ಭಾನುವಾರ, ಮಾರ್ಚ್ 9, 2014

“ಅದ್ಭುತ ರಂಗನಟ ಸಿಂಹರವರ ನೆನಪಿನೊಂದಿಗೊಂದು ಪಯಣ”








ನಾಲ್ಕು ವರ್ಷಗಳ ಹಿಂದಿನ ಮಾತು. ಸಿಂಹರವರು ನಿಜಕ್ಕೂ ಕೆರಳಿನಿಂತಿದ್ದರು. ಬಹುಷಃ ಅವರಿಗೆ ಸಿಟ್ಟು ಬಂದಿದ್ದನ್ನು ಈವಾಗಲೇ ನಾನು ನೋಡಿದ್ದು. ಯಾವಾಗಲೂ ನಗುಮುಖದಿಂದಲೇ ಇರುವ ಕಲಾವಿದ ಹೀಗೆ ಕೋಪಗೊಂಡಿದ್ದು ನನಗಂತೂ ತುಂಬಾ ಅಚ್ಚರಿಯನ್ನುಂಟುಮಾಡಿತ್ತು. ಮಾತುಗಳನ್ನು ಹೇಳಲೆಂದೇ ಅವತ್ತು ಸಿಂಹರವರು ಬಂದಂತಿತ್ತು. ಮುಲಾಜಿಲ್ಲದೇ ಹೇಳಿಯೇ ಬಿಟ್ಟರು. ತಮ್ಮ ಸಾತ್ವಿಕ ಕೋಪವನ್ನು ವೇದಿಕೆಯ ಮೇಲೆ ತೋರಿಸಿಯೇ ಬಿಟ್ಟರು.


2010, ಎಪ್ರಿಲ್ 16 ರಿಂದ 18ರವರೆಗೆ ಕಲಾಕ್ಷೇತ್ರದಲ್ಲಿ ರಂಗಭೂಮಿ ಹಿತರಕ್ಷಣಾ ವೇದಿಕೆಯಿಂದ ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರದೊಂದಿಗೆ ಡಾ.ಬಿ.ವಿ.ವೈಕುಂಟರಾಜುರವರ ನೆನಪಿನಲ್ಲಿ ರಂಗ ವಿಮರ್ಶಾ ಕಾರ್ಯಾಗಾರವನ್ನು ಏರ್ಪಡಿಸಿದ್ದೆವು. ರಾಜ್ಯದ ಮೂಲೆ ಮೂಲೆಗಳಿಂದ ರಂಗ ವಿಮರ್ಶೆಯ ವ್ಯಾಕರಣವನ್ನು ಕಲಿಯಲೆಂದೇ ಇಪ್ಪತೈದು ಜನ ಬರಹಗಾರರನ್ನು ಆಯ್ಕೆ ಮಾಡಲಾಗಿತ್ತು. ಕಾರ್ಯಾಗಾರದ ಉದ್ಘಾಟನೆಗೆ ಯಾರನ್ನು ಕರೆಯಬೇಕು ಎಂದು ಪಟ್ಟಿ ಮಾಡುತ್ತಿದ್ದಾಗ ಡಾ.ವಿಜಯಮ್ಮನವರು ಸಿ.ಆರ್.ಸಿಂಹರವರ ಹೆಸರನ್ನು ಸೂಚಿಸಿದರು. ಅಮ್ಮಾ.... ಸಿಂಹರವರು ನಮ್ಮ ಪುಟ್ಟ ಕಾರ್ಯಕ್ರಮಕ್ಕೆ ಬರುತ್ತಾರೇನಮ್ಮ ಎಂದು ಕೇಳಿದೆ. ಯಾಕೆ ಬರೋದಿಲ್ಲ. ನಾನು ಒಂದು ಮಾತು ಹೇಳ್ತೇನೆ. ನೀನು ಪೋನ್ ಮಾಡಿ ಆಹ್ವಾನ ಕೊಡಿ, ಬಂದೇ ಬರುತ್ತಾರೆ ಎಂದು ವಿಜಯಮ್ಮನವರು ಆಶ್ವಾಸನೆ ನೀಡಿದರು


ಮರುದಿನ ಪೋನ್ ಮಾಡಿದೆ. ಗುಹೆಯೊಳಗಿದ್ದ ಸಿಂಹರವರೇ ಪೋನ್ ಎತ್ತಿದರು. ನಾನು ಎಲ್ಲ ವಿವರಿಸುವ ಮೊದಲೇ ಗೊತ್ತು ಬಿಡಿ ಶಶಿಕಾಂತ, ಯಾವತ್ತು? ಎಲ್ಲಿ? ಎಷ್ಟು ಗಂಟೆಗೆ ಬರಬೇಕು ಅಷ್ಟು ಹೇಳಿ ಸಾಕು, ಖಂಡಿತಾ ಬರ್ತೇನೆ, ವಿಜಯಾರವರು ಎಲ್ಲಾ ಹೇಳಿದ್ದಾರೆ, ನನಗೂ ಏನೋ ಹೇಳೋದಿದೆ ಎಂದು ಆಶ್ವಾಸನೆ ಕೊಟ್ಟರು. ಎಲ್ಲಾ ಸರಿ, ಆದರೆ ಅದೆನೋ ಹೇಳೋದಿದೆ ಎಂದರಲ್ಲಾ ಮಾತು ನನ್ನನ್ನ ಕೊರೆಯಲು ಪ್ರಾರಂಭಿಸಿತು. ಅವರಿಗೆ ಏನು ಹೇಳೋದಿರಬಹುದು? ಎಷ್ಟೇ ತಲೆಕೆಡಿಸಿಕೊಂಡರೂ ಹೊಳೆಯಲಿಲ್ಲ. ನನ್ನ ರಂಗಭೂಮಿ ವಿಶ್ಲೇಷಣೆ ಪತ್ರಿಕೆಯಲ್ಲಿ ಸಿಂಹರವರ ಟಿಪಿಕಲ್ ಟಿ.ಪಿ.ಕೈಲಾಸಂ ಕುರಿತು ವಿಮರ್ಶೆ ಬರೆದು ಪ್ರಕಟಿಸಿದ್ದೆ. ಆದರೆ ಅದನ್ನು ಬರೆದು ಈಗಾಗಲೇ ಎರಡು ವರ್ಷಗಳೇ ಕಳೆದಿತ್ತು. ನಂತರ ಅವರ ಕಾರ್ನಾಡ ಕಂಪನಿ ಎನ್ನುವ ನಾಟಕಕ್ಕೆ ವಿಮರ್ಶೆ ಬರೆದಿದ್ದೆ. ಅದು ಅಗ್ನಿ ಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು. ನಾಟಕದಲ್ಲಿ ಸಿಂಹರವರು ಕಾರ್ನಾಡರಿಗೆ ತೋರಿಸಿದ ಅತಿರೇಕ ನಿಷ್ಟೆಯನ್ನು ಹಾಗೂ ವಿಮರ್ಶಕರನ್ನು ನಾಟಕದಲ್ಲಿ ಅನಗತ್ಯವಾಗಿ ಟೀಕಿಸಿದ್ದರ ಕುರಿತಾಗಿ ಬರೆದಿದ್ದೆ. ಬಹುಷಃ ಇದೇ ವಿಷಯವನ್ನು ಕುರಿತು ಉದ್ಘಾಟನೆಯ ದಿನ ಹೇಳಬಯಸಿರುವರೇನೋ ಎಂದು ಆತಂಕವಾಯಿತು. ಏನಕ್ಕೂ ಇರಲಿ ಎಂದು ವಿಮರ್ಶೆಯ ಪ್ರತಿಗಳನ್ನು ದಿನ ತೆಗೆದುಕೊಂಡು ಹೋಗಿದ್ದೆ. ನನ್ನ ಆತಂಕವನ್ನು ಗೆಳೆಯರ ಬಳಗದ ಶ್ರೀನಿವಾಸ ಹತ್ತಿರವೂ ಪ್ರಸ್ತಾಪಿಸಿದ್ದೆ. ಏನು ಆಗೊಲ್ಲ ಬಿಡಿ ಸಾರ್, ನೀವು ಬರೆದದ್ದು ಸರಿಯಾಗೇ ಇದೆ, ಅವರೇನಾದರೂ ಆಬ್ಜೆಕ್ಟ್ ಮಾಡಿದರೆ ನಾನು ಉತ್ತರ ಕೊಡ್ತೇನೆ ಎಂದು ಸೀನ ನನ್ನ ಪರವಾಗಿ ಬ್ಯಾಟಿಂಗ್ ಮಾಡಲು ಸಿದ್ದನಾದರು. ಕಾರ್ಯಾಗಾರದ ಬಹುತೇಕ ಎಲ್ಲಾ ವ್ಯವಸ್ಥೆಯ ಜವಾಬ್ದಾರಿಯನ್ನು ಶ್ರೀನಿವಾಸ ವಹಿಸಿಕೊಂಡಿದ್ದರು.


 ಎಪ್ರಿಲ್ 16ರಂದು ಬೆಳಿಗ್ಗೆ 10ಕ್ಕೆ ಸರಿಯಾಗಿ ಸಿಂಹರವರ ಕಾರು ಬಂದಿತು. ಉದ್ಘಾಟನೆ ಕಾರ್ಯಕ್ರಮ ಆರಂಭವೂ ಆಯಿತು.  ಉದಯವಾಣಿ ಸಂಪಾದಕಿಯಾಗಿದ್ದ ಡಾ.ಪೂರ್ಣಿಮಾರವರು, ಸಂಯುಕ್ತ ಕರ್ನಾಟಕದ ಹುಣಸವಾಡಿ ರಾಜನ್ರವರು, ಕರ್ನಾಟಕ ನಾಟಕ ಅಕಾಡೆಮಿಯ ಆಗಿನ ಅಧ್ಯಕ್ಷರಾಗಿದ್ದ ರಾಜಾರಾಂರವರು, ಡಾ.ವಿಜಯಮ್ಮನವರು ಕಾರ್ಯಾಗಾರದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ನಾನು ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದೆ. ಉದ್ಘಾಟನೆ ಮಾಡಿದ ನಂತರ ಆರಂಭದ ಭಾಷಣವೇ ಸಿ.ಆರ್.ಸಿಂಹರವರದು. ಹಲವಾರು ಜನ ರಂಗಭೂಮಿಯ ಒಡನಾಡಿಗಳು ಪ್ರೇಕ್ಷಾಗ್ರಹದಲ್ಲಿದ್ದರು. ಸಿಂಹರವರು ಏನು ಹೇಳಬಹುದು ಎನ್ನುವ ಕುತೂಹಲ ಹೆಚ್ಚಾಗ ತೊಡಗಿತ್ತು. ಮೊದಲಿನ ಹತ್ತು ನಿಮಿಷ ನಾಟಕ ಹಾಗೂ ವಿಮರ್ಶೆಯ ಕುರಿತು ಸಿಂಹ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಳ್ಳತೊಡಗಿದರು.

1972ರಲ್ಲಿ ನಾನು ಜರ್ಮನಿಯ ನಾಟಕಕಾರ ಬ್ರೊನಾಲ್ಡ್ ಬ್ರೆಕ್ಟ್ರವರ ಕಕೆಸಿಯನ್ ಚಾಕ್ ಸರ್ಕಲ್ ನಾಟಕವನ್ನು ಚಿತ್ರಕಲಾ ಪರಿಷತ್ನಲ್ಲಿ ನಿರ್ದೇಶಿಸಿ ಅಭಿನಯಿಸಿದ್ದೆ. ಡಾ.ಬಿ.ವಿ.ವೈಕುಂಟರಾಜುರವರು ಪ್ರಜಾವಾಣಿಯಲ್ಲಿ ನನ್ನ ನಾಟಕದ ಕುರಿತು ಸುದೀರ್ಘವಾದ ವಿಮರ್ಶೆಯೊಂದನ್ನು ಬರೆದು ನಾಟಕ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದರು. ನನಗೆ ತುಂಬಾ ಖುಷಿಯಾಯಿತು. ಆದರೆ ಮರುದಿನ ಒಬ್ಬರು ಪ್ರಜಾವಾಣಿ ಕಛೇರಿಗೆ ಹೋಗಿ ವೈಕುಂಠರಾಜುರವರನ್ನು ಅಟಕಾಯಿಸಿಕೊಂಡರು. ನಾಟಕ ಚೆನ್ನಾಗಿಲ್ಲ ಯಾಕೆ ಚೆನ್ನಾಗಿದೆ ಎಂದು ಬರೆದಿರಿ ಎಂದು ಆಕ್ಷೇಪಿಸಿದರು. ಹೀಗೆ ಒಬ್ಬರಿಗೆ ಪಾಯಸವಾದದ್ದು ಇನ್ನೊಬ್ಬರಿಗೆ ಪಾಯ್ಸನ್ ಆಗಿರುತ್ತದೆ. ಹಾಗೆ ಪಯ್ಸನ್ ಆಗಿದ್ದಕ್ಕೆ ಕಾರಣವೂ ವಿಶೇಷವಾಗಿದೆ. ಅರೆ ನಾಟಕಕ್ಕೆನಾಗಿದೆ ಚೆನ್ನಾಗಿದೆಯಲ್ಲಾ ಎಂದು ಹೇಳಿದ ವೈಕುಂಠರಾಜುರವರಿಗೆ ಆತ ಹೇಳಿದ್ದೇನೆಂದರೆ ಸಿಂಹ ಎಡಪಂತೀಯನಲ್ಲಾ, ಹೀಗಾಗಿ ನಾಟಕ ಮಾಡಿಸಲು ಯೋಗ್ಯತೆ ಇಲ್ಲಾ ಎಂದು ತನ್ನ ವಾದವನ್ನು ಮುಂದಿಟ್ಟ. ಎಡಪಂತೀಯರು ಬರೆದ ನಾಟಕವನ್ನು ಎಡಪಂತೀಯರೇ ಆಡಬೇಕು, ಬ್ರಾಹ್ಮಣರು ಬರೆದ ನಾಟಕವನ್ನು ಬ್ರಾಹ್ಮಣರೇ ಮಾಡಿಸಬೇಕು, ಸಾಬರ ನಾಟಕವನ್ನು ಸಾಬರೇ ಆಡಿಸಬೇಕು ಎಂದರೆ ರಂಗಭೂಮಿಯ ಗತಿಯೇನು. ಹೀಗೆ ಆಗಿದ್ದರೆ ಕಾರ್ನಾಡರು ಬರೆದ ತುಘಲಕನ್ನು ನಾನು ಮಾಡಲು ಸಾಧ್ಯವಾಗುತ್ತಿತ್ತೆ? ಇಂತವರ ತಕಾರರು ನಾಟಕದ ಕುರಿತದ್ದಾಗಿದ್ದಲ್ಲ. ಎಡಪಂಥೀಯನಲ್ಲದವನು ನಾಟಕ ಮಾಡಿಸಿದ್ದು ಸರಿಯಲ್ಲ ಎನ್ನುವುದು ತಕರಾರು. ಇಂತಹ ಅಭಿಪ್ರಾಯಗಳಿಗೆ ಏನು ಹೇಳುವುದು.  ಅದೇ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾರಯ್ಯ ಬ್ರೆಕ್ಟ್ ನಾಟಕ ಮಾಡೋಕೆ? ಎಂದು ಕೇಳಿದ. ನೀನ್ಯಾರಯ್ಯಾ ನನ್ನ ಕೇಳೋಕೆ, ನೀನೇನು ಬ್ರೆಕ್ಟ್ ಮೊಮ್ಮಗನಾ? ನಿಮ್ಮ ಮೂಗಿನ ನೇರಕ್ಕೆ, ನಿಮ್ಮ ಸಿದ್ದಾಂತಕ್ಕೆ ತಕ್ಕ ಹಾಗೆ ಒಂದು ರಂಗಪ್ರಯೋಗವನ್ನು ಯಾಕೆ ಒಂದು ಚೌಕಟ್ಟಿನಲ್ಲಿಟ್ಟು ನೋಡ್ತೀರಾ? ಎಂದು ಆತನಿಗೆ ನೀರಿಳಿಸಿ ಕಳುಹಿಸಿದೆ. ಮುಂದೆ ಇದೇ ಬ್ರೆಕ್ಟ್ ನಾಟಕವನ್ನು ಬಾಂಬೆ ಇಪ್ಟಾದವರು ಬೆಂಗಳೂರಿನಲ್ಲಿ ಎಂ.ಎಸ್.ಸತ್ಯೂರವರ ನಿರ್ದೇಶನದಲ್ಲಿ ಪ್ರದರ್ಶಿಸಿದಾಗ ಇದೇ ಸಿದ್ದಾಂತಿ ವಿಮರ್ಶಕ ಅದ್ಬುತ ನಾಟಕ ಎಂದು ಹೇಳಿ ಹೊಗಳಿದೆ. ಇಲ್ಲಿ ನಾಟಕಕ್ಕಿಂತ ನಾಟಕ ಮಾಡಿಸಿದವನ ಹಿನ್ನೆಲೆ ಮುಖ್ಯವಾಗಿಸಿಕೊಂಡು ವಿಮರ್ಶೆ ಮಾಡುವುದಾದರೆ ಇದಕ್ಕೆ ಪೀತಕಣ್ಣಿನ ವಿಮರ್ಶೆ ಎನ್ನಬಹುದಾಗಿದೆ. ರಂಗವಿಮರ್ಶೆಗೆ ಹುಸಿ ಸಿದ್ದಾಂತವಾದಿಗಳಿಗಿಂತ ರಂಗಪ್ರಯೋಗ ಏನು ಹೇಳುತ್ತದೆ ಎನ್ನುವುದು ಮುಖ್ಯವಾಗಬೇಕಿದೆ. ಸಿಂಹರವರಿಗೆ ಸಿಟ್ಟು ಸಾವಕಾಶ ಏರತೊಡಗಿತ್ತು. ಅದನ್ನು ತಣ್ಣಗೊಳಿಸಲೋ ಎನ್ನುವಂತೆ ಒಂದಿಷ್ಟು ನೀರು ಕುಡಿದು ಮತ್ತೆ ಮಾತು ಮುಂದುವರೆಸಿದರು. ಮುಂದೆ ನನ್ನ ಪತ್ರಿಕೆಯ ಬಗ್ಗೆ ಪ್ರಸ್ತಾಪಿಸಿದರು. ನನ್ನ ಲೇಖನದ ಬಗ್ಗೆ ಗ್ಯಾರಂಟಿಯಾಗಿ ಆಬ್ಜೆಕ್ಟ ಮಾಡುತ್ತಾರೆ ಎಂದು ನನಗೆ ಕನ್ಪರಂ ಆಯಿತು. ಸೀನಣ್ಣ ನನ್ನ ಮುಖ ನೋಡಿದ. ನಾನು ಅವನ ಮುಖ ನೋಡಿದೆ. ಆದರೆ ನಮ್ಮಿಬ್ಬರ ಆತಂಕವನ್ನು ಸಿಂಹ ಹುಸಿಗೊಳಿಸಿದ್ದರು


ಅವರದು ಏಕವ್ಯಕ್ತಿ ಪ್ರದರ್ಶನದ ಕುರಿತ ಮಾತಾಗಿತ್ತು. ‘‘ಶಶಿಕಾಂತ ಯಡಹಳ್ಳಿ ಒಂದು ರಂಗಪತ್ರಿಕೆ ಹೊರತರುತ್ತಿದ್ದಾರೆ. ರಂಗಭೂಮಿ ವಿಶ್ಲೇಷಣೆ ಪತ್ರಿಕೆ ಉತ್ತಮವಾದ ಕೆಲಸ ಮಾಡುತ್ತಿದೆ. ನಾಟಕಗಳ ಕುರಿತು ವಸ್ತುನಿಷ್ಟವಾದ ದಾಖಲೆ ಮಾಡುತ್ತಿದೆ. ಹಲವು ಸಂಚಿಕೆಗಳನ್ನು ನಾನು ಓದಿದ್ದೇನೆ. ಏಕವ್ಯಕ್ತಿ ರಂಗಪ್ರಯೋಗ ಕುರಿತ ವಿಶೇಷಾಂಕವನ್ನೇ ಹೊರತಂದಿದೆ. ಇದು ನಿಜಕ್ಕೂ ಅದ್ಬುತವಾದದ್ದು, ಏಕವ್ಯಕ್ತಿ ನಾಟಕೋತ್ಸವವೊಂದನ್ನು ನಾವು ಮಾಡಿದ್ದೆವು. ಅದರಲ್ಲಿ ಪ್ರಯೋಗಗೊಂಡ ಏಳು ಏಕವ್ಯಕ್ತಿ ಪ್ರದರ್ಶನಗಳ ಕುರಿತು ಶಶಿಕಾಂತ ಎಂಬತ್ತು ಪುಟಗಳ ಒಂದು ವಿಶೇಷ ಸಂಚಿಕೆಯನ್ನೇ ಹೊರತಂದರು. ಏಕವ್ಯಕ್ತಿ ಪ್ರದರ್ಶನದ ಹಿನ್ನೆಲೆ, ಚರಿತ್ರೆ, ಕನ್ನಡ ರಂಗಭೂಮಿಯಲ್ಲಿ ಇಲ್ಲಿವರೆಗೂ ಆದ ಎಲ್ಲಾ ಒನ್ಮ್ಯಾನ್ ಶೋಗಳ ಸಂಪೂರ್ಣ ವಿವರ ಹಾಗೂ ವಿಮರ್ಶೆ ಸಂಚಿಕೆಯಲ್ಲಿತ್ತು....  ಎಂದು ಹೇಳಿದ ಸಿಂಹ ನನ್ನ ಮುಖವನ್ನು ನೋಡಿ ಒಂದು ನಿಮಿಷ ಸುಮ್ಮನಾದರು. ನನಗೆ ನಿರಾಳವೆನಿಸಿತು. ಅನಗತ್ಯವಾಗಿ ಆತಂಕಗೊಂಡಿದ್ದೆನೆನ್ನಿಸಿತು.  ಅವರ ಮೇಲೆ ಧನ್ಯತೆಯ ಭಾವ ಮೂಡಿತು. ಆದರೆ ಮರುಕ್ಷಣದಲ್ಲಿ ಸಿಂಹ ಕೆರಳಿದರು.


ಆದರೆ.... ಎನ್ನುವ ಪೀಠಿಕೆ ಹಾಕಿದರು. ವಿಶೇಷಾಂಕದ ಕೊನೆ ಪುಟದಲ್ಲಿ  ಒಂದು ಓಪೀನಿಯನ್ ಹಾಕಲಾಗಿದೆ. ಏಕವ್ಯಕ್ತಿ ರಂಗಪ್ರಯೋಗ ರಂಗಭೂಮಿಗೆ ಅಂಟಿಕೊಂಡ ರೋಗ ಎಂದು ಹೇಳಲಾಗಿತ್ತು. ಯಾರು ಹಾಗೆ ಹೇಳಿದ್ದು? ಅದು ಸಿ.ಬಸವಲಿಂಗಯ್ಯ.  ಆತ ನಮ್ಮ ಕನ್ನಡ ರಂಗಭೂಮಿಯಲ್ಲಿ ಒಬ್ಬ ಪ್ರತಿಷ್ಠಿತ ನಿರ್ದೇಶಕ. ಕುಸುಮಬಾಲೆ, ಗಾಂಧಿ ವಿರುದ್ಧ ಗಾಂಧಿ ಎನ್ನುವ ಉತ್ತಮ ನಾಟಕಗಳನ್ನು ನಿರ್ದೇಶಿಸಿದವರು. ಅವರ ಮೇಲೆ ನನಗೆ ಗೌರವವಿದೆ. ಅವರಿಗೆ ಏಕವ್ಯಕ್ತಿ ಪ್ರದರ್ಶನಗಳ ಬಗ್ಗೆ ಆಸಕ್ತಿ ಇಲ್ಲದಿದ್ದರೆ ತುಂಬಾ ಸಂತೋಷ,  ಮಾಡಬೇಡಿ, ಮಾಡಿಸ್ಬೇಡಿ ನೋಡಲೂ ಬೇಡಿ. ಹಾಗಾದರೆ ಒನ್ ಮ್ಯಾನ್ ಶೋ ಎನ್ನುವುದೊಂದು ರೋಗವೇ? ನಾನು ಕಳೆದ ಇಪ್ಪತ್ತಾರು ವರ್ಷಗಳಿಂದ ಬೆಂಗಳೂರು, ಕರ್ನಾಟಕ, ಭಾರತ, ಅಮೇರಿಕಾ, ಕೆನಡಾ, ಇಂಗ್ಲೆಂಡ್.. ಮುಂತಾದ ಹದಿನೈದು ದೇಶಗಳಲ್ಲಿ ಟಿಪಿಕಲ್ ಟಿ.ಪಿ.ಕೈಲಾಸಂ ಏಕವ್ಯಕ್ತಿ ನಾಟಕದ ನೂರಾರು ಪ್ರದರ್ಶನಗಳನ್ನು ಮಾಡಿದ್ದೇನೆ. ಅಸಂಖ್ಯಾತ ಜನ ನೋಡಿ ಮೆಚ್ಚಿದ್ದಾರೆ. ಇದೊಂದು ರೋಗವೇ ಆಗಿದ್ದರೆ, ಇಂತಹ ನಾಟಕವನ್ನು ಮಾಡುತ್ತಿರುವ ನಾನು ಒಂದು ರೋಗವನ್ನು ಹಂಚತಾ ಇದ್ದೇನೆ. ನನ್ನ ನಾಟಕವನ್ನು ನೋಡಿದವರಿಗೆ ರೋಗ ತಗುಲಿಕೊಂಡು ಅವರು ರೋಗಿಷ್ಠರಾಗಿಬಿಡ್ತಾರೆ. ನಾನು ರೋಗವನ್ನು ದೇಶ ವಿದೇಶಗಳಲ್ಲಿ ಕೊಟ್ಟು ಕೊಟ್ಟು ರೋಗಿಷ್ಟನಾಗಿಬಿಟ್ಟಿದ್ದೇನೆ.  ಹೀಗಾಗಿ ನಾನು ರಂಗಭೂಮಿಯಲ್ಲಿ ರೋಗ ಹರಡಿ ಅದನ್ನು ನಾಶ ಮಾಡ್ತಿದ್ದೇನೆ ಅನ್ನೋದು ಬಸವಲಿಂಗಯ್ಯನವರ ಭಾವನೆಯಾದಂತಿದೆ.  ಆದರೆ ನಾನು ಇಲ್ಲಿವರೆಗೂ ನಾಶವಾಗಿಲ್ಲ. ನಮ್ಮ ಕನ್ನಡ ರಂಗಭೂಮಿಯೂ ನಾಶವಾಗಿಲ್ಲ. ನನ್ನ ನಾಟಕ ನೋಡಿದವರೂ ನಾಶವಾಗಿಲ್ಲ. ನಾನಂತೂ ಕೈಲಾಸಂ ನಾಟಕವನ್ನು ಒಂದು ಸಿಹಿ ಎಂದುಕೊಂಡೇ ವಿಶ್ವಾದ್ಯಂತ ಹಂಚಿದ್ದೇನೆ. ನೋಡಿದವರೂ ಸಹ ಇದು ಸಿಹಿಯಾಗಿತ್ತು ಅನ್ಕೊಂಡಿದ್ದಾರೆ ಹಾಗೂ ಮತ್ತೆ ಮತ್ತೆ ನೋಡಿ ಸವಿಯುತ್ತಿದ್ದಾರೆ. ಆದರೆ ಡಯಾಬಿಟಿಸ್ ಇರೋರಿಗೆ ಸಿಹಿ ಅಪತ್ಯವಾಗಿ ಅವರ ರೋಗ ಉಲ್ಬಣವಾಗುತ್ತದೆ. ಈಗ ಹೇಳಿ ಸಿಹಿ ತಿಂದು ಸಂತೃಪ್ತರಾದ ಸಾವಿರಾರು ಜನ ರೋಗಿಷ್ಟರಾ ಇಲ್ಲವೇ ಡಯಾಬಿಟಿಸ್ ಇರೋನಾ?  ನಾವು ಬಳಸುವ ಭಾಷೆ ಬಗ್ಗೆ, ಉಪಯೋಗಿಸುವ ಪದಗಳ ಬಗ್ಗೆ ತುಂಬಾ ಜವಾಬ್ದಾರಿ ಹೊಂದಿರಬೇಕಾಗಿರುತ್ತದೆ. ರೀತಿ ಆರೋಪ ಮಾಡುವುದು ನನ್ನ ಮಟ್ಟಿಗೆ ಸರಿಯಾದದ್ದಲ್ಲಾ. ಒಬ್ಬರು ಮೂವತ್ತು ಜನ ಕಲಾವಿದರನ್ನಿಟ್ಟುಕೊಂಡು ನಾಟಕ ಮಾಡಿದರೆ, ಇನ್ನೊಬ್ಬ ಒಬ್ಬನೇ ನಾಟಕ ಮಾಡುತ್ತಾನೆ. ಒಟ್ಟಿನ ಮೇಲೆ ರಂಗದ ಮೇಲೆ ಒಂದು ಕ್ರಿಯ ಆಯಿತಾ,  ನಾಟಕ ನೋಡುಗರಿಗೆ ಅನುಭವವನ್ನು ಕಟ್ಟಿ ಕೊಟ್ಟಿತಾ ಎನ್ನುವುದು ಮಾತ್ರ ಮುಖ್ಯವಾಗುತ್ತದೆಯೇ ಹೊರತು ಎಷ್ಟು ಜನ ಅಭಿನಯಿಸಿದರು ಎನ್ನುವುದು ಮುಖ್ಯವಾಗುವುದೇ ಇಲ್ಲ. ಸುಮ್ಮನೇ ರೋಗ ಎನ್ನುವ ಉಡಾಫೆ ಮಾತು ರೋಗಿಷ್ಟ ಮನಸ್ಥಿತಿಯವರಿಂದ ಮಾತ್ರ ಸಾಧ್ಯ... ಹೀಗೆ ಸಿಂಹರವರು ತಮ್ಮ ಮನದಾಳದಲ್ಲಿ ಕಳೆದ ಎರಡು ವರ್ಷಗಳಿಂದ ಉಳಿದು ಹೋಗಿದ್ದ ಕಹಿಯನ್ನು ಹೊರಹಾಕಿದರು.


ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಏಕವ್ಯಕ್ತಿ ಪ್ರದರ್ಶನವೊಂದು ರಂಗಭೂಮಿಗಂಟಿದ ರೋಗ ಎನ್ನುವ ಸಿ.ಬಸವಲಿಂಗಯ್ಯನವರ ಒಂದು ಪುಟದ ಅಭಿಪ್ರಾಯ ಸಿಂಹರವರನ್ನು ಘಾಸಿಗೊಳಿಸಿತ್ತು. ಅದಕ್ಕೆ ಸೂಕ್ತ ಉತ್ತರ ಕೊಡಲು ಸಿಂಹರವರು ಕಾಯ್ದಂತಿತ್ತು. ವಿಮರ್ಶಾ ಕಾರ್ಯಾಗಾರ ಅವರಿಗೆ ಒಂದು ಉತ್ತಮ ಅವಕಾಶವನ್ನೊದಗಿಸಿಕೊಟ್ಟಿತ್ತು. ಅವಕಾಶವನ್ನು ಅವರು ಸಮರ್ಥವಾಗಿಯೇ ಉಪಯೋಗಿಸಿಕೊಂಡು ತಮ್ಮ ಪ್ರತ್ಯುತ್ತರವನ್ನು ಸಮರ್ಪಕವಾಗಿಯೇ ಕೊಟ್ಟಿದ್ದರು. ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಹೊಡೆದಿದ್ದರು. ಒಂದು ಕಡೆ ಹುಸಿ ಸಿದ್ದಾಂತಿಗಳನ್ನು ತರಾಟೆಗೆ ತೆಗೆದುಕೊಂಡರೆ, ಇನ್ನೊಂದು ಕಡೆ ಏಕವ್ಯಕ್ತಿ ರಂಗಪ್ರಕಾರವನ್ನು ರೋಗ ಎಂದು ಜರಿದ ಬಸವಲಿಂಗಯ್ಯನವರನ್ನು ನಿವಾಳಿಸಿ ಬಿಸಾಕಿದ್ದರು. ದ್ಯಾಟ್ಸ ಸಿಂಹ. ಸಿಂಹ ಆಕ್ರೋಶಗೊಂಡರೆ ಸೂಕ್ತ ಅವಕಾಶಕ್ಕಾಗಿ ಕಾಯ್ದು ಪ್ರತೀಕಾರ ತೀರಿಸಿಕೊಳ್ಳುತ್ತದೆನ್ನುವುದಕ್ಕೆ ನಮ್ಮ ರಂಗಸಿಂಹ ಸಾಕ್ಷಿಯಾದರು. ಅವರು ಅಂದು ಉದ್ಭಾಟನೆಗೆ ಬಂದ ಉದ್ದೇಶ ಈಡೇರಿತ್ತು. ನಂತರ ಸಿಂಹ ತಣ್ಣಗಾಯಿತು.

ನನಗಿಂತಲೂ ಸೀನಣ್ಣನಿಗೆ ತುಂಬಾ ಖುಷಿಯಾಗಿತ್ತು. ನನ್ನ ಮೇಲೆ ಸಿಂಹ ಆಕ್ರಮಣ ಮಾಡಲಿಲ್ಲ ಎನ್ನುವುದಕ್ಕಿಂತಲೂ ಸಿ.ಬಸವಲಿಂಗಯ್ಯನವರ ಮೇಲೆ ಸಿಂಹ ಎಗರಿ ಬಿದ್ದಿದ್ದು ಅವನ ಖುಷಿಗೆ ಕಾರಣವಾಗಿತ್ತು. ಅದ್ಯಾಕೋ ಮೊದಲಿನಿಂದಲೂ ಬಸಣ್ಣನ ಮೇಲೆ ಸೀನಣ್ಣನಿಗೆ ಹಲವಾರು ಆಕ್ಷೇಪಗಳಿದ್ದವು. ಅವತ್ತಿನ ಉದ್ಘಾಟನೆ ಹಾಗೂ ನಂತರ ಮಾತನಾಡಿದ ಎಲ್ಲಾ ಅತಿಥಿಗಳ ಮಾತುಗಳು ತುಂಬಾ ಸೊಗಸಾಗಿದ್ದವು. ಶಿಬಿರಾರ್ಥಿಗಳಿಗೆ ಅವರ ಮಾತುಗಳು ಉಪಯುಕ್ತವಾಗಿದ್ದವು.


ಕಾರ್ಯಕ್ರಮ ಮುಗಿದಿದ್ದು ಮದ್ಯಾಹ್ನ ಒಂದು ಗಂಟೆಗೆ. ಎರಡು ಗಂಟೆಯವರೆಗೂ ಶಿಬಿರಾರ್ಥಿಗಳಿಗೆ ಊಟದ ಬಿಡುವು ಕೊಟ್ಟೆ. ಹೊರಗೆ ಬಂದು ಸಿಂಹರವರೊಂದಿಗೆ ಮಾತು ಮುಂದುವರೆಸಿದೆ. ಹಾಗೇ ಮಾತು ಸಿಂಹರವರ ಕಾರ್ನಾಡ ಕಂಪನಿ ನಾಟಕದತ್ತ ಹೊರಳಿತು. ನಾಟಕಕ್ಕೆ ನಾನು ಬರೆದ ವಿಮರ್ಶೆ ಕುರಿತು ನೀವು ತಕರಾರು ಮಾಡುತ್ತೀರೆಂದುಕೊಂಡಿದ್ದೆ ಎಂದು ಸಿಂಹರವರನ್ನು ನಾನು ಕೇಳಿದೆ. ಅರೆ ಅದರಲ್ಲೇನು ತಪ್ಪಿದೆ. ನೀವು ಬರೆದದ್ದು ಸರಿಯಾಗೇ ಇದೆ. ನನಗೆ ಕಾರ್ನಾಡರ ಬಗ್ಗೆ ಮೊದಲಿನಿಂದಲೂ ಮೋಹ ಇದ್ದೇ ಇದೆ. ಅದನ್ನೇ ನಾಟಕದಲ್ಲಿ ತೋರಿಸಿದ್ದೇನೆ. ನೀವು ಅದನ್ನು ಸರಿಯಾಗಿ ಗುರುತಿಸಿದ್ದೀರಿ. ಜೊತೆಗೆ ಇವತ್ತು ಹೇಳಿದೆನಲ್ಲ ಸಿದ್ದಾಂತವಾದಿ ವಿಮರ್ಶಕರ ಬಗ್ಗೆ, ಅಂತವರ ಬಗ್ಗೆ ನನಗೆ ಮೊದಲಿಂದಲೂ ಬೇಸರವಿದೆ. ಅಂತವರನ್ನು ಮನಸ್ಸಲ್ಲಿಟ್ಟುಕೊಂಡು ನಾಟಕದಲ್ಲಿ ವಿಮರ್ಶಕರನ್ನು ಲೇವಡಿ ಮಾಡಿದ್ದೇನೆಯೇ ಹೊರತು ನಿಜವಾಗಿ ರಂಗಭೂಮಿ ಬೆಳವಣಿಗೆಗೆ ಪೂರಕವಾಗಿ ಬರೆಯುವ ವಿಮರ್ಶಕರ ಕುರಿತಾಗಿ ನನ್ನ ಆಕ್ಷೇಪಣೆ ಇಲ್ಲಾ.... ಸಿಂಹರವರ ಮಾತನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿ ಹಾಗೂ ಅವರ ಕುರಿತು ಹೆಮ್ಮೆಯಾಯಿತು. ಒಂಚೂರು ನೆಗೆಟಿವ್ ವಿಮರ್ಶೆ ಇದ್ದರೆ ವಿಮರ್ಶೆ ಬರೆಯುವವರೊಂದಿಗೆ ಜಗಳಕ್ಕೆ ಇಳಿಯುವವರೂ ಇದ್ದಾರೆ. ಇದೇ ಸಿ.ಬಸವಲಿಂಗಯ್ಯನವರ ನಾಟಕವೊಂದಕ್ಕೆ ನಾನು ಕಟ್ ಆಂಡ್ ಪೇಸ್ಟ್ ನಾಟಕ ಎಂದು ವಿಮರ್ಶೆ ಬರೆದಿದ್ದಕ್ಕೆ ಆರು ತಿಂಗಳು ಅವರು ಮುನಿಸಿಕೊಂಡು ಮಾತಾಡುವುದನ್ನೇ ಬಿಟ್ಟಿದ್ದರು. ಆದರೆ ಸಿಂಹರಂತಹ ಮೇರು ನಟ ರಂಗವಿಮರ್ಶೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದು ನಿಜಕ್ಕೂ ಅವರ ರಂಗಬದ್ಧತೆಯನ್ನು ತೋರಿಸುವಂತಹುದು.  ಹ್ಯಾಟ್ಸ್ಆಪ್ ಟು ಸಿಂಹ.

ಕಳೆದ ವಾರ ಫೆ.28ರಂದು ಸಂಸ ರಂಗಮಂದಿರದಲ್ಲಿ ಸಿ.ಆರ್.ಸಿಂಹರವರ ಪಾರ್ಥಿವ ಶರೀರಕ್ಕೆ ನಮಸ್ಕರಿಸಿ ಅವರಿಗೆ  ಕೊಟ್ಟ ಕೊನೆಯ ವಿದಾಯ ಹೇಳುವಾಗ ಮೇಲಿನ ಘಟನೆ ಇದ್ದಕ್ಕಿದ್ದಂತೆ ನೆನಪಾಯಿತು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ಏಕವ್ಯಕ್ತಿ ರಂಗಪ್ರಯೋಗದ ಹರಿಕಾರರಾದ ನಮ್ಮ ತುಘಲಕ್ ಹೀಗೆ ಚಿರನಿದ್ರೆಯಲ್ಲಿದ್ದದ್ದು ನೋಡಿ ನಿಜಕ್ಕೂ ನನ್ನ ಸಣ್ಣ ಕರಳು ಚುರಕ್ಕೆಂದಿತು. ಆಗಲೇ ಹಾಡು ಗಾಳಿಯಲ್ಲಿ ಅಲೆಯಲೆಯಾಗಿ ತೇಲಿ ಬಂದಿತು.

                         

                             ಹೋಗುವುದಿದ್ದರೆ ಹೋಗಿಬಿಡು ತಡೆಯಲಾರೆ,
                             ಹೋಗುವ ಮುಂಚೆ ಒಂದು ಮಾತು
                             ಹೇಳಿ ಹೋಗು ಕಾರಣ......



ಸೂತಕದ ವೇದಿಕೆಯ ಎಡಪಾರ್ಶ್ವದಲ್ಲಿ ರಾಮಚಂದ್ರ ಹಡಪದ ಶೋಕಸಾಗದಲ್ಲಿ ಪದಪದಗಳನ್ನು ಎದ್ದಿ ತೆಗೆದು ಹಾಡುತ್ತಿದ್ದರು. ನನಗೆ ನಿಜಕ್ಕೂ ವಿಸ್ಮಯವಾಗಿದ್ದು ಅದು ನಾನು ಬರೆದ ಹಾಡು ಎನ್ನುವುದಕ್ಕಿಂತಲೂ ಅದು ಹಾಡಿದ ಸಂದರ್ಭವನ್ನು ಅರಿತು. ಯಾಕೆಂದರೆ ಹಾಡನ್ನು ಬರೆದಿದ್ದು ಹೆಂಡತಿಯೊಬ್ಬಳು ಗಂಡನ ಮೇಲೆ ಮುನಿಸಿಕೊಂಡು ಪರ್ಮನೆಂಟಾಗಿ ಆತನನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ ಗಂಡನಾದವನು ಹೆಂಡತಿಗೆ ಹೋಗುವುದಿದ್ದರೆ ಹೋಗಿಬಿಡು ತಡೆಯಲಾರೆ, ಹೋಗುವ ಮುಂಚೆ ಒಂದೇ ಮಾತು, ಹೇಳಿ ಹೋಗು ಕಾರಣ...... ಎಂದು ಅವಲತ್ತುಕೊಳ್ಳುತ್ತಾನೆ.  ದೇಹ ನೀನು, ಪ್ರಾಣ ನಾನು, ಬಿಟ್ಟು ಇರಲುಂಟೆ. ಅಗಲಿದರೆ ಕೊನೆಗುಳಿವುದೊಂದೆ ಸಾವು.... ಎಂದು ಹಡಪದ ದೀರ್ಘ ಶೋಕಾಲಾಪ ಮಾಡಿದಾಗ ನನ್ನ ಕಣ್ಣಂಚಿನಲ್ಲಿ ನೀರು. ಅಳುವ ಹಾಗೂ ಇಲ್ಲಾ. ಯಾಕೆಂದರೆ ಸಿಂಹರವರು ತಮ್ಮ ಸಾವಿಗೆ ಯಾರು ಅಳಬಾರದು ಎಂದು ಆಜ್ಞಾಪಿಸಿಯೇ ಹೋಗಿದ್ದರು.

ಸಿಂಹರವರನ್ನು ಕೊಟ್ಟ ಕೊನೆಯ ಬಾರಿಗೆ ಒಂದು ಬಾರಿ ನೋಡಿ ನಂತರ ರಾಮಚಂದ್ರ ಹಡಪದರವರನ್ನೊಮ್ಮೆ ನೋಡಿದೆ. ಅಲ್ಲಿ ಅದ್ಭುತ ಕಲಾವಿದ ಮಲಗಿದ್ದರೆ, ಇಲ್ಲಿ ಇನ್ನೊಬ್ಬ ಅನನ್ಯ ಹಾಡುಗಾರ ಕಲಾವಿದನಿಗೆ ಚರಮಗೀತೆ ಹಾಡುತ್ತಿದ್ದಾರೆ. ನಾನು ಯಾವತ್ತೋ ಗಂಡು ಹೆಣ್ಣಿನ ನಡುವಿನ ಅಗಲಿಕೆ ನೋವು ಸಾವಿನ ಕುರಿತು ಬರೆದ ಹಾಡನ್ನು ಸೂತಕದ ಮನೆಗೂ ಹೊಂದಾಣಿಕೆಯಾಗುವಂತೆ ಹಡಪದ ಹಾಡುತ್ತಿದ್ದಾರೆ. ನಾನು ಕನಸಲ್ಲೂ ನೆನಸಿರಲಿಲ್ಲ ಹಾಡು ಇಂತಹ ಸಂದರ್ಭಕ್ಕೂ ಸೂಕ್ತವಾಗುತ್ತದೆಂದು. ಅಂತಹ ಅಭಿಜಾತ ರಂಗ ಕಲಾವಿದನಿಗೆ ಅಂತಿಮ ನಮನ ಹೇಳಲಾದರೂ ನನ್ನದೊಂದು ಕವಿತೆ ಚರಮಗೀತೆಯಾಗಿ ಬಳಕೆಯಾಯಿತಲ್ಲಾ ಅದೇ ನನ್ನ ಸೌಭಾಗ್ಯ ಹಾಗೂ ನನ್ನ ಕವಿತೆಯ ಸಾರ್ಥಕತೆ. ಸಿಂಹರವರಿಗೆ ಹಡಪದ ಹಾಡುನಮನವನ್ನರ್ಪಿಸಿದರೆ, ನಾನಿಲ್ಲಿ ಸಿಂಹರವರ ನೆನಪಿನಲ್ಲಿ ನುಡಿನಮನಗಳನ್ನು ಸಮರ್ಪಿಸುತ್ತೇನೆ.   

                                   -ಶಶಿಕಾಂತ ಯಡಹಳ್ಳಿ 
                         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ