ವೃತ್ತಿ ಕಂಪನಿಗಳ ವಿಜ್ರಂಭನೆಯ ದಿನಮಾನಗಳಲ್ಲಿ ಅತಿ ಹೆಚ್ಚು ಜನಪ್ರೀಯವಾಗಿದ್ದ ಸಾಮಾಜಿಕ ನಾಟಕ ‘ದೇವದಾಸಿ’. ಕಲ್ಚರಲ್ ಕಮೆಡಿಯನ್ ಕೆ.ಹಿರಣ್ಣಯ್ಯನವರು 1935 ರಲ್ಲಿ ‘ಕರ್ಮಕನ್ನಡಿ’ ಹೆಸರಿನಲ್ಲಿ ರಚಿಸಿದ್ದ ಈ ನಾಟಕವನ್ನು ಗುಬ್ಬಿ ಕಂಪನಿಯು ರಾತ್ರಿ ಹತ್ತರಿಂದ ಬೆಳಿಗ್ಗೆ ಆರುಗಂಟೆಯವರೆಗೆ ಅಹೋರಾತ್ರಿ ಪ್ರದರ್ಶಿಸುತ್ತಿತ್ತು. ನಂತರ 1938ರಲ್ಲಿ ಹಿರಣ್ಣಯ್ಯನವರು ಗುಬ್ಬಿ ಕಂಪನಿ ಬಿಟ್ಟು ಸುಬ್ಬಯ್ಯನಾಯ್ಡುರವರ ನಾಟಕ ಕಂಪನಿಗೆ ಬಂದು ಸೇರಿದಾಗ ಇದೇ ನಾಟಕವನ್ನು ‘ಆಶಾಪಾಶ’ ಹೆಸರಲ್ಲಿ ರಾತ್ರಿ 10ರಿಂದ 3 ಗಂಟೆಯವರೆಗೂ ಆಡುತ್ತಿದ್ದರು. ಯಾವಾಗ ಕೆ.ಹಿರಣ್ಣಯ್ಯನವರು 1940ರಲ್ಲಿ ತಮ್ಮದೇ ಆದ ‘ಕೆ.ಹಿರಣ್ಯಯ್ಯ ಮಿತ್ರಮಂಡಳಿ’ ಆರಂಭಿಸಿದರೋ ಆಗ ಇದೇ ನಾಟಕವನ್ನು ‘ದೇವದಾಸಿ’ ಹೆಸರಲ್ಲಿ ಪ್ರದರ್ಶಿಸತೊಡಗಿದರು. ಹಾಸನದಲ್ಲಿ ನಡೆದ ಮೊದಲ ಕ್ಯಾಂಪನಲ್ಲಿ ಆರಂಭಗೊಂಡ ‘ದೇವದಾಸಿ’ ಆಗಿನ ಕಾಲದಲ್ಲಿ ಜನರನ್ನು ಸೂಜಿಗಲ್ಲಂತೆ ಆಕರ್ಷಿಸತೊಡಗಿತ್ತು. ಎರಡು ದಶಕದ ವರೆಗೂ ನಿರಂತರವಾಗಿ ಪ್ರತಿದಿನ ‘ದೇವದಾಸಿ’ಯನ್ನು ಪ್ರದರ್ಶಿಸಲಾಗುತ್ತಿತ್ತು. 1959
ರಲ್ಲಿ ಕೆ.ಹಿರಣ್ಣಯ್ಯನವರ ಮಗ ಮಾಸ್ಟರ್ ಹಿರಣ್ಣಯ್ಯನವರು ‘ಲಂಚಾವತಾರ’ ಬರೆಯುವವರೆಗೂ ಈ ‘ದೇವದಾಸಿ’ ನಾಟಕವೇ ಮಿತ್ರಮಂಡಳಿಯ ಟ್ರಂಪ್ಕಾರ್ಡ ನಾಟಕವಾಗಿತ್ತು. ನಂತರ ‘ಲಂಚಾವತಾರ’ ವೃತ್ತಿ ರಂಗಭೂಮಿಯ ಎಲ್ಲಾ ದಾಖಲೆಗಳನ್ನೂ ಮುರಿಯಿತು. ಮಾಸ್ಟರ್ ಹಿರಣ್ಣಯ್ಯನವರು ‘ಲಂಚಾವತಾರ’ ಎತ್ತುವುದಕ್ಕಿಂತಲೂ ಮೊದಲು ದೇವದಾಸಿ, ಸದಾರಮೆ ಮತ್ತು ಎಚ್ಚಮನಾಯಕ ‘ಹಿರಣ್ಣಯ್ಯ ಮಿತ್ರಮಂಡಳಿ’ಯ ಪ್ರಸಿದ್ಧ ನಾಟಕಗಳಾಗಿದ್ದವು.
ಈ ‘ದೇವದಾಸಿ’ ನಾಟಕದ ವಿಶೇಷತೆ ಏನೆಂದರೆ ಒಂದೇ ಕುಟುಂಬದ ಮೂರು ತಲೆಮಾರಿನವರು ಈ ನಾಟಕವನ್ನು ಮಾಡಿದ್ದು. ಕೆ.ಹಿರಣ್ಣಯ್ಯವರು ಈ ನಾಟಕದಲ್ಲಿ ನಾಜೂಕಯ್ಯ ಪಾತ್ರವನ್ನು ಮಾಡಿ ಜನಪ್ರೀಯರಾಗಿದ್ದರು. ನಂತರ (1951 ರಿಂದ 1953ರವರೆಗೆ) ಅವರ ಮಗ ಮಾಸ್ಟರ್ ಹಿರಣ್ಯಯ್ಯ ಈ ಪಾತ್ರವನ್ನು ಹಂಚಿಕೊಂಡರು. ಅಂದರೆ ಈ ಪಾತ್ರಕ್ಕೆ ಎರಡು ಆಯಾಮಗಳಿವೆ. ನಾಟಕದ ಮೊದಲರ್ಧ ಹಾಸ್ಯರಸದಲ್ಲಿರುವ ಈ ‘ನಾಜೂಕಯ್ಯ’ ಪಾತ್ರವು ನಂತರ ರೌದ್ರರಸದಲ್ಲಿ ವಿಜ್ರಂಭಿಸುತ್ತದೆ. ಮೊದಲ ಭಾಗ ಹಾಸ್ಯಪಾತ್ರದಾರಿಯಾಗಿ ಕೆ.ಹಿರಣ್ಣಯ್ಯನವರು ನಟಿಸಿದರೆ ಅದರ ದ್ವಿತೀಯ ಭಾಗವಾದ ಖಳನಾಯಕ ನಾಜೂಕಯ್ಯನಾಗಿ ಮಾಸ್ಟರ್ ಹಿರಣ್ಯಯ್ಯನವರು ನಟಿಸುತ್ತಿದ್ದರು. ಬಹುಷಃ ಈ ರೀತಿ ಒಂದೇ ಪಾತ್ರವನ್ನು ಒಂದೇ ನಾಟಕದಲ್ಲಿ ಇಬ್ಬರು ಪಾತ್ರವಹಿಸಿದ್ದು ಕನ್ನಡ ರಂಗಭೂಮಿ ಚರಿತ್ರೆಯಲ್ಲಿ ಅಪರೂಪ. ಆಗ ಅದು ಅಗತ್ಯವೂ ಆಗಿತ್ತೇನೋ. ಐದಾರು ಗಂಟೆಗಳ ಕಾಲ ನಾಟಕದ ಪ್ರಮುಖ ಪಾತ್ರವನ್ನು ನಿರ್ವಹಿಸಲು ವಯಸ್ಸಿನ ಕಾರಣದಿಂದಾಗಿ ಕೆ.ಹಿರಣ್ಣಯ್ಯನವರಿಗೆ ಆಗದಿರುವಾಗ ನಾಟಕದ ಅರ್ಧ ಭಾಗವನ್ನು ಅವರ ಮಗ ಮಾಸ್ಟರ್ ಹಿರಣ್ಣಯ್ಯನವರು ನಿಭಾಯಿಸಬೇಕಾಯಿತು. ಇದೂ ಸಹ ಒಂದು ರೀತಿಯಲ್ಲಿ ನೋಡುಗರಿಗೆ ಆಕರ್ಷನೀಯವಾಗಿತ್ತು. ಒಂದೇ ಪಾತ್ರದಲ್ಲಿ ಇಬ್ಬರ ಅಭಿನಯವನ್ನು ನೋಡುವ ಅವಕಾಶ ದೊರೆಯುತ್ತಿತ್ತು.
1953ರಲ್ಲಿ ಕೆ.ಹಿರಣ್ಣಯ್ಯನವರು ಕಾಲವಶರಾದ ನಂತರದ ಎರಡು ದಶಕಗಳ ಕಾಲ ಮಾಸ್ಟರ್ ಹಿರಣ್ಣಯ್ಯನವರು ಪೂರ್ಣಪ್ರಮಾಣದಲ್ಲಿ ನಾಜೂಕಯ್ಯನವರಾಗಲೇ ಬೇಕಾಯಿತು. 1974ರಲ್ಲಿ ಒಂದು ಸಲ ಮಾಸ್ಟರ್ ಹಿರಣ್ಯಯ್ಯನವರಿಗೆ ಪ್ರದರ್ಶನದ ದಿನ ಅನಾರೋಗ್ಯ ಕಾಡಿದಾಗ ಅವರ ಮಗ ಬಾಬು ಹಿರಣ್ಣಯ್ಯ ನಾಜೂಕಯ್ಯನಾಗಬೇಕಾಯಿತು. ಆಗ ಬಾಬುರವರ ವಯಸ್ಸು ಕೇವಲ ಹದಿನಾಲ್ಕು. ನಂತರ ನಾಜೂಕಯ್ಯನ ಪಾತ್ರವನ್ನು ತಂದೆ ಮಗ ಅರ್ಧರ್ಧ ಹಂಚಿಕೊಂಡು ನಟಿಸುತ್ತಿದ್ದರು. ಮೊದಲರ್ಧ ಬಾಬುರವರು ನಟಿಸಿದರೆ ಇನ್ನರ್ಧ ಮಾಸ್ಟರ್ ನಟಿಸುತ್ತಿದ್ದರು. ಈಗ ಮಾಸ್ಟರ್ ಹೆಚ್ಚು ಕಡಿಮೆ ನಟನೆಯಿಂದ ರಿಟೈರ್ ಆಗಿದ್ದರಿಂದ ಬಾಬುರವರೇ ಪೂರ್ಣಪ್ರಮಾಣದಲ್ಲಿ ನಾಜೂಕಯ್ಯ ಪಾತ್ರದಾರಿಗಳಾಗಿದ್ದಾರೆ. ಈ ನಾಟಕ ಅದೆಷ್ಟು ಪ್ರದರ್ಶನಗಳಾಗಿವೆ ಎಂಬ ಲೆಕ್ಕ ಹಿರಣ್ಣಯ್ಯನವರ ಕುಟುಂಬದವರಿಗೂ ಗೊತ್ತಿಲ್ಲ. ಸರಿಸುಮಾರು ಆರು ಸಾವಿರವನ್ನೂ ಮೀರಿದ್ದಾವೆಂದು ಅಂದಾಜು ಲೆಕ್ಕ ಹೇಳುತ್ತಾರೆ. ‘ಲಂಚಾವತಾರ’ವೇ ಹನ್ನೊಂದು ಸಾವಿರಕ್ಕೂ ಮಿಕ್ಕಿ ಪ್ರದರ್ಶನ ಕಂಡಿದೆ. ಸರಿಯಾಗಿ ಲೆಕ್ಕ ಹಾಕಿದ್ದರೆ, ದಾಖಲೆಗಳನ್ನು ಒದಗಿಸಿದ್ದರೆ ಗಿನ್ನಿಸ್ ದಾಖಲೆ ಬರೆಯುವಷ್ಟು ಪ್ರದರ್ಶನಗಳನ್ನು ‘ಹಿರಣ್ಣಯ್ಯ ಮಿತ್ರಮಂಡಳಿ’ ಮಾಡಿದೆ. ಒಂದೇ ಕುಟುಂಬದ ಮೂರು ತಲೆಮಾರು ಈ ‘ದೇವದಾಸಿ’ ನಾಟಕವನ್ನು ಕಳೆದ ಎಂಬತ್ತು ವರ್ಷಗಳಿಂದ ಆಡುತ್ತಲೇ ಬಂದಿರುವುದೇ ವೃತ್ತಿ ರಂಗಭೂಮಿಯ ಇತಿಹಾಸದಲ್ಲಿ ಇನ್ನೊಂದು ದಾಖಲೆ.
ಯಾಕೆ ಈ ‘ದೇವದಾಸಿ’ ನಾಟಕ ಇಷ್ಟೊಂದು ಜನಪ್ರೀಯವಾಯಿತು? ಯಾಕೆಂದರೆ ಈ ನಾಟಕದಲ್ಲಿ ಬಳಸಿದ ವಸ್ತು ವಿಷಯ ಅಷ್ಟೊಂದು ಸಮಕಾಲೀನವಾಗಿದೆ. ಸೂಳೆಯೊಬ್ಬಳ ಅಸಹಾಯಕತೆ ಹಾಗೂ ಅನಿವಾರ್ಯತೆಯ ಜೊತೆಗೆ ಆಕೆಯೊಳಗಿರುವ ಮಾನವೀಯತೆಯನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ದುರಾಸೆ, ಕ್ರೌರ್ಯ ಮತ್ತು ಮಹಿಳಾ ಶೋಷಣೆಯನ್ನು ಈ ನಾಟಕ ತೋರಿಸುತ್ತದೆ. ಈ ಗಂಭೀರವಾದ ವಿಷಯವನ್ನು ಹಾಸ್ಯರಸಾಯಣದ ಮೂಲಕ ನಿರೂಪಿಸಿದ್ದು ಈ ನಾಟಕದ ಯಶಸ್ಸಿನ ಮೂಲ ಕಾರಣವಾಗಿದೆ. ಈ ನಾಟಕದಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ಭಯಾನಕ ರಸಗಳು ಹದವಾಗಿ ಮಿಳಿತಗೊಂಡಿವೆ. ಅನಗತ್ಯವೆನಿಸಿದರೂ ಥ್ರಿಲ್ ಹುಟ್ಟಿಸುವ ಹಾಡುಗಳಿವೆ, ನೋಡುಗರಿಗೆ ಕಿಕ್ ಕೊಡುವ ಕುಡಿತದ ದೃಶ್ಯಗಳಿವೆ, ನಕ್ಕು ನಗಿಸುವಂತಹ ಹಾಸ್ಯದ ಹೊನಲಿದೆ, ಮಜಾಕೊಡುವಂತಹ ಜೋಕ್ಗಳಿವೆ. ಆಗಿನ ಕಾಲದ ನೋಡುಗರಿಗೆ ಇನ್ನೇನು ಬೇಕು? ಈ ನಾಟಕ ಹುಚ್ಚೆಬ್ಬಿಸಿಬಿಟ್ಟಿತು.
ಆದರೆ ಈ ‘ದೇವದಾಸಿ’ ನಾಟಕ ಇನ್ನೂ ಅದೇ ಆಕರ್ಷಣೆಯನ್ನು ಉಳಿಸಿಕೊಂಡಿದೆಯಾ? ಇತ್ತೀಚಿನ ದಿನಗಳಲ್ಲಿ ಈ ಪ್ರದರ್ಶನ ನೋಡಿದವರಿಗೆ ನಿರಾಸೆಯಾಗುತ್ತದೆ. ಒಂದು ರೀತಿಯಲ್ಲಿ ವೃತ್ತಿ ರಂಗಭೂಮಿಯ ಪಳವಳಿಕೆಯಂತೆ ಈ ನಾಟಕ ಈಗಲೂ ಆಗಾಗ ಪ್ರದರ್ಶನಗೊಳ್ಳುತ್ತಿದೆ. 2014, ಮಾರ್ಚ 11 ರಂದು ರವೀಂದ್ರ ಕಲಾಕ್ಷೇತ್ರ-50ರ ಸುವರ್ಣ ಸಂಭ್ರಮದಲ್ಲಿ ‘ನಾಟಕ ಬೆಂಗಳೂರು’ ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ‘ದೇವದಾಸಿ’ ನಾಟಕ ನೋಡಿದವರಿಗೆ ನಿಜಕ್ಕೂ ಬೇಸರವೆನಿಸಿತು. ಕಾಲಬದಲಾದಂತೆ ನಾಟಕವೂ ಬದಲಾಗಬೇಕಾಗುತ್ತದೆ. ‘ನಾವು ಬದಲಾಗುವುದೇ’ ಇಲ್ಲ ಎಂದು ಹಠ ಹಿಡಿದರೆ ನಾಟಕ ಔಟ್ಆಪ್ಡೇಟೆಡ್ ಎನ್ನಿಸುತ್ತದೆ ಎನ್ನುವುದಕ್ಕೆ ಈ ಪ್ರದರ್ಶನವೇ ಸಾಕ್ಷಿ. ಹಾಗೆಯೇ ವೃತ್ತಿ ರಂಗಭೂಮಿ ಯಾಕೆ ತನ್ನ ಚಾರ್ಮ ಮತ್ತು ಫಾರಂನ್ನು ಕಳೆದುಕೊಂಡಿತು ಎನ್ನುವುದಕ್ಕೆ ಸಾಕ್ಷಿ ಪುರಾವೆಗಳನ್ನೂ ಈ ‘ದೇವದಾಸಿ’ ನಾಟಕದಲ್ಲಿ ಕಾಣಬಹುದಾಗಿದೆ.
ಈ ನಾಟಕದ ಸ್ಟೋರಿ ಲೈನ್ ಹೀಗಿದೆ. ನಾಜೂಕಯ್ಯ ಎನ್ನುವ ತಲೆಹಿಡುಕ ಮಣಿಮಂಜರಿಯನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುತ್ತಾನೆ. ಶ್ರೀಮಂತರ ಹಣ, ಆಸ್ತಿಗಳನ್ನು ಅಕ್ರಮವಾಗಿ ಪಡೆಯಲು ಹೆಂಗಸರನ್ನು ಬಳಸಿಕೊಳ್ಳುತ್ತಾನೆ. ವಸಂತಶೇಖರ ಎನ್ನುವ ಶ್ರೀಮಂತನು ನಾಜೂಕಯ್ಯನ ಹುನ್ನಾರಕ್ಕೆ ಸಿಕ್ಕಿ ಬಿಕಾರಿಯಾಗಿ ಹುಚ್ಚನಾಗುತ್ತಾನೆ. ಸಖಾರಾಂ ಎನ್ನುವ ಜಮೀನ್ದಾರನನ್ನೂ ಹೀಗೆನೇ ಬಲಿಪಶುವಾಗಿಸಲು ನಾಜೂಕಯ್ಯ ಪ್ರಯತ್ನಿಸುತ್ತಾನಾದರೂ ಮಣಿಮಂಜರಿಗೆ ಸಖಾರಾಂ ಮೇಲೆ ಪ್ರೀತಿ ಹುಟ್ಟುತ್ತದೆ. ಆತನನ್ನು ಹಣಕ್ಕಾಗಿ ಪೀಡಿಸಲು ನಿರಾಕರಿಸುತ್ತಾಳೆ. ಅವಿವಾಹಿತನೆಂದು ಸುಳ್ಳು ಹೇಳಿದ ಸಖಾರಾಂನ ಹೆಂಡತಿಯೇ ಹುಡುಕಿಕೊಂಡು ಬಂದಾಗ ಸತ್ಯ ಗೊತ್ತಾಗಿ ಸಖಾರಾಂನನ್ನು ಕಳುಹಿಸಿಕೊಡುತ್ತಾಳೆ. ನಾಜೂಕಯ್ಯನ ಬ್ಲಾಕಮೇಲ್ಗೆ ಸಂಕಟಪಡುತ್ತಾಳೆ. ಕೊನೆಗೆ ನಾಜೂಕಯ್ಯನನ್ನು ಪೊಲೀಸರು ಬಂಧಿಸಿ ಕರೆದೊಯ್ಯುವುದರೊಂದಿಗೆ ‘ದೇವದಾಸಿ’ ನಾಟಕ ಕೊನೆಯಾಗುತ್ತದೆ.
ಇಡೀ ನಾಟಕದಲ್ಲಿ ಪುರುಷರ ಭೋಗವಿಲಾಸ ಮತ್ತು ಮಹಿಳೆಯರ ತ್ಯಾಗವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ವಿವಾಹಿತ ಪುರುಷರ ಸ್ತ್ರೀ ದೌರ್ಬಲ್ಯವನ್ನು ಹಾಗೂ ಮಹಿಳೆಯರ ಅಸಹಾಯಕತೆಯನ್ನು ಬಳಸಿಕೊಳ್ಳುವ ದಲ್ಲಾಳಿ (ಪಿಂಪ್) ವರ್ಗ ಅದು ಹೇಗೆ ತನ್ನ ನಾಜೂಕು ಮಾತು ಹಾಗೂ ನಡೆತಗಳಿಂದ ಸಮಾಜದಲ್ಲಿ ಬೇರುಬಿಟ್ಟಿದೆ ಎನ್ನುವುದನ್ನು ಸಾಕ್ಷೀಕರಿಸುವಂತೆ ಈ ‘ದೇವದಾಸಿ’ ನಾಟಕ ಮೂಡಿ ಬಂದಿದೆ. ಆದರೆ ಈಗ ವೇಶ್ಯಾವಾಟಿಕೆ ಎನ್ನುವುದು ಹಲವಾರು ಆಯಾಮಗಳನ್ನು ಪಡೆದು ಪುರುಷರಿಂದ ಪುರುಷರಿಗಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವ ವ್ಯವಹಾರವಾಗಿ ದೇಶಾದ್ಯಂತ ಹರಡಿಕೊಂಡಿದೆ. ಸೂಳೆಗಾರಿಕೆಯ ಶಕ್ತಿ ಮತ್ತು ವ್ಯಾಪ್ತಿಗಳು ಹೈಟೆಕ್ ಆಗುತ್ತಿವೆ. ಆದರೆ ಈ ‘ದೇವದಾಸಿ’ ನಾಟಕ ಮಾತ್ರ ಇನ್ನೂ ಅದೇ ಪುರಾತನ ದೇವದಾಸಿ ಪದ್ದತಿಯನ್ನೇ ಇಟ್ಟುಕೊಂಡಿದೆ. ಕಾಲ ಬದಲಾದಂತೆ ಸಮಸ್ಯೆಗಳೂ ಸಹ ರೂಪಾಂತರಗೊಳ್ಳುತ್ತಾ ಹೋಗುತ್ತವೆ. ಆದರೆ ಇನ್ನೂ ಹಳೆಯದ್ದನ್ನೇ ಮತ್ತೆ ಮತ್ತೆ ತೋರಿಸುವುದರಿಂದ ಇಡೀ ನಾಟಕ ಔಟ್ಆಪ್ಡೇಟೆಡ್ ಎನ್ನಿಸುವಂತಿದೆ. ಸಮಸ್ಯೆ ಅದೇ ಆದರೂ ಸಮಸ್ಯೆಯ ಸ್ವರೂಪ ಬದಲಾಗಿರುವುದರಿಂದ ಅದನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿ ಸಮಕಾಲೀನಗೋಳಿಸಿದ್ದರೆ ಈ ನಾಟಕ ಈಗಲೂ ಪ್ರಸ್ತುತವೆನಿಸುತ್ತಿತ್ತು.
ನಾಟಕದ ವಸ್ತು ಹೋಗಲಿ ನಾಟಕದ ನಿರೂಪಣೆ ಕೂಡಾ ಇನ್ನೂ ಎಂಟು ದಶಕದ ಹಿಂದಿರುವಂತೆಯೇ ಇದೆ. ಅದೇ ಸೂಳೆಯ ಹಿಂದೆ ಬಿದ್ದು ಮನೆ ಮಠ ಕಳೆದುಕೊಂಡ ಸಾವುಕಾರ. ಇನ್ನೊಬ್ಬ ಸಾವುಕಾರ ಅವಳಿಗೆ ಅಂಟಿಕೊಂಡ. ಇವರೆಲ್ಲರನ್ನೂ ಒಬ್ಬ ಪಿಂಪ್ ಬಳಸಿಕೊಂಡ. ಕೊನೆಗೆ ಪೋಲೀಸರ ವಶವಾದ.....
ಹೀಗೆ ನಾಟಕವನ್ನು ನಿರೂಪಣೆ ಮಾಡಿದರೆ ಹೇಗೆ?..... ನಿರೂಪಣೆಯಲ್ಲಾದರೂ ಒಂದಿಷ್ಟು ಬದಲಾವಣೆ ಬೇಡವೇ?.... ನಿರೂಪಣೆ ಹೋಗಲಿ ಕನಿಷ್ಟ ನಟರಲ್ಲಾದರೂ ಬದಲಾವಣೆ ಬೇಡವೇ? ಹೆಚ್ಚು ಕಡಿಮೆ ಈ ನಾಟಕದಲ್ಲಿ ನಟಿಸುತ್ತಿರುವ ಬಹುತೇಕರು ರಿಟೈರ್ಡ
ವಯಸ್ಸು ಸಮೀಪಿಸಿದವರು ಕೆಲವರು ದಾಟಿದವರು. ಎದ್ದರೆ ಕೂಡಲು ಬರೋದಿಲ್ಲ, ಕೂತರೆ ಎದ್ದು ನಿಲ್ಲೋಕಾಗೊಲ್ಲ. ಇದೊಂದು ಮುದುಕರ ತಂಡ ಎನ್ನಬಹುದೇನೋ. ಹೀಗೆಂದು ಮುದುಕರನ್ನು ಹೀಯಾಳಿಸುತ್ತಿಲ್ಲ, ಆದರೆ ಮಣಿಮಂಜರಿ ಪಾತ್ರದಾರಿ ಕೂಡಾ ನಲವತ್ತು ದಾಟಿದವಳೇ. ಸೋಂಟ ಬಳುಕಿಸಲು ಆಗದಷ್ಟು ದಪ್ಪ. ನಾಜೂಕಯ್ಯನ ಪಾತ್ರವೊಂದನ್ನು ಹೊರತುಪಡಿಸಿ ಪಾತ್ರವರ್ಗ ಪಾತ್ರೋಚಿತವಾಗಿಲ್ಲ. ಇಡೀ ನಾಟಕವನ್ನು ಹಾಗೂ ನಟರನ್ನು ಮತ್ತೆ ಮರಳಿ ಕಟ್ಟಿದರೆ ಮಾತ್ರ ಈ ನಾಟಕ ಗಿಟ್ಟುತ್ತದೆ.
ಇಡೀ ನಾಟಕದಲ್ಲಿ ಹುಡುಕಿದರೂ ಒಂದಿಷ್ಟು ರಂಗಶಿಸ್ತು ನೋಡಲು ಸಿಕ್ಕುವುದಿಲ್ಲ. ನಾಟಕದಾದ್ಯಂತ ಬರೀ ಯಡವಟ್ಟುಗಳೇ. ಯಾವುದೋ ಕಾಲಘಟ್ಟದಲ್ಲಿ ನಡೆಯುವ ಈ ನಾಟಕದಲ್ಲಿ ಡಿಂಗ್ರಿ ನಾಗರಾಜರ ಸೆಲ್ ಪೊನ್ ರಿಂಗಣಿಸುತ್ತದೆ. ಅವರೋ ಪಾತ್ರ ಮಾಡುತ್ತಲೇ ಮೊಬೈಲ್ ಎತ್ತಿ ನಂಬರ್ ನೋಡಿ ಮತ್ತೆ ನಟನೆ ಮುಂದುವರೆಸುತ್ತಾರೆ. ಪ್ರೇಕ್ಷಕರಿಗೆ ಮೊಬೈಲ್ ಪೋನ್ ಬಳಸಬೇಡಿ ಎನ್ನುವ ನಾಟಕದವರೇ ಅನಗತ್ಯವಾಗಿ ನಾಟಕ ನಡೆದಾಗಲೇ ಮೊಬೈಲ್ ಬಳಸಿದ್ದು ಯಾವ ಸೀಮೆಯ ರಂಗಶಿಸ್ತು. ಸೆಟ್ ನಿರ್ವಹಣೆಯಂತೂ ತುಂಬಾ ದುರ್ಬಲ. ಸೆಟ್ ಬದಲಾದರೂ ಸೈಡ್ ವಿಂಗ್ ಗೆ ತಗಲಾಕಿದ ಕ್ಯಾಲೆಂಡರ್ ಬದಲಾಗುವುದಿಲ್ಲ. ಸೂಳೆ ಮನೆಯಲ್ಲಿ ಮಗುವನ್ನೆತ್ತಿಕೊಂಡ ತಾಯಿಯ ಕ್ಯಾಲೆಂಡರ್ ಹಾಕಿದ್ದೇ ಅನಗತ್ಯ. ಕಲಾಕ್ಷೇತ್ರದ ವೇದಿಕೆಯ ಹಿಂದೆ ಖುರ್ಚಿ ಟೇಬಲ್ ಹಾಕಲಾಗಿದೆಯಾದರೂ ಯಾರೂ ಅವುಗಳನ್ನು ಬಳಸುವುದಿಲ್ಲ. ಎಲ್ಲರೂ ವೇದಿಕೆ ಮುಂಬಾಗದಲ್ಲಿರುವ ಸ್ಟ್ಯಾಂಡಿಂಗ್ ಮೈಕ್ ಮುಂದೆಯೇ ಬಂದು ಡೈಲಾಗ್ ಹೇಳಬೇಕು. ಒಂದು ವಿಸ್ಕಿ ಗ್ಲಾಸ್ ಬೇಕೆಂದರೂ ಸಹ ಹಿಂದೆ ನಡೆದು ಹೋಗಿ ತರಬೇಕು. ಎಲ್ಲರಿಗೂ ನಿಂತೇ ಮಾತಾಡಬೇಕೆಂಬ ಹಠವಿದ್ದಂತಿದೆ. ಸರದಿ ಪ್ರಕಾರ ತಮ್ಮ ಸಂಭಾಷಣೆಯನ್ನು ಮೈಕಿನ ಮೂತಿಯ ಮುಂದೆ ಆಡಿದರೆ ಮುಗಿಯಿತು ಅದೇ ಅಭಿನಯ. ನಟನೊಬ್ಬ ಬಂದು ಕಾಯುತ್ತಾನೆ. ಸಹ ನಟ ಬರುವುದೇ ಇಲ್ಲ. ನಟರಲ್ಲಿ ತಾಳಮೇಳೆಂಬುದೇ ಇಲ್ಲ. ಬೆಳಕನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವ ಕನಿಷ್ಟ ಅರಿವೂ ನಟರಿಗಿಲ್ಲ. ವೇದಿಕೆಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಇವರಿಗೆ ಯಾರೂ ಹೇಳಿಕೊಟ್ಟಿಲ್ಲ. ಇನ್ನು ಎಂಟ್ರಿ ಎಕ್ಸಟ್ಗಳ ಹಂಗೂ ನಟರಿಗಿಲ್ಲ. ಇಷ್ಟ ಬಂದ ದಿಕ್ಕಿನಲ್ಲಿ ಬರತಾರೆ, ತಮ್ಮ ಮಾತು ಮುಗಿದ ಮೇಲೆ ತಮಗೆ ತೋಚಿದ ಕಡೆಗೆ ನಟರು ಹೊರಡುತ್ತಾರೆ. ಪ್ರದರ್ಶನಾ ಪೂರ್ವ ತಾಲಿಂ ಮಾಡಿಲ್ಲದಿರುವುದು ಸ್ಪಷ್ಟವಾಗುತ್ತದೆ. ಜೊತೆಗೆ ಇಡೀ ನಾಟಕ ಅಶಿಸ್ತಿನಿಂದ ಕೂಡಿದ ಮೊಟ್ಟಮೊದಲ ರನ್ತ್ರೂ ನೋಡಿದಂತಾಯಿತು. ಹಳ್ಳಿಗಳಲ್ಲಿ ಕೆಲವು ಅನನುಭವಿ ಯುವಕರು ಸೇರಿ ಕಂಪನಿ ಶೈಲಿಯ ನಾಟಕಗಳನ್ನು ಆಡುತ್ತಾರಲ್ಲಾ ಹಾಗೆ ಈ ಎಂಬತ್ತು ವರ್ಷದ ಇತಿಹಾಸವಿರುವ ವೃತ್ತಿ ನಾಟಕ ಕಂಪನಿ ನಾಟಕವಾಡುತ್ತದೆನ್ನುವುದೇ ವಿಪರ್ಯಾಸ.
ಈ ನಾಟಕ ನೋಡಿದ ಪ್ರೇಕ್ಷಕರಲ್ಲಿ ಧೂಮಪಾನ-ಮಧ್ಯಪಾನದ ಬಯಕೆಯನ್ನುಂಟು ಮಾಡುವಲ್ಲಿ ಹಾಗೂ ಕುಡಿತಕ್ಕೆ ಪ್ರೇರೇಪನೆ ನೀಡುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ನಾಟಕದಾದ್ಯಂತ ಸುರಾಪಾನವೇ ಬಹು ಮುಖ್ಯ ಭಾಗವಾಗಿದೆ. ಪಾತ್ರಗಳು ಕುಡಿದು ವಿಜ್ರಂಭಿಸುತ್ತವೆ. ಕುಡಿತದ ಕುರಿತು ಹಾಡೂ ಇದೆ. ಕುಡಿತದ ವೈಭವವನ್ನು ಸಾರುವ ಮಾತುಗಳೂ ಇವೆ. ಇದೆಂತಾ ವಿಪರ್ಯಾಸ ನೋಡಿ. ಸಿನೆಮಾಗಳಲ್ಲಿ ಕುಡಿತ ಹಾಗೂ ಸಿಗರೇಟನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇವನೆ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಈ ನಾಟಕದಲ್ಲಿ ರಂಗ ವೇದಿಕೆಯ ಮೇಲೆ ಈ ದುರಭ್ಯಾಸಗಳು ವಿಜ್ರಂಭಿಸುತ್ತವೆ. ಇದೇನಾ ನಾಟಕದ ಆಟ? ಮನರಂಜನೆ ಎಂದರೆ ಹೀಗೇನಾ? ಕುಡಿತ ಸಿಗರೇಟನ್ನು ಹಾನಿಕಾರಕವೆಂದು ತ್ಯಜಿಸಿದ್ದರೂ ಈಗ ಅದರಿಂದಾದ ದುಷ್ಟರಿಣಾಮಗಳನ್ನು ಎದುರಿಸುತ್ತಿರುವ ಮಾಸ್ಟರ್ ಹಿರಣ್ಣಯ್ಯನವರು ಈ ನಾಟಕದ ಮೂಲಕ ಪ್ರತ್ಯಕ್ಷವಾಗಿ ಅದಕ್ಕೆ ಪ್ರೇರಣೆ ನೀಡುತ್ತಿದ್ದಾರಾ? ಬೇಕಾಗಿರಲಿಲ್ಲ. ತೋರಿಸಲೇ ಬೇಕೆಂದಿದ್ದರೆ ಸಾಂಕೇತಿಕವಾಗಿ ಕುಡಿತ ಸಿಗರೇಟ್ ಬಳಕೆಯನ್ನು ತೋರಿಸಬಹುದಾಗಿತ್ತು. ಇನ್ನೂ ಸಾಮಾಜಿಕ ಕಳಕಳಿ ಇದ್ದಿದ್ದರೆ ದುರಭ್ಯಾಸಗಳಿಂದಾಗುವ ಅನಾಹುತಗಳ ಬಗ್ಗೆ ಮಾತು ಹಾಗೂ ಹಾಡುಗಳಲ್ಲಿ ಹೇಳಿ ಜನರನ್ನು ಎಚ್ಚರಿಸಬಹುದಾಗಿತ್ತು. ಆಗ ಈ ನಾಟಕ ಸಾರ್ಥಕತೆ ಪಡೆಯುತ್ತಿತ್ತು.
ನಾಜೂಕಯ್ಯನ ಪಾತ್ರದಲ್ಲಿ ಬಾಬು ಹಿರಣ್ಣಯ್ಯನವರ ಅಭಿನಯ ಸೊಗಸಾಗಿದೆ. ಅವರ ವಿಡಂಬನಾತ್ಮಕ ಮಾತಿನ ಶೈಲಿ ಹಾಗೂ ಟೈಂಸೆನ್ಸ ಈ ನಾಟಕವನ್ನು ಒಂದಿಷ್ಟು ಸಹ್ಯಗೊಳಿಸಿವೆ. ಅವರ ಪಂಚ್ ಡೈಲಾಗ್ಗಳು, ಹಳೆಯ ಜೋಕ್ಸಗಳು ಆಗಾಗ ಕಚಗುಳಿ ಇಡುತ್ತವೆ. ಆದರೂ ಮಾಸ್ಟರ್ ಹಿರಣ್ಣಯ್ಯನವರು ಈ ಪಾತ್ರದಲ್ಲಿ ವಿಜ್ರಂಭಿಸಿದಷ್ಟು ಬಾಬುರವರಿಗೆ ಆಗಿಲ್ಲ. ಮಾಸ್ಟರ್ ತಮ್ಮ ಮಾತುಗಳಲ್ಲಿ ಸಮಕಾಲೀನ ದಿನದಿನದ ಆಗುಹೋಗುಗಳನ್ನು, ನಮ್ಮ ವ್ಯವಸ್ಥೆಯನ್ನು ಲೇವಡಿ ಮಾಡುತ್ತಾ ನೋಡುಗರಿಗೆ ಕಚಗುಳಿ ಇಡುತ್ತಿದ್ದರು. ಆದರೆ ಬಾಬು ಪಾತ್ರೋಚಿತವಾಗಿ ನಿಷ್ಟೆಯನ್ನು ತೋರಿಸುತ್ತಾರೆ. ಮಾಸ್ಟರ್ ಹಿರಣ್ಣಯ್ಯನವರನ್ನು ನೋಡುಗರು ಮಿಸ್ ಮಾಡಿಕೊಳ್ಳುವಂತಾಗಿದೆ. ಜೊತೆಗೆ ಪಾತ್ರ ಮಾಡಿದ ಡಿಂಗ್ರಿ ನಾಗರಾಜ್, ಓಬಳೇಶ್, ರವಿಕುಮಾರ್ರು ಇನ್ನೂ ತಮ್ಮ ನಟನೆ ಹಾಗೂ ಮಾತುಗಳಲ್ಲಿ ಪ್ರಭುತ್ವವನ್ನು ಹೊಂದಬೇಕಿದೆ. ಪಾತ್ರ ನಿಷ್ಟೆಯನ್ನು ಮೆರೆಯಬೇಕಿದೆ. ಹರಿದಾಸನಾಗಿ ಸುರೇಶ, ಮಣಿಮಂಜರಿಯಾಗಿ ಪದ್ಮಾವೇಣು ತಮ್ಮ ಮೆಲೋಡ್ರಾಮಾ ಶೈಲಿಯಿಂದ ಹೊರಬರಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ನಟರೂ ಪಾತ್ರ ಸನ್ನಿವೇಶಗಳಿಗೆ ಬದ್ಧರಾಗಿ ರಂಗಶಿಸ್ತನ್ನು ಮೈಗೂಡಿಸಬೇಕಾಗಿದೆ. ಯಾವ ವೇದಿಕೆಯಲ್ಲಿ ಎಂತಹ ಪ್ರೇಕ್ಷಕರಿಗಾಗಿ ನಾಟಕ ಮಾಡುತ್ತಿದ್ದೇವೆ ಎನ್ನುವುದರ ಅರಿವೂ ಹೊಂದಿರಬೇಕಿದೆ.
ಈ ಹಾರಮೋನಿಯಂನವರ ಕಾಟ ಜಾಸ್ತಿಎನ್ನಿಸಿತು. ಬೇರೆಲ್ಲಾ ಸಮಯದಲ್ಲಿ ಹಿನ್ನೆಲೆ ಸಂಗೀತ ಕೊಡಲಿ ಚಿಂತೆಯಿಲ್ಲ. ಆದರೆ ನಟರು ಮಾತನಾಡುವಾಗಲೇ ಸಂಗೀತಾಲಾಪ ಶುರುಮಾಡಿಕೊಂಡರೆ ಕೇಳುಗರಿಗೆ ಸಂಭಾಷಣೆಗಳು ಕೇಳದೇ ಕಿರಿಕಿರಿಯಾಗುತ್ತದೆ. ನಾಟಕದಾದ್ಯಂತ ವಸ್ತವಿನ್ಯಾಸ ಮಾತ್ರ ಜೋರಾಗಿದ್ದವು. ಮಣಿಮಂಜರಿ ಹಾಗೂ ಆಕೆಯ ತಂಗಿಯ ಉಡುಪುಗಳು ಜಗಮಗ. ಸಾವುಕಾರ ಸಖಾರಾಂ ಕಿಂತಲೂ ಆತನ ಸಹಾಯಕನ ಉಡುಪುಗಳೇ ಶ್ರೀಮಂತವೆನಿಸಿದವು. ಯಾಕೋ ಪಿಂಪ್ ಪಾತ್ರದ ನಾಜೂಕಯ್ಯನ ವೇಶಭೂಷಣ ಮಾತ್ರ ಪಾತ್ರೋಚಿತ ಎನ್ನಿಸದೇ ಯಾವುದೋ ಮರ್ಯಾದಸ್ತ ಬ್ರಾಹಣರ ಉಡುಪುಗಳಂತಿದ್ದವು.
ಈ ‘ದೇವದಾಸಿ’ ನಾಟಕದ ಮೊದಲರ್ದ ಸ್ಟ್ಯಾಂಡಪ್ ಕಾಮೆಡಿ ಶೊ ಎನ್ನಬಹುದಾಗಿದೆ. ಬೇಕಾದಷ್ಟು ಜೋಕ್ಸಗಳಿವೆ, ಪಂಚ್ ಡೈಲಾಗ್ಸ ಗಳಿವೆ. ಆದರೆ ನಗೆ ಉಕ್ಕಿಸುವುದಿಲ್ಲ. ಯಾಕೆಂದರೆ ಆ ಎಲ್ಲಾ ಜೋಕ್ಸಗಳನ್ನು ಈಗಾಗಲೇ ಹಲವಾರು ಬಾರಿ ಕೇಳಿದವುಗಳೇ ಆಗಿವೆ. ಆಂಗ್ಲಮಯ ಶಬ್ದಗಳಿಗಂತೂ ಕೊರತೆಯಿಲ್ಲ. ಸಿನೆಮಾ ಹಾಡುಗಳಂತೂ ಸನ್ನಿವೇಶಕ್ಕೆ ಅಗತ್ಯವಿರಲಿ ಬಿಡಲಿ ತುರುಕಿದಂತಿದೆ. ನೃತ್ಯ ಬರದಿದ್ದರೂ ಕುಣಿಯುವ ನಟ ನಟಿಯರನ್ನು ನೋಡಿ ನಗಬಹುದಾಗಿದೆ. ನಾಟಕದ ಕೊನೆಯಂತೂ ಯಾವುದೇ ತರ್ಕಕ್ಕೆ ನಿಲುಕದೇ ಅಸಂಗತವಾಗಿ ಮುಗಿಯುತ್ತದೆ. ಬಹುಷಃ ಆರು ಗಂಟೆಯ ನಾಟಕವನ್ನು ಎರಡು ಗಂಟೆಯೊಳಗೆ ಹೇಳಬೇಕಾಗಿದ್ದರಿಂದ ಕೆಲವು ಲಿಂಕ್ಗಳು ತಪ್ಪಿಹೋಗಿವೆ. ಇನ್ನೂ ಹದವಾಗಿ ಎಡಿಟ್ ಮಾಡಿ ಸನ್ನಿವೇಶಗಳನ್ನು ಹೊಂದಿಸಿದ್ದರೆ ನಾಟಕ ಸೊಗಸಾಗಿ ಮೂಡಿಬರುತ್ತಿತ್ತು.
ಸೂಳೆಯನ್ನೂ ಮನುಷ್ಯಳನ್ನಾಗಿ ಕಾಣುವ ಈ ನಾಟಕದ ಆಶಯ ಅತ್ಯಂತ ಮಾನವೀಯತೆಯಿಂದ ಕೂಡಿದೆ. “ಧನಮದದಿಂದ ಮೆರೆಯುವ ಗಂಡಸರಿಗೆ ಜ್ಞಾನಜ್ಯೋತಿಯನ್ನು ಹಚ್ಚುವ ತಾಯಿ ಸೂಳೆ” ಎನ್ನುವ ಅತಾರ್ಕಿಕ ವಾದವನ್ನೂ ಮಂಡಿಸುತ್ತಾಳೆ. “ಸೂಳೆಯ ಎದೆಯಲ್ಲಿ ಸತ್ಯ ಕಾಣುವಿರಿ” ಎನ್ನುವ ವಿಚಿತ್ರ ಸತ್ಯವನ್ನೂ ಹೇಳುತ್ತಾಳೆ. ಸೂಳೆತನವನ್ನು ಸಮರ್ಥಿಸಿಕೊಳ್ಳಲು ಈ ಮಾತುಗಳನ್ನು ಬರೆದಿದ್ದಾರೆಂದೂ ಕೊಂಡರೂ, ಕೊನೆಗೆ “ಸೂಳೆ ಎಂದು ನಿಂದಿಸುವವರೇ, ನಮ್ಮನ್ನು ಸೂಳೆಯಾಗಿ ಮಾಡಿದ್ಯಾರು?” ಎಂದು ಮಣಿಮಂಜರಿ ಇಡೀ ಪುರುಷ ಕುಲವನ್ನೇ ಪ್ರಶ್ನಿಸುತ್ತಾಳೆ. ಈ ಮಾತು ಸತ್ಯವಾದದ್ದು. ಪುರುಷ ಪ್ರಧಾನ ವ್ಯವಸ್ಥೆ ತಲೆತಗ್ಗಿಸಬಹುದಾದದ್ದು. ಒಟ್ಟಾರೆಯಾಗಿ ಪುರುಷ ವ್ಯವಸ್ಥೆಯ ಬಲಿಪಶುವಾದ ಸೂಳೆಯಲ್ಲೂ ಸಹ ಕರುಣೆಯನ್ನು, ಪ್ರೇಮವನ್ನು, ಮಾನವೀಯತೆಯನ್ನು ತೋರುವ ಈ ನಾಟಕದ ಆಶಯ ಸ್ತುತ್ಯಾರ್ಹವಾಗಿದೆ. ದೇವದಾಸಿಯ ಮೂಲಕ ಪುರುಷರ ಶೋಷಣೆಯನ್ನು ಅನಾವರಣಗೊಳಿಸುವ ರೀತಿಯಿಂದಾಗಿ ಈ ನಾಟಕ ಒಂದಿಷ್ಟು ಪ್ರಸ್ತುತತೆಯನ್ನು ಹೊಂದಿದೆ.
ಈ ರೀತಿಯಲ್ಲಿ ಜಾಳುಜಾಳಾಗಿ ನಾಟಕವನ್ನು ಪ್ರದರ್ಶಿಸಿದರೆ ಈಗಿನ ತಲೆಮಾರಿನವರಿಗೆ ‘ವೃತ್ತಿ ರಂಗಭೂಮಿ ನಾಟಕಗಳೆಂದರೆ ಹೀಗೇ ಆಶಿಸ್ತಿನಿಂದ ಕೂಡಿರುತ್ತವೆ’ ಎನ್ನುವ ನಕಾರಾತ್ಮಕ ಸಂದೇಶ ತಲುಪುತ್ತದೆ. ‘ಕೆ.ಹಿರಣ್ಣಯ್ಯ ಮಿತ್ರ ಮಂಡಳಿ’ ಕಳೆದ ಎಂಟು ದಶಕಗಳಲ್ಲಿ ಉತ್ತಮ ನಾಟಕಗಳನ್ನು ಕಟ್ಟಿಕೊಟ್ಟಿವೆ. ‘ಲಂಚಾವತಾರ’ ನಾಟಕ ಸರಕಾರಗಳನ್ನೇ ಅಲ್ಲಾಡಿಸಿದೆ. ಸದಾರಮೆ, ಎಚ್ಚಮನಾಯಕನಂತಹ ನಾಟಕಗಳ ಸಾವಿರಾರು ಯಶಸ್ವಿ ಪ್ರದರ್ಶನಗಳನ್ನು ಮಾಡಿದೆ. ಕನ್ನಡ ವೃತ್ತಿ ರಂಗಭೂಮಿಯಲ್ಲಿ ತನ್ನದೇ ಆದ ಇತಿಹಾಸವನ್ನೇ ಬರೆದಿದೆ. ಇಂತಹ ಹೆಸರಾಂತ ...ಮಿತ್ರ ಮಂಡಳಿ ಹೀಗೆ ಸಂತೆಹೊತ್ತಿಗೆ ಮೂರು ಮೊಳ ನೆಯ್ದುಕೊಂಡು ಸರಕು ಮಾರುವವರಂತೆ ಅವಸರಕ್ಕೆ ಬಿದ್ದು ಜಾಳುಜಾಳಾದ ನಾಟಕ ಮಾಡುವುದು ಅದರ ವೈಭವಕ್ಕೆ ಕಪ್ಪುಚಿಕ್ಕೆಯಾಗುವಂತಿದೆ. ಇಲ್ಲವೇ ಮಿತ್ರ ಮಂಡಳಿಯ ಅವಸಾನವನ್ನು ತೋರಿಸುತ್ತದೆ. ‘ಕೆ.ಹಿರಣ್ಣಯ್ಯ ಮಿತ್ರ ಮಂಡಳಿ’ ಇನ್ನೂ ಬಹುಕಾಲ ಬಾಳಬೇಕು. ಹೊಸ ನಟರುಗಳನ್ನು ಹುಟ್ಟುಹಾಕಬೇಕು. ಹಳೆಯ ಪ್ರಸಿದ್ಧ ನಾಟಕಗಳನ್ನು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗಿ, ಸೂಕ್ತ ಮಾರ್ಪಾಡು ಮಾಡಿ ಪ್ರದರ್ಶಿಸಬೇಕು ಹಾಗೂ ಹೊಸ ರಂಗಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಹೀಗಾದಾಗ ಇನ್ನೂ ಮೂರು ತಲೆಮಾರು, ಇನ್ನೂ ನೂರು ವರ್ಷಕಾಲ ಈ ನಾಟಕ ಕಂಪನಿ ಜೀವಂತವಾಗಿರಲು ಸಾಧ್ಯ. ಕನ್ನಡಿಗರ ಮನರಂಜಿಸಲು ಸಾಧ್ಯ. ಅದು ಸಾಧ್ಯವಾಗಲಿ ಎನ್ನುವುದೇ ಕನ್ನಡ ರಂಗಾಸಕ್ತರ ಆಶಯವಾಗಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ