ಮಂಗಳವಾರ, ಜುಲೈ 25, 2017

ರೂಪಕಗಳಲಿ ರೂಪಗೊಂಡ ರಂಗಪ್ರಯೋಗ “ನನ್ನ ಅಂಬೇಡ್ಕರ್” :

ನನ್ನ ಅಂಬೇಡ್ಕರ್; ಮುಕ್ಕಾಲು ಭಾಗ ನೀರಸ, ಮಿಕ್ಕಿದ್ದು ರೂಪಕದ ವಿನ್ಯಾಸ 



ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 126ನೇ ವರ್ಷದ ಸ್ಮರಣೆಗಾಗಿ ಕರ್ನಾಟಕ ಸರಕಾರ ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದ್ದು ಅದರ ಭಾಗವಾಗಿ ಜುಲೈ 19 ರಂದ 24ರ ವರೆಗೆ ವಸಂತನಗರದ ಗುರುನಾನಕ ಭವನದಲ್ಲಿ ಅಂಬೇಡ್ಕರ್ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಅಂಬೇಡ್ಕರ್‌ರವರ ಬದುಕು ಸಾಧನೆ ಹಾಗೂ ಧಮ್ಮಗಳ ಕುರಿತು ಐದು ನಾಟಕಗಳು ಪ್ರದರ್ಶನಗೊಂಡವು. ಕೋಟಿಗಾನಹಳ್ಳಿ ರಾಮಯ್ಯನವರು ರಚಿಸಿದ ನನ್ನ ಅಂಬೇಡ್ಕರ್ ನಾಟಕವನ್ನು ಪ್ರಮೋಧ್ ಶಿಗ್ಗಾಂವ್ ರವರು ನಿರ್ದೇಶಿಸಿದ್ದು ಕೋಲಾರದ ಕಾಪಾಲಿಕ ತಂಡದ ಕಲಾವಿದರು ಜುಲೈ 24ರಂದು ಅಭಿನಯಿಸಿದರು.

ಇದೊಂದು ವಿಭಿನ್ನವಾದ ರೀತಿಯಲ್ಲಿ ಬೌದ್ದಿಕ ನೆಲೆಯಲ್ಲಿ ರೂಪಗೊಂಡ ನಾಟಕ. ರಾಮಯ್ಯನವರು ಅಂಬೇಡ್ಕರರವರನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದನ್ನು ನನ್ನ ಅಂಬೇಡ್ಕರ್ನಲ್ಲಿ ನೋಡಬಹುದು. ಅಂಬೇಡ್ಕರ್ ಎನ್ನುವ ಜ್ಞಾನ ಸಾಗರವನ್ನು ಒಂದು ನಾಟಕದಲ್ಲಿ ಹಿಡಿದಿಡಲಂತೂ ಸಾಧ್ಯವಿಲ್ಲಾ. ಅವರವರಿಗೆ ಸಿಕ್ಕಿದಷ್ಟು.. ದಕ್ಕಿಸಿಕೊಂಡಷ್ಟು ಅಂಬೇಡ್ಕರ್‌ರವರನ್ನು ನಾಟಕವಾಗಿಸುವ ಪ್ರಯತ್ನವನ್ನು ಹಲವಾರು ಕ್ರಿಯಾಶೀಲ ನಾಟಕಕಾರರು ಮಾಡುತ್ತಲೇ ಬಂದಿದ್ದಾರೆ. ವ್ಯಕ್ತಿಯೊಬ್ಬರ ಬದುಕು ಹಾಗೂ ಅವರ ಸೈಂದ್ದಾಂತಿಕ ಸಂಘರ್ಷಗಳನ್ನು ಕುರಿತು ನಾಟಕ ಮಾಡುವುದು ಕಷ್ಟಸಾಧ್ಯ. ಅಲ್ಲಿ ಕಥೆಗಿಂತಲೂ ಘಟನೆಗಳ ಜೋಡಣೆಯೇ ಮುಖ್ಯವಾಗಿರುತ್ತದೆ. ಒಂದು ರೀತಿಯಲ್ಲಿ ಸಾಕ್ಷ್ಯಚಿತ್ರದ ಮಾದರಿಯಲ್ಲಿ ನಾಟಕವನ್ನು ಕಟ್ಟಿಕೊಡಬಹುದಾಗಿದೆ. ನನ್ನ ಅಂಬೇಡ್ಕರ್ ಸಹ ಅದೇ ರೀತಿಯಲ್ಲಿ ಅಂಬೇಡ್ಕರ್‌ರವರ ಬದುಕಿನ ಕೆಲವಾರು ಘಟನೆಗಳನ್ನು ಜೋಡಿಸಿ ದೃಶ್ಯಗಳ ರೂಪದಲ್ಲಿ ಕಟ್ಟಿಕೊಟ್ಟಿದೆ.

ಆದರೆ.. ಹಾಗೆ ದೃಶ್ಯಗಳನ್ನು ಜೋಡಿಸುವಾಗ ಕ್ರಮಬದ್ದತೆಯಾಗಲೀ ಇಲ್ಲವೇ ಒಂದು ದೃಶ್ಯಕ್ಕೆ ಇನ್ನೊಂದು ದೃಶ್ಯ ಪೂರಕವಾಗಿ ಬೆಳೆಯುವ ರೀತಿಯಾಗಲಿ ಈ ನಾಟಕದಲ್ಲಿ ಹುಡುಕಿದರೂ ಸಿಕ್ಕುವುದಿಲ್ಲಾ. ದೃಶ್ಯಗಳು ನಾಟಕಕಾರ ಹಾಗೂ ನಿರ್ದೇಶಕರ ಚಿತ್ತ ಬಂದಂತೆ ಮೂಡಿಬಂದಿವೆ. ಇಡೀ ನಾಟಕವನ್ನು ಅಸಂಗತ ಮಾದರಿಯಲ್ಲಿ ಕೊಲ್ಯಾಜ್ ರೀತಿಯಲ್ಲಿ ಕಟ್ಟುವ ವಿಶಿಷ್ಟ ಪ್ರಯತ್ನ ಮಾಡಲಾಗಿದೆ. ಇಲ್ಲಿ ಪಾತ್ರಗಳು ಕಾಲಾತೀತವಾಗಿ ಮೂಡಿಬರುತ್ತವೆ. ಅಂಬೇಡ್ಕರ್‌ರವರನ್ನು ಆವಾಹಿಸಿಕೊಂಡು ತಾವು ಅನುಭವಿಸಿದ ಹಳವಂಡಗಳನ್ನು ರಾಮಯ್ಯನವರು ನಾಟಕವಾಗಿಸಿದ್ದಾರೆ. ಜನಸಾಮಾನ್ಯ ಪ್ರೇಕ್ಷಕರಿಗಂತೂ ಅರ್ಥವಾಗದ ನೆಲೆಯಲ್ಲಿ ಮೂಡಿಬರುವ ಈ ನಾಟಕವು ಅಂಬೇಡ್ಕರ್ ಕುರಿತು ಒಂದಿಷ್ಟು ಓದಿಕೊಂಡವರಿಗೆ ಹಾಗೂ ನಾಟಕದ ತಂತ್ರಗಾರಿಕೆಗಳ ಬಗ್ಗೆ ಅರಿವಿರುವವರಿಗೆ ಆಪ್ಯಾಯಮಾನವಾಗುವುದರಲ್ಲಿ ಸಂದೇಹವಿಲ್ಲಾ. 

ಅಂಬೇಡ್ಕರ್‌ರವರ ಜನುಮ ದಿನಾಚರಣೆಯ ಮೆರವಣಿಗೆ ಹಾಗೂ ಅವರ ಪುತ್ತಳಿಗೆ ನಾಯಕನೊಬ್ಬ ಹಾರ ಹಾಕುವುದನ್ನು ಅಂಬೇಡ್ಕರವರು ವೀಕ್ಷಿಸುವ ಮೂಲಕ ನಾಟಕ ಆರಂಭವಾಗುತ್ತದೆ. ತದನಂತರ ಅವರ ಜನುಮ ದಿನದಂದು ಮೆತ್ತಗೆ ಬಂದು ಹೂ ಕೊಡುವ ಪೌರಕಾರ್ಮಿಕರು, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಅನಾಮಿಕ ಆಧುನಿಕ ಪಾತ್ರ. ಜೊತೆಗೆ ಸ್ವತಃ ಜ್ಯೋತಿಬಾ ಪುಲೆಯವರೇ ಅವತರಿಸುವುದು, ತದನಂತರ ರಮಾಬಾಯಿಯವರ ಛಾಯೆಯೇ ಪಾತ್ರವಾಗಿ ಪ್ರವಹಿಸಿ ಪತ್ರಗಳನ್ನು ಓದುವುದು.. ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಹಲವಾರು ಅಸಂಗತ ದೃಶ್ಯಗಳು ಹಾಗೂ ಕಾಲಾತೀತ ಪಾತ್ರಗಳು ರಂಗವೇದಿಕೆಯಲ್ಲಿ ತರ್ಕಾತೀತ ನೆಲೆಯಲ್ಲಿ ಪ್ರತ್ಯಕ್ಷವಾಗುತ್ತವೆ. ಪ್ರೇಕ್ಷಕರ ಮೆದುಳಿಗೆ ಕೈಹಾಕಿ ಗೊಂದಲ ಗೋಜಲುಗಳನ್ನುಂಟುಮಾಡುತ್ತವೆ. ಇದ್ದಕ್ಕಿದ್ದಂತೆ ಅಂಬೇಡ್ಕರ್‌ರವರ ಬಾಲ್ಯದ ಕೆಲವು ನೆನಪುಗಳು, ಬರೋಡದಲ್ಲಿ ಇರಲು ಜಾಗ ಸಿಗದೇ ಸುಳ್ಳು ಹೇಳಿ ಪಾರ್ಸಿ ನಿವಾಸದಲ್ಲಿದ್ದು ಹೊರಹಾಕಿಸಿಕೊಂಡ ದೃಶ್ಯಗಳು ಅಚಾನಕ್ಕಾಗಿ ಬಂದು ಹೋಗುತ್ತವೆ. ನಾಟಕಗಳಿಗೆ ರೂಪಕತೆ ಇರಬೇಕು ಆದರೆ ಅವು ಪ್ರೇಕ್ಷಕರನ್ನು ಗೊಂದಲದಲ್ಲಿ ಸಿಕ್ಕಿಸಿ ಪರದಾಡುವಂತೆ ಮಾಡಬಾರದು. ಮುಕ್ಕಾಲು ಭಾಗ ನಾಟಕ ಮಾಡುವುದೂ ಇದನ್ನೇ. ನಾಟಕದ ತಲೆಬುಡ ಅರ್ಥವಾಗದೇ ಇನ್ನೇನು ಪ್ರೇಕ್ಷಕರು ಆಕಳಿಸಿ ಎದ್ದುಹೋಗಬೇಕು ಎನ್ನುವುದರೊಳಗೇ ಗಾಂಧಿ ಪಾತ್ರ ಪ್ರವೇಶಿಸಿದಾಗ ನಾಟಕದ ದಿಕ್ಕೇ ಬದಲಾಗಿ ಹೋಗುತ್ತದೆ. ನಿಜವಾದ ನಾಟಕ ಶುರುವಾಗುವುದೇ ಅಲ್ಲಿಂದಾ.. ನಾಟಕ ಇಡೀಯಾಗಿ ಯಾವುದನ್ನೂ ನೆಟ್ಟಗೆ ಕಟ್ಟಿಕೊಡದೇ ಹೋದರೂ ಬಿಡಿಯಾಗಿ ಕೆಲವು ದೃಶ್ಯಗಳು ಹಾಗೂ ಅದರಲ್ಲಿ ಮೂಡಿಬರುವ ರೂಪಕಾತ್ಮಕ ಮಾರ್ಮಿಕ ಸಂಭಾಷಣೆಗಳು ಪ್ರೇಕ್ಷಕರನ್ನು ಸೆಳೆಯುತ್ತವೆ.

ನಾನೊಬ್ಬ ದಲಿತ ಪ್ರಜ್ಞೆಯ ನಾಟಕಕಾರ.. ನನಗೆ ಅಂಟಿಕೊಂಡ ದಲಿತ ಎನ್ನುವ ಪದದಿಂದ ಅವಮಾನ ಅಭಿಮಾನ ಅನುಕೂಲ ಹಾಗೂ ಅನಾನೂಕೂಲಗಳಾಗಿವೆ.. ಜಾತಿ ಲೇಬಲ್ ಅಂಟಿದ್ದರಿಂದ ನನ್ನ ಪ್ರಜ್ಞೆ ಆಲೋಚನೆ ಬರವಣಿಗೆ ಕ್ರಿಯೆ ಎಲ್ಲವೂ ಒಂದು ನಿರ್ದಿಷ್ಟ ನಿರ್ದೇಶನ ಹಾಗೂ ನಿರ್ಬಂಧಕ್ಕೆ ಒಳಪಟ್ಟಿದೆ, ಇಂತಹ ಸಂಕಟ ಹಾಗೂ ಗೊಂದಲದ ನಡುವೆ ಬಾಬಾಸಾಹೇಬರ ಮೇಲೆ ನಾಟಕ ಬರೆದಿದ್ದೇನೆ... ನನ್ನ ಅಂಬೇಡ್ಕರ್ ಬೇರೆಯದೇ ಅಂಬೇಡ್ಕರ್.. ಎಂದು ನಾಟಕಕಾರ ರಾಮಯ್ಯನವರೆ ತಮ್ಮದೇ ಪಾತ್ರವನ್ನು ಸೃಷ್ಟಿಮಾಡಿ ಆತ್ಮನಿವೇದನೆ ಮಾಡಿಕೊಳ್ಳುತ್ತಾ ತಮ್ಮ ಮಿತಿ ಹಾಗೂ ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತಾರೆ. ಇದು ತಾನು ಕಂಡ ಅಂಬೇಡ್ಕರ್ ಎಂದು ಹೇಳಿ ಪ್ರೇಕ್ಷಕರ ನಿರೀಕ್ಷಣಾ ಜಾಮೀನು ಪಡೆದೇ ನಾಟಕವನ್ನು ಆರಂಭಿಸುತ್ತಾರೆ. ನಾಟಕದಿಂದ ಹುಟ್ಟಿಕೊಳ್ಳಬಹುದಾದ ವಾದವಿವಾದಗಳಿಗೆ ಸಮರ್ಥನೆ ಕೊಡುತ್ತಾರೆ. ಇದೊಂದು ಪ್ರಯೋಗಶೀಲ ನಾಟಕ. ಪ್ರಯೋಗ ಹೌದೋ ಅಲ್ಲವೋ ಗೊತ್ತಿಲ್ಲಾ ಆದರೆ ಶೀಲ ಅಂತೂ ಇದ್ದೇ ಇರುತ್ತದೆ.. ಎಂದು ನಾಟಕಕಾರನ ಪಾತ್ರ ಹೇಳಿದ್ದು ನಾಟಕದಾದ್ಯಂತ ಸತ್ಯವಾಗಿದೆ. ಪ್ರಯೋಗ ಫೇಲಾದರೂ ಶೀಲ ಪಾಸಾಗಿದೆ. ಅಂಬೇಡ್ಕರ್ ಕುರಿತ ಕೆಲವು ವಿಚಾರಗಳು ಆಗಾಗ ಮನಮುಟ್ಟುತ್ತವೆ.
  
ಇವರಿಗೆ ನಾನಾಗಲೀ ನನ್ನ ಆಲೋಚನೆಗಳಾಗಲೀ ಬೇಕಾಗಿಲ್ಲಾ. ನನ್ನ ಹೆಸರೊಂದಿದ್ದರೆ ಸಾಕು. ಈ ಹೆಸರಿನ ಹಿಂದೆ ನಡೆದು ಬಂದ ವಿಸ್ತಾರವಾದ ಚರಿತ್ರೆಯ ಹೆಜ್ಜೆಗಳು ಇದ್ದಾವೆಂಬ ಅರಿವೂ ಇವರಿಗಿಲ್ಲಾ.. ನನ್ನ ವಿಚಾರಗಳನ್ನು ಅರ್ಥಮಾಡಿಕೊಳ್ಳುವ ಪೀಳಿಗೆ ಬಂದೇ ಬರುತ್ತದೆಂಬ ಭರವಸೆ ನಂದು.. ಎಂದು ಈ ನಾಟಕದ ಅಂಬೇಡ್ಕರ್ ಬೇಸರ ಹಾಗೂ ಭರವಸೆಯನ್ನು  ವ್ಯಕ್ತಪಡಿಸುತ್ತಾರೆ. ಇದು ಸತ್ಯವೂ ಸಹ. ಈಗ ಅಂಬೇಡ್ಕರ್ ಹೆಸರು ಅವರ ವಿಚಾರಗಳಿಗಿಂತಾ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಅಂಬೇಡ್ಕರ್‌ರವರನ್ನು ಶತಾಯ ಗತಾಯ ವಿರೋಧಿಸಿ ಅವರನ್ನು ಕಾನೂನು ಮಂತ್ರಿ ಸ್ಥಾನದಿಂದ ರಾಜೀನಾಮೆಕೊಡುವಂತೆ ಮಾಡಿ, ಚುನಾವಣೆಯಲ್ಲಿ ಸೋಲಿಸಿ ಅವಮಾನಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅಂಬೇಡ್ಕರ್ ಹೆಸರು ಮತಗಳಿಕೆಗೆ ಬೇಕಾಗಿದೆ. ಬಾಬಾಸಾಹೇಬರ ವಿಚಾರಗಳು ಎಲ್ಲಿ ತಮ್ಮ ವೈದಿಕಶಾಹಿ ಮನುವಾದಿ ಬೇರುಗಳನ್ನು ಸಡಿಲಗೊಳಿಸುತ್ತವೋ ಎಂದು ವಿರೋಧಿಸುತ್ತಲೇ ಬಂದಿದ್ದ ಬಲಪಂಥೀಯ ಸಂಘಪರಿವಾರವೂ ಸಹ ಇಂದು ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ದಲಿತ ಸಮುದಾಯವನ್ನು ಮರಳು ಮಾಡುತ್ತಿದೆ. ಅಷ್ಟೇ ಯಾಕೆ ಸ್ವತಃ ದಲಿತ ಸಮುದಾಯದ ನಾಯಕರುಗಳೇ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗೆ ಬದ್ಧರಾಗಿದ್ದಾರೆ. ಯಾವಾಗ ಅಂಬೇಡ್ಕರ್ ಹೆಸರು ಓಟು ಗಳಿಸಲು ಹಾಗೂ ಅಧಿಕಾರ ಪಡೆಯಲು ಮತ್ತು ವ್ಯವಸ್ಥೆಯಲ್ಲಿ ಫಲಾನುಭವಿಯಾಗಲು ಮೆಟ್ಟಿಲಾಯಿತೋ ಆಗ ಎಲ್ಲರೂ ಆ ಅವಕಾಶವನ್ನು ಬಳಸಿಕೊಳ್ಳಲು ಹಾತೊರೆಯುತ್ತಿದ್ದಾರೆ. ಅವಕಾಶವಾದಿಗಳ ಕುರಿತು ನಾಟಕದಾರಂಭದಲ್ಲೇ ಅಂಬೇಡ್ಕರ್ ಪಾತ್ರ ಬೇಸರ ವ್ಯಕ್ತಪಡಿಸಿರುವುದು ಪ್ರಸ್ತುತ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಹಾಗೂ ಮುಂದಿನ ಪೀಳಿಗೆಯಾದರೂ ಅಂಬೇಡ್ಕರ್‌ರವರ ವಿಚಾರವನ್ನು ಅರ್ಥಮಾಡಿಕೊಳ್ಳಬಹುದು ಎನ್ನುವ ಆಶಾವಾದವನ್ನೂ ಈ ನಾಟಕ ವ್ಯಕ್ತಪಡಿಸುತ್ತದೆ.


1922 ಮಾರ್ಚ 20ರಂದು ಅಂಬೇಡ್ಕರರ ನೇತೃತ್ವದಲ್ಲಿ ನಡೆದ ಚೌದಾರ್ ಕೆರೆಗೆ ಅಸ್ಪೃಶ್ಯರ ಪ್ರವೇಶದ ಸನ್ನಿವೇಶ ಹಾಗೂ ಸವರ್ಣೀಯರ ದಾಳಿ ಮತ್ತು ಪುರೋಹಿತರ ಶುದ್ದೀಕರಣದ ದೃಶ್ಯವನ್ನು ಸಾಂಕೇತಿಕವಾಗಿ ಒಂದೇ ನಿಮಿಷದಲ್ಲಿ ತೋರಿಸಿದ ರೀತಿ ಅನನ್ಯವಾಗಿದೆ. ಅದೇ ಕೆರೆಯ ನೀರನ್ನು ಗಾಂಧಿ ಕುಡಿಯುತ್ತಿರುವ ಸಂದರ್ಭದಲ್ಲಿ ಬಾಬಾಸಾಹೇಬರು ಯಾರು ಎಂದು ಕೇಳಿದಾಗ. ನಾನಯ್ಯಾ ಧರ್ಮಾ ಎನ್ನುವ ಗಾಂಧಿ ಮಾತು ಹಾಗೂ ನಿಮ್ಮ ಧರ್ಮ ನೀರಲ್ಲಿ ಹೂತು ಹೋಗಿದೆಯೇನು? ಎಂದು ಪ್ರಶ್ನಿಸುವ ಅಂಬೇಡ್ಕರರ ಪ್ರತಿಕ್ರಿಯೆ ಎಷ್ಟೊಂದು ಅರ್ಥಗಳನ್ನು ದ್ವನಿಸುವಂತಿದೆ. ವಾಸ್ತವ ಹಾಗೂ ಕಲ್ಪನೆ ಎರಡನ್ನೂ ಸೇರಿಸಿ ಕಟ್ಟಿದ ಗಾಂಧಿ ಮತ್ತು ಅಂಬೇಡ್ಕರರ ಸಂವಾದ ಮಾರ್ಮಿಕವಾಗಿದೆ. ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಗಾಂಧಿ ಅಂಬೇಡ್ಕರರವರಿಗೆ ಹೇಳಿದಾಗ ನಾನು ದೇಶದ ಬಗ್ಗೆ ಮಾತಾಡುವಾಗ ನೀವು ದೇಹದ ಬಗ್ಗೆ ಮಾತಾಡ್ತೀರಾ. ದೇಹದ ಬಗ್ಗೆ ಮಾತಾಡುವಾಗ ದೇಶದ ಕುರಿತು ಮಾತಾಡ್ತೀರಾ.. ಎಂದು ಹೇಳುವ ಬಾಬಾಸಾಹೇಬರು ಗಾಂಧೀಜಿಯ ತಂತ್ರಗಾರಿಕೆಯನ್ನು ಮಾತಿನಲ್ಲೇ ಚುಚ್ಚುತ್ತಾರೆ. ನಮ್ಮಿಬ್ಬರ ನಡುವಿನ ಬೇಟಿ ಇಬ್ಬರು ವ್ಯಕ್ತಿಗಳದ್ದಾಗಿರದೇ ಎರಡು ಹಿತಾಸಕ್ತಿಗಳದ್ದಾಗಿತ್ತು.. ಎನ್ನುವ ಅಂಬೇಡ್ಕರರ ಮಾತಂತೂ ಮೇಲ್ವರ್ಗದ ಪರವಾಗಿರುವ ಗಾಂಧೀಜಿಯನ್ನು ವಿಮರ್ಶೆ ಮಾಡುವಂತಿತ್ತು. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಿಂತಾ ಪರಸ್ಪರ ಘಾಸಿಮಾಡಿಕೊಳ್ತಿದ್ದೇವೆ ಎನ್ನುವ ಗಾಂಧೀಜಿಗೆ ಪ್ರತಿ  ಸಲ ತೀರ್ಮಾನಿಸುವ ಅವಕಾಶ ನನ್ನ ಕೈಜಾರಿ ನಿಮ್ಮದಾಗಿದೆ... ಚಿಕ್ಕ ಮಕ್ಕಳಂತೆ ರಚ್ಚೆ ಹಿಡಿದು ನನ್ನ ಮುಷ್ಟಿಯಲ್ಲಿದ್ದದ್ದನ್ನು ಬಾಚಿ ಕಿತ್ಕೊಂಡ್ರಿ.. ಯಾಕೆ ಗಾಂಧೀಜಿ ಹೇಳಿ? ಎಂದು ಅಂಬೇಡ್ಕರ್ ಪ್ರಶ್ನಿಸುತ್ತಾರೆ. ನಿಮ್ಮ ಮುಷ್ಟಿಯಲ್ಲಿ ಹಿಂದೂ ಧರ್ಮದ ಜುಟ್ಟಿತ್ತು, ದೇಶದ ಭವಿಷ್ಯದ ಗುಟ್ಟೂ ಇತ್ತೂ.. ಅವೆರಡರ ಅಳಿವೂ ಉಳಿವೂ ನನ್ನ ಪ್ರಾಣವೇ ಆಗಿತ್ತು.. ಅದಕ್ಕಾಗಿ ನಿಮ್ಮ ಪ್ರತ್ಯೇಕ ಮತದಾನದ ಹಕ್ಕಿಗೆ ನಾನು ಅಡ್ಡನಿಂತಿದ್ದು.. ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಗಾಂಧೀಜಿ ತಮ್ಮ ತಂತ್ರಗಾರಿಕೆಗಳಿಗೆ ಸಮರ್ಥನೆ ಕೊಡುತ್ತಾರೆ. ಈ ದೃಶ್ಯದಲ್ಲಿ ಅಂಬೇಡ್ಕರರ ಪ್ರಶ್ನೆಗಳು ಹಾಗೂ ಅದಕ್ಕೆ ಗಾಂಧೀಜಿ ಕೊಡುವ ಸಮರ್ಥನೆಗಳನ್ನು ಕೇಳಿಸಿಕೊಳ್ಳುವುದೇ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ. ಹಿಂದುತ್ವದ ಕುರಿತು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗಾಂಧೀಜಿಗೆ ಹಿಂದುತ್ವವಾದಿಗಳೇ ಹಾಕಿದ ಗುಂಡು ಅವರಿಬ್ಬರ ಮಾತುಗಳ ಮೊಟಕುಗೊಳಿಸಿ ನೋಡುಗರನ್ನು ಬೆರಗುಗೊಳಿಸಿತು. ಜೊತೆಗೆ ಬೆರಗಿನ ರೂಪಕವೊಂದು ರಂಗದಂಗಳದಲ್ಲಿ ಪ್ರಸ್ತುತಗೊಂಡಿತು. 

ಓ ನನ್ನ ಕರುಣಾಜನಕ ಕುಬ್ಜ ಆಲದ ಮರವೇ.. ಈ ನಿನ್ನ ಗಂಟು ಗಂಟು ಪ್ರಾಚೀನ ರೋಗಾಣುಗಳ ಗೂಡು. ನಾನಂತೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲಾ, ನನ್ನವರು ಯಾರೂ ನಿನ್ನ ನೆರಳನ್ನು ಆಶ್ರಯಿಸುವುದಿಲ್ಲಾ.. ಎಂದು ಕುಬ್ಜವಾದ ಆಲದ ಮರವನ್ನು ನೋಡಿ ನಾಟಕದ ಕೊನೆಗೆ ಅಂಬೇಡ್ಕರ್ ಹೇಳುವ ಮಾತುಗಳು ಅದೆಷ್ಟು ಪ್ರತಿಮಾತ್ಮಕವಾಗಿವೆ ಎಂದರೆ ದೇಶವನ್ನು ಆಕ್ರಮಿಸಿಕೊಂಡ ಮನುವಾದಿ ಪ್ರೇರಿತ ಹಿಂದುತ್ವ ಎನ್ನುವ ಆಲದ ಮರದ ನೆರಳೂ ದಲಿತ ದುಡಿಯುವ ವರ್ಗಗಳಿಗೆ ಮಾರಕವಾಗಿದೆ ಹಾಗೂ ಅದರ ನೆರಳಿಂದ ಹೊರಗೆ ಬರುವುದರಲ್ಲಿ ದಮನಿತರ ವಿಮೋಚನೆ ಇದೆ ಎಂಬುದನ್ನು ಆಲದ ಮರದ ರೂಪಕದಲ್ಲಿ ಹೇಳಿದ್ದು ಈ ನಾಟಕದ ಅತ್ಯಂತ ಮನನೀಯ ಅಂಶವಾಗಿದೆ. ವೈದಿಕಶಾಹಿ ಸಂತಾನ ಈಗ ಹಿಂದುತ್ವವಾದದ ಉನ್ಮಾದವನ್ನು ಶೂದ್ರವರ್ಗಗಳಲ್ಲಿ ತುಂಬಿ, ಆಹಾರದ ಹಕ್ಕನ್ನು ಹರಣ ಮಾಡಿ, ದಲಿತರ ಮೇಲೆ ಹಲ್ಲೆ ಮಾಡುತ್ತಿರುವಾಗ ಹಿಂದುತ್ವದ ನೆರಳಿನಿಂದ ಹೊರಬರಬೇಕು ಎನ್ನುವ ಈ ನಾಟಕದ ಅಂತ್ಯದ ಆಶಯ ನಿಜಕ್ಕೂ ಅರ್ಥಗರ್ಭಿತವಾಗಿದೆ. ಕೊನೆಗೆ ಬಾಬಾಸಾಹೇಬರು ಬೌದ್ದ ಧರ್ಮ ಸ್ವೀಕರಿಸಿ ಬಿಕ್ಕುಗಳ ಜೊತೆಗೆ ಬುದ್ದಂ ಶರಣಂ ಗಚ್ಚಾಮಿ ಹೇಳುತ್ತಾ ಹೊರಡುವುದರ ಮೂಲಕ ನಾಟಕ ಕೊನೆಗೊಳ್ಳುತ್ತದೆ. ಕೊಟ್ಟ ಕೊನೆಯ ಎರಡು ದೃಶ್ಯಗಳು ನೋಡುಗರನ್ನು ಇನ್ನಿಲ್ಲದಂತೆ ಕಾಡುತ್ತವೆ.
    
ನಾಟಕದಾರಂಭದಲ್ಲಿ ಶುರುವಾದ ಮೂರುವರೆ ನಿಮಿಷಗಳಷ್ಟು ಸುದೀರ್ಘವಾದ ಬಾಬಾರೋ ಬಾರೋ ರಣಧೀರ.. ಸಿನೆಮಾ ಹಾಡಿನ ಹಿನ್ನೆಲೆ ಸಂಗೀತದ ಅಬ್ಬರ ಕೇಳುಗರ ಸಹನೆಯನ್ನು ಕೆಣಕುವಂತಿತ್ತು ಹಾಗೂ ಈ ಸಿನೆಮಾ ಟ್ಯೂನ್ ಇಲ್ಲಿ ಬೇಡವಾಗಿತ್ತು. ಒಂದೇ ಮಾತರಂ.. ಎನ್ನುವ ಬಲಪಂಥೀಯರ ರಾಷ್ಟ್ರೀಯ ಗೀತೆಯ ಸಂಗೀತವನ್ನು ಯಾಕೆ ಇಲ್ಲಿ ಈ ಅಂಬೇಡ್ಕರ್ ನಾಟಕದಲ್ಲಿ ಬಳಸಿಕೊಳ್ಳಲಾಗಿದೆಯೋ ನಿರ್ದೇಶಕರೇ ಹೇಳಬೇಕು. ಕೆಲವು ಹೋರಾಟದ ಹಾಡುಗಳನ್ನು ಅದೇ ತೀವ್ರತೆಯಲ್ಲೇ ಬಳಸಿಕೊಳ್ಳಲಾಗಿದೆ. ಎಚ್ಚರ..ಎಚ್ಚರ.. ಇದು ಮೋಹದ ಕಾಲಾ.. ಇದು ದ್ರೋಹದ ಕಾಲಾ.. ಹಾಡಲ್ಲಿ ಆಕ್ರೋಶ ಅತಿಯಾಯಿತು. ಬಳಸಿದ ಕೆಲವು ಹಾಡುಗಳ ವೇಗ ಮತ್ತು ಅಬ್ಬರ  ಎಷ್ಟಿತ್ತೆಂದರೆ ಸಾಹಿತ್ಯದ ಸಾಲುಗಳೇ ಅರ್ಥವಾಗದಷ್ಟು. 

ಮೂರು ವಿವಿಧ ವಯೋಮಾನದ ಅಂಬೇಡ್ಕರ್‌ಗಳನ್ನು ನಾಟಕದಲ್ಲಿ ಸೃಷ್ಟಿಸಲಾಗಿದೆ. ತಾಂತ್ರಿಕವಾಗಿ ಈ ಪಾತ್ರಸೃಷ್ಟಿ ಸೊಗಸಾಗಿದೆಯಾದರೂ ಪಾತ್ರಗಳ ಆಗಮನ ಕ್ರಮಬದ್ದವಾಗಿಲ್ಲದೆ ಇರುವುದರಿಂದ ಕೆಲವೊಮ್ಮೆ ನೋಡುಗರಿಗೆ ಗೊಂದಲವಾಗಿದೆ. ಕಲಾವಿದರುಗಳು ಇನ್ನೂ ಆಡುವ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕಿದೆ. ಪ್ರತಿ ಸಂಭಾಷಣೆಯಲ್ಲೂ ಸ್ಪಷ್ಟತೆ ರೂಢಿಸಿಕೊಳ್ಳಬೇಕಿದೆ. ಯುವ ಅಂಬೇಡ್ಕರ್ ಪಾತ್ರಕ್ಕೆ ಬಸವರಾಜು ಜೀವ ತುಂಬಲು ಪ್ರಯತ್ನಿಸಿದರೆ, ಸೀನಿಯರ್ ಅಂಬೇಡ್ಕರ್ ಆಗಿ ರಾಕೇಶ್ ಪಾತ್ರವೇ ಆಗಿದ್ದಾರೆ. ಗಾಂಧಿ ಪಾತ್ರಕ್ಕೆ ಹರಿಕಥೆ ಮಂಜು ವಿಶಿಷ್ಟ ಮಾತಿನ ಶೈಲಿಯನ್ನು ಬಳಸಿ ನೋಡುಗರ ಗಮನ ಸೆಳೆಯುತ್ತಾರೆ. ಸಾಣೇಹಳ್ಳಿ ಹಾಗೂ ರಂಗಾಯಣದಲ್ಲಿ ತರಬೇತಾದ ನಾಲ್ಕಾರು ಜನರನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಪಾತ್ರದಾರಿಗಳೂ ಸಹ ಗ್ರಾಮೀಣ ಪ್ರದೇಶದವರಾಗಿದ್ದು ಅಭಿನಯದ ಕಲಿಕೆಯಲ್ಲಿದ್ದಾರೆ. ಇನ್ನೂ ಕಲಿಕೆಯ ಹಂತದಲ್ಲಿರುವ ಯುವಕ ಯುವತಿಯರನ್ನು ಪಾತ್ರವಾಗಿಸುವಲ್ಲಿ ಪ್ರಮೋಧ ಶಿಗ್ಗಾವ್‌ರವರು ಅಪಾರ ಪರಿಶ್ರಮ ವಹಿಸಿದ್ದು ನಾಟಕದಾದ್ಯಂತ ಕಂಡುಬರುತ್ತದೆ.

ನಿರ್ದೇಶನದ ಜೊತೆಗೆ ರಂಗವಿನ್ಯಾಸ ಹಾಗೂ ವಸ್ತ್ರವಿನ್ಯಾಸದ ಹೊಣೆಗಾರಿಕೆಯನ್ನೂ ಸಹ ಶಿಗ್ಗಾಂವರವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರತಿ ದೃಶ್ಯಕ್ಕೆ ಬಳಸಿದ ಸೆಟ್‌ಗಳು ನಾಟಕದಾದ್ಯಂತ ಗಮನಸೆಳೆಯುವಲ್ಲಿ ಯಶಸ್ವಿಯಾದವು. ಪಾತ್ರದಾರಿಯನ್ನೇ ಅಂಬೇಡ್ಕರ್ ಪುತ್ತಳಿಯನ್ನಾಗಿಸಿ ನಿಲ್ಲಿಸಿದ್ದು, ಕಂದೀಲುಗಳನ್ನು ಸಂಕೇತವಾಗಿ ಬಳಸಿದ್ದು, ಪಾರ್ಸಿ ವಸತಿಗೃಹದ ಕೋಣೆಯನ್ನೇ ಸೃಷ್ಟಿಸಿದ್ದು, ಸೈಕಲ್ಲನ್ನೂ ಸಹ ರೂಪಕವಾಗಿ ಉಪಯೋಗಿಸಿದ್ದು ನಾಟಕದ ದೃಶ್ಯಗಳ ಅರ್ಥವ್ಯಾಪ್ತಿಯನ್ನು ವಿಸ್ತರಿಸುವಂತಿದ್ದವು. ದೃಶ್ಯ ಜೋಡಣೆಯಲ್ಲಿ ಹಾಗೂ ಪಾತ್ರ ಸೃಷ್ಟಿಯಲ್ಲಿ ಕೆಲವೊಂದು ಗೋಜಲುಗಳಿದ್ದರೂ ರಂಗವಿನ್ಯಾಸದ ಮಜಲುಗಳು ಮಾತ್ರ ನಾಟಕದ ಮೆರುಗನ್ನು ಹೆಚ್ಚಿಸಿದವು. ದೃಶ್ಯಗಳಿಗೆ ಪೂರಕವಾಗಿ ನವೀನ್ ವಿನ್ಯಾಸಗೊಳಿಸಿದ ಬೆಳಕಿನ ಸಂಯೋಜನೆ ಮೂಡಿಬಂದಿತಾದರೂ ಇನ್ನೂ ಮೂಡ್ ಸೃಷ್ಟಿಸುವಲ್ಲಿ ಬೆಳಕಿನ ಬಣ್ಣಗಳ ಬಳಕೆ ಅಗತ್ಯವಿತ್ತು. ರಾಮಕೃಷ್ಣ ಬೆಳ್ತೂರರ ಪ್ರಸಾದನ ಪ್ರತಿ ವ್ಯಕ್ತಿಯನ್ನೂ ಪಾತ್ರವಾಗಿಸುವ, ಪ್ರತಿ ಪಾತ್ರವನ್ನೂ ಗಮನಾರ್ಹವಾಗಿಸುವ ಕೆಲಸದಲ್ಲಿ ಸಫಲವಾಯಿತು.

ನನ್ನ ಅಂಬೇಡ್ಕರ್ ನಾಟಕವನ್ನು ರಾಮಯ್ಯನವರು ಸಾಣೇಹಳ್ಳಿಯ ಶ್ರೀಮಠದ ಶಿವಸಂಚಾರ ರೆಪರ್ಟರಿಗಾಗಿ ಬರೆದಿದ್ದು ಶಿವಸಂಚಾರದಿಂದ ಈಗಾಗಲೇ ಮೂವತ್ತೈದಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಆ ನಾಟಕವನ್ನೂ ಸಹ ಪ್ರಮೋದ್ ಶಿಗ್ಗಾಂವ್‌ರವರೇ ನಿರ್ದೇಶಿಸಿದ್ದರು. ಈಗ ಕಾಪಾಲಿಕ ತಂಡಕ್ಕೆ ಈ ನಾಟಕ ಮರುನಿರ್ಮಾಣಗೊಂಡಿದೆ. ಶಿವಸಂಚಾರದಲ್ಲಿ ಈ ನಾಟಕ ಮಾಡಿದ ನಾಲ್ಕಾರು ಕಲಾವಿದರನ್ನೂ ಕರೆಸಿಕೊಂಡು ನಾಟಕವನ್ನು ಮರುಸೃಷ್ಟಿ ಮಾಡಲಾಗಿದೆ. 

ಕೋಲಾರದ ತೇರಹಳ್ಳಿಬೆಟ್ಟದಲ್ಲಿ ತಾವೇ ಕಟ್ಟಿದ್ದ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಹೊರಬಂದ ನಂತರ ಕೋಟಗಾನಹಳ್ಳಿ ರಾಮಯ್ಯನವರು ಕಾಪಾಲಿಕ ಎನ್ನುವ ಅರೆಕಾಲಿಕ ರೆಪರ್ಟರಿ ರಂಗ ತಂಡವನ್ನು ಕಟ್ಟಿದ್ದಾರೆ. ಈ ತಂಡದ ಮೊಟ್ಟಮೊದಲ ನಾಟಕವಾಗಿ ನನ್ನ ಅಂಬೇಡ್ಕರ್ ನಿರ್ಮಾಣಗೊಂಡಿದೆ. ಗ್ರಾಮೀಣ ಪ್ರದೇಶದ ಸಂಪನ್ಮೂಲಗಳು ಹಾಗೂ ಕಲಾವಿದರುಗಳನ್ನು ಒಗ್ಗೂಡಿಸಿಕೊಂಡು ಕೋಲಾರದ ತೇರಹಳ್ಳಿಬೆಟ್ಟದ ಗುಡ್ಡುಗಾಡಿನ ಹಳ್ಳಿಗಳಲ್ಲಿ ರಂಗ ಚಟುವಟಿಕೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವ ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ನಾಟಕಕಾರ ಹಾಗೂ ಸಂಘಟಕ ರಾಮಯ್ಯನವರು ನಿಜಕ್ಕೂ ಅಭಿನಂದನಾರ್ಹರು. ಆದರೆ... ಸರಕಾರಿ ಪ್ರಾಜೆಕ್ಟ್ ಆಗಿರುವ ಅಂಬೇಡ್ಕರ್ ನಾಟಕೋತ್ಸವದ ಸಾಂಸ್ಕೃತಿಕ ಸಮಿತಿಯ ನೇತೃತ್ವವನ್ನು ವಹಿಸಿರುವ ರಾಮಯ್ಯನವರು ತಾವೇ ರಚಿಸಿದ ನಾಟಕ ಹಾಗೂ ತಮ್ಮದೇ ನೇತೃತ್ವದ ರಂಗತಂಡವನ್ನು ತಾವೇ ಆಯ್ಕೆ ಮಾಡಿ ಒಂದೂವರೆ ಲಕ್ಷ ಹಣವನ್ನು ಪಡೆದಿದ್ದು ಪ್ರಶ್ನಾರ್ಹವಾಗಿದೆ. ಇದೇ ನೆಪದಲ್ಲಿ ತಯಾರಾದ ಈ ನಾಟಕ ರಾಜ್ಯಾದ್ಯಂತ ಇನ್ನೂ ಹೆಚ್ಚು ಪ್ರದರ್ಶನ ಕಾಣುವಂತಾಗಲಿ. ರಾಮಯ್ಯನವರ ಅಂಬೇಡ್ಕರ್ ಹೆಚ್ಚು ಹೆಚ್ಚು ಜನರನ್ನು ತಲುಪಲಿ ಎಂದು ಆಶಿಸಬಹುದಾಗಿದೆ. 

                               -ಶಶಿಕಾಂತ ಯಡಹಳ್ಳಿ    


 (ಪೋಟೋ ಕರ್ಟಸಿ ಥಾಯ್ ಲೋಕೇಶ್)




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ