ಬುಧವಾರ, ಜನವರಿ 23, 2019

ಆರಂಭವಾದ ಆರ್. ನಾಗೇಶ್ ನಿರ್ದೇಶಿತ ನಾಟಕ ಪ್ರದರ್ಶನ; ಅಗಲಿದ ಶ್ರೀಗಳಿಗೆ ರಂಗನಮನ:



ಸಿದ್ದಗಂಗಾ ಶ್ರೀಗಳ ದೇಹಾಂತ್ಯದ  ಕಾರಣದಿಂದ ಸರಕಾರ ಹೊರಡಿಸಿದ ಮೂರು ದಿನಗಳ ಶೋಕಾಚರಣೆಯಿಂದಾಗಿ ಜನವರಿ 22ರಿಂದ ಆರಂಭವಾಗಬೇಕಿದ್ದ ಆರ್.ನಾಗೇಶರವರ ನಿರ್ದೇಶನದ ನಾಟಕಗಳ ಉತ್ಸವ ಆಗುತ್ತೋ ಇಲ್ಲಾ ನಿಲ್ಲುತ್ತೋ ಎನ್ನುವ ಆತಂಕ ಹಲವಾರು ರಂಗಕರ್ಮಿಗಳಿಗಿತ್ತು. ವಾಟ್ಸಾಪ್ ಗ್ರುಪ್ ಗಳಲ್ಲಿ ಒಂದಿಬ್ಬರು ಶ್ರೀಗಳ ಗೌರವಾರ್ಥವಾಗಿ ನಾಟಕೋತ್ಸವ ನಿಲ್ಲಿಸಬೇಕೆಂದು ಅಪಸ್ವರ ಎತ್ತಿದ್ದರು. ಆದರೆ ರಂಗಭೂಮಿಯ ಒಗ್ಗಟ್ಟು ಬಲು ದೊಡ್ಡದು. ಬಹುತೇಕರು 'ನಾಟಕ ಪ್ರದರ್ಶನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ' ಎಂದೇ ಕಾಮೆಂಟಿಸಿದರು. "ಶೋ ಮಸ್ಟ್ ಗೋ ಆನ್" ಎಂದು ಆಯೋಜಕರಿಗೆ ಬೆಂಬಲವನ್ನಿತ್ತರು. ಹೀಗಾಗಿ ನಾಗೇಶರವರ ನಿರ್ದೇಶನದ ನಾಟಕಗಳ ಪ್ರದರ್ಶನವನ್ನು ನಿಲ್ಲಿಸದೇ ಮುಂದವರಿಸಬೇಕೆಂದು ನಿರ್ಧರಿಸಿ ಮೊಬೈಲ್ ಸಂದೇಶಗಳನ್ನು ರವಾನಿಸಿ ಬೆಂಗಳೂರಿನ ರಂಗಾಸಕ್ತರ ಆತಂಕ ದೂರಮಾಡಲಾಯಿತು. 

ರಂಗಭೂಮಿಯವರ ಕ್ರಿಯಾಶೀಲತೆ ಮೆಚ್ಚುವಂತಹುದು. ಸಂದರ್ಭದ ಅಗತ್ಯಕ್ಕೆ ತಕ್ಕಂತೆ ಕ್ರಿಯಾಶೀಲ ನಿರ್ಣಯಗಳನ್ನು ತೆಗೆದುಕೊಳ್ಳುವುದರಲ್ಲಿ ರಂಗಭೂಮಿಯವರು ಮೊದಲಿಗರು. ದೂರದ ದೆಹಲಿಯಲ್ಲಿದ್ದ ಕಲಾ ನಿರ್ದೇಶಕರಾದ ಶಶಿಧರ್ ಅಡಪರವರು ವಾಟ್ಸಾಪ್ ಸಂದೇಶಗಳಿಗೆ ಕೂಡಲೇ ಸ್ಪಂದಿಸಿದರು. ತಮ್ಮ ವೇರ್ ಹೌಸ್ನಲ್ಲಿದ್ದ ಶಿವಕುಮಾರ ಸ್ವಾಮೀಜಿಗಳ ಆಳೆತ್ತರದ ಪ್ರತಿಮೆಯನ್ನು ರಿಪೇರಿ ಮಾಡಿ ಹೊಸದಾಗಿ ಬಣ್ಣ ಹಚ್ಚಿಸಿ ಅಪ್ಪಯ್ಯರವರ ಮೂಲಕ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಿದರು. ರಂಗೋತ್ಸವದ ಆಯೋಜಕರು ಆ ಪ್ರತಿಮೆಗೆ ಹೂಹಾರ ಹಾಕಿ ರವೀಂದ್ರ ಕಲಾಕ್ಷೇತ್ರದ ಪ್ರವೇಶದ್ವಾರದಲ್ಲಿ ಪ್ರತಿಷ್ಠಾಪನೆ ಮಾಡಿದರು. ಸಂಜೆ ನಾಟಕ ಆರಂಭಕ್ಕೆ ಮುಂಚೆ ರಂಗಕರ್ಮಿ ಕಲಾವಿದರೆಲ್ಲಾ ಸೇರಿ ಶ್ರೀಗಳ ಪ್ರತಿಮೆಗೆ ಪ್ರೀತಿ ಹಾಗೂ ಭಕ್ತಿಯಿಂದ ಪುಷ್ಪಾರ್ಚನೆ ಮಾಡಿ ಶ್ರದ್ದಾಂಜಲಿಯನ್ನು ಸಲ್ಲಿಸಿದರು. ರಂಗಮಂದಿರದೊಳಗೂ ಸಹ ಪ್ರೇಕ್ಷಕರೆಲ್ಲಾ ಎದ್ದು ನಿಂತು ಅಗಲಿದ ಸ್ವಾಮೀಜಿಗಳಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ರಂಗನಮನಗಳನ್ನು ಅರ್ಪಿಸಿದರು. ನಂತರ "ತಬರನ ಕಥೆ" ನಾಟಕ ಪ್ರದರ್ಶನವನ್ನು ಆರಂಭಿಸಲಾಯಿತು. 

ಶ್ರೀಗಳ ಅಗಲಿಕೆಯಿಂದ ನಾಟಕೋತ್ಸವ ನಡೆಯುವುದೋ ಇಲ್ಲವೋ ಎನ್ನುವ ಆತಂಕದ ನಡುವೆಯೂ ಇಡೀ ಕಲಾಕ್ಷೇತ್ರದ ಮುಕ್ಕಾಲು ಭಾಗ ಪ್ರೇಕ್ಷಕರು ತುಂಬಿದ್ದರು. ನಾಟಕೋತ್ಸವದ ಮೊದಲ ದಿನದ ಪ್ರದರ್ಶನ ಯಾವುದೇ ಅಡ್ಡಿ ಆತಂಕಗಳಿಲ್ಲದೇ ನೆರವೇರಿತು. 

ಇಷ್ಟೆಲ್ಲಾ ಆದರೂ ಮೊದಲ ದಿನ ನ್ಯೂನ್ಯತೆಯೊಂದು ನಾಗೇಶರವರ ಅಭಿಮಾನಿಗಳನ್ನು ಕಾಡಿದ್ದಂತೂ ಸುಳ್ಳಲ್ಲ. ಶ್ರೀಗಳ ಪ್ರತಿಮೆಗೆ ರಂಗನಮನ ಸಲ್ಲಿಸುವ ಆತುರದಲ್ಲಿ ಆಯೋಜಕರು ಆರ್.ನಾಗೇಶರವರನ್ನೇ ಮರೆತಿದ್ದು ವಿಪರೀತ ವಿಪರ್ಯಾಸ. ಕಲಾಕ್ಷೇತ್ರದ ಒಳ ಹೊರಗೆ ಎಲ್ಲಿ ಕಣ್ಣಾಯಿಸಿದರೂ   ನಾಗೇಶರವರ ಒಂದೇ ಒಂದು ಭಾವಚಿತ್ರವೂ ಇರಲಿಲ್ಲ. ಯಾರ ನೆನಪಿಗಾಗಿ ನಾಟಕೋತ್ಸವವನ್ನು ಮಾಡಲಾಗುತ್ತಿದೆಯೋ ಅವರದೇ ಪೊಟೋ ಇಲ್ಲವೆಂದರೆ ಹೇಗೆ..? ಇತ್ತೀಚೆಗೆ ರಂಗಭೂಮಿಗೆ ಬಂದಿರುವ ಯುವಕರಿಗೆ ನಾಗೇಶರವರು ಹೀಗಿದ್ದರು ಎಂದು ತೋರಿಸಲಾದರೂ ಭಾವಚಿತ್ರವೊಂದು ಬೇಕಿತ್ತಲ್ಲವೇ?. ನಾಳೆ ಹಾಗೂ ನಾಡದ್ದಾದರೂ ಆಯೋಜಕರು ಆರ್.ನಾಗೇಶರವರ ಭಾವಚಿತ್ರವನ್ನು ವೇದಿಕೆಯ ಬದಿಯಲ್ಲಿ ಇಟ್ಟು ಹೂಹಾರ ಹಾಕಿ ಪುಷ್ಪಾರ್ಪಣೆ ಮಾಡಿ ಆ ರಂಗ ಚೇತನಕ್ಕೆ ಗೌರವವನ್ನು ಸಲ್ಲಿಸಬೇಕಾದದ್ದು ಸೂಕ್ತ. ಒಂದು ಚೇತನವನ್ನ ಗೌರವಿಸಲು ಇನ್ನೊಂದು ಚೇತನವನ್ನು ನಿರ್ಲಕ್ಷಿಸುವುದು ರಂಗಭೂಮಿಯವರಿಗೆ ಸಮಂಜಸವಲ್ಲ.
 
 
ಈ ನಾಟಕೋತ್ಸವದ ಪ್ರದರ್ಶನಕ್ಕೆ ಟಿಕೇಟ್ ಇಡಬೇಕಿತ್ತು. "ಪುಕ್ಕಟೆ ನಾಟಕ ಪ್ರದರ್ಶನ ಮಾಡಲೇಬಾರದು, ಪ್ರೇಕ್ಷಕರಿಗೂ ರಂಗಭೂಮಿ ಕುರಿತು ಕನಿಷ್ಟ ಹೊಣೆಗಾರಿಕೆ ಇರಬೇಕು" ಎನ್ನುವುದು ಆರ್.ನಾಗೇಶರವರ ಆಶಯವಾಗಿತ್ತು. ಅವರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಆರಂಭಿಸಿದ್ದ ತಿಂಗಳ ನಾಟಕ ಪ್ರದರ್ಶನಕ್ಕೆ ಖಡ್ಡಾಯವಾಗಿ ಟಿಕೆಟ್ ಇಟ್ಟು ಅದರಿಂದ ಬಂದ ಹಣವನ್ನೆಲ್ಲಾ ನಾಟಕ ಪ್ರದರ್ಶನ ಮಾಡಿದ ತಂಡಗಳಿಗೇ ಕೊಡುತ್ತಿದ್ದರು. ರಂಗಭೂಮಿ ಅನ್ನುವುದು ಜನಾಶ್ರಿತವಾಗಿ ಬೆಳೆಯಬೇಕು ಎನ್ನುವುದೇ ನಾಗೇಶರವರ ಬಯಕೆಯಾಗಿತ್ತು. ಆದರೆ.. ನಾಗೇಶರವರ ನೆನಪಿನ ನಾಟಕೋತ್ಸವದಲ್ಲಿ ಪ್ರದರ್ಶನವಾಗುತ್ತಿರುವ ನಾಟಕಗಳನ್ನು ಟಿಕೇಟ್ ಇಡದೇ ಉಚಿತವಾಗಿ ತೋರಿಸುತ್ತಿರುವುದು ಅವರ ಆಶಯಕ್ಕೆ ವಿರುದ್ದವಾಗಿದೆ. ಆದರೂ ಒಂದು ಸಮಾಧಾನಕರ ವಿಷಯವೇನೆಂದರೆ ರಂಗಮಂದಿರದ ಪ್ರವೇಶದ್ವಾರದಲ್ಲಿ ಕಾಣಿಕೆ ಹುಂಡಿಯನ್ನಿಟ್ಟಿದ್ದು‌ ಹಾಗೂ ಇನ್ನೂ ವಿಶೇಷವೆಂದರೆ ನಾಟಕದ ನಂತರ ಪ್ರೇಕ್ಷಕರು ಸಾಲುಗಟ್ಟಿ ನಿಂತು ಹುಂಡಿಗೆ ತಮ್ಮ ಕೈಲಾದಷ್ಟು ಹಣವನ್ನು ಹಾಕಿದ್ದು. 

ಶ್ರೀ ಶಿವಕುಮಾರ ಸ್ವಾಮಿಗಳು ಅನ್ನ, ಅಕ್ಷರ, ಆದ್ಯಾತ್ಮ ದಾಸೋಹಿಗಳಾದರೆ ನಮ್ಮ ನಾಗೇಶರವರು ರಂಗದಾಸೋಹಿಗಳು. ತಮ್ಮ ನಾಟಕಗಳ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದವರು.  ನೂರಕ್ಕು ಹೆಚ್ಚು ನಾಟಕಗಳನ್ನು ನಿರ್ದೇಶಿಸಿದವರು. ಹಲವಾರು ಕಲಾವಿದರನ್ನು ತಿದ್ದಿ ತೀಡಿ ಬೆಳೆಸಿ ರಂಗಭೂಮಿಯತ್ತ ಸೆಳೆದವರು. ರಂಗ ಕಾಯಕವನ್ನೇ ಬದುಕಾಗಿಸಿಕೊಂಡವರು. ತ್ರಿವಿಧ ಕಾಯಕ ಜೀವಿಗಳಾದ ಶ್ರೀಗಳ ಶೋಕಾಚರಣೆಯಿಂದಾಗಿ ರಂಗಕಾಯಕ ಜೀವಿಯ ನಾಟಕೋತ್ಸವ ನಿಲ್ಲದೇ ಮುಂದುವರೆದಿದ್ದು ಅತ್ಯಂತ ಸಮಾಧಾನಕರ ಸಂಗತಿ. ಅಪಸ್ವರಗಳನ್ನು ನಿರ್ಲಕ್ಷಿಸಿ ರಂಗಮಂದಿರಕ್ಕೆ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲಿಸಿದ್ದು ಸಂತಸದ ವಿಷಯ. ದಶಕಗಳ ನಂತರ ಮತ್ತೆ ನಾಗೇಶರವರ ನಿರ್ದೇಶನದ " ತಬರನ ಕಥೆ" ನಾಟಕ ನೋಡುವ ಭಾಗ್ಯ ಸಿಕ್ಕಿದ್ದು  ಅವಿಸ್ಮರಣೀಯ.

- ಶಶಿಕಾಂತ ಯಡಹಳ್ಳಿ
 
 
 
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ