ಭಾನುವಾರ, ಮಾರ್ಚ್ 23, 2014

ಸಂಸ್ಕೃತಿ ಇಲಾಖೆ ಅಧಿಕಾರಿಗಳ ಕೊರಳಿಗೆ ‘ಪದಕ ಹಗರಣ’ದ ಉರುಳು.


                                   


        ಎಲ್ಲಾ ಮಾಯವೋ ಶಿವನೆ ಪದಕ ಮಾಯವೋ!.

ಬೇಲಿ ಎದ್ದು ಹೊಲ ಮೇಯುವುದೆಂತ ಲೀಲೆಯೋ!


ಬೇಲಿಯೇ ಎದ್ದು ಹೊಲ ಮೇಯುವುದು ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವದ ಬಹುದೊಡ್ಡ ಲೀಲೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ದೊಡ್ಡ ತಿಮಿಂಗಲುಗಳೇ ಇವೆ, ಎಲ್ಲವನ್ನೂ ನುಂಗಿ ನೀರು ಕುಡಿಯುತ್ತಿವೆ. ತಿಮಿಂಗಿಲುಗಳ ಜೊತೆಗೆ ಕೆಲವು ಸಾಂಸ್ಕೃತಿಕ ದಲ್ಲಾಳಿ ಹೆಗ್ಗಣಗಳು ಶಾಮೀಲಾಗಿವೆ ಎಂದು ಕೆಲವು ರಂಗಕರ್ಮಿಗಳು, ಪತ್ರಕರ್ತರು ಹೇಳಿದಾಗ ಇದೆಲ್ಲಾ ಮಾಮೂಲಿ ಬಿಡಿ ಎಂದು ನಿರ್ಲಕ್ಷಿಸಿದವರೇ ಜಾಸ್ತಿ.  ಆದರೆ ಈಗ ಇದು ಲೋಕಾಯುಕ್ತ ತನಿಖೆಯಿಂದ ಬಹಿರಂಗಗೊಂಡಿದೆ. ಪತ್ರಕರ್ತರು ಬರೆದಾಗ ಅದು ಕಟ್ಟುಕತೆ, ಇದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳುತ್ತ ಬಂದವರಿಗೆ ಈಗ ತನಿಖಾ ವರದಿ ಸರಿಯಾಗಿ ಉತ್ತರ ಕೊಟ್ಟಿದೆ. ಪ್ರಶಸ್ತಿ ಪದಕಗಳನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೇ ತಿಮಿಂಗಿಲುಗಳು ಸಿಕ್ಕಿಬಿದ್ದಿವೆ. ಪದಕ ಪ್ರಕರಣ ಈಗ ಹಗರಣವಾಗಿ ಬಯಲಾಗಿದೆ.

ಬಿಜೆಪಿ ಸರಕಾರದಲ್ಲಿ ಸಂಸ್ಕೃತಿ ಇಲಾಖೆಯ ಆಯಕಟ್ಟಿನ ಜಾಗದಲ್ಲಿ ಕುಳಿತ ಹಲವಾರು ತಿಮಿಂಗಿಲುಗಳು ಸಿಕ್ಕಿದ್ದನ್ನೆಲ್ಲಾ ನುಂಗುವುದನ್ನೇ ಕಾಯಕ ಮಾಡಿಕೊಂಡಿದ್ದವು. ಇಲಾಖೆಯ ಮಂತ್ರಿಯೇ ಇಂತವರಿಗೆ ರಕ್ಷಣೆಯನ್ನು ಕೊಡುತ್ತಾ ತಮ್ಮ ಪಾಲನ್ನು ಪಡೆಯುತ್ತಿದ್ದರು. . ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸರಕಾರಿ ಹಣವನ್ನು  ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೆಲವರು ಲೋಕಾಯುಕ್ತಕ್ಕೆ ಮೌಖಿಕ ದೂರನ್ನು ಕೊಟ್ಟರು. ಲೋಕಾಯುಕ್ತವು ಸ್ವಯಂಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ೨೦೧೩, ಜೂನ್ ೨೪ರಂದು ಕನ್ನಡಭವನಕ್ಕೆ ದಿಡೀರ್ ದಾಳಿಯಿಟ್ಟರು. ಆರಂಭಿಕ ತನಿಖೆ ಶುರುಮಾಡಿದ ಲೋಕಾಯುಕ್ತ ಪೊಲೀಸರಿಗೆ ಪ್ರಶಸ್ತಿ ಪದಕಗಳೇ ಕಾಣೆಯಾಗಿರುವುದು ಗೊತ್ತಾಯಿತು. ಇದು ಗೊತ್ತಾಗಿದ್ದೇ ತಡ ಸಾಂಸ್ಕೃತಿಕ ಲೋಕದ ದಿಗ್ಗಜರಿಂದ ಇಲಾಖೆಯ ವಿರುದ್ಧ ಹೇಳಿಕೆಗಳು ಬಂದು ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಡವೊಂದು ಸೃಷ್ಟಿಯಾಯಿತು. ಇಲಾಖೆಯ ಭ್ರಷ್ಟರನ್ನು ಕಾಪಾಡುತ್ತಿದ್ದ ರಾಜಕೀಯ ದೇವರುಗಳು ಬದಲಾಗಿದ್ದರು.  ಆದರೂ ನುಂಗಣ್ಣನವರ ರಕ್ಷಣೆಗೆ ಕೆಲವು ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಬೇಕಾದಷ್ಟು ಪ್ರಯತ್ನ ಪಟ್ಟರು. ಯಾಕೆಂದರೆ ಗೋಲಮಾಲ್ನಲ್ಲಿ ಅವರೂ ಪಾಲು ಪಡೆದಿದ್ದರು. ಯಾವಾಗ ಬಿಜೆಪಿ ಸರಕಾರ ತೊಲಗಿ ಚುನಾವಣೆ ನಡೆದು ಕಾಂಗ್ರೆಸ್ ಸರಕಾರ ಬಂತೋ ಆಗ ನುಂಗಣ್ಣನವರ ಪರ ಲಾಭಿ ಮಾಡುವವರ ತಾಕತ್ತು ಕಡಿಮೆಯಾಗಿತ್ತು. ತನಿಖೆಯ ಉರುಳು ಬಿಗಿಯಾಗತೊಡಗಿತು. ಆಗ ಸಂಸ್ಕೃತಿ ಇಲಾಖೆಯಿಂದ ಕೆಲವು ಮುಖ್ಯ ಪೈಲುಗಳೇ ಕಾಣೆಯಾದವು. ತನಿಖೆ ತೀವ್ರಗೊಂಡಿತು. ಇದಾಗಿ ಸರಿಯಾಗಿ ಒಂಬತ್ತು ತಿಂಗಳುಗಳು ಕಳೆದಿದ್ದು ಈಗ ಲೋಕಾಯುಕ್ತ ಪೊಲೀಸರಿಂದ ತನಿಖಾ ವರದಿಯ ಹೆರಿಗೆಯಾಗಿದೆ. ವರದಿಯನ್ನು ಈಗ ಲೋಕಾಯುಕ್ತ ವಿಶೇಷ ಕೋರ್ಟನಲ್ಲಿ ದಾಖಲಿಸಿಲಾಗಿದೆ.

ಏನದು ಪದಕ ಪ್ರಕರಣ? ಪ್ರತಿ ವರ್ಷ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಧಕರಿಗೆ ಕೊಡುತ್ತಾ ಬಂದಿದೆ. ಪ್ರಶಸ್ತಿಯ ಜೊತೆಯಲ್ಲಿ ನಗದು ಹಣ ಮತ್ತು ಚಿನ್ನದ ಪದಕವನ್ನು ಕೊಟ್ಟು ಆಯ್ಕೆಗೊಂಡ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ.  ಅರ್ಹ ಸಾಧಕರನ್ನು ಗುರುತಿಸುವುದು ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸುವುದು ಕನ್ನಡ ಮತ್ತು ಸಂಸೃತಿ ಇಲಾಖೆಯ ಹೊಣೆಗಾರಿಕೆ. ಪ್ರಶಸ್ತಿ ಬಂದವರಲ್ಲಿ ಕೆಲವರು ಯಾವುದೋ ಕಾರಣದಿಂದ  ಅದನ್ನು ಪಡೆಯಲು ಬರಲಾಗದಿದ್ದರೆ ಅವರ ಪದಕಗಳನ್ನು ಹಾಗೂ ಹೆಚ್ಚುವರಿಯಾಗಿ ಉಳಿದ ಪದಕಗಳನ್ನು ಇಲಾಖೆ ತನ್ನ ಸುಪರ್ಧಿಯಲ್ಲಿ ಸೇಫಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗೆ ಉಳಿದ ಚಿನ್ನದ ಪದಕಗಳ ಸಂಖ್ಯೆ ಒಟ್ಟು ಇಪ್ಪತೈದು. ಪೊಲೀಸರು ದಾಳಿ ಮಾಡಿದಾಗ ಸಿಕ್ಕಿದ್ದು ಕೇವಲ ಎರಡೇ ಪದಕಗಳು. ಬಾಕಿ ಎಲ್ಲಾ ಪದಕಗಳು ಇಲಾಖೆಯಿಂದ ಮಾಯವಾಗಿದ್ದವು. ಯಾವಾಗ ಲೋಕಾಯುಕ್ತ ಪೊಲೀಸರು ಎನಕ್ವಾಯರಿ ಶುರುಮಾಡಿದರೋ ಆಗ ಇದ್ದಕ್ಕಿದ್ದಂತೆ ಹದಿನೆಂಟು ಪದಕಗಳು ಪ್ರತ್ಯಕ್ಷವಾದವು. ಉಳಿದ ಇನ್ನೂ ಐದು ಪದಕಗಳು ಸುಳಿವೂ ಸಿಗದಂತೆ ನಾಪತ್ತೆಯಾಗಿವೆ. ಸಿಕ್ಕ ಚಿನ್ನದ ಪದಕಗಳಲ್ಲಿ ಇರುವ ಬಂಗಾರದ ಅಂಶವನ್ನು ಪರಿಶೀಲಿಸಿದಾಗ ಪದಕ ತಯಾರಿಸುವಾಗಲೇ ಒಂದಿಷ್ಟು ಪ್ರಮಾಣದ ಚಿನ್ನವನ್ನು ಕಡಿತಗೊಳಿಸಿ ನುಂಗಲಾಗಿತ್ತು. ಪದಕ ತಯಾರಿಸುವವರೊಂದಿಗೆ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ಬಹಿರಂಗಗೊಂಡಿತು. ಚಿನ್ನದ ಪದಕ ಪಡೆದ ಸಾಧಕರು ಯಾರೂ ಅದನ್ನು ತೂಕಕ್ಕೆ ಹಾಕಲು ಹೋಗುವುದಿಲ್ಲ. ಹೋದರೂ ಅದರಲ್ಲಿ ಎಷ್ಟು ಪ್ರಮಾಣದಲ್ಲಿ ಚಿನ್ನ ಇದೆಯೆಂಬುದನ್ನು ಇಲಾಖೆ ಯಾರಿಗೂ ಹೇಳಿರುವುದಿಲ್ಲ. ಹೀಗಾಗಿ ಸಾಧಕರಿಗೆ ಕೊಡುವ ಚಿನ್ನದ ಪದಕದಲ್ಲಿ ಒಂದಿಷ್ಟು ಚಿನ್ನವನ್ನು ಕದ್ದರೂ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ಪದಕ ಕಳ್ಳರ ಲೆಕ್ಕಾಚಾರವಾಗಿತ್ತು.

ಮನು ಬಳಿಗಾರ್
ಹೋಗಲಿ, ಇಲಾಖೆಯಲ್ಲಿ ಲೂಟಿ ಮಾಡಲು ಕೋಟಿ ಕೋಟಿಗಳೇ ಇರುವಾಗ ಜುಜುಬಿ ಪದಕಗಳನ್ನು ಕದ್ದವರಾರು? ಎಂಬುದು ಯಕ್ಷಪ್ರಶ್ನೆಯಾಗಿತ್ತು. ಯಾರೋ ಕೆಳಹಂತದ ಗುಮಾಸ್ತರ ಕೈವಾಡ ಇರಬಹುದೆಂಬ ಗುಮಾನಿಯಿಂದಲೇ ತನಿಖೆ ಶುರುವಾಗಿದ್ದು. ಆದರೆ ಕೆದಕುತ್ತಾ ಹೋದ ಹಾಗೆ ಯಾರು ಪದಕಗಳ ರಕ್ಷಣೆ ಮಾಡಬೇಕಾಗಿತ್ತೋ ಅವರೇ ಅವುಗಳನ್ನು ಭಕ್ಷಣೆ ಮಾಡಿಬಿಟ್ಟಿದ್ದರು. ಕೆಳಹಂತದಿಂದ ಶುರುವಾಗಿ ಇಲಾಖೆಯ ಉನ್ನತ ಹಂತದ ಅಧಿಕಾರಿಯವರೆಗೆ ಎಲ್ಲರೂ ಪದಕ ಪ್ರಕರಣದಲ್ಲಿ ಶಾಮೀಲಾಗಿದ್ದರು. ಅವರು ಯಾರೆಂದರೆ..... ಇಲಾಖೆಯ ಪ್ರಥಮ ದರ್ಜೆ ಸಹಾಯಕ ಗುಮಾಸ್ತ ಶಿವಪ್ರಕಾಶ್, ಆತನ ಮೇಲಿನ ಅಧಿಕಾರಿಯಾದ ಇಲಾಖೆಯ ವ್ಯವಸ್ಥಾಪಕ ಎಸ್.ವಿ.ಬಾವಿಕಟ್ಟಿ ಹಾಗೂ ಬಾವಿಕಟ್ಟಿ ಮೇಲಿನ ಅಧಿಕಾರಿ ಇಲಾಖೆಯ ಜಂಟಿ ನಿರ್ದೇಶಕ ಕಾ..ಚಿಕ್ಕಣ್ಣ ಮತ್ತು ಚಿಕ್ಕಣ್ಣನ ಮೇಲಿನ ಅಧಿಕಾರಿ ಇಲಾಖೆಯ ಆಯುಕ್ತರಾಗಿದ್ದ ಮನು ಬಳಿಗಾರ್. ಒಬ್ಬ ಆರ್ಡಿನರಿ ಗುಮಾಸ್ತನಿಂದ ಹಿಡಿದು ಐಎಎಸ್ ಅಧಿಕಾರಿಯವರೆಗೆ ಎಲ್ಲರೂ ಪದಕ ಪ್ರಕರಣದಲ್ಲಿ ಶಾಮೀಲಾಗಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಕಂಡುಬಂದಿದ್ದು ಈಗ ನಾಲ್ಕು ಅಧಿಕಾರಿಗಳ ವಿರುದ್ಧ ಪೊಲೀಸರು ಪದಕ ಕದ್ದ ಆರೋಪವನ್ನು ಹೊರೆಸಿ ಲೋಕಾಯುಕ್ತ ನ್ಯಾಯಾಲಯಕ್ಕೆ
ಕಾ..ಚಿಕ್ಕಣ್ಣ
ವರದಿಯನ್ನು ಸಲ್ಲಿಸಿದ್ದಾರೆ. ತಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ತನಿಖೆ ನಡೆಸಲು ಸಂಸ್ಕೃತಿ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಅನುಮೊದನೆ ನೀಡಿದ್ದು ತನಿಖಾಧಿಕಾರಿಗಳಿಗೆ ಆನೆಬಲ ಬಂದಿತ್ತು. ನಾಲ್ವರಲ್ಲಿ ಈಗಾಗಲೇ ಮನು ಬಳಿಗಾರ ಹಾಗೂ ಕಾ..ಚಿಕ್ಕಣ್ಣ ಇಬ್ಬರೂ ರಿಟೈರ್ ಆಗಿದ್ದಾರೆ. ರಿಟೈರ್ ಆದರೂ ತನಿಖೆಯನ್ನು ಎದುರಿಸಲೇ ಬೇಕಾಗಿದೆ. ಸಾಬೀತಾದರೆ ಶಿಕ್ಷೆ ಅನುಭವಿಸಲೇ ಬೇಕಾಗುತ್ತದೆ. ಇಂದಿಲ್ಲಾ ನಾಳೆ ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಇಲ್ಲವೇ ತಮ್ಮ ತಂತ್ರಗಳನ್ನು ಬಳಸಿ ಕಾನೂನು ಕುಣಿಕೆಯಿಂದ ನುಣಿಚಿಕೊಳ್ಳುತ್ತಾರೆ.

ಆದರೆ... ಇಲಾಖೆಯಲ್ಲಿ ನಡೆದ ಕೋಟ್ಯಾಂತರ ರೂಪಾಯಿಗಳ ಗೋಲ್ಮಾಲ್ಗೆ ಹೋಲಿಸಿದರೆ ಪದಕದ ಹಗರಣ ಜುಜುಬಿ ಎನ್ನಿಸುವಂತಿದೆ.  ಲೋಕಾಯುಕ್ತ ಪೊಲೀಸರು ತಮ್ಮ ತನಿಖೆಯನ್ನು ಕೇವಲ ಪದಕ ಹಗರಣಕ್ಕೆ ಮೀಸಲಿಟ್ಟರೆ ಬೆಟ್ಟ ಅಗೆದು ಇಲಿ ಹಿಡಿದಂತಾಗುತ್ತದೆ. ಕಳೆದ ಹತ್ತು ವರ್ಷದ ಇಲಾಖೆಯ ಪ್ರತಿಯೊಂದು ಚಟುವಟಿಕೆಗಳನ್ನು ತನಿಖೆಗೊಳಪಡಿಸಿದರೆ ಹೊರಹೊಮ್ಮುವ ನಗ್ನಸತ್ಯಗಳು ಅಗಣಿತವಾಗಿವೆ. ಎಲ್ಲಾ ಹಂತದ ಅಧಿಕಾರಿಗಳೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ಮಾಡಲೇಬೇಕಿದೆ. ಕೇವಲ ಅಧಿಕಾರಿಗಳನ್ನು ಮಾತ್ರವಲ್ಲ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ತಂದು ಕೂಡಿಸಿ ಅವರ ಮೇಲೆ ಒತ್ತಡವನ್ನು ಹೇರಿ ಕೊಟ್ಯಾಂತರ ರೂಪಾಯಿಗಳ ಹಪ್ತಾ ಪಡೆದಿರುವ ರಾಜಕಾರಣಿಗಳನ್ನು ಮೊದಲು ತನಿಖೆಗೊಳಪಡಿಸಿ ಶಿಕ್ಷಿಸಬೇಕಿದೆ. ನುಂಗಿದ್ದನ್ನು ಕಕ್ಕಿಸಬೇಕಿದೆ. ಇಲ್ಲವಾದರೆ ಹಣ್ಣು ತಿಂದವನು ನುಣುಚಿಕೊಂಡ, ಸಿಪ್ಪೆ ತಿಂದವನು ಸಿಕ್ಕಾಕಿಕೊಂಡ ಎನ್ನುವ ಹಾಗಾಗುತ್ತದೆ.

ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಿರುವಾಗ ಯಾರನ್ನು ದೂರಿ ಏನು ಪ್ರಯೋಜನ?. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಯಾರನ್ನು ದೂಷಿಸಿ ಏನು ಪ್ರಯೋಜನ?. ತನಿಖೆ ಕೆಳಹಂತದಿಂದಲ್ಲ ಮೇಲಿನಿಂದ ಕೆಳಗೆ ಬರಬೇಕಿದೆ. ಭ್ರಷ್ಟಾಚಾರದ ಪ್ರಾಯೋಜಕರಾದ ರಾಜಕಾರಣಿಗಳು, ಅದನ್ನು ಅನುಷ್ಟಾನಗೊಳಿಸುವ ಅಧಿಕಾರಿಗಳು, ಹಾಗೂ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಲಂಚಕೊಟ್ಟು ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಸಾಂಸ್ಕೃತಿಕ ದಲ್ಲಾಳಿಗಳು... ಇವರೆಲ್ಲರನ್ನೂ ತನಿಖೆಗೊಳಪಡಿಸಬೇಕಾಗಿದೆ. ಇಲಾಖೆಗೆ ಅಂಟಿಕೊಂಡ ಜಿರಲೆಗಳಿಂದ ಹಿಡಿದು..... ಇಲಿ, ಹೆಗ್ಗಣ, ತಿಮಿಂಗಿಲುಗಳನ್ನು ಕಾನೂನಿನ ಬಲೆಹಾಕಿ ಹಿಡಿದು, ತನಿಖೆಯ ಗಾಣದಲ್ಲಿ ಅರೆದು ಶಿಕ್ಷಿಸಬೇಕಾಗಿದೆ. ಭ್ರಷ್ಟತನದಿಂದ ಸಂಪಾದಿಸಿದ ಎಲ್ಲರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕಿದೆ. ಇದೆಲ್ಲವನ್ನೂ ಲೋಕಾಯುಕ್ತ ಸಂಸ್ಥೆ ಮಾಡಬಹುದಾದರೂ ಪ್ರಸಕ್ತ ರಾಜಕೀಯ ವ್ಯವಸ್ಥೆ ಲೋಕಾಯುಕ್ತವನ್ನೇ ಹಲ್ಲಿಲ್ಲದ ಹಾವಂತೆ ಮಾಡಿ ಕೇವಲ ನೀನು ಬುಸುಗುಡಬೇಕೆ ಹೊರತು ಯಾರನ್ನೂ ಕಚ್ಚಬಾರದು ಎಂದು ತಂತ್ರಗಾರಿಕೆ ರೂಪಿಸಿರುವುದು ನಮ್ಮ ಪ್ರಜಾಪ್ರಭುತ್ವದ ವಿಪರ್ಯಾಸವಾಗಿದೆ.      

                                     -ಶಶಿಕಾಂತ ಯಡಹಳ್ಳಿ


               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ