ಶುಕ್ರವಾರ, ಜನವರಿ 25, 2019

ಶೋಷಕರ ಶಡ್ಯಂತ್ರಗಳನ್ನು ಬೆತ್ತಲೆಗೊಳಿಸುವ “ನಮ್ಮೊಳಗೊಬ್ಬ ನಾಜೂಕಯ್ಯ”:



ಇಡೀ ಶೋಷಕ ವ್ಯವಸ್ಥೆ ಅದು ಹೇಗೆ ಪ್ರಾಮಾಣಿಕರನ್ನ ಅಸಹಾಯಕರನ್ನಾಗಿ ಮಾಡಿ ಭ್ರಷ್ಟರನ್ನಾಗಿಸಲು ಪ್ರಯತ್ನಿಸಿ ಸಫಲವಾಗುತ್ತದೆ ಎನ್ನುವುದನ್ನು ದೃಶ್ಯಗಳ ಮೂಲಕ ಸಾಬೀತುಪಡಿಸುವ ನಾಟಕ ನಮ್ಮೊಳಗೊಬ್ಬ ನಾಜೂಕಯ್ಯ. ಟಿ.ಎನ್.ಸೀತಾರಾಂರವರು 1987ರಲ್ಲಿ ರಚಿಸಿದ ಈ ನಾಟಕವನ್ನು ಆರ್.ನಾಗೇಶರವರು ನಟರಂಗ ತಂಡದ ಕಲಾವಿದರಿಗೆ ನಿರ್ದೇಶಿಸಿದ್ದರು. ತನ್ನ ಹರಿತವಾದ ಸಂಭಾಷಣೆ ಹಾಗೂ ಕುತೂಹಲಕಾರಿ ನಿರೂಪಣಾ ಕ್ರಮದಿಂದಾಗಿ ಈ ನಾಟಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಮೈಲುಗಲ್ಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರಕಟಿಸಿದ ಶತಮಾನದ ಶ್ರೇಷ್ಠ ನಾಟಕಗಳು ಸಂಕಲನದಲ್ಲಿ ಈ ನಾಟಕವೂ ಸೇರಿದೆ.

ಕನ್ನಡ ರಂಗಭೂಮಿಯ ಪ್ರಯೋಗಶೀಲ ನಿರ್ದೇಶಕರಾಗಿದ್ದ ಆರ್.ನಾಗೇಶರವರಿಗೆ 75 ವರ್ಷಗಳು ತುಂಬಿದ ಸವಿನೆನಪಿಗಾಗಿ ಹವ್ಯಾಸಿ ರಂಗಭೂಮಿ ಗೆಳೆಯರು ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ಆರ್.ನಾಗೇಶರವರು ನಿರ್ದೇಶಿಸಿದ ನಾಟಕಗಳ ಉತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 22ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದರು. ನಾಟಕೋತ್ಸವದ ಕೊನೆಯ ದಿನ ಜನವರಿ ೨೪ರಂದು ನಮ್ಮೊಳಗೊಬ್ಬ ನಾಜೂಕಯ್ಯ ನಾಟಕದ 128ನೇ ಪ್ರಯೋಗ ಪ್ರದರ್ಶನಗೊಂಡಿತು.



ಆತನ ಹೆಸರು ಪ್ರಸಾದ್. ಲೇಖಕ, ಪತ್ರಕರ್ತ ಹಾಗೂ ಪುಟ್ಟ ಕಾರ್ಖಾನೆಯ ಮಾಲೀಕ ಮತ್ತು ಅತ್ಯಂತ ಪ್ರಾಮಾಣಿಕ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಡಿವೈಸ್ ಒಂದನ್ನು ಕಂಡು ಹಿಡಿದು ಅದನ್ನು ಸಪ್ಲೈ ಮಾಡುವ ಆರ್ಡರ್ ಪಡೆದುಕೊಳ್ಳುತ್ತಾನೆ. ಜೊತೆಗೆ ಕಾರ್ಪೋರೇಟ್ ಕಂಪನಿಯ ಮಾಲೀಕ ಚೆಬಲಾನಿಯೂ ಅಂತದೇ ಡಿವೈಸ್ ತಯಾರಿಸಿ ರಕ್ಷಣಾ ಇಲಾಖೆಗೆ ಮಾರಲು ಯತ್ನಿಸಿ ವಿಫನಾಗಿರುತ್ತಾನೆ. ಚೆರ್ಬಲಾನಿ ಕಂಪನಿಯ ಮೋಸ ವಂಚನೆಗಳನ್ನು ಪತ್ರಿಕೆಯಲ್ಲಿ ಕಂತುಕಂತಾಗಿ ಬರೆದ ಪ್ರಸಾದ್ ಆ ಕಂಪನಿ ಮಾಲೀಕನ ಅಸಹನೆಗೆ ಈಡಾಗುತ್ತಾನೆ. ಕೋಟ್ಯಾಂತರ ರೂಪಾಯಿಗಳ ಡಿವೈಸ್ ಡೀಲ್ ತಮ್ಮ ಕಂಪನಿಗೆ ಸಿಗಬೇಕು ಹಾಗೂ ತನ್ನ ಕಂಪನಿಯ ವಿರುದ್ದ ಬರೆಯುತ್ತಿರುವ ಪ್ರಸಾದ್‌ನನ್ನು ಮಟ್ಟಹಾಕಬೇಕು ಎನ್ನುವ ಉದ್ದೇಶದಿಂದ ಚೆಬಲಾನಿ ದೊಡ್ಡ ಶಡ್ಯಂತವನ್ನೇ ಹೆಣೆಯುತ್ತಾನೆ. ಪ್ಯಾಕ್ಟರಿಗಾಗಿ ಮಾಡಿದ ಸಾಲ ಪ್ರಸಾದ್‌ನ ಹೆಗಲೇರಿರುತ್ತದೆ. ಕೌಟುಂಬಿಕ ಹೊಣೆಗಾರಿಕೆ ತಲೆಭಾರವಾಗಿರುತ್ತದೆ. ಹಿಂದೆ ಕೆಲಸ ಮಾಡುತ್ತಿದ್ದ ಕಛೇರಿಯಿಂದ ಕ್ಲಿಯರನ್ಸ್ ಸರ್ಟಿಫಿಕೇಟ್ ತರಲಾಗದೇ ಸಿಕ್ಕ ಆರ್ಡರ್ ಕೈತಪ್ಪುತ್ತದೆ. ಚೆಬಲಾನಿಯ ಕೈಗೊಂಬೆಯಾದ ಆ ಕಛೇರಿಯ ನಿರ್ದೇಶಕ ಇಲ್ಲಸಲ್ಲದ ಆರೋಪಗಳನ್ನು ಹೊರೆಸಿ, ಸಿಬಿಐ ತನಿಖೆಗೆ ವಹಿಸುವುದಾಗಿ ಹೆದರಿಸಿ ಪ್ರಸಾಧ್‌ನನ್ನು ಬ್ಲಾಕ್‌ಮೇಲ್ ಮಾಡುತ್ತಾನೆ. ಈ ಗೋಜಲಿನಿಂದ ಹೊರಬರಲು ಪ್ರಸಾಧ್ ಅನಿವಾರ್ಯವಾಗಿ ಇನ್ನೊಬ್ಬ ಭ್ರಷ್ಟ ವ್ಯಕ್ತಿ ನಾರಾಯಣಸ್ವಾಮಿಯ ನೆರವು ಪಡೆದು ತನ್ನ ಹೆಂಡತಿ ಮಾಲತಿಯ ಸಮೇತ ಮಂತ್ರಿಯನ್ನು ಪಾರ್ಟಿಯೊಂದರಲ್ಲಿ ಬೇಟಿಯಾಗುತ್ತಾನೆ. ಕ್ಲಿಯರನ್ಸ್ ಕೊಡಬೇಕೆಂದರೆ ಚೆಲಾನಿ ಹೇಳಿದಂತೆ ಕೇಳಬೇಕೆಂದು ಇಲ್ಲದಿದ್ದರೆ ಸಿಬಿಐ ತನಿಖೆ ಎದುರಿಸಬೇಕೆಂದು ಮಾರ್ಮಿಕವಾಗಿಯೇ ಹೇಳುವ ಮಂತ್ರಿಯ ಮಾತಿಗೆ ಮಣಿದ ಪ್ರಸಾದ್ ತನ್ನೆಲ್ಲಾ ಆದರ್ಶ ನಿಷ್ಠೆಗಳನ್ನು ಕೈಬಿಟ್ಟು ಭ್ರಷ್ಟ ಕೂಟದೊಂದಿಗೆ ರಾಜಿಯಾಗುತ್ತಾನೆ. ಅಷ್ಟೇ ಅಲ್ಲದೇ ತನ್ನ ಹೆಂಡತಿಯನ್ನೂ ಮಂತ್ರಿಯ ಜೊತೆಗೆ ಜಾಲಿಟ್ರಿಪ್ ಕಳುಹಿಸಲು ಒಪ್ಪುತ್ತಾನೆ. ಬದುಕನ್ನು ಉಳಿಸಿಕೊಳ್ಳಲು ತನ್ನ ಆದರ್ಶ, ಸತ್ಯ, ನಿಷ್ಟುರತೆ ಹಾಗೂ ಕೊನೆಗೆ ಹೆಂಡತಿಯನ್ನೂ ಹಾದರಕ್ಕಿಳಿಸಿದ ಪ್ರಸಾದ್ ಎಲ್ಲವನ್ನೂ ಕಳೆದುಕೊಂಡು ಅಸಹಾಯಕನಾಗಿ ನಿಲ್ಲುತ್ತಾನೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತಿದೆ ಆದರೆ ಪ್ರೇಕ್ಷಕರ ಮೆದುಳನ್ನು ಹೊಕ್ಕು ವಿಚಾರಕ್ಕೆ ಪ್ರೇರೇಪಿಸುತ್ತದೆ.

ಪ್ರಾಮಾಣಿಕತೆ ಎನ್ನುವುದು ತೋರುಂಬ ಲಾಭ ಎನ್ನುವುದು ಈ ದೇಶದಲ್ಲಿ ಎಂದೋ ಸಾಬೀತಾಗಿಹೋಗಿದೆ. ಇಡೀ ಆಳುವ ವ್ಯವಸ್ಥೆಯೇ ಭ್ರಷ್ಟವಾಗಿ, ಸ್ವಾರ್ಥಿಗಳೇ ಹೆಚ್ಚಾಗಿರುವಾಗ ಅತ್ಯಂತ ಪ್ರಾಮಾಣಿಕವಾಗಿ ಬದುಕುತ್ತೇನೆ, ನಿಷ್ಠುರವಾದ ಸತ್ಯಗಳನ್ನು ಸಾರ್ವಜನಿಕವಾಗಿ ಹೇಳುತ್ತೇನೆ ಎನ್ನುವವರನ್ನು ಈ ವ್ಯವಸ್ಥೆಯೇ ತನ್ನ ಬಲೆಯೊಳಗೆ ಸಿಲುಕಿಸಿ ಸತಾಯಿಸಿ ರಾಜಿಯಾಗಲು ಒತ್ತಾಯಿಸುತ್ತದೆ. ಇಲ್ಲವೇ ಸಾಯಿಸುತ್ತದೆ. ಶೋಷಕ ವರ್ಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ಹೊಸದಾಗಿ ಸೇರ್ಪಡೆಯಾದ ಕಾರ್ಪೊರೇಟಾಂಗಗಳು ಒಂದಕ್ಕೊಂದು ಕೈಜೋಡಿಸಿ ಇಡೀ ದೇಶವನ್ನು ಆಪೋಷಣತೆಗೆದುಕೊಳ್ಳುತ್ತಿರುವುದು ಗುಟ್ಟೇನಲ್ಲಾ. ತಮ್ಮ ಹಿತಾಸಕ್ತಿಗೆ ಅಡ್ಡಬಂದವರನ್ನು ನಿವಾರಿಸುವುದಕ್ಕಾಗಿಯೇ ಕಾನೂನಾತ್ಮಕ ಕುಣಿಕೆಗಳನ್ನು ತಯಾರಿಮಾಡಿಕೊಂಡು ನಿಂತಿರುವ ಆಳುವ ವರ್ಗಗಳು ಪ್ರತಿರೋಧಿಸುವವರನ್ನು ಹೇಗೆ ಅಸಹಾಯಕರನ್ನಾಗಿಸಿ ತಮ್ಮ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತವೆ ಎನ್ನುವುದನ್ನು ನಮ್ಮೊಳಗೊಬ್ಬ ನಾಜೂಕಯ್ಯ ನಾಟಕ ರಂಗದಂಗಳದಲ್ಲಿ ಅನಾವರಣಗೊಳಿಸುತ್ತದೆ.



ಇದೊಂದು ಗಂಭೀರವಾದ ವಿಡಂಬಣಾತ್ಮಕ ನಾಟಕ. ಮಧ್ಯಮ ವರ್ಗದ ಕನಸುಗಳು ಹೇಗೆಲ್ಲಾ ಕರಗಿ ಹೋಗುತ್ತವೆ ಹಾಗೂ ಕನಸನ್ನು ನನಸಾಗಿಸಿಕೊಳ್ಳಲು ಮನಸ್ಸಿನ ವಿರುದ್ಧ ಏನೇನೆಲ್ಲಾ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದಕ್ಕೆ ಮಾದರಿ ಈ ನಾಟಕದ ಪ್ರಸಾದ್ ಮತ್ತು ಮಾಲತಿ ದಂಪತಿ ಪಾತ್ರಗಳು. ಬಾಡಿಗೆ ಸೈಕಲ್ಲಿನಲ್ಲಿ ಬರುವ ಕೆಳವರ್ಗದ ಪೊಟೋಗ್ರಾಫರ್ ಮೂರ್ತಿ ಎರಡೆರಡು ಹೊಸ ಕಾರಿನ ಕನಸನ್ನು ಕಾಣುತ್ತಲೇ ಜನಸಾಮಾನ್ಯರ ಬದುಕಿನ ಬಾಧೆ, ಬವನೆಗಳನ್ನು ತನ್ನ ಮುಗ್ದತೆಯಿಂದಲೇ ತೆರೆದಿಡುತ್ತಾನೆ. ಈ ವರ್ಗದ ಜನರು ಕನಸು ಕಾಣುತ್ತಲೇ ಇದ್ದಾಗ ಮೇಲ್ವರ್ಗದ ಅಧಿಕಾರಸ್ತರು ತಮ್ಮ ಅಭೀಷ್ಟೆಗಳನ್ನು ನನಸಾಗಿಸಿಕೊಳ್ಳಲು ಕನಸುಕಾಣುವ ವರ್ಗಗಳನ್ನು ಹೇಗೆಲ್ಲಾ ವಂಚಿಸಿ ಬಳಸಿಕೊಳ್ಳುತ್ತಾರೆ ಎನ್ನುವುದು ನಾಜೂಕಯ್ಯದಲ್ಲಿ ನಾಜೂಕಾಗಿಯೇ ಮೂಡಿಬಂದಿದೆ. ಈ ಸಮಾಜದಲ್ಲಿ ಎಲ್ಲಿವರೆಗೂ ಶೋಷಣೆ, ಭ್ರಷ್ಟತೆ, ವಂಚನೆ ಹಾಗೂ ಸ್ವಾರ್ಥ ಹಿತಾಸಕ್ತಿಗಳು ಸಾಂಘಿಕವಾಗಿ ವಿಜ್ರಂಭಿಸುತ್ತವೆಯೋ ಅಲ್ಲಿವರೆಗೂ ಈ ನಾಟಕ ಪ್ರಸ್ತುತವಾಗಿಯೇ ಇರುವುದರಿಂದ ಇದೊಂದು ರೀತಿಯಲ್ಲಿ ಸಾರ್ವಕಾಲಿಕ ನಾಟಕವಾಗಿದೆ. 

ತುಂಬಾ ಸಂಕೀರ್ಣವಾದ ಸಂಗತಿಗಳನ್ನೊಳಗೊಂಡ ಈ ನಾಟಕವನ್ನು ಆರ್.ನಾಗೇಶರವರು ನೋಡುಗರ ಮನವನ್ನು ಮುಟ್ಟಿ ಮೆದುಳನ್ನು ತಟ್ಟುವಂತೆ ನಿರ್ದೇಶಿದ್ದಾರೆ. ಅತ್ಯಂತ ಸರಳವಾದ ರಂಗಸಜ್ಜಿಕೆ ಹಾಗೂ ಕನಿಷ್ಠ ಪರಿಕರಗಳನ್ನು ಬಳಸಿ ಕಲಾವಿದರ ಅಭಿನಯವನ್ನೇ ಮುಖ್ಯ ಬಂಡವಾಳ ಮಾಡಿಕೊಂಡು ನಾಜೂಕಯ್ಯನನ್ನು ಕಟ್ಟಿಕಟ್ಟಿದ್ದಾರೆ. ಒಂದು ವಿಶಾಲವಾದ ಪ್ಲಾಟ್‌ಫಾರಂ ಮೇಲೆ ಅಗತ್ಯವಾದ ಖುರ್ಚಿ ಟೀಪಾಯಿ ಹಾಗೂ ಒಂದು ಬಾಗಿಲಿನ ಚೌಕಟ್ಟನ್ನು ಮಾತ್ರ ದೃಶ್ಯಕ್ಕನುಗುಣವಾಗಿ ಇಟ್ಟು ನೋಡುಗರ ನೋಟವನ್ನು ಕಲಾವಿದರ ಮೇಲೆ ಮಾತ್ರ ಕೇಂದ್ರೀಕರಿಸುವಂತೆ ಮಾಡಿದ್ದು ನಾಗೇಶರವರ ನಿರ್ದೇಶನದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಕನಿಷ್ಟ ಯಾವುದಾದರೊಂದು ಪಾತ್ರವನ್ನು ಚಲನೆಯಲ್ಲಿರುವಂತೆ ಬ್ಲಾಕಿಂಗ್ ಮಾಡಿ ಪ್ರೇಕ್ಷಕರ ಕಣ್ಣು ಹಾಗೂ ಮನಸ್ಸನ್ನು ಎಂಗೇಜ್ ಮಾಡುವ ನಿರ್ದೇಶಕರ ತಂತ್ರಗಾರಿಕೆ ಅನನ್ಯವಾದಂತಹುದು. ನಟರನ್ನು ಪಾತ್ರಕ್ಕೆ ಮೋಲ್ಡ್ ಮಾಡುವ ನಾಗೇಶರವರ ಸಾಮರ್ಥ್ಯವನ್ನು ನಾಜೂಕಯ್ಯದಲ್ಲಿ ನೋಡಬಹುದಾಗಿದೆ.



ಇದೊಂದು ನುಡಿ ಪ್ರಧಾನ ನಾಟಕ. ಸೀತಾರಾಂರವರು ಬರೆದ ಪ್ರತಿಯೊಂದು ಸಂಭಾಷಣೆಗಳೂ ಅತ್ಯಂತ ತೀಕ್ಷ್ಣವಾಗಿವೆ. ಮಾತಿನೊಳಗಿನ ಮಾರ್ಮಿಕತೆ ಅರ್ಥವಾದಂತೆಲ್ಲಾ ನೋಡುಗರ ತುಟಿಗಳು ತಮಗರಿವಿಲ್ಲದಂತೆಯೇ ಚಲಿಸಿ ನಗೆಯನ್ನು ಹೊಮ್ಮಿಸುತ್ತವೆ. ಖಾಲಿ ಜೇಬಲ್ಲಿ ಒಂದೇ ಒಂದು ರೂಪಾಯಿ ಇಟ್ಟುಕೊಂಡಿದ್ದ ನಮ್ಮಜ್ಜ ದೊಡ್ಡದಾದ ಕಾರ್ಪೊರೇಟ್ ಕಂಪನಿ ಕಟ್ಟಿದ ಎಂದು ಚಬಲಾನಿ ಹೇಳಿದಾಗ, ಬೇರೆಯವರ ಜೇಬಲ್ಲಿ ಬೇಕಾದಷ್ಟು ಹಣವಿತ್ತಲ್ಲಾ ಎಂದು ಪ್ರಸಾದ್ ಕೌಂಟರ್ ಕೊಡುತ್ತಾನೆ. ಇಂತಹ ಅನೇಕ ಅರ್ಥಗರ್ಭಿತ ಮಾತುಗಳಿಂದಾಗಿ ಈ ಗಂಭೀರ ನಾಟಕವು ಕುತೂಹಲವನ್ನು ಹುಟ್ಟಿಸುತ್ತಲೇ ಸಾಗುತ್ತದೆ. ಈ ನಾಟಕದ ದುರಂತ ನಾಯಕ ಪ್ರಸಾದನ ಪಾತ್ರವನ್ನು ಕಳೆದ 31 ವರ್ಷಗಳಿಂದ ಈ ನಾಟಕದ ಕರ್ತು ಟಿ.ಎನ್.ಸೀತಾರಾಂರವರೇ ಮಾಡುತ್ತಾ ಬಂದಿದ್ದರು. ಅವರು ಪ್ರತಿಯೊಂದು ಸಂಭಾಷಣೆ ಹೇಳುವಾಗ ಕೊಡುವ ಮಾತಿನ ಪಂಚ್‌ಗಳು ನೋಡುಗರಲ್ಲಿ ಕಚುಗುಳಿ ಇಡುವಂತಿರುತ್ತಿದ್ದವು. ಆದರೆ ಅನಾರೋಗ್ಯದಿಂದಾಗಿ ಮೊದಲ ಬಾರಿಗೆ ಈ 128ನೇ ಪ್ರದರ್ಶನದಲ್ಲಿ ಅಭಿನಯಿಸಲು ಸೀತಾರಾಂರವರಿಗೆ ಸಾಧ್ಯವಾಗದೇ ಹೋಗಿದ್ದರಿಂದ ಅವರ ಬದಲಾಗಿ ಧೀರೇಂದ್ರರವರು ನಟಿಸಿದರು. ಸೀತಾರಾಂರವರ ನಟನೆಯನ್ನು ನೋಡಿದವರಿಗೆ ಧೀರೇಂದ್ರರವರ ಅಭಿನಯ ತುಂಬಾ ವೀಕ್ ಅನ್ನಿಸಿದ್ದಂತೂ ಸುಳ್ಳಲ್ಲ. ಪಾತ್ರಕ್ಕೆ ಜೀವತುಂಬಲು ಧೀರೇಂದ್ರರವರು ಪ್ರಯತ್ನಿಸಿದ್ದಾರಾದರೂ ಅಭಿನಯ ಮತ್ತು ಸಂಭಾಷಣಾ ಕ್ರಮದಲ್ಲಿ ಇನ್ನೂ ಪೋರ್ಸ ಇರಬೇಕಿತ್ತು.

ಹಿಂದಿನ ಪ್ರಯೋಗಗಳಿಗೆ ಹೋಲಿಸಿದರೆ ಈ ಪ್ರದರ್ಶನ ಒಂದಿಷ್ಟು ಸಪ್ಪೆ ಅನಿಸಿತು. ಮೂರು ದಶಕದ ಹಿಂದೆ ಈ ನಾಟಕದಲ್ಲಿ ಅಭಿನಯಸುತ್ತಿದ್ದ ಬಹುತೇಕ ಕಲಾವಿದರೆಲ್ಲಾ ಈಗ ವಯೋವೃದ್ದರಾಗಿದ್ದಾರೆ. ಆದರೂ ಅವರ ರಂಗಾಸಕ್ತಿ ಕಡಿಮೆಯಾಗಿಲ್ಲ. ಎಪ್ಪತ್ತು ವರ್ಷದಿಂದ ತೊಂಬತ್ತು ವರ್ಷದ ವಯೋಮಾನದ ಹಿರಿಯರು ಈ ಪ್ರದರ್ಶನದಲ್ಲಿ ಅಭಿನಯಿಸಿದ್ದರು. ಅವರಲ್ಲಿ ಕೆಲವರು ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ.. ಅತೀವ ಆಸಕ್ತಿ ಇಟ್ಟುಕೊಂಡೂ ತಮ್ಮ ಪಾತ್ರವನ್ನು ನಟಿಸುವ ಅವರೆಲ್ಲರ ಉತ್ಸಾಹ ಮೆಚ್ಚಬೇಕಾದದ್ದು. ವಯೋಸಹಜ ಮರೆವಿನಿಂದಾಗಿ ಮಾತನ್ನು ತಪ್ಪಿದ್ದಾರೆ, ಆಗಾಗ ತಡಬಡಾಯಿಸಿದ್ದಾರೆ, ಚಲನೆಯಲ್ಲಿ ನಿಧಾನಗತಿಯನ್ನು ಅನುಸರಿಸಿದ್ದಾರೆ.. ಮಾತಿನಲ್ಲಿರುವ ಪೋರ್ಸನ್ನು ಕಳೆದುಕೊಂಡಿದ್ದಾರೆ.. ಆದರೂ ಪ್ರದರ್ಶನವನ್ನು ದಡಸೇರಿಸಿದ್ದಾರೆ.



ಪ್ರೇಕ್ಷಕರಿಗೆ ಅಚ್ಚರಿಯನ್ನುಂಟು ಮಾಡುವ ಸಂಗತಿ ಏನೆಂದರೆ ಈ ನಾಟಕದಲ್ಲಿ ಪೋಟೋಗ್ರಾಫರ್ ಪಾತ್ರದಲ್ಲಿ ಅಭಿನಯಿಸಿದ ಹಿರಿಯ ಕಲಾವಿದ ವೆಂಕಟರಾಂರವರಿಗೆ ಈಗ ತೊಂಬತ್ತು ದಾಟಿದ ಹರೆಯ.. ತಮ್ಮ ಪಾತ್ರವನ್ನು ಯುವಕರೂ ನಾಚುವಂತೆ ಲವಲವಿಕೆಯಿಂದ ಅಭಿನಯಿಸಿದ್ದು ನೋಡಿದವರಿಗೆ ವಿಸ್ಮಯದ ಸಂಗತಿ. ಇಡೀ ಈ ನಾಟಕ ಪ್ರಯೋಗದಲ್ಲಿ ವೆಂಕಟರಾಂರವರ ನಟನೆ ಮಾತ್ರ ಬಹುಕಾಲ ನೆನಪಿಡುವಂತಹುದ್ದಾಗಿದೆ. ಅಗ್ನಿಹೋತ್ರಿ ಪಾತ್ರದಲ್ಲಿ ಪ್ರಕಾಶ್ ಅರಸ್ ಹಾಗೂ ಅಧಿಕಾರಿಯಾಗಿ ನಂದಕಿಶೋರ್ ಈ ಇಬ್ಬರ ಅಭಿನಯ ಗಮನಸೆಳೆಯುವಂತಿತ್ತು. ಮಂತ್ರಿ ಪಾತ್ರದಾರಿ ಕಪ್ಪಣ್ಣನವರು ಹಲವಾರು ಸಲ ಮಾತುಗಳನ್ನು ಮರೆತು ಅದು ಹೇಗೋ ತಕ್ಷಣಕ್ಕೆ ಸುಧಾರಿಸಿಕೊಂಡು ಸರಿದೂಗಿಸಿಕೊಳ್ಳಲು ಹರಸಾಹಸ ಪಟ್ಟರು. ಮಾಲತಿ ಪಾತ್ರಕ್ಕೆ ಅಗತ್ಯವಿರುವುದಕ್ಕಿಂತಲೂ ತುಸು ಹೆಚ್ಚೇ ಹಿರಿಯರಾದ ಪದ್ಮಜಾರವರ ನಟನೆ ಪಾತ್ರೋಚಿತವಾಗಿತ್ತು. ಅಭಿನಯದ ಕೊರತೆಗಳೇನೇ ಆಗಲಿ ಈ ಇಳಿವಯದಲ್ಲೂ ಹಿರಿಯ ಕಲಾವಿದರು ರಂಗದಂಗಳದ ಮೇಲೆ ಬಣ್ಣ ಹಚ್ಚಿಕೊಂಡು ನಟಿಸುವುದನ್ನು ನೋಡುವುದೇ ಚೆಂದ.

ಈ ನಾಟಕದಲ್ಲಿ ನಾಜೂಕಯ್ಯ ಅನ್ನೋದು ಬರೀ ಒಂದು ಪಾತ್ರದ ಹೆಸರಲ್ಲ. ಅದು ಪ್ರತಿಯೊಬ್ಬ ಸ್ವಾರ್ಥಿ ವ್ಯಕ್ತಿಗಳಲ್ಲಿ ಇರುವ ಗುಣವಿಶೇಷ. ತಮ್ಮ ಸಾಕ್ಷೀ ಪ್ರಜ್ಞೆಗೆ ವಿರುದ್ದವಾಗಿ, ನಂಬಿದ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ನಾಜೂಕಯ್ಯ ಎನ್ನಬಹುದಾಗಿದೆ. ಈ ಆಳುವವರು ಹಾಗೂ ಕಾರ್ಪೊರೇಟ್ ವಲಯದವರಲ್ಲಿ ಈ ನಾಜೂಕಯ್ಯ ಸಂಸ್ಕೃತಿ ಹೆಚ್ಚಾಗಿರುತ್ತದೆ. ಅದನ್ನೇ ಈ ನಾಟಕ ಮಾರ್ಮಿಕವಾಗಿ ಪ್ರತಿನಿಧಿಸುತ್ತದೆ. ಈ ನಾಟಕದಲ್ಲಿ ಅಧಿಕಾರದಹಂಕಾರ ಹಾಗೂ ಆದರ್ಶಗಳ ನಡುವಿನ ಸಂಘರ್ಷವಿದೆ. ಒಳಿತು ಮತ್ತು ಕೆಡಕಿನ ನಡುವಿನ ಮುಖಾಮುಖಿ ಇದೆ. ಆಸೆ ಕನಸುಗಳ ಸಾಕಾರಕ್ಕಾಗಿ ನಡೆಸುವ ರಾಜೀತನವಿದೆ, ಆದರ್ಶವಾದಿಯ ಅಸಹಾಯಕತೆ, ಹತಾಶೆಗಳೂ ಇವೆ.. ಕೊನೆಗೆ ಇವೆಲ್ಲದರ ಸಂಘರ್ಷಗಳಲ್ಲಿ ಶೋಷಕ ವ್ಯವಸ್ಥೆ ಗೆದ್ದು ಸತ್ಯ ನಿಷ್ಠೆ ಹಾಗೂ ಮಾನವೀಯ ಮೌಲ್ಯಗಳು ಸೋಲುವ ದುರಂತವನ್ನು ಈ ನಾಟಕ ತೋರಿಸುವಲ್ಲಿ ಯಶಸ್ವಿಯಾಗಿದೆ.

-ಶಶಿಕಾಂತ ಯಡಹಳ್ಳಿ.      





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ