ಶುಕ್ರವಾರ, ಮಾರ್ಚ್ 7, 2014

‘ಹೆಣ್ಣು ಕಾಣದ ಗಾವಿಲರು’ : (ಪ್ರಹಸನ)




                                     

(ಶತಮಾನಗಳಿಂದ ಮಹಿಳೆಯರನ್ನು  ಎರಡನೇ  ದರ್ಜೆಯ  ಪ್ರಜೆಗಳಂತೆ ಪುರುಷ ಪ್ರಧಾನ ವ್ಯವಸ್ಥೆ ನಡೆಸಿಕೊಳ್ಳುತ್ತಾ ಬಂದಿದೆ. ಆಧುನಿಕ ಯುಗದಲ್ಲಿ ಯಂತ್ರಗಳ ಅವಿಷ್ಕಾರವಾದಂತೆಲ್ಲಾ ಬ್ರೂಣ ಹತ್ಯೆ ಎನ್ನುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ  ರೀತಿ ಹೆಣ್ಣು ಸಂತಾಣ ಹರಣ  ನಿರಂತರವಾಗಿ ಮುಂದುವರೆದರೆ ಮುಂದೊಂದು ದಿನ ಮಹಿಳೆಯರೇ ಇಲ್ಲದಂತಹ ದುಸ್ತಿತಿ ಬರಬಹುದಾಗಿದೆ. ಪುರುಷಾಧಿಕಾರತ್ವ, ಮಹಿಳೆಯರ ಕುರಿತು ನಿರ್ಲಕ್ಷ, ಲಿಂಗತಾರತಮ್ಯ, ಹೆಣ್ಣು ಬ್ರೂಣ ಹತ್ಯೆ ಹಾಗೂ ಮಹಿಳಾ ಶೋಷಣೆ ಕುರಿತ ಒಂದು ವಿಡಂಬನಾತ್ಮಕ  ಶೈಲೀಕೃತ ನಾಟಕವೇ   ಹೆಣ್ಣು ಕಾಣದ ಗಾವಿಲರು .)

ದೃಶ್ಯ-1
ಒಬ್ಬ           :       ಕಾಕಾ ಕಾಕಾ ಸುದ್ದಿ ಗೊತ್ತಾ.
ಎಲ್ಲರೂ        :       ಏನು ಸುದ್ದಿ? ಎಂತಾ ಸುದ್ದಿ?
ಇನ್ನೊಬ್ಬ      :       ಮುಂದಿನ ಮನೆ ಹುಡ್ಗಿ
ಎಲ್ಲರೂ        :       ಓಡೋದ್ಲಂತೆ  ಓಡೋದ್ಲಂತೆ.
ಮತ್ತೊಬ್ಬ      :       ಮೂಲಿಮನಿ  ಹುಡ್ಗಿ...
ಎಲ್ಲರೂ        :       ನಾಪತ್ತೆ... ನಾಪತ್ತೆ
ಒಬ್ಬ           :       ಹಾರವರ ಮನೆ ಮಗಳು
ಎಲ್ಲರೂ        :       ಹಾರೋದ್ಲಂತೆ... ಹಾರೋದ್ಲಂತೆ.
ಕಾಕಾ         :       ಇದೆಲ್ಲಾ ಹಳೇ ಸುದ್ದಿ, ಹೊಸಾ ಸುದ್ದಿ ನನ್ನತ್ರೈತಿ
ಎಲ್ಲರು         :       ಏನು ಕಾಕಾ, ಹೇಳೊ ಕಾಕಾ.
ಕಾಕಾ         :       ತಿಮ್ಮನ ಮಗ್ಳು ಬಸುರಿಯಂತೆ
ಎಲ್ಲರೂ        :       ಹೌದಾ! ಹೌದಾ! ಹೌದಾ!
ಕಾಕಾ         :       6 ತಿಂಗಳು ಗರ್ಭಿಣಿಯಂತೆ
ಒಬ್ಬ           :       ಅಯ್ಯೋ! ಅಯ್ಯೋ! ಅಯ್ಯೋ!
ಇನ್ನೊಬ್ಬ      :       ಯಾಕ್ಲಾ ನಿಂಗಾ ನಿಂಗೇನಾಯ್ತು.
ಒಬ್ಬ           :       ಅಕೆ ಒಳ್ಳೆ ಹೆಣ್ಣು ಅನ್ಕೋಂಡಿದ್ನಲ್ಲೋ
                        ಮಡ್ಕೋಂಡು ಮಜ್ವಾಗಿರ್ಬೇಕಂತ ಕನ್ಸಕಂಡಿದ್ನಲ್ಲೋ..
ಮತ್ತೊಬ್ಬ      :       ಆಕೆ ಗಂಡಾ ಸತ್ತು ವರ್ಷಾಗೋಯ್ತು
                        ಬರಡು ಜಾಗದಾಗ ಬೀಜಾ ಬಿತ್ತಿದೋರ್ಯಾರು?
ಒಬ್ಬ           :       ಕಾಕಾ ಕಾಕಾ ಬೇಗ ಹೇಳು?
                        ಬಸಿರಿಗೆ ಕಾರಣಾ ಯಾರು?
ಕಾಕಾ         :       ಒಬ್ಬರಾ ಇಬ್ಬರಾ ಯಾರಂತ ಹೇಳ್ಲಿ?
                        ಗೋಮಾಳದಾಗ ತಿಂದವರೆಷ್ಟೋ ಮಿಂದವರೆಷ್ಟೋ?
ಒಬ್ಬ           :       ಯಾರನ್ನ ನಂಬ್ಲಿ ಯಾರನ್ನ ಬಿಡ್ಲಿ
ಇನ್ನೊಬ್ಬ      :       ಯಾವ ಹುತ್ತಾದಾಗ ಯಾವ ಹಾವ್ಯತಂತ ಯಾರಿಗ್ಗೊತ್ತು?
ಒಬ್ಬ           :       ಊರಿಗೆ ಮಸಿ ಬಳದ್ಲಲ್ಲ.
ಇನ್ನೊಬ್ಬ      :       ನನ್ನಾಸೆಗೆ ನೀರು ಎರಚಿದ್ಲಲ್ಲಾ
ಮತ್ತೊಬ್ಬ      :       ಅಕೆಗೆ ಕೂಸೆ ಬೇಕಂದಿದ್ರೆ  ಕೊಡೋದಿಕೆ ನಾನಿದ್ನಲ್ಲ.
ಎಲ್ಲರೂ        :       ಕಾಕಾ ಕಾಕಾ ಈಗೇನ್ಮಾಡೋದು ?
ಕಾಕಾ         :       ಪಂಚಾಯ್ತಿ ಸೇರ್ಸಿ ನ್ಯಾಯಾ ಮಾಡ್ಸಿ.
                        ಆಕೆ ತಲೆ ಬೋಳ್ಸಿ ಕತ್ತೆಮ್ಯಾಗ ಕೂಡ್ಸಿ.
                        ಊರು ತುಂಬಾ ಮೆರವಣಿಗೆ ಮಾಡ್ಸೋನಂತೆ
                        ಹೆಣ್ಣು ಅಂದ್ರೆ ಹುಣ್ಣು ಅಂತಾ ಎಲ್ಲಾರಿಗೂ ತಿಳಿಸೋನಂತೆ
ಒಬ್ಬ           :       ಹೌದೋ ಕಾಕಾ ಹೌದು
                        ನಮ್ಗೆ ಸಿಗದ ಹೆಣ್ಣು, ಇದ್ದರೆಷ್ಟು ಬಿದ್ದರೆಷ್ಟು ?
ಇನ್ನೊಬ್ಬ      :       ಕೈಗೆ ಸಿಗದ ಹಣ್ಣು ಕಲ್ಲು ಹೊಡೆದು ಬಿಳಿಸೋಣ
ಮತ್ತೊಬ್ಬ      :       ನಮ್ಗೆ ಸಿಗದ ಮಾಲು
                        ಯಾರಿಗೂ ಸಿಗದಂಗೆ ನೋಡ್ಕೋಳ್ಳೋಣ
ಕಾಕಾ         :       ಹೆಣ್ಣು ಅಂದ್ರೆ ಹೀಗೆ ಕಣ್ರೋ
                        ಸಿನಿಮಾ ಹಾಡು ಗೊತೈತೇನ್ರೋ
                        ಹಾಡ್ತೀನಿ ಕೇಳ್ರೋ ಗೂಬೆಗಳಾ
                        ಬುದ್ದಿ ಕಲೀರೋ ಮೂದೇವಿಗಳಾ
ಹಾಡು         :       ಬೇಡಾ ನಂಬಬೇಡ, ಜೀವ ಹೋದರು ಹೆಂಗಸರನ್ನು
                        ಎಂದಿಗೂ ನೀನು ನಂಬಬೇಡ ಬೇಡಾ...ಬೇಡಾ..
ಎಲ್ಲರೂ        :       (ಕುಣಿದು ಕುಪ್ಪಳಿಸಿ ಚಪ್ಪಾಳೆ ತಟ್ಟುತ್ತಾರೆ)
ಕಾಕಾ         :       ಗೊತ್ತಾಯ್ತೇನ್ರೋ? ನಾರಿ ಅಂದ್ರೆ ಮಹಾಮಾರಿ
                        ಹೆಣ್ಣನು ನಂಬಿ ರಾಜ ಮಹಾರಾಜರೇ ಮಣ್ಣಾಗೋದ್ರು
                        ದೇವತೆಗಳು ದಿಕ್ಕೇಡಿಗಳಾದ್ರು
                        ಇನ್ನು ನಮ್ಮಂತ ಹುಲು ಮಾನವರ ಪಾಡೇನು ?
ಕುಡುಕ                :       ಮಾನಾ ಇಲ್ಲದವರ ಪಾಡೇನು?
ಒಬ್ಬ           :       ಥೂ! ಕುಡಕನನ್ನಮಗನೇ ನಾವು ಮಾನಾ ಇಲ್ಲದವರಲ್ಲಲೇ ಮಾನವರು...
ಕುಡುಕ                :       ಎರಡೂ ಒಂದೇ ಕಣ್ರಣ್ಣಾ, ತಪ್ರಾಗಿ ಹೇಳಿದ್ರೆ ಸಗಣಿ ತಿಂದು ನನ್ನ ಮೂತಿಗೆ
                         ಉಗಿರಣ್ಣಾ..
ಕಾಕಾ         :       ಗಂಡ್ಸರ ಕಷ್ಟಕ್ಕೆ ಕಾರಣ ಹೆಣ್ಣು
                        ಹೆಣ್ಣು ಅಂದ್ರೆ ವಾಸಿಯಾಗದ ಹುಣ್ಣು
                        ಯಾವಾಗ ಬೇಕಾದಾಗ ಕೊಳತೋಗೋ ಹಣ್ಣು.
ಒಬ್ಬ           :       ಕಾಕಾ ಕಾಕಾ ಹಿಂಗೆ ಅದ್ರೆ ಹೆಂಗ್ಸರ್ನ ನಂಬೋದ್ಯಾಂಗೆ.
ಇನ್ನೊಬ್ಬ      :       ಕಟ್ಕೊಂಡ ಹೆಂಡ್ರ ಎಲ್ಲರೂ ಕಾಡಿಗೆ ಅಟ್ಟಿದ್ರೆಂಗೆ
ಕಾಕಾ         :       ನೋಡ್ರೊ  ಹೈಕ್ಳಾ ಹಳ್ಳಿ ಮಕ್ಳಾ
                        ನಮ್ಮ ನಮ್ಮ ಹೆಂಡ್ರು ನಮ್ಗೇ ಇರ್ಲಿ
                        ನಾವು ಬಿಟ್ರು ಅವ್ರು ನಮ್ನ ಬಿಡಾಕಿಲ್ಲ.
                        ಆಗಿಹೋದ ತಪ್ಪು ಸರಿಮಾಡಾಕಾಗೋಲ್ಲ.
                        ಮುಂದೆ ತಪ್ಪಾಗ್ದಂಗ ನೋಡ್ಕೋಬೇಕಲ್ಲ.
ಒಬ್ಬ           :       ತಪ್ಪಾಗ್ದಂಗೆ ಮಾಡೋದೆಂಗೆ ಹೇಳೋ ಕಾಕಾ.
ಕುಡುಕ                :       ನನ್ನ ಹತ್ರ ಐಡಿಯಾ ಐತೆ,
                        ಊರು ಹೆಂಗಸರಿಗೆ ಮಕ್ಕಳಾಗದಂಗೆ ನರ ಕಟ್ ಮಾಡಿದ್ರೆಂಗೆ.
ಇನ್ನೊಬ್ಬ      :       ಮುಚ್ಕಂಡ್ ಇರೋ ಕುಡುಕಪ್ಪಾ, ಕಟ್ ಮಾಡ್ಸಿದ್ರೆ ಗಂಡು ಮಕ್ಳೂ ಅಗಲ್ಲಪ್ಪ.
ಕಾಕಾ         :       ರೋಗ ಬರೋಕ್ಮುಂಚೆ ಅದು ಬರ್ದಂಗ ತಡೀಬೇಕು.
                        ಹೆಣ್ಣು ಹುಟ್ಟೋಕೆ ಮುಂಚೆ ಭೂಮಿಗೆ ಬರ್ದಂಗೆ ನೋಡ್ಕೋಬೇಕು.
ಒಬ್ಬ           :       ಹೌದೋ ಕಾಕಾ ಹೌದು ಒಳ್ಳೆ ಐಡಿಯಾ ಹೌದು
ಇನ್ನೊಬ್ಬ      :       ಹುಟ್ಟೋ ಮಗು ಹೆಣ್ಣೋ ಗಂಡೋ ಹೇಗೆ ತಿಳ್ಕೊಳ್ಳೋದು ?
ಮತ್ತೊಬ್ಬ      :       ಬಸುರಿ ಹೆಣ್ಣು ವಾಂತಿ ಜಾಸ್ತ್ತಿ ಮಾಡ್ತಾ ಇದ್ರೆ
                        ನೋವು ಜಾಸ್ತಿ ತಿನ್ತಾಯಿದ್ರೆ. 
                        ಹೊಟ್ಟೇಲಿ ಗ್ಯಾರಂಟಿಯಂತೆ ಹೆಣ್ಣು ಪಿಂಡಾ
                        ತಾಯಿಗೆ ತ್ರಾಸು ಕೊಡದೆ ಹೋದ್ರೆ ಅದುವೆ ಗಂಡು ಪಿಂಡಾ
ಕಾಕಾ         :       ಅದೆಲ್ಲಾ ಹಳೇ ಮಾನದಂಡಾ, ಆಸ್ಪತ್ರೆಗೋಗಿ ಸ್ಕ್ಯಾನ್ ಮಾಡ್ಸಿ
                        ಗೋತ್ತಾಗುತ್ತೆ ಹುಟ್ಟೋ ಮಗು ಗಂಡೋ ಹೆಣ್ಣೋ.
ಒಬ್ಬ           :       ಹಂಗೆ ಹೇಳೋದು ಕೇಳೋದು ಅಪರಾದವಂತೆ
ಇನ್ನೊಬ್ಬ      :       ಡಾಕ್ಟರ್ ಕೂಡಾ ಹೇಳೋದಿಲ್ವಂತೆ.
ಕಾಕಾ         :       ಥೂ! ದಡ್ಡನನ್ನಮಕ್ಳಾ. ಕಾಸಿದ್ರೆ ಕೈಲಾಸ ಕಣ್ರೋ.
                        ಕಾಸಿಗಂತ ಹುಟ್ಕೋಂಡಿರೊ ಡಾಕ್ಟ್ರರಿಗೇನು ಕಮ್ಮಿ ಏನ್ರೋ
ಒಬ್ಬ           :       ನಮ್ಮ ಕೂಸು ನಮ್ಮ ಮಾತು
                        ಕಾನೂನು ಅಪ್ಪಣೆ ಬೇಕೆನ್ರೋ
                        ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಕೇಳ್ತಿರ್ರೇನ್ರೋ
ಇನ್ನೊಬ್ಬ      :       ಸರಿ ಬಿಡ್ರಿ ಹಂಗೆ ಅಗ್ಲಿ, ವಿಷ್ಯ ಮಾತ್ರ ಗುಟ್ಟಾಗಿರ್ಲಿ
ಕಾಕಾ         :       ಕೇರಿ ಗಂಡಿಸ್ರಿಗೆ ವಿಷ್ಯ ತಿಳ್ಸಿ
                        ಊರಲ್ಲಿ ಹೆಣ್ಣು ಹುಟ್ದಂಗಾಂಗ್ಲಿ.
                        ಮುಂದಿನ ಪೀಳಿಗೆ ಸುಖವಾಗಿರ್ಲಿ.
ಸೂತ್ರದಾರ    :       ಅಯ್ಯೋ! ಅಯ್ಯೋ! ಅಯ್ಯೊ!
                        ಏನ್ರಿ ಕಾಕಾ ಏನ್ರಿ ಇದು
                        ಎಂತಾ ಅನಾಹುತ ಮಾಡಿದ್ರಿ
ಒಬ್ಬ           :       ಸುಮ್ಮನಿರೋ ದಾಸಯ್ಯ, ಸಂಸಾರಸ್ತರ ನಡುವೆ  ನಿಂದೇನ್ ಕೆಲ್ಸಾನಯ್ಯ?
ಸೂತ್ರದಾರ    :       ಹೆಣ್ಣು ಅಂದ್ರೆ ಬಾಳು
ಕಾಕಾ         :       ಹೆಣ್ಣು ಅಂದ್ರೆ ಬರೀ ಗೋಳು
ಸೂತ್ರದಾರ    :       ಹೆಣ್ಣು ಅಂದ್ರೆ ಬೆಳಕು
ಒಬ್ಬ           :       ಹೆಣ್ಣು ಅಂದ್ರೆ ಕೊಳಕು
ಸೂತ್ರದಾರ    :       ಹೆಣ್ಣು ಅಂದ್ರೆ ಮನೆಬೆಳಗೋ ದೀಪ
ಇನ್ನೊಬ್ಬ      :       ಹೆಣ್ಣು ಅಂದ್ರೆ ಬರೀ ಕೋಪ ತಾಪಾ ಶಾಪಾ.. ಪಾಪ ಕೂಪಾ..
ಸೂತ್ರದಾರ    :       ಹೆಣ್ಣು ಅಂದ್ರೆ ಹೂವು
ಒಬ್ಬ           :       ಅಲ್ಲಾ ಅಲ್ಲಾ ಅಲ್ಲಾ, ಹೆಣ್ಣು ಅಂದ್ರೆ ಬುಸುಗುಡುವ ನಾಗರ ಹಾವು.
ಸೂತ್ರದಾರ    :       ಬೇಡಾ ಬೇಡಾ ಮೊಂಡುವಾದ
                        ಭ್ರೂಣ ಹತ್ಯೆ ಬೇಡವೇ ಬೇಡ
                        ಹುಟ್ಟೋಮಗು ಹುಟ್ಲಿ ಬಿಡಿ
                        ಸಾಯ್ಸೋ ಕೆಲಸಾ ಮಾಡ್ಲೇ ಬೇಡಿ.
ಕಾಕಾ         :       ಮುಚ್ಚೋ ಬಾಯಿ ಬೇವಾರ್ಸಿ
                        ನಿನ್ಗೇನು ಗೊತ್ತೋ ಹೆಣ್ಣು ಹೆತ್ತವರ ಕಸಿವಿಸಿ.
                        ಗಂಡಾದ್ರೆ ನಮ್ಮ ಸೊತ್ತು, ಹೆಣ್ಣಾದ್ರೆ ಪರರ ಸೊತ್ತು
ಒಬ್ಬ           :       ಬೆರೆಯವರಿಗೋಸ್ಕರ ನಾವ್ಯಾಕೆ ಹೆಣ್ಣು ಹೊತ್ತು ಹೆತ್ತು ಬೆಳಸಬೇಕು.
ಇನ್ನೊಬ್ಬ      :       ಯಾರದೋ ಮನೆ ಉದ್ದರಿಸೋಕೆ.
                        ನಾವ್ಯಾಕೆ ವರದಕ್ಷಿಣೆ ವರೋಪಚಾರ ಕೊಡಬೇಕು.
ಮತ್ತೊಬ್ಬ      :       ಮತ್ತೊಬ್ಬರ ಮನೆ ಬೆಳಗೋಕೆ.
                        ನಮ್ಮನೆ ಯಾಕೆ ಕತ್ತಲೆ ಮಾಡ್ಕೋಬೇಕು?
ಸೂತ್ರದಾರ    :       ನಿಮ್ಮನೆ ಹೆಣ್ಣು ಇನ್ನೊಬ್ಬರ ಮನೆಗೆ ಬೆಳಕು
                        ಮತ್ತೊಬ್ಬರ ಮನೆ ಹೆಣ್ಣು ನಿಮ್ಮ ಮನೆಗೆ ಬೆಳಕು
                        ಇಲ್ಲಿ ಕತ್ತಲೆ ಮಾತು ಎಲ್ಲಿ, ಕಷ್ಟ ನಷ್ಟ ಎಲ್ಲಿ ?
                        ಹೆಣ್ಣು ಅಂದ್ರೆ ಬೆಳಕು. ಮನೆ ಬೆಳಗೋ ದೀಪ ಕಣ್ರಿ
                        ಹುಟ್ಟೋ ಮೊದಲೇ ದೀಪಾ ಆರಿಸೋದು ಮಹಾಪಾಪಾ ಕಣ್ರಿ
ಕಾಕಾ         :       ಸುಮ್ಮನಿರೋ ದಾಸಯ್ಯ, ಹೆಣ್ಣಿನ ಉಸಾಬರಿ ನಿನಗ್ಯಾಕಯ್ಯ
                        ಹೆಣ್ಣು ಅಂದ್ರೆ ಬೆಳಕಲ್ಲಾ ದಗದಗ ಉರಿಯೋ ಬೆಂಕಿ
                        ಹೆಣ್ಣು ಅಂದ್ರೆ ತಂಗಾಳಿ ಅಲ್ಲ ದಾಂ ದೂಂ ಬೀಸೋ ಬಿರುಗಾಳಿ.
                        ಏನು ನೋಡ್ತೀರೋ ಹೈಕಳಾ
                        ಧರ್ಮದೇಟು ದಂಡಿಯಾಗಿ ಕೊಟ್ಟುಕಳಿಸ್ರೊ ಮಕ್ಕಳಾ.
ಸೂತ್ರದಾರ    :       ಹೊಡೀತಿರಾ ಹೊಡೀರಿ. ಕಡೀತೀರಾ ಕಡೀರಿ
                        ಒಂದಿಲ್ಲೊಂದಿನ ಪಶ್ಚಾತಾಪ ಪಟ್ಟೆಪಡ್ತೀರಿ
                        ಹೆಣ್ಣು ಹೆಣ್ಣು ಅಂತಾ ಬಾಯಿ ಬಾಯಿ ಬಿಡ್ತೀರಿ.
ಕಾಕಾ         :       ಶಾಪಾ ಹಾಕ್ತಿ ಏನಯ್ಯಾ ? ಹೋಗೋ ಹೋಗೋ ಜೋಗಯ್ಯ
ಕುಡುಕನ ಹಾಡು:     ಹುಡ್ಕಿರಂದ್ರೆ ಡೇಂಜರಪ್ಪೋ, ಹಷಾರಾಗಿರ್ರಪ್ಪೋ.
                        ಬಣ್ಣದ ಮಾತಿಗೆ ಮರುಳಾಗೋದ್ರೆ  ಬೆಪ್ಪರಾಗ್ತಿರಪ್ಪೋ.


 
ದೃಶ್ಯ : 2
ಒಬ್ಬ           :       ಅಜ್ಜಾ ಅಜ್ಜಾ ವಿಷ್ಯಾ ಗೊತ್ತಾ ?
ಅಜ್ಜ            :       ಯಾವ ವಿಷ್ಯಾ! ಏನು ವಿಷ್ಯಾ ?
ಇನ್ನೊಬ್ಬ      :       ಲೇಟೆಸ್ಟ್ ವಿಷ್ಯಾ ! ಅಪ್ಡೇಟ್ ವಿಷ್ಯಾ !
ಮತ್ತೊಬ್ಬ      :       ತಾಜಾ ವಿಷ್ಯಾ ! ತೇಜಿ ವಿಷ್ಯಾ!
ಅಜ್ಜ            :       ಬೇಗ ಹೇಳ್ರೋ, ಹೇಳಿ ತೊಲಗ್ರೊ.
ಒಬ್ಬ           :       ಹುಡುಗಿ ಹುಡುಗಿ ಲಗ್ನಾದ್ರಂತೆ.
ಇನ್ನೊಬ್ಬ      :       ಸಲಿಂಗರತಿ  ಕಾನೂನಂತೆ.
ಮತ್ತೊಬ್ಬ      :       ಕೋರ್ಟ್ ಕೂಡಾ ಒಪ್ಪಕೊಂಡ್ತಂತೆ.
ಅಜ್ಜ            :       ಅಯ್ಯೋ! ಅಯ್ಯೋ! ಕಾಲಾ ಕೆಟ್ಟೇ ಹೋಯ್ತು.
ಎಲ್ಲರೂ        :       ಕಾಲಾ ಕೆಟ್ಟೇ ಹೋಯ್ತು.
ಅಜ್ಜ            :       ಹೆಣ್ಣು ಹೆಣ್ಣು ಮದ್ವೇನಾ? ಗಂಡಸ್ರೆಲ್ಲಾ ಸತ್ತೋದ್ರಂತಾ?
                        ಹುಡುಗ ಸಿಗ್ದೇ ಹೋಗಿದ್ರೆ, ನನ್ನಂತೋರು ಇದ್ದೀವಲ್ಲಾ?
                        ವಯಸ್ಸಾದ್ರೇನಾಗೋಯ್ತು? ಮನಸ್ಸಲ್ಲಿ ಹರೆಯ ಉಕ್ಕತೈತಲ್ಲಾ?
ಒಬ್ಬ           :       ಅಜ್ಜಾ ಅಜ್ಜಾ ಹುಡ್ಗಿ ಬೇಕಾ?
ಇನ್ನೊಬ್ಬ      :       ತಾತಾ ತಾತಾ ಹೆಂಡ್ತೀ ಬೇಕಾ?
ಮತ್ತೊಬ್ಬ      :       ಮುತ್ಯಾ ಮುತ್ಯಾ ಮದುವೆ ಬೇಕಾ?
ಅಜ್ಜ            :       ಬೇಕು ಅಂದ್ರೆ ಹೆಣ್ಣು ಕೊಡ್ತಾರ್ಯಾರೋ?
                        ಮುದುಕನ ಮದುವೆ ಆಗ್ತಾರೇನ್ರೋ?
                        ಬುದ್ದಿ ಇಲ್ಲದಾ ಮುಂಡೇವಾ.
                        ಕೆಲಸಾ ಬೇಕು ಅಂದ್ರೆ  ಅನುಭವ ಬೇಕು ಅಂತಾರೆ,
                        ಮದ್ವೆ ವಿಷ್ಯ ಬಂದ್ರೆ ಅನುಭವ ಬ್ಯಾಡಾ ಅಂತಾರೆ.
                        ಹಿಂಗೆ ಅದ್ರೆ ಹೆಂಗೆ? ನಮ್ಮಂತವರಿಗೆ ಬಾಳಾ ತೊಂದ್ರೆ ?
ಹಾಡು         :       ಹೆಣ್ಣು ಅಂದ್ರೆ ಹಣ್ಣಣ್ಣು ತಾತಾ
                        ಬೊಚ್ಚುಬಾಯಿ ಬಿಟ್ಟು ಕೇಳ್ತಾನೆ ತಾ..ತಾ..ತಾ..
                        ಕನಸಿಗೇನು ಕರಿಮಣಿ ಕಾಸಾ ?
                        ಹುಣಿಸೆ ಗಿಡ ಮುಪ್ಪಾದ್ರೂ ಹುಳಿ ಜಾಸ್ತಿನಾ ತಾತಾ...?
ಸೂತ್ರದಾರ    :       ಹೆಣ್ಣು ಹೆಣ್ಣು ಮದ್ವೇ ಅದ್ರೆ
                        ಹಿಂಗ್ಯಾಕೆ ಒದ್ಲಾಡ್ತೀರಿ ?
                        ಅಂಡ ಸುಟ್ಟ ಬೆಕ್ಕಿನ ಹಾಗೆ
                        ಬಾಯಿ ಬಾಯಿ ಬಡ್ಕೋಂತೀರಿ.
                        ವ್ಯಯಕ್ತಿಕ ವಿಷಯದಾಗ ಯಾಕ  ಮೂಗುತೂರುಸ್ತೀರಿ.
ಒಬ್ಬ           :       ನಮ್ಮ ವಿಷ್ಯಾ ನಿಂಗ್ಯಾಕ ಬೇಕು
                        ಮುಚ್ಚೊಂಡು ಸುಮ್ನಿರೋ ಮಾರಾಯಾ.
ಇನ್ನೊಬ್ಬ      :       ಕೆಲ್ಸಾ ಇದ್ರೆ ನೋಡ್ಕೊಂಡು ಹೋಗು
                        ಎಲ್ಲಾ ಬಿಟ್ಟ ನಿಂಗೇನ್ ಗೊತ್ತು ಹೆಣ್ಣು ಮಣ್ಣು ಮಾಯಾ.
ಸೂತ್ರದಾರ    :       ಅಲ್ಲಾ ಕಣ್ರಯ್ಯಾ ಯೋಚ್ನೆ ಮಾಡ್ರಯ್ಯ
                        ಹೆಣ್ಣು ಹೆಣ್ಣು ಮದ್ವೇಗೆ ಕಾರಣ ಯಾರೂ ಅಂತಾ
                        ಗಂಡಸ್ರ ಶೋಷಣೆ ತಡೆಯೋಕಾಗ್ದೆ
                        ಕಟ್ಟು ಪಾಡು ಹೊರೋಕಾಗ್ದೆ,
                        ಹುಡುಗಿ ಹುಡುಗಿ ಜೊತೆಯಾಗಿದ್ರೆ
                        ನಿಮ್ದೇನು ನಡುವೆ ತಕರಾರು
                        ಅವರವರ ಇಷ್ಟ ಅವರವರ ಕಷ್ಟ
                        ನಿಮದೇನ್ರಯ್ಯ ಜೋರು.
ಒಬ್ಬ           :       ಸೂತ್ರ ನಮ್ಮು ದಾರಾ ನಿಂದು
                        ನಾಟ್ಕಾ ಶುರು ಮಾಡೋದಷ್ಟ ಕೆಲಸಾ ನಿಂದು
ಇನ್ನೊಬ್ಬ      :       ನಾಟಕದ ನಡುವೆ ಮೂಗುತೂರಸಿದ್ರೆ
                        ಮೂಗು ಕುಯ್ದು ಮೂಲೇಲಿ ಇಡ್ತೀವಿ ಹುಶಾರ್ರು..
ಮತ್ತೊಬ್ಬ      :       ಸೂತ್ರದಾರ ಮೂಲೇಲಿ ನಿಂತ್ಕೊಂಡು ನಾಟ್ಕ ನೋಡು
                        ಮಧ್ಯ ಬಂದ್ರೆ ಸೂತ್ರಾ-ದಾರಾ ಹರ್ದಾಕ್ತಿವಿ.
ಅಜ್ಜ            :       ಇಂತವ್ರಿಂದ ಊರು-ಕೇರಿ ಹಾಳಾಗ್ತೈತಿ
                        ಮಳೆ ಬೆಳೆ ಹೊಂಟೋಗ್ತೈತೆ
                        ನಾಟಕಾ ಗೀಟಕಾ ನಿಂತೋಗ್ತೈತೆ.
ಒಬ್ಬ           :       ಅಜ್ಜಾ ಅಜ್ಜಾ ಈಗ ಮಾಡೋದೇನು?
ಇನ್ನೊಬ್ಬ      :       ಹೆಣ್ಣು ಹೆಣ್ಣು ಮದುವೇ ಆದ್ರೆ ಗಂಡಸ್ರ ಗತಿ ಏನು?
ಅಜ್ಜ            :       ಇದಕ್ಕೆಲ್ಲಾ ಕಾರಣ ಹೆಣ್ಣು, ಹೆಣ್ಣು ಅಂದ್ರೆ ಹುಣ್ಣು.
ಎಲ್ಲರೂ        :       ಹೆಣ್ಣು ಅಂದ್ರೆ ಹಣ್ಣು ಅಂತಿದ್ದೆ, ಈಗೇನಾಯ್ತು ಅಜ್ಜಾ.
                        ದಕ್ಕಿಸಿಕೊಳ್ಳದ ದ್ರಾಕ್ಷಿ  ಹುಳಿಆಯ್ತೆನೋ ಅಜ್ಜಾ.
ಅಜ್ಜಾ          :       ಹೆಣ್ಣು ಅಂದ್ರೆ ಹಣ್ಣೇ ಕಣ್ರೊ ಇಲ್ಲಾ ಅಂದೋರು ಯಾರು?
                        ಹಣ್ಣಿದ್ದಾಗ ತಿಂದಾಕಬೇಕು, ಹಾಗೆ ಬಿಟ್ರೆ ಕೊಳತೋಗುತ್ತೆ ಕಣ್ರೋ?
ಒಬ್ಬ           :       ಅಜ್ಜಾ ಅಜ್ಜಾ ಈಗೇನ್ ಮಾಡೋದು?
ಅಜ್ಜಾ         :       ಗಂಡಸ್ರೆಲ್ಲಾ ಒಂದಾಗಬೇಕು, ಹೆಂಗಸ್ರನ್ನ ಕಡೆಗಣಿಸಬೇಕು.
                        ಹೆಣ್ಣು ಹುಟ್ಟದ ಹಾಗೆ ನೋಡ್ಕೋಬೇಕು.
                        ಹೆಣ್ಣಿದ್ರೇ ತಾನೆ ಹೆಣ್ಣು ಹೆಣ್ಣು ಮದುವೆ.
                        ಅವ್ರೇ ಇಲ್ಲಾಂದ್ರೆ ಹೆಂಗಾಗ್ತಾರೆ ಮದುವೆ.
ಒಬ್ಬ           :       ಹೌದೋ ಹೌದು ಹೌದು
ಇನ್ನೊಬ್ಬ      :       ಅಜ್ಜಾ ಹೇಳಿದ್ರಲ್ಲಿ ಸತ್ಯಾ ಇರ್ಬೋದು.
ಒಬ್ಬ           :       ನನ್ನ ಹೆಂಡ್ತಿ ಬಸುರಿ.
ಇನ್ನೊಬ್ಬ      :       ಹೆಣ್ಣು ಹೆರದಂಗೆ ನೋಡ್ಕೋಳ್ರೋ..
ಇನ್ನೊಬ್ಬ      :       ಅವನ ಹೆಂಡ್ತೀನೂ ಬಸುರಿ
ಒಬ್ಬ           :       ಹೆಣ್ಣು ಹುಟ್ಟೀತು ಹುಷಾರು ಕಣ್ರೋ..
ಒಬ್ಬ           :       ಅಜ್ಜಾ ಅಜ್ಜಾ ಬರ್ತೀವೀ ಅರ್ಜ್ರೆಂಟ್ ಕೆಲ್ಸಾ ಐತಿ.
ಇನ್ನೊಬ್ಬ      :       ಅಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ಮಾಡ್ಸಿ ತಿಳ್ಕೊಂಬೇಕು ಹೆಂಡ್ತಿ ಹೊಟ್ಟೇಲಿ
                        ಯಾವ ಕೂಸ ಐತಿ.
ಅಜ್ಜ            :       ಹೆಣ್ಣಿದ್ರೆ ತೆಗಿಸಾಕಿಬಿಡ್ರಿ., ಗಂಡಿದ್ರೆ ಹಬ್ಬಾ ಮಾಡ್ರಿ.
ಎಲ್ಲರೂ        :       ಅಜ್ಜಾ ಅಜ್ಜಾ ಬರ್ತೀವಿ,  ಸಿಹಿ ಸುದ್ದಿ ತರತೀವಿ
                        ಮಗು ಗಂಡೇ ಆಗ್ತೈತಿ, ವಂಶ ಮುಂದೆ ಬೆಳೆತೈತಿ.
ಹಾಡು         :       ಗಂಡು ಅಂದ್ರೆ ಗಂಡು ಭೂಪತಿ ಗಂಡು
                        ಬಂಕಾಪುರದ ಬೆಂಕಿ ಚೆಂಡು ಬಹದ್ದೂರ್ ಗಂಡು
                        ನಮಗೆ ಬೇಕು ಬಹದ್ದೂರ್ ಗಂಡು...

             
ದೃಶ್ಯ-3
ಸ್ವಾಮೀಜಿ     :       ಬಕುತರೆ ಬಕುತರೆ ಪ್ರೀತಿಯ ಬಕುತರೆ..
                        ಚಿನ್ನದಂತ ಮಾತೊಂದನ್ನ ಹೇಳ್ತೀನಿ ಕೇಳ್ರಿ
                        ಹೆಣ್ಣು ಹೊನ್ನು ಮಣ್ಣು ಎಂಬೋದೆಲ್ಲಾ
                        ಮಾಯೆ ಕಣ್ರಿ ಮಾಯೆ....
ಒಬ್ಬ           :       ಹೌದಾ ಸ್ವಾಮಿ ಹಂಗಾ ಸ್ವಾಮಿ.
                        ನೀವೇಳಿದ್ದನ್ನ ನಂಬೊದ್ಯಾಂಗೆ ಸ್ವಾಮಿ.
ಸ್ವಾಮೀಜಿ     :       ನಾನೇಳಿದ್ದೆಲ್ಲಾ ನಂದೇನಲ್ಲಾ, ಹುಟ್ಸಿ ಗಿಟ್ಸಿ ಹೇಳ್ತಾಯಿಲ್ಲ.
                        ಹೆಣ್ಣು ಮಾಯೆ ಅಂತಾ ನಮ್ಮ ಶಾಸ್ತ್ರ ಪುರಾಣಾ ಹೇಳ್ತಾವಲ್ಲ.
                        ಬುದ್ದ ಹೇಳಿದ್ದು ಗೊತ್ತೀಲ್ವೇನ್ರಿ? ಅಸೆಯೇ ದುಃಖಕ್ಕೆ ಮೂಲ ಕಣ್ರಿ
                        ಮಾಯೆ ಹಿಂದೆ ಹೋದ್ರೆ ನಿಮಗೆಲ್ಲಾ
                        ಸ್ವರ್ಗ ಸಿಗೋಲ್ಲ. ಮೋಕ್ಷ ಸಿಗೋಲ್ಲ.
                        ನರಕಕ್ಕೆ ಹೋಗಿ ಶಿಕ್ಷೆ ಅನುಭವಿಸಿ
                        ಅಂತರ್ಪಿಶಾಚಿ ಆಗ್ತೀರಲ್ಲಾ.
ಇನ್ನೊಬ್ಬ      :       ಹೌದಾ ಸ್ವಾಮಿ. ಹಂಗಾ ಸ್ವಾಮಿ
                        ಮತ್ತೆ ಮುಂದೆ ಮಾಡೋದೇನು ಸ್ವಾಮಿ ?
ಸ್ವಾಮೀಜಿ     :       ವಿಶ್ವಾಮಿತ್ರನ ತಪ್ಪಸ್ಸು ಭಂಗ ಮಾಡಿದ್ಯಾರು?
ಒಬ್ಬ           :       ಮೇನಿಕೆ ಸ್ವಾಮಿ ಮೇನಕೆ
ಸ್ವಾಮೀಜಿ     :       ರಾಮಾಯಣದ ಯುದ್ದಕ್ಕೆ ಕಾರಣ ಯಾರು?
ಒಬ್ಬ           :       ಶೂರ್ಪನಕಿ ಸ್ವಾಮಿ ಶೂರ್ಪನಕಿ
ಇನ್ನೊಬ್ಬ      :       ಅಲ್ಲಾ ಸುಮ್ನಿರೋ ಮಂಕೇ, ಮಂಥರೆ ಸ್ವಾಮಿ ಮಂಥರೆ
ಮತ್ತೊಬ್ಬ      :       ಅದೂ ಅಲ್ಲ ಸುಮ್ಕಿರಲೇ ಸೀತೆ ಸ್ವಾಮಿ ಸೀತೆ
ಸ್ವಾಮೀಜಿ     :       ಸೀತೆ-ಶೂರ್ಪನಿಕಿ-ಮಂಥರೆ ಯಾರು ಇವ್ರೆಲ್ಲಾ ಯಾರು?
                        ಹೆಣ್ಣು ತಾನೇ ಹೆಣ್ಣು? ಹೆಣ್ಣು ಅಂದ್ರೆ ಮಾಯೆ
                        ಯುದ್ದಕೆ, ಜಗಳಕೆ
                        ಸಾವಿಗೆ ಸೂತಕಕೆ
                        ನೋವಿಗೆ ನರಕಕೆ
                        ಮೂಲ ಕಾರಣಾ ಯಾರು?
ಒಬ್ಬ           :       ಹೆಣ್ಣು  ಸ್ವಾಮಿ ಹೆಣ್ಣು
ಇನ್ನೊಬ್ಬ      :       ಮಾಯಾ ಸ್ವಾಮಿ ಮಾಯಾ
ಸ್ವಾಮೀಜಿ     :       ಈಗ ಹೇಳ್ರಿ ಭಕ್ತಗಳಾ
                        ಹೆಣ್ಣು ಬೇಕೋ ಸ್ವರ್ಗ ಬೇಕೋ?
ಎಲ್ಲರೂ        :       ಸ್ವರ್ಗ ಬೇಕು ಸ್ವರ್ಗಾ!
ಸ್ವಾಮೀಜಿ     :       ಯೋಚಿಸಿ ಹೇಳ್ರಿ ಭಕ್ತಗಳಾ
                        ಮಾಯಾ ಬೇಕಾ ಮೋಕ್ಷಾ ಬೇಕಾ?
ಎಲ್ಲರೂ        :       ಮೋಕ್ಷ ಬೇಕು ಸ್ವಾಮಿ ಮೋಕ್ಷ.
ಸ್ವಾಮೀಜಿ     :       ಲೌಕಿಕ ಮಾಯೆ ಬಿಟ್ಟು ಬಿಡಿ
                        ಹೆಣ್ಣು ಹೊನ್ನು ಮಣ್ಣಿನ ಆಸೆ ತೊರೆದು ಬಿಡಿ.
                        ಭ್ರಮೆಯಿಂದ ಹೊರಗೆ ಬಂದುಬಿಡಿ
                        ಹೆಣ್ಣಿಂದ ದೂರವಿರಿ.. ದೂರವಿರಿ.. ಬಹುದೂರವಿರಿ.
ಕುಡುಕ                :       ಸ್ವಾಮಿಯೇ ಶರಣಂ ಅಯ್ಯಪ್ಪ
                        ಹೆಣ್ಣಿನ ಸಹವಾಸ ಸಾಕಪ್ಪ.
                        ಹುಡುಗಿ ಸಿಕ್ಕರೇ ಕಾಳಿದಾಸಾ
                        ಕೈಕೊಟ್ಟರೆ ನನ್ನ ಹಾಗೆ ದೇವದಾಸಾ....
ಸೂತ್ರದಾರ    :       ಹಿಂಗಂದ್ರೆ ಹೆಂಗೆ ಸ್ವಾಮಿ
                        ಅಲ್ಲಮನ ವಚನ ಕೇಳಿಲ್ವೇನ್ರಿ
                        ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
                        ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
                        ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
                        ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ.
ಒಬ್ಬ           :       ಬಂದನಪ್ಪಾ ಬಂದನು ದಾಸಯ್ಯ ಬಂದನು
                        ತಂದನಪ್ಪ ತಂದನು ತಲಹರಟೆ ತಂದನು.
ಕುಡುಕ                :       ದಾಸಯ್ಯ ಬಂದನು ದಾರಿ ಬಿಡಿ, ದಾರಿ ಬಿಡಿ
                        ದಾಸಯ್ಯನ ಕೈಗೆ ಬೀಡಿ ಕೊಡಿ, ಬೀಡಿ ಕೊಡಿ.
ಸ್ವಾಮೀಜಿ     :       ಅಲ್ಲಮನ ಮಾತು ಅಲ್ಲಮನಿಗಿರಲಿ ಕಂದಾ
                        ಶಾಸ್ತ್ರ ಪುರಾಣಗಳ ಮಾತು ಸುಳ್ಳಲ್ಲ. ತಿಳಿ ಕಂದಾ
ಸೂತ್ರದಾರ    :       ಸಂಚಿಹೊನ್ನಮ್ಮ ಹೇಳಿದು ಕೇಳಿದ್ದೀರಾ ಸ್ವಾಮಿ
ಕುಡುಕ                :       ತಿಳಿಸಿ ಉಪಕಾರ ಮಾಡಿ ಸ್ವಾಮಿ.
                        ಸ್ವಾಮಿಯೇ ಶರಣಂ ಅಯ್ಯಪ್ಪ.
ಸೂತ್ರದಾರ    :       ಹೆಣ್ಣಲ್ಲವೇ ನಿಮ್ಮ ಹೆತ್ತವಳು
                        ಹೆಣ್ಣಲ್ಲವೇ ನಿಮ್ಮ ಪೊರೆದವಳು
                        ಹೆಣ್ಣು ಹೆಣ್ಣೆಂದೇಕೆ ಹೀಗಳೆವರು
                        ಕಣ್ಣು ಕಾಣದ ಗಾವಿಲರು’’
ಸ್ವಾಮೀಜಿ     :       ಬಕುತರೇ ಬಕುತರೇ
                        ಪಾಷಾಂಡಿಯ ಮಾತು ಕೇಳಲೇಬೇಡಿ
                        ಇಂತಹ ಧರ್ಮಲಂಡರನು ನಂಬಲೇಬೇಡಿ
                        ವೇದ-ಶಾಸ್ತ್ರ-ಪುರಾಣ ಹೇಳೋದೆಲ್ಲಾ ಸತ್ಯ
                        ಧರ್ಮದ್ರೋಹಿಗಳು ಬೊಗಳೋದೆಲ್ಲಾ ಮಿಥ್ಯ
                        ಹೆಣ್ಣು ಎಂಬೋದು ಮಾಯೆ ತಿಳ್ಕೊಂಡವನು ಗೆದ್ದ, ಭ್ರಮೆಗೆ ಬಿದ್ದವ ಸತ್ತ.
ಸೂತ್ರದಾರ    :       ತಪ್ಪು ಸ್ವಾಮಿ ತಪ್ಪು, ನೀವೆಳಿದ್ದೆಲ್ಲಾ ಮಹಾತಪ್ಪು
                        ದಿಕ್ಕುತಪ್ಸಿ ದಾರಿ ಬಿಡ್ಸಿ, ಜನರ ತಲೆ ಕೆಡ್ಸಬ್ಯಾಡ್ರಿ
                        ಹೆಣ್ಣಿ ಇಲ್ದೆ ಬದುಕೇ ಇಲ್ಲ
                        ಹೆಣ್ಣು ಇಲ್ದೇ ಬೆಳಕೇ ಇಲ್ಲ.
                        ಯತ್ರ ಪೂಜ್ಯಂತೆ ರಮಂತೆ
                        ತತ್ರ ದೇವತಾ:’’ ಅಂತ ನಿಮ್ಮ
                        ಶಾಸ್ತ್ರ ಪುರಾಣಗಳೇ ಹೇಳ್ಯಾವಲ್ಲ.
ಒಬ್ಬ           :       ಯತ್ರ ತತ್ರ ಅಂದ್ರೆ ಎನೋ ದಾಸಯ್ಯ, ಬಿಡಿಸಿ ಹೇಳೋ ಜೋಗಯ್ಯ.
ಸೂತ್ರದಾರ    :       ಹೆಣ್ಣು ಎಲ್ಲಿ ಪೂಜೆಮಾಡಲ್ಪಡುತ್ತಾಳೋ ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ
 ದೇವರಿರುತ್ತಾನೆ ಅಂತ ಅದರರ್ಥ, ಗೊತ್ತಾಯ್ತೇನೋ ಮಿತ್ರ.
ಕುಡುಕ                :       ಓಹೋ. ಅಂದ್ರೆ ದೇವರಿಲ್ಲ ಗುಡಿಯೊಳಗೆ, ದೇವನಿರುವ ಹುಡುಗಿಯೊಳಗೆ.
                        ಊದುಬತ್ತಿ ಕಾಯಿಕರ್ಪುರ ಹಚ್ಚಿ ಪೂಜೆ ಮಾಡಿರೋ ಹುಡುಗಿಗೆ ದೇವಿಗೆ.
ಸ್ವಾಮೀಜಿ     :       ಇಲ್ಲಾ ಅಂದೋರಾರು ಈಗ ಅಲ್ಲ ಅಂದೋರಾರು?
                        ದೇವರಂಗೆ ಹೆಣ್ಣು ಕೂಡಾ ಮೂರು ಮುಚ್ಕೊಂಡು ಮನೇಲಿ
                        ಸುಮ್ಮನೆ ಕೂತ್ಕೋಬೇಕು ಅಂತಾ ಶಾಸ್ತ್ರದಾಗೆ ಹಂಗೆ ಹೇಳದ್ದಾರೋ ಮೂಢಾ.
                ಮುಟ್ಟು ಮೈಲಿಗೆ ಇರೋ ಹೆಣ್ಣ ಪೂಜೆಮಾಡ್ತಾರೇನ್ರೋ?
                ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅಂತ ವೇದ ಪುರಾಣ ಹೇಳಿಲ್ವೆನ್ರೋ?
ಸೂತ್ರದಾರ    :       ಸುಳ್ಳು ಸ್ವಾಮಿ ಸುಳ್ಳು, ವೇದ ಪುರಾಣ ಬರೀ ಗೊಳ್ಳು
                ಗಂಡಿಗೆ ಹೆಣ್ಣು ಹೆಣ್ಣಿಗೆ ಗಂಡು
                ಕೂಡಿ ಬಾಳಿದ್ರೆ ಸ್ವರ್ಗ. ಇಲ್ಲದಿದ್ರೆ ಬದುಕೆ ನರಕ
ಸ್ವಾಮೀಜಿ     :       ಮುಚ್ಚೋ ಬಾಯಿ ಅವಿವೇಕಿ.
                ಇನ್ನೊಂದು ಮಾತಾಡಿದ್ರೆ ಇವನ್ನ ಹೊಸಗಾಕಿ.
ಒಬ್ಬ   :       ಹೋಗಯ್ಯ ಹೋಗೋ ದಾಸಯ್ಯಾ
                ಹೊರಗಡೆ ಪಾದಾ ಬೆಳಿಸಯ್ಯಾ
ಇನ್ನೊಬ್ಬ      :       ನಿನ್ನ ಮಾತು ಊರಲ್ಲಿ ಕೇಳೋರಿಲ್ಲ.
                ಕಿವಡೂರಲ್ಲಿ ಹೋಗಿ ಕೂಗಯ್ಯ.
                ಮೂಗೂರಲ್ಲಿ ಹೋಗಿ ಮಾತಾಡಯ್ಯ
                ಕುರುಡೂರಲ್ಲಿ ಹೋಗಿ ಕುಣಿದಾಡಯ್ಯ.
ಸೂತ್ರದಾರ    :       ಸರ್ವನಾಶ ಆಗ್ತೀರಾ
                ಹೆಣ್ಣು ಕುಲದ ಶಾಪ ನಿಮ್ಮ ಬದುಕನ್ನ
                ನಾಶಾಮಾಡುತ್ತೆ, ನಾಶ ಸರ್ವನಾಶ ಮಾಡುತ್ತೆ.
ಹಾಡು :       ಹೆಣ್ಣಲ್ಲವೇ ನಿಮ್ಮ ಹೆತ್ತವಳು....


 
ದೃಶ್ಯ-
ಸೂತ್ರದಾರ    :
        ಹೀಗೆ ಊರು. ಊರು ಕಿವಡೂರು ಮೂಗೂರು ಕುರುಡೂರಿನ ಜನತೆ ಸ್ತ್ರೀ ವಿರೋಧಿಗಳಾದ್ರು. ಹುಟ್ಸಿದ್ರೆ  ಗಂಡು ಮಗುವನ್ನೇ ಹುಟ್ಟಿಸ್ಬೇಕು, ಹೆಣ್ಣು ಮಗು ಹುಟ್ಟೋಕ್ಮುಂಚೆ ಸಾಯಿಸ್ಬೇಕು ಅಂತ ನಿರ್ಧರಿಸಿದರು. ಅದೆಷ್ಟೋ ಕಂದಮ್ಮಗಳು ಕಣ್ಣು ಬಿಡೋಕ್ಮುಂಚೆ ಶಿವನ ಪಾದಾ ಸೇರಿದವು. ಅದೆಷ್ಟೋ ಭ್ರೂಣಗಳು ಕಾಸಿನ ಆಸೆಯ ಡಾಕ್ಟರ್ಗಳ ಕ್ಲಿನಿಕ್ ಹಿಂಭಾಗದ ಚರಂಡಿಯಲಿ ತೇಲಿಹೋದ್ವು. ತೊಟ್ಟಲಲ್ಲಿ ನಗುತಿರಬೇಕಾದ ಹೆಣ್ಣು ಶಿಶುಗಳ ಪಿಂಡಗಳು ಕಸದ ತೊಟ್ಟಿಗಳಲ್ಲಿ ನಾಯಿ ನರಿಗಳ ಪಾಲಾದವು.
ಒಂದು ಕಡೆ ಕಾಲಾ ಅನ್ನೋದು ಕಾಡುಕುದುರೆ ಹಾಗೆ ಓಡ್ತಾಯಿತ್ತು. ಇನ್ನೊಂದು ಕಡೆ ಹೆಣ್ಣು ಮಕ್ಕಳ ಸಂತತಿ ಕರಗ್ತಾ ಹೋಯ್ತು. ಹೆಣ್ಣು ಮನೇಲಿದ್ದಾಗ ಗೌರವಿಸದೇ ದಮನಿಸಿದ ಗಂಡಸರು ಈಗ ಹೆಣ್ಣು ಹೆಣ್ಣು ಎಂದು ಬಾಯಿ ಬಿಡತೊಡಗಿದರು. ಗಂಡೂರುಗಳಲ್ಲಿ ಮನೆ ಅಂಗಳ ಗೂಡಿಸೋರಿಲ್ಲ. ರಂಗವಲ್ಲಿ ಹಾಕಿ ಚಿತ್ತಾರ ಬಿಡಿಸೋರಿಲ್ಲ. ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸೋರಿಲ್ಲ. ದಣಿದು ಬಂದ ಗಂಡಸರಿಗೆ ಪ್ರೀತಿಯ ಸಿಂಚನ ಊಣಿಸೋರಿಲ್ಲ. ಸ್ತ್ರೀ ವಿರೋಧಿ ಯಾದ ಊರಿನ ಜನಕ್ಕೆ ದೂರದೂರಿನವರು ಹೆಣ್ಣು ಕೊಡಲೇ ಇಲ್ಲ. ಹೆಣ್ಣೇ ಇಲ್ಲವೆಂದ  ಮೇಲೆ ಮಕ್ಕಳೇ ಇರಲಿಲ್ಲ. ಮಕ್ಕಳನ್ನು ಮುದ್ದು ಮಾಡುವ ಅಜ್ಜಿಗಳೂ ಇಲ್ಲ.
ಊರಿಗೆ ಊರೆ ಸೂತಕದ ಮನೆ. ಊರತುಂಬ ಸ್ಮಶಾನ ಮೌನ. ಊರು ಕೇರಿ ತುಂಬೆಲ್ಲಾ ಬರೀ ಗಂಡಸರೇ. ಎಲ್ಲರೂ ಬೈರಾಗಿಗಳಂತೆ ಗಡ್ಡ ಬಿಟ್ಟು ಏನನ್ನೋ ಕಳಕೊಂಡವರ ಹಾಗೆ ಆಕಾಶ ನೋಡುತ್ತಾ ಕುಳಿತಿರುತ್ತಿದ್ದರು. ಇವರ ಕೊಳೆ ಬಟ್ಟೆ  ತಿಕ್ಕಿ ತೊಳೆದು ಒಣಗಿಸಿ ಕೊಡಲು ಹೆಣ್ಣುಗಳೇ ಮನೇಲಿಲ್ಲದ್ದರಿಂದ ಗಂಡುಗಳೆಲ್ಲಾ ಮಾಸಲು ಬಟ್ಟೆ ತೊಟ್ಟು ತಿರುಗುತ್ತಿದ್ದರು. ಮುಖದ ತುಂಬಾ ಪ್ರೇತಕಳೆ. ಬಟ್ಟೆಗಳಲ್ಲಿ ದಶಕದ ಕೊಳೆ. ಕೆಲವರು ಪ್ರೀತಿಗಾಗಿ ಹಂಬಲಿಸಿ ಅರೆಹುಚ್ಚರಾದ್ರು. ಇನ್ನು ಕೆಲವರು ಕುಡಿದು ಕುಡಿದು ರೋಗಗ್ರಸ್ಥರಾದ್ರು. ಮತ್ತೊಂದಿಷ್ಟು ಯುವಕರು ಅತ್ಮಹತ್ಯೆ ಮಾಡ್ಕೊಂಡು ಸತ್ತೇಹೋದ್ರು. ಇನ್ನು ಕೆಲವರು ಇಂದಿಲ್ಲಾ ನಾಳೆ ಯಾರಾದ್ರೂ ಹುಡ್ಗಿ ಬರ್ತಾಳೆ ಅನ್ನೋ ನಿರೀಕ್ಷೆಯಲ್ಲಿ ಕಾಲಕಳಿತಾಯಿದ್ರು. ಊರಿನ ಕೆಲವರು ದೂರದ ಊರಿಗೆ ಹೋಗಿ ಹೆಣ್ಣು ಕೇಳೋ ರೀತಿ ಹೇಗಿತ್ತಪಾ ಅಂತಂತಂದ್ರೆ...

ಒಬ್ಬ   :       ನಮಸ್ಕಾರ ಯಜಮಾನ್ರೆ
ಯಜಮಾಜ   :       ಯಾರು ನೀವು? ಯಾವ ಊರು? ಇಲ್ಲಿಗ್ಯಾಕ ಬಂದ್ರಿ?
ಇನ್ನೊಬ್ಬ      :       ಏನು ಇಲ್ಲಾ, ಸುಮ್ಕೆ ಬಂದ್ವಿ.
ಒಬ್ಬ   :       ಹೆಣ್ಣು ಇದ್ರೆ ತೋರಿಸ್ತೀರಾ?
ಯಜಮಾನ   :       ಎಷ್ಟು ದುಡ್ಡು ಬಿಚ್ತೀರಾ? ಎಷ್ಟು ಕಾಸು ಕೊಡ್ತೀರಾ?
ಒಬ್ಬ   :       ಕೇಳಿದಷ್ಟು ಕೊಡ್ತೀವಿ. ಬೇಕಾದಷ್ಟು ಕೊಡ್ತೀವಿ. ಹೆಣ್ಣು ಬೇಕು ಹೆಣ್ಣು.
ಯಜಮಾನ   :       ಹಣ್ಣು ಬೇಕಾ ಹಣ್ಣು ಎಂಥಾ ಹಣ್ಣು?
ಹಾಡು :       ಹೆಂಡ್ತಿ ಬೇಕು ಹೆಂಡ್ತಿ.
                ಕರ್ರಗಿದ್ರು ಪರ್ವಾಗಿಲ್ಲ, ದಪ್ಪಗಿದ್ರು ಅಡ್ಡಿಇಲ್ಲ.
                ಹೆಂಡ್ತಿ ಬೇಕು ಹೆಂಡ್ತಿ.
ಯಜಮಾನ   :       ಹಣ್ಣು ಬೇಕಾ ಹಣ್ಣು ಎಂಥಾ ಹಣ್ಣು?
                ಮಾವಿನಹಣ್ಣು, ಚಿಕ್ಕುಹಣ್ಣು, ಪರಂಗಿ ಹಣ್ಣು.
                ತಾಜಾ ಹಣ್ಣು ತೇಜಿ ಹಣ್ಣು. ಎಷ್ಟು ಬೇಕು? ಯಾವಾಗ ಬೇಕು?
ಒಬ್ಬ   :       ಹಣ್ಣು ಅಲ್ಲ ಯಜಮಾನ್ರೇ ಹೆಣ್ಣು ಹೆಣ್ಣು?
ದಾರಿಹೋಕ   :       ರ್ರೀ ಸ್ವಾಮಿ. ಯಜಮಾನ್ರಿಗೆ ಕಿವಿ ಕೇಳಾಕಿಲ್ಲ. ಜೋರಾಗಿ ಹೇಳ್ರಿ.     
ಇನ್ನೊಬ್ಬ      :       (ಮೆತ್ತಗೆ) ಕೆಪ್ಪ ಕೆಪ್ಪ ಕಿವುಡಪ್ಪ, (ಜೋರಾಗಿ) ಹಣ್ಣು ಅಲ್ಲ ಹೆಣ್ಣು ಬೇಕು ಹೆಣ್ಣು.
ಯಜಮಾನ   :       ಹೆಣ್ಣು, ಎಲ್ಲೈತೆ ಹೆಣ್ಣು. ಸಾಯೊಕ್ಮುಂಚೆ ಮದ್ವೇ ಆಗೋ ಆಸೆ.
                ಕಾಲಿಗಿಬಿದ್ದು ಕೇಳ್ಕೋಳ್ತೀನಿ ಹೆಣ್ಣು ಕೊಟ್ಟು ಪುಣ್ಯ ಕಟ್ಕೊಳ್ರೋ. 
ಒಬ್ಬ   :       ಗಟ್ಟಿಮುಟ್ಟಾಗಿರೋ ನಮ್ಗೆ ಸಿಗ್ತಿಲ್ಲಾ ಹೆಣ್ಣು .ಇನ್ನು ಕೆಪ್ಪಜ್ಜನಿಗ್ಯಾರು ಕೊಡ್ತಾರೋ ಹೆಣ್ಣು?
ಇನ್ನೊಬ್ಬ      :       ಯಜಮಾನ್ರೇ ಹುಡುಗಿ ನಿಮಗಲ್ಲ ನಮಗ ಬೇಕು. ಹುಡ್ಗಿ ಬೇಕು ಹುಡ್ಗಿ.
ಯಜಮಾನ   :       ಹುಡ್ಗಿ ಬೇಕಾ. ಹೋಗ್ರಯ್ಯ ಹೋಗ್ರಿ. ನನಗೇ ಇನ್ನೂ ಮದ್ವೆ ಇಲ್ಲಾ ಮುಂಜ್ವೀ ಇಲ್ಲ.
                ಮದ್ವೇ ಕನಸಲ್ಲಿ ಮುದುಕಾಗ್ಬಿಟ್ಟೆ.. ನಿಮಗೆಲ್ಲಿಂದ ತರ್ಲಿ ಹೆಣ್ಣು.
ಒಬ್ಬ   :       ಏನು ಕಾಲಾ ಬಂತು ಕಣೋ ಎಂತಾ ಕಾಲಾ ಬಂತು.
ಇನ್ನೊಬ್ಬ      :       ನಂಗೊಂದ್ ಐಡಿಯಾ ಬಂತು ನೋಡು. ಕಟ್ಟೆ ಹತ್ತಿ ನಿಂತು ಭಾಷಣಾ ಮಾಡ್ತೀನಿ ನೋಡು.
                ಮಹಿಳೆಯರೇ ಮತ್ತು ಮಹನಿಯರೇ.
ಒಬ್ಬ   :       ಬರೀ ಮಹನಿಯರೇ ಇದ್ದಾರಲ್ಲೋ ಮಹಿಳೆಯರು ಎಲ್ಲೋ?
ಇನ್ನೊಬ್ಬ      :       ಕ್ಷಮಿಸಿ, ಬರೀ ಮಹನಿಯರೇ.
                ದೂರದೂರಿನಿಂದ ನಡೆದು ನಡೆದು ಬಂದೆವು.
                ಮದ್ವೆ ಆಗೋ ಆಸೆಯಿಂದ ಓಡಿ ಓಡಿ ಬಂದೆವು.
                ಲಗ್ನ ಆಗೋ ದೆಸೆಯಿಂದ ಹಾರಿ ಹಾರಿ ಬಂದೆವು.
ಒಬ್ಬ   :       ಅಣ್ಣಗಳಿರಾ ಅಪ್ಪಗಳಿರಾ, ಎನ್ನ ಒಡಹುಟ್ಟುಗಳಿರಾ
                ಕಂದ ನಿಮ್ಮವನೆಂದು ತಿಳಿದು ಹೆಣ್ಣು ಕೊಡಿರೋ ಮಾವಗಳಿರಾ.
ಇನ್ನೊಬ್ಬ:      ಕಾಸು ಇದೆಕೋ ಆಸ್ತಿ ಇದೆಕೋ
                ಹೊನ್ನು ಮಣ್ಣು ಚಿನ್ನ ವಿದೆಕೋ
                ಹೆಣ್ಣು ಹೆತ್ತವರೆ ನೀವೆದೆಲ್ಲವ ಪಡೆದು ಸಂತಸದಿಂದಿರಿ.
                ಮಗಳ ಕೊಟ್ಟು ಮದುವೆ ಮಾಡಿ ಶುಭವ ಹರಿಸಿರಿ.
ಒಬ್ಬ   :       ಹೆಂಡ್ತಿ ಬೇಕು ಹೆಂಡ್ತಿ. ಒಂಟಿ ಇರಲಿ ಕುಂಟಿ ಇರಲಿ.
                ಮೂಗಿ ಇರಲಿ ಕಾಗೆ ಬಣ್ಣ ವಿರಲಿ.
                ಕುಳ್ಳಗಿರಲಿ ಮೆಳ್ಳಗಿರಲಿ ಏನೆ ಇರಲಿ ಇಲ್ಲದಿರಲಿ.
                ಹೆಂಡ್ತಿ ಬೇಕು ಹೆಂಡ್ತಿ.
ಜನ    :       ಯೋಯ್ ಬೇವಾರ್ಸಿ ನನ್ಮಕ್ಕಳಾ.
                ಹೆಣ್ಣು ಸಿಗದೇ ಹಣ್ಣಾಗೋದ್ವಿ
                ಹುಡ್ಗಿ ಹುಡ್ಕಿ ಸಣ್ಣಗಾಗೊದ್ವಿ
                ಹೆಣ್ಣು ಇಲ್ಲಾ ಮಣ್ಣು ಇಲ್ಲಾ
                ಬದುಕು ಇಲ್ಲಾ ಬೆಳಕು ಇಲ್ಲಾ
                ನಮ್ಗೆ ಇಲ್ಲದಾಗ ನಿಮ್ಗೇನ್ ಕೊಡ್ಲಿ
                ದೂರದೂರಿನಿಂದ ಬಂದಿದ್ದೀರಿ
                ಧರ್ಮದೇಟು ಕೊಡ್ತೀವಿ ತಕ್ಕೊಳ್ಳಿ
                ಆಳಿಗೆ ನಾಲ್ಕು ಹಂಚ್ಚೊಳ್ಳಿ
ಒಬ್ಬ   :       ಓಡೋ ಓಡೋ ಓಡು...
                ಜೀವ ಉಳಿದ್ರೆ ಜೀತಾ ಮಾಡಿ ಬದ್ಕೋನಂತೆ.
ಇನ್ನೊಬ್ಬ:      ಓಡೋ ಓಡೋ ಓಡು....
                ಬದುಕಿದ್ರೆ ಹುಡ್ಗಿ ಹುಡ್ಕೊನಂತೆ
ಒಬ್ಬ   :       ಅಂತೂ ಇಂತೂ ಊರಿಗೆ ಬಂದ್ವಿ
                ಹುಡ್ಗಿ ಕೇಳಿ ಧರ್ಮದೇಟು ತಿಂದ್ವಿ
ಮತ್ತೊಬ್ಬ:     ಏನು ಆಯ್ತು, ಹೆಂಗ ಆಯ್ತು.
                ನಿಮ್ಮ ಬಟ್ಟೆ ಗಿಟ್ಟೆ ಯಾಕೆ ಚಿಂದಿ ಆಯ್ತು.
ಒಬ್ಬ   :       ಸಾಕಪ್ಪಾ ಸಾಕು ಹುಡುಕಾಟಾ
                ನಮ್ದೇನೈತೆ ಎಲ್ಲಾ ವಿಧಿಯಾಟಾ.
ಮತ್ತೊಬ್ಬ:     ಏನಾಯ್ತು ಹೇಳ್ರೋ ಹೋಗಿದ್ದ ಕೆಲ್ಸ ಹಣ್ಣೋ ಕಾಯೋ
ಇನ್ನೊಬ್ಬ:      ಏನಂತಹೇಳ್ಲಿ, ಹ್ಯಾಂಗಂತ ಹೇಳ್ಲಿ
                ಹಣ್ಣೂ ಇಲ್ಲಾ ಕಾಯೂ ಇಲ್ಲ.
                ಕೈಯಿ-ಮೈಯಿ ಎಲ್ಲಾ ಹಣ್ಣುಗಾಯಿ ನೀರುಗಾಯಿ
ಒಬ್ಬ   :       ಊರಾಗೂ ಹೆಣ್ಣಿಗೆ ಬರವಂತೆ.
                ಹುಡ್ಗಿ ಇದ್ರೆ ನಮ್ಗೆ ಕೊಡ್ರಿ ಅಂತಾರಂತೆ
ಮತ್ತೊಬ್ಬ:     ಏನು ಕಾಲಾ ಕೆಟ್ಟೋಯ್ತು, ಹೆಣ್ಣಿಗೆ ಬರಾ ಬಂದೋಯ್ತು
                ಮನೆ ಗೂಡ್ಸಿ ಆರು ತಿಂಗಳಾಯ್ತು.
ಮಗದೊಬ್ಬ:   ಹೆಣ್ಣು ದಿಕ್ಕಿಲ್ಲದ ಮನೆ ದಿಕ್ಕಾಪಾಲಾಗೋಯ್ತು
ಒಬ್ಬ   :       ಹಿಂಗೆ ಆದ್ರೆ ಮುಂದೇನು ಗತಿ?
ಅರೆ ಹುಚ್ಚ:    ಆಹಾ ನಂಗೆ ಮದ್ವೆಯಂತೆ
                ಹೊಹೋ ನಂಗೆ ಮದ್ವೇಯಂತೆ
                ಅಹಾ ನಂಗೆ ಮದ್ವೇಯಂತೆ ಓಹೋ ನಂಗೆ ಮದ್ವೆಯಂತೆ
                ಊರೆಲ್ಲಾ ಗುಲ್ಲಂತೆ ಟಾಂ ಟಾಂ ಟಾಂ.
ತಂದೆ  :       ನೋಡಿದ್ರೆನ್ನಪ್ಪಾ ನನ್ನ ಕಿರಿಮಗ ಮದ್ವೆ ಹುಚ್ಚು ಹಿಡಿಸ್ಕೊಂಡವ್ನೆ
                ಊರು ತುಂಬ ಅಂಗಿಹರ್ಕೊಂಡು ತಿರುಗಾಡ್ತಾವ್ನೆ.
                ಎರಡನೇ ಮಗ ತಿಕ್ಕಲೋ ತಿಕ್ಕಲು
                ಮೂರನೇಯವ ಪುಕ್ಕಲೋ ಪುಕ್ಕಲು
                ನಾಲ್ಕನೆಯವ ಬಾವಿಗೆ ಬಿದ್ದು ಸತ್ತ
                ಐದನೇ ಮಗ ಊರೇ ಬಿಟ್ಟು ಹೋದ ಗೊತ್ತಾ.
ಮತ್ತೊಬ್ಬ:     ಸಮಾದಾನಾ ಮಾಡ್ಕೋಳ್ರಿ ಯಜಮಾನ್ರೇ
                ಇದು ನಿಮ್ಮೊಂದೇ ಮನೇ ಕಥೆ ಅಲ್ಲ.
                ಊರಿನ ವ್ಯಥೆ ಯಜಮಾನ್ರೇ.
                ದಾಸಯ್ಯ ಹೇಳಿದಂತೆ ಆಯ್ತು.
                ಊರಿಗೆ ಊರೇ ಸರ್ವನಾಶ ಆಯ್ತು.
ಮಗದೊಬ್ಬ:   ಹೆಣ್ಣಿನ ಕುಲವೇ ಅಳಿಸಿ ಹೋಯ್ತು
                ಗಂಡಿನ ಬದುಕೇ ಬೆಂಗಾಡಾಯ್ತು.
ಒಬ್ಬ   :       ಅದೆಷ್ಟು ಬಸಿರು ಇಳ್ಸಿದೀವೀ
                        ಎಷ್ಟು ಹೊಟ್ಟೇ ತೋಳ್ಸಿದ್ದೀವಿ.
                        ಎಷ್ಟೊಂದು ಪಿಂಡಾ ನಾಯಿಗಾಕಿ
                        ಹೆಣ್ಣು ಭ್ರೂಣ ಹತ್ಯೆ ಮಾಡಿದ್ದೀವಿ.
ಇನ್ನೊಬ್ಬ      :       ಹೆಣ್ಣಿನ ಶಾಪ ಸುಮ್ನೇ ಬಿಡ್ತೈತೆನ್ರೊ
                        ಮಾಡಿದ ಪಾಪಾ ಹೆಣ್ಣಿನ ತಾಪಾ
                        ಎಲ್ಲಾ ಸೇರಿ ಊರಿಗೆ ಊರೆ ಮಸಣ ಕಣ್ರೊ
                        ಮನೆ ಮನೇಲೂ ಸೂತಕ ಕಣ್ರೊ
ಅಜ್ಜನ ಹಾಡು  :       ಮನೆ ಮನೆಯು ಕತ್ತಲೆ ಪ್ರತಿ ಕಣ್ಣು ಕಣ್ಣೀರು
                        ಕಷ್ಟ ಬಂದಿದ್ಯಾರಿಗೋ ರಾಮಣ್ಣ
                        ಸುಖವು ದಕ್ಕಿದ್ಯಾರಿಗೋ ?
                        ಬಸಿರನೇ ಬಗೆಬಗಿದು
                        ಪಿಂಡಾವ ಉಂಡೆ ಮಾಡಿ
                        ಹೆಣ್ಣಬ್ರೂಣ ಹೊಸಕಿ ಹಾಕಿ
                        ಗಂಡು ಬೀಗಿದ್ನಲ್ಲೋ ರಾಮಣ್ಣ
                        ಸುಖವು ದಕ್ಕಿತೇನೋ?
ಒಬ್ಬ           :       ಅಜ್ಜಾ ಬಂದಾ ಅಜ್ಜಾ
ಇನ್ನೊಬ್ಬ      :       ಅಜ್ಜಾ ಅಜ್ಜಾ ಹಿಂಗಯ್ತಲ್ಲ
                        ಬದುಕೆ ಪೂರಾ ಕತ್ಲಾಯ್ತಲ್ಲ.
ಅಜ್ಜಾ          :       ನನ್ನೇನು ಕೇಳ್ತೀರಿ ಸುಮ್ನಿರ್ರೊ ಹೈಕಳಾ
                        ಕಾಡು ಬಾ ಅನ್ನುತ್ತೆ ಊರು ಹೋಗನ್ನುತ್ತೆ
                        ಕಾಕಾ ಬರತಾನೆ ಅವನ್ನೇ ಕೇಳ್ರೋ
ಒಬ್ಬ           :       ಕಾಕಾ ಕಾಕಾ ಮಾಡೋದೇನು
                        ಬದುಕೆ ಮೂರಾಬಟ್ಟೆ ಆಗೋಯ್ತೇನು?
ಹುಚ್ಚ          :       ಕಾಕಾ ಮದ್ವೇ ಮಾಡಿಸ್ತಿಯೋ
                        ಇಲ್ಲಾ ನೀನೇ ನನ್ನ ಮದ್ವೇ ಅಗ್ತಿಯೋ?
                        ಎಷ್ಟು ದಿನಾ ಕಾಯೋದು
                        ಹುಡ್ಗಿ ಇಲ್ಲದೇ ಬದ್ಕೋದು
                        ಮೂರು ದಿನ ಟೈಂ ಕೊಡ್ತೀನಿ
                        ಹುಡ್ಗಿ ಕೊಡ್ಸು ಇಲ್ಲ ನಿನ್ನೇ ಮದ್ವೇ ಅಗ್ತೀನಿ.
ಕಾಕಾ         :       ಅರೆ ಒಳ್ಳೇ ಐಡಿಯಾ ಕೊಟ್ಟೆಲ್ಲೊ
                        ಐಡಿಯಾ ಬಂತು ಐಡಿಯಾ
ಒಬ್ಬ           :       ಏನು ಐಡಿಯಾ ಎಂತಾ ಐಡಿಯಾ
ಅಜ್ಜ            :       ಬೇಗ ಹೇಳು, ಹೇಳಿ ತೊಲಗು
ಕಾಕಾ         :       ಅಜ್ಜ ಅಜ್ಜ. ಗಂಡು ಗಂಡಿಗೆ ಮಾಡಿದ್ರೆ ಲಗ್ನ ತೊಲಗಿತು ನೋಡು ವಿಘ್ನ.
ಅಜ್ಜ            :       ಏನಾದ್ರು ಮಾಡು ಹೆಂಗಾದ್ರೂ ಮಾಡು
ಒಬ್ಬ           :       ಯಾಕೆ ಅಜ್ಜ, ಹಿಂಗ್ಯಾಕೆ ಅಜ್ಜಾ
                        ಹೆಣ್ಣು ಹೆಣ್ಣು ಮದ್ವೇ ಆದ್ರೆ ಬೇಡಾ ಅಂದಾವ ನೀನು
ಅಜ್ಜ            :       ಕಾಲಾಯ ತಸ್ಮಾಯ ನಮಃ ಕಣ್ರೊ
                        ಬೇರೆ ದಾರಿ ಏನೈತೆ ಎಲೈತೆ ಹೇಳ್ರೊ.
                        ಮದ್ವೇಗೆ ಹೆಣ್ಣು ಸಿಗದಿದ್ರೆ ಮಾಡೋದೇನು
                        ಗಂಡು ಗಂಡು ಲಗ್ನ ಮಾಡಿದ್ರೆ ಆಗದೇನು?
ಸ್ವಾಮೀಜಿ     :       ಅಯ್ಯೋ ಅಯ್ಯೋ ಅಯ್ಯೋ
                        ಅಯ್ಯಯ್ಯೋ ಅಯ್ಯೋ ಅಯ್ಯೋ
                        ಅಪಚಾರ ವೇದ ಶಾಸ್ತ್ರಕ್ಕೆ ಅಪಚಾರ
                        ಗಂಡು ಗಂಡು ಮದ್ವೇನಾ?
                        ಶಾಸ್ತ್ರ ಪುರಾಣ ಒಪ್ಪತೈತಾ?
                        ಧರ್ಮದೇವರು ಸುಮ್ಕಿರ್ತೈತಾ?
ಒಬ್ಬ           :       ಸ್ವಾಮಿಗಳೇ ಸ್ವಾಮಿಗೋಳೆ. ನೀವೇ ತಾನೆ ಹೇಳಿದ್ದು.
                        ಹೆಣ್ಣು ಮಾಯಾ, ಹೆಣ್ಣು ಹುಣ್ಣು ಅಂತಾ ಕುಯ್ದಿದ್ದು.
                        ಹೀಗೆ ಹೇಳಿ ಹೇಳಿ ಹೆಣ್ಣು ಕುಲಾನೇ ಮಂಗ ಮಾಯಾ ಆಯ್ತು.
ಇನ್ನೊಬ್ಬ      :       ಈಗ ಮದ್ವೆ ಅಗೋದ್ಯಾರನ್ನ, ಪಿರೀತಿ ಮಾಡೋದ್ಯಾರನ್ನ
                        ಮಕ್ಕಳಾಗೋದು ಹ್ಯಾಗೆ, ವಂಶ ಬೆಳಿಯೋದ್ಯಾಗೆ.
ಸ್ವಾಮೀಜಿ     :       ಎಲ್ಲಾ ಮಾಯೆ, ದೇವನ ಲೀಲೆ
                        ನಮ್ಮ ಕೈಯಲ್ಲಿ ಏನೈತೆ ಹೇಳ್ರಲೇ
                        ಏನೇ ಆಗ್ಲಿ, ಏನೇ ಹೋಗ್ಲಿ.
                        ಗಂಡು ಗಂಡು ಮದ್ವೆ ಆಗದು ಆಗದು ಆಗದು
                        ಶಾಸ್ತ್ರ ಪುರಾಣ ಸಂಪ್ರದಾಯ ಒಪ್ಪದು ಒಪ್ಪದು.
ಹುಚ್ಚ          :       ಬ್ಯಾಡ್ರಪೋ ಬ್ಯಾಡ್ರೀ. ಸ್ವಾಮಿ ಮಾತು ನಂಬಬ್ಯಾಡ್ರಿ.
                        ಅವ್ನಿಗೆ ಸಿಗದದ್ದು ಯಾರಿಗೂ ಸಿಗಬಾರ್ದು ಅಂತಾನೆ.
                        ಪರಲೋಕದ ಮಾತು ಹೇಳೋ ಇವ್ನ ಪರಲೋಕಕ್ಕೆ ಕಳಿಸಿಬಿಡ್ರಿ
                        ಇವನ ಕತ್ತೂ ಹಿಚುಕಿ ಹಿಚುಕಿ ಸಾಯ್ಸಿ ಬಿಡ್ರಿ.
ಸ್ವಾಮೀಜಿ     :       ಅಯ್ಯೋ ಅಯ್ಯೋ ಹುಚ್ಚ ಮುಂಡೇದೇ
                        ಶಾಪಾ ಹಾಕಿ ಸಾಯ್ಸಿಬಿಡ್ತೀನಿ ಹುಶಾರ್
ಹುಚ್ಚ          :       ಶಾಪಾ ಹಾಕಿ ಸಾಯ್ಸೊ ಸ್ವಾಮಿ
                        ಮಾಯಾ ಮಾಡಿ ಒಂದು ಹುಡ್ಗಿ ಹುಟ್ಸಿ ಕೊಡೋ ಸ್ವಾಮಿ.
                        ನಂಗೆ ಲಗ್ನ ಮಾಡು ಇಲ್ಲ ನೀನೇ ನನ್ನ ಹೆಂಡ್ತಿಯಾಗು.
                        ನಂಗೂ ನಿಂಗೂ ಮದ್ವೇ ಅಂತೆ...
ಸ್ವಾಮೀಜಿ     :       ಥೂ. ಸರಿಯೋ ದೂರ. ಎಳಿದೊಯ್ರೋ ಹುಚ್ಚನ್ನ.
                        ಮಡಿ-ಮುಡಿ ಎಲ್ಲಾ ಹಾಳಮಾಡಿಬಿಟ್ಟ.
                        (ಅಷ್ಟರಲ್ಲಿ ಒಂದು ಸುಂದರವಾದ ಹುಡುಗಿ ಆಕಡೆಯಿಂದ ಬರತಾಳೆ. ಜನ
                        ಕಣ್ಣುಜ್ಜಿಕೊಂಡು  ಕೈ ಚಿವುಟಿಕೊಂಡು ಕನಸೋ ನನಸೋ ಚೆಕ್
                        ಮಾಡ್ಕೋಂತಾರೆ)
ಒಬ್ಬ           :       ಅಲೇಲೆಲೇಲೆ.. ಅಲ್ಲಿ ನೋಡ್ರೋ ಅಲ್ಲಿ
                        ಹುಡ್ಗಿ ಹೆಣ್ಣು ಲೇಡಿ, ಗರ್ಲು... ಬರತಾ ಅವಳೆ, ನುಲಕೊಂಡು ಬರತಾವ್ಳೆ..
ಇನ್ನೊಬ್ಬ      :       ಹೌದಲ್ಲೋ ಹೌದು
                        ಹುಡ್ಗಿ ಬಂದ್ಲು ಹುಡ್ಗಿ
                        ನನ್ನ ಮದ್ವೆ ಆಗೋ ಬೆಡಗಿ
ಮಗದೊಬ್ಬ    :       ಹಿಂದೆ ಸರಿಯೋ ಗಡವಾ
                        ನಾನಿರುವಾಗ ನಿಂದೇನು ಮುಚ್ಕೊಂಡಿರೋ ಬಡವಾ.
ಅಜ್ಜಾ          :       ಅರೇ ಹುಡುಗಿ ಯಾರೇ ನೀನು?
ಎಲ್ಲರೂ        :       ಯಾರೇ ನೀನು ಯಾರು? ಇಲ್ಲಗ್ಯಾಕೆ ಬಂದಿ ಯಾವೂರು?
ಕಾಕಾ         :       ಅಲೇಲೆ ಬೆಡಗಿ ಎಲ್ಲಿಂದ ಬಂದಿ? ಯಾಕ ಬಂದಿ?
ಎಲ್ಲರೂ        :       ಎಲ್ಲಿಂದ ಬಂದಿ ಯಾಕ ಬಂದಿ?
ಒಬ್ಬ           :       ನನ್ನ ಮದ್ವೇ ಮಾಡ್ಕೋಂತಿಯಾ?
ಎಲ್ಲರೂ        :       ನನ್ನ ಮದ್ವೇ ಮಾಡ್ಕೋಂತಿಯಾ?
ಅಜ್ಜ            :       ಮುಚ್ಚೊಂಡಿರ್ರೋ ಹೈಕಳಾ.
                        ವಯಸ್ಸಲ್ಲಿ ನಾನು ಹಿರಿಯಾ
                        ಮೊದಲು ನನಗೆ ಹುಡ್ಗಿ ಬೇಕು
ಒಬ್ಬ           :       ಏನು ತಾತಾ, ಯಾಕೋ ತಾತಾ. ಸಾಯೋ ವಯಸಲ್ಲಿ ಹುಡ್ಗೀ ಬೇಕಾ.
ಕಾಕಾ         :       ಸುಮ್ಕಿರ್ರೊ ಹೈಕ್ಳಾ , ನನಗೊಸ್ಕರ ಅವ್ಳನ್ನ ಬಿಟ್ಟು ಬಿಡ್ರೊ ಮಕ್ಳಾ.
ಇನ್ನೊಬ್ಬ      :       ಏನು ಕಾಕಾ ಹುಡ್ಗಿ ಬೇಕಾ....?
ಹುಚ್ಚ          :       ಅಹಾ ನನ್ನ ಮದ್ವೇ ಅಂತೆ.. ಹುಡ್ಗಿ ಬಂದು ನಿಂತ್ಲಂತೆ
                        ಯಾರಲ್ಲಿ ತಾಳಿ ತನ್ನಿ, ಯಾರಲ್ಲಿ ಗಟ್ಟಿ ಮೇಳ ನುಡಿಸಿ
                        ಹೀಗೆ  ಬಾ ಚಲುವೆ ಇಂದೇ ನಮ್ಮ ಮದುವೆ.
ಎಲ್ಲರೂ        :       ಇಕ್ರೋ  ನಾಲ್ಕು ಅವನಿಗೆ
ಸ್ವಾಮೀಜಿ     :       ನೋಡಿ ಬಕುತರೇ, ಕೇಳಿ ಬಕುತರೇ
                        ಹೆಣ್ಣು ಅಂದ್ರೆ ಮಾಯೆ, ಮಾಯೆ ದೇವರಿಗೆ ಅರ್ಪಿತಾ
                        ಮಠಕ್ಕೆ ಇವ್ಳನ್ನ ಬಿಟ್ಟು ಬಿಡಿ. ದೇವರ ವಶಕ್ಕೆ ಕೊಟ್ಟು ಬಿಡಿ.
ಒಬ್ಬ           :       ಅಲೇಲೆ ಮಗನ ಸ್ವಾಮಿ.
                        ದೇವರ ಹೆಸರು ನಿಂದು ಬಸಿರಾ?
ಇನ್ನೊಬ್ಬ      :       ಹೇಳೋದು ಆಚಾರ
                        ತಿನ್ನೋದು ಬದನೆಕಾಯಾ?
ಎಲ್ಲರೂ        :       ಇಕ್ರಲಾ ಮುಖಕ್ಕೆ ನಾಲ್ಕು ಧರ್ಮದೇಟು.
ತಂದೆ          :       ನೋಡು ಹುಡುಗಿ ನನ್ನ ಆಸ್ತಿ ಎಲ್ಲಾ ನೀನ್ಗೆ
ಮಗ           :       ಬೆಳದ ಗಂಡು ಮಕ್ಳು ನಾವಿದ್ದಾಗ
                        ನಮ್ಮನ್ನ ಬಿಟ್ಟು ನೀನು ಮದ್ವೆ ಆಗ್ತೀಯಾ ಮುದಿಯಾ
                        ನಿನಗೆ ಮಾನ ಮರ್ಯಾದೆ ಏನೂ ಇಲ್ಲವಾ
ತಂದೆ          :       ನಾಚಿಗೆ ಗೀಚಿಗೆ ಊರ ಆಚ್ಗೆ
                        ಕಷ್ಟ ಕಾಲದಲ್ಲಿ. ಸಿಕ್ಕಿದ್ದನ್ನ ಹಂಚ್ಕೊಂಡು ತಿನ್ನಬೇಕು ಮಕ್ಳೇ
                        ನಾವೆಲ್ಲಾ ಒಟ್ಟಾಗಿ ಲಗ್ನ ಅಗೋನಂತೆ
                        ಆಸೇನೂ ತೀರುತ್ತೆ ವಂಶಾನೂ ಬೆಳೆಯುತ್ತೆ ಏನಂತೀರಿ ಮಕ್ಕಳೇ
ಇನ್ನೊಬ್ಬ      :       ಬಪ್ಪರೆ ಮಗನ. ನಿಮ್ಮಾಸೆ ತೀರಿಸ್ಕೊಂಡ್ರೆ
                        ನಮ್ಮಾಸೆ ತೀರಿಸೋರಾರು?
                        ಅವನ್ಗಿಂತ ದುಪ್ಪಟ್ಟ ಆಸ್ತಿ ನನ್ನಲೈತೆ
                        ರಾಣಿ ಹಂಗೆ ಮಡ್ಕೋಂತೀನ ನನ್ನ ಮದ್ವೇ ಆಗೆ ಹುಡುಗಿ.
ಮಗದೊಬ್ಬ    :       ನಾವೇನು ಸತ್ತಿವೇನಲೇ. ಹುಡ್ಗಿ ಕೈ ಮುಟ್ಟಿದ್ರೆ ಕೈ ಕತ್ತರಸತೇನೆ.
ಒಬ್ಬ           :       ಕಾಲು ಮುಟ್ಟಿದವರ ಕಾಲು ಕತ್ತರಸತೇನೆ.
ಮತ್ತೊಬ್ಬ      :       ಕೆನ್ನೆ ಮುಟ್ಟಿದವರ ಕತ್ತನ್ನ ಕಚಕ್ ಕಚಕ್

                (ಹೀಗೆ ಎಲ್ಲರೂ ಹುಡ್ಗಿ ಬೇಕು ಅಂತ ಕಿತ್ತಾಡ ತೊಡಗುತ್ತಾರೆ. ಕೈಗೆ ಸಿಕ್ಕ ಆಯುಧ ಹಿಡಿದು  ಹೋರಾಡುತ್ತಾರೆ. ಜಗಳದಲ್ಲಿ ಎಲ್ಲರೂ ಇರಿಸಿಕೊಂಡು ಹೊಡಿದಾಡಿಕೊಂಡು ಸಾಯುತ್ತಾರೆ. ಕೊನೆಗೆ ಹುಡುಗಿ ಮತ್ತು ಹುಚ್ಚ ಇಬ್ಬರೇ ಉಳಿಯುತ್ತಾರೆ. ಸೂತ್ರದಾರ ಹೆಣಗಳ ನಡುವೆ ದಾರಿ ಮಾಡಿಕೊಂಡು ಬರುತ್ತಾನೆ)

ಸೂತ್ರದಾರ    :       ಏನಾಯಿತು. ಇಲ್ಲಿ ಏನಾಯಿತು?
                        ನಾಶ! ಸರ್ವನಾಶ! ಕುರುಕ್ಷೇತ್ರ
                        ಎಲ್ಲಿ ನೋಡಿದಲ್ಲಿ ಕೊಲೆ ಸಾವು ರಕ್ತಪಾತ. ಊರಿಗೆ ಊರೆ ಸ್ಮಶಾನ.
                        ಬೆಳಕು ಆರಿಸಿ ಕತ್ತಲಲ್ಲಿ ಬದುಕಿದವರು
                        ದೀಪ ನಂದಿಸಿ ಬೆಳಕಿಗಾಗಿ ಹುಡುಕಿದವರು.
                        ಸಿಕ್ಕದ್ದನ್ನ ದಕ್ಕಿಸಿಕೊಳ್ಳಲಾಗದೆ ದಿಕ್ಕೆಟ್ಟವರು
                        ಮಾಡಿದ ಹತ್ಯೆಗೆ ಮಾಡಿದ ಪಾಪಕ್ಕೆ
                        ಬದುಕನ್ನೇ ಬಲಿಕೊಟ್ಟವರು.
                ಏನಾಯಿತು ಇಲ್ಲಿ ಏನಾಯಿತು.
                ಹೆಣ್ಣು ಮಾಯೆಯೆಂದು ಹೆಣ್ಣು ಕುಲವ ಧಿಕ್ಕರಿಸಿದವರು
                ಹೆಣ್ಣು ದಿಕ್ಕಿಲ್ಲದ ಮನೆ ಮನಗಳು ಕೊನೆಗೆ
                ಹೆಣ್ಣು ಹೆಣ್ಣೆಂದು ಬಾಯಿ ಬಾಯಿ ಬಿಟ್ಟರು.
                ಹೆಣ್ಣು ಶಾಪವಲ್ಲ ಮನೆ ಬೆಳಗುವ ದೀಪ
                ಹೆಣ್ಣು ಕತ್ತಲಲ್ಲ ಮನ ಬೆಳಗುವ ಬೆಳಕು.
                ಹೆಣ್ಣಿಲ್ಲದ ಬದುಕು ಅಪೂರ್ಣ
                ಹೆಣ್ಣು ಭ್ರೂಣಹತ್ಯೆ ಭವಿಷ್ಯದ ಅನಾಹುತಕ್ಕೆ ದಾರಿ
                ಲಿಂಗಬೇದ ಸಮಾಜಕ್ಕೆ ಕಂಠಕ
                ಇದಕ್ಕೆ ಶರಣ ದಾಸಿಮಯ್ಯ ಹೀಗೆನ್ನುತ್ತಾರೆ
                ಮೊಲೆ ಮೂಡಿಬಂದರೆ ಹೆಣ್ಣೆಂಬರು
                ಗಡ್ಡ ಮೀಸೆ ಬಂದರೆ ಗಂಡೆಂಬರು.
                ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲ
                ಕಾಣಾ ರಾಮನಾಥ
                ಮಗು ಗಂಡಾಗಲೀ ಮಗು ಮಗುವೇ
                ಮನುಷ್ಯ ಗಂಡಾಗಲೀ ಹೆಣ್ಣಾಗಲೀ ಮನುಷ್ಯರೆ.
                ಕುಲ ಒಂದೇ ಮನುಜ ಕುಲ, ಜಾತಿ ಎರಡೇ ಗಂಡು ಹೆಣ್ಣು.
                ಒಂದು ಬಿಟ್ಟು ಇನ್ನೊಂದಿಲ್ಲ.
                ಒಂದಿಲ್ಲದೇ ಇನ್ನೊಂದಕ್ಕೆ ನೆಮ್ಮದಿಯ ಬದುಕಿಲ್ಲ
                ಇದೇ ಬದುಕಿನ ಸತ್ಯ.
                ಗಂಡು ಹೆಣ್ಣು ಸಮಾನ ಗೌರವದೊಂದಿಗೆ ಬದುಕುವುದೇ
                ಜೀವನದ ಅಗತ್ಯ, ಅನಿವಾರ್ಯ, ಹಾಗೂ ಅಂತಿಮ ಸತ್ಯ.
               
ಹುಚ್ಚ          :       ಆಹಾ ನನ್ನ ಮದ್ವೇ ಅಂತೆ. ಓಹೋ ನನ್ನ ಮದ್ವೆಯಂತೆ..
ಸೂತ್ರದಾರ    :       ಓಹೋ.. ನಿನ್ನ ಮರ್ತೇ ಬಿಟ್ಟಿದ್ದೆ. ಆಯ್ತು ಮಾಡ್ಸೋಣ ನಿನ್ನ ಮದ್ವೇನೂ
ಮಾಡ್ಸೋಣ. ಮೊದಲು ಹುಡುಗಿ ಕಥೆ ಕೆಳೋಣ.
                        ಯಾರಮ್ಮ ನೀನು ಇಲ್ಲಿಗ್ಯಾಕೆ ಬಂದಿ.
ಹುಡುಗಿ        :       ನಾನು ದೂರದೂರಿನವಳು. ನಮ್ಮೂರಲ್ಲಿ ಗಂಡಸರ ಅಟ್ಟಹಾಸ, ಶೋಷಣೆ,
                        ದಬ್ಬಾಳಿಕೆ, ಅತ್ಯಾಚಾರ ಅನಾಚಾರಗಳಿಗೆ ರೋಸಿಹೋಗಿ ನೆಮ್ಮದಿಯಾಗಿ
                        ಎಲ್ಲದರೂ ಬದುಕೋಣ ಅಂತ         ಊರು ಬಿಟ್ಟು ಓಡಿ ಬಂದೆ. ಇಲ್ಲಿ ಇವರ
ಕೈಯಲ್ಲಿ ಸಿಕ್ಕಾಕಿಕೊಂಡೆ.
ಸೂತ್ರದಾರ    :       ನಿಮ್ಮೂರಿನ ಜನರೂ ಕಣ್ಣು ಕಾಣದ ಗಾವಿಲರಾ ತಾಯಿ.
                        ಊರಿನವರಂತೆ ದುರಂತವೊಂದೇ ಅವರಿಗೆ ಬುದ್ದಿ ಕಲಿಸಲು ಸಾಧ್ಯ
                        ತಾಯಿ. ಈಗ ನಿನ್ನಿಂದ ಒಂದು ಉಪಕಾರ ಆಗ್ಬೇಕಾಗಿದೆ ಮಗು
                        ಸೃಷ್ಟಿಕ್ರಿಯೆ ನಡೀಬೇಕಾಗಿದೆ. ಹೊಸ ಮನ್ವಂತರ ಶುರುವಾಗ್ಬೇಕಿದೆ.
                        ನಾಟಕಕ್ಕೊಂದು ಹೊಸ ಅಂತ್ಯ ಕೊಡಬೇಕಾಗಿದೆ.
ಹುಡುಗಿ        :       ಹೇಳು ತಂದೆ. ನನ್ನಿಂದ ಲೋಕಕ್ಕೆ ಸಹಾಯವಾಗುವುದಾದರೆ ನಾನು ಸಿದ್ದ.
                        ಲೋಕಕಲ್ಯಾಣಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಬದ್ದ.
ಸೂತ್ರದಾರ    :       ಈತನದು ತಾತ್ಪೂರ್ತಿಕ ಹುಚ್ಚು ಮಗಳೆ.
                        ಮದುವೆ ಆಗದೇ ಈತನ ಹುಚ್ಚು ಬಿಡಾಕಿಲ್ಲ.
                        ಮನಸು ಮಾಡು ಈತನನ್ನು ಮದುವೆ ಅಗು.
                        ಸ್ತ್ರೀ ದ್ವೇಷದ ಅಂಧತೆಗೆ ಬಿದ್ದು ಸರ್ವನಾಶವಾದ
                        ಪ್ರಾಂತ್ಯದಲ್ಲಿ ಹೊಸ ಯುಗ ಸೃಷ್ಟಿಮಾಡು.
                ಮುಂದೆ ಹುಟ್ಟುವ ಸಂತಾನಕ್ಕೆ ಲಿಂಗತಾರತಮ್ಯದ ರೋಗ ಅಂಟದಂತೆ ನೋಡಿಕೋ.                        ಅಸಮಾನತೆಯ ಕಳೆ ಮನುಷ್ಯರೆದೆಯಲ್ಲಿ ಕೊಳೆಯಾಗಿ ಬೆಳೆಯದಂತೆ ನೋಡಿಕೋ.
                ನೀವಿಬ್ಬರೂ ಮದುವೆಯಾಗಿ. ನಿಮಗೆ ಮಂಗಳವಾಗಲಿ.
                ಪ್ರಳಯದ ನಂತರ ಹೊಸ ಸೃಷ್ಠಿ ಉದಯಿಸಲಿ.
                ಹೊಸ ಮನ್ವಂತರ ಪಲ್ಲಟಿಸಲಿ.
                ನಾಟಕದ ಕತೆ ಇಲ್ಲಿ ನೆರೆದಿರುವ ಮಹನೀಯರಿಗೆಲ್ಲಾ ಪಾಠವಾಗಲಿ.
                ದೇಶದಾದ್ಯಂತ ಭ್ರೂಣ ಹತ್ಯೆ ನಿಲ್ಲಲಿ. ಲಿಂಗಸಮಾನತೆ ಬೆಳಗಲಿ.
                ನಾನಿನ್ನು ಬರುತ್ತೇನೆ. ಎಲ್ಲರಿಗೂ ನಮಸ್ಕಾರ. ಶುಭವಾಗಲಿ.

ಹಾಡು :       ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
                ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
                ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
                ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.

*       *       *       *


                      -ಶಶಿಕಾಂತ ಯಡಹಳ್ಳಿ 



 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ