“ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ
ವೈಚಾರಿಕ ನಾಟಕಗಳ ಪರಂಪರೆಯನ್ನು ಸೃಷ್ಟಿಸಿದವರಲ್ಲಿ ಆರ್.ನಾಗೇಶ್‌ರವರು ಪ್ರಮುಖರು. ಆರ್ ನಾಗೇಶರವರು
ಈಗ ಇದ್ದಿದ್ದರೆ 75ನೇ ವರ್ಷದ ಜನುಮ ದಿನವನ್ನು ಆಚರಿಸಿ ಜೊತೆಗಿದ್ದವರಿಗೆಲ್ಲ ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ
ಕನ್ನಡ ಹವ್ಯಾಸಿ ರಂಗಭೂಮಿಯ ಗೆಳೆಯರು ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಆರ್.ನಾಗೇಶರವರು
ನಿರ್ದೇಶಿಸಿದ್ದ ಮೂರು ಪ್ರಮುಖ ನಾಟಕಗಳನ್ನು ಮರುನಿರ್ಮಾಣ ಮಾಡಿ ಜನವರಿ 22 ರಿಂದ 24ರವರೆಗೆ ಆರ್.ನಾಗೇಶ್
ನಾಟಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದಾರೆ. ನಾಗೇಶರವರ ನಿರ್ದೇಶನದ ಪ್ರಸಿದ್ದ
ನಾಟಕಗಳಾದ ತಬರನ ಕಥೆ, ಕೃಷ್ಣೇಗೌಡರ ಆನೆ ಮತ್ತು ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ.
ಪ್ರಖ್ಯಾತ ರಂಗನಿರ್ದೇಶಕ ಆರ್.ನಾಗೇಶರವರ 75ನೇ ಜನ್ಮದಿನದ ನೆಪದಲ್ಲಿ ಅವರನ್ನು ನೆನಪಿಸಿಕೊಳ್ಳುವ
ಹಾಗೂ ಈಗಿನ ತಲೆಮಾರಿನ ಯುವರಂಗಾಸಕ್ತರಿಗೆ ನಾಗೇಶರವರ ಕುರಿತು ಪರಿಚಯ ಮಾಡಿಕೊಡುವ ಪುಟ್ಟ ಪ್ರಯತ್ನವೇ
ಈ ಲೇಖನ..”
ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ
ಎಂದೂ ಮರೆಯಲಾಗದ ಹೆಸರು ಆರ್.ನಾಗೇಶ್. ತಮ್ಮ ವಿಶಿಷ್ಟ ಪ್ರಯೋಗಶೀಲತೆಗಳಿಂದಾಗಿ ಕನ್ನಡ ರಂಗಭೂಮಿಗೆ
ಬಹು ಮಹತ್ವದ ನಾಟಕಗಳನ್ನು ಕೊಟ್ಟ ಕ್ರಿಯಾಶೀಲ ನಿರ್ದೇಶಕ ಆರ್.ನಾಗೇಶ್. 2018ರ ಸೆಪ್ಟಂಬರ್ 18ಕ್ಕೆ
ನಾಗೇಶರವರು ತೀರಿಕೊಂಡು ಸರಿಯಾಗಿ ಎಂಟು ವರ್ಷಗಳಾಯ್ತು. ಈ ಎಂಟು ವರ್ಷಗಳಲ್ಲಿ ನಾಗೇಶರವರ ಅನುಪಸ್ಥಿತಿ
ಹಲವಾರು ರಂಗಕರ್ಮಿಗಳನ್ನು ಕಾಡಿದ್ದಂತೂ ಸತ್ಯ. ನಟರಾಗಿ ನಿರ್ದೇಶಕರಾಗಿ, ಸಂಘಟಕರಾಗಿ, ಬೆಳಕು-ಉಡುಪು
ಹಾಗೂ ರಂಗ ವಿನ್ಯಾಸಕಾರರಾಗಿ ಕನ್ನಡ ರಂಗಭೂಮಿಗೆ ನಾಗೇಶರವರು ತಮ್ಮ ನಾಲ್ಕೂವರೆ ದಶಕಗಳ ರಂಗಪಯಣದಲ್ಲಿ
ಕೊಟ್ಟ ಕೊಡುಗೆ ಅವಿಸ್ಮರಣೀಯ.
ತಬರನ ಕಥೆ, ಕೃಷ್ಣೇಗೌಡರ ಆನೆ,
ಯಯಾತಿ, ತಾಮ್ರಪತ್ರ, ಹರಕೆಯ ಕುರಿ, ಜಯಸಿದ ನಾಯಕ, ಚೋಮ, ನನ್ನ ತಂಗಿಗೊಂದು ಗಂಡು ಕೊಡಿ, ಕಾಮಗಾರಿ,
ಬುಜಂಗಯ್ಯನ ದಶಾವತಾರ.. ಹೀಗೆ ಒಂದಕ್ಕಿಂತಾ ಒಂದು ವಿಭಿನ್ನವಾದ ನೂರಕ್ಕೂ ಹೆಚ್ಚು ನಾಟಕಗಳನ್ನು ನಾಗೇಶರವರು
ನಿರ್ದೇಶಿಸಿದ್ದಾರೆ. ಶೇಕ್ಸಪೀಯರನ ಓಥೇಲೋ, ಆರ್ಥ ಮಿಲ್ಲರ್ ನ “ಆಲ್ ಮೈ ಸನ್ಸ್”, ಗಾರ್ಕಿಯ ‘ಲೋವರ್ ಡೆಪ್ತ್’, ರಾಕೇಶ ಮೋಹನರವರ ‘ಆದೇ ಆದೂರೆ’, ಬಾದಲ್ ಸರ್ಕಾರರ ‘ಏವಂ ಇಂದ್ರಜೀತ್’, ಗಿರೀಶ್ ಕಾರ್ನಾಡರ ‘ಯಯಾತಿ’... ನಾಟಕಗಳ ನಿರ್ಮಿತಿಯಲ್ಲಿ
ನಾಗೇಶರವರ ಪಾತ್ರ ಬೆರಗುಗೊಳಿಸುವಂತಹುದು. ಶ್ರೀರಂಗರ ‘ಕೇಳು ಜನಮೇಜಯ’, ಕುವೆಂಪುರವರ ‘ರಕ್ತಾಕ್ಷಿ’, ಹೆಚ್,ಎಸ್,ಶಿವಪ್ರಕಾಶರವರ
‘ಸುಲ್ತಾನ
ಟಿಪು’..
ನಾಟಕಗಳನ್ನೂ ನಿರ್ದೇಶಿಸಿದ ನಾಗೇಶರವರ ನಾಟಕ ಕಟ್ಟುವ ಸೃಜನಶೀಲತೆ ಮಾದರಿಯಾಗುವಂತಹುದು. ತಬರನ ಕಥೆಯಲ್ಲಿ
ಸ್ವತಃ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಸಿದ್ದ ನಾಟಕಗಳಿಗಿಂತಲೂ ಕಥೆ,
ಕಾದಂಬರಿಗಳನ್ನು ರಂಗರೂಪಗೊಳಿಸಿ ನಾಟಕಗಳನ್ನು ಮಾಡುವ ಹೊಸ ಪರಂಪರೆಯನ್ನು ನಾಗೇಶರವರು ಆರಂಭಿಸಿ ಅದರಲ್ಲಿ
ಯಶಸ್ವಿಯೂ ಆದರು. ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಗಳ್ಳಿ, ಶಿವರಾಮ್ ಕಾರಂತರರಂತಹ
ಪ್ರಸಿದ್ದ ಸಾಹಿತಿಗಳ ಕನ್ನಡ ಸಾಹಿತ್ಯ ಲೋಕದ ಮಹತ್ವದ ಕೃತಿಗಳನ್ನು ರಂಗದಮೇಲೆ ತಂದು ಪ್ರೇಕ್ಷಕರಿಗೆ
ತಲುಪಿಸುವ ಮಹತ್ತರವಾದ ಕೆಲಸವನ್ನು ಮಾಡಿದರು. ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗ ಹುಟ್ಟಲು
ಕಾರಣೀಕರ್ತರಾದರು.
ಯಾವುದೇ ರೀತಿಯ ಅಕಾಡೆಮಿಕ್
ತರಬೇತಿ ಇಲ್ಲದೇ, ಯಾವುದೇ ರಂಗಶಾಲೆಗಳಲ್ಲಿ ಕಲಿಕೆ ಮಾಡದೇ ರಂಗಕಲೆಯತ್ತ ಇರುವ ಅದಮ್ಯ ಆಸಕ್ತಿ ಹಾಗೂ
ಸೃಜನಶೀಲ ಶಕ್ತಿಯಿಂದ ಕನ್ನಡ ರಂಗಭೂಮಿಯಲ್ಲಿ ಯಶಸ್ವಿ ನಿರ್ದೇಶಕರಾಗಿದ್ದು ಆರ್.ನಾಗೇಶರವರ ವಿಶೇಷತೆಯಾಗಿದೆ.
ಒಂದು ರೀತಿಯಲ್ಲಿ ಏಕಲವ್ಯ ಪ್ರತಿಭೆಯಾಗಿ ಬೆಳೆದ ನಾಗೇಶರವರು ಮುಂದೆ ಅದೆಷ್ಟೋ ಯುವಜನರಿಗೆ ಗುರುದ್ರೋಣರಂತೆ
ರಂಗಗುರುವಾಗಿದ್ದು ಗಮನಾರ್ಹ.
ನಾಗೇಶರವರು ವಾರ್ತಾ ಇಲಾಖೆಯ
ಕಲಾವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಕ್ಕಿಂತಲೂ ರಂಗಭೂಮಿಯ ಕಾಯಕದಲ್ಲಿ ನಿರತರಾಗಿದ್ದೇ ಹೆಚ್ಚು.
ತಮ್ಮ ನೆಚ್ಚಿನ ರವೀಂದ್ರ ಕಲಾಕ್ಷೇತ್ರದ ಮ್ಯಾನೇಜರ್ ಆಗಿ ಬಂದು ಕಲಾಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು
ಮಾಡಲು ಶ್ರಮಿಸಿದರು. ರಂಗಭೂಮಿಯತ್ತಲೇ ಒಲವು ಅತಿಯಾಗಿ ವಾರ್ತಾ ಇಲಾಖೆಯ ಸರಕಾರಿ ಕೆಲಸದಿಂದ ವಾಲಂಟೆರಿ
ರಿಟೈರ್‌ಮೆಂಟ್ ತೆಗೆದುಕೊಂಡರು. 2001 ರಿಂದ ಮೂರು ವರ್ಷಗಳ ಕಾಲ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ
ನಾಗೇಶರವರು ಕೆಲವಾರು ವಿಶೇಷ ಯೋಜನೆಗಳನ್ನು ರೂಪಿಸಿ ಅಕಾಡೆಮಿಯ ಘನತೆಯನ್ನು ಹೆಚ್ಚಿಸಿದರು. ತಿಂಗಳ
ನಾಟಕ ಪ್ರದರ್ಶನ ಯೋಜನೆಯನ್ನು ಆರಂಭಿಸಿ ಯಶಸ್ವಿಗೊಳಿಸಿದ ಕೀರ್ತಿ ನಾಗೇಶರವರದ್ದಾಗಿದೆ. ‘ನಾಟಕ ಅಂದರೆ ಪುಕ್ಕಟೆ ಅಲ್ಲಾ..
ಪ್ರೇಕ್ಷಕರಿಗೂ ಜವಾಬ್ದಾರಿ ಇದೆ.. ಆದ್ದರಿಂದ ಟಿಕೆಟ್ ಇಟ್ಟೇ ನಾಟಕ ಮಾಡಬೇಕು’ ಎನ್ನುವ ನಿಲುವನ್ನು ಪ್ರತಿಪಾದಿಸಿ
ನಾಟಕ ಅಕಾಡೆಮಿ ಪ್ರಾಯೋಜಿತ ಹಾಗೂ ಅನುದಾನಿತ ನಾಟಕಗಳಿಗೆಲ್ಲಾ ಟಿಕೇಟ್ ಇಟ್ಟು ಬಂದ ಹಣವನ್ನು ಆಯಾ
ತಂಡಗಳಿಗೆ ಕೊಡುವ ಪರಂಪರೆಯನ್ನು ನಾಗೇಶರವರು ಶುರುಮಾಡಿದರು.
ರಂಗಸಂಘಟಕರಾಗಿ ನಾಗೇಶರವರ
ವೈಶಿಷ್ಟ್ಯ ಬಲು ಭಿನ್ನವಾದಂತಹುದು. ಸಮಾನ ಮನಸ್ಕರ ಜೊತೆಗೆ ಒಂದು ರಂಗತಂಡವನ್ನು ಕಟ್ಟಿ ನಾಟಕವನ್ನು
ಆಡಿಸುವುದು ಹಾಗೂ ಯಾವುದೋ ಕಾರಣಗಳಿಂದ ಆ ತಂಡವನ್ನು ಬಿಟ್ಟು ಮತ್ತೊಂದು ತಂಡವನ್ನು ಕಟ್ಟಿ ಬೆಳೆಸುವುದು
ನಾಗೇಶರವರ ವೈಶಿಷ್ಟ್ಯವಾಗಿತ್ತು. 1972ರಲ್ಲಿ ‘ರಂಗಸಂಪದ’ ತಂಡವನ್ನು ಮೊದಲು ಹುಟ್ಟುಹಾಕಿ
ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕವನ್ನು ನಾಗೇಶರವರು ನಿರ್ದೇಶಿಸಿದರು.
ತದನಂತರ ರಂಗಸಂಪದ ಕನ್ನಡ ರಂಗಭೂಮಿಗೆ ಅನೇಕ ಗಮನಾರ್ಹ ನಾಟಕಗಳನ್ನು ಕೊಟ್ಟಿತು. 1984ರಲ್ಲಿ ಸೂತ್ರದಾರ, 1989ರಲ್ಲಿ ಜನನಾಟ್ಯ ಮಂಡಳಿ..
ಹೀಗೆ ಕೆಲವಾರು ರಂಗತಂಡಗಳ ಹುಟ್ಟಿಗೆ ಕಾರಣರಾದ ನಾಗೇಶರವರು ಯಾವುದೇ ತಂಡದಲ್ಲಿ ಗಟ್ಟಿಯಾಗಿ ನೆಲೆನಿಲ್ಲದೇ
ಸದಾ ಹರಿಯುವ ನದಿಯಂತೆ ಕಟ್ಟುವ ಕೆಲಸವನ್ನು ನಿರಂತರವಾಗಿಸಿಕೊಂಡರು. ರಂಗಸಂಘಟನೆಯ ಜೊತೆಜೊತೆಗೆ ಜೆ.ಲೋಕೇಶರವರಂತಹ
ಹಲವಾರು ರಂಗಸಂಘಟಕರನ್ನೂ ಬೆಳೆಸಿದರು.
ಮೊಟ್ಟ ಮೊದಲ ಬಾರಿಗೆ ಕನ್ನಡ
ರಂಗಭೂಮಿಯ ಚಟುವಟಿಕೆಗಳನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ದಾಖಲಿಸುವ ಸ್ತುತ್ಯಾರ್ಹ ಕೆಲಸವನ್ನು ಆರಂಭಿಸಿ
ಯಶಸ್ವಿಯಾದವರು ನಾಗೇಶರವರು. ಆಗ ಇನ್ನೂ ಈಗಿನ ಹಾಗೆ ಅನೇಕಾನೇಕ ಖಾಸಗಿ ವಾಹಿನಿಗಳು ಇರಲಿಲ್ಲ. ಕನ್ನಡಕ್ಕೆ
ಇರುವುದೊಂದೇ ‘ಡಿಡಿ9’ ಎನ್ನುವ ಸರಕಾರಿ ವಾಹಿನಿ.
“ರಂಗವಿಹಂಗಮ” ಎನ್ನುವ ಹೆಸರಲ್ಲಿ ಪ್ರತಿ
ವಾರ ಕನ್ನಡ ರಂಗಭೂಮಿಯ ಶತಮಾನದ ಚಟುವಟಿಕೆಗಳನ್ನು ನಾಗೇಶರವರು ಚಿತ್ರೀಕರಿಸಿ ನಿರ್ದೇಶಿಸಿ ಕೊಟ್ಟರು.
ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಜೆ.ಲೊಕೇಶರವರು ಈ ರಂಗ ಸಾಕ್ಷಚಿತ್ರಿಕೆಯ ನಿರ್ಮಾಪಕರಾಗಿದ್ದರೆ,
ಆರ್.ನಾಗೇಶರವರು ನಿರ್ದೇಶಕರಾಗಿದ್ದರು. ಈ ಇಬ್ಬರ ಜೋಡಿ ರಂಗಭೂಮಿಯ ಚಟುವಟಿಕೆಗಳನ್ನು ಟಿವಿ ಮಾಧ್ಯಮದಲ್ಲಿ
ದಾಖಲಿಸುವ ಮೂಲಕ ಅನನ್ಯ ಕೆಲಸವನ್ನು ಮಾಡಿತು.. ಈ ರಂಗಭೂಮಿ ಕುರಿತ ‘ರಂಗವಿಹಂಗಮ’ ಸಾಕ್ಷಚಿತ್ರಕ್ಕೆ ‘ಆರ್ಯಭಟ ಪ್ರಶಸ್ತಿ’ ದೊರಕಿತ್ತು.
ರಂಗಭೂಮಿಗೆ ಮುಂದಿನ ತಲೆಮಾರನ್ನು
ಸಿದ್ದಗೊಳಿಸುವಲ್ಲಿ ನಾಗೇಶರವರ ಕ್ರಮ ಮತ್ತು ಶ್ರಮ ಅದ್ಭುತವಾದದ್ದು. ಅವರಲ್ಲಿದ್ದ ವೃತ್ತಿಪರತೆ ಅನನ್ಯವಾದಂತಹುದು.
ನಾಗೇಶರವರನ್ನು ಕೋಪಿಷ್ಟ ಎಂದು ಆರೋಪಿಸುವವರು ಬೇಕಾದಷ್ಟು ಜನರಿದ್ದಾರೆ. ಅವರ ಉಗ್ರ ಸಿಟ್ಟಿನ ಫಲಾನುಭವಿಗಳೂ
ಬೇಕಾದಷ್ಟಿದ್ದಾರೆ. ಆದರೆ.. ರಂಗಕಲೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳದೇ ಕೇವಲ ಪ್ಯಾಶನ್ನಿಗಾಗಿ
ಬಂದವರಿಗೆ, ತನುಮನವನ್ನು ರಂಗಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳದೇ ಇರುವವರಿಗೆ ನಾಗೇಶರವರು
ಜಮದಗ್ನಿಯೇ ಸರಿ. ಅವರ ಸಿಟ್ಟು ಎಂದೂ ಸ್ಥಾಯಿಭಾವ ಆಗಿರದೇ ಆಯಾ ಕ್ಷಣದ ಸಂಚಾರಿ ಭಾವವಾಗಿತ್ತು. ಅವರ
ಅಸಹನೆ ಹಾಗೂ ಸಿಟ್ಟಿನ ಹಿಂದೆಯೂ ಸಹ ಒಬ್ಬ ಕಠೋರ ನಿಷ್ಟ ಗುರು ಕೆಲಸ ಮಾಡುತ್ತಿದ್ದ. ಶಿಲ್ಪಿಯೊಬ್ಬ
ಆಯ್ದುಕೊಂಡ ಕಲ್ಲನ್ನು ಕಟೆದು, ಉಳಿಯಿಂದ ಹೊಡೆದು ಶಿಲ್ಪವನ್ನಾಗಿ ಮಾಡುವ ಹಾಗೆಯೇ ನಾಗೇಶರವರೂ ಸಹ
ನಟರನ್ನು ಬೈದು, ಹೊಡೆದಾದರೂ ಸರಿ ಅಭಿನಯ ಕಲೆಯಲ್ಲಿ ಪಳಗಿಸುತ್ತಿದ್ದರು. ನಾಗೇಶ್ ಎನ್ನುವ ರಂಗಶಿಲ್ಪಿಯ
ಉಳಿಯಿಂದ ಏಟು ತಿಂದ ಪ್ರಕಾಶ್ ರೈರವರಂತಹ ಅದೆಷ್ಟೋ ನಟರುಗಳು ಈಗ ದೊಡ್ಡ ಕಲಾವಿದರಾಗಿ ಹೆಸರು ಮಾಡಿದ್ದಾರೆ.
ಹಲವಾರು ಯುವಕರು ಈಗಲೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತವರಿಗೆಲ್ಲಾ ನಾಗೇಶರವರು ನಿತ್ಯಸ್ಮರಣೀಯರಾಗಿದ್ದಾರೆ.
ಆರ್.ನಾಗೇಶರವರ ಪೂರ್ಣ ಹೆಸರು
ರಾಮರಾಜೇ ನಾಗೇಶ್, ಬೆಂಗಳೂರಿನ ಪಕ್ಕದಲ್ಲೇ ಇರುವ ರಾಮುಹಳ್ಳಿಯಲ್ಲಿ 1943ರಲ್ಲಿ ಜನಿಸಿದರು. ಶಾಲೆ
ಕಾಲೇಜಿನ ಓದಿನ ದಿನಗಳಲ್ಲೇ ನಾಟಕಗಳತ್ತ ಒಲವನ್ನು ಹೊಂದಿ ಆಕರ್ಷಿತರಾದರು. ಎ.ಸುಬ್ಬರಾವ್ ರವರಲ್ಲಿ
ಸಂಗೀತವನ್ನೂ ಸಹ ಕೆಲ ಕಾಲ ಅಭ್ಯಾಸ ಮಾಡಿದರು. ಶಾಲೆಯಲ್ಲಿದ್ದಾಗ ಮೊಟ್ಟ ಮೊದಲು ಅಭಿನಯಿಸಿದ ನಾಟಕ
“ವಾಟ್
ಗಂಡನ್ ಪದವಿಗೂ ಅಪ್ಲಿಕೇಶನ್”. ನಂತರ ಅಭಿನಯಿಸಿದ್ದು ಸಿ.ಎನ್.ಅನ್ನಾದೊರೈರವರ ‘ನಚ್ಚುಕೊಪೈ’ (ವಿಷದ ಬಟ್ಟಲು) ಎನ್ನುವ
ತಮಿಳು ನಾಟಕ. ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌ಸಿ ಸೇರಿದ ನಂತರ ನಾಟಕ ಚಟುವಟಿಕೆಯಲ್ಲಿ ಭಾಗವಹಿಸುವುದು
ಹೆಚ್ಚಾಯಿತು. ಶ್ರೀರಂಗರ ‘ಕತ್ತಲೆ ಬೆಳಕು’ ನಾಟಕವನ್ನು ಮೊದಲನೆಯದಾಗಿ
ನಿರ್ದೇಶಿಸಿ ಗಮನಸೆಳೆದರು. 50, 60ರ ದಶಕಗಳಲ್ಲಿ ಮನರಂಜನಾತ್ಮಕವಾದ ನಗೆನಾಟಕಗಳೇ ಪ್ರಮುಖವಾಗಿ ಪ್ರದರ್ಶನಗೊಳ್ಳುತ್ತಿದ್ದವು.
ಆಗ ನಾಗೇಶರವರು ವೈಚಾರಿಕ ನಾಟಕಗಳನ್ನು ಆಯ್ದುಕೊಂಡು ನಿರ್ದೇಶಿಸಿ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ
ಕೆಲಸವನ್ನು ಮಾಡಿದರು.
ಶಾಲಾ ದಿನಗಳಲ್ಲಿಯೇ ತಮಿಳಿನ
ವಿಚಾರವಾದಿ ಪೆರಿಯಾರ್‌ರವರ ವೈಚಾರಿಕತೆಯಿಂದ ಪ್ರಭಾವಿತರಾದ ನಾಗೇಶರವರು, ಲಂಕೇಶರವರಂತಹ ಕನ್ನಡದ ಪ್ರಗತಿಪರ
ಸಾಹಿತಿಗಳ ಸಂಪರ್ಕದಿಂದಾಗಿ ವೈಚಾರಿಕತೆಯನ್ನು ಮೈಗೂಡಿಸಿಕೊಂಡು ತಮ್ಮ ಬಹುತೇಕ ನಾಟಕಗಳಲ್ಲಿ ಶೋಷಕ
ವ್ಯವಸ್ಥೆಯ ವಿರುದ್ದದ ಪ್ರತಿಭಟನೆಯನ್ನು ದಾಖಲಿಸುತ್ತಲೇ ಬಂದರು. ರಂಗಭೂಮಿ ಅಂದರೆ ಪ್ರತಿಭಟನೆ ಎನ್ನುವುದನ್ನು
ಬಲವಾಗಿ ನಂಬಿದ್ದರು. ರಾಮಮೂರ್ತಿ ಹಾಗೂ ಅ.ನಾ.ಕೃಷ್ಣರಾಯರ ಕನ್ನಡ ಪರ ಚಳುವಳಿಗಳಲ್ಲಿ ನಾಗೇಶರವರು
ಭಾಗವಹಿಸಿದ್ದರು. ಆಗ ಕನ್ನಡ ಸೇನಾನಿ ರಾಮಮೂರ್ತಿಯವರ ಸಲಹೆಯಂತೆ ನಾಗೇಶರವರು ರಂಗಭೂಮಿಯನ್ನೇ ಬದುಕಿನ
ದಾರಿಯಾಗಿ ಆಯ್ಕೆಮಾಡಿಕೊಂಡು “ಕನ್ನಡ ಸಾಹಿತ್ಯ ಕಲಾ ಸಂಘ” ವನ್ನೇ ನಾಟಕ ತಂಡವಾಗಿ ಮಾಡಿಕೊಂಡು
ಕೆಲವು ಮಹತ್ತರ ನಾಟಕಗಳನ್ನು ಆಡಿದರು. ಈ ತಂಡಕ್ಕೆ ಬಿ.ವಿ.ಕಾರಂತರನ್ನು ದೆಹಲಿಯಿಂದ ಬೆಂಗಳೂರಿಗೆ
ಕರೆತಂದು ಶ್ರೀರಂಗರ ನೀಕೊಡೆ, ನಾಬಿಡೆ ನಾಟಕ ನಿರ್ದೇಶಿಸುವಲ್ಲಿ ನಾಗೇಶರವರು ಮುತುವರ್ಜಿವಹಿಸಿದರು.
ನಾಗೇಶರವರ ಪ್ರಯತ್ನಿದಿಂದ ಕರ್ನಾಟಕಕ್ಕೆ ಬಂದ ಬಿ.ವಿ.ಕಾರಂತರಿಂದ ಕನ್ನಡ ರಂಗಭೂಮಿಗೆ ಹೊಸತನ ತುಂಬಿಬಂತು.
ಎನ್.ಎಸ್.ವೆಂಕಟರಾಂ, ಗೋಪಾಲಕೃಷ್ಣ ನಾಯರಿ ಮುಂತಾದವರು ಸಹ ಈ ತಂಡಕ್ಕೆ ನಾಟಕಗಳನ್ನು ನಿರ್ದೇಶಿಸಿದರು.
‘ಕನ್ನಡ ಸಾಹಿತ್ಯ ಕಲಾಸಂಘ’ ಹಾಗೂ ಲಂಕೇಶರ ‘ಪ್ರತಿಮಾ ನಾಟಕ ರಂಗ’ ಈ ಎರಡೂ ತಂಡಗಳು ಸೇರಿಕೊಂಡು
ಬಿ.ವಿ.ಕಾರಂತರ ನಿರ್ದೇಶನದಲ್ಲಿ ಮಾಡಿದ ಬಯಲು ರಂಗಭೂಮಿ ಪ್ರಯೋಗಗಳಾದ ‘ಸಂಕ್ರಾಂತಿ’, ‘ದೊರೆ ಈಡಿಪಸ್’ ಮತ್ತು ‘ಜೋಕುಮಾರಸ್ವಾಮಿ’ ನಾಟಕಗಳು ಕನ್ನಡ ರಂಗಭೂಮಿಯ
ದಿಕ್ಕನ್ನೇ ಬದಲಾಯಿಸಿದವು. ಹಲವಾರು ರಂಗತಂಡಗಳು ಹುಟ್ಟಿಕೊಂಡವು. ಇದಕ್ಕೆಲ್ಲಾ ಕಾರಣೀಕರ್ತರಾದ ಮಹನೀಯರಲ್ಲಿ
ನಾಗೇಶರವರೂ ಪ್ರಮುಖರು. ಹೊಸ ಹೊಸ ಕನಸುಗಳನ್ನು ಕಾಣುತ್ತಾ.. ಸಹವರ್ತಿಗಳಲ್ಲೂ ಕನಸುಗಳನ್ನು ಬಿತ್ತುತ್ತಾ
ಹುಲುಸಾದ ರಂಗಬೆಳೆಯನ್ನು ಬೆಳೆಯುವ ಬದ್ದತೆಯ ಜೊತೆಗೆ ಪ್ರತಿಭಟನಾ ಮಾಧ್ಯಮವಾದ ರಂಗಭೂಮಿಯ ಮೂಲಕ ಸಮಾಜವನ್ನು
ಬದಲಾಯಿಸುವ ಆಶಯವನ್ನು ಹೊಂದಿದ್ದರು. ಸರಕಾರಿ ನೌಕರರು ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದೆಂಬ
ಕಾನೂನು ಇದ್ದರೂ ಅದಕ್ಕೆಲ್ಲಾ ಯೋಚನೆ ಮಾಡದೇ ವ್ಯವಸ್ಥೆಯ ವಿರುದ್ಧದ ಚಳುವಳಿಗಳಲ್ಲಿ ಭಾಗವಹಿಸುತ್ತಲೇ
ಬಂದ ನಾಗೇಶರವರು ತಮ್ಮ ಬದುಕಿನ ಎಲ್ಲಾ ಸ್ಥರಗಳಲ್ಲಿ ಪ್ರತಿಭಟನೆಯನ್ನು ರೂಢಿಸಿಕೊಂಡಿದ್ದರು ಹಾಗೂ
ತಮ್ಮ ನಾಟಕಗಳ ಮೂಲಕವೂ ಸಹ ಬಂಡಾಯವನ್ನೇ ಪ್ರತಿಪಾದಿಸುತ್ತಿದ್ದರು. ಪ್ರತಿಭಟನೆಯನ್ನು ಭಾವ ಬದುಕು
ಹಾಗೂ ರಂಗಭೂಮಿಯಲ್ಲಿ ಅಳವಡಿಸಿಕೊಂಡು ಕ್ರಿಯಾಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದ ನಾಗೇಶ್‌ರವರು
ಕನ್ನಡ ರಂಗಭೂಮಿಯಲ್ಲಿ ಅಚ್ಚರಿಯಾಗಿಯೇ ಉಳಿದರು.
ನಾಗೇಶರವರ ರಂಗಸಾಧನೆಗೆ ಕರ್ನಾಟಕ
ನಾಟಕ ಅಕಾಡೆಮಿ ಪ್ರಶಸ್ತಿ (1986), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1998), ಕೇಂದ್ರ ಸಂಗೀತ ಮತ್ತು
ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಪುರಸ್ಕಾರಗಳು ದಕ್ಕಿವೆ. ಇವೆಲ್ಲದಕ್ಕಿಂತಲೂ
ಹೆಚ್ಚಾಗಿ ಕನ್ನಡ ರಂಗಭೂಮಿಯಲ್ಲಿ ಅವರ ಹೆಸರು ಅಜರಾಮರವಾಗಿ ನಿಂತಿದೆ. ಮುಂದಿನ ತಲೆಮಾರಿನ ರಂಗಕರ್ಮಿ
ಕಲಾವಿದರುಗಳಿಗೆ ಅವರ ಹೆಸರೇ ಪ್ರೇರಕ ಶಕ್ತಿಯಾಗಿದೆ.
ಅವತ್ತು 2010 ಸೆಪ್ಟಂಬರ್
18. ನಾಗೇಶರವರು ಮೈಸೂರಿನ ರಂಗಾಯಣಕ್ಕೆ ನಿರ್ದೇಶಿಸಿದ್ದ “ಕೃಷ್ಣೇಗೌಡರ ಆನೆ” ನಾಟಕದ ಪ್ರದರ್ಶನ ರವೀಂದ್ರ
ಕಲಾಕ್ಷೇತ್ರದಲ್ಲಿತ್ತು. ಇತ್ತ ನಾಟಕ ಪ್ರದರ್ಶನವಾಗುತ್ತಿದ್ದರೆ ಅತ್ತ ಈ ನಾಟಕದ ನಿರ್ದೇಶಕರ ಹೃದಯ
ಬಡಿತವೇ ನಿಂತಾಗಿತ್ತು. ಎಷ್ಟೋ ನಾಟಕಗಳಿಗೆ ಬೆಳಕು ಕೊಟ್ಟ ನಾಗೇಶ್ ಎಂಬ ರಂಗಭೂಮಿಯ ಕ್ರಿಯಾಶೀಲ ಬೆಳಕು
ನಂದಿಹೋಗಿತ್ತು. ಕನ್ನಡ ಹವ್ಯಾಸಿ ರಂಗಭೂಮಿಯ ಪ್ರಮುಖ ಅಧ್ಯಾಯವೊಂದು ಕೊನೆಗೊಂಡಿತ್ತು. ಅವರ ರಂಗಕೆಲಸ
ಹಾಗೂ ನೆನಪು ಮಾತ್ರ ಇಂದಿಗೂ ರಂಗಕರ್ಮಿಗಳ ಎದೆಯ ಬೆಳಕಾಗಿ ಬೆಳಗುತ್ತಿದೆ. ರಂಗಭೂಮಿ ನಿರಂತರವಾಗಿ
ಮುಂದುವರೆಯುತ್ತಿದೆ..
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ