, ಅದರ ಒಳನೋಟವೇ ಬೇರೆಯಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ತಾನು ಮಾಡಿದ ಪಾಪಕೃತ್ಯಗಳಿಗೆ ಬೇರೆಯಾರಿಗೂ ಲೆಕ್ಕಕೊಡದೆ ತಪ್ಪಿಸಿಕೊಂಡರೂ  ತನ್ನ ಆತ್ಮಸ್ಸಾಕ್ಷಿಯ ವಿಚಾರಣೆಗೆ ಒಳಗಾಗಲೇ ಬೇಕಾಗುತ್ತದೆ ಎನ್ನುವ ಸತ್ಯವನ್ನು ನಾಟಕ ಹೇಳುತ್ತದೆ. ಮಾಡಿದ ಅಪರಾಧಗಳಿಗೆ ಏನೇ ಸಬೂಬುಗಳನ್ನು ಕೊಟ್ಟುಕೊಂಡರೂ ಅವು ಮನಸ್ಸಾಕ್ಷಿಯ ಕಟಕಟೆಯಲ್ಲಿ ನೆಪಗಳಿಗೆ ಜಾಗವಿಲ್ಲ. ವಯಸ್ಸಾದಂತೆಲ್ಲಾ ಹಳೆಯ ಪಾಪಗಳು ಹಳವಂಡಗಳಾಗಿ ಕಾಡತೊಡಗುತ್ತವೆ ಎನ್ನುವ ವಾಸ್ತವಿಕತೆಯನ್ನು ಅವಾಸ್ತವಿಕ ನಿರೂಪನೆಯಲ್ಲಿ ಬಲು ಮಾರ್ಮಿಕವಾಗಿ ಮನುಷ್ಯನ ಗೋಸುಂಬಿತನವನ್ನು ತೋರಿಸುತ್ತಲೇ ಲಂಕೇಶರು ತೆರೆಗಳು ನಾಟಕದಲ್ಲಿ ಅನಾವರಣಗೊಳಿಸಿದ್ದಾರೆಪಾಪಪ್ರಜ್ಞೆ-ವಿಚಾರಣೆ-ಶಿಕ್ಷೆ-ಸಾವು  ಎನ್ನುವ ದಾರ್ಶನಿಕ ನೆಲೆಯಲ್ಲಿಯೂ ಸಹ ತೆರೆಗಳು ನಾಟಕ ಪ್ರೇಕ್ಷಕರ ಮುಂದೆ ತೆರೆದುಕೊಳ್ಳುತ್ತದೆ.

ಸಿದ್ದತೆ :       ಲಂಕೇಶರ ಇನ್ನೊಂದು ಏಕಾಂಕ ನಾಟಕ ಸಿದ್ದತೆ ಯು ಮನುಷ್ಯನ ಬದುಕಿನ ನಿರರ್ಥಕತೆಯನ್ನು ಹೇಳುವಂತಿದೆ. ಮೊದಲ ಬಾರಿಗೆ ನಾಟಕವನ್ನು ಲಂಕೇಶರೆ ತಮ್ಮ ಪ್ರತಿಮಾ ನಾಟಕ ರಂಗ ತಂಡಕ್ಕೆ ನಿರ್ದೇಶಿಸಿದ್ದರು. ಬದುಕಿನ ಜಂಜಾಟಗಳಲ್ಲಿ ಸಿಕ್ಕ ಮನುಷ್ಯ ತಾನಂದುಕೊಂಡದ್ದನ್ನು ಮಾಡಲಾರದೇ, ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲಾರದೇ ಕೊನೆಗೆ ಅದಕ್ಕಾಗಿ ಪಡುವ ಪಶ್ಚಾತ್ತಾಪವಿದೆಯಲ್ಲಾ ಅದು ವೃದ್ಯಾಪ್ಯದಲ್ಲಿ ಸಿಕ್ಕಾಪಟ್ಟೆ ಕಾಡತೊಡಗುತ್ತದೆ. ಬದುಕು ಅಪೂರ್ಣವೆನ್ನಿಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ತನ್ನ ಸಹನೆಯನ್ನು ಕಳೆದುಕೊಂಡು ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಹೊರಡುವ ಸಿದ್ದತೆ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಸಿದ್ದತೆ ನಾಟಕದ ಅಂತಃಸತ್ವವಾಗಿದೆ. ಪ್ರತಿಯೊಬ್ಬರೂ ಕೊನೆಗಾಲದಲ್ಲಿ ಬದುಕಿನ ಕ್ರೂರ ವಾಸ್ತವವನ್ನು ಎದುರಿಸಬೇಕಾದಾಗ ತಾಳ್ಮೆ ಕಳೆದುಕೊಂಡರೆ ದಾರುಣ ದುರಂತ ಅನುಭವಿಸಬೇಕಾಗುತ್ತದೆ ಎನ್ನುವ ಸತ್ಯವನ್ನು ನಾಟಕ ಹೇಳುತ್ತದೆ.

ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಭಗ್ನಕನಸುಗಳ ವೃದ್ದ ರಂಗಣ್ಣ ತನ್ನ ಹೆಂಡತಿಯೊಂದಿಗೆ ಸದಾ ಸಿಟ್ಟು, ಅಸಹನೆಯಿಂದಿರುತ್ತಾನೆ. ಬರುತ್ತೇನೆ ಎಂದಿದ್ದ ಮಗಳಿಗಾಗಿ ಕಾಯುತ್ತಾನೆ. ಅಪ್ಪನ ಅತಿರೇಕಗಳಿಂದ ರೋಸಿಹೋದ ಮಗ ರಾಮು ತಂದೆಯ ಭ್ರಮೆಗಳನ್ನು ಬಯಲಿಗೆಳೆಯುತ್ತಾನೆ. ನೃತ್ಯ ಕಲಾವಿದನಾಗಬೇಕೆನ್ನುವ ತನ್ನ ಭೂತಕಾಲದ ಭ್ರಮೆಯಲ್ಲೇ ಬದುಕುವ ರಂಗಣ್ಣ ವಾಸ್ತವ ಬದುಕಿಗೆ ವಿಮುಖನಾಗುತ್ತಾನೆ. ಕುಟುಂಬ ನಿರ್ವಹಣೆಗಾಗಿ ನೌಕರಿ ಮಾಡುತ್ತಾ ತನ್ನೆಲ್ಲಾ ಆಸೆ ಕನಸುಗಳನ್ನು ನುಚ್ಚುನೂರಾಗಿಸಿಕೊಂಡ ರಂಗಣ್ಣ ಕೊನೆಕಾಲದಲ್ಲಿ ಕನಸು ನನಸಾಗಿಸಬೇಕೆನ್ನುವ ತೆವಲಿಗೆ ಬೀಳುತ್ತಾನೆ. ಹಲವು ಸಲ ಮನೆ ಬಿಟ್ಟು ಹೋಗಲು ಸಿದ್ದತೆ ಮಾಡಿಕೊಳ್ಳುತ್ತಾನಾದರೂ ಹೋಗಲಾರದ ಅಸಹಾಯಕನಾಗುತ್ತಾನೆ. ಕೊನೆಗೂ ಏನನ್ನೂ ಸಾಧಿಸಲಾಗದ ನಿರಾಶೆಯಲ್ಲೇ ಸಾವನ್ನಪ್ಪುತ್ತಾನೆ. ಇದು ಕೇವಲ ನಾಟಕದ ರಂಗಣ್ಣನ ತಲ್ಲಣವಾಗಿಲ್ಲ. ಬಹುತೇಕ ವಯೋವೃದ್ದರ ತಳಮಳವೂ ಆಗಿದೆ. ಹದಿಹರೆಯದಲ್ಲಿ ಕಂಡ ಕನಸುಗಳನ್ನು ಯಾವಯಾವುದೋ ಕಾರಣಕ್ಕೆ ಮುಂದೂಡುತ್ತಲೇ ಬಂದು ಮುಪ್ಪಿನ ಕಾಲದಲ್ಲಿ ಅದಕ್ಕಾಗಿ ಹಳಹಳಿಸುವುದು ಬಹುತೇಕರ ಬದುಕಿನ ಅನುಭವವಾಗಿದೆ. ವಾಸ್ತವ ಎದುರಿಸಲಾಗದೇ ಭ್ರಮೆಯಲ್ಲಿಯೇ ಬದುಕುತ್ತಾ ಕೋಪ ತಾಪಗಳ ಮೂಲಕ ಪ್ರತಿಕ್ರಿಯಿಸುವ ಬಹುತೇಕ ಹಿರಿಯರ ಸ್ಪೆಸಿಮನ್ ಆಗಿ ರಂಗಣ್ಣ ಪಾತ್ರ ಮೂಡಿಬಂದಿದೆ.
        
 ತೆರೆಗಳು ಮತ್ತು ಸಿದ್ದತೆ ಎರಡೂ ನಾಟಕಗಳ ಅಂತ್ಯ ದುರಂತಮಯವಾಗಿದೆ. ತೆರೆಗಳು ನಾಟಕದ ವ್ಯಕ್ತಿ ತಾನು ಮಾಡಿದ ಅಪರಾಧಗಳಿಗಾಗಿ ವಿಚಾರಣೆಗೊಳಗಾಗಿ ಕೊನೆಗೆ ಸಾವನ್ನಪ್ಪಿದರೆ, ಸಿದ್ದತೆ ನಾಟಕದ ರಂಗಣ್ಣ ವಾಸ್ತವ ಮರೆತು ಭ್ರಮೆಗಳ ಬೆನ್ನತ್ತಿ ಅಸುನೀಗುತ್ತಾನೆ. ವ್ಯಕ್ತಿ ಮಾಡಬಾರದ್ದನ್ನೆಲ್ಲಾ ಮಾಡಿ ಪಶ್ಚಾತ್ತಾಪದಿಂದ ನೀಗಿಕೊಂಡರೆ, ರಂಗಣ್ಣ ಅಂದುಕೊಂಡದ್ದನ್ನೇನನ್ನೂ ಮಾಡದೆ ಬದುಕಿನಲ್ಲಿ ಸೋತು ಶವವಾಗುತ್ತಾನೆ. ಅಗತ್ಯತೆ ಮೀರಿದ ಮಹತ್ವಾಕಾಂಕ್ಷೆ ಹಾಗೂ ಭ್ರಮೆಗೆ ಬಿದ್ದ ಮನುಷ್ಯನ ಬದುಕು ದುರಂತಮಯವಾಗುತ್ತದೆ ಎನ್ನುವುದನ್ನು ಎರಡೂ ನಾಟಕಗಳು ಬಲು ಮಾರ್ಮಿಕವಾಗಿ ತೋರಿಸುತ್ತವೆ. ವ್ಯಕ್ತಿಯ ಬದುಕಿನ ಕೊನೆಯ ಹಂತದ ಅಸಹಾಯಕತೆಯ ಆಕ್ರಂದನವನ್ನು ಕಟ್ಟಿಕೊಡುವಲ್ಲಿ ಎರಡೂ ನಾಟಕಗಳು ಯಶಸ್ವಿಯಾಗಿವೆ.

ಲಂಕೇಶರ ನಾಟಕಗಳೇ ಹೀಗೆ. ಮೇಲ್ನೋಟಕ್ಕೆ ಒಂದು ರೀತಿ ಇದ್ದರೆ ಒಳನೋಟಗಳೋ ವಿಭಿನ್ನವಾಗಿರುತ್ತವೆ. ಒಂದು ರೀತಿಯಲ್ಲಿ ಮನೋವೈಜ್ಞಾನಿಕ ವಿಶ್ಲೇಷನಾತ್ಮಕ ಚಾಣಾಕ್ಷತೆಯನ್ನು ನಾಟಕಗಳಲ್ಲಿ ಕಾಣಬಹುದಾಗಿದೆ. ಬಹಿರಂಗದಲ್ಲಿ ಅಸಂಗತವಾಗಿ ತೋರುವ ನಾಟಕಗಳು ಅಂತರಂಗದಲ್ಲಿ ಸಂಗತವನ್ನೇ ಹೇಳುತ್ತವೆ. ಆದ್ದರಿಂದ ಅಸಂಗತ ಮಾದರಿಯ ಸಂಗತ ನಾಟಕಗಳ ರೂಪಕತೆಯ ಒಳಮರ್ಮವನ್ನು ಅರಿತವರಿಗೆ ಮಾತ್ರ ಲಂಕೇಶರ ನಾಟಕಗಳು ಸಂಪೂರ್ಣವಾಗಿ  ದಕ್ಕುತ್ತವೆ. ಇಲ್ಲವಾದರೆ ಕುರುಡ ಮುಟ್ಟಿದ ಆನೆಯ ಹಾಗೆ ಅನುಭವಕ್ಕೆ ಸಿಕ್ಕಷ್ಟು ದಿಟವೆಂದು ದಕ್ಕಿಸಿಕೊಳ್ಳಬೇಕಷ್ಟೇ.

ಲಂಕೇಶರ ನಾಟಕದ ವೈಶಿಷ್ಟ್ಯತೆ ಇರುವುದು ಅದರ ಚುರುಕಾದ ಸಂಭಾಷಣೆಗಳಲ್ಲಿ. ದೀರ್ಘವಲ್ಲದ ಚಿಕ್ಕದಾದ ಸಂಭಾಷಣೆಗಳು ಯಾವುದೇ ಪಾತ್ರಧಾರಿಗೆ ಹೊರೆಯನ್ನಿಸುವುದಿಲ್ಲ. ಮಾತುಗಾರಿಕೆಯಲ್ಲಿರುವ ಲಯಬದ್ದತೆ ಸಂಭಾಷಣೆಯನ್ನು ಕಾವ್ಯಾತ್ಮಕವೆನಿಸುವಂತಿವೆ. ಪ್ರತಿ ಮಾತುಗಳಿಗೂ ಚಾಟಿಏಟಿನ ಗುಣವಿದೆ. ನಾಟಕದಲ್ಲಿ ಬಳಸುವ ಭಾಷೆಯಲ್ಲಿಯೇ ನಾಟಕೀಯತೆಯ ಗುಣವಿದೆ. ಲಂಕೇಶರ ನಾಟಕಗಳ ವಿಶೇಷತೆ ಏನೆಂದರೆ ನಾಟಕ ದೃಶ್ಯಗಳ ಮೂಲಕ ಬೆಳೆಯುವುದಿಲ್ಲ, ಸಂಭಾಷಣೆಯೊಳಗಿನ ನಾಟಕೀಯತೆ ನಾಟಕವನ್ನು ಬೆಳೆಸುತ್ತದೆ. ನಾಟಕೀಯ ಬೆಳವಣಿಗೆ ಲಂಕೇಶರ ನಾಟಕದಲ್ಲಿ ಅಚ್ಚರಿಹುಟ್ಟಿಸುವಂತಿದೆ. ಆದರೂ ಲಂಕೇಶರ ನಾಟಕಗಳು ಹೆಚ್ಚೆಚ್ಚು ಜನಪ್ರೀಯವಾಗಲಿಲ್ಲ, ಜನಸಾಮಾನ್ಯರನ್ನು ಮುಟ್ಟಲೇ ಇಲ್ಲ. ಯಾಕೆಂದರೆ ಅವರ ನಾಟಕಗಳಲ್ಲಿರುವ ಬೌದ್ದಿಕ ವಿಶ್ಲೇಷಣೆಗಳು. ಲಂಕೇಶರವರ ನಾಟಕಗಳ ಉದ್ದೇಶವೇ ವೈಚಾರಿಕತೆಯ ಪ್ರತಿಪಾದನೆಯಾಗಿದೆ. ಅವರ ನಾಟಕಗಳು ಮೆದುಳಿಗೆ ದಕ್ಕುವಷ್ಟು ಮನಸ್ಸಿಗೆ ತಾಕುವುದಿಲ್ಲ. ಅವರ ನಾಟಕಗಳ ನಿರೂಪನೆ ಕೂಡಾ ಅಸಂಗತ ಮಾದರಿಯಾದ್ದಾಗಿದೆ. ಇವರ ಏಕಾಂಕ ನಾಟಕಗಳಲ್ಲಿ ಮೂಡ್ ಸೃಷ್ಟಿಸಲು ಸಂಗೀತ, ಹಾಡು, ಬೆಳಕು ಮುಂತಾದ ರಂಗತಂತ್ರಗಳ ಅಗತ್ಯವೂ ಇಲ್ಲ. ಕೇವಲ ಮಾತುಗಳಲ್ಲೇ ದೃಶ್ಯಗಳನ್ನು ಕಟ್ಟುತ್ತಾ, ಸಂಭಾಷಣೆಯಲ್ಲೇ ನಾಟಕೀಯತೆಯನ್ನು ಬೆಳೆಸುತ್ತಾ, ಬೌದ್ದಿಕ ನೆಲೆಯಲ್ಲಿ ನಾಟಕ ನೊಡುಗರ ಮನೋರಂಗಭೂಮಿಯಲ್ಲಿ ತಾರ್ಕಿಕತೆಯನ್ನು ಹುಟ್ಟಿಸುತ್ತದೆ. ಹೀಗಾಗಿ ಲಂಕೇಶರ ತೆರೆಗಳು ಮತ್ತು ಸಿದ್ದತೆ ನಾಟಕಗಳನ್ನು ನೋಡುವವರಿಗೂ ಒಂದು ರೀತಿಯಲ್ಲಿ ಸಿದ್ದತೆ ಬೇಕಾಗುತ್ತದೆ. ಯಾಕೆಂದರೆ ನಾಟಕಗಳಲ್ಲಿ ಸಿದ್ದವಾದ ಕಥೆಯಾಗಲೀ ಇಲ್ಲವೇ ಒಂದು ಕಥಾ ಸಂವಿಧಾನವಾಗಲೀ ಇಲ್ಲವೇ ಇಲ್ಲ. ಕೇವಲ ಭಾಷೆ ಹಾಗೂ ಸಂಭಾಷಣೆಯ ಮೂಲಕ ಲಂಕೇಶರ ರೀತಿಯಲ್ಲಿ ಅರ್ಥಗರ್ಭಿತ ಬೌದ್ಧಿಕ ನಾಟಕಗಳನ್ನು ಕಟ್ಟಿಕೊಟ್ಟವರು ಕನ್ನಡ ರಂಗಭೂಮಿಯಲ್ಲಿ ಬೇರೆ ಯಾರೂ ಇಲ್ಲ.


ನಾಟಕವನ್ನು ಮಹಾ ತಮಾಷೆಯ ನಾಟಕವನ್ನಾಗಿ ಪ್ರದರ್ಶಿಸುವುದು ಹೇಗೆ ತಪ್ಪೋ ಹಾಗೆಯೇ ಸತ್ತ ಗಾಂಭೀರ್ಯದಿಂದ ಅಭಿನಯಿಸುವುದು ಅಷ್ಟೇ ಪೆದ್ದುತನ ಎಂದು ತೆರೆಗಳು ನಾಟಕ ಕೃತಿಯ ಪ್ರಸ್ತಾವನೆಯ ಟಿಪ್ಪಣಿಯಲ್ಲಿ ಲಂಕೇಶರು ಬರೆದಿದ್ದಾರೆ. ಮಾತುಗಳನ್ನು  ಪಾಲಿಸಿದ ಎಲ್. ಕೃಷ್ಣಪ್ಪನವರು ಎರಡನ್ನೂ ಬೆರೆಸಿ ಗಾಂಭೀರ್ಯದ ಅಭಿನಯಕ್ಕೆ ಒಂದಿಷ್ಟು ತಮಾಷೆಯನ್ನು ಸೇರಿಸಿ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಲಂಕೇಶರ ಏಕಾಂಕ ನಾಟಕಗಳ ಯಶಸ್ಸು ಬೇರೆ ನಾಟಕಗಳ ಹಾಗೆ ರಂಗತಂತ್ರಗಳನ್ನು ಅವಲಂಬಿಸಿಲ್ಲ, ಅದು ಕೇವಲ ನಟರ ಅಭಿನಯ ಕೌಶಲ್ಯವನ್ನೇ ಅವಲಂಬಿಸಿದೆ. ಲಂಕೇಶರ ನಾಟಕಗಳು ನಟರ ನಾಟಕಗಳು. ನಿರ್ದೇಶಕ ಮೊದಲು ಮಾಡಬೇಕಾದ ಕೆಲಸವೇನೆಂದರೆ ಸಮರ್ಥ ನಟರನ್ನು ಆಯ್ಕೆ ಮಾಡಿಕೊಳ್ಳುವುದು ಇಲ್ಲವೇ ಆಯ್ಕೆ ಮಾಡಿಕೊಂಡ ನಟರಲ್ಲಿ ಅಭಿನಯ ಸಾಮರ್ಥ್ಯವನ್ನು ಬೆಳೆಸುವುದು. ಆದರೆ ಇವೆರಡನ್ನೂ ಮಾಡುವಲ್ಲಿ ಎಲ್.ಕೃಷ್ಣಪ್ಪನವರು ವಿಫಲವಾಗಿದ್ದು ನಟವರ್ಗದ ಮೇಲೆ ಇನ್ನೂ ತುಂಬಾ ಶ್ರಮ ಹಾಕಬೇಕಿದೆ. ನಟರ ಸಂಭಾಷಣೆ, ರಂಗದ ಮೇಲೆ ನಡೆಸಬೇಕಾದ ಕ್ರಿಯೆ ಪ್ರತಿಕ್ರಿಯೆಗಳು ಕೃತಕವಾಗಿದ್ದು ಅವುಗಳನ್ನು ಸಹಜವಾಗುವಂತೆ ನಟರಿಗೆ ತರಬೇತಿಯನ್ನು ಕೊಡಬೇಕಿದೆ. ನಿರ್ದೇಶಕರ ನಾಟಕಗಳಾದರೆ ರಂಗತಂತ್ರಗಳಿಂದ ಗೆಲ್ಲಬಹುದಾಗಿದೆ. ಆದರೆ ಲಂಕೇಶರ ನಾಟಕಗಳು ಅಭಿನಯ ಮತ್ತು ಸಂಭಾಷಣೆಯನ್ನೇ ಆಧರಿಸಿದ್ದರಿಂದ ನಟರ ಮೇಲೆ ಅತೀ ಹೆಚ್ಚು ಶ್ರಮ ಹಾಕುವುದು ನಿರ್ದೇಶಕರ ಅನಿವಾರ್ಯತೆಯಾಗಿದೆ. ಲಂಕೇಶರ ನಾಟಕಗಳಲ್ಲಿ ಬಲು ಮುಖ್ಯವಾದ ವ್ಯಕ್ತಿ, ವಿಚಾರ ಹಾಗೂ ಮೌಲ್ಯಗಳ ಘರ್ಷಣೆಯನ್ನು ಮಾತುಗಳ ಪೋರ್ಸ, ಪಂಚ್ ಮತ್ತು ಟೈಮಿಂಗ್ಗಳಿಂದ ಮಾತ್ರ ಕಟ್ಟಿಕೊಡಲು ಸಾಧ್ಯ ಎನ್ನುವುದನ್ನು ಕಲಾವಿದರು ಅರ್ಥಮಾಡಿಕೊಳ್ಳಬೇಕಿದೆ. ಯಾಕೆಂದರೆ ಲಂಕೇಶರ ನಾಟಕಗಳು ನಿರ್ದೇಶಕರಿಗಿಂತ ನಟರಿಗೆ ಬಲು ದೊಡ್ಡ ಸವಾಲಾಗಿವೆ. ಸವಾಲುಗಳನ್ನು ಎದುರಿಸಿ ಅಭಿನಯಿಸಿ ಗೆಲ್ಲುವವರು ಮಾತ್ರ ಲಂಕೇಶರ ನಾಟಕಗಳಿಗೆ ನ್ಯಾಯವದಗಿಸಲು ಸಾಧ್ಯ. ನಿಟ್ಟಿನಲ್ಲಿ ಪ್ರತಿಮಾ... ತಂಡದ ಕಲಾವಿದರು ಇನ್ನೂ ಹೆಚ್ಚೆಚ್ಚು ಪರಿಶ್ರಮವಹಿಸಬೇಕಿದೆ.


ಕಲಾವಿದರು ತಮ್ಮ ನಟನೆಯಲ್ಲಿ  ಕೃತಕತೆಯನ್ನು ಮೀರಿ ನೈಜತೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಎಲ್ಲಾ ಪಾತ್ರಗಳು ತಮ್ಮ ತಮ್ಮಲ್ಲೇ ಮಾತಾಡಿಕೊಂಡಿದ್ದೇ ಹೆಚ್ಚು. ಪ್ರೇಕ್ಷಕರತ್ತ ನೋಡಿದ್ದೇ ಕಡಿಮೆ. ಬ್ಲಾಕಿಂಗ್ ಮತ್ತು ಮೂವ್ಮೆಂಟ್ಗಳಲ್ಲಿ ಪಾದರಸದ ಸಂಚಲನ ಬೇಕಾಗಿತ್ತು. ತೆರೆಗಳು ನಾಟಕದಲ್ಲಿ ಕಂಠಿ ಪಾತ್ರದಲ್ಲಿ ಪ್ರಶಾಂತ ಅಭಿನಯ ಪಾತ್ರೋಚಿತವಾಗಿತ್ತು. ವ್ಯಕ್ತಿಯಾಗಿ ಕೌಸ್ತುಬ್, ಕಿಟ್ಟಿಯಾಗಿ ಅಭಿಜಿತ್ ಇನ್ನೂ ತಮ್ಮ ನಟನೆಯಲ್ಲಿ ಪಳಗಬೇಕಿದೆ. ಸಿದ್ದತೆ ನಾಟಕದ ರಂಗಣ್ಣನ ಪಾತ್ರದಾರಿ ಸತೀಶ ಪಾತ್ರಕ್ಕೆ ನ್ಯಾಯವೊದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರಾದರೂ ಆಭಿನಯದಲ್ಲಿ ಪಕ್ವತೆ ಬೇಕಾಗಿತ್ತು. ರಂಗಣ್ಣನ ಹೆಂಡತಿಯ ಪಾತ್ರದಲ್ಲಿ ಪ್ರಭಾ ಹೊಸಕೇರೆಯವರ ಅಭಿನಯ ಸೊಗಸಾಗಿದ್ದರೂ ಸಂಭಾಷಣೆಗಳು ಮಾತ್ರ ಮೆಲೊಡ್ರಾಮಾಟಿಕಲ್ ಆಗಿದ್ದು ಮಾತುಗಳು ವೃತ್ತಿ ಕಂಪನಿ ಶೈಲಿಯಲ್ಲಿರುವುದು ನಾಟಕಕ್ಕೆ ಹೊಂದಾಣಿಕೆಯಾಗುವಂತಿಲ್ಲ. ಆದರೆ ಹೊಸದಾಗಿ ಬಣ್ಣ ಹಚ್ಚಿದವರಲ್ಲಿ ಪರಿಪಕ್ವ ನಟನೆ ಅಪೇಕ್ಷಿಸುವುದು ಸಾಧ್ಯವಿಲ್ಲದಿದ್ದರೂ ಲಂಕೇಶರ ಮಾತಿನ ನಾಟಕಗಳು ಪ್ರೇಕ್ಷಕರನ್ನು ಪರಿಣಾಮಕಾರಿಯಾಗಿ ತಲುಪಬೇಕೆಂದರೆ ಪರಿಪಕ್ವ ನಟರನ್ನೇ ಬಯಸುತ್ತವೆ ಎಂಬುದು ಸುಳ್ಳಲ್ಲ.
  
ಅಸಂಗತ ಮಾದರಿ ನಾಟಕಗಳಿಗೆ ಹಿನ್ನೆಲೆಯಲ್ಲಿ ಬಳಸಿದ ಮಾಡರ್ನ ರೇಖಾಚಿತ್ರ ಸಾಂಕೇತಿಕವಾಗಿ ಮೂಡಿಬಂದಿದ್ದು ಸೂಕ್ತವೆನಿಸಿದೆ. ಆದರೆ ಅದನ್ನು ಬಿಳಿ ಕ್ಯಾನ್ವಾಸ್ ಮೇಲೆ ರಚಿಸಿದ್ದು, ಅದರ ಮೇಲೆ ಪ್ರಖರವಾದ ಬೆಳಕನ್ನು ಬಿಟ್ಟಿರುವುದರಿಂದ ಪ್ರತಿಫಲನಗೊಂಡು ಬಿತ್ತಿಚಿತ್ರದ ಮಹತ್ವ ಕಡಿಮೆಯಾಗಿದೆ. ಹಾಗೆಯೇ ಬಹುತೇಕ ಪಾತ್ರದಾರಿಗಳು ಬಿಳಿ ಬಣ್ಣದ ಕಾಸ್ಟೂಮ್ಸಗಳನ್ನು ಹಾಕಿದ್ದರಿಂದ ಪ್ರಖರ ಬೆಳಕಿನ ತೀವ್ರತೆಗೆ ಬ್ಲೀಚ್ ಆದಂತೆನಿಸುತ್ತದೆ. ಬೆಳಕಿನ ವಿನ್ಯಾಸದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳೇನೂ ಇಲ್ಲ. ಅಪರೂಪಕ್ಕೆ ಹಿನ್ನೆಲೆಯಲ್ಲಿ ಆಲಾಪಗಳಿವೆಯಾದರೂ ಅವು ನಾಟಕದಲ್ಲಿ ಮೂಡ್ ಸೃಷ್ಟಿಸಲು ಸಹಕಾರಿಯಾಗಿಲ್ಲ.  

ನಿರ್ದೇಶಕ  ಎಲ್.ಕೃಷ್ಣಪ್ಪನವರು
ಇದು ಮೊದಲ ಪ್ರದರ್ಶನವಾಗಿದ್ದರಿಂದ ಇನ್ನೂ ಪ್ರದರ್ಶನಕ್ಕೆ ಪರಿಪೂರ್ಣವಾಗಿಲ್ಲ. ತಾಲಿಂ ಹಂತದಲ್ಲೇ ಇದೆ. ಪ್ರದರ್ಶನಯೋಗ್ಯ ವಾಗಬೇಕಾದರೆ ನಟರು ಇನ್ನೂ ತುಂಬಾನೇ ಶ್ರಮಿಸಬೇಕಿದೆ. ನಿರ್ದೇಶಕರು ಸೆಟ್, ಲೈಟಿಂಗ್, ಕಾಸ್ಟೂಮ್ಸ್, ಬ್ಲಾಕಿಂಗ್, ಮೂವಮೆಂಟ್ಗಳಲ್ಲಿ ಇನ್ನೂ ಹೆಚ್ಚು ಪರಿಶ್ರಮವಹಿಸಬೇಕಿದೆ. ಹಿರಿಯ ರಂಗಕರ್ಮಿಗಳಾದ ಎಲ್.ಕೃಷ್ಣಪ್ಪನವರು ರಂಗಭೂಮಿಯಲ್ಲಿ ತುಂಬಾ ಅನುಭವಸ್ತರು. ಕನ್ನಡ ರಂಗಭೂಮಿಯ ಬಹುತೇಕ ರಂಗದಿಗ್ಗಜ ನಿರ್ದೇಶಕರ ಜೊತೆಗೆ ಪಳಗಿದವರು. ಹೀಗಾಗಿ ಪ್ರೇಕ್ಷಕರ ನಿರೀಕ್ಷೆಯೂ ಸಹ ಹೆಚ್ಚಾಗಿರುತ್ತದೆ. ಜೊತೆಗೆ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ನಾಟಕ ನಿರ್ದೇಶನದಲ್ಲೂ ಅಪ್ಗ್ರೇಡ್ ಆಗಬೇಕಾದ ಅನಿವಾರ್ಯತೆ ಇದೆ. ಎಪ್ಪತ್ತರ ದಶಕದ ನಾಟಕದ ತಂತ್ರಗಳು ಈಗ ಗಿಟ್ಟುವುದಿಲ್ಲ. ಹಳೆಯ ವಸ್ತುಗಳಿಗೆ ಹೊಸ ರಂಗತಂತ್ರಗಳನ್ನು ಬಳಸಿ ಸಮಕಾಲೀನತೆಗೆ ಸ್ಪಂದಿಸುವುದೇ ನಾಟಕವೊದರ ಯಶಸ್ಸಿಗೆ ಕರಣವಾಗುತ್ತದೆ. ಏನೇ ಆದರೂ ಮರೆತು ಹೋಗಿದ್ದ ಲಂಕೇಶರ ನಾಟಕಗಳನ್ನು ರಂಗವೇದಿಕೆಗೆ ತಂದು ವಿಶಿಷ್ಟ ನಾಟಕಗಳನ್ನು ಈಗಿನ ಹೊಸತಲೆಮಾರಿನ ಪ್ರೇಕ್ಷಕರಿಗೆ ತೋರಿಸುವಂತಹ ಸ್ತುತ್ಯಾರ್ಹ ಕೆಲಸ ಮಾಡಿದ ಎಲ್.ಕೃಷ್ಣಪ್ಪನವರು ಅಭಿನಂದನಾರ್ಹರು.  

                                -ಶಶಿಕಾಂತ ಯಡಹಳ್ಳಿ
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ