ಶುಕ್ರವಾರ, ಜನವರಿ 16, 2015

“ಶಿಶಿರ ವಸಂತ”ದಲ್ಲಿ ಅನುಮಾನದ ಅನಾಹುತಗಳ ಅನಾವರಣ




ವಿಲಿಯಂ ಶೇಕ್ಸ್ಪೀಯರ್ ದುರಂತಹಾಸ್ಯ ನಾಟಕ ದಿ ವಿಂಟರ್ಸ್ ಟೇಲ್, ನಾಟಕವನ್ನು ಹೆಗ್ಗೋಡಿನ ಕೆ.ವಿ.ಅಕ್ಷರರವರು ಶಿಶಿರ ವಸಂತ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾನ್ ನಾಟಕಕಾರ ಶೇಕ್ಸ್ಪೀಯರ್ 450ನೇ ಜನ್ಮದಿನದ ಸ್ಮರಣೆಗಾಗಿ ಸಾಗರದ ಸ್ಪಂದನ ರಂಗತಂಡವು ಎಂ.ವಿ.ಪ್ರತಿಭಾರವರ ನಿರ್ದೇಶನದಲ್ಲಿ ನಾಟಕವನ್ನು 2015  ಜನವರಿ 10ರಂದು ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಪ್ರದರ್ಶಿಸಿದರು. ಸ್ಪಂದನ ರಂಗತಂಡಕ್ಕೀಗ ದಶಮಾನೋತ್ಸವದ ಸಂಭ್ರಮ. ಸಂಭ್ರಮವನ್ನು ಶೇಕ್ಸ್ಪೀಯರ್ ನಾಟಕ ನಿರ್ಮಿಸುವ ಮೂಲಕ ಆಚರಿಸುತ್ತಿರುವುದು ಮಹಾನ್ ನಾಟಕಕಾರನಿಗೆ ಸೂಚಿಸುವ ಗೌರವವಾಗಿದೆ.

ಶೇಕ್ಸ್ಪೀಯರ್ ತನ್ನ ದುರಂತ ನಾಟಕಗಳಿಂದ ಹೆಚ್ಚು ಪ್ರಸಿದ್ದರು. ಆದರೆ ಶೇಕ್ಸ್ಪೀಯರ್ 400 ವರ್ಷಗಳ ಹಿಂದೆ ತನ್ನ ಬರಹದ ಬದುಕಿನ ಕೊನೆಯ ದಿನಗಳಲ್ಲಿ ಬರೆದ ದಿ ವಿಂಟರ್ಸ್ ಟೇಲ್ ನಾಟಕದಲ್ಲಿ ದುರಂತದ ಜೊತೆಗೆ ಹಾಸ್ಯವನ್ನೂ ಹಾಗೂ ಅಂತ್ಯದಲ್ಲಿ ಸುಖಾಂತ್ಯವನ್ನು ಕಟ್ಟಿಕೊಡಲಾಗಿದೆ. ಶೇಕ್ಸ್ಪೀಯರ್ ತನ್ನ ಒಂದೊಂದು ನಾಟಕದಲ್ಲೂ ಮನುಷ್ಯನ ದುರಂತಕ್ಕೆ ಒಂದೊಂದು ಪ್ರಭಲ ಕಾರಣಗಳನ್ನು ಪ್ರತಿಪಾದಿಸುತ್ತಾನೆ. ಮ್ಯಾಕ್ಬೆತ್ ಅಧಿಕಾರದಾಹದಿಂದಾಗುವ ದುರಂತವನ್ನು ಹೇಳಿದರೆ, ಕಿಂಗ್ಲೀಯರ್ ದುರಹಂಕಾರದಿಂದಾಗುವ ಅವನತಿಯನ್ನು ಸಾಬೀತುಪಡಿಸುತ್ತದೆ. ಅದೇ ರೀತಿ ದಿ ವಿಂಟರ್ಸ್ ಟೇಲ್ ನಾಟಕವು ಅನಗತ್ಯ ಅನುಮಾನದಿಂದಾಗುವ ಅನಾಹುತಗಳ ಬಗ್ಗೆ ನೋಡುಗರನ್ನು ಎಚ್ಚರಿಸುತ್ತದೆ. ಅನುಮಾನ ಎನ್ನುವುದು ಮದ್ದಿಲ್ಲದ ಮನೋರೋಗವಾಗಿದೆ. ರೋಗಪೀಡಿತರಿಂದ ಉಂಟಾಗುವ ಅತಿರೇಕಗಳನ್ನು ಶಿಶಿರ ವಸಂತ ನಾಟಕ ಅನಾವರಣಗೊಳಿಸುತ್ತದೆ. ಸಂದೇಹ ಎನ್ನುವುದು ಕೇವಲ ಜನಸಾಮಾನ್ಯರನ್ನು ಮಾತ್ರ ಕಾಡುತ್ತಿಲ್ಲ, ಅದು ರಾಜ ಮಹಾರಾಜರನ್ನೂ ಬಿಟ್ಟಿಲ್ಲ. ಒಮ್ಮೆ ಅನುಮಾನದ ಜೊತೆಗೆ ಸರ್ವಾಧಿಕಾರವೂ ಸೇರಿಕೊಂಡರೆ ಪ್ರೀತಿಪಾತ್ರರಾದವರು ಅನುಭವಿಸುವ ಯಾತನೆ ಮಾತ್ರ ಸಹಿಸಲಸಾಧ್ಯ. ಅನುಮಾನಪೀಡಿತ ಮನಸ್ಥಿತಿ ಇರುವವರಿಗೆ ಮಾನಸಿಕ ಚಿಕಿತ್ಸೆ ನೀಡುವಂತೆ ನಾಟಕ ಮೂಡಿಬಂದಿದೆ. ಪಶ್ಚಾತ್ತಾಪದಿಂದ ಬಳಲುವ ಮೊದಲು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು ಎನ್ನುವ ಪರೋಕ್ಷ ಸಂದೇಶವನ್ನು ಕೊಡುವಲ್ಲಿ ನಾಟಕ ಯಶಸ್ವಿಯಾಗಿದೆ.


ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಲಿಯಾಂಟಿಸ್ ಮತ್ತು ಪಾಲಿಕ್ಸೆನಸ್ ಎನ್ನುವ ಬಾಲ್ಯ ಗೆಳೆಯರು ದೊಡ್ಡವರಾದಾಗ ಎರಡು ಬೇರೆ ರಾಜ್ಯಗಳ ದೊರೆಗಳಾಗುತ್ತಾರೆ. ಅತಿಥಿಯಾಗಿ ಆಹ್ವಾನಿತನಾದ ಪಾಲಿಕ್ಸೆನಸ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಲಿಯಾಂಟಿಸ್ ತನ್ನ ಪತ್ನಿ ಹರ್ಮಿಯೋನ್ಗೆ ಆಜ್ಞಾಪಿಸುತ್ತಾನೆ. ಪತಿಯ ಮಾತಿನಂತೆ ಅತಿಥಿಯನ್ನು ಆತ್ಮೀಯವಾಗಿ ಸತ್ಕರಿಸಿದ ಪತ್ನಿಯನ್ನು ಲಿಯಾಂಟಿಸ್ ಸಂದೇಹಿಸುತ್ತಾನೆ. ಇನ್ನು ಸ್ವಲ್ಪ ದಿನ ಇದ್ದು ಹೋಗು ಎಂದು ಲಿಯಾಂಟಿಸ್ ಹೇಳಿದ್ದನ್ನು ನಿರಾಕರಿಸಿದ ಪಾಲಿಕ್ಸೆನಸ್ನು  ರಾಣಿ ಹರ್ಮಿಯೋನ್ ಒತ್ತಾಯಿಸಿದಾಗ ಒಪ್ಪಿಕೊಳ್ಳುತ್ತಾನೆ. ಇದರಿಂದ ಲಿಯಾಂಟಿಸ್ ಅನುಮಾನ ಹೆಚ್ಚಾಗಿ ಗೆಳೆಯನನ್ನು ಕೊಲೆ ಮಾಡಲು ತನ್ನ ಸಹಚರ ಕ್ಯಾಮಿಲ್ಲೋನನ್ನು ಒಪ್ಪಿಸುತ್ತಾನೆ. ಆದರೆ ಕ್ಯಾಮಿಲ್ಲೋ ರಾಜನ ಸಂಚನ್ನು ಪಾಲಿಕ್ಸೆನಸ್ಗೆ ತಿಳಿಸಿ ಆತನೊಂದಿಗೆ ದೇಶಬಿಟ್ಟು ಪರಾರಿಯಾಗುತ್ತಾನೆ. ಪರಾರಿಯ ಹಿಂದೆ ಪತ್ನಿಯ ಕೈವಾಡ ಇದೆ ಎಂದು ಆರೋಪಿಸಿದ ದೊರೆ ಲಿಯಾಂಟಿಸ್ ಆಕೆಯನ್ನು ಬಂಧಿಖಾನೆಯಲ್ಲಿರಿಸಿ ಸತ್ಯವನ್ನು ತಿಳಿಸುವಂತೆ ಅಪೊಲೋ ದೇವ ಸಂದೇಶಕ್ಕಾಗಿ ಮೊರೆ ಇಡುತ್ತಾನೆ. ಸೆರೆಮನೆಯಲ್ಲಿ ರಾಣಿಗೆ ಹೆಣ್ಣು ಮಗುವಾಗುತ್ತದೆ. ಮಗು ಅಕ್ರಮ ಸಂತಾನವಾಗಿದ್ದು ಅದನ್ನು ಮರಭೂಮಿಯಲ್ಲಿ ಬಿಟ್ಟು ಬರಲು ಅಧಿಕಾರಿಗೆ ಆಜ್ಞಾಪಿಸುತ್ತಾನೆ. ರಾಣಿಯ ಬಹಿರಂಗ ವಿಚಾರಣೆ ನಡೆಸಲಾಗುತ್ತದೆ. ದೇವ ವಾಣಿಯ ಸತ್ಯಪರ ನಿರ್ಣಯವನ್ನೂ ಸಹ ರಾಜ ಲಿಯಾಂಟಿಸ್ ದಿಕ್ಕರಿಸುತ್ತಾನೆ. ತಾಯಿಗಾದ ದುಸ್ಥಿತಿ ಕಂಡು ರಾಜಕುಮಾರ ಕೊನೆಯುಸಿರೆಳೆಯುತ್ತಾನೆ. ಮಗನ ಸಾವಿನ ವಾರ್ತೆ ಕೇಳಿದ ರಾಣಿ ಕುಸಿದು ಬೀಳುತ್ತಾಳೆ. ರಾಣಿ ತೀರಿಕೊಂಡ ಸುದ್ದಿಯನ್ನು ಸೇವಕಿ ರಾಜನಿಗೆ ತಿಳಿಸುತ್ತಾಳೆ. ಹೆಂಡತಿ ಮಕ್ಕಳನ್ನು ಕಳೆದುಕೊಂಡ ಲಿಯಾಂಟಿಸ್ ಪಶ್ಚಾತ್ತಾಪ ಪಡುತ್ತಾನೆ. ಇಲ್ಲಿಗೆ ನಾಟಕದ ಮೊದಲರ್ಧದ ದುರಂತ ಕಥೆ ಪರಿಸಮಾಪ್ತಿಯಾಗುತ್ತದೆ.

ದ್ವಿತಿಯಾರ್ಧದಲ್ಲಿ 16 ವರ್ಷಗಳ ಕಾಲಾಂತರದಲ್ಲಿ ಕಥೆ ಪಾಲಿಕ್ಸೆನಸ್ ರಾಜನ ಸಿಸಿಲಿಯಾ ರಾಜ್ಯಕ್ಕೆ ಸ್ಥಳಾಂತರಗೊಳ್ಳುತ್ತದೆ. ಪಾಲಿಕ್ಸೆನಸ್ ದೊರೆಯ ಮಗ ರಾಜಕುಮಾರನು ಕುರುಬನ ಮಗಳಾದ ಪೆರ್ಡಿಟಾಳನ್ನು ಪ್ರೀತಿಸುತ್ತಾನೆ. ಇದನ್ನು ಪಾಲಿಕ್ಸೆನಸ್ ವಿರೋಧಿಸುತ್ತಾನೆ. ಕ್ಯಾಮಿಲ್ಲೋ ಇದೇ ಸಂದರ್ಭವನ್ನು ಬಳಸಿಕೊಂಡು ತನ್ನ ಮಾತೃದೇಶ ಬೊಹಿಮಿಯಾಕ್ಕೆ ಹೋಗಲು ಹವಣಿಸಿ ರಾಜಕುಮಾರನೊಂದಿಗೆ ಪೆರ್ಡಿಟಾಳನ್ನು  ಲಿಯಾಂಟಸ್ ರಾಜನ ಬೊಹಿಮಿಯಾಕ್ಕೆ ಕಳುಹಿಸುತ್ತಾನೆ. ಹಿಂದಿಂದೆ ತಾನೂ ಪಾಲಿಕ್ಸೆನಸ್ ರಾಜನ ಜೊತೆಗೆ ಯುವಪ್ರೇಮಿಗಳನ್ನು ಹುಡುಕುವ ನೆಪದಲ್ಲಿ ಅಲ್ಲಿಗೆ ಹೊರಡುತ್ತಾನೆ. ಹಲವಾರು ನಾಟಕೀಯ ಘಟನೆಗಳ ನಂತರ ಕುರುಬನ ಮಗಳು ರಾಜಕುಮಾರಿ ಎಂದೂ, ಲಿಯಾಂಟಸ್ ಮರಭೂಮಿಯಲ್ಲಿ ತೊರೆದ ಮಗುವೆಂದು ಗೊತ್ತಾಗುತ್ತದೆ. ಗೆಳೆಯರಿಬ್ಬರೂ ಒಂದಾಗುತ್ತಾರೆ. ಯುವಪ್ರೇಮಿಗಳ ಮದುವೆಗೆ ಅಪ್ಪಂದಿರ ಒಪ್ಪಿಗೆ ಸಿಗುತ್ತದೆ. ಕೊಟ್ಟ ಕೊನೆಗೆ ತೀರಿಕೊಂಡಳೆಂದು ನಂಬಲಾದ ರಾಣಿ ಹರ್ಮಿಯೋನ್ ತನ್ನ ಸಖಿಯ ಮನೆಯಲ್ಲಿ ಜೀವಂತವಾಗಿರುವುದು ಗೊತ್ತಾಗಿ ಎಲ್ಲರೂ ಸಂತಸ ಪಡುತ್ತಾರೆ. ಗೆಳೆತನ-ಅನುಮಾನ-ದುರಂತ-ಪಶ್ಚಾತ್ತಾಪ-ಪ್ರೇಮ ಪ್ರಕರಣ-ಪಲಾಯನ-ಪುನರ್ಮಿಲನ... ದೃಶ್ಯಗಳೊಂದಿಗೆ ಶಿಶಿರ ವಸಂತ ಎನ್ನುವ ಸುದೀರ್ಘ ನಾಟಕ ಸುಖಾಂತ್ಯವಾಗುತ್ತದೆ.


 
 ಮಹಿಳೆಯ ಶೀಲವನ್ನು ಶಂಕಿಸುವುದು ಪುರುಷ ಪ್ರಧಾನ ವ್ಯವಸ್ಥೆಯ ಭಾಗವೇ ಆಗಿದೆ. ರಾಮಾಯಣದಲ್ಲಿ ರಾಮನಂತಾ ರಾಮನೇ ಸೀತೆಯನ್ನು ಸಂದೇಹಿಸಿ ಅಗ್ನಿದಿವ್ಯಕ್ಕೊಳಪಡಿಸಿ ಅದಕ್ಕೂ ತೃಪ್ತನಾಗದೇ ತುಂಬು ಬಸುರಿಯನ್ನು ಕಾಡಿಗಟ್ಟುತ್ತಾನೆ. ನಾಟಕದಲ್ಲಿ ಕೂಡಾ ರಾಜ ತನ್ನ ಪತ್ನಿಯನ್ನು ಅನುಮಾನಿಸಿ ಬಸುರಿಯನ್ನು ಬಂಧೀಖಾನೆಗಟ್ಟುತ್ತಾನೆ. ರಾಮಾಯಣಕ್ಕೂ ಶಿಶಿರವಸಂತಾಯಣಕ್ಕೂ ಪತ್ನೀ ಪೀಡನೆಯ ನಿಟ್ಟಿನಲ್ಲಿ ಕೆಲವು ಸಾಮ್ಯತೆಗಳಿವೆ. ವ್ಯತ್ಯಾಸ ಇರೋದು ರಾಮ ತನ್ನ ಶತ್ರು ರಾವಣನನ್ನು ಸೀತೆ ಜೊತೆಗೆ ಹೋಲಿಸಿ ಅನುಮಾನಿಸಿದರೆ ನಾಟಕದಲ್ಲಿ ರಾಜ ತನ್ನದೇ ಗೆಳೆಯನ ಜೊತೆಗೆ ಹೆಂಡತಿಯನ್ನು ಸಂದೇಹಿಸುತ್ತಾನೆ. ನಾಟಕದಲ್ಲಿ ಕನಿಷ್ಟ ರಾಜನೆಂಬುವವನು ಹೆಂಡತಿಯ ಅಕ್ರಮ ಸಂಬಂಧದ ಕುರಿತು ಬಹಿರಂಗ ವಿಚಾರಣೆಯನ್ನಾದರೂ ತೋರಿಕೆಗಾಗಿ ನಡೆಸುತ್ತಾನೆ. ಆದರೆ ರಾಮದೇವರು ಯಾವ ವಿಚಾರಣೆಯನ್ನೂ ಸಹ ಮಾಡದೇ ಪತ್ನಿಯನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸುತ್ತಾನೆ. ಕೊನೆಗಾಲದಲ್ಲಿ ರಾಮನೂ ಪಶ್ಚಾತ್ತಾಪ ಹೊಂದಿ ಕಳೆದುಕೊಂಡ ಸೀತೆಯನ್ನು ಮರಳಿ ನೋಡುತ್ತಾನೆ. ಹಾಗೆಯೇ ನಾಟಕದ ರಾಜನೂ ಸಹ ಸತ್ತಳೆಂದು ನಂಬಲಾಗಿದ್ದ ಹೆಂಡತಿಯನ್ನು ಮತ್ತೆ ಪಡೆಯುತ್ತಾನೆ. ವಾಲ್ಮೀಕಿಯ ರಾಮಾಯಣ ಹಾಗೂ ಶೇಕ್ಸ್ಪೀಯರ್ ದಿ ವಿಂಟರ್ಸ್ ಟೇಲ್ ಎರಡಕ್ಕೂ ಶಂಕೆ, ಶಿಕ್ಷೆ ಮತ್ತು ಪಶ್ಚಾತ್ತಾಪಗಳ ವಿಷಯದಲ್ಲಿ ಸಾಮ್ಯತೆಗಳನ್ನು ನೋಡಬಹುದಾಗಿದೆ. ಶೇಕ್ಸ್ಪೀಯರ್ ಕವಿ ರಾಮಾಯಣದಿಂದ ಪ್ರೇರೇಪಿತನಾಗಿ ನಾಟಕ ರಚಿಸಿದನಾ? ಗೊತ್ತಿಲ್ಲ. ಒಟ್ಟಾರೆಯಾಗಿ ಕಾಲಯಾವುದಾದರೇನು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಯಾವಾಗಲೂ ಶೀಲ ಶಂಕಿತಳೇ ಎನ್ನುವುದನ್ನು ರಾಮಾಯಣದಂತೆಯೇ ಶಿಶಿರ ವಸಂತವೂ ಸಾಬೀತುಪಡಿಸುತ್ತದೆ.

ಅನುಮಾನ ಹಾಗೂ ಅದರಿಂದಾಗುವ ಅನಾಹುತಗಳು ಕಾಲಾತೀತವಾಗಿವೆನಕಾರಾತ್ಮಕ ಸಂದೇಹವ್ಯಸನ ಎನ್ನುವುದು ಮನುಷ್ಯನ ಅತೀ ದೊಡ್ಡ ದೌರ್ಬಲ್ಯವೂ ಆಗಿದೆ. ಇಂತಹ ಸಾರ್ವಕಾಲಿಕ ಸತ್ಯವನ್ನು ಹೇಳುವ ಶೇಕ್ಸ್ಪೀಯರ್ ನಾಟಕ ಅದ್ಯಾಕೋ ಅಷ್ಟೊಂದು ಜಾಗತಿಕವಾಗಿ ಜನಮನ್ನಣೆಯನ್ನು ಗಳಿಸಲಿಲ್ಲ. ದುರ್ಭಲ ನಿರೂಪನೆ, ಅನಿರೀಕ್ಷಿತ ನಾಟಕೀಯ ಬದಲಾವಣೆಗಳು ಇದಕ್ಕೆ ಕಾರಣವಾಗಿರಬಹುದಾಗಿದೆ. ಜಾಗತಿಕವಾಗಿ ದುರ್ಬಲವೆನಿಸಿಕೊಂಡ ಶೇಕ್ಸ್ಪೀಯರ್ ದಿ ವಿಂಟರ್ಸ್ ಟೇಲ್ ನಾಟಕವನ್ನು ಕನ್ನಡದಲ್ಲಿ ಆಡಿಸಲು ಒಂದಿಷ್ಟು ದೈರ್ಯ ಬೇಕಾಗುತ್ತದೆ. ಹೆಗ್ಗೋಡಿನ ನೀನಾಸಂ ಹಿಂದೆ ಶಿಶಿರ ವಸಂತ ನಾಟಕವನ್ನು ಪ್ರಯೋಗಿಸಿತ್ತಾದರೂ ಅಷ್ಟೊಂದು ಯಶಸ್ವಿಯಾಗಲಿಲ್ಲ. ಇಂತಹ ವಿಫಲ ನಾಟಕವನ್ನು ತೆಗೆದುಕೊಂಡು ಹೊಸ ಕಲಾವಿದರನ್ನಿಟ್ಟುಕೊಂಡು ನಾಟಕವನ್ನು ನಿರ್ಮಿಸಿ ನಿರ್ದೇಶಿಸಿದ ಎಂ.ವಿ.ಪ್ರತಿಭಾರವರ ಪ್ರಯತ್ನವನ್ನು ಮೆಚ್ಚಲೇಬೇಕು. ಸ್ಪಂದನ ತಂಡವನ್ನು ಅಭಿನಂದಿಸಲೇಬೇಕು.

ಮೊದಲಾರ್ಧದಲ್ಲಿ ಗಂಭೀರವೆನಿಸುವ ನಾಟಕ ದ್ವಿತಿಯಾರ್ಧದಲ್ಲಿ ವಿನೋದಮಯವಾಗಿ ಸಾಗುತ್ತದೆ. ಕಾರಣಕ್ಕೆ ಎರಡನೇ ಭಾಗ ನೋಡುಗರನ್ನು ಆಕರ್ಷಿಸುತ್ತದೆ. ಅದರಲ್ಲೂ ಕಳ್ಳನ ಪಾತ್ರ ಬಂದನಂತರ ನಾಟಕದ ರೀತಿಯೇ ಬದಲಾಗುತ್ತದೆ. ಪ್ರೇಕ್ಷಕರಲ್ಲಿ ನಗೆಯ ಸಂಚಲನವಾಗುತ್ತದೆ. ರಂಗದಂಗಳದಲ್ಲಿ ಶಿಶಿರ ಕಳೆದು ವಸಂತಾಗಮನವಾದಂತೆ ಭಾಸವಾಗುತ್ತದೆ. ಶಿಶಿರ ಋತುವಿನಲ್ಲಿ ಅದು ಹೇಗೆ ಗಿಡ ಮರಗಳು ಎಲೆಗಳನ್ನೆಲ್ಲಾ ಉದುರಿಸಿಕೊಂಡು ಸಂಕಟಕ್ಕೆ ಸಂಕೇತವಾಗಿ ನಿಲ್ಲುತ್ತವೆಯೋ ಹಾಗೆಯೇ ನಾಟಕದ ಮೊದಲರ್ಧ ಸಹಿತ ಸಂದೇಹದ ಸುಳಿಯಲ್ಲಿ ಸಿಲುಕಿ ದುರಂತವನ್ನೇ ಸೃಜಿಸುತ್ತದೆ. ಕಳೆದುಕೊಂಡ ಸೌಂದರ್ಯವನ್ನು ವಸಂತ ಋತುವಿನಲ್ಲಿ ಮತ್ತೆ ಪ್ರಕೃತಿ ಪಡೆದು ನಳನಳಿಸುವಂತೆ ನಾಟಕದ ದ್ವಿತಿಯಾರ್ಧ ಜೀವಂತಿಕೆಯಿಂದ ಪುಟಿಯುತ್ತದೆ. ನಾಟಕದ ಎರಡು ಭಾಗಗಳ ಒಟ್ಟಾರೆ ಆಶಯವನ್ನು ಸೂಚಿಸುವಂತೆ ಶಿಶಿರ ವಸಂತ ಎಂದು ಕರೆದಿರುವುದು ತುಂಬಾನೇ ಸೂಕ್ತವಾಗಿದೆ. ಪ್ರಾಕೃತಕ್ಕೆ ಮನುಷ್ಯನ ಮನೋಗತವನ್ನು ಹೊಂದಾಣಿಕೆ ಮಾಡಿದ್ದು ಸಾಂಕೇತಿಕವಾಗಿ ನಾಟಕದಲ್ಲಿ ಮೂಡಿಬಂದಿದೆ.

ನಾಟಕದಲ್ಲಿ ರಾಜ ಲಿಯಾಂಟಿಸ್ನನ್ನು ಅನುಮಾನದ ಪಿಶಾಚಿ ಎಂಬಂತೆ ತೋರಿಸಲಾಗಿದೆ. ಆದರೆ ಪರಪುರಷನ ಜೊತೆಗೆ ರಾಣಿ ಎನ್ನುವವಳ ನಡೆ ನುಡಿಗಳೂ ಸಹ ಅನುಮಾನ ಹುಟ್ಟಿಸುವ ಹಾಗೇಯೇ ಇವೆ. ಗಂಡನ ಮುಂದೆಯೇ ಆತನ ಗೆಳೆಯನೊಂದಿಗೆ ಕೈ ಕೈ ಹಿಡಿದು ಉದ್ಯಾನದಲ್ಲಿ ಸುತ್ತಾಡುವುದು, ಏಕಾಂತದಲ್ಲಿ ಕಾಲ ಕಳೆಯುವುದು... ಮುಂತಾದ ಘಟನೆಗಳು ಸಹಜವಾಗಿ ಗಂಡನಲ್ಲಿ ಸಂದೇಹ ಮೂಡಿಸುತ್ತವೆ. ಬಹುಷಃ ರೀತಿಯ ವರ್ತನೆ ಶೇಕ್ಸ್ಪೀಯರ್ ಪ್ರತಿನಿಧಿಸುವ ದೇಶದಲ್ಲಿರಬಹುದು. ಆದರೆ.. ನಾಡಿನಲ್ಲಿ ಪರಪುರುಷನೊಡನೆ ವ್ಯವಹರಿಸಲು ಒಂದಿಷ್ಟು ನಿರ್ಬಂಧಗಳಿವೆ. ಸ್ವೇಚ್ಚಾಚಾರದ ಪ್ರವೃತ್ತಿಗೆ ಇಲ್ಲಿ ಕಡಿವಾಣವಿದೆ. ಹೀಗಾಗಿ ಕೇವಲ ಲಿಯಾಂಟಿಸ್ಗೆ ಮಾತ್ರವಲ್ಲ ನೋಡುಗರಿಗೂ ಕ್ಷಣಕ್ಕೆ ನಾಟಕದ ಹರ್ಮಿಯೋನ್ ವರ್ತನೆಯ ಮೇಲೆ ಸಂದೇಹ ಬಂದಿದ್ದಂತೂ ಸುಳ್ಳಲ್ಲ.   ಇನ್ನು ರಾಜನಿಗೆ ಅನುಮಾನ ಬಂದಿದ್ದರೆ ಪ್ರಮಾಣಿಸಿ ನೋಡಬೇಕಾಗಿತ್ತು ಇಲ್ಲವೇ ರಾಣಿಯನ್ನು ನಿರ್ಬಂಧಿಸಬಹುದಾಗಿತ್ತು. ಇದರ ಬದಲಾಗಿ ಗೆಳೆಯನೊಂದಿಗೆ ಪತ್ನಿ ಏಕಾಂತದಲ್ಲಿ ಇರುವ ಹಾಗೆ ಇನ್ನೂ ಹೆಚ್ಚು ಅವಕಾಶವನ್ನು ರಾಣಿಗೆ ಮಾಡಿಕೊಡುವುದು ಒಂಚೂರು ಅಸಹಜವೆಂದೆನಿಸುತ್ತದೆ. ಹಾಗೆಯೇ ಇನ್ನೊಂದು ದೇಶದ ರಾಜನನ್ನು ಆಹ್ವಾನಿಸಿ ಕೊಲ್ಲುವುದು ವಾಸ್ತವದಲ್ಲಿ ಅಷ್ಟೊಂದು ಸಮಂಜಸವಾದುದಲ್ಲ. ಅದರಿಂದಾಗುವ ಪರಿಣಾಮಗಳೇ ದೊಡ್ಡ ದುರಂತವನ್ನು ತರಬಹುದೆನ್ನುವ ಕಲ್ಪನೆಯೂ ದೊರೆ ಲಿಯಾಂಟಿಸ್ಗೆ ಇರದೇ ಹೋಗಿದ್ದೊಂದು ವಿಪರ್ಯಾಸವಿವೇಕಹೀನ ರಾಜ, ಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಚೆಯಾಗಿ ಬಳಸುವ ರಾಣಿ ಹಾಗೂ ಇದರಿಂದಾಗುವ ದುಷ್ಪರಿಣಾಮಗಳೇ ನಾಟಕವನ್ನು ಮುನ್ನಡೆಸುತ್ತವೆ. ಪಾತ್ರಗಳ ಅಸಹಜ ನಡೆಗಳು ನಾಟಕವನ್ನು ಅವಾಸ್ತವವಾಗಿಸಿವೆ. ಸಾರ್ವತ್ರಿಕ ಸತ್ಯವನ್ನು ಹೇಳುವ ನಾಟಕದ ನಿರೂಪನಾ ಕ್ರಮ ನೆಲದ ಸ್ವಭಾವಕ್ಕೆ ಹೊಂದಾಣಿಕೆ ಆಗಲಿಲ್ಲ. ಹೀಗೆ ಅನೇಕಾನೇಕ ಅವಾಸ್ತವಿಕ ದೃಶ್ಯಗಳು ನಾಟಕದಾದ್ಯಂತ ಹಾಸುಹೊಕ್ಕಾಗಿವೆ. ಅವಾಸ್ತವದಲ್ಲೇ ವಾಸ್ತವವನ್ನು  ಹೇಳುವುದು ಶೇಕ್ಸ್ಪೀಯರ್ ನಾಟಕಗಳ ವಿಶೇಷತೆಯಾಗಿದೆ.


ಬಹುತೇಕ ಹೊಸ ಯುವಕ ಯುವತಿಯರು ಕ್ಲಿಷ್ಟಕರ ನಾಟಕವನ್ನು ಕಟ್ಟಿ ಕೊಟ್ಟಿರುವ ಪರಿಯನ್ನು ಮೆಚ್ಚಲೇಬೇಕು. ಹರ್ಮಿಯೋನ್ ಪಾತ್ರದಲ್ಲಿ ಸ್ವತಃ ನಾಟಕದ ನಿರ್ದೇಶಕಿ ಪ್ರತಿಭಾರವರೇ ಅಭಿನಯಿಸಿದ್ದು ಅವರ ನಟನಾ ಸಾಮರ್ಥ್ಯಕ್ಕೆ ನೋಡುಗರು ಬೆರಗಾಗಿದ್ದಂತೂ ಸುಳ್ಳಲ್ಲ. ಕಳ್ಳನ ಪಾತ್ರ ನಿರ್ವಹಿಸಿದ ಅನುಭವಿ ಕಲಾವಿದ ನಾಗೇಂದ್ರ ಕುಮಟಾರವರು ರಂಗದಂಗಳದಲ್ಲಿ ನಗೆಯ ಸಿಂಚನ ಮೂಡಿಸುವಲ್ಲಿ ಸಫಲರಾದರು. ಆದರೆ ಪ್ರಮುಖವಾಗಿ ಲಿಯಾಂಟಸ್ ಪಾತ್ರ ಮಂಜುನಾಥ ಜೇಡಿಕುಣಿಯವರಿಗೆ ದಕ್ಕಲಿಲ್ಲ. ಅವರು ಪಾತ್ರಕ್ಕೆ ಪಾತ್ರೋಚಿತ ಆಯ್ಕೆಯೂ ಅಲ್ಲ ವಿಕ್ಷಪ್ತ ಪಾತ್ರದ ಮಾತು ಅಭಿನಯ ಭಾವತೀವ್ರತೆಯನ್ನು ಮಂಜುನಾಥರವರು ರೂಢಿಸಿಕೊಳ್ಳಬೇಕಾಗಿದೆ. ಕುರುಬನಾಗಿ ಮೈಲಪ್ಪ ಸಹಜವಾಗಿ ನಟಿಸಿದರೆ, ಆಂಟಿಗೋನಸ್ ಪಾತ್ರದಲ್ಲಿ ಶಿವಕುಮಾರ್ ಕಷ್ಟಪಟ್ಟು ಅಭಿನಯಿಸಿದ್ದಾರೆ. ಕ್ಯಾಮಿಲ್ಲೋ ಪಾತ್ರದಲ್ಲಿ ನೂತನ್ ಹಾಗೂ ಪಾಲಿಕ್ಸೆನಸ್ ಪಾತ್ರದಲ್ಲಿ ಸಂದೀಪ್ ಶೆಟ್ಟಿ ಶಕ್ತಿ ಮೀರಿ ನಟಿಸಿದ್ದಾರಾದರೂ ಇನ್ನೂ ಪಾತ್ರಗಳಿಗೆ ತಕ್ಕಂತೆ ತಮ್ಮ ಅಭಿನಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ. ಪುಟ್ಟ ರಾಜಕುಮಾರನಾಗಿ ಭೂಮಿ ಹಾಗೂ ಪೆರ್ಡಿಟಾ ಪಾತ್ರಧಾರಿಯಾಗಿ ಅನುಷಾ ಇಬ್ಬರು ಬಾಲಕಿಯರ ನಟನೆ ಲೀಲಾಜಾಲವೆನಿಸಿದ್ದು ಗಮನ ಸೆಳೆಯಿತು. ಶಮಾರವರು ಪೌಲಿನಾ ಪಾತ್ರದಲ್ಲಿ ಗಮನಾರ್ಹವಾಗಿ ನಟಿಸಿದ್ದಾರೆ. ಪ್ರತಿಭಾರವರನ್ನು ಹೊರತು ಪಡಿಸಿ ಎಲ್ಲಾ ಪ್ರಮುಖ ಪಾತ್ರಧಾರಿಗಳೂ ಇನ್ನೂ ನಟನೆಯಲ್ಲಿ ಪಳಗಬೇಕಿದೆ. ಈಗಿರುವ ತಯಾರಿ ಯಾತಕ್ಕೂ ಸಾಲದು. ನಾಟಕದ ತೂಕದ ಪಾತ್ರಗಳು ಎಲ್ಲಾ ಹವ್ಯಾಸಿ ನಟರಿಗೆ ಭಾರವೆನಿಸುವಂತಿವೆ. ನಟನೆಯಲ್ಲಿ ಇನ್ನೂ ವೃತ್ತಿಪರತೆಯನ್ನು ರೂಢಿಸಿಕೊಂಡರೆ ನಾಟಕ ಸಮರ್ಥವಾಗಿ ಮೂಡಿಬರುತ್ತದೆ. ಶೇಕ್ಸ್ಪೀಯರ್ ಬೇರೆ ದುರಂತ ನಾಟಕಗಳನ್ನು ರಂಗತಂತ್ರ ವೈಭವೀಕರಣದಿಂದ ಗೆಲ್ಲಿಸಿಕೊಳ್ಳಬಹುದು, ಆದರೆ ನಟನೆ ಹಾಗೂ ಸಂಭಾಷಣೆಯನ್ನೇ ಆಧರಿಸಿದ ಶಿಶಿರ ವಸಂತ ನಾಟಕವನ್ನು ಕಲಾವಿದರೇ ತಮ್ಮ ಸಾಮರ್ಥ್ಯದಿಂದ ಗೆಲ್ಲಿಸಬೇಕಾಗಿದೆ. ಅದು ಅವರ ಅನಿವಾರ್ಯತೆಯೂ ಆಗಿದೆ.

ಆರಂಭದಲ್ಲಿ ಕಲಾವಿದರು  ನಾಟಕದ ಕುರಿತು ವಿವರವನ್ನು ನಿರೂಪನೆ ಮಾಡಿದ ರೀತಿ ಬಲು ಸೊಗಸಾಗಿತ್ತು. ಖಾಲಿ ರಂಗವೇದಿಕೆಯನ್ನು ಕಲಾವಿದರೆ ತುಂಬಿಕೊಂಡು ಸಮರ್ಥವಾಗಿ ಬಳಸಿಕೊಂಡ ಬಗೆ ನಾಟಕವನ್ನು ಚೆಂದಗಾಣಿಸಿತು. ಆದರೆ ಕೊಟ್ಟ ಕೊನೆಯ ದೃಶ್ಯದಲ್ಲಿ ನಡೆಯಬಹುದಾಗಿದ್ದ ಕಥೆಯನ್ನು ದೃಶ್ಯೀಕರಿಸದೇ ಕೇವಲ ಮಾತಿನಲ್ಲೇ ವಿವರವನ್ನು ಹೇಳಿಸಿದ್ದು ಹಾಗೂ ಅತೀ ಆತುರಾತುರವಾಗಿ ನಾಟಕವನ್ನು ಕೊನೆಗೊಳಿಸಿದ್ದು ಯಾಕೋ ಈ ನಾಟಕದ ಮಿತಿ ಎನ್ನಿಸುವಂತಿತ್ತು. ದೃಶ್ಯದಲ್ಲಿ ಕಟ್ಟಬಹುದಾಗಿದ್ದನ್ನು ಬರೀ ಮಾತಿನಲ್ಲೇ ಹೇಳುವುದು ನಾಟಕೀಯತೆಯನ್ನು ಕಡಿತಗೊಳಿಸಿದಂತಾಗುತ್ತದೆ.  ಮಗುವೊಂದು ಅನಾಥವಾಗಿ ಬಿದ್ದಿದ್ದನ್ನು ನೋಡಿದರೂ ಅದಕ್ಕೆ ಆರೈಕೆ ಮಾಡದೇ ತನ್ನ ಮಗನನ್ನು ಕರೆದುಕೊಂಡು ಬರಲು ಹೊರಟ ಕುರುಬನ ವರ್ತನೆ ಅಸಹಜವೆನ್ನಿಸುವಂತಿದೆ. ಹೀಗೆ ಕೆಲವು ಚಿಕ್ಕ ಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಿದರೆ ನಾಟಕ ಪ್ರೇಕ್ಷಕರಿಗೆ ಸಂವಹನ ಮಾಡುವಲ್ಲಿ ಇನ್ನೂ ಹೆಚ್ಚು ಸಫಲವಾಗುತ್ತದೆ. 

ನೀನಾಸಮ್ಮಿನ ಅರುಣ್ ಕುಮಾರ್ರವರ ಸಂಗೀತ ಸಂಯೋಜನೆ ಸೂಕ್ತವಾಗಿ ವರ್ಕಔಟ್ ಆಗಿದ್ದು ನಾಟಕಕ್ಕೆ ಅಗತ್ಯವಾದ ಮೂಡನ್ನು ಸೃಷ್ಟಿಸಲು ತನ್ನ ಕೊಡುಗೆಯನ್ನು ಕೊಟ್ಟಿದೆ. ಆದರೆ ಸತೀಶ್ ಶೆಣೈರವರ ಬೆಳಕು ವಿನ್ಯಾಸವು  ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿವೆ. ಮೊದಲರ್ಧವಂತೂ ಬೆಳಕಿನ ಸಂಯೋಜನೆ ಎಂಬುದು ಇಲ್ಲದೇ ಜನರಲ್ ಲೈಟಿಂಗ್ನಲ್ಲಿ ನಾಟಕ ನಡೆಯುತ್ತದೆ. ಹಿಂದೆ ಬಿಳಿ ಸೈಕ್, ಮುಂದೆ ಬಿಳಿ ಬಣ್ಣದ ಕಾಸ್ಟೂಮ್ ತೊಟ್ಟ ಬಹುತೇಕ ಕಲಾವಿದರು. ಮೇಲೆ ಬಿಳಿ ಬಣ್ಣದ ಬೆಳಕು... ಒಟ್ಟಾರೆಯಾಗಿ ಎಲ್ಲವೂ ಮೆಸ್ಅಪ್ ಆಗಿ ದೃಶ್ಯದ ಮೂಡನ್ನು  ಕಟ್ಟಿಕೊಡುವಲ್ಲಿ ಯಾವುದೇ ವಿಶೇಷತೆವಿಲ್ಲದಂತಾಯಿತು. ದ್ವಿತಿಯಾರ್ಧದಲ್ಲಿ ಒಂದಿಷ್ಟು ಬೆಳಕಿನ ಬಣ್ಣಗಳು ರಂಗದಂಗಳದಲ್ಲಿ ಹರಿದಾಡಿ ಬೆಳಕು ಎನ್ನುವುದೊಂದು ಇದೆ ಎಂದು ಪ್ರೇಕ್ಷಕರಿಗೆ ನೆನಪಿಸಿದವು. ಬೆಳಕು ಸಂಯೋಜನೆ ಕೇವಲ ದೃಶ್ಯಗಳನ್ನು ಬೆಳಗುವುದಕ್ಕೆ ಮಾತ್ರವಲ್ಲ ದೃಶ್ಯಕ್ಕೆ ತಕ್ಕಂತೆ ಮೂಡ್ ಸೃಷ್ಟಿಸಲು ಬೇಕು ಎನ್ನುವುದರ ಅರಿವು ಬೆಳಕಿನ ವಿನ್ಯಾಸಕರಿಗೆ ಅಗತ್ಯವಾಗಿ ಬೇಕಾಗುತ್ತದೆವಸ್ತ್ರವಿನ್ಯಾಸದಲ್ಲಿ ಅಂತಹ ವಿಶೇಷತೆ ಏನೂ ಇಲ್ಲವಾಗಿತ್ತು. ರಾಣಿಯನ್ನೂ ಸೇರಿದಂತೆ ರಾಣಿವಾಸದ ಮಹಿಳಾ ಪಾತ್ರಗಳೆಲ್ಲಾ ಒಂದೇ ರೀತಿ ಸೀರೆ ರವಿಕೆ ತೊಟ್ಟಿದ್ದ ಬಹುಷಃ ನೀನಾಸಂ ಪ್ರಭಾವದಿಂದಿರಬೇಕು. ಆದರೆ ರಾಣಿಗೂ ಸಖಿಯರಿಗೂ ಒಂದಿಷ್ಟಾದರು ಉಡುಗೆ ತೊಡುಗೆಯಲ್ಲಿ ವ್ಯತ್ಯಾಸವಿರುವುದು ಅಪೇಕ್ಷಣೀಯ. ವಿದೇಶಿ ಹೆಸರುಗಳುಳ್ಳ ಪಾತ್ರಗಳಿಗೆ ಸ್ವದೇಶಿ ಕಾಸ್ಟೂಮ್ಸ್ ಹಾಕಿಸಿದ್ದಿನ್ನೊಂದು ರೀತಿ ಆಭಾಸಕಾರಿಯಾಗಿದೆ. ಕಳ್ಳ ಕುರುಬ.. ಮುಂತಾದ ಪಾತ್ರಗಳೆಲ್ಲಾ ಇದೇ ನೆಲದ ಉಡುಗೆ ತೊಟ್ಟು ಶೇಕ್ಸ್ಪೀಯರಿನ್ ಕಾಲದೇಶದ ಹೆಸರುಗಳನ್ನು ಹೋಂದಿದ್ದು ಅದ್ಯಾಕೋ ವೇಶಕ್ಕೂ ದೇಶಕ್ಕೂ ಹೆಸರಿಗೂ ಕಾಲಘಟ್ಟಕ್ಕೂ ಹೊಂದಾಣಿಕೆಯಾಗದೇ ಹೋಯಿತು. ಯಾವುದೋ ಕಾಲದ ನಾಟಕದಲ್ಲಿ ಜೈಲಾಧಿಕಾರಿಯಂತೂ ಆಧುನಿಕ ಪೊಲೀಸ್ ಅಧಿಕಾರಿಯ ಡ್ರೆಸ್ ಹಾಕಿದ್ದರ ಪ್ರಸ್ತುತತೆ ಏನು ಎಂಬುದು ತಿಳಿಯದಂತಾಯಿತು. ರಾಜನರಮನೆಯ ಸೇವಕರು, ಸೈನಿಕರೆಲ್ಲಾ ಯಾವುದೋ ಗೌಡನ ಮನೆಯ ಕೆಲಸದಂತಾಳಿನಂತೆ ಕಾಸ್ಟೂಮ್ಸ ಹಾಕಿಕೊಂಡಿದ್ದಂತೂ  ಆಭಾಸಕಾರಿಯಾಗಿದೆ. ನಿರ್ದೇಶಕಿ ಪ್ರತಿ ಪಾತ್ರದ ಕಾಸ್ಟೂಮ್ ವಿನ್ಯಾಸದ ಮೇಲೆ ಇನ್ನೂ ಕೆಲಸ ಮಾಡಬೇಕಿದೆ.

ಉಡುಗೆ ತೊಡುಗೆ, ಹಾಡು ಹಸೆ, ರಾಗ ತಾಳ ಸಂಗೀತ, ಭಾಷೆ, ಅಭಿವ್ಯಕ್ತಿ….ಎಲ್ಲವನ್ನೂ ದೇಸಿಕರಣ ಮಾಡಿರುವ ನಿರ್ದೇಶಕಿ ಅದ್ಯಾಕೆ ವಿದೇಶಿ ಮೂಲದ ವ್ಯಕ್ತಿಗಳ ಹಾಗೂ ಸ್ಥಳಗಳ ಹೆಸರುಗಳನ್ನು  ಬಳಸಿದ್ದಾರೋ ತಿಳಿಯದಾಗಿದೆ. ಅವು ಈ ನಾಟಕದಲ್ಲಿ ಒಂದು ರೀತಿಯಲ್ಲಿ ಗೊಂದಲವನ್ನು ಹುಟ್ಟಿಸುವಂತಿವೆ. ಮೊದಲು ಸಂಪೂರ್ಣ ಮೂಲ ನಾಟಕಕ್ಕಾದರೂ ಬದ್ದವಾಗಿರಬೇಕಾಗಿತ್ತು. ಇಲ್ಲವೇ ಶೇಕ್ಸಪಿಯರನ ನಾಟಕವನ್ನು ಸಂಪೂರ್ಣ ದೇಸೀಕರಣ ಗೊಳಿಸಬಹುದಾಗಿತ್ತು. ಆದರೆ ಅತ್ತ ಅದೂ ಇಲ್ಲದೇ ಇತ್ತ ಇದೂ ಇಲ್ಲದೇ ಒಂದು ರೀತಿಯಲ್ಲಿ ಎರಡು ಸಂಸ್ಕೃತಿಗಳ ಮಿಶ್ರಣವನ್ನು 'ಶಿಶಿರ ವಸಂತ'ದಲ್ಲಿ ಕಟ್ಟಿಕೊಡಲಾಗಿದೆ. ಯಾವುದೋ ಒಂದು ಸಂಸ್ಕೃತಿಯಲ್ಲಿ ಇಡೀ ನಾಟಕವನ್ನು ನಿರ್ಮಿಸಿದರೆ  ಜನರ ಗ್ರಹಿಕೆಗೆ ಸೂಕ್ತವೆನಿಸುತ್ತದೆ. ಈ  ಕುರಿತು ನಿರ್ದೇಶಕಿ ಇನ್ನೊಮ್ಮೆ ವಿಚಾರ ಮಾಡುವುದುತ್ತಮ. ಇಡೀ ನಾಟಕವನ್ನೇ  ಈ ನಾಡಿನ ಸಂಸ್ಕೃತಿಗೆ ಸರಿಹೋಗುವಂತೆ ಹೊಂದಾಣಿಕೆ ಮಾಡಿ ಕಟ್ಟಿದರೆ ಅತ್ಯುತ್ತಮ.

ಆದರೆ... ಕನಿಷ್ಟ ಸೆಟ್ ಪರಿಕರಗಳನ್ನು ಬಳಸಿಕೊಂಡು ಇಡೀ ನಾಟಕವನ್ನು ಕಟ್ಟಿದ ನಿರ್ದೇಶಕಿಯ ನಿರ್ದೇಶನದ ಕೌಶಲ್ಯ ಮೆಚ್ಚಲೇಬೇಕಿದೆ. ಆಧುನಿಕ ರಂಗತಂತ್ರಗಳ ಅನುಪಸ್ಥಿತಿಯಲ್ಲಿ ಹೊಸ ನಟರನ್ನೇ ಇಟ್ಟುಕೊಂಡು ನಾಟಕ ಕಟ್ಟುವ ಪ್ರಯತ್ನ ಶ್ಲಾಘನೀಯವಾಗಿದೆ. ಸಿಕ್ಕ ಸೌಲಭ್ಯಗಳನ್ನು ಬಳಸಿಕೊಂಡು, ದೊರಕಿದ ನಟರನ್ನು ಇಟ್ಟುಕೊಂಡೇ ದೈತ್ಯ ಪ್ರತಿಭೆ ಶೇಕ್ಸ್ಪೀಯರ್ ನಾಟಕವನ್ನು ನಿರ್ಮಿಸುವ ಸಾಹಸಕ್ಕೆ ಭೇಷ್ ಹೇಳಲೇಬೇಕಿದೆ. ಬ್ಲಾಕಿಂಗ್, ಮೂವಮೆಂಟ್ಗಳು ಸೊಗಸಾಗಿ ಮೂಡಿಬಂದಿವೆ. ನಾಟಕದ ದೃಶ್ಯ ಸಂಯೋಜನೆಯಲ್ಲಿ ಇನ್ನಷ್ಟು ಸ್ಪಷ್ಟತೆ, ಕಥಾ ನಿರೂಪನೆಯಲ್ಲಿ ಇನ್ನಷ್ಟು ಸರಳತೆ, ನಟರಿಗೆ ಇನ್ನಷ್ಟು ಪಾತ್ರೋಚಿತ ತರಬೇತಿ ಹಾಗೂ ಮೂಡ್ ಸೃಷ್ಟಿಗೆ ಅಗತ್ಯವಿರುವಷ್ಟು ರಂಗತಂತ್ರಗಳನ್ನು ನಾಟಕದಲ್ಲಿ ತಂದರೆ ಒಂದು ಅತ್ಯುತ್ತಮ ಪ್ರಯೋಗವನ್ನು ಕೊಡಬಹುದಾಗಿದೆ. ಪ್ರಯೋಗದಿಂದ ಪ್ರಯೋಗಕ್ಕೆ ಬದಲಾವಣೆಗೊಳ್ಳುತ್ತಲೇ ಪ್ರದರ್ಶನವಾಗುವ ಜೀವಂತ ಕಲೆ ನಾಟಕವಾಗಿರುವುದರಿಂದ ಮುಂದಿನ ಪ್ರದರ್ಶನಗಳಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಒಳ್ಳೆಯ ನಾಟಕ ಮಾಡಬಹುದಾದ ಸಾಧ್ಯತೆಗಳು ಮುಕ್ತವಾಗಿವೆ. ನಿಟ್ಟಿನಲ್ಲಿ ನಿರ್ದೇಶಕಿ, ಕಲಾವಿದರು ಹಾಗೂ ತಂತ್ರಜ್ಞರು ತಮ್ಮೆಲ್ಲಾ ಪ್ರತಿಭೆಯನ್ನು ನಾಟಕ ನಿರ್ಮಿತಿಯಲ್ಲಿ ತೊಡಗಿಸಿಕೊಂಡರೆ ಶಿಶಿರ ವಸಂತ ಗಮನಾರ್ಹ ನಾಟಕವಾಗಿ ಮೂಡಿಬರುವುದರಲ್ಲಿ ಸಂದೇಹವೇ ಇಲ್ಲ.



ಶಿಶಿರ ಋತುವಿನಲ್ಲಿ  ಆರಂಭವಾಗಿ ವಸಂತ ಋತುವಿನಲ್ಲಿ ಸುಖಾಂತ್ಯವಾಗುವ ಶಿಶಿರ ವಸಂತ ನಾಟಕವು ಸಂದೇಹದಿಂದಾಗುವ ದುರಂತಗಳನ್ನು ಹೇಳುತ್ತದೆ ನಾಟಕವು ಅಸಂಭವ ಎನ್ನಿಸುವ ಕಥಾನಕ ಹಾಗೂ ಉತ್ಪ್ರೇಕ್ಷಿತ ನಾಟಕೀಯತೆಗಳ ಮೂಲಕ ಅನುಮಾನ ಎನ್ನುವ ಮದ್ದಿಲ್ಲದ ಖಾಯಿಲೆಗೆ ರಂಗಚಿಕಿತ್ಸೆ ಕೊಡುವ ಹಾಗೆ ಚಿತ್ರಿತಗೊಂಡಿದೆ. ಅವಿಭಕ್ತ ಕುಟುಂಬಗಳು ಒಡೆದು ನ್ಯಾನೋ ಕುಟುಂಬಗಳು ಅಸ್ತಿತ್ವಕ್ಕೆ ಬಂದಿರುವ ಪ್ರಸ್ತುತ ಸಂದರ್ಭದಲ್ಲಿ ಗಂಡ ಹೆಂಡತಿಯನ್ನು , ಹೆಂಡತಿ ಗಂಡನನ್ನೂ ನಂಬಲಾರದಂತಹ ಪರಿಸ್ಥಿತಿಯನ್ನು ಜಾಗತೀಕರಣ ವ್ಯವಸ್ಥೆ ರೂಪಿಸಿದೆ. ಕುಟುಂಬಗಳ ಸುತ್ತ ಅನುಮಾನದ ಹುತ್ತ ಸುತ್ತಿಕೊಳ್ಳುತ್ತಿದೆ. ಮನಸುಗಳು ಮಲಿನವಾಗುತ್ತಿವೆ, ವಿಚ್ಚೇದನೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಶಿಶಿರ ವಸಂತ ನಾಟಕವು ಅನುಮಾನದ ಅನಾಹುತಗಳ ಬಗ್ಗೆ ಎಚ್ಚರಿಸುವಂತಿದೆ. ಆತುರದಲ್ಲಿ ಸಂದೇಹಗಳನ್ನು ನಂಬದೇ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿದರೆ ಸತ್ಯವೆನಿಸಿದ್ದೂ ಸಹ ಸುಳ್ಳಾಗಬಹುದು ಎನ್ನುವ ನೀತಿ ಪಾಠವನ್ನು ಪರೋಕ್ಷವಾಗಿ ನಾಟಕ ಹೇಳುವಂತಿದೆ. ಅನುಮಾನ ಪೀಡಿತ ಮನೋರೋಗಿಗಳಿಗೆಶೀಲ ಶಂಕಿತ ಸಂದೇಹ ಪೀಡಿತರಿಗೆ ನಾಟಕ ಮಾನಸಿಕ ಚಿಕಿತ್ಸೆ ಕೊಡಬಹುದಾದ ಸಾಧ್ಯತೆಗಳಿವೆ. ಮನುಷ್ಯನ ದೌರ್ಬಲ್ಯವೊಂದರ ದುರಂತವನ್ನು ಸಾರುವ ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳಬೇಕಿದೆ.

                                 -ಶಶಿಕಾಂತ ಯಡಹಳ್ಳಿ  




 
         



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ