ಪ್ರತಿ ವರ್ಷ ನವೆಂಬರ್ ಬಂತೆಂದರೆ ಪ್ರಶಸ್ತಿ ಪರ್ವ ಶುರುವಾಗುತ್ತದೆ. ರಾಜ್ಯೋತ್ಸವದ ನೆಪದಲ್ಲಿ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳು ಪ್ರಶಸ್ತಿಗಳನ್ನು ಕೊಡಮಾಡುವುದನ್ನು ಆರಂಭಿಸುತ್ತವೆ. ನಿಜವಾದ ಸಾಧಕರನ್ನು ಗುರುತಿಸಿ ಅವರ ಅನನ್ಯ ಸಾಧನೆಗಾಗಿ ಪ್ರಶಸ್ತಿಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಕೆಲಸವನ್ನು ಅವರ ಕ್ಷೇತ್ರಗಳಲ್ಲಿ ಮಾಡಲು ಪ್ರೇರೇಪಿಸಲು ಸಹಕಾರಿಯಾಗಬೇಕೆನ್ನುವುದು ಪ್ರಶಸ್ತಿಗಳ ಮೂಲ ಆಶಯವಾಗಿದೆ. ಎಲೆಮರೆಯ ಕಾಯಿಯ ಹಾಗೆ ತಮ್ಮಷ್ಟಕ್ಕೆ ತಾನೇ ಜನಮುಖಿ ಕೆಲಸ ಮಾಡುವವರನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡಮಾಡುವ ಮೂಲಕ ಅವರ ಸಾಧನೆಯನ್ನು ಸಮಾಜಕ್ಕೆ ಪರಿಚಯಿಸುವುದು ಹಾಗೂ ಅದರಿಂದಾಗಿ ಇತರರಿಗೆ ಸಾಧನೆ ಮಾಡಲು ಪ್ರೇರಣೆ ನೀಡುವುದು ಪ್ರಶಸ್ತಿಗಳ ಉದ್ದೇಶವಾಗಿದೆ. ಆದರೆ ಈ ಉದ್ದೇಶ ನಿಜವಾಗಿಯೂ ಇಡೇರಿದೆಯಾ? ನಿಜವಾದ ಸಾಧಕರಿಗೆ ಪ್ರಶಸ್ತಿಗಳು ದೊರಕುತ್ತಿವೆಯಾ? ಪ್ರಶಸ್ತಿ ಪಡೆಯಲು ಲಾಬಿ ಮಾಡುವಂತಹ ಅನಿವಾರ್ಯತೆಯೊಂದು ಸೃಷ್ಟಿಯಾಗಿದೆಯಾ? ಪ್ರಶಸ್ತಿಗಳಲ್ಲೂ ಸಹ ರಾಜಕೀಯ ಮೂಗುತೂರಿಸಿ ಅನರ್ಹರಿಗೆ ಪ್ರಶಸ್ತಿಗಳನ್ನು ಕೊಟ್ಟು ಸರಕಾರಿ ಪ್ರಶಸ್ತಿಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಿವೆಯಾ? ಪ್ರಶಸ್ತಿ ಕೊಡುವುದೇ ವ್ಯಾಪಾರೋಧ್ಯಮವಾಗಿದೆಯಾ? ಪ್ರಶಸ್ತಿ ಪಡೆಯುವುದೊಂದೇ ಸಾಧನೆಯ ಮಾನದಂಡವಾಗಿದೆಯಾ?...
ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರವಾಗಿ ಈ ಲೇಖನ ಮೂಡಿಬಂದಿದೆ.
“ನಮ್ಮ ರಾಜ್ಯದಲ್ಲಿ ಸಣ್ಣ ಸಣ್ಣ ಪ್ರಶಸ್ತಿಗಳಿಗಾಗಿ ಸಾಹಿತಿಗಳು, ಕಲಾವಿದರು ನಡೆಸುವ ‘ಲಾಭಿ’ಗಳು ಅದೆಷ್ಟು? ಎಲ್ಲರೂ ಚೆಂದಾಗಿ ‘ಗುಲಾಬಿ ನಗರ’ ಎಂದು ಕರೆಯುವ ಬೆಂಗಳೂರನ್ನು ನಾನು ‘ಲಾಭಿ’ನಗರ ಎಂದು ಕರೆಯುತ್ತೇನೆ.....
ಈ ದೇಶದಲ್ಲಿ ಪ್ರಶಸ್ತಿಗಳು ಪುಕ್ಕಟೆ ಸಿಕ್ಕುವುದಿಲ್ಲ. ‘ಪ್ರತಿಭೆ’ ಒಂದಿದ್ದರೆ ಸಾಲದು, ‘ಪರಿಶ್ರಮ’ವೂ ಬೇಕು. ಜತೆಗೆ ಅನುಕೂಲಕರ ‘ಪರಿಸರ’ಬೇಕು. ಈ ಮೂರು ಇದ್ದರೆ ಪ್ರಶಸ್ತಿ ಗ್ಯಾರಂಟಿ...” ಹೀಗೆಂದು ಪ್ರೊ. ಚಂದ್ರಶೇಖರ ಪಾಟೀಲರು ಲೇಖನವೊಂದರಲ್ಲಿ ಬರೆದಿದ್ದರು. ಅವರ ಈ ಮಾತಿಗೆ ಅವರೂ ಹೊರತಾಗಿಲ್ಲವಾದರೂ ಅವರು ಹೇಳಿದ ಮಾತುಗಳಲ್ಲಿ ಮಾತ್ರ ಸತ್ಯದರ್ಶನವಿತ್ತು. ಕೇವಲ ಅರ್ಹತೆ ಇದ್ದವರಿಗೆ ಮಾತ್ರ ಪ್ರಶಸ್ತಿಗಳು ಸಿಗುತ್ತವೆ ಎನ್ನುವುದು ಅರ್ಧಸತ್ಯ. ಪೂರ್ಣ ಸತ್ಯವೇನೆಂದರೆ ಚಂಪಾ ಹೇಳಿದ ಹಾಗೆ ಪ್ರತಿಭೆ, ಪರಿಶ್ರಮ ಇದ್ದರೂ ಅನುಕೂಲಕರವಾದ ಪರಿಸರವನ್ನು ಅಂದರೆ ಲಾಭಿತನವನ್ನು ಇಲ್ಲವೇ ಅವಕಾಶವಾದಿತನವನ್ನು ಮಾಡದಿದ್ದರೆ ಪ್ರಶಸ್ತಿಗಳನ್ನು ಹೊಂದುವುದು ಕಷ್ಟಸಾಧ್ಯ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ.
ಮೊದಲು ಸರಕಾರಿ ಪ್ರಾಯೋಜಿತ ಪ್ರಶಸ್ತಿಗಳ ಕುರಿತು ನೊಡೋಣ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖಾಂತರ ರಾಜ್ಯ ಸರಕಾರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಲೆಂದೇ ಕೆಲವಾರು ಪ್ರಶಸ್ತಿಗಳನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಜೊತೆಗೆ ಸರಕಾರಿ ಕೃಪಾಪೋಷಿತ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳೂ ಸಹ ವಾರ್ಷಿಕ ಪ್ರಶಸ್ತಿಗಳನ್ನು ತಮ್ಮ ವ್ಯಾಪ್ತಿಯೊಳಗೆ ಕೊಡಮಾಡುತ್ತವೆ. ಈ ಸರಕಾರಿ ಪ್ರಶಸ್ತಿಗಳು ಬೇಕೆಂದರೆ ಮೊದಲೇ ಸಾಧಕರಾದವರು ಪರಿಚಯ ಪತ್ರ ಹಾಗೂ ತಮ್ಮ ಸಾಧನೆಗಳ ಪಟ್ಟಿಯೊಂದಿಗೆ ಇಲಾಖೆಗೆ ಅರ್ಜಿ ಗುಜರಾಯಿಸಿಕೊಳ್ಳಬೇಕಾಗುತ್ತದೆ. ಅರ್ಜಿ ಜೊತೆಗೆ ಯಾರದಾದರೂ ರಾಜಕಾರಣಿಗಳ, ಬುದ್ಧಿಜೀವಿಗಳ ಇಲ್ಲವೇ ಮಠಾಧೀಶರ ಮರ್ಜಿಯೂ ಬೇಕಾಗುತ್ತದೆ. ಅಂದರೆ ರೆಕಮೆಂಡೆಶನ್ ಲೆಟರ್ ಜೊತೆಗೆ ಲಗತ್ತಿಸಿ ಸಂಸ್ಕೃತಿ ಇಲಾಖೆಗೆ ‘ನಾನು ಇಂತವನು, ಇಂತಹ ಸಾಧನೆ ಮಾಡಿದ್ದೇನೆ, ದಯವಿಟ್ಟು ನನಗೆ ಪ್ರಶಸ್ತಿಯನ್ನು ಕೊಡಮಾಡಿ” ಎಂದು ಅವಲತ್ತುಕೊಳ್ಳಬೇಕಾಗುತ್ತದೆ. ಇದು ನಿಜವಾದ ಸಾಧಕನಿಗೆ ಅವಮಾನಕಾರಿಯಾದ ಸಂಗತಿಯಾಗಿದೆ. ಸ್ವಾಭಿಮಾನಿಯಾಗಿರುವ ಯಾವುದೇ ಸಾಧಕ ತನಗೊಂದು ಪ್ರಶಸ್ತಿ ಕೊಡಿ ಎಂದು ಸರಕಾರಿ ಅಧಿಕಾರಿಗಳ ಮುಂದೆ ಅರ್ಜಿ ಹಾಕಿ ಬೇಡಿಕೊಳ್ಳುವುದಿಲ್ಲ. ಆದರೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬಯಸಿ ಬರುವ ಅರ್ಜಿಗಳ ಸಂಖ್ಯೆ ಸಹಸ್ರಾರು. ಇರುವ ಕೆಲವೇ ವಾರ್ಷಿಕ ಪ್ರಶಸ್ತಿ ಪಡೆಯಲು ಸಾವಿರಾರು ಜನರು ಪೈಪೋಟಿಗೆ ಬಿದ್ದಾಗ ಲಾಬಿಮಾಡುವುದು, ರೆಕಮೆಂಡೆಶನ್ ತರುವುದು ಶುರುವಾಗುತ್ತದೆ. ಕಾಂಪಿಟೇಶನ್ ಹೆಚ್ಚಾದಷ್ಟೂ ಅದನ್ನು ಪಡೆಯುವ ವಾಮಮಾರ್ಗಗಳೂ ಭಿನ್ನವಾಗಿರುತ್ತವೆ. ಹೀಗಾಗಿ ಸರಕಾರಿ ಪ್ರಶಸ್ತಿಗಳು ಯಾವತ್ತೋ ತಮ್ಮ ಮೌಲ್ಯಗಳನ್ನು ಪಡೆದುಕೊಂಡಿವೆ. ಈ ನಮ್ಮ ರಾಜಕಾರಣಿಗಳಂತೂ ಪ್ರಶಸ್ತಿಗಳನ್ನು ಬೇಕಾಬಿಟ್ಟಿ ಹಂಚಲು ಶುರುಮಾಡಿದ್ದರಿಂದಾಗಿ ಮಂತ್ರಿ ಮಾನ್ಯರ ಕೃಪಾಕಟಾಕ್ಷ ಇದ್ದರೆ ಯೋಗ್ಯತೆ ಇರಲಿ ಬಿಡಲಿ ಯಾರು ಬೇಕಾದರೂ ಪ್ರಶಸ್ತಿಗಳನ್ನು ಪಡೆಯಬಹುದು ಎನ್ನುವುದು ಪ್ರತಿವರ್ಷವೂ ಸಾಬೀತಾಗುತ್ತಲೇ ಬಂದಿದೆ. ಉದಾಹರಣೆಗೆ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಅದೆಷ್ಟು ಮಿತಿಮೀರಿತ್ತೆಂದರೆ ಒಂದೇ ಬಾರಿಗೆ 182 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ರಾಜ್ಯೋತ್ಸವ ಪ್ರಶಸ್ತಿಗಳ ಚರಿತ್ರೆಯಲ್ಲೇ ಗರಿಷ್ಟ ಹಂಚಿಕೆ ದಾಖಲೆ ಮಾಡಿದರು. ಧರ್ಮಸಿಂಗ್ ಮುಖ್ಯಮಂತ್ರಿಯಾದಾಗ ಪ್ರಶಸ್ತಿ ಘೋಷಣೆಯಾದ ನಂತರವೂ ಪ್ರಶಸ್ತಿ ಪಡೆದವರ ಪಟ್ಟಿ ಬೆಳೆಯುತ್ತಲೇ ಇತ್ತು. ಪ್ರಶಸ್ತಿ ಪ್ರಧಾನ ಮಾಡುವ ಸಂದರ್ಭದಲ್ಲೂ ಪಟಾಪಟ್ ಪ್ರಶಸ್ತಿ ಘೊಷಣೆ ಹಾಗೂ ವಿತರಣೆಗಳು ಕೂಡಾ ನಡೆದುಹೋದವು. ಇದರಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಅಪಮೌಲ್ಯಗೊಳ್ಳುತ್ತಾ ಹೋಯಿತು.
ಆದರೆ ಅಪಮೌಲ್ಯದಲ್ಲೂ ಲಾಭಗಳಿವೆ. ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಒಂದು ಲಕ್ಷ ರೂಪಾಯಿ ಹಣ, 20 ಗ್ರಾಂ ಚಿನ್ನವನ್ನು ಕೊಡಲಾಗುತ್ತದೆ. ಇದಕ್ಕಿಂತ ಲಾಭದಾಯಕವಾದದ್ದೇನೆಂದರೆ ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸರಕಾರಿ ನಿವೇಶನವನ್ನು ಮೊದಲ ಪ್ರಾಧಾನ್ಯತೆ ಮೇಲೆ ಕೊಡಲಾಗುತ್ತದೆ. ಇದು ಗೊತ್ತಾಗಿದ್ದೇ ತಡ ಪ್ರಭಾವಿಗಳಾದ ರಿಯಲ್ ಎಸ್ಟೇಟ್ ಕುಳಗಳು ತಮ್ಮ ಪ್ರಭಾವ ಬೀರಿ ಕೆಲವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸುತ್ತಾರೆ. ಅದಕ್ಕೆ ಬದಲಾಗಿ ಕೊಡಮಾಡುವ ಸರಕಾರಿ ನಿವೇಶನಗಳನ್ನು ಕೊಂಡುಕೊಳ್ಳುವ ರಿಯೆಲ್ ಎಸ್ಟೇಟ್ ಕುಳಗಳು ಕೊಟ್ಯಾಂತರ ಹಣಕ್ಕೆ ಆ ನಿವೇಶನವನ್ನು ಮಾರಿ ಹಣ ಸಂಪಾದಿಸಿಕೊಳ್ಳುತ್ತಾರೆ. ಈಗ ಪ್ರಶಸ್ತಿ ಎನ್ನುವುದು ಪಕ್ಕಾ ವ್ಯಾಪಾರವಾಗಿದೆ. ಅದರ ಹಿಂದೆ ಹಲವಾರು ವ್ಯಾಪಾರಿ ಲೆಕ್ಕಾಚಾರಗಳಿವೆ. ಜನರ ದೃಷ್ಟಿಯಲ್ಲಿ ಸರಕಾರಿ ಪ್ರಶಸ್ತಿಗಳ ಮೌಲ್ಯ ಕಡಿಮೆಯಾದರೂ ಅದು ಫಲಾನುಭವಿಗಳಿಗೆ ತಂದು ಕೊಡುವ ಲಾಭಗಳು ಮಾತ್ರ ಅಪಾರವಾಗಿವೆ. ಅದಕ್ಕಾಗಿಯೇ ಬಹುತೇಕರು ತಮ್ಮ ತತ್ವ ಸಿದ್ದಾಂತಗಳಿಗೆ ತಿಲಾಂಜಲಿಯನ್ನಿತ್ತು ಪ್ರಶಸ್ತಿಗಳಿಗಾಗಿ ಲಾಭಿಮಾಡುತ್ತಿದ್ದಾರೆ. ಸರಕಾರಿ ಪ್ರಶಸ್ತಿಗಳಿಗಾಗಿ ಸದಾ ಹಪಹಪಿಸುತ್ತಿದ್ದಾರೆ. ಕೆಲವರಂತೂ ಈ ಸರಕಾರಿ ಪ್ರಶಸ್ತಿ ಹಾಗೂ ಇತರ ಸವಲತ್ತುಗಳಿಗಾಗಿ ತಾವೇ ಕಟ್ಟಿ ಬೆಳೆಸಿದ ಜನಸಂಘಟನೆಗಳನ್ನೇ ಬಲಿಕೊಟ್ಟಿದ್ದಾರೆ. ಜನದ್ರೋಹಿಗಳಾಗಿದ್ದಾರೆ. ಕೆಲವು ಸಂಘಟನೆಗಳಂತೂ ಸವಲತ್ತು ಹಂಚಿಕೊಳ್ಳುವಲ್ಲಾದ ಭಿನ್ನಾಭಿಪ್ರಾಯದಿಂದಾಗಿ ಒಡೆದು ಹತ್ತಾರು ಚೂರುಗಳಾಗಿವೆ. ಬಂಡಾಯಗಾರರು, ಪ್ರಗತಿಪರರು ಎನ್ನುವ ಪೋಸು ಕೊಡುವ ಕೆಲವರು ಕೋಮುವಾದಿ ಸರಕಾರ ಎಂದು ಬಿಜೆಪಿಯನ್ನು ಶತಾಯ ಗತಾಯ ಬಹಿರಂಗವಾಗಿ ವಿರೋಧಿಸಿದರು. ಆದರೆ ಪ್ರಶಸ್ತಿ ಹಾಗೂ ಸರಕಾರಿ ಸವಲತ್ತುಗಳ ಸಂದರ್ಭ ಬಂದಾಗ ಮಾತ್ರ ತಮ್ಮ ವರಸೆಯನ್ನು ಬದಲಾಯಿಸಿದರು. “ಸರಕಾರ ಎಂದರೆ ಸಮಸ್ತ ಜನತೆಯದ್ದು, ಸರಕಾರ ಕೊಡುವ ಹಣ ಜನತೆಯದ್ದು, ಹೀಗಾಗಿ ಸರಕಾರದ ಪ್ರಶಸ್ತಿ ಎಂದರೆ ಒಂದು ಪಕ್ಷದ ಪ್ರಶಸ್ತಿ ಎಂದುಕೊಳ್ಳಬೇಕಾಗಿಲ್ಲ. ಹೀಗಾಗಿ ಜನರ ಸರಕಾರ ಕೊಡುವ ಪ್ರಶಸ್ತಿಯನ್ನು ನಾವು ಸ್ವೀಕರಿಸುವದರಲ್ಲಿ ತಪ್ಪೇನು ಇಲ್ಲ” ಎನ್ನುವ ವಿಚಿತ್ರ ವಿತಂಡವಾದವನ್ನು ಮಂಡಿಸಿ, ಹುಸಿ ಸಬೂಬುಗಳನ್ನು ಹೇಳಿ ಆತ್ಮವಂಚನೆ ಮಾಡಿಕೊಂಡವರೂ ಹಲವರಿದ್ದಾರೆ. ಸರಕಾರದ ಪರವಾಗಿಯೋ ಇಲ್ಲಾ ವಿರೋಧವಾಗಿಯೋ ತಮ್ಮ ಸಿದ್ದಾಂತವನ್ನು ಅಸ್ತ್ರವಾಗಿ ಬಳಸಿಕೊಂಡು ಸರಕಾರದ ಸವಲತ್ತು, ಪ್ರಶಸ್ತಿ ಪುರಸ್ಕಾರ, ಅಧಿಕಾರಗಳನ್ನು ಪಡೆಯುವ ಜನರು ಬಂಡಾಯ, ಪ್ರಗತಿಪರ ಮುಸುಕಿನೊಳಗೆ ಸದಾ ಎಚ್ಚರವಾಗಿಯೇ ಇರುವುದೊಂದು ವಿಪರ್ಯಾಸ. ನೈತಿಕ ಅತಃಪತನ ಹಾಗೂ ಬೌದ್ದಿಕ ದಿವಾಳಿತನದ ಸಂಕೇತವೂ ಆಗಿದೆ.
ಪುಣ್ಯಕ್ಕೆ ಕಳೆದ ವರ್ಷದಿಂದ ಸರಕಾರ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಮಿತಿಹೇರಿದೆ. ಕನ್ನಡ ನಾಡು ರಚನೆಯಾಗಿ 59 ವರ್ಷವಾಗಿದ್ದರಿಂದ 59 ಜನರಿಗೆ ಮಾತ್ರ ಪ್ರಶಸ್ತಿಗಳನ್ನು ಕೊಡಮಾಡಲಾಗಿದೆ. ‘ಪ್ರಶಸ್ತಿ ಆಯ್ಕೆಯಲ್ಲಿ ನನ್ನ ಕೈವಾಡ ಏನೂ ಇಲ್ಲ ಅದು ಆಯ್ಕೆ ಕಮಿಟಿಯ ತೀರ್ಮಾಣಕ್ಕೆ ಬಿಡಲಾಗಿದೆ’ ಎಂದು ಮುಖ್ಯಮಂತ್ರಿ ಹೇಳದ್ದರಾದರೂ ಪ್ರಶಸ್ತಿ ಪಡೆದವರಲ್ಲಿ ಅರ್ಧಕ್ಕರ್ಧ ಜನ ಲಾಭಿ ಮಾಡಿ ಪ್ರಶಸ್ತಿ ಗಿಟ್ಟಿಸಿದ್ದು ಸುಳ್ಳಲ್ಲ. ರಾಜಕೀಯ ಕಾರಣಗಳಿಗಾಗಿ ನಾಟಕ ಅಕಾಡೆಮಿಗೆ ಜೆ.ಲೋಕೇಶರವರ ಬದಲು ಶೇಖ ಮಾಸ್ತರನ್ನು ಆಯ್ಕೆ ಮಾಡಿದ್ದ ಉಮಾಶ್ರಿರವರು ಮುನಿಸಿಕೊಂಡ ಜೆ.ಲೋಕೇಶರವರನ್ನು ಸಮಾಧಾನ ಪಡಿಸಲು ಈ ಸಲ ರಾಜ್ಯೋತ್ಸವ ಪ್ರಶಸ್ತಿಯನ್ನು ತುಂಬಾ ಮುತುವರ್ಜಿ ವಹಿಸಿ ಕೊಟ್ಟು ಸ್ವಜನಪಕ್ಷಪಾತ ಮಾಡಿದರು. ಪ್ರಶಸ್ತಿ ಕೊಡುವುದನ್ನೇ ದಂದೆ ಮಾಡಿಕೊಂಡ ರಂಗಸಂಘಟಕ ಎನ್ನಿಸಿಕೊಂಡ ದಲ್ಲಾಳಿಯೊಬ್ಬರು ಸಕಲೆಂಟು ರೀತಿಯಲ್ಲಿ ಲಾಭಿಮಾಡಿ, ಹಲವಾರು ದಿಕ್ಕುಗಳಿಂದ ವಶೀಲಿಭಾಜಿ ತಂದು ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇಂತಹ ಹಲವಾರು ಉದಾಹರಣೆಗಳನ್ನು ಕೊಡಬಹುದಾಗಿದೆ. ಆದರೂ ಕೆಲವಾರು ಯೋಗ್ಯರಿಗೂ, ಅರ್ಜಿ ಗುಜರಾಯಿಕೊಳ್ಳದ ಸ್ವಾಭಿಮಾನಿಗಳಿಗೂ ಪ್ರಶಸ್ತಿಯನ್ನು ಗುರುತಿಸಿ ಕೊಟ್ಟಿರುವುದು ಸಮಾಧಾನಕರವಾದ ವಿಷಯವಾಗಿದೆ.
ಗರಿಗೆದರಿದ ಪ್ರಶಸ್ತಿಯೋಧ್ಯಮ : ಇನ್ನು ಕೆಲವರಿರುತ್ತಾರೆ ಪ್ರಶಸ್ತಿಗಳನ್ನು ಕೊಡುವುದನ್ನೇ ದಂದೆ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರು ಪ್ರಶಸ್ತಿಗಳನ್ನು ಪಡೆಯುವುದನ್ನೇ ತಮ್ಮ ಬದುಕಿನ ಮೂಲ ಉದ್ದೇಶವನ್ನಾಗಿಸಿಕೊಂಡಿರುತ್ತಾರೆ. ಸರಕಾರಿ ಪ್ರಶಸ್ತಿಗಳು ಸಿಗದಿದ್ದರೂ ಖಾಸಗಿ ಪ್ರಶಸ್ತಿಗಳಾದರೂ ದೊರೆಯಲಿ ಎಂದು ಹಪಹಪಿಸುವವರಿಗೇನೂ ಕೊರತೆ ಇಲ್ಲ. ಎಲ್ಲರಿಗೂ ಈ ಮಾತು ಅನ್ವಯಿಸುದಿಲ್ಲವಾದರೂ ಬಹುತೇಕರು ಇದನ್ನೇ ಮುಂದುವರೆಸಿದ್ದಾರೆ. ಪ್ರಶಸ್ತಿಗೆ ದೊಡ್ಡ ಗ್ರಾಹಕವರ್ಗ ಇದೆಯೆಂದು ತಿಳಿದಾಗ ಪ್ರಶಸ್ತಿ ಕೊಡುವ ವ್ಯಾಪಾರೋಧ್ಯಮವೊಂದು ಬೆಂಗಳೂರಿನಂತಹ ನಗರಗಳಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಈ ಪ್ರಶಸ್ತಿಯೋಧ್ಯಮ ಅದು ಹೇಗೆ ನಡೆಯುತ್ತದೆ ಎನ್ನುವುದಕ್ಕೆ ಒಂದು ಉದಾಹರಣೆ ಹೀಗಿದೆ.
ಹೀಗೊಬ್ಬ ಸಾಹಿತಿ ಮಿತ್ರರಿದ್ದಾರೆ ವಯೋವೃದ್ದರು. ತಮ್ಮ ಸಾಹಿತ್ಯ ಕೃಷಿಗೆ ಯಾರೂ ಮಾನ್ಯತೆ ಕೊಡುವುದಿಲ್ಲವಲ್ಲಾ ಎನ್ನುವ ಕೊರಗು ನಿತ್ಯನಿರಂತರವಾಗಿದೆ. ಅಂತವರಿಗೊಂದು ದಿನ ‘ನಿಮ್ಮ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡಲು ನಮ್ಮ ತೀರ್ಪುಗಾರರು ತೀರ್ಮಾಣಿಸಿದ್ದಾರೆ’ ಎಂದು ಯಾವುದೋ ಅನಾಮಿಕ ಸಂಘಟಕರಿಂದ ಪತ್ರ ಬಂತು. ಸಾಹಿತಿ ಮಿತ್ರರ ಆನಂದಕ್ಕೆ ಪಾರವೇ ಇರಲಿಲ್ಲ. ಎಲ್ಲರಿಗೂ ಪತ್ರವನ್ನು ತೋರಿಸಿ ತಮ್ಮ ಸಾಹಿತ್ಯ ಬೆಳೆಗೆ ಈಗ ಸರಿಯಾದ ಫಲ ಮತ್ತು ಬೆಲೆ ಬಂತು ಎಂದು ಹೆಮ್ಮೆಯಿಂದ ಹೇಳಿಕೊಂಡರು. ಹೆಂಡತಿಯ ಮುಂದೆ ತಮ್ಮನ್ನು ತಾವೇ ಸ್ತುತಿಸಿಕೊಂಡರು. ಕೊನೆಗೊಮ್ಮೆ ಅಧಿಕೃತವಾಗಿ ಆಹ್ವಾನಿಸಲು ಮನೆಗೆ ಬಂದ ಆಯೋಜಕರು ಸಾಹಿತಿಯನ್ನು ಹೊಗಳಿ ಹೊನ್ನಶೂಲಕ್ಕೇರಿಸಿ ಕಾರ್ಯಕ್ರಮಕ್ಕೆ ಹಣಕಾಸಿನ ತೊಂದರೆ ಇದೆ ತಮ್ಮಿಂದ ಸಹಾಯ ನಿರೀಕ್ಷಿಸುತ್ತಿದ್ದೇವೆ. ಇಲ್ಲವಾದರೆ ಕಾರ್ಯಕ್ರಮವೇ ರದ್ದಾಗುತ್ತದೆ ಎಂದು ಹೇಳಿ ಇಪ್ಪತ್ತೈದು ಸಾವಿರ ಹಣ ಪಡೆದುಕೊಂಡರು. ಹಣ ಕೊಡದಿದ್ದರೆ ಪ್ರಶಸ್ತಿ ಇಲ್ಲ. ಪ್ರಶಸ್ತಿ ಇಲ್ಲವಾದರೆ ಎಲ್ಲರ ಮುಂದೆ ಅವಮಾನವಾಗುತ್ತದೆ. ಹೀಗಾಗಿ ತಮ್ಮ ಘಣ ಮರ್ಯಾದೆಯನ್ನು ಕಾಪಾಡಿಕೊಳ್ಳಲು ಹೆಣ ತೆರಬೇಕಾದ ಅನಿವಾರ್ಯತೆ ಇತ್ತು. ಪ್ರಶಸ್ತಿ ದಿನ ತಮ್ಮ ಕುಟುಂಬ ಪರಿವಾರ ಸಮೇತ ಹೋದ ನಮ್ಮ ಸಾಹಿತಿಗಳು ಹೋಗಿ ನೋಡಿದರೆ ಇವರಂತೆ ಪ್ರಶಸ್ತಿ ಪಡೆಯುವವರ ಸಂಖ್ಯೆ ಅರ್ಧ ಶತಕದಷ್ಟಿತ್ತು. ಅದರಲ್ಲಿ ಹುಡುಕಿದರೂ ನಾಲ್ಕು ಜನ ನಿಜವಾದ ಸಾಧಕರಿದ್ದರು. ಉಳಿದವರೆಲ್ಲಾ ಹೀಗೆಯೇ ಆಯೋಜಕರ ತಂತ್ರಗಳಿಗೆ ಬಲಿಪಶುಗಳಾಗಿ ಹಣ ತೆತ್ತು ಪ್ರಶಸ್ತಿ ಪಡೆಯಲು ಬಂದವರೇ.
ಇಂತಹ ಪ್ರಶಸ್ತಿ ಪುರಸ್ಕಾರ ಸನ್ಮಾನಗಳ ಹಪಾಹಪಿ ಇರುವವರು ಅದೆಷ್ಟೋ ಜನರಿದ್ದಾರೆ. ಇಂತವರ ಸುಪ್ತ ಬಯಕೆಯನ್ನು ಅರಿತ ಆಯೋಜಕರು ಸರಿಯಾಗಿಯೇ ಗಾಳ ಹಾಕುತ್ತಾರೆ. ‘ಪ್ರಶಸ್ತಿ ಎನ್ನುವ ಎರೆಹುಳು ಕಟ್ಟಿ ಬಿಟ್ಟರೆ ಒಂದಿಷ್ಟಾದರೂ ಆಸೆಬುರುಕ ಮೀನುಗಳು ಬಂದು ಬಲೆಗೆ ಬೀಳುತ್ತವೆ’ ಎನ್ನುವ ಪಕ್ಕಾ ಲೆಕ್ಕಾಚಾರ ವೃತ್ತಿಪರ ಆಯೋಜಕರದ್ದಾಗಿದೆ. ಈ ಪ್ರಶಸ್ತಿ ಸಮಾರಂಭ ಎನ್ನುವ ವಾರ್ಷಿಕ ಸಮಾರಂಭಗಳಿಂದಾಗಿ ಆಯೋಜಕರು ಹಣ ಹೆಸರು ಹಾಗೂ ಇತರೆ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ಪ್ರಶಸ್ತಿ ಪ್ರಧಾನ ಎನ್ನುವ ದಂದೆ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಈ ರೀತಿಯ ಕಾರ್ಯಕ್ರಮಗಳ ಆಯೋಜಕರು ತಮ್ಮ ಶಡ್ಯಂತ್ರಕ್ಕೆ ಶ್ರೇಷ್ಟತೆಯ ಮುಖವಾಡವನ್ನು ತೋರಿಸಲು ಒಂದಿಬ್ಬರು ದಿಗ್ಗಜರಿಗೂ ಪ್ರಶಸ್ತಿಯನ್ನು ಕೊಟ್ಟಿರುತ್ತಾರೆ. ಹಾಗೂ ಪ್ರಶಸ್ತಿ ಪ್ರಧಾನ ಮಾಡಲು ಕಾಡಿ ಬೇಡಿ ಗಣ್ಯವ್ಯಕ್ತಿಗಳನ್ನು ಕರೆದಿರುತ್ತಾರೆ. ಅಂತಹ ಹೆಸರುವಾಸಿ ಸಾಹಿತಿ, ದೊಡ್ಡ ಹುದ್ದೆಯ ಅಧಿಕಾರಸ್ತ, ಮಂತ್ರಿಮಾನ್ಯ ಇಲ್ಲವೇ ಮಠಾಧೀಶರು ಬಂದು ದೊಡ್ಡ ವೇದಿಕೆಯ ಮೇಲೆ ಸನ್ಮಾನ ಮಾಡಿ ಪ್ರಶಸ್ತಿಯನ್ನು ಕೊಟ್ಟರೆ ಯಾರು ತಾನೆ ಅಪಸ್ವರ ಎತ್ತುವುದು. ಒಂದು ಕಡೆ ಸಮಾಜದಲ್ಲಿ ಗಣ್ಯರೆನ್ನುವರನ್ನೂ ಬಳಸಿಕೊಂಡು, ಇನ್ನೊಂದು ಕಡೆ ಸಾಹಿತಿ ಕಲಾವಿದರಿಂದಲೂ ಹಣ ವಸೂಲಿ ಮಾಡಿಕೊಂಡು, ಮತ್ತೊಂದು ಕಡೆ ಸರಕಾರಿ ಇಲಾಖೆಗಳಿಂದಲೂ ಅನುದಾನವನ್ನು ಪಡೆದುಕೊಂಡು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುವುದು ಇಂದು ಬಂಡವಾಳವಿಲ್ಲದೇ ಹಣ ಹೆಸರು ಮಾಡುವ ಲಾಭದಾಯಕ ವ್ಯವಹಾರವಾಗಿದೆ. ಇಂತಹ ವ್ಯವಹಾರಸ್ತರು ಬೆಂಗಳೂರಿನಲ್ಲಿ ಬೇಕಾದಷ್ಟು ಜನರಿದ್ದಾರೆ.
ಬಂಡವಾಳಶಾಹಿ ಪ್ರಶಸ್ತಿಗಳು : ಸರಕಾರಿ ಇಲ್ಲವೇ ಖಾಸಗಿ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಕೊಡುತ್ತಾ ಬಂದಿವೆ. ಆದರೆ ಇತ್ತೀಚೆಗೆ ದೇಶವನ್ನೇ ಡಮ್ಲೋಮ್ಯಾಟಿಕ್ ಆಗಿ ಡಾಮಿನೇಟ್ ಮಾಡುತ್ತಿರುವ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಬಂಡವಾಳಶಾಹಿ ಉದ್ಯಮಪತಿಗಳು ಪ್ರಶಸ್ತಿ ಪ್ರಧಾನವನ್ನು ಮಾಡುತ್ತಿವೆ. ಈ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಬಿಟ್ಟು ಅದ್ಯಾಕೆ ಲಾಭವಿಲ್ಲದ ಪ್ರಶಸ್ತಿಗಳನ್ನು ಕೊಡುತ್ತಾರೆ? ಎನ್ನುವುದು ಸೋಜಿಗವೆನ್ನಿಸುತ್ತದೆ. ಆದರೆ ಲಾಭ ಇಲ್ಲದೇ ಏನನ್ನೂ ಮಾಡದ ವ್ಯಾಪಾರೋದ್ಯಮಿಗಳು ಪರೋಕ್ಷ ಲಾಭಗಳ ಲೆಕ್ಕಾಚಾರ ಹಾಕಿಯೇ ಪ್ರಶಸ್ತಿ ಪುರಸ್ಕಾರ ಸನ್ಮಾನಗಳನ್ನು ಕೊಡಮಾಡುತ್ತಾರೆ. ಇವರಿಗೆ ಯಾಕೆ ಇದ್ದಕ್ಕಿದ್ದಂತೆ ಕನ್ನಡದ ಮೇಲೆ ಮೋಹ, ಕನ್ನಡದ ಸಾಧಕರ ಮೇಲೆ ವ್ಯಾಮೋಹ ಎಂದು ವಿಸ್ಮಯಗೊಳ್ಳಬಹುದಾಗಿದೆ. ಆದರೆ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಜನರ ನಂಬಿಕೆ ಗಳಿಸಲು ಈ ವ್ಯಾಪಾರಿ ಕಂಪನಿಗಳು ಜನರ ನಡುವಿದ್ದೇ ಯಾವುದೇ ಕ್ಷೇತ್ರದಲ್ಲಿ ಒಂದಿಷ್ಟು ಹೆಸರು ಮಾಡಿದವರಿಗೆ ಪ್ರಶಸ್ತಿ ಕೊಡುತ್ತವೆ. ಆ ಮೂಲಕ ತಮ್ಮ ಕಂಪನಿಗಳ ವಿಶ್ವಾಸಾರ್ಹತೆಗೆ ಸಾಧಕರ ಹೆಸರನ್ನು ಬಳಸಿಕೊಳ್ಳುತ್ತದೆ. ಪ್ರಶಸ್ತಿ ಪ್ರಧಾನ ಸಮಾರಂಭವನ್ನೂ ಸಹ ತಮ್ಮ ಕಂಪನಿ ಜಾಹಿರಾತಿಗೆ ಪೂರಕವಾಗುವಂತೆ ಆಯೋಜಿಸುತ್ತವೆ. ಮಾಧ್ಯಮಗಳಲ್ಲಿ ಅದು ಪ್ರಚಾರವಾಗುವಂತೆ ನೋಡಿಕೊಳ್ಳುತ್ತವೆ. ಕೊಟ್ಯಾಂತರ ಹಣವನ್ನು ಜಾಹಿರಾತಿಗಾಗಿ ಕೊಡುವ ಬದಲು ಲಕ್ಷಾಂತರ ಹಣವನ್ನು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಖರ್ಚು ಮಾಡಿದರೆ ಮಾಧ್ಯಮದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಬಹುದೆಂಬ ಪಕ್ಕಾ ಕ್ಯಾಲ್ಕುಲೇಶನ್ ಈ ಪ್ರಶಸ್ತಿ ಪ್ರಧಾನದ ಹಿಂದೆ ಅಡಗಿರುತ್ತದೆ.
ಇದಕ್ಕೆ ಉದಾಹರಣೆಯಾಗಿ ನವೆಂಬರ್ 1 ರಂದು ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ಲಿಮಿಟೆಡ್ ಎನ್ನುವ ಬೆಂಗಳೂರು ಬೇಸ್ನ ಕಾರ್ಪೊರೇಟ್ ಮಾದರಿಯ ರಿಯೆಲ್ ಎಸ್ಟೇಟ್ ಬಿಸಿನೆಸ್ ಕಂಪನಿ ಕನ್ನಡದ ಐದು ಜನರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಪ್ರಧಾನ ಮಾಡಿತು. ಜೊತೆಗೆ ಬರಗೂರು ರಾಮಚಂದ್ರಪ್ಪನವರಿಗೆ ವಿಶೇಷ ಗೌರವ ಪುರಸ್ಕಾರವನ್ನು ನೀಡಿ ರಿಯಲ್ ಎಸ್ಟೇಟ್ ಕಂಪನಿಯ ಕಛೇರಿಯಲ್ಲೇ ಸನ್ಮಾನಿಸಲಾಯಿತು. ಸನ್ಮಾನಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಪುಂಡಲೀಕ ಹಾಲಂಬಿಯವರನ್ನು ಕರೆಸಲಾಗಿತ್ತು. ಅದ್ದೂರಿ ಪ್ರಚಾರದೊಂದಿಗೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಈ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಕನ್ನಡ ಸಾಹಿತ್ಯಕ್ಕೂ ಎತ್ತನಿಂದೆತ್ತ ಸಂಬಂಧ? ಇದೆ ಸಂಬಂಧ ಇರುವುದು ಈಗಾಗಲೇ ಹೇಳಿದಂತೆ ಪುಕ್ಕಟೆ ಪ್ರಚಾರ ಹಾಗೂ ಜನತೆಯ ನಂಬಿಕೆ ಗಿಟ್ಟಿಸುವಲ್ಲಿದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ನವರನ್ನು ಯಾರೂ ಸುಲಭಕ್ಕೆ ನಂಬುವುದಿಲ್ಲ. ಕೆರೆ, ಗೋಮಾಳ, ಸರಕಾರಿ ಜಮೀನುಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಅಪಾರ್ಟಮೆಂಟ್ಗಳನ್ನು ಕಟ್ಟಿ ಎಲ್ಲಿ ಅಮಾಯಕರನ್ನು ಯಾಮಾರಿಸುತ್ತಾರೋ ಎನ್ನುವ ಅಪನಂಬಿಕೆ ಜನರಲ್ಲಿದೆ. ಬಹುತೇಕ ನಿರ್ಮಾಣ ಉದ್ಯಮದವರು ಒಂದು ಅಕ್ರಮವಾಗಿ ಜಮೀನು ಪಡೆಯುತ್ತಾರೆ ಇಲ್ಲವೇ ಅಕ್ರಮವಾಗಿ ನಿಯಮ ಬಾಹಿರವಾಗಿ ಕಟ್ಟಡಗಳನ್ನು ಕಟ್ಟಿ ಮಾರಾಟ ಮಾಡಿ ಲಾಭಪಡೆದುಕೊಳ್ಳುತ್ತಾ ತಮ್ಮ ಲೂಟಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾರೆ. ಈ ಬಂಡವಾಳಶಾಹಿಗಳು ಕಾರ್ಮಿಕರ ಬೆವರು ರಕ್ತವನ್ನು ಹೀರಿ, ಜನರ ಪರಿಶ್ರಮದ ಹಣವನ್ನು ಪಡೆದು ಮನೆಗಳನ್ನು ಮಾರಿ ಅತ್ಯಧಿಕ ಲಾಭ ಮಾಡಿಕೊಳ್ಳುತ್ತಿರುವುದು ಬಹಿರಂಗ ಸತ್ಯವಾಗಿದೆ. ಹಾಗೂ ಈ ನಿರ್ಮಾಣ ಸಂಸ್ಥೆಗಳಲ್ಲಿ ತೀವ್ರವಾದ ಪೈಪೋಟಿ ಇದೆ. ಯಾರು ಜನರ ನಂಬಿಕೆಯನ್ನು ಕಾಪಾಡಿಕೊಳ್ಳುತ್ತಾರೋ ಅವರ ಮನೆಗಳು ಬೇಗ ಬಿಕರಿಯಾಗುತ್ತವೆ. ಆದರೆ ಜನತೆ ಸುಖಾ ಸುಮ್ಮನೆ ಯಾರನ್ನೂ ನಂಬುವುದಿಲ್ಲ. ಅವರ ನಂಬಿಕೆಯನ್ನು ಪಡೆಯಲೆಂದೇ ಸಾಹಿತಿ ಕಲಾವಿದರು ಸಾಧಕರನ್ನು ಕರೆಸಿ ಪ್ರಶಸ್ತಿ ಕೊಟ್ಟು ಸನ್ಮಾನಿಸುವುದು. ನೋಡಿ ನಾಡೋಜ ಬರಗೂರುರಂತವರು ನಮ್ಮ ಜೊತೆ ಇದ್ದಾರೆ ಎಂದು ತೋರಿಸಿಕೊಳ್ಳುವುದು. ಬಹುತೇಕ ಸಾಹಿತಿಗಳು ನಮ್ಮಲ್ಲಿಗೆ ಬಂದು ಪ್ರಶಸ್ತಿ ಪಡೆಯುತ್ತಾರೆ ಎಂದು ಬಿಂಬಿಸಿಕೊಳ್ಳುವುದು. ಪ್ರಶಸ್ತಿ ಪಡೆದವರ ಮುಖಬೆಲೆಯನ್ನೇ ತಮ್ಮ ಪ್ರಚಾರ ಹಾಗೂ ನಂಬಿಕೆಗಳಿಗಾಗಿ ಬಳಸುವುದು ಈ ಉದ್ಯಮಿಗಳ ಪ್ರಶಸ್ತಿ ಪ್ರಧಾನ ಪ್ರಹಸನದ ಹಿಂದಿರುವು ಹಿಡನ್ ಅಜೆಂಡಾ ಆಗಿದೆ.
ಬಂಡವಾಳಶಾಹಿಗಳ ಈ ಒಳ ಹುನ್ನಾರವನ್ನು ಬರುಗೂರರಂತಹ ಬುದ್ದಿಜೀವಿಗಳು ಯಾಕೆ ಅರಿಯಲಿಲ್ಲ? ಅರಿತಿದ್ದರೂ ಅವರೊಳಗಿನ ಅವಕಾಶವಾದಿ ಪ್ರಶಸ್ತಿಗಳನ್ನು ವಿರೋಧಿಸುತ್ತಿಲ್ಲ ಎನ್ನುವುದು ಅನೇಕ ಬಾರಿ ಸಾಬೀತಾಗಿದೆ. ಬೇರೆಯವರು ಬಂದು ಈ ಭೂವ್ಯಾಪಾರಿಗಳಿಂದ ಪ್ರಶಸ್ತಿ ಪಡೆದಿದ್ದರೆ ಅವರಿಗೆ ಬಂಡವಾಳಶಾಹಿಗಳ ಕುತಂತ್ರ ಅರ್ಥವಾಗುವುದಿಲ್ಲ ಎಂದುಕೊಳ್ಳಬಹುದಾಗಿತ್ತು. ಆದರೆ ಬಂಡಾಯ ಸಾಹಿತ್ಯ ಸಂಘಟನೆ ಎನ್ನುವ ಪ್ರಗತಿಪರ ಸಂಘಟನೆಯ ರೂವಾರಿಯಾಗಿದ್ದ ಬರುಗೂರರಂತಹ ಬುದ್ಧಿಜೀವಿಗಳ ಬುದ್ದಿ ಪ್ರಶಸ್ತಿ ಸನ್ಮಾನ ಅಂದಕೂಡಲೇ ಅದ್ಯಾಕೆ ರಜೆ ತೆಗೆದುಕೊಳ್ಳುತ್ತದೆ. ಹೋದ ವರ್ಷ ಕೂಡಾ ಶಿಕ್ಷಣೋಧ್ಯಮಿ ಮೋಹನ್ ಆಳ್ವಾರವರು ಆಯೋಜಿಸಿದ್ದ ಮೂಡಬಿದಿರೆಯ ಆಳ್ವಾಸ್ ವಿರಾಸತ್ ಎನ್ನುವ ಬ್ರಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬರಗೂರರು ಅದ್ದೂರಿ ಸನ್ಮಾನ ಸ್ವೀಕರಿಸಿ ಅರ್ಧ ಲಕ್ಷ ಕಾಸಿನ ಕಾಣಿಕೆಯನ್ನೂ ಪಡೆದುಕೊಂಡು ಕೃತಾರ್ಥರಾಗಿದ್ದರು. ಯಾವಾಗ ಕೆಲವು ಪ್ರಗತಿಪರರು ಇದನ್ನು ವಿರೋಧಿಸಿ ಮಂಗಳೂರಿನಲ್ಲಿ ಪರ್ಯಾಯ ಸಭೆ ನಡೆಸಿದರೋ, ಕೆಲವು ಮಾಧ್ಯಮಗಳಲ್ಲಿ ಪ್ರತಿರೋಧ ವ್ಯಕ್ತವಾಯಿತೋ ಆಗ ಎಚ್ಚರಗೊಂಡ ಬರಗೂರರು ವಿರಾಸತ್ ನಲ್ಲಿ ಭಾಷಣವನ್ನೂ ಮಾಡದೇ ಬೆಂಗಳೂರಿಗೆ ವಾಪಸ್ಸಾದರು. ಸ್ವೀಕರಿಸುವುದೆಲ್ಲವನ್ನೂ ಸ್ವೀಕರಿಸಿದ ನಂತರ “ಆಳ್ವಾಸ್ ನುಡಿಸಿರಿಯಲ್ಲಿ ಕೋಟಿಗಂಟಲೇ ಸಂಪತ್ತಿನ ವೈಭವೀಕರಣ ನನಗೆ ಕಿರಿಕಿರಿಯನ್ನುಂಟುಮಾಡಿತು. ಸಂಪತ್ತಿನ ವಿಜ್ರಂಭನೆಯಿಂದಾಗಿ ವಿವೇಕ ನಾಶವಾಗಿ ವಿಕಾರತೆಯೆ ಮುನ್ನಲೆಗೆ ಬರುತ್ತದೆ. ಆದ್ದರಿಂದ ನಾನು ಉಪನ್ಯಾಸ ನೀಡುವುದಿಲ್ಲ. ಈ ಕಾರ್ಯಕ್ರಮದಲ್ಲಿ ಜನಪರ ಆಶಯಗಳಿಗೆ ಅವಕಾಶವಿಲ್ಲ ಆದ್ದರಿಂದ ನಾನು ಮೂಡಬಿದಿರೆಯನ್ನು ತ್ಯಜಿಸುತ್ತೇನೆ ಹಾಗೂ ಅವರು ಕೊಟ್ಟ ಚೆಕ್ ನ್ನು ಹಿಂದಿರುಗಿಸುತ್ತೇನೆ” ಎಂದು ಬರಗೂರರು ಮಾಮೂಲಿ ಸಬೂಬುಗಳನ್ನು ಹೇಳಿ ನುಣಿಚಿಕೊಳ್ಳಲು ನೋಡಿದರು. ಇಷ್ಟವಿಲ್ಲದಿದ್ದರೆ ಮೊದಲೇ ಹೋಗಿ ಸನ್ಮಾನ ಸ್ವೀಕರಿಸಬಾರದಿತ್ತು. ಎಲ್ಲವನ್ನೂ ಸ್ವೀಕರಿಸಿದ ಮೇಲೆ ಕುಂಟುನೆಪಗಳನ್ನು ಹೇಳಿ ಹೀಗೆ ಜಾರಿಕೊಳ್ಳಬಾರದಿತ್ತು. ಇದು ನಮ್ಮ ಬೆಂಕಿ ಬರಗೂರರ ಅವಕಾಶವಾದಿತನ ಅಲ್ಲದೇ ಮತ್ತೇನೂ ಅಲ್ಲ.
ಇದರಿಂದ ಪಾಠ ಕಲಿಯದ ಅದೇ ಬರಗೂರು ಈಗ ಮತ್ತೆ ಹೋಗಿ ಭೂದಂದೆಕೋರರಿಂದ ವಿಶೇಷ ಸನ್ಮಾನ ಕಾಣಿಕೆ ಪಡೆದುಕೊಂಡಿದ್ದು ಅವಕಾಶವಾದದ ಪರಂಪರೆಯ ಮುಂದುವರಿಕೆಯೇ ಆಗಿದೆ. ಬರಗೂರರು ವಯಸ್ಸಾದಂತೆ ಮಾಗುವುದು ಬಿಟ್ಟು ಪ್ರಶಸ್ತಿಗಳಿಗೆ ಮಾರುಹೋಗುವುದು ನಕಾರಾತ್ಮಕ ಬೆಳವಣಿಗೆಯಾಗಿದೆ. ಬರಗೂರು ತಾವೊಬ್ಬರೇ ಅವಕಾಶವಾದಿಯಾಗದೇ ಅವರ ಅನುಯಾಯಿಗಳು, ಜೊತೆಗಾರರನ್ನೂ ಸಹ ಅವಕಾಶವಾದಿಯಾಗಲು ಪ್ರೇರೇಪಣೆಗೊಳಪಡಿಸುವುದು ನಿಜಕ್ಕೂ ಅಕ್ಷಮ್ಯ. ಬರಗೂರರ ಜೊತೆಗೆ ಬಂಡಾಯ ಸಂಘಟನೆಯಲ್ಲಿ ತೊಡಗಿಸಿಕೊಂಡು ಮರಿ ಬಂಡಾಯಗಾರ ಆರ್.ಜಿ.ಹಳ್ಳಿ ನಾಗರಾಜ್ ರವರೂ ಕೂಡ ಬರಗೂರರ ಜೊತೆಗೆ ಡಿಎಸ್ ಮ್ಯಾಕ್ಸ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಾನುಭವಿಗಳಾಗಿದ್ದರು. “ಬಂಡಾಯಗಾರರಾಗಿದ್ದವರು ಯಾಕೆ ಬಂಡವಾಳಶಾಹಿಗಳಿಂದ ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತೀರಿ” ಎಂದು ಪ್ರಶ್ನಿಸಿದಾಗ ಆರ್.ಜಿ.ಹಳ್ಳಿ ಕೊಟ್ಟ ಉತ್ತರ ಅವರ ಪ್ರಸ್ತುತ ರಾಜೀಕೋರತನಕ್ಕೆ ಕನ್ನಡಿಯಾಗಿದೆ. “ಹಣ ಮಾಡಿದವರೆಲ್ಲಾ ಸಾಹಿತ್ಯ ಸಂಸ್ಕೃತಿ ಕಲೆಗಾಗಿ ಖರ್ಚು ಮಾಡಲಿ, ಆ ಮೂಲಕ ಅವರಿಗೂ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗಲಿ, ನಾನೊಬ್ಬ ಪ್ರಶಸ್ತಿ ತೆಗೆದುಕೊಳ್ಳುವುದನ್ನು ಬಿಟ್ಟರೆ ಈ ವ್ಯವಸ್ಥೆ ಬದಲಾಗುತ್ತಾ?
...” ಎನ್ನುವ ಪತ್ರಕರ್ತ ನಾಗರಾಜರು ತಾತ್ವಿಕ ಸೈದ್ದಾಂತಿಕ ನಿಲುವುಗಳಿಗೆ ತಿಲಾಂಜಲಿಯನ್ನಿಟ್ಟಿದ್ದಾರೆಂಬುದು ಗೊತ್ತಾಗುತ್ತದೆ. ಯಥಾಃ ಗುರು ತಥಾಃ ಶಿಷ್ಯ’ ಎನ್ನುವುದೂ ಸಹ ಈ ಬರಗೂರು ಹಾಗೂ ನಾಗರಾಜರೆಂಬ ಮಾಜಿ ಬಂಡಾಯಗಾರರ ಪ್ರಶಸ್ತಿ ಪ್ರಹಸನದಿಂದ ಸಾಬೀತಾದಂತಾಯಿತು.
ಇನ್ನು ಸರಕಾರವು ಸಿನೆಮಾ ಕ್ಷೇತ್ರಕ್ಕೆ ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳಂತೂ ವಾದವಿವಾದಗಳಿಲ್ಲದೇ ಎಂದೂ ಕೊನೆಯಾಗಿಲ್ಲ. ಕೆಲವೊಮ್ಮೆ ಈ ಪ್ರಶಸ್ತಿ ಪ್ರಹಸನಗಳು ಕೋರ್ಟಿನ ಮೆಟ್ಟಿಲನ್ನೂ ಹತ್ತಿವೆ, ರದ್ದೂ ಆಗಿವೆ. ಜಗಳಗಳನ್ನೂ ಹುಟ್ಟಿಹಾಕಿದೆ. ಆಯ್ಕೆ ಕಮಿಟಿಯವರ ಬದ್ದತೆಯನ್ನು ಸಂದೇಶಿಸುವಂತೆ ಮಾಡಿದೆ. ಅಲ್ಲಿಯೂ ರಾಜಕೀಯ ತನ್ನ ಛಾಪನ್ನು ಮೂಡಿಸುತ್ತಲೇ ಬಂದಿದೆ. ಕೊನೆಗೂ ಸಿನೆಮಾ ಪ್ರಶಸ್ತಿಗಳು ಎಂದರೆ ಜನರಲ್ಲಿ ಬೇಸರ ಉಂಟಾಗುವಂತೆ ಅವುಗಳು ಅಪಮೌಲ್ಯ ಗೊಂಡಿವೆ. ಪ್ರಶಸ್ತಿಗಳು ಯೋಗ್ಯರಿಗೆ, ನಿಜವಾದ ಪ್ರತಿಭೆಗಳಿಗೆ, ಪರಿಶ್ರಮ ಪಡುವವರಿಗೆ ಸಿಗದೇ ಹಣಬಲ ಹಾಗೂ ಲಾಭಿಬಲ ಇದ್ದವರಿಗೆ ಸಿಗುತ್ತಿರುವುದು ಖೇದಕರ ಸಂಗತಿಯಾಗಿದೆ.
ಎಲ್ಲಾ ಪ್ರಶಸ್ತಿಗಳನ್ನು ಸಾರಾಸಗಟಾಗಿ ವಿರೋಧಿಸುವುದು ಇಲ್ಲವೇ ಪ್ರಶಸ್ತಿಗಳನ್ನೇ ನಿರಾಕರಿಸುವುದು ಈ ಲೇಖನದ ಉದ್ದೇಶವೂ ಅಲ್ಲಾ, ಎಲ್ಲವನ್ನೂ ನಕಾರಾತ್ಮಕವಾಗಿ ನೋಡುವ ಸಿನಿಕ್ ಧೋರಣೆಯೂ ಅಲ್ಲ. ಪ್ರಶಸ್ತಿಗಳ ಹಿಂದಿರುವ ಹಪಾಹಪಿತನ, ಲಾಭಬಡುಕತನ, ವಶೀಲಿಬಾಜಿತನ, ಅವಕಾಶವಾದಿತನಗಳನ್ನು ಪ್ರಶ್ನಿಸುವುದೊಂದೇ ನಮ್ಮ ಆಶಯವಾಗಿದೆ. ಸಂಕೀರ್ಣ ವ್ಯವಸ್ಥೆಯಲ್ಲಿ ಸಾಧಕರನ್ನು ಪ್ರೋತ್ಸಾಹಿಸಲು ಪ್ರಶಸ್ತಿ ಪುರಸ್ಕಾರಗಳು ಅಗತ್ಯ ಇವೆ. “ಪ್ರಶಸ್ತಿ ಎನ್ನುವುದು ಕಲಾವಿದರಿಗೆ ಒಂದು ರೀತಿಯಲ್ಲಿ ಪ್ರೋತ್ಸಾಹ, ಅದು ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅದು ಒಂದು ರೀತಿಯಲ್ಲಿ ಟಾನಿಕ್ ಇದ್ದ ಹಾಗೆ, ಅಷ್ಟೇ ಅಲ್ಲ ಪ್ರಶಸ್ತಿ ಎನ್ನುವುದು ಕಲಾವಿದರೆಡೆಗಿನ ಒಂದು ರೀತಿಯ ಮೆಚ್ಚುಗೆ...” ಎಂದು ಬಾಲಿವುಡ್ ನಟಿ ದೀಪಿಕಾ ಪಡಕೋಣೆ ಇತ್ತೀಚೆಗೆ ಹೇಳಿದ್ದರು. ನಿಜವಾದ ಪ್ರತಿಭಾನ್ವಿತರನ್ನು ಗುರುತಿಸಿ ಇನ್ನೂ ಹೆಚ್ಚು ಸಾಧನೆ ಮಾಡಲು ಪ್ರೇರೇಪಣೆಯಾಗಲು ಪ್ರಶಸ್ತಿಗಳು ಕಾರಣವಾಗುವುದಾದರೆ ಪ್ರಶಸ್ತಿಗಳು ಇರಲಿ. ಅರ್ಹತೆ ಇದ್ದವರನ್ನು ಹಿಂದಿಕ್ಕಿ ವಾಮಮಾರ್ಗಗಳಿಂದ ಪ್ರಶಸ್ತಿಗಳನ್ನು ಪಡೆಯುವವರೇ ಹೆಚ್ಚಾದರೆ ಅಂತಹ ಪ್ರಶಸ್ತಿಗಳಿಗೆ ದಿಕ್ಕಾರವಿರಲಿ. ಸ್ವಾರ್ಥಕ್ಕಾಗಿ, ವ್ಯಾಪಾರಕ್ಕಾಗಿ ಅಥವಾ ಲಾಭಕ್ಕಾಗಿ ಪ್ರಶಸ್ತಿಗಳನ್ನು ಹಂಚುವವರು ಹಾಗೂ ಪಡೆಯುವವರು ಅವರೆಂತವರೇ ಆದರೂ ಪ್ರಶಸ್ತಿಗಳಿಗೆ ಕಳಂಕವನ್ನು ತರುವಂತವರು. ಇಂತವರಿಂದಾಗಿಯೇ ಇಂದು ಸರಕಾರಿ ಹಾಗೂ ಖಾಸಗಿ ಪ್ರಶಸ್ತಿಗಳು ಅಪಮೌಲ್ಯಗೊಂಡಿವೆ. ತಮ್ಮ ಬೆಲೆಯನ್ನು ಕಳೆದುಕೊಂಡಿವೆ.
ಇತ್ತೀಚೆಗೆ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿರವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬಂದಿತು. ಬಹುತೇಕ ಜನರಿಗೆ ಈ ಕೈಲಾಶ್ ಸತ್ಯಾರ್ಥಿ ಯಾರೆಂದೇ ಗೊತ್ತಿರಲಿಲ್ಲ. ಅವರು ನೊಬೆಲ್ ಬೇಕೆಂದು ಅರ್ಜಿಯನ್ನು ಹಾಕಿಕೊಂಡಿರಲಿಲ್ಲ. ಅವರ ಸಾಮಾಜಿಕ ಸೇವೆ, ಬದ್ಧತೆ ಮತ್ತು ಪರಿಶ್ರಮಗಳನ್ನು ನಮ್ಮ ದೇಶದವರು ಗುರುತಿಸದಿದ್ದರೂ ಸ್ವಿಡಿಶ್ ದೇಶದ ನೊಬೆಲ್ ಆಯ್ಕೆ ಕಮಿಟಿಯು ಸತ್ಯಾರ್ಥಿಯವರ ಸಾಧನೆ ಗಮನಿಸಿ ನೊಬೆಲ್ ಪ್ರಶಸ್ತಿಯನ್ನು ಕೊಟ್ಟರು. ಇದರಿಂದಾಗಿ ನೊಬೆಲ್ ಪ್ರಶಸ್ತಿಯ ಮೌಲ್ಯ ಹೆಚ್ಚಿದಂತಾಯಿತು. ನಮ್ಮ ರಾಷ್ಟ್ರಕವಿ ಕುವೆಂಪುರವರು, ಹೆಗ್ಗೋಡಿನ ರಂಗಕರ್ಮಿ ಕೆ.ವಿ.ಸುಬ್ಬಣ್ಣನಂತಹ ಕೆಲವು ನಿಜವಾದ ಅಪ್ಪಟ ಪ್ರತಿಭಾವಂತರು ಎಂದೂ ಪ್ರಶಸ್ತಿಗಾಗಿ ಹಾತೊರೆಯಲಿಲ್ಲವಾದರೂ ಪ್ರಶಸ್ತಿಗಳು ಹುಡುಕಿಕೊಂಡು ಬಂದು ತಮ್ಮ ಬೆಲೆಯನ್ನು ಹೆಚ್ಚಿಸಿಕೊಂಡವು. ಪ್ರಶಸ್ತಿಗಳನ್ನು ಎಂತವರಿಗೆ ಕೊಡಬೇಕೆಂದರೆ ಅದನ್ನು ಕೊಟ್ಟವರಿಗಿಂತಲೂ ಪ್ರಶಸ್ತಿ ತನ್ನ ಮೌಲ್ಯವನ್ನು ತಾನೇ ಹೆಚ್ಚುವಂತಿರಬೇಕು. ಅಂತಹ ಸಾಧಕರನ್ನು ಹುಡುಕಿ ಪ್ರಶಸ್ತಿ ಪುರಸ್ಕಾರ ಸನ್ಮಾನಗಳನ್ನು ಕೊಡಬೇಕು.
ಪ್ರಶಸ್ತಿ ತಿರಸ್ಕರಿಸಿದ್ದ ಶಾಂತರಸರು : ಕನ್ನಡ ನಾಡಿನ ಹೆಮ್ಮೆಯ ಕವಿ ಸಾಹಿತಿ ಶಾಂತರಸರಿಗೆ ಸರಕಾರ ದಶಕದ ಹಿಂದೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿತ್ತು. ಆದರೆ ಶಾಂತರಸರು ಆ ಪ್ರಶಸ್ತಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. “ಕನ್ನಡ ನಾಡು ನುಡಿಗೆ ಪೂರಕವಲ್ಲದ ಆಡಳಿತ ವ್ಯವಸ್ಥೆ ಕೊಡುವ ಪ್ರಶಸ್ತಿ ಬೇಕಾಗಿಲ್ಲ. ಆಡಳಿತ ಕನ್ನಡೀ
ಬೇಕಾಬಿಟ್ಟಿ ಪ್ರಶಸ್ತಿ ಹಂಚಿಕೆ : ಪ್ರಶಸ್ತಿಯ ಕೆಲವು ಪ್ರಹಸನಗಳನ್ನಿಲ್ಲಿ ಉದಾಹರಿಸಬಹುದಾಗಿದೆ. ಇತ್ತೀಚೆಗೆ ರಂಗಮಿತ್ರನೊಬ್ಬ ಇಬ್ಬರು ಮಹನೀಯರಿಗೆ ರಂಗಪ್ರಶಸ್ತಿ ಘೋಷಿಸಿ ಪ್ರಧಾನ ಮಾಡಿಸಿದ. ಅದರಲ್ಲಿ ಒಂದು ರಂಗವಿಮರ್ಶೆಗೆ ಸಂದ ಪ್ರಶಸ್ತಿ, ಆದರೆ ಅದನ್ನು ಕೊಟ್ಟಿದ್ದು ರಂಗವಿಮರ್ಶೆ ಬರೆಯುವವರಿಗಲ್ಲ ಪತ್ರಕರ್ತರಿಗೆ. ಇನ್ನೊಂದು ಅತ್ಯುತ್ತಮ ನಾಟಕಕಾರ ಪ್ರಶಸ್ತಿ. ಇದೂ ಕೂಡಾ ಸಂದಿದ್ದು ನಾಟಕದ ಅನುವಾದಕನಾಗಿ ಹೆಸರು ಮಾಡಿದವರೊಬ್ಬರು ಬರೆದ ಅತ್ಯಂತ ಕೆಟ್ಟ ನಾಟಕಕ್ಕೆ. ಇದರರ್ಥ ಈ ಇಬ್ಬರೂ ಅಯೋಗ್ಯರು ಎಂದು ಅರ್ಥವಲ್ಲ. ಅವರ ಕ್ಷೇತ್ರವೇ ಬೇರೆ, ಪ್ರಶಸ್ತಿ ಕೊಟ್ಟಿದ್ದೇ ಬೇರೆ ವಿಷಯಕ್ಕೆ. ಯಾಕೆ ಹೀಗೆ.... ಎಂದು ಕೇಳಿದರೆ ಬರುವ ಸಮರ್ಥನೆಗಳೇ ಬೇರೆ, ಅದರ ಹಿಂದಿರುವ ತಂತ್ರಗಾರಿಕೆಯೇ ಬೇರೆ.
ಕಳೆದ ಎರಡು ತಿಂಗಳ ಹಿಂದೆ ಪತ್ರಕರ್ತರ ಸಮಾವೇಶವೊಂದು ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರಬಂಧವೊಂದನ್ನು ಮಂಡಿಸಲು ನನ್ನನ್ನು ಆಹ್ವಾನಿಸಲಾಗಿತ್ತು. ನನ್ನ ಜೊತೆಗೆ ಶೂದ್ರ ಶ್ರೀನಿವಾಸರವರೂ ವೇದಿಕೆಯಲ್ಲಿದ್ದರು. ವಿಚಾರ ಸಂಕಿರಣದ ನಂತರ ನಮಗೆಲ್ಲಾ ಒಂದೊಂದು ಪ್ರಶಸ್ತಿ ಫಲಕವನ್ನು ಕೊಡಲಾಯಿತು. ಅದರಲ್ಲಿ ನಮ್ಮ ಪೊಟೋ ಹಾಗೂ ದೊಡ್ಡದಾಗಿ “ರಾಷ್ಟ್ರೀಯ ಭೂಷಣ ರಾಷ್ಟ್ರ ಪ್ರಶಸ್ತಿ” ಅಚ್ಚಿಸಲಾಗಿತ್ತು. ವೇದಿಕೆಯ ಮೇಲಿದ್ದ ಇನ್ನೂ ಐದು ಜನರಿಗೂ ಅಂತಹುದೇ ಪ್ರಶಸ್ತಿ ಫಲಕ ಕೊಡಲಾಯಿತು. ಅದನ್ನು ನೋಡಿ ನಾನು ಹಾಗೂ ಶೂದ್ರ ಇಬ್ಬರೂ ದಿಗ್ಬ್ರಮೆಗೊಂಡೆವು. ಮುಖ ಮುಖ ನೋಡಿಕೊಂಡೆವು. ಯಾಕೆಂದರೆ ಇದು ಪ್ರಶಸ್ತಿ ಪ್ರಧಾನ ಸಮಾರಂಭವಾಗಿರಲಿಲ್ಲ. ನಮಗ್ಯಾರಿಗೂ ರಾಷ್ಟ್ರ ಪ್ರಶಸ್ತಿ ಕೊಡುತ್ತೇವೆ ಎಂದೂ ತಿಳಿಸಿರಲಿಲ್ಲ. ವೇದಿಕೆಯ ಎಡಪಕ್ಕಕ್ಕೆ ತಿರುಗಿ ನೋಡಿದರೆ ಅಂತಹ ಫಲಕಗಳು, ಪ್ರಶಸ್ತಿಯ ಮೊಮೆಂಟೋಗಳು ನೂರಾರಿದ್ದವು. ಎಲ್ಲದರ ಮೇಲೂ “ರಾಷ್ಟ್ರೀಯ ಭೂಷಣ ರಾಷ್ಟ್ರ ಪ್ರಶಸ್ತಿ” ಎಂದೇ ನಮೂದಾಗಿತ್ತು. ಆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ನೃತ್ಯಕಲಾವಿದರಿಗೆಲ್ಲರಿಗೂ ಈ ಸೋ ಕಾಲ್ಡ್ ಪ್ರಶಸ್ತಿ ಫಲಕ ಕೊಡಬೇಕಾದ ಮಹನೀಯರು ಬಂದಿರಲಿಲ್ಲ. ಅದೂ ಕೂಡಾ ವೇದಿಕೆಯ ಮೇಲಿದ್ದ ನಮ್ಮ ಪಾಲಿಗೆ ಬಂದಿತ್ತು. ಮರಿ ಕಿರಿ ಚಿಂಟು ಚಿಲ್ಟು ಮಕ್ಕಳಿಗೆಲ್ಲಾ “ರಾಷ್ಟ್ರೀಯ ಭೂಷಣ ರಾಷ್ಟ್ರ ಪ್ರಶಸ್ತಿ” ಕೊಡುವ ಸೌಭಾಗ್ಯ ನಮ್ಮದಾಗಿತ್ತು. ಅದ್ಯಾಕೋ ನನಗೆ ರೇಜಿಗೆ ಅನ್ನಿಸಿತು. ಪ್ರಶಸ್ತಿಗಳನ್ನ ಹೀಗೆ ಕಡಲೆ ಪುರಿಯ ಹಾಗೆ ಹಂಚುವುದನ್ನು ಕಂಡಾಗ ಪ್ರಶಸ್ತಿಗಳ ಮೌಲ್ಯ ಇಷ್ಟೊಂದು ಅಪಮೌಲ್ಯಗೊಂಡಿತಾ ಎಂದು ಬೇಸರವೆನ್ನಿಸಿತು. ಹಿಂದೆ ಸರಿದು ನಿಂತೆ, ಉಳಿದವರಿಗೆ ಈ ಲೋಕಲ್ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಲು ಅವಕಾಶಮಾಡಿಕೊಟ್ಟೆ. ಮೆತ್ತಗೆ ಅಲ್ಲಿಂದ ಜಾರಿಕೊಂಡೆ. ವೇದಿಕೆಯಲ್ಲಿ ಆಯೋಜಕರ ಜೊತೆ ಪ್ರಶಸ್ತಿ ಪ್ರಹಸನದ ಪೊಟೋ ಸೇಶನ್ ಮುಂದುವರೆದಿತ್ತು.
ಪ್ರಶಸ್ತಿಗಳ ಮೌಲ್ಯ ಹೆಚ್ಚಿಸುವುದಾದರೂ ಹೇಗೆ? :
ಸರಕಾರಿ ಪ್ರಶಸ್ತಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಹಸ್ತಕ್ಷೇಪವನ್ನು ಮೊದಲು ನಿಷೇಧಿಸಬೇಕು. ಸರಕಾರಿ ಅಧಿಕಾರಿಗಳನ್ನು ಪ್ರಶಸ್ತಿ ಆಯ್ಕೆ ಪ್ರಕ್ರಿಯೆಇಂದಲೇ ದೂರವಿರಿಸಬೇಕು. ಈ ಸಲ ಸಿದ್ದರಾಮಯ್ಯನವರು ಆ ಕೆಲಸ ಮಾಡಿದರಾದರೂ ಆಯ್ಕೆಯ ಅಂತಿಮ ನಿರ್ಧಾರವನ್ನು ಮತ್ತೆ ಸಂಸ್ಕೃತಿ ಮಂತ್ರಿಣಿ ಕೈಗೆ ಇತ್ತರು. ಇದರಿಂದಾಗಿ ಆಯ್ಕೆ ಕಮಿಟಿಯಲ್ಲಿ ಉಮಾಶ್ರೀ ಮೂಗು ತೂರಿಸಿದರು. ಸರಕಾರಿ ಅಧಿಕಾರಿಗಳು ತಮ್ಮ ಪ್ರಭಾವ ಬೀರಿದರು. ಇದರಿಂದಾಗಿ ಸಿದ್ದರಾಮಯ್ಯನವರ ಆಶಯ ಹಳ್ಳಹಿಡಿಯಿತು. ಸರಕಾರ ಪ್ರಶಸ್ತಿಗಳನ್ನು ಕೊಡುವಾಗ ವಯಸ್ಸಾದ ಹಿರಿಯರಿಗೆ ಬಹುತೇಕ ಪ್ರಾಶಸ್ತ್ಯವನ್ನು ಕೊಡಬೇಕು ಎನ್ನುವ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿದೆ. ಇದು ಹಲ್ಲಿಲ್ಲದಾಗ ಕಡಲೆ ಕೊಟ್ಟಂತ ಪರಿಸ್ಥಿತಿ. ಈ ಬಾರಿ ಶೂದ್ರ ಶ್ರೀನಿವಾಸರವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಾಗ ಸಾಹಿತ್ಯಲೋಕದ ಜನ ಹೇಳಿದ್ದೇನೆಂದರೆ ‘ಈ ಪ್ರಶಸ್ತಿ ಅವರಿಗೆ ಎಂದೋ ಬರಬೇಕಾಗಿತ್ತು’ ಎಂದು. ಇನ್ನು ಕೆಲವರು ‘ಇಲ್ಲಿವರೆಗೂ ಅವರಿಗೆ ಪ್ರಶಸ್ತಿ ಬಂದೇ ಇರಲಿಲ್ಲವಾ ಎಂಥಾ ಅನ್ಯಾಯ’ ಎಂದು ಹಳಹಳಿಸಿದರು. ಜೆ.ಲೋಕೇಶ್ ಆಗಿನ ಕಾಲದಲ್ಲಿ ರಂಗಭೂಮಿಯಲ್ಲಿ ಪಾದರಸದಂತಹ ರಂಗಸಂಘಟಕ. ವ್ಯಕ್ತಿ ಕ್ರಿಯಾಶೀಲವಾಗಿದ್ದಾಗ ಆತನ ಸೃಜನಶೀಲತೆಗೆ ಪ್ರೇರೇಪನೆ ಕೊಡುವಂತೆ ಪ್ರಶಸ್ತಿಗಳನ್ನು ಕೊಟ್ಟು ಪ್ರೋತ್ಸಾಹಿಸಿದರೆ ಇನ್ನೂ ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯ. ಅದು ಬಿಟ್ಟು ತೀವ್ರವಾಗಿ ಪರಿಶ್ರಮ ಪಡುವಾಗ ನಿರ್ಲಕ್ಷಿಸಿ ಕೊನೆಗೆ ಎಲ್ಲಾ ಕ್ರಿಯಾಶೀಲತೆ ಮುಗಿದು ವಿಶ್ರಾಂತರಾದಾಗ ಪ್ರಶಸ್ತಿಗಳನ್ನು ಕೊಡುವುದು ಕೆಟ್ಟ ಸಂಪ್ರದಾಯ. ಅದರಿಂದ ಸಮಾಜಕ್ಕೆ ಏನೇನೂ ಉಪಯೋಗವಿಲ್ಲ. ಸಾಧನೆ ಮಾಡಿದವರನ್ನು ಕರೆದು ಸನ್ಮಾನಿಸಲಿ, ಗೌರವಿಸಲಿ ಆದರೆ ಪ್ರಶಸ್ತಿಗಳನ್ನು ಮಾತ್ರ ವ್ಯಕ್ತಿ ಇನ್ನೂ ಕ್ರಿಯಾಶೀಲವಾಗಿದ್ದಾಗಲೇ ಕೊಡಮಾಡಲಿ. ಆದರೆ ಪ್ರಶಸ್ತಿಯನ್ನು ಮಾತ್ರ ಇನ್ನೂ ಕ್ರಿಯಾಶೀಲವಾಗಿ ಕೆಲಸಮಾಡುವ ಪ್ರತಿಭಾವಂತರಿಗೆ ದೊರಕುವಂತಾಗಲಿ.
ಸರಕಾರಿ ಪ್ರಶಸ್ತಿಗಳಿಗಾಗಿ ಸಂಸ್ಕೃತಿ ಇಲಾಖೆಗೆ ಸಾಧಕರು ಅರ್ಜಿಗುಜರಾಯಿಸುವಂತಹ ಅವಮಾನಕಾರಿ ವ್ಯವಸ್ಥೆ ಮೊದಲು ರದ್ದಾಗಬೇಕಿದೆ. ನಿಜವಾದ ಸ್ವಾಭಿಮಾನ ಇರುವ ಯಾವುದೇ ಸಾಧಕ ನನಗೊಂದು ಪ್ರಶಸ್ತಿ ಕೊಡಿ ಎಂದು ಬೇಡಿಕೊಳ್ಳುವುದಿಲ್ಲ. ಹಾಗೆ ಬೇಡಿಕೆ ಇಡುವವರನ್ನು ಜನ ಅನುಮಾನದಿಂದ ನೋಡುತ್ತಾರೆ. ಸರಕಾರವೇ ಪ್ರಶಸ್ತಿ ಆಯ್ಕೆಗೆ ಯೋಗ್ಯರ ಒಂದು ಕಮಿಟಿ ಮಾಡಿ ಅವರ ಹೆಸರನ್ನು ಗುಪ್ತವಾಗಿಡಬೇಕು. ಈ ಕಮಿಟಿ ಆಯ್ಕೆ ಮಾಡಿದ ಪಟ್ಟಿಯಲ್ಲಿ ಇಲಾಖೆ ಮಂತ್ರಿ ಅಷ್ಟೇ ಅಲ್ಲ ಮುಖ್ಯಮಂತ್ರಿಗೂ ಮೂಗು ತೂರಿಸಲು ಅವಕಾಶ ಇಲ್ಲದಾಗಬೇಕು. ಆಯ್ಕೆ ಕಮಿಟಿಯ ಸದಸ್ಯರ ಹೆಸರು ಬಹಿರಂಗಗೊಂಡರೆ ಅವರ ಮೇಲೆ ಹಲವು ದಿಕ್ಕಿನಿಂದ ಒತ್ತಡ ತರುವ ಬ್ರಹಸ್ಪತಿಗಳು ಬೇಕಾದಷ್ಟಿದ್ದಾರೆ. ಪ್ರಶಸ್ತಿ ಆಯ್ಕೆಯಲ್ಲಿ ಪ್ರತಿಭೆ, ಸಾಧನೆ, ಪರಿಶ್ರಮ ಹಾಗೂ ಸಾಮಾಜಕ್ಕೆ ಕೊಟ್ಟ ಕೊಡುಗೆಯನ್ನು ಮಾತ್ರ ಪರಿಗಣಿಸಬೇಕೆ ಹೊರತು ವಯಸ್ಸು, ಜಾತಿ, ಧರ್ಮ, ಜನಬಲ, ಹಣಬಲ, ತೋಳ್ಬಲಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲೇಬಾರದು.
ಯಾರು ಸರಕಾರಿ ಪ್ರಶಸ್ತಿ ಪಡೆಯಲು ಲಾಭಿ ಮಾಡುತ್ತಾರೋ, ರೆಕಮೆಂಡೇಶನ್ ತರುತ್ತಾರೋ, ಒತ್ತಡಗಳನ್ನು ಹೇರುತ್ತಾರೋ ಅಂತವರು ಅದೆಷ್ಟೇ ದೊಡ್ಡ ಸಾಧಕರಾದರೂ ಅವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗದು ಎಂದು ಸರಕಾರವೇ ಪ್ರಶಸ್ತಿ ಆಯ್ಕೆ ಕಮಿಟಿಗೆ ಸ್ಪಷ್ಟ ಆದೇಶವನ್ನು ಕೊಡಬೇಕು. ಹೀಗಾದಾಗ ಆಯ್ಕೆ ಕಮಿಟಿ ಒತ್ತಡ ರಹಿತವಾಗಿ ಅರ್ಹರಿಗೆ ಪ್ರಶಸ್ತಿಗಳನ್ನು ಕೊಡಲು ಸಾಧ್ಯವಾಗುತ್ತದೆ. ಪ್ರಶಸ್ತಿಗಳು ಪಾರದರ್ಶಕವಾಗಿತ್ತವೆ.
ಪ್ರಶಸ್ತಿಗಳನ್ನು ಆಯ್ಕೆ ಮಾಡುವ ಕಮಿಟಿ ಬೆಂಗಳೂರಿನ ಎಸಿ ರೂಮಿನಲ್ಲಿ ಕುಳಿತು ಬಂದ ಅರ್ಜಿಗಳಲ್ಲಿ ಕೆಲವು ಹೆಸರುಗಳನ್ನು ಪೈನಲ್ ಮಾಡುವುದನ್ನು ಮೊದಲು ಬಿಡಬೇಕು. ಯಾವ ಕ್ಷೇತ್ರದಲ್ಲಿ ಯಾರು ಸಾಧಕರಿದ್ದಾರೆ, ಅವರಲ್ಲಿಯೇ ಹೆಚ್ಚು ಯೋಗ್ಯರು ಯಾರಿದ್ದಾರೆ ಎನ್ನುವುದನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕು. ಸಾಧಕರ ಪ್ರದೇಶಗಳಿಗೆ ಹೋಗಿ ಅವರು ಮಾಡಿದ ಸಾಧನೆಯನ್ನು ಪ್ರಾತ್ಯಕ್ಷಿಕವಾಗಿ ನೋಡಿ ಅನುಭವಿಸಿ ಅರಿಯಬೇಕು. ಯಾಕೆ ಇಂತವರಿಗೆ ಪ್ರಶಸ್ತಿ ಕೊಟ್ಟಿದ್ದೀರಿ ಎಂದು ಯಾರಾದರೂ ಪ್ರಶ್ನಿಸಿದರೆ ಸಮರ್ಥಿಸಿಕೊಳ್ಳಲು ಸೂಕ್ತ ಸಾಕ್ಷಾಧಾರಗಳು ಇರಬೇಕು. ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ವ್ಯಕ್ತಿ-ಹೆಸರು ಮುಖ್ಯವಾಗದೇ ಸಾಧನೆ ಮಾತ್ರ ಪರಿಗಣಿಸಬೇಕು.
ಪ್ರಶಸ್ತಿ ಕೊಡುವುದರ ಹಿಂದಿರುವ ಉದ್ದೇಶವನ್ನು ಕೊಡುವವರು ಅರಿಯುವುದುತ್ತಮ. ಸಾಧಕರನ್ನು ಪ್ರೋತ್ಸಾಹಿಸುವುದು, ಪ್ರತಿಭಾನ್ವಿತರನ್ನು ಗುರುತಿಸಿ ಸಮಾಜಕ್ಕೆ ಅವರ ಸಾಧನೆಯ ಬಗ್ಗೆ ತಿಳಿಸಿ ಬೇರೆಯವರಿಗೂ ಮಾದರಿಗಳನ್ನು ತೋರಿಸುವುದು. ಸಾಹಿತ್ಯ, ಕಲೆ, ಸಂಸ್ಕೃತಿ, ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕೆಲಸಗಳು ಆಗುವ ಹಾಗೆ ಪ್ರೇರೇಪಿಸುವುದು ಪ್ರಶಸ್ತಿಯ ಹಿಂದಿರುವ ಮುಖ್ಯ ಆಶಯವಾಗಬೇಕು.
ಪ್ರಶಸ್ತಿ ಕೊಡುವುದನ್ನೇ ದಂದೆ ಮಾಡಿಕೊಂಡವರ ಬಗ್ಗೆ ಸಾಧಕರು ಎಚ್ಚರದಿಂದಿರಬೇಕು. ಸ್ವಂತ ಲಾಭಕ್ಕಾಗಿ ಅಥವಾ ತಮ್ಮ ವ್ಯಾಪಾರೋಧ್ಯಮದ ವಿಸ್ತರಣೆಗೆ ಪೂರಕವಾಗಿ ಪ್ರಶಸ್ತಿಗಳನ್ನು ಕೊಡುವ ದಂದೆ ಕೋರರಿಂದ ಒಂದು ಅಂತರ ಕಾಪಾಡಿಕೊಳ್ಳಬೇಕು. ಅವರು ಕೊಡುವ ಹಣ, ಪದಕ, ಬಿರುದು, ಸನ್ಮಾನಗಳಿಗೆ ಆಸೆ ಬಿದ್ದರೆ ತಮ್ಮತನವನ್ನು ವ್ಯಾಪಾರಿಗಳಿಗೆ ಮಾರಿಕೊಂಡಂತಾಗುತ್ತದೆ. ಸಾಧಕರ ಹೆಸರನ್ನು ಬಳಸಿ ಲಾಭ ಮಾಡಿಕೊಳ್ಳಲು ದಂದೆಕೋರರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಯಾರೇ ಪ್ರಶಸ್ತಿಗಳನ್ನು ಕೊಡುತ್ತೇವೆ ಎಂದು ಬಂದರೆ ಮೊದಲು ಅವರ ಹಿನ್ನಲೆ ಏನು? ಅವರ ಉದ್ದೇಶ ಏನಿದೆ? ಯಾಕೆ ಪ್ರಶಸ್ತಿಯನ್ನು ಕೊಡುತ್ತಿದ್ದಾರೆ? ಅದರಿಂದ ಅವರಿಗೆ ಆಗುವ ಲಾಭವೆಷ್ಟು? ಆಯೋಜಕರು ಪ್ರಶಸ್ತಿ ಕಾರ್ಯಕ್ರಮಕ್ಕೆ ಹಣ ಕೇಳುತ್ತಿದ್ದಾರೆಂದರೆ ಹಣ ಕೊಟ್ಟು ಪ್ರಶಸ್ತಿಯನ್ನು ಕೊಡುವುದು ಅದೆಷ್ಟು ಸಮರ್ಥನೀಯ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮರ್ಥ ಉತ್ತರ ಕಂಡುಕೊಂಡನಂತರವೇ ಸಾಧಕರು ಅನುಮತಿಯನ್ನು ಕೊಡುವುದು ಉತ್ತಮ. ಹಾಗೆಯೇ ಇಂತಹ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಅತಿಥಿಗಳಾಗಿ ಹೋಗುವ ಗಣ್ಯಮಾನ್ಯ ಸಾಹಿತಿ ಕಲಾವಿದರುಗಳು ಬಲು ಎಚ್ಚರದಿಂದಿರಬೇಕು. ಯಾಕೆಂದರೆ ಅದೆಷ್ಟೋ ವರ್ಷದ ಶ್ರಮದಿಂದ ಗಳಿಸಿದ ಹೆಸರಿಗೆ ಕಳಂಕ ಮೆತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರಶಸ್ತಿ ಆಯೋಜಕರ ನಿಜವಾದ ಉದ್ದೇಶ ಅರಿಯದೇ ಆತುರಕ್ಕೆ ಬಿದ್ದೋ, ಇಲ್ಲವೇ ಅವರು ಕೊಡಮಾಡುವ ಸನ್ಮಾನ ಪದಕ ಹಣಕ್ಕೆ ಆಸೆ ಬಿದ್ದೋ ಹೋದರೆ ಯಾರದೋ ಸ್ವಾರ್ಥಕ್ಕೆ ಬಳಕೆಯಾದರೆಂದೇ ಲೆಕ್ಕ.
ಜನವಿರೋಧಿ, ಜೀವವಿರೋಧಿ, ಸಮಾಜವಿರೋಧಿ ಶಕ್ತಿಗಳೂ ಸಹ ತಮ್ಮ ಪಾತಕತನವನ್ನು ಮುಚ್ಚಿಕೊಂಡು ಸಾಚಾತನವನ್ನು ತೋರಿಸಿಕೊಳ್ಳಲು ಪ್ರಶಸ್ತಿ, ಸನ್ಮಾನ ಸಮಾರಂಭಗಳನ್ನು ಆಗಾಗ ಆಯೋಜಿಸುತ್ತಾರೆ. ಬಂಡವಾಳಶಾಹಿಗಳು, ಕಾರ್ಪೋರೇಟ್ ಶೋಷಕರು ಸಹ ತಾವು ಜನಪರ ಎಂದು ತೋರಿಸಿಕೊಳ್ಳಲು ಪ್ರಶಸ್ತಿಗಳನ್ನು ಕೊಡಮಾಡುವುದನ್ನು ಆರಂಭಿಸಿದ್ದಾರೆ, ಇದರ ಜೊತೆಗೆ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ದಲ್ಲಾಳಿ ವರ್ಗವೊಂದು ಪ್ರಶಸ್ತಿ ಪ್ರಧಾನ ಸಮಾರಂಭಗಳಿಂದಲೇ ಹಣ ಮಾಡುವ ದಂದೆಯನ್ನು ಆರಂಭಿಸಿವೆ. ಕೆಲವಾರು ಮಠ ಮಾನ್ಯರೂ ಸಹ ತಮ್ಮ ಧಾರ್ಮಿಕ ಶೋಷಣೆಯನ್ನು ಮರೆಮಾಚಲು ಅನೇಕ ಸಾಧಕರನ್ನು ಕರೆಸಿ ಪ್ರಶಸ್ತಿಕೊಡುವುದನ್ನು ರೂಢಿಸಿಕೊಂಡಿದ್ದಾರೆ. ಇಂತವರ ಹಿಡನ್ ಉದ್ದೇಶಗಳನ್ನು ಅರಿಯದೇ ಪ್ರಶಸ್ತಿ ಪಡೆಯುವುದು ಇಲ್ಲವೇ ಅಂತಹ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸುವುದು ಆ ಎಲ್ಲಾ ಶೋಷಕ ಶಕ್ತಿಗಳಿಗೆ ಉತ್ತೇಜನ ಕೊಟ್ಟಂತಾಗುತ್ತದೆ. ಇಂತಹುದರ ನಡುವೆಯು ಕೆಲವು ನಿಜವಾದ ಜನಪರ ಸಂಘಟನೆಗಳು ಪ್ರಶಸ್ತಿಗಳನ್ನು ಕೊಡಮಾಡುತ್ತವೆ. ಅಂತವರ ಉದ್ದೇಶ ಜನಮುಖಿಯಾಗಿರುತ್ತದೆ. ಅಂತವರೊಂದಿಗೆ ಗುರುತಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ನೊಣ ತಿಂದು ಕುಲಗೆಟ್ಟರು ಎನ್ನುವಂತೆ ಯಾವುದೋ ಆಮಿಷಕ್ಕೆ ಬಲಿಯಾಗಿ ಸಮಾಜವಿರೋಧಿ ವ್ಯಕ್ತಿಗಳು ಇಲ್ಲವೇ ಶಕ್ತಿಗಳಿಂದ ಸಾಧಕರು ಪ್ರಶಸ್ತಿ, ಪುರಸ್ಕಾರ ಸನ್ಮಾನಗಳನ್ನು ಪಡೆದು ಸಂಭ್ರಮಿಸಿದರೆ ತಮ್ಮನ್ನು ತಾವೇ ಅಪಮೌಲ್ಯೀಕರಣ ಮಾಡಿಕೊಂಡಂತೆ. ಯಾವುದೇ ಪ್ರಶಸ್ತಿ ಪುರಸ್ಕಾರ ಗೌರವಗಳು ಸಮಾಜಮುಖಿಯಾಗಿರಬೇಕೆ ಹೊರತು ವ್ಯಾಪಾರೀಕರಣವಾಗಿರಬಾರದು. ಈ ಸತ್ಯವನ್ನು ಪ್ರಶಸ್ತಿದಾತರು ಹಾಗೂ ಪ್ರಶಸ್ತಿ ಪಡೆಯುವವರು ಅರಿತುಕೊಂಡರೆ ಪ್ರಶಸ್ತಿಗಳಿಗೆ ಮರ್ಯಾದೆ.
ಈ ಪ್ರಶಸ್ತಿ ಪ್ರಹಸನಗಳನ್ನು, ಲಾಬಿಕೋರತನವನ್ನು, ಅವಕಾಶವಾದವನ್ನೂ ನೋಡುತ್ತಿದ್ದರೆ ನೆನಪಾಗುವುದು ಡಾ.ಜಿಎಸ್ಶಿವರುದ್ರಪ್ಪನವರ ರವರ ಕವಿವಾಣಿ.
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು..
ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.
ಪ್ರಶಸ್ತಿಗಳ ಕುರಿತು ಪೇಸ್ಬುಕ್ನಲ್ಲಿ ದಾಖಲಾದ ಅನಾಮಿಕ ಕವಿತೆ :
ಪ್ರಶಸ್ತಿಗಳು ಬೇಕೆ ಹೊಗಳಿ ಗೆದ್ದ ಪಕ್ಷಗಳನ್ನು
ಒಡನಾಟಗಳೆಲ್ಲಾ ಸಿರಿವಂತರ ಜೊತೆಗಿರಲಿ
ಪ್ರಚಾರದಲ್ಲಿರುವವರ ಜೊತೆಗೆ ಭಾವಚಿತ್ರಗಳಿರಲಿ
ಬಿಡುಗಡೆ ಮಾಡಿ ಐದಾರು ಪುಸ್ತಕಗಳನ್ನು
ಬರಹದ ತಿರುಳು ಯಾರಿಗೂ ಗೋಚರಿಸದಿರಲಿ
ಮೇಧಾವಿಗಳ ಬಣ್ಣನೆಯ ವಿಮರ್ಶೆ ಇರಲಿ.
ನಿಂದನೆಗಳೆಲ್ಲಾ ಪ್ರಕಟನೆಯಿಂದ ದೂರವಿರಲಿ
ಹಿಂಬಾಲಕರು, ಗುಂಪುಗಾರಿಕೆ ಜೊತೆಯಲ್ಲಿರಲಿ
ಹೀಗಾದರೆ ನೀವೀಗ ಪ್ರಶಸ್ತಿಗೆ ಯೋಗ್ಯರು !
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ