ನಿರ್ದೇಶಕ ಆರ್.ನಾಗೇಶ್‌ರವರಿಗೆ
75 ; ಕೃಷ್ಣೇಗೌಡರ ಆನೆ ರಂಗಪ್ರಯೋಗ 150 :
ಪೂರ್ಣಚಂದ್ರ ತೇಜಸ್ವಿಯವರ
‘ಕೃಷ್ಣೇಗೌಡರ
ಆನೆ’
ನೀಳ್ಗತೆಯನ್ನು ರಂಗಭೂಮಿಗೆ ಅಳವಡಿಸುವುದು ಸುಲಭಸಾಧ್ಯ ಕೆಲಸವಲ್ಲ. ಯಾಕೆಂದರೆ ಆ ಕಥೆಯ ನಾಯಕ ಸ್ಠಾನದಲ್ಲಿರೋದು ಒಂದು ಆನೆ. ಹವ್ಯಾಸಿ ರಂಗಭೂಮಿಯಲ್ಲಿ ಆನೆಯನ್ಯಾರಾದರೂ ರಂಗವೇದಿಕೆಯ
ಮೇಲೆ ತರಲು ಸಾಧವೇ? ಯಾಕೆ ಸಾಧ್ಯವಿಲ್ಲ? ಅಸಾಧ್ಯವನ್ನು ಸಾಧ್ಯ ಮಾಡೋದೇ ರಂಗಮಾಧ್ಯಮ ತಾನೆ? ಕೊನೆಗೂ
ಆನೆ ಬಂತು, ಜನರೂ ನೋಡಿ ಖುಷಿ ಪಟ್ಟರು, ಕ್ರಿಯಾಶೀಲ ನಿರ್ದೇಶಕ ಆರ್ ನಾಗೇಶ್‌ರವರು ಕರಿ ಬಣ್ಣದ ಛತ್ರಿಯೊಂದನ್ನು
ಆನೆ ಎಂದು ಪ್ರೇಕ್ಷಕರನ್ನು ನಂಬಿಸುವಲ್ಲಿ ಯಶಸ್ವಿಯೂ ಆದರು. ನಾಟಕವೆಂದರೆ “ಮೇಕ್ ಇಟ್ ಬಿಲೀವ್” ಎಂಬ ಸಿದ್ದಾಂತವನ್ನು ಮತ್ತೊಮ್ಮೆ
ಸಾಬೀತುಪಡಿಸಿದರು. 2002ರಲ್ಲಿ ಮೈಸೂರಿನ ರಂಗಾಯಣಕ್ಕೆ ಆರ್.ನಾಗೇಶರವರು ತೇಜಸ್ವಿಯವರ ‘ಕೃಷ್ಣೇಗೌಡರ ಆನೆ’ ಕಥೆಯನ್ನು ರಂಗರೂಪಾಂತರಗೊಳಿಸಿ
ನಿರ್ದೇಶಿಸಿದ್ದರು. ಈ ನಾಟಕ ಅತೀ ಹೆಚ್ಚು ಜನಪ್ರೀಯವಾಗಿ ರಂಗಾಯಣದ ‘ಮಾಸ್ಟರ್ ಫೀಸ್’ ರಂಗಪ್ರಯೋಗವಾಗಿ ನೂರೈವತ್ತು
ಪ್ರದರ್ಶನಗಳನ್ನು ಕಂಡಿದೆ. ಈಗಲೂ ಈ ನಾಟಕಕ್ಕೆ ಅತೀ ಹೆಚ್ಚು ಬೇಡಿಕೆಯಿದೆ. ಪ್ರೇಕ್ಷಕರನ್ನು ರಂಗಮಂದಿರಕ್ಕೆ
ಕರೆದುತರುವ ಶಕ್ತಿ ಈ ನಾಟಕಕ್ಕಿದೆ.
ಅವತ್ತು 2010 ಸೆಪ್ಟಂಬರ್
18, ‘ಕೃಷ್ಣೇಗೌಡರ
ಆನೆ’
ನಾಟಕದ ನೂರನೇ ಪ್ರದರ್ಶನ ರವೀಂದ್ರ ಕಲಾಕ್ಷೇತ್ರದಲ್ಲಿತ್ತು. ಇತ್ತ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನ
ಆರಂಭವಾಗಿದ್ದರೆ, ಅತ್ತ ಈ ನಾಟಕದ ನಿರ್ದೇಶಕ ಆರ್.ನಾಗೇಶರವರು ಕೊನೆಯುಸಿರೆಳೆದಿದ್ದರು. ನಾಗೇಶರವರ
ಸಾವಿನ ಸುದ್ದಿ ಕಲಾವಿದರ ಕಿವಿಗೆ ಸಿಡಿಲಿನಂತೆ ಅಪ್ಪಳಿಸಿದರೂ ನಾಟಕವನ್ನು ನಿಲ್ಲಿಸದೇ ಮುಂದುವರೆಸಿ
ರಂಗಬದ್ದತೆಯ ಮೂಲಕ ರಂಗಕಾಯಕ ಜೀವಿ ನಾಗೇಶರವರಿಗೆ ರಂಗಗೌರವವನ್ನು ಅರ್ಪಿಸಿದ್ದರು. ಈಗ ನಾಗೇಶರವರಿದ್ದಿದ್ದರೆ
75 ವರ್ಷಗಳು ತುಂಬುತ್ತಿತ್ತು. ಇದೇ ನೆಪದಲ್ಲಿ ಆರ್.ನಾಗೇಶರವರ ನೆನಪಿಗಾಗಿ ಹವ್ಯಾಸಿ ರಂಗಭೂಮಿ ಗೆಳೆಯರು
ಆರ್.ನಾಗೇಶ್ ನಿರ್ದೇಶನದ ಮೂರು ನಾಟಕಗಳ ಉತ್ಸವವನ್ನು ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ 2019,
ಜನವರಿ 22ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದರು. ‘ಕೃಷ್ಣೇಗೌಡರ ಆನೆ’ ನಾಟಕದ ಪ್ರದರ್ಶನವು 23ರಂದು
ಇತ್ತು. ಕಾಕತಾಳೀಯವೆಂಬಂತೆ ಈ ನಾಟಕದ 150ನೇ ಪ್ರದರ್ಶನ ಇದಾಗಿತ್ತು. ಈ ನಾಟಕ ನೋಡುತ್ತಾ ನೋಡುತ್ತಾ
ಆರ್.ನಾಗೇಶರವರ ನೆನಪು ಮರುಕಳಿಸಿತು.
ಈ ನಾಟಕದ ಸಾರ ಹೀಗಿದೆ.. ಆನೆ
ಸಾಕೋದಕ್ಕಿಂತ ಅದರ ಮಾವುತ ಕುಡುಕ ವೇಲಾಯುಧನನ್ನು ಸಂಬಾಳಿಸೋದೇ ಗೂಳೂರು ಮಠದ ಸ್ವಾಮಿಗೆ ಭಾರೀ ಸಮಸ್ಯೆಯಾಯಿತು. “ಜ್ಯೋತಿಷ್ಯ ಸರಕಾರಿ ಕಾನೂನಿನಂತೆ,
ಸಮಸ್ಯೆಯೂ ಉಂಟು ಪರಿಹಾರವೂ ಉಂಟು” ಎನ್ನುವ ಶಾಸ್ತ್ರಿಗಳು ಆನೆ ಮಾರಲು ಸಲಹೆ ಇತ್ತರು
. ತಮ್ಮ ಕೈಲಾಗ ಕೈಂಕರ್ಯವನ್ನು ಅಬ್ರಾಹ್ಮಣರ ತಲೆಗೆ ಕಟ್ಟುವ ಪುರೋಹಿತಶಾಹಿ ಸಂಸ್ಕ್ರತಿಯಂತೆ ಈ ಆನೆ
ಗೌರಿಯನ್ನು ಮಾವುತನ ಸಮೇತ ಕೃಷ್ಟೇಗೌಡರ ತಲೆಗೆ ಕಟ್ಟಿದ ಮಠಾಧೀಶರು ಬೆಂಜ್ ಕಾರ್ ಕೊಳ್ಳುಲು ಆಲೋಚಿಸಿದರು.
ನಂತರ ಶುರುವಾಗಿದ್ದೇ ಆನೆಯನ್ನು ಕೇಂದ್ರವಾಗಿಟ್ಟುಕೊಂಡು ಮನುಷ್ಯನ ಸಣ್ಣತನಗಳ ಪ್ರದರ್ಶನ, ಆಧುನಿಕತೆಯತ್ತ
ವಾಲುತ್ತಿರುವ ಮಠಾಧೀಶರ ಮುಖವಾಡವನ್ನು, ಗಜಾನನ ಶಾಸ್ತ್ರಿಯಂತಹ ಜ್ಯೋತಿಷಿಗಳ ಧಾರ್ಮಿಕ ವ್ಯವಹಾರ ಚತುರತೆಯನ್ನು,
ಒಟ್ಟಾರೆ ಮಠ ಮಾನ್ಯ ಜೀವಿಗಳು ಜನಸಾಮಾನ್ಯರ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಶೋಷಿಸುವ ಪರಿಯನ್ನು
ಅನಾವರಣಗೊಳಿಸುವಲ್ಲಿ ‘ಕೃಷ್ಣೇಗೌಡರ ಆನೆ’ಯು ಸಫಲವಾಯಿತು.
ಆನೆ ಹೇಳಿ ಕೇಳಿ ಮೂಕ ಜೀವಿ,
ಮನುಷ್ಯರ ರಾಜಕೀಯದ ಪರಿವೇ ಅದಕ್ಕಿರಲಿಲ್ಲ. ಹಾಗೂ
ಮನುಷ್ಯರಂತೆ ಆನೆಗೆ ಜಾತಿ ಬೆಂಬಲ, ರಾಜಕೀಯ ಬೆಂಬಲವೂ ಇರಲಿಲ್ಲ. ಕೃಷ್ನೇಗೌಡರು ಆನೆಯನ್ನು ರಾತ್ರಿ
ಕದ್ದು ಕಡಿದ ಕಾಡಿನ ಗಂಧದ ಮರ ಸಾಗಿಸಲು ಬಳಸಿಕೊಂಡರೆ, ಮಾವುತನೋ ಆನೆಯ ಹೆಸರಲ್ಲಿಯೇ ಕೃಷ್ಣೇಗೌಡರಿಂದ
ಕುಡಿತಕ್ಕೆ ಹಣ ಕೀಳತೊಡಗಿದ. ಕರೆಂಟ್ ಕೈ ಕೊಟ್ಟರೆ
ಕೆಇಬಿಯವರು, ಫೋನ್ ಕಟ್ಟಾದರೆ ಟೆಲಿಪೋನ್‌ನವರು ಆನೆ ಮೇಲೆ ಗೂಬೆ ಕೂರಿಸಿ ತಮ್ಮ ಹೊಣೆಗಾರಿಕೆಯಿಂದ
ನುಣುಚಿಕೊಳ್ಳತೊಡಗಿದರು. ಮುನ್ನಿಪಾಲಿಟಿ ಪಾಲಿಟಿಕ್ಸ್‌ಗೂ ಆನೆಯ ವಿಷಯವೇ ಆಹಾರವಾಗಬೇಕಾಯಿತು. ಆನೆಗೆ ಅಯ್ಯಪ್ಪನ ಮಾಲೆ ಹಾಕಿ ಧಾರ್ಮಿಕತೆ ಆರೋಪಿಸಿ ಅದನ್ನು
ಸ್ವಾರ್ಥಕ್ಕೆ ಉಪಯೋಗಿಸಲಾಯಿತು. ಟೆಲಿಫೋನ್ ಲೈನ್
ಮ್ಯಾನ್ ಸತ್ತರೂ ಆರೋಪ ಹೊತ್ತಿದು ಈ ಆನೆಯೇ. ಮನುಷ್ಯ
ಅದ್ಹೇಗೆ ತನ್ನ ಸ್ವಾರ್ಥಕ್ಕೆ, ನೆಪಕ್ಕೆ , ರಾಜಕೀಯಕ್ಕೆ ಮತ್ತು ಲಾಭಕ್ಕೆ ಆನೆಯಂತಹ ಪ್ರಾಣಿಯನ್ನೂ
ಬಳಸಿಕೊಂಡು ಬದುಕುತ್ತಾನೆಂಬುದನ್ನು ವಿಡಂಬನಾತ್ಮಕವಾಗಿ ತೋರುವ ಈ ನಾಟಕವು ಆನೆಯನ್ನು ನೆಪವಾಗಿಟ್ಟ್ಟುಕೊಂಡು
ಮನುಷ್ಯರ ಲಾಭಕೋರತನವನ್ನು ಹಾಸ್ಯಸದೃಶ ದೃಶ್ಯಗಳ ಮೂಲಕ ರಂಗದಂಗಳದಲ್ಲಿ ಬೆತ್ತಲು ಮಾಡುವಲ್ಲಿ ನಿರ್ದೇಶಕರು
ಸಫಲರಾಗಿದ್ದಾರೆ.
ಮಹಿಳೆಯರ ಶೋಷಣೆ ಎಂಬುದು ವರ್ಗಾತೀತ
ಹಾಗೂ ಧರ್ಮಾತೀತ ಎನ್ನುವುದನ್ನು ಈ ನಾಟಕದಲ್ಲಿ ಮಾರ್ಮಿಕವಾಗಿ ತೋರಲಾಗಿದೆ. ‘ಆನೆಗೆ ಕೆಟ್ಟ ಮಾತು ಬೈದಿದ್ದಕ್ಕೆ
ಅಂಗಡಿ ಧ್ವಂಸವಾಯಿತು’ ಎಂಬ ಸತ್ಯವನ್ನು ಬಾಯಿ ಬಿಡಲು ಪ್ರಯತ್ನಿಸಿದ ಹೆಂಡತಿಯ
ಮೇಲೆ ಸಾಬಿ ರೆಹಮಾನ್ ಅಶ್ಲೀಲ ಭಾಷೆಯಲ್ಲಿ ಬೈದು ದೈಹಿಕ ಹಲ್ಲೆ ಮಾಡಿದರೆ, ಮಾವುತ ಮೇಲಾಯುಧನ ಹೆಂಡತಿ ಕುಡಿತದ ಬಗ್ಗೆ ಮಾತಾಡಿದ್ದಕ್ಕೆ ಒದೆ ತಿನ್ನಬೇಕಾಗುತ್ತದೆ. ಅಂದರೆ ಕೆಳಸ್ಠರದ ದುಡಿಯುವ ಪುರುಷ ಪುಂಗವರೂ ಸಹ ತಮ್ಮ ಬದುಕಿನ
ಅಸಹನೆ ನಿವಾರಣೆಗೆ ಹೆಂಡತಿಯನ್ನು ನಿಂದಿಸಿ ಹಿಂಸಿಸಿ ಪರಿಹಾರ ಕಂಡುಕೊಳ್ಳುವ ಪರಿಗೆ, ಪುರುಷ ಪ್ರಧಾನ
ಸಮಾಜದಲ್ಲಿ ಮಹಿಳೆಯರಿಗಾಗುವ ಪ್ರತಿಕ್ಷಣದ ಹಿಂಸೆಗೆ ಈ ನಾಟಕ ಸಾಂಕೇತಿಕ ಸಾಕ್ಷಿಯಾಗಿದೆ.
ಟೆಂಪರವರಿ ಸರಕಾರಿ ನೌಕರರ
ದುಸ್ಠಿತಿಯತ್ತ ಬೆಳಕು ಚೆಲ್ಲುವ ನಾಟಕವು ಪಿ.ಎಫ್, ಪೆನ್ಷನ್ ಅಷ್ಟೇ ಯಾಕೆ ಕೆಲಸದ ಭದ್ರತೆಯೂ ಇಲ್ಲದೇ
ತಮ್ಮ ಅತಂತ್ರ ಬದುಕಿನ ಅನಿವಾರ್ಯತೆಗಳನ್ನು ಸಹ ಅನಾವರಣಗೊಳಿಸುತ್ತದೆ. “ಟೆಲಿಫೋನ್ ಕಂಬ ಏರಿದವನು ಕೆಳಗಿಳಿಯಬಹುದು
ಆದರೆ ಕರೆಂಟ್ ಕಂಬ ಏರಿದವನಿಗೆ ಗ್ಯಾರಂಟಿ ಇಲ್ಲ” ಎನ್ನುವ ಲೈನ್‌ಮ್ಯಾನ್ ದುರ್ಗಪ್ಪ
ತನ್ನ ನೌಕರಿ ಜೊತೆ ಜೀವಕ್ಕೆ ಭದ್ರತೆ ಇಲ್ಲದ್ದನ್ನು ಸಾರುತ್ತಾನೆ. ಟೆಲಿಫೋನ್ ಕಂಬದ ಮೇಲೆ ಇನ್ನೊಬ್ಬ
ಲೈನ್ ಮ್ಯಾನ್ ಸತ್ತರೆ ಸಹೋದ್ಯೋಗಿಗಳು ಮರುಕಪಡೋದು ಬಿಟ್ಟು “ಬಾರೀ ಸಾವು ಕಣ್ರೀ, ಡ್ಯೂಟಿಯಲ್ಲಿದ್ದಾಗ
ಸತ್ತ, ಸರಕಾರದಿಂದ ಪರಿಹಾರ ಸಿಗುತ್ತೆ ಬಿಡಿ: ಎನ್ನುವಷ್ಟು ಅಮಾನವೀಯವಾಗಿ ಮಾತಾಡಿಕೊಳ್ಳುತ್ತಾರೆ. ಆಳುವ ಸರಕಾರಗಳು ಸಾಮಾನ್ಯ ನೌಕರರನ್ನು ಕೆಲಸದ ಭದ್ರತೆಗೆ
ಹೊರತಾಗಿ ಶೋಷಿಸುತ್ತಿರುವ ಪರಿಗೆ ಪ್ರೇಕ್ಷಕ ನಗುವಿನಲ್ಲೂ ನೋವನ್ನು ಅನುಭವಿಸುವಂತಾಯಿತು. ದಿಕ್ಕಿಗೆ ಹತ್ತು ಡಬ್ಬದ ಅಂಚೆ ಎತ್ತಿ, ದಿನಕ್ಕೆ 28 ಮೈಲಿ
ಪೋಸ್ಟ ಹಂಚಿ, ಆಗಾಗ ಹುಚ್ಚು ನಾಯಿ ಕಡಿತಕ್ಕೊಳಗಾಗಿ 60 ರೂ ಸಂಬಳಕ್ಕೆ ಕೆಲಸ ಮಾಡುವ ಪೋಸ್ಟ್ ಮ್ಯಾನ್
ಜಬ್ಬಾರನ ಸ್ಥ್ಠಿತಿಗಂತೂ ಮರುಗದವರಿಲ್ಲ.
ಮೂಡಿಗೆರೆಯ ಮುನ್ಸಿಪಾಲಿಟಿ
ರಾಜಕೀಯ ನಮ್ಮ ವಿಧಾನಸೌಧದ ರಾಜಕೀಯಕ್ಕಿಂತ ಯಾವುದರಲ್ಲೂ ಕಡಿಮೆ ಇರಲಿಲ್ಲ. ಹುಚ್ಚು ನಾಯಿ ನಿಯಂತ್ರಣಕ್ಕೆ
ಕರೆದ ಸಭೆ ಸ್ವಪ್ರತಿಷ್ಟೆಯಿಂದಾಗಿ ಮಾರಾಮಾರಿಯಲ್ಲಿ ಅವಸಾನವಾಯಿತು. ಎಲ್ಲರಿಗೂ ತಮ್ಮ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿ ಸಾಮಾನ್ಯ ಜನರ ಹಿತಾಸಕ್ತಿ
iತ್ತು ಅಭಿವೃದ್ದಿ ಮೂಲೆ ಗುಂಪಾಯಿತು. ‘ರಾಜಕೀಯ ಅನ್ನುವ ಆಕ್ಟೋಪಸ್
ಅದು ಹೇಗೆ ಬದುಕಿನಲ್ಲಿ ಆಟವಾಡುತ್ತಾ ತನ್ನ ಸ್ವಾರ್ಥ ಸಾಧನೆಯಲ್ಲಿ ನಿರತವಾಗಿರುತ್ತದೆ; ಎಂಬುದನ್ನು
ಮಾರ್ಮಿಕವಾಗಿ ತೋರುವ ಲೇಖಕರು ಹಾಗೂ ಪ್ರದರ್ಶನಮಾಧ್ಯಮಕ್ಕೆ
ಅಳವಡಿಸಿದ ನಿರ್ದೇಶಕರು ಅಭಿನಂದನಾರ್ಹರು.
ಈ ನಾಟಕ ವಿನೋದದ ಮೂಲಕ ವಿಷಾದವನ್ನು
ಹೇಳಬೇಕಾಗಿತ್ತು. ತೇಜಸ್ವಿಯವರ ಆಶಯವೂ ಅದೇ ಆಗಿತ್ತು. ಆದರೆ.. ನಾಟಕದಾದ್ಯಂತ ವಿನೋದವೇ ವಿಜ್ರಂಭಿಸಿ
ವಿಷಾದವನ್ನು ಹಿನ್ನೆಲೆಗೆ ತಳ್ಳಿದಂತಿದೆ. ಇದಕ್ಕೆ ಕಲಾವಿದರು ಹಾಸ್ಯಕ್ಕೆ ಹೆಚ್ಚು ಒತ್ತು ಕೊಟ್ಟು
ಓವರ್ ಆಕ್ಟಿಂಗ್ ಶೈಲಿಯನ್ನೂ ರೂಢಿಸಿಕೊಂಡಿದ್ದೂ ಕಾರಣವಾಗಿದೆ. ನಾಟಕದಲ್ಲಿ ಮಹಿಳೆಯರ ಮೇಲೆ ಹಲ್ಲೆ
ಹಿಂಸೆಗಳಾಗುವಾಗ, ಲೈನ್‌ಮೆನ್ ಕಂಬದ ಮೇಲೆಯೇ ಸತ್ತು ಕೂತಿರುವಾಗಲಾದರೂ ನಟರು ಭಾವತೀವ್ರತೆಯನ್ನು ತೋರಿಸಿದ್ದರೆ
ನಾಟಕ ಇನ್ನೂ ಪ್ರೇಕ್ಷಕರ ಮನಸ್ಸನ್ನು ತಲುಪುತ್ತಿತ್ತು. ತೇಜಸ್ವಿ ಹಾಗೂ ನಾಗೇಶರವರಂತಹ ಪ್ರಜ್ಞಾವಂತರ
ಉದ್ದೇಶ ಬರೀ ನಗಿಸುವುದಲ್ಲ, ಪ್ರೇಕ್ಷಕರನ್ನು ನಗಿಸುತ್ತಲೇ ನೊಂದ ಪಾತ್ರಗಳ ನೋವನ್ನು ಹೇಳುವುದಾಗಿತ್ತು.
ಈ ನಾಟಕದಲ್ಲಿ ಅಭಿನಯಿಸಿದ ಎಲ್ಲರೂ ಅನನ್ಯ ರಂಗಾನುಭವ ಇರುವ ಅಪರೂಪದ ಕಲಾವಿದರು.
ರಂಗಾಯಣದ ಹಿರಿಯ ನಟರುಗಳು. ನಟನೆಯನ್ನೇ ಬದುಕಾಗಿಸಿಕೊಂಡವರು, ಅಭಿನಯವೇ ಇವರ ನಿತ್ಯ ಕಾಯಕ. ಆದರೆ..
ಕಳೆದ ಹಲವು ದಶಕಗಳಿಂದ ಪ್ರತಿ ನಾಟಕದ ನೂರಾರು ಮರುಪ್ರದರ್ಶನಗಳಲ್ಲಿ ಅದದೇ ಪಾತ್ರಗಳನ್ನು ಮಾಡುತ್ತಾ
ಮಾಡುತ್ತಾ ಈ ಎಲ್ಲಾ ಕಲಾವಿದರ ಅಭಿನಯ ಯಾಂತ್ರಿಕವಾಗಿ ಹೋಗಿದ್ದು ‘ಕೃಷ್ಣೇಗೌಡರ ಆನೆ’ ನಾಟಕ ನೋಡಿದವರಿಗೆ ಅರಿವಿಗೆ
ಬಾರದೇ ಇರದು. ಪಾತ್ರದ ಆಳಕ್ಕಿಳಿಯದೇ ಮೆಕ್ಯಾನಿಕಲ್ ಆಗಿ ರೂಢಿಗತವಾದ ರೀತಿಯಲ್ಲಿ ನಟಿಸುತ್ತಿರುವುದರಿಂದ
ಪಾತ್ರದ ಜೀವಂತಿಕೆ ಮರೆಯಾಗಿ ಅಭಿನಯದಲ್ಲಿ ಏಕತಾನತೆ ಅತಿಯಾಗಿದೆ. ಸಾತ್ವಿಕಾಭಿನಯದ ಕೊರತೆ ನಾಟಕದಾದ್ಯಂತ
ಕಂಡುಬರುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ಒಂದೂವರೆ ದಶಕದಿಂದ ಈ ನಾಟಕದಲ್ಲಿ ಹಂಚಿಕೆಯಾದ
ಪಾತ್ರಗಳನ್ನು ಆಯಾ ಕಲಾವಿದರೇ ಮಾಡುತ್ತಾ ಬಂದಿದ್ದಾರೆ. ಬಹುತೇಕ ನಟರು ಈ ನಾಟಕದಲ್ಲಿ ನಾಲ್ಕೈದು ವಿಭಿನ್ನ
ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಅದದೇ ಪಾತ್ರಗಳನ್ನು ಮಾಡುತ್ತಾ ಮಾಡುತ್ತಾ ಕ್ರಿಯಾಶೀಲತೆ, ಚಲನಶೀಲತೆಗಳು ಸ್ಥಾಯಿತ್ವವನ್ನು ಗಳಿಸಿಕೊಂಡು
ಸೃಜನಶೀಲ ಸಂಚಾರತ್ವವನ್ನು ಕಳೆದುಕೊಂಡಿವೆ. ಇದೇ ನಾಟಕವನ್ನು ಹಲವಾರು ಬಾರಿ ನೋಡಿದವರಿಗೆ ಗಮನಕ್ಕೆ
ಬರುವ ಸಂಗತಿ ಏನೆಂದರೆ ನಟರ ನಟನೆಯಲ್ಲಿರುವ ಏಕತಾನತೆ. ಮೊದಲನೇ ಪ್ರದರ್ಶನವನ್ನು ಹೇಗೆ ಮಾಡುತ್ತಿದ್ದರೋ
ಹಾಗೆಯೇ ನೂರೈವತ್ತೈದನೇ ಪ್ರದರ್ಶನದಲ್ಲೂ ಸ್ಟಿರಿಯೋ ಟೈಪ್ ನಟನೆಯನ್ನು ಮಾಡುತ್ತಿದ್ದಾರೆ. ನಾಟಕ ಅನ್ನುವುದು
ಸಿನೆಮಾದ ಹಾಗೆ ಪ್ರದರ್ಶನವಲ್ಲ. ಪ್ರತಿ ನಾಟಕವನ್ನೂ ಪ್ರಯೋಗ ಎನ್ನುತ್ತೇವೆ ಯಾಕೆಂದರೆ ಪ್ರಯೋಗದಿಂದ
ಪ್ರಯೋಗಕ್ಕೆ ನಾಟಕ ಇಂಪ್ರೂ ಆಗುತ್ತಾ ಹೋಗಬೇಕು. ರಂಗಾಯಣದ ಅನುಭವಿ ಕಲಾವಿದರು ತಮ್ಮ ಪಾತ್ರಗಳಿಗೆ
ಇನ್ನೂ ಹೆಚ್ಚೆಚ್ಚು ಜೀವಂತಿಕೆಯನ್ನೂ, ಕ್ರಿಯಾಶೀಲತೆಯನ್ನು ತುಂಬುತ್ತಾ ಹೋಗಬೇಕು. ರಂಗಭೂಮಿಯ ಪ್ರಯೋಗಶಾಲೆಯಲ್ಲಿ
ಬದಲಾವಣೆಗಳಿಲ್ಲದಿದ್ದರೆ ನಿಂತನೀರಾಗುವ ಸಾಧ್ಯತೆ ಇದೆ. ಒಬ್ಬ ಪ್ರೇಕ್ಷಕ ಎಷ್ಟು ಸಲ ನಾಟಕ ನೋಡಿದರೂ
ಆತನಿಗೆ ಹೊಸ ಅನುಭವ ದಕ್ಕುವಂತೆ ನಾಟಕ ಮೂಡಿಬರಬೇಕು. ಆಗ ರಂಗಪ್ರಯೋಗ ಎನ್ನುವುದಕ್ಕೆ ಅರ್ಥ ಬರುತ್ತದೆ.
ರಂಗಾಯಣದ ಹಿರಿಯ ಕಲಾವಿದರಿಂದ ಸೃಜಶೀಲತೆಯನ್ನು ಪ್ರೇಕ್ಷಕರು
ಅಪೇಕ್ಷಿಸುತ್ತಾರೆ.
“ಕೃಷ್ಣೇಗೌಡರ ಆನೆ” ನಾಟಕದ ಪ್ರಸ್ತುತ ಪ್ರದರ್ಶನದ
ಮೊದಲಾರ್ಧದ ಭಾಗ ಲವಲವಿಕೆಯಿಂದ ನೋಡಿಸಿಕೊಂಡು ಹೋಯಿತು. ಆದರೆ.. ಆಮೇಲೆ ಅದ್ಯಾಕೋ ಬೋರ್ ಹೊಡೆಸಲು
ಆರಂಭವಾಯಿತು. ದೃಶ್ಯ ಸೃಷ್ಟಿಗಿಂತಲೂ ನಿರೂಪಣಾ ವಿವರಗಳು ಹೆಚ್ಚಾಗಿದ್ದು ಇದಕ್ಕೆ ಕಾರಣವೋ ಅಥವಾ ಆರಂಭದಿಂದ
ಹಾಸ್ಯರಸವನ್ನೇ ಅನುಭವಿಸಿದ ಪ್ರೇಕ್ಷಕರು ಅದರ ಏಕತಾನತೆಯಿಂದಾಗಿ ಬೇಸರವನ್ನು ಅನುಭವಿಸುವಂತಾಯಿತೋ
ಗೊತ್ತಿಲ್ಲ. ಆದರೆ.. ನಾಟಕ ಮದ್ಯಂತರದ ನಂತರ ತನ್ನ ಗತಿಯಲ್ಲಿ ಮಂದವಾಯಿತು. ಪ್ರೇಕ್ಷಕರ ಕುತೂಹಲವೂ
ಕಡಿಮೆಯಾಯಿತು. ಕೊನೆಕೊನೆಗೆ ಸೆಟ್ ಪರಿಕರಗಳನ್ನೇ ಬದಲಾಯಿಸುವುದನ್ನು ಬಿಟ್ಟು ವಿಭಿನ್ನ ಲೊಕೇಶನ್ನಗಳ
ದೃಶ್ಯಗಳನ್ನು ತೋರಿಸಿದ್ದು ಗೊಂದಲವನ್ನುಂಟುಮಾಡಿತು. ನಾಟಕ ಪ್ರದರ್ಶನಕ್ಕೆ ಮುಂಚೆ ಹೆಚ್ಚು ಸಲ ತಾಲೀಮು
ಮಾಡಿಕೊಂಡು ಬರದಿದ್ದರೆ ಏನಾಗುತ್ತದೆ.. ಪಾತ್ರಗಳ ಸಂಭಾಷಣೆಗಳು ತಡವರಿಸುತ್ತವೆ ಇಲ್ಲವೇ ತಪ್ಪಾಗಿ
ಶಬ್ದಗಳು ಹೊರಬರುತ್ತವೆ ಎನ್ನುವುದಕ್ಕೆ ಈ ಪ್ರದರ್ಶನ ಉದಾಹರಣೆಯಾಗಿದೆ. ಪ್ರತಿಯೊಂದು ಪ್ರಯೋಗವೂ ಮೊದಲ
ಪ್ರಯೋಗವೆಂದುಕೊಂಡು ನಟರು ಅತೀವ ಆಸಕ್ತಿ ಹಾಗೂ ಚಲನಶೀಲತೆಯಿಂದ ನಟಿಸಿದರೆ ರಂಗಪ್ರಯೋಗ ಕಳೆಗಟ್ಟುವುದರಲ್ಲಿ
ಸಂದೇಹವೇ ಇಲ್ಲ.
ಈ ನಾಟಕದ ಆಕೃತಿಯಲ್ಲಿ ತುಂಬಾ
ಗಮನಾರ್ಹವೆನಿಸುವುದು ನಾಗೇಶರವರ ಬ್ಲಾಕಿಂಗ್. ಯಾವುದೇ ಪಾತ್ರವನ್ನು ನಿಂತಲ್ಲೇ ನಿಲ್ಲಲು ಬಿಡದೇ ಅಗತ್ಯ
ಚಲನೆಯನ್ನು ಕೊಡುವ ಮೂಲಕ ಪ್ರೇಕ್ಷಕರ ಕಣ್ಣುಗಳು ಅತ್ತಿತ್ತ ಕದಲದಂತೆ ಹಿಡಿದು ನಿಲ್ಲಿಸುವ ಕಲೆ ನಾಗೇಶರವರಿಗೆ
ಸಿದ್ದಿಸಿತ್ತು. ನಾಗೇಶರವರು ಅತೀ ಕಡಿಮೆ ಖರ್ಚಿನಲ್ಲಿ ಸೆಟ್ ಸೃಷ್ಟಿಸುವ ರೀತಿಯೇ ಅನುಕರಣೀಯ. ಅದ್ದೂರಿ
ಸೆಟ್ ಪರಿಕರಗಳನ್ನು ಎಂದೂ ಬಳಸದೇ ಆಯಾ ದೃಶ್ಯಕ್ಕೆ ಎಷ್ಟು ಬೇಕೋ ಅಷ್ಟು ಸಾಂಕೇತಿಕ ಸೆಟ್ ರೂಪಿಸಿ
ನಟರ ಅಭಿನಯದ ಮೂಲಕವೇ ನಾಟಕದ ಆಶಯವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವನ್ನು ನಾಗೇಶರವರು ಮಾಡಿರುವುದು
ಹೊಸ ರಂಗಕರ್ಮಿಗಳಿಗೆ ಮಾದರಿಯಾಗಿದೆ. ಕೃಷ್ಣೇಗೌಡರ ಆನೆಯಲ್ಲಿ ಯಾವುದೇ ಸೆಟ್ ಪರಿಕರಗಳು ವಿಜ್ರಂಭಿಸದೇ
ನಟರ ಅಭಿನಯವೇ ಮೂಲದೃವ್ಯವನ್ನಾಗಿ ಬಳಸಲಾಗಿದೆ. ರಂಗಭೂಮಿ ಎನ್ನುವುದು ನಟರ ಮಾಧ್ಯಮ ಎನ್ನುವುದನ್ನು
ಅಪಾರವಾಗಿ ನಂಬಿದ್ದ ನಾಗೇಶರವರು ನಿರ್ದೇಶಕರ ಬೌದ್ದಿಕ ಪ್ರದರ್ಶನ ನಾಟಕದ ಆಕೃತಿಯಲ್ಲಿ ವಿಜ್ರಂಭಿಸಬಾರದು
ಎನ್ನುತ್ತಿದ್ದರು. ನಟನಾ ಪ್ರಧಾನ ನಾಟಕಗಳನ್ನೇ ಕಟ್ಟಿಕೊಟ್ಟ
ನಾಗೇಶರವರ ನಿರ್ದೇಶನದ ಪ್ರತಿಭೆಯನ್ನು ನೋಡಬೇಕೆಂದರೆ ‘ಕೃಷ್ಣೇಗೌಡರ ಆನೆ’ಯನ್ನೊಮ್ಮೆ ವೀಕ್ಷಿಸಲೇಬೇಕು.
ಪದವಿಪೂರ್ವ ಕಾಲೇಜಿಗೆ ತೇಜಸ್ವಿಯವರ “ಆನೆ” ಕಥೆ ಪಠ್ಯವಾಗಿರುವುದರಿಂದ
ನಾಡಿನ ಪ್ರತಿಯೊಂದು ಕಾಲೇಜುಗಳಲ್ಲೂ ಪ್ರದರ್ಶನಗೊಳ್ಳಬೇಕು. ವಿನೋದದ ಜೊತೆಗೆ ವಿಷಾದವನ್ನೂ, ರಂಜನೆಯ
ಜೊತೆಗೆ ಬೋಧನೆಯನ್ನೂ ಕೊಡುವತ್ತ ರಂಗಾಯಣದ ಕಲಾವಿದರು ಲಕ್ಷ್ಯ ವಹಿಸಬೇಕು.
-ಶಶಿಕಾಂತ ಯಡಹಳ್ಳಿ.
(Photos by Thai Lokesh)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ