ಬುಧವಾರ, ಮಾರ್ಚ್ 19, 2014

“ಸಂಕ್ರಮಣ” ದಲ್ಲಿ ತಲೆಮಾರಿನ ತಕರಾರು






ರಂಗವೇದಿಕೆಯ ಮೇಲೆ ಒಬ್ಬರೇ ನಟಿಸಿದರೆ ಏಕವ್ಯಕ್ತಿ ಪ್ರಯೋಗವೆನ್ನುತ್ತಾರೆ. ಮೂವರು ನಟರು ಒಬ್ಬರ ನಂತರ ಒಬ್ಬರು ಏಕವ್ಯಕ್ತಿ ಪ್ರಯೋಗ ಮಾದರಿಯಲ್ಲಿ ನಟಿಸಿ ತೋರಿಸಿದರೆ ಸಂಕ್ರಮಣ ನಾಟಕವೆನ್ನಬಹುದು. ನಾಟಕದ ವಿಭಿನ್ನ ಸಾಧ್ಯತೆಯನ್ನು ತೋರಿಸುವ ಪ್ರಯತ್ನ ನಾಟಕದಲ್ಲಿದೆ. ಎಸ್.ಸುರೇಂದ್ರನಾಥರವರು ಸಂಕ್ರಮಣ ನಾಟಕವನ್ನು ರಚಿಸಿ ಸಂಕೇತ್ ತಂಡಕ್ಕೆ ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ 2014, ಮಾರ್ಚ19 ರಂದು ಸಂಕ್ರಮಣ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು. ಇದು ನಲವತ್ತೇಳನೆಯ ಪ್ರದರ್ಶನವಾಗಿದೆ.
 
ಮನೆಮನೆಯ ಕಥೆಯನ್ನು ಹೇಳುವ ನಾಟಕದ ನಿರೂಪನಾ ಶೈಲಿ ವಿಶಿಷ್ಟವಾಗಿದೆ. ವೃದ್ದ ತಂದೆ, ತಾಯಿ ಹಾಗೂ ಮಗ ಮೂರು ಪಾತ್ರಗಳು ನಾಟಕದಲ್ಲಿ ಮೂರು ಆಯಾಮಗಳನ್ನು ತೆರೆದಿಡುತ್ತವೆ. ತಂದೆ ಮತ್ತು ಮಗನ ನಡುವಿನ ತಲೆಮಾರಿನ ಅಂತರ ಹಾಗೂ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಹೇಳಲಾಗಿದೆ. ಬಹುಷಃ ಎಲ್ಲಾ ಮನೆಯೊಳಗಿನ ಕಥೆ ಮತ್ತು ವ್ಯಥೆಗಳನ್ನು ಆಯ್ದು ನಾಟಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

 ಮೊದಲು ವಯೋವೃದ್ದ ತಂದೆ ವೇದಿಕೆಗೆ ಬಂದು, ತನ್ನ ಮನೆತನದ ಹಿನ್ನಲೆಯನ್ನು, ತಾನು ಅನುಭವಿಸಿದ ಸಂಕಷ್ಟಗಳನ್ನು ಹೇಳುತ್ತಾ ತಾನು ಬೆಳೆದ ರೀತಿ ಹಾಗೂ ತನ್ನ ಮಗನನ್ನು ಬೆಳೆಸಿದ ಬಗೆಯನ್ನು ತನ್ನದೇ ಆದ ರೀತಿಯಲ್ಲಿ ಮುಕ್ಕಾಲು ಗಂಟೆ ವಿವರಿಸುತ್ತಾನೆ. ತನ್ನ ಮಗನ ಬೇಜವಾಬ್ದಾರಿತನವನ್ನು ಹಲವಾರು ಉದಾಹರಣೆಗಳ ಮೂಲಕ ಲೇವಡಿ ಮಾಡುತ್ತಾ ವೇದಿಕೆಯಿಂದ ತೆರಳುತ್ತಾನೆ. ನಂತರ ಬರುವ ಮಗ ತನ್ನ ತಂದೆಯ ವಟಗುಟ್ಟುವಿಕೆ, ಚಿಕ್ಕಪುಟ್ಟದ್ದಕ್ಕೂ ಕೊಡುವ ಅನಗತ್ಯ ಮಹತ್ವ, ರೇಜಿಗೆ ಹುಟ್ಟಿಸುವಷ್ಟು ಅತಿಯಾದ ಶಿಸ್ತು, ಮುಜುಗರ ಹುಟ್ಟಿಸುವ ವರ್ತನೆಗಳನ್ನು ಕುರಿತು ಅರ್ಧಗಂಟೆಗಳ ಕಾಲ ವಿಡಂಬನಾತ್ಮಕವಾಗಿ ವಿಶ್ಲೇಷಿಸಿದ ನಂತರ ನೇಪತ್ಯದತ್ತ ಹೊರಡುತ್ತಾನೆ. ತದನಂತರ ಬರುವ ಆತನ ತಾಯಿ ಟಾಯ್ಲೆಟ್ ಟ್ಯಾಂಕ ರಿಪೇರಿ ಮಾಡಲು ಹೋಗಿ ಕೆಳಗೆ ಬಿದ್ದು ಆಸ್ಪತ್ರೆ ಸೇರಿದ ತನ್ನ ಗಂಡ ತೀರಿಕೊಂಡಿದ್ದನ್ನು ವಿವರಿಸುತ್ತಲೇ ತನ್ನ ಗಂಡ ಹಾಗೂ ಮಗನ ನಡುವಿನ ಭಿನ್ನಾಭಿಪ್ರಾಯಗಳ ಗಂಟನ್ನು ಕಾಲು ಗಂಟೆಯ ಕಾಲ ಬಿಚ್ಚಿಡುತ್ತಾಳೆ. ತಂದೆಯ ಸಾವಿನ ನಂತರ ಸಂಪೂರ್ಣ ಬದಲಾದ ಮಗ ತನ್ನ ತಂದೆಯಂತೆಯೇ ನಡುವಳಿಕೆ ತೋರುತ್ತಿರುವುದನ್ನು ವಿವರಿಸುತ್ತಾಳೆ. ರಂಗದಂಗಳದಲ್ಲಿ ಕತ್ತಲೆ ಮೂಡುತ್ತದೆ. ಇಲ್ಲಿಗೆ ಒಂದೇ ಕುಟುಂಬದ  ಮೂರು ಪಾತ್ರಗಳ ಏಕಪಾತ್ರಾಭಿನಯ ಸಮಾಪ್ತಿಯಾಗುತ್ತದೆ.

ಎಲ್ಲ ಕಾಲಕ್ಕೂ ಎಲ್ಲಾ ಕುಟುಂಬಗಳಲ್ಲೂ ತಂದೆ ಮಗನ ನಡುವೆ ಇರಬಹುದಾದ ಭಿನ್ನಾಭಿಪ್ರಾಯಗಳನ್ನು ನಾಟಕದಲ್ಲಿ ಸ್ವಗತದ ರೂಪದಲ್ಲಿ ಹೇಳಲಾಗಿದೆ. ರೀತಿಯ ಅಭಿಪ್ರಾಯ ಬೇಧಕ್ಕೆ ಜನರೇಶನ್ ಗ್ಯಾಪ್ ಕೂಡಾ ಕಾರಣವಾಗಿದೆ. ಒಂದು ತಲೆಮಾರಿನ ಅನುಭವದ ಮಾತುಗಳು ಮುಂದಿನ ತಲೆಮಾರಿನವರಿಗೆ ಶುಷ್ಕ ಉಪದೇಶವಾಗಿ ಕೇಳಿಸುತ್ತದೆ. ತನ್ನ ಸಂತಾನ ತನ್ನಷ್ಟೇ ಜವಾಬ್ದಾರಿಯನ್ನು ತೋರಬೇಕು. ಎಲ್ಲದರಲ್ಲೂ ಶಿಸ್ಸು ಸಂಯಮ ರೂಢಿಸಿಕೊಳ್ಳಬೇಕು, ಅಂದಾದುಂದಿ ಮಾಡದೇ ಎಲ್ಲದರಲ್ಲೂ ಉಳಿತಾಯ ಮಾಡಬೇಕು, ಅಚ್ಚುಕಟ್ಟಾಗಿ ಕುಟುಂಬ ನಿರ್ವಹಣೆ ಮಾಡಬೇಕು ಹಾಗೂ ದೊಡ್ಡವರಿಗೆ ವಿಧೇಯರಾಗಿರಬೇಕು ಎಂದೇ ಎಲ್ಲಾ ಹಿರಿಯರೂ ಬಯಸುತ್ತಾರೆ. ಆದರೆ ಹಿರಿಯರ ಮಾತುಗಳು ಕಿರಿಯರಿಗೆ ಅಸಾಧ್ಯ ಕಿರಿಕಿರಿಯನ್ನುಂಟು ಮಾಡುತ್ತವೆ. ಅವರ ಸ್ವಾತಂತ್ರ್ಯ ಹರಣವನ್ನು ಹಿರಿಯರು ಮಾಡುತ್ತಾರೆಂದೇ ತಿಳಿದು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಾರೆ. ಯಾವಾಗ ಕಿರಿಯರು ತಮ್ಮ ಮಾತನ್ನು ಪಾಲಿಸುವುದಿಲ್ಲವೋ ಆಗ ಅಸಹಾಯಕರಾದ ಹಿರಿಯರು ವಟಗುಟ್ಟತೊಡಗುತ್ತಾರೆ. ಆಗ ಎರಡು ತಲೆಮಾರುಗಳಲ್ಲಿ ಹೊಂದಾಣಿಕೆ ಕಡಿಮೆಯಾಗಿ ಸಣ್ಣಪುಟ್ಟದ್ದಕ್ಕೂ ತಕರಾರು ಶುರುವಾಗುತ್ತದೆ. ರೀತಿಯ ತಕರಾರುಗಳೇ ನಾಟಕದ ಮೂಲ ದ್ರವ್ಯವಾಗಿದೆ.

  ಹಿರಿಕಿರಿಯ ತರೆಮಾರಿನ ಭಿನ್ನಾಭಿಪ್ರಾಯದ ಸಮಸ್ಯೆಗೆ ನಾಟಕ ಯಾವುದೇ ಪರಿಹಾರವನ್ನು ಸೂಚಿಸುವುದಿಲ್ಲ. ರೀತಿಯ ಪರಿಹಾರವನ್ನು ಕಾಲಕ್ಕೆ ಬಿಡಲಾಗಿದೆ. ಅಂದರೆ ಒಂದು ಪರಿವರ್ತನೆಯ ದಾರಿಯನ್ನು ನಾಟಕ ತೋರಿಸುತ್ತದೆ. ಅದು ಮನೆಯ ಯಜಮಾನ ಇಲ್ಲವಾದಾಗ, ಕಿರಿಯರು ಮನೆಗೆ ಯಜಮಾನರಾಗಬೇಕಾದಾಗ ಸಾವಕಾಶವಾಗಿ ಹಿರಿಯರ ಕೌಟುಂಬಿಕ ಕಾಳಜಿ, ಉಳಿತಾಯ ಮನೋಭಾವ ಮತ್ತು ಜವಾಬ್ದಾರಿತನವನ್ನು ರೂಢಿಸಿಕೊಳ್ಳುತ್ತಾರೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದ ಬದಲಾವಣೆಯಾಗಿದೆ. ಕುಟುಂಬವನ್ನು ಮುನ್ನಡೆಸಬೇಕಾಗಿ ಬಂದಾಗ ಕಿರಿಯರು ಮೊದಲು ತೋರುವ ಉಡಾಫೆ, ಬೇಜವಾಬ್ದಾರಿತನಗಳು ಮಾಯವಾಗುತ್ತವೆ. ಕುಟುಂಬದ ಬಗ್ಗೆ ಕಳಕಳಿ ಕಾಳಜಿ ಹೆಚ್ಚಾಗುತ್ತದೆ. ಅವರ ಸಂತಾನ ಮತ್ತೆ ಅದೇ ಬೇಜವಾಬ್ದಾರಿತನವನ್ನೇ ಮೈಗೂಡಿಸಿಕೊಂಡು ಬೆಳೆಯುತ್ತದೆ. ಇದೊಂದು ರೀತಿಯಲ್ಲಿ ಎಳೆಗರು ಎತ್ತಾಗುವ ಪ್ರಕ್ರಿಯೆ. ಹೋರಿ ಹರೆಯದಲ್ಲಿ ಎತ್ತಬೇಕತ್ತ ಎಳೆದಾಡುತ್ತದೆ. ಯಾವಾಗ ಹೋರಿಗೆ ಬೀಜ ಒಡೆದು, ಮೂಗುದಾರ ಹಾಕಿ ಅದರ ಜವಾಬ್ದಾರಿಯ ಅರಿವು ಮಾಡಿಕೊಡಲಾಗುತ್ತದೆಯೋ ಆಗ ಹೋರಿ ಎತ್ತಾಗುತ್ತದೆ. ತನ್ನ ಗುರಿಯತ್ತ ಸಾಗತೊಡಗುತ್ತದೆ. ರೀತಿಯ ಬದುಕಿನ ವಾಸ್ತವ ಸತ್ಯದ ಅರಿವನ್ನು ಪ್ರೇಕ್ಷಕರಿಗೆ ಮಾಡಿಕೊಡುವಲ್ಲಿ ನಾಟಕ ಯಶಸ್ವಿಯಾಗಿದೆ.
          
ಒಂದೇ ಕುಟುಂಬದ ಮೂರು ಪಾತ್ರಗಳನ್ನು ಕ್ಲಬ್ ಮಾಡಿ ನಾಟಕವಾಗಿಸಿದ್ದರೆ ಸೊಗಸಾದ ನಾಟಕವಾಗುತ್ತಿತ್ತೇನೋ?. ಆದರೆ ಮೂರೂ ಪಾತ್ರಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಹೇಳಿದ್ದರಿಂದಾಗಿ ನಾಟಕ ತುಂಬಾ ವಾಚ್ಯವೆನಿಸಿತು. ನೇರ ಪಾತ್ರ ಸಂಘರ್ಷ ಇಲ್ಲವಾಯಿತು. ಇದರಿಂದಾಗಿ ಅದ್ಯಾಕೋ ಪ್ರಯೋಗವನ್ನು ಒಂದು ಸಂಪೂರ್ಣ ನಾಟಕ ಎನ್ನಲು ಮನಸ್ಸು ಒಪ್ಪುವುದಿಲ್ಲ. ಒಂದು ವಿಭಿನ್ನ ಪ್ರಯತ್ನ ಎನ್ನಬಹುದಾಗಿದೆ. ಪಾತ್ರಗಳು ನಿಂತು ಇಲ್ಲವೇ ಕುಂತು ಮಾತಾಡುತ್ತಲೇ ಹೋಗುತ್ತವೆ. ಪಾತ್ರದ ಚಲನೆಯನ್ನು ನಿರ್ದಿಷ್ಟವಾಗಿ ನಿರ್ಬಂಧಿಸಲಾಗಿದೆ. ಅಷ್ಟೊಂದು ದೊಡ್ಡ ವೇದಿಕೆಯಲ್ಲಿ ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಜಾಗದಲ್ಲಿ ಅರ್ಧ ಮುಕ್ಕಾಲು ಗಂಟೆಗಳ ಕಾಲ ಸುದೀರ್ಘವಾಗಿ ಮಾತಾಡುತ್ತಾ ಹೋದರೆ ನೋಡುಗರಿಗೆ ಭಾಷಣ ಕೇಳಿದಂತೆನಿಸುತ್ತದೆ. ನಟನೆಗೆ ಹೆಚ್ಚು ಅವಕಾಶವೂ ಇಲ್ಲದ್ದರಿಂದ ಕಣ್ಣು ಮುಚ್ಚಿ ಕುಳಿತರೂ ನಾಟಕ ಅರ್ಥವಾಗುತ್ತದೆ. ಒಂದು ರೀತಿಯಲ್ಲಿ ರೇಡಿಯೋ ನಾಟಕದಂತೆ ಮೂಡಿಬಂದಿದೆ. ನಾಟಕದ ಸಾಧ್ಯತೆಗಳನ್ನು ಮಿತಿಗೊಳಿಸಿ, ಅಭಿನಯದ ಸಾಧ್ಯತೆಗಳನ್ನು ಬರೀ ಮಾತುಗಳಲ್ಲಿ ತೋರಿಸುವ ನಾಟಕದ ಆಶಯ ಸಮಂಜಸವೆನ್ನಿಸುತ್ತಿಲ್ಲ.


ರಂಗವೇದಿಕೆಯನ್ನು ಯಾವ ಪಾತ್ರವೂ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ರಂಗವಿನ್ಯಾಸವೂ ನಾಟಕದ ನಿರೂಪಣೆಯಷ್ಟೇ ವಿಚಿತ್ರವಾಗಿತ್ತು. ಮುಖ್ಯ ಬಾಗಿಲಿರುವ ಗೋಡೆಯನ್ನೇ 45 ಡಿಗ್ರಿ ಕೋನದಲ್ಲಿ ಹಿಮ್ಮುಖವಾಗಿ ಮಲಗಿಸಿದಂತಿತ್ತು. ಅದು ಯಾವುದರ ಸಂಕೇತವೋ ಪ್ರೇಕ್ಷಕರಿಗಂತೂ ಅರಿವಾಗಲಿಲ್ಲ. ಅಸಂಗತವಾಗಿ ಸೆಟ್ ಹಾಕಲಾಗಿತ್ತು. ಯಾವ ಕೋನದಿಂದ ನೋಡಿದರೂ ಅದೊಂದು ಮನೆ ಎಂದು ಅನ್ನಿಸಲೇ ಇಲ್ಲ. ಕ್ಲಿನಿಕ್ನಲ್ಲಿರುವಂತೆ ಒಂದು ಬಿಳಿ ಬೆಂಚು, ಬಿಳಿ ಖುರ್ಚಿ ಹಾಗೂ ಟೀಬಲ್ ಜೊತೆಗೊಂದು ಟೇಬಲ್ ಪ್ಯಾನ್ ಇಷ್ಟೇ ನಾಟಕದ ಸೆಟ್ ಪ್ರಾಪರ್ಟಿಗಳು. ಎಲ್ಲಾ ಬಿಳಿಮಯ. ಮನೆಯ ಗೋಡೆ, ಬೆಂಚು, ಖುರ್ಚಿ ಜೊತೆಗೆ ಪಾತ್ರಗಳು ತೊಟ್ಟ ಉಡುಗೆಯೂ ಸಹ ಬಿಳಿಯದೇ. ಯಾವುದೋ ಆಸ್ಟತ್ರೆಯೊಳಗಿನ ದೃಶ್ಯ ನೋಡಿದಂತೆನಿಸಿತು. ಎಲ್ಲಾ ಬಿಳಿ ಬಣ್ಣದ ಪ್ರಾಪ್ಸ ಮತ್ತು ಕಾಸ್ಟೂಮ್ಸಗಳ ಮೇಲೆ ಬೆಳಕು ಬಿಟ್ಟರೆ ಏನಾಗುತ್ತದೆ? ಬ್ಲೀಚ್ ಆಗಿ ನೋಡುಗರ ಕಣ್ಣಿಗೆ ಇರಿಟೇಟ್ ಮಾಡುತ್ತದೆ. ಜೊತೆಗೆ ನಾಟಕದಾದ್ಯಂತ ಹಿನ್ನೆಲೆಯಲ್ಲಿ ನೀರು ತೊಟ್ಟಿಕ್ಕುವ ಸದ್ದು ಕೇಳುತ್ತಲೇ ಇರುತ್ತದೆ. ಅದು ಪ್ರೇಕ್ಷಕರ ಕಿವಿಯ ಮೇಲೆಯೇ ನೀರಿನ ಹನಿಗಳು ಅಪ್ಪಳಿಸಿದಂತಾಗಿ ನಾಟಕದಾದ್ಯಂತ ಅಸಾಧ್ಯ ಕಿರಿಕಿರಿಯನ್ನುಂಟು ಮಾಡಿತು.

 ಕಣ್ಣು ಕಿವಿಗೆ ಆಗುವ ಹಿಂಸೆಯನ್ನು ಮರೆಸಿ ಸಹ್ಯವಾಗಿಸಿದ್ದು ಪಂಚ್ ಡೈಲಾಗ್ಗಳು. ತಂದೆಯಾಗಿ ಸಿಹಿಕಹಿ ಚಂದ್ರುರವರು ಯಾವಾಗಲೂ ಸೊಂಟದ ಮೇಲೆ ಯಾವುದೋ ಒಂದು ಕೈ ಇಟ್ಟುಕೊಂಡು ಕೂತೋ ನಿಂತೊ ಒಂದೇ ರೀತಿಯ ಏಕತಾನತೆಯನ್ನುಂಟು ಮಾಡುವಂತೆ ನಟಿಸುತ್ತಿದ್ದರಾದರೂ ಅವರ ಒಂದೇ ರೀತಿಯ ನಟನೆಯನ್ನು ಮೀರಿ ಬರುವ ಕೆಲವು ಪಂಚ್ ಮಾತುಗಳು ಕೇಳುಗರಲ್ಲಿ ನಗೆಯನ್ನುಂಟು ಮಾಡುತ್ತಿದ್ದವು. ನಟನೆಯ ಏಕತಾನತೆಯನು ಮೀರುವಂತೆ ನಟಿಸಿದ್ದು ಮಗನ ಪಾತ್ರದಾರಿ ಮಂಜುನಾಥ ಹೆಗಡೆರವರು. ಅವರ ಮಾತುಗಳಲ್ಲಿದ್ದ ಮಾರ್ಮಿಕ ಮಾತುಗಳು ಪ್ರೇಕ್ಷಕರಲ್ಲಿ ಕಚಗುಳಿಯನ್ನುಂಟು ಮಾಡಿದವು. ತಾಯಿಯ ಪಾತ್ರವಹಿಸಿದ್ದ ಕಲ್ಪನಾ ನಾಗನಾಥರವರಿಗೆ ನಟನೆಯ ಅವಕಾಶವೇ ಇಲ್ಲದಂತಾಗಿ ಕೂತಲ್ಲೇ ಕೂತು ಮಾತುಗಳನ್ನಾಡಿದರು. ಒಟ್ಟಾರೆಯಾಗಿ ಮೂರು ಪಾತ್ರಗಳ ಆಂಗಿಕಾಭಿನಯ ಸಾಧ್ಯತೆಯನ್ನು ನಿರ್ದೇಶಕರು ಮಿತಿಗೊಳಿಸಿ, ವಾಚಿಕಾಭಿನಯದಿಂದಲೇ ಇಡೀ ನಾಟಕವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದಂತಿದೆ. ಬಿಳಿ ಬಣ್ಣದ ಆಹಾರ್ಯಾಭಿನಯ ಮೂಡನ್ನು ಸೃಷ್ಟಿಸಲು ಸಫಲವಾಗಲಿಲ್ಲ ಜೊತೆಗೆ ಸಾತ್ವಿಕಾಭಿನಯ ಹುಡುಕಿದರೂ ಸಿಕ್ಕುವುದಿಲ್ಲ. ಹೀಗಾಗಿ ಇದನ್ನೊಂದು ರೇಡಿಯೋ ನಾಟಕ ಎನ್ನಲು ಅಡ್ಡಿಯಿಲ್ಲ. ಹಿಂದೆ ಇತಿ ನಿನ್ನ ಅಮೃತ ಎನ್ನುವ ಎರಡೇ ಕ್ಯಾರಕ್ಟರ್ ನಾಟಕವಲ್ಲದ ನಾಟಕವೊಂದನ್ನು ಪ್ರದರ್ಶಿಸಲಾಗಿತ್ತು. ಅದೇ ಮಾದರಿಯಲ್ಲಿ ಮೂರು ಪಾತ್ರಗಳ ನಾಟಕವನ್ನು ಸುರೇಂದ್ರನಾಥರವರು ರಚಿಸಿ ನಿರ್ದೇಶಿಸಿದ್ದಾರೆ.

ಹಿಂದೆ ಹಳ್ಳಿಗಳಲ್ಲಿ ಕಥೆ ಹೇಳುವ ಪರಂಪರೆಯೊಂದಿತ್ತು. ವ್ಯಕ್ತಿಯೊಬ್ಬ ನಿಂತಲ್ಲೇ ಕಥೆಯನ್ನು ಅಭಿನಯಿಸಿ ತೋರಿಸುತ್ತಿದ್ದ. ಅದರ ಮುಂದುವರೆದ ಭಾಗವಾಗಿ ಸಂಕ್ರಮಣ ನಾಟಕ ಮೂಡಿಬಂದಿದೆ. ವ್ಯತ್ಯಾಸ ಇಷ್ಟೇ ಇಲ್ಲಿ ಮೂರು ಜನ ಒಂದೇ ಕಥೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಹೇಳುತ್ತಾರೆ. ಒಂದೇ ಕುಟುಂಬದ ಮೂರು ಜನರ ಅನುಭವ ಮಾತುಗಳಲ್ಲಿ ಮೂಡಿ ಬಂದಿದೆ. ಹೀಗೆ ತಮ್ಮ ಅನುಭವಗಳನ್ನು ಪ್ರತ್ಯೇಕವಾಗಿ ಹೇಳುವಾಗ ಹಲವಾರು ವಿಷಯಗಳು ರಿಪೀಟ್ ಆಗುತ್ತವೆ. ಅದೇ ಟ್ರಂಕು, ಕೀಲಿಕೈ, ಹಲ್ಲಿ, ಜಿರಲೆ, ಇಲಿಯ ಪ್ರಹಸನದ ಪ್ರಸ್ತಾಪ ಮೂರೂ ಪಾತ್ರದಾರಿಗಳ ಮಾತುಗಳಲ್ಲಿ ಮರುಕಳಿಸಿದೆ. ರಿಪೀಟ್ ಆಗುವ ಮಾತುಗಳನ್ನು ಎಡಿಟ್ ಮಾಡಿದ್ದರೆ ಚೆನ್ನಾಗಿತ್ತು. ರಟ್ಟೇಹಳ್ಳಿ ಮುದ್ದಣ್ಣನವರಿಗೆ ಬೆಳಕಿನ ವಿನ್ಯಾಸ ಮಾಡಲು ಅವಕಾಶವೇ ನಾಟಕದಲ್ಲಿ ಇಲ್ಲವಾಗಿದೆ. ನಾಟಕಕ್ಕೆ ಅಗತ್ಯವಾದ ಮೂಡನ್ನು ಸೃಷ್ಟಿಸುವುದು ನಾಟಕದ ಉದ್ದೇಶವೇ ಅಲ್ಲವಾಗಿದೆ. ಆದ್ದರಿಂದ ಕೇವಲ ಮಾತಿನ ಮೂಲಕ ಇಡೀ ನಾಟಕವನ್ನು ಕಟ್ಟುವ ಪ್ರಯತ್ನ ನಿರ್ದೇಶಕರದ್ದಾಗಿದೆ. ಒಂದು ರೀತಿಯಲ್ಲಿ ಇಡೀ ನಾಟಕವನ್ನು ಸ್ಟಾಂಡಪ್ ಕಾಮೆಡಿ ಶೋ ಎನ್ನಬಹುದಾಗಿದೆ.

ಇನ್ನೂ ಸ್ವಲ್ಪ ರಂಗಶಿಸ್ತು ಬೇಕಾಗಿತ್ತು. ಮಗನ ಪಾತ್ರದಾರಿ ಮಂಜುನಾಥ ಹೆಗಡೆ ನಟನೆಯ ನಡುವೆಯೇ ತಮ್ಮ ಪಾತ್ರದಿಂದ ಹೊರಬಂದು ಯಾರದೋ ಮೊಬೈಲ್ ಪೋನ್ ಬಂದ್ ಮಾಡಲು ತಿಳಿಸಿ ಮತ್ತೆ ಪಾತ್ರವನ್ನು ಮುಂದುವರೆಸಿದ್ದು ಸರಿಯಾದ ಕ್ರಮವಲ್ಲ. ರಂಗಶಂಕರದ ಶಿಸ್ತನ್ನು ಕಲಾಕ್ಷೇತ್ರದಲ್ಲಿ ಬಯಸಿದರೆ ಸಿಗೋದಿಲ್ಲ. ಮೊಬೈಲ್ ಸಮಸ್ಯೆ ಬರಬಾರದೆಂದರೆ ಅದನ್ನು ನಿಯಂತ್ರಿಸುವುದಕ್ಕೆ ತಂಡದ ಸದಸ್ಯರನ್ನು ಸಭಾಂಗಣದಲ್ಲಿ ಇರಿಸಬೇಕೆ ಹೊರತು ನಟರೆ ಅಭಿನಯವನ್ನು ನಿಲ್ಲಿಸಿ ಪ್ರೇಕ್ಷಕರನ್ನು ಎಚ್ಚರಿಸುವುದು ರಂಗಶಿಸ್ತಲ್ಲ. ಜೊತೆಗೆ ಕಲ್ಪನಾ ನಾಗನಾಥರವರು ಕಾಲುಚಾಚಿ ಕೂತು ತಮ್ಮ ಸೀರೆಯನ್ನು ಸರಿಪಡಿಸಿಕೊಳ್ಳಬೇಕಾದಾಗ ಪ್ರೇಕ್ಷಕರಿಗೆ ಎರಡು ಸಲ ಕಾಣಬಾರದ್ದು ಕಂಡುಬಿಟ್ಟಿತು. ರೀತಿಯಾಗದಂತೆ ನೋಡಿಕೊಳ್ಳಬೇಕು ಇಲ್ಲವೇ ಅಕಸ್ಮಾತ್ ರೀತಿ ಆಗಬಹುದಾದ್ದನ್ನು ಮೊದಲೇ ಊಹಿಸಿ ಸೂಕ್ತವಾದ ಒಳಉಡುಪುಗಳನ್ನು ಧರಿಸಿದ್ದರೆ ಅವಗಡ ತಪ್ಪಿಸಬಹುದಾಗಿತ್ತು.
   
ನಾಟಕ ಏನೇ ಆದರೂ ಅದರೊಳಗಿನ ಡೈಲಾಗ್ಗಳು ಸೊಗಸಾಗಿವೆ. ಕಾಲಿ ಹೊಟ್ಟೆ ಮೇಲೆ ತುಂಬಿದ ಚೀಲಾನ ಹೆಣದ ಹಾಗೆ ಏರಿಸ್ಕೊಂಡು ಸ್ಕೂಲಿಗೆ ಹೋಗ್ತಿದ್ದೆ ಎನ್ನುವಂತಹ ಹಲವಾರು ಮಾರ್ಮಿಕ ಮಾತುಗಳಿವೆ. ಪಂಚ್ ಮಾತುಗಳನ್ನು ಕೇಳಲಾದರೂ ಒಮ್ಮೆ ನಾಟಕವಲ್ಲದ ನಾಟಕವನ್ನು ನೋಡಲೇಬೇಕು. ಹಿರಿಯರಾದವರು ತಮ್ಮ ಹಿರಿತನದ ಅನುಭವಗಳನ್ನು,  ಕಿರಿಯರಾದವರು ತಮ್ಮ ಬೇಜವಾಬ್ದಾರಿ ನಡುವಳಿಕೆಗಳನ್ನು ರಂಗದ ಮೇಲೆ ನೋಡಿ ತಿಳಿಯಬೇಕೆಂದಿದ್ದರೆ ನಾಟಕವನ್ನು ಮರೆಯದೇ ನೋಡಲೇಬೇಕು. ಜೊತೆಗೆ ಹಿರಿಯರು  ತಮ್ಮ ಅಹಂ ತೊರೆದು ವಟಗುಟ್ಟುವುದನ್ನು ಬಿಟ್ಟು ಕಿರಿಯರನ್ನು ಕನ್ವೆನ್ಸ ಮಾಡುವಂತಹುದನ್ನು ರೂಡಿಸಿಕೊಳ್ಳಬೇಕು. ಹಾಗೂ ಕಿರಿಯರು ತಮ್ಮ ಜವಾಬ್ದಾರಿಯನ್ನರಿತು ಹಿರಿಯರಿಗೆ ಗೌರವವನ್ನು ಕೊಡುವುದನ್ನು ಕಲಿಯಬೇಕು. ಪರಸ್ಪರ ಹೊಂದಾಣಿಕೆಯೊಂದೇ ಕೌಟುಂಬಿದ ಬದುಕಿನ ಸ್ವಾಸ್ತ ಕಾಪಾಡಬಲ್ಲುದು. ಇಂದಿನ ಕಿರಿಯರೇ ನಾಳಿನ ಹಿರಿಯರು ಎನ್ನುವ ಪಾಠವನ್ನು ನಾಟಕ ಪರೋಕ್ಷವಾಗಿ ಪ್ರೇಕ್ಷಕರಿಗೆ ಕಲಿಸುವಲ್ಲಿ ಯಶಸ್ವಿಯಾಗಿದೆ. 

                                     -ಶಶಿಕಾಂತ ಯಡಹಳ್ಳಿ    

             
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ