ಗುರುವಾರ, ಜನವರಿ 22, 2015

ನಾಟಕವಲ್ಲದ ನಾಟಕ “ತಮಾಸ್ ನ ಹುವಾ”

 ಪೆಂಗ್ ಥೇಯಟರ್ನಲ್ಲಿ ಸಂವಾದಗೋಷ್ಠಿ



ನಾಟಕವನ್ನು ಹೇಗೇಗೊ ಮಾಡಿದವರಿದ್ದಾರೆ. ರಂಗಭೂಮಿಯಲ್ಲಿ ನಾಟಕದ ಚೌಕಟ್ಟನ್ನು ಮುರಿದು ಕಟ್ಟಿದವರಿದ್ದಾರೆ. ಆದರೆ.. ರೀತಿ ನಾಟಕವೇ ಅಲ್ಲದ ನಾಟಕವನ್ನು ಮಾಡಿದ್ದು ಬಹುಷಃ ಇದೇ ಮೊದಲೇನೋ? ಹೌದು ರಂಗವೇದಿಕೆಯ ಮೇಲೆ ಗೊತ್ತು ಗುರಿ ಇಲ್ಲದ ಹರಟೆಯನ್ನೇ ನಾಟಕವೆಂದು ನಂಬಿಸಿ ಪ್ರದರ್ಶಿಸಿದ್ದು ಉದಯಪುರದ ಅಜಯ್ ಥಿಯೇಟರ್ ಕಂಪನಿ. ತಳಬುಡವಿಲ್ಲದ ತಮಾಸ್ ಹುವಾ ಹಿಂದಿ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಭಾನು ಭಾರತಿಯವರು. ಕೇಂದ್ರ ಸಾಹಿತ್ಯ ಅಕಾಡೆಮಿಯು ತನ್ನ ವಜ್ರಮಹೋತ್ಸವದ ಅಂಗವಾಗಿ ಬೆಂಗಳೂರಿನ ಗುರುನಾನಕ ಭವನದಲ್ಲಿ 2015 ಜನವರಿ 16 ರಿಂದ 21 ರವರೆಗೆ ಹಮ್ಮಿಕೊಂಡಿರುವ ಆರು ದಿನಗಳ ರಂಗಭಾರತಿ ಹೆಸರಿನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ದಿನದಂದು ತಮಾಸ್ ಹುವಾ ನಾಟಕ ಪ್ರದರ್ಶನಗೊಂಡು ದಿಗ್ಬ್ರಮೆ ಹುಟ್ಟಿಸಿತು.

ದಿಗ್ಬ್ರಮೆ ಹುಟ್ಟಿಸಿದ್ದು ನಾಟಕ ಮಾಡಿದ ಮೋಡಿಯಿಂದಲ್ಲ. ನಾಟಕದ ಹೆಸರಲ್ಲಿ ರಂಗವೇದಿಕೆಯ ಮೇಲೆ ಮಾಡಿದ ಚರ್ಚಾಕೂಟದಿಂದ. ಕಾಫಿ ಶಾಪ್ಗಳಲ್ಲಿ, ಗೆಳೆಯರ ಕೂಟಗಳಲ್ಲಿ, ಪಬ್ ಬಾರ್ಗಳಲ್ಲಿ, ಹಳ್ಳಿಯ ಹರಟೆ ಕಟ್ಟೆಗಳಲ್ಲಿ ಜನಸಾಮಾನ್ಯರು ನಡೆಸುವ ಡಿಬೇಟ್ಗಳನ್ನು  ನಾಟಕ ಎನ್ನುವುದಾದರೆ ತಮಾಸ್ ಹುವಾ ಪ್ರದರ್ಶನವನ್ನು ನಾಟಕ ಎನ್ನಬಹುದೇನೋ. ವ್ಯತ್ಯಾಸ ಇಷ್ಟೇ ಚರ್ಚೆ ನಡೆದಿದ್ದು ರಂಗದ ಮೇಲೆ, ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪರ ವಿರೋಧ ನಿಲುವುಗಳನ್ನು ಪೈಪೋಟಿಯ ಮೇಲೆ ಮಂಡಿಸಿದ್ದು ಕಲಾವಿದರು. ಚರ್ಚೆಯ ಮೂಲ ವಿಷಯ ಯಂತ್ರಗಳ ಬಳಕೆಯಿಂದ ಮನುಷ್ಯನ ವಿಕಾಸವೋ ಇಲ್ಲವೇ ವಿನಾಶವೋ. ತದನಂತರ ಚರ್ಚೆ ರಾಷ್ಟ್ರೀಯ ಅಂತರಾಷ್ಟ್ರೀಯ ವಿಷಯಕ್ಕೆ ವಿಷಯಾಂತರ ಮಾಡಿ ಜಗದಗಲ ಬಿಚ್ಚಿಕೊಳ್ಳುತ್ತದೆ. ವೇದಿಕೆಯ ಮೇಲೆ ವಿಷಯವೊಂದನ್ನು ಕೊಟ್ಟು ಪರ ವಿರೋಧ ಚರ್ಚಾಗೋಷ್ಟಿ ನಡೆಸುವುದನ್ನು ನೋಡಿರಬಹುದು. ಆದರೆ ಅದನ್ನೇ ನಾಟಕದಲ್ಲೂ ಮಾಡಿದ್ದರಿಂದ ಇದನ್ನು ನಾಟಕ ಎನ್ನಬೇಕೋ ಇಲ್ಲವೇ ನಾಟಕದ ವೇದಿಕೆಯ ಮೇಲೆ ನಡೆದ ಚರ್ಚಾಗೋಷ್ಠಿ ಎನ್ನಬೇಕೋ ಎನ್ನುವುದು ಪ್ರೇಕ್ಷಕರಿಗೂ ಗೊಂದಲವನ್ನುಂಟು ಮಾಡಿತು.


  ರೀತಿಯ ಸಂವಾದಗಳನ್ನೇ ಇಟ್ಟುಕೊಂಡು ಮಾಡಬಹುದಾದ ಹೊಸ ಪರಿಕಲ್ಪನೆಗೆ ನಾಟಕದ ನಿರ್ದೇಶಕರು ಹೊಸದಾದ ಥಿಯೇಟರ್ ಕಾನ್ಸೆಪ್ಟನ್ನು ಹುಟ್ಟುಹಾಕಿದ್ದಾರೆ ಮತ್ತು ಪ್ರದರ್ಶನದಲ್ಲಿಯೇ ಅದಕ್ಕೊಂದು ಹೆಸರನ್ನೂ ಕೊಟ್ಟಿದ್ದಾರೆ, ಅದು ಪೆಂಗ್ ಥಿಯೇಟರ್. ಅಂದರೆ ಕನ್ನಡದಲ್ಲಿ ಮೂರ್ಖರ ರಂಗಭೂಮಿ ಎಂದು. ಹೆಸರು ಮಾತ್ರ ನಾಟಕಕ್ಕೆ ಅನ್ವರ್ಥಕವಾಗುವಂತಿದೆಯಾದರೂ ಗಂಭೀರವಾದ ವಿಷಯವನ್ನು ಇಲ್ಲಿ ಚರ್ಚಿಸಲಾಗಿದೆ. ಬುದ್ದಿಜೀವಿಗಳ ವಲಯದಲ್ಲಿ ಸಂವಾದ ಸಂಘರ್ಷಗಳನ್ನು ಉಂಟುಮಾಡಬಹುದಾದ ವಿಷಯಗಳನ್ನು ಇಲ್ಲಿ ಸಂವಾದಿಸಲಾಗಿದೆ. ಮೂರ್ಖರ ರಂಗಭೂಮಿಯಲ್ಲಿ ಬೌದ್ದಿಕ ಪ್ರಶ್ನೆಗಳು ಹಾಗೂ ಅವರವರ ಮೂಗಿನ ನೇರಕ್ಕೆ ಉತ್ತರಗಳು ಘರ್ಷಣೆಗೊಳಗಾಗುತ್ತಾ, ಪ್ರೇಕ್ಷಕರನ್ನು ಗಲಿಬಿಲಿ ಗೊಳಿಸುತ್ತಾ ಯಾವ ತಾರ್ಕಿಕ ಅಂತ್ಯವನ್ನೂ ಕೊಡದೇ ನಾಟಕ ಅಂತ್ಯವಾಗುತ್ತದೆ.

ತಮಾಸ್ ಹುವಾ  ನಾಟಕ ಹೀಗಿದೆ. ರವೀಂದ್ರನಾಥ ಠ್ಯಾಗೋರರ ಮುಕ್ತಧಾರಾ ನಾಟಕವನ್ನು ತಾಲಿಂ ಮಾಡಲು ಸೇರಿದ್ದ ಕೆಲವು ಕಲಾವಿದರು ಹಾಗೂ ನಿರ್ದೇಶಕ ನಾಟಕದ ಪ್ರ್ಯಾಕ್ಟಿಸನ್ನು ಒಂದನೇ ದೃಶ್ಯಕ್ಕೆ ಮೊಟಕುಗೊಳಿಸಿ ಚರ್ಚೆಯನ್ನು ಆರಂಭಿಸುತ್ತಾರೆ. ಯಂತ್ರಗಳನ್ನು ತೊರೆಯಿರಿ ಎಂದು ಗಾಂಧಿ ಹೇಳಿದ್ದು, ಅದಕ್ಕೆ ಯಂತ್ರಗಳ ಅಗತ್ಯತೆಯನ್ನು ಠ್ಯಾಗೋರರವರು ಪ್ರಸ್ತಾಪಿಸಿದ್ದರಿಂದ ಆರಂಭಗೊಂಡ ಮಾತಿನ ಚಕಮುಖಿ ಅಲ್ಲಿಂದ ಗಾಂಧಿವಾದ, ಮಾರ್ಕ್ಸವಾದ, ಟ್ಯಾಗೋರವಾದಗಳೆಲ್ಲವನ್ನೂ ಒಂದೆರಡು ಸುತ್ತು ಹಾಕಿ ನಂತರ ಕೊಳ್ಳುಬಾಕ ಸಂಸ್ಕೃತಿ, ಉತ್ಪಾದನಾ ಹಂಚಿಕೆ.... ಕುರಿತು ಮಾತಿಗೆ ಮಾತು ಬೆಳೆದು, ತದನಂತರ ಬಾಂಗ್ಲಾ ಪಾಕಿಸ್ತಾನಿನ ನೀರಿನ ಅಗತ್ಯ ಹಾಗೂ ಆತಂಕವಾದಗಳ ಕುರಿತು ಬಿಸಿ ಬಿಸಿ ಚರ್ಚೆಯಾಗಿ. ಕೊನೆಗೂ ಯಾವುದೇ ಒಂದು ವಾದ ಸಿದ್ದಾಂತಕ್ಕೆ ಬದ್ದವಾಗದೇ ನಾಟಕ ಮುಗಿಯುತ್ತದೆ. ಹಾಗೂ ಗುಡ್ಡ ಅಗಿದು ಇಲಿ ಹಿಡಿದವರಂತೆ ಎಲ್ಲಾ ಜಾಗತಿಕ ಸಮಸ್ಯೆಗಳಿಗೆ ಕಾರಣ ಮನುಷ್ಯನ ದುರಾಶೆ ಎನ್ನುವ ಪರಮಸತ್ಯವನ್ನು ಹೇಳಿ ಚರ್ಚಾಗೋಷ್ಠಿ ಸಮಾಪ್ತಿಯಾಗುತ್ತದೆ. ಕೊಟ್ಟಕೊನೆಗೆ ನಾಟಕ ಮಾಡಲು ಸಾಧ್ಯವಾಗದೇ ಬರೀ ಚರ್ಚೆಮಾತ್ರ ಮಾಡಿದ್ದಕ್ಕೆ ಕಲಾವಿದನೊಬ್ಬ ಕ್ಷಮೆ ಕೋರುವ ಮೂಲಕ ನಾಟಕಕ್ಕೆ ಮಂಗಳ ಹಾಡುತ್ತಾನೆ. ನಾಟಕ ನೋಡಲು ಬಂದು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ ಪ್ರೇಕ್ಷಕರು ದೂರದ ರಾಜ್ಯದಿಂದ ಬಂದ ರಂಗತಂಡವನ್ನು ಮನಸ್ಸಿಲ್ಲದ ಮನಸ್ಸಿಂದ ಕ್ಷಮಿಸಿ ಬಂದ ದಾರಿಗೆ ಸುಂಕವಿಲ್ಲವೆಂದು ರಂಗಮಂದಿರದಿಂದ ನಿರಾಶೆಯಿಂದ ನಿರ್ಗಮಿಸಿದರು. ಸಾಹಿತ್ಯ ಅಕಾಡೆಮಿ ಆಯೋಜಿಸಿದ ನಾಟಕದಲ್ಲಿ ಸಾಹಿತ್ಯಕ ಚರ್ಚೆಯಲ್ಲದೇ ಇನ್ನೇನು ನಾಟಕ ಇರಲು ಸಾಧ್ಯ? ಎಂದು ಕೆಲವರು ಗೊಣಗುತ್ತಲೇ ಜಾಗ ಖಾಲಿ ಮಾಡಿದರು.


ಹೋಗಲಿ ಚರ್ಚೆಯನ್ನಾದರೂ ಒಂದು ತಾರ್ಕಿಕ ನೆಲೆಯಲ್ಲಿ ನಡೆಸಲಾಯಿತಾ ಅಂದರೆ ಅದೂ ಇಲ್ಲ. ವಿಷಯದಿಂದ ವಿಷಯಕ್ಕೆ ವಿಷಯಾಂತರವಾಗಿದ್ದೇ ಸಂವಾದವೆನಿಸಿಕೊಂಡಿತು. ಇದು ಸಂವಾದವೂ ಅಲ್ಲದೇ ಕೇವಲ ಮಾತಿನ ಸಂಘರ್ಷ ಎನ್ನಬಹುದಾಗಿದೆ. ನಿಜಕ್ಕೂ ಇಲ್ಲಿ ಆರಂಭದಲ್ಲಿ ಪ್ರಸ್ತಾಪಿಸಲಾದ ಯಾಂತ್ರೀಕರಣದ ಪರಿಣಾಮಗಳನ್ನೇ ಇಟ್ಟುಕೊಂಡು ಪ್ರಶ್ನೋತ್ತರಗಳ ಮೂಲಕ ಸಂವಾದ ಮಾಡಿ ಪರಿಹಾರ ಕಂಡುಕೊಂಡಿದ್ದರೆ ಒಂದು ಉತ್ತಮ ಬೌದ್ದಿಕ ಪ್ರಧಾನ ಸಂವಾದ ಗೋಷ್ಠಿಯಾದರೂ ಆಗುತ್ತಿತ್ತು. ಆದರೆ ವಿಷಯಾಂತರಗಳಿಂದಾಗಿ ಅದೂ ಆಗಲಿಲ್ಲ. ಒಬ್ಬರು ಮಂಡಿಸಿದ ಮಾತನ್ನು ಇನ್ನೊಬ್ಬರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಉತ್ತರಗಳಿಗಿಂತ ಪ್ರಶ್ನೆಗಳಿಗೆ ಪ್ರಶ್ನೆಗಳೇ ಸಂಘರ್ಷಕ್ಕೆ ಒಳಗಾದವು. ಕೇಳುಗರಿಗಂತೂ ಯಾರು ಹೇಳಿದ್ದು ಸರಿ, ಯಾರು ಹೇಳಿದ್ದು ತಪ್ಪು ಎಂದು ನಿರ್ಧರಿಸಲು ಸಾಧ್ಯವೇ ಆಗದಂತೆ ಚರ್ಚೆ ತಾರಕಕ್ಕೇರಿತ್ತು. ನೋಡುಗರ ಸಹನೆಯೂ ಮಿತಿಮೀರತೊಡಗಿತ್ತು. ಕೆಲವರಂತೂ ವೇದಿಕೆಯ ಮೇಲೆ ಏನು ನಡೆಯುತ್ತದೆಂಬುದು ಅರ್ಥವಾಗದೇ ರಂಗಮಂದಿರದಿಂದ ನಿರ್ಗಮಿಸಿಯೇ ಬಿಟ್ಟರು. ಇನ್ನು ಕೆಲವರೂ ಆಮೇಲಾದರೂ ನಾಟಕ ತೋರಿಸಬಹುದೇನೋ ಎನ್ನುವ ಆಸೆಯಿಂದ ಕೊನೆವರೆಗೂ ಕಾಯ್ದು ನಿರಾಶಿತರಾದರು. ನಾಟಕದೊಳಗಿನ ಚರ್ಚೆ ಏನೋ ಗಹನವಾದದ್ದನ್ನು ಹೇಳಲು ಹೋಗಿ ಏನನ್ನೂ ತರ್ಕಬದ್ದವಾಗಿ ಹೇಳಲಾರದೇ ತನ್ನ ಆಶಯದಲ್ಲಿ ತಾನೇ ವಿಫಲವಾಯಿತು. ಯಾಂತ್ರೀಕರಣದ ಕುರಿತು ಗಾಂಧೀವಾದ ಸರಿಯೋ ಇಲ್ಲವೇ ಟ್ಯಾಗೋರ್ವಾದ ಸರಿಯೋ ಎನ್ನುವುದನ್ನು ಇಬ್ಬರ ಪಾಯಿಂಟ್ ಆಪ್ ವ್ಯೂಹ್ನಲ್ಲಿ ಚರ್ಚಿಸಿ ಯಾವುದೇ ಒಂದು ನಿರ್ಧಾರಕ್ಕೆ ಬರಲಾಗದೇ ಪ್ರೇಕ್ಷಕರ ವಿವೇಚನೆಗೆ ಬಿಡಲಾಯಿತು.

ನಾಟಕ ಎಂದರೆ ಕನಿಷ್ಟ ನಾಟಕೀಯ ಅಂಶಗಳಾದರೂ ಇರಬೇಕೆಂಬುದು ಅಪೇಕ್ಷಣೀಯ. ಆದರೆ ರಂಗವೇದಿಕೆಯ ಮೇಲೆ ಚರ್ಚೆ ನಡೆಸಿ ಅದನ್ನೂ ಸಹ ನಾಟಕ ಎಂದು ಒಪ್ಪಿಕೊಳ್ಳಬೇಕು ಎಂದರೆ ಅದ್ಯಾಕೋ ಅತಿರೇಕ ಎನ್ನಿಸುತ್ತದೆ. ಒಂದು ಬೀದಿನಾಟಕಕ್ಕಾದರೂ ಒಂದು ಉದ್ದೇಶ ಅಂತಾ ಇರುತ್ತದೆ. ಆದರೆ ತಮಾಸ್ ಹುವಾ ಹೆಸರಿನ ಪ್ರಹಸನಕ್ಕೆ ಯಾವುದೇ ಸ್ಪಷ್ಟ ಉದ್ದೇಶವೂ ಇಲ್ಲ, ಅದನ್ನು ದೃಶ್ಯಗಳ ಮೂಲಕ ನಿರೂಪಿಸುವ ಗುರಿಯೂ ಇಲ್ಲ. ನಾಟಕದೊಳಗಿನ ನಿರ್ದೇಶಕ ಪಾತ್ರದಾರಿ ನಾಟಕ ಎಂದ ಮೇಲೆ ಕಲಾವಿದ, ನಿರ್ದೇಶಕ, ನಾಟಕಕಾರ.. ಎಂದು ನಿರ್ದಿಷ್ಟವಾದ ಕೆಲಸಕ್ಕೆ ಇರುತ್ತಾರೆ. ಆದರೆ ಎಲ್ಲರೂ ಪ್ರಶ್ನಿಸುವುದನ್ನೇ ಶುರುಮಾಡಿದರೆ ನಾಟಕವಾಗುವುದಿಲ್ಲ ಬರೀ ಅರಾಜಕತೆ ಉಂಟಾಗುತ್ತದೆ ಎಂದು ಹೇಳುತ್ತಾನೆ. ಆತ ನಾಟಕದೊಳಗೆ ಪಾತ್ರವಾಗಿ ಹೇಳಿದ್ದನ್ನು ನಾಟಕದಾದ್ಯಂತ ಸಾಬೀತು ಪಡಿಸಲಾಗಿದೆ. ಅರಾಜಕತೆ ಎನ್ನುವುದೇ ಇಲ್ಲಿ ನಾಟಕವಾಗಿದೆ. ಕಥೆ, ನಿರೂಪನೆ, ನಾಟಕೀಯತೆ, ಪಾತ್ರಪೋಷಣೆಯಂತಹ ನಾಟಕ ಬಯಸುವ ಯಾವುದೇ ಅಂಶಗಳೂ ಇಲ್ಲವಾದ್ದರಿಂದ ಇದೊಂದು ಹೊಸಬಗೆಯ ನಾಟಕವೆನ್ನಬಹುದಾಗಿದೆ. ಅದಕ್ಕೆ ರಂಗತಂಡವೇ ಕರೆಯುವ ಹಾಗೆ ಪೆಂಗ್ ರಂಗಭೂಮಿ ಎನ್ನಬಹುದಾಗಿದೆ. ಮೂರ್ಖರ ರಂಗಭೂಮಿಯನ್ನು ಹೊಸದಾಗಿ ಕಂಡುಕೊಂಡು ತಂಡದ ನಿರ್ದೇಶಕ ಹುಟ್ಟು ಹಾಕಿರಬಹುದು. ಆದರೆ ನೋಡುಗರನ್ನು ಮೂರ್ಖರನ್ನಾಗಿಸುವುದು ಅಕ್ಷಮ್ಯ. ನಾಟಕ ತೋರಿಸುತ್ತೇನೆಂದು ಚರ್ಚಾಗೋಷ್ಠಿ ನಡೆಸಿದ್ದು ಅನಪೇಕ್ಷನೀಯ. ಇಂತಹ ನಾಟಕವಲ್ಲದ ನಾಟಕ ನೋಡುಗರಿಗೆ ದಕ್ಕಲೇ ಇಲ್ಲ.


 ಆದರೆ ಚರ್ಚಾಕೂಟಕ್ಕೆ ನಾಟಕದ ರಂಗತಂತ್ರಗಳನ್ನು ಬಳಸಿಕೊಳ್ಳಲಾಗಿದೆ. ಹಿಂದುಗಡೆ ಪ್ಲಾಟ್ಪಾರಂಗಳನ್ನು ಬಳಸಿ ಲೆವಲ್ಗಳನ್ನು ಸೃಷ್ಟಿಸಿ, ಅಲ್ಲಿ ಕಲಾವಿದರನ್ನು ವಿಭಿನ್ನವಾಗಿ ಪ್ಲೇಸ್ಮೆಂಟ್ ಮಾಡಿದ್ದರಿಂದ ಸಂವಾದಗೋಷ್ಠಿಗೂ ರಂಗಕಳೆ ಬಂದಿದೆ. ನಿರ್ದೇಶಕನ ಪಾತ್ರದಾರಿ ಮಾತಾಡಿದ್ದಕ್ಕಿಂತ ಸಿಗರೇಟ್ ಸೇದಿದ್ದೆ ಹೆಚ್ಚು. ಸಿನೆಮಾದಲ್ಲಾದರೆ ಸಿಗರೇಟ್ ಸೇವನೆ ಹಾನಿಕರ ಎಂದು ಬರೆಯಲೇಬೇಕು. ಆದರೆ ನಾಟಕ ಪ್ರದರ್ಶನಕ್ಕೆ ರೂಲ್ ಇಲ್ಲವಲ್ಲಾ. ಆದ್ದರಿಂದ ಧೂಮಪಾನವೂ ಚರ್ಚಾನಾಟಕದ ಭಾಗವಾಗಿದೆ. ರಾಷ್ಟ್ರೀಯ ನಾಟಕ ಶಾಲೆಯ ಪ್ರೊಡಕ್ಟ್ ಆದ ಪ್ರಸಿದ್ಧ ನಿರ್ದೇಶಕ ಭಾನು ಭಾರತಿಯವರ ಪ್ರಯೋಗಶೀಲತೆಯನ್ನು ಮೆಚ್ಚಲೇಬೇಕು. ಆದರೆ ನಾಟಕದಿಂದ ನಾಟಕೀಯತೆಯನ್ನೇ ತೆಗೆದಿಟ್ಟುಕಥೆ, ಕಥಾನಕ, ಪಾತ್ರಪೋಷಣೆ, ಅಭಿನಯಗಳನ್ನೆಲ್ಲಾ ಬದಿಗಿಟ್ಟು ಕೇವಲ ಅರಾಜಕ ಚರ್ಚೆಯನ್ನೇ ನಾಟಕವಾಗಿಸಿ ಇದು ನನ್ನ ಪೆಂಗ್ ಥೀಯಟರ್ ಥೀಯರಿ ಎಂದು ಸಾಬೀತುಪಡಿಸಲು ಯತ್ನಿಸಿದ್ದು ವಿಕ್ಷಿಪ್ತ ಬೆಳವಣಿಗೆಯಾಗಿದೆ. ಆದರೆ ಬಹುತೇಕ ಎನ್ಎಸ್ಡಿ ಯಿಂದ ಬಂದ ಕಲಾವಿದರು ಚರ್ಚಾ ನಾಟಕವನ್ನೂ ಸಹ ಕೇಳುವಂತೆ ಮಾಡಿದ್ದು ವಿಶೇಷ. ನಾಟಕ ಶಾಲೆಗಳಲ್ಲಿ ಇಂಪ್ರೋವೈಸೇಶನ್ ಎನ್ನುವ ಅಭ್ಯಾಸ ಪಠ್ಯ ಕ್ರಮವಿದೆ. ಅದು ನಟರನ್ನು ರೂಪಿಸುವ ಒಂದು ಪರಿಪಾಠ. ಆದರೆ ಅದೇ ಪಾಠವನ್ನು ನಾಟಕವಾಗಿಸಿ ಪ್ರೇಕ್ಷಕರನ್ನು  ಒಪ್ಪಿಸಲು ಪ್ರಯತ್ನಿಸುವ ನಿರ್ದೇಶಕರ ಪರಿ ಪರಿಹಾಸಮಯವಾಗಿದೆ. ಸಂವಾದಗೋಷ್ಠಿಯಾಗಿ ಸಫಲವಾಗಬಹುದಾದ ವೈಚಾರಿಕ ವಿಷಯ ಮಂಡನೆ ನಾಟಕ ರೂಪವಾಗಿ ವಿಫಲವಾಗಿದೆ. ಸಾಹಿತ್ಯ ಅಕಾಡೆಮಿ ನಾಟಕವನ್ನು ಪ್ರಾಯೋಜಿಸಿರುವುದರಿಂದ ರಂಗವೇದಿಕೆಯ ಮೇಲೆ ಸಾಹಿತ್ಯಕ ಸಂವಾದ ನಡೆಸಿದ್ದು ಸಾಹಿತ್ಯದವರ ದೃಷ್ಟಿಕೋನದಲ್ಲಿ ಸರಿಯಾಗಿದ್ದರೂ ನಾಟಕವೆಂದು ನೋಡಲು ಬಂದವರಿಗೆ ನಿರಾಶೆಯನ್ನುಂಟುಮಾಡುವಂತಿದೆ. ನಾಟಕದ ಹೆಸರು ತಮಾಸ ನಾ ಹುವಾ ಎಂದಿದ್ದರೂ ಅದಕ್ಕೆ ವ್ಯತಿರಿಕ್ತವಾಗಿ ನಾಟಕವೇ ಒಂದು ತಮಾಷೆಯಾಗಿ ಮೂಡಿ ಬಂದಿದ್ದಂತೂ ಸತ್ಯ.            

                               -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ