ಸೋಮವಾರ, ಮೇ 18, 2015

ಸ್ತ್ರೀ (ಸಂ)ವೇದನೆಯ ರಂಗಪ್ರಸ್ತುತಿ “ಅಕ್ಕು” :




ರಂಗಭೂಮಿಯ ವೈಶಿಷ್ಟ್ಯವೇ ಹಾಗೆ. ಸಿದ್ದ ನಾಟಕಗಳಿಲ್ಲ ಎಂದು ಸುಮ್ಮನೆ ಕೂಡುವ ಜಾಯಮಾನ ಕನ್ನಡ ರಂಗಭೂಮಿಯದಲ್ಲವೇ ಅಲ್ಲ. ಸಾಹಿತ್ಯದ ಪ್ರಕಾರಗಳನ್ನು ಆಧರಿಸಿಯಾದರೂ ರಂಗಪಠ್ಯ ಸಿದ್ದಗೊಳಿಸಿ ನಾಟಕವನ್ನು ನಿರ್ಮಿಸಿ ಪ್ರದರ್ಶಿಸುವುದು ರಂಗಭೂಮಿಯ ಚಲನಶೀಲತೆಗೆ ಸಾಕ್ಷಿಯಾಗಿದೆ. ವೈದೇಹಿಯವರ ಮೂರು ಕಥೆಗಳನ್ನು ಕೊಲ್ಯಾಜ್ ಮಾಡಿ ಅಕ್ಕು ನಾಟಕ ಸಿದ್ದಗೊಂಡಿದೆ. ವೈದೇಹಿರವರ  ಅಕ್ಕು ಕಥೆಯ ಅಕ್ಕು ಪಾತ್ರ, ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು ಕಥೆಯ ಪುಟ್ಟಮ್ಮತ್ತೆ ಪಾತ್ರ ಹಾಗೂ ಅಮ್ಮಚ್ಚಿಯ ನೆನಪುಗಳು ಕಥೆಯ ಅಮ್ಮಚ್ಚಿ ಪಾತ್ರಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಮಹಿಳಾ ಸಂವೇದನೆಯ ಅಕ್ಕು ರಂಗಪಠ್ಯವನ್ನು ಸಿದ್ದಗೊಳಿಸಿದ ಚಂಪಾಶೆಟ್ಟಿಯವರು ನಾಟಕವನ್ನು ರಂಗಮಂಟಪದ ಕಲಾವಿದರಿಗೆ ನಿರ್ದೇಶಿಸಿದ್ದಾರೆ. 2005, ಮೇ 9 ರಂದು ನಾಟಕವು ರಂಗಶಂಕರದಲ್ಲಿ ಪ್ರದರ್ಶನಗೊಂಡು ನೋಡುಗರ ಮುಂದೆ ಮಹಿಳಾ ಶೋಷಣೆಯ ಮೂರು ವಿಭಿನ್ನ ಆಯಾಮಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.


ಅಕ್ಕು ಒಂದು ಮಹಿಳಾ ಪ್ರಧಾನ ನಾಟಕವಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಶೋಷಣೆಯನ್ನು ಯಥಾಸ್ಥಿತಿ ರೂಪದಲ್ಲಿ ತೋರಿಸುವ ಪ್ರಯತ್ನ ನಾಟಕದಲ್ಲಿದೆ. ತೋರಿಕೆಗೆ ಮೂವರು ಮಹಿಳೆಯರನ್ನು ಕೇಂದ್ರೀಕರಿಸಿ ನಾಟಕವನ್ನು ಕಟ್ಟಿಕೊಡಲಾಗಿದೆಯಾದರೂ ಆಂತರ್ಯದಲ್ಲಿ ಮೂರು ಪಾತ್ರಗಳೂ ಒಂದೇ ಪಾತ್ರದ ಮೂರು ವಿಭಿನ್ನ ಘಟ್ಟಗಳು ಎನ್ನುವಂತೆ ಮೂಡಿ ಬಂದಿವೆ. ಅವಿವಾಹಿತ ಹುಡುಗಿ ಅಮ್ಮಚ್ಚಿ ಯೌವನದಲ್ಲಿ ರೆಬೆಲ್ ಆಗಿ ವರ್ತಿಸುತ್ತಾಳೆ. ತನಗಿಷ್ಟವಿಲ್ಲದ ಮದುವೆಯನ್ನು ನಿರಾಕರಿಸಿ ತನಗಿಷ್ಟವಾದವನನ್ನು ಮದುವೆಯಾಗಲು ಬಯಸುತ್ತಾಳೆ. ಆದರೆ... ಕೊನೆಗೆ ಅನಿವಾರ್ಯ ಒತ್ತಡಕ್ಕೊಳಗಾಗಿ ತನ್ನಿಚ್ಚೆಗೆ ವಿರುದ್ಧವಾಗಿ ವಿರೋಧಿಸುವವನನ್ನೇ ಮದುವೆಯಾಗಿ ಗಂಡನಿಗೆ ಶರಣಾಗುತ್ತಾಳೆ. ಗಂಡನಿಂದ ಪರಿತ್ಯಕ್ತೆಯಾದ ಅಕ್ಕು ಕೌಟಿಂಬಿಕ ನಿಂದನೆ ಹಿಂಸೆ ತಾಳಲಾರದೇ ಅರೆಹುಚ್ಚಿಯಂತಾಗುತ್ತಾಳೆ. ಗಂಡ ಹಾಗೂ ಗಂಡನ ಮನೆಯವರ ಹಿಂಸೆಗೆ ಬಲಿಪುಶುವಾದ ವಿಧವೆ ಪುಟ್ಟಮ್ಮತ್ತೆ ತನ್ನ ಬದುಕಿನಲ್ಲಿ ಎಲ್ಲಾ ರೀತಿಯ ದಮನಕ್ಕೊಳಗಾಗಿ ಅನ್ಯರ ಮನೆಯಕೆಲಸದವಳಾಗಿ ಮೊಮ್ಮಗಳ ಜೊತೆ ಬದುಕುತ್ತಿರುತ್ತಾಳೆ. ಹೀಗೆ ಮೂರು ಪಾತ್ರಗಳು ರಂಗದ ಮೇಲಿದ್ದರೂ ಸಹ ಅಮ್ಮಚ್ಚಿಯೇ ಅಕ್ಕುವಾಗಿ, ಅಕ್ಕುವೇ ಪುಟ್ಟಮ್ಮತ್ತೆಯಾಗಿ ರೂಪಾಂತರ ಹೊಂದಿದಂತೆ ಭಾಸವಾಗುತ್ತದೆ.

ನಾಟಕದಲ್ಲಿ ಮದುವೆ ಎನ್ನುವುದೇ ಬಂಧನದ, ಹಿಂಸೆಯ, ಶೋಷಣೆಯ ಹಲವಾರು ವಿರೂಪಗಳಿಗೆ ಕಾರಣವಾಗಿ ಬಿಂಬಿತವಾಗಿದೆ. ಮದುವೆ ವ್ಯವಸ್ಥೆಯೆ ಮಾರಕವಾಗಿ ಮಹಿಳೆಯ ಸ್ವಾತಂತ್ರ್ಯವನ್ನು ಹರಣ ಮಾಡಿ ದಮನಕ್ಕೆ ದೂಡಿದ್ದಕ್ಕೆ ಸಾಕ್ಷಿಯಾಗಿ ಮೂರೂ ದುರಂತ ಪಾತ್ರಗಳೂ ನಾಟಕದಲ್ಲಿ ಮೂಡಿಬಂದಿವೆ. ಮಹಿಳೆ ಎಂದರೆ ಪುರುಷರ ಆಧೀನವಾಗಿ ಬಳಕೆಯಾಗಬಹುದಾದವಳು, ಗಂಡ ಎನ್ನುವವನೇ ಇಲ್ಲಿ ಸರ್ವಾಧಿಕಾರಿ, ಗಂಡ ಸತ್ತರೆ ಇಲ್ಲವೇ ಬಿಟ್ಟರೆ ಅವಳ ಬದುಕು ದುರಂತಕ್ಕೀಡಾಗುವುದು.... ಎನ್ನುವ ಪುರುಷ ಕೇಂದ್ರಿತ ಮನುವಾದಿ ಭ್ರಮೆಯನ್ನು ನಾಟಕ ಪರೋಕ್ಷವಾಗಿ ಹೇಳುವಂತಿದೆ. ಜೊತೆಗೆ ಇಡೀ ನಾಟಕ ಮಹಿಳಾ ಶೋಷಣೆಯನ್ನು ಪ್ರತ್ಯಕ್ಷವಾಗಿ ತೋರಿಸುತ್ತಾ ಪರೋಕ್ಷವಾಗಿ ಹಳೆಯ ಕಾಲದ ಪಿತೃಪ್ರಧಾನ ಮೌಲ್ಯಗಳನ್ನೇ ಬಿಂಬಿಸುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಮಹಿಳೆ ತನ್ನ ಸ್ವಾಭಿಮಾನ ಹಾಗೂ ಸ್ವಾತಂತ್ರ್ಯಕ್ಕಾಗಿ ಎಲ್ಲಾ ನಿಟ್ಟಿನಲ್ಲೂ ಪ್ರತಿಭಟಿಸುತ್ತಿದ್ದಾಳೆ. ಕೌಟುಂಬಿಕ ಧಮನ ತೀವ್ರಗೊಂಡರೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಆದರೆ ನಾಟಕದಲ್ಲಿ ತಮಗಾದ ಅನ್ಯಾಯದ ವಿರುದ್ಧ ಯಾವ ಶೋಷಿತ ಸ್ತ್ರೀ ಪಾತ್ರಗಳೂ ವಾಚ್ಯವಾಗಿಯಾಗಲೀ ಇಲ್ಲವೇ ಸೂಚ್ಯವಾಗಿಯಾಗಲೀ ಪ್ರತಿಭಟಿಸುವುದಿಲ್ಲ. ಆರಂಭದಲ್ಲಿ ಅಮ್ಮಚ್ಚಿ ಪಾತ್ರ ಒಂದಿಷ್ಟು ಪ್ರತಿಭಟನೆ ತೋರಿದರೂ ನಂತರ ಪುರುಷರ ಬಲವಂತಕ್ಕೊಳಗಾಗಿ ಸಿದ್ದ ಮಾದರಿ ವ್ಯವಸ್ಥೆಗೆ ಶರಣಾಗುತ್ತಾಳೆ. ಹೀಗಾಗಿ ಮಹಿಳಾ ಸಂವೇದನೆಯ ಅಕ್ಕು ನಾಟಕ ಮಹಿಳೆಯರ ದುರಂತ ಬದುಕನ್ನು ತೋರಿಸುತ್ತದೆಯೇ ಹೊರತು ಅದರಿಂದ ಹೊರಬರುವ ಮಾರ್ಗೋಪಾಯಗಳನ್ನು ಸೂಚಿಸುವುದಿಲ್ಲ. ಹಿಂದಿನ ಕಾಲದ ಶೋಷಿತ ಮಹಿಳೆಯರ ಸಮಸ್ಯೆಯನ್ನು ಯಥಾಸ್ಥಿತಿಯಲ್ಲಿ ತೋರುವುದರಿಂದ ಇಡೀ ನಾಟಕ ಸಮಕಾಲೀನತೆಗೆ ಹೊಂದಿಕೊಳ್ಳುವುದಿಲ್ಲ. ಮೂರು ದಶಕಗಳ ಹಿಂದೆ ವೈದೇಹಿಯವರು ಬರೆದ ಕಥೆಗಳನ್ನು ರಂಗಕ್ಕಳವಡಿಸುವಾಗ ಪ್ರಸ್ತುತ ಕಾಲದ ಬದಲಾವಣೆಗಳಿಗೆ ಒಂದಿಷ್ಟು ಹೊಂದಿಸಿದ್ದರೆ ನಾಟಕ ಸಾರ್ಥಕತೆಯನ್ನು ಪಡೆಯುತ್ತಿತ್ತು. ಈಗ ಮಹಿಳೆಯರ ಮೇಲಿನ ಶೋಷಣೆಯ ಆಯಾಮಗಳೂ ಬದಲಾಗಿವೆ ಹಾಗೂ ಮಹಿಳೆಯರು ತುಳಿಯುತ್ತಿರುವ ಪ್ರತಿಭಟನೆಯ ಮಾರ್ಗಗಳೂ ಬದಲಾಗಿವೆ. ಬದಲಾವಣೆಗೆ ನಾಟಕ ಕುರುಡಾಗಿದೆ. ಹಳೆಯ ಘಟನೆಗಳನ್ನು ತೋರಿಸುತ್ತಾ ಇದ್ದದ್ದನ್ನು ಇದ್ದಂತೆ ನೋಡುಗರ ಮುಂದಿಡುವಲ್ಲಿ ಸಫಲವಾಗಿದೆ.

ಇಡೀ ನಾಟಕವನ್ನು ನೋಡಿದ ಮಹಿಳಾ ಪ್ರೇಕ್ಷಕರಿಗೆ ಗಂಡ ಹೇಳಿದಂತೆ ಕೇಳದಿದ್ದರೆ ನಮ್ಮ ಬದುಕೂ ಹೀಗೆ ದುರಂತವಾಗಬಹುದೇನೋ ಎನ್ನುವ ಆತಂಕ ಮೂಡಿಸಿದರೆ, ಪುರುಷ ಪ್ರೇಕ್ಷಕರಿಗೆ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಮಹಿಳೆಯರೂ ಸುಖವಾಗಿರುತ್ತಿದ್ದರೇನೋ? ಎನ್ನುವ ಉದಾರವಾದಿ ನಿಲುವನ್ನು ಪ್ರೇರೇಪಿಸುವಂತೆ ನಾಟಕ ಪ್ರೇಕ್ಷಕರ ಮೇಲೆ ನಾಕಾರಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇದಕ್ಕಿಂತ ಹೆಚ್ಚಾಗಿ ನಾಟಕದಲ್ಲಿ ಮಹಿಳಾ ಶೋಷಣೆ ನಡೆಯುವುದು ಸುಶಿಕ್ಷಿತರೆಂದೆನಿಸಿಕೊಂಡ ಬ್ರಾಹ್ಮಣ ಕುಟುಂಬಗಳಲ್ಲಿ. ಮನುವಾದವನ್ನು ಸಾರ್ವತ್ರೀಕರಿಸಿದ ಪುರೋಹಿತಶಾಹಿ ವರ್ಗ ಮಹಿಳೆಯರನ್ನು ಅದು ಹೇಗೆ ನಿಕೃಷ್ಟವಾಗಿ ನೋಡಿಕೊಳ್ಳುತ್ತಾರೆ ಎನ್ನುವುದರ ಪ್ರಾತ್ಯಕ್ಷಿಕತೆ ನಾಟಕದಲ್ಲಿದೆ. ಸಂಪ್ರದಾಯವಾದಿ ಬ್ರಾಹ್ಮಣರ ಮಹಿಳಾ ವಿರೋಧಿತನವನ್ನು ಬಹಿರಂಗಗೊಳಿಸುವಲ್ಲಿ ನಾಟಕ ಯಶಸ್ವಿಯಾಗಿದೆ.

ಅಕ್ಕು ನಾಟಕದ ಕ್ಯಾನ್ವಾಸ ತುಂಬಾ ಪುಟ್ಟದಾಗಿದೆ. ನಾಟಕೀಯ ಚಲನಶೀಲತೆಗೆ ಇಲ್ಲಿ ಹೆಚ್ಚು ಅವಕಾಶ ಇಲ್ಲವಾಗಿದೆ. ಬ್ರಾಹ್ಮಣರ ಮನೆಯೊಂದರಲ್ಲಿ ನಡೆಯಬಹುದಾದ ಮಹಿಳೆಯರ ಮೇಲಿನ ದೌರ್ಜನ್ಯವನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡಲಾಗಿದೆ. ಗಾಂಧಿ ಬಂದ ಎನ್ನುವ ಚಲನಶೀಲ ನಾಟಕವನ್ನು ಕೊಟ್ಟ ಚಂಪಾಶೆಟ್ಟಿಯವರು ಸಲ ನಾಟಕದ ವಸ್ತುವಿನ ಆಯ್ಕೆಯನ್ನು ಮಿತಿಗೊಳಿಸಿಕೊಂಡಿದ್ದಾರೆಆದರೆ ತಾವು ಆಯ್ದುಕೊಂಡ ಕಥೆಯ ಮಿತಿಯನ್ನೇ ಸೊಗಸಾಗಿ ನಿರೂಪಿಸಿ ರಂಗನಿರ್ಮಿತಿಯನ್ನು ಕಟ್ಟಿಕೊಟ್ಟಿದ್ದಾರೆ. ವಸ್ತುವಿನ ವಿನ್ಯಾಸದ ನ್ಯೂತ್ಯತೆ ಹಾಗೂ ಸಮಕಾಲೀನತೆಯ ಕೊರತೆಯನ್ನು ಬದಿಗಿಟ್ಟು ರಂಗಪ್ರದರ್ಶನವನ್ನು ಗಮನಿಸಿದರೆ ನಾಟಕ ನೋಡಿಸಿಕೊಂಡು ಹೋಗುತ್ತದೆಕಥೆ ಕಾದಂಬರಿಗಳನ್ನು ನಾಟಕವಾಗಿಸುವಾಗ ಬಿಟ್ಟುಹೋಗಬಹುದಾದ ವಿವರಗಳನ್ನು ಕಟ್ಟಿಕೊಡಲು ನಿರೂಪಕನನ್ನು ಸೃಷ್ಟಿಸಲಾಗುತ್ತದೆ. ಆದರೆ ನಾಟಕದಲ್ಲಿ ಪಾತ್ರ ಹಾಗೂ ದೃಶ್ಯಗಳ ಮೂಲಕವೇ ಇಡೀ ನಾಟಕವನ್ನು ಚಿತ್ರಿಸಲಾಗಿದೆ. ಮೂರು ಕಥೆಗಳನ್ನು ಸೇರಿಸಿ ಒಂದೇ ನಾಟಕದಲ್ಲಿ ತೋರಿಸುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಆದರೆ ಸಾಹಸದಲ್ಲಿ ಚಂಪಾಶೆಟ್ಟಿಯವರು ಬಹುತೇಕ ಯಶಸ್ವಿದ್ದಾರೆ. ಆದರೆ.. ಪುಟ್ಟಮ್ಮತ್ತೆ (ಗೋಪತ್ತೆ) ತನ್ನ ಬದುಕಿನ ದುರಂತ ಘಟನೆಗಳನ್ನು ಹೇಳಿಕೊಳ್ಳುವುದು ಸುದೀರ್ಘವೆನಿಸಿತು. ಇದನ್ನೂ ಸಹ ಪ್ಲಾಶ್ಬ್ಯಾಕ್ ತಂತ್ರದಲ್ಲಿ ದೃಶ್ಯೀಕರಿಸಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು.


ಅಕ್ಕು ನಾಟಕದಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಅಭಿನಯ ವಿಭಾಗ. ಪ್ರತಿ ವ್ಯಕ್ತಿಗಳು ಪಾತ್ರಗಳಾಗಿ ಇಡೀ ನಾಟಕವನ್ನು ಕಟ್ಟಿಕೊಟ್ಟ ರೀತಿ ನೋಡುಗರ ಕಣ್ಣಿಗೆ ಕಟ್ಟುವಂತಿದೆ. ಅಕ್ಕು ಪಾತ್ರದಲ್ಲಿ ದೀಪಿಕಾ ಆರಾಧ್ಯರ ಅರೆಹುಚ್ಚಿ ಅಭಿನಯ ಮನೋಜ್ಞವಾಗಿ ಮೂಡಿಬಂದಿತು. ಅಮ್ಮಚ್ಚಿಯಾಗಿ ದಿವ್ಯಾ ಕಾರಂತ್ ನಟನೆ ಮರೆಯಲು ಸಾಧ್ಯವೇ ಇಲ್ಲ. ಆದರೆ... ಪುಟ್ಟಮ್ಮತ್ತೆ ಎನ್ನುವ ವಿಧವೆ ಮುದುಕಿಯ ಪಾತ್ರದಲ್ಲಿ ರಾಧಾಕೃಷ್ಣ ಉರಾಳರು ಗಮನಸೆಳೆದರಾದರೂ ಅಜ್ಜಿ ಪಾತ್ರದ ವಯಸ್ಸಿಗನುಗುಣವಾಗಿ ಉರಾಳರ ಮೂವಮೆಂಟ್ಗಳಲ್ಲಿ ಇನ್ನೂ ಹೊಂದಾಣಿಕೆ ಬೇಕಾಗಿತ್ತು. ಅಣ್ಣಯ್ಯನಾಗಿ ಬಿ.ಜಿ.ರಾಮಕೃಷ್ಣ, ವಾಸು ಪಾತ್ರದಲ್ಲಿ ವಿಶ್ವನಾಥ ಉರಾಳ, ವೆಂಕಪ್ಪಯ್ಯನಾಗಿ ಪ್ರಕಾಶ ಶೆಟ್ಟಿ ಹಾಗೂ ಅಜ್ಜಯ್ಯನಾಗಿ ಎಸ್.ರಾಜಕುಮಾರ್... ನಾಲ್ಕೂ ಜನ ಅನುಭವಿ ರಂಗಕಲಾವಿದರುಗಳು ತಮ್ಮ ಪಾತ್ರಗಳನ್ನು ಪೂಷಣೆಮಾಡಿದ ರೀತಿಯನ್ನು ನೋಡಿಯೇ ಅನುಭವಿಸಬೇಕು. ಗೀತಾ ಸೂರತ್ಕಲ್ ರವರ ಶೇಷಮ್ಮನ ಪಾತ್ರವೂ ಗಮನಾರ್ಹವೇ ಆಗಿತ್ತು. ಅನುಭವಿಗಳಿಗಿಂತ ಮೊದಲ ಬಾರಿಗೆ ನಾಟಕ ಮಾಡುತ್ತಿರುವ ಪುಟ್ಟ ಬಾಲಕ ಬಾಲಕಿಯರ ನಟನೆಯನ್ನು ನೋಡುವುದೇ ಚೆಂದ. ಅನುಭವಿ ಹಾಗೂ ಅನನುಭವಿ ನಟರುಗಳಿಂದ ಪಾತ್ರಕ್ಕನುಗುಣವಾಗಿ ಅಭಿನಯವನ್ನು ನಿರ್ದೇಶಿಸಿದ ಚಂಪಾಶೆಟ್ಟಿರವರ ಶ್ರಮ ನಾಟಕದಾದ್ಯಂತ ಕಂಡುಬರುತ್ತದೆ.

ಅಭಿನಯದಲ್ಲಿ ಗೆದ್ದ ನಾಟಕ ಅದು ಯಾಕೋ ರಂಗವಿನ್ಯಾಸದಲ್ಲಿ ಸಮಸ್ಯೆಯನ್ನುಂಟುಮಾಡಿದಂತಿದೆ. ಸೆಂಟರ್ ಸ್ಟೇಜನ್ನು ಬಳಸಿ ಕಟ್ಟಬೇಕಾಗಿದ್ದ ದೃಶ್ಯಗಳೆಲ್ಲಾ ಬಲಗಡೆಗೆ ಸ್ಥಳಾಂತರಗೊಂಡು ಸ್ಟೇಜ್ ಬ್ಯಾಲನ್ಸ ಮಾಡುವಲ್ಲಿ ಇಂಬ್ಯಾಲನ್ಸ ಆಗಿದೆ. ಪುಟ್ಟಮ್ಮತ್ತೆಯ ಮನೆಯು ಅಜ್ಜಯ್ಯನ ಮನೆಯ ಭಾಗವೇ ಆದರೂ ಹಲವಾರು ಬಾರಿ ಗೊಂದಲವನ್ನುಂಟು ಮಾಡಿದೆ. ರಂಗವಿನ್ಯಾಸದಲ್ಲಿ ಆದ ಅನಿರೀಕ್ಷಿತ ಬದಲಾವಣೆಗಳು ಬ್ಲಾಕಿಂಗ್ ಹಾಗೂ ಮೂವಮೆಂಟಗಳ ಮೇಲೂ ಪರಿಣಾಮ ಬೀರಿತು. ಸೆಟ್ನ್ನು ರೀಡಿಸೈನ್ ಮಾಡಿದರೆ ನಾಟಕ ಇನ್ನೂ ಚೆನ್ನಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ. ಹಾಗೆಯೇ ಮಹದೇವಸ್ವಾಮಿ ನಿರ್ವಹನೆ ಮಾಡಿದ ಬೆಳಕಿನ ವಿನ್ಯಾಸವೂ ಸಹ ನಾಟಕದಾದ್ಯಂತ ಕಿರಿಕಿರಿಯನ್ನುಂಟುಮಾಡಿತು. ಅದೆಷ್ಟೋ ದೃಶ್ಯಗಳಲ್ಲಿ ಕೆಲವು ಪಾತ್ರಗಳ ಮುಖಗಳ ಮೇಲೆ ಬೆಳಕೇ ಇರಲಿಲ್ಲ. ಮುಂದಿನ ಶೋಗಳಲ್ಲಿ ಕುರಿತು ಗಮನಗೊಡಬಹುದಾಗಿದೆ. ರಮಾದೇವಿಯವರ ವಸ್ತ್ರವಿನ್ಯಾಸ ಹಾಗೂ ರಾಮಕೃಷ್ಣ ಬೆಳ್ತೂರರ ಪ್ರಸಾಧನ ಪ್ರತಿ ಪಾತ್ರಗಳನ್ನು ಸೊಗಸಾಗಿ ಚಿತ್ರಿಸಿವೆ.


ನಾಟಕದಲ್ಲಿ ಕುಂದಾಪುರ ಕಡೆಯ ಹವ್ಯಕ್ಯ ಬ್ರಾಹ್ಮಣರ ಭಾಷೆಯನ್ನು ಬಳಸಲಾಗಿದೆ. ಕೆಲವೊಮ್ಮೆಯಂತೂ ಇದು ಕನ್ನಡ ಭಾಷೆಯ ನಾಟಕವೇ ಅಲ್ಲವೇನೋ ಎನ್ನುವ ಹಾಗೆ ಪ್ರಾಂತೀಯ ಭಾಷೆಯ ಶಬ್ದಗಳು ವಿಜ್ರಂಬಿಸಿವೆ. ಕರಾವಳಿ ಕರ್ನಾಟಕದವರನ್ನು ಹೊರತು ಪಡಿಸಿ ಬೇರೆ ಪ್ಯಾಂತ್ಯದ ಪ್ರೇಕ್ಷಕರಿಗೆ ನಾಟಕದಲ್ಲಿ ಬಳಸಿದ ಭಾಷೆಯನ್ನು ಸಂಪೂರ್ಣವಾಗಿ ಅರಿಯುವುದು ಒಂದಿಷ್ಟು ಕಷ್ಟಕರವೆನಿಸಿದರೂ ಅಪರಿಚಿತ ಭಾಷೆಯ ಪದಗಳ ಸೊಗಸುಗಾರಿಕೆಯನ್ನು ಕೇಳಿ ಅನುಭವಿಸಬಹುದಾಗಿದೆ. ಕರಾವಳಿ ಪ್ರಾಂತ್ಯವನ್ನು ಹೊರತು ಪಡಿಸಿ ಬೇರೆಕಡೆ ನಾಟಕವನ್ನು ಪ್ರದರ್ಶಿಸುವಾಗ ಒಂದಿಷ್ಟು ಪದಗಳ ಬಳಕೆಯಗಳನ್ನು ಕನ್ನಡೀಕರಿಸಿದರೆ ನಾಟಕವನ್ನು ಇನ್ನೂ ಮನಮುಟ್ಟುವಂತೆ ನೋಡುಗರಿಗೆ ತಲುಪಿಸಬಹುದಾಗಿದೆ.

ಅಕ್ಕು ನಾಟಕದಲ್ಲಿ ಕೇಳುಗರ ಗಮನ ಸೆಳೆಯುವುದು ಹಾಡು ಮತ್ತು ಸಂಗೀತ. ವೈದೇಹಿಯವರ ಕವನ ಸಂಕಲನದಿಂದಾಯ್ದ ಕವಿತೆಗಳನ್ನು ಸಂದರ್ಭೋಚಿತವಾಗಿ ಬಳಸಿಕೊಂಡು ದೃಶ್ಯಕ್ಕೆ ಅಗತ್ಯವಾದ ಮೂಡನ್ನು ಸೃಷ್ಟಿಸಲಾಗಿದೆ. ಪ್ರತಿ ಕವನವೂ ಅರ್ಥಪೂರ್ಣವಾಗಿವೆ. ಕಾಶೀನಾಥ ಪತ್ತಾರ್ ಸಂಗೀತ ಸಂಯೋಜನೆ ಹಾಗೂ ವರ್ಷಾ ಮತ್ತು ರಶ್ಮಿರವರ ಸುಮಧುರ ಗಾಯನ ಇಡೀ ನಾಟಕದ ಹೈಲೈಟ್ ಆಗಿದೆ. ಏಳು ಸುತ್ತಿನ ಕೋಟೆ, ಸುತ್ತಿ ಕೊಲ್ಲುವ ಕೋಟೆ, ಬಾಗಿನಿಲ್ಲದ ಕೋಟೆ, ಕಾವಲು ಕೋಟೆ.. ಕಾವಲು ಕೋಟೆ.... ಎನ್ನುವ ಹಾಡು ಅದು ಹೇಗೆ ಪುರುಷ ಸಮಾಜ ಮಹಿಳೆಯ ಸುತ್ತಲೂ ಕೋಟೆಗಳನ್ನು ಕಟ್ಟು ಕಾವಲು ಕಾಯುತ್ತಿದೆ ಎನ್ನುವುದನ್ನು ಮನದಟ್ಟಾಗುವಂತೆ ಹೇಳುತ್ತದೆ.

ನಿರ್ದೇಶಕಿ ಚಂಪಾ ಶೆಟ್ಟಿ
ಯಥಾಸ್ಥಿತಿವಾದವನ್ನು ಬಿಟ್ಟು ವಾಚ್ಯವಾಗಿಯೋ ಸೂಚ್ಯವಾಗಿಯೋ ಅನ್ಯಾಯದ ವಿರುದ್ಧ ಮಹಿಳೆ ಪ್ರತಿಭಟಿಸುವುದನ್ನು ತೋರಿಸಿದ್ದರೆ, ಪುಟ್ಟಮ್ಮತ್ತೆ ಬಾಯಲ್ಲಿ ಹೇಳುವ ತನ್ನ ಬದುಕಿನ ನೋವಿನ ವಿವರಗಳನ್ನು ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದರೆ, ರಂಗವಿನ್ಯಾಸದಲ್ಲಿ ಇನ್ನೊಂದಿಷ್ಟು ಅರ್ಥಪೂರ್ಣ ಬದಲಾವಣೆಗಳನ್ನು ಮಾಡಿದರೆ.. ಅಕ್ಕು ನಾಟಕ ಇನ್ನೂ ಸೊಗಸಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ. ವಸ್ತುಸ್ಥಿತಿಯ ಪ್ರಸ್ತುತಿಯನ್ನು ಮೀರಿ ರಂಗಭೂಮಿ ಬೆಳೆದು ನಿಂತಿದೆ. ಅದು ನಾಟಕದಲ್ಲಿ ಅಪೇಕ್ಷಣೀಯವಾಗಿದೆ. ನಿಟ್ಟಿನಲ್ಲಿ ನಿರ್ದೇಶಕಿ ಗಮನಹರಿಸಿದರೆ ಉತ್ತಮ ನಾಟಕವೊಂದು ಕನ್ನಡ ರಂಗಭೂಮಿಗೆ ದಕ್ಕಿದಂತಾಗುತ್ತದೆ.   

                   -ಶಶಿಕಾಂತ ಯಡಹಳ್ಳಿ




  
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ