ಸೋಮವಾರ, ಮಾರ್ಚ್ 3, 2014

‘ವೇದಿಕೆ’ಯಿಂದ ವಿದಾಯ ಹೇಳಿದ ‘ಸಿಂಹ’ ರವರಿಗೆ ರಂಗನಮನ.











ಆಘಾತಗಳು ಬಂದರೆ ಒಂದರ ಹಿಂದೆ ಒಂದು ಬರುತ್ತವೆ ಎಂದು ಹೇಳುತ್ತಾರೆ ನಿಜಾನಾ? ಗೊತ್ತಿಲ್ಲ. ಆದರೆ ಕಾಕತಾಳೀಯವಾದರೂ ನಂಬಿಕೆಯ ಮಾತನ್ನು ಸಾಬೀತುಪಡಿಸುವಂತಹ ಘಟನೆಗಳು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕವಾಗಿ ನಡೆಯುತ್ತಲೇ ಇರುವುದಂತೂ ಸುಳ್ಳಲ್ಲ. ಈಗ ರಂಗಭೂಮಿಯ ಮಟ್ಟಿಗಂತೂ ಮಾತು ಸತ್ಯವಾದಂತಿದೆ.

ಫೆಬ್ರವರಿ ತಿಂಗಳು ನಿಜಕ್ಕೂ ಆಘಾತಕಾರಿಯಾಗಿದೆ. ಮೂರು ಅಮೂಲ್ಯ ರಂಗಜೀವಗಳು ಮರೆಯಾಗಿವೆ. ಫೆಬ್ರವರಿ 11 ಬೆಳಕು ತಜ್ಞ ಪರೇಶಕುಮಾರ ಇದ್ದಕ್ಕಿದ್ದಂತೆ ಕಾಲವಶರಾದರು. ಫೆಬ್ರವರಿ  20 ರಂದು ರಂಗಸಂಘಟಕ ಗೋವಾದತ್ತು ನೇಪತ್ಯಕ್ಕೆ ಸೇರಿದರು. ಇನ್ನೇನು ಕರಾಳ ಫೆಬ್ರವರಿ ತಿಂಗಳು ಮುಗಿಯಿತು ಅನ್ನುವುದರೊಳಗೆ ತಿಂಗಳ ಕೊಟ್ಟಕೊನೆಯ ದಿನ ಫೆಬ್ರವರಿ 28ರಂದು ಕನ್ನಡ ರಂಗಭೂಮಿಯ ಅದ್ಬುತ ಪ್ರತಿಭಾವಂತ ನಟ ಸಿ.ಆರ್.ಸಿಂಹರವರನ್ನೇ ಕಾಲವೆನ್ನುವುದು ಆಹುತಿ ತೆಗೆದುಕೊಂಡಿತು
ಪರೇಶ ಹಾಗೂ ದತ್ತುರವರನ್ನು ಸಾವು ಯಾಮಾರಿಸಿ ಹೃದಯಾಘಾತ ಮಾಡಿ ಹೊತ್ತೊಯ್ದಿತು. ಯಾಕೆಂದರೆ ಅವರಿಬ್ಬರೂ ನೇಪತ್ಯದವರು. ಆದರೆ ಸಿಂಹ ಸಾವಿನ ಜೊತೆಗೆ ಸೆನೆಸಾಡಿದರು. ಒಂದೆರಡು ದಿನಗಳಲ್ಲ. ಎರಡು ವರ್ಷಗಳ ಕಾಲ ಸಿಂಹ ಮತ್ತು ಸಾವಿನ ನಡುವಿನ ಸಾವುಬದುಕಿನಾಟ ಪ್ರತಿದಿನ ಜಾರಿಯಲ್ಲಿತ್ತು. ಯಾಕೆಂದರೆ ಎಷ್ಟೇ ಆದರೂ ಸಿಂಹ ನಟರಲ್ಲವೇ. ತಮ್ಮ ಪಾತ್ರ ಸಂಪೂರ್ಣ ಮುಗಿಯುವವರೆಗೂ ವೇದಿಕೆ ಬಿಟ್ಟು ತೆರಳುವವರಲ್ಲ. ಸಾವು ಅದೆಷ್ಟೇ ಸಮಸ್ಯೆಗಳನ್ನೊಡ್ಡಿದರೂ ಎದುರಿಸಿ ನಿಂತು ತಮ್ಮ ಪಾತ್ರವನ್ನು ಅಂತಿಮ ಕ್ಷಣದವರೆಗೂ ಮುಂದುವರೆಸಿದರು. ಕೊನೆಗೂ ಸಾವು ಬರಲಿಲ್ಲ. ಸಾವಿಗಾಗಿಯೇ ಸಿಂಹ ಕಾಯತೊಡಗಿದರು. ಕೊನೆಗೆ ಮೃತ್ಯುವಿಗೇ ಮರುಕ ಹುಟ್ಟಿ ಸಾಕು ನಿಮ್ಮ ಕರುಣಾಜನಕ ಅಭಿನಯ ಬನ್ನಿ ಹೋಗೋಣ ಎಂದಿತು. ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಸಿಂಹ ಕಣ್ಮುಚ್ಚಿತು. ಸಿಂಹರವರು ಬದುಕಿಗೆ ಜೊತೆಗೆ ಅಪಾರವಾಗಿ ಪ್ರೀತಿಸಿದ ರಂಗಭೂಮಿಗೆ ಅಂತಿಮ ವಿದಾಯ ಹೇಳಿದರು. ಅಪಾರ ಜನರ ಕಣ್ಣುಗಳಲ್ಲಿ ನೀರಾದರು. ಮೌನದಲ್ಲಿ ಮಾತಾದರು.


ಪ್ಲ್ಯಾಶ್ಬ್ಯಾಕ್ಗೆ ಹೋಗಿ ಸಿಂಹರವರ ರಂಗಬದುಕಿನ ಒಂದು ನೋಟವನ್ನು ಸಮಯದಲ್ಲಿ ನೆನಪಿಸಿಕೊಳ್ಳಲೇ ಬೇಕು. ಸಿ.ಆರ್.ಸಿಂಹರವರು ಆಗ ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ಕಾಲೇಜು ಎಲ್ಲಾ ಕಾಲೇಜುಗಳಂತೆ ಕೇವಲ ಶುಷ್ಕ ಪಾಠಗಳಿಗೆ ಮಾತ್ರ ಮೀಸಲಿರಲಿಲ್ಲ. ಇಲ್ಲಿ ಸಾಂಸ್ಕೃತಿಕ ವಾತಾವರಣವೇ ಅನಾವರಣಗೊಂಡಿತ್ತು. ಯಾಕೆಂದರೆ ಕಲೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಒಲವಿದ್ದ ಹೆಚ್.ನರಸಿಂಹಯ್ಯ (ಹೆಚ್ಎನ್) ರವರು ನ್ಯಾಶನಲ್ ಕಾಲೇಜಿನ ರೂವಾರಿಗಳಾಗಿದ್ದರು. ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೋಸ್ಕರವೇ ನ್ಯಾಷನಲ್ ಕಾಲೇಜ್ ಹಿಸ್ಟರಿಯಾನಿಕ್ ಕ್ಲಬ್ನ್ನು ಸ್ಥಾಪಿಸಲಾಗಿತ್ತು. ಕ್ಲಬ್ ಸಕ್ರೀಯ ಸದಸ್ಯರಾಗಿದ್ದ ಸಿಂಹರವರು ಬಹದ್ದೂರ ಗಂಡ, ಮನವೆಂಬ ಮರ್ಕಟ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದರು. ಕಾಲೇಜಿನಲ್ಲಿ ನಾಟಕ ಚಟುವಟಿಕೆಗಳು ನಿರಂತರವಾಗಿದ್ದವು. ತದನಂತರ ರಂಗಭೂಮಿ ಮತ್ತು ಸಿನೆಮಾಗಳಲ್ಲಿ ಹೆಸರು ಮಾಡಿರುವ ಅನೇಕ ಪ್ರತಿಭಾವಂತರು ತಯಾರಾಗಿದ್ದೇ ನ್ಯಾಷನಲ್ ಕಾಲೇಜಿನಲ್ಲಿ. ಅಂತಹ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದವರು ಸಿ.ಆರ್.ಸಿಂಹ ಮತ್ತು ಶ್ರೀನಾಥ ಸಹೋದರರು. ಮುಂದೆ ಶ್ರೀನಾಥ ಸಿನೆಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಾಯಕ ನಟರಾದರು. ಆದರೆ ಸಿಂಹರವರು ಒಲಿದದ್ದು ರಂಗಭೂಮಿಗೆ. ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದು ನಂತರ ಇಂಜನೀಯರಿಂಗ್ ಸಹ ಮಾಡಿದರು.

ಯಾವುದೋ ಸರಕಾರಿ ಡಿಪಾರ್ಟಮೆಂಟನಲ್ಲಿ ಇಂಜನೀಯರ್ ಆಗಿ ಸಿಂಹ ಸುಖವಾಗಿರಬಹುದಾಗಿತ್ತು. ಆಗ ನೌಕರಿಯೂ ಸುಲಭದಲ್ಲಿ ದಕ್ಕುತ್ತಿತ್ತು. ಆದರೆ ಸಿಂಹರವರು ಹೋಗಿ ಸೇರಿದ್ದು ವಾರ್ತಾ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದ ನೌಕರಿಗೆ. ಯಾಕೆಂದರೆ ಅಲ್ಲಿ ನಾಟಕಕ್ಕೆ ಹೆಚ್ಚು ಅವಕಾಶವಿದೆ ಎಂದು ಸಿಂಹ ತಿಳಿದಿದ್ದರು. ಆದರೆ ಯಾವಾಗ ಅಲ್ಲಿ ಅಭಿನಯಕ್ಕಿಂತ ಆಡಳಿತವೇ ಮುಖ್ಯ ಎಂದು ಅರಿವಾಯಿತೋ ನೌಕರಿಗೆ ಗುಡ್ ಬೈ ಹೇಳಿ ನೇರವಾಗಿ ರಂಗಭೂಮಿಗೆ ಬಂದರು. ಸಿಂಹರವರ ಅಜ್ಜ ವಿಶ್ವವ್ಯವಸ್ಥೆ ಎನ್ನುವ ನಾಟಕ ಬರೆದಿದ್ದರು. ನಾಟಕದಲ್ಲಿ ವಿಷ್ಣು ಪಾತ್ರದಲ್ಲಿ ಸಿಂಹ ಅಭಿನಯಿಸಿದರೆ ಅವರ ತಮ್ಮ ಈಶ್ವರನ ಪಾತ್ರ ಮಾಡಿದರು.

ಆಗ ಬೆಂಗಳೂರು ಲಿಟಲ್ ಥಿಯೇಟರ್ (ಬಿ.ಎಲ್.ಟಿ) ಎನ್ನುವ ರಂಗತಂಡ ಸಕ್ರೀಯವಾಗಿತ್ತು. 1960 ರಿಂದ ಸಿಂಹರವರು ತಂಡದ ಸದಸ್ಯರಾದರು. ರಂಗದಿಗ್ಗಜರಾದ ಬಿ.ಚಂದ್ರಶೇಖರ್, ನಾಣಿ ಹಾಗೂ ವಿಮಲಾರಂಗಾಚಾರ್ರವರು ತಂಡದ ಸ್ಥಾಪಕರು. ಬಿ.ಎಲ್.ಟಿ ರಂಗತಂಡದ ನಾಟಕಗಳಲ್ಲಿ ಸಿಂಹರವರು ಪ್ರಮುಖ ಪಾತ್ರದಾರಿಯಾಗಿದ್ದರು. ಸೂರ್ಯಶಿಕಾರಿ, ಮ್ಯಾನ್ ಆಪ್ ಡೆಸ್ಟಿನಿ, ದಿ.ಆಯಡ್ ಕಪಲ್, ದಿ ಜೂ ಸ್ಟೋರಿ... ಮುಂತಾದ ನಾಟಕಗಳಲ್ಲಿ ಸಿಂಹರವರು ತಮ್ಮ ವಿಶಿಷ್ಟ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಶಿಸ್ತಿನ ಸಿಪಾಯಿಯಾದ ಬಿ.ಸಿ ರವರಿಗೆ ಸಿಂಹ ಅಚ್ಚುಮೆಚ್ಚಿನ ನಟರಾಗಿದ್ದರು.

ಗಿರೀಶ್ ಕಾರ್ನಾಡರು ಆಗ ತುಘಲಕ್ ನಾಟಕ ಬರೆದಿದ್ದರು. ಬಿ.ಚಂದ್ರಶೇಖರ್ರವರು ಕನ್ನಡ ಸಾಹಿತ್ಯ ಕಲಾ ಸಂಘ ರಂಗತಂಡಕ್ಕೆ ತುಘಲಕ್ ನಾಟಕ ನಿರ್ದೇಶಿಸಿದರು. ಸಿಂಹರವರು ತುಘಲಕ್ ಪಾತ್ರ ಅಭಿನಯಿಸಿದರು. 1965 ರಲ್ಲಿ ತುಘಲಕ್ ಮೊದಲ ಬಾರಿ ಪ್ರದರ್ಶನಗೊಂಡು ಇತಿಹಾಸವನ್ನೇ ಸೃಷ್ಟಿಸಿತು. ನಾಟಕದ ಮೊದಲ ಪ್ರದರ್ಶನ ಮುಗಿದ ಬಳಿಕ ರಂಗಭೂಮಿಯಲ್ಲಿ ಸ್ಟಾರ್ ನಟ ಹುಟ್ಟಿಕೊಂಡ. ಅವರೇ ಸಿಂಹ. ಇವತ್ತಿನವರೆಗೂ ಅವರನ್ನು ಮೀರಿಸುವ ತುಘಲಕ್ ಪಾತ್ರದಾರಿ ಬಂದಿಲ್ಲ. ತುಘಲಕ್ ಸಿಂಹರವರಿಗೆ ಅಪಾರ ಹೆಸರನ್ನು ತಂದುಕೊಟ್ಟಿತು. ಇಡೀ ತುಘಲಕ್ ನಾಟಕವೇ ಸಿಂಹ ಮಯವಾಗಿತ್ತು. ಅದರಿಂದಾಗಿ ನಾಟಕದ ಮೇಲೆ ಸಿಂಹರವರಿಗೆ ಅದಮ್ಯ ಮೋಹ.

ಬರುಬರುತ್ತಾ ಕನ್ನಡ ಸಾಹಿತ್ಯ ಕಲಾ ಸಂಘ ದುರ್ಬಲಗೊಂಡಿತು. ನಂತರ ಕೆಲವು ರಂಗಕರ್ಮಿಗಳು ತಮ್ಮದೇ ರಂಗತಂಡವೊಂದನ್ನು ಹುಟ್ಟಿಹಾಕೋಣ ಎಂದುಕೊಂಡಾಗ ಅಸ್ತಿತ್ವಕ್ಕೆ ಬಂದಿದ್ದೇ ನಟರಂಗ. ಸಿಂಹ, ಲೋಕೇಶ್, ಕಪ್ಪಣ್ಣ, ಕಪ್ಪಣ್ಣ, ವೆಂಕಟರಾವ್, ಗುರುರಾಜ್, ಶ್ರೀನಿವಾಸ, ಪರೇಶಕುಮಾರ ಮುಂತಾದವರು ಸೇರಿ ರಂಗತಂಡವನ್ನು 1972 ರಲ್ಲಿ ಹುಟ್ಟುಹಾಕಿದರು. ನಟರಂಗದ ಮೊದಲ ನಾಟಕವಾಗಿ ಮಾಸ್ತಿರವರ ಕಾಕನಕೋಟೆ ನಾಟಕ ನಿರ್ಮಾಣವಾಯಿತು. ನಟ ಲೋಕೇಶ ನಾಟಕದಲ್ಲಿ ಪ್ರಮುಖಪಾತ್ರ ವಹಿಸಿ ಹೆಸರುವಾಸಿಯಾದರು.

ಬಿ.ಸಿ ರವರು ನಿರ್ದೇಶಿಸಿದ ತುಘಲಕ್ ನಾಟಕವನ್ನು ತಾನೇ ಮರುನಿರ್ದೇಶಿಸಬೇಕು ಎನ್ನುವ ಉಮೇದು ಸಿಂಹರವರಲ್ಲಿ ಹುಟ್ಟಿಕೊಂಡಿತು. ಇದಕ್ಕೆ ಕಪ್ಪಣ್ಣನವರು ಸಾಥ್ ಕೊಟ್ಟರು. ಅದೇ ನಾಟಕ, ಅದೇ ಪಾತ್ರದಾರಿಗಳು, ಅದೇ ಡಿಸೈನ್... ಒಂದಷ್ಟು ಸರಳ ಬದಲಾವಣೆಯೊಂದಿಗೆ ಸಿಂಹರವರೇ ತುಘಲಕ್ ನಾಟಕವನ್ನು ನಿರ್ದೇಶಿಸಿ ಬಿ.ಸಿರವರ ನಿರ್ದೇಶನದ ನಾಟಕವನ್ನು ಹೈಜಾಕ್ ಮಾಡಿ ನಾಟಕದ ನಿರ್ದೇಶಕರೂ ಎಂದೆನಿಸಿಕೊಂಡರು. ನಡೆ ಸಿಂಹವರಿಗೆ ಪ್ರಮುಖವಾಗಿದ್ದರೂ ರಂಗಭೂಮಿಯಲ್ಲಿ ಒಂದು ರೀತಿಯಲ್ಲಿ ಕೃತಿಚೌರ್ಯ ಎನ್ನುವಂತಾಯಿತು. ಬಿ.ಸಿ.ರವರಿಗೆ ಮಾಡಿದ ಅನಾದರ ಎಂದು ಹಲವರು ಆಡಿಕೊಂಡರು. ಯಶಸ್ಸಿನತ್ತ ಮುಖಮಾಡಿದ್ದ ಸಿಂಹರವರಿಗೆ ತಮ್ಮ ಹಿಂದೆ ಜನರಾಡುವ ಮಾತುಗಳು ತಟ್ಟಲೇ ಇಲ್ಲ. ಅವರ ನಿರ್ದೇಶನದ ತುಘಲಕ್ ಪ್ರದರ್ಶನ ನಿಲ್ಲಲೇ ಇಲ್ಲ. ಸಿಂಹ ಎಂದರೆ ತುಘಲಕ್, ತುಘಲಕ್ ಎಂದರೆ ಸಿಂಹ ಎನ್ನುವ ಹಾಗೇ ರಂಗಭೂಮಿಯಲ್ಲಿ ಹೆಸರಾದರು. ಇಪ್ಪತ್ತು ವರ್ಷಗಳ ಕಾಲ ವಿಜ್ರಂಭಿಸಿದ ಸಿಂಹರವರ ನಿರ್ದೇಶನ ಹಾಗೂ ಅಭಿನಯದ ತುಘಲಕ್ ಇನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು

 ಕಾರ್ನಾಡರ ತಲೆದಂಡ, ಮಾಸ್ತಿರವರ ಕಾಕನಕೋಟೆ, ಲಂಕೇಶರ ಸಂಕ್ರಾಂತಿ, ಉತ್ಪಲ ದತ್ತರವರ ಸೂರ್ಯಶಿಕಾರಿ, ಶೂದ್ರಕ ಕವಿಯ ಮೃಚ್ಚಿಕಟಿಕ, ಹೀಗೆ ಹಲವಾರು ನಾಟಕಗಳನ್ನು ನಟರಂಗಕ್ಕೆ ಸಿಂಹರವರು ನಿದೇಶಿಸಿದ್ದರು. ಬೆಕೆಟ್ ವೇಟಿಂಗ್ ಫಾರ್ ಗಾಡೋ, ಶೇಕ್ಸ್ಫೀಯರ್ ಮಿಡ್ ಸಮರ್ ನೈಟ್ ಹಾಗೂ ಒಥೇಲೋ, ಬ್ರೆಕ್ಟ್ ಚಾಕ್ ಸರ್ಕಲ್... ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿ ನಟಿಸಿದ್ದರು. ನೀಲ್ ಸಿಮೋನ್ರವರ ಕಮ್ ಬ್ಲೋ ಯುವರ್ ಹಾರ್ನ ಎನ್ನುವ ನಾಟಕವನ್ನು ಮೀಸೆ ಬಂದೋರು ಎನ್ನುವ ಹೆಸರಲ್ಲಿ ಸಿಂಹರವರು ಕನ್ನಡಕ್ಕೆ ಅನುವಾದಿಸಿದರು. ಪೀಟರ್ ಶಫೆರ್ಡರವರ ಅಮ್ಯೆಡೂಸ್ ನಾಟಕವನ್ನು ಭೈರವಿ ಹೆಸರಲ್ಲಿ ಕನ್ನಡಕ್ಕೆ ತಂದರು. ಕುವೆಂಪುರವರ ಬದುಕು ಸಾಹಿತ್ಯ ದೃಷ್ಟಿಕೋನಗಳನ್ನು ಅಧ್ಯಯನ ಮಾಡಿ ರಸಋಷಿ ನಾಟಕ ರಚಿಸಿದರು. ಹಾಗೂ ತಾವು ಅನುವಾದಿಸಿದ ಹಾಗೂ ರಚಿಸಿದ ಎಲ್ಲಾ ನಾಟಕಗಳನ್ನೂ ಸಿಂಹರವರೇ ನಿರ್ದೇಶಿಸಿದರು ಹಾಗೂ ಅಭಿನಯಿಸಿದರು. 

 ಏನೇ ಆದರೂ ತುಘಲಕ್ ಸಿಂಹರವರನ್ನು ಬಿಟ್ಟರೂ ಸಿಂಹರವರನ್ನು ತುಘಲಕ್ನನ್ನು ಬಿಡಲಿಲ್ಲ. ನಂತರ ಸಿಂಹರವರು ಮಾಡಿದ ಹಲವಾರು ನಾಟಕಗಳ ವಿಭಿನ್ನ ಪಾತ್ರಗಳಲ್ಲೂ ತುಘಲಕ್ ಛಾಯೆ ಕಾಣಬಹುದಾಗಿದೆ. ಒಂದು ದಶಕದ ಕಾಲ ನಟರಂಗ ನಾಟಕಗಳಲ್ಲಿ ಸಿಂಹ ಅಭಿನಯಿಸಿದರು. ಬರುಬರುತ್ತಾ ನಟರಂಗದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಯಿತು. ಸಿಂಹ ಹಾಗೂ ಲೊಕೇಶರವರಲ್ಲಿ  ಪ್ರಮುಖ ಪಾತ್ರದ ಕುರಿತು ಮೇಲಾಟ ಶುರುವಾಯಿತು. ಕಪ್ಪಣ್ಣನವರ ರಂಗಸಂಘಟನೆಯಲ್ಲಾದ ಆರ್ಥಿಕ ಸಮಸ್ಯೆಗಳಿಂದ ನಟರಂಗದ ಅನೇಕರು ಬೇಸರಗೊಂಡಿದ್ದರು. ಇದರಿಂದಾಗಿ ಹಲವರು ನಟರಂಗಕ್ಕೆ ಬೆನ್ನು ತಿರುಗಿಸಿ ಹೊರನಡೆದರು. ಇದೆಲ್ಲದರಿಂದ ಸಿಂಹ ತುಂಬಾ ಬೇಸರಗೊಂಡಿದ್ದರು. ಕೊನೆಗೆ ಸಿಂಹರವರೂ ನಟರಂಗಕ್ಕೆ ಗುಡ್ ಬೈ ಹೇಳಿದರು. ಕೊನೆಗೆ ಕಪ್ಪಣ್ಣರವರೊಬ್ಬರೇ ನಟರಂಗಕ್ಕೆ ಹಾಳೂರಿಗೆ ಉಳಿದವನೊಬ್ಬನೇ ಗೌಡ ಎನ್ನುವ ರೀತಿಯಲ್ಲಿ ಮುಂದುವರೆದರು.

 ಅದೊಂದು ದಿನ ಬೇರೆ ರಂಗತಂಡದಲ್ಲಿ ಯಾಕೆ ನಾನು ಅಭಿನಯಿಸಬೇಕು. ನನ್ನದೇ ರಂಗತಂಡವನ್ನು ಯಾಕೆ ಕಟ್ಟಬಾರದು ಎನ್ನುವ ಮಹತ್ವಾಂಕಾಂಕ್ಷೆ ಬಂದದ್ದೇ ತಡ ಸಿಂಹರವರು 1983 ರಲ್ಲಿ ತಮ್ಮದೇ ಆದ ವೇದಿಕೆ ರಂಗತಂಡವನ್ನು ಹುಟ್ಟಿಹಾಕಿದರು. ಹೊಸ ತಂಡಕ್ಕೆ ನಾಟಕವನ್ನು ನಿರ್ಮಿಸಬೇಕಿತ್ತು. ಆದರೆ ಕಲಾವಿದರ ಕೊರತೆ ಇತ್ತು. ಆಗೊಂದು ದಿನ ಸಿಂಹರವರಿಗೆ ಇಡೀ ಒಂದು ನಾಟಕವನ್ನು ತಾವೊಬ್ಬರೆ ನಟಿಸಬೇಕು, ತಮ್ಮ ಅಭಿನಯ ಸಾಮಥ್ಯಕ್ಕೆ ಸವಾಲಾಗುವಂತಹ ಪಾತ್ರವನ್ನು ನಿಭಾಯಿಸಿ ತೋರಿಸಬೇಕು ಎನ್ನುವ ಆಸೆಯಾಯಿತು. ಯಾವ ಪಾತ್ರ ಮಾಡಬೇಕು ಎಂದುಕೊಂಡಾಗ ನೆನಪಾಗಿದ್ದೇ ಪ್ರಹಸನ ಪಿತಾಮಹ ಕೈಲಾಸಂ. ಸಿಂಹರವರಿಗೆ ನಾಟಕಕಾರ ಕೈಲಾಸಂ ಎಂದರೆ ಬಲು ಮೋಹ. ಎರಡು ವರ್ಷಗಳ ಕಾಲ ಟಿ.ಎನ್.ನರಸಿಂಹನ್ರವರ ಹಿಂದೆ ಬಿದ್ದು ಟಿಪಿಕಲ್ ಟಿ.ಪಿ.ಕೈಲಾಸಂ ಎನ್ನುವ ಹೆಸರಲ್ಲಿ ಏಕವ್ಯಕ್ತಿ ನಾಟಕವನ್ನು ಬರೆಸಿದ್ದರು. 1983 ನವೆಂಬರ್ನಲ್ಲಿ ನಯನ ಸಭಾಂಗಣದಲ್ಲಿ ಮೊದಲ ಬಾರಿಗೆ ಸಿಂಹರವರ ಏಕವ್ಯಕ್ತಿ ಪ್ರದರ್ಶನ ಪ್ರಯೋಗಗೊಂಡಿತು. ಇದು ಸಿಂಹರವರ ವೇದಿಕೆ ರಂಗತಂಡದ ಮೊದಲ ನಾಟಕವಾಗಿತ್ತು.  ಅಂದಿನಿಂದ 1991ರವರೆಗೆ ನೂರು ಪ್ರದರ್ಶನವನ್ನು ಕಂಡಿತು. ನಂತರವೂ 2010ರವರೆಗೆ ಏಣಿಕೆಗಳನ್ನು ಮೀರಿ ನಾಟಕ ಪ್ರದರ್ಶನಗೊಂಡಿದೆ. ತುಘಲಕ್ ನಂತರ ಸಿಂಹರವರ ಸಂಪೂರ್ಣ ಅಭಿನಯ ಪ್ರತಿಭೆ ಏಕವ್ಯಕ್ತಿ ಪ್ರಯೋಗದಲ್ಲಿ ಅನಾವರಣಗೊಂಡಿದೆ. ನಾಟಕ ನಮ್ಮ ದೇಶದಲ್ಲಿ ಮಾತ್ರವಲ್ಲ ನ್ಯೂಯಾರ್ಕ, ವಾಷಿಂಗ್ಟನ್, ಸ್ಯಾನ್ಪ್ರಾನ್ಸಿಸ್ಕೋ, ಕೆನಡಾ ಸೇರಿದಂತೆ ಜಗತ್ತಿನ ಹದಿನೈದು ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಕನ್ನಡದ ಕೈಲಾಸಂರವರ ಬದುಕು ಬರಹಗಳ ಕುರಿತು ನಾಟಕವಾಡಿ ದೇಶ ವಿದೇಶಗಳಿಗೆ ಕೈಲಾಸಂರವರನ್ನು ಪರಿಚಯಿಸಿದ ಕೀರ್ತಿ ಸಿ.ಆರ್.ಸಿಂಹರವರದ್ದು.

ಕನ್ನಡ ರಂಗಭೂಮಿಯಲ್ಲಿ ಏಕವ್ಯಕ್ತಿ ಪ್ರಯೋಗಗಳ ಬೆಳವಣಿಗೆಗೆ ಪ್ರಮುಖ ಪ್ರೇರಕ ಶಕ್ತಿಯಾಗಿರುವುದು ಸಿಂಹರವರ ಟಿಪಿಕಲ್ ಟಿ.ಪಿ.ಕೈಲಾಸಂ ನಾಟಕದ ಯಶಸ್ಸು. ಇದಕ್ಕಿಂತ ಹಿಂದೆ ಏಕವ್ಯಕ್ತಿ ರಂಗಪ್ರಕಾರ ಕನ್ನಡದಲ್ಲಿ ಇರಲಿಲ್ಲ ಎಂದಲ್ಲ. ಇತ್ತು. ಆದರೆ ಏಕವ್ಯಕ್ತಿ ರಂಗಪ್ರಕಾರಕ್ಕೆ ವಿಸ್ತ್ರುತ ರೂಪವನ್ನು ಕೊಟ್ಟು ರಾಜ್ಯ-ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದ್ದು ಸಿಂಹರವರ ... ಕೈಲಾಸಂ ನಾಟಕ. ಪ್ರಯೋಗದ ಯಶಸ್ಸು ಹಾಗು ಸುಲಭವಾಗಿ ಪ್ರದರ್ಶಿಸಬಹುದಾದ ಸಾಧ್ಯತೆಗಳು ಏಕವ್ಯಕ್ತಿ ಪ್ರಕಾರದ ಮುಂದುವರಿಕೆಗೆ ಕಾರಣವಾದವು ಎಂಬುದು ನಿಸ್ಸಂದೇಹವಾಗಿ ಸತ್ಯ. ಹೀಗಾಗಿ ಏಕವ್ಯಕ್ತಿ ಪ್ರಯೋಗಗಳ ಪ್ರೇರಕ ವ್ಯಕ್ತಿಯಾಗಿ ಸಿಂಹ ಮುಂಚೂಣಿಯಲ್ಲಿದ್ದರು.

ವೇದಿಕೆ ರಂಗತಂಡದ ನಾಟಕಗಳಲ್ಲಿ ತಮ್ಮ ಇಡೀ ಕುಟುಂಬವನ್ನೇ ಸಿಂಹರವರು ತೊಡಗಿಸಿಕೊಂಡರು. ವೇದಿಕೆ ಯೊಂದು ಸಿಂಹ ಪರಿವಾರದ ನಾಟಕತಂಡ ಎಂದು ಹೆಸರಾಯಿತು. ತಮ್ಮ ಪತ್ನಿ ಶಾರದಾಮಣಿ, ಪುತ್ರ ಋತ್ವಿಕ್ ಸಿಂಹ, ಸೊಸೆ ಜೆಸ್ಲಿನ್ರವರನ್ನೂ ಸಹ ತಮ್ಮ ನಾಟಕದಲ್ಲಿ ಪಾತ್ರವಾಗಿಸಿದರು. ತಮ್ಮ ಮನೆ ಗುಹೆ ಆವರಣದಲ್ಲಿ ಒಂದು ಪುಟ್ಟ ಆಪ್ತ ರಂಗಮಂದಿರವನ್ನೇ ಕಟ್ಟಿಕೊಂಡರು.  ಸತತವಾಗಿ ಎರಡು ವರ್ಷಗಳ ಕಾಲ ಪ್ರತಿ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಜಯನಗರದ ಹೆಚ್.ಎನ್.ಕಲಾಕ್ಷೇತ್ರದಲ್ಲಿ ರಂಗಮಾಲಿಕೆ ಹೆಸರಲ್ಲಿ ನಾಟಕಗಳನ್ನು ಪ್ರದರ್ಶಿಸಿದರು. ಮೀಸೆ ಬಂದೋರು, ರಸಋಷಿ, ಮದುವೆ ಮದುವೆ, ಕೋಲ್ಮಿಂಚು, ಅಗ್ನಿ ಮತ್ತು ಮಳೆ, ಹಾವು ಏಣಿ, ಮ್ಯಾಕಬತ್, ಕರ್ಣ, ಭೈರವಿ ಮುಂತಾದ ನಾಟಕಗಳು ವೇದಿಕೆ ರಂಗತಂಡದಿಂದ ಪ್ರದರ್ಶನಗೊಂಡವು. ಬಹುಷಃ ಆಧುನಿಕ ರಂಗಭೂಮಿಯಲ್ಲಿ .ಎಸ್.ಮೂರ್ತಿಯವರ ಕುಟುಂಬವನ್ನು ಬಿಟ್ಟರೆ ಇಡೀ ಕುಟುಂಬವೇ ನಾಟಕದಲ್ಲಿ ತೊಡಗಿಕೊಂಡಿದ್ದು ಸಿಂಹರವರ ಪರಿವಾರವೇ. ಇದು ಸಿಂಹರವರು ರಂಗಭೂಮಿಯ ಮೇಲಿಟ್ಟಿರುವ ಪ್ರೀತಿಯ ಪ್ರತೀಕ. ಬೆಂಗಾಳಿಯ ಪ್ರಸಿದ್ದ ಸಿನೆಮಾ ನಿರ್ದೇಶಕ ಋತ್ವಿಕ್ ಘಟಕ್ರವರ ಹೆಸರನ್ನು ತಮ್ಮ ಮಗನಿಗೆ ಇಟ್ಟಿದ್ದು ಸಿಂಹರವರ ಸಿನೆಮಾ ಪ್ರೀತಿ ಎಂತಹುದಾಗಿತ್ತು ಎನ್ನುವುದಕ್ಕೆ ಸಾಕ್ಷಿ.

ಸಿ.ಆರ್.ಸಿಂಹರವರಿಗೆ ಮೂರು ಮಹಾನ್ ವ್ಯಕ್ತಿಗಳಲ್ಲಿ ತುಂಬಾ ಮೋಹವಿತ್ತು. ಒಬ್ಬರು ಕೈಲಾಸಂ. ಅವರ ಬದುಕು ಬರಹಗಳನ್ನಿಟ್ಟುಕೊಂಡು ಟಿಪಿಕಲ್ ಟಿ.ಪಿ.ಕೈಲಾಸಂ ಏಕವ್ಯಕ್ತಿ ಪ್ರಯೋಗದ ಮೂಲಕ ಕೈಲಾಸಂ ಪ್ರೀತಿಯನ್ನು ತೋರಿಸಿಕೊಟ್ಟರು. ಇನ್ನೊಬ್ಬರು ಗಿರೀಶ ಕಾರ್ನಾಡ, ಯಾಕೆಂದರೆ ಕಾರ್ನಾಡರ ತುಘಲಕ್ ನಾಟಕದಿಂದಲೇ ಸಿಂಹ ರಂಗಭೂಮಿಯಲ್ಲಿ ಒಂದು ಐಡೆಂಟಿಟಿ ಪಡೆದು ಹೆಸರಾಗಿದ್ದರು. ಹಾಗೂ ಕರ್ನಾಡರು ತಮ್ಮ ಸಂಸ್ಕಾರ ಸಿನೆಮಾದಲ್ಲಿ ಸಿಂಹರವರಿಗೆ ಮೊದಲ ಬಾರಿಗೆ ಚಲನಚಿತ್ರದಲ್ಲಿ ನಟಿಸಲು ಅವಕಾಶವನ್ನು ಕೊಟ್ಟಿದ್ದರು.  ಆದ್ದರಿಂದ ಕಾರ್ನಾಡರ ಬದುಕು ಬರಹಗಳ ಕುರಿತು ಕಾರ್ನಾಡ ಕಂಪನಿ ಎನ್ನುವ ನಾಟಕವೊಂದನ್ನು ತಮ್ಮ ವೇದಿಕೆ ತಂಡದಿಂದ ನಿರ್ಮಿಸಿ, ತಮ್ಮ ಕುಟುಂಬ ಪರಿವಾರ ಸಮೇತ ಅಭಿನಯಿಸಿ ಕಾರ್ನಾಡರಿಗೆ ರಂಗಕ್ರಿಯೆಯ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದರು. ಸಿಂಹರವರನ್ನು ಪ್ರಭಾವಿಸಿದ ಮತ್ತೊಬ್ಬರು ಕುವೆಂಪು. ಕುವೆಂಪುರವರ ಬದುಕು ಹಾಗೂ ಬರಹಗಳನ್ನಾದರಿಸಿದ ರಸಋಷಿ ಕುವೆಂಪು ನಾಟಕವನ್ನು ನಿರ್ಮಿಸಿ, ಕುವೆಂಪು ಪಾತ್ರವನ್ನು ಸ್ವತಃ ಅಭಿನಯಿಸಿ ಮಹಾನ್ ಲೇಖಕನಿಗೆ ರಂಗಗೌರವವನ್ನು ಸಿಂಹ ಅರ್ಪಿಸಿದರು. ನಂತರ ಸಿಂಹರವರ ಮಗ ಋತ್ವಿಕ್ ನಾಟಕವನ್ನೇ ಸಿನೆಮಾ ಮಾಡಿ ನಿರ್ದೇಶಿಸಿದರು. ಸಿಂಹರವರೇ ಕುವೆಂಪು ಪಾತ್ರ ಅಭಿನಯಿಸಿದರು.

 ನಾಟಕವೆಂದರೆ ಉದ್ಯಮವಲ್ಲ, ಇದರಲ್ಲಿ ನಿರೀಕ್ಷಿಸಿದಷ್ಟು ಆದಾಯವಿಲ್ಲ ಎಂಬುದರ ಅರಿವಿದ್ದ ಸಿಂಹ ಸಿನೆಮಾಗಳಲ್ಲಿ ನಟಿಸಲು ಆರಂಭಿಸಿದರು. ಅವರ ಮೊದಲ ಸಿನೆಮಾ 1972ರಲ್ಲಿ ಬಂದ ಸಂಸ್ಕಾರ. ನಂತರ ಬರ, ಅನುರೂಪ, ಸಂಕಲ್ಪ, ಚಿತೆಗೂ ಚಿಂತೆ ಮುಂತಾದ ಸಿನೆಮಾಗಳಲ್ಲಿ ಅಭಿನಯಿಸಿದರು. ಕಲಾತ್ಮಕ ಚಿತ್ರಗಳ ಜೊತೆಗೆ ಕಮರ್ಸಿಯಲ್ ಚಿತ್ರಗಳಲ್ಲೂ ಸಹ ನಟಿಸುತ್ತಿದ್ದರು. ನೀ ತಂದ ಕಾಣಿಕೆ, ಇಂದಿನ ರಾಮಾಯಣ, ರಾಮಪುರದ ರಾವಣ, ನೀ ಬರೆದ ಕಾದಂಬರಿ, ಹೊಸನೀರು, ದಿಗ್ವಿಜಯ, ಬೇಟೆ, ಗಡಿಬಿಡಿ ಕೃಷ್ಣ, ಬಾಳೊಂದು ಭಾವಗೀತೆ... ಹೀಗೆ ನೂರೈವತ್ತಕ್ಕು ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿ ಚಲನಚಿತ್ರ ರಂಗಕ್ಕೂ ತಮ್ಮ ಅಭಿನಯದ ಕೊಡುಗೆಯನ್ನು ಸಿಂಹರವರು ವಿಸ್ತರಿಸಿದರು.  ಜೊತೆಗೆ ಕಾಕನಕೋಟೆ, ಶಿಕಾರಿ, ಅಶ್ವಮೇಧ, ಸಿಂಹಾಸನ, ಅಂಗೈಯಲ್ಲಿ ಅಪ್ಸರೆ...ಹೀಗೆ ಒಟ್ಟು ಐದು ಸಿನೆಮಾಗಳನ್ನೂ ಸಹ ನಿರ್ದೇಶಿಸಿದ್ದಾರೆ. ಕಿರುತೆರೆಯಲ್ಲಿ ಕೂಡ ಹಲವಾರು ದಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾದವು ವೈದ್ಯೋ ನಾರಾಯಣೋ ಹರಿ, ಪ್ರತಿದ್ವನಿ, ನಾವೆಲ್ಲರೂ ಒಂದೇ, ನೀತಿಚಕ್ರ,.. ಮುಂತಾದ ಟಿವಿ ಸೀರಿಯಲ್ಲುಗಳಲ್ಲಿ ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್, ಗೋರೂರು ಇನ್ ಅಮೇರಿಕಾ, ಸಾರಾ ಜಹಾ ಹಮಾರಾ, ಘರ್ ಜಮಾಯಿ, ಸಂಸ್ಮರಣ್... ಮುಂತಾದ ಹಿಂದಿ ದಾರಾವಾಹಿಗಳಲ್ಲೂ ಸಹ ಸಿಂಹರವರು ನಟಿಸಿದ್ದಾರೆ. ್ಯಾಗ್ ಫಿಕ್ಕರ್ಸ ಎನ್ನುವ ಬಿಬಿಸಿಯ ಇಂಗ್ಲೀಷ್ ಟೆಲಿ ದಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.


 ಉಸಿರಿಗಾಗಿ ನಾಟಕ, ಹೆಸರಿಗಾಗಿ ಸಿನೆಮಾ, ಬದುಕಿಗಾಗಿ ದಾರಾವಾಹಿ ಎಂದು ಸಿಂಹ ಹೇಳುತ್ತಿದ್ದರು. ಹೀಗಾಗಿ ಮೂರು ದೃಶ್ಯ ಮಾಧ್ಯಮಗಳಲ್ಲಿ ಸಿಂಹ ತಮ್ಮ ಪ್ರತಿಭೆಯನ್ನು ಮೆರೆದಿದ್ದರು. ಜೊತೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿಮ್ಮ ಸಿಮ್ಮ ಎನ್ನುವ ಅಂಕಣವನ್ನೂ ಬರೆಯುತ್ತಾ ತಮ್ಮ ನೆನಪುಗಳನ್ನು ಹಾಗೂ ಅನುಭವಗಳನ್ನು ದಾಖಲಿಸಿದ್ದರು. 1986 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 2000 ದಲ್ಲಿ ರಂಗಭೂಮಿ ಕೊಡುಗೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2004 ರಲ್ಲಿ ಕೇಂದ್ರ ಸರಕಾರದ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ,  1978ರಲ್ಲಿ ಕಾಕನಕೋಟೆ ಸಿನೆಮಾದ ಅತ್ಯುತ್ತಮ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ, 1993 ರಲ್ಲಿ ಶಂಕರೇಗೌಡ ರಂಗಮಂದಿರ ಪ್ರಶಸ್ತಿ...ಹೀಗೆ ಹಲವಾರು ಗೌರವ ಮತ್ತು ಪ್ರಶಸ್ತಿಗಳು ಸಿಂಹರವರಿಗೆ ಸಂದಿವೆ.

ಭೂಮಿಯಲ್ಲಿ ಬೇರಿಳಿಯುವ ಮೊದಲು ಆಕಾಶದಲ್ಲಿ ಟೊಂಗೆ ಚಾಚುವುದಾದರೂ ಹೇಗೆ ತಾಯಿ...ಎಂದು ತುಘಲಕ್ ನಾಟಕದಲ್ಲಿ ಸಿಂಹರವರು ಹೇಳುವ ಪ್ರಸಿದ್ದ ಸಂಭಾಷಣೆಯೊಂದಿದೆ. ಪ್ರಶ್ನೆಯನ್ನು ಸಿಂಹ ತಮಗೆ ತಾವೇ ಕೇಳಿಕೊಳ್ಳುತ್ತಲೇ ರಂಗಭೂಮಿಯಲ್ಲಿ ತಮ್ಮ ಬೇರುಗಳನ್ನು ಮೊದಲು ಗಟ್ಟಿಗೊಳಿಸಿಕೊಂಡು ನಂತರ ತಮ್ಮ ಪ್ರತಿಭೆಯ ಟೊಂಗೆಗಳನ್ನು ಸಿನೆಮಾ, ಟಿವಿ, ಸಾಹಿತ್ಯ ಕ್ಷೇತ್ರಗಳಿಗೂ ಚಾಚಿದರು. ಎಲ್ಲದರಲ್ಲೂ ಯಶಸ್ವಿಯಾದರು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ಶ್ರೇಷ್ಟ ನಟ ಯಾರು? ಎಂದು ಕೇಳಿದರೆ ಸಿಂಹರವರ ಹೆಸರು ಮುಂಚೂಣಿಯಲ್ಲಿರುವಂತೆ ತಮ್ಮ ಅಭಿನಯ ಸಾಮರ್ಥ್ಯವನ್ನು ಸಿಂಹ ಸಾಬೀತುಪಡಿಸಿದರು. ಸಿಂಹರವರನ್ನು ಬೇರೆಯವರಿಗೆ ಹೋಲಿಕೆ ಮಾಡಲಿಕ್ಕೆ ಸಾಧ್ಯವೇ ಇಲ್ಲಾ. ಅಂತಹ ಅದ್ಬುತ ಕಲಾವಿದರವರು. ಸಿಂಹರವರಿಗೆ ಸಿಂಹರವರೇ ಸರಿಸಾಟಿ, ಬೇರೆ ಹೋಲಿಕೆ ಇನ್ಯಾಕೆ?.

  
ಫೆಬ್ರವರಿ 28, ಸಿಂಹರವರ ಮಗಳು ಅಖಿಲಾರವರ ಜನ್ಮದಿನ. ಆದರೆ ವರ್ಷ ಜನ್ಮದಿನದ ಸಂಭ್ರಮಕ್ಕೆ ಬದಲು ಅವರ ಮನೆಯನ್ನು ತುಂಬಿದ್ದು ಸೂತಕ. ಏನೆ ಆಗಲಿ ಇಂತಾ ಅಭಿಜಾತ ನಟನಿಗೆ ಇಂತಹ ನಿಷ್ಕೃಷ್ಟ ಸಾವು ಬರಬಾರದಿತ್ತು. ಮೈಯೆಲ್ಲಾ ಕ್ಯಾನ್ಸರ್ ಹಬ್ಬಬಾರದಿತ್ತು. ಕಳೆದ ಒಂದೂವರೆ ವರ್ಷದಿಂದ ಪ್ರಾಸ್ಟ್ರೇಟ್ ಕ್ಯಾನ್ಸರ್ ಸಿಂಹರವರನ್ನು ಹೈರಾಣಾಗಿಸಿತ್ತು. ಮೂರು ದಿನಕ್ಕೊಮ್ಮೆ ಡಯಾಲಸಿಸ್ಗೆ ಒಳಗಾಗಬೇಕಿತ್ತು. ಕೊನೆಕೊನೆಗೆ ಕ್ಯಾನ್ಸರ್ ಮೂಳೆ ಮೂಳೆಗೂ ಪಸರಿಸಿ ನೋವಿನ ನರಕವನ್ನೇ ಸೃಷ್ಟಿಸಿತ್ತು. ನಗುಮುಖದ ನಟ ಅದು ಹ್ಯಾಗೆ ನೋವನ್ನು ಸಹಿಸಿಕೊಂಡರೋ? ಅವರು ಬದುಕುಳಿಯುವ ಕ್ಷೀಣ ಆಸೆಯನ್ನೂ ಸಹ ವೈದ್ಯರು, ಕುಟುಂಬದವರು ಕೈಬಿಟ್ಟಿದ್ದರು. ಬದುಕುವ ಅವಕಾಶವೇ ಇಲ್ಲವೆಂದಾಗ ಯಾವ ಆಸ್ಪತ್ರೆಯವರೂ ಸಿಂಹರವರನ್ನು ಸೇರಿಸಿಕೊಳ್ಳಲಿಲ್ಲ. ಮನೆಯಲ್ಲಿ 24 ಗಂಟೆಗಳ ಕಾಲ ಆರೈಕೆ ಮಾಡಲು ಸಾಧ್ಯವೇ ಇರಲಿಲ್ಲ. ಕೊನೆಗೆ ಫೆಬ್ರವರಿ 22 ರಂದು ಕೊನೆಗಾಲದವರ ಸೇವೆಗಾಗಿಯೇ ಇರುವ ಸೇವಾಕ್ಷೇತ್ರ ಆಸ್ಪತ್ರೆಗೆ ಅನಿವಾರ್ಯವಾಗಿ ಸಿಂಹರವರನ್ನು ದಾಖಲಿಸಲಾಗಿತ್ತು. ಎಲ್ಲರೂ ಅವರ ಸಾವಿನ ಕ್ಷಣಕ್ಕಾಗಿ ಕಾದಂತಿತ್ತು

 ಯಾಕೆಂದರೆ ಇಷ್ಟೊಂದು ವೇದನೆ ಪಡುವುದಕ್ಕಿಂತಲೂ ಎಲ್ಲಾ ನರಕಸದೃಶ ನೋವಿನಿಂದ ಸಿಂಹ ಮುಕ್ತರಾಗಬೇಕೆಂಬುದು ಎಲ್ಲರ ಅಶಯವಾಗಿತ್ತು. ಒಳ್ಳೆಯ ದಿನದಂದು ಸಾವು ಬರಲಿ ಎಂಬುದು ಹಲವರ ನಿರೀಕ್ಷೆಯಾಗಿತ್ತು. ಅವರ ನಿರೀಕ್ಷೆಯನ್ನು ಸಾವು ನಿರಾಸೆಗೊಳಿಸಲಿಲ್ಲ. ಅಂದು ಫೆ.28, ಮಹಾಶಿವರಾತ್ರಿ. ಹಿಂದೂ ಸಂಪ್ರದಾಯವಾದಿಗಳ ಪ್ರಕಾರ ಮಹತ್ತರವಾದ ಶುಭದಿನ. ಶ್ರಮಿಕ ಜನರ ಆರಾಧ್ಯ ದೈವ ಶಿವ ಕೈಲಾಸ ಬಿಟ್ಟು ಭೂಲೋಕಕ್ಕೆ ಬರುತ್ತಾನೆನ್ನುವ ಪ್ರತೀತಿ. ಇಂತಹ ದಿನದಂದು ಮಧ್ಯಾಹ್ನ ಮೂರುಗಂಟೆಗೆ ಸಿಂಹ ಕಾಲನ ಕತ್ತಲೆ ಗುಹೆಗೆ ಖಾಯಂ ಆಗಿ ಸೇರಿಹೋಯಿತು. ಶಿವ ಅಂದರೆ ನಟರಾಜ. ನಟನೆಯ ಅಧಿದೇವತೆ. ನಟರಾಜ ನಮ್ಮ ನಟನನ್ನು ಕರೆದುಕೊಂಡು ಹೋಗಲು ಸ್ವತಃ ಬಂದಿದ್ದನಾ? ಶಿವನೇ ಧರೆಗಿಳಿದು ಬಂದು ನೋವಿನಿಂದ ಜರ್ಜರಿತವಾದ ಸಿಂಹರವರನ್ನು ಸಂತೈಸಿ ನೇರವಾಗಿ ಕೈಲಾಸಕ್ಕೆ ಕರೆದುಕೊಂಡು ಹೋದನಾ? ಗೊತ್ತಿಲ್ಲ. ಇದು ಅವರವರ ನಂಬಿಕೆಯ ವಿಷಯ. ಆದರೆ.... ಸಾವು ಯಾರನ್ನೂ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆದರೆ ಸಾವು ಬರುವುದೇ ಆದರೆ ಬರಲಿ ಆದರೆ ಅದು ಸುಗಮವಾಗಿರಲಿ. ನಿಟ್ಟಿನಲ್ಲಿ ಪರೇಶ್ ಹಾಗೂ ಗೋವಾದತ್ತು ಸುಖದ ಸಾವು ಕಂಡರು. ಆದರೆ ಸಿಂಹರವರಿಗೆ ಭಾಗ್ಯ ಇರಲಿಲ್ಲ. ಆದರೆ ಸಾವಿನ ನಂತರ ಸಿಂಹರವರಿಗೆ ಸಿಕ್ಕ ಗೌರವ ಹಾಗೂ ಜನಸ್ಪಂದನೆ ಅದ್ಬುತವಾಗಿತ್ತು

 ಮರಣವೇ ಮಹಾನವಮಿ ಎಂದು ಶರಣರು ಹೇಳುತ್ತಾರೆ. ಇದು ಸಿಂಹರವರ ಮರಣದ ನಂತರ ಸೇರಿದ ಜನಸಾಗರ ನೋಡಿದವರಿಗೆ ದಿಟವೆನ್ನಿಸಿತು. ರಂಗಭೂಮಿ, ಸಿನೆಮಾ, ಟಿವಿ ಹಾಗೂ ಸಾಹಿತ್ಯ ಲೋಕದ ದಿಗ್ಗಜರು ಸಿಂಹರವರ ಅಂತಿಮ ದರ್ಶನಕ್ಕೆ ಬಂದಿದ್ದರು. ರಾಮಚಂದ್ರ ಹಡಪದ ಮತ್ತು ಗೆಳೆಯರ ರಂಗಗೀತೆ ಭಾವಗೀತೆಗಳು ಕಲಾಕ್ಷೇತ್ರದ ಹಿಂದಿರುವ ಸಂಸ ಬಯಲುರಂಗಮಂದಿರದಲ್ಲಿ ಭಾವತೀವ್ರತೆಯನ್ನು ಹೆಚ್ಚಿಸಿದ್ದವು. ಎಲ್ಲರ ಮನದಲ್ಲಿ ದುಃಖ ಮಡುಗಟ್ಟಿತ್ತು. ಆದರೆ ಯಾರ ಕಣ್ಣಲ್ಲೂ ನೀರಿರಲಿಲ್ಲ. ಯಾಕೆಂದರೆ ಇದು ಸಿಂಹರವರ ಅಂತಿಮ ಆಸೆಯಾಗಿತ್ತು.

ಇನ್ನೂ ಅವರು ಕೋಮಾಸ್ಥಿತಿಗೆ ಹೋಗಿರಲಿಲ್ಲ. ಆದರೆ ತಮ್ಮ ಸಾವು ನಿಶ್ಚಿತ ಎಂಬುದು ಸಿಂಹರವರಿಗೆ ಅರಿವಾಗಿತ್ತು. ಅದನ್ನು ಅವರು ನಗುನಗುತ್ತಲೇ ಸ್ವೀಕರಿಸಿದ್ದರು. ನೋಡಲು ಬಂದವರಾ ಕಣ್ಣಲ್ಲೂ ನೀರು ಬರುವುದನ್ನು ಸಹಿಸುತ್ತಿರಲಿಲ್ಲ. ತಮ್ಮ ಕುಟುಂಬದವರಿಗಂತೂ ಯಾವುದೇ ಕಾರಣಕ್ಕೂ ಕಣ್ಣೀರು ಹಾಕಲೇಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ತನಗೆ ಮನೆಯ ಗೇಟ್ ಕಾಣುತ್ತಿರಬೇಕು ಹಾಗೂ ನನ್ನನ್ನು  ನೋಡಲು ಬರುವ ಯಾರೂ ಕಣ್ಣೀರು ಹಾಕಬಾರದು ಎಂದು ಆದೇಶಿಸಿದ್ದರು. ತಾನು ಮತ್ತೊಬ್ಬರ ನೋವಿಗೆ ಕಾರಣವಾಗಬಾರದು ಎನ್ನುವ ಸದಾಶಯ ಅವರದಾಗಿತ್ತು. ಅದಕ್ಕಾಗಿಯೇ ಸಿಂಹರವರ ಪಾರ್ಥಿವ ಶರೀರವನ್ನು ಅವರ ಮನೆಯ ಮುಖ್ಯ ಗೇಟಿಗೆ ಅಭಿಮುಖವಾಗಿ ಇಡಲಾಗಿತ್ತು. ಹಾಗೂ ಕೊನೆಯ ದರ್ಶನಕ್ಕೆ ಬಂದ ಯಾರು ಅಳಬಾರದು ಎಂದು ಕುಟುಂಬ ವರ್ಗದವರು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಸಂಸ ಬಯಲು ರಂಗ ಮಂದಿರದಲ್ಲಿ ಸಿಂಹರವರಿಗೆ ಅಂತಿಮ ನಮನ ಸಲ್ಲಿಸಲು ಬಂದವರಿಗೆಲ್ಲಾ ಅಘೋಷಿತ ಮನವಿ ಕಣ್ಣೀರನ್ನು ಹಿಡಿದಿರಿಸಿತ್ತು. ಆದರೆ ಸಿಂಹರಂತಹ ಅದ್ಭುತ ಕಲಾವಿದನ ಅಗಲಿಕೆ ಮೌನದಲ್ಲೇ ನೋವುಂಟುಮಾಡುವಂತಿತ್ತು. ಕೊನೆಗೂ ಎಲ್ಲರೂ ವಿಧಾಯ ಹೇಳಲೇ ಬೇಕಿತ್ತು.


 ಅಚ್ಚರಿ ಎಂದರೆ ತಮ್ಮ ಸಾವಿನ ಸೂಚನೆ ದೊರೆತ ಮೇಲೂ ಸಿಂಹರವರು ನಾಟಕ ರಚನೆ ಮಾಡಿದರು. ರಂಗಭೂಮಿಯ ಮೋಹ ಎಂದರೆ ಇದೇನಾ? ಅವರ ಕ್ಯಾನ್ಸರ್ ಉಲ್ಬಣಿಸಿತ್ತು, ವಾರಕ್ಕೆ ಮೂರು ಬಾರಿ ಡಯಾಲಸಿಸ್ ಅನಿವಾರ್ಯವಾಗಿತ್ತು. ಅಂತಹ ಸಮಯದಲ್ಲಿ ಬೇರೆ ಯಾರೇ ಆಗಿದ್ದರೂ ದೃತಿಗೆಡುತ್ತಿದ್ದರು. ಸಾವಿನ ಜಪ ಮಾಡುತ್ತಾ ಬದುಕಿನ ಬಗ್ಗೆ ಹಳಹಳಿಸುತ್ತಿದ್ದರು. ಇಲ್ಲವೇ ನಿರಾಸೆಯಿಂದ ಸಿನಿಕ್ ಆಗಿ ನಶ್ವರತೆಯ ಬಗ್ಗೆ ಮಾತಾಡುತ್ತಿದ್ದರು. ಆದರೆ ಸಿಂಹರವರದು ಎಂಟೆದಯ ಗುಂಡಿಗೆ. ಸಾವು ಹೊಂಚು ಹಾಕುತ್ತಿರುವುದು ತಿಳಿದೂ, ಅಸಾಧ್ಯ ನೋವು ಸಂಕಟಗಳನ್ನು ಅನುಭವಿಸುತ್ತಲೆ ಮೂರು ತಿಂಗಳುಗಳ ಕಾಲ ನಾಟಕವನ್ನು ರಚಿಸಿದರು. ಅದು ರಾಜರತ್ನಂರವರ ರತ್ನನ್ ಪದಗಳನ್ನು ಆಧರಿಸಿದ ಜೈಹೋ ರತ್ನ ನಾಟಕ. ಸಿಂಹರವರು ಕಾಲವಶರಾಗುವ ಕೇವಲ ಎರಡು ವಾರದ ಮುಂಚೆ ನಾಟಕ ಪೂರ್ಣಗೊಳಿಸಿ ತಮ್ಮ ಮಗನಿಗೆ ನಾಟಕವನ್ನು ನಿರ್ದೇಶಿಸಲು ಅಪ್ಪಣೆ ಮಾಡಿ ಕೋಮಾಕ್ಕೆ ಸಿಂಹ ತೆರಳಿದರು. ಥಿಯೇಟರ್ ಕಮಿಟ್ಮೆಂಟ್ ಎಂದರೆ ಇದೇನಾ? ಸಾವಿನ ಕಪಿಮುಷ್ಟಿಯಲ್ಲಿ ಸಿಕ್ಕಾಗಲೂ ನಾಟಕವನ್ನು ದ್ಯಾನಿಸುವುದಾ? ಅದಕ್ಕೆ ಹೇಳಿದ್ದು ಸಿಂಹರವರಿಗೆ ಸಿಂಹರವರೇ ಸಾಟಿ. ಜೈಹೋ ಸಿಂಹ. ಇಂತಹ ರಂಗಬದ್ಧತೆ ಇರುವ ಸಿ.ಆರ್.ಸಿಂಹರವರಿಗೆ ರಂಗನಮನಗಳು.   


                                                   -ಶಶಿಕಾಂತ ಯಡಹಳ್ಳಿ
           
                    
      
                


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ