ಬುಧವಾರ, ಜನವರಿ 14, 2015

ಪುರುಷಪ್ರಧಾನ ವ್ಯವಸ್ಥೆಯ ಆದರ್ಶ ಮಹಿಳೆ “ಹೇಮರಡ್ಡಿ ಮಲ್ಲಮ್ಮ”




ಕನ್ನಡ ವೃತ್ತಿರಂಗಭೂಮಿಯಲ್ಲಿ ಗಮನಾರ್ಹವಾದ ಸಾಧನೆ ಮಾಡಿದ ಹಿರಿಮೆ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಮಂಡಳಿಯದ್ದು. ಕಂಪನಿಯನ್ನು ಕಟ್ಟಿ ಬೆಳೆಸಿದ್ದು, ನಾಟಕಗಳನ್ನು ಬರೆದು ನಿರ್ದೇಶಿಸಿ ವೃತ್ತಿನಾಟಕ ಕಂಪನಿಯನ್ನು  ಏಳು ದಶಕಗಳ ಕಾಲ ಮುನ್ನೆಡೆಸಿದವರು ಗವಾಯಿಗಳು. ಪುಟ್ಟರಾಜ ಗವಾಯಿಗಳು ಮಾಡಿದ ರಂಗಸಾಧನೆಯನ್ನು ಜಗತ್ತಿನಲ್ಲೇ ಯಾರೂ ಮಾಡಿಲ್ಲ. ಯಾಕೆಂದರೆ ಪುಟ್ಟರಾಜರು ಜನ್ಮಜಾತ ಅಂಧರು. ಸಂಗೀತ ಹಾಗೂ ಕಲೆಯಲ್ಲಿ ತಾವು ಸಾಧನೆ ಮಾಡುವುದಷ್ಟೇ ಅಲ್ಲ ಹಲವಾರು ಸಾಧಕರನ್ನು ಸೃಷ್ಟಿಸಿದವರು. ಸಹಸ್ರಾರು ವಿಕಲಚೇತನರಿಗೆ ಸಂಗೀತ ಕಲೆ ಕಲಿಸಿದವರು. ಬದುಕುವ ಮಾರ್ಗವನ್ನು ಹೇಳಿಕೊಟ್ಟವರು. ಇಂತಹ ಮಹಾನ್ ಸಾಧಕರಾದ ಪುಟ್ಟರಾಜ ಗವಾಯಿಗಳ ಶತಮಾನದ ಸಂಭ್ರಮದ ವರ್ಷವಿದು.



ಪುಟ್ಟರಾಜರ ಗುರುಗಳಾದ ಪಂಚಾಕ್ಷರ ಗವಾಯಿಗಳು ಸಹ ಕಣ್ಣಿಲ್ಲದವರಾದರೂ ಅನೇಕ ಜನರಿಗೆ ಕಣ್ಣಾದವರು. ಶ್ರೀ ಕುಮಾರೇಶ್ವರ ಸಂಚಾರಿ ಸಂಗೀತ ಶಾಲೆಯನ್ನು ಕಟ್ಟಿ ಮುನ್ನೆಡೆಸಿದವರು. ಸಂಚಾರಿ ಶಾಲೆಯಲ್ಲಿ ಹೊರಹೊಮ್ಮಿ  ಬಂದ ಪ್ರತಿಭೆಯೇ ಪುಟ್ಟರಾಜರವರು. ಇಬ್ಬರೂ ಗುರುಶಿಷ್ಯರು ಸೇರಿ ನಾಟಕ ಕಂಪನಿಯನ್ನು ಹುಟ್ಟು ಹಾಕಿದ ಹಿನ್ನೆಲೆ ವಿಸ್ಮಯಕಾರಿಯಾಗಿದೆ. ಸಂಗೀತ ಶಾಲೆಯಲ್ಲಿ ಕಲಿಯುವ ಅರವತ್ತಕ್ಕೂ ಮಿಕ್ಕಿದ ಬಡ ವಿದ್ಯಾರ್ಥಿಗಳನ್ನು ಸಾಕುವ ಹೊಣೆ ಇಬ್ಬರು ಗುರುಶಿಷ್ಯರದ್ದಾಗಿತ್ತು. ಆರ್ಥಿಕ ಸಂಕಷ್ಟದಲ್ಲಿ ಶಾಲೆ ನಡೆಯುತ್ತಿತ್ತು. ಸಾಲ ಮಾಡಿ ತಂದು ಅದೆಷ್ಟು ದಿನವೆಂದು ಅಷ್ಟೊಂದು ಮಕ್ಕಳ ಹೊಣೆಗಾರಿಕೆ ಹೊರಲು ಸಾಧ್ಯ. ಮೈಸೂರು ಮಹಾರಾಜರು ಸಂಗೀತ ಕಲೆಗೆ ಪ್ರೋತ್ಸಾಹ ಕೊಡುತ್ತಾರೆಂದು ತಿಳಿದಿದ್ದೆ ತಡ ಗುರುಶಿಷ್ಯರಿಬ್ಬರೂ ಗದುಗಿನಿಂದ ಮೈಸೂರಿಗೆ ಬಂದರು. ಆದರೆ ಅವರು ಬರುವುದಕ್ಕೂ ಮೈಸೂರು ದೊರೆ ಕೃಷ್ಣರಾಜ ಒಡೆಯರವರು ನಿಧನರಾಗುವುದಕ್ಕೂ ಸರಿಹೋಯಿತು. ಅಪಾರ ನಿರೀಕ್ಷೆ ಹೊತ್ತು ಬಂದವರಿಗೆ ನಿರಾಸೆಯಾಯಿತಾದರೂ ಎದೆಗುಂದಲಿಲ್ಲ. ಕಲೆಯ ಮೂಲಕವೇ ಆರ್ಥಿಕ ಸಂಪನ್ಮೂಲವನ್ನು ಶಾಲೆಗಾಗಿ ಹೊಂದಿಸಬೇಕೆಂದು ಪುಟ್ಟರಾಜ ಗವಾಯಿಗಳು ಸಂಕಲ್ಪಮಾಡಿದರು. 1940ರಲ್ಲಿ ಗವಾಯಿಗಳ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಮಂಡಳಿ ಅಧಿಕೃತವಾಗಿ ಜನ್ಮತಾಳಿತು. ಪುಟ್ಟರಾಜರೇ ಸಿದ್ದರಾಮ ಸಂವಾದ ನಾಟಕ ಬರೆದು ನಿರ್ದೇಶಿಸಿ ಆಡಿಸಿದರು. ನಾಟಕ ಜನಪ್ರೀಯತೆಯ ಜೊತೆಗೆ ಹಣವನ್ನೂ ತಂದು ಕೊಟ್ಟಿತು. ಸಂಗೀತ ಶಾಲೆಯ ಸಾಲವೆಲ್ಲಾ ತೀರಿ ಸುಗಮವಾಗಿ ಮುಂದುವರೆಯಿತು. ಸತಿಸುಕನ್ಯಾ, ರಾಜಶೇಖರ ವಿಲಾಸ, ಮಾದರಿ ಮಾದಾರ ಚೆನ್ನಯ್ಯ, ನೆಲ್ಲೂರು ನಂಬೆಕ್ಕ, ನವಯುಗ ನಗೆ, ರತ್ನಹಾರ... ನಾಟಕಗಳು ಮುಕ್ಕಾಂ ಮಾಡಿದಲ್ಲೆಲ್ಲಾ ಜಯಭೇರಿ ಬಾರಿಸಿದವುನಲವಡಿ ಶ್ರೀಕಂಠಶಾಸ್ತ್ರಿಗಳು ಬರೆದ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು 1960ರಲ್ಲಿ ಪುಟ್ಟರಾಜ ಗವಾಯಿಗಳು ತಮ್ಮ ಕಂಪನಿಗೆ ಆಯ್ಕೆ ಮಾಡಿಕೊಂಡು ಆಡಿಸಿದರು. ಗದುಗಿನಲ್ಲಿ ನಿರಂತರವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಾನೂರಕ್ಕೂ ಹೆಚ್ಚು ಪ್ರದರ್ಶನವನ್ನು ಕಂಡ ನಾಟಕ ಅತ್ಯಂತ ಜನಪ್ರೀಯವಾಯಿತು. ಕಳೆದ 70 ವರ್ಷಗಳಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನಗೊಳ್ಳುತ್ತಲೆ ಬಂದಿದೆ.
         
ಈಗ ಪುಟ್ಟರಾಜ ಗವಾಯಿಗಳ ಶತಮಾನದ ಸಂದರ್ಭ ಹಾಗೂ ಅವರು ಹುಟ್ಟು ಹಾಕಿದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಮಂಡಳಿಗೆ ವಜ್ರ ಮಹೋತ್ಸವದ ಸಂಭ್ರಮ. ಸಂಭ್ರಮದ ಸಂದರ್ಭದ ಸಮಯದಲ್ಲಿ ಸರಿಯಾಗಿ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಯು ಕಂಪನಿ ನಾಟಕೋತ್ಸವವನ್ನು ಡಿಸೆಂಬರ್ 26 ರಿಂದ 30ರವರೆಗೆ ಆಯೋಜಿಸಿದೆ. ನಾಟಕೋತ್ಸವದ ಮೊದಲ ದಿನ 2014 ಡಿಸೆಂಬರ್ 26 ರಂದು ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಮಂಡಳಿ ಕಲಾವಿದರು ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಗುರುನಾನಕ ಭವನದಲ್ಲಿ ಪ್ರದರ್ಶಿಸಿ ಕಂಪನಿ ನಾಟಕದ ಸಂಭ್ರಮವನ್ನು ಬೆಂಗಳೂರಿಗರಿಗೆ ಉಣಬಡಿಸಿದರು.


 ಹೇಮರೆಡ್ಡಿ ಮಲ್ಲಮ್ಮ ಒಂದು ಐತಿಹಾಸಿಕ ಐತಿಹ್ಯದ ನಾಟಕ. ಮಲ್ಲಮ್ಮನನ್ನು ಆದರ್ಶ ಮಹಿಳೆಯ ಪ್ರತೀಕವಾಗಿ ನಾಟಕದಲ್ಲಿ ನಿರೂಪಿಸಲಾಗಿದೆ. ಸಂಕ್ಷಿಪ್ತ ಕಥೆ ಹೀಗಿದೆ. ಮಲ್ಲಮ್ಮಳನ್ನು ಹೇಮರೆಡ್ಡಿಯ ಅರೆಹುಚ್ಚ ಮಗ ಭರಮರೆಡ್ಡಿಗೆ ಮದುವೆಮಾಡಿ ಕೊಡಲಾಗುತ್ತದೆ. ಮಲ್ಲಿಕಾರ್ಜುನನ ಪರಮ ಭಕ್ತೆಯಾದ ಮಲ್ಲಮ್ಮಳಿಗೆ ಗಂಡನ ಮನೆಯಲ್ಲಿ ಅತ್ತೆ ಹಾಗೂ ಗಂಡನ ಸಹೋದರರ ಹೆಂಡತಿಯರು (ನೆಗೆನ್ನಿಯರು) ಕೊಡಬಾರದ ಕಷ್ಟ ಕೊಡುತ್ತಾರೆ. ಎಲ್ಲಾ ನೋವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಮಹಾಸಾದ್ವಿ ಮಲ್ಲಮ್ಮನ ಸಹಾಯಕ್ಕೆ ಸಾಕ್ಷಾತ್ ಶಿವನೇ ಭುವಿಗಿಳಿದು ಬರುತ್ತಾನೆ. ಭಿಕ್ಷೆ ಕೇಳಿ ಬಂದ ಜಂಗಮವೇಷದ ಶಿವನನ್ನು ಮಲ್ಲಮ್ಮ ಆಧರಿಸಿ ಸತ್ಕರಿಸಿದರೆ ಅತ್ತೆ ನೆಗೆನ್ನಿಯರು ಹೊಡೆದು ಅವಮಾನಿಸುತ್ತಾರೆ. ಜಂಗಮನ ಜೊತೆಗೆ ಮಲ್ಲಮಳಿಗೆ ಅಕ್ರಮ ಸಂಬಂಧವಿದೆ ಎಂದು ಪುಕಾರು ಹಬ್ಬಿಸಿ ಮಲ್ಲಮ್ಮಳನ್ನು ಕೊಂದು ಬರಲು ಭರಮರೆಡ್ಡಿಗೆ ಪ್ರಚೋದಿಸುತ್ತಾರೆ. ಜಂಗಮ ಹಾಗೂ ಮಲ್ಲಮ್ಮಳ ನಡುವಿನ ತಂದೆ ಮಗಳ ಪ್ರೀತಿ ಕಂಡ ಗಂಡ ಪ್ರಚೋದಿಸಿದವರ ಮೇಲೆಯೇ ತಿರುಗಿ ಬೀಳುತ್ತಾನೆ. ಜಂಗಮನ ಶಾಪದಿಂದ ಹೇಮರೆಡ್ಡಿ ಕುಟುಂಬದ ಎಲ್ಲಾ ಶೋಷಕ ಮಹಿಳೆಯರು ರೋಗಪೀಡಿತರಾಗಿ ನರಳುತ್ತಾರೆ. ಮಲ್ಲಮ್ಮಳ ಪವಾಡದಿಂದಾಗಿ ಎಲ್ಲರೂ ಸರಿಹೋಗಿ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾರೆ. ಎಲ್ಲವೂ ಸುಖಾಂತ್ಯವಾಗುತ್ತದೆ. ನಾಟಕ ನೋಡುಗರನ್ನು ಭಕ್ತಿಯಲ್ಲಿ ಪರವಶರನ್ನಾಗಿಸುತ್ತದೆ.



ಚೆನ್ನಮಲ್ಲಿಕಾರ್ಜುನನ್ನು ಅತೀವವಾಗಿ ಆರಾಧಿಸಿದ ಮಹಿಳೆಯರಲ್ಲಿ ಅಕ್ಕಮಹಾದೇವಿ ಮೊದಲಿಗಳಾದರೆ ಶಿವಶರಣೆ ಮಲ್ಲಮ್ಮ ಕೊನೆಯವಳು. ಆದರೆ ಇಬ್ಬರೂ ಶರಣೆಯರು ಚೆನ್ನಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಳ್ಳಲು ಹಿಡಿದ ಮಾರ್ಗ ಮಾತ್ರ ವಿಭಿನ್ನವಾದದ್ದು. ಮಹಾದೇವಿ ಲೌಕಿಕವನ್ನು ಕಡೆಗಣಿಸಿ ಅಲೌಕಿಕ ಗಂಡನಿಗಾಗಿ ಹಾತೊರೆದು ಐಕ್ಯವಾದರೆ, ಮಲ್ಲಮ್ಮ ಲೌಕಿಕ ಸಂಸಾರದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿಯೇ ಚೆನ್ನಮಲ್ಲಿಕಾರ್ಜುನನ್ನು ಒಲಿಸಿಕೊಂಡವಳು. ಅಕ್ಷರಬಲ್ಲ ಅಕ್ಕ ಮಾಹಾದೇವಿ ವಚನಗಳಲ್ಲಿ ತನ್ನ ಅನುಭಾವಗಳನ್ನು ಹೇಳಿಕೊಂಡರೆ, ಅನಕ್ಷರಸ್ತೆ ಮಲ್ಲಮ್ಮಳ ಬದುಕೇ ಒಂದು ವಚನಗಾತೆ. ವಿಪರ್ಯಾಸವೇನೆಂದರೆ ಚನ್ನಮಲ್ಲಿಕಾರ್ಜುನನೇ ನನ್ನ ಗಂಡ, ಬದುಕು ಎಲ್ಲಾ ಎಂದುಕೊಂಡ ಮಹಾದೇವಿಗೆ ದೇವ ಎಂದೂ ಒಲಿಯಲಿಲ್ಲ, ಪ್ರತ್ಯಕ್ಷನಾಗಲಿಲ್ಲ, ಆಕೆಯ ಸಂಕಷ್ಟಗಳಿಗೆ ಸಹಾಯಮಾಡಲಿಲ್ಲ. ಯಾಕೆಂದರೆ ಪ್ರಕೃತಿ ಧರ್ಮಕ್ಕೆ ವಿರುದ್ದವಾಗಿ ಮಹಾದೇವಿ ಬದುಕಿ ಬಾಳಿದವಳು. ಆದರೆ ಲೌಕಿಕ ಬದುಕಿಗೆ ಬದ್ದತೆಯನ್ನು ತೋರುತ್ತಲೇ ಚೆನ್ನಮಲ್ಲಿಕಾರ್ಜುನನ್ನು ಸಾಕ್ಷಾತ್ಕರಿಸಿಕೊಂಡವಳು ಮಲ್ಲಮ್ಮ. ಬದುಕಿಗೆ ವಿಮುಖನಾದರೆ ಯಾವ ದೇವನೂ ಒಲಿಯುವುದಿಲ್ಲ, ಬದುಕು ಒಡ್ಡು ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಾಳಿದರೆ ಶಿವನೇ ಸಹಾಯಕ್ಕೆ ಓಡಿ ಬರುವನು ಎನ್ನುವ ನೀತಿಪಾಠವನ್ನು ಇಬ್ಬರೂ ಶರಣೆಯರ ಬದುಕು ಹೇಳುತ್ತದೆ. ಮಹಾದೇವಿಯದು ಲೌಕಿಕ ಬದುಕಿನ ಕುರಿತು ನಕಾರಾತ್ಮಕ ನುಡಿಯಾದರೆ, ಮಲ್ಲಮ್ಮನದು ಸಕಾರಾತ್ಮಕ ನಡೆಯಾಗಿದೆ.

ನಾಟಕದ ಪ್ರಮುಖ ಅಂಶ ಏನೆಂದರೆ ಸಕಾರಾತ್ಮಕತೆ. ಮಲ್ಲಮ್ಮಳನ್ನು ಆಕೆಯ ಗಂಡನ ಮನೆಯ ಹೆಂಗಸರೆಲ್ಲಾ ಇನ್ನಿಲ್ಲದಂತೆ ಗೋಳುಹೋಯ್ದುಕೊಳ್ಳುತ್ತಾರಾದರೂ ಆಕೆ ಮಾತ್ರ ಎಂದೂ ಸಿಟ್ಟಿಗೇಳುವುದಿಲ್ಲ, ಪ್ರತಿಭಟಿಸುವುದಿಲ್ಲ, ಎದುರು ಮಾತಾಡುವುದಿಲ್ಲ. ಎಲ್ಲವೂ ತನ್ನ ಒಳ್ಳೆಯದಕ್ಕೆ ಎಂದು ಪರಿಭಾವಿಸುತ್ತಾಳೆ. ಮನೆಯಿಂದ ಹೊರಗೆ ಹಾಕಿ ಹಸುಕಟ್ಟುವ ಜಾಗಕ್ಕೆ ಹಾಕಿ ದನಕಾಯಲು ಹಚ್ಚಿದರೂ ಸಹ ಗೋವುಗಳ ಸೇವೆ ಮಾಡುವ ಭಾಗ್ಯ ಕರುಣಿಸಿದರೆಂದು ಸಂತಸಪಡುತ್ತಾಳೆ. ಸಕಾರಾತ್ಮಕ ಆಲೋಚನಾ ಕ್ರಮಗಳೇ ಮಲ್ಲಮ್ಮಳನ್ನು ದೈವತ್ವಕ್ಕೆ ಏರಿಸಿದೆ. ಕೌಟುಂಬಿಕ ಹಿಂಸೆಗೆ ಬದಲಾಗಿ ಧನಾತ್ಮಕ ಅಹಿಂಸೆಯನ್ನು ಮಲ್ಲಮ್ಮ ರೂಢಿಸಿಕೊಂಡಿದ್ದರಿಂದ ಆಕೆ ಪ್ರತಿನಿಧಿಸುತ್ತಿದ್ದ ಜಾತಿಯ ಜನಾಂಗ ಮಲ್ಲಮ್ಮಳನ್ನು ದೇವತೆಯನ್ನಾಗಿ ಮಾಡಿ ಗುಡಿ ಕಟ್ಟಿ ಪೂಜೆ ಮಾಡುವಂತಾಗಿದೆ. ಶಿವಶರಣೆಯನ್ನು ದೇವತೆಯಾಗಿಸಿ ಆರಾಧಿಸುತ್ತಿರುವ ಭಾಗ್ಯ ಸಿಕ್ಕಿದ್ದು ಮಲ್ಲಮ್ಮಳಿಗೆ ಮಾತ್ರ.



ಮಲ್ಲಮ್ಮಳನ್ನು ಆದರ್ಶ ಮಹಿಳೆಯನ್ನಾಗಿಸಿ ಪೂಜ್ಯನೀಯವಾಗಿಸುವುದರ ಹಿಂದೆ ಜಾತಿ ರಾಜಕಾರಣ ಹಾಗೂ ಪುರುಷ ಪ್ರಧಾನ ವ್ಯವಸ್ಥೆಯ ತಂತ್ರಗಾರಿಕೆ ಎರಡೂ ಇವೆ. ಇಡೀ ನಾಟಕದಲ್ಲಿ ಗಂಡು ಪಾತ್ರಗಳನ್ನು ಮುಗ್ದ ಇಲ್ಲವೇ ಅಮಾಯಕ ಎನ್ನುವಂತೆ ಚಿತ್ರಿಸಲಾಗಿದೆ. ಎಲ್ಲಾ ಹೆಣ್ಣು ಪಾತ್ರಗಳನ್ನು ಖಳನಾಯಕಿಯರಂತೆ ಬಿಂಬಿಸಲಾಗಿದೆ. ಹೆಣ್ಣಿಗೆ ಹೆಣ್ಣೇ ಶತ್ರುವೇ ಹೊರತು ಗಂಡು ಅಲ್ಲ ಎನ್ನುವುದನ್ನು ಪರೋಕ್ಷವಾಗಿ ನಾಟಕದಾದ್ಯಂತ ಹೇಳಲಾಗಿದೆ. ಹಾಗೂ ಆಶಯಕ್ಕೆ  ಪೂರಕವಾಗಿ ದೃಶ್ಯಗಳನ್ನು ಕಟ್ಟಲಾಗಿದೆ. ಮನೆಯಲ್ಲಿರುವ ಪುರುಷರು ತಮ್ಮ ಅಧಿಕಾರವನ್ನು ಚಲಾಯಿಸಿ ಹೆಂಗಸರನ್ನು ಹೊಡೆದು ಹೆದರಿಸಿ ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಹೆಂಗಸರನ್ನು ನಿಯಂತ್ರಿಸಲು ಸಾಧ್ಯ ಎನ್ನುವ ಮಹಿಳಾವಿರೋಧಿ ಸಿದ್ದಾಂತವನ್ನೂ ಪರೋಕ್ಷವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಸರಿಹೋಗುವಂತೆ ಹೇಮರೆಡ್ಡಿ ಭರಮರೆಡ್ಡಿ ಅಪ್ಪ ಮಗ ಇಬ್ಬರೂ ಕೊನೆಗೆ ತಮ್ಮ ಪುರುಷಾಧಿಕಾರವನ್ನು ತೋರಿಸಿ ಹೆಂಗಸರನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುತ್ತಾರೆ, ಶಿವನೂ ಸಹ ಕೆಟ್ಟ ಹೆಂಗಸರಿಗೆ ರೋಗದಿಂದ ನರಳುವ ಶಾಪ ಕೊಟ್ಟು ಮಹಿಳೆಯರ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ. ಒಟ್ಟಾರೆಯಾಗಿ ಇಡೀ ನಾಟಕ ಪುರುಷರ ಪರವಾಗಿದ್ದು ಮಹಿಳಾ ವಿರೋಧಿ ಭಾವನೆಯನ್ನು ಹುಟ್ಟುಹಾಕುವಂತಿದೆ. ಇಡೀ ನಾಟಕ ನೋಡಿದರೂ ಮಲ್ಲಮ್ಮಳನ್ನು ಆಕೆಯ ಗಂಡನ ಮನೆಯ ಇತರೇ ಮಹಿಳೆಯರು ವಿರೋಧಿಸುವುದಕ್ಕೆ ಸಕಾರಣಗಳೇ ಇಲ್ಲ. ಮಲ್ಲಮ್ಮ ದಿನವೂ ಸ್ನಾನ ಮಾಡುತ್ತಾಳೆ, ದೇವರ ಪೂಜೆ ಮಾಡುತ್ತಾಳೆ ಹಾಗೂ ಮನೆಯ ಎಲ್ಲರ ಕೆಲಸವನ್ನು ತಾನೊಬ್ಬಳೇ ಮಾಡುತ್ತಾಳೆ ಎಂದು ಆರೋಪಿಸಿ ಆಕೆಯನ್ನು ಆಜನ್ಮ ಶತ್ರುವೆನ್ನುವಂತೆ ಶಿಕ್ಷೆಗೆ ಒಳಪಡಿಸುವುದು ಅಕಾರಣವೆನ್ನಿಸುತ್ತದೆ.

  
ನಾಟಕವನ್ನು ಬರೆದವರು, ನಿರ್ದೇಶಿಸಿದವರು, ಆಡಿಸಿದವರು, ಆಡಿದವರೆಲ್ಲಾ ಪುರುಷರೇ ಆಗಿದ್ದು, ಮಲ್ಲಮ್ಮಳನ್ನು ದೇವತೆಯನ್ನಾಗಿ ಮಾಡುವುದರಲ್ಲಿ, ಮಲ್ಲಮ್ಮಳ ನಾಟಕವನ್ನು ಪ್ರಮೋಟ್ ಮಾಡುವಲ್ಲಿ  ಪುರುಷ ವರ್ಗದವರ ತಂತ್ರಗಾರಿಕೆ ಬೇಕಾದಷ್ಟಿದೆ. ಹಾಗೂ ನಾಟಕವನ್ನು ಆಡಿಸಿದ ಗವಾಯಿಗಳ ಮಠವೇ ಮೊದಲು ಮಹಿಳಾ ವಿರೋಧಿ ಎನಿಸುವಂತಿದೆ. ಮಹಿಳೆಯರನ್ನು ಆದಷ್ಟೂ ದೂರವೇ ಇಡುತ್ತಾ ಬಂದಿದೆ. ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಮಂಡಳಿ ಯಾವುದೇ  ನಾಟಕಗಳಲ್ಲ್ಲೂ ಸಹ ಯಾವುದೇ ಮಹಿಳೆ ಪಾತ್ರ ಮಾಡಕೂಡದು ಎಂದು ಅಘೋಷಿತ ನಿರ್ಬಂಧ ಹೇರಲಾಗಿದೆ. ಖಡ್ಡಾಯವಾಗಿ ಪುರುಷ ಕಲಾವಿದರು ಮಾತ್ರ ಇರುವ ಏಕೈಕ ಕಂಪನಿ ಇದು. ಹೀಗಾಗಿ ಈಗ ಪ್ರಸ್ತುತಗೊಂಡ ಹೇಮರೆಡ್ಡಿ ಮಲ್ಲಮ್ಮ ನಾಟಕದ ಎಲ್ಲಾ ಮಹಿಳಾ ಪಾತ್ರಧಾರಿಗಳೂ ಪುರುಷರೇ ಆಗಿದ್ದು ನಾಟ್ಯ ಮಂಡಳಿಯ ಮಹಿಳಾ ವಿರೋಧಿತನಕ್ಕೆ ಸಾಕ್ಷಿಯಾಗಿದೆ.


ಮಲ್ಲಮ್ಮಳನ್ನು ಆದರ್ಶ ಮಹಿಳೆಯನ್ನಾಗಿ ಚಿತ್ರಿಸಿದ್ದು ಪುರುಷರ ಔದಾರ್ಯವಲ್ಲವೇ ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೆ ಅದರಲ್ಲೂ ಸಹ ಪಿತೃಪ್ರಧಾನ ವ್ಯವಸ್ಥೆಯ ಮನುವಾದಿತನ ಅಂತರ್ಗತವಾಗಿದೆ. ಹೆಂಡತಿ ಅಂದರೆ ಹೀಗಿರಬೇಕು, ಗಂಡನ ಮನೆಯಲ್ಲಿ ಅದೆಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಒಂದು ಮಾತೂ ಎದುರಾಡದೇ ಎಲ್ಲವನ್ನೂ ಸಹಿಸಿಕೊಂಡು ಬಾಳಬೇಕು. ಗಂಡ ಹುಚ್ಚನಾಗಿರಲಿ, ಸೋಮಾರಿಯಾಗಿರಲಿ... ಹೇಗೆ ಇರಲಿ ಹೊಂದಾಣಿಕೆ ಮಾಡಿಕೊಂಡು ದುಡಿಯಬೇಕು. ಸಂಕಷ್ಟಗಳಿಗೆ ಪರ್ಯಾಯವಾಗಿ ದೇವರ ಪೂಜೆ ಪುನಸ್ಕಾರಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಸಾಂತ್ವನ ಹೊಂದಬೇಕು... ಹೀಗೆ ಬಾಯಿಲ್ಲದಂತೆ ಬಾಳಿದರೆ ಮಹಾಸಾದ್ವಿಯಾಗಬಹುದು, ದೇವರೂ ಒಲಿಯಬಹುದು, ದೇವತೆಯಾಗಲೂಬಹುದು... ಎನ್ನುವ ಹುಸಿ ಭ್ರಮೆಯೊಂದನ್ನು ತಮ್ಮ ಪಾರುಪತ್ಯಕ್ಕಾಗಿ ಪುರುಷ ಪ್ರಧಾನ ವ್ಯವಸ್ಥೆ ಮೊದಲಿನಿಂದಲೂ ಪ್ರಯತ್ನಿಸುತ್ತಲೇ ಬಂದಿದೆ.   ಮಹಿಳೆಯರನ್ನು ಶೋಷಿಸುವ ತಂತ್ರದ ಭಾಗವಾಗಿ ಮಲ್ಲಮ್ಮಳಂತಹ ಶ್ರಮಿಜೀವಿ ಶರಣೆಯನ್ನು ಮಲ್ಲಮ್ಮನ ಪವಾಡ ಎನ್ನುವಂತೆ ವೈಭವೀಕರಿಸಿಕೊಂಡೇ ಬರಲಾಗುತ್ತಿದೆ. ರೆಡ್ಡಿ ಜನಾಂಗ ಮಲ್ಲಮ್ಮಳನ್ನು ತಮ್ಮ ಜಾತಿಯ ಮಹಾನ್ ಸಾದ್ವಿ ಶಿರೋಮಣಿ ಎಂಬಂತೆ ಬಿಂಬಿಸುತ್ತಿದೆ. ಮಲ್ಲಮ್ಮ ಶಿವನ ಆರಾಧಕಿಯಾಗಿದ್ದರಿಂದ ಲಿಂಗಾಯತರು ಆಕೆಯನ್ನು ಮಹಾಶಿವಶರಣೆ ಎಂದು ಚಿತ್ರಿಸುತ್ತಲೇ ಬಂದಿದ್ದಾರೆ. ಮಲ್ಲಮ್ಮನಿಗೆ ಗುಡಿ ಕಟ್ಟಿ ಪೂಜೆ ಮಾಡುತ್ತಿದ್ದಾರೆ. ಮಲ್ಲಮ್ಮಳಿಗೆ ಪವಾಡಗಳನ್ನು ಹುಟ್ಟುಹಾಕಿ ಆಕೆಯನ್ನು ಆದರ್ಶ ಪತ್ನಿ, ಆದರ್ಶ ಸೊಸೆ, ಆದರ್ಶ ಮಹಿಳೆ ಎಂದೆಲ್ಲಾ ಪ್ರಚಾರಪಡಿಸುತ್ತಿದ್ದಾರೆ. ಪುರುಷ ವರ್ಗದ ಎಲ್ಲಾ ಹುನ್ನಾರಗಳನ್ನು ಅರಿಯದ ಅಸಂಖ್ಯಾತ ಮಹಿಳೆಯರು ಮಲ್ಲಮ್ಮಳನ್ನು ಆರಾಧಿಸುತ್ತಾ ಪುರುಷರ ಅಧಿಕಾರಕ್ಕೆ ಅಡಿಯಾಳಾಗುತ್ತಿದ್ದಾರೆಇದ್ದರೆ ಮಲ್ಲಮ್ಮನಂತಹ ಹೆಂಡತಿ, ಸೊಸೆ ಇರಬೇಕು ಎಂದು ಪುರುಷರು ಭಕ್ತಿ ಭಾವದಿಂದ ಆಕೆಯನ್ನು ವೈಭವೀಕರಿಸುತ್ತಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನವಾದಲ್ಲೆಲ್ಲಾ ಯಶಸ್ವಿಯಾಗುತ್ತಿದೆ. ಭಕ್ತಿಭಾವವನ್ನು ಸ್ಪುರಿಸುತ್ತಿದೆ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಹೆಣ್ಣು ಬದುಕಬೇಕು ಎನ್ನುವುದನ್ನು ನಾಟಕ ಪ್ರತಿಪಾದಿಸುತ್ತದೆ.

ಹೇಮರೆಡ್ಡಿ ಮಲ್ಲಮ್ಮನ ಪವಾಡ ಎನ್ನುವ ಕೃತಿಯನ್ನು ಪಂಡಿತ ಪುಟ್ಟರಾಜ ಗವಾಯಿಗಳು ರಚಿಸಿದ್ದಾರೆ. ಹೇಮರೆಡ್ಡಿ ಮಲ್ಲಮ್ಮಳ ಕುರಿತು ಎರಡು ಸಿನೆಮಾಗಳು ಕನ್ನಡದಲ್ಲಿ ಬಂದಿವೆ. 1945 ರಲ್ಲಿ ಗುಬ್ಬಿ ವೀರಣ್ಣನವರು  ಹೇಮರೆಡ್ಡಿ ಮಲ್ಲಮ್ಮ ಚಲನಚಿತ್ರವನ್ನು ನಿರ್ಮಿಸಿದರು. ಸ್ವತಃ ಗುಬ್ಬಿ ವೀರಣ್ಣನವರೆ ಹೇಮರೆಡ್ಡಿ ಪಾತ್ರವನ್ನು ಅಭಿನಯಿಸಿದರೆ ಬಿ.ಜಯಮ್ಮರವರು ಮಲ್ಲಮ್ಮನ ಪಾತ್ರಕ್ಕೆ ಜೀವ ತುಂಬಿದ್ದರು. ಬೆಳ್ಳಾವೆ ನರಹರಿಶಾಸ್ತ್ರಿಗಳು ಸಿನೆಮಾ ಚಿತ್ರಕಥೆ ಬರೆದಿದ್ದರು. ಆಗಿನ ಕಾಲದಲ್ಲಿ ಜನ ಭಯ ಭಕ್ತಿಯಿಂದ ಸಿನೆಮಾವನ್ನು ನೋಡಿ ಪುಣೀತರಾದರು. 1974 ರಲ್ಲಿ ಟಿ.ವಿ.ಸಿಂಗ್ ಠಾಕೂರರು ಹೇಮರೆಡ್ಡಿ ಮಲ್ಲಮ್ಮ ಸಿನೆಮಾವನ್ನು ನಿರ್ದೇಶಿಸಿದ್ದರು. ಇದರಲ್ಲಿ ಪಂಡರಿಬಾಯಿರವರು ಮಲ್ಲಮ್ಮನ ಪಾತ್ರಕ್ಕೆ ಪರವಶವಾಗಿ ಅಭಿನಯಿಸಿದ್ದರು. ಕರ್ನಾಟಕದ ಬಹುತೇಕ ವೃತ್ತಿ ಕಂಪನಿಗಳು ಮಲ್ಲಮ್ಮನ ಪವಾಡ, ಹೇಮರೆಡ್ಡಿ ಮಲ್ಲಮ್ಮ.. ಹೆಸರಲ್ಲಿ ನಾಟಕಗಳನ್ನು ಕಟ್ಟಿ ಊರೂರುಗಳಲ್ಲಿ ಕ್ಯಾಂಪ್ ಮಾಡಿ ಪ್ರದರ್ಶಿಸಿದರು. ನಾಟಕ ಮಾಡಿದ ಯಾವುದೇ ಕಂಪನಿಗೆ ಲಾಸ್ ಎನ್ನುವುದೇ ಇರಲಿಲ್ಲ. ಹಾಗೂ ರೀಪಿಟೆಡ್ ಆಡಿಯನ್ಸ್ಗಳು ನಾಟಕಗಳನ್ನು ಯಶಸ್ವಿಗೊಳಿಸಿದ್ದವು. ಗ್ರಾಮಗಳ ಕುಟುಂಬಗಳ ಯಜಮಾನರುಗಳು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಕರೆತಂದು ಮಲ್ಲಮ್ಮಳ ನಾಟಕ ತೋರಿಸಿ ಇದ್ದರೆ ಮಲ್ಲಮ್ಮಳ ಹಾಗೆ ಇರಬೇಕು ಎಂದು ಪರೋಕ್ಷವಾಗಿ ಪ್ರೇರೇಪಿಸುತ್ತಿದ್ದರು.



ಎಲ್ಲಾ ತರ್ಕಗಳನ್ನು ಬಿಟ್ಟು ನಾಟಕದ ಪ್ರದರ್ಶನ ಕುರಿತು ಮಾತ್ರ ಹೇಳುವುದಿದ್ದರೆ ಪಕ್ಕಾ ಕಂಪನಿ ನಾಟಕಗಳ ಎಲ್ಲಾ ಅತಿರೇಕ ಹಾಗೂ ವಿಶೇಷತೆಗಳು ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಮೂಡಿಬಂದಿವೆ. ನಟನೆಯಲ್ಲಿ ಮೆಲೋಡ್ರಾಮಾ ಇದೆ, ದೃಶ್ಯಗಳಲ್ಲಿ ಕೃತ್ರಿಮತೆ ಎದ್ದು ಕಾಣುತ್ತದೆ, ಎಷ್ಟೋ  ಸಲ ದೃಶ್ಯಗಳಿಗೂ ಅದಕ್ಕೆ ಪೂರಕವಾಗಿ ಬಳಸಿದ ಪರದೆಗಳಿಗೂ ಸಂಬಂಧವೇ ಇಲ್ಲದಂತಿದೆರಂಗಶಿಸ್ತು ಇಲ್ಲವಾಗಿದೆ.. ಆದರೂ ಇಡೀ ನಾಟಕ  ಜನರನ್ನು ಹಿಡಿದಿಡುತ್ತದೆ. ಮಾತುಗಳು ಮೋಡಿಮಾಡುತ್ತವೆ, ಪಂಚ್ ಡೈಲಾಗ್ಗಳು ಕಚಗುಳಿ ಇಡುತ್ತವೆ. ನಾಟಕದ ಕಥೆ ಭಕ್ತಿರಸವನ್ನು ಸ್ಪುರಿಸುತ್ತದೆ. ಒಟ್ಟಾರೆಯಾಗಿ ನಾಟಕ ಹೇಗೆ ಮಾಡಿದರು ಎನ್ನುವುದಕ್ಕಿಂತ ನಾಟಕ ಏನು ಹೇಳುತ್ತದೆ ಎನ್ನುವುದು ಮಾತ್ರ ಇಲ್ಲಿ ಮುಖ್ಯವೆನಿಸುತ್ತದೆ. ಅಗತ್ಯವಿರಲಿ ಬಿಡಲಿ ಸಿನೆಮಾ ಹಾಡುಗಳನ್ನು ಸೇರಿಸುವುದು ಹಾಗೂ ಅದಕ್ಕೆ ತಕ್ಕಂತೆ ನರ್ತಿಸುವುದೂ ಸಹ ಇದೇ ನಾಟಕದ ಹಿಂದಿನ ಎಲ್ಲಾ ಪ್ರದರ್ಶನಗಳಲ್ಲಿ ಅಳವಡಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸದ್ದಾರಾದರೂ ಪ್ರದರ್ಶನದಲ್ಲಿ ಎಡಿಟ್ ಮಾಡಿದ್ದಾರೆ.

ಈ ನಾಟಕದಲ್ಲಿ ನಟರೇ ಗಾಯಕರಾಗಿದ್ದು ರಾಗ ತಾಳಗಳಿಗೆ ಹಾಡು ಹೊಂದದಿದ್ದರೂ ಕೇಳುಗರಿಗೆ ಏನೋ ಖುಷಿಯನ್ನು ಕೊಡುವಂತಿವೆ. ಪ್ರತಿಯೊಂದು ದೃಶ್ಯದ ಅಂತ್ಯಕ್ಕೆ ಅಗತ್ಯವಿರಲಿ ಬಿಡಲಿ ಒಂದು ಹಾಡು ಹಾಡುವುದು ಕಂಪನಿ ನಾಟಕಗಳ ವೈಶಿಷ್ಟ್ಯತೆಯಾಗಿದ್ದು ನಾಟಕದಲ್ಲೂ ಅದು ಮುಂದುವರೆದಿದೆ. ಇಲ್ಲಿ ಶಿವನೂ ಸಹ ತನ್ನ ಬಗ್ಗೆ ತಾನೇ ಹಾಡಿಕೊಂಡು ಹೊಗಳಿಕೊಳ್ಳುತ್ತಾನೆ. ಒಂದು ದೃಶ್ಯ ನಡೆಯುತ್ತಿರುವಾಗಲೇ ಪರದೆ ಬದಲಾವಣೆ ಮಾಡುವುದು, ನಟರು ಎಲ್ಲಿದ್ದರೂ ಮೈಕ್ ಹುಡುಕಿಕೊಂಡು ಬಂದು ಮಾತಾಡುವುದು ಆಧುನಿಕರಿಗೆ ಆಭಾಸಕಾರಿ ಎನ್ನಿಸಿದರೂ ಕಂಪನಿ ನಾಟಕಗಳಲ್ಲಿ ಇದೇ ಒಂದು ಶೈಲಿಯಾಗಿದೆ.


 
ನಗಿಸುವುದಕ್ಕೆ ಹಲವಾರು ಅತಿರೇಕತೆಗಳನ್ನು ಅತಿರೋಚಕವಾಗಿ ಹೇಳುವ ಕ್ರಮ ಜನರನ್ನು ಖುಷಿಪಡಿಸುವ ತಂತ್ರಗಾರಿಕೆಯಾಗಿದೆ. ನಾವು ವರ್ಷಕ್ಕೊಂದು ಸಲ ಜಳಕ ಮಾಡಿದ್ರೆ ಮಾಡ್ತೀವಿ ಇಲಾಂದ್ರೆ ಬಿಡ್ತೀವಿ ಎಂದು ಮಹಿಳೆಯರು ಹೇಳುವ ರೀತಿಯನ್ನು ಕೇಳುವಾಗ ನಗೆ ಉಕ್ಕುತ್ತಾದರೂ ಅದು ಅತಿರೇಕ ಎಂಬುವುದು ನೋಡುಗರ ಅರಿವಿಗೆ ಬಂದೆ ಬರುತ್ತದೆ. ಪಾತ್ರಗಳ ಭಾಷೆಯ ಬಳಕೆಯಲ್ಲೂ ಅದ್ಯಾಕೋ ಆಗಾಗ ಬದಲಾವಣೆಗಳಾಗುತ್ತವೆ. ಉತ್ತರ ಕರ್ನಾಟಕದ ಆಡು ಭಾಷೆಯನ್ನು ಮಾತಾಡುತ್ತಿದ್ದ ಪಾತ್ರಗಳು ಇದ್ದಕ್ಕಿದ್ದಂತೆ ಗ್ರಾಂಥಿಕ ಭಾಷೆ ಮಾತಾಡುತ್ತವೆ. ಪಾತ್ರಗಳಿಗೆ ಪಾತ್ರೋಚಿತವಾಗಿ ಒಂದು ನಿರ್ಧಿಷ್ಟ ಭಾಷಾ ಸೊಗಡು ಬೇಕೆನಿಸುತ್ತದೆ. ಬೆಳಕು ಸಂಯೋಜನೆಗೊಂದು ವಿನ್ಯಾಸ ಎನ್ನುವುದು ಇಲ್ಲವೇ ಇಲ್ಲ. ದೃಶ್ಯದ ಮೂಡ್ಗೂ ಹಾಗೂ ಬೆಳಕಿನ ಬಣ್ಣಗಳಿಗೂ ಸಂಬಂಧವೇ ಇಲ್ಲಕಂಪನಿ ನಾಟಕಗಳನ್ನು ನೋಡುವವರು ಬೆಳಕು ಸಂಗೀತ ಅಭಿನಯ ಮಾತುಗಾರಿಕೆ ಹಾಡುಗಾರಿಕೆಯಲ್ಲಿ ಖರಾರುವಕ್ಕತೆಯನ್ನಾಗಲೀ, ತಂತ್ರಗಾರಿಕೆಯನ್ನಾಗಲೀ ಬಯಸುವುದು ಇಲ್ಲ, ಪುರಾತನ ನಾಟಕ ಕಂಪನಿಗಳು ತಮ್ಮ ಶೈಲಿಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದೂ ಇಲ್ಲ. ಹೀಗಾಗಿ ತರ್ಕ, ತತ್ವ ಹಾಗೂ ರಂಗತಂತ್ರಗಾರಿಕೆಗಳನ್ನು ಬದಿಗಿಟ್ಟು ಕೇವಲ ಕಂಪನಿ ನಾಟಕಗಳು ಕಟ್ಟಿಕೊಡುವ ಮಾತಿನ ಮಂಟಪವನ್ನು ಕೇಳುತ್ತಾ, ಹಾಸ್ಯದೃಶ್ಯಗಳು ಹುಟ್ಟಿಸುವ ಖುಷಿಯನ್ನು ಸವಿಯುತ್ತಾ, ಮೆಲಾಡ್ರಾಮಾ ಮಾದರಿಯ ಅಭಿನಯ ಸೃಜಿಸುವ ರಸಾನುಭಾವವನ್ನು ಅನುಭವಿಸುತ್ತಾ ಮಾದರಿಯ ನಾಟಕಗಳನ್ನು ನೋಡಿದರೆ ಸಿಗುವ ರಸಾನುಭವವೇ ಅನನ್ಯ. ಅಪೂರ್ಣತೆಯಲ್ಲೇ ಅನುಭವವನ್ನು ಕಟ್ಟಿಕೊಡುವ ಕಂಪನಿ ನಾಟಕಗಳಲ್ಲಿ ಪೂರ್ಣತೆಯನ್ನು ಹುಡುಕುವುದು ಅನಗತ್ಯವೆನಿಸುತ್ತದೆ. ನಾಟಕದ ಆಯಾಮಗಳನ್ನು ಕೈಬಿಟ್ಟು ನಾಟಕ ಕೊಡುವ ವಿಶಿಷ್ಟ ಅನುಭೂತಿಯನ್ನು ಅನುಭವಿಸಬೇಕೆಂದವರಿಗೆ ಹೇಮರೆಡ್ಡಿ ಮಲ್ಲಮ್ಮ ನಾಟಕ ಖುಷಿಕೊಡುತ್ತದೆ.

ಒಟ್ಟಾರೆಯಾಗಿ 14ನೇ ಶತಮಾನದ ಮಲ್ಲಮ್ಮ ಆದರ್ಶವಾದಿ ಮಹಿಳೆಯಾಗಿ, ತನ್ನ ದೈವಭಕ್ತಿ, ಕಾಯಕನಿಷ್ಟೆ ಹಾಗೂ ಪ್ರತಿರೋಧರಹಿತ ಗುಣಗಳಿಂದಾಗಿ ಆರಾಧ್ಯ ದೇವಿಯಾಗಿದ್ದೊಂದು ಪಿತೃಪ್ರಧಾನ ವ್ಯವಸ್ಥೆಯ ಪವಾಡವೇ ಆಗಿದೆ. ಸುಖ-ದುಃಖ, ಅಂಬಲಿ-ಅಮೃತ, ಸ್ತುತಿ-ನಿಂದೆ, ಶತ್ರುತ್ವ-ದೈವತ್ವ... ಇವೆಲ್ಲವುಗಳನ್ನೂ ಸಮಚಿತ್ತದಿಂದ ತೆಗೆದುಕೊಂಡು ಪರಹಿತಕ್ಕಾಗಿ ಸದಾ ತುಡಿಯುತ್ತಾ ಆದರ್ಶ ಪಥದಲ್ಲಿ ಪ್ರಜ್ವಲಿಸಿದ ಶಿವಶರಣೆ ಮಲ್ಲಮ್ಮ ಆದರ್ಶ ಮಹಿಳಾತನದ ಪ್ರತೀಕವಾಗಿ ನಾಟಕದಲ್ಲಿ ಬಿಂಬಿಸಲಾಗಿದೆ. ಲಿಂಗತಾರತಮ್ಯ ಹಾಗೂ ಅಸಮಾನ ವ್ಯವಸ್ಥೆ ಇರುವವರೆಗೂ ಮಲ್ಲಮ್ಮ ಅಜರಾಮರಳಾಗಿ ಇರುವುದರಲ್ಲಿ ಸಂದೇಹವೇ ಇಲ್ಲ.

                                     -ಶಶಿಕಾಂತ ಯಡಹಳ್ಳಿ








                               
                    
                



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ