ಬುಧವಾರ, ಜನವರಿ 28, 2015

ಕೇಂದ್ರ ಸಾಹಿತ್ಯ ಅಕಾಡೆಮಿಯ “ರಂಗಭಾರತಿ” ಪ್ರಹಸನಗಳು:



ಪ್ರಹಸನಗಳು ಎಲ್ಲಾ ಕಡೆಯೂ ಎಲ್ಲಾ ಕಾಲಕ್ಕೂ ನಮ್ಮ ನಡುವೆಯೇ ನಮಗರಿವಿಲ್ಲದಂತೆಯೇ ನಡೆಯುತ್ತಲೇ ಇರುತ್ತವೆ. ನಾಟಕ ಎನ್ನುವುದು ರಂಗವೇದಿಕೆಯ ಮೇಲೆ ನಡೆದರೆ ನಾಟಕೀಯ ಸನ್ನಿವೇಶಗಳು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಘಟಿಸಬಹುದಾಗಿದೆ. ಸೂಕ್ಷ್ಮವಾಗಿ ಗ್ರಹಿಸಿದರೆ ಕೆಲವು ಸಿಕ್ಕುತ್ತವೆ, ಇನ್ನು ಕೆಲವು ದಕ್ಕುತ್ತವೆ. ಜನವರಿ 16 ರಿಂದ 21 ರವರೆಗೆ ಬೆಂಗಳೂರಿನ ಗುರುನಾನಕ ಭವನದಲ್ಲಿ ಆಯೋಜನೆಗೊಂಡ ರಂಗಭಾರತಿ ಎಂಬ ನಾಮಾಂಕಿತ ಸಾಹಿತ್ಯ ಲೋಕದಲ್ಲೇ ಜಗತ್ಪ್ರಸಿದ್ದ ಎನ್ನಬಹುದಾದ ನಾಟಕೋತ್ಸವದಲ್ಲಿ ಕೆಲವು ಅವಿಸ್ಮರಣೀಯ ಅಲ್ಲದಿದ್ದರೂ ಸ್ಮರಣೀಯ ಪ್ರಹಸನಗಳು ಪ್ರಕಟಗೊಂಡವು. ಅಂತವುಗಳನ್ನು ದಾಖಲಿಸದೇ ಹಾಗೆಯೇ ಬಿಟ್ಟರೆ ಸಾಹಿತ್ಯ ಲೋಕ ಮೆಚ್ಚಲಾರದು. ಅಂತಹ ಒಂದು ಉದ್ದೇಶಪೂರ್ವಕ ಉದ್ದಟತನದ ಪ್ರಯತ್ನ ಲೇಖನದಲ್ಲಿ ಮಾಡಲಾಗಿದೆ. ಸಂಬಂಧ ಪಟ್ಟವರು ಅನಾಮಿಕನೊಬ್ಬನ ಅಧಿಕಪ್ರಸಂಗತನವನ್ನು ಕ್ಷಮಿಸುವ ದಯೆತೋರಬೇಕು. ಸಂಬಂಧ ಇಲ್ಲದವರು ಓದಿಕೊಂಡು ರಸಸಮಯದ ರಸಗಳಿಗೆಗಳನ್ನು ಅಂತರಂಗದಲ್ಲಿ ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ಕೋರಿಕೊಳ್ಳುವೆ.




ಪೀಠಿಕೆ ಅತಿಯಾಗಬಾರದೆಂದು ಡೈರೆಕ್ಟ್ ಆಗಿ ಮ್ಯಾಟರ್ಗೆ ಬರ್ತೆನೆ, ಹಾಗೂ ಬರಲೇಬೇಕು. ಇಲ್ಲವಾದರೆ ನೀವು ಓದುವುದನ್ನು ನಿಲ್ಲಿಸುವ ಸಾಧ್ಯತೆಗಳಿವೆ ಎಂಬುದು ನನಗೂ ಗೊತ್ತು ನಿಮಗೂ ಗೊತ್ತು. ನಿಮಗೆ ಸುಮ್ಮನಿರದೇ ಇರುವೆ ಬಿಟ್ಟಕೊಂಡರು ಎನ್ನುವ ಮಾಡರ್ನ ಗಾದೆ ಗೊತ್ತಿರಬಹುದಲ್ಲ. ಇದನ್ನು ಅಕ್ಷರಶಃ ನಿಜ ಮಾಡಲು ಸಿಕ್ಕಪಟ್ಟೆ ಶ್ರಮವಹಿಸಿದವರು ಕೇಂದ್ರ ಸಾಹಿತ್ಯ ಅಕಾಡೆಮಿಯವರು. ಕೇಂದ್ರ ಸರಕಾರ ಕೊಡಮಾಡುವ ಅನಂತ ಅನುದಾನದಲ್ಲಿ ಪುಸ್ತಕಗಳ ಅನುವಾದ, ಸಾಹಿತ್ಯಕ ಸಂವಾದ, ಚರ್ಚೆ, ವಿಚಾರ ಸಂಕಿರಣ ಅಂತ ತನ್ನದೇ ಆದ ಲೋಕದಲ್ಲಿ ಆತ್ಮರತಿಸುಖ ಅನುಭವಿಸುತ್ತಿದ್ದ ಸಾಹಿತ್ಯ ಅಕಾಡೆಮಿಯನ್ನು ತನ್ನ ಪಾಡಿಗೆ ತಾನಿರಲು ಬಿಡಲಾರದ ನಮ್ಮ ನಾಡಿನ ಹೆಮ್ಮೆಯ ಜ್ಞಾನಪೀಠ ಡಾಕ್ಟರ್ ಕಂಬಾರ್ ಸಾಹೇಬರು ನಾಟಕಾ ಮಾಡೂಮು ಬರ್ರಿ ಎಂದು
ಡಾ.ಚಂದ್ರಶೇಖರ ಕಂಬಾರ
ಕಾಡಿದರು. ಇದಕ್ಕೆ ಇನ್ನೊಬ್ಬ ಕನ್ನಡದ ಮಹಾ ತೂಕದ ಅಕಾಡೆಮಿಕ್ ಕವಿ ಡಾಕ್ಟರ್ ಹೆಚ್.ಎಸ್.ಶಿವಪ್ರಕಾಶ್ ಜಂಗಮರು ಸೋ.... ಎಂದರು. ಅಕಾಡೆಮಿಯ ಅಧ್ಯಕ್ಷರಾದ ಶ್ರೀನಿವಾಸ ರಾವ್ ಸಾಹೇಬರಿಗೆ ಇವರ ಮಾತಿನ ತಲೆ ಬುಡ ಅರ್ಥ ಆಗಲಿಲ್ಲ. ಬೇಕಾದರೆ ಕಂಬಾರ, ಕಾರ್ನಾಡ, ಶಿವಪ್ರಕಾಶರಂತಹ ವಿಶ್ವಪ್ರಸಿದ್ಧ ನಾಟಕಕಾರರ ನಾಟಕಗಳನ್ನು ಎಲ್ಲಾ ಭಾಷೆಗಳಿಗೂ ಅನುವಾದ ಮಾಡಿ ಅಜರಾಮರಗೊಳಿಸಬಹುದು, ಆದರೆ ನಾಟಕ ಮಾಡಿಸೋದು ಯಾಕೆ? ಎನ್ನುವುದು ತಿಳಿಯದೇ ಕಕ್ಕಾಬಿಕ್ಕಿಯಾದರು. ಇದನ್ನು ಮೊದಲೇ ಗ್ರಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರಾದ ಕಂಬಾರ ಸಾಹೇಬರು ಪೂರ್ವಭಾವಿಯಾಗಿ ಸಿದ್ದಪಡಿಸಿಕೊಂಡಿದ್ದ ಪೈಲೊಂದನ್ನು ಕಮಿಟಿಯ ಮುಂದಿಟ್ಟು ತಮ್ಮ ಕನಸಿನ ಪ್ರಾಜೆಕ್ಟ್ನ್ನು ವಿವರಿಸಿದರು. ಅದೇ ರಂಗಭಾರತಿ ಎನ್ನುವ ಕಂಬಾರರ ಮಹತ್ವಾಂಕಾಂಕ್ಷೆಯ ಕೂಸು. ಕೂಸಿಗೆ ಕುಲಾವಿ ಹೊಲಿಸಿ ತೊಟ್ಟಿಲಿನಲ್ಲಿಟ್ಟು ತೂಗಲು ಸಾಹಿತ್ಯ ಅಕಾಡೆಮಿಗೆ 60 ವರ್ಷ ತುಂಬಿದ ವಜ್ರಮಹೋತ್ಸವದ ನೆಪವೂ ಸಿಕ್ಕಿತು. ಕಂಬಾರರ ಕಂಚಿನ ಕಂಠಕ್ಕೆ, ಶಿವಪ್ರಕಾಶರ ತೂಕದ ವ್ಯಕ್ತಿತ್ವಕ್ಕೆ ಎದುರಾಡುವವರ್ಯಾರು. ದೆಲ್ಲಿ ಸಭೆಯಲ್ಲಿ ಪ್ರಾಜೆಕ್ಟ್ ಸ್ಯಾಂಕ್ಷನ್ ಆಯ್ತು. ಕಾಲು ಕೋಟಿ ರೂಪಾಯಿ ಖರ್ಚಿನ ಬಾಬತ್ತಿಗೆ ಅನುಮತಿ ದೊರಕಿಸಿಕೊಂಡಾಯಿತು. ಮುಂದ....

ಓವರ್ ಟು ಬೆಂಗಳೂರು... ಇದ್ದಕ್ಕಿದ್ದಂತೆ ಜನವರಿ 20ರಂದು ಕನ್ನಡ ನಾಡಿನ ಸಮಸ್ತ ಪ್ರಮುಖ  ಪತ್ರಿಕೆಗಳಲ್ಲಿ ಕಂಬಾರರ ಪತ್ರಿಕಾ ಹೇಳಿಕೆ ಪ್ರಕಟಗೊಂಡಿದ್ದನ್ನು ಓದಿದ ಕನ್ನಡ ನಾಡಿನ ನಾಟಕದ ಮಂದಿಗೆ ಅಚ್ಚರಿಯಾಯಿತು. ಏನೂ ಸುದ್ದಿನೂ ಇಲ್ಲಾ ಸುಳಿವೂ ಇಲ್ಲ ರಾಷ್ಟ್ರೀಯ ನಾಟಕೋತ್ಸವ ಅದೆಂಗೆ ಮಾಡ್ತಾರೆ ಮಾರಾಯ್ರೇ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. ಬೆಂಗಳೂರಿನ ರಂಗಭೂಮಿಯಲ್ಲಿ ಕೆಲವು ಸಾಂಸ್ಕೃತಿಕ ದಲ್ಲಾಳಿಗಳಿದ್ದಾರಲ್ಲಾ ಅವರಿಗೋ ಭಾರಿ ಸಂಕಟವಾಯಿತು. ಏನೇ ಸರಕಾರಿ ಪ್ರಾಜೆಕ್ಟ್ಗಳು ಬಂದರೂ ದಲ್ಲಾಳಿಗಳು ಅವನ್ನು ಅದು ಹೇಗೇಗೋ ಲಾಭಿ ಮಾಡಿ ಹೊರಗುತ್ತಿಗೆ ಪಡೆದು ಹಣ ಮಾಡುವ ಪರಮ ಪವಿತ್ರ ದಂದೆಯನ್ನು ತಮ್ಮ ಪುಣ್ಯಾರ್ಹದ ಭಾಗವಾಗಿ ಮಾಡಿಕೊಂಡು ಬಂದು ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಶೇವ್ ಅಲ್ಲಲ್ಲ ಸೇವೆ ಮಾಡುತ್ತಿದ್ದಾರೆ. ಇಂತಹ ಗುತ್ತಿಗೆದಾರರು ಇದ್ದಕ್ಕಿದ್ದಂತೆ ತಳಮಳಗೊಂಡು ಉದ್ದೇಶಿತ ನಾಟಕೋತ್ಸವದ ಮೂಲಗಳನ್ನು ಕೆದಕಲು ಶುರುಮಾಡಿದರು. ಎಲ್ಲಿಯಾದರೂ ತಮ್ಮ ಗೆಬರುವಿಕೆಗೆ ಅವಕಾಶ ಸಿಗುತ್ತದಾ ಎಂದು ಅವಕಾಶಕ್ಕಾಗಿ ಹುಡುಕಾಡಿದರು. ಆದರೆ.. ನಮ್ಮ ಕಂಬಾರರೇನು ಕಡಿಮೇನಾ? ದಲ್ಲಾಳಿಗಳ ಒಳಸುಳಿಗಳನ್ನು ಚೆನ್ನಾಗಿ ಬಲ್ಲವರು. ಶ್ರಮಪಟ್ಟು ದೆಲ್ಲಿಯಿಂದ ತಂದ ಪ್ರಾಜೆಕ್ಟನ್ನು ಸಾಂಸ್ಕೃತಿಕ ಗುತ್ತಿಗೆದಾರರ ಬಾಯಿಗೆ ಕೊಟ್ಟರೆ ತನಗೇನು ಲಾಭವಿಲ್ಲ ಎನ್ನುವುದನ್ನು ಅರಿತು ತಮ್ಮ ನೆದರೇಖಿಯಲ್ಲೇ ನಾಟಕೋತ್ಸವ ನಡೆಸುವ ದೀಕ್ಷೆ ತೆಗೆದುಕೊಂಡರು. ತಾವು ಹೇಳಿದ
ಮಲ್ಲಿಕಾರ್ಜುನ ಮಹಾಮನೆ
ಹಾಗೆ ಕೇಳುತ್ತಾನೆಂದು ನಂಬಿಕೊಂಡು ಮಲ್ಲಿಕಾರ್ಜುನ ಮಹಾಮನೆ ಎಂಬ ಕೂಗುಮಾರಿಗೆ ನಾಟಕೋತ್ಸವದ ಕೋಆರ್ಡಿನೇಟರ್ ಆಗಿ ನಿಯಮಿಸಿ ಓಡಾಡುವ ಜವಾಬ್ದಾರಿ ವಹಿಸಿದರು. ಯಾರನ್ನೂ ಯಾವಾಗಲೂ ನಂಬದ ಕಂಬಾರರಿಗೆ ಮಹಾಮನೆಯ ಮೇಲೆ ಕೂಡಾ ನಂಬಿಕೆ ಇರಲಿಲ್ಲ. ಮಹಾಮನೆಯ ಮೇಲೆ ನಿಗಾ ಇಡಲು ಗುಬ್ಬಿ ಪ್ರಕಾಶರನ್ನು ಜೊತೆ ಸೇರಿಸಿಕೊಂಡರೆ, ಇವರಿಬ್ಬರ ಮೇಲೆ ಕಣ್ಣಿಡಲು ತಮ್ಮ ಸುಪುತ್ರ ರಾಜು ಕಂಬಾರರನ್ನೇ ನಿಯಮಿಸಿದರು.

ಕಂಬಾರರ ಎಲ್ಲಾ ತಂತ್ರಗಳನ್ನು ತಿಳಿದು ರಂಗದಲ್ಲಾಳಿಗಳ ಹೊಟ್ಟೆ ತೊಳಸಿದಂತಾಯ್ತು. ಹೇಗಾದರೂ ಮಾಡಿ ನಾಟಕೋತ್ಸವ ಯಶಸ್ವಿಯಾಗಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ನಿರ್ಧರಿಸಿಕೊಂಡರು. ಸಂಚಿನ ಭಾಗವಾಗಿಯೇ ಗಾಸಿಪ್ ಹಬ್ಬಿಸಿ ಅಪಪ್ರಚಾರ ಮಾಡಲು ಶುರುಮಾಡಿದರು. ಕಂಬಾರರು ರಂಗಭಾರತಿ ಪ್ರೊಜೆಕ್ಟನ್ನು ಇಪ್ಪತ್ತೆಂಟು ಲಕ್ಷಕ್ಕೆ ಸಾಹಿತ್ಯ ಅಕಾಡೆಮಿಯಿಂದ ಹೋಲ್ಸೇಲಾಗಿ ಗುತ್ತಿಗೆ ಪಡೆದಿದ್ದಾರೆ. ಆರು ನಾಟಕಕ್ಕೆ ಆರೆಂಟು ಲಕ್ಷ ಖರ್ಚು ಮಾಡಿ ಕನಿಷ್ಟ ಎಂದರೂ ಇಪ್ಪತ್ತು ಲಕ್ಷ ಹಣವನ್ನು ಅನಾಮತ್ತಾಗಿ ಜೇಬಿಗಿಳಿಸುತ್ತಾರೆ. ನೋಡಿ ಹೇಗೆ ಜ್ಞಾನಪೀಠ ಕಾಸಿನ ಪೀಠವಾಗುತ್ತಿದೆ ಎಂದೆಲ್ಲಾ ರಂಗಭೂಮಿಯ ಗಲ್ಲಿಗಲ್ಲಿಗಳಲ್ಲಿ ಗುಲ್ಲೆಬ್ಬಿಸಿ ತಮ್ಮ ಅಸಹನೆಯನ್ನು ತೋಡಿಕೊಂಡರು. ಕಂಬಾರರಿಗೆ ಕಾಸಿನ ಮೇಲಿರುವ ಮೋಹ ಗೊತ್ತಿದ್ದವರೂ ಇದ್ದರೂ ಇರಬೇಕು ಎಂದು ಸುಳ್ಳುಗಳನ್ನು ನಂಬಿ ವ್ಯಥೆಪಟ್ಟರು. ಆದರೆ ಸತ್ಯ ಬೇರೆಯೇ ಆಗಿತ್ತು. ಕಂಬಾರರು ಯಾವುದೇ ಗುತ್ತಿಗೆ ಪಡೆದಿರಲಿಲ್ಲ. ತಮ್ಮ ಪ್ರಭಾವ ಬಳಸಿ ದೆಲ್ಲಿಯಿಂದ ಕರ್ನಾಟಕಕ್ಕೆ ನಾಟಕದ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದರು. ಹಣಕಾಸಿನ ವ್ಯವಹಾರವನ್ನೆಲ್ಲಾ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾಂತೀಯ ಕಛೇರಿ ನಿರ್ವಹಿಸಿತ್ತು. ಹಣಕಾಸಿನಲ್ಲಿ ಗೋಲ್ಮಾಲ್ ನಡೆದಿದ್ದರೆ ಅದು ನಾಟಕೋತ್ಸವದ ಉಸ್ತುವಾರಿ ನೋಡಿಕೊಂಡವರು ಪಡೆದ ಕಮಿಶನ್ಗಳಲ್ಲಿ ನಡೆದಿರಬೇಕೆ ಹೊರತು ಕಂಬಾರರೇ ಎಲ್ಲವನ್ನೂ ನುಂಗಿ ನೀರು ಕುಡಿದರು ಎನ್ನುವುದಂತೂ ಜ್ಞಾನಪೀಠದ ಆಣೆಯಾಗಿಯೂ ಪೂರ್ಣ ಸತ್ಯ ಇರಲಾರದು.
         
ತಮಾಷಾ ನ ಹುವಾ ನಾಟಕದ ಚಿತ್ರ
ರಂಗಭಾರತಿಗೆ ಇಷ್ಟು ಹಿನ್ನೆಲೆ ಸಾಕಲ್ಲವೇ. ಈಗ ಇಡೀ ನಾಟಕೋತ್ಸವದಲ್ಲಿ ನಡೆದ ಕೆಲವು ಪ್ರಹಸನಗಳ ಕುರಿತು ಒಂದಿಷ್ಟು ಮಾಹಿತಿಯನ್ನು ಕೊಡದೇ ಹೋದರೆ ಕದನ ಕುತೂಹಲಿಗಳಾದ ನಿಮಗೆ ಬೋರಾಗಬಹುದು. ಅದೇನೋ ಹೇಳ್ತೀನಂತಾ ಹೊರಟು ಏನೇನೋ ಕೊರಿತಾನಲ್ಲಪಾ ಅಂತ ಓದುಗದೊರೆಗಳಾದ ತಮಗೆ ಬೇಸರವಾಗಬಹುದು. ನೇರವಾಗಿ ವಿಷಯಕ್ಕೆ ಬರ್ತೇನೆ. ಅಂದು ರಂಗಭಾರತಿ ಎನ್ನುವ ರಾಷ್ಟ್ರೀಯ ರಂಗೋತ್ಸವದ ಮೊದಲ ದಿನದ ಮೊದಲ ನಾಟಕ ಹಿಂದಿ ಭಾಷೆಯ ತಮಾಸ ಹುವಾ. ತಮಾಷೆ ಆಗಿಲ್ಲ ಎಂಬ ಹೆಸರಿನ ಗಂಭೀರ ಬೌದ್ದಿಕ ಪ್ರಧಾನ ನಾಟಕವೇ ನಾಟಕೋತ್ಸವದ ತಮಾಷೆಯ ಪ್ರಹಸನ ಆಗಿದ್ದೊಂದು ವಿಪರ್ಯಾಸ. ಅಂದು ಗುರುನಾನಕ ಭವನವೆಂಬ ರಂಗಮಂದಿರದ ಅರ್ಧದಷ್ಟು ಖಾಲಿ ಖುರ್ಚಿಗಳಿಗೆ ಹಾಗು ಇನ್ನರ್ಧ ರಂಗಾಸಕ್ತರಿಗೆ ಭಾರೀ ಕುತೂಹಲ. ಭಾನು
ಭಾನು ಭಾರತಿ
ಭಾರತಿ ಎನ್ನುವ ಸುಪ್ರಸಿದ್ದ ಎನ್ಎಸ್ಡಿ ನಿರ್ದೇಶಕರು ನಿರ್ದೇಶಿಸಿದ್ದಾರೆ, ಎನ್ಎಸ್ಡಿ ಯಲ್ಲಿ ಪಳಗಿಬಂದ ಕಲಾವಿದರು ಅಭಿನಯಿಸಿದ್ದಾರೆ, ಹೀಗಾಗಿ ಅದ್ಭುತ ನಾಟಕವನ್ನು ನೋಡಬಹುದು ಎನ್ನುವ ಬ್ರಹ್ಮಾಂಡ್ ನಿರೀಕ್ಷೆ ಹೊತ್ತು ಬಂದ ಪ್ರೇಕ್ಷಕರು ನಿರಾಶೆಗೊಳ್ಳಲು ತುಂಬಾ ಹೊತ್ತು ಬೇಕಿರಲಿಲ್ಲ. ಒಂದು ನಾಟಕದಲ್ಲಿ ಏನಿರಬೇಕಿತ್ತೋ ಅದೇ ಇಲ್ಲವಾಗಿತ್ತು. ನಾಟಕೀಯತೆಯೇ ಮಾಯವಾಗಿತ್ತು. ರಂಗದ ಮೇಲೆ ತಲೆಬುಡವಿಲ್ಲದ, ಗೊತ್ತು ಗುರಿಯಿಲ್ಲದ ವ್ಯರ್ಥ ಚರ್ಚೆ ಮಾಡಿ ಇದೇ ನಾಟಕ ಎಂದು ತೋರಿಸಲಾಯಿತು. ಇನ್ನೊಂದು ಅರ್ಧ ಗಂಟೆ ಇದೇ ಚರ್ಚಾನಾಟಕ ಮುಂದುವರೆದಿದ್ದರೆ ಪ್ರೇಕ್ಷಕರು ಅಂಗಿಹರಿದುಕೊಂಡು ತಲೆ ಕೆರೆದುಕೊಂಡು ಕೂಗಾಡಬಹುದಾದ ಚಾನ್ಸಿತ್ತು. ಅಷ್ಟರಲ್ಲಿ ನಾಟಕವಲ್ಲದ ನಾಟಕ ಮುಗಿದಿತ್ತು. ಆಗಾಗಲೇ ಅರ್ಧ ತುಂಬಿದ್ದ ರಂಗಮಂದಿರ ಕಾಲುಭಾಗಕ್ಕಿಳಿದಿತ್ತು. ಸಧ್ಯ ಇಲ್ಲಿಂದ ಪಾರಾದರೆ ಸಾಕು ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಮಹಾಮನೆಯ ಆದೇಶ ಹೊರಬಿದ್ದಿತು. ಇಂತಹ ಅತ್ಯದ್ಬುತ ನಾಟಕ ಮಾಡಿದ ಕಲಾವಿದರಿಗೆ ಎಲ್ಲಾ ಪ್ರೇಕ್ಷಕರೂ ಎದ್ದು ನಿಂತು ಚಪ್ಪಾಳೆ ತಟ್ಟಲೇಬೇಕು ಎಂದಾಗ ಅಸಹನೆಯಿಂದಲೇ ಎದ್ದ ಪ್ರೇಕ್ಷಕ ಪ್ರಭುಗಳು ಗೇಟಿನತ್ತ ಮುಖಮಾಡಿದರು. ಮಹಾಮನೆ ಎಲ್ಲ್ಲಾ ವಾಲೆಂಟಿಯರ್ಸ ಬೇಗ ಬನ್ನಿ, ಖುರ್ಚಿ ತನ್ನಿ, ಕಲಾವಿದರು ಇತ್ತ ಬನ್ನಿ, ಪೊಟೋ ಸೇಶನ್ ಶುರುಮಾಡಿಕೊಳ್ಳೋಣ ಎಂದು ಮೈಕಿನಲ್ಲೇ ಕಿರುಚಿದರಾದರೂ ಯಾವ ವಾಲೆಂಟಿಯರ್ಗಳೂ ಖುರ್ಚಿ ತರಲಿಲ್ಲ. ಅಷ್ಟರಲ್ಲಾಗಲೇ ಕಲಾವಿದರು ಗ್ರೀನ್ ರೂಂ ಸೇರಿಕೊಂಡಿದ್ದರು. ಎಲ್ಲರನ್ನೂ ಹೋಗಿ ಕರೆತಂದು ಉತ್ಸವಮೂರ್ತಿ ಕಂಬಾರರನ್ನು ನಡುಮಧ್ಯ ಕೂಡಿಸಿ ಪೊಟೋ ಪ್ರಹಸನ ಆರಂಭಮಾಡಲಾಯಿತು.

ಜಮ್ ಲೀಲಾ ನಾಟಕದ ಭೂತಗಳು
ಎರಡನೇ ದಿನ ನಡೆದ ನಾಟಕವೇ ಇನ್ನೊಂದು ಪ್ರಹಸನವಾಗಿತ್ತು. ಇದೂ ಕೂಡಾ ಹಿಂದಿ ಭಾಷೆಯಲ್ಲೇ ಇತ್ತು. ನಾಟಕದ ಆರಂಭಕ್ಕೆ ವೇದಿಕೆಯ ಮೇಲೆ ಬರುವ ಕೆಲವು ಭೂತವೇಷದಾರಿಗಳ ಗುಂಪು ನಾಟಕದ ಮಿತಿಯನ್ನು ಮೀರಿ ನಿರ್ದೇಶಕನ ವಿಕಾರತೆಗಳನ್ನು ಮಾತುಗಳಲ್ಲಿ ಕಾರಿಕೊಳ್ಳತೊಡಗಿದವುಪ್ರೇಕ್ಷಕರನ್ನು ಹೀಯಾಳಿಸತೊಡಗಿದವು. ನಾಟಕ ನೋಡಲು ಬರುವ ಪ್ರೇಕ್ಷಕರು ಬರುವ ಮುಂಚೆಯೇ ತಮ್ಮ ಸ್ನೇಹಿತರಿಗೆ ನಾನು ನಾಟಕ ನೋಡಲು ಹೋಗ್ತೇನೆ, ಸುಮ್ಮಸುಮ್ಮನೇ ನಾಲ್ಕಾರು ಬಾರಿ ಪೋನ್ ಮಾಡು ಎಂದು ಹೇಳಿ ಬರುತ್ತಾರಂತೆಹೀಗೆ ಎಲ್ಲಾದರೂ ಯಾರಾದರೂ ಮಾಡಲು ಸಾಧ್ಯವಾ? ವಿಪರ್ಯಾಸ ಏನಾಯ್ತೆಂದರೆ... ಸಂದರ್ಭಕ್ಕೆ ಸರಿಯಾಗಿ ನಾಟಕದ ನಿರ್ದೇಶಕನ ಮೊಬೈಲ್ ವೈಬ್ರೇಟ್ ಮಾಡತೊಡಗಿತು. ಮೆತ್ತಗೆ ಎತ್ತಿಕೊಂಡು ಆಮೇಲೆ ಮಾತಾಡುತ್ತೇನೆ ಎಂದು ಹೇಳಿದ ಅರ್ಜುನ್ ದೇವ್ ಮಾಹಾಶಯರು ಪೋನ್ ಕಟ್ ಮಾಡಿದರು. ಐದಾರು ನಿಮಿಷಗಳ ಕಾಲ ಪ್ರೇಕ್ಷಕರ ಮೊಬೈಲ್ ಬೇಜವಾಬ್ದಾರಿ ಬಗ್ಗೆ ಬೇಜವಾಬ್ದಾರಿಯಿಂದ ಮಾತಾಡಿದ ಪಾತ್ರಗಳು ತಮ್ಮ ಮುಂದಿನ ಟಾರ್ಗೆಟ್ ಮಾಡಿದ್ದು ತಿನ್ನುವ ಕುರಿತು. ಅದೆಷ್ಟೋ ದಿನಗಳಿಂದ ಉಪವಾಸವಿದ್ದು ತಿನ್ನಲೆಂದೇ ರಂಗಮಂದಿರಕ್ಕೆ ಕೆಲವು ಪ್ರೇಕ್ಷಕರು ಬಂದು ಕೂರುತ್ತಾರೆ ಎನ್ನುವಂತೆ ಪ್ರೇಕ್ಷಕರನ್ನು ಲೇವಡಿ ಮಾಡಲಾಯಿತು. ಇದೂ ಸಾಲದೆಂಬಂತೆ ನಿರ್ದೇಶಕನ ಅತೀ ಮುಖ್ಯ ಗುರಿ ವಿಮರ್ಶಕರು. ವಿಮರ್ಶಕರು ಕಾಗೆ ಇದ್ದ ಹಾಗೆ, ಕಾಗೆ ಮುಂದೆ ಪಿಸ್ಟಾ, ಬಾದಾಮ, ಮೃಷ್ಟಾಣ್ಣ ಇಟ್ಟರೂ ಸಹ ಅದು ಮೂಸಿ ನೋಡದೇ ಪಕ್ಕದಲ್ಲಿರುವ ಹೊಲಸನ್ನೇ ತಿನ್ನಲು ಹೋಗುತ್ತವೆ. ಗಂದಗಿ ಅಂದರೆ ಕೊಳೆ ಬಿಟ್ಟರೆ ವಿಮರ್ಶಕರಿಗೆ ಏನೂ ಕಾಣಿಸದು ಎಂದು ಮತ್ತೊಂದು ಐದು ನಿಮಿಷ ವಿಮರ್ಶಕರನ್ನು ಕಲಾವಿದರ ಬಾಯಲ್ಲಿ ಲೇವಡಿ ಮಾಡುವ ನಿರ್ದೇಶಕ ಅರ್ಜುನ್ ದೇವ್ ವಿಮರ್ಶಕ ಕುಲದ ಮೇಲೆ ತಮ್ಮ ಶತಮಾನದ ಸೇಡನ್ನು ತೀರಿಸಿಕೊಂಡರು. ಪ್ರೇಕ್ಷಕರು ಹೇಗಿರಬೇಕು, ವಿಮರ್ಶಕರು ಏನನ್ನು ಬರೆಯಬೇಕು ಎನ್ನುವುದನ್ನು ಹೇಳುವುದು ನಾಟಕದ ಅಥವಾ ನಿರ್ದೇಶಕರ ಹೊಣೆಗಾರಿಕೆಯಲ್ಲ. ಪ್ರೇಕ್ಷಕರೇ ನಾಟಕ ಮಾಡುವವರಿಗೆ ಆಶ್ರಯದಾತರು. ಅವರೆ ಇಲ್ಲವಾದರೆ ಇವರೆಲ್ಲಿ ನಾಟಕ ಮಾಡುತ್ತಿದ್ದರು. ಇನ್ನು ವಿಮರ್ಶಕರೆನ್ನುವವರು ನಿರ್ದೇಶಕರು ಮಾಡುವ ಅತಿರೇಕಗಳಿಗೆ ಅಂಕುಶ ಹಾಕುವವರು. ನಾಟಕದ ನ್ಯೂನ್ಯತೆಗಳಿಗೆ ಚಿಕಿತ್ಸೆ ಕೊಡುವವರು. ಹೋಗಲಿ ವಿಮರ್ಶಕರಿಗೆ ಬರೀ ನೆಗೆಟಿವ್ ಅಂಶಗಳೇ ಗೊಚರಿಸುತ್ತವೆ ಎಂದುಕೊಳ್ಳೋಣ. ಆದರೆ ಅರ್ಜುನ್ ದೇವ್ರವರ ನಿರ್ದೇಶನದ   ಜಮ್ಲೀಲಾ ಎನ್ನುವ ಬಾಲಿಷವಾದ ಅವಾಸ್ತವ ನಾಟಕ ಭ್ರಷ್ಟ ರಾಜಕಾರಣಿಗಳ ಕುರಿತದ್ದಾಗಿದೆ. ಭ್ರಷ್ಟ ನೇತಾಗಳು ಯಮಲೋಕಕ್ಕೆ ಹೋದರೆ ಯಮನಿಗೂ ಉಳಿಗಾಲವಿಲ್ಲ ಎನ್ನುವುದೇ ನಾಟಕದ ಸಾರಾಂಶವಾಗಿದೆ. ಹಾಗಾದರೆ ದೇಶದಲ್ಲಿ ಸುಂದರವಾದ ಅದೆಷ್ಟೋ ವಿಷಯಗಳಿವೆಯಲ್ಲಾ ಅದೆಲ್ಲವನ್ನೂ ಬಿಟ್ಟು ನಿರ್ದೇಶಕ ಸಮಾಜದ ಕಳಂಕವಾದ ರಾಜಕೀಯ ಗಂಧಗಿ (ಕೊಳಕು) ಯನ್ನೇ ಯಾಕೆ ಕೇಂದ್ರವಾಗಿಟ್ಟುಕೊಂಡು ನಾಟಕ ಮಾಡಿಸಿದ. ಅಂದರೆ ಸಮಾಜದ ಕೊಳಕನ್ನು ತೋರಿಸುವುದು ನಿರ್ದೇಶಕನ ಕೆಲಸವಾಗಿದೆ, ನಾಟಕದ ಕೊಳಕನ್ನು ವಿಮರ್ಶಕ ತೋರಿಸಿದರೆ ಅದು ಅಪರಾಧವಾಗುತ್ತದೆ ಎನ್ನುವುದು ಅರ್ಜುನ್ ದೇವ್ರವರ ವಿತಂಡವಾದವಾಗಿದೆ. ಯಾಕೆ ದ್ವಂದ್ವ? ಎಂದು ಮರುದಿನ ನೇರವಾಗಿ ಕೇಳಿದಾಗ ಸಮರ್ಪಕ ಉತ್ತರ ಹೇಳಲು ತಿಣುಕಾಡಿದ ನಿರ್ದೇಶಕ ನುಣುಚಿಕೊಳ್ಳಲು ಪ್ರಯತ್ನಿಸಿದ್ದನ್ನು ನೋಡುವುದೇ ಒಂದು ನಗೆಪಾಟಲಿನ ವಿಷಯವಾಗಿತ್ತು. ಹೀಗೆ ತಮ್ಮೊಳಗಿನ ಅಸಹನೆಯನ್ನು ಕಾರಿಕೊಳ್ಳುವುದಕ್ಕೆ ನಾಟಕ ಮಾಧ್ಯಮವನ್ನು ಬಳಸುವುದೇ ಒಂದು ರೀತಿಯಲ್ಲಿ ರಂಗದ್ರೋಹವಾಗಿದೆ. ರಂಗದ ಮೇಲೆ ನಾನು ಏನು ಬೇಕಾದರು ಹೇಳಿ ಜೀರ್ಣಿಸಿಕೊಳ್ಳುತ್ತೇನೆಂಬುವುದು ದುರಹಂಕಾರಿ ನಿರ್ದೇಶಕರ ಸರ್ವಾಧಿಕಾರಿ ಮನೋಭಾವನೆಯಾಗಿದೆ. ನಿರ್ದೇಶಕನಾದವನಿಗೆ ವಿನಯವಂತಿಕೆ ಬೇಕೆ ಹೊರತು ತಾನು ಹೇಳದ್ದೇ ಶ್ರೇಷ್ಟ ಎನ್ನುವ ಶ್ರೇಷ್ಟತೆಯ ವ್ಯಸನ ಇರಬಾರದು. ಹೀಗಾಗಿ ಅರ್ಜುನ್ ದೇವ್ ಚರಣರವರು ತಮ್ಮ ಚರಣಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರ ಮೇಲೆ ಇಡಲು ಪ್ರಯತ್ನಿಸಿ ಕೊನೆಗೆ ತಮ್ಮ ತಲೆ ಮೇಲೆಯೇ ಇಟ್ಟುಕೊಂಡು ಆಧುನಿಕ ವಾಮನರೂಪಿಯಾದರು. ನಾಟಕ ನೋಡಲು ಬಂದ ಸಾವಿರಾರಲ್ಲ, ನೂರಾರೂ ಅಲ್ಲ ಆರವತ್ತರಷ್ಟಿದ್ದ ಪ್ರೇಕ್ಷಕರು ವಿಚಿತ್ರ ಪ್ರಹಸನವನ್ನು ನಾಟಕ ರೂಪದಲ್ಲಿ ನೋಡಿಕೊಂಡು ಪುಣೀತರಾದರು. ನಾಟಕೋತ್ಸವ ಮುಂದುವರೆಯಿತು.

ಮರುದಿನ ಮಹಾಮನೆಯಿಂದ ನನಗೆ ಪೋನ್ ಬಂತು. ನೀನು ಕೈದಿಗಳಿಗೆ ಸ್ವಾಗತ ಕೋರಬೇಕು ಎಲ್ಲಿದ್ದರೂ ಬೇಗ ಬಾ ಎಂದು ಕರೆದ. ಗಾಬರಿ ಆಯ್ತು. ಏನಪ್ಪಾ ಗ್ರಹಚಾರ ಅಂತ ವಿಚಾರಿಸಿದಾಗ. ಹುಲಗಪ್ಪ ಕಟ್ಟೀಮನಿ ಜೈಲಿನ ಖೈದಿಗಳಿಗೆ ಮಾರನಾಯಕ ನಾಟಕ ಮಾಡಿಸಿದ್ದಾರೆ. ಇಂದು ಸಂಜೆ ಪ್ರದರ್ಶನವಿದೆ. ಖೈದಿ ಕಲಾವಿದರನ್ನು ಮಧ್ಯಾಹ್ನ ಹಾರ ಹಾಕಿ ಸ್ವಾಗತಿಸಬೇಕು, ಅದನ್ನು ನೀನೇ ಮಾಡಬೇಕು ಎಂದು ಮಹಾಮನೆ ವಿವರಿಸಿದಾಗ ದಿಗಿಲಾಯಿತು. ನಾನೇ ಯಾಕೆ, ಹಿರಿಯ ರಂಗಕರ್ಮಿಗಳಿಲ್ಲವೇ ಎಂದು ಕೇಳಿದ್ದಕ್ಕೆ ಆತ ಉತ್ತರಿಸಿದ್ದು ಕೇಳಿ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಎಲ್ಲರನ್ನು ಕೇಳಿದೆ ಯಾರೂ ಬರೋದಿಲ್ಲ ಎಂದರು. ಕೊನೆಗೆ ಉಳಿದವನು ನೀನೇ, ಎಲ್ಲಿದ್ದರೂ ಬಂದು ಬಿಡು ಎಂದು ಆಜ್ಞಾಪಿಸಿದ. ಮೊದಲೇ ಮಹಾಮನೆ ಎನ್ನುವವ ರಂಗಭೂಮಿಯಲ್ಲಿ ಕೂಗುಮಾರಿ ಇದ್ದಹಾಗೆ. ನಾಟಕೋತ್ಸವ ಕಂಬಾರ ಹಾಗೂ ಶಿವಪ್ರಕಾಶರ ಒತ್ತಾಸೆಯಿಂದ ಆಯೋಜನೆಗೊಂಡಿದ್ದರೂ ಮಹಾಮನೆ ಮಾತ್ರ ಸಿಕ್ಕಸಿಕ್ಕವರಲ್ಲಿ ಕಳೆದ ಎಂಟು ತಿಂಗಳಕಾಲ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ರಂಗೋತ್ಸವವನ್ನು ರೂಪಿಸಿದ್ದೇನೆ. ನನ್ನಿಂದಲೇ ನಾಟಕೊತ್ಸವ ನಡೆಯುತ್ತಿದೆ ಎಂದು ಪುಂಗತೊಡಗಿದ್ದನ್ನು  ಕೇಳಿದವರಿಗೆಲ್ಲಾ ತಮಾಷೆಯೆನ್ನಿಸಿದ್ದಂತೂ ಸುಳ್ಳಲ್ಲ. ಯಾರದೋ ಪರಿಶ್ರಮವನ್ನು ತನ್ನದೇ ಎಂದು ಹೇಳಿಕೊಂಡು ನಾಯಕತ್ವವನ್ನು ಪಡೆದು ಅದರಿಂದ ಲಾಭ ಮಾಡಿಕೊಳ್ಳುವುದು ಮಹಾಮನೆಯೆಂಬ ಮಾಯಗಾರನ ಪುರಾತನ ತಂತ್ರಗಾರಿಕೆ. ಈತ ದೊಡ್ಡ ದೊಡ್ಡ ಕನಸು ಕಾಣುತ್ತಾನೆ. ನನಸಾಗಿಸಲು ಸಾಧ್ಯವಾದ ಎಲ್ಲರನ್ನೂ ಬಳಸಿಕೊಳ್ಳುತ್ತಾನೆ. ಯಾವುದನ್ನೂ ನೆಟ್ಟಗೆ ಮಾಡದೇ ನಂಬಿದವರಿಗೆ ನಷ್ಟ ಮಾಡುತ್ತಾನೆ. ಕೊನೆಗೆ ವೇದಿಕೆಯ ಮೇಲೆ ತಾನೇ ಮೆರೆಯುತ್ತಾನೆ. ವಿಕ್ಷಿಪ್ತತೆಯಿಂದಾಗಿ ವಾದ ವಿವಾದಗಳನ್ನು ಸೃಷ್ಟಿಸುತ್ತಾನೆ. ಸ್ನೇಹಿತರಾದವರನ್ನು ತನ್ನ ದುರಹಂಕಾರದಿಂದಾಗಿ ದೂರಮಾಡಿಕೊಳ್ಳುತ್ತಾನೆ. ‘‘ಬೇಡ ಮಾರಾಯಾ, ಈಗ ಹಾರ ಹಾಕಲು ಕರೆದು ನಂತರ ನಾನೇ ಯಡಹಳ್ಳಿಗೆ ಅವಕಾಶ ಮಾಡಿಕೊಟ್ಟೆ ಎಂದು ನೀನೇ ಪುಕಾರು ಹಬ್ಬಿಸುವುದು ನನಗೆ ಗೊತ್ತು. ಹಿಂದೆ ವಿಚಾರ ಸಂಕಿರಣದಲ್ಲಿ ನನ್ನಿಂದ ಪ್ರಬಂಧ ಮಂಡಿಸಿಕೊಂಡು ಯಡಹಳ್ಳಿಗೆ ನಾನೇ ವೇದಿಕೆ ಒದಗಿಸಿಕೊಟ್ಟೆ ಎಂದು ಪ್ರಚಾರ ಮಾಡಿಕೊಂಡೆ. ನನಗೆ ಮಾಡಲು ಬೇರೆ ಕೆಲಸವಿದೆ ಬೇರೆಯವರನ್ನು ನೋಡಿಕೋ’’ ಎಂದು ನೇರವಾಗಿಯೇ ಹೇಳಿ ಪೋನಿಟ್ಟೆ. ಸಿಜಿಕೆ ಒಂದು ಮಾತು ಹೇಳುತ್ತಿದ್ದರು, ‘‘ಬ್ರಾಹ್ಮಣೋ ಬ್ರಹ್ಮಾಂಡ ಪಾತಕಃ, ಜಂಗಮೋ ಜಗದ್ಘಾತಕಃ ಎಂದು. ಮಾತಲ್ಲಿ ಅದೆಷ್ಟು ಸತ್ಯ ಮಿಥ್ಯ ಇದೆಯೋ ಗೊತ್ತಿಲ್ಲಅಂತಹ ಜಗದ್ಘಾತಕ ಜಂಗಮರಲ್ಲಿ ಮಹಾಮನೆಯೂ ಒಬ್ಬ ಎಂಬುದು ನನ್ನ ಅನುಭವದಿಂದ ಆನಂದಿಸಿದ್ದೇನೆ. ಮತ್ತೆ ಈಗ ಹೋಗಿ ಆತನ ಋಣಭಾರ ತಲೆ ಮೇಲೆ ಹೊತ್ತುಕೊಂಡು ಬದುಕು ಸಾಗಿಸುವುದು ಬೇಡವೆನಿಸಿ ಆತನ ಆಹ್ವಾನಕ್ಕೆ ದೂರದಿಂದಲೇ ನಮಸ್ಕರಿಸಿದೆ.

ಮಾರನೆಯ ದಿನ ಜಮ್ಲೀಲಾ ನಿರ್ದೇಶಕ ಅರ್ಜುನ್ ದೇವ್ರವರನ್ನು  ಅಟಕಾಯಿಸಿಕೊಂಡಿದ್ದೆ. ಅದು ಹೇಗೆ ನಾಟಕದಲ್ಲಿ ಪ್ರೇಕ್ಷಕರನ್ನು ಹಾಗೂ ವಿಮರ್ಶಕರನ್ನು ಹೀನಾಯವಾಗಿ ನಿಂದಿಸಿದ್ದೀರಿ ಎಂದು ತಪರಾಕಿಹಾಕಿ ನಿಲ್ಲಿಸಿದ್ದೆ. ಆಗ ಅಲ್ಲಿಗೆ ಬಂದ ಮಹಾಮನೆ   ಕನ್ನಡ ಬಾರದ ಅರ್ಜುನ್ ದೇವ್ ಮುಂದೆ ತನ್ನ ಪ್ರಲಾಪವನ್ನು ಕನ್ನಡ, ಇಂಗ್ಲೀಷ್, ಹಿಂದೀ ಮಿಶ್ರಿತ ವಿಚಿತ್ರ ಭಾಷೆಯಲ್ಲಿ ವಿವರಿಸತೊಡಗಿದ. ಆಗ ನಿರ್ದೇಶಕನಿಗೆ ನಾನು ಸರ್ ನಿಮ್ಮ ನಾಟಕದಲ್ಲಿ ರಾಜಕಾರಣಿಯೊಬ್ಬ ಯಮಲೋಕಕ್ಕೆ ಹೋಗಿ ಯಮನನ್ನು ಪದಚ್ಚುತ ಗೊಳಿಸಿ ಅರಾಜಕತೆ ಸೃಷ್ಟಿಸುತ್ತಾನೆ. ಆದರೆ ಯಮಲೋಕಕ್ಕೆ ನಮ್ಮ ಮಹಾಮನೆಯನ್ನು ಕಳಿಸಿದರೆ ಸಾಕು ಯಮಲೋಕ, ದೇವಲೋಕಗಳನ್ನೆಲ್ಲಾ ಆಕ್ರಮಿಸಿ ನಾಯಕನಾಗುತ್ತಾನೆ ಎಂದು ವಿನಂತಿಸಿಕೊಂಡೆ. ಮಹಾಮನೆಗೆ ಹಿಂದಿ ಭಾಷೆಯ ಮಾತುಗಳು ಅದೆಷ್ಟು ಅರ್ಥವಾಯ್ತೋ ಗೊತ್ತಿಲ್ಲ. ಹೌದು ಕಣಯ್ಯ, ನಾಯಕನಾಗುವವನು ಹಾಗೆಯೇ ಇರಬೇಕು. ಎಲ್ಲೆ ಹೋದರು ನಾಯಕ ನಾಯಕನಾಗಿರಬೇಕು ಎಂದು ವಿಚಿತ್ರವಾಗಿ ನಗತೊಡಗಿದ. ಇನ್ನು ಇಲ್ಲಿದ್ದು ಪ್ರಯೋಜನವಿಲ್ಲವೆಂದು ತೌಡು ಕುಟ್ಟುವ ಜಾಗಕ್ಕೆ ಬಂದು ಕಿವಿದಾನ ಮಾಡಿ ಕುಳಿತುಕೊಂಡೆ.





ಹೌದು ಅಂದು ಅಲ್ಲಿ  ನಿಜವಾಗಿ ಕುಟ್ಟಿದ್ದು ಪಕ್ಕಾ ತೌಡೇ ಆಗಿತ್ತು. ಹೀಗೆ ಹಲವಾರು ಪಂಡಿತರು ದೇಶದ ವಿವಿಧ ಭಾಗಗಳಿಂದ ಬಂದು ಎರಡು ಹಗಲು ತೌಡು ಕುಟ್ಟಿದ್ದಕ್ಕೆ ಆದ ಜನತೆಯ ತೆರಿಗೆ ಹಣದ ಒಟ್ಟು ಖರ್ಚು ಹದಿನೈದು ಲಕ್ಷ ರೂಪಾಯಿಗಳು. ಅದೇನು ತೌಡು ಕುಟ್ಟುವುದಕ್ಕೆ ಅಷ್ಟೊಂದು ಹಣ ಸಿಗುತ್ತದಾ ಎಂಬುದು ನಮ್ಮ ಸಾಂಸ್ಕೃತಿಕ ದಲ್ಲಾಳಿಗಳಿಗೆನಾದರೂ ಗೊತ್ತಾದರೆ ಮನೆಗೆ ಹೋಗಿ ಒಣಕೆ ತೆಗೆದುಕೊಂಡು ತೌಡು ಕುಟ್ಟುವುದಕ್ಕೆ ಸಿದ್ದರಾಗಿ ಓಡೋಡಿ ಬರುತ್ತಾರೆ. ಆದರೆ ಇದು ಮಾತಿನ ತೌಡು. ಕುಟ್ಟಿದಷ್ಟೂ ಹೊಟ್ಟೇ ಉದುರಿತೇ ಹೊರತು ಕಾಳಂತೂ ಬರಲಿಲ್ಲ ಯಾರ ಜ್ಞಾನದ ಹಸಿವನ್ನೂ ನೀಗಲಿಲ್ಲ. ಇದು ವಿಚಾರ ಸಂಕಿರಣದ ವಿಚಾರ. ಹೌದು.... ಜನವರಿ ೧೯ ಹಾಗೂ ೨೦ ರಂದು ಸಮಕಾಲೀನ ಭಾರತೀಯ ನಾಟಕ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ರಂಗಭಾರತಿ ನಾಟಕೋತ್ಸವದ ಭಾಗವಾಗಿ ಅಯೋಜಿಸಲಾಗಿತ್ತು. ಸಾಹಿತ್ಯ ಅಕಾಡೆಮಿಯ ನಾಟಕೋತ್ಸವದಲ್ಲಿ ವಿಚಾರ ಸಂಕಿರಣ ಇಲ್ಲದಿದ್ದರೆ ಸಾಹಿತ್ಯ ಆಕಾಡೆಮಿಗೆ ಅಪಮಾನ ಅಲ್ಲವೇ?. ಮತ್ತು ನಾಟಕೋತ್ಸವಕ್ಕೆ ಆರು ದಿನಗಳ ಕಾಲ ಒಟ್ಟಾರೆ ಖರ್ಚಾದ ಹಣಕ್ಕಿಂತ ದುಪ್ಪಟ್ಟು ಹಣ ಎರಡು ದಿನಗಳ ಕಾಲದ ತೌಡು ಕುಟ್ಟುವ ಕಾರ್ಯಕ್ರಮಕ್ಕೆ ಖರ್ಚು ಮಾಡಬಹುದಾಗಿತ್ತು ಹಾಗೂ ಮಾಡಲಾಯಿತು. ಹೋಗಲಿ ಹದಿನೈದು ಲಕ್ಷ ರೂಪಾಯಿ ಜನತೆಯ ತೆರಿಗೆಯ ಹಣವನ್ನು ಖರ್ಚು ಮಾಡಿದ್ದು ಉಪಯೋಗವಾಗಿದ್ದಾದರೂ ಯಾರಿಗೆ? ಆಯೋಜಕರಿಗೆ ಹಾಗೂ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದವರಿಗೆ ಮಾತ್ರ. ವಿಚಾರ ಸಂಕಿರಣಕ್ಕೆ ಬಂದರೆ ನೌಕರರಿಗೆ ರಜೆ ಕೊಡಿಸಲಾಗುತ್ತದೆ ಎಂದು ಆಮಿಷ ತೋರಿಸಿದರೂ ಒಟ್ಟಾರೆ ನೂರೈವತ್ತು ಜನ ಮಾತು ಕೇಳಲೆಂದು ಬಂದಿದ್ದರು. ಲಾಟಿನು ಇಟ್ಟು ಹುಡುಕಿದರೂ ಕನ್ನಡ ರಂಗಭೂಮಿಯವರು ಕಾಣಸಿಗಲಿಲ್ಲ. ಬೆರಳೆಣಿಕೆಯಷ್ಟು ಜನ ಬಂದರಾದರೂ ಎರಡೂ ದಿನ ಸಂಪೂರ್ಣವಾಗಿ ಕೂತು ಮಾತುಗಳನ್ನು ಕೇಳಲಿಲ್ಲ. ಯಾಕೆ ಹೀಗಾಯ್ತು?. ಯಾಕೆಂದರೆ ವಿಚಾರ ಸಂಕಿರಣದಲ್ಲಿ ಉಮಾಶ್ರೀಯವರನ್ನು ಹೊರತು ಪಡಿಸಿ ಯಾರೆಂದರೆ ಯಾರೂ ಕನ್ನಡದಲ್ಲಿ ಮಾತಾಡಲಿಲ್ಲ. ಹೋಗಲಿ ಪಂಡಿತರು ಮಂಡಿಸಿದ ಪ್ರಬಂಧಗಳನ್ನಾದರೂ ಕನ್ನಡಕ್ಕೆ ತರ್ಜುಮೆ ಮಾಡಿ ಕೊಡಬೇಕೆನ್ನುವ ಕನಿಷ್ಟ ಪರಿಜ್ಞಾನವೂ ಆಯೋಜಕರಿಗಿರಲಿಲ್ಲ. ಯಾವ್ಯಾವದೋ ಭಾಷೆಯ ರಂಗಕರ್ಮಿಗಳು ಇಂಗ್ಲಿಷನಲ್ಲಿ ಮಾತಾಡಿದ್ದನ್ನು ಅರಿತುಕೊಳ್ಳುವುದೇ ಪುರಾತನ ಲಿಪಿಯನ್ನು ಡಿಕೋಡ್ ಮಾಡಿದಷ್ಟು ಕಷ್ಟವೆನಿಸುತ್ತಿತ್ತು. ಕನ್ನಡ ನಾಡಿನಲ್ಲಿ ನಡೆದ ವಿಚಾರ ಸಂಕಿರಣ ಕನ್ನಡ ರಂಗಭೂಮಿಯವರಿಗೆ ತಲುಪದೇ ಹೋಯಿತು. ಹೋಗಲಿ ನೂರು ಜನ ಕೇಳುವುದಕ್ಕಾಗಿ ಸುಮಾರು ಐವತ್ತು ಜನ ಅತಿಥಿಗಳನ್ನು ಕರೆಸಿ ತಲಾ ಹತ್ತು ಹದಿನೈದು ನಿಮಿಷ ಮಾತಾಡಿಸಲು ಹದಿನೈದು ಲಕ್ಷ ಹಣ ಖರ್ಚು ಮಾಡಿದ್ದು ನಿಜಕ್ಕೂ ಬಲು ದೊಡ್ಡ ವಿಪರ್ಯಾಸವಾಗಿದೆ. ಇದೇ ಹದಿನೈದು ಲಕ್ಷದಲ್ಲಿ ಇನ್ನೂ ಹದಿನೈದು ನಾಟಕ ಮಾಡಿಸಿ ತೋರಿಸಿದ್ದರೆ ಸಾವಿರಾರು ಜನ ನೋಡಬಹುದಾಗಿತ್ತು.




ವಿಚಾರಸಂಕಿರಣದಲ್ಲಿ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದು ನಮ್ಮ ಕನ್ನಡ ಮತ್ತು ಸಂಸ್ಕೃತಿ ಮಂತ್ರಿಣಿ ಉಮಾಶ್ರೀರವರು. ಎರಡನೇ ದಿನ ಮಾತಾಡಬೇಕಾದವರು ತಮ್ಮ ಅನುಕೂಲ ನೋಡಿಕೊಂಡು ಮೊದಲನೇ ದಿನವೇ ಬಂದು ವಿಚಾರ ಸಂಕಿರಣದಲ್ಲಿ ಮಾತಾಡಲು ಶುರು ಮಾಡಿದವರು ಮುಗಿಸುವ ಲಕ್ಷಣಗಳೇ ಕಾಣಲಿಲ್ಲ. ರಂಗನಟರ ಮಾತಿನ ಅಭಿವ್ಯಕ್ತಿ ವಿಷಯ ಕುರಿತು ಮಾತಾಡಲು ಸೂಚಿಸಿದ್ದರೆ ಉಮಾಶ್ರೀರವರು ತಮ್ಮ ಬಾಲ್ಯದ ಬವಣೆಗಳಿಗೆ ಬಣ್ಣ ಹಚ್ಚತೊಡಗಿದರು. ಅವರಿನ್ನೂ ಮೂರೋ ನಾಲ್ಕನೇ ಕ್ಲಾಸ್ವರೆಗೂ ತಮ್ಮ ಬದುಕಿನ ವೃತ್ತಾಂತಕ್ಕೆ ತಲುಪಿದ್ದರು, ಇನ್ನೂ ಈಗಿನವರೆಗೂ ವಿವರಗಳನ್ನು ಕೊಡಬೇಕೆಂದಿದ್ದರೆ ಬಹುಷಃ ಎರಡೂ ದಿನಗಳ ವಿಚಾರ ಸಂಕಿರಣದ ಸಮಯ ಅವರೊಬ್ಬರಿಗೇ ಸಾಲದಾಗುತ್ತಿತ್ತೇನೋ? ಆದರೆ ಸಭೆಯ ಅಧ್ಯಕ್ಷತೆ ವಹಿಸಿದ ಭಾನು ಭಾರತಿ ಸಾಹೇಬರು
ಉಮಾಶ್ರೀ ಹೇಳಿದ್ದು ಏನೇನು ಅರ್ಥವಾಗದೇ ಸಮಯ ಮೀರಿದೆ ಮಾತು ಮುಗಿಸಿರಿ ಎಂದು ಸೂಚಿಸಿದರು. ಮೊಟ್ಟ ಮೊದಲ ಬಾರಿಗೆ ತುಂಬಾನೇ ಕಷ್ಟ ಪಟ್ಟು ನೋಟ್ ಮಾಡಿಕೊಂಡು ಬಂದು ಉತ್ಸಾಹದಿಂದಲೇ ಮಾತಿಗಾರಂಭಿಸಿದ ಉಮಾಶ್ರೀರವರ ಮುಖ ಇದ್ದಕ್ಕಿದ್ದಂತೆ ಕಳಾಹೀನವಾಯಿತುಅಸಹನೆಯಿಂದಲೇ ಮಾತು ಮುಗಿಸಿ ಕುಳಿತ ಮಂತ್ರಿಣಿ ಮುಂದಿನ ಮೂರು ನಿಮಿಷಕ್ಕೆ ಯಾರಿಗೂ ಹೇಳದೇ ಸಭೆಯಿಂದ ಹೊರನಡೆದು ತಮಗೆ ಮಾತಾಡಲು ಅವಕಾಶಕೊಡದಿದ್ದಕ್ಕೆ ಪ್ರತಿಭಟನೆ ಸೂಚಿಸಿದರು. ಇದರಲ್ಲಿ ತಪ್ಪು ಉಮಾಶ್ರೀರವರದಲ್ಲ ಕಂಬಾರರದಾಗಿತ್ತು. ಬಂದು ನಿನ್ನ ಬದುಕಿನ ಘಟನೆಗಳ ಬಗ್ಗೆ ಮಾತಾಡಬಹುದು ಎಂದು ಕಂಬಾರರು ಉಮಾಶ್ರೀರವರಿಗೆ ಆಹ್ವಾನಿಸುವಾಗಲೇ ಸೂಚಿಸಿದ್ದರಿಂದ ಉಮಾಶ್ರೀರವರು ಅದನ್ನೇ ಮಾಡಿದ್ದರು. ಆದರೆ ಸಮಯದ ಮಿತಿಯನ್ನು ಅವರಿಗೆ ಯಾರೂ ತಿಳಿಸಿರಲಿಲ್ಲ. ಮಾತನ್ನು ಅರ್ಧಕ್ಕೆ ಮುಗಿಸಿ ಉಮಾಶ್ರೀರವರಿಗೆ ಅಭ್ಯಾಸವೂ ಇರಲಿಲ್ಲ. ಇದರಿಂದಾಗಿ ಅಪಾರ ಅವಮಾನದಿಂದ ಉಮಾಶ್ರೀ ನೋಂದುಕೊಂಡರು. ಆರಂಭದ ದಿನವೇ ವಿಚಾರ ಸಂಕಿರಣಕ್ಕೆ ವಿಘ್ನಬಂದಂತಾಯಿತು.

ಹೋಗಲಿ 15 ಲಕ್ಷ ರೂಪಾಯಿ ಖರ್ಚಿನ ವಿಚಾರಸಂಕಿರಣ ನಡೆದದ್ದಾದರೂ ಎಲ್ಲಿ? ಗೊಡೌನಿನಲ್ಲಿ ಎಂದರೆ ನೀವು ನಂಬಲೇಬೇಕು. ಹೌದು... ಅದು ಗುರುನಾನಕ ಭವನದ ಹಿಂಬಾಗದಲ್ಲಿರುವ ಶೆಡ್. ಸಮರ್ಪಕ ಗಾಳಿ ಇಲ್ಲ, ಬೆಳಕಿಲ್ಲ. ಸುಣ್ಣ ಬಣ್ಣ ಕಾಣದೇ ಗೋಡೌನ್ ಗೋಡೆಗಳಿಗೆ ದಶಕಗಳೇ ಕಳೆದಿವೆ. ಪ್ಯಾನ್ಗಳೆಂಬ ಗಾಳಿ ಗಿರಗಿಟಿಗಳಿಲ್ಲ. ಕಿತ್ತೋಗಿರೋ ಪ್ಲೋರಿಂಗು... ಯಾವುದೇ ರಾಷ್ಟ್ರೀಯ ವಿಚಾರ ಸಂಕಿರಣ ಹೋಗಲಿ ಲೋಕಲ್ ವಿಚಾರ ಸಂಕಿರಣ ನಡೆಸಲೂ ಯೋಗ್ಯವಾಗಿರದ ಸ್ಥಳದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಿಂದಿ ಹಾಗೂ ಇಂಗ್ಲೀಷನಲ್ಲಿ ನಡೆಸಲಾಯಿತು. ಎಲ್ಲಾ ಗೋಷ್ಠಿಗಳು ನಡೆದದ್ದು ಇಂಗ್ಲೀಷ್ ಇಲ್ಲವೇ ಹಿಂದಿ ಭಾಷೆಯಲ್ಲಿ. ಅವುಗಳನ್ನೂ ಸಹ ಅರ್ಥೈಸಿಕೊಳ್ಳುವುದು ಅದೆಷ್ಟು ಕ್ಲಿಷ್ಟಕರವಾಗಿತ್ತೆಂದರೆ ವಿಚಾರಗೋಷ್ಟಿಯಲ್ಲಿ ಪ್ರಬಂಧ ಮಂಡನೆ ಮಾಡಿದವರ ಇಂಗ್ಲಿಷ್ ಉಚ್ಚಾರಣೆ ಅವರವರ ಭಾಷಾ ಛಾಯೆಯಲ್ಲಿತ್ತು. ಕಷ್ಟ ಪಟ್ಟು ಒಂದಿಷ್ಟಾದರೂ ತಿಳಿದುಕೊಳ್ಳೋಣ ಎಂದರೆ ಕಳಪೆ ಗುಣಮಟ್ಟದ ಸೌಂಡ್ ಸಿಸ್ಟಂ ಅದಕ್ಕೂ ಅಡತಡೆಯನ್ನೊಡ್ಡಿತು. ಹದಿನೈದು ಲಕ್ಷ ಬೆಲೆಯ ಮಾತುಗಳನ್ನು ಕೇಳಿಸಿಕೊಂಡು ತಿಳಿದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಅನಗತ್ಯ ಒನ್ ವೇ ಮಾದರಿಯ ವಿಚಾರ ಸಂಕಿರಣದ ಬದಲಾಗಿ ಎಲ್ಲಾ ವಿಚಾರ ಸಂಕಿರಣದ ಪ್ರಬಂಧ ಮಂಡನೆಯ ಲೇಖನಗಳನ್ನು ಬರೆಸಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪುಸ್ತಕವಾಗಿ ಮುದ್ರಿಸಿ ಜನರಿಗೆ ತಲುಪಿಸಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಹಾಗೂ ಬೇಕಾದಷ್ಟು ಹಣವೂ ಉಳಿಯುತ್ತಿತ್ತು. ಆದರೆ ಹಣ ಖರ್ಚು ಮಾಡುವ ಉದ್ದೇಶದಿಂದಲೇ ಪ್ರಾಜೆಕ್ಟ್ ಮಾಡಿದ್ದರಿಂದ ಉಳಿತಾಯದ ಮಾತು ವ್ಯರ್ಥವೆನಿಸುತ್ತದೆ.


ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಮಾನದಲ್ಲಿ ವಿಷಯ ಪರಿಣಿತ ಪಂಡಿತರನ್ನು ಕರೆಸಿಕೊಂಡು ತ್ರೀ ಸ್ಟಾರ್ ಹೊಟೇಲ್ಗಳಲ್ಲಿ ಮೂರು ದಿನ ಇರಲು ವ್ಯವಸ್ಥೆಗೊಳಿಸಿ ನಂತರ ಶೆಡ್ನಲ್ಲಿ ಕೂಡಿಸಿ ಮಾತಾಡಿಸಿದ್ದು ವಿಸ್ಮಯಕಾರಿಯಾಗಿದೆಕೈಗಳಿಲ್ಲದ ಪ್ಲಾಸ್ಟಿಕ್ ಚೇರ್ನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಕುಳಿತು ಸಹನೆಯಿಂದ ಅರ್ಥವಾಗದ ಮಾತುಗಳನ್ನು ಕೆಳುವುದು ಅದೆಂತಾ ಯಾತನಾದಾಯಕ ಎನ್ನುವುದು ಅಂದು ಅಲ್ಲಿ ಕುಳಿತು ಕೇಳಿದವರಿಗೆ ಗೊತ್ತು. ಹೀಗಾಗಿಯೇ ಆಗಾಗ ಎದ್ದು ಹೋಗುವುದು ಮತ್ತೆ ಬಂದು ಕೂಡುವುದನ್ನು ವೀಕ್ಷಕರು ರೂಢಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇಡೀ ವಿಚಾರ ಸಂಕಿರಣ ತನ್ನ ಆಶಯದಲ್ಲಿ ವಿಫಲವಾಯಿತು. ಸರಕಾರಿ ಬೊಕ್ಕಸಿದಿಂದ ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗಿ ವ್ಯಯವಾಯಿತು. ಇನ್ನೊಂದು ಗಮನಿಸಬೇಕಾದ ಅಂಶ ಏನೆಂದರೆ ಪ್ರಬಂಧಕಾರರಲ್ಲಿ ಬಹುತೇಕರು ದೆಹಲಿಯ ರಾಷ್ಟ್ರೀಯ ಶಾಲೆಯಿಂದ ಬಂದವರೇ ಆಗಿದ್ದರು. ಅಕಾಡೆಮಿಕ್ ವಲಯದವರಿಗೆ ಸಿಂಹಪಾಲು ಕೊಟ್ಟು ಕನ್ನಡದ ಪ್ರತಿಭಾವಂತ ರಂಗಕರ್ಮಿಗಳನ್ನು ನಿರ್ಲಕ್ಷಿಸಿದ್ದು ನಿಜಕ್ಕೂ ಅಕ್ಷಮ್ಯ. ಕೆ.ವಿ.ಅಕ್ಷರ ರವರನ್ನು ಹೊರತು ಪಡಿಸಿದರೆ ಕನ್ನಡಿಗರಿಗೆ ವಿಚಾರ ಸಂಕಿರಣದಲ್ಲಿ ಪ್ರಾತಿನಿದ್ಯತೆ ಇರಲೇ ಇಲ್ಲ. ಅಕ್ಷರರವರೂ ಸಹ ಎನ್ಎಸ್ಡಿ ಎನ್ನುವ ಮಾನದಂಡದಲ್ಲಿ ಆಯ್ಕೆಯಾದವರು. ಹೀಗಾಗಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ವೀಕ್ಷಕರಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕನ್ನಡ ರಂಗಭೂಮಿಯವರಿದ್ದರು ಬಾಕಿಯವರೆಲ್ಲಾ ಕನ್ನಡೇತರ ಸಾಹಿತ್ಯವಲಯದವರಾಗಿದ್ದರು. ಹೀಗಾಗಿ ವಿಚಾರ ಸಂಕರಣ ಕನ್ನಡ ರಂಗಭೂಮಿಯವರನ್ನು ದೂರವಿಟ್ಟು ಕನ್ನಡ ನೆಲದಲ್ಲಿ ನಡೆದದ್ದೊಂದು ವಿಪರ್ಯಾಸವಾಗಿದೆ. ಹೆಸರಾಂತ ನಟ ನಾಸಿರುದ್ದೀನ ಷಾ ವಿಚಾರಸಂಕಿರಣಕ್ಕೆ ಬರುತ್ತಾರೆಂದು ಆಹ್ವಾನ ಪತ್ರಿಕೆಯಲ್ಲಿ ಅಚ್ಚುಹಾಕಿಸಲಾಗಿತ್ತಾದರೂ ಅವರು ಬರಲೆ ಇಲ್ಲ. ಆಹ್ವಾನ ಪತ್ರಿಕೆಯಲ್ಲಿ ಅಚ್ಚಾಗಿದ್ದ ಇನ್ನೂ ಕೆಲವರು ನಾಪತ್ತೆಯಾಗಿದ್ದರು.

 ಅಷ್ಟರಲ್ಲೇ ಹೆಗ್ಗೋಡಿನ ರಂಗಕರ್ಮಿ ಕೆ.ಜಿ.ಕೃಷ್ಣಮೂರ್ತಿಗಳು ತಕಾರಾರು ತೆಗೆದರು. ಕನ್ನಡ ನಾಡಿನ ರಂಗಕರ್ಮಿಗಳಿಗೆ ಆಹ್ವಾನ ಪತ್ರಿಕೆ ಕಳಿಸಿಲ್ಲ, ಇದು ಸಾಹಿತ್ಯ ಅಕಾಡೆಮಿಯ ಬೇಜವಾಬ್ದಾರಿ ಎನ್ನುವಂತೆ ಕೆಜಿಕೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಎಲ್ಲಾ ಪತ್ರಿಕೆಗಳಲ್ಲಿ ಜಾಹಿರಾತು ಕೊಡಲಾಗಿದೆ. ಟಿವಿ ಚಾನೆಲ್ಗಳಲ್ಲಿ ಸ್ಕ್ರೋಲ್ ಮಾಡಲಾಗಿದೆ. ಇದೆಲ್ಲವನ್ನೂ ಮಾಡಿದರೂ ಜನ ಬರದಿದ್ದರೆ ನಾವೇನು ಮಾಡಲಾಗುತ್ತದೆ ಎಂದು ಆಯೋಜಕರಿಂದ ವೇದಿಕೆ ಮೇಲೆ ಉತ್ತರವನ್ನು ಕಂಬಾರರು ಕೊಡಿಸಿದರು. ಕೆಜಿಕೆ ರವರ ತಕರಾರು ಸರಿಯಾದುದಾಗಿತ್ತು. ಸಾಹಿತ್ಯ ಅಕಾಡೆಮಿಯವರಿಗೆ ಕನ್ನಡ ರಂಗಭೂಮಿಯಲ್ಲಿ ಸಕ್ರೀಯವಾಗಿರುವ ರಂಗಕರ್ಮಿಗಳ ಸಂಪರ್ಕವೇ ಇರಲಿಲ್ಲ. ರಂಗಭೂಮಿ ಎಂದರೆ ಕೇವಲ ಕಂಬಾರ, ಕಾರ್ನಾಡ, ಶಿವಪ್ರಕಾಶ್ ಎಂದುಕೊಂಡಿದ್ದರಿಂದ ಬೇರೆಯವರಿಗೆ ಆಹ್ವಾನ ಪತ್ರಿಕೆ ಕಳುಹಿಸಬೇಕು ಎನ್ನುವ ಆಲೋಚನೆಯೂ ಬರಲಿಲ್ಲ. ಪತ್ರಿಕೆಗಳಲ್ಲಿ ಜಾಹಿರಾತು ಕೊಟ್ಟರೆ ಅದನ್ನು ಹುಡುಕಿ ಓದಿಕೊಂಡು ಬರುವುದು ಎಲ್ಲರ ಆದ್ಯ ಕರ್ತವ್ಯ ಎಂದು ಸಾಹಿತ್ಯ ಅಕಾಡೆಮಿಯವರು ತಿಳಿದಂತಿತ್ತು. ಮನೆಗೆ ಹೋಗಿ ಕರೆದರೇ ಯಾರ್ಯಾರೆಲ್ಲಾ ಬರುತ್ತಾರೆ ಎಂಬುದನ್ನು ಕನ್ಪರಂ ಮಾಡಿಕೊಂಡೇ ಬರುವ ಶ್ರೇಷ್ಟತೆಯ ವ್ಯಸನ ಪೀಡಿತವಾಗಿರುವ ಕೆಲವು ಹೆಸರಾಂತ ರಂಗಕರ್ಮಿಗಳಿರುವ ನಮ್ಮ ನಾಡಲ್ಲಿ ಜಾಹಿರಾತು ನೋಡಿ ಬರುತ್ತಾರೆಂಬುದು ಕನಸಿನ ಮಾತು. ಕಂಬಾರರು ಹಾಗೂ ಶಿವಪ್ರಕಾಶರಿಗೆ ಕನ್ನಡ ರಂಗಭೂಮಿಯಲ್ಲಿ ಕೆಲಸ ಮಾಡುವ ಬಹುತೇಕರ ಜೊತೆಗೆ ಸಂಪರ್ಕ ಇಲ್ಲ. ಹೀಗಾಗಿ ಎಲ್ಲರನ್ನು ಆಹ್ವಾನಿಸುವ ಕೆಲಸವನ್ನು ಮಹಾಮನೆಗೆ ಕಂಬಾರರು ವಹಿಸಿದ್ದರು. ಮಹಾಮನೆ ಕೂಡಾ ಅನೇಕರಿಗೆ ಪೋನ್ ಮಾಡಿ ಕರೆದಿದ್ದಾಯ್ತು. ಆದರೆ ಮಹಾಮನೆ ಕರೆದರೆ ಯಾರೆಂದರೆ ಯಾರೂ ಬರಲಿಲ್ಲ. ಇಡೀ ನಾಟಕೋತ್ಸವ ಹಾಗೂ ವಿಚಾರ ಸಂಕಿರಣ ಕನ್ನಡ ರಂಗಕರ್ಮಿಗಳ ಅನುಪಸ್ತಿತಿಯಲ್ಲಿ ಅಯಶಸ್ವಿಯಾಯಿತು.

 ಕನ್ನಡಿಗರಿಗೆ ಪ್ರಾತಿನಿದ್ಯತೆ ಇರದಿದ್ದರಿಂದ ಹಾಗೂ ಕನ್ನಡ ರಂಗಭೂಮಿಗೆ ನಾಟಕೋತ್ಸವ ಸ್ಪಂದಿಸದೇ ಇದ್ದದ್ದರಿಂದ ಕನ್ನಡ ರಂಗಕರ್ಮಿಗಳು ವಿಚಾರ ಸಂಕಿರಣವನ್ನು ಸಾರಾಸಾಗಟಾಗಿ ತಿರಸ್ಕರಿಸಿದರು. ಇದರಿಂದಾಗಿ ಒಂದು ಗೋಷ್ಠಿಯನ್ನೇ ರದ್ದು ಮಾಡಲಾಯಿತು. ಭಾರತೀಯ ನಾಟಕ; ನಿನ್ನೆ ಇಂದು ಹಾಗೂ ನಾಳೆ ಎನ್ನುವ ಸಂವಾದ ಗೋಷ್ಠಿಯನ್ನು ವಿಚಾರ ಸಂಕಿರಣದ ಭಾಗವಾಗಿ ಏರ್ಪಡಿಸಲಾಗಿತ್ತು. ಅದಕ್ಕೆ ವಿಶೇಷ ಆಹ್ವಾನಿತರನ್ನಾಗಿ ಕೆ.ಮರುಳಸಿದ್ದಪ್ಪ, ಸಿ.ಎನ್.ರಾಮಚಂದ್ರನ್, ಜಿ.ಕೆ.ಗೋವಿಂದರಾವ್, ಎಚ್.ಎಸ್.ವೆಂಕಟೇಶಮೂರ್ತಿ, ಕಪ್ಪಣ್ಣ, ಆರುಂಧತಿನಾಗ್, ನಾಗರಾಜಮೂರ್ತಿ, ಪ್ರಕಾಶ್ ಬೆಳವಾಡಿ, ಕೆ.ವೈ.ನಾರಾಯಣಸ್ವಾಮಿ... ಮುಂತಾದವರನ್ನು ಆಹ್ವಾನಿಸಲಾಗಿತ್ತು. ಆದರೆ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯಲ್ಲಿರುವ ನಾ.ದಾಮೋದರ ಶೆಟ್ಟಿ ಹಾಗೂ ಸಿ.ನಾಗಣ್ಣ ಇಬ್ಬರನ್ನು ಹೊರತು ಪಡಿಸಿ ಎಲ್ಲಾ ಹನ್ನೆರಡು ಜನ ಆಹ್ವಾನಿತರು ಸಾಮೂಹಿಕವಾಗಿ ಗೋಷ್ಠಿಯನ್ನು ಬಹಿಷ್ಕರಿಸಿದರು. ಕಂಬಾರ ಹಾಗು ಶಿವಪ್ರಕಾಶರಿಗೆ ಪರೋಕ್ಷವಾಗಿ ಮೂಲಕ ತಮ್ಮ ಪ್ರತಿಭಟನೆಯನ್ನು ತೋರಿಸಿದರು. ಕಂಬಾರರಂತೂ ಕೂತಲ್ಲೇ ತರಗುಟ್ಟಿಹೋದರು. ಮೊದಲೇ ರಂಗೋತ್ಸವ ಪ್ರೇಕ್ಷಕರ ಕೊರತೆಯಿಂದ ನರಳುತ್ತಿತ್ತು, ಅಸಮರ್ಥರ ಕೈಯಲ್ಲಿ ರಂಗೋತ್ಸವದ ಸಂಘಟನೆ ದುರ್ಬಲಗೊಂಡಿತ್ತು ಇದರ ಮೇಲೆ ಕನ್ನಡ ರಂಗಭೂಮಿಯ ಐಕಾನ್ಗಳು ರಂಗಭಾರತಿಯನ್ನು ಅನಧೀಕೃತವಾಗಿ ಬಹಿಷ್ಕರಿಸಿದ್ದರು. ಇದೆಲ್ಲದರಿಂದಾಗಿ ಕಂಬಾರರು ಕಂಗಾಲಾದರೆ ಶಿವಪ್ರಕಾಶರವರು ಮಹಾಚೈತ್ರದ ಬಿಜ್ಜಳನಂತೆ ತಲ್ಲಣಗೊಂಡರು.


ಇದೆಲ್ಲದರ ನಡುವೆ ಕೊನೆಯ ದಿನ ಬಿ.ಜಯಶ್ರೀ ತಮ್ಮ ಹೆಸರಿನ ವಿಷಯದಲ್ಲಿ ತಗಾದೆ ತೆಗೆದುಕೊಂಡು ದೊಡ್ಡವಿಷಯವಾಗಿಸಿದರು. ಆಗಿದ್ದಿಷ್ಟೇ, ರಂಗಭಾರತಿ ನಾಟಕೋತ್ಸವದಲ್ಲಿ ಕರಿಮಾಯಿ ನಾಟಕ ಪ್ರದರ್ಶನವಾಯಿತು. ನವದೆಹಲಿಯ ಅಭಿಜ್ಞಾನ್ ನಾಟ್ಯ ಸಂಸ್ಥೆಯು ಲೋಕೇಂದ್ರ ತ್ರಿವೇದಿಯವರ ನಿರ್ದೇಶನದಲ್ಲಿ ನಾಟಕವನ್ನು ಪ್ರಯೋಗಿಸಿತು. ಆದರೆ ಬ್ರೋಷರಲ್ಲಿ ಹಾಗೂ ಬ್ಯಾನರನಲ್ಲಿ ನಾಟಕದ ರಚನೆ ಚಂದ್ರಶೇಖರ ಕಂಬಾರ ಎಂದಿದ್ದು ನನ್ನ ಹೆಸರು ಯಾಕೆ ಹಾಕಿಲ್ಲ ಎನ್ನುವುದು ಬಿ.ಜಯಶ್ರೀರವರ ತಕರಾರಾಗಿತ್ತು. ಅವರ ತಕರಾರಿಗೂ ಅವರಲ್ಲಿ ಸಮರ್ಥನೆ ಇತ್ತು. ಅದೇನೆಂದರೆ ಕಂಬಾರರ ಕರಿಮಾಯಿ ಕಾದಂಬರಿಯನ್ನು ನಾನು ತುಂಬಾನೇ ಶ್ರಮಪಟ್ಟು ರಂಗರೂಪ ಮಾಡಿ ನಾಟಕವಾಗಿ ನಿರ್ದೇಶಿಸಿದ್ದೇನೆ. ಆದರೆ ದೆಹಲಿ ತಂಡದವರು ರೂಪಾಂತರ ಮಾಡಿದ ನನ್ನ ಹೆಸರನ್ನೇ ಹಾಕಿಲ್ಲ, ಇದರಿಂದ ನನ್ನ ಮನಸ್ಸಿಗೆ ತುಂಬಾನೇ ನೋವಾಗಿದೆ ಎಂದು ಜಯಶ್ರೀರವರು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ತಮ್ಮ ಗೋಳನ್ನು ತೋಡಿಕೊಂಡರು. ಅಕಸ್ಮಾತ್ ಹಿಂದಿ ಕರಿಮಾಯಿ ನಾಟಕವು ಜಯಶ್ರಿರವರು ಮಾಡಿದ ರಂಗರೂಪದ ಪ್ರತಿರೂಪವಾದರೆ ಜಯಶ್ರೀರವರು ನೋವುಂಡು ಆರೋಪ ಮಾಡಿದ್ದಕ್ಕೆ ಸಮರ್ಥನೆ ಇರುತ್ತಿತ್ತು. ಆದರೆ ಜಯಶ್ರೀರವರ ಕರಿಮಾಯಿಗೂ ಲೋಕೆಂದ್ರ ತ್ರಿವೇದಿರವರ ಕರಿಮಾಯಿಗೂ ಯಾವುದೇ ಸಾಮ್ಯತೆ ಇಲ್ಲ. ಎರಡೂ ಭಿನ್ನ ನೆಲೆಯಲ್ಲಿ ನಾಟಕವಾಗಿ ಪ್ರದರ್ಶನಗೊಂಡಿವೆ. ಒಂದು ಕಾದಂಬರಿಯನ್ನು ಕಾದಂಬರಿಕಾರರ ಅನುಮತಿ ಪಡೆದು ಎಷ್ಟು ಜನ ಬೇಕಾದರೂ ತಮಗೆ ಬೇಕಾದಂತೆ ರಂಗರೂಪ ಮಾಡಿ ನಾಟಕವಾಡಿಸಬಹುದಾಗಿದೆ. ಮೊಟ್ಟ ಮೊದಲು ರೂಪಾಂತರ ಮಾಡಿದವರಿಗೆ ಅದರ ಪೇಟಂಟ್ ದೊರೆಯುವುದಿಲ್ಲ. ಆದರೆ ತಮ್ಮದಲ್ಲದ ರಂಗರೂಪಕ್ಕೆ ತಮ್ಮ ಹೆಸರಿನ ಕ್ರೆಡಿಟ್ ಬೇಕು ಎಂದು ಒತ್ತಾಯಿಸುವುದು ಅದೆಷ್ಟು ಸರಿ?


ಕರಿಮಾಯಿ ನಾಟಕದ ದೃಶ್ಯ

ಇದೇ ಮಾನದಂಡವನ್ನೇನಾದರೂ ಕಂಬಾರರ ನಾಟಕಗಳಿಗೆ ಇಟ್ಟಲ್ಲಿ ಕಂಬಾರರು ರಚಿಸಿದ್ದಾರೆ ಎನ್ನಲಾದ, ಇದೇ ಬಿ.ಜಯಶ್ರೀಯವರು ನಿರ್ದೇಶಿಸಿದ ಲಕ್ಷಾಧಿಪತಿ ರಾಜನ ಕಥೆ ನಾಟಕದ ಕ್ರೆಡಿಟ್ ಸಲ್ಲಬೇಕಾದದ್ದು ಮೂದೇನೂರು ಸಂಗಣ್ಣರವರಿಗೆ. ಸಮಾರೋಪದ ದಿನದಂದು ಕಂಬಾರರೇ ಹೇಳಿದಂತೆ ಸಂಗ್ಯಾ ಬಾಳ್ಯಾ ನಾಟಕ ಮೂಲವಾಗಿ ಪತ್ತಾರ ಮಾಸ್ತರರದೇ ಆದರೂ ಅದರಲ್ಲಿ ಬಾಳ್ಯಾ ಮಾಡುವ ಮೋಸಕ್ಕೆ ಆತನ ಬಡತನ ಕಾರಣ ಎಂಬಂತೆ ನಾನು ಚಿತ್ರಿಸಿ ನಾಟಕ ರಚಿಸಿದ್ದೇನೆ. ಹಾಗೂ ಹಲವಾರು ಸಂಭಾಷಣೆಗಳನ್ನು ನಾನು ಬದಲಾಯಿಸಿ ಬರೆದಿದ್ದೇನೆ, ಆದ್ದರಿಂದ ಅದು ನನ್ನದೇ ನಾಟಕ ಎಂದು ಸಮರ್ಥಿಸಿಕೊಂಡರು. ಅವರ ಮಾತಿನ ಅರ್ಥವೇನೆಂದರೆ ಮೂಲ ಶ್ರಮ ಯಾರದೇ ಆಗಿರಲಿ ಅದರಲ್ಲಿ ಒಂದಿಷ್ಟು ಬದಲಾವಣೆ ಮಾಡಿದರೆ ಅದು ಬದಲಾವಣೆ ಮಾಡಿದವನದೇ ಆಗುತ್ತದೆ ಎಂದು. ಇದನ್ನೇ ಜಯಶ್ರೀಯವರ ಆರೋಪಕ್ಕೆ ಹೋಲಿಸಿದರೆ ಕಂಬಾರರ ಕರಿಮಾಯಿ ಕಾದಂಬರಿಯನ್ನು ತ್ರಿವೇದಿಯವರು ತಮ್ಮದೇ ರೀತಿಯಲ್ಲಿ ಬದಲಾಯಿಸಿ, ದೃಶ್ಯಗಳನ್ನು ಸಂಯೋಜಿಸಿ, ಸಂಭಾಷಣೆಯನ್ನು ಬರೆದು ನಾಟಕವಾಗಿ ಪ್ರದರ್ಶಿಸಿರುವಾಗಿ ಅದು ಜಯಶ್ರೀಯವರದು ಹೇಗಾಗುತ್ತದೆ. ತಮ್ಮದಲ್ಲದ ಶ್ರಮಕ್ಕೆ ಯಾಕೆ ಜಯಶ್ರೀಯಂತಹ ಹಿರಿಯ ರಂಗಕರ್ಮಿ ತಗಾದೆ ಎತ್ತುತ್ತಾರೆ. ಜಯಶ್ರೀರವರ ಗೋಳಾಟ, ಕಂಬಾರರ ವಿತಂಡವಾದವನ್ನು ಗಮನಿಸಿದರೆ ದೊಡ್ಡವರ ಸಣ್ಣತನ ಬಹಿರಂಗವಾಗಿ ಬಯಲಾದಂತಾಗಿದೆ. ಜಯಶ್ರೀರವರ ಹಕ್ಕುದಾರಿಕೆ ಪ್ರಶ್ನೆ ಎಲ್ಲಿ ತನ್ನ ಬುಡಕ್ಕೆ ಬರುತ್ತದೋ ಎಂಬುದನ್ನೂ ಗಮನಿಸಿದ ಕಂಬಾರರು ಅದೇ ವೇದಿಕೆಯಲ್ಲಿ ಇನ್ನು ಮುಂದೆ ಸಾಹಿತ್ಯ ಅಕಾಡೆಮಿಯ ನಾಟಕೋತ್ಸವಗಳಲ್ಲಿ ಅಡಾಪ್ಟ್ ನಾಟಕಗಳನ್ನೇ ಆಡಿಸುವುದಿಲ್ಲ, ನೇರ ನಾಟಕಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು  ಎಂದು ಏಕಪಕ್ಷೀಯವಾಗಿ ಪರಮಾನು ಹೊರಡಿಸಿದರು. ಸಾಹಿತ್ಯ ಅಕಾಡೆಮಿಯೇನು ಇವರ ಜಹಗೀರಾ? ಎಂತಹ ನಾಟಕಗಳನ್ನು ಮಾಡಿಸಬೇಕು ಎನ್ನುವುದು ಕಂಬಾರರ ಅನತಿಯಂತೆಯೇ ನಡೆಯಬೇಕಾ? ಇವರು ಮಾಡಿದ ಕೃತಿಚೌರ್ಯಗಳನ್ನು  ಮುಚ್ಚಿಕೊಳ್ಳಲು ಅಡಾಪ್ಟೇಶನ್ ನಾಟಕಗಳು ಬ್ಯಾನ್ ಆಗಬೇಕಾ? ಎಂಬ ಪ್ರಶ್ನೆಗಳು ಸಮಾರೋಪ ಸಮಾರಂಭದಲ್ಲಿ ಅಳಿದುಳಿದ ಪ್ರೇಕ್ಷಕರಲ್ಲಿ ಮೂಡಿದ್ದಂತೂ ಸುಳ್ಳಲ್ಲ.


ನಮ್ಮ ಜ್ಞಾನಪೀಠಿ ಕಂಬಾರರು ಜನವರಿ 20 ರಂದು ರಂಗಭಾರತಿ ರಂಗೋತ್ಸವದ ಕುರಿತು ವಿಜಯವಾಣಿಗೆ ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ  ಪ್ರತಿಯೊಂದಕ್ಕೂ ಸರಕಾರದ ಅನುದಾನವನ್ನು ಬಯಸುವ ಮನಸ್ಥಿತಿ ಉಂಟಾಗಿದೆ. ಯಾವ ಕಲೆ ಸರಕಾರವನ್ನು ಆಶ್ರಯಿಸುತ್ತದೋ ಕಲೆ ಸಾಯುತ್ತದೆ... ನಾಟಕಗಳಲ್ಲಿ ಬದ್ದತೆ, ವೃತ್ತಿಪರತೆಗಳಿಲ್ಲ, ನಾಟಕಕಾರರು ಮುಖ್ಯವಾಗಿ ಸೆಳೆಯಬೇಕಾದದ್ದು ಪ್ರೇಕ್ಷಕರನ್ನು. ಪ್ರೇಕ್ಷಕರೇ ಇಲ್ಲದಿದ್ದರೆ ಯಾವ ಸರಕಾರ ಏನು ಕೊಟ್ಟರೇನು? ಅನುದಾನದಿಂದ ರಂಗಭೂಮಿ ಉಳಿಯುತ್ತದೆ ಎನ್ನುವುದು ಮೂರ್ಖತನ. ಎನ್ನುವ ಸಾರ್ವಕಾಲಿಕ ಸತ್ಯವನ್ನು ಬಿಚ್ಚಿಟ್ಟಿದ್ದರು. ಕಂಬಾರರ ಹೇಳಿಕೆಯಲ್ಲಿ ಸಂಪೂರ್ಣ ಸತ್ಯಾಂಶ ಇದೆ. ಆದರೆ ಅವರು ತಮ್ಮ ಹೇಳಿಕೆಗೆ ಬದ್ದರಾಗಿ ನಡೆದುಕೊಂಡರಾ? ಇಲ್ಲ. ಅದಕ್ಕೆ ತದ್ವಿರುದ್ದವಾದ ಕೆಲಸವನ್ನು ಬದ್ದತೆಯಿಂದ ಮಾಡಿ ನಗೆಪಾಟಲಿಗೊಳಗಾದರು. ಅನುದಾನ ಬಯಸಬಾರದು ಎಂದ ಕಂಬಾರರು ತಾವೇ ರೂಪಿಸಿದ ರಂಗಭಾರತಿ ಪ್ರಾಜೆಕ್ಟ್ ಸಾಕಾರಕ್ಕೆ. ಒಂದಲ್ಲಾ ಎರಡಲ್ಲಾ ಇಪ್ಪತ್ತೈದು ಲಕ್ಷ ರೂಪಾಯ ಹಣವನ್ನು ಸರಕಾರಿ ಬೊಕ್ಕಸದಿಂದ ಪಡೆದರು. ಮೊತ್ತ ಸಾಲದು ಇನ್ನೂ ಬೇಕಾಗುತ್ತದೆ ಎಂದು ರಂಗೋತ್ಸವದ ಸಂಚಾಲಕರುಗಳು ಗೊಣಗುತ್ತಿದ್ದಾರೆ. ಸರಕಾರವನ್ನು ಆಶ್ರಯಿಸಿದ ಕಲೆ ಸಾಯುತ್ತದೆ ಎನ್ನುವುದು ಕಂಬಾರರಿಗೆ ಗೊತ್ತಿದ್ದರೆ ಯಾಕೆ ಸರಕಾರಿ ಅನುದಾನವನ್ನು ಪಡೆದು ರಂಗೋತ್ಸವ ಮಾಡುತ್ತಿದ್ದರು. ಅವರ ಸ್ಪಷ್ಟ ಉದ್ದೇಶ ರಂಗಕಲೆಯನ್ನು ಕೊಲ್ಲುವುದಾಗಿದೆಯಾ?

ನಾಟಕಗಳಲ್ಲಿ ಬದ್ಧತೆ ಹಾಗೂ ವೃತ್ತಿಪರತೆಗಳಿಲ್ಲ ಎಂದು ಆರೋಪಿಸುವ ಕಂಬಾರರು ರಂಗೋತ್ಸವದಲ್ಲಿ ಆಯ್ಕೆ ಮಾಡಿಕೊಂಡ ನಾಟಕಗಳ ಪೈಕಿ ನಾಲ್ಕು ನಾಟಕಗಳಲ್ಲಿ ಇವೆರಡೂ ಇರಲೇ ಇಲ್ಲವಲ್ಲಾ, ಆದರೂ ಬದ್ದತೆ ಬಗ್ಗೆ ಮಾತಾಡುವುದಾದರೂ ಯಾಕೆ?. ಮುಖ್ಯವಾಗಿ ಸೆಳೆಯಬೇಕಾದದ್ದು ಪ್ರೇಕ್ಷಕರನ್ನು ಎನ್ನುವ ಕಂಬಾರರು ತಮ್ಮ ನಾಟಕೋತ್ಸವದಲ್ಲಿ ಅದೆಷ್ಟು ಪ್ರೇಕ್ಷಕರನ್ನು ತಮ್ಮ ಪ್ರಭಾವ ಬಳಸಿ ಸೆಳೆದರು. ಯಾಕೆ ರಂಗಮಂದಿರ ಆರೂ ದಿನ ಅರ್ಧದಷ್ಟು ತುಂಬಲಿಲ್ಲ. ಪ್ರೇಕ್ಷಕರೆ ಇಲ್ಲದಿದ್ದರೆ ಸರಕಾರ ಎಷ್ಟು ಕೊಟ್ಟರೇನು? ಎನ್ನುವ ಕಂಬಾರರ ನಾಟಕೋತ್ಸವಕ್ಕೆ ರಂಗಸಕ್ತ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರಲೇ ಇಲ್ಲವಲ್ಲ. ಅಂದರೆ ಸರಕಾರ ಎಷ್ಟೇ ಕೊಟ್ಟರೂ ಕಂಬಾರರ ನಾಟಕೋತ್ಸವ ಪ್ರೇಕ್ಷಕರಿಲ್ಲದೇ ವಿಫಲವಾದಂತಾಯಿತಲ್ಲವೇ? ನಮ್ಮ ಹೆಮ್ಮೆಯ ಜ್ಞಾನಪೀಠ ಯಾವಾಗ ದ್ವಂದ್ವಗಳಿಂದ ಹೊರಬರುತ್ತದೋ ಏನೋ? ಹೇಳುವುದೊಂದು ಮಾಡುವುದಿನ್ನೊಂದು. ಹೇಳುವುದು ಆಚಾರ ತಿನ್ನುವುದು ಬದನೇಕಾಯಿ. ಕಂಬಾರರ ರೀತಿಯ ದ್ವಂದ್ವಗಳಿಂದಾಗಿ ಸಾಹಿತ್ಯ ಕ್ಷೇತ್ರವಾಗಿಲಿ ಇಲ್ಲವೇ ನಾಟಕಕ್ಷೇತ್ರವಾಗಲಿ ಬೆಳೆಯುವುದಿಲ್ಲ. ಅವಕಾಶವಾದಿ ಬರಗೂರರಿಂದ ಕನ್ನಡ ನಾಡಿನ ಬ್ರೆಕ್ಟ್ ಎಂದು ಹೊಗಳಿಸಿಕೊಂಡ ಕಂಬಾರರು ಬ್ರೆಕ್ಟ್ ಹೆಸರಿಗೆ ಕಳಂಕ ತರುವ ಕೆಲಸಗಳನ್ನೇ ಯಾಕೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ರಾಷ್ಟ್ರೀಯ ರಂಗೋತ್ಸವದ ಕೆಟ್ಟ ಮಾದರಿಯನ್ನಂತೂ ನಾಟಕೋತ್ಸವದ ಮೂಲಕ ತೋರಿಸಿಕೊಟ್ಟಿದ್ದಾರೆ.

ಇಡೀ ನಾಟಕೋತ್ಸವದಲ್ಲಿ ಹಿಂದಿ ಭಾಷೆಯ ಪಾರುಪತ್ಯ ಮೆರೆಯಿತು. ವಿಚಾರ ಸಂಕಿರಣದಲ್ಲಿ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳೇ ಸಂಪೂರ್ಣವಾಗಿ ವೈಭವೀಕರಣಗೊಂಡಿತುಕನ್ನಡ ರಂಗಭೂಮಿಯವರನ್ನು ನಿರ್ಲಕ್ಷಿಸಿ ಎನ್ಎಸ್ಡಿಯವರನ್ನು, ಕನ್ನಡೇತರ ಹಿಂದಿ ಸಾಹಿತಿಗಳನ್ನು ಮೆಚ್ಚಿಸಲು ನಾಟಕೋತ್ಸವವನ್ನು ಬಳಸಿಕೊಳ್ಳಲಾಗಿದೆಇದಕ್ಕೆ ಸಾಕ್ಷಿಯಾಗಿ ಆರು ನಾಟಕಗಳಲ್ಲಿ ನಾಲ್ಕು ಹಿಂದಿ ಭಾಷೆಯ ನಾಟಕಗಳು ಸಿಂಹಪಾಲು ಪಡೆದಿವೆ. ರಾಷ್ಟ್ರೀಯ ಭಾಷೆ ಎಂದರೆ ಹಿಂದಿ, ರಾಷ್ಟ್ರೀಯ ರಂಗಭೂಮಿ ಎಂದರೆ ಹಿಂದಿ ಎಂದೇ ಕಂಬಾರರು ಹಾಗೂ ಹೆಚ್.ಎಸ್.ಶಿವಪ್ರಕಾಶ್ರವರು ತಿಳಿದಂತಿದೆ. ರಂಗಭಾರತಿಗೆ ರಾಷ್ಟ್ರೀಯ ನಾಟಕೋತ್ಸವ ಎನ್ನುವ ಬದಲಾಗಿ ಹಿಂದಿ ಭಾಷಾ ನಾಟಕೋತ್ಸವ ಎನ್ನುವುದು ಸೂಕ್ತವೆನಿಸುತ್ತದೆ. ಹೋಗಲಿ ಇಬ್ಬರು ಕನ್ನಡಿಗ ದಿಗ್ಗಜರು  ರೂಪಿಸಿದ   ನಾಟಕೋತ್ಸವದಿಂದ ಕನ್ನಡಿಗರಿಗಾದ ಲಾಭವಂತೂ ಶೂನ್ಯ. ಕನ್ನಡ ರಂಗಭೂಮಿಗೆ, ಕನ್ನಡ ಸಾಹಿತಿಗಳಿಗೆ, ಕನ್ನಡ ರಂಗಾಸಕ್ತರಿಗೆ ಯಾವುದೇ ರೀತಿಯ ಕೊಡುಗೆಯನ್ನು ಕೊಡದೇ ರಂಗಭಾರತಿ ಉತ್ಸವವು ಉತ್ತರ ಭಾಷಾ ಭಾರತಿ ಮಹೋತ್ಸವವಾಗಿ ಅಂತ್ಯ ಕಂಡಿತು. ಕನ್ನಡಿಗರಿಗೆ ಅಪಾರ ನಿರಾಶೆಯನ್ನುಂಟುಮಾಡಿತು. ಎಲ್ಲಾ ಆಯಾಮಗಳಲ್ಲೂ ವಿಫಲವಾಯಿತು

ರಂಗಭಾರತಿ ಯಶಸ್ವಿಯಾಗಲು ಹೀಗೆ ಮಾಡಬಹುದಾಗಿತ್ತು.

# ಕಂಬಾರರು ಕನ್ನಡ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ರಂಗಕರ್ಮಿಗಳ ಸಭೆ ಕರೆದು ರಂಗಭಾರತಿ ಕುರಿತು ವಿವರಿಸಿ, ಸಮಾಲೋಚನೆ ನಡೆಸಿ  ಸಲಹೆ ಸಹಕಾರ ಕೋರಬೇಕಾಗಿತ್ತು.
# ಬೆಂಗಳೂರಿನ ರಂಗತಂಡಗಳ ರೂವಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಟಕೋತ್ಸವದಲ್ಲಿ ಅವರಿಗೆ ಒಂದಿಷ್ಟು ಜವಾಬ್ದಾರಿಗಳನ್ನು ಕೊಟ್ಟು ತೊಡಗಿಸಿಕೊಳ್ಳಬೇಕಾಗಿತ್ತು.
# ರಂಗಕರ್ಮಿಗಳನ್ನು ಕಂಬಾರರೇ ಪೋನಿನ ಮೂಲಕ ಖುದ್ದಾಗಿ ಸಂಪರ್ಕಿಸಿ ಬಂದು ಭಾಗವಹಿಸಲು ಆಹ್ವಾನಿಸಬೇಕಾಗಿತ್ತು.
# ನಾಟಕಗಳ ಆಯ್ಕೆಯಲ್ಲಿ  ಪ್ರತಿಭೆ ತೋರಿಸಬೇಕಾಗಿತ್ತು.  ಅಪರೂಪದ ನಾಟಕಗಳ ಪ್ರದರ್ಶನಗಳ ಸಿಡಿಗಳನ್ನು ಪರಿಸೀಲಿಸಿ  ಅತ್ಯೂತ್ತಮ  ನಾಟಕಗಳನ್ನು ಆಯ್ಕೆ ಮಾಡಿದ್ದರೆ ರಂಗಾಸಕ್ತರು ಸ್ವಯಂಪ್ರೇರಿತರಾಗಿ ಬಂದು ನಾಟಕ ನೋಡುತ್ತಿದ್ದರು. (2 ವಾರಗಳ ಹಿಂದೆ ಎನ್ ಎಸ್ ಡಿ ನಾಟಕೋತ್ಸವದ ಯಶಸ್ಸಿಗೆ ಉತ್ತಮ ನಾಟಕಗಳ ಆಯ್ಕೆಯೂ ಪ್ರಮುಖ ಕಾರಣ ಎನ್ನುವುದನ್ನು  ಗಮನಿಸಬೇಕಾಗಿತ್ತು.)
# ರಂಗಭಾರತಿ ರಂಗೋತ್ಸವವನ್ನು ಸಮರ್ಥರಾದ ಪ್ರಾಮಾಣಿಕರಾದ ರಂಗತಂಡ ಇಲ್ಲವೇ ವ್ಯಕ್ತಿಗಳಿಗೆ ವಹಿಸಿಕೊಡಬೇಕಾಗಿತ್ತು. (ಎನ್ ಎಸ್ ಡಿ ನಾಟಕೋತ್ಸವದ ಆಯೋಜನೆಯ ಉಸ್ತುವಾರಿಯನ್ನು ಸಿ.ಬಸವಲಿಂಗಯ್ಯನವರು ರಂಗನಿರಂತರ ತಂಡ ಹಾಗೂ ಶಶಿಧರ್ ಅಡಪರವರಿಗೆ  ವಹಿಸಿ ಯಶಸ್ವಿಯಾಗಿದ್ದನ್ನು ಗಮನಿಸಬಹುದು)
# ಪತ್ರಿಕೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡವ ಬದಲಾಗಿ  ಕನ್ನಡದ ಪ್ರತಿಯೊಬ್ಬ ರಂಗಕರ್ಮಿ, ಕಲಾವಿದ, ಸಾಹಿತಿಗಳ ಮನೆಮನೆಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿ ಅದರೊಳಗೆ ಕಂಬಾರರು ಒಂದು ಪ್ರಿಂಟೆಂಡ್ ಪತ್ರವನ್ನು ಇಟ್ಟು ಆತ್ಮೀಯವಾಗಿ ಆಹ್ವಾನಿಸಿದ್ದರೆ ಗ್ಯಾರಂಟಿ ಪ್ರೇಕ್ಷಕರು ಬರುತ್ತಿದ್ದರು.
# ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಕನ್ನಡ ರಂಗಭೂಮಿಯ ಸ್ಕಾಲರ್ ಗಳಿಗೂ ಅವಕಾಶ ಮಾಡಿಕೊಡಬೇಕಾಗಿತ್ತು. ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪೂರ್ವದಲ್ಲಿ ಪ್ರತಿಯೊಬ್ಬರ ಸೆಮಿನಾರ್ ಪೇಪರ್ ಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಗೆ ತರ್ಜುಮೆ ಮಾಡಿ  ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹಂಚಬೇಕಿತ್ತು.
# ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬೆಂಗಳೂರಿನ ರಂಗಶಾಲೆಗಳನ್ನು ಸಂಪರ್ಕಿಸಿ ಅಲ್ಲಿಯ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ವಿನಂತಿಸಿಬೇಕಾಗಿತ್ತು. ಬೆಂಗಳೂರಿನ ವಿಶ್ವವಿದ್ಯಾಲಯದ ಸಾಹಿತ್ಯ ಹಾಗೂ ರಂಗಭೂಮಿಯ ಕುರಿತು ಕಲಿಯುತ್ತಿರುವವರನ್ನೆಲ್ಲಾ ವಿಚಾರ ಸಂಕಿರಣಕ್ಕೆ ಕರೆತರಲು ಆಯಾ ವಿಭಾಗದ ಮುಖ್ಯಸ್ತರನ್ನು ಕೋರಿಕೊಳ್ಳಬೇಕಾಗಿತ್ತು.
#ಕರ್ನಾಟಕದಲ್ಲಿ   ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಸಾಹಿತ್ಯ ಪರಿಷತ್ತು… ಮುಂತಾದ ಸಂಸ್ಥೆಗಳ ಸಹಕಾರವನ್ನು ಪಡೆದು ಹೆಚ್ಚು ಜನರನ್ನು ವಿಚಾರ ಸಂಕಿರಣದಲ್ಲಿ ತೊಡಗಿಸಿಕೊಳ್ಳಬಹುದಾಗಿತ್ತು.
# ಈ ರಂಗೋತ್ಸವಕ್ಕೆ ಪೂರಕವಾಗಿ ವಿಮರ್ಶಾ ಕಮ್ಮಟವನ್ನೂ ಆಯೋಜಿಸಿ ಪ್ರತಿದಿನ ಪ್ರದರ್ಶನಗೊಂಡ ನಾಟಕಕ್ಕೆ ವಿಮರ್ಶೆ ಬರೆಯುವಂತೆ ಯುವ ಬರಹಗಾರರನ್ನು ಪ್ರೇರೇಪಿಸಬಹುದಾಗಿತ್ತು.
#  ಇಡೀ ನಾಟಕೋತ್ಸವವನ್ನು ಕನ್ನಡ ನಾಡಿನ ರಂಗಕರ್ಮಿಗಳು ಹಾಗೂ ಸಾಹಿತಿಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ರೂಪಿಸಬೇಕಾಗಿತ್ತು.
# ಕೇಂದ್ರ ಸರಕಾರದ ಹಣ ಕನ್ನಡ ರಂಗಭೂಮಿಯ  ಬೆಳವಣಿಗೆಗೆ ಪೂರಕವಾಗಿ ಬಳಕೆಯಾಗುವ ಹಾಗೆ ಯೋಜನೆಯನ್ನು ಕಂಬಾರರು ಹಾಗೂ ಶಿವಪ್ರಕಾಶರವರು ರೂಪಿಸಿದ್ದರೆ ಅದು ಕನ್ನಡ ರಂಗಭೂಮಿಗೆ ಕೊಟ್ಟ ಕೊಡುಗೆಯಾಗುತ್ತಿತ್ತು.


ಈ ಮೇಲೆ ತಿಳಿಸಿದ ಯಾವುದನ್ನೂ ಮಾಡದೇ ಇದ್ದುದರಿಂದ  ಇಡೀ ರಂಗೋತ್ಸವ ವಿಫಲವಾಯಿತು. ಕನ್ನಡ ರಂಗಭೂಮಿಗೆ ಅಷ್ಟರ ಮಟ್ಟಿಗೆ ನಷ್ಟವಾಯಿತು. ಈಗಾದ ಸೋಲಿನಿಂದ ಪಾಠಕಲಿತು ಇನ್ನು ಮುಂದಿನ ಪ್ರಾಜೆಕ್ಟ್ ಗಳಲ್ಲಾದರೂ  ಕನ್ನಡಿಗರಿಕೆ ಉಪಯೋಗವಾಗುವಂತೆ ಸಾರ್ಥಕ ರೀತಿಯಲ್ಲಿ ಯೋಜನೆಗಳನ್ನು ಕಂಬಾರ ಹಾಗೂ ಅವರ ಸಾಹಿತ್ಯ ಅಕಾಡೆಮಿ ರೂಪಿಸಲಿ ಎನ್ನುವುದೇ ಈ ಲೇಖನದ ಆಶಯವಾಗಿದೆ. 

                                 -ಶಶಿಕಾಂತ ಯಡಹಳ್ಳಿ 
         
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ