ಶುಕ್ರವಾರ, ಜುಲೈ 21, 2017

ಕಲಬುರಗಿ ರಂಗಾಯಣ; ನಿಷ್ಕ್ರೀಯತೆಗೆ ಅನಾನುಕೂಲಗಳೇ ಕಾರಣ:

ಆಡಳಿತಾಧಿಕಾರಿಯ ಅಸಹಕಾರ; ರಂಗಾಯಣದ ಕಲಾವಿದರು ತತ್ತರ :



ಸಧ್ಯ ಕಲಬುರಗಿ ರಂಗಾಯಣಕ್ಕೆ ಕಲಾವಿದರುಗಳು ಹಾಗೂ ನಿರ್ದೇಶಕರ ಆಯ್ಕೆ ಆಯ್ತಲ್ಲಾ, ಇನ್ನು ಮೇಲೆ ಅಲ್ಲಿ ರಂಗಚಟುವಟಿಕೆಗಳು ಗರಿಗೆದರುತ್ತವೆ ಎಂದು ಕಲಬುರಗಿಯ ರಂಗಾಸಕ್ತರ ಜೊತೆಗೆ ಇಡೀ  ಕರ್ನಾಟಕದ ರಂಗಕರ್ಮಿಗಳು ನಿಟ್ಟುಸಿರಿಟ್ಟಿದ್ದರು. ಯಾಕೆಂದರೆ ಈ ಹಿಂದೆ ಅಲ್ಲಿ ರಂಗಾಯಣದ ಕಲಾವಿದರು ಹಾಗೂ ನಿರ್ದೇಶಕರಾಗಿದ್ದ ಹುಡಗಿ ಮಾಸ್ತರ್ ನಡುವೆ ಹಾದಿ ಬೀದಿ ಜಗಳಗಳೇ ಆಗಿ ಹೋಗಿ ಪೊಲೀಸ್ ಕೇಸ್‌ಗಳಾಗಿದ್ದವು. ಈ ರಂಗಾಯಣದೊಳಗಿನ ಆಂತರಿಕ ಹಾಗೂ ಬಾಹ್ಯ ಸಂಘರ್ಷಗಳಿಂದ ಬೇಸತ್ತು ಹೋದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2016 ಜುಲೈ 26 ರಂದು ನಿರ್ದೇಶಕರ ಜೊತೆಗೆ ಅಲ್ಲಿರುವ ಎಲ್ಲಾ ಕಲಾವಿದರನ್ನೂ ಮನೆಗೆ ಕಳುಹಿಸಿ ತನ್ನ ಮಾನ ಉಳಿಸಿಕೊಳ್ಳಲು ನೋಡಿತು. ಮತ್ತೆ ಕಲಾವಿದರು ಹಾಗೂ ನಿರ್ದೇಶಕರ ಆಯ್ಕೆ ಮಾಡುವ ಆಸಕ್ತಿಯೇ ಸರಕಾರಕ್ಕೆ ಇಲ್ಲವಾಗಿತ್ತು. ರಂಗಸಮಾಜದವರನ್ನೂ ಸಹ ಗುಲಬರ್ಗಾ ಹಾಗೂ ಶಿವಮೊಗ್ಗ ರಂಗಾಯಣದ ಹಗರಣಗಳು ಹೈರಾಣು ಮಾಡಿದ್ದವು. ಅಪ್ಪ ಅಮ್ಮಂದಿರಿಗೇ ಬೇಡದ ಕೂಸಾದ ಈ ಎರಡೂ ರಂಗಾಯಣಗಳು ಅನಾಥವಾಗಿ ನಿಷ್ಕ್ರೀಯವಾಗಿದ್ದವು. 

ಕೊನೆಗೆ ಕೆಲವು ಪ್ರಜ್ಞಾವಂತ ರಂಗಕರ್ಮಿಗಳ ಒತ್ತಾಯ ಹಾಗೂ ರಂಗಸಮಾಜದ ಸದಸ್ಯರಾಗಿರುವ ಪ್ರೊ.ಜಿ.ಕೆ.ಗೋವಿಂದರಾವ್‌ರವರು ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದ ಪರಿಣಾಮದಿಂದಾಗಿ ಹತ್ತು ತಿಂಗಳುಗಳ ನಂತರ ಅಳೆದು ಸುರಿದು ನಿರ್ದೇಶಕರ ಆಯ್ಕೆಯನ್ನು ಮಾಡಲಾಯಿತು. ಅದಕ್ಕಿಂತ ಎರಡು ತಿಂಗಳು ಮೊದಲೇ ಈ ಎರಡೂ ರಂಗಾಯಣಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಯಡವಟ್ಟು ನಿರ್ಧಾರವನ್ನೂ ತೆಗೆದುಕೊಳ್ಳಲಾಗಿತ್ತು. ಆಯ್ಕೆಯಾಗಿ ಬಂದ ಕಲಾವಿದರುಗಳಿಗೆ ಆದೇಶಗಳನ್ನು ಕೊಡಲು ನಿರ್ದೇಶಕರೇ ಇಲ್ಲದ್ದರಿಂದ ಕಲಾವಿದರೆಲ್ಲಾ ಸಂಬಳ ತೆಗೆದುಕೊಂಡು ಕಾಲಹರಣ ಮಾಡಿಕೊಂಡಿದ್ದರು. ಅಂತೂ ಇಂತೂ 2017 ಮೇ 25ರಂದು ನಡೆದ ಸಭೆಯಲ್ಲಿ ಸಂಭಾವ್ಯ ನಿರ್ದೇಶಕರುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂತೂ ಇಂತೂ ಜೂನ್ 14 ರಂದು ಸಂಸ್ಕೃತಿ ಇಲಾಖೆಯ ಸಚಿವಾಲಯದಿಂದ ರಂಗಾಯಣದ ನಿರ್ದೇಶಕರ ಆಯ್ಕೆಯ ಅಂತಿಮ ಆದೇಶ ಹೊರಬಿತ್ತು. ಮೈಸೂರು ರಂಗಾಯಣಕ್ಕೆ ಭಾಗೀರತಿಬಾಯಿ ಕದಂ, ಶಿವಮೊಗ್ಗ ರಂಗಾಯಣಕ್ಕೆ ಡಾ.ಎಂ.ಗಣೇಶ್ ಹಾಗೂ ಕಲಬುರಗಿ ರಂಗಾಯಣಕ್ಕೆ ಮಹೇಶ ಪಾಟೀಲರವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದೇಶ ತಲುಪಿ ನಿರ್ದೇಶಕರಾದವರು ಹೋಗಿ ರಂಗಾಯಣದ ಹೊಣೆಗಾರಿಕೆ ವಹಿಸಿಕೊಳ್ಳಲು ಮತ್ತೆ ಒಂದು ತಿಂಗಳು ಸರಿದಿತ್ತು.

ಈಗ ಕಲಬುರಗಿ ರಂಗಾಯಣದ ವಿಷಯಕ್ಕೆ ಬಂದರೆ.. ಏನೇನೋ ಕನಸುಗಳನ್ನು ಇಟ್ಟುಕೊಂಡು.. ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಲ್ಲರೂ ಮೆಚ್ಚುವಂತಾ ಕೆಲಸ ಮಾಡಬೇಕೆಂಬ ಮಹತ್ವಾಂಕಾಂಕ್ಷೆ ಇಟ್ಟುಕೊಂಡು ಹೋದ ಮಹೇಶ ಪಾಟೀಲರಿಗೆ ಆಘಾತ ಕಾದಿತ್ತು.  ಯಾಕೆಂದರೆ ಅಲ್ಲಿ ರಂಗಕ್ರಿಯೆಗಳನ್ನು ನಡೆಸಲು ಬೇಕಾದ ಯಾವುದೇ ಅನುಕೂಲಗಳೂ ಇರಲೇ ಇಲ್ಲಾ. ಈಗಾಗಲೇ ಆಯ್ಕೆಯಾದ ಕಲಾವಿದರು ದಿನವೂ ನಿಯಮದಂತೆ ಬಂದು ಹಾಜರಿ ಹಾಕಿ ಸಂಜೆ ಮನೆಗೆ ಹೋಗುತ್ತಿದ್ದರು. ಹೊಸ ನಿರ್ದೇಶಕರು ಬಂದಾಗ ಹೊಸ ಹುರುಪಿನಿಂದ ಕಲಾವಿದರೆಲ್ಲಾ ಸಿದ್ದಗೊಂಡರು. ಆದರೆ.. ಮಾಡುವುದಾದರೂ ಏನು? 

ತಾಲಿಂ ಕೊಠಡಿ, ಒಡೆದ ಕಿಡಕಿ ಗ್ಲಾಸು, ಕಿತ್ತೋದ ನೆಲಹಾಸು..
ಕಲಬುರಗಿಯ ಊರ ಹೊರಗಿರುವ ರಂಗಾಯಣಕ್ಕೆ ಕಟ್ಟಡವೊಂದಿದೆ. ಆದರೆ ಕಸ ದೂಳು ಮೆತ್ತಿಕೊಂಡ ಬೂತ ಬಂಗಲೆಯಾಗಿದೆ. ಕೆಳಗೆ ಪುಟ್ಟದಾದ ರಂಗಮಂದಿರವೊಂದಿದೆ.. ಅದರ ಕೀಲಿ ಕೈ ಆಡಳಿತಾಧಿಕಾರಿಯ ಸೊಂಟದಲ್ಲಿದೆ. ಮೊದಲ ಮಹಡಿಯಲ್ಲಿ ಖಾಲಿ ಹಾಲ್ ಒಂದಿದೆ.. ಆದರೆ ಮೇಲೆ ಇರುವ ವೆಂಟಿಲೇಟರ್ ಕಿಟಕಿಯ ಗಾಜುಗಳೆಲ್ಲಾ ಒಡೆದು ಹೋಗಿದ್ದರಿಂದ ಮಳೆಯ ನೀರು ಒಳಕ್ಕಿಳಿದು ರೇಜಿಗೆ ಹುಟ್ಟಿಸುವಂತಿದೆ. ಹೋಗಲಿ ಮಳೆ ಇಲ್ಲದಾಲಾದರೂ ತರಬೇತಿಯನ್ನೋ ಇಲ್ಲವೇ ತಾಲೀಮನ್ನೋ ಮಾಡಬೇಕೆಂದರೆ ನೆಲಹಾಸಿನ ಟೈಲ್‌ಗಳು ಹಾಲ್‌ನ ನಡುಮಧ್ಯದಲ್ಲಿ ಕಿತ್ತು ಬಂದು ಹಳ್ಳ ಸೃಷ್ಟಿಯಾಗಿದೆ. ನೃತ್ಯದ ಹೆಜ್ಜೆಗಳನ್ನು ಹಾಕಲು ಹೋದ ಕಲಾವಿದನೊಬ್ಬನ ಕಾಲಿಗೆ ಗುಂಡಿಯ ಪಕ್ಕದಲ್ಲಿದ್ದ ಟೈಲ್ ಚುಚ್ಚಿ ಗಾಯವಾಗಿ ಅಪಾರವಾದ ರಕ್ತಸ್ರಾವವಾಯಿತು.

ಆಡಳಿತಾಧಿಕಾರಿ ದತ್ತಪ್ಪ
ಅದು ಹೇಗೋ ಆಡಳಿತಾಧಿಕಾರಿ ದತ್ತಪ್ಪನವರಿಂದ ಕೆಳಗಿನ ರಂಗಮಂದಿರದ ಕೀಲಿಯನ್ನು ಪಡೆದು ಓಪನ್ ಮಾಡಲಾಯಿತಾದರೂ ಅದನ್ನು ಕ್ಲೀನ್ ಮಾಡಿ ಬಳಸಲು ನಾಲ್ಕು ದಿನಗಳೇ ಬೇಕಾಯಿತು. ಕ್ಲಾಸ್ ಹಾಗೂ ತಾಲಿಂ ಕೊಠಡಿಗಳ ಮಾತು ಬಿಡಿ.. ಅಲ್ಲಿ ಕನಿಷ್ಟ ನೀರು ಹಾಗೂ ಶೌಚಾಲಯದ ಅಗತ್ಯತೆಗಳೇ ನೆಟ್ಟಗಿರಲಿಲ್ಲಾ. ನಲ್ಲಿಯಲ್ಲಿ ಬರುತ್ತಿದ್ದ ಬೋರವೆಲ್ ನೀರನ್ನು ಕುಡಿದು ದಿನಕ್ಕೊಬ್ಬರು ಕಲಾವಿದರು ಅನಾರೋಗ್ಯಕ್ಕೊಳಗಾಗತೊಡಗಿದರು. ಮಹೇಶ್ ಪಾಟೀಲರಿಗೆ ಕಲಾವಿದರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವುದೇ ಹೆಚ್ಚುವರಿ  ಕೆಲಸವಾಯಿತು. ಏನೋ ಅನುಮಾನ ಬಂದು ಓವರ್ ಹೆಡ್ ಟ್ಯಾಂಕ್ ಪರಿಶೀಲಿಸಿದರೆ ಅದಕ್ಕೆ ಮುಚ್ಚಳವೇ ಇರಲಿಲ್ಲಾ. ಒಳಗೆ ನೋಡಿದರೆ ಕಾಗೆ ಸತ್ತು ಬಿದ್ದು ದುರ್ವಾಸನೆ ಬರುತ್ತಿತ್ತು. ಅದನ್ನು ನೋಡಿದ ಕಲಾವಿದರಿಗೆ ವಾಂತಿ ಬರದೇ ಇನ್ನೇನು ತಾನೆ ಆದೀತು. ಟ್ಯಾಂಕ್ ಕ್ಲೀನ್ ಮಾಡಿಸಲೂ ಆಡಳಿತಾದಿಕಾರಿ ಸಿದ್ಧವಿಲ್ಲಾ. ಅದೇ ನೀರನ್ನು ಕುಡಿದರೆ ಕಲಾವಿದರು ಅನಾರೋಗ್ಯಪೀಡತರಾಗುವುದು ತಪ್ಪುವುದಿಲ್ಲಾ. ಕೊನೆಗೆ ದೂರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಛೇರಿಗೆ ಹೋಗಿ ಅಲ್ಲಿರುವ ಪಿಲ್ಟರ್ ನೀರು ಕುಡಿದು ಬರುವ ಅನಿವಾರ್ಯತೆಗೆ ಕಲಾವಿದರು ಗೊಣಗುತ್ತಲೇ ಹೊಂದಾಣಿಕೆ ಮಾಡಿಕೊಂಡರಾದರೂ ಕೆಲವೇ ದಿನಗಳಲ್ಲಿ ಆ ಪಿಲ್ಟರ್ ಸಹ ಕೆಟ್ಟು ನಿಂತಿತು.

ರಂಗಪರಿಕರಗಳನ್ನಿಡಲು ಜಾಗವಿಲ್ಲದೇ ಮೂಲೆಗೆ ಬಿದ್ದ ಪರಿಕರಗಳು.
ಹೋಗಲಿ ತಮ್ಮ ಮನೆಯಿಂದಲೇ ಪ್ರತಿದಿನ ಪ್ರತಿಯೊಬ್ಬರೂ ಒಂದೊಂದು ಬಾಟೆಲ್ ನೀರು ತಂದು ಕುಡಿಯಬಹುದು ಅಂತಾ ಇಟ್ಟುಕೊಂಡರೂ ಶೌಚಕ್ಕಾದರೂ ನೀರು ಬೇಕೆ ಬೇಕಲ್ಲಾ. ಇನ್ನೂ ಬುಡಕ್ಕೆ ಪೇಪರ್ ಒರೆಸಿಕೊಳ್ಳುವ ಅಬ್ಯಾಸ ಭಾರತೀಯರಿಗೆ ಕರಗತವಾಗಿಲ್ಲವಲ್ಲಾ. ಶೌಚಾಲಯಗಳು ಇವೆ ಆದರೆ ಸ್ವಚ್ಚವಾಗಿಲ್ಲಾ. ಯಾರೋ ಒಬ್ಬರು ಸ್ವಚ್ಚ ಮಾಡಬೇಕೆಂದರೂ ನೀರೇ ಇಲ್ಲಾ. ಮೂಗು ಮುಚ್ಚಿಕೊಂಡೇ ಒಳಗೆ ಹೋಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಮಹಿಳೆಯರ ಶೌಚಾಲಯಕ್ಕೆ ಚಿಲಕಗಳೇ ಇಲ್ಲಾ. ಹೊರಗೆ ಒಬ್ಬ ಕಲಾವಿದೆ ಕಾವಲು ನಿಂತಾಗ ಇನ್ನೊಬ್ಬಳು ಒಳಗೆ ಹೋಗಿ ಒತ್ತಡ ನಿವಾರಿಸಿಕೊಳ್ಳುವ ದುರಂತಕ್ಕೆ ಆಡಳಿತಾಧಿಕಾರಿಗಳು ಅಂಧರಾಗಿದ್ದೊಂದು ವಿಪರ್ಯಾಸ. ಚೆಂಬಿಲ್ಲಾ.. ಬಕೆಟಿಲ್ಲಾ, ಕಸಬರಿಗೆಗಳಿಲ್ಲಾ, ಡಸ್ಟ್ ಬಿನ್ ಗಳಿಲ್ಲಾ.. ಏನು ಕೇಳಿದರೂ ಇಲ್ಲಾ ಎನ್ನುವುದನ್ನು ಬಿಟ್ಟು ಬೇರೆ ಉತ್ತರಗಳೇ ಆಡಳಿತ ಕಛೇರಿಯಿಂದ ಹೊರಬರುವುದಿಲ್ಲಾ. ಇಂತಹ ವಾತಾವರಣದಲ್ಲಿ ಕಲೆ ಅರಳೀತು ಹೇಗೆ? ಕಲಾವಿದರ ಪ್ರತಿಭೆ ಬೆಳಗೀತು ಹೇಗೆ? ನಿಜಕ್ಕೂ ಕನಿಷ್ಟ ಅಗತ್ಯಗಳೇ ಇಲ್ಲದ ಇಂತಹ ವಾತಾವರಣದಲ್ಲಿ ನಾಟಕ ಕಟ್ಟುವುದೇ ಸಹಿಸಲಾಗದ ಬೇಗೆ!

ಭೂತ ಬಂಗಲೆಯಂತಿರುವ ರಂಗಾಯಣದ ಕಟ್ಟಡ
ಇನ್ನು ರಂಗಕಲೆಗೆ ಬೇಕಾದ ಪರಿಕರಗಳಾದರೂ ಇದ್ದಾವಾ ಎಂದು ನೋಡಿದರೆ ಯಾವುದೂ ಅಲ್ಲಿ ನೆಟ್ಟಗಿಲ್ಲ. ಕಟ್ಟಿಂಗ್ ಪ್ಲೇಯರ್ ಇದ್ದರೆ ಮೊಳೆಗಳಿಲ್ಲಾ, ಕೆಟ್ಟು ನಿಂತ ಕಟ್ಟರ್ ಇದ್ದರೆ ಟೂಲ್ ಬಾಕ್ಸೇ ಇಲ್ಲಾ, ಸರಳವಾಗಿ ಒಂದು ಕಟ್ಟಿಗೆಯ ಕಟೌಟ್ ಮಾಡಲು ಬೇಕಾದ ಸಲಕರಣೆಗಳಂತೂ ಮೊದಲೇ ಇಲ್ಲಾ. ರಂಗಪರಿಕರಗಳಿಗಾಗಿಯೇ ಒಬ್ಬ ತಂತ್ರಜ್ಞನನ್ನು ಆಯ್ಕೆ ಮಾಡಲಾಗಿದೆ. ಆದರೆ ಇಲ್ಲಗಳ ಲೋಕದಲ್ಲಿ ಆತ ಇದ್ದರೂ ಇಲ್ಲವಾಗಿದ್ದಾನೆ. ಪ್ರಾಯೋಗಿಕವಾಗಿ ಪುಟ್ಟ ನಾಟಕ ಮಾಡಿದರೂ ಲೈಟ್ಸ್‌ಗಳು ಬೇಕೆ ಬೇಕಲ್ಲವೇ. ಆದರೆ ಅಲ್ಲಿ ಲೈಟಿಂಗ್ ವ್ಯವಸ್ಥೆಯೇ ಇಲ್ಲವಾಗಿದೆ. ಕನಿಷ್ಟ ಆರು ಪಾರ್ ಲೈಟ್ ಗಳಾದರೂ ಒಂದು ನಾಟಕಕ್ಕೆ ಬೇಕೆ ಬೇಕು. ಅವುಗಳನ್ನು ಫಿಕ್ಸ್ ಮಾಡಲು ಸ್ಟ್ಯಾಂಡ್ ಬೇಕು. ಲೈಟ್ ಆಪರೇಟ್ ಮಾಡಲು ಡಿಮ್ಮರ್ ಗಳು ಹಾಗೂ ಲೈಟ್ ಕಂಟ್ರೋಲರ್‌ಗಳು ಬೇಕೆ ಬೇಕು. ಆದರೆ ಆಯ್ಕೆಗೊಂಡ ಬೆಳಕಿನ ತಂತ್ರಜ್ಞ ಅಸಹಾಯಕನಾಗಿ ಆಕಾಶ ನೋಡುತ್ತಿದ್ದಾನೆ. ಅಲ್ಲಿ ಕಲಬುರಗಿಯಲ್ಲಿ ದಿನದಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಹಗಲೊತ್ತು ಕರೆಂಟ್ ಇರುವುದಿಲ್ಲಾ. ಬೇಕಾದಾಗ ಬೆಳಕು ಬೇಕೆಂದರೂ ಇನ್ವರ್ಟರ್ ಇಲ್ಲವೇ ಯುಪಿಎಸ್ ವ್ಯವಸ್ಥೆ ಇಲ್ಲವೇ ಇಲ್ಲಾ. ಸಂಗೀತ ಪರಿಕರಗಳೂ ಒಂದಿದ್ದರೆ ಒಂದಿಲ್ಲಾ. ಇರುವ ಒಂದೇ ಹಾರ್ಮೋನಿಯಂ ಸಹ ಕಳುವಾಗಿ ಹೋಗಿದೆ. ಇನ್ನು ಕಲಾವಿದರು ಸಂಗೀತಾಭ್ಯಾಸ ಮಾಡೋದಾದರೂ ಹೇಗೆ.. ಸಂಗೀತಕ್ಕೆಂದೇ ಇರುವ ಕಲಾವಿದ ಮಾಡೋದಾದರೂ ಏನು? ಏನೇನು ಬೇಸಿಕ್ ಅಗತ್ಯಗಳೇ ಇಲ್ಲವಾಗಿರುವಾಗ ಕ್ರಿಯೇಟಿವ್ ನಿರ್ದೇಶಕ ಬಂದು ಮಾಡುವುದಾದರೂ ಏನಿದೆ?

ಕನಿಷ್ಟ ಅಗತ್ಯಗಳನ್ನಾದರೂ ಒದಗಿಸಿ ಕೊಡಿ ಎಂದು ಕಲಾವಿದರು ಆಡಳಿತಾಧಿಕಾರಿಯನ್ನು ಅಂಗಲಾಚಿ ಕೇಳಿದರೆ "ಇರೋದನ್ನೇ ಬಳಸಿ ಇಲ್ಲವಾದರೆ ಸುಮ್ಮನೇ ಕೂಡಿ.." ಎನ್ನುವ ಅಹಂಕಾರದ ಉತ್ತರ ಬರುತ್ತದೆ. ಒಂದೇ ಒಂದು ಹಾಳೆ ಬೇಕಾದರೂ ಇನ್ನೊಂದು ಹಾಳೆಯಲ್ಲಿ ಬರೆದುಕೊಡಬೇಕಂತೆ. ಮೇಲೆ ಕಲಾವಿದರು ದ್ವನಿ ಅಭ್ಯಾಸ ಮಾಡುತ್ತಿದ್ದರೆ ಆಡಳಿತಾಧಿಕಾರಿಗೆ ಕಿರಿಕಿರಿಯಾಗುತ್ತಂತೆ. ಕಲೆಯ ಗಂಧ ಗಾಳಿ ಗೊತ್ತಿಲ್ಲದ ಈ ದತ್ತಪ್ಪ ಎನ್ನವ ಸಂಸ್ಕೃತಿ ಇಲಾಖೆಯ  ಸಹ ನಿರ್ದೇಶಕ ಕಮ್ ರಂಗಾಯಣದ ಪಾರ್ಟ ಟೈಂ ಆಡಳಿತಾಧಿಕಾರಿ ದತ್ತಪ್ಪ ಕಲಾವಿದರೊಂದಿಗೆ ಅಸಹಕಾರ ಚಳುವಳಿಯನ್ನೇ ಆರಂಭಿಸಿದಂತಿದೆ. ಕಲಾವಿದರು ಎಂದರೆ ಕೂಲಿಯವರು ಎಂದು ತಿಳಿದಂತಿದೆ. ಕನಿಷ್ಟ ಅಗತ್ಯಗಳನ್ನೂ ಒದಗಿಸದೇ ರಂಗಾಯಣವನ್ನು ನಿಷ್ಕ್ರೀಯಗೊಳಿಸಲು ಶಪಥ ಮಾಡಿದಂತಿದೆ. ರಂಗಾಯಣದ ವಿರೋಧಿ ಶಕ್ತಿಗಳ ಜೊತೆಗೆ ಶಾಮೀಲಾದಂತಿದೆ. ಇಂತಹ ಅವಿವೇಕಿ ಅಹಂಕಾರಿ ಕಲಾವಿರೋಧಿ ಆಡಳಿತಾಧಿಕಾರಿಯನ್ನು ಇಟ್ಟುಕೊಂಡು ಅದ್ಯಾವ ಕಲಾವಿದರು ತಾನೇ ನಾಟಕ ಮಾಡಲು ಸಾಧ್ಯ? ಅದೆಂತಾ ನಿರ್ದೇಶಕರು ತಾನೆ ನಾಟಕಗಳನ್ನು ಕಟ್ಟಲು ಸಾಧ್ಯ? ಅದು ಹೇಗೆ ಈ ಕಲಾವಿದರು ಹಾಗೂ ನಿರ್ದೇಶಕರು ಸೇರಿ ರಂಗಾಯಣವನ್ನು ಉಳಿಸಿ ಬೆಳೆಸಲು ಸಾಧ್ಯ?

ಕಲಬುರಗಿ ರಂಗಾಯಣದ ಹಾಲಿ ನಿರ್ದೇಶಕ  ಮಹೇಶ್ ಪಾಟೀಲ್
ಇಷ್ಟೆಲ್ಲಾ ಅನಾನೂಕಲತೆಗಳ ನಡುವೆಯೇ ರಂಗಾಯಣದ ನಿರ್ದೇಶಕರಾದ ಮಹೇಶ ಪಾಟೀಲರು ತಮ್ಮ ಪ್ರಯತ್ನವನ್ನು ನಿಲ್ಲಿಸಿಲ್ಲ. ಅನಾರೋಗ್ಯಪೀಡಿತರಾದ ಕಲಾವಿದರುಗಳನ್ನು ತಮ್ಮದೇ ಕಾರಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಿಲ್ ಕೂಡಾ ಕೊಡುತ್ತಿದ್ದಾರೆ. ಕನಿಷ್ಟ ಅನುಕೂಲತೆಗಳನ್ನು ಪಡೆಯಲು ಆಡಳಿತಾಧಿಕಾರಿಗಳ ಜೊತೆಗೆ ಅನಿವಾರ್ಯವಾಗಿ ಸಂಘರ್ಷಕ್ಕಿಳಿದಿದ್ದಾರೆ. ದತ್ತಪ್ಪನಂತಹ ಪಾರ್ಟ ಟೈಂ ಆಡಳಿತಾಧಿಕಾರಿ ನಮಗೆ ಬೇಕಾಗಿಲ್ಲಾ.. "ಕಲೆಗೆ ಪ್ರೋತ್ಸಾಹ ಕೊಡುವ, ಕಲಾವಿದರುಗಳಿಗೆ ಗೌರವ ಕೊಡುವಂತಹ ಆಡಳಿತಾಧಿಕಾರಿಗಳನ್ನು ನಮಗೆ ಕೊಡಿ" ಎಂದು ಪಾಟೀಲರು ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ರಂಗಸಮಾಜದ ಸದಸ್ಯರುಗಳ ಮುಂದೆ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ. ಆದರೆ.. ಇಲ್ಲಿವರೆಗೂ ಅಲ್ಲಿ ಯಾವ ಸಕಾರಾತ್ಮಕ ಬದಲಾವಣೆಗಳೂ ಆಗಿಲ್ಲಾ.. ಕಲಾವಿದರ ಗೋಳು ತಪ್ಪಿಲ್ಲಾ. ಹೀಗೆಯೇ ಆದರೆ ಮತ್ತೆ ರಂಗಾಯಣ ಕಲಬುರುಗಿ ಜನರ ಬಾಯಿಗೆ ಎಲೆ ಅಡಿಕೆ ಆಗುವುದಂತೂ ತಪ್ಪೊದಿಲ್ಲ. ಇಂತಹುದಕ್ಕಾಗಿ ಕಾಯುತ್ತಿರುವ ಮಾಧ್ಯಮದವರಿಗೆ ಪುಷ್ಕಳ ಆಹಾರವಾಗುವುದನ್ನೂ ತಪ್ಪಿಸಲಾಗೋದಿಲ್ಲಾ.

ಮಹೇಶ ಪಾಟೀಲ್‌ರವರು ತುಂಬಾ ಕ್ರಿಯಾಶೀಲ ವ್ಯಕ್ತಿ ಎನ್ನುವುದರಲ್ಲಿ ಸಂದೇಹವಿಲ್ಲಾ. ರಾಷ್ಟ್ರೀಯ ರಂಗಶಾಲೆ ಎನ್‌ಎಸ್‌ಡಿಯಲ್ಲಿ ತರಬೇತಿ ಪಡೆದು ಬಾಂಬೆ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ತೊಡಗಿಸಿಕೊಂಡವರು. ರಾಷ್ಟ್ರೀಯ ರಂಗಭೂಮಿಯಲ್ಲಿ ಅನೇಕ ಖ್ಯಾತನಾಮರ ಜೊತೆಗೆ ಕೆಲಸ ಮಾಡಿದವರು. ಪಾದರಸದಂತಾ ವ್ಯಕ್ತಿತ್ವ. ಹೊಸ ಹೊಸ ಆಲೋಚನೆಗಳಿವೆ. ಏನಾದರೂ ಮಾಡಬೇಕೆಂಬ ಅದಮ್ಯ ತುಡಿತವೂ ಇದೆ. ಆದರೆ.. ಅವರ ಆಲೋಚನೆಗಳ ಬೀಜ ಮೊಳೆತು ಬೆಳೆಯಾಗಿ ಮರವಾಗಿ ಫಲಕೊಡುವಂತಹ ವಾತಾವರಣದ ಅಗತ್ಯವಿದೆ. ಆದರೆ ಅಲ್ಲಿ ರಂಗಾಯಣದಲ್ಲಿ ಸಧ್ಯಕ್ಕಂತೂ ಅವರನ್ನು ನಿರುತ್ಸಾಹ ಗೊಳಿಸುವಂತಹ ದೃಶ್ಯಗಳೇ  ಗೋಚರಿಸುತ್ತಿವೆ. ಈ  ಮೊದಲು ರಂಗಾಯಣದಲ್ಲಿ ಕಲಾವಿದರು ಹಾಗೂ ನಿರ್ದೇಶಕರ ನಡುವೆ ಸಂಘರ್ಷ ತೀವ್ರಗೊಂಡು ರಂಗಾಯಣ ಒಡೆದ ಮನೆಯಾಗಿತ್ತು. ಆಗ ಆಡಳಿತಾಧಿಕಾರಿಗಳು ನಿರ್ಲಿಪ್ತರಾಗಿದ್ದರು.  ಈಗ ಕಲಾವಿದರು ಹಾಗೂ ನಿರ್ದೇಶಕರ ನಡುವೆ ಉತ್ತಮ ಬಾಂಧವ್ಯ ಇದೆ. ಈ ಎರಡೂ ವಲಯದಲ್ಲೂ ಏನನ್ನಾದರೂ ಮಾಡಿ ತೋರಿಸುವ ಆಸಕ್ತಿ ಇದೆ. ಆದರೆ ಆಡಳಿತವು ಖಳನಾಯಕನ ಪಾತ್ರ ವಹಿಸುತ್ತಿದೆ. ರಂಗಚಟುವಟಿಕೆಗಳು ಸೂಸೂತ್ರವಾಗಿ ನಡೆಯದಂತೆ ಅಡ್ಡಗಾಲು ಹಾಕುತ್ತಿದೆ.

ರಂಗಾಯಣದ ಕಲಾವಿದರು ಹಾಗೂ ತಂತ್ರಜ್ಞರು
ಕಲಾವಿದರು ಹಾಗೂ ಆಡಳಿತಾಧಿಕಾರಿಗಳ ನಡುವಿನ ಆಂತರಿಕ ಸಂಘರ್ಷವನ್ನು ರಂಗಸಮಾಜದ ಸದಸ್ಯರು ಆರಂಭದಲ್ಲೇ ಶಮನಗೊಳಿಸುವುದು ಉತ್ತಮ. ಈಗಿರುವ ಪ್ರಭಾರೆ ಆಡಳಿತಾಧಿಕಾರಿ ದತ್ತಪ್ಪನವರ ದುರಹಂಕಾರದ ನಡೆ ನುಡಿಗಳು ರಂಗಾಯಣದಂತಹ ಕಲಾ ಸಂಸ್ಥೆಗಳಿಗೆ ಮಾರಕವಾಗಿವೆ. ಮೊದಲು ಈ ಅಧಿಕಾರಿಯನ್ನು ಬದಲಾಯಿಸಿ ರಂಗಾಯಣಕ್ಕೆ ಪೂರ್ಣವಧಿಯ ಕಲಾಪೋಷಕ ಆಡಳಿತಾಧಿಕಾರಿಯನ್ನು ಆದಷ್ಟು ಬೇಗ ಕಳಿಸಿಕೊಡಬೇಕೆಂದು ರಂಗಸಮಾಜದ ಸದಸ್ಯರುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರನ್ನು ಹಾಗೂ ಸಚಿವೆಯವರನ್ನು ಒತ್ತಾಯಿಸಬೇಕಾಗಿದೆ. ಹಾಗೆಯೇ ಈ ಹಿಂದೆ ಕಲಬುರಗಿ ರಂಗಾಯಣದಲ್ಲಿ ಆದ ಅವಘಡಗಳಿಂದ ಪಾಠ ಕಲಿತು ರಂಗಾಯಣದ ಸಮಗ್ರ  ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಿ ಸಂಸ್ಕೃತಿ ಇಲಾಖೆ ಸ್ಪಂದಿಸಬೇಕಾಗಿದೆ. ಸಮಸ್ಯೆಗಳು ಉಲ್ಬಣಗೊಂಡಾಗ ಎಚ್ಚೆತ್ತುಕೊಳ್ಳುವ ಬದಲು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಈ ಕೂಡಲೇ ಮುತುವರ್ಜಿ ವಹಿಸಿ ಕಲಬುರಗಿ ರಂಗಾಯಣಕ್ಕೆ ಒಬ್ಬ ಸಮರ್ಥ ಹಾಗೂ ಕಲಾಭಿರುಚಿ ಇರುವ ಆಡಳಿತಾಧಿಕಾರಿಗಳನ್ನು ನಿಯಮಿಸಲು ಅಧಿಕಾರಿಗಳಿಗೆ ಆದೇಶಿಸಬೇಕಿದೆ. ಹಾಗೂ ರಂಗಾಯಣದ ಕಲಾವಿದರುಗಳಿಗೆ ಅಗತ್ಯ ಅನುಕೂಲತೆಗಳನ್ನು ಒದಗಿಸಲು ಮತ್ತು ನಾಟಕಗಳನ್ನು ಕಟ್ಟಲು ಬೇಕಾದ ಪರಿಕರಗಳನ್ನು ಕೊಳ್ಳಲು ಮೊದಲ ಆದ್ಯತೆಯನ್ನು ಕೊಡಬೇಕಿದೆ. ಇಲ್ಲವಾದರೆ ರಂಗಾಯಣ ಸಾವಕಾಶವಾಗಿ ನಿಷ್ಕ್ರೀಯವಾಗುತ್ತದೆ. ಸರಕಾರದ ಹಣ ಅನಗತ್ಯವಾಗಿ ಪೋಲಾಗುತ್ತದೆ. ರಂಗದಿಗ್ಗಜ ಬಿ.ವಿ.ಕಾರಂತರು ಕಂಡ ಕನಸುಗಳು ನನಸಾಗದೆ ಸರ್ವನಾಶವಾಗುತ್ತದೆ.

ಸಂಸ್ಕೃತಿ ಇಲಾಖೆಯು ತಕ್ಷಣಕ್ಕೆ ರಂಗಾಯಣಕ್ಕೆ ಮಾಡಿಕೊಡಬೇಕಾದ ಅನುಕೂಲತೆಗಳು ಹಾಗೂ ಅದಕ್ಕಾಗಿ  ರಂಗಸಮಾಜ ಒತ್ತಾಯಿಸಲೇಬೇಕಾದ ವಿಷಯಗಳು ಹೀಗಿವೆ.  
  • · ಕುಡಿಯುವ ನೀರಿನ ಪ್ಯೂರಿಪಾಯರ್‌ನ್ನು ಈ ಕೂಡಲೇ ರಂಗಾಯಣದೊಳಗೆ ಅಳವಡಿಸಿ ಕಲಾವಿದರುಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. 
  • ·  ಶೌಚಾಲಯಗಳ ಒಳ ಚಿಲುಕಗಳನ್ನು ಸರಿಪಡಿಸಿ, ದಿನನಿತ್ಯ ಸ್ವಚ್ಚಗೊಳಿಸಲು ಕಾರ್ಮಿಕರನ್ನು ನಿಯಮಿಸಿ, ನಿರಂತರ ನೀರು ಸರಬರಾಜಾಗುವಂತೆ ನೋಡಿಕೊಳ್ಳಬೇಕು.
  • ·ಮೊದಲ ಮಹಡಿಯ ತಾಲಿಂ ಕೊಠಡಿಯಲ್ಲಿ ಒಡೆದು ಹೋಗಿರುವ ಕಿಟಕಿಯ ಗಾಜುಗಳನ್ನೆಲ್ಲಾ ತಡಮಾಡದೇ ಸರಿಪಡಿಸಬೇಕು ಹಾಗೂ ಕಿತ್ತು ಗುಂಡಿ ಬಿದ್ದ ನೆಲಹಾಸಿನಲ್ಲಿ ಹೊಸ ಟೈಲ್ಸ್‌ಗಳನ್ನು ಅಳವಡಿಸಿ ಕಲಾವಿದರ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.
  • · ಬಣ್ಣ ಮಾಸಿಹೋದ ರಂಗಾಯಣದ ಸಮುಚ್ಚಯಕ್ಕೆ ಹೊಸದಾಗಿ ಪೇಂಟಿಂಗ್ ಮಾಡಿಸಿ ಆಕರ್ಷಕವಾಗಿ ಕಾಣುವಂತೆ ಕ್ರಮಕೈಗೊಳ್ಳಬೇಕು ಹಾಗೂ ಕಲಾತ್ಮಕ ಚಿತ್ರಗಳನ್ನು ಅಗತ್ಯವಿದ್ದಲ್ಲಿ ಚಿತ್ರಿಸಿ ಅಲ್ಲಿ ಕಲಾತ್ಮಕ ವಾತಾವರಣವನ್ನು ನಿರ್ಮಿಸಬೇಕು..
  • · ಕಲಾವಿದರಿಗೆ ಬೇಕಾಗುವಷ್ಟು ಪೇಪರ್ ಪೆನ್ನು ಹಾಗೂ ಇತರೇ ಅತೀ ಅಗತ್ಯದ ತರಬೇತಿಗೆ ಪೂರಕ ವಸ್ತುಗಳನ್ನು ಕೇಳಿದಾಗಲೆಲ್ಲಾ ಮರು ಪ್ರಶ್ನೆ ಕೇಳದೇ ಒದಗಿಸುವ ವ್ಯವಸ್ಥೆ ಆಗಬೇಕು.
  • ·ಯಾವುದೇ ಕಾರಣಕ್ಕೂ ಆಡಳಿತಾಧಿಕಾರಗಳೇ ಆಗಲಿ ಇಲ್ಲವೇ ಕಛೇರಿಯ ಸಿಬ್ಬಂದಿಯೇ ಆಗಲಿ ಕಲಾವಿದರ ಜೊತೆಗೆ ಯಾವುದೇ ರೀತಿಯಲ್ಲಿ ನೇರವಾಗಿ ವ್ಯವಹರಿಸದೇ ನಿರ್ದೇಶಕರ ಮೂಲಕವೇ ಸಲಹೆ ಸೂಚನೆಗಳನ್ನು ಕೊಡಸುವಂತಾಗಬೇಕು. ಹಾಗೂ ಕಲಾವಿದರೂ ಸಹ ಏನೇ ಅನುಕೂಲತೆಗಳು ಬೇಕಾದರೂ ನಿರ್ದೇಶಕರ ಮೂಲಕವೇ ಪಡೆಯುವಂತೆ ಮೌಖಿಕ ಆದೇಶವಾದರೂ ಆಗಬೇಕು.
  • ·ಮೈಸೂರು ರಂಗಾಯಣದ ಕಲಾವಿದರುಗಳಿಗೆ ಮೆಡಿಕಲ್ ಅಲಾವನ್ಸ್ ಕೊಡವ ಹಾಗೆ ರಂಗಾಯಣದ ಕಲಾವಿದರುಗಳ ವೈದ್ಯಕೀಯ ಖರ್ಚುವೆಚ್ಚವನ್ನು ಇಲಾಖೆಯೇ ಭರಿಸುವಂತಾಗಬೇಕು ಹಾಗೂ ಕಲಾವಿದರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿಯೂ ಆಗಿದೆ. 
  • ·ರಂಗಾಯಣದ ಸುತ್ತಮುತ್ತಲೂ ವಿಪರೀತ ಕಸದ ಗಿಡಗಳು ಬೆಳೆದು ಸೊಳ್ಳೆಗಳ ಕಾಟ ಅತಿಯಾಗಿದೆ. ಕಲಾವಿದರುಗಳಿಗೆ ಸೊಳ್ಳೆಗಳಿಂದ ಬರುವ ಎಲ್ಲಾ ಖಯಿಲೆಗಳೂ ಬರುವ ಸಾಧ್ಯತೆಗಳಿವೆ. ಹೀಗಾಗಿ ರಂಗಾಯಣದ ಪರಿಸರವನ್ನು ಕಸಮುಕ್ತವಾಗಿಸಿ ಅಲ್ಲಿ ಅಂದವಾದ ಗಾರ್ಡನ್ ಬೆಳೆಸಲು ಇಲಾಖೆ ಪ್ರಯತ್ನಿಸಬೇಕು.
  • · ಅಗತ್ಯ ರಂಗಪರಿಕರಗಳಿಲ್ಲದೇ ಯಾವ ನಾಟಕಗಳನ್ನೂ ಕಟ್ಟಲು ಸಾಧ್ಯವಿಲ್ಲವಾದ್ದರಿಂದ ಈ ಕೂಡಲೇ ಸೆಟ್ ನಿರ್ಮಾಣಕ್ಕೆ ಬೇಕಾದ ಬೇಸಿಕ್ ಟೂಲ್ಸ್‌ಗಳನ್ನು ಒದಗಿಸಬೇಕು. ರಂಗಸಜ್ಜಿಕೆಗೆ ಬೇಕಾದ ಮೂಲ ವಸ್ತುಗಳನ್ನು ಕೊಂಡುಕೊಡಬೇಕು.
  • ·ಬೆಳಕಿನ ವಿನ್ಯಾಸ ಮಾಡಲು ಅಗತ್ಯವಾದ ಲೈಟಿಂಗ್ಸ್ ಹಾಗೂ ಅದಕ್ಕೆ ಪೂರಕವಾದ ಅಸಸ್ಸೆರಿಗಳನ್ನು ಇಲಾಖೆ ಕೊಂಡು ಒದಗಿಸಬೇಕು. ಹಾಗೂ ಕರೆಂಟ್ ಇಲ್ಲದಾಗ ಉಪಯೋಗಿಸಬಹುದಾದ ಇನ್ವರ್ಟರ್, ಯುಪಿಎಸ್ ಹಾಗೂ ಜನರೇಟರ್‌ಗಳನ್ನು ಅಳವಡಿಸಿ ನಾಟಕ ಕಟ್ಟುವ ಕೆಲಸ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.
  • ·ಅಗತ್ಯವಾದ ಸಂಗೀತದ ಪರಿಕರಗಳನ್ನು ಎರಡೆರಡು ಸೆಟ್ ಕೊಂಡುಕೊಡಬೇಕು. ಉತ್ಕೃಷ್ಟವಾದ ಮೈಕ್ ಹಾಗೂ ಸೌಂಡ್ ಸಿಸ್ಟಂಗಳನ್ನು ಒದಗಿಸಿಕೊಡಬೇಕು.  ಕಲಬುರಗಿಯಲ್ಲಿ ನಾಟಕಕ್ಕೆ ಬೇಕಾದ ಲೈಟ್ಸ ಮತ್ತು ಸೌಂಡ್ ಸಿಸ್ಟಂಗಳು ಬಾಡಿಗೆಗೂ ದೊರಕುವುದಿಲ್ಲ. ರಂಗಾಯಣದ ಹೊರಗೆ ನಾಟಕ ಮಾಡುವಾಗ ಬೇಕಾಗುವ ಎಲ್ಲಾ ರಂಗಪರಿಕರಗಳೂ ರಂಗಾಯಣದೊಳಗೆ ಇರುವಂತೆ ನೋಡಿಕೊಳ್ಳಬೇಕು.
  • ·   ಸಾಧ್ಯವಾದರೆ ಒಂದು ಮಿನಿಬಸ್‌ನ್ನು  ಒದಗಿಸಿ ರಂಗಾಯಣದ ನಾಟಕಗಳು ರೆಪರ್ಟರಿ ರೂಪದಲ್ಲಿ ನಾಡಿನಾದ್ಯಂತ ಪ್ರದರ್ಶನಗೊಳ್ಳಲು ಅನುಕೂಲವಾಗುವಂತೆ ಮಾಡಬೇಕು.
  • ಕಲಾವಿದರುಗಳಿಗೆ ತಾಲಿಂ ಮಾಡುವಾಗ ಹಾಗೂ ತರಬೇತಿಯಲ್ಲಿರುವಾಗ ಧರಿಸಲು ಬೇಕಾದ ಸಡಿಲವಾದ ಉಡುಪುಗಳನ್ನು ಇಲಾಖೆಯೇ ಒದಗಿಸಿಕೊಡಬೇಕು.
  •  ಕಲಾವಿದರ ಬಗ್ಗೆ, ನಾಟಕದ ನಿರ್ಮಿತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಅಧಿಕಾರವನ್ನೂ ರಂಗಾಯಣದ ನಿರ್ದೇಶಕರ ವಿವೇಚನೆಗೆ ಬಿಡಬೇಕು ಹಾಗೂ ಆಡಳಿತಾಧಿಕಾರಿಗಳು ಯಾವುದಕ್ಕೂ ನಡುವೆ ಮೂಗು ತೂರಿಸದಂತೆ ಆದೇಶಿಸಬೇಕು. ಆಡಳಿತಾಧಿಕಾರಿಗಳ ಕೆಲಸ ಸರಕಾರದ ಹಣ ಉದ್ದೇಶಿತ ಕೆಲಸಕ್ಕೆ ವ್ಯಯವಾಗುತ್ತದೋ ಇಲ್ಲವೋ ಎಂದು ಪರಿಶೀಲಿಸಿ ಲೆಕ್ಕಪತ್ರಗಳನ್ನು ಸರಿಯಾಗಿ ಇಡುವುದು ಮಾತ್ರವೇ ಹೊರತು ನಾಟಕ ನಿರ್ಮಿತಿಯಲ್ಲಿ ಹಸ್ತಕ್ಷೇಪ ಮಾಡುವುದಲ್ಲ ಎನ್ನುವುದನ್ನು ಅವರಿಗೆ ತಿಳಿಸಿ ಹೇಳಬೇಕು. ಅಂಕುಶ ಹಾಕಿದಲ್ಲಿ ಕಲೆ ಅರಳದು ಎಂಬುದರ ಅರಿವೂ ಅಧಿಕಾರಿಗಳಿಗೆ ಇರಬೇಕು. 

ಯುವಕ ಯುವತಿಯರು ರಂಗಕಲೆಯಲ್ಲಿ ಆಸಕ್ತಿ ಇಟ್ಟುಕೊಂಡು ರಂಗಾಯಣ ಕೊಡುವ ಕನಿಷ್ಟ ಸಂಬಳಕ್ಕೆ ಸೇರಿರುತ್ತಾರೆ. ಅವರ ಉತ್ಸಹವನ್ನು ಕುಗ್ಗಿಸುವ ಅಥವಾ ಸ್ವಾಭಿಮಾನಿಯಾದ ಕಲಾವಿದರನ್ನು ಅವಮಾನಿಸುವ ಅತಿರೇಕದ ಕೆಲಸಗಳು ರಂಗಾಯಣದಲ್ಲಿ ನಡೆದರೆ ಒತ್ತಡದ ವಾತಾವರಣದಲ್ಲಿ  ನಾಟಕ ನಿರ್ಮಿತಿ ಅಸಾಧ್ಯವೆಂಬ ಅರಿವು ನಿರ್ದೇಶಕರಿಗೂ ಹಾಗೂ ಆಡಳಿತಾಧಿಕಾರಿಗಳಿಗೂ ಇರಬೇಕಾಗಿದೆ. ಇಲ್ಲವಾದರಲ್ಲಿ ರಂಗಾಯಣಕ್ಕೆ ಮಾರ್ಗದರ್ಶನ ಮಾಡಲೇಂದೇ ಆಯ್ಕೆಗೊಂಡಿರುವ ರಂಗಸಮಾಜದ ಸದಸ್ಯರುಗಳು ಅಲ್ಲಿ ಕಲಾಭಿವ್ಯಕ್ತಿಗೆ ಅನುಕೂಲಕರವಾದ  ವಾತಾವರಣವೊಂದು ಸೃಷ್ಟಿಯಾಗುವಂತೆ ಪರಿಶ್ರಮವಹಿಸಬೇಕು. ಅವರೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಹೋದಲ್ಲಿ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರೇ ರಂಗಾಯಣ ಹಾಗೂ ಅಲ್ಲಿಯ ಚಟುವಟಿಕೆಗಳ ಕುರಿತು ವ್ಯಯಕ್ತಿಕವಾದ ಕಾಳಜಿ ವಹಿಸಿ ಮೇಲೆ ತಿಳಿಸಿದಂತೆ  ರಂಗನಿರ್ಮಿತಿಗೆ ಪೂರಕವಾದ ಕೆಲಸಗಳ ಬಗ್ಗೆ ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಬೇಕು ಇಲ್ಲವೇ ಜವಾಬ್ದಾರಿ ಇರುವ ತಮ್ಮ ಆಡಳಿತಾಧಿಕಾರಿಗಳಿಗೆ ಆ ಹೊಣೆಗಾರಿಕೆಯನ್ನು ವಹಿಸಿಕೊಡಬೇಕು.

ಒಟ್ಟಿನ ಮೇಲೆ ಕಾರಂತರ ಕನಸಿನ ಪ್ರಾದೇಶಿಕ ರಂಗಾಯಣವು ಸಮೃದ್ದವಾಗಿ ಬೆಳೆದು ಆಯಾ ಪ್ರದೇಶದಲ್ಲಿ ರಂಗಕಲೆಯ ಕಂಪನ್ನು ಪಸರಿಸಿಬೇಕಿದೆ. ಅದಕ್ಕೆ ಪೂರಕವಾದ ವಾತಾವರಣವನ್ನು ರಂಗಸಮಾಜ ಹಾಗೂ ಸರಕಾರ ಒದಗಿಸಿಕೊಡಬೇಕಿದೆ. ನಿರ್ದೇಶಕರು ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತಾಧಿಕಾರಿಗಳ ಜೊತೆಗೆ ಉತ್ತಮ ಸಮನ್ವಯವನ್ನು ಸಾಧಿಸಿ ರಂಗಾಯಣವನ್ನು ಉಳಿಸಿ ಬೆಳೆಸಿ ಪೋಷಿಸಬೇಕಿದೆ. ಅದಕ್ಕಾಗಿ ಸಂಸ್ಕೃತಿ ಇಲಾಖೆ, ರಂಗಸಮಾಜ, ಆಡಳಿತಾಧಿಕರಿಗಳು, ರಂಗಾಯಣದ ನಿರ್ದೇಶಕರು ಹಾಗೂ ಎಲ್ಲಾ ಕಲಾವಿದರುಗಳು ಸೌಹಾರ್ಧತೆಯಿಂದಾ ಪರಿಶ್ರಮವಹಿಸಬೇಕಿದೆ. ಒಟ್ಟಿನ ಮೇಲೆ ಸದೃಢವಾದ ರಂಗಾಯಣವನ್ನು ಎಲ್ಲರೂ ಸೇರಿ ಕಟ್ಟಬೇಕಿದೆ. ಕಲಬುರಗಿ ರಂಗಾಯಣವು ಹೈದರಾಬಾದ್ ಕರ್ನಾಟಕದ ಪ್ರಾತಿನಿಧಿಕ ಹೆಮ್ಮೆಯ ರಂಗಸಂಸ್ಥೆಯಾಗಬೇಕಿದೆ.   

-ಶಶಿಕಾಂತ ಯಡಹಳ್ಳಿ  
           



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ