ಬುಧವಾರ, ಜನವರಿ 23, 2019

“ತಬರನ ಕಥೆ”ಯಲ್ಲಿ ಆಳುವವರ ಅವ್ಯವಸ್ಥೆಯ ಅನಾವರಣ: ನಾಟಕದ ಅಂತ್ಯ ಬದಲಾಯಿಸಿದರೇಕೆ ನಾಗಾಭರಣ? :





ಸ್ವಾಂತಂತ್ರೋತ್ತರ ಭಾರತದಲ್ಲಿ ಜನಸಾಮಾನ್ಯರ ಮೇಲೆ ಆಳುವ ವರ್ಗಗಳು ಮಾಡುವ ಶೋಷಣೆ ಹಾಗೂ ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ತೋರುವ ನಾಟಕವೇ ತಬರನ ಕಥೆ. ಈಗಲೂ ಸರಕಾರಿ ಕಛೇರಿಗಳನ್ನು ಸುತ್ತಿ ಸುಸ್ತಾದವರನ್ನು ತಬರ ಎಂದು ಕರೆಯುವುದೇ ವಾಡಿಕೆ. ಪ್ರಾಮಾಣಿಕರಿಗೆ ಈ ವ್ಯವಸ್ಥೆಯಲ್ಲಿ ಆಗುವ ತಾಪತ್ರಯಗಳನ್ನು ತಬರ ಎನ್ನುವ ಪಾತ್ರದ ಮೂಲಕ ಹೇಳುತ್ತಲೇ ಇಡೀ ಪ್ರಜಾಪ್ರಭುತ್ವ ಎನ್ನುವ ವ್ಯವಸ್ಥೆಯನ್ನು ರಂಗದಂಗಳದಲ್ಲಿ ಬೆತ್ತಲು ಮಾಡಿ ತೋರುವ ಪ್ರಯತ್ನವನ್ನು ತಬರನ ಕಥೆ ನಾಟಕ ಯಶಸ್ವಿಯಾಗಿ ಮಾಡಿದೆ.
 
ಪೂರ್ಣಚಂದ್ರ ತೇಜಸ್ವಿಯವರ ಕಥೆಯನ್ನಾಧರಿಸಿ ತಬರನ ಕಥೆಯನ್ನು ಆರ್.ನಾಗೇಶರವರು ರಂಗರೂಪಾಂತರ ಮಾಡಿ ನಿರ್ದೇಶಿಸಿ ಮೂವತ್ತುಮೂರು ವರ್ಷಗಳೇ ಕಳೆದಿವೆ. ತದನಂತರ ಇದು ಸಿನೆಮಾ ಆಗಿಯೂ ನಿರ್ಮಾಣಗೊಂಡು ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಕಳೆದೊಂದು ದಶಕದ ನಂತರ ಈ ನಾಟಕವನ್ನು  ಆರ್.ನಾಗೇಶರವರ ನೆನಪಿನ ನಾಟಕೋತ್ಸವಕ್ಕಾಗಿ ಬೆನಕ ತಂಡವು ಮರು ನಿರ್ಮಿಸಿದ್ದು ನಾಗಾಭರಣರವರು ಮರುಪ್ರಸ್ತುತಿಯ ಹೊಣೆಗಾರಿಕೆಯನ್ನು ಹೊತ್ತಿದ್ದಾರೆ.

ಆರ್.ನಾಗೇಶರವರಿಗೆ 75 ವರ್ಷಗಳು ತುಂಬಿದ ನೆಪದಲ್ಲಿ ಹವ್ಯಾಸಿ ರಂಗಭೂಮಿಯ ಗೆಳೆಯರು ಕರ್ನಾಟಕ ನಾಟಕ ಅಕಾಡೆಮಿಯ ಸಹಕಾರದೊಂದಿಗೆ ಜನವರಿ 22ರಿಂದ ಮೂರು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗನೊಗ ಆರ್.ನಾಗೇಶ್ ನಿರ್ದೇಶಿಸಿದ ನಾಟಕಗಳ ಉತ್ಸವವನ್ನು ಆಯೋಜಿಸಿದ್ದು ಉತ್ಸವದ ಮೊದಲ ದಿನ ತಬರನ ಕಥೆ ನಾಟಕವು ಪ್ರದರ್ಶನಗೊಂಡಿತು.



ನಾಟಕದ ಸಾರ ಹೀಗಿದೆ... ಸ್ವಾತಂತ್ರ್ಯಪೂರ್ವದ ಬ್ರಿಟೀಷ್ ಆಡಳಿತದಲ್ಲಿ ಹಳ್ಳಿಯೊಂದರಲ್ಲಿ ಸುಂಕ ವಸೂಲಾತಿ ಜವಾನನಾಗಿದ್ದ ತಬರ ತನ್ನ ಪ್ರಾಮಾಣೀಕತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾನೆ. ಕಾಫಿಡಿಪೋದ ಮಾಲೀಕ ಕಟ್ಟದೇ ಹೋದ ತೆರಿಗೆಯು ರಸೀದಿ ಹಾಕಿದ ತಬರನನ್ನು ಸುತ್ತಿಕೊಳ್ಳುತ್ತದೆ. ಸ್ವಾತಂತ್ರ್ಯ ಬಂದ ನಂತರವೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಿವೃತ್ತನಾದ ತಬರನಿಗೆ ಈ ತೆರಿಗೆ ಭೂತ ಹೆಗಲೇರುತ್ತದೆ. ಅನಾರೋಗ್ಯಪೀಡಿತಳಾದ ಹೆಂಡತಿಗೆ ಚಿಕಿತ್ಸೆ ಕೊಡಿಸಲೂ ಆಗದೇ, ಬರಬೇಕಾದ ನಿವೃತ್ತಿ ವೇತನವೂ ಬರದೇ ಸರಕಾರಿ ಕಛೇರಿಗಳಿಗೆ ಅಲೆದಾಡಿ ಹೈರಾಣಾದ ತಬರನಿಗೆ ಮುನ್ಸಿಪಾಲಿಟಿ ಅಧ್ಯಕ್ಷ ನಿವೃತ್ತಿವೇತನ ಬಿಡುಗಡೆ ಮಾಡಲು ಲಂಚ ಕೇಳಿದಾಗ ಸಿಟ್ಟು ಸ್ಪೋಟಗೊಳ್ಳುತ್ತದೆ. ಪೂರಾ ನೀವೇ ಇಟ್ಕೊಳ್ಳಿ ಎಂದು ಆತನ ಮುಖಕ್ಕೆ ಉಗಿದು ತನ್ನ ಪ್ರತಿಭಟನೆಯನ್ನು ತಬರ ತೋರುತ್ತಾನೆ. ಮುನ್ಸಿಪಾಲಿಟಿ ಅಧ್ಯಕ್ಷನ ಕೊಲೆಯ ಗುಮಾನಿಯ ಮೇಲೆ ತಬರ ಪೊಲೀಸರ ಹಲ್ಲೆಗೊಳಗಾಗುತ್ತಾನೆ. ಆಳುವ ವ್ಯವಸ್ಥೆಯ ಭ್ರಷ್ಟಾಚಾರದ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಾನೆ.

ಇದು ಒಬ್ಬ ತಬರನ ಕಥೆಯಲ್ಲ. ಈ ದೇಶದಲ್ಲಿ ಪ್ರಾಮಾಣಿಕವಾಗಿ ಬದುಕುತ್ತೇನೆ ಎನ್ನುವ ಬಹುತೇಕರ ವ್ಯಥೆ. ಬ್ರಿಟೀಷರಂತಹ ಪರಕೀಯರ ಕಾಲದಲ್ಲಿ ಪ್ರಾಮಾಣಿಕರಿಗೆ ಇದ್ದ ಬೆಲೆ ಈಗ ಸ್ವದೇಶಿಯರ ಆಡಳಿತದಲ್ಲಿ ಇಲ್ಲವಲ್ಲಾ ಎನ್ನುವ ಹತಾಶೆ ತಬರನ ಹಾಗೇಯೇ ಈ  ನಾಟಕ ನೋಡಿದವರಿಗೆ ಮನದಟ್ಟಾಗುತ್ತದೆ. ಇಡೀ ನಾಟಕದಾದ್ಯಂತ ದೃಶ್ಯಗಳನ್ನು ಕಟ್ಟಿದ ರೀತಿ ಬೆರಗುಗೊಳಿಸುವಂತಹುದು. ತಬರನ ನೆಪದಲ್ಲಿ ಒಂದು ಗ್ರಾಮದೊಳಗಿನ ಇತರೇ ವಿದ್ಯಮಾನಗಳನ್ನೂ ತೋರಿಸಿದ ರೀತಿ ಅನನ್ಯವಾದದ್ದು. 


ಚುನಾವಣೆಯಲ್ಲಿ ಜನಪರ ಕಾಳಜಿ ಇರುವವರು ಸೋತು ಭ್ರಷ್ಟರೇ ಆಯ್ಕೆಯಾಗಿ ಜನರನ್ನು ಯಾಮಾರಿಸುವ ಕರಪ್ಟ್ ರಾಜಕೀಯವನ್ನು ಈ ನಾಟಕದಲ್ಲಿ ಅನಾವರಣಗೊಳಿಸಲಾಗಿದೆ. ಮುನ್ಸಿಪಾಲಿಟಿ ಅಧ್ಯಕ್ಷನಿಗೆ ಹುಟ್ಟಿದ ಮಕ್ಕಳು ಬದುಕದೇ ಇರುವುದು, ಲೇವಾದೇವಿಗಾರನಿಗೆ ಮೂಲವ್ಯಾಧಿ ಸಮಸ್ಯೆ ತೀವ್ರಗೊಳ್ಳುವುದು, ಆಚಾರಿಗೆ ಯಾವ ವ್ಯಾಪಾರವೂ ಕೈಗೆ ಹತ್ತದಿರುವುದು, ಜನರ ಮೂಡನಂಬಿಕೆಗಳ ಮುಂದೆ ಆಧುನಿಕ ವೈದ್ಯನೂ ಅಸಹಾಯಕನಾಗುವುದು, ಸರಕಾರಿ ಅಧಿಕಾರಿಗಳು ಮತ್ತು ನೌಕರರು ಭ್ರಷ್ಟಾಚಾರವನ್ನೇ ಬದುಕಾಗಿಸಿಕೊಂಡವರಂತೆ ಜನರನ್ನು ಶೋಷಿಸುವುದು, ಕೂಲಿ ಕಾರ್ಮಿಕರ ಪರವಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದ ಕಾರ್ಮಿಕ ನಾಯಕ ಚುನಾವಣೆಯಲ್ಲಿ ಸೋತು ಹತಾಶನಾಗಿ ಭ್ರಷ್ಟ ಮುನ್ಸಿಪಾಲ್ಟಿ ಅಧ್ಯಕ್ಷನನ್ನು ಕೊಲೆ ಮಾಡಿ ತಲೆಮರೆಸಿಕೊಳ್ಳುವುದು. ಹಾಗೂ ಇವೆಲ್ಲದರ ಪರಿಣಾಮ ತಬರನ ಮೇಲೆ ಆಗುವುದು.. ಹೀಗೆ.. ಈ ಎಲ್ಲಾ ಘಟನೆಗಳು ಒಂದಕ್ಕೊಂದು ಮಿಳಿತಗೊಂಡು ಸ್ವಾತಂತ್ರೋತ್ತರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ನ್ಯೂನ್ಯತೆಗಳನ್ನು ಬಹಿರಂಗವಾಗಿ ಬೆತ್ತಲೆಗೊಳಿಸಿವೆ. ನಾಲ್ಕು ದಶಕಗಳ ಹಿಂದೆ ಈ ಕಥೆಯನ್ನು ತೇಜಸ್ವಿಯವರು ಬರೆದಿದ್ದರು, ಮೂರೂಕಾಲು ದಶಕದ ಹಿಂದೆ ಇದು ನಾಟಕವಾಗಿ ಅನೇಕ ಪ್ರದರ್ಶನಗಳನ್ನು ಕಂಡಿತ್ತು. ಆದರೆ ಈಗಲೂ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಾಗದೇ ಇನ್ನೂ ಹದಗೆಟ್ಟು ಹೋಗಿದೆ ಎಂಬುದು ಈ ನಾಟಕವನ್ನು ನೋಡಿದವರ ಗಮನಕ್ಕೆ ಬಾರದೇ ಇರದು. ಆದ್ದರಿಂದ ಇದೊಂದು ಸಾರ್ವಕಾಲಿಕ ನಾಟಕವಾಗಿದೆ.



ಈ ನಾಟಕದಲ್ಲಿ ತಬರನಿಂದ ಮುನ್ನೂರಾ ಅರವತ್ತು ರೂಪಾಯಿಗಳ ಬಾಬ್ತನ್ನು ವಸೂಲಿ ಮಾಡಲು ಗೋಳುಹೊಯ್ದುಕೊಳ್ಳುವ ಸರಕಾರಿ ವ್ಯವಸ್ಥೆಯು ಕಾಫಿಡಿಪೋದ ಮಾಲೀಕ ಕಟ್ಟಬೇಕಾದ ಎಂಟು ಸಾವಿರಕ್ಕೂ ಹೆಚ್ಚು ತೆರಿಗೆ ಹಣವನ್ನು ಮಾಫಿ ಮಾಡುತ್ತದೆ. ಈಗಲೂ ಪ್ರಸ್ತುತ ಕೇಂದ್ರ ಸರಕಾರವು ಲಾಭಕೋರ ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಕೋಟಿ ತೆರಿಗೆ ರಿಯಾಯಿತಿಯನ್ನು ಕೊಟ್ಟು ರೈತಾಪಿ ಜನರ ಸಾಲ ವಸೂಲಿಗೆ ಮುಂದಾಗುತ್ತದೆ ಎನ್ನುವುದು ಈ ನಾಟಕ ನೋಡಿದವರ ಯೋಚನೆಗೆ ಬಾರದೇ ಇರದು. ಈ ದೇಶದಲ್ಲಿ ಭ್ರಷ್ಟಾಚಾರ ಇರುವವರೆಗೂ ತಬರನ ಕಥೆ ನಾಟಕ ಪ್ರಸ್ತುತವಾಗಿಯೇ ಇರುತ್ತದೆ ಹಾಗೂ ಈಗ ನಡೆಯುವ ಚುನಾವಣಾ ರಾಜಕೀಯದ ದೊಂಬರಾಟವನ್ನು ನೋಡಿದರೆ ತಬರನ ಕಥೆ ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ. ದೇಶದ ಆಳುವ ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಈ ನಾಟಕ ತೆರೆದು ತೋರಿಸಿ ನೋಡುಗರನ್ನು ಎಚ್ಚರಿಸುವಲ್ಲಿ ಸಫಲವಾಗಿದೆ.

ಆದರೆ ಅದ್ಯಾಕೋ ಈ ಮರುಪ್ರಸ್ತುತಿ ನಾಟಕ ಆರ್.ನಾಗೇಶರವರ ನಾಟಕ ಎಂದು ಅನ್ನಿಸುತ್ತಲೇ ಇಲ್ಲ ಎನ್ನುವುದು ಅವರ ನಿರ್ದೇಶನದ ಮೂಲ ನಾಟಕವನ್ನು ನೋಡಿದವರಿಗೆ ಅನ್ನಿಸದೇ ಇರದು. ಇದು ನಾಗೇಶರವರ ನಾಟಕವಾಗಿರದೇ ನಾಗಾಭರಣರವರ ನಾಟಕವಾಗಿದೆ. ನಾಗೇಶರವರ ವೈಶಿಷ್ಟ್ಯತೆ ಇರುವುದು ಅವರ ಬ್ಲಾಕಿಂಗ್ ಮಾಡುವ ರೀತಿಯಲ್ಲಿ. ಅವರು ಯಾವುದೇ ಪಾತ್ರವನ್ನು ಸುಮ್ಮನೇ ನಿಂತಲ್ಲೆ ನಿಲ್ಲಲು ಬಿಡದೇ ಸೂಕ್ತ ಚಲನೆಯನ್ನು ಕೊಡುತ್ತಿದ್ದರು. ಆದರೆ.. ಅಂತಹ ಚಲನಶೀಲ ಬ್ಲಾಕಿಂಗ್ ಚಾಕಚಕ್ಯತೆ ಈ ಮರುನಿರ್ಮಾಣದ ನಾಟಕದಲ್ಲಿ ಕಾಣುತ್ತಿಲ್ಲ. ಕಾಫಿಡಿಪೋ ದೃಶ್ಯದಲ್ಲಿ ಸಮಾಜದಲ್ಲಿ ಕೆಳಸ್ಥರದಲ್ಲಿರುವ ತಬರ ಸುಂಕ ವಸೂಲಿಗೆ ಬಂದು ಎತ್ತರದ ಪ್ಲಾಟಪಾರಂಮೇಲೆ ನಿಂತೇ ಇರುವುದು ಹಾಗೂ ಡಿಪೋ ಮಾಲೀಕ ಹಾಗೂ ಮುನ್ಸಿಪಾಲಿಟಿ ಅಧ್ಯಕ್ಷ ಕೆಳಗೆ ನಿಂತು ಮಾತಾಡುವುದು ಪಾತ್ರೋಚಿತ ಬ್ಲಾಕಿಂಗ್ ಅಲ್ಲವೇ ಅಲ್ಲ. ಮೇಲ್ವರ್ಗದವರು ಎತ್ತರದಲ್ಲಿರುವುದು ಹಾಗೂ ಕೆಳಸ್ಥರದಲ್ಲಿರುವವರು ಕೆಳಗೆ ನಿಲ್ಲುವುದೇ ಆಯಾ ಪಾತ್ರಕ್ಕೆ ನ್ಯಾಯಸಲ್ಲಿಸಿದಂತಾಗುತ್ತದೆ.



ಮರುಪ್ರಸ್ತುತಿ ಎಂದರೆ ಯಥಾವತ್ ಪ್ರತಿಕೃತಿಯಾಗಿರಬೇಕೆ ಹೊರತು ಅನಗತ್ಯ ಬದಲಾವಣೆ ಮಾಡಲು ಹೋಗಬಾರದು. ಹಾಗೆ ಮಾಡಿದರೆ ನಾಟಕ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತದೆ. ಆದರೆ.. ನಾಗಾಭರಣರವರು ನಾಗೇಶರವರ ನಾಟಕದ ತಂತ್ರಗಳನ್ನಷ್ಟೇ ಅಲ್ಲಾ ಕ್ಲೈಮ್ಯಾಕ್ಸನ್ನೇ ಬದಲಾಯಿಸಿದ್ದಾರೆ. ನಾಗೇಶರವರ ನಡೆ ಯಾವಾಗಲೂ ವೈಚಾರಿಕತೆಯ ಕಡೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ.. ನಾಗಾಭರಣರವರು ಈ ನಾಟಕದ ಕೊನೆಗೆ ತ್ರಿವರ್ಣ ಭಾವುಟವನ್ನೂ ತಂದು ತಮ್ಮ ದೇಶಭಕ್ತಿಯನ್ನು ತೋರಿಸಲು ಪ್ರಯತ್ನಿಸಿದ್ದಷ್ಟೇ ಅಲ್ಲಾ ಕೊನೆಗೆ ಒಂದೇ ಮಾತರಂ ಹಾಡನ್ನು ಕಲಾವಿದರ ಮೂಲಕ ಹಾಡಿಸಿ ತಮ್ಮ ಹಿಂದುತ್ವದ ಹಿಡನ್ ಅಜೆಂಡಾವನ್ನೂ ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ.

ಇಡೀ ನಾಟಕವೇ ಈ ಪ್ರಸ್ತುತ ವ್ಯವಸ್ಥೆಯ ಅವ್ಯವಸ್ಥೆಯ ವಿರುದ್ಧವಾಗಿದೆ. ಸ್ವಾತಂತ್ರೋತ್ತರ ಭಾರತದ ಪ್ರಭುತ್ವವನ್ನೇ ಪ್ರಶ್ನಿಸುತ್ತಿದೆ. ಶಾಸಕಾಂಗ ಮತ್ತು ಕಾರ್ಯಾಂಗಗಳ ಮಹಾ ಭ್ರಷ್ಟತೆಯನ್ನು ನಿಷ್ಟುರವಾಗಿ ತೋರಿಸುತ್ತದೆ. ಆದರೆ ಕೊನೆಗೆ ಒಂದೇ ಮಾತರಂ.. ಸುಜಲಾಂ ಸುಖದಾಂ.. ಅಂತಾ ಈ ನಾಟಕ ರಾಗ ಎಳೆಯುತ್ತಿದೆ. ಇವೆರಡೂ ವಿರೋಧಾಭಾಸಗಳು. ಇಡೀ ದೇಶ ಮೇಲ್ವರ್ಗದ ಆಳುವ ವರ್ಗಗಳ ಸ್ವಾರ್ಥಹಿತಾಸಕ್ತಿಗಳಿಂದ ಕೊಳೆತು ನಾರುತ್ತಿದೆ ಎಂದು ನಾಗೇಶರವರು ತಬರನ ಕಥೆಯ ಮೂಲಕ ತೋರಿಸಿ ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದರೆ, ನಮ್ಮ ನಾಗಾಭರಣರವರು ನಾಟಕದ ಕೊನೆಗೆ ಇಡೀ ದೇಶ ಸಂಪದ್ಭರಿತವಾಗಿದೆ, ಸುಜಲಾಂ ಸುಖದಾಂ.. ಆಗಿದೆ.. ದೇಶದಲ್ಲಿ ಸುಖ ಶಾಂತಿ ತುಂಬಿದೆ ಎಂದು ಹಾಡು ಹೇಳಿ ಇಡೀ ನಾಟಕದ ಆಶಯವನ್ನೇ ದಿಕ್ಕು ತಪ್ಪಿಸಿದ್ದಾರೆ. 


ರಾಷ್ಟ್ರದ್ವಜವನ್ನು ತಂದು ತೋರಿಸಿ ತಮ್ಮ ಹಿಂದುತ್ವವಾದಿ ರಾಷ್ಟ್ರೀಯವಾದದ ನಿಲುವನ್ನು ಆರ್.ನಾಗೇಶರವರ ನಿರ್ದೇಶನದ ನಾಟಕದಲ್ಲಿ ಅಳವಡಿಸಿ ಹೇರುವ ಅಗತ್ಯವಿರಲಿಲ್ಲ ಹಾಗೂ ಇದು ನಾಗೇಶರವರಂತಹ ವೈಚಾರಿಕ ಪ್ರಜ್ಞೆಯ ನಿರ್ದೇಶಕನಿಗೆ ಮಾಡಿದ ಅವಮಾನವೂ ಆಗಿದೆ. ದೇಶದಲ್ಲಿ ಅದೆಷ್ಟೇ ಭ್ರಷ್ಟಾಚಾರ ತಾಂಡವವಾಡುತ್ತಿರಲಿ, ಜನರು ಸಮಸ್ಯೆಗಳಲ್ಲಿ ಸಿಕ್ಕು ನರಳುತ್ತಿರಲಿ.. ಪ್ರಜೆಗಳ ಮಾನಪ್ರಾಣ ಸ್ಥಿತಿಗತಿಗಳಿಗಿಂತಾ ದೇಶಪ್ರೇಮ ದೊಡ್ಡದು ಎನ್ನುವ ಸಂಘಪರಿವಾರದ ರಾಷ್ಟ್ರೀಯವಾದಿ ಭಾವನಾತ್ಮಕ ನಿಲುವನ್ನೇ ಈ ರಾಷ್ಟ್ರದ್ವಜದ ಪ್ರದರ್ಶನ ಸಾಂಕೇತಿಕವಾಗಿ ಬಿಂಬಿಸುತ್ತದೆ.

ಇದ್ದದ್ದನ್ನು ಇದ್ದ ಹಾಗೇ ಮರುನಿರ್ಮಾಣ ಮಾಡಿ ತೋರಿಸಿ ಎಂದು ಹೊಣೆಗಾರಿಕೆ ವಹಿಸಿದರೆ ನಾಟಕಕ್ಕೆ ತಮಗನುಕೂಲವಾಗುವ ಹಾಗೆ ಶಸ್ತ್ರಚಿಕಿತ್ಸೆ ಮಾಡಿ ತಮ್ಮ ಮನುವಾದಿ  ನಿಲುವಿಗೆ ತಕ್ಕಂತೆ ಬದಲಾಯಿಸಿ ಇದೇ ನಾಗೇಶರವರ ನಾಟಕ ನೋಡಿ ಎಂದು ತೋರಿಸುವುದರ ಹಿಂದೆ ಹಿಂದುತ್ವವಾದಿ ಮನಸ್ಥಿತಿ ಕೆಲಸ ಮಾಡಿದೆ ಎನ್ನುವ ಸಂದೇಹ ಈ  ನಾಟಕ ನೋಡಿದವರಿಗೆ ಬಾರದೇ ಇರದು. ಈ ಹಿಂದೆ ನಾಗೇಶರವರ ನಾಟಕವನ್ನು ನೋಡದೇ ಇರುವ ಈಗಿನ ತಲೆಮಾರಿನ ಪ್ರೇಕ್ಷಕರು ಈ ನಾಟಕವನ್ನೇ ನಾಗೇಶರವರ ನಾಟಕ ಎಂದು ನಂಬುವ ಅಪಾಯವೂ ಇದೆ. ಹೀಗಾಗಿ ಮುಂದಿನ ಪ್ರದರ್ಶನಗಳಲ್ಲಿ ನಾಗೇಶರವರ ನಿರ್ದೇಶನದ ನಾಟಕವನ್ನು ಯಾವುದೇ ಬದಲಾವಣೆ ಇಲ್ಲದೇ ಯಥಾವತ್ತಾಗಿ ಮಾಡುವುದು ಆ ರಂಗದಿಗ್ಗಜರಿಗೆ ಸಲ್ಲಿಸುವ ಗೌರವವಾಗಿದೆ. ಮಾಟಾ ಆಗಿತ್ತಾ ದೇಶಕೆ ಮಾಟಾ ಆಗಿತ್ತಾ.. ಎನ್ನುವ ಹಾಡೊಂದು ಆಗಾಗ ಈ ನಾಟಕದಲ್ಲಿ ಕೇಳೀ ಬರುತ್ತಲೇ ಇರುತ್ತದೆ. ಆದರೆ ಈ ನಾಟಕ ನೋಡಿದವರಿಗೆ ನಾಗಾಭರಣರವರಿಗೆ ರಣಮಾಟ ಆಗಿರಬಹುದು ಎನ್ನುವ ಅನುಮಾನ ಬಾರದಿರದು. ನಾಗೇಶರವರ ವೈಚಾರಿಕ ಪ್ರಖರತೆಯ ನಾಟಕವನ್ನು ಮನುವಾದಿ ಸಂಘಪರಿವಾರದ ಆಶಯದವರು ನಿರ್ದೇಶಿಸಿದರೆ ಏನಾಗಬೇಕಿತ್ತೋ ಅದೇ ಆಗಿದೆ. ಹೀಗಾಗಬಾರದಾಗಿತ್ತು.  ನಾಟಕದ ಮೂಲ ಆಶಯವನ್ನು ಹೀಗೆ ಡೈಲ್ಯೂಟ್ ಮಾಡಬಾರದಿತ್ತು.



ಇಡೀ ನಾಟಕದಲ್ಲಿ ಗಮನ ಸೆಳೆದಿದ್ದು ನಾಗಾಭರಣರವರ ತಬರನ ಅಭಿನಯ. ಈ ವಿಷಯದಲ್ಲಿ ಹ್ಯಾಟ್ಸಾಪ್ ಟು ನಾಗಾಭರಣ. ಅತ್ಯಂತ ತನ್ಮಯತೆಯಿಂದ ತಬರನ ನೋವು, ಹತಾಶೆ, ನಿರಾಸೆಗಳನ್ನು ಅಭಿನಯಿಸಿ ತಬರ ಎಂದರೇ ಹೀಗೆ ಇರಬೇಕು ಎನ್ನುವುದನ್ನು ನೋಡುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರಷ್ಟೇ ಸಮರ್ಥವಾಗಿ ತಬರನ ಹೆಂಡತಿಯಾಗಿ ಕಲ್ಪನಾ ನಾಗಾನಾಥರವರು ಭಾವತೀವ್ರತೆಯಿಂದ ನಟಿಸಿದ್ದಾರೆ. ಮುನ್ಸಿಪಾಲಿಟಿ ಅಧ್ಯಕ್ಷ ಹಾಗೂ ಆಚಾರಿಯ ಪಾತ್ರದಾರಿಗಳೂ ತಮ್ಮ ಪಾತ್ರಕ್ಕೆ ನ್ಯಾಯಸಲ್ಲಿಸಿ ನೋಡುಗರ ಮನಮುಟ್ಟುತ್ತಾರೆ. ಉಳಿದಂತೆ ಬಹುತೇಕ ಯುವನಟರು ಇನ್ನೂ ರಂಗಭೂಮಿಗೆ ಹೊಸಬರಾಗಿದ್ದು ಪಾತ್ರೋಚಿತ ಅಭಿನಯವನ್ನು ನಿರ್ವಹಿಸಬೇಕಿದೆ. ಮೊದಲ ಪ್ರದರ್ಶನವಾಗಿದ್ದರಿಂದಲೋ ಏನೋ ತಾಲೀಮಿನ ಕೊರತೆಯೂ ಸಹ ಈ ಪ್ರದರ್ಶನದಲ್ಲಿ ಡಾಳಾಗಿ ಕಂಡುಬರುವಂತಿದೆ.

ಇಡೀ ನಾಟಕದ ಪಾತ್ರಗಳಿಗೆ ಕಾಸ್ಟ್ಯೂಮ್ಸ್‌ಗಳ ಆಯ್ಕೆಯಲ್ಲಿ ಇನ್ನೂ ಮುತುವರ್ಜಿ ವಹಿಸಬೇಕಾಗಿತ್ತು. ಇಷ್ಟೊಂದು ಗರಿಗಿರಿಯಾದ ಬಿಳಿ ಅಂಗಿ ಪೈಜಾಮಗಳನ್ನು ತಬರನಂತಹ ಕೆಳಹಂತದ ವ್ಯಕ್ತಿ ನಾಟಕದಾದ್ಯಂತ ಹಾಕಿಕೊಳ್ಳುವುದನ್ನು ಊಹಿಸಲೂ ಸಾಧ್ಯವಿಲ್ಲ. ಮಾಸಿದ ಉಡುಪುಗಳು ತಬರನ ಪಾತ್ರಕ್ಕೆ ಸೂಕ್ತವಾಗಿತ್ತು ಹಾಗೂ ಅವುಗಳು ಆತನ ಕಡುಬಡತನದ ಸಂಕೇತವೂ ಆಗಬಹುದಾಗಿತ್ತು ಮತ್ತು ನೋಡುಗರಲ್ಲಿ ತಬರನ ಮೇಲೆ ಇನ್ನೂ ಹೆಚ್ಚು  ಅನುಕಂಪ ಬರುವಂತೆ ಮಾಡಬಹುದಾಗಿತ್ತು. ಕಾಲಿಗೆ ಬೂಟು, ಹೆಗಲಿಗೆ ಸ್ಟಾರ್‌ಗಳಿಲ್ಲದ ಪೊಲೀಸ್ ಇನ್ಸಫೆಕ್ಟರ್‌ಗಳನ್ನು ಈ ನಾಟಕದಲ್ಲಿ ಮಾತ್ರ ನೋಡಲು ಸಾಧ್ಯ!. ಸ್ವಾತಂತ್ರ್ಯ ಚಳುವಳಿಯ ಕಾಲದ ಹೋರಾಟ ನಿರತ ಪಾತ್ರಗಳೆಲ್ಲಾ ಪಳಪಳ ಹೊಳೆಯುವ ಬಿಳಿ ನಿಲುವಂಗಿ ಹಾಗೂ ಪೈಜಾಮಗಳನ್ನು ತೊಟ್ಟಿದ್ದರೆ ಸ್ವಾತಂತ್ರ್ಯಾ ನಂತರದ ಪಾತ್ರಗಳು ದೋತಿ, ಲುಂಗಿಗಳನ್ನು ಉಟ್ಟುಕೊಂಡಿರುತ್ತವೆ. ಒಂದು ಪ್ರದೇಶದ ಜನರ ಉಡುಪುಗಳು ಹೀಗೆ ಇದ್ದಕ್ಕಿದ್ದಂತೆ ಬದಲಾಗಲು ಸಾಧ್ಯವೆ? ಸಕಲೇಶಪುರ ಮೂಡಿಗೆರೆಯ ಪ್ರದೇಶದಲ್ಲಿ ನಡೆಯುವ ಈ ನಾಟಕಕ್ಕೆ ಅದೇ ಪ್ರಾದೇಶಿಕ ಸೊಗಡಿನ ಭಾಷೆಯನ್ನು ಬಳಸಿದ್ದರೆ ಇನ್ನೂ ಸೂಕ್ತವಾಗುತ್ತಿತ್ತು.

ಒಟ್ಟಿನ ಮೇಲೆ ಈ ಮರುಪ್ರಸ್ತುತ ನಾಟಕ ಹಲವಾರು ಸಂದೇಹಗಳನ್ನು ಹುಟ್ಟುಹಾಕಿದ್ದು, ನಾಗೇಶರವರು ಮಾಡಿದ ರೀತಿಯಲ್ಲೇ ನಾಟಕವನ್ನು ಮರುನಿರ್ಮಾಣ ಮಾಡಿದ್ದರೆ ಅನುಮಾನಗಳನ್ನು ದೂರಮಾಡಬಹುದಾಗಿತ್ತು. ಇಲ್ಲವೇ ನಾಗಾಭರಣರವರು ತಬರನ ಕಥೆಯನ್ನು ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ತಮ್ಮದೇ ಹೆಸರಲ್ಲಿ ನಿರ್ದೇಶನ ಮಾಡಲು ಸ್ವತಂತ್ರರು. ಅಗ ನಾಗೇಶರವರ ಹೆಸರನ್ನು ಬಳಸುವ ಅಗತ್ಯವೂ ಬರುತ್ತಿರಲಿಲ್ಲ. ನಾಗಾಭರಣವರು ಇಂಪ್ರೂವೈಜೇಶನ್ ಹೆಸರಲ್ಲಿ ಮಾಡಿದ ಬದಲಾವಣೆಗಳೂ ಪ್ರಶ್ನಾರ್ಹವಾಗುತ್ತಿರಲಿಲ್ಲ. ಆದರೆ.. ಈ ನಾಟಕವನ್ನು ಆರ್.ನಾಗೇಶರವರಾಗಲೀ ಇಲ್ಲವೇ ಪೂರ್ಣಚಂದ್ರ ತೇಜಸ್ವಿಯವರಾಗಲೀ ನೋಡಿದ್ದರೆ ಖಂಡಿತಾ ಸಹಮತ ಸೂಚಿಸುತ್ತಿರಲಿಲ್ಲ. ಜಮದಗ್ನಿ ಕೋಪದ ನಾಗೇಶ್ ರವರು ಅದ್ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರೋ ಎಂಬುದು ಅವರ ಜೊತೆಯಲ್ಲಿದ್ದವರಿಗೆ ಚೆನ್ನಾಗಿ ಗೊತ್ತಿದೆ. ಏನೇ ಆಗಲಿ ನಾಗೇಶರವರ ನಿರ್ದೇಶನದ ತಬರನ ಕಥೆ ದೃಶ್ಯ, ಬ್ಲಾಕಿಂಗ್, ಕಾಸ್ಟೂಮ್ಸ ಹಾಗೂ ಆಶಯಗಳಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ಮುಂದಿನ ಪ್ರದರ್ಶನಗಳನ್ನು ಮಾಡಲಿ ಎಂಬುದೇ ನಾಗೇಶ್‌ರವರ ಅಭಿಮಾನಿಗಳ ಹಾಗೂ ಶಿಷ್ಯರ ಒಕ್ಕೂರಲಿನ ಬಯಕೆಯಾಗಿದೆ. ಸೂಕ್ಷ್ಮಮತಿ ನಟ ನಿರ್ದೇಶಕರಾದ ನಾಗಾಭರಣರವರು ತಮ್ಮ ಹಿಡನ್ ಅಜೆಂಡಾಗಳನ್ನು ಬದಿಗಿಟ್ಟು ಈ ಕೋರಿಕೆಯನ್ನು ಅರ್ಥ ಮಾಡಿಕೊಳ್ಳುತ್ತಾರೆಂಬ ಭರವಸೆ ನಮ್ಮದಾಗಿದೆ.

- ಶಶಿಕಾಂತ ಯಡಹಳ್ಳಿ.             

 
(Photo's by Tai Lokesh )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ